ಟ್ರಂಪ್ರ ದ್ವಿತೀಯ ಅಧ್ಯಕ್ಷತಾವಧಿ ಭಾರತದ ಮೇಲೆ ಏನು ಪರಿಣಾಮ ಬೀರೀತೆಂಬುದು ಐನಾತಿ ಪ್ರಶ್ನೆ. ಈಚಿನ ದಿನಗಳಲ್ಲಿ – ಮತ್ತು ಹಿಂದೆಯೂ ಕೂಡಾ – ಟ್ರಂಪ್ ಸ್ಪಷ್ಟವಾಗಿ ಭಾರತಪರ ನಿಲವುಗಳನ್ನು ವ್ಯಕ್ತಪಡಿಸಿದ್ದರು. ಹೀಗಿದ್ದೂ ಭಾರತದೊಡನೆಯ ಹಲವು ವಾಣಿಜ್ಯ ಒಪ್ಪಂದಗಳನ್ನು ಟ್ರಂಪ್ ನಿರಸ್ತಗೊಳಿಸಿದ್ದರು. ಈಗಲೂ ಹಾಗೆ ಆದೀತೆ? ತಿಳಿಯದು. ವಿದೇಶಗಳಿಂದ ಅಮೆರಿಕಕ್ಕೆ ಪ್ರವೇಶಿಸಬಯಸುವ ವಲಸಿಗರ ಬಗೆಗಿನ ನೀತಿಯನ್ನು ಹಿಂದೆ ಟ್ರಂಪ್ (ತಮ್ಮ ‘ಅಮೆರಿಕ–ಕೇಂದ್ರಿತ’ ತಾತ್ತ್ವಿಕತೆಯಿಂದಾಗಿ) ಬಿಗಿಗೊಳಿಸಿದ್ದರು. ಅದೇ ಜಾಡು ಈಗಲೂ ಮುಂದುವರಿದಲ್ಲಿ ಭಾರತ ತೀವ್ರ ಕ್ಲೇಶಗಳನ್ನು ಎದುರಿಸಬೇಕಾದೀತು. ಸದ್ಯಕ್ಕಂತೂ ಭಾರತಕ್ಕೆ ಅಮೆರಿಕದ ಸೇನಾ ಸಹಕಾರ ಉತ್ತಮ ಮಟ್ಟದಲ್ಲಿದೆ. ಇದು ಮುಂದುವರಿಯಲೆಂದು ಆಶಿಸಬೇಕಾಗಿದೆ.
ಕಳೆದ (೨೦೨೪) ನವೆಂಬರ್ ಮೊದಲ ವಾರದಲ್ಲಿ ನಡೆದ ಅಂತಿಮ ಹಂತದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಧುರೀಣ ಡೊನಾಲ್ಡ್ ಟ್ರಂಪ್ ತಮ್ಮ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ರನ್ನು ಪರಾಭವಗೊಳಿಸಿ ಅಮೆರಿಕದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅನೇಕ ಕೌತುಕಗಳನ್ನು ಒಳಗೊಂಡಿದ್ದುದು ಈ ಚುನಾವಣೆ: ಪ್ರಭಾವೀ ವಲಯಗಳೆಲ್ಲ ಪ್ರಬಲವಾಗಿ ವಿರೋಧಿಸಿದ್ದುದು, ಟ್ರಂಪ್ ಹಲವು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರೋಪಿಯಾಗಿರುವುದು, ಅವರ ಮೇಲೆ ಹಲವು ಹತ್ಯೆಯ ಪ್ರಯತ್ನಗಳು ಆಗಿದ್ದುದು, ಅವರ ಭಾಷಣಗಳು ಜನಾಂಗೀಯ ವಿದ್ವೇಷ ಭಾವನೆಗಳಿಂದ ತುಂಬಿದ್ದವೆಂಬ ತೀಕ್ಷ್ಣ ಆರೋಪಗಳು, ಇತ್ಯಾದಿ. ಈ ಎಲ್ಲ ಅಡೆತಡೆಗಳನ್ನು ತುಚ್ಛೀಕರಿಸಿ ಟ್ರಂಪ್ ಗೆಲವನ್ನು ಸಾಧಿಸಿದುದು ಆಶ್ಚರ್ಯಕರ ಎಂದು ಮೂಗಿನ ಮೇಲೆ ಬೆರಳಿಡುತ್ತಿರುವವರ ಸಂಖ್ಯೆ ಕಡಮೆಯಿಲ್ಲ. ವ್ಯಾಪಾರಿಯಾಗಿ, ಟಿ.ವಿ. ತಾರೆಯಾಗಿ ಹೆಸರು ಮಾಡಿದ್ದ ಟ್ರಂಪ್ಗೆ ಈಗ ವಯಸ್ಸು ೭೮ ಎಂಬುದೂ ಗಮನಿಸಬೇಕಾದ್ದು. ಪದವಿಯಿಂದ ನಿವೃತ್ತರಾಗಿ ನಾಲ್ಕು ವರ್ಷ ಅಂತರದ ತರುವಾಯ ಪುನರಾಯ್ಕೆಗೊಂಡಿರುವುದೂ ವಿಶೇಷವೇ. ಈ ಸಾಧನೆಗೈದಿದ್ದ ಇನ್ನೊಬ್ಬ ಅಧ್ಯಕ್ಷ ಗ್ರೋವರ್ ಕ್ಲೀವ್ಲೆಂಡ್ ಅಧಿಕಾರದಲ್ಲಿದ್ದುದು ಈಗ್ಗೆ ೧೨೫ ವರ್ಷಗಳಿಗೂ ಹಿಂದೆ – ೧೮೮೦ರ ದಶಕದಲ್ಲಿ.
