
ನಮ್ಮ ದಿನನಿತ್ಯದ ಯಾಂತ್ರಿಕಜೀವನದ ಗೋಳಿನಿಂದ ಹೊರಬರಬೇಕಾದರೆ ನಾವು ಪ್ರವಾಸ ಹೋಗಬೇಕು. ಪ್ರವಾಸವು ಮನುಷ್ಯನಲ್ಲಿ ಉಲ್ಲಾಸ, ಆನಂದ ತಂದುಕೊಡುತ್ತದೆ. ಮನುಷ್ಯನು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ತನ್ನ ಉದ್ಯೋಗ, ಉದ್ವೇಗ ಬಿಟ್ಟು ಪ್ರವಾಸಕ್ಕೆ ಹೋಗಬೇಕು. ಬೇಕಾದರೆ ಒಮ್ಮೆ ಕುಟುಂಬದವರೊಡನೆ, ಇನ್ನೊಮ್ಮೆ ಆತ್ಮೀಯ ಗೆಳೆಯರೊಂದಿಗೆ ಪ್ರವಾಸ ಹೋದರೆ ಉತ್ತಮ. ಪ್ರವಾಸದಲ್ಲಿ ತಮಾಷೆ, ಸಂತೋಷ ಮಾತ್ರವಲ್ಲ, ಜ್ಞಾನ ಮತ್ತು ಅನುಭವವೂ ಸಿಗುತ್ತದೆ.
ಕರ್ನಾಟಕದ ಹಳ್ಳಿಗಳನ್ನು ಸಂದರ್ಶನ ಮಾಡಿ, ಅಲ್ಲಿನ ಗೋಡೆಗಳ ಮೇಲೆ ಬೆರಣಿ ತಟ್ಟಿರುವುದನ್ನು ಗಮನಿಸಿದ ವಿದೇಶೀ ಪ್ರವಾಸಿಗನೊಬ್ಬ ತನ್ನ ಪ್ರವಾಸದ ಅನುಭವಗಳನ್ನು ತನ್ನ ದೇಶದಲ್ಲಿ ಹೀಗೆ ವಿವರಿಸಿದ: “ಕರ್ನಾಟಕದಲ್ಲಿ ಹಸುಗಳು ಸಗಣಿಗಳನ್ನು ಗೋಡೆಗಳ ಮೇಲೆ ಗುಂಡಾಕಾರವಾಗಿ ಇಡುತ್ತವೆ.”
ಇಬ್ಬರು ವ್ಯಕ್ತಿಗಳು ಜೀವನದಲ್ಲೇ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಒಬ್ಬ ತನ್ನ ಬಳಿ ಇದ್ದ ಬಾಳೆಹಣ್ಣಿನ ಗೊನೆಯಿಂದ ಹಣ್ಣೊಂದನ್ನು ತೆಗೆದು ಇನ್ನೊಬ್ಬನಿಗೆ ಕೊಟ್ಟ ಹಾಗೂ ತಾನು ಒಂದು ತೆಗೆದುಕೊಂಡು ತಿನ್ನಲು ಸಿಪ್ಪೆ ಸುಲಿದು ಬಾಯಿಯೊಳಗೆ ಇಟ್ಟು ಕಡಿದ. ಅದೇ ಕ್ಷಣ ರೈಲು ಸುರಂಗವೊಂದನ್ನು ಪ್ರವೇಶಿಸಿತು. ಬೋಗಿಯೊಳಗೆ ಕತ್ತಲಾವರಿಸಿತು.
ಆತ ತನ್ನ ಮಿತ್ರನನ್ನು ಕೇಳಿದ, “ನಾನು ಕೊಟ್ಟ ಬಾಳೆಹಣ್ಣು ತಿಂದೆಯಾ?”
“ಇಲ್ಲ, ಇನ್ನೂ ಇಲ್ಲ.”
“ಅದನ್ನು ಬಿಸಾಕಿಬಿಡು. ಅದನ್ನು ತಿಂದಕೂಡಲೇ ನನ್ನ ಕಣ್ಣು ಕುರುಡಾಗಿಬಿಟ್ಟಿತು.”
ಖ್ಯಾತ ಚಿಂತಕ, ದಾರ್ಶನಿಕ ಲಾವೋಟ್ಸು ಪ್ರವಾಸಿಗರ ಬಗ್ಗೆ ಒಂದು ಸೊಗಸಾದ ಮಾತನ್ನು ಹೇಳಿದ್ದಾನೆ –
‘A good traveller has no fixed plans and is no intent on arriving.’
ಪ್ರವಾಸದಲ್ಲಿ ಪರಸ್ಪರ ತಮಾಷೆ ಮಾಡುವುದು, ಕಿಚಾಯಿಸುವುದು ಇದ್ದೆ ಇರುತ್ತದೆ. ಇದೇ ನಮಗೆ ಆನಂದವನ್ನು ತಂದುಕೊಡುತ್ತದೆ. ಯಾರು ಗಂಭೀರವಾಗಿರುತ್ತಾರೋ, ಮೌನವಾಗಿರುತ್ತಾರೋ ಅವರೊಂದಿಗೆ ಪ್ರವಾಸ ಅಷ್ಟೊಂದು ಆನಂದದಾಯಕವಲ್ಲ. ನಗದವನಿಗೂ, ಮೂಕಪ್ರಾಣಿಗೂ ಏನೂ ವ್ಯತ್ಯಾಸವಿಲ್ಲ. ಮನುಷ್ಯನು ನಗುವ ಪ್ರಾಣಿ. ನಗು ಎಂಬುದು ಮನುಷ್ಯನಿಗೆ ಭಗವಂತ ಕೊಟ್ಟ ವರ. ಆದ್ದರಿಂದ ಮನುಷ್ಯ ನಗದಿದ್ದರೆ ಭಗವಂತನಿಗೆ ಅವಮಾನ. ಜೀವನದುದ್ದಕ್ಕೂ ನಗದಿದ್ದರಂತೂ ಈತ ಮೂಕಪ್ರಾಣಿಯಾಗಲು ಲಾಯಕ್ಕು ಎಂಬುದಾಗಿ ಮುಂದಿನ ಜನ್ಮದಲ್ಲಿ ನಮ್ಮನ್ನು ಭಗವಂತ ಪ್ರಾಣಿಯನ್ನಾಗಿ ಸೃಷ್ಟಿಸಿಯಾನು.
ಪ್ರವಾಸದಲ್ಲಿ ಯಾರಾದರೂ ನಮ್ಮೊಡನೆ ನಗದಿದ್ದರೆ ನಮ್ಮ ನಗುವೊಂದನ್ನು ಆತನಿಗೆ ನೀಡಬೇಕು. “ನಮ್ಮ ನಗು ಸುತ್ತಲಿರುವವರು ಬದಲಾಯಿಸುವಂತೆ ಇರಲಿ. ಆದರೆ ಸುತ್ತಲಿರುವವರು ನಿಮ್ಮ ನಗುವನ್ನು ಬದಲಾಯಿಸದಿರಲಿ” ಎಂಬುದಾಗಿ ರಾಬಿನ್ ಶರ್ಮ ಹೇಳಿದ್ದಾರೆ.
ಪ್ರವಾಸದ ಸಮಯದಲ್ಲಿ ಎಂತಹ ಗಂಭೀರ ಸಮಸ್ಯೆ ಬಂದರೂ ಹಾಸ್ಯಗಾರ ಅದನ್ನು ನಿಭಾಯಿಸುತ್ತಾನೆ. ಸಮಸ್ಯೆಯನ್ನೇ ತಮಾಷೆಯಾಗಿ ಪರಿವರ್ತಿಸುವ ಸಾಮಥ್ರ್ಯ ಹಾಸ್ಯಗಾರನಿಗಿರುತ್ತದೆ.
ಮುನಿಸಿ ಕೂತ ರೈಲು
ಮೈಸೂರಿನಿಂದ ನಂಜನಗೂಡಿಗೆ ಕೈಲಾಸಂ ಒಮ್ಮೆ ರೈಲಿನಲ್ಲಿ ಹೋಗುತ್ತಿದ್ದರು. ದೂರ ಕೇವಲ ಹದಿನೈದು ಮೈಲಿ. ನಡುವೆ ಐದು ಸ್ಟೇಷನ್ಗಳು. ಎಲ್ಲ ಕಡೆ ಐದೈದು ನಿಮಿಷಗಳ ಬ್ರೇಕು. ಈ ಮಧ್ಯೆ ಸಿಗುವ ಕಡಕೊಳ ಮೇಜರ್ ಸ್ಟೇಷನ್ನು. ಅಲ್ಲಿ ಹತ್ತು ನಿಮಿಷಗಳ ಟಿಫಿನ್ ಬ್ರೇಕ್. ಅಲ್ಲಿ ಯಾವ ಹೊಟೇಲ್ಲೂ ಇಲ್ಲ. ಸಿಕ್ಕುವ ಟಿಫಿನ್ ಎಂದರೆ ಅದು ಉಪ್ಪು ಸವರಿರುವ ಗುಂಡು ಕಡಲೆ. ‘ಕಡಕೋಳ್ ಕಡ್ಲೆ’ ಎಂದರೆ ಆ ಕಾಲದಲ್ಲಿ ಲೋಕ ಪ್ರಸಿದ್ಧಿ.
ಅದನ್ನು ತಿನ್ನದವನೇ ಪಾಪಿ ಅನ್ನುವಂತಾಗಿತ್ತು. ಈ ರೈಲಿನಲ್ಲಾಗ ಬಿ.ವಿ. ಪಂಡಿತರೇ ಖುದ್ದಾಗಿ ಅಡ್ಡಾಡುತ್ತ ತಾವು ತಯಾರಿಸುತ್ತಿದ್ದ ಹಲ್ಲುಪುಡಿ ಪೊಟ್ಟಣಗಳನ್ನು ಮಾರುತ್ತಿದ್ದರು. ಇದನ್ನು ಹಲವು ಬಾರಿ ಪ್ರತ್ಯಕ್ಷ ಕಂಡಿದ್ದ ಕೈಲಾಸಂ ಈ ನಂಜನಗೂಡು ರೈಲಿಗೆ ‘Tooth Powder Express’ ಎಂದೇ ನಾಮಕರಣ ಮಾಡಿದ್ದರು.
ಹದಿನೈದು ಮೈಲಿ ಓಡಲು ಸರಿಸುಮಾರು ಐವತ್ತು ಅರವತ್ತು ನಿಮಿಷಗಳನ್ನೇ ತೆಗೆದುಕೊಳ್ಳುತ್ತಿದ್ದ ಈ ‘‘Tooth Power Express’ನಲ್ಲಿ ಅದೊಂದು ದಿನ ನಮ್ಮ ಹಾಸ್ಯಬ್ರಹ್ಮ ಕೈಲಾಸಂ ಪ್ರಯಾಣ ಮಾಡುತ್ತಿದ್ದರು. ರೈಲು ಮೈಸೂರಿನಿಂದ ಹೊರಟಿತು. ಚಾಮರಾಜಪುರಂ ಸೇರಿತು. ರೈಲ್ವೇ ವರ್ಕ್ಶಾಪ್ ಬಿಟ್ಟಿತು. ಕಡಕೊಳದಲ್ಲಿ ನೀರ್ಕುಡಿಯಿತು. ಹಾಗೂ ಹೀಗೂ ತೆವಳುತ್ತ ಒಂದೆಡೆ ನಿಂತಿತು. ನಿಂತಿತು ಎಂದರೆ ನಿಂತೇಬಿಟ್ಟಿತು. ಇಳಿದ ಇಂಜಿನ್ಡ್ರೈವರ್ ಅದನ್ನು ಮುದ್ದು ಮಾಡಿದ, ಒದ್ದು ನೋಡಿದ; ಏನೇನು ಮಾಡಿದರೂ ಆ ಮುನಿಸಿಕೊಂಡಿದ್ದ ಇಂಜಿನ್ನು ಮುಂದುವರಿಯಲೇ ಇಲ್ಲ; ಭದ್ರವಾಗಿ ಕಂಬಿಕಚ್ಚಿ ನಿಂತುಬಿಟ್ಟಿತು.
ಕೈಲಾಸಂನ ಪಾಡು ಕೈಲಾಸವಾಸಿಗೇ ಗೊತ್ತು. ಕೂತಿದ್ದವರು ಮಲಗಿದರು; ಮಲಗಿದ್ದವರು ಎದ್ದರು; ಎದ್ದವರು ನಿಂತರು; ನಿಂತವರು ಮತ್ತೆ ಕೂತರು; ಸಿಗರೇಟಿನ ಮೇಲೆ ಸಿಗರೇಟು ಸುಟ್ಟರು. ಕೊನೆಗೆ ಬೇಸತ್ತು ಬೆಂಡಾಗಿಹೋದರು. ಕೆಟ್ಟಿದ್ದ ಇಂಜಿನ್ನು ನೆಟ್ಟಗಾಗಲೇ ಇಲ್ಲ. ಕಿಟಕಿಯಿಂದಾಚೆ ಕಣ್ಣಾಡಿಸಿದರು ಕೈಲಾಸಂ. ಬೆನ್ನಿಗೆ ಹಸಿರು ಹಾಗೂ ಕೆಂಪು ಬಾವುಟಗಳನ್ನು ಅವುಚಿಕೊಂಡು ಪ್ಲಾಟ್ಫಾರಮ್ಮಿನ ಮೇಲೆ ಸುಮ್ಮನೆ ರೈಲಿನುದ್ದಕ್ಕೂ ಅತ್ತಿಂದಿತ್ತ, ಇತ್ತಿಂದತ್ತ ಶತಪಥ ಹಾಕುತ್ತಿದ್ದ ಗಾರ್ಡ್ ರಂಗಣ್ಣ ಕಂಡ. ಕೈಲಾಸಂರಿಗೆ ಅವನ ಪರಿಚಯವಿತ್ತು. ಕೂಗಿ ಕರೆದರು. ರೈಲು ರಿಪೇರಿಯಾಗದೆ ಕಂಗಾಲಾಗಿದ್ದ ಅವನು ಕಣ್ ಕಣ್ ಬಿಡುತ್ತ ಕೈಲಾಸಂ ಕರೆಯುತ್ತಿದ್ದ ಕಿಟಕಿಯತ್ತ ಬಂದ. ನಮಸ್ಕರಿಸಿ ಬೆಪ್ಪನಂತೆ ನಿಂತ. ಕೆಟ್ಟ ನೋಟದಿಂದ ಅವನನ್ನು ದಿಟ್ಟಿಸಿದ ಕೈಲಾಸಂ ‘ಅಲ್ಲಯ್ಯಾ, ನಾನೂ ಆಗ್ಲಿಂದ ನೋಡ್ತಾನೇ ಇದ್ದೀನಿ. ಬಣ್ಣಬಣ್ಣದ ಬಾವುಟಗಳನ್ನು ಬೆನ್ನಿಗೆ ಕಟ್ಕೊಂಡು ತಾಂಡವನೃತ್ಯ ಮಾಡ್ತಿದ್ದೀಯಲ್ಲಯ್ಯಾ. ಈ ತಾಂಡವಪುರದಲ್ಲಿ! ಹೆಸರು ಕೇಳಿದ್ರೆ ರಂಗಣ್ಣ, ಮೂತಿ ನೋಡಿದ್ರೆ ಮಂಗಣ್ಣ ಅನ್ನೋ ಹಾಗೆ ಆಗಿದ್ಯಲ್ಲಾ ನಿನ್ನ ಪರಿಸ್ಥಿತಿ! ಯಾಕ್ಹೀಗೆ? ಇನ್ನೂ ಎಷ್ಟು ಹೊತ್ತು? ಅದಿರ್ಲೀ, ಇನ್ನೊಂದ್ವಿಚಾರ. ಅದು ಇನ್ನೇನಿಲ್ಲ, ಈಗ ನಾನಿಳಿದು ಒಂದಿಷ್ಟು ಹೂವುಗಳ್ನ ಕಿತ್ಕೊಂಡ್ಬರೋಷ್ಟು ಕಾಲಾವಕಾಶವಿದ್ಯೇ?’ ಎಂದು ಕೇಳಲು ಕಕ್ಕಾಬಿಕ್ಕಿಯಾದ ಆ ಗಾರ್ಡು ರಂಗಣ್ಣ, ‘ಏನ್ಸಾರ್ ನೀವು ಹೇಳ್ತಿರೋದು? ಈ ಬೆಂಗಾಡ್ನಲ್ಲಿ ಯಾವ ಹೂವು, ಎಲ್ಲಿ ಬೆಳ್ದಿದೆ?’ ಎಂದು ಪ್ರಶ್ನಿಸಲು, ನಕ್ಕ ಕೈಲಾಸಂ, ‘ಅದು ನಂಗೂ ಗೊತ್ತು ರಾಜ. ಇಲ್ಲಿ ಯಾವ ಹೂವೂ ಬೆಳೆದಿಲ್ಲ ಎಂಬುದು ನಂಗೂ ಗೊತ್ತು. ಅದಕ್ಕೇ ನೋಡು, ಜೇಬ್ನಲ್ಲಿ ಒಂದಿಷ್ಟು ಬೀಜಗಳನ್ನ ಇಟ್ಕೊಂಡೇ ಬಂದಿದ್ದೀನಿ. ನೀನು ಸಾಕಷ್ಟು ಕಾಲಾವಕಾಶ ಇದೆ ಅನ್ನೋದಾದ್ರೆ ನಾನು ಈಗ್ಲೇ ಇಲ್ಲಿಳ್ದು, ಇಲ್ಲೇ ನೆಲಾನ ಒಂದಿಷ್ಟು ತೋಡಿ, ಈ ಬೀಜಗಳ್ನ ಅದರೊಳ್ಗೆ ನೆಟ್ಟು ಮಣ್ಮುಚ್ಚಿ ಮೇಲೆ ಪಾತಿ ಕಟ್ಟಿ ನೀರ್ಹಾಕಿಡ್ತೀನಿ. ನಿನ್ನ ಮುನಿಸ್ಕೊಂಡ್ಕೂತಿರೋ ರೈಲಿನ ರಿಪೇರಿ ಆಗಿ ಅದು ಮುಂದಕ್ಕೆ ಅಡಿ ಇಡೋಷ್ಟ್ರಲ್ಲಿ, ನಾನೀಗ ಬಿತ್ತೋ ಬೀಜಗ್ಳು ಮೊಳ್ತು, ಮೇಲಕ್ಬಂದು, ಚಿಗುರಿ, ಗಿಡವಾಗಿ ಬೆಳ್ದು, ಅದರಲ್ಲಿ ಬಿಡೋ ಹೂಗಳ್ನ ಕಿತ್ಕೊಂಡ್ಬರೋಷ್ಟು ಕಾಲಾವಕಾಶವಿದ್ಯೇಂತ ಕೇಳ್ಕೊಳ್ಳೋಕ್ಕೇನೇ ನಿನ್ನನ್ನು ಕರ್ದದ್ದು’ ಎನ್ನಲು ಆ ರಂಗಣ್ಣನೂ ಸೇರಿದಂತೆ ಈ ಮಾತುಗಳನ್ನು ಕೇಳಿದ ಅಕ್ಕಪಕ್ಕದವರೆಲ್ಲ ಪಕ್ಕೆ ಬಿರಿಯಾ ನಕ್ಕರಂತೆ.
ಮಹಿಳೆಯೊಬ್ಬಳು ಪತಿಯೊಂದಿಗೆ ಪ್ಯಾಸೆಂಜರ್ ಗಾಡಿಯಲ್ಲೊಮ್ಮೆ ಪ್ರಯಾಣಿಸುತ್ತಿದ್ದಳು. ಆ ಮಹಿಳೆಯನ್ನುದ್ದೇಶಿಸಿ ಟಿಕೆಟ್ ಕಲೆಕ್ಟರ್ ಕೇಳಿದರು:
‘ಗರ್ಭಿಣಿಯರಿಗೆ ರೈಲುಪ್ರಯಾಣ ಸುರಕ್ಷಿತವಲ್ಲ ಎಂದು ಗೊತ್ತಿಲ್ಲವೇ?’
ಆಕೆ ‘ರೈಲು ಹತ್ತುವಾಗ ನಾನು ಗರ್ಭಿಣಿಯಾಗಿರಲಿಲ್ಲ!’ ಎಂಬುದಾಗಿ ಉತ್ತರಿಸಿದಳು.
ಸುಗಮವಾಗಿ, ಶಾಂತವಾಗಿ ರೈಲ್ವೇಹಳಿ ಮೇಲೆ ಹೋಗುತ್ತ ಇದ್ದ ಒಂದು ಟ್ರೈನ್ ಇದ್ದಕ್ಕಿದ್ದ ಹಾಗೆ ರೈಲ್ವೇಹಳಿಯಿಂದ ಇಳಿದು ಗದ್ದೆಗೆ ಹೋಗಿ ಪುನಃ ರೈಲ್ವೇಹಳಿ ಮೇಲೆ ಬಂತು. ಪ್ರಯಾಣಿಕರೆಲ್ಲ ಹೆದರಿ ಹೋದರು. ಮುಂದಿನ ಸ್ಟೇಷನ್ನಲ್ಲಿ ರೈಲುಚಾಲಕನನ್ನು ಬಂಧಿಸಿದರು. ಈ ರೀತಿ ಯಾಕೆ ಮಾಡಿದೆ ಎಂಬುದಾಗಿ ಆತನನ್ನು ಪ್ರಶ್ನಿಸಿದಾಗ, ಚಾಲಕ ಪರಿಸ್ಥಿತಿಯನ್ನು ವಿವರಿಸಿದ. “ರೈಲ್ವೇಹಳಿಯ ಮೇಲೆ ಒಬ್ಬ ವ್ಯಕ್ತಿ ನಿಂತಿದ್ದ. ನಾನು ನಿರಂತರವಾಗಿ ಜೋರಾಗಿ ಹಾರ್ನ್ ಮಾಡುತ್ತಿರುವಾಗಲೂ ಆತ ಹಳಿ ಬಿಟ್ಟು ಕದಲಲಿಲ್ಲ.”
ರೈಲ್ವೇ ಮೇಲಧಿಕಾರಿಗಳು ಆತನಿಗೆ ಜೋರುಮಾಡಿ ಹೇಳಿದರು; “ನಿನಗೇನು ಹುಚ್ಚಾ! ಹಳಿಮೇಲಿದ್ದ ಒಬ್ಬ ವ್ಯಕ್ತಿಯನ್ನು ಉಳಿಸಲು ಹೋಗಿ ರೈಲಿನಲ್ಲಿದ್ದ ಪ್ರಯಾಣಿಕರನ್ನೆಲ್ಲ ಪ್ರಾಣಾಪಾಯಕ್ಕೆ ತಂದೊಡ್ಡಿದ್ದೀಯಲ್ಲ! ಅದರ ಬದಲಿಗೆ ಹಳಿಯ ಮೇಲೆ ನಿಂತಿದ್ದ ವ್ಯಕ್ತಿಯ ಮೇಲೆ ರೈಲನ್ನು ಓಡಿಸಬಹುದಿತ್ತಲ್ಲ!”
ಆಗ ಚಾಲಕ ಹೇಳಿದ: “ನೀವು ಹೇಳಿದಂತೆ ನಾನು ಕೂಡ ಆತನ ಮೇಲೆಯೇ ರೈಲು ಹರಿಸಬೇಕೆಂದಿದ್ದೆ. ಆ ಮೂರ್ಖ ರೈಲು ಹತ್ತಿರ ಬರುವಾಗ ಗದ್ದೆಯ ಕಡೆಗೆ ಓಡಿಬಿಟ್ಟ.”
ಹಳ್ಳಿಯವರಿಬ್ಬರು ಮೊದಲ ಬಾರಿಗೆ ರೈಲು ಹತ್ತುವವರಿದ್ದರು. ಅವರಲ್ಲೊಬ್ಬ ‘ನಮಗೆ ಆದಷ್ಟು ಬೇಗನೆ ಪಟ್ಟಣ ಸೇರಬೇಕಲ್ಲವೆ? ಆದ್ದರಿಂದ ಎಲ್ಲಕ್ಕಿಂತ ಮುಂದಿನ ಬಂಡಿಯಲ್ಲಿ ಕುಳಿತುಕೊಳ್ಳೋಣ ಬಾ’ ಎಂದು ಕರೆದ.
ಜೊತೆಗಾರ ನಕ್ಕು ಹೇಳಿದ: “ಹಣ ಕೊಟ್ಟ ಮೇಲೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದೇ ಯೋಗ್ಯ. ಆದ್ದರಿಂದ ಕಡೆಯ ಡಬ್ಬಿಯಲ್ಲೇ ಕುಳಿತುಕೊಂಡರೆ ಹೆಚ್ಚಿನ ಮಜಾ ಇರುತ್ತದೆ.”
ಅದಲುಬದಲು
ಒಮ್ಮೆ ಪ್ರವಾಸಿಗನೊಬ್ಬ ಬೆಂಗಳೂರಿನಿಂದ ದೆಹಲಿಗೆ ಹೋಗುವ ರೈಲಲ್ಲಿ ಹೊರಟಿದ್ದ. ಆತನಿಗೆ ನಡುವಿನ ಊರಾದ ನಾಗಪುರದಲ್ಲಿ ಇಳಿಯಬೇಕಾಗಿತ್ತು. ಈತ ಸ್ವಭಾವದಲ್ಲಿ ಕುಂಭಕರ್ಣ. ರೈಲು ನಾಗಪುರಕ್ಕೆ ತಲಪುವಾಗ ಮಧ್ಯರಾತ್ರಿ ಎರಡು ಗಂಟೆ ಆಗುತ್ತದೆ. ಆ ಸಮಯದಲ್ಲಿ ತನಗೇನಾದರೂ ನಿದ್ದೆಯಿಂದ ಎಚ್ಚರ ಆಗದಿದ್ದರೆ ನೇರವಾಗಿ ದೆಹಲಿಗೆ ತಲಪುತ್ತೇನೆ ಎಂಬ ಚಿಂತೆ ಆತನಿಗೆ. ಅದಕ್ಕೋಸ್ಕರ ಆತ ರೈಲ್ವೇ ಟಿ.ಸಿ.ಗೆ ಸ್ವಲ್ಪ ದುಡ್ಡು ಕೊಟ್ಟು ಹೇಳಿದ: “ನಾಗಪುರ ಬಂದಾಗ ನನ್ನನ್ನು ಎಬ್ಬಿಸು. ಒಂದುವೇಳೆ ನನಗೆ ಎಚ್ಚರ ಆಗದಿದ್ದರೆ, ನನ್ನನ್ನು ಎತ್ತಿ ಪ್ಲಾಟ್ಫಾರಂನಲ್ಲಿ ಹಾಕು” ಎಂಬುದಾಗಿ. ಟಿ.ಸಿ. ಸಮ್ಮತಿಸಿದ. ಆದರೆ ಈತನಿಗೆ ಎಚ್ಚರ ಆದಾಗ ದೆಹಲಿ ಬಂದುಬಿಟ್ಟಿತ್ತು. ಈತನಿಗೆ ಸಿಟ್ಟು ನೆತ್ತಿಗೇರಿತು. ಎಚ್ಚರ ಆದವನೆ, “ಅಲ್ಲಯ್ಯಾ, ನನ್ನನ್ನು ನಾಗಪುರದಲ್ಲಿ ಎಬ್ಬಿಸಬೇಕು, ಒಂದು ವೇಳೆ ಎಚ್ಚರ ಆಗದಿದ್ದರೆ ನಾಗಪುರದ ಪ್ಲಾಟ್ಫಾರಂನಲ್ಲಿ ಎತ್ತಿ ಹಾಕಬೇಕೆಂದು ಹೇಳಿದ್ದೆ. ಆ ಕೆಲಸಕ್ಕಾಗಿ ನಿನಗೆ ಸ್ವಲ್ಪ ದುಡ್ಡನ್ನೂ ಕೊಟ್ಟಿದ್ದೆ. ಸರಕಾರಿ ನೌಕರರಿಗೆ ದುಡ್ಡು
ತೆಗೆದುಕೊಂಡು ಅಭ್ಯಾಸವೇ ವಿನಾ ಕೆಲಸಮಾಡಿ ಗೊತ್ತಿಲ್ಲ. ನೀವೆಲ್ಲ ಭ್ರಷ್ಟರು, ದುಷ್ಟರು, ಕೆಲಸಗಳ್ಳರು’ ಎಂಬುದಾಗಿ ಆ ಟಿ.ಸಿ.ಯನ್ನು ಸರಿಯಾಗಿ ಬೈದ. ಆ ಟಿ.ಸಿ.ಯ ಮೇಲೆ ಈ ರೀತಿ ಯರ್ರಾಬಿರ್ರಿ ರೇಗುತ್ತಾ ಇರುವಾಗ, ಆ ಟಿ.ಸಿ.ಗೆ ಆತನ ಗೆಳೆಯನೊಬ್ಬ ಹೇಳಿದ: “ಅಲ್ಲಯ್ಯಾ, ಆತ ಆಗಿನಿಂದ ಸಿಕ್ಕಾಪಟ್ಟೆ ಬೈಯ್ತಾ ಇದ್ದಾನೆ. ನೀನೇನು ಆತನ ನೌಕರನೇ, ಯಾಕೆ ಬೈಸಿಕೊಳ್ಳುತ್ತಿ? ಆತ ಕೊಟ್ಟ ದುಡ್ಡನ್ನು ಆತನ ಮುಖಕ್ಕೆ ಬಿಸಾಡಿ ನೀನೂ ಉಗಿ ಆತನಿಗೆ.” ಆಗ ಟಿ.ಸಿ. ಹೇಳಿದ: “ಅಲ್ಲ ಮಾರಾಯಾ, ಈತನೇ ಇಷ್ಟು ಬೈಯುತ್ತಿರಬೇಕಾದರೆ ಈತನೆಂದು ಭಾವಿಸಿ ನಿದ್ದೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ನಾನು ಎತ್ತಿ ನಾಗಪುರದ ಪ್ಲಾಟ್ಫಾರಂನಲ್ಲಿ ಹಾಕಿದ್ದೇನಲ್ಲ! ಆತನೆಷ್ಟು ನನ್ನನ್ನು ಬೈಯುತ್ತಿರಬಹುದೆಂದು ಊಹಿಸುತ್ತಿದ್ದೇನೆ.”
ಮುಲ್ಲಾ ನಸರುದ್ದೀನ್ ಒಂದು ದಿನ ರೈಲಿನಿಂದಿಳಿದ. ಬವಳಿ ಬರುವಂತೆ ತೂರಾಡುತ್ತಿದ್ದ. ಓರ್ವ ಮಿತ್ರನು ಕೇಳಿದ – “ಏನಯ್ಯಾ, ಆರೋಗ್ಯ ಸರಿಯಿಲ್ಲವೇ, ಏನು ವಿಷಯ?” ಅದನ್ನು ಕೇಳಿ ನಸರುದ್ದೀನ್ ಹೇಳಿದ, “ನಾನು ರೈಲಿನಲ್ಲಿ ಹೋಗುವಾಗಲೆಲ್ಲ ವಿರುದ್ಧವಾಗಿ ಪಯಣಿಸಬೇಕಾಗುವುದು. ರೈಲು ಹೋಗುವ ಕಡೆ ನಾನು ಬೆನ್ನು ಮಾಡಿ ಕೂರಬೇಕಾಗುವುದು. ಅದರಿಂದ ವಾಂತಿ, ತಲೆನೋವು ಉಂಟಾಗುವುದು.”
ಅದಕ್ಕೆ ಮಿತ್ರನೆಂದ – “ಎಂಥ ಮನುಷ್ಯನಯ್ಯಾ ನೀನು, ನಿನಗೆ ಬುದ್ಧಿ ಬೇಡವೇ? ಎದುರಿಗೆ ಕುಳಿತವನೊಂದಿಗೆ ‘ತಮ್ಮಾ, ನಾನು ಸ್ವಲ್ಪ ಕಷ್ಟದಲ್ಲಿದ್ದೇನೆ. ಜಾಗ ಬದಲಾಯಿಸಿಕೊಳ್ಳೋಣವೇ ಎಂದು ಕೇಳಲಾಗುತ್ತಿರಲಿಲ್ಲವೇ?”
ನಸರುದ್ದೀನ್ ಹೇಳಿದ, “ನಾನೂ ಅದನ್ನು ಯೋಚಿಸಿ ನೋಡಿದೆ. ಆದರೆ ಎದುರಿನ ಸೀಟು ಖಾಲಿ ಬಿದ್ದಿತ್ತು. ಯಾರೂ ಇರಲಿಲ್ಲ. ಕೇಳಬೇಕೆಂದು ಯೋಚಿಸಿದ್ದೆ.”
ಪ್ರವಾಸದಲ್ಲಿ ಮಕ್ಕಳಿದ್ದರಂತೂ ವಿನೋದದಿಂದ ಸಮಯ ಕಳೆಯಬಹುದು. ಮುಗ್ಧ ಮಕ್ಕಳ ಮಾತು, ನಡವಳಿಕೆ ಎಲ್ಲರನ್ನೂ ನಗಿಸುತ್ತದೆ. ಮಕ್ಕಳೊಂದಿಗಿದ್ದಾಗ ನಗದವರು ಸ್ವರ್ಗಕ್ಕೆ ಹೋದರೂ ನರಕದಲ್ಲಿದ್ದಂತೆ ವರ್ತಿಸುತ್ತಾರೆ. ಜೀವನದಲ್ಲಿ ಖಿನ್ನತೆಯಿಂದ ದೂರವಿರಬೇಕೆಂದರೆ ಮಕ್ಕಳೊಂದಿಗೆ ಸಮಯ ಕಳೆಯಬೇಕು.
ಬಕ್ಕತಲೆ ದರ್ಶನ
“ನಾನು ಬಹಳ ಆರೋಗ್ಯವಾಗಿದ್ದೇನೆ. ಆದರೆ ನನಗೆ ಈ ಹಾಳು ನೆಗಡಿ. ವರುಷದಲ್ಲಿ ಎರಡೆರಡು ಬಾರಿ ಬರುತ್ತದೆ. ಹೀಗದು ಒಂದೊಂದು ಬಾರಿ ಬಂದಾಗಲೂ ಆರಾರು ತಿಂಗಳಿದ್ದು ಸತಾಯಿಸುತ್ತೆ” ಎನ್ನುವ ವೈ.ಎಮ್.ಎನ್. ಮೂರ್ತಿಯವರು ಒಮ್ಮೆ ರೈಲಿನಲ್ಲಿ ಹೋಗುತ್ತಿದ್ದರು. ಮೈಸೂರಿಗೆ ಇವರ ಎದುರು ಸೀಟಿನಲ್ಲಿ ಒಬ್ಬ ಹುಡುಗ, ಪಿಲ್ಟು, ಐದಾರು ವರುಷದವನು. ಬಲು ಚೂಟಿಯಾಗಿದ್ದ. ಜೊತೆಗೆ ಒಂದು ಸೆಕೆಂಡೂ ಸೈಲೆಂಟಾಗಿರದೆ ಸುಮ್ಮನೆ ವಟವಟ ಚಾಟರ್ಬಾಕ್ಸು. ಅರ್ಥಾತ್ ಹರಟೆಮಲ್ಲ! ಉದ್ದಕ್ಕೂ ಮೂರ್ತಿಯವರೊಡನೆ ಮಾತೋ ಮಾತು. ನಡುವೆ ಅವನ ಬಾಯಿಯನ್ನು ಬಂದ್ಮಾಡುವ ಉದ್ದೇಶದಿಂದಲೋ ಏನೋ ಡೈವರ್ಶನ್ ಕೊಡಲು ಮೂರ್ತಿಯವರು, “ನೋಡೋ ಮರೀ, ನನಗೆ ಮ್ಯಾಜಿಕ್ ಬರುತ್ತೆ. ನಿನ್ನ ಕೈಲಿರೋ ಆ ಬೊಂಬೇನ ಕೊಡು. ನೀನು ಕಣ್ಣುಮುಚ್ಚಿ ಕಣ್ಣು ತೆರೆಯೋದ್ರಲ್ಲಿ ಮಾಯಾ ಮಾಡ್ಬಿಡ್ತೀನಿ” ಎಂದರು.
ವಿಸ್ಮಿತನಾದ ಆ ಹುಡುಗ “ಮಾಡಿ ಅಂಕಲ್ ನೋಡೋಣ” ಎಂದು ತನ್ನ ಬೊಂಬೆಯನ್ನು ಇವರಿಗೆ ಕೊಟ್ಟ. ಆನಂತರ ಇವರು “ಛೂ, ಮಂತ್ರಕಾಳಿ, ಹುಶ್, ಹುಶ್” ಎನ್ನುತ್ತಾ, ಕೈಗಳನ್ನು ಎತ್ತಾಡಿಸುತ್ತಾ ಸರಕ್ಕನೆ ಬೊಂಬೆಯನ್ನು ಬೆನ್ನ ಹಿಂದೆ ಮುಚ್ಚಿಟ್ಟುಕೊಂಡು ಬರಿಗೈ ತೋರುತ್ತ, “ನೋಡಿದ್ಯಾ, ನಿನ್ನ ಬೊಂಬೇನ ಮಾಯಾ ಮಾಡ್ಬಿಟ್ಟೆ?” ಎಂದರು.
ಬೊಂಬೆ ಮಾಯವಾದ್ದನ್ನು ತಿಳಿಯುತ್ತಲೇ ಆ ಬಾಲಕ ಬೊಂಬ್ಡಾ ಹೊಡೆದುಕೊಳ್ಳಲಾರಂಭಿಸಿದ. ಕೂಡಲೇ ಮೂರ್ತಿಯವರು “ತಾಳು, ತಾಳು ಅಳಬೇಡ” ಎಂದರೆ ಮತ್ತೆ ‘ಛೂ, ಮಂತ್ರಕಾಳಿ’ ಮಾಡಿ ಅವಿತಿಟ್ಟುಕೊಂಡಿದ್ದ ಬೊಂಬೆಯನ್ನು ಹೊರತೆಗೆದು ಕೊಟ್ಟರು. ಬಾಲಕ ಸಮಾಧಾನಗೊಂಡು ನಕ್ಕ. ಅನಂತರ ಮೂರ್ತಿಯವರು ಸುಮ್ಮನಿದ್ದಿದ್ದರೆ ಚೆನ್ನಿತ್ತು. ಏನೋ ಬೀಗುವವರಂತೆ, “ನೋಡಿದ್ಯಾ, ಹೇಗಿತ್ತು ಮ್ಯಾಜಿಕ್ಕು! ನಿಂಗೂ ಮ್ಯಾಜಿಕ್ ಬರುತ್ತೋ?” ಎನ್ನಲು ಹುಡುಗ “ಓ” ಎಂದ. ಇವರು ಮೂತಿ ಮುಂದೂಡಿ “ಎಲ್ಲಿ ಮಾಡು ನೋಡೋಣ” ಎಂದರು.
ಅವನು “ಹಾಗಾದ್ರೆ ಕಣ್ಣುಮುಚ್ಚಿಕೊಳ್ಳಿ” ಎಂದ. ಮೂರ್ತಿಯವರು ಕಣ್ಣುಮುಚ್ಚಿಕೊಂಡರು. ಕೂಡಲೇ ಆ ಪಿಲ್ಟು ಇವರು ತಮ್ಮ ಬಕ್ಕತಲೆಯನ್ನು ಮುಚ್ಚಿಕೊಳ್ಳಲು ಹಾಕಿಕೊಂಡಿದ್ದ ಟೋಪಿಯನ್ನು ಕಿಸಕ್ಕನೆ ಕಿತ್ತುಕೊಂಡು ‘ಛೂ ಮಂತ್ರಿಕಾಳಿ’ ಎನ್ನುತ್ತ ಒಮ್ಮೆ ಜೋರಾಗಿ ಕಿರುಚಿ ಕಿಟಿಕಿಯಿಂದಾಚೆಗೆ ಎಸೆದೇಬಿಟ್ಟ! ಮುಗಿಯಿತಲ್ಲಾ ಮೂರ್ತಿಯವರ ಕಥೆ. ಯಾವುದೋ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಮೈಸೂರಿಗೆ ಹೋಗುತ್ತಿದ್ದವರು ಮೂರ್ತಿ. ಲಾಗಾಯ್ತಿನಿಂದಲೂ ತಮ್ಮ ಬಕ್ಕತಲೆಯನ್ನು ಮುಚ್ಚಿಕೊಳ್ಳಲು ಮೂರ್ತಿಯವರು ಬಳಸುವ ಶಿರಕವಚ, ಅದೊಂದು ರೀತಿಯ ವಿಚಿತ್ರವಸ್ತು! ಅದು ಟೋಪಿಗೆ ಟೋಪಿಯೂ ಅಲ್ಲ, ಪೇಟಕ್ಕೆ ಪೇಟವೂ ಅಲ್ಲ. ಅದೊಂದು ರೀತಿಯ ಬಣ್ಣಬಣ್ಣದ ಬಟ್ಟೆಯ ಚಿಪ್ಪು. ಅದಿಲ್ಲದೆ ಮೂರ್ತಿಯವರು ಮುಖವನ್ನು ಯಾರಿಗೂ ತೋರುವುದಿಲ್ಲ. ಇನ್ನು ಟೋಪಿಯಿಲ್ಲದೆ ಮಾತನಾಡುವುದೆಲ್ಲಿ ಬಂತು! ಹುಡುಗನನ್ನು ದುರುದುರನೆ ದೂರ್ವಾಸನಂತೆ ದಿಟ್ಟಿಸಿದರು. ಹಲ್ಲನ್ನು ಕಟಕಟನೆ ಕಡಿದರು. “ನಿನ್ನ ಬೊಂಬೇನ ನಾನು ಮಂತ್ರದಿಂದ ತರಿಸಿಕೊಟ್ಟ ಹಾಗೇನೆ ಈಗ ನೀನು ನನ್ನ ಟೋಪೀನ ತರಿಸ್ಕೊಡೋ” ಎಂದರಚಿದರು. ಹುಡುಗ ಹೆದರಲಿಲ್ಲ. ಸಮಾಧಾನದಿಂದಲೇ ಹೇಳಿದ: “ಅಂಕಲ್, ನನಗೆ ಏನನ್ನೇ ಆಗಲಿ ‘ಛೂ ಮಂತ್ರಕಾಳಿ’ ಅಂತ ಎಸೆಯೊಕ್ಕೇ ಬರುತ್ತೇ ಹೊರತು, ಎಸೆದದ್ದನ್ನು ಪುನಃ ವಾಪಸ್ಸು ತರಸೋ ಮಂತ್ರ ಗೊತ್ತಿಲ್ಲ ಅಂಕಲ್, ಅದನ್ನು ಹೇಳ್ಕೊಡ್ತೀರಾ?” ಎನ್ನಲು ಆ ಮುಗ್ಧಮಗುವಿನ ಮಾತಿಗೆ ಏನೆನ್ನಬೇಕೋ ತೋರದೆ ಖಾಲಿಯಾಗಿದ್ದ ತಮ್ಮ ತಲೆಯ ಮೇಲೆ ಕೈಯಿರಿಸಿಕೊಂಡು ತೆಪ್ಪನೆ ಕುಳಿತುಕೊಂಡರು ಈ ವೈ.ಎಮ್.ಎನ್. ಮೂರ್ತಿ.
ಜೀವನದಲ್ಲಿ ಎಲ್ಲರಿಗೂ ಸಮಸ್ಯೆಗಳಿರುತ್ತವೆ. ಎಲ್ಲರಿಗೂ ದುಃಖವಿರುತ್ತದೆ. ದುಃಖವಿಲ್ಲದ ಜೀವನವೆಂಬುದಿಲ್ಲ. ಮನುಷ್ಯ ದುಃಖವನ್ನು ಅಪ್ಪಿಕೊಂಡಷ್ಟು ಸುಖವನ್ನು ಅಪ್ಪಿಕೊಳ್ಳುವುದಿಲ್ಲ. ಸುಖದಲ್ಲೂ ದುಃಖವನ್ನೇ ಹುಡುಕುತ್ತಾನೆ. ಸುಖದಲ್ಲೂ ದುಃಖವನ್ನು ಹುಡುಕುವವನು ನಿರಾಶಾವಾದಿ. ದುಃಖದಲ್ಲೂ ಸುಖವನ್ನು ಹುಡುಕುವವನು ಆಶಾವಾದಿ. ಆಶಾವಾದಿ ಮಾತ್ರ ದುಃಖದಲ್ಲೂ ನಗುತ್ತಾನೆ. ‘ದುಃಖ ಬಂದಾಗ ನಗುವುದರಿಂದ ದುಃಖದಲ್ಲೂ ಸುಖ ಸಿಗುತ್ತದೆ’ ಎಂಬುದಾಗಿ ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ.
‘ಕಷ್ಟಗಳು ಬಂದಾಗ ನೀನು ನಗದಿದ್ದರೆ, ವೃದ್ಧಾಪ್ಯದಲ್ಲಿ ನಿನಗೆ ನಗಲು ಏನೂ ಇರುವುದಿಲ್ಲ’ ಎಂಬುದಾಗಿ ಫುಟ್ಬಾಲ್ ಆಟಗಾರರೂ, ಚಿಂತಕರೂ ಆದ ಎಡ್ಹೋವ್ ಹೇಳಿದ್ದಾರೆ.
ಬಂದೀಖಾನೆಯೊಳಗಿನ ಗವಾಕ್ಷಿಗಳು
ನಾವು ದಿನನಿತ್ಯದ ಸಂಸಾರದ ಜಂಜಾಟದಲ್ಲೂ ನಕ್ಕು, ನಗಿಸಿ ಮುಕ್ತಿಯನ್ನು ಪಡೆಯಬೇಕೆಂಬುದಾಗಿ ಡಿ.ವಿ.ಜಿ.ಯವರು ತಮ್ಮ ಕಗ್ಗವೊಂದರಲ್ಲಿ ಬಹಳ ಸೊಗಸಾಗಿ ವಿವರಿಸಿದ್ದಾರೆ.
ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |
ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು |
ನಗುನಗಿಸಿ ಲೋಕವನು – ಮಂಕುತಿಮ್ಮ||
[ಕಗ್ಗ-460)
ಈ ಜಗತ್ತು ಒಂದು ಜೈಲು. ತರೋಣ ತೆರೋಣ,
ತಿಂಬೋಣ, ಮಲಗೋಣ ಮತ್ತೇಳೋಣ ಮೊದಲಾದ ಶರೀರವ್ಯಾಪಾರಗಳಿಗೆ ಮಾತ್ರ ನಮ್ಮ ಸಮಯ ವ್ಯಯವಾಗಿಹೋಗುತ್ತದೆ. ಇದಕ್ಕಿಂತ ಹೆಚ್ಚಾದ, ಸಾಮಾನ್ಯ ದಿನಚರಿಗೆ ಮೀರಿದ ವಿಷಯ ಒಂದುಂಟು ಎಂಬುದು ನಮ್ಮ ಬುದ್ಧಿಗೆ ತೋರುವುದೇ ಇಲ್ಲ. ಹೀಗೆ ಜಗತ್ತು ಹೆಚ್ಚು ಜನರಿಗೆ, ಅವರ ಅರಿವಿಗೆ ಬಾರದೇ ಇದ್ದರೂ, ಒಂದು ಬಂದೀಖಾನೆ. ನಿತ್ಯ ಗೃಹಕೃತ್ಯದ ಧಾವಂತ. ಅಶನವಸನಗಳ ಸಂಪಾದನೆಯ ಒದ್ದಾಟ, ನಾನು ನನ್ನದುಗಳ ಚಿಂತೆ, ಇದೇ ನಮ್ಮನ್ನು ಬಂಧಿಸಿರುವ, ನಾವೇ ನಿರ್ಮಿಸಿಕೊಂಡಿರುವ ಜೈಲು. ಇದರಿಂದ ಬಿಡುಗಡೆ ಹೊಂದುವುದಾದರೂ ಹೇಗೆ? ಈ ಜೈಲಿನ ಮೇಲ್ಛಾವಣಿಯಲ್ಲಿ ಗವಾಕ್ಷಿಗಳುಂಟು. ಅದರ ಮೂಲಕ ಬೆಳಕು ಬಂದೀಖಾನೆಯಲ್ಲಿ ಬೀಳುತ್ತದೆ. ಅದರ ಜೊತೆಯಲ್ಲಿ ಆಕಾಶದ ದರ್ಶನವಾಗುತ್ತದೆ. ವೇದ, ಒಳ್ಳೆಯ ಕಲೆ, ಕಾವ್ಯ ಎಂಬವೇ ಆ ಗವಾಕ್ಷಿಗಳು. ವೇದ ನಮಗೆ ಲೋಕವನ್ನು ಸೃಷ್ಟಿಸಿದ ಶಕ್ತಿಯೊಂದುಂಟು ಎಂಬ ಆನಂದದ ಅನುಭವವನ್ನು ತರುತ್ತದೆ. ಕಾವ್ಯವೂ ನಮ್ಮ ಅನುಭವವನ್ನು ಹೆಚ್ಚು ಮಾಡಿ, ನಮ್ಮ ಆತ್ಮಕ್ಕೆ ಒಂದು ಸಂಸ್ಕಾರವನ್ನು ನೀಡಿ, ಅದು ವಿಶಾಲವಾಗುವುದಕ್ಕೆ ಅನುವು ಮಾಡಿಕೊಡುತ್ತದೆ. ಈ ಮೂರು ಗವಾಕ್ಷಿಗಳ ಮೂಲಕ ಮನುಷ್ಯನಿಗೆ ಸಂಸಾರದಿಂದ ಮೇಲಾದದ್ದು ಒಂದಿದೆ ಎಂಬುದರ ತಿಳಿವಳಿಕೆ ಬರುತ್ತದೆ. ಇದನ್ನು ಉಪಯೋಗಿಸಿಕೊಂಡು ಲೋಕವನ್ನು ನೋಡಿದಾಗ ಸಂಸಾರದ ಕಷ್ಟದಿಂದ ಬಿಡುಗಡೆ ಸಿಗುತ್ತದೆ. ಒಂದು ಹೊಸದಾದ ದೃಷ್ಟಿಯೇ ನಮಗೆ ಲಭ್ಯವಾಗುತ್ತದೆ. ಅದನ್ನು ನಮ್ಮದಾಗಿಸಿಕೊಂಡು ಬ್ರಹ್ಮಲೀಲೆಯನ್ನು ಕಂಡು ತಾನು ನಕ್ಕು ಇತರರನ್ನೂ ನಗಿಸಿ ಮುಕ್ತಿಯನ್ನು ಪಡೆಯಬೇಕೆಂಬುದೇ ಡಿ.ವಿ.ಜಿ.ಯವರ ಖಚಿತ ಅಭಿಪ್ರಾಯ.
ಈ ಸಂಸಾರದ ಜೈಲಿನಿಂದ ಹೊರಬಂದು ಆಗಾಗ ಪ್ರವಾಸ ಹೋಗಬೇಕು. ಬೇರೆಬೇರೆ ಜನರೊಂದಿಗೆ ಬೆರೆಯಬೇಕು. ಪ್ರವಾಸದಲ್ಲಿ ಸಂಸಾರದ ಚಿಂತೆಯನ್ನು ನಂದಿಸಿ ನಗೆಯ ಬುಗ್ಗೆಯನ್ನು ಚಿಮ್ಮಿಸಬೇಕು. ‘ಸದಾಶಿವನಿಗೆ (ಸಂಸಾರದ) ಒಂದೇ ಚಿಂತೆ’ ಎಂಬಂತೆ ವರ್ತಿಸಿದರೆ ಪ್ರವಾಸವೂ ಪ್ರಯಾಸವಾಗುತ್ತದೆ.
ಚಿಂತೆಗೂ ಚಿತೆಗೂ ಒಂದು ಅಕ್ಷರ ವ್ಯತ್ಯಾಸ. ಅದೇ ರೀತಿ ನಗಿಸುವವನಿಗೂ, ಅಳಿಸುವವನಿಗೂ ವ್ಯತ್ಯಾಸ ಒಂದೇ ಅಕ್ಷರ. ಒಬ್ಬ ವಿದೂಷಕ, ಇನ್ನೊಬ್ಬ ದೂಷಕ. ಕೆಲವರ ಜೀವನದಲ್ಲಿ ನಗು ಕ್ಷಣಿಕ, ಅಳು ಶಾಶ್ವತ.
ಒಂದು ರೈಲಿನಲ್ಲಿ ಒಬ್ಬ ಪಾದ್ರಿ ಪ್ರಯಾಣಿಸುತ್ತಿದ್ದ. ಅವರ ಮೇಲಿನ ಬರ್ತ್ನಲ್ಲಿರುವ ಒಬ್ಬಾತ ಜೋರಾಗಿ ಅಳುವುದು ನೋಡಿ ಪಾದ್ರಿಗೆ ತುಂಬ ಸಂಕಟವೆನಿಸಿತು. ಪಾದ್ರಿ ಕರುಣೆಯಿಂದ ಅವನ ಕೈ ಹಿಡಿದು, “ಯಾಕಪ್ಪಾ ಅಳುವೆ?” ಎಂದು ಕೇಳಿದ. “ಕುಡಿಯಲು ನೀರಿಲ್ಲ… ಸ್ವಾಮಿ! ಇಲ್ಲಿ ಕೇಳಿದರೆ ಯಾರೂ ಕೊಡುತ್ತಿಲ್ಲ.”
ಪಾದ್ರಿ ಕೂಡಲೇ ತನ್ನ ಚೀಲದೊಳಗಿಂದ ನೀರಿನ ಬಾಟಲಿಯನ್ನು ತೆಗೆದುಕೊಟ್ಟ. ಆ ವ್ಯಕ್ತಿ ಸಂತೋಷದಿಂದ ನೀರು ಕುಡಿದ.
ಸ್ವಲ್ಪ ಹೊತ್ತಾದ ಬಳಿಕ ಆ ವ್ಯಕ್ತಿ ಮತ್ತೆ ಅಳುತ್ತಿರುವುದು ಕೇಳಿಸಿತು. “ಮತ್ತ್ಯಾಕೆ ಅಳುತ್ತಿರುವೆ?” ಪಾದ್ರಿ ಕೇಳಿದ. ಆ ವ್ಯಕ್ತಿ ಬಿಕ್ಕಳಿಸುತ್ತ ಹೇಳಿದ, “ನೀರಿಲ್ಲದೆ ಅಳುತ್ತಿದ್ದ ನನ್ನ ಆವಾಗಿನ ಸ್ಥಿತಿಯನ್ನು ನೆನೆದು ಅಳುತ್ತಿರುವೆ!”
ವಿಮಾನ ಕಂಪೆನಿಯೊಂದು ವ್ಯವಹಾರವನ್ನು ಹಿಗ್ಗಿಸಲು ಜನರನ್ನು ಆಕರ್ಷಿಸುವುದಕ್ಕಾಗಿ ಹೀಗೆ ಜಾಹೀರಾತು ಪ್ರಕಟಿಸಿತು: “ದೇಶ ವಿದೇಶಗಳಿಗೆ ವಿಶೇಷ ಪ್ರವಾಸ. ಆಗಮಿಸುವ ಪುರುಷನ ಜೊತೆಗೆ ಅವನ ಹೆಂಡತಿಯ ಟಿಕೆಟ್ ಫ್ರೀ…” ಈ ಆಫರ್ ತುಂಬ ಪರಿಣಾಮ ಬೀರಿತು. ವಿಮಾನ ಕಂಪೆನಿಯ ಆದಾಯ ತುಂಬ ಮೇಲೇರಿತು. ಹಾಗಾಗಿ ಕಂಪೆನಿಯ ಮುಖ್ಯಸ್ಥ ಎಲ್ಲ ಪುರುಷರ ಹೆಂಡತಿಯರಿಗೆ ಕೃತಜ್ಞತಾ ಪತ್ರ ಕಳುಹಿಸಿದ. “ನೀವು ಮತ್ತು ನಿಮ್ಮ ಪತಿ ನಮ್ಮ ಕಂಪೆನಿ ಆಯೋಜಿಸಿದ ಪ್ರವಾಸದಲ್ಲಿ ಭಾಗವಹಿಸಿದ ಕಾರಣ ನಮ್ಮ ಆದಾಯ ಜಾಸ್ತಿಯಾಗಿದೆ, ಕೃತಜ್ಞತೆಗಳು.” ಎಲ್ಲ ಹೆಂಗಸರಿಂದ ಪತ್ರ ಬಂತು, “ಯಾವ ಪ್ರವಾಸ?” ಪ್ರವಾಸವು ಪ್ರಯಾಸವಾಗದೆ, ಪ್ರಮಾದವಾಗದೆ, ಪ್ರಮೋದವಾಗಲಿ, ವಿನೋದವಾಗಲಿ.