ಸುಶಿಕ್ಷಿತ ನಾಗರಿಕ ಸಮಾಜವು ಯಾವತ್ತೂ ಹಿಂಸೆಯನ್ನು ಬಯಸುವುದಿಲ್ಲ. ಏಕೆಂದರೆ ಹಿಂಸೆಯು ವೈಯಕ್ತಿಕವಾಗಿ ಅಶಾಂತಿಯನ್ನೂ, ಸಾಮಾಜಿಕವಾಗಿ ಕ್ಷೋಭೆಯನ್ನೂ ತರುತ್ತದೆ. ಹಿಂಸೆಯಿದ್ದಾಗ ಪ್ರಗತಿಯೆನ್ನುವುದು ಮರೀಚಿಕೆಯಾಗುತ್ತದೆ. ಶಾಂತಿಯಿದ್ದಾಗ ಮಾತ್ರ ವಿಕಾಸವು ಸಾಧ್ಯವಾಗುತ್ತದೆ. ಹಿಂಸೆಯು ಮಾನವೀಯತೆಯನ್ನೇ ಅಳಿಸಿಹಾಕುತ್ತದೆ. ಹಿಂಸೆಗೆ ಕೈ-ಕಾಲುಗಳಿರುತ್ತವೆಯೇ ವಿನಾ ಯೋಚಿಸುವ ತಲೆಯೇ ಇರುವುದಿಲ್ಲ. ಮನುಷ್ಯನಲ್ಲಿ ಹಿಂಸೆ ಕೆರಳಿದಾಗ ಆತ ತನ್ನ ವಿವೇಚನಾಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಜನರ ಗುಂಪಿಗೆ ಹಿಂಸೆಯ ಆಕರ್ಷಣೆ ಜಾಸ್ತಿ. ಏಕೆಂದರೆ ಅಲ್ಲಿ ಭಾವನೆಗೆ ಬೆಲೆಯೇ ವಿನಾ ವಿವೇಕಕ್ಕೆ ಅಲ್ಲ. ಮನುಷ್ಯ ಭಾವುಕನಾದಾಗ ವಿವೇಕಶೂನ್ಯನಾಗುತ್ತಾನೆ. ಆಗ ಆತನ ಬುದ್ಧಿ ಆತನ ಸ್ವಾಧೀನದಲ್ಲಿರುವುದಿಲ್ಲ. ಆದ್ದರಿಂದಲೇ ಮನುಷ್ಯನು ವಿವೇಕಶೂನ್ಯನಾದಾಗ ಹಿಂಸೆಯಂತಹ ಅಚಾತುರ್ಯ ನಡೆಯುತ್ತದೆ.
ರಕ್ತಮಯ ಇತಿಹಾಸ
ಜಗತ್ತಿನ ಇತಿಹಾಸದ ಪುಟಗಳನ್ನು ತೆರೆದರೆ ಅದರಲ್ಲಿ ಮತ್ತೆ ಮತ್ತೆ ಹಿಂಸೆ, ದೌರ್ಜನ್ಯ, ಕ್ರೌರ್ಯ, ಯುದ್ಧ ಕಂಡುಬರುತ್ತದೆ. ಜಗತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಹಲವಾರು ಯುದ್ಧಗಳು ನಡೆದು ಲಕ್ಷಾಂತರ ಜನರ ಮಾರಣಹೋಮ ನಡೆದಿದೆ. ಚೆಂಗೀಸ್ಖಾನ್, ನೆಪೆÇೀಲಿಯನ್, ಮುಸೋಲಿನಿ, ಲೆನಿನ್, ಸ್ಟಾಲಿನ್, ಹಿಟ್ಲರ್ನಂತಹ ಕ್ರೂರ ಸರ್ವಾಧಿಕಾರಿಗಳು ನಡೆಸಿದ ಹಿಂಸೆಗಳು ಇತಿಹಾಸದ ಪುಟಗಳಲ್ಲಿ ತುಂಬಿತುಳುಕಾಡುತ್ತಿವೆ. ಭಯ, ಸ್ವಾರ್ಥ, ಅಧಿಕಾರದ ಲಾಲಸೆ, ಅಹಂಕಾರ, ಮಹತ್ತ್ವಾಕಾಂಕ್ಷೆ – ಇವು ಮನುಷ್ಯನನ್ನು ಹಿಂಸೆಯ ಕಡೆಗೆ ಆಕರ್ಷಿಸುತ್ತವೆ.