ಟ್ರಂಪ್ರ ಜನಾಂಗೀಯ ಧೋರಣೆಯಿಂದಾಗಿ ಸ್ಪ್ಯಾನಿಶ್ ಮೂಲದವರು, ಶ್ವೇತವರ್ಣೇತರರು ಮೊದಲಾದವರು ಟ್ರಂಪ್ಗೆ ವಿರುದ್ಧವಾಗಿ ಮತ ಹಾಕುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಪೂರ್ತಿ ತಲೆಕೆಳಗಾಗಿ ಈ ವರ್ಗಗಳವರೂ ಅತ್ಯಧಿಕ ಪ್ರಮಾಣದಲ್ಲಿ ಟ್ರಂಪ್ರನ್ನು ಬೆಂಬಲಿಸಿರುವುದು ಸಾಬೀತಾಗಿದೆ.
ತಮ್ಮದು ಅಮೆರಿಕಹಿತ-ಕೇಂದ್ರಿತ ಧೋರಣೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದರೂ ಬರಲಿರುವ ದಿನಗಳಲ್ಲಿ ಅವರ ನೇತೃತ್ವದ ವಿದೇಶಾಂಗನೀತಿ ಯಾವ ದಿಕ್ಕಿನಲ್ಲಿ ಇರುತ್ತದೆಂಬುದನ್ನು ಕಾದು ನೋಡಬೇಕಾಗಿದೆ. ಅಂತೆಯೇ ರಷ್ಯ-ಉಕ್ರೇನ್ ಸಮರ, ಚೀಣಾದ ಬಗೆಗೆ ಅಮೆರಿಕದ ನೀತಿ ಮೊದಲಾದ ವಿಷಯಗಳ ಬಗೆಗೆ ಕೂಡಾ.
ಅವೆಲ್ಲ ಹಾಗಿರಲಿ. ಟ್ರಂಪ್ರ ದ್ವಿತೀಯ ಅಧ್ಯಕ್ಷತಾವಧಿ ಭಾರತದ ಮೇಲೆ ಏನು ಪರಿಣಾಮ ಬೀರೀತೆಂಬುದು ಐನಾತಿ ಪ್ರಶ್ನೆ.
ಈಚಿನ ದಿನಗಳಲ್ಲಿ – ಮತ್ತು ಹಿಂದೆಯೂ ಕೂಡಾ – ಟ್ರಂಪ್ ಸ್ಪಷ್ಟವಾಗಿ ಭಾರತಪರ ನಿಲವುಗಳನ್ನು ವ್ಯಕ್ತಪಡಿಸಿದ್ದರು. ಹೀಗಿದ್ದೂ ಭಾರತದೊಡನೆಯ ಹಲವು ವಾಣಿಜ್ಯ ಒಪ್ಪಂದಗಳನ್ನು ಟ್ರಂಪ್ ನಿರಸ್ತಗೊಳಿಸಿದ್ದರು. ಈಗಲೂ ಹಾಗೆ ಆದೀತೆ? ತಿಳಿಯದು.
ವಿದೇಶಗಳಿಂದ ಅಮೆರಿಕಕ್ಕೆ ಪ್ರವೇಶಿಸಬಯಸುವ ವಲಸಿಗರ ಬಗೆಗಿನ ನೀತಿಯನ್ನು ಹಿಂದೆ ಟ್ರಂಪ್ (ತಮ್ಮ ‘ಅಮೆರಿಕ-ಕೇಂದ್ರಿತ’ ತಾತ್ತ್ವಿಕತೆಯಿಂದಾಗಿ) ಬಿಗಿಗೊಳಿಸಿದ್ದರು. ಅದೇ ಜಾಡು ಈಗಲೂ ಮುಂದುವರಿದಲ್ಲಿ ಭಾರತ ತೀವ್ರ ಕ್ಲೇಶಗಳನ್ನು ಎದುರಿಸಬೇಕಾಗಬಹುದು.
