ಒಂದು ಸಿರಿವಂತರ ತಿಪ್ಪೆ. ಅಲ್ಲಿ ಏನೆಲ್ಲ ಕಸಕಡ್ಡಿ ಹಳೆಯ ಸಾಮಾನುಗಳನ್ನು ಚೆಲ್ಲಿದ್ದರೂ ಅದರ ಮಧ್ಯದಲ್ಲಿಯೇ ಒಂದು ಗುಲಾಬಿ ಕಂಟಿ ಬೆಳೆದಿತ್ತು. ಅದರಲ್ಲಿ ಒಂದು ಹೂ ಅರಳಿತು. ದಾರಿಯಿಂದ ಹೊರಟಿದ್ದ ಒಬ್ಬಾತ ಆ ತಿಪ್ಪೆಯನ್ನು ನೋಡಿ, “ಎಂಥ ಹೊಲಸು ತಿಪ್ಪೆ ಇದು!” ಎಂದ. ಆತನಿಗೆ ಆ ತಿಪ್ಪೆ ಹೇಳಿತು, “ನೀನು ನನ್ನತ್ತ ಏಕೆ ನೋಡುವಿ? ನನ್ನ ಒಡಲಲ್ಲಿಯೇ ಅರಳಿ ನಿಂತ ಸುಗಂಧ ಸೂಸುವ ಗುಲಾಬಿ ಹೂವನ್ನು ನೋಡು!” ತಿಪ್ಪೆಯ ಹಿತನುಡಿಯಿಂದ ಆತನ ಕಣ್ಣು ತೆರೆಯಿತು.
ಮನುಷ್ಯನ ಜೀವನ ಎಂದರೆ ಸುಖದ ಹುಡುಕಾಟ. ಮನುಷ್ಯನು ಹುಟ್ಟಿನಿಂದ ಸಾವಿನ ತನಕ ಸುಖದ ಹಿಂದೆಯೇ ಓಡುತ್ತಾನೆ. ಆದರೆ ಇಂದಿಗೂ ಮನುಷ್ಯನಿಗೆ ಸುಖ ಮರೀಚಿಕೆಯಾಗಿದೆಯೇ ವಿನಾ ವಾಸ್ತವವಾಗಿಲ್ಲ. ಏನಾದರೂ ಮಾಡಿ ಜೀವನದ ದುಃಖವನ್ನು ಹೋಗಲಾಡಿಸಿ ಸುಖವನ್ನು ಪಡೆಯಬೇಕೆಂಬುದೇ ಮನುಷ್ಯನ ಅಭಿಲಾಷೆ. ಆದರೆ ಸುಖದ ಹುಡುಕಾಟದಲ್ಲಿ ಮನುಷ್ಯನಿಗೆ ಸಿಕ್ಕಿದ್ದು ದುಃಖ. ಸುಖ ಬೇಕೆಂದರೆ ಸಿಗುವುದಿಲ್ಲ; ದುಃಖ ಬೇಡವೆಂದರೂ ನಮ್ಮನ್ನು ಬಿಡುವುದಿಲ್ಲ. ಆದರೆ ಸುಖ ಎಂದರೆ ಏನು? ದುಃಖ ಎಂದರೆ ಏನು? ಅದು ಯಾಕೆ ನಮ್ಮನ್ನು ಕಾಡುತ್ತಿದೆ? ದುಃಖದ ನಿವಾರಣೆಗೆ ದಾರಿ ಯಾವುದು? – ಎಂಬಿತ್ಯಾದಿ ಮೂಲಭೂತ ಪ್ರಶ್ನೆಯ ಬಗ್ಗೆ ಮನುಷ್ಯ ಚಿಂತಿಸುವುದಿಲ್ಲ. ಸುಖ, ದುಃಖ ಎಂಬವು ಒಂದೇ ನಾಣ್ಯದ ಎರಡು ಮುಖಗಳು. ಆದ್ದರಿಂದ ಬರಿ ಸುಖವೇ ಸಿಗಬೇಕೆನ್ನುವುದು ಪ್ರಕೃತಿಗೆ ವಿರುದ್ಧವಾದದ್ದು. ಆದರೂ ದುಡ್ಡಿದ್ದರೆ ಸುಖ ಪಡೆಯಬಹುದು ಎಂಬ ಭ್ರಮೆಯಲ್ಲಿ ಮನುಷ್ಯನು ದುಡ್ಡಿನ ಹಿಂದೆ ಬಿದ್ದಿದ್ದಾನೆ. ದುಡ್ಡಿಗಾಗಿ ದುಡಿದು ದುಡಿದು ಆರೋಗ್ಯ ಹಾಳುಮಾಡಿಕೊಂಡು ದುಃಖದ ಕೂಪದಲ್ಲಿ ಬೀಳುತ್ತಾನೆ. ಪ್ರಯತ್ನಿಸಿದ್ದು ಸುಖಕ್ಕಾಗಿ; ಆದರೆ ಗಳಿಸಿದ್ದು ದುಃಖವನ್ನು. ಇದನ್ನು ಜೀವನದ ವಿಪರ್ಯಾಸ ಎನ್ನಬೇಕೇ? ಅಥವಾ ಇದು ನಮ್ಮ ದೃಷ್ಟಿಕೋನದ ದೋಷ ಎನ್ನಬೇಕೇ?
ಹಲವರಿಗೆ ಶ್ರೀಮಂತಿಕೆಯೇ ಸುಖ ಅನ್ನಿಸಿದರೆ, ಇನ್ನು ಕೆಲವರು ಬಡತನದಲ್ಲೇ ಸುಖ ಕಾಣುತ್ತಾರೆ. ಸುಖ ಎನ್ನುವುದು ಹೊರಗಿನ ವಸ್ತುವಿನಲ್ಲಿಲ್ಲ. ಬದಲಿಗೆ ಅಂತರAಗದ ಭಾವದಲ್ಲಿದೆ.
‘ದುಃಖ’ ಬಡತನದ ಪರ್ಯಾಯ ಪದವಲ್ಲ
ಸಂತ ತುಕಾರಾಮ ತುಂಬಾ ಬಡತನದಲ್ಲಿದ್ದ. ಆದರೆ ಆತ ಒಂದು ದಿನವೂ ದುಃಖಿತನಾಗಲಿಲ್ಲ. ಭಗವತ್ ನಾಮಸ್ಮರಣೆಯಲ್ಲಿಯೇ ತುಕಾರಾಮ ಸಂತೋಷದಿಂದ ಕಾಲಕಳೆಯುತ್ತಿದ್ದ. ತುಕಾರಾಮನಂತಹ ಸಂತ ಬಡತನದಿಂದ ಬಳಲುತ್ತಿದ್ದಾನೆ ಎಂಬ ಸುದ್ದಿ ಅಲ್ಲಿಯ ರಾಜನಿಗೆ ಗೊತ್ತಾಯಿತು. ತಕ್ಷಣ ರಾಜ ತುಕಾರಾಮನಿಗೆ ಅಪಾರ ಧನ-ಕನಕಗಳನ್ನು ಕಳುಹಿಸಿಕೊಟ್ಟ. ತುಕಾರಾಮ ಅವರಲ್ಲಿ ಕೇಳಿದ: ‘ಇದೆಲ್ಲಾ ಏನು?’ ಎಂದು. “ನೀವು ತುಂಬಾ ಬಡತನದಲ್ಲಿದ್ದೀರಿ. ನಿಮ್ಮ ಕಷ್ಟವನ್ನು ಕಾಣಲಾರದೆ ರಾಜ ನಿಮಗೆ ಅಪಾರ ಸಂಪತ್ತನ್ನು ಕಳುಹಿಸಿದ್ದಾನೆ. ಇನ್ನು ಮುಂದಾದರೂ ನೀವು ಸುಖವಾಗಿರಬೇಕೆಂಬುದೇ ರಾಜನ ಅಪೇಕ್ಷೆ” ಎಂಬುದಾಗಿ ರಾಜದೂತರು ಹೇಳಿದರು. “ನಾನು ದುಃಖದಲ್ಲಿದ್ದೇನೆ ಎಂಬುದಾಗಿ ನಿಮ್ಮ ರಾಜನಿಗೆ ಹೇಳಿದವರಾರು? ರಾಜನ ಹತ್ತಿರ ಇಲ್ಲದಿದ್ದ ಸಂತೋಷ ನನ್ನಲ್ಲಿದೆ. ನಿಮ್ಮ ರಾಜ ವಿಠೋಬನ ಮಂದಿರಕ್ಕೆ ಹೋಗಿ ದಿನನಿತ್ಯವೂ ನನಗೆ ಅದನ್ನು ಕೊಡು, ನನಗೆ ಇದನ್ನು ಕೊಡು ಎಂಬುದಾಗಿ ಬೇಡುತ್ತಾನೆ. ದಿನನಿತ್ಯವೂ ಬೇಡುವವನೇ ನಿಜವಾದ ದುಃಖಿ. ಇಂತಹ ಭಿಕ್ಷÄಕ, ದುಃಖಿ ನನ್ನನ್ನು ಹೇಗೆ ಸಂತೋಷಪಡಿಸಬಲ್ಲ? ಆತ ಯಾರ ಹತ್ತಿರ ಬೇಡಿಕೊಳ್ಳುತ್ತಾನೋ ಆ ವಿಠೋಬನೇ ನನ್ನ ಹೃದಯದೊಳಗಿದ್ದಾನೆ. ಆದ್ದರಿಂದ ನಾನು ಸದಾ ಸುಖಿ. ಇಂತಹ ಲೌಕಿಕ ಸಂಪತ್ತಿನಿAದ ನನ್ನನ್ನು ಸುಖಿಯಾಗಿಸಲು ಸಾಧ್ಯವಿಲ್ಲ ಎಂಬುದಾಗಿ ನಿಮ್ಮ ರಾಜನಿಗೆ ತಿಳಿಸಿ” ಎಂದು ರಾಜದೂತರ ಹತ್ತಿರ ತುಕಾರಾಮ ಹೇಳಿ ಸಂಪತ್ತನ್ನು ಹಿಂದಕ್ಕೆ ಕಳುಹಿಸಿದ. ತುಕಾರಾಮನ ಸಂತೋಷಕ್ಕೆ ಬಡತನ ಎಂದೂ ಅಡ್ಡಿ ಬರಲಿಲ್ಲ. ‘ದುಃಖ’ ಎಂಬುದು ಬಡತನದ ಪರ್ಯಾಯ ಪದವಲ್ಲ ಎಂಬುದನ್ನು ನಾವು ಮನಗಾಣಬೇಕು. ಸುಖ-ದುಃಖದ ಬಗ್ಗೆ ಆತನ ಸರಿಯಾದ ದೃಷ್ಟಿಕೋನವೇ ಆತನನ್ನು ಸದಾ ಸುಖಿಯನ್ನಾಗಿಸಿತ್ತು.
ಈ ಲೌಕಿಕ ಜಗತ್ತಿನಲ್ಲಿ ‘ಆಸೆಯೇ ದುಃಖಕ್ಕೆ ಮೂಲಕಾರಣ’ ಎಂಬುದಾಗಿ ಗೌತಮಬುದ್ಧ ಹೇಳಿದ. ಹಾಗೆಂದರೆ ಆಶಾರಹಿತನಾಗಿ ಬದುಕುವುದೇ ಸಂತೋಷದ ಗುಟ್ಟು. ನಮಗೆ ಕಷ್ಟ ಬಂದಾಗ ‘ನನಗೇಕೆ ಈ ಕಷ್ಟವನ್ನು ಕೊಟ್ಟೆ? ನಾನೇನು ಅನ್ಯಾಯ ಮಾಡಿದ್ದೇನೆ?’ – ಎಂಬುದಾಗಿ ಭಗವಂತನನ್ನೇ ನಾವು ಪ್ರಶ್ನಿಸುತ್ತೇವೆ. ಆದರೆ ಸುಖ-ದುಃಖಗಳು, ನೋವು-ನಲಿವುಗಳನ್ನು ಭಗವಂತ ಕೊಡುವುದಿಲ್ಲ. ಬದಲಾಗಿ ನಮ್ಮ ಕರ್ಮವೇ ನಮಗೆ ಇವನ್ನು ಕೊಡುತ್ತದೆ. ಕಾಲವಾಗಲಿ, ದೈವವಾಗಲಿ ಯಾವುದನ್ನೂ ನಮ್ಮ ಮೇಲೆ ಹೇರುವುದಿಲ್ಲ. ನಮ್ಮ ದೃಷ್ಟಿದೋಷದಿಂದಲೇ ಎಲ್ಲ ಪ್ರಮಾದಗಳೂ ಸಂಭವಿಸುತ್ತವೆ! ಅಂತಹ ಪ್ರಮಾದಗಳು ಸಂಭವಿಸಿದ ಮೇಲೆ ಎಲ್ಲವೂ ಕಾಲದೋಷ, ದೈವಸಂಕಲ್ಪ ಎಂದು ಹೇಳಿ ತನ್ನ ತಪ್ಪಿನ ಹೊಣೆಯನ್ನು ಕಾಲದ ಅಥವಾ ದೈವದ ಮೇಲೆ ಏರಿಸುವುದು ಮನುಷ್ಯಸ್ವಭಾವ. ರಾಮಾಯಣದಲ್ಲಿ ಲಕ್ಷö್ಮಣನು ವಿಭೀಷಣನಿಗೊಂದು ಮಾತು ಹೇಳುತ್ತಾನೆ:
ಸುಖಸ್ಯ ದುಃಖಸ್ಯ ನ ಕೋಪಿ ದಾತಾ
ಪರೋ ದದಾತಿ ಇತಿ ಕುಬುದ್ಧಿರೇಷಃ |
ಅಹಂ ಕರೋಮಿ ಇತಿ ವೃಥಾಭಿಮಾನ
ಸ್ವಕರ್ಮಸೂತ್ರೇಣ ಗ್ರಥಿತೋ ಹಿ ಲೋಕಃ ||
ಇದರ ಒಟ್ಟು ತಾತ್ಪರ್ಯ ಎಂದರೆ ನಮ್ಮ ಸುಖ-ದುಃಖಕ್ಕೆ ಬೇರೆ ಯಾರೂ ಕಾರಣರಲ್ಲ. ನಾವು ಮಾಡಿದ ಕರ್ಮದ ಫಲದಿಂದಲೇ ನಮಗೆ ಸುಖ-ದುಃಖಗಳು ಪಾಪ್ತವಾಗುತ್ತವೆ.
ದೃಷ್ಟಿಯೇ ನಿಯೋಜಕ
ಈ ದೃಷ್ಟಿಕೋನದಲ್ಲಿ ನಾವು ಜೀವನವನ್ನು ಸಾಗಿಸಿದರೆ ಕಷ್ಟ ಬಂದಾಗ ನಾವು ದುಃಖಿತರಾಗುವುದಿಲ್ಲ, ಸುಖ ಬಂದಾಗ ನಾವು ಅಹಂಕಾರಿಗಳಾಗುವುದಿಲ್ಲ. ಪ್ರತಿಯೊಂದನ್ನು ನಾವು ನೋಡುವ ದೃಷ್ಟಿಯ ಮೇಲೆ ನಮ್ಮ ಸುಖ-ದುಃಖಗಳು ಅವಲಂಬಿತವಾಗಿವೆ. ಆದರೆ ನಮ್ಮ ದೃಷ್ಟಿಯೇ ಮಸುಕಾಗಿದೆ, ಮಂಕಾಗಿದೆ. ಶುದ್ಧ ದೃಷ್ಟಿಯಿಂದ ನೋಡಿದರೆ ನಮ್ಮ ಸಮಸ್ಯೆ ಅರ್ಧ ನಿವಾರಣೆ ಆದಂತೆ. ಶುದ್ಧವಾದ ಕಣ್ಣು ‘ಅದು ಏನಾಗಿದೆಯೋ’ ಅದನ್ನೇ ನೋಡುವುದು. ಅಶುದ್ಧವಾದ ಕಣ್ಣು ‘ತಾನೇನು ನೋಡಬಯಸುವುದೋ’ ಅದನ್ನೇ ನೋಡುವುದು.
ಈ ಹುಣ್ಣಿಮೆಯ ಚಂದ್ರ ಎಷ್ಟೊಂದು ಸುಂದರವಾಗಿದೆ ಎಂದು ಯಾರಾದರೂ ಹೇಳಿದರೆ “ಚಂದ್ರ ಚಂದ್ರನಂತೆಯೇ ಇದ್ದಾನೆ. ಅದರಲ್ಲಿ ಸೌಂದರ್ಯವೇನು ಬಂತು?” ಎಂಬುದಾಗಿ ಕೆಲವರು ಹೇಳುತ್ತಾರೆ. ಸೌಂದರ್ಯವನ್ನು ಕಾಣಲು ನಿಮ್ಮಲ್ಲಿ ಸೌಂದರ್ಯಪ್ರಜ್ಞೆ ಬೇಕು. ಅದಕ್ಕೆ ಬೇರೆ ದಾರಿ ಇಲ್ಲ. ಅದಕ್ಕೆ ನೋಡುವ ಕಣ್ಣುಗಳು ಬೇಕು. “ಲೈಲಾಳನ್ನು ನೋಡಲು ನಿಮಗೆ ಮಜನೂವಿನ ಕಣ್ಣು ಬೇಕು” ಎಂದು ಹೇಳಲಾಗಿದೆ. ಅದು ಸತ್ಯ. ಲೈಲಾಳನ್ನು ನೋಡುವ ಬೇರೆ ದಾರಿ ಇಲ್ಲ.
“ಲೈಲಾ ಸಾಮಾನ್ಯ ಹೆಣ್ಣು. ಅವಳಿಗಿಂತ ಸುಂದರವಾದ ಹನ್ನೆರಡು ಹೆಣ್ಣುಗಳು ಇಲ್ಲಿ ಇದ್ದಾರೆ. ಅವರನ್ನು ನೋಡು, ಜಗತ್ತಿನಲ್ಲಿಯೇ ಇವರೆಲ್ಲರೂ ಸೌಂದರ್ಯವತಿಯರು” ಎಂದು ರಾಜನು ಮಜನೂವಿಗೆ ಹೇಳಿದಾಗ, ಅವರೆಲ್ಲರನ್ನು ಅವನು ನೋಡಿ, ಇವರಲ್ಲಿ ಲೈಲಾ ಇಲ್ಲವೆಂದನು. “ಇವರಾರೂ ಲೈಲಾಗೆ ಸರಿಸಮರಲ್ಲ, ಅವಳ ಕಾಲಿನ ಧೂಳಿಗೂ ಸಮವಿಲ್ಲ” ಎಂದನು. “ನೀನೊಬ್ಬ ಹುಚ್ಚ” ಎಂದು ರಾಜನೆಂದಾಗ, “ಅದು ಒಂದು ವೇಳೆ ಸತ್ಯವೆಂದು ಕಂಡರೂ, ಲೈಲಾಳನ್ನು ನೋಡುವುದಕ್ಕೆ ಮಜನೂ ಕಣ್ಣುಗಳೇ ಬೇಕು” ಎಂದನು ಮಜನೂ.
ದೇವನ ಈ ಸೃಷ್ಟಿಯು ‘ಸತ್ಯಂ, ಶಿವಂ, ಸುಂದರ.’ ನೋಡುವವರ ದೃಷ್ಟಿಗೆ ತಕ್ಕಂತೆ ಸೃಷ್ಟಿಯು ಬೇರೆ ಬೇರೆಯಾಗಿ ತೋರುತ್ತದೆ. ಅನುಭಾವಿಗಳಾದ ಸಂತರು, ಶರಣರು ಇದೇ ಸೃಷ್ಟಿಯಲ್ಲಿ ಸೃಷ್ಟಿಕರ್ತನನ್ನು ನೋಡಿ ಪರಮಶಾಂತಿ, ಪರಮ ಆನಂದವನ್ನು ಪಡೆದರು. ಅದೇ ಸೃಷ್ಟಿಯನ್ನು ನೋಡಿ ನಾವು ಆಶೆ, ಆಮಿಷ, ರಾಗದ್ವೇಷಾದಿಗಳಿಗೆ ಒಳಗಾದೆವು. ಈ ಪ್ರಪಂಚದಲ್ಲಿರುವ ಎಲ್ಲ ಕೋಲಾಹಲಕ್ಕೆ, ಕಷ್ಟ-ನಷ್ಟಗಳಿಗೆ ನಮ್ಮ ದೋಷಪೂರಿತ ದೃಷ್ಟಿಯೇ ಕಾರಣ. ಸಂತರು, ಶರಣರು, ಅನುಭಾವಿಗಳು ಇದೇ ಸÀÈಷ್ಟಿಯನ್ನು ಅದೆಷ್ಟು ಸುಂದರವಾಗಿ ನೋಡಿದರು! ಮಹಾನುಭಾವಿ ಅಲ್ಲಮಪ್ರಭು ದೇವರು ತಮಗೆ ಕಂಡ ಸೃಷ್ಟಿಯ ವರ್ಣನೆಯನ್ನು ಹೀಗೆ ಮಾಡುತ್ತಾರೆ:
ಗಗನವೇ ಗುಂಡಿಗೆ, ಆಕಾಶವೇ ಅಗ್ಘವಣಿ |
ಚಂದ್ರ ಸೂರ್ಯರಿಬ್ಬರೂ ಪುಷ್ಪ ನೋಡಾ |
ಬ್ರಹ್ಮ ಧೂಪ, ವಿಷ್ಣು ದೀಪ, ರುದ್ರನೋಗರ
ಸುಯಿಧಾನ ನೋಡಾ |
ಗುಹೇಶ್ವರ ಲಿಂಗಕ್ಕೆ ಪೂಜೆ ನೋಡಾ ||
ಅನಂತವಾದ ಆಕಾಶವೇ ಮಜ್ಜನ ಪಾತ್ರೆ, ಮೇಲೆ ತೇಲುವ ಮೋಡಗಳೇ ಪವಿತ್ರ ಜಲಕುಂಭ. ಸೂರ್ಯಚಂದ್ರರೇ ಎಂದೆಂದೂ ಬಾಡದ ದಿವ್ಯ ಕುಸುಮಗಳು. ಸೃಷ್ಟಿಕರ್ತ ಬ್ರಹ್ಮನೇ ಧೂಪ, ಸಂರಕ್ಷಕ ವಿಷ್ಣುವೇ ದೀಪ. ಕಳೆಕೊಳೆ ಕಳೆಯುವ, ನಾಶಮಾಡುವ ರುದ್ರನೇ ನೈವೇದ್ಯ. ಇದು ವಿರಾಡ್ ವಿಶ್ವಪೂಜೆ!
ಶಿಲೆಯಲ್ಲ, ಕಲೆಯ ಗುಡಿ
ಜೀವನವನ್ನು ನೋಡುವ ಎರಡು ಶೈಲಿಗಳಿವೆ. ಒಂದು ಧಾರ್ಮಿಕ ವ್ಯಕ್ತಿಯ ಶೈಲಿ; ಆತ ಮುಳ್ಳುಗಳಲ್ಲಿಯೂ ಹೂಗಳನ್ನು ಕಂಡುಕೊಳ್ಳುತ್ತಾನೆ. ಇನ್ನೊಂದು ಅಧಾರ್ಮಿಕ ವ್ಯಕ್ತಿಯ ಶೈಲಿ; ಆತ ಹೂಗಳಲ್ಲಿಯೂ ಮುಳ್ಳುಗಳನ್ನು ಕಂಡುಕೊಳ್ಳುತ್ತಾನೆ. ನಮ್ಮ ದೃಷ್ಟಿಕೋನದ ಮೇಲೆ ಎಲ್ಲವೂ ನಿರ್ಭರ ಆಗಿರುತ್ತವೆ.
ಒಂದು ಸಿರಿವಂತರ ತಿಪ್ಪೆ. ಅಲ್ಲಿ ಏನೆಲ್ಲ ಕಸಕಡ್ಡಿ ಹಳೆಯ ಸಾಮಾನುಗಳನ್ನು ಚೆಲ್ಲಿದ್ದರೂ ಅದರ ಮಧ್ಯದಲ್ಲಿಯೇ ಒಂದು ಗುಲಾಬಿ ಕಂಟಿ ಬೆಳೆದಿತ್ತು. ಅದರಲ್ಲಿ ಒಂದು ಹೂ ಅರಳಿತು. ದಾರಿಯಿಂದ ಹೊರಟಿದ್ದ ಒಬ್ಬಾತ ಆ ತಿಪ್ಪೆಯನ್ನು ನೋಡಿ, “ಎಂಥ ಹೊಲಸು ತಿಪ್ಪೆ ಇದು!” ಎಂದ. ಆತನಿಗೆ ಆ ತಿಪ್ಪೆ ಹೇಳಿತು, “ನೀನು ನನ್ನತ್ತ ಏಕೆ ನೋಡುವಿ? ನನ್ನ ಒಡಲಲ್ಲಿಯೇ ಅರಳಿ ನಿಂತ ಸುಗಂಧ ಸೂಸುವ ಗುಲಾಬಿ ಹೂವನ್ನು ನೋಡು!” ತಿಪ್ಪೆಯ ಹಿತನುಡಿಯಿಂದ ಆತನ ಕಣ್ಣು ತೆರೆಯಿತು.
ಇತರರಲ್ಲಿರುವ ಒಳ್ಳೆಯ ಗುಣಗಳನ್ನೇ ನೋಡುವುದು ಗುಣದೃಷ್ಟಿ. ಆದರೆ ಇತರರಲ್ಲಿರುವ ಕೆಟ್ಟ ಗುಣಗಳನ್ನೇ ನೋಡುವುದು ದೋಷದೃಷ್ಟಿ. ಗುಣದೃಷ್ಟಿಯಿಂದ ನಮಗೂ ಹಿತ, ಅವರಿಗೂ ಹಿತ. ದೋಷದೃಷ್ಟಿಯಿಂದ ನಮಗೂ ಕೇಡು, ಅವರಿಗೂ ಕೇಡು.
ಚುಟುಕು ಕವಿಗಳಾದ ದಿನಕರ ದೇಸಾಯಿಯವರು ನಮ್ಮ ನಮ್ಮ ದೃಷ್ಟಿಕೋನದ ಬಗ್ಗೆ ಚುಟುಕೊಂದನ್ನು ಬರೆದಿದ್ದಾರೆ.
ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ |
ಚಿಕ್ಕ ಮಕ್ಕಳಿಗೆಲ್ಲ ಶಶಿ ಬಾನ್ದಳದ ಚೆಂಡು
ವಿಜ್ಞಾನಿಗಳಿಗೆಲ್ಲ ಬರಿ ಕಲ್ಲು ಗುಂಡು ||
“ಆಕಾಶದಲ್ಲಿ ಇರುವ ಚಂದ್ರ ಒಬ್ಬನೇ. ಒಬ್ಬ ರಸಿಕನಿಗೆ ಆ ಚಂದ್ರ ಪ್ರಿಯತಮೆಯ ಮುಖದಂತೆ ಕಾಣಿಸುತ್ತಾನೆ. ಚಿಕ್ಕ ಮಕ್ಕಳಿಗೆ ಆಕಾಶದಲ್ಲಿರುವ ಚೆಂಡಿನAತೆ ಕಾಣುತ್ತಾನೆ. ವಿಜ್ಞಾನಿಗಳಿಗೆ ಚಂದ್ರ ಎಂದರೆ ಬರಿ ಕಲ್ಲು-ಮಣ್ಣು. ಹೀಗೆ ನಮ್ಮ ನಮ್ಮ ಆಲೋಚನೆಗಳಿಗೆ ತಕ್ಕಂತೆ ಒಂದೇ ವಸ್ತು, ಘಟನೆ ಬೇರೆ ಬೇರೆಯಾಗಿ ಕಾಣಿಸುತ್ತದೆ. ಹೇಗೆ ದೃಷ್ಟಿಯೋ, ಹಾಗೆಯೇ ಸೃಷ್ಟಿ. ನಮ್ಮ ದೃಷ್ಟಿ ವಿಶಾಲವಾಗಿರಬೇಕು, ಸರಿಯಾಗಿರಬೇಕು.
ರಾವಣನಿಗೆ ರಾಮನು ಕೈಲಾಗದ ಸಾಮಾನ್ಯ ಮನುಷ್ಯನಾಗಿ, ಹೇಡಿಯಾಗಿ ಕಾಣಿಸಿದ. ಸೀತೆ ಕಾಮಿನಿಯಾಗಿ ಕಂಡಳು. ಧರ್ಮರಾಯನಿಗೆ ಜೂಜು ಕ್ಷತ್ರಿಯಧರ್ಮವಾಗಿ ಗೋಚರಿಸಿತು. ಕೌರವನಿಗೆ ದಾಯಾದಿಗಳ ಮೇಲಿನ ವೈರವೇ ಕರ್ತವ್ಯವಾಗಿ ಕಂಡಿತು. ಅಧಿಕಾರದ ಪೀಠಕ್ಕಂಟಿಕೊಂಡವರಿಗೆ ‘ತುರ್ತು ಪರಿಸ್ಥಿತಿ’ ‘ಅನುಶಾಸನ ಪರ್ವ’ವಾಗಿ ಕಾಣಿಸುತ್ತದೆ. ಆಳುವ ರುಚಿ ಕಂಡವರಿಗೆ ಸ್ವಾರ್ಥ, ಕುಟಿಲತೆಗಳು ರಾಜನೀತಿ ಎನ್ನಿಸುತ್ತವೆ. ತನ್ನ ಮಗ ಭರತನಿಗಾಗಿ ರಾಮನನ್ನು ಕಾಡಿಗಟ್ಟುವುದು ಕೈಕೇಯಿಗೆ ಮಾತೃವಾತ್ಸಲ್ಯವಾಗಿ ಕಂಡಂತೆ, ವಸ್ತುಸ್ಥಿತಿಯ ವಿಕೃತರೂಪವೇ ಎಲ್ಲ ಅನಾಹುತಗಳ ಮೂಲವಾಗಿದೆ.
ಪ್ರಪಂಚದ ಎಲ್ಲ ಕಾವ್ಯ, ಇತಿಹಾಸಗಳಲ್ಲೂ ಸತ್ಯದ ವಿಪರೀತ ದರ್ಶನದಿಂದ ಅಸಂಖ್ಯ ಅನಾಹುತಗಳು ಸಂಭವಿಸಿವೆ.
ಮಹಾಭಾರತದ ಸಭಾಪರ್ವದಲ್ಲಿ [೮೧-೧೧] “ಕಾಲಪುರುಷನು ದಂಡಾಯುಧವನ್ನೆತ್ತಿ ಯಾರ ತಲೆಯನ್ನೂ ಕತ್ತರಿಸುವುದಿಲ್ಲ. ವಸ್ತುಸ್ಥಿತಿಯನ್ನು ವಿಪರೀತವಾಗಿ ಕಾಣಿಸಿ, ಎಲ್ಲ ಅನಾಹುತಗಳಿಗೂ ಕಾರಣನಾಗುತ್ತಾನೆ” ಎಂಬ ಮಾತು ಬರುತ್ತದೆ. ಭಾರತಯುದ್ಧ ಸಮೀಪಿಸಿದಾಗ ಸಂಜಯನು ಧೃತರಾಷ್ಟ್ರನಿಗೆ ಮೇಲಿನ ಅಭಿಪ್ರಾಯವನ್ನೇ ಇನ್ನಷ್ಟು ವಿಶದವಾಗಿ ವಿವರಿಸುತ್ತಾನೆ. “ಧೃತರಾಷ್ಟ್ರ, ನಿನ್ನ ತಪ್ಪಿನಿಂದಾಗಿ ಈ ಘೋರ ಸಮರ ಸಂಭವಿಸುತ್ತಿದೆ. ಭೀಷ್ಮಾದಿಗಳು ಬೇಡವೆಂದರೂ ಕೇಳದೆ ನಿನ್ನ ಮಗ, ರಜಸ್ವಲೆಯಾಗಿದ್ದ ರಾಜಪುತ್ರಿ ದ್ರೌಪದಿಯನ್ನು ಸಭೆಗೆ ಎಳೆದು ತಂದು ಅಪಮಾನ ಮಾಡಬಹುದೇ? ನಿನಗೆ ಕಣ್ಣಿಲ್ಲವೆಂದರೂ ಬುದ್ಧಿಯೂ ಇಲ್ಲದೆಹೋಯಿತೇ? ಕೇಡುಗಾಲ ಬಂದಾಗ ಒಳ್ಳೆಯದು ಕೆಟ್ಟದಾಗಿಯೂ, ಕೆಟ್ಟದ್ದು ಒಳ್ಳೆಯದಾಗಿಯೂ ಕಾಣಿಸುತ್ತದೆ.”
ಭಾವನೆಯಿಂದ ಸಂಸ್ಕಾರ
ಒಮ್ಮೆ ಕೃಷ್ಣನು ದುರ್ಯೋಧನನನ್ನು ಕರೆದು “ಊರಿನಲ್ಲಿರುವ ಒಳ್ಳೆಯ ವ್ಯಕ್ತಿಗಳನ್ನು ಹುಡುಕಿ ಅಂತಹವರ ಪಟ್ಟಿ ಮಾಡಿ ತರಬೇಕು” ಎಂಬುದಾಗಿ ಹೇಳಿದ. ಅದೇ ರೀತಿ ಧರ್ಮರಾಯನನ್ನೂ ಕರೆದು “ಊರಿನಲ್ಲಿರುವ ಕೆಟ್ಟ ವ್ಯಕ್ತಿಗಳನ್ನು ಹುಡುಕಿ ಪಟ್ಟಿ ಮಾಡಿ ತರಬೇಕು” ಎಂಬುದಾಗಿಯೂ ಹೇಳಿದ. ಊರೆಲ್ಲ ತಿರುಗಿ ಹುಡುಕಿ ಕೊನೆಗೆ ಇಬ್ಬರೂ ಬರಿಗೈಯಲ್ಲಿ ಬಂದರು. ದುರ್ಯೋಧನನಿಗೆ ಊರಿನಲ್ಲಿ ಒಬ್ಬನೇ ಒಬ್ಬ ಒಳ್ಳೆಯ ವ್ಯಕ್ತಿ ಸಿಗಲಿಲ್ಲ. ಧರ್ಮರಾಯನಿಗೆ ಒಬ್ಬನೇ ಒಬ್ಬ ಕೆಟ್ಟ ವ್ಯಕ್ತಿ ಸಿಗಲಿಲ್ಲ. ದುರ್ಯೋಧನನ ನೋಟ ದೋಷದೃಷ್ಟಿಯಾದದ್ದರಿಂದ ಆತನ ಜೀವನ ದುರಂತವಾಯಿತು. ಧರ್ಮರಾಯನ ನೋಟ ಗುಣದೃಷ್ಟಿಯಾದದ್ದರಿಂದ ಆತನ ಜೀವನ ಸುಖಾಂತ್ಯವಾಯಿತು.
