“ನಾವು ಅಧಿಕಾರಕ್ಕೆ ಬಂದಲ್ಲಿ ಬಳಕೆದಾರರಿಗೆ ಯಾವುದೇ ಶುಲ್ಕರಹಿತ ಸವಲತ್ತುಗಳನ್ನು ಒದಗಿಸುವುದಿಲ್ಲ. ನಾವು ಕೊಡುತ್ತಿರುವ ಭರವಸೆಯೆಂದರೆ ಸಮುಚಿತ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಎಲ್ಲೆಡೆ ಎಲ್ಲರಿಗೂ ಒದಗಿಸುತ್ತೇವೆ ಎಂದು ಮಾತ್ರ.” ಕಳೆದ ಎರಡೂವರೆ ದಶಕಗಳಿಂದ ನರೇಂದ್ರ ಮೋದಿ ಶುಲ್ಕರಹಿತ ‘ಫ್ರೀಬೀ’ಗಳಿಗೆ ತಮ್ಮ ತೀಕ್ಷಣ ವಿರೋಧವನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ.
ಒಂದುಕಡೆ ಆರ್ಥಿಕ ಅಸ್ತಿಭಾರ ಕುಸಿಯದಂತೆ ಎಚ್ಚರವಹಿಸುತ್ತಲೇ ಇನ್ನೊಂದುಕಡೆ ಹಲವಾರು ಬೃಹತ್ ಪ್ರಮಾಣದ ವಿನೂತನ ರಾಷ್ಟ್ರವ್ಯಾಪಿ ಸಂಕ್ಷೇಮ ಯೋಜನೆಗಳನ್ನು (ಎಲ್.ಪಿ.ಜಿ. ಸಿಲಿಂಡರುಗಳಿಗೆ ಸಬ್ಸಿಡಿ ಇತ್ಯಾದಿ) ಕೇಂದ್ರಸರ್ಕಾರ ಜಾರಿಗೊಳಿಸುತ್ತ ಬಂದಿದೆ. ಇದಕ್ಕೆ ಪ್ರತಿಯಾಗಿ ದೆಹಲಿಯಿಂದ ಪಶ್ಚಿಮಬಂಗಾಳದವರೆಗೆ, ಕೇರಳದಿಂದ ಪಂಜಾಬಿನವರೆಗೆ ಹಲವಾರು ರಾಜ್ಯಗಳು ಎಲ್ಲ ಆರ್ಥಿಕ ಶಿಸ್ತಿಗೂ ತಿಲಾಂಜಲಿಯಿತ್ತು ತತ್ಕ್ಷಣದ ರಾಜಕೀಯ ಲಾಭವನ್ನು ಏಕೈಕ ಪರಿಗಣನೆಯಾಗಿಸಿಕೊಂಡು ಕೇಳರಿಯದ ಮತ್ತು ತಮ್ಮ ನಿಜಸಾಮರ್ಥ್ಯಕ್ಕೆ ಮೀರಿದ ಅತಾರ್ಕಿಕ ಯೋಜನೆಗಳ ಬೆನ್ನು ಹತ್ತಿವೆ; ಆ ಮೂಲಕ ಹೆಚ್ಚಿನ ಮತದಾರ-ಬೆಂಬಲವನ್ನು ಗಳಿಸಿಕೊಳ್ಳಲೆಳಸುತ್ತಿವೆ.
ರಾಜಸ್ಥಾನದ ಅಶೋಕ್ ಗೆಹ್ಲೊಟ್ ಸರ್ಕಾರ ಮೂವತ್ತು ಸಾವಿರ ಮಹಿಳಾ ವಿದ್ಯಾರ್ಥಿಗಳಿಗೆ ಸ್ಕೂಟರ್ಗಳು, ‘ಬಡ’ ಕುಟುಂಬಗಳಿಗೆ ರೂ. ೫೦೦ರ ದರದಲ್ಲಿ ಎಲ್.ಪಿ.ಜಿ. ಸಿಲಿಂಡರುಗಳು, ರಾಜ್ಯದ ಎಲ್ಲ ಕುಟುಂಬಗಳಿಗೂ ೧೦೦ ಯೂನಿಟ್ ನಿಃಶುಲ್ಕ ವಿದ್ಯುತ್ತು, ‘ಸಾಮಾಜಿಕ ಭದ್ರತೆ’ಯಡಿಯಲ್ಲಿ ರೂ. ೧೦೦೦ ಮಾಸಿಕ ಪೆನ್ಶನ್ – ಹೀಗೆ ಬಗೆಬಗೆಯ ಸವಲತ್ತುಗಳನ್ನು ಘೋಷಿಸಿದೆ. ೨೦೨೩-೨೪ರ ವರ್ಷದಲ್ಲಿ ತನ್ನ ಒಟ್ಟು ಆದಾಯದ ಶೇ. ೫೬ರಷ್ಟನ್ನು ಸಂಬಳ, ಪಿಂಚಣಿ, ಬಡ್ಡಿದರಗಳಿಗಾಗಿ ವ್ಯಯಿಸಬೇಕಾದ ಸ್ಥಿತಿ ಇರುವ ಆ ಸರ್ಕಾರದ ಋಣಭಾರ ಈಗಲೇ ಅಭೂತಪೂರ್ವ ಪ್ರಮಾಣದಲ್ಲಿ ಹೆಚ್ಚುತ್ತಿರುವಾಗ ಸರ್ಕಾರ ಮೇಲಿನಂತಹ ದುಬಾರಿ ಯೋಜನೆಗಳ ಮೊರೆಹೊಗುತ್ತಿರುವುದಕ್ಕೆ ಏನೆನ್ನಬೇಕು? ತನ್ನ ಆದಾಯದ ಶೇ. ೪೦.೨ರಷ್ಟನ್ನು ಈಗ ಋಣಸಂದಾಯಕ್ಕಾಗಿ ವ್ಯಯ ಮಾಡಬೇಕಾಗಿದೆ. ಆದರೂ ಸರ್ಕಾರವು ನಿಯಂತ್ರಣಕ್ಕೆ ವಿಮುಖವಾಗಿದೆ. ವಿಮರ್ಶಹೀನ ಯೋಜನೆಗಳ ಪ್ರಯೋಜನ ತಾತ್ಕಾಲಿಕ; ಋಣಭಾರ ದೀರ್ಘಕಾಲಿಕ.
ಆಮ್ ಆದ್ಮಿ ಪಕ್ಷ ಸರ್ಕಾರ ಇರುವ ಪಂಜಾಬಿನ ಸ್ಥಿತಿ ಕುರಿತು ಹೇಳಲೇಬೇಕಾಗಿಲ್ಲ. ಸಾಲ ಕಟ್ಟಲೂ ಪಂಜಾಬ್ ಸರ್ಕಾರದ ಬಳಿ ಹಣವಿಲ್ಲ. ಇದೀಗ ಸರ್ಕಾರದ ಸಾಲ ೩.೨೭ ಲಕ್ಷ ಕೋಟಿಯಷ್ಟಿದೆ. ದೂರಾಲೋಚನೆ ಇಲ್ಲದೆ ಮನಬಂದಂತೆ ‘ಉಚಿತ ಕೊಡುಗೆ’ಗಳನ್ನು ನೀಡುತ್ತಹೋದರೆ ಇನ್ನೇನಾಗುತ್ತದೆ? ಮುಖ್ಯಮಂತ್ರಿ ಭಗವಂತ ಮಾನ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಪತ್ರ ಬರೆದು ಐದು ವರ್ಷಗಳ ಕಾಲ ಸಾಲ ಮರುಪಾವತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು (ಮಾರಟೋರಿಯಂ) ಕೇಂದ್ರಸರ್ಕಾರದ ಅನುಮತಿಯನ್ನು ದೊರಕಿಸುವಲ್ಲಿ ನೆರವಾಗಬೇಕೆಂದು ಬೇಡಿದ್ದಾರೆ. ಇದೀಗ ರಾಜ್ಯ ಬಜೆಟಿನ ಶೇ. ೨೦ರಷ್ಟನ್ನು ಸಾಲ ಮರುಪಾವತಿಗೆ ಖರ್ಚು ಮಾಡಬೇಕಾದ ಸ್ಥಿತಿ ಇದೆ. ಕಳೆದ ಆರ್ಥಿಕ ವರ್ಷದಲ್ಲಿ ಅಸಲಿಗಾಗಿ ರೂ.೧೫,೯೪೦ ಕೋಟಿ ಮತ್ತು ಬಡ್ಡಿಗಾಗಿ ರೂ. ೨೦,೧೦೦ ಕೋಟಿ ವ್ಯಯವಾಗಿತ್ತು. ಈ ವರ್ಷ ಅಸಲಿನ ಲೆಕ್ಕಕ್ಕೆ ರೂ.೧೬,೬೨೬ ಮತ್ತು ಬಡ್ಡಿಗಾಗಿ ರೂ. ೨೨,೦೦೦ ಕೋಟಿ ತೆರಬೇಕಾಗಿದೆ. ಹೀಗಾಗಿ ಸಾಲ ಮರುಪಾವತಿಗಾಗಿಯೆ ಇನ್ನಷ್ಟು ಸಾಲ ಮಾಡಲಾಗುತ್ತಿದೆ. ಆದರೂ ವಿದ್ಯುತ್ ಸಬ್ಸಿಡಿಗಾಗಿ ವರ್ಷಕ್ಕೆ ರೂ. ೨೦,೦೦೦ ಕೋಟಿ ಖರ್ಚು ಮಾಡಲಾಗುತ್ತಿದೆ; ಮಹಿಳೆಯರಿಗೆ ಉಚಿತ ಸಾರಿಗೆಗಾಗಿ ರೂ. ೫೪೧ ಕೋಟಿಯನ್ನು ಪಂಜಾಬ್ ಸರ್ಕಾರ ಖರ್ಚು ಮಾಡಹೊರಟಿದೆ.
ಕರ್ನಾಟಕದ ವಿಷಯಕ್ಕೆ ಬಂದರೆ: ಕಳೆದ (೨೦೨೩) ಆಗಸ್ಟ್ ೧೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಐದನೇ ಹಣಕಾಸು ಆಯೋಗದ ಸೂತ್ರದಡಿಯಲ್ಲಿ ತುರ್ತಾಗಿ ಕರ್ನಾಟಕಕ್ಕೆ ರೂ. ೧೧,೦೦೦ ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಕಳಿಸಿದರು.
ಇತರ ಹಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಆರ್ಥಿಕವಾಗಿ ಇದುವರೆಗೆ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿತ್ತು. ರಾಜ್ಯದ ತಲಾ ವರಮಾನ ೩.೩೧ ಲಕ್ಷದಷ್ಟಿದೆ. ಈ ವರ್ಷವೂ (೨೦೨೩-೨೪) ರಾಜ್ಯದ ಆದಾಯ ಶೇ.೧೨ರಷ್ಟು ಹೆಚ್ಚಲಿದೆಯೆಂದು ಅಂದಾಜು. ಹೀಗಿರುವಾಗ ಬಜೆಟ್ ಮಂಡನೆಯಾದ ಒಂದೂವರೆ ತಿಂಗಳೊಳಗೇ ಕೇಂದ್ರಸರ್ಕಾರದ ಮೊರೆಹೊಗಬೇಕಾದ ಆತಂಕ ಹೇಗೆ ಸೃಷ್ಟಿಯಾಯಿತು? ಇದಕ್ಕೆ ಉತ್ತರ ಕಾಂಗ್ರೆಸ್ ಪಕ್ಷ ತನ್ನ ಗೆಲವಿಗಾಗಿ ಆಶ್ರಯಿಸಿ ಅಧಿಕಾರಕ್ಕೆ ಬಂದ ಮೇಲೆ ಜಾರಿಗೊಳಿಸಿರುವ ಐದು ‘ಗ್ಯಾರಂಟಿ’ಗಳಲ್ಲಿದೆ. ‘ಪಿ.ಆರ್.ಎಸ್. ಲೆಜಿಸ್ಲೆಟಿವ್ ರಿಸರ್ಚ್’ ಶೋಧಕೇಂದ್ರ ನಡೆಸಿರುವ ವಿಶ್ಲೇಷಣೆಯಂತೆ ಸಿದ್ದರಾಮಯ್ಯ ಸರ್ಕಾರದ ಐದು ‘ಗ್ಯಾರಂಟಿ’ಗಳ ವೆಚ್ಚ ವರ್ಷಕ್ಕೆ ರೂ.೫೨,೦೦೦ ಕೋಟಿಯಷ್ಟು ಆಗುತ್ತದೆ. (ಬಜೆಟಿನಲ್ಲಿ ಜುಲೈ ೨೦೨೩-ಮಾರ್ಚ್ ೨೦೨೪ರ ಅವಧಿಗೆ ನಿಗದಿಗೊಳಿಸಿದುದು ರೂ.೩೦,೮೨೫ ಕೋಟಿ ಮಾತ್ರ.) ಈ ರೂ. ೫೨,೦೦೦ ಕೋಟಿ ವಾರ್ಷಿಕ ವೆಚ್ಚ ಮುಂದಿನ ವರ್ಷಗಳಲ್ಲೂ ಮುಂದುವರಿಯಬೇಕಾಗುತ್ತದೆ; ಇನ್ನಷ್ಟು ಹೆಚ್ಚಲೂಬಹುದು. ಹೀಗೆ ‘ಜನಪ್ರಿಯ’ ಯೋಜನೆಗಳು ಕರ್ನಾಟಕದಂತಹ ಶ್ರೀಮಂತ ರಾಜ್ಯಕ್ಕೂ ಅದರ ಸಾಮರ್ಥ್ಯಕ್ಕೆ ಮೀರಿದಷ್ಟು ಭಾರವಾಗಲಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಜೆಟ್ ಮಂಡನೆಯಾದ ಮೂರು ವಾರಗಳೊಳಗೇ (ಜುಲೈ ೨೬) ಬಹಿರಂಗವಾಗಿಯೆ ಹೇಳಿದರು: “ಈ ವರ್ಷ ನೀರಾವರಿ ಮೊದಲಾದ ಯಾವುದೇ ಅಭ್ಯುದಯ ಯೋಜನೆಗಳಿಗೆ ನಾವು ಹಣವನ್ನು ಒದಗಿಸುವ ಸ್ಥಿತಿಯಲ್ಲಿಲ್ಲ.”
* * *
೨೦೦೭ರ ಗುಜರಾತಿನ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಎಲ್ಲ ಕುಟುಂಬಗಳಿಗೂ ನಿಃಶುಲ್ಕ ವಿದ್ಯುತ್ತನ್ನು ನೀಡುವುದಾಗಿ ಘೋಷಿಸಿತ್ತು. ಆಗ ನರೇಂದ್ರ ಮೋದಿ ದೃಢ ಸ್ವರದಲ್ಲಿ ಹೇಳಿದರು: “ನಾವು ಅಧಿಕಾರಕ್ಕೆ ಬಂದಲ್ಲಿ ಬಳಕೆದಾರರಿಗೆ ಯಾವುದೇ ಶುಲ್ಕರಹಿತ ಸವಲತ್ತುಗಳನ್ನು ಒದಗಿಸುವುದಿಲ್ಲ. ನಾವು ಕೊಡುತ್ತಿರುವ ಭರವಸೆಯೆಂದರೆ ಸಮುಚಿತ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಎಲ್ಲೆಡೆ ಎಲ್ಲರಿಗೂ ಒದಗಿಸುತ್ತೇವೆ ಎಂದು ಮಾತ್ರ.” ಕಳೆದ ಎರಡೂವರೆ ದಶಕಗಳಿಂದ ನರೇಂದ್ರ ಮೋದಿ ಶುಲ್ಕರಹಿತ ‘ಫ್ರೀಬೀ’ಗಳಿಗೆ ತಮ್ಮ ತೀಕ್ಷ್ಣ ವಿರೋಧವನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ.
ಇದೀಗ ಕೇಂದ್ರದಲ್ಲಿ ಅಧಿಕಾರಾರೂಢವಾಗಿರುವ ಎನ್.ಡಿ.ಎ. ಸರ್ಕಾರವೂ ಆರ್ಥಿಕ ಅನುಶಾಸನಕ್ಕೆ ಬದ್ಧತೆಯನ್ನು ಮುಂದುವರಿಸಿದೆ; ಅದನ್ನು ಶಿಥಿಲಗೊಳಿಸಿಲ್ಲ. ಈಗಿನ ಕೇಂದ್ರಸರ್ಕಾರದ ದಕ್ಷತೆಗೆ ಒಂದು ನಿದರ್ಶನ ಸಾಕಾಗುತ್ತದೆ. ೧.೮೬ ಕೋಟಿ ನಕಲಿ ‘ರೈತ’ರು, ೨.೫ ಲಕ್ಷ ನಕಲಿ ‘ಕಂಪೆನಿ’ಗಳು, ೪.೨ ಕೋಟಿ ನಕಲಿ ರೇಷನ್ಕಾರ್ಡುಗಳು, ಅಸ್ತಿತ್ವವೇ ಇಲ್ಲದ ಹೆಸರುಗಳ ೪.೧೧ ಕೋಟಿ ನಿರಾಲಂಬ ಎಲ್.ಪಿ.ಜಿ. ಕನೆಕ್ಶನ್ಗಳು, ದಾಖಲೆಕಾಗದಗಳಲ್ಲಷ್ಟೆ ಇದ್ದ ೨೮ ಲಕ್ಷ ಮದರಸಾ ‘ವಿದ್ಯಾರ್ಥಿ’ಗಳು – ಇಂತಹವನ್ನೆಲ್ಲ ರದ್ದುಗೊಳಿಸುವ ಮೂಲಕ ಕೇಂದ್ರಸರ್ಕಾರ ಉಳಿತಾಯ ಮಾಡಿರುವ ಹಣ ರೂ. ೨.೭೩ ಲಕ್ಷ ಕೋಟಿ.
ಎಲ್.ಪಿ.ಜಿ. ಸಿಲಿಂಡರ್ ಸಬ್ಸಿಡಿಯ ಮೊತ್ತ ೨೦೧೪ಕ್ಕೆ ಹಿಂದೆ ರೂ.೪೬,೦೦೦ ಕೋಟಿಯಷ್ಟಿತ್ತು. ವಿತರಣೆಯನ್ನು ಸತರ್ಕಗೊಳಿಸುವ ಮೂಲಕ ಈಗಿನ ಎನ್.ಡಿ.ಎ. ಸರ್ಕಾರ ಅದನ್ನು ರೂ.೭.೭೦೦ ಕೋಟಿಗೆ ಇಳಿಸಿದೆ.
ಕೇಂದ್ರದ ಇಂತಹ ರಚನಾತ್ಮಕ ಕ್ರಮಗಳೆಲ್ಲಿ, ವಿಪಕ್ಷ ಸರ್ಕಾರಗಳ ‘ಎಲ್ಲಮ್ಮನ ಜಾತ್ರೆ’ಗಳೆಲ್ಲಿ!