ಆರ್ಥಿಕಾದಿ ಅನ್ಯ ಕ್ಷೇತ್ರಗಳಂತೆ ಕಾನೂನು ಸುಧಾರಣೆಗೂ ಆರೂಢ ಸರ್ಕಾರ ಗಮನಹರಿಸಿರುವುದನ್ನು ಸ್ಫುಟಪಡಿಸಿರುವ ಒಂದು ಸಂದರ್ಭ ಕಳೆದ ಡಿಸೆಂಬರ್ ೨೦ರಂದು ಲೋಕಸಭೆಯಲ್ಲಿ ಅಂಗೀಕೃತವಾದ ಮಸೂದೆಯ ಮೂಲಕ ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಕಾಯ್ದೆಗಳ ಪರಿಷ್ಕರಣೆ. ಇದರಿಂದಾಗಿ ಕ್ರಿಮಿನಲ್ ನ್ಯಾಯವ್ಯವಸ್ಥೆಗೆ ಹೊಸ ರೂಪ ಬಂದಂತೆ ಆಗಿದೆ. ಬ್ರಿಟಿಷರು ಜಾರಿಗೊಳಿಸಿದ್ದು ಅವರ ನಿರ್ಗಮನಾನಂತರವೂ ಯಾಂತ್ರಿಕವಾಗಿ ಮುಂದುವರಿದಿದ್ದ ಪ್ರಮುಖ ಕಾಯ್ದೆಗಳು ಭಾರತೀಯ ದಂಡಸಂಹಿತೆ ಇಂಡಿಯನ್ ಪೀನಲ್ ಕೋಡ್ (೧೮೬೦), ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ (೧೮೭೨), ಅಪರಾಧ ಪ್ರಕ್ರಿಯಾ ಸಂಹಿತೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (೧೮೯೭) – ಇವು. ಬ್ರಿಟಿಷರು ಬಿಟ್ಟು ಹೋಗಿದ್ದ ಈ ಕಾಯ್ದೆಗಳನ್ನು ಭಾರತದ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಇತ್ತು. ಅದರಂತೆ ಮೇಲಣ ಮೂರು ಕಾಯ್ದೆಗಳ ಸ್ಥಾನದಲ್ಲಿ ಕೆಲವು ಸುಧಾರಣೆಗಳೊಂದಿಗೆ ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ಸಾಕ್ಷ್ಯ ಮಸೂದೆ’ ಮತ್ತು ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ – ಇವನ್ನು ಅಮಲುಗೊಳಿಸಲಾಗಿದೆ.

ಹಿಂದಿನ ಕಾಯ್ದೆಗಳಲ್ಲಿದ್ದ ಕೆಲವು ಅನಿಶ್ಚಿತತೆಗಳನ್ನು ಹೊಸ ಮಸೂದೆಯಲ್ಲಿ ನಿವಾರಿಸಲಾಗಿದೆ. ವಿಶೇಷವಾಗಿ ಕ್ರಿಮಿನಲ್ ಅಪರಾಧಿಗಳು, ಅತ್ಯಾಚಾರಿಗಳು, ದೇಶದ್ರೋಹಿಗಳು – ಇವರಿಗೆ ಗರಿಷ್ಠ ದಂಡನೆಯನ್ನು ಖಾತರಿಗೊಳಿಸಲಾಗಿದೆ. ಅತ್ಯಾಚಾರಕ್ಕೆ ಕನಿಷ್ಠ ಶಿಕ್ಷೆಯನ್ನು ೧೦ ವರ್ಷಕ್ಕೆ ಏರಿಸಲಾಗಿರುವುದಲ್ಲದೆ, ಜೀವಾವಧಿ ಅಥವಾ ಗಲ್ಲುಶಿಕ್ಷೆಗೂ ಅವಕಾಶ ಕಲ್ಪಿಸಲಾಗಿದೆ. ಅಪ್ರಾಪ್ತರ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯನ್ನು ಕನಿಷ್ಠ ೩೦ ವರ್ಷಕ್ಕೆ ಏರಿಸಲಾಗಿದ್ದು, ಗಲ್ಲು ಶಿಕ್ಷೆಗೂ ಅವಕಾಶ ಕಲ್ಪಿಸಲಾಗಿದೆ. ಸಮೂಹ ದಾಳಿ, ಖೋಟಾ ನೋಟು ತಯಾರಿಕೆ, ಕಳ್ಳಸಾಗಣೆ ಮೊದಲಾದ ಅಪರಾಧಗಳಿಗೆ ಬಂಧನದಿಂದ ಗಲ್ಲುಶಿಕ್ಷೆವರೆಗೆ ದಂಡನೆಗಳಿಗೆ ಆಸ್ಪದವಾಗಿದೆ. ದೇಶದ ವಿರುದ್ಧದ ಮಾತು ಬರಹ ವರ್ತನೆಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ. ಹಿಂದೆ ‘ದೇಶದ್ರೋಹ’ (ಸೆಡಿಶನ್) ಎಂದಿದ್ದ ಪರಿಭಾಷೆಯ ಸ್ಥಾನದಲ್ಲಿ ಈಗ ‘ರಾಷ್ಟ್ರಹಿತಕ್ಕೆ ವಿರುದ್ಧವಾದ ವರ್ತನೆ’ (‘Offense against State’) ಎಂದು ಸ್ಫುಟಪಡಿಸಲಾಗಿದೆ. ಹಲವು ವಿಶಿಷ್ಟ ಸನ್ನಿವೇಶಗಳಲ್ಲಿ ಮೊಕದ್ದಮೆಗಳ ರದ್ದತಿಗೆ ಅವಕಾಶವಿರದೆಂದು ವಿಧಿಸಲಾಗಿದೆ. ಕಾನೂನು ಆಚರಣೆ ವಿಧಾನಗಳಿಗೆ ಸಂಬಂಧಿಸಿದಂತೆಯೂ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಈ ಎಲ್ಲ ಬದಲಾವಣೆಗಳ ಬಗೆಗೆ ಅಧಿಕಾರಿಗಳ ಮತ್ತು ಸಿಬ್ಬಂದಿಯ ಶಿಕ್ಷಣ ಮತ್ತು ಜನಜಾಗೃತಿ ಕ್ರಮಗಳೂ ನಡೆಯಬೇಕಾಗಿದೆ.

ಈ ಮಾರ್ಪಾಡುಗಳು ಸ್ವಾಗತಾರ್ಹವೆಂಬುದರ ಬಗೆಗೆ ಸಂದೇಹವಿಲ್ಲ. ಆದರೂ ಕೆಲವು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇನ್ನೂ ಆಗಬೇಕಾಗಿದೆ. ಉಚ್ಚನ್ಯಾಯಾಲಯಗಳಲ್ಲಿ ೧೭ ಲಕ್ಷ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ೩ ಕೋಟಿ ೩೪ ಲಕ್ಷದಷ್ಟು ಮೊಕದ್ದಮೆಗಳು ಬಾಕಿ ಉಳಿದುಕೊಂಡಿರುವುದು ಈ ಮೂಲಭೂತ ಸಮಸ್ಯೆಗಳಿಂದಾಗಿಯೇ. ಇದುವರೆಗಿನ ಕಾಯ್ದೆಗಳಲ್ಲಿದ್ದ ಒಂದೆರಡು ತೊಡಕುಗಳನ್ನು ಉದಾಹರಿಸುವುದಾದರೆ: ತೇಜೋವಧೆಯ ಪ್ರಕರಣಗಳು ‘ಸಿವಿಲ್’ ಕಕ್ಷೆಯವೇ ಅಥವಾ ‘ಕ್ರಿಮಿನಲ್’ ಕಕ್ಷೆಯವೇ ಎಂಬುದು ಸಂದಿಗ್ಧ. ಒಂದೊಂದು ಪ್ರಕರಣ ಒಂದೊಂದು ಬಗೆಯಾಗಿ ತೆವಳುತ್ತಿರುತ್ತದೆ. ಸುಮಾರು ಶೇ. ೪೦ರಷ್ಟು ಪ್ರಕರಣಗಳು ಐ.ಪಿ.ಸಿ. ಕಕ್ಷೆಯೊಳಕ್ಕೆ ಬರುವುದೇ ಇಲ್ಲ. ಸ್ಥಳೀಯ ಕಾನೂನುಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ದೊಡ್ಡಸಂಖ್ಯೆಯವಿವೆ. ಇನ್ನು ಮಾದಕದ್ರವ್ಯಗಳು, ಅನೈತಿಕ ಲೈಂಗಿಕ ವ್ಯವಹಾರಗಳು ಮೊದಲಾದವಕ್ಕೆ ಸಂಬಂಧಿಸಿ ಪ್ರತ್ಯೇಕ ಕಾನೂನುಗಳು ಜಾರಿಯಲ್ಲಿವೆ. ಅಬ್ಕಾರಿ ಕಾನೂನುಗಳು ಒಂದೊಂದು ಪ್ರದೇಶಕ್ಕೆ ಪ್ರತ್ಯೇಕವಿರುತ್ತವೆ. ಚಾರ್ಜ್ಶೀಟ್ಗೆ ೧೮೦ ದಿನಗಳ ಗಡುವು, ಕ್ರಿಮಿನಲ್ ಕೇಸ್ ವಿಚಾರಣೆ ಗರಿಷ್ಠ ೩ ವರ್ಷದೊಳಗೆ ಮುಗಿಸಬೇಕೆಂಬುದು – ಈ ಜಾಡಿನ ಹೊಸ ಕಾಯ್ದೆಗಳ ಅಂಶಗಳಿಗೆ ಯಾರೂ ಆಕ್ಷೇಪಿಸಲಾರರು. ಆದರೆ ಮೇಲೆ ದೃಷ್ಟಾಂತಕ್ಕಾಗಿ ಉಲ್ಲೇಖಿಸಿದಂತಹ ಸಮಸ್ಯೆಗಳಿಗೂ ಸಮರ್ಪಕ ಪರಿಹಾರ ಸೂಚಿಸಬಲ್ಲ ಕಾನೂನು ಸುಧಾರಣೆ ಇನ್ನೂ ಬಾಕಿ ಉಳಿದಿದೆ.