‘ಯದ್ ಭಾವಂ ತದ್ ಭವತಿ’ ಎಂಬ ಮಾತಿನಂತೆ ಭಾವದಂತೆ ಬದುಕು. ಆದ್ದರಿಂದ ನಮ್ಮ ಭಾವವು ಶುದ್ಧಿಯಾದರೆ, ನಮ್ಮ ದೃಷ್ಟಿಯು ಶುದ್ಧಿಯಾದರೆ ನಮ್ಮ ಬದುಕೇ ಶುದ್ಧವಾಗುತ್ತದೆ.
ಒಬ್ಬಾತ ಬಾಳೆಹಣ್ಣು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ. ಅಲ್ಲಿ ಅದನ್ನು ದೇವರಿಗೆ ಅರ್ಪಿಸಿ ನೈವೇದ್ಯ ಮಾಡಿಸಿ ಹೊರಗೆ ಬಂದು ಅಲ್ಲಿದ್ದವರಿಗೆ ಪ್ರಸಾದ ತೆಗೆದುಕೊಳ್ಳಿ ಎಂದು ಅದೇ ಬಾಳೆಹಣ್ಣನ್ನು ಕೊಡುತ್ತಾನೆ. ಒಳಗೆ ಹೋದಾಗ ಬಾಳೆಹಣ್ಣು ಇತ್ತು, ಹೊರಗೆ ಬರುವಾಗ ಪ್ರಸಾದ ಆಯಿತು ಹೇಗೆ? ಹೇಗೆಂದರೆ ಬಾಳೆಹಣ್ಣು ಅದೇ, ಆದರೆ ಅದನ್ನು ನೋಡುವ ನಮ್ಮ ಕಣ್ಣು ಬದಲಾಗಿತ್ತು, ದೃಷ್ಟಿಯೂ ಬದಲಾಗಿತ್ತು. ನಮ್ಮ ದೃಷ್ಟಿ ಬದಲಾದರೆ ಇಡೀ ಸೃಷ್ಟಿಯೇ ದೇವರ ಪ್ರಸಾದವಾಗಿ ಕಂಡುಬರುತ್ತದೆ.
ನಾವು ಜಗತ್ತನ್ನು ಅದು ಇರುವ ರೀತಿಯಲ್ಲಿ ನೋಡುವುದಿಲ್ಲ, ನಾವು ಹೇಗಿರುತ್ತೇವೆಯೋ ಹಾಗೆ ನೋಡುತ್ತೇವೆ. ಜರ್ಮನಿಯ ಖ್ಯಾತ ತತ್ತ್ವಶಾಸ್ತ್ರಜ್ಞ ಮಾರ್ಟಿನ್ ಹೈಡೆಗರ್ ಹೇಳುತ್ತಾನೆ: ‘ನಾನು ಜೀವನದಲ್ಲಿ ಪವಿತ್ರ ಎಂದೆನ್ನಬಹುದಾದಂಥದೇನನ್ನೂ ಕಂಡೇ ಇಲ್ಲ’. ಯಾವುದೊಂದರಲ್ಲಿಯೂ ಪವಿತ್ರತೆಯನ್ನು ಕಾಣದಿದ್ದಂತಹ ಈತನ ದೃಷ್ಟಿಕೋನದಲ್ಲಿಯೇ ದೋಷವಿದ್ದಿರಬೇಕು. ಆತನ ಜೀವನ ಬರೀ ಆಶಾಭಂಗದಿಂದ ತುಂಬಿದ್ದಿರಬೇಕು. ಆದರೆ ಬುದ್ಧನ ಜೀವನವೇ ಪವಿತ್ರವಾದದ್ದು. ಏಕೆಂದರೆ ಅವನ ದೃಷ್ಟಿ ಶುದ್ಧವಾಗಿತ್ತು, ಸಕಾರಾತ್ಮಕವಾಗಿತ್ತು.
ಒಮ್ಮೆ ಬುದ್ಧ ತಮ್ಮ ಶಿಷ್ಯನೊಬ್ಬನನ್ನು ಪ್ರಶ್ನಿಸಿದರು, “ಜೀವನದಲ್ಲಿ ಯಾವುದಾದರೂ ನಿನಗೆ ವ್ಯರ್ಥವಾಗಿ ಕಂಡಿದೆಯೇನು? ಏನಾದರೂ ಕಂಡಿದ್ದಲ್ಲಿ ಅದನ್ನು ತೆಗೆದುಕೊಂಡು ಬಾ” ಎಂದ. ಶಿಷ್ಯನು ಬಹಳಷ್ಟು ದಿನಗಳ ಕಾಲ ಆಲೋಚಿಸಿ ನೋಡಿದ. ಬುದ್ಧನು ಪ್ರತಿದಿನ ಆತನನ್ನು ಕೇಳುತ್ತಾ ಇದ್ದ, “ಏನಾಯಿತು? ವ್ಯರ್ಥವಾದುದು ಏನಾದರೂ ಕಂಡಿತೇ?” ಎಂದು. ಹೀಗೆ ಒಂದೆರಡು ತಿಂಗಳುಗಳು ಕಳೆದ ನಂತರ ಶಿಷ್ಯ ಒಂದು ದಿನ ಹಿಂತಿರುಗಿ ಬಂದು ಹೇಳಿದ, “ಗುರುಗಳೇ, ಕ್ಷಮಿಸಬೇಕು. ನಾನು ಎಲ್ಲಾ ಕಡೆಯೂ ನೋಡಿದೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ನಿಮ್ಮ ಪ್ರಶ್ನೆಗೆ ಉತ್ತರ ಹುಡುಕಲಾರದವನಾಗಿ ರಾತ್ರಿಯೆಲ್ಲ ನಿದ್ರೆ ಕೆಟ್ಟೆ. ಆದರೆ ನನಗೆ ಉಪಯೋಗಕ್ಕೆ ಬಾರದ್ದು ವ್ಯರ್ಥವಾದದ್ದು ಯಾವುದೂ ಕಂಡುಬರಲಿಲ್ಲ” ಎಂದ.
ಆಗ ಬುದ್ಧ ಹೇಳಿದ, “ಹಾಗಿದ್ದಲ್ಲಿ ಇನ್ನೊಂದು ಕೆಲಸ ಮಾಡು. ಉಪಯೋಗಕ್ಕೆ ಬರುವ, ವ್ಯರ್ಥವಲ್ಲದ ಯಾವುದಾದರೊಂದನ್ನು ತೆಗೆದುಕೊಂಡು ಬಾ.” ಆಗ ಶಿಷ್ಯ ತಕ್ಷಣ ನೆಲದಲ್ಲಿ ಬಿದ್ದಿದ್ದ ಒಂದು ಹುಲ್ಲಿನ ಕಡ್ಡಿಯನ್ನು ತೆಗೆದು ಬುದ್ಧನಿಗಿತ್ತ. “ಇದುವೇ ಪ್ರಮಾಣ, ಇದುವೂ ಬೆಲೆಬಾಳುವಂತಹುದೇ” ಎಂದ.
ಆತನನ್ನು ಆಶೀರ್ವದಿಸುತ್ತ ಬುದ್ಧ ನುಡಿದ, “ನಿಜಕ್ಕೂ ಜೀವನವನ್ನು ನೋಡಬೇಕಾದ ದೃಷ್ಟಿ ಇದುವೇ. ಇದುವೇ ಸರಿಯಾದ ದೃಷ್ಟಿ – ಸಂಯಗ್ದೃಷ್ಟಿ.” ಬುದ್ಧನ ದೃಷ್ಟಿ ಸಕಾರಾತ್ಮಕವಾದದ್ದರಿಂದ ಆತ ಸಮೃದ್ಧನಾಗಿ ಬದುಕಿದ. ಹೈಡೆಗರ್ನ ದೃಷ್ಟಿ ನಕಾರಾತ್ಮಕವಾದದ್ದರಿಂದ ಆತ ಕೊರಗಿನಿಂದ ಬಾಳಿದ. ನಾವು ನೋಡುವ ದೃಷ್ಟಿಯು ಶುದ್ಧವಾಗಿದ್ದರೆ, ಸಕಾರಾತ್ಮಕವಾಗಿದ್ದರೆ ದೇವರ ಸೃಷ್ಟಿಯಲ್ಲಿ ಯಾವುದೂ ವ್ಯರ್ಥವಾದದ್ದು ಕಂಡುಬರುವುದಿಲ್ಲ.
ಎಲ್ಲವೂ ಪವಿತ್ರವೇ
ಭಗವಂತ ಯಾವುದನ್ನೂ ವ್ಯರ್ಥವಾಗಿ ಸೃಷ್ಟಿಸಿಲ್ಲ. ಎಲ್ಲದಕ್ಕೂ ಅರ್ಥವಿದೆ, ಎಲ್ಲದಕ್ಕೂ ಯೋಗ್ಯತೆ ಇದೆ. ಇಲ್ಲಿರುವ ಕಲ್ಲು-ಮಣ್ಣು, ಹುಲ್ಲು-ಮುಳ್ಳು, ನದಿ-ಬೆಟ್ಟ ಯಾವುದೂ ನಿಷ್ಪ್ರಯೋಜಕವಲ್ಲ. ಯಾವುದೂ ಇಲ್ಲಿ ಅಪವಿತ್ರವಾದದ್ದು ಎಂಬುದಿಲ್ಲ. ಎಲ್ಲವೂ ಪವಿತ್ರವಾದದ್ದೇ. ಸೃಷ್ಟಿಯ ಈ ಪವಿತ್ರತೆಯನ್ನು ಅರಿಯಲು ಯಾಂತ್ರಿಕ ನೋಟಕ್ಕಿಂತ, ಅಂತಃಕರಣದ ನೋಟ ಮುಖ್ಯ. ಅರಿವಿನ ಕಣ್ಣಿನಿಂದ ನೋಡಿದರೆ ಹಲವಾರು ಸಂಗತಿಗಳು ಸ್ಫುರಿಸುತ್ತವೆ.
ಮೈಕೆಲ್ ಎಂಜೆಲೊ ಒಬ್ಬ ಜಗತ್ಪ್ರಸಿದ್ಧ ಕಲಾವಿದನಾಗಿದ್ದ. ಇಟಲಿ ದೇಶದ ಫ್ಲಾರೆನ್ಸ್ ಪಟ್ಟಣದಲ್ಲಿ ವಾಸಿಸುತ್ತಿದ್ದ. ಒಂದು ದಿನ ನಡೆಯುತ್ತ ಹೊರಟಿದ್ದ. ದಾರಿಯ ಪಕ್ಕದಲ್ಲಿ ಒಂದು ಸಿರಿವಂತರ ಮನೆ ಇತ್ತು. ಆ ಮನೆಯ ಆವರಣದಲ್ಲಿ ಒಂದು ದೊಡ್ಡ ಕಲ್ಲು ಬಿದ್ದಿತ್ತು. ಅದು ಮೈಕೆಲ್ಲನಿಗೆ ಕಂಡಿತು. ತಕ್ಷಣ ಆತನ ಕಣ್ಣುಗಳು ಅರಳಿದವು. ಯಾವುದೋ ದೊಡ್ಡ ನಿಧಿಯೇ ದೊರೆತಷ್ಟು ಹರ್ಷ ಅವನಿಗಾಯಿತು.
ಆ ಮನೆಯ ಮಾಲಿಕನನ್ನು ಮೈಕೆÀಲ್ ಕೇಳಿದ: “ದಯವಿಟ್ಟು ಈ ಕಲ್ಲನ್ನು ನನಗೆ ಕೊಡುವಿರಾ?”
ಆಶ್ಚರ್ಯಚಕಿತನಾದ ಮಾಲಿಕ ಹೇಳಿದ -“ನಿರುಪಯುಕ್ತವಾದ ಆ ಕಲ್ಲು ಏತಕ್ಕೆ? ಬೇರೆ ಏನಾದರೂ ಬೇಡು, ಕೊಡುತ್ತೇನೆ!”
ಮೈಕೆಲ್ ಹೇಳಿದ – “ನನಗೆ ಬೇರೆ ಇನ್ನೇನೂ ಬೇಡ. ಈ ಕಲ್ಲು ಕೊಡಿ ಸಾಕು.” ಈತನು ಮರುಳನಾಗಿರಬಹುದು ಎಂದು ಭಾವಿಸಿ – “ಆಗಲಿ, ನೀನು ಈ ಕಲ್ಲನ್ನು ಒಯ್ಯಬಹುದು” ಎಂದು ಆ ಮನೆಯ ಮಾಲಿಕ ಹೇಳಿದ.
ಆ ಕಲ್ಲನ್ನು ತಂದು, ಕೈಯಲ್ಲಿ ಚಾಣವನ್ನು ಹಿಡಿದು ಕಲಾತಪಸ್ವಿ ಮೈಕೆಲ್ ಮೂರ್ತಿಯನ್ನು ಕೆತ್ತುವುದರಲ್ಲಿ ಮಗ್ನನಾದ. ವರುಷಗಳೇ ಉರುಳಿದವು! ಒಂದು ದಿನ ಅದೇ ಕಲ್ಲಿನಲ್ಲಿ ಡೇವಿಡ್ನ ಅಪ್ರತಿಮ ಮೂರ್ತಿ ಮೂಡಿ ನಿಂತಿತ್ತು! ಇಡೀ ಜಗತ್ತೇ ಅದನ್ನು ನೋಡಲು ಬಂದಿತ್ತು! ಆ ಕಲ್ಲನ್ನು ಕೊಟ್ಟಿದ್ದ ಸಿರಿವಂತನು ಕೂಡಾ ಈ ಮೂರ್ತಿಯನ್ನು ಕಂಡು ಸಂತಸಗೊAಡ. ಆದರೆ ಇದು ತನ್ನ ಮನೆಯ ಕಲ್ಲಿನಲ್ಲಿಯೇ ಅರಳಿದ ಕಲಾಕುಸುಮ ಎಂದು ಆತನು ಅರಿತಿರಲಿಲ್ಲ. “ನಿಮಗೆ ಅನಂತ ಹಾರ್ದಿಕ ಧನ್ಯವಾದಗಳು!” ಎಂದು ಹೇಳಿ ಸಿರಿವಂತನು ಮೈಕೆಲ್ನ ಕೈ ಕುಲುಕಿದ. ಆಗ ಮೈಕೆಲ್ ಹೇಳಿದ – “ಧನ್ಯವಾದ ಹೇಳಬೇಕಾದದ್ದು ನೀವಲ್ಲ, ನಾನು!” ಮತ್ತಷ್ಟು ಚಕಿತನಾದ ಸಿರಿವಂತ. “ಅದೇಕೆ?” ಎಂದು ಕೇಳಿದ. “ಅಂದು ನೀವು ನಿಮ್ಮ ಮನೆಯ ಆವರಣದಲ್ಲಿ ಬಿದ್ದಿದ್ದ ಕಲ್ಲನ್ನು ಕೊಡದಿದ್ದರೆ ನಾನೆಲ್ಲಿ ಈ ಮೂರ್ತಿಯನ್ನು ಕೆತ್ತುತ್ತಿದ್ದೆ!” ಎಂದು ಮೈಕೆಲ್ ಹೇಳಿದ. ಮೈಕೆಲ್ನಲ್ಲಿ ಅಂತಶ್ಚಕ್ಷು ತೆರೆದಿತ್ತು. ಸಿರಿವಂತನಲ್ಲಿ ಅಂತಶ್ಚಕ್ಷು ತೆರೆದಿರಲಿಲ್ಲ. ಕಲ್ಲಿನಲ್ಲಿ ಹುದುಗಿದ್ದ ಕಲಾಕುಸುಮವು ಮೈಕೆಲ್ನಿಗೆ ಕಂಡಿತ್ತು, ಸಿರಿವಂತನಿಗೆ ಕಂಡಿರಲಿಲ್ಲ.
ಯಥಾರ್ಥದರ್ಶನ
ನಾವು ‘ಇರುವ ಹಾಗೆ’ ನೋಡಬೇಕಲ್ಲದೆ ‘ಇರಬೇಕಾದ ಹಾಗೆ’ ನೋಡಬಾರದು. ‘ಏನಿದೆಯೋ’ ಅವನ್ನು ನಾವು ನೋಡುವುದೇ ಇಲ್ಲ; ಏನಿಲ್ಲವೋ ನಾವದನ್ನು ನೋಡುತ್ತೇವೆ. ಇದರಿಂದಾಗಿಯೆ ನಾವು ನೋವಿನಿಂದ ನರಳುವುದು. ಪರಮಾತ್ಮ ನಮಗೆ ಸಾಕಷ್ಟನ್ನು ಕರುಣಿಸಿದ್ದಾಗಲೂ ನಾವು ಅದನ್ನು ನೋಡದೆ ಈ ಜಗತ್ತನ್ನು ನಕಾರಾತ್ಮಕವಾಗಿ ನೋಡಿದರೆ ನಮ್ಮ ಬದುಕು ನರಕವಾಗುತ್ತದೆ. ಸಕಾರಾತ್ಮಕವಾಗಿ ನೋಡಿದರೆ ಜೀವನ ಸ್ವರ್ಗವಾಗುತ್ತದೆ.
ನೆಪೋಲಿಯನ್ನಲ್ಲಿ ಒಬ್ಬ ಮನುಷ್ಯನು ಸಾಮಾನ್ಯವಾಗಿ ಬಯಸುವ ಎಲ್ಲವೂ ಇತ್ತು. ಕೀರ್ತಿ ಇತ್ತು, ಅಧಿಕಾರ ಇತ್ತು, ಶ್ರೀಮಂತಿಕೆ ಇತ್ತು. ಅಷ್ಟಿದ್ದರೂ ಕೂಡ ಆತ ಹೇಳುತ್ತಿದ್ದುದೇನು ಗೊತ್ತೇ? “ನನ್ನ ಬದುಕಿನಲ್ಲಿ ಸಂತೋಷದ ದಿನಗಳನ್ನೇ ಕಾಣದವನು ನಾನು.” ಹೆಲೆನ್ ಕೆಲ್ಲರ್ ಕುರುಡಿಯಾಗಿದ್ದಳು, ಕಿವುಡಿಯಾಗಿದ್ದಳು. ಆದರೂ “ಬದುಕೆಂಬುದು ಎಷ್ಟು ಸುಂದರ” ಎನ್ನುತ್ತಿದ್ದಳು ಆಕೆ! ಅವಳಿಂದ ನಾವೂ ಕಲಿಯಬೇಕಾದುದು ಸಾಕಷ್ಟಿದೆ.
“ಅಂಧನಾಗುವುದು ದುರಂತವಲ್ಲ. ಆ ಅಂಧತ್ವವನ್ನು ಸಹಿಸಿಕೊಳ್ಳಲು ಸಾಧ್ಯವಾಗದಿರುವುದೇ ನಿಜವಾದ ದುರಂತ” ಎಂಬುದಾಗಿ ಜಾನ್ ಮಿಲ್ಟನ್ ಹೇಳಿದ್ದಾನೆ. ಅಷ್ಟಕ್ಕೂ ದೇವರು ಏನು ಕೊಟ್ಟಿದ್ದಾನೋ ಅದರಲ್ಲಿಯೇ ಖುಷಿಪಡಬೇಕು ಎಂಬುದೇ ಹೆಲೆನ್ ಕೆಲ್ಲರ್ಳ ಜೀವನಸಂದೇಶ. ದೃಷ್ಟಿ ಹೋದರೇನು? ಸಾಧಿಸಿದವರು ಇಲ್ಲವೇ?
“Finnegan’s Wake” ಎಂಬ ಕೃತಿ ರಚಿಸುವ ಹೊತ್ತಿಗೆ ಜೇಮ್ಸ್ ಜಾಯ್ಸ್ ದೃಷ್ಟಿಹೀನನಾಗಿದ್ದ. ಎದುರಿಗೆ ಬಂದವರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ಆತ ಬರವಣಿಗೆಯನ್ನು ಬಿಟ್ಟಿರಲಿಲ್ಲ. ತನ್ನ ಆತ್ಮೀಯ ಶಿಷ್ಯರನ್ನು ಕರೆಯಿಸಿ ಡಿಕ್ಟೇಶನ್ ಕೊಡುತ್ತಿದ್ದ. ಸ್ಯಾಮ್ಯುಯಲ್ ಬೆಕೆಟ್ ಕೂಡ ಡಿಕ್ಟೇಶನ್ ತೆಗೆದುಕೊಂಡು ಜೇಮ್ಸ್ ಜಾಯ್ಸ್ಗೆ ನೆರವಾಗಿದ್ದ. ಆದರೆ ಈ ಕೃತಿಯನ್ನು ಓದಿದರೆ ಲೇಖಕನ ದೃಷ್ಟಿಹೀನತೆಯ ಲವಲೇಶವೂ ಓದುಗನಿಗೆ ಗೊತ್ತಾಗುವುದಿಲ್ಲ.
ವೀರಕೇಸರಿ ಸೀತಾರಾಮಶಾಸ್ತ್ರಿ ಅವರು ‘ದೌಲತ್’ ಕಾದಂಬರಿ ಬರೆಯುವಾಗ ಅವರ ಎರಡೂ ಕಣ್ಣು ಹೋಗಿತ್ತು. ಸ್ನೇಹಿತರು, ಸಹಾಯಕರು, ಮಕ್ಕಳಿಗೆ ಡಿಕ್ಟೇಶನ್ ಕೊಟ್ಟು ಅವರು ಆ ಕಾದಂಬರಿ ಮುಗಿಸಿದ್ದರು. ಟಿಪ್ಪುಸುಲ್ತಾನನ ಕುರಿತು ಆ ಕಾದಂಬರಿಯಲ್ಲಿ ಪ್ರಕೃತಿ, ಶೌರ್ಯ, ಸಾಹಸ ಮುಂತಾದ ವರ್ಣನೆ ಬರುತ್ತದೆ. ಅಂಥ ಸಂದರ್ಭದಲ್ಲಿ ಲೇಖಕನ ದೃಷ್ಟಿಹೀನತೆಯ ಕೊರತೆ ಸ್ವಲ್ಪವೂ ಎದ್ದು ಕಾಣುವುದಿಲ್ಲ. ಶಾಸ್ತ್ರಿಯವರು ತಮ್ಮ ದೃಷ್ಟಿ ಕಳೆದುಕೊಂಡ ನಂತರವೇ ಹತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದು ಅಚ್ಚರಿಯೇ.
ಸಿದ್ಧಿಯು ಸತ್ತ್ವದಿಂದ
ಕವಿ ಕಾದಂಬರಿಕಾರ ರಾಬರ್ಟ್ ಪೆನ್ ವಾರೆನ್ ಹಾಗೂ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಆಲೀಸ್ ವಾಕರ್ ಕೂಡ ದೃಷ್ಟಿ ಕಳೆದುಕೊಂಡ ನಂತರವೇ ತಮ್ಮ ಮಹತ್ತ್ವದ ಕೃತಿಗಳನ್ನು ರಚಿಸಿದವರು.
ಸೂರದಾಸರು ಕಣ್ಣಿಲ್ಲದಿದ್ದರೂ ೧ ಲಕ್ಷ ೨೭ ಸಾವಿರ ಪದ್ಯಗಳನ್ನು ಬರೆದರು. ಕುರುಡರಾದರೂ ತಮ್ಮ ಅಂತಶ್ಚಕ್ಷುವಿನಿಂದ ಜಗತ್ತಿಗೆ ಬೆಳಕು ಕೊಟ್ಟವರು ಪಂಚಾಕ್ಷರಿ ಗವಾಯಿಗಳು.
೧೯೯೬ರ ಜನವರಿ ೨೬. ಪಂ. ಪಂಚಾಕ್ಷರಿ ಗವಾಯಿ ಸಂಗೀತ ಮಹಾವಿದ್ಯಾಲಯದಲ್ಲಿ ‘ಸಂಗೀತ ಡೈಜೆಸ್ಟ್’ ಬಿಡುಗಡೆ ಸಮಾರಂಭ. ಡಾ|| ಪುಟ್ಟರಾಜ ಗವಾಯಿಗಳು ಹಾಗೂ ತೋಂಟದ ಸಿದ್ಧಲಿಂಗ ಸ್ವಾಮಿಜೀಗಳು ಸಾನ್ನಿಧ್ಯ ವಹಿಸಿದ್ದರು.
ಇಬ್ಬರೂ ಶ್ರೀಗಳ ದರ್ಶನಕ್ಕೆಂದು ಆಗ ಅಜ್ಜಿಯೊಬ್ಬರು ಆಗಮಿಸಿ ಸದ್ದಿಲ್ಲದೆ ನೆಲದ ಮೇಲೆ ಕುಳಿತರು. ಅದಾಗಿ ಕೆಲ ಸಮಯದಲ್ಲೇ ಪುಟ್ಟರಾಜ ಗವಾಯಿಗಳು ತೋಂಟದ ಶ್ರೀಗಳ ಕಿವಿಯಲ್ಲಿ ಏನನ್ನೋ ಹೇಳಿದರು.
ತಕ್ಷಣ ತೋಂಟದ ಶ್ರೀಗಳು ಅಜ್ಜಿಯನ್ನುದ್ದೇಶಿಸಿ ಹೇಳಿದರಂತೆ, “ಏ ಅಜ್ಜಿ, ನೀ ನೆಲದ ಮ್ಯಾಲೆ ಕುಳಿತೀಯಂತೆ. ಬೆಂಚ್ ಮ್ಯಾಲೆ ಕುಂದುರು ಅಂತಾ ಗವಾಯಿಗಳು ಹೇಳಾಕತ್ಯಾರ.”
ಬಾಲ್ಯದಲ್ಲೇ ಬಹಿರ್ದೃಷ್ಟಿಯನ್ನು ಕಳೆದುಕೊಂಡಿದ್ದ ಗವಾಯಿಗಳು ಅಂತರ್ದೃಷ್ಟಿಯಿAದಲೇ ಎಲ್ಲವನ್ನೂ ‘ಕಾಣು’ತ್ತಿದ್ದರು, ಗ್ರಹಿಸುತ್ತಿದ್ದರು.
ಸಾಹಿತಿಗಳಿಗೆ, ಬರಹಗಾರರಿಗೆ, ಕಲಾವಿದರಿಗೆ, ಚಿಂತಕರಿಗೆ, ಕವಿಗಳಿಗೆ ಹೊರಗಣ್ಣಿನಷ್ಟೇ ಒಳಗಣ್ಣು ಮುಖ್ಯ. ಕಣ್ಣು ಮಂಜಾಗಬಹುದು, ದೃಷ್ಟಿ ಹೋಗಬಹುದು. ಆದರೆ ಒಳಗಣ್ಣು ಮಾತ್ರ ಶಾಶ್ವತ. ಅದು ಸದಾ ತೆರೆದಿರಬೇಕಷ್ಟೆ.
‘ರವಿ ಕಾಣದ್ದನ್ನು ಕವಿ ಕಾಣುತ್ತಾನೆ’ ಎಂಬ ಮಾತೊಂದಿದೆ. ಕವಿಗಳಿಗೆ ಸಾಮಾನ್ಯವಾಗಿ ಒಳನೋಟ ಇರುತ್ತದೆ. ಒಳನೋಟ ಇದ್ದರೆ ಮಾತ್ರ ಒಬ್ಬನು ಯಶಸ್ವಿ ಕವಿಯಾಗಬಹುದು. ಆಗಸದಲ್ಲಿ ತೇಲುವ ಮೋಡಗಳನ್ನು ಯಾರು ತಾನೆ ನೋಡಿಲ್ಲ? ಎಲ್ಲರೂ ನೋಡಿದ್ದೇವೆ. ಆದರೆ ಅದೇ ಮೋಡಗಳನ್ನು ಕವಿ ಕಾಳಿದಾಸನು ನೋಡಿದಾಗ ‘ಮೇಘದೂತ’ ಎಂಬ ಮಹಾಕಾವ್ಯವೇ ರಚನೆ ಆಯಿತು! ಉಳಿದವರು ನೋಡಿದಾಗ ಆ ಕಾವ್ಯಗಂಗೆ ಏಕೆ ಪ್ರವಹಿಸಲಿಲ್ಲ? ಉಳಿದವರು ನೋಡಿದ್ದು ಹೊರಗಣ್ಣಿನಿಂದ, ಕಾಳಿದಾಸನು ನೋಡಿದ್ದು ಒಳಗಣ್ಣಿನಿಂದ.
ನಾವು ನೋಡುವ ನೋಟ ಸ್ವಚ್ಛವಾಗಿದ್ದರೆ, ಸ್ಪಷ್ಟವಾಗಿದ್ದರೆ ನಮ್ಮ ಬದುಕು ಶುಚಿಯಾಗಿರುತ್ತದೆ. ದೃಷ್ಟಿ ದೋಷಪೂರಿತವಾಗಿದ್ದರೆ ನಮ್ಮ ಬದುಕು ಶುಚಿಯಾಗಿರಲು ಸಾಧ್ಯವಿಲ್ಲ.
‘…ಯಥಾದರ್ಶೋ ಮಲೇನಚ’
ಕೋಲ್ಕತ್ತಾದ ಓರ್ವ ಮಹಾಶಯರಿಗೆ ಎಪ್ಪತ್ತೈದು ವರ್ಷಗಳಿಗಿಂತಲೂ ಹೆಚ್ಚಿಗೆ ವಯಸ್ಸಾಗಿತ್ತು. ಆರೋಗ್ಯವೂ ಸರಿಯಾಗಿರಲಿಲ್ಲ. ಇನ್ನೇನು ತಮ್ಮ ಕೊನೆಗಾಲ ಸಮೀಪದಲ್ಲಿದೆ. ಸತ್ತ ನಂತರ ಮುಕ್ತಿಯನ್ನು ಪಡೆಯಲು ಕಾಶಿಯೇ ಸರಿಯಾದ ಸ್ಥಳವೆಂದು ತೀರ್ಮಾನಿಸಿ ತಮ್ಮ ಪತ್ನಿಯೊಂದಿಗೆ ಕಾಶಿಗೆ ಹೋದರು. ಗಂಗಾನದಿಯ ದಡದಲ್ಲಿದ್ದ ಮನೆಯೊಂದನ್ನು ಬಾಡಿಗೆಗೆ ಹಿಡಿದರು. ಮನೆಯ ಮುಂದಿನ ಕೊಠಡಿಯಲ್ಲಿ ಕುಳಿತುಕೊಂಡರೆ, ಅಲ್ಲಿನ ಕಿಟಕಿಯಿಂದ ಗಂಗಾನದಿ ಹರಿಯುವುದು ಕಾಣಿಸುತ್ತಿತ್ತು.
ಮಹಾಶಯರು ಪ್ರತಿದಿನ ಕಿಟಕಿಯ ಪಕ್ಕದಲ್ಲೊಂದು ಕುರ್ಚಿಯನ್ನು ಹಾಕಿಕೊಂಡು ಕುಳಿತಿರುತ್ತಿದ್ದರು. ಕೈಯಲ್ಲಿ ಪುಸ್ತಕವನ್ನೋ, ಪತ್ರಿಕೆಯನ್ನೋ ಹಿಡಿದು ಓದುತ್ತ ಕುಳಿತಿರುತ್ತಿದ್ದರು. ಓದಿ-ಓದಿ ಬೇಸರವಾದಾಗಲೆಲ್ಲ ತಲೆಯೆತ್ತಿ ಕಿಟಕಿಯ ಗಾಜಿನ ಮೂಲಕ ಗಂಗಾನದಿಯನ್ನು ದಿಟ್ಟಿಸಿ ನೋಡುತ್ತಿರುತ್ತಿದ್ದರು. ಹೀಗೆಯೇ ಆರು ತಿಂಗಳು ಕಳೆಯಿತು. ಅವರ ಆರೋಗ್ಯ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ.
ಒಮ್ಮೆ ಅವರು ಕಾರ್ಯನಿಮಿತ್ತ ತಮ್ಮೂರಿಗೆ ಹೋಗಿ ಬರಬೇಕಾಗಿ ಬಂದಿತು. ಕಾಶಿಯಲ್ಲಿನ ಬಾಡಿಗೆಮನೆಗೆ ಬೀಗ ಹಾಕಿ ಊರಿಗೆ ಹೋದರು. ಮೂರು ತಿಂಗಳ ನಂತರ ಮತ್ತೆ ಕಾಶಿಗೆ ಹಿಂತಿರುಗಿದರು. ಬಂದ ತಕ್ಷಣ ಗಾಜಿನ ಮೂಲಕ ಗಂಗಾನದಿಯನ್ನು ನೋಡಿದರು. ಹೆಂಡತಿಯನ್ನು ಕರೆದು, ‘ಗಂಗಾನದಿ ಕಳೆದ ಮೂರು ತಿಂಗಳಲ್ಲಿ ತುಂಬಾ ಬದಲಾಗಿದೆ. ಬೆಳಗ್ಗೆ ಕಾಣುತ್ತಿದ್ದ ಗಂಗಾನದಿಯ ನೀರು ಕೊಳಕು-ಕೊಳಕಾಗಿ ಕಾಣಿಸುತ್ತಿದೆ’ ಎಂದರು. ಆಕೆ ‘ಹೌದಾ?’ ಎಂದಷ್ಟೇ ಹೇಳಿ ಸುಮ್ಮನಾದರು.
ಮರುದಿನ ಮಹಾಶಯರು ಮತ್ತೆ ಕಿಟಕಿಯ ಗಾಜಿನ ಮೂಲಕ ಗಂಗಾನದಿಯನ್ನು ನೋಡಿದರು. ತಕ್ಷಣ ಹೆಂಡತಿಯನ್ನು ಕರೆದು, ‘ಇಲ್ಲೊಂದು ಅದ್ಭುತವಿದೆ! ನೋಡು ಬಾ! ನಿನ್ನೆಯವರೆಗೂ ಕೊಳಕಾಗಿದ್ದ ಗಂಗಾನದಿಯ ನೀರು ಇಂದು ಮತ್ತೆ ಮೊದಲಿನಂತೆ ಸ್ವಚ್ಛವಾಗಿದೆ. ತಿಳಿನೀರಿನಂತೆ ಹರಿಯುತ್ತಿದೆ. ಒಂದೇ ದಿನದಲ್ಲಿ ಗಂಗಾನದಿಯಲ್ಲಿ ಎಂಥ ಬದಲಾವಣೆ!’ ಎಂದು ಅಚ್ಚರಿ ವ್ಯಕ್ತಪಡಿಸಿದರು. ಆಕೆ ಅಚ್ಚರಿಯಿಲ್ಲದ, ಸಹಜವಾದ ಧ್ವನಿಯಲ್ಲಿ ‘ನಾವು ಮೂರು ತಿಂಗಳು ಮನೆಯಲ್ಲಿ ಇರಲಿಲ್ಲವಲ್ಲಾ! ಕಿಟಕಿಯ ಗಾಜಿನ ಮೇಲೆ ತುಂಬ ಧೂಳು ಕುಳಿತಿತ್ತು. ಇಂದು ಮುಂಜಾನೆ ಆ ಧೂಳನ್ನು ಒರೆಸಿದೆ. ಗಂಗಾನದಿ ನಿನ್ನೆ ಹೇಗಿತ್ತೋ ಇಂದೂ ಹಾಗೆಯೆ ಇದೆ. ಆದರೆ ನೀವು ನೋಡುವ ಕಿಟಕಿಯ ಗಾಜು ಈಗ ಶುಭ್ರವಾಗಿದೆ!’ ಎನ್ನುತ್ತ ಆಕೆ ಅಡುಗೆಮನೆಯೊಳಕ್ಕೆ ಹೋದರು. ಮಹಾಶಯರು ಹೆಂಡತಿ ಮಾಡಿದ ಅಚ್ಚರಿಯನ್ನು ಕಂಡು ಮತ್ತೂ ಅಚ್ಚರಿಗೊಂಡರು.
ನಾವು ನೋಡುವ ದೃಶ್ಯವು ಕೊಳಕಾಗಿದೆಯೆಂದು ದೂರುವುದಕ್ಕಿಂತ ಮುಂಚೆ, ನಾವು ನೋಡುವ ಗಾಜು ಶುಭ್ರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನೋಡುವ ಗಾಜು ಶುಭ್ರವಾಗಿರಬೇಕು! ನೋಡುವ ಕಣ್ಣಿನ ಹಿಂದಿನ ಮನಸ್ಸೂ ಶುಭ್ರವಾಗಿರಬೇಕು.
ನಮ್ಮ ಜೀವನವು ನರಕದಿಂದ ನಾಕಕ್ಕೇರಬೇಕಾದರೆ ನಮ್ಮ ನೋಟ ಬದಲಾಗಬೇಕು. ನೋಡುವುದು ಬೇರೆ, ಕಾಣುವುದು ಬೇರೆ. ನೋಡುವುದು ಕಣ್ಣಿನ ಕೆಲಸ, ಕಾಣುವುದು ಬುದ್ಧಿಯ ಕಾರ್ಯ. ನಮ್ಮ ದಾರ್ಶನಿಕರ, ಋಷಿ-ಮುನಿಗಳ, ವಚನಕಾರರ, ಮಹಾಪುರುಷರ, ಅನುಭಾವಿಗಳ ವಿಚಾರಗಳನ್ನು ಸರಿಯಾಗಿ ಅರಿತು ಅರಗಿಸಿಕೊಳ್ಳಬೇಕಾಗಿದೆ. ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸೂಪರ್ವಿಜನ್ ಇರಬೇಕಾಗುತ್ತದೆ. ನಮ್ಮ ಜೀವನ ಉತ್ತುಂಗಕ್ಕೇರಬೇಕಾದರೆ ನಮ್ಮ ದೃಷ್ಟಿಕೋನ ಬದಲಾಗಬೇಕಾಗಿದೆ. ದೃಷ್ಟಿ ಬದಲಾದರೆ ಸೃಷ್ಟಿಯೇ ಬದಲಾಗುತ್ತದೆ. ದೃಷ್ಟಿ ಬದಲಾದರೆ ಈ ಸೃಷ್ಟಿಯೇ ಸ್ವರ್ಗವಾಗುತ್ತದೆ.
***
ಮನುಷ್ಯನ ಜೀವನ ಎಂದರೆ ಸುಖದ ಹುಡುಕಾಟ. ಮನುಷ್ಯನು ಹುಟ್ಟಿನಿಂದ ಸಾವಿನ ತನಕ ಸುಖದ ಹಿಂದೆಯೇ ಓಡುತ್ತಾನೆ. ಆದರೆ ಇಂದಿಗೂ ಮನುಷ್ಯನಿಗೆ ಸುಖ ಮರೀಚಿಕೆಯಾಗಿದೆಯೇ ವಿನಾ ವಾಸ್ತವವಾಗಿಲ್ಲ. ಏನಾದರೂ ಮಾಡಿ ಜೀವನದ ದುಃಖವನ್ನು ಹೋಗಲಾಡಿಸಿ ಸುಖವನ್ನು ಪಡೆಯಬೇಕೆಂಬುದೇ ಮನುಷ್ಯನ ಅಭಿಲಾಷೆ. ಆದರೆ ಸುಖದ ಹುಡುಕಾಟದಲ್ಲಿ ಮನುಷ್ಯನಿಗೆ ಸಿಕ್ಕಿದ್ದು ದುಃಖ. ಸುಖ ಬೇಕೆಂದರೆ ಸಿಗುವುದಿಲ್ಲ; ದುಃಖ ಬೇಡವೆಂದರೂ ನಮ್ಮನ್ನು ಬಿಡುವುದಿಲ್ಲ. ಆದರೆ ಸುಖ ಎಂದರೆ ಏನು? ದುಃಖ ಎಂದರೆ ಏನು? ಅದು ಯಾಕೆ ನಮ್ಮನ್ನು ಕಾಡುತ್ತಿದೆ? ದುಃಖದ ನಿವಾರಣೆಗೆ ದಾರಿ ಯಾವುದು? – ಎಂಬಿತ್ಯಾದಿ ಮೂಲಭೂತ ಪ್ರಶ್ನೆಯ ಬಗ್ಗೆ ಮನುಷ್ಯ ಚಿಂತಿಸುವುದಿಲ್ಲ. ಸುಖ, ದುಃಖ ಎಂಬವು ಒಂದೇ ನಾಣ್ಯದ ಎರಡು ಮುಖಗಳು. ಆದ್ದರಿಂದ ಬರಿ ಸುಖವೇ ಸಿಗಬೇಕೆನ್ನುವುದು ಪ್ರಕೃತಿಗೆ ವಿರುದ್ಧವಾದದ್ದು. ಆದರೂ ದುಡ್ಡಿದ್ದರೆ ಸುಖ ಪಡೆಯಬಹುದು ಎಂಬ ಭ್ರಮೆಯಲ್ಲಿ ಮನುಷ್ಯನು ದುಡ್ಡಿನ ಹಿಂದೆ ಬಿದ್ದಿದ್ದಾನೆ. ದುಡ್ಡಿಗಾಗಿ ದುಡಿದು ದುಡಿದು ಆರೋಗ್ಯ ಹಾಳುಮಾಡಿಕೊಂಡು ದುಃಖದ ಕೂಪದಲ್ಲಿ ಬೀಳುತ್ತಾನೆ. ಪ್ರಯತ್ನಿಸಿದ್ದು ಸುಖಕ್ಕಾಗಿ; ಆದರೆ ಗಳಿಸಿದ್ದು ದುಃಖವನ್ನು. ಇದನ್ನು ಜೀವನದ ವಿಪರ್ಯಾಸ ಎನ್ನಬೇಕೇ? ಅಥವಾ ಇದು ನಮ್ಮ ದೃಷ್ಟಿಕೋನದ ದೋಷ ಎನ್ನಬೇಕೇ?
ಹಲವರಿಗೆ ಶ್ರೀಮಂತಿಕೆಯೇ ಸುಖ ಅನ್ನಿಸಿದರೆ, ಇನ್ನು ಕೆಲವರು ಬಡತನದಲ್ಲೇ ಸುಖ ಕಾಣುತ್ತಾರೆ. ಸುಖ ಎನ್ನುವುದು ಹೊರಗಿನ ವಸ್ತುವಿನಲ್ಲಿಲ್ಲ. ಬದಲಿಗೆ ಅಂತರAಗದ ಭಾವದಲ್ಲಿದೆ.
‘ದುಃಖ’ ಬಡತನದ ಪರ್ಯಾಯ ಪದವಲ್ಲ
ಸಂತ ತುಕಾರಾಮ ತುಂಬಾ ಬಡತನದಲ್ಲಿದ್ದ. ಆದರೆ ಆತ ಒಂದು ದಿನವೂ ದುಃಖಿತನಾಗಲಿಲ್ಲ. ಭಗವತ್ ನಾಮಸ್ಮರಣೆಯಲ್ಲಿಯೇ ತುಕಾರಾಮ ಸಂತೋಷದಿಂದ ಕಾಲಕಳೆಯುತ್ತಿದ್ದ. ತುಕಾರಾಮನಂತಹ ಸಂತ ಬಡತನದಿಂದ ಬಳಲುತ್ತಿದ್ದಾನೆ ಎಂಬ ಸುದ್ದಿ ಅಲ್ಲಿಯ ರಾಜನಿಗೆ ಗೊತ್ತಾಯಿತು. ತಕ್ಷಣ ರಾಜ ತುಕಾರಾಮನಿಗೆ ಅಪಾರ ಧನ-ಕನಕಗಳನ್ನು ಕಳುಹಿಸಿಕೊಟ್ಟ. ತುಕಾರಾಮ ಅವರಲ್ಲಿ ಕೇಳಿದ: ‘ಇದೆಲ್ಲಾ ಏನು?’ ಎಂದು. “ನೀವು ತುಂಬಾ ಬಡತನದಲ್ಲಿದ್ದೀರಿ. ನಿಮ್ಮ ಕಷ್ಟವನ್ನು ಕಾಣಲಾರದೆ ರಾಜ ನಿಮಗೆ ಅಪಾರ ಸಂಪತ್ತನ್ನು ಕಳುಹಿಸಿದ್ದಾನೆ. ಇನ್ನು ಮುಂದಾದರೂ ನೀವು ಸುಖವಾಗಿರಬೇಕೆಂಬುದೇ ರಾಜನ ಅಪೇಕ್ಷೆ” ಎಂಬುದಾಗಿ ರಾಜದೂತರು ಹೇಳಿದರು. “ನಾನು ದುಃಖದಲ್ಲಿದ್ದೇನೆ ಎಂಬುದಾಗಿ ನಿಮ್ಮ ರಾಜನಿಗೆ ಹೇಳಿದವರಾರು? ರಾಜನ ಹತ್ತಿರ ಇಲ್ಲದಿದ್ದ ಸಂತೋಷ ನನ್ನಲ್ಲಿದೆ. ನಿಮ್ಮ ರಾಜ ವಿಠೋಬನ ಮಂದಿರಕ್ಕೆ ಹೋಗಿ ದಿನನಿತ್ಯವೂ ನನಗೆ ಅದನ್ನು ಕೊಡು, ನನಗೆ ಇದನ್ನು ಕೊಡು ಎಂಬುದಾಗಿ ಬೇಡುತ್ತಾನೆ. ದಿನನಿತ್ಯವೂ ಬೇಡುವವನೇ ನಿಜವಾದ ದುಃಖಿ. ಇಂತಹ ಭಿಕ್ಷÄಕ, ದುಃಖಿ ನನ್ನನ್ನು ಹೇಗೆ ಸಂತೋಷಪಡಿಸಬಲ್ಲ? ಆತ ಯಾರ ಹತ್ತಿರ ಬೇಡಿಕೊಳ್ಳುತ್ತಾನೋ ಆ ವಿಠೋಬನೇ ನನ್ನ ಹೃದಯದೊಳಗಿದ್ದಾನೆ. ಆದ್ದರಿಂದ ನಾನು ಸದಾ ಸುಖಿ. ಇಂತಹ ಲೌಕಿಕ ಸಂಪತ್ತಿನಿAದ ನನ್ನನ್ನು ಸುಖಿಯಾಗಿಸಲು ಸಾಧ್ಯವಿಲ್ಲ ಎಂಬುದಾಗಿ ನಿಮ್ಮ ರಾಜನಿಗೆ ತಿಳಿಸಿ” ಎಂದು ರಾಜದೂತರ ಹತ್ತಿರ ತುಕಾರಾಮ ಹೇಳಿ ಸಂಪತ್ತನ್ನು ಹಿಂದಕ್ಕೆ ಕಳುಹಿಸಿದ. ತುಕಾರಾಮನ ಸಂತೋಷಕ್ಕೆ ಬಡತನ ಎಂದೂ ಅಡ್ಡಿ ಬರಲಿಲ್ಲ. ‘ದುಃಖ’ ಎಂಬುದು ಬಡತನದ ಪರ್ಯಾಯ ಪದವಲ್ಲ ಎಂಬುದನ್ನು ನಾವು ಮನಗಾಣಬೇಕು. ಸುಖ-ದುಃಖದ ಬಗ್ಗೆ ಆತನ ಸರಿಯಾದ ದೃಷ್ಟಿಕೋನವೇ ಆತನನ್ನು ಸದಾ ಸುಖಿಯನ್ನಾಗಿಸಿತ್ತು.
ಈ ಲೌಕಿಕ ಜಗತ್ತಿನಲ್ಲಿ ‘ಆಸೆಯೇ ದುಃಖಕ್ಕೆ ಮೂಲಕಾರಣ’ ಎಂಬುದಾಗಿ ಗೌತಮಬುದ್ಧ ಹೇಳಿದ. ಹಾಗೆಂದರೆ ಆಶಾರಹಿತನಾಗಿ ಬದುಕುವುದೇ ಸಂತೋಷದ ಗುಟ್ಟು. ನಮಗೆ ಕಷ್ಟ ಬಂದಾಗ ‘ನನಗೇಕೆ ಈ ಕಷ್ಟವನ್ನು ಕೊಟ್ಟೆ? ನಾನೇನು ಅನ್ಯಾಯ ಮಾಡಿದ್ದೇನೆ?’ – ಎಂಬುದಾಗಿ ಭಗವಂತನನ್ನೇ ನಾವು ಪ್ರಶ್ನಿಸುತ್ತೇವೆ. ಆದರೆ ಸುಖ-ದುಃಖಗಳು, ನೋವು-ನಲಿವುಗಳನ್ನು ಭಗವಂತ ಕೊಡುವುದಿಲ್ಲ. ಬದಲಾಗಿ ನಮ್ಮ ಕರ್ಮವೇ ನಮಗೆ ಇವನ್ನು ಕೊಡುತ್ತದೆ. ಕಾಲವಾಗಲಿ, ದೈವವಾಗಲಿ ಯಾವುದನ್ನೂ ನಮ್ಮ ಮೇಲೆ ಹೇರುವುದಿಲ್ಲ. ನಮ್ಮ ದೃಷ್ಟಿದೋಷದಿಂದಲೇ ಎಲ್ಲ ಪ್ರಮಾದಗಳೂ ಸಂಭವಿಸುತ್ತವೆ! ಅಂತಹ ಪ್ರಮಾದಗಳು ಸಂಭವಿಸಿದ ಮೇಲೆ ಎಲ್ಲವೂ ಕಾಲದೋಷ, ದೈವಸಂಕಲ್ಪ ಎಂದು ಹೇಳಿ ತನ್ನ ತಪ್ಪಿನ ಹೊಣೆಯನ್ನು ಕಾಲದ ಅಥವಾ ದೈವದ ಮೇಲೆ ಏರಿಸುವುದು ಮನುಷ್ಯಸ್ವಭಾವ. ರಾಮಾಯಣದಲ್ಲಿ ಲಕ್ಷö್ಮಣನು ವಿಭೀಷಣನಿಗೊಂದು ಮಾತು ಹೇಳುತ್ತಾನೆ:
ಸುಖಸ್ಯ ದುಃಖಸ್ಯ ನ ಕೋಪಿ ದಾತಾ
ಪರೋ ದದಾತಿ ಇತಿ ಕುಬುದ್ಧಿರೇಷಃ |
ಅಹಂ ಕರೋಮಿ ಇತಿ ವೃಥಾಭಿಮಾನ
ಸ್ವಕರ್ಮಸೂತ್ರೇಣ ಗ್ರಥಿತೋ ಹಿ ಲೋಕಃ ||
ಇದರ ಒಟ್ಟು ತಾತ್ಪರ್ಯ ಎಂದರೆ ನಮ್ಮ ಸುಖ-ದುಃಖಕ್ಕೆ ಬೇರೆ ಯಾರೂ ಕಾರಣರಲ್ಲ. ನಾವು ಮಾಡಿದ ಕರ್ಮದ ಫಲದಿಂದಲೇ ನಮಗೆ ಸುಖ-ದುಃಖಗಳು ಪಾಪ್ತವಾಗುತ್ತವೆ.
ದೃಷ್ಟಿಯೇ ನಿಯೋಜಕ
ಈ ದೃಷ್ಟಿಕೋನದಲ್ಲಿ ನಾವು ಜೀವನವನ್ನು ಸಾಗಿಸಿದರೆ ಕಷ್ಟ ಬಂದಾಗ ನಾವು ದುಃಖಿತರಾಗುವುದಿಲ್ಲ, ಸುಖ ಬಂದಾಗ ನಾವು ಅಹಂಕಾರಿಗಳಾಗುವುದಿಲ್ಲ. ಪ್ರತಿಯೊಂದನ್ನು ನಾವು ನೋಡುವ ದೃಷ್ಟಿಯ ಮೇಲೆ ನಮ್ಮ ಸುಖ-ದುಃಖಗಳು ಅವಲಂಬಿತವಾಗಿವೆ. ಆದರೆ ನಮ್ಮ ದೃಷ್ಟಿಯೇ ಮಸುಕಾಗಿದೆ, ಮಂಕಾಗಿದೆ. ಶುದ್ಧ ದೃಷ್ಟಿಯಿಂದ ನೋಡಿದರೆ ನಮ್ಮ ಸಮಸ್ಯೆ ಅರ್ಧ ನಿವಾರಣೆ ಆದಂತೆ. ಶುದ್ಧವಾದ ಕಣ್ಣು ‘ಅದು ಏನಾಗಿದೆಯೋ’ ಅದನ್ನೇ ನೋಡುವುದು. ಅಶುದ್ಧವಾದ ಕಣ್ಣು ‘ತಾನೇನು ನೋಡಬಯಸುವುದೋ’ ಅದನ್ನೇ ನೋಡುವುದು.
ಈ ಹುಣ್ಣಿಮೆಯ ಚಂದ್ರ ಎಷ್ಟೊಂದು ಸುಂದರವಾಗಿದೆ ಎಂದು ಯಾರಾದರೂ ಹೇಳಿದರೆ “ಚಂದ್ರ ಚಂದ್ರನಂತೆಯೇ ಇದ್ದಾನೆ. ಅದರಲ್ಲಿ ಸೌಂದರ್ಯವೇನು ಬಂತು?” ಎಂಬುದಾಗಿ ಕೆಲವರು ಹೇಳುತ್ತಾರೆ. ಸೌಂದರ್ಯವನ್ನು ಕಾಣಲು ನಿಮ್ಮಲ್ಲಿ ಸೌಂದರ್ಯಪ್ರಜ್ಞೆ ಬೇಕು. ಅದಕ್ಕೆ ಬೇರೆ ದಾರಿ ಇಲ್ಲ. ಅದಕ್ಕೆ ನೋಡುವ ಕಣ್ಣುಗಳು ಬೇಕು. “ಲೈಲಾಳನ್ನು ನೋಡಲು ನಿಮಗೆ ಮಜನೂವಿನ ಕಣ್ಣು ಬೇಕು” ಎಂದು ಹೇಳಲಾಗಿದೆ. ಅದು ಸತ್ಯ. ಲೈಲಾಳನ್ನು ನೋಡುವ ಬೇರೆ ದಾರಿ ಇಲ್ಲ.
“ಲೈಲಾ ಸಾಮಾನ್ಯ ಹೆಣ್ಣು. ಅವಳಿಗಿಂತ ಸುಂದರವಾದ ಹನ್ನೆರಡು ಹೆಣ್ಣುಗಳು ಇಲ್ಲಿ ಇದ್ದಾರೆ. ಅವರನ್ನು ನೋಡು, ಜಗತ್ತಿನಲ್ಲಿಯೇ ಇವರೆಲ್ಲರೂ ಸೌಂದರ್ಯವತಿಯರು” ಎಂದು ರಾಜನು ಮಜನೂವಿಗೆ ಹೇಳಿದಾಗ, ಅವರೆಲ್ಲರನ್ನು ಅವನು ನೋಡಿ, ಇವರಲ್ಲಿ ಲೈಲಾ ಇಲ್ಲವೆಂದನು. “ಇವರಾರೂ ಲೈಲಾಗೆ ಸರಿಸಮರಲ್ಲ, ಅವಳ ಕಾಲಿನ ಧೂಳಿಗೂ ಸಮವಿಲ್ಲ” ಎಂದನು. “ನೀನೊಬ್ಬ ಹುಚ್ಚ” ಎಂದು ರಾಜನೆಂದಾಗ, “ಅದು ಒಂದು ವೇಳೆ ಸತ್ಯವೆಂದು ಕಂಡರೂ, ಲೈಲಾಳನ್ನು ನೋಡುವುದಕ್ಕೆ ಮಜನೂ ಕಣ್ಣುಗಳೇ ಬೇಕು” ಎಂದನು ಮಜನೂ.
ದೇವನ ಈ ಸೃಷ್ಟಿಯು ‘ಸತ್ಯಂ, ಶಿವಂ, ಸುಂದರ.’ ನೋಡುವವರ ದೃಷ್ಟಿಗೆ ತಕ್ಕಂತೆ ಸೃಷ್ಟಿಯು ಬೇರೆ ಬೇರೆಯಾಗಿ ತೋರುತ್ತದೆ. ಅನುಭಾವಿಗಳಾದ ಸಂತರು, ಶರಣರು ಇದೇ ಸೃಷ್ಟಿಯಲ್ಲಿ ಸೃಷ್ಟಿಕರ್ತನನ್ನು ನೋಡಿ ಪರಮಶಾಂತಿ, ಪರಮ ಆನಂದವನ್ನು ಪಡೆದರು. ಅದೇ ಸೃಷ್ಟಿಯನ್ನು ನೋಡಿ ನಾವು ಆಶೆ, ಆಮಿಷ, ರಾಗದ್ವೇಷಾದಿಗಳಿಗೆ ಒಳಗಾದೆವು. ಈ ಪ್ರಪಂಚದಲ್ಲಿರುವ ಎಲ್ಲ ಕೋಲಾಹಲಕ್ಕೆ, ಕಷ್ಟ-ನಷ್ಟಗಳಿಗೆ ನಮ್ಮ ದೋಷಪೂರಿತ ದೃಷ್ಟಿಯೇ ಕಾರಣ. ಸಂತರು, ಶರಣರು, ಅನುಭಾವಿಗಳು ಇದೇ ಸೃಷ್ಟಿಯನ್ನು ಅದೆಷ್ಟು ಸುಂದರವಾಗಿ ನೋಡಿದರು! ಮಹಾನುಭಾವಿ ಅಲ್ಲಮಪ್ರಭು ದೇವರು ತಮಗೆ ಕಂಡ ಸೃಷ್ಟಿಯ ವರ್ಣನೆಯನ್ನು ಹೀಗೆ ಮಾಡುತ್ತಾರೆ: