ಒಬ್ಬ ವ್ಯಕ್ತಿ ಜೀವನ್ಮುಖಿಯಾಗಿ ಸಮಾಜಮುಖಿಯಾದರೆ ಇಡೀ ಸಮಾಜವನ್ನು ಬದಲಿಸಲು ಸಾಧ್ಯವಿದೆ. ಸಮಾಜಕ್ಕೆ ಉಪಯೋಗವಾಗುವ ಮನುಷ್ಯನ ಸಣ್ಣ ಪ್ರಯತ್ನವಾದರೂ ಅದರಿಂದ ಆಗುವ ಪರಿಣಾಮ ಮಾತ್ರ ಬಹುದೊಡ್ಡದು. ವ್ಯಕ್ತಿಯ ಒಂದು ಉಪಕಾರ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನೆ ತರಬಹುದು. ‘ನನ್ನೊಬ್ಬನಿಂದ ಈ ಸಮಾಜ ಸುಧಾರಣೆ ಸಾಧ್ಯವೇ?’ ಎಂಬುದಾಗಿ ನಮಗೆ ಹಲವು ಬಾರಿ ಅನ್ನಿಸುತ್ತದೆ. ಆದರೆ ಮನುಷ್ಯನೊಬ್ಬ ಮನಸ್ಸು ಮಾಡಿದರೆ ಏನೂ ಮಾಡಬಹುದು. ಒಬ್ಬ ವ್ಯಕ್ತಿಯಿಂದ ಸಾಮಾಜಿಕ ಅನಿಷ್ಟಗಳು ದೂರವಾದದ್ದು, ಸಾಮಾಜಿಕ ಪರಿವರ್ತನೆಯಾದ ಉದಾಹರಣೆಗಳು ಸಾಕಷ್ಟಿದೆ.
ಮನುಷ್ಯ ಹುಟ್ಟುವಾಗ ಒಬ್ಬಂಟಿಯಾಗಿ ಹುಟ್ಟುತ್ತಾನೆ. ಸಾಯುವಾಗಲೂ ಒಬ್ಬಂಟಿಯಾಗಿಯೇ ಸಾಯುತ್ತಾನೆ. ಆದರೆ ಈ ಹುಟ್ಟು-ಸಾವಿನ ನಡುವಿನ ಅವಧಿಯಲ್ಲಿ ಮನುಷ್ಯ ಒಬ್ಬಂಟಿಗನಾಗಿ ಬದುಕಲು ಸಾಧ್ಯವಿಲ್ಲ. ಭೂಮಿಯ ಅಸ್ತಿತ್ವಕ್ಕೆ ಸೂರ್ಯ ಬೇಕೇ ಬೇಕು. ಆದರೆ ಸೂರ್ಯನ ಅಸ್ತಿತ್ವಕ್ಕೆ ಭೂಮಿ ಬೇಕಾಗಿಲ್ಲ. ಅದೇ ರೀತಿ ಮನುಷ್ಯ ಜೀವಿಸಲು ಈ ಸಮಾಜ ಬೇಕು. ನಾವಿಲ್ಲದಿದ್ದರೂ ಈ ಸಮಾಜ ಇರುತ್ತದೆ. ಆದರೆ ಸಮಾಜ ಇಲ್ಲದಿದ್ದರೆ ನಾವಿರಲು ಸಾಧ್ಯವಿಲ್ಲ. ಅಂದರೆ ಮನುಷ್ಯ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು. ವ್ಯಕ್ತಿಗಳ ಸಮೂಹವೇ ಸಮಾಜ. ಸಮಾಜದ ಬುನಾದಿಯೇ ಮನುಷ್ಯ.
ಸಂಸ್ಕೃತದ ಸುಭಾಷಿತವೊಂದು ಹೇಳುತ್ತದೆ:
ಅಸಹಾಯಂ ಸಮರ್ಥೋಪಿ ತೇಜಸ್ವೀ ಕಿಂ ಕರಿಷ್ಯತಿ |
ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ ಪ್ರಶಾಮ್ಯತಿ ||
ಮನುಷ್ಯನು ತಾನು ಸಮರ್ಥನಾಗಿದ್ದರೂ ತೇಜಸ್ವಿಯಾಗಿದ್ದರೂ ಇತರರ ಸಹಾಯವಿಲ್ಲದೆ ಹೋದರೆ ಏಕಾಂಗಿಯಾಗಿ ಏನನ್ನು ತಾನೆ ಮಾಡಬಲ್ಲ? ಎಲ್ಲವನ್ನೂ ಬೂದಿ ಮಾಡಿಬಿಡುವ ಸಾಮರ್ಥ್ಯವಿದ್ದರೂ ಉರಿಯುತ್ತಿರುವ ಬೆಂಕಿಯು ಗಾಳಿಯಿಲ್ಲದ ಜಾಗದಲ್ಲಿ ತಾನೇ ತಾನಾಗಿ ಆರಿಹೋಗುತ್ತದೆ. ಬೆಂಕಿ ಉರಿಯಲು ಗಾಳಿ ಬೇಕು. ಅದೇ ರೀತಿ ಮನುಷ್ಯನ ಜೀವಂತಿಕೆಗೆ ಸಮಾಜದ ಉಸಿರು ಬೇಕು. ಜನರ ಸಹಾಯವಿಲ್ಲದೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ.
ಸಮಾಜವನ್ನು ಬಿಟ್ಟು ಒಬ್ಬಂಟಿಯಾಗಿ ಬದುಕುತ್ತೇನೆ ಎಂದರೆ ಅದು ಗಾಳಿಯೊಟ್ಟಿಗೆ ಗುದ್ದಾಟ ನಡೆಸಿದಂತೆ. ಸಮಾಜ ನಮ್ಮ ಜೀವನಕ್ಕೆ ಅನಿವಾರ್ಯ ಎಂಬುದನ್ನು ನಾವು ಮನಗಾಣಬೇಕು. ಈ ಅನಿವಾರ್ಯತೆಯನ್ನು ಮನಸಾರೆ ಸ್ವೀಕರಿಸಿದಾಗ ಅಲ್ಲಿ ಸಂಘರ್ಷಕ್ಕೆ, ಅಸಮಾಧಾನಕ್ಕೆ ಅವಕಾಶವಿರುವುದಿಲ್ಲ. ಸಮಾಜವನ್ನು ಬಿಟ್ಟು ಮನುಷ್ಯ ಬದುಕುವುದೆಂದರೆ, ನೀರನ್ನು ಬಿಟ್ಟು ಮೀನು ಬದುಕಿದಂತೆ; ಅದು ಸಾಧ್ಯವೇ ಇಲ್ಲ.
ಕೆಂಡವಾಗಲೇ? ಇದ್ದಿಲಾಗಲೇ?
ಒಂದು ಪಟ್ಟಣದಲ್ಲಿ ಹಿರಿಯರೆಲ್ಲ ಸೇರಿ ಒಂದು ಸಂಘವನ್ನು ಮಾಡಿಕೊಂಡಿದ್ದರು. ಎಲ್ಲರೂ ಒಂದಲ್ಲ ಒಂದು ದೊಡ್ಡ ಕೆಲಸದಲ್ಲಿ ಸೇವೆ ಮಾಡಿದ್ದವರೇ. ಈಗ ಅವರೆಲ್ಲ ತಮ್ಮ ತಮ್ಮ ಕೆಲಸಗಳಿಂದ ನಿವೃತ್ತರಾಗಿ ನಿರಾಳವಾಗಿದ್ದಾರೆ. ಇಂಥ ಸಮಯದಲ್ಲಿ ತಮ್ಮಿಂದ ಸಮಾಜಕ್ಕೆ ಏನಾದರೂ ಸಹಾಯವಾದರೆ ಮಾಡೋಣ ಎಂಬ ಮನೋಭಾವ ಅವರದ್ದು. ಸಂಘಕ್ಕೆ ಒಂದು ಸ್ಥಳವನ್ನು ಮಾಡಿಕೊಂಡಿದ್ದರು. ಪ್ರತಿದಿನ ಸಾಯಂಕಾಲ ಅಲ್ಲಿ ಸೇರಿ ಚಿಂತನೆ ಮಾಡುವರು. ಕೆಲಸಗಳನ್ನು ಹಂಚಿಕೊಳ್ಳುವರು. ಶಿಕ್ಷಕರಾಗಿ ನಿವೃತ್ತರಾದವರು, ಹತ್ತಿರದ ಕೊಳಗೇರಿಯ ಮಕ್ಕಳಿಗೆ ದಿನನಿತ್ಯ ಪಾಠ ಹೇಳಿಕೊಡುವರು. ಇನ್ನು ಕೆಲವರು ಮನೆಮನೆಗಳಿಗೆ ಹೋಗಿ ನೈರ್ಮಲ್ಯದ ಬಗ್ಗೆ, ಮನೆಯ ಮುಂದೆ ಕಸ ಹಾಕದಿರುವಂತೆ ಜನರಿಗೆ ತಿಳಿವಳಿಕೆ ನೀಡುವರು. ಮತ್ತೆ ಕೆಲವರು ಯಾರಿಗಾದರೂ ಕಾಯಿದೆಯ ವಿಷಯದಲ್ಲಿ, ಭೂಮಿಯ ವಿಚಾರದಲ್ಲಿ ಏನಾದರೂ ಮಾಹಿತಿ ಬೇಕಾಗಿದ್ದರೆ ಉಚಿತವಾಗಿ ಸಲಹೆ ನೀಡುವರು. ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಮಾಡಿಸಿ ಅವರು ಸ್ವಾವಲಂಬಿಯಾಗುವಂತೆ ಮಾಡುವರು. ಹೀಗೆ ಸಮಾಜದಲ್ಲಿ ಯಾವ ವಿಷಯದ ಬಗ್ಗೆ ಆವಶ್ಯಕತೆ ಕಂಡಿತೊ ಅವುಗಳಿಗೆ ಸಹಕಾರಿಯಾಗುವಂತೆ ಕಾರ್ಯ ಮಾಡುತ್ತಿದ್ದರು.
ಹೀಗಿರುವಾಗ ಒಂದು ದಿನ ಸಂಜೆ ಸಂಘದ ಕಾರ್ಯದರ್ಶಿ ವೆಂಕಟೇಶ ಸಂಘಕ್ಕೆ ಬರಲಿಲ್ಲ. ಏನೋ ತೊಂದರೆಯಾಗಿದ್ದಿರಬೇಕು ಎಂದುಕೊಂಡರು ಸದಸ್ಯರು. ಆದರೆ ಮುಂದಿನ ಮೂರು ದಿನವೂ ಅವರು ಬರಲಿಲ್ಲ. ಅವರೆಂದೂ ಹೀಗೆ ತಪ್ಪಿಸಿಕೊಂಡವರಲ್ಲ. ಒಂದು ಅರ್ಧ ಘಂಟೆ ತಡವಾಗಿ ಬರುವುದಾದರೂ ಹೇಳಿ ಕಳುಹಿಸುವವರು. ಅಧ್ಯಕ್ಷರಾದ ಸತೀಶ್ಗೆ ಚಿಂತೆಯಾಯಿತು. ಮತ್ತೊಬ್ಬ ಸದಸ್ಯನಿಗೆ ವೆಂಕಟೇಶರ ಮನೆಗೆ ಹೋಗಿ ವಿಚಾರಿಸಿಕೊಂಡು ಬರಲು ತಿಳಿಸಿದರು. ಆತ ಮರುದಿನ ವರದಿ ಒಪ್ಪಿಸಿದ. ವೆಂಕಟೇಶರ ಮಗನಿಗೆ ಬೇರೆ ಕಡೆಗೆ ವರ್ಗವಾಗಿದೆ. ಅವರೆಲ್ಲ ಹೋಗಿದ್ದಾರೆ. ಇವರ ಹೆಂಡತಿ ಕಾಲವಾಗಿ ಮೂರು ವರ್ಷವಾಗಿದೆ. ಹೀಗಾಗಿ ಮನೆಯಲ್ಲಿ ಇವರೊಬ್ಬರೇ. ಮನೆಬಿಟ್ಟು ಅವರು ಹೊರಗೇ ಬರುತ್ತಿಲ್ಲ. ಬಹುಶಃ ಏಕಾಂಗಿತನದಿಂದ ಖಿನ್ನತೆ ಬಂದುಬಿಟ್ಟಿದೆ. ಅಧ್ಯಕ್ಷರು ಇದನ್ನು ಕೇಳಿ ಮರುದಿನ ವೆಂಕಟೇಶರ ಮನೆಗೆ ಹೋದರು.
ಮನೆಬಾಗಿಲು ತೆರೆದಾಗ ಅಧ್ಯಕ್ಷರನ್ನು ನೋಡಿ ವೆಂಕಟೇಶ ಅವರು ಗಲಿಬಿಲಿಗೊಂಡರು. ಅವರಿಗೆ ಸಂಘಕ್ಕೆ ಹೋಗಲು ಮನಸ್ಸಿಲ್ಲ. ಆದರೆ ಅಧ್ಯಕ್ಷರು ಕೇಳಿದರೆ ಏನು ಮಾಡುವುದು ಎಂಬ ಚಿಂತೆ. ಆದರೆ ಅಧ್ಯಕ್ಷರು ಯಾವ ಮಾತೂ ಆಡಲಿಲ್ಲ. ಒಳಗೆ ಬಂದು ಕುಳಿತುಕೊಂಡರು. ಚಳಿಗಾಲವಾದ್ದರಿಂದ ವೆಂಕಟೇಶ ಒಲೆಯಲ್ಲಿ ಕಟ್ಟಿಗೆ ಹಾಕಿ ಬೆಂಕಿ ಮಾಡಿ ಮೈಕಾಯಿಸಿಕೊಳ್ಳುತ್ತಿದ್ದರು.
ಅಧ್ಯಕ್ಷರು ಅಲ್ಲಿಯೇ ಬಂದು ಚಾಪೆಯ ಮೇಲೆ ಕುಳಿತರು. ಮಾತೇ ಇಲ್ಲ. ಒಲೆಯಲ್ಲಿ ಕೆಂಡ ನಿಗಿನಿಗಿ ಉರಿಯುತ್ತಿತ್ತು. ಅಧ್ಯಕ್ಷರು ಎದ್ದರು, ಚಿಮ್ಮಟಿಗೆಯಿಂದ ಒಂದು ಕೆಂಡವನ್ನು ಎತ್ತಿ ಒಲೆಯ ಹೊರಗಿಟ್ಟರು. ಮತ್ತೆ ಬಂದು ಕುಳಿತುಕೊಂಡು ಅದನ್ನೇ ನೋಡುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಹೊರಗೆ ಇಟ್ಟ ಕೆಂಡ ತಣ್ಣಗಾಗಿ ಪ್ರಖರತೆ ಕಳೆದುಕೊಂಡು ಇದ್ದಿಲಾಯಿತು. ಅಧ್ಯಕ್ಷರು “ಸರಿ, ನಾನಿನ್ನು ಬರುತ್ತೇನೆ” ಎಂದು ಹೊರಟರು. ಆಗಲೂ ಸಂಘಕ್ಕೆ ಬಾ ಎನ್ನುವ ಮಾತಿಲ್ಲ. ಅವರನ್ನು ಕಳುಹಿಸಲು ಗೇಟಿನವರೆಗೆ ಬಂದ ವೆಂಕಟೇಶ, “ಸ್ವಾಮಿ, ನಾಳೆಯಿಂದ ತಪ್ಪದೇ ಸಂಘಕ್ಕೆ ಬರುತ್ತೇನೆ. ನನಗೆ ಒಳ್ಳೇ ಪಾಠ ಕಲಿಸಿದಿರಿ” ಎಂದರು. “ಹೌದೆ?” ಎಂದು ಹುಬ್ಬೇರಿಸಿದರು ಅಧ್ಯಕ್ಷರು. “ಕೆಂಡ ಒಲೆಯಲ್ಲಿ ಉಳಿದ ಕೆಂಡಗಳ ಜೊತೆ ಇದ್ದಾಗ ಪ್ರಖರತೆಯಿಂದ ಉರಿದು ಶಾಖ, ಬೆಳಕು ಕೊಡುತ್ತಿತ್ತು. ಅದು ಬೇರೆಯಾದಾಗ ಎಲ್ಲವನ್ನೂ ಕಳೆದುಕೊಂಡು ಇದ್ದಿಲಾಯಿತು. ನಾನು ಕೆಂಡದ ಹಾಗಿರಬೇಕು. ಇದ್ದಿಲಾಗುವುದು ಬೇಡ” ಎಂದು ಕಣ್ಣೀರು ತಂದುಕೊAಡರು. ಅಧ್ಯಕ್ಷರು ಬೆನ್ನು ತಟ್ಟಿ ನಡೆದರು.
ವ್ಯಕ್ತಿ ಸಮಾಜಮುಖಿಯಾದಾಗ ಅವನ ಶಕ್ತಿ ವರ್ಧನೆಯಾಗುತ್ತದೆ. ಏಕಾಂಗಿಯಾದಾಗ ಅವನ ಕರ್ತೃತ್ವಶಕ್ತಿ ಕುಂಠಿತವಾಗಿ ಕಳಾಹೀನವಾಗುತ್ತಾನೆ. ಕಾರ್ಯದಿಂದ ಚೈತನ್ಯ ಹಿಗ್ಗುತ್ತದೆ. ಕಾರ್ಯವಿಮುಖತೆಯಿಂದ ಕುಗ್ಗುತ್ತದೆ. ಚೈತನ್ಯ ಎಂದಿಗೂ ಲವಲವಿಕೆಯಿಂದ ಇರುವುದರ ಜೀವಂತಿಕೆಯ ಲಕ್ಷಣ. ಆದರೆ ಸಮಾಜದ ಕೆಲಸ ಮಾಡುವಾಗ ಕೆಲವು ಬಾರಿ ನಮ್ಮ ಚೈತನ್ಯ ಕುಗ್ಗಿಹೋಗುತ್ತದೆ. ಸಾಮಾಜಿಕ ಕೆಲಸ ಎಂದರೆ ಅದೊಂದು ಪ್ರಯಾಸದ ಕೆಲಸ. ಸೋಲು-ಸವಾಲುಗಳು, ಟೀಕೆ-ನಿಂದೆಗಳು, ಎಡರು-ತೊಡರುಗಳು ಎಲ್ಲವನ್ನೂ ಎದುರಿಸಬೇಕಾಗುತ್ತದೆ. ‘ಊರಿಗೆ ಉಪಕಾರ ಮಾಡುವುದೂ ಒಂದೇ, ಹೆಣಕ್ಕೆ ಶೃಂಗಾರ ಮಾಡುವುದೂ ಒಂದೇ’ ಎಂಬುದಾಗಿ ತುಳು ಭಾಷೆಯಲ್ಲಿ ಗಾದೆ ಮಾತೊಂದಿದೆ. ಅಂದರೆ ಹೆಣಕ್ಕೆ ಶೃಂಗಾರ ಮಾಡಿದಂತೆ ಸಾಮಾಜಿಕ ಕೆಲಸ ಮಾಡುವುದು ವ್ಯರ್ಥ ಎಂಬುದು ಕೆಲವರ ಅನಿಸಿಕೆಯೂ ಹೌದು, ಅನುಭವವೂ ಹೌದು.
ಬಿಂಬ ಸ್ವಚ್ಛವಾಗಿರಲಿ
ಈ ಸಮಾಜ ರುಗ್ಣವಾಗಿದೆ, ಕುರೂಪವಾಗಿದೆ, ಕ್ರೂರವಾಗಿದೆ. ಹಲವಾರು ಮೂರ್ಖತೆಗಳಿಂದ ನಮ್ಮ ಸಮಾಜ ನಿರ್ಮಿತವಾಗಿದೆ. ಉಪಕಾರ ಸ್ಮರಣೆ ಎಂಬುದು ಸಮಾಜದಿಂದ ಮಾಯವಾಗಿದೆ. ಮಾನವೀಯತೆಯಂತೂ ಎಂದೋ ಸಮಾಜದಿಂದ ದೂರವಾಗಿದೆ. ಎಲ್ಲರೂ ಅವರವರ ಸ್ವಾರ್ಥದಲ್ಲೆ ಮುಳುಗಿದ್ದಾರೆ. ಇನ್ನೊಬ್ಬರನ್ನು ಮೆಟ್ಟಿ ನಾನು ಹೇಗೆ ಮೇಲೇರುವುದೆಂಬುದು ಹೆಚ್ಚಿನವರ ಧೋರಣೆಯಾಗಿದೆ. ಕೂಲಿಗಾರರು ಬಂಡವಾಳಗಾರರ ಮೇಲೆ ವಿಷ ಕಾರುತ್ತಿರುವರು. ಬಂಡವಾಳಗಾರರು ಕಾರ್ಮಿಕರನ್ನು ಶೋಷಿಸುತ್ತಿರುವರು. ಒಂದು ಬುಡಕಟ್ಟಿನವರು ಇನ್ನೊಂದು ಬುಡಕಟ್ಟಿನವರನ್ನು ನಿರ್ಮೂಲ ಮಾಡಲು ಪ್ರಯತ್ನಿಸುತ್ತಿರುವರು. ಒಂದು ಜನಾಂಗದವರು ಇನ್ನೊಂದು ಜನಾಂಗದವರನ್ನು ಪಾತಾಳಕ್ಕೆ ತುಳಿಯಬೇಕೆಂದು ಸಂಧಾನಗಳನ್ನು ನಡೆಸುತ್ತಿರುವರು.
ಮತಾಂಧರು ತಾವು ಹೇಳಿದ್ದೆ ಕಾನೂನು ಎಂಬುದಾಗಿ ಸಾರುತ್ತಿದ್ದಾರೆ. ಮಹಿಳೆಯರನ್ನು ಕಾಲ ಕಸಕ್ಕಿಂತ ಕೀಳಾಗಿ ನೋಡುತ್ತಾರೆ. ಅವರಿಗೆ ಹಲವಾರು ನಿಬಂಧನೆಗಳು, ನಿರ್ಬಂಧಗಳು. ಇದನ್ನು ಮೀರಿದರೆ ಜೀವವನ್ನೇ ತೆಗೆಯುವ ಘೋರ ಶಿಕ್ಷೆ. ಪ್ರಪಂಚದಲ್ಲಿ ನಮ್ಮ ಮತವೇ ಶ್ರೇಷ್ಠ. ನಮ್ಮ ಮತದ ಕಟ್ಟಳೆಯಂತೆ ಎಲ್ಲರೂ ಬದುಕಬೇಕು. ಇಲ್ಲದಿದ್ದರೆ ನೀವೆಲ್ಲಾ ಸಾಯಲು ಯೋಗ್ಯರು ಎಂಬುದಾಗಿ ಭಯೋತ್ಪಾದನೆಯಿಂದ ಸಮಾಜದಲ್ಲಿ ಭಯ, ಹಿಂಸೆ, ಅಶಾಂತಿ ಹರಡುತ್ತಿದ್ದಾರೆ. ಈ ಭಯೋತ್ಪಾದಕರಿಗೆ ಸಮಾಜಕ್ಕೆ ಘೋರ ಅನ್ಯಾಯ ಮಾಡುತ್ತಿದ್ದೇವೆ ಎಂಬುದೂ ಗೊತ್ತಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗಲೊ ಆಗಲೋ ಯುದ್ಧ ಪ್ರಾರಂಭವಾಗಿ ಮಾನವ ಸಮಾಜವೇ ಸುಟ್ಟು ಬೂದಿಯಾಗಬಹುದೆಂಬ ಭಯ ನಮ್ಮನ್ನು ನಡುಗಿಸುತ್ತದೆ. ಇಂತಹ ಅಹಂಕಾರಿ ಸಮಾಜವನ್ನು ಸುಧಾರಿಸುವುದಾದರೂ ಹೇಗೆ?
ಸಮಾಜವೆಂಬುದು ವ್ಯಕ್ತಿಯ ಪ್ರತಿಬಿಂಬ. ನಾವೇನಾಗಿದ್ದೇವೆಯೋ ಅದೇ ಸಮಾಜದಲ್ಲಿ ಪ್ರತಿಫಲಿಸುತ್ತದೆ. ಪ್ರತಿಬಿಂಬ ಸುಂದರವಾಗಬೇಕಾದರೆ ಮೂಲ ಬಿಂಬವೂ ಸುಂದರವಾಗಿರಬೇಕು. ಪ್ರತಿಬಿಂಬ ಸ್ವಚ್ಛವಾಗಿ ಕಾಣಬೇಕೆಂದು ಕನ್ನಡಿ ಒರೆಸಿದರೆ ಪ್ರಯೋಜನವಿಲ್ಲ. ಬದಲಿಗೆ ಬಿಂಬವನ್ನು ಸ್ವಚ್ಛವಾಗಿಟ್ಟುಕೊಂಡರೆ ಪ್ರತಿಬಿಂಬ ಸ್ವಚ್ಛವಾಗಿಯೇ ಕಾಣುತ್ತದೆ. “ಒಳ್ಳೆಯ ಸಮಾಜ ಕಾಣಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲಿಗೆ ಅನ್ಯರ ಒಳಿತಿಗಾಗಿ, ಆ ಬಳಿಕ ತನ್ನ ಒಳಿತಿಗಾಗಿ ದುಡಿಯುವ ಮನೋಬಲವನ್ನು ರೂಢಿಸಿಕೊಳ್ಳುವುದು ಅಗತ್ಯ” ಎಂಬ ಡಾ|| ರಾಧಾಕೃಷ್ಣನ್ ಮಾತಿನಲ್ಲಿ ಸತ್ಯವಿದೆ. ಈ ಸಮಾಜವನ್ನು ನಮಗೆ ಹೊಂದುವಂತೆ ನಾವು ಬದಲಾಯಿಸಲಾಗುವುದಿಲ್ಲ. ಆದರೆ ನಮ್ಮಲ್ಲಿ ಶೀಲ ಹಾಗೂ ಛಲ ಇದ್ದಲ್ಲಿ ನಾವು ಎಂತಹ ದೋಷಿ ಸಮಾಜದಲ್ಲೂ ನಮ್ಮ ಜೀವನಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಬಹುದು.
ಮಾ ಫಲೇಷು ಕದಾಚನ
ಇಲ್ಲಿ ಝರತುಷ್ಟನ ಒಂದು ಮಾತು ನೆನಪಿಸಿಕೊಳ್ಳುವುದು ಉತ್ತಮ. “ಭೂಮಿಗೆ ಎಂದೂ ದ್ರೋಹವೆಸಗಬೇಡ. ಈ ಭೂಮಿ ನಿನ್ನ ತಾಯಿ ಇದ್ದಂತೆ. ನಿನ್ನ ಜನಗಳನ್ನು ನೀನು ಮರೆಯಬೇಡ. ಅವರು ನಿನಗೆ ಅಡ್ಡಗಾಲು ಹಾಕಿರಬಹುದು. ನಿನ್ನನ್ನು ನಿರ್ನಾಮ ಮಾಡಲು ಪ್ರಯತ್ನಿಸಿರಬಹುದು. ಅವರೇನೇ ಮಾಡಿದ್ದರೂ ಮತಿಹೀನರಾಗಿ ಆ ಕೆಲಸ ಮಾಡಿರುತ್ತಾರೆ. ಮತಿಹೀನರನ್ನು ನೀನೇ ಕ್ಷಮಿಸದಿದ್ದರೆ ಮತ್ತಾರು ಕ್ಷಮಿಸುವರು?” ನಿನ್ನ ಕ್ಷಮೆ ನಿನಗೆ ಬೆಲೆಕಟ್ಟಲಾಗದ ಸಂಪತ್ತನ್ನು ನೀಡುತ್ತದೆ.
ಸಾಮಾಜಿಕ ಪರಿವರ್ತನೆಗಿಂತ ನಮ್ಮ ಕರ್ತವ್ಯಕ್ಕೆ ನಾವು ಆದ್ಯತೆ ಕೊಡಬೇಕು. ಸಾಮಾಜಿಕ ಬದಲಾವಣೆಗೆ ಎರಡನೆಯ ಆದ್ಯತೆ. ‘ಸಾಮಾಜಿಕ ಕೆಲಸ’ ಎಂಬ ನಮ್ಮ ಪ್ರಯತ್ನಕ್ಕೆ ‘ಸಾಮಾಜಿಕ ಸತ್ ಪರಿವರ್ತನೆ’ ಎಂಬ ಫಲ ಕೊಡುವುದು ಭಗವಂತನಿಗೆ ಸೇರಿದ್ದು.
ಎಂಬತ್ತರ ವಯಸ್ಸಿನ ಒಬ್ಬ ದೈವಭಕ್ತ. ಸಾಕಷ್ಟು ಧರ್ಮಕಾರ್ಯ ಮಾಡಿದ. ಅವನಿಗೆ ಸತಿಸುತರಾರೂ ಇರಲಿಲ್ಲ. ಲೋಕಹಿತವೇ ಆತನ ಗುರಿಯಾಗಿತ್ತು. ಒಂದು ಸಂಜೆ ಅನ್ನಪಾನಾದಿಗಳನ್ನು ಮುಗಿಸಿಕೊಂಡು ವಿಶ್ರಮಿಸಲು ಮಲಗುವ ಕೋಣೆಗೆ ಬಂದ. ಬಹಳ ದಿನಗಳಿಂದಲೂ ತಾನು ಮಾಡಿದ ಸಮಾಜಸೇವೆಯ ಫಲಶ್ರುತಿ ಏನು ಎಂದು ತಿಳಿಯಬಯಸಿದ್ದ. ಹಾಸಿಗೆಯಲ್ಲಿ ಕುಳಿತು ಯೋಚಿಸತೊಡಗಿದ.
ನಾಲ್ಕೈದು ದಶಕಗಳ ಸುದೀರ್ಘ ಸೇವೆಯ ನಂತರವೂ ಸಮಾಜದಲ್ಲಿ ಏನೂ ಪರಿವರ್ತನೆ ಕಾಣಲಿಲ್ಲ. ಎಂದಿನಂತೆ ಜನ ಮೋಸ, ವಂಚನೆಯಲ್ಲಿ ತೊಡಗಿದ್ದಾರೆ. ಅನೈತಿಕತೆ, ಅರಾಜಕತೆ, ಅಪ್ರಾಮಾಣಿಕತೆ ತಾಂಡವ ನಡೆಸಿರುವಂತೆ ಭಾಸವಾಯಿತು. ಆತನಿಗೆ ‘ನಾನು ಇಷ್ಟು ದಿನ ಮಾಡಿದ ಸೇವೆ ವ್ಯರ್ಥವಾಯಿತು’ ಎನ್ನಿಸಿತು. ಜನರು ನನ್ನ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ನನ್ನ ತ್ಯಾಗಭಾವವನ್ನು ಜನರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ದುಃಖ-ದುಮ್ಮಾನ ಒತ್ತರಿಸಿ ಬಂದಿತು. ದಿಕ್ಕುತೋಚದೆ ಕಣ್ಣುಬಿಡುತ್ತಾ ಹಾಸಿಗೆಯಲ್ಲಿ ಕುಳಿತಿದ್ದ. ಅಷ್ಟರಲ್ಲಿ ದೇವರು ಆಗಮಿಸಿದ. ಭಕ್ತ ಎದ್ದು ದೇವರಿಗೆ ವಂದಿಸಿದ. ದೇವರು ಕೇಳಿದ, “ಮಧ್ಯರಾತ್ರಿಯಾದರೂ ಮಲಗಲಿಲ್ಲವೇಕೆ? ಏನು ಯೋಚನೆ?”
ಭಕ್ತ “ದೇವಾ, ಅದು ಹೇಗೆ ನಿದ್ರೆ ಬರುತ್ತದೆ? ಜನಮನ ದೇಶಕೋಶವೆಲ್ಲ ನೀತಿಗೆಟ್ಟು ಹಾಳಾಗಿದೆ. ಧರೆಯಲ್ಲಿ ಧರ್ಮ ನಶಿಸಿಹೋಗುತ್ತಿದೆ!” ಎಂದ. “ಈ ಜಗತ್ತನ್ನು ತಿದ್ದುವ ಹೊಣೆ ನನಗಿರಲಿ. ನಿನಗೆ ವಯಸ್ಸಾಗಿದೆ. ಉಳಿದಿರುವಷ್ಟು ಕಾಲ ನೀನು ನಿಶ್ಚಿಂತೆಯಿಂದ ನೆಮ್ಮದಿಯಿಂದ ಇರಬೇಕು. ಕಾಲಾತೀತನಾದ ನಾನು ಸಂಕಲ್ಪಮಾತ್ರದಿಂದ ಈ ಜಗತ್ತನ್ನು ನಿರ್ಮಿಸಿದೆ. ಬೇಕೆಂದರೆ ಇದೇ ಕ್ಷಣ ನಾನು ಇದನ್ನು ಸರಿಮಾಡಬಲ್ಲೆ. ಸರ್ವಶಕ್ತನೂ, ಜಗದ ಕರ್ತನೂ ಆಗಿರುವ ನಾನೇ ನಿಶ್ಚಿಂತನಾಗಿರುವಾಗ ನಿನಗೇಕೆ ಚಿಂತೆ? ನಿನ್ನ ಕೈಲಾದಷ್ಟು ಕೆಲಸ ಮಾಡಿ ಮರೆತು ನೆಮ್ಮದಿಯಿಂದಿರು” ಎಂದು ದೇವರು ಹೇಳಿದ. ಆಗ ಭಕ್ತನ ಮನದಲ್ಲಿದ್ದ ಭವಬಂಧನವಳಿದು ತಿಳಿಬೆಳಕು ಮೂಡಿತು.
ಸೂಫಿ ಬಯೊಝಿದ್ ತನ್ನ ಜೀವನದ ಬಗೆಗೆ ಹೇಳಿಕೊಂಡದ್ದು ಹೀಗೆ – ನನ್ನ ತಾರುಣ್ಯದ ದಿನಗಳಲ್ಲಿ ನಾನೊಬ್ಬ ಕ್ರಾಂತಿಕಾರಿಯಾಗಿದ್ದೆ. ಇಡಿಯ ಪ್ರಪಂಚವೇ ಸರಿಯಿಲ್ಲ. ಆದ್ದರಿಂದ ಓ ದೇವರೇ ಜಗತ್ತನ್ನೇ ಬದಲಾಯಿಸಬಲ್ಲ ಶಕ್ತಿಯನ್ನು ನನಗೆ ಅನುಗ್ರಹಿಸು – ಎಂಬುದು ನನ್ನ ಪ್ರಾರ್ಥನೆಯಾಗಿತ್ತು. ನಾನು ವಯಸ್ಕನಾದಾಗ ಪ್ರಪಂಚ ಒತ್ತಟ್ಟಿಗಿರಲಿ ಒಬ್ಬ ವ್ಯಕ್ತಿಯನ್ನು ಕೂಡ ಪರಿವರ್ತಿಸಲಾಗದೆ ಅರ್ಧ ಆಯುಷ್ಯವನ್ನೇ ಕಳೆದೆನಲ್ಲಾ? ಓ ದೇವರೇ!
ಯಾರೆಲ್ಲ ನನ್ನ ನಿಕಟ ಸಂಪರ್ಕಕ್ಕೆ ಬರುತ್ತಾರೋ ಅವರನ್ನು (ನನ್ನ ಕುಟುಂಬದವರು, ಬಂಧುಗಳು ಹಾಗೂ ಮಿತ್ರರನ್ನು) ಬದಲಾಯಿಸುವ ಶಕ್ತಿಯನ್ನು ಕರುಣಿಸು ಎಂದು ಪ್ರಾರ್ಥಿಸತೊಡಗಿದೆ.
ನಾನೀಗ ಮುದುಕನಾಗಿದ್ದು ನನ್ನ ಶೇಷಾಯುಷ್ಯವು ಸೀಮಿತವಾದ್ದರಿಂದ ಓ ದೇವರೇ, ಉಳಿದವರ ಮಾತು ಅಂತಿರಲಿ, ನನ್ನನ್ನೇ ತಿದ್ದಿಕೊಳ್ಳುವ ಶಕ್ತಿಯನ್ನು ನೀಡು ಎಂದು ಪ್ರಾರ್ಥಿಸುತ್ತಿದ್ದೇನೆ. ಹೀಗೆ ಮಾಡಿದ ಮೇಲೆ ನನ್ನಲ್ಲೂ ಬದಲಾವಣೆಗಳಾಗಿವೆ. ಇತರರಲ್ಲೂ ಪ್ರಾರಂಭದಲ್ಲೇ ಹೀಗೆ ಪ್ರಾರ್ಥಿಸಿದ್ದರೆ ನನ್ನ ಅರ್ಧ ಆಯುಷ್ಯವು ವ್ಯರ್ಥವಾಗುತ್ತಿರಲಿಲ್ಲ.
ನಮ್ಮ ವೈಯಕ್ತಿಕ ಪ್ರಯತ್ನದಿಂದ ಸಾಮಾಜಿಕ ಪರಿವರ್ತನೆ ಆಗುವುದೇ ಇಲ್ಲ ಎಂಬುದು ಇದರರ್ಥವಲ್ಲ. ನಮ್ಮ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ‘ಮಾ ಫಲೇಷು ಕದಾಚನ’ ಎಂಬ ಮಾತಿನಂತೆ ಫಲದ ಬಗ್ಗೆ ಚಿಂತಿಸದೆ ನಿನ್ನ ಪ್ರಯತ್ನವನ್ನು ನೀನು ನಿಶ್ಚಿಂತೆಯಿಂದ, ನಿರ್ಲಿಪ್ತತೆಯಿಂದ ಮುಂದುವರಿಸು – ಎಂಬುದೇ ಇದರ ಸಾರಾಂಶ. ವ್ಯಕ್ತಿ ಮತ್ತು ಸಮಾಜ ಎಂದರೆ ಒಂದು ಜೀವ ಎರಡು ದೇಹವಿದ್ದಂತೆ. ಒಂದರ ಪ್ರಭಾವ ಇನ್ನೊಂದರ ಮೇಲೆ ಬಿದ್ದೇ ಬೀಳುತ್ತದೆ. ಒಂದು ಏನೆಂದರೆ ವ್ಯಕ್ತಿ ಮತ್ತು ಸಮಾಜದಲ್ಲಿ ಪರಸ್ಪರ ಸಾಮರಸ್ಯವಿರಬೇಕು. ‘ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು’ ಎಂಬ ಪರಿಸ್ಥಿತಿ ಬರಬಾರದು. ಮನುಷ್ಯ ಮತ್ತು ಸಮಾಜ ಒಂದೇ ಗಾಲಿಯ ಎರಡು ಚಕ್ರಗಳು. ಅವು ಒಟ್ಟೊಟ್ಟಿಗೆ ಸಾಗಬೇಕೇ ವಿನಾ ವಿರುದ್ಧ ದಿಕ್ಕಿನಲ್ಲಿ ಸಾಗಿದರೆ ಜೀವನ ದುರಂತವಾಗುತ್ತದೆ.
ವ್ಯಕ್ತಿಪ್ರಯತ್ನಯಿಂದಲೇ ಮುನ್ನುಡಿ
ಒಬ್ಬ ವ್ಯಕ್ತಿ ಜೀವನಮುಖಿಯಾಗಿ ಸಮಾಜಮುಖಿಯಾದರೆ ಇಡೀ ಸಮಾಜವನ್ನು ಬದಲಿಸಲು ಸಾಧ್ಯವಿದೆ. ಸಮಾಜಕ್ಕೆ ಉಪಯೋಗವಾಗುವ ಮನುಷ್ಯನ ಸಣ್ಣ ಪ್ರಯತ್ನವಾದರೂ ಅದರಿಂದ ಆಗುವ ಪರಿಣಾಮ ಮಾತ್ರ ಬಹುದೊಡ್ಡದು. ವ್ಯಕ್ತಿಯ ಒಂದು ಉಪಕಾರ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನೆ ತರಬಹುದು. ‘ನನ್ನೊಬ್ಬನಿಂದ ಈ ಸಮಾಜ ಸುಧಾರಣೆ ಸಾಧ್ಯವೇ?’ ಎಂಬುದಾಗಿ ನಮಗೆ ಹಲವು ಬಾರಿ ಅನ್ನಿಸುತ್ತದೆ. ಆದರೆ ಮನುಷ್ಯನೊಬ್ಬ ಮನಸ್ಸು ಮಾಡಿದರೆ ಏನೂ ಮಾಡಬಹುದು. ಒಬ್ಬ ವ್ಯಕ್ತಿಯಿಂದ ಸಾಮಾಜಿಕ ಅನಿಷ್ಟಗಳು ದೂರವಾದದ್ದು, ಸಾಮಾಜಿಕ ಪರಿವರ್ತನೆಯಾದ ಉದಾಹರಣೆಗಳು ಸಾಕಷ್ಟಿದೆ.
ಒಬ್ಬನೇ ಒಬ್ಬ ವ್ಯಕ್ತಿಯಿಂದ ಸಾವಿನ ದವಡೆಯಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರ ಜೀವ ಉಳಿಯಲು ಸಾಧ್ಯವಿದೆ. ಎರಡನೇ ಮಹಾಯುದ್ಧದಲ್ಲಿ ಯೂರೋಪ್ ಹೊತ್ತಿ ಉರಿಯುತ್ತಿತ್ತು. ನಾಜಿ ಹಿಡಿತದಲ್ಲಿ ಯಹೂದಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದರು. ೩೧ ವರ್ಷದ ವಾಲನ್ಬರ್ಗ್ ಸ್ವೀಡನ್ನಿನ ಪ್ರಜೆ. ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದ ವಾಲನ್ಬರ್ಗ್ ‘ನ್ಯೂಟ್ರಲ್’ ಇದ್ದ ದೇಶದಲ್ಲಿ ಆರಾಮವಾಗಿ, ಐಷಾರಾಮದಲ್ಲಿ ಸುರಕ್ಷಿತವಾಗಿ ಉಳಿಯಬಹುದಿತ್ತು. ಆದರೆ ಈತ ಹಂಗೇರಿಗೆ ಬಂದ. ಏಕಾಂಗಿಯಾಗಿ ಒಂದು ಲಕ್ಷಕ್ಕೂ ಹೆಚ್ಚು ಯಹೂದಿಯರ ಪ್ರಾಣಗಳನ್ನು ಉಳಿಸಿದ.
‘ನನ್ನೊಬ್ಬಳಿಂದೇನು ಸಾಧ್ಯ?’ ಎಂಬ ಪ್ರಶ್ನೆಗೆ ರೋಸಾ ಪಾರ್ಕ್ಳಿಂದ ಉತ್ತರ ಸಿಕ್ಕಿದೆ. ಒಬ್ಬ ರೋಸಾ ಪಾರ್ಕ್ಳಿಂದ ಅಮೆರಿಕದ ಇಡೀ ವರ್ಣಭೇದದ ನಿಯಮಗಳನ್ನು ಮುರಿಯಲು ಸಾಧ್ಯವಾಯಿತು. ಅಮೆರಿಕದ ಬಸ್ಸುಗಳಲ್ಲಿ ಕಪ್ಪುಜನರಿಗೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಹಕ್ಕಿರಲಿಲ್ಲ. ಡಿಸೆಂಬರ್ ೧, ೧೯೫೫ರಂದು ದುಡಿದು ದಣಿದ ಕಪ್ಪು ಮಹಿಳೆ ರೋಸಾ ಪಾರ್ಕ್ ಬಸ್ಸಿನೊಳಕ್ಕೆ ಹತ್ತಿದಳು. ಮುಂದಿನ ಸೀಟುಗಳು ಖಾಲಿ ಇದ್ದವು, ಕುಳಿತಳು. ಅನಂತರದ ನಿಲ್ದಾಣದಲ್ಲಿ ಹತ್ತಿದ ಬಿಳಿಯರು, ರೋಸಾಳನ್ನು ಹಿಂದಕ್ಕೆ ಹೋಗುವಂತೆ ಆಗ್ರಹಿಸಿದರು. ರೋಸಾ ಸೀಟಿನಿಂದ ಕದಲಲಿಲ್ಲ. ಆಕೆಯನ್ನು ಬಂಧಿಸಿ ಕರೆದೊಯ್ದರು. ರೋಸಾ ‘ಬಸ್ ಬಾಯ್ಕಾಟ್’ಗೆ ಸ್ಫೂರ್ತಿಯಾದಳು. ಕಡೆಗೂ ಅಮೆರಿಕದ ಸುಪ್ರೀಂ ಕೋರ್ಟ್ ಬಸ್ಸಿನಲ್ಲಿ ಕರಿಯರ-ಬಿಳಿಯರ ವಿಂಗಡಣೆಯು ಶಾಸನಕ್ಕೆ ವಿರುದ್ಧವಾದದ್ದು ಎಂದು ಘೋಷಿಸಬೇಕಾಯಿತು. ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಗೆ ರೋಸಾ ಪ್ರೇರಣೆಯಾದಳು. ಓರ್ವ ವ್ಯಕ್ತಿಯ ಪ್ರಯತ್ನದಿಂದ ಸಾಮಾಜಿಕ ಪಿಡುಗೊಂದು ತೊಲಗಿತು.
ಅಮೆರಿಕದ ಫಿಲಡೆಲ್ಫಿಯಾದ ಬೆನ್ ಫ್ರ್ಯಾಂಕ್ಲಿನ್ ಪ್ರತಕರ್ತ-ಬರಹಗಾರ-ವಿಜ್ಞಾನಿ-ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಆಗಿನ ಕಾಲದಲ್ಲಿ ರಾತ್ರಿಯ ಹೊತ್ತು ರಸ್ತೆಗಳೆಲ್ಲ ಕತ್ತಲೆಯಿಂದ ಕೂಡಿರುತ್ತಿದ್ದವು. ಇದರ ಬಗ್ಗೆ ಏನಾದರೂ ಮಾಡಬೇಕೆಂದು ಫ್ರ್ಯಾಂಕ್ಲಿನ್ರಿಗೆ ಅನಿಸಿತು. ಅವರು ನಗರಸಭೆಯವರಿಗೆ ಅರ್ಜಿ ಬರೆಯಲಿಲ್ಲ. ನಾಗರಿಕರಿಗೆ ಬುದ್ಧಿ ಹೇಳಲು ಹೋಗಲಿಲ್ಲ. ಅದರ ಬದಲು ಒಂದು ರಾತ್ರಿ ತಮ್ಮ ಮನೆಯ ಮುಂದೆ ಒಂದು ಉದ್ದನೆಯ ಕಬ್ಬಿಣದ ಕಂಬ ನೆಟ್ಟು ಒಂದು ಲಾಟೀನನ್ನು ನೇತುಹಾಕಿದರು.
ಮೊದಲ ಕೆಲವು ದಿನ ಅವರ ಸುತ್ತಮುತ್ತಲಿನವರಿಗೆ ಫ್ರ್ಯಾಂಕ್ಲಿನ್ ರ ಅಭ್ಯಾಸ ಹುಚ್ಚುತನದ್ದಾಗಿ ಕಾಣಿಸುತ್ತಿತ್ತು. ಆದರೆ ಲಾಟೀನಿನ ಬೆಳಕಿರುತ್ತಿದ್ದುದರಿಂದ ಜನ ಅವರ ಮನೆಯ ಮುಂದೆ ನಿರಾತಂಕವಾಗಿ ನಡೆದು ಹೋಗುತ್ತಿದ್ದರು. ಭರವಸೆ ಮೂಡಿಸುವ, ಸ್ನೇಹಮಯ ವಾತಾವರಣವಿರುತ್ತಿತ್ತು. ಕೆಲವೇ ದಿನಗಳಲ್ಲಿ ಅವರ ನೆರೆಹೊರೆಯವರು ತಮ್ಮ ಮನೆಯ ಮುಂದೆಯೂ ಲಾಟೀನ್ ಹಚ್ಚಿಡಲು ಪ್ರಾರಂಭಿಸಿದರು. ಇಡೀ ಬೀದಿ ಬೆಳಕಿನಿಂದ ಕೂಡಿರುತ್ತಿತ್ತು. ಇದನ್ನು ಗಮನಿಸಿದ ಉಳಿದ ಬೀದಿಗಳವರೂ ಒಬ್ಬೊಬ್ಬರಾಗಿ ಇವರನ್ನು ಅನುಕರಿಸತೊಡಗಿದರು. ಕೆಲವೇ ದಿನಗಳಲ್ಲಿ ಲಾಟೀನ್ ಚಳವಳಿ ಬೀದಿ-ಬೀದಿಗೆ ಹಬ್ಬಿತು. ರಾತ್ರಿಯ ಹೊತ್ತು ಇಡೀ ಫಿಲಡೆಲ್ಫಿಯಾದ ನಗರಗಳು ಬೆಳಕಿನಿಂದ ಕಂಗೊಳಿಸುತ್ತಿದ್ದವು. ನಿಧಾನವಾಗಿ ಉಳಿದ ನಗರಗಳಿಗೂ ಇದು ಹಬ್ಬಿತು. ಮುಂದೆ ನಗರಸಭೆಗಳ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬೀದಿ ದೀಪಗಳೂ ಸೇರಿಕೊಂಡವು.
ಹೀಗೆ ಓರ್ವ ಪ್ರಜ್ಞಾವಂತ ನಾಗರಿಕ ಪ್ರಾರಂಭಿಸಿದ ಸಂಪ್ರದಾಯದಿಂದ ಇಡೀ ರಾಷ್ಟ್ರದಲ್ಲಿ ಬೀದಿ ದೀಪ ಹಚ್ಚಿಡುವ ಪದ್ಧತಿ ಪ್ರಾರಂಭವಾಯಿತು. ಓರ್ವ ವ್ಯಕ್ತಿಯ ಪ್ರಯತ್ನದಿಂದ ಸಮಾಜದಲ್ಲಿ ಸತ್ಪರಿವರ್ತನೆಯಾದದ್ದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಆದ್ದರಿಂದಲೇ ಫ್ರ್ಯಾಂಕ್ಲಿನ್ ಇಂದಿಗೂ ಜನಮನದಲ್ಲಿ ಉಳಿದಿದ್ದಾರೆ.
ಸಮಾಜಋಣ
ಆಂಗ್ಲಭಾಷೆಯಲ್ಲೊಂದು ಮಾತಿದೆ:
Alone I can ‘Say’. But together we can ‘Talk’
Alone I can ‘Enjoy’. But together we can ‘Celebrate’
Alone I can ‘Smile’. But together we can ‘Laugh’
That’s the beauty of human relations.
ವ್ಯಕ್ತಿ ವ್ಯಷ್ಟಿಯಾದರೆ, ಸಮಾಜ ಸಮಷ್ಟಿ. ವ್ಯಷ್ಟಿ ಸಮಷ್ಟಿಗೆ ಸಮರ್ಪಣೆಯಾದರೆ ಪರಮೇಷ್ಠಿಯ ಸಾಕ್ಷಾತ್ಕಾರವಾಗುತ್ತದೆ. ಸ್ವಾಮಿ ವಿವೇಕಾನಂದರು ಶಿಷ್ಯನೊಬ್ಬನಿಗೆ, “ನೀನು ಕೇವಲ ನಿನ್ನ ಸ್ವಂತ ಮುಕ್ತಿಯನ್ನು ಬಯಸುವುದಾದರೆ ನರಕಕ್ಕೆ ಹೋಗುತ್ತಿ. ಅತ್ಯುನ್ನತ ಮಟ್ಟವನ್ನು ತಲಪಬೇಕೆಂಬ ಅಪೇಕ್ಷೆಯಿದ್ದರೆ ಇತರರ ಮುಕ್ತಿಗಾಗಿ ಶ್ರಮಿಸು. ಸ್ವಂತ ಮುಕ್ತಿಯ ಆಸೆಯನ್ನು ತ್ಯಜಿಸು. ಇದೇ ಮಹೋನ್ನತ ಆಧ್ಯಾತ್ಮಿಕ ತಪಸ್ಸು” ಎಂಬುದಾಗಿ ಹೇಳಿದರು.
ಮನುಷ್ಯನ ಮೇಲೆ ಮಾತೃಋಣ, ಪಿತೃಋಣ, ದೇವಋಣ, ಋಷಿಋಣ ಎಂಬುದಿವೆ. ಇದರೊಂದಿಗೆ ಸಮಾಜಋಣ ಎಂಬುದೂ ಒಂದಿದೆ. ಸಮಾಜಋಣವನ್ನು ತೀರಿಸುವುದು ನಮ್ಮ ಆದ್ಯ ಕರ್ತವ್ಯ. ಆದರೆ ಸಮಾಜದ ಋಣವನ್ನು ತೀರಿಸುವುದು ಕಷ್ಟ. ಯಾಕೆಂದರೆ ನಾವು ಉಡುವ ಬಟ್ಟೆ, ತಿನ್ನುವ ಆಹಾರ, ನಿಲ್ಲುವ ಮನೆ ಎಲ್ಲವೂ ಸಮಾಜದಿಂದ ತಯಾರಾದದ್ದು. ಆದ್ದರಿಂದ ನಾವು ಸಮಾಜಕ್ಕೆ ಎಷ್ಟು ಕೊಟ್ಟರೂ ಕಡಮೆಯೇ. ‘ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎಂಬ ಮಾತಿನಲ್ಲಿ ಸಮಾಜದ ಒಳಿತಿಗೆ ಪ್ರಾಮುಖ್ಯ ಕೊಡಬೇಕೆಂಬ ಅರ್ಥ ಅಡಗಿಕೊಂಡಿದೆ. ಪ್ರಾಯಶಃ ನಮ್ಮ ಹಿರಿಯರು “ದೀರ್ಘಂ ಪಶ್ಯತು, ಮಾ ಹ್ರಸ್ವಂ” ಎಂದಿರುವುದು ಈ ದೃಷ್ಟಿಯಿಂದಲೇ. ಸಾಮಾಜಿಕ ಚಿಂತನೆ ದೀರ್ಘವಾದುದು; ಸಂಸಾರದ ಚಿಂತನೆ ಹ್ರಸ್ವವಾದುದು. ಕನ್ನಡದ ಕವಿಯೊಬ್ಬ ಹೇಳುತ್ತಾನೆ.
ತಾನು ತನಗಾಗಿಯೇ ಬದುಕುತಿಹ ಬಗೆಯೊಂದು
ತನ್ನವರಿಗಾಗಿ ಬದುಕುವುದು ಇನ್ನೊಂದು
ತಾನು ತನ್ನವರೆನುವ ತರತಮವ ತೆಗೆದೊಗೆದು
ತಾನು ಎಲ್ಲರಿಗಾಗಿಯೆನುವ ಮತಿಯೊಂದು||
ಹೆಲೆನ್ಕೆಲ್ಲರ್ ಒಂದು ಮಾತು ಹೇಳಿದ್ದಾರೆ: “ಜೀವನವೇ ಅದ್ಭುತ. ಅದನ್ನು ಬೇರೆಯವರಿಗೆ ಮೀಸಲಿಟ್ಟು ನೋಡಿ, ಅತ್ಯದ್ಭುತ” ಎಂಬುದಾಗಿ. ಸರ್ವರ ಹಿತವನ್ನು ನಾವು ಬಯಸಿದರೆ ನಮ್ಮ ಹಿತವನ್ನು ಭಗವಂತ ಬಯಸುತ್ತಾನೆ ಹಾಗೂ ಕಾಯುತ್ತಾನೆ.
‘Give and take’
೧೯೭೭ರ ‘ಗೈಡ್ ಪೋಸ್ಟ್’ ಎಂಬ ವಾರಪತ್ರಿಕೆಯಲ್ಲಿ ಒಂದು ಘಟನೆಯ ವಿವರ ಬಂದಿತ್ತು. ಒಂದಿಷ್ಟು ಜನ ಸ್ನೇಹಿತರು ಸ್ವಿಟ್ಜರ್ಲ್ಯಾಂಡ್ ಪಕ್ಕದ ಅಲ್ಪ್ಸ್ ಪರ್ವತ ಪ್ರದೇಶಕ್ಕೆ ಚಾರಣಕ್ಕೆ ಹೋಗಿದ್ದರು. ಪರ್ವತಗಳ ಚಿಕ್ಕಪುಟ್ಟ ಶಿಖರಗಳನ್ನೇರಿ ಆನಂದಪಟ್ಟರು. ಚಿತ್ರಗಳನ್ನು ತೆಗೆದುಕೊಂಡರು. ಅಲ್ಲಿಯೇ ಡೇರೆ ಹಾಕಿಕೊಂಡು ರಾತ್ರಿ ಕಳೆದು ಮರುದಿನ ಪರ್ವತದಿಂದ ಕೆಳಗೆ ಇಳಿದು ಬರುವುದು ಅವರ ಯೋಜನೆಯಾಗಿತ್ತು. ಆದರೆ ರಾತ್ರಿ ಸುಮಾರು ಒಂದೂವರೆಯ ಹೊತ್ತಿಗೆ ಅನಿರೀಕ್ಷಿತವಾಗಿ ತುಂಬಾ ತಣ್ಣಗಿನ ಗಾಳಿ ಬೀಸತೊಡಗಿತು. ನಿಧಾನವಾಗಿ ಹಿಮಪಾತ ಪ್ರಾರಂಭವಾಯಿತು. ಬೆಳಗ್ಗೆ ನಾಲ್ಕರ ಹೊತ್ತಿಗೆ ಭಾರೀ ಹಿಮ ಬೀಳಲಾರಂಭಿಸಿತು. ಇವರು ವಾಸವಾಗಿದ್ದ ಡೇರೆಯ ಬಾಗಿಲು ಮುಚ್ಚಿಹೋಗುವಷ್ಟು ಹಿಮ. ಜೋರಾದ ಗಾಳಿ ಎಲ್ಲಿ ಡೇರೆಯನ್ನು ಹಾರಿಸಿಬಿಡುತ್ತದೋ ಎಂಬಷ್ಟು ಭೀಕರವಾಗಿತ್ತು. ಚಾರಣಕ್ಕೆ ಹೋದ ಇವರಾರೂ ಇಷ್ಟೊಂದು ಚಳಿಯಾದೀತೆಂದು ನಿರೀಕ್ಷಿಸಿರಲಿಲ್ಲ. ಅದಕ್ಕೆ ಬೇಕಾದ ಬಟ್ಟೆಗಳನ್ನು ತೆಗೆದುಕೊಂಡು ಹೋಗಿರಲಿಲ್ಲ.
ಅವರ ದೇಹ ಮರಗಟ್ಟತೊಡಗಿತು. ಆರು ಗಂಟೆಗೆ ಗಾಳಿ ಇನ್ನೂ ಬಿರುಸಾಯಿತು. ಅವರು ಕಟ್ಟಿಕೊಂಡಿದ್ದ ಎರಡೂ ಡೇರೆಗಳು ಹಾರಿಹೋದವು. ಎಲ್ಲರೂ ಆಶ್ರಯಕ್ಕಾಗಿ ದಿಕ್ಕುದಿಕ್ಕಿಗೆ ಓಡತೊಡಗಿದರು. ಅವರ ಬಳಿ ಇದ್ದ ದಿಕ್ಸೂಚಿ ಕೂಡ ಹಿಮದಲ್ಲಿ ಹುದುಗಿಹೋಗಿದೆ. ಒಬ್ಬ ಮನುಷ್ಯ ತನಗೆ ಸರಿತೋರಿದ ದಾರಿಯಲ್ಲಿ ನಡೆದ. ಇನ್ನೊಂದು ಅರ್ಧ ತಾಸಿನಲ್ಲಿ ಯಾವುದಾದರೂ ಆಸರೆ ದೊರೆಯದಿದ್ದರೆ ತಾನು ಮರಗಟ್ಟಿ ಸತ್ತುಹೋಗುವುದು ನಿಶ್ಚಿತ ಎನ್ನಿಸಿತು. ಅವನು ಏನೆಲ್ಲ ಪ್ರಯತ್ನ ಮಾಡಿದರೂ ಯಾವ ಆಸರೆಯೂ ಕಾಣಲಿಲ್ಲ. ಸಮಯ ಜಾರುತ್ತಿತ್ತು. ಅವನ ಕೈ ಮತ್ತು ಕಾಲುಗಳಲ್ಲಿ ಸ್ಪರ್ಶದ ಪ್ರಜ್ಞೆಯೇ ಇರದಂತಾಯಿತು. ಆಯ್ತು, ಇನ್ನು ಕೆಲ ಸಮಯದಲ್ಲೇ ಸತ್ತು ಹೋಗುತ್ತೇನೆ ಎಂದುಕೊಂಡ ಆ ವ್ಯಕ್ತಿ.
ಆದರೂ ಬದುಕುವ ಆಸೆ ಅದಮ್ಯವಲ್ಲವೇ? ಒದ್ದಾಡಿ ಮರಗಟ್ಟಿದ ಕಾಲುಗಳನ್ನೆತ್ತಿ ಮುಂದೆ ನಡೆಯಲು ಪ್ರಯತ್ನಿಸಿದ. ಒಂದೆಡೆಗೆ ಜಾರಿ ಧೊಪ್ಪೆಂದು ಕೆಳಗೆ ಬಿದ್ದ. ಅವನಿಗೆ ಆಶ್ಚರ್ಯ ಗಾಬರಿ ಒಮ್ಮೆಗೇ ಆದವು. ಆತ ಬಿದ್ದದ್ದು ನೆಲದ ಮೇಲಲ್ಲ, ಇನ್ನೊಬ್ಬ ಮನುಷ್ಯನ ದೇಹದ ಮೇಲೆ. ಮುಖದ ಮೇಲಿನ ಮಂಜು ಸರಿಸಿ ನೋಡಿದ, ಅದು ಅವನ ಸ್ನೇಹಿತನೇ. ಅವನು ಸತ್ತೇ ಹೋಗಿದ್ದಿರಬೇಕು ಎಂದುಕೊಂಡು ಹೃದಯ ಬಡಿತ ನೋಡಿದರೆ ಇನ್ನೂ ಜೀವಂತವಾಗಿದ್ದಾನೆ. ಈಗ ವ್ಯಕ್ತಿಯ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲನೆಯ ಆಯ್ಕೆ ಎಂದರೆ ಗೆಳೆಯ ಹೇಗಿದ್ದರೂ ಬದುಕುವುದಿಲ್ಲ. ತನ್ನನ್ನು ಹೇಗಾದರೂ ಉಳಿಸಿಕೊಳ್ಳಬೇಕು. ಇನ್ನೊಂದು ಆಯ್ಕೆ ಎಂದರೆ ತನ್ನಂತೆ ಕೊನೆಯ ಹಂತದಲ್ಲಿದ್ದ ಗೆಳೆಯನಿಗೆ ಸಹಾಯ ಮಾಡುವುದು. ಆತ ತಕ್ಷಣ ಒದ್ದೆಯಾಗಿದ್ದ ತನ್ನ ಕೈ ಚೀಲಗಳನ್ನು ತೆಗೆದು ಎಸೆದ. ಕೈಗಳನ್ನು ರಭಸವಾಗಿ ಉಜ್ಜಿಕೊಂಡು ಸ್ನೇಹಿತನ ಕೈ, ಕಾಲುಗಳನ್ನು ಉಜ್ಜತೊಡಗಿದ. ಸ್ನೇಹಿತ ನಿಧಾನವಾಗಿ ಕಣ್ಣು ತೆರೆದ. ಇವನು ಎಷ್ಟು ರಭಸದಿಂದ ಅವನ ದೇಹವನ್ನು ಉಜ್ಜುತ್ತಿದ್ದನೆಂದರೆ ಆ ಚಳಿಯಲ್ಲೂ ಅವನಿಗೆ ಬೆವರು ಕಿತ್ತುಕೊಂಡು ಬಂತು. ಸ್ನೇಹಿತ ಎದ್ದು ಕುಳಿತ. ಧನ್ಯವಾದ ಹೇಳಿದ. ಆಗ ಈತ ಏನು ಹೇಳಿದ ಗೊತ್ತೆ? “ಮಹಾರಾಯ, ನಾನು ನಿನ್ನನ್ನು ಬದುಕಿಸಲು ಪ್ರಯತ್ನ ಮಾಡಿದೆ ನಿಜ. ಆದರೆ ಈ ಪ್ರಯತ್ನದಲ್ಲಿ ನನ್ನನ್ನು ಬದುಕಿಸಿಕೊಂಡೆ. ಮರಗಟ್ಟಿ ಹೋಗಿದ್ದ ನನ್ನ ಕೈಕಾಲುಗಳು ಮತ್ತೆ ಸರಿಯಾದವು, ಚಳಿ ಬಿಟ್ಟು ಹೋಯಿತು.”
ನಾವು ಮತ್ತೊಬ್ಬರಿಗೆ ಸಹಾಯ ಮಾಡುವ ಪ್ರಕ್ರಿಯೆಯಲ್ಲಿಯೇ ನಮ್ಮನ್ನು ಉದ್ಧರಿಸಿಕೊಳ್ಳುವ ಕಾರ್ಯವೂ ನಡೆದಿರುತ್ತದೆ. ನಾವು ಶ್ರೇಷ್ಠತೆಯತ್ತ ಸಾಗುವ ಖಚಿತ ಮಾರ್ಗವೆಂದರೆ ಮತ್ತೊಬ್ಬರ ಕಷ್ಟಗಳಿಗೆ, ತೊಂದರೆಗಳಿಗೆ ಸ್ಪಂದಿಸುವುದು. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಹೇಳಿದರು – ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬುದಾಗಿ. ನಮ್ಮ ಆತ್ಮಕ್ಕೆ ಮೋಕ್ಷ ಸಿಗಬೇಕಾದರೆ ಜಗತ್ತಿನ ಹಿತದ ಕೆಲಸ ಮಾಡಬೇಕು.
ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಎಂಬುದಿದೆ. ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅಶಿಸ್ತಿನಿಂದ ವರ್ತಿಸಿದರೆ ಸಾಮಾಜಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುತ್ತದೆ. ಇತರರು ನನ್ನೊಡನೆ ಹೇಗೆ ವರ್ತಿಸಬೇಕೆಂದು ಅಪೇಕ್ಷೆ ಇದೆಯೋ, ಅದೇ ರೀತಿ ನಾವು ಇತರರೊಂದಿಗೆ ವ್ಯವಹರಿಸುವುದೇ ಸಾಮಾಜಿಕ ಜವಾಬ್ದಾರಿ. ಎದುರು ಮನೆಯವರು ನಮ್ಮ ಮನೆ ಪಕ್ಕದಲ್ಲಿ ಕಸ ಹಾಕಬಾರದೆಂದು ನಾವು ಭಾವಿಸಿದರೆ ನಾವು ಅವರ ಮನೆ ಪಕ್ಕದಲ್ಲಿ ಕಸ ಹಾಕಬಾರದು. ಬೇರೆಯವರು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕೆಂದು ನಾವು ಅಪೇಕ್ಷಿಸಿದರೆ ನಾವೂ ಅವರ ಕಷ್ಟಕ್ಕೆ ಒದಗಬೇಕು. ಇಂಗ್ಲಿಷಿನ ‘Give and take’ ಎಂಬ ಮಾತಿನ ಅರ್ಥ ಇದೇ ಆಗಿದೆ. ಭವಿಷ್ಯಪುರಾಣದಲ್ಲೊಂದು ಮಾತು ಇದೆ:
ಯನ್ನ ಪ್ರಾಪ್ಯಂ ತದಪ್ರಾಪ್ಯಂ ವಿದ್ಯಯಾ ಪೌರುಷೇಣ ವಾ|
ಸತ್ಯೇ ಲೋಕಪ್ರವಾದೋಯಂ ನಾದತ್ತಮುಪತಿಷ್ಠತಿ ||
ಲೋಕದಲ್ಲಿ ನಾವು ಹಿಂದೆ ದಾನ ಮಾಡದೇ ಇರತಕ್ಕ ವಸ್ತುವು ನಮಗೆ ಲಭಿಸುವುದಿಲ್ಲ. ಇದು ಸತ್ಯವಾದುದು. ಆ ರೀತಿ ದಾನ ಮಾಡದೇ ಇರುವ ವಸ್ತುವು, ನಾವು ವಿದ್ಯೆ ಕಲಿತ ಮಾತ್ರಕ್ಕಾಗಲಿ, ಪರಾಕ್ರಮಶಾಲಿಗಳಾದ ಮಾತ್ರಕ್ಕೇ ಆಗಲಿ ನಮಗೆ ಲಭಿಸುವುದಿಲ್ಲ. ಅದೇ ರೀತಿ ನಾವು ಸಮಾಜಕ್ಕೆ ಏನು ಕೊಡುತ್ತೇವೆಯೋ ಅದೇ ನಮಗೆ ಸಿಗುವುದು. ಆದ್ದರಿಂದ ಸಮಾಜಕ್ಕೆ ನಾವು ದುಃಖ ಕೊಟ್ಟರೆ ನಮಗೂ ಸಮಾಜದಿಂದ ದುಃಖ ಸಿಗುತ್ತದೆ. ನಾವು ಸುಖ ಕೊಟ್ಟರೆ ನಮಗೂ ಸುಖ ಸಿಗುತ್ತದೆ. ಆದ್ದರಿಂದ ಸಮಾಜಕ್ಕೆ ಆದಷ್ಟು ಒಳಿತನ್ನು ಮಾಡೋಣ. ಆಗ ನಮಗೂ ಒಳಿತಾಗುತ್ತದೆ.
ನಾವು ಏಕಾಂಗಿಯಾಗಿ ಬದುಕಿ ಇದ್ದಿಲಿನಂತಾಗಿ ಖಿನ್ನತೆಯಿಂದ ಬಳಲುವುದಕ್ಕಿಂತ ಸಮಾಜಮುಖಿಯಾಗಿ ಕೆಂಡದಂತಾಗಿ ನಾಲ್ಕು ಜನರಿಗೆ ಶಾಖ, ಬೆಳಕನ್ನು ನೀಡಿ ನಮ್ಮ ಬದುಕನ್ನು ಬೆಳಗಿಸೋಣ.