ಸದ್ಯಕ್ಕಂತೂ ಭಾರತಕ್ಕೆ ಅಮೆರಿಕದ ಸೇನಾ ಸಹಕಾರ ಉತ್ತಮ ಮಟ್ಟದಲ್ಲಿದೆ. ಇದು ಮುಂದುವರಿಯಲೆಂದು ಆಶಿಸಬೇಕಾಗಿದೆ.
ಭಾರತದ ದೃಷ್ಟಿಯಿಂದ ಮಹತ್ತ್ವದ್ದಾದ ‘ಕ್ವಾಡ್’ ಒಕ್ಕೂಟದ (ಭಾರತ, ಆಸ್ಟ್ರೇಲಿಯ, ಜಪಾನ್, ಅಮೆರಿಕ) ರಚನೆಯನ್ನು ಹಿಂದೆ ಟ್ರಂಪ್ ದೃಢವಾಗಿ ಬೆಂಬಲಿಸಿದ್ದರು. ಇದು ಟ್ರಂಪ್ರ ನೂತನ ಅವಧಿಯಲ್ಲಿಯೂ ಮುಂದುವರಿಯಬೇಕಾದುದರ ಅನಿವಾರ್ಯತೆ ಇದೆ.
ಹೀಗೆ ಹಲವು ಪ್ರಮುಖ ಸಂದಿಗ್ಧಾಂಶಗಳು ಇಲ್ಲದಿಲ್ಲ.
ಭಾರತಕ್ಕೆ ಭರವಸೆ ಮೂಡಿಸುವ ಹಲವು ಅಂಶಗಳೂ ಇವೆಯೆಂಬುದು ಮೇಲ್ನೋಟಕ್ಕೇ ಕಾಣುತ್ತದೆ. ಪ್ರಮುಖವಾಗಿ:
ಬೈಡನ್ಗಿಂತ ಟ್ರಂಪ್ ಭಾರತಕ್ಕೆ ಹೆಚ್ಚು ನಿಕಟವರ್ತಿಯಾಗಿದ್ದಾರೆ.
ಹಿಂದಿನ ಅವಧಿಯಲ್ಲಿ ಟ್ರಂಪ್ ಭಾರತದ ಬಗೆಗೆ ಸತತವಾಗಿ ಸ್ನೇಹವೃತ್ತಿ ಮೆರೆದಿದ್ದರು. (ಅಮೆರಿಕದಲ್ಲಿ ‘ಹೌಡೀ ಮೋದಿ’ [೨೨ ಸೆಪ್ಟೆಂಬರ್ ೨೦೧೯] ಅಭೂತಪೂರ್ವ ಯಶಸ್ಸನ್ನು ಗಳಿಸಿತ್ತು.)
ವಿಶ್ವಸಂಸ್ಥೆಯಲ್ಲಿಯೂ ಟ್ರಂಪ್ ಭಾರತದ ಪರ ನಿಂತಿದ್ದರು.
ಭಯೋತ್ಪಾದಕ ಚಟುವಟಿಕೆಗಳ ವಿಷಯದಲ್ಲಿ ಟ್ರಂಪ್ ಪಾಕಿಸ್ತಾನದಿಂದ ದೂರ ಉಳಿದಿದ್ದರು.
ಇವೆಲ್ಲ ವಾಸ್ತವವೇ ಆದರೂ ಟ್ರಂಪ್ರ ಮೂಲಭೂತ ‘ಅಮೆರಿಕಹಿತ-ಕೇಂದ್ರಿತ ನೀತಿಯಿಂದಾಗಿ ಭಾರತಮೂಲದ ಬೃಹತ್ ಕಂಪೆನಿಗಳಿಗೆ ಹಾನಿಯಾದೀತೇನೊ ತಿಳಿಯದು; ಕಾದು ನೋಡಬೇಕು. ವಿಶೇಷವಾಗಿ ಐ.ಟಿ., ಫಾರ್ಮಾ ಮೊದಲಾದ ವಲಯಗಳ ಸ್ಥಿತಿ ಆತಂಕವಿಲ್ಲದೆ ಇಲ್ಲ. ಆದರೆ ಉಗ್ರವಾದ ನಿಯಂತ್ರಣ ಮೊದಲಾದ ವಿಷಯಗಳಲ್ಲಿ ಡೊನಾಲ್ಡ್ ಟ್ರಂಪ್ ದೃಢಮನಸ್ಕರಾಗಿರುವುದಂತೂ ಶ್ಲಾಘನೀಯವೆಂದು ಹೇಳಲೇಬೇಕು.