ದೇಶದ ಸಮುನ್ನತ ವೇದಿಕೆಯಲ್ಲಿ ಪ್ರತಿಪಕ್ಷಗಳಿಗೆ ಲಭ್ಯವಿರುವ ಆತ್ಯಂತಿಕ ಸಾಧನವೆಂದರೆ ಅವಿಶ್ವಾಸ ಗೊತ್ತುವಳಿ. ಈ ಬ್ರಹ್ಮಾಸ್ತ್ರವನ್ನು ಅವು ಬಾಲಿಶವಾಗಿ ವ್ಯರ್ಥಮಾಡಿಕೊಂಡವೆಂದು ಹೇಳಬೇಕಾಗಿದೆ. ಮೊದಲನೆಯದಾಗಿ: ಮಣಿಪುರ ಘಟನಾವಳಿ ಗಂಭೀರ ಪರಾಮರ್ಶನೆಗೆ ಅರ್ಹವಾದ ಸಂಗತಿಯಾದರೂ ಇದೊಂದನ್ನು ಅವಲಂಬವಾಗಿರಿಸಿಕೊಂಡು ಅವಿಶ್ವಾಸನಿರ್ಣಯದಂತಹ ಅಂತಿಮ ಅಸ್ತ್ರದ ಮೊರೆಹೊಗುವುದು ಎಷ್ಟುಮಟ್ಟಿಗೆ ಉಚಿತ?
ಕಳೆದ ಮಳೆಗಾಲದ ಸಂಸದಧಿವೇಶನ ಸಂದರ್ಭವನ್ನು ಕಾಂಗ್ರೆಸ್ ವ್ಯರ್ಥ ಮಾಡಿಕೊಂಡಿತೆಂದೇ ಹೇಳಬೇಕಾಗಿದೆ. ಈಶಾನ್ಯ ರಾಜ್ಯ ಮಣಿಪುರದಲ್ಲಿ ಎರಡು ಬಣಗಳ ನಡುವೆ ನಡೆದಿರುವ ಘರ್ಷಣೆಯಲ್ಲೇ ಪ್ರತಿಪಕ್ಷಗಳು ತಮ್ಮ ಗಮನವನ್ನೆಲ್ಲ ಕೇಂದ್ರೀಕರಿಸಿದವು. ಆ ಪ್ರಾಂತದಲ್ಲಿ ಕೇಂದ್ರಸರ್ಕಾರ ನಡೆಸಿರುವ ಪ್ರಯಾಸಗಳ ಬಗೆಗೆ ಕೇಳಿಸಿಕೊಳ್ಳುವ ಅವಧಾನವನ್ನು ಕಿಂಚಿತ್ತೂ ತೋರದ ಪ್ರತಿಪಕ್ಷಗಳಿಗೆ ಮೋದಿ ಮೌನ ವಹಿಸಿದ್ದಾರೆಂದು ಆಕ್ಷೇಪಿಸಲು ಎಷ್ಟುಮಟ್ಟಿನ ಅಧಿಕಾರವಿದೆ? ಅದು ಹಾಗಿರಲಿ; ಸಂಸತ್ತಿನಂತಹ ಉಚ್ಚ ವೇದಿಕೆಯಲ್ಲಿ ಚರ್ಚಿಸಬಹುದಾಗಿದ್ದ ಬೇರೆ ವಿಷಯಗಳೇ ಇರಲಿಲ್ಲವೆ? ಒಂದು ಅಂಶದ ಹಿಂದೆ ಬಿದ್ದು ಮೊಂಡಾಟ ಮಾಡುವುದರಿಂದ ಏನು ಲಾಭವಾಯಿತು?
ದೇಶದ ಸಮುನ್ನತ ವೇದಿಕೆಯಲ್ಲಿ ಪ್ರತಿಪಕ್ಷಗಳಿಗೆ ಲಭ್ಯವಿರುವ ಆತ್ಯಂತಿಕ ಸಾಧನವೆಂದರೆ ಅವಿಶ್ವಾಸ ಗೊತ್ತುವಳಿ. ಈ ಬ್ರಹ್ಮಾಸ್ತ್ರವನ್ನು ಅವು ಬಾಲಿಶವಾಗಿ ವ್ಯರ್ಥಮಾಡಿಕೊಂಡವೆಂದು ಹೇಳಬೇಕಾಗಿದೆ. ಮೊದಲನೆಯದಾಗಿ: ಮಣಿಪುರ ಘಟನಾವಳಿ ಗಂಭೀರ ಪರಾಮರ್ಶನೆಗೆ ಅರ್ಹವಾದ ಸಂಗತಿಯಾದರೂ ಇದೊಂದನ್ನು ಅವಲಂಬವಾಗಿರಿಸಿಕೊಂಡು ಅವಿಶ್ವಾಸನಿರ್ಣಯದಂತಹ ಅಂತಿಮ ಅಸ್ತ್ರದ ಮೊರೆಹೊಗುವುದು ಎಷ್ಟುಮಟ್ಟಿಗೆ ಉಚಿತ? ಇದಕ್ಕೆ ಬದಲಾಗಿ ನಿಯಮಗಳಂತೆ ಸಾಂಸದರಿಗೆ ಲಭ್ಯವಿರುವ ಕಾಲಿಂಗ್ ಅಟೆನ್ಷನ್ ಮೋಷನನ್ನು ಪ್ರತಿಪಕ್ಷಗಳು ಮಂಡಿಸಿದ್ದಿದ್ದರೆ ಮಣಿಪುರ ವಿದ್ಯಮಾನಗಳ ಬಗೆಗೆ ವಿಸ್ತೃತವೂ ವಿಷಯಕೇಂದ್ರಿತವೂ ಆದ ಚರ್ಚೆಗೆ ಅವಕಾಶವಾಗುತ್ತಿತ್ತಲ್ಲವೆ? ಅದು ಎಲ್ಲರಿಗೂ ಹೆಚ್ಚು ಪ್ರಯೋಜನಕರವಾಗುತ್ತಿತ್ತು. ಆಗ ಚರ್ಚೆಗೆ ಗೃಹಮಂತ್ರಿಗಳೂ ಅವಶ್ಯಕಂಡಲ್ಲಿ ಪ್ರಧಾನಮಂತ್ರಿಗಳೂ ಅನಿವಾರ್ಯವಾಗಿ ಉತ್ತರಿಸಬೇಕಾಗುತ್ತಿತ್ತು. ಅವಿಶ್ವಾಸನಿರ್ಣಯಕ್ಕೆ ಆಗ ಹೆಚ್ಚಿನ ಸಮರ್ಥನೆ ಸಿಗಬಹುದಿತ್ತು. ಅದಕ್ಕೆ ಬದಲಾಗಿ ಪ್ರತಿಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಪೀಠಿಕೆಯಾಗಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಿದಂತೆಯೇ ಆಯಿತು.
ಹಿಂದಿನ ಅನುಭವದಿಂದಾದರೂ ಪ್ರತಿಪಕ್ಷಗಳು ಪಾಠ ಕಲಿಯಬಹುದಿತ್ತು. ೨೦೧೮ರಲ್ಲಿ ಆಗಿನ ಆರೂಢ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಪಕ್ವ ರೀತಿಯ ಅವಿಶ್ವಾಸನಿರ್ಣಯ ಮಂಡಿಸಿ ಕೈ ಸುಟ್ಟುಕೊಂಡದ್ದರ ಫಲವಾಗಿ ೨೦೧೯ರಲ್ಲಿ ನರೇಂದ್ರ ಮೋದಿ ೨೦೧೪ರಲ್ಲಿದ್ದುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಹೀಗೂ ಇರಬಹುದು: ತಮಗೆ ಬಲವಿಲ್ಲವೆಂದು ಅರಿತೂ ಕಾಂಗ್ರೆಸ್ ಅವಿಶ್ವಾಸನಿರ್ಣಯ ಮಂಡನೆಗೆ ಮುಂದಾದದ್ದು ತನ್ನ ಈಗಿನ ನಾಯಕ ರಾಹುಲ್ಗಾಂಧಿಯ ಪ್ರತಿಮೆಗೆ ಇನ್ನಷ್ಟು ಸಾಣೆ ಹಿಡಿಯುವ ಲೆಕ್ಕಾಚಾರದಿಂದ ಇರಬಹುದು. ನ್ಯಾಯಾಲಯದಿಂದ ದಂಡನೆ ಮೊದಲಾದ ಹಿನ್ನಡೆಗಳನ್ನು ಎದುರಿಸಿರುವ ರಾಹುಲ್ಗಾಂಧಿಯ ಪ್ರತಿಮೆಯನ್ನು ಸ್ವಲ್ಪವಾದರೂ ಬೆಳೆಸಲು ಯಾವ ವಿಧಾನ ಆದರೇನು – ಎಂದು ಕಾಂಗ್ರೆಸ್ ಯೋಚಿಸಿರಬಹುದು. ಆದರೆ ಈ ಪ್ರಯಾಸ ಎಷ್ಟು ಮಾತ್ರವೂ ಪರಿಣಾಮ ಮಾಡಿದಂತಿಲ್ಲ. ಅವಕಾಶ ದೊರೆತಾಗ ರಾಹುಲ್ಗಾಂಧಿ “ನೀವು ಭಾರತಮಾತೆಯ ಹತ್ಯೆ ಮಾಡುತ್ತಿದ್ದೀರಿ” ಎಂದೆಲ್ಲ ಅರ್ಥವಿಲ್ಲದ ಮತ್ತು ಆಕ್ಷೇಪಾರ್ಹ ಮಾತುಗಳನ್ನಾಡಿ ತಮ್ಮ ಅಪ್ರಬುದ್ಧತೆಯನ್ನು ಪ್ರಕಟಿಸಿದರು.
ಯಾವುದೊ ಒಂದು ವಿಷಯದ ಬೆನ್ನು ಹತ್ತಿ ಅದು ಪ್ರಳಯಾಂತಕವೆಂಬಂತೆ ವಿಫಲತೆ ನಿಶ್ಚಿತವೆಂದು ತಿಳಿದೂ ಅವಿಶ್ವಾಸದ ಅಸ್ತ್ರವನ್ನು ದುರ್ವ್ಯಯ ಮಾಡುವುದನ್ನು ಮುತ್ಸದ್ದಿತನವೆನ್ನಲಾದೀತೆ?
ವಾಸ್ತವವಾಗಿ ಅವಿಶ್ವಾಸನಿರ್ಣಯಕ್ಕೆ ಯಾವುದೊ ಒಂದು ಅಥವಾ ಇಂಥದೇ ವಿಷಯ ಆಧಾರವಾಗಬೇಕೆಂದೇನಿಲ್ಲ. ಹಣದುಬ್ಬರ, ನಿತ್ಯಾವಸರ ವಸ್ತುಗಳ ಬೆಲೆ ಹೆಚ್ಚಳ, ವಿವಿಧ ಪ್ರಾಂತಗಳ ವಿಶಿಷ್ಟ ಸಮಸ್ಯೆಗಳು – ಇಂತಹ ಹಲವು ವಿಷಯಗಳು ಒದಗಿಯಾವು.
ಲೋಕಸಭಾ ಚುನಾವಣೆಗೆ ತಮಗೆ ಭೂಮಿಕೆಯನ್ನು ಒದಗಿಸಬಹುದಾಗಿದ್ದ ಅಂಶಗಳನ್ನು ಪ್ರಸ್ತಾವಿಸುವಷ್ಟು ಸಮಯಪ್ರಜ್ಞೆಯನ್ನೂ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತೋರದೆ ತಮಗೆ ತಾವೇ ವಂಚನೆ ಮಾಡಿಕೊಂಡವು – ಎನ್ನಬೇಕಾಗಿದೆ. ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಅವಿಶ್ವಾಸ ಸ್ಥಾಪಿಸುವುದು ಹಾಗಿರಲಿ, ಪ್ರತಿಪಕ್ಷಗಳು ತಮ್ಮ ಬಗೆಗೆ ತಾವೇ ಅವಿಶ್ವಾಸ ತಳೆದವೆ? ಆಕ್ರಮಣಶೀಲವಾಗಬಹುದಾಗಿದ್ದ ಅವು ಪರಾಭವಶೀಲವಾಗಿ ಪಲಾಯನ ಮಾಡಿದವು – ಎಂಬುದು ವಿಕಟತೆ. ಅವಿಶ್ವಾಸ ಗೊತ್ತುವಳಿ ಎಂಬ ಅಂತಿಮ ಅಸ್ತ್ರವನ್ನು ವೃಥಾ ನಷ್ಟ ಮಾಡಿಕೊಂಡ ಅವಕ್ಕೆ ಇನ್ನೊಮ್ಮೆ ಈ ಅವಕಾಶ ಮುಂದಿನ ಚುನಾವಣೆ ಆಸನ್ನವಾಗುವುದರೊಳಗೆ ದೊರೆಯದೆಹೋಗಬಹುದು.