“ಹಿಂಸಕ ಶಸ್ತ್ರಾಸ್ತ್ರಗಳು ಹೆಚ್ಚಿದಷ್ಟೂ ಮಾನವನ ದುಃಖಗಳು ಹೆಚ್ಚುತ್ತವೆ. ಹಿಂಸೆಯಿಂದಾಗುವ ವಿಜಯ ಸತ್ತವರ ಗೋಳಿನ ಉತ್ಸವದಿಂದ ಕೊನೆಗೊಳ್ಳುತ್ತದೆ” ಎಂದು ಮಹಾನ್ ಚಿಂತಕ ಲಾವೋತ್ಸೆ ಹೇಳಿದ್ದಾನೆ.
‘ಯಾರು ಕತ್ತಿಯನ್ನು ಬಳಸುತ್ತಾರೋ ಅವರು ಕತ್ತಿಯಿಂದಲೇ ನಾಶವಾಗುತ್ತಾರೆ’ ಎಂಬ ಹೇಳಿಕೆ ಪ್ರಸಿದ್ಧವಿದೆ.
ಸಾಮಾನ್ಯನೊಬ್ಬನು ಇನ್ನೊಬ್ಬನನ್ನು ಕೊಂದರೆ ಅದು ಕೊಲೆ, ಹಿಂಸೆ. ನಿರಂಕುಶ ರಾಜನಾದವನು ಸಾವಿರಾರು ಜನರನ್ನು ಕೊಂದರೆ ಅದು ವಿಜಯ, ಸಾಧನೆ! ಇಂತಹ ‘ವಿಜಯ’ಗಳ ಕಥೆಯಲ್ಲಿ ಮಾನವತೆಯ ಪರಾಜಯದ ಇತಿಹಾಸವೂ ಅಡಗಿದೆ, ಸಾವಿರಾರು ಜನರನ್ನು ಹಿಂಸಿಸಿದ ಕರ್ಮಕಾಂಡವೂ ಹುದುಗಿದೆ.
ದ್ವೇಷದ ಕಿಡಿ ಬೆಂಕಿಯಾಗಿ ಇಡೀ ನಾಡನ್ನೇ ಆವರಿಸುತ್ತದೆ. ನಾಡಿನ ಬೆಂಕಿ ಇಡೀ ಊರನ್ನೇ ಸುಟ್ಟು ಭಸ್ಮಮಾಡಿ ಶ್ಮಶಾನವನ್ನಾಗಿಸುತ್ತದೆ. ಪ್ರತೀಕಾರದ ಹಿಂಸೆಗೆ ಮಾನವೀಯತೆಯಿಂದ ಅರಳಿದ ಕಮಲಪುಷ್ಪವೂ ಕಮರಿಹೋಗುತ್ತದೆ.
ಗೆದ್ದು ಸೋತ ರೋಮ್
ಜಗತ್ತಿನ ಬಹುದೊಡ್ಡ ವಿಜ್ಞಾನಿಯಾಗಿದ್ದ ಆರ್ಕಿಮಿಡೀಸ್ ಗ್ರೀಸ್ ದೇಶದವನು. ಆತ ಸಂಶೋಧನೆಗೆ ತೊಡಗಿದರೆ ಆತನಿಗೆ ಆಹಾರ-ನಿದ್ದೆಯ ಪರಿವೆಯೇ ಇರುತ್ತಿರಲಿಲ್ಲ. ಗ್ರೀಕರಿಗೆ ಆತನ ಬಗ್ಗೆ ಗರ್ವ ಇದ್ದರೆ ಶತ್ರುರಾಷ್ಟ್ರದವರಿಗೆ ಆತನ ಬಗ್ಗೆ ಗೌರವ ಇತ್ತು. ಕ್ರಿ.ಪೂ. 215ರಲ್ಲಿ ರೋಮನ್ನರು ಗ್ರೀಸ್ನ ಮೇಲೆ ಆಕ್ರಮಣ ಮಾಡಿದಾಗ ಆರ್ಕಿಮಿಡೀಸ್ ನಮ್ಮೊಂದಿಗಿದ್ದಾನೆಂಬ ಅಹಂಕಾರದಿಂದ ಗ್ರೀಕ್ ಸೈನಿಕರು ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ರೋಮನ್ನರು ಗೆದ್ದರು. ಗೆದ್ದ ರೋಮನ್ ಅಧಿಕಾರಿಗೆ ಆರ್ಕಿಮಿಡೀಸನ ಮೇಲೆ ಅಭಿಮಾನವಿತ್ತು. ಆಸ್ಥಾನದಲ್ಲಿ ಸೈನಿಕರ ಮುಂದೆ ಅವನನ್ನು ಹೊಗಳುತ್ತಿದ್ದ. ಅವನನ್ನು ಕಾಣಬೇಕೆಂಬ ಹಂಬಲದಿಂದ ದೂತರನ್ನು ಕಳಿಸಿದ. ಗ್ರೀಕರ ಸೋಲಿನ ದುಃಖದಿಂದಲೂ, ವೃದ್ಧಾಪ್ಯದಿಂದಲೂ ಬಳಲಿದ್ದರೂ ಆರ್ಕಿಮಿಡೀಸ್ ವಿಜ್ಞಾನದ ಸಮಸ್ಯೆಗಳಲ್ಲಿ ತಲ್ಲೀನನಾಗಿದ್ದ. ದೂತರು ಬಂದು ರೋಮ್ನ ಅಧಿಕಾರಿಯ ಅಪ್ಪಣೆಯನ್ನು ಹೇಳಿದರು. ಅವರನ್ನು ತಲೆಯೆತ್ತಿ ಕೂಡ ನೋಡದ ಆರ್ಕಿಮಿಡೀಸ್, “ಹೋಗಯ್ಯಾ ಹೋಗು, ನನಗೆ ನನ್ನದೇ ಕೆಲಸವಿದೆ” ಎಂದು ಹೇಳಿದ. ಸಿಟ್ಟುಗೊಂಡ ದೂತನೊಬ್ಬನು ಕತ್ತಿ ಬೀಸಿ ಅವನ ತಲೆಯನ್ನುರುಳಿಸಿದ. ಸುದ್ದಿ ತಿಳಿದ ರೋಮ್ ಅಧಿಕಾರಿಗೆ ಸೈನಿಕನ ಮೇಲೆ ರೋಷವೂ, ಆರ್ಕಿಮಿಡೀಸನ ಬಗೆಗೆ ದುಃಖವೂ ಒತ್ತರಿಸಿ ಬಂತು. ಪಶ್ಚಾತ್ತಾಪದಿಂದ ದಗ್ಧನಾಗಿ ಕಣ್ಣೀರಿಟ್ಟ. ಅವನ ಗೋರಿಯ ಮೇಲೆ ಸ್ಮಾರಕ ನಿರ್ಮಿಸಿದ. ಗ್ರೀಸನ್ನು ಜಯಿಸಿದರೂ ರೋಮನ್ನರು ಸೋತೆವೆಂದೇ ಶ್ರದ್ಧಾಂಜಲಿ ಅರ್ಪಿಸಿದರು. ಒಬ್ಬ ದೂತನ ಅವಿವೇಕಕ್ಕೆ, ಯುದ್ಧೋನ್ಮಾದಕ್ಕೆ ಬಲಿಯಾದ ಆ ವಿಜ್ಞಾನಿಯ ಸಂಶೋಧನೆಗಳನ್ನೆಲ್ಲ ಸಂಗ್ರಹಿಸಿ ಅದನ್ನು ಪ್ರಕಟಿಸಿ, ಆರ್ಕಿಮಿಡೀಸನ ಹೆಸರು ವಿಜ್ಞಾನಕ್ಷೇತ್ರದಲ್ಲಿ ಶಾಶ್ವತವಾಗುವಂತೆ ಮಾಡಿದರು.
ಕೀಲಿ ಕೊಟ್ಟ ಬೊಂಬೆಗಳು
ಹೀಗೆ ಹಿಂಸೆಗೆ ಹೃದಯವೆಂಬುದೇ ಇಲ್ಲ. ಅದಕ್ಕೆ ದುರ್ಜನರು, ಸಜ್ಜನರು ಎಂಬ ಭೇದಭಾವವೂ ಇಲ್ಲ. ಹಲವು ಬಾರಿ ಹಿಂಸೆ ಮಾಡುವವರಿಗೆ ನಾವು ಯಾಕಾಗಿ ಕೊಲೆ ಮಾಡುತ್ತೇವೆ ಎಂಬುದೇ ತಿಳಿದಿರುವುದಿಲ್ಲ. 2008 ನವೆಂಬರ್ 26ರಿಂದ 29ರ ತನಕ 4 ದಿನ ಸತತವಾಗಿ 10 ಜನ ಪಾಕಿಸ್ತಾನೀ ಭಯೋತ್ಪಾದಕರು ಮುಂಬಯಿ ನಗರದ ಮೇಲೆ ಆಕ್ರಮಣ ಮಾಡಿದರು. ಸುಮಾರು 166 ಅಮಾಯಕರನ್ನು ಕೊಂದರು. ‘ನೀವು ಯಾಕಾಗಿ ಕೊಲ್ಲುತ್ತೀರಿ, ನಿಮ್ಮ ಉದ್ದೇಶವೇನು, ಬೇಡಿಕೆಯೇನು?’ ಎಂದು ಭಯೋತ್ಪಾದಕರನ್ನು ಕೇಳಿದರೆ ಇದಕ್ಕೆ ಅವರಿಂದ ಸ್ಪಷ್ಟ ಉತ್ತರವೇ ಬರಲಿಲ್ಲ. ಇದರರ್ಥ ತಾವು ಯಾಕಾಗಿ ಹಿಂಸೆ ಮಾಡುತ್ತಿದ್ದೇವೆ ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಅವರು ಪಾಕಿಸ್ತಾನದಿಂದ ಕೀಲಿ ಕೊಟ್ಟು ಕಳುಹಿಸಿದ ಬೊಂಬೆಗಳಂತೆ ವರ್ತಿಸಿದರು.
ಹಿಂಸೆಗೆ ಎರಡು ಮುಖ. ಒಂದು ಕ್ರೌರ್ಯ; ಇನ್ನೊಂದು ಪೌರುಷ. ಕಸಬ್ನಂತಹ 10 ಮಂದಿ ಭಯೋತ್ಪಾದಕರು ನೂರಾರು ಮುಗ್ಧರನ್ನು ವಿನಾಕಾರಣ ಗುಂಡಿಟ್ಟು ಕೊಂದದ್ದು ಕ್ರೌರ್ಯವಾದರೆ, ಕಸಬ್ನನ್ನು ಹೆಡೆಮುರಿಕಟ್ಟಿ ಬಂಧಿಸಿ ತಾನು ಹುತಾತ್ಮನಾದ ಅಸಿಸ್ಟೆಂಟ್ ಸಬ್-ಇನ್ಸ್ಪೆಕ್ಟರ್ ತುಕಾರಾಮ ಓಂಬ್ಳೆಯದ್ದು ಪೌರುಷ. ಎರಡರಲ್ಲೂ ಹಿಂಸೆಯಿದ್ದರೂ ಕಸಬ್ ಕೃತ್ಯದಲ್ಲಿ ಪರಪೀಡನೆಯಿದ್ದರೆ, ಓಂಬ್ಳೆಯ ಕೃತ್ಯದಲ್ಲಿ ‘ಬಹುಜನ ಹಿತಾಯ, ಬಹುಜನ ಸುಖಾಯ’ ತತ್ತ್ವ ಇದೆ.
ಪ್ರಾಚೀನ ಕಾಲದಿಂದಲೂ ಶಾಂತಿಯನ್ನು ಬೋಧಿಸಿದ ದೇಶ ನಮ್ಮದು. ಬುದ್ಧ, ಮಹಾವೀರ, ಹರ್ಷವರ್ಧನ, ಗಾಂಧಿ ಜನಿಸಿದ ನಾಡಿದು. ಇವರೆಲ್ಲರೂ ಹಿಂಸೆಯ ಶಸ್ತ್ರದ ಎದುರು ಶಾಂತಿಯ ಮಂತ್ರವನ್ನು ಜಪಿಸಿದರು. ಇವರು ಇತರರಿಗೆ ಕೇವಲ ಅಹಿಂಸೆಯನ್ನು ಬೋಧಿಸಿದ್ದು ಮಾತ್ರವಲ್ಲ. ಸ್ವತಃ ತಮ್ಮ ಜೀವನದಲ್ಲಿ ಅಹಿಂಸೆಯಿಂದ ಶಾಂತಿಯನ್ನು ಗಳಿಸಿ ಮಹಾಪುರುಷರೆನಿಸಿಕೊಂಡರು.
ಅರಿಭಯಂಕರರು
ಒಮ್ಮೆ ‘ನೀನು ಎಷ್ಟು ಮಂದಿ ವೈರಿಗಳನ್ನು ಸಾಯಿಸಬಲ್ಲೆ?’ ಎಂದು ಸ್ನೇಹಿತನೊಬ್ಬ ಹಿಟ್ಲರ್ನನ್ನು ಕೇಳಿದನಂತೆ.
‘ನಿನ್ನನ್ನು ಸೇರಿಸಿ, ಜಗತ್ತಿನಲ್ಲಿರುವ ನನ್ನ ಎಲ್ಲ ವೈರಿಗಳನ್ನು ಸಾಯಿಸಬಲ್ಲೆ’ ಎಂದನಂತೆ ಹಿಟ್ಲರ್. ‘ಅಲ್ಲಯ್ಯಾ, ನಾನು ನಿನ್ನ ಪರಮ ಸ್ನೇಹಿತ. ನನ್ನನ್ನೂ ಆ ವೈರಿಗಳ ಪಟ್ಟಿಯಲ್ಲಿ ಸೇರಿಸಿಬಿಟ್ಟೆಯಾ?’ ಎಂದು ಕೇಳಿದನಂತೆ ಸ್ನೇಹಿತ. ‘ಸರಿ, ಹೇಗೆ ಸಾಯಿಸುತ್ತೀಯಾ?’ ಎಂದು ಸ್ನೇಹಿತ ಕೇಳಿದ್ದಕ್ಕೆ, ಹಿಟ್ಲರ್ ‘ಸಾಯಿಸುವುದು ಸುಲಭ. ಸಾಯಿಸದೇ ಬಿಡುವುದು ಕಷ್ಟ. ಎಲ್ಲರನ್ನೂ ಗುಂಡಿಟ್ಟು ಸಾಯಿಸಿಬಿಡ್ತೀನಿ’ ಎಂದನಂತೆ. ಇದು ಹಿಟ್ಲರ್ನ ಮಾತಾಯಿತು.
‘ನೀವು ನಿಮ್ಮ ಎಷ್ಟು ಮಂದಿ ವೈರಿಗಳನ್ನು ಸಾಯಿಸಬಲ್ಲಿರಿ?’ ಎಂಬ ಪ್ರಶ್ನೆಯನ್ನು ಬುದ್ಧನಿಗೆ ಯಾರೋ ಕೇಳಿದರಂತೆ. ಅದಕ್ಕೆ ಬುದ್ಧ, ‘ನಾನು ನನ್ನ ಎಲ್ಲ ವೈರಿಗಳನ್ನೂ ಸಾಯಿಸಬಲ್ಲೆ’ ಎಂದನಂತೆ. ಆ ಪ್ರಶ್ನೆಯನ್ನು ಕೇಳಿದವರಿಗೆ ಅಚ್ಚರಿ. ಅವರು ಬುದ್ಧನಿಂದ ಆ ಉತ್ತರ ನಿರೀಕ್ಷಿಸಿರಲಿಲ್ಲ.
‘ಅದು ಸರಿ, ಹೇಗೆ ಸಾಯಿಸುತ್ತೀರಾ, ಹೇಳಿ’ ಎಂದು ಕೇಳಿದ್ದಕ್ಕೆ ಬುದ್ಧ ಹೇಳಿದನಂತೆ – “ದ್ವೇಷ, ವೈರತ್ವದ ಯೋಚನೆಗಳನ್ನು ಮನಸ್ಸಿನಲ್ಲಿ ಸಾಯಿಸಿದ ಕ್ಷಣದಲ್ಲೇ ನನ್ನೆಲ್ಲ ವೈರಿಗಳು ಸತ್ತಂತೆ ತಾನೆ? ನನ್ನ ಯೋಚನೆಯಲ್ಲಿ ಅವರಿದ್ದರೆ ಸಾಯಿಸಲೇಬೇಕು. ಇಲ್ಲದಿದ್ದರೆ ಆ ಪ್ರಶ್ನೆಯೇ ಉದ್ಧವಿಸುವುದಿಲ್ಲ.”
ಹಿಟ್ಲರ್ ಹಾಗೆ, ಬುದ್ಧ ಹೀಗೆ. ಇದುವೇ ಹಿಂಸೆಗೂ ಅಹಿಂಸೆಗೂ ಇರುವ ವ್ಯತ್ಯಾಸ.
ಮಹಾನ್ ಶಿಕ್ಷಣತಜ್ಞ, ಈ ದೇಶದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಷ್ಯಾದ ಸರ್ವಾಧಿಕಾರಿ ಮಾರ್ಷಲ್ ಸ್ಟಾಲಿನ್ಗೆ ಒಂದು ಮಾತು ಹೇಳಿದ್ದರು: “ನಮ್ಮ ದೇಶದಲ್ಲಿ ಒಬ್ಬ ಚಕ್ರವರ್ತಿ ಇದ್ದ. ಆತ ರಕ್ತಪಾತದಿಂದ ಕೂಡಿದ ಭಾರಿ ಯುದ್ಧದ ಮೂಲಕ ಸಾಮ್ರಾಜ್ಯವೊಂದನ್ನು ಗೆದ್ದ ನಂತರ ವಿರಕ್ತನಾಗಿ ಯುದ್ಧ ಮಾರ್ಗವನ್ನು ಬಿಟ್ಟು ಸಂನ್ಯಾಸಿಯಾದ; ಅಹಿಂಸೆಯ ಮಹಾನ್ ಬೋಧಕನಾದ. ಅಂತೆಯೇ ಶಕ್ತಿ, ಸಾಹಸಗಳಿಂದ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಏರಿರುವ ನೀವು ಮುಂದೆ ಏನಾಗುತ್ತೀರೋ ಯಾರು ಬಲ್ಲರು?”
ಪ್ರಸಿದ್ಧ ಇತಿಹಾಸತಜ್ಞ ಆರ್ನಾಲ್ಡ್ ಟಾಯ್ನಬಿ ಹೇಳುತ್ತಾರೆ, “ಮಾನವ ಇತಿಹಾಸದ ಈ ಅತ್ಯಂತ ಅಪಾಯಕರ ಸಂದರ್ಭದಲ್ಲಿ ಚಕ್ರವರ್ತಿ ಅಶೋಕ ಮತ್ತು ಗಾಂಧಿಯವರ ಅಹಿಂಸಾತತ್ತ್ವ ಹಾಗೂ ಶ್ರೀರಾಮಕೃಷ್ಣರು ತಮ್ಮ ಜೀವನದಲ್ಲಿ ಪ್ರಮಾಣೀಕರಿಸುವ ಧರ್ಮಸಮನ್ವಯ ಭಾವ – ಈ ಭಾರತೀಯ ಮಾರ್ಗವೊಂದೇ ಮಾನವಕೋಟಿಯನ್ನು ಉದ್ಧರಿಸುವಂತಹದ್ದು. ಮಾನವಜನಾಂಗವು ಒಂದು ಕುಟುಂಬವಾಗಿ ಬಾಳಲು ಅವಶ್ಯವಾದ ಮನೋಭಾವವನ್ನೂ, ಸ್ಫೂರ್ತಿಯನ್ನೂ ಈ ಮಾರ್ಗವು ನೀಡುತ್ತದೆ.”
ಶಾಂತಿ, ಅಹಿಂಸೆಯಲ್ಲಿ ಬಹಳಷ್ಟು ಶಕ್ತಿ ಇದೆ. ಇಂತಹ ಅಹಿಂಸೆ, ಸಾತ್ತ್ವಿಕತೆಯ ಪ್ರಭಾವದಿಂದ ದುರ್ಜನರು ಪರಿವರ್ತನೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಸಮಾಜದಲ್ಲಿ ಕಂಡುಬರುತ್ತವೆ.
ಬಂದೂಕಿನ ಮೊನೆಯಾಚೆ
ಕಳೆದ ಶತಮಾನದಲ್ಲಿ ಅಬ್ದುಲ್ ಗಫಾರ್ ಖಾನ್ ಎಂಬ ಹೆಸರಿನ ಪಠಾಣರ ನಾಯಕರಿದ್ದರು. ಕೈಬರ್ ಕಣಿವೆಯಾಚಿನ ಪ್ರದೇಶದಲ್ಲಿದ್ದ ಪಠಾಣರು ಪ್ರಬಲ ಹೋರಾಟಗಾರರು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕಿತ್ತರೆ ಮಾತ್ರ ಪ್ರತೀಕಾರ ಎನ್ನುವುದು ಅವರ ನಂಬಿಕೆ. ಹಿಂಸಾಚಾರಕ್ಕೆ ಹಿಂದೆ ಮುಂದೆ ನೋಡದ ಜನ. ಸದಾಕಾಲ ಅವರ ಕೈಗಳಲ್ಲಿ ಬಂದೂಕುಗಳಿರುತ್ತಿದ್ದವು. ಗಾಂಧಿಯವರು ಒಮ್ಮೆ ಪಠಾಣರನ್ನು ಭೇಟಿಯಾಗಲು ಹೊರಟರು. ಗಾಂಧಿಯವರನ್ನು, ‘ತಾವು ಅಹಿಂಸಾವ್ರತಿಗಳು, ಪಠಾಣರು ಹುಟ್ಟು ಹೋರಾಟಗಾರರು. ಹೋರಾಟ ಬಿಟ್ಟು ಮತ್ತೇನೂ ಗೊತ್ತಿಲ್ಲದವರು. ಅಲ್ಲಿಗೆ ಹೋಗುವುದು ನಿಷ್ಪ್ರಯೋಜಕ’ ಎಂದು ತಡೆಯಲಾಯಿತು. ಗಾಂಧಿಯವರು “ನಾನೂ ಹೋರಾಟಗಾರನೆ! ಆದರೆ ಅವರಿಗೆ ಹಿಂಸೆಯಿಲ್ಲದೆ ಹೋರಾಡುವುದನ್ನು, ಹೆದರಿಕೆಯಿಲ್ಲದೆ ಬದುಕುವುದನ್ನು ತೋರಿಸಬೇಕೆಂಬ ಆಸೆ ನನಗೆ!” ಎನ್ನುತ್ತ ಹೊರಟೇಬಿಟ್ಟರು.
ಗಾಂಧಿಯವರು ಆಫಘನಿಸ್ತಾನ ತಲಪಿದಾಗ ಅವರನ್ನು ಸ್ವಾಗತಿಸಿದವರು ಪಠಾಣರ ಗುಂಪಿನ ನಾಯಕರಾಗಿದ್ದ ಅಬ್ದುಲ್ ಗಫಾರ್ ಖಾನ್ರವರು. ಆಜಾನುಬಾಹುವಾದ ಗಫಾರ್ ಖಾನ್ ಕೈಯಲ್ಲೂ, ಅವರ ಹಿಂಬಾಲಕರ ಕೈಯಲ್ಲೂ ಬಂದೂಕುಗಳಿದ್ದವು. ಅವರೆಲ್ಲ ತುಂಡುಬಟ್ಟೆಯುಟ್ಟು ಬರಿಗೈಯಲ್ಲಿ ಬಂದಿದ್ದ ಗಾಂಧಿಯವರನ್ನು ಅನುಮಾನದಿಂದಲೇ ನೋಡಿದರು.
ಗಾಂಧಿಯವರು ಅವರನ್ನು ಮೃದುವಾಗಿ, “ನಿಮಗೆ ಹೆದರಿಕೆಯಾಯಿತೇ?” ಎಂದು ಕೇಳಿದರು. ಗಫಾರ್ ಖಾನರು “ನಮಗೇತಕ್ಕೆ ಹೆದರಿಕೆ?” ಎಂದರು. ಗಾಂಧಿಯವರು “ಹಾಗಾದರೆ ಕೈಯಲ್ಲಿ ಬಂದೂಕು ಯಾಕೆ ಹಿಡಿದಿದ್ದೀರಿ?” ಎಂದರು. “ನನ್ನನ್ನು ನೋಡಿ, ನನಗೆ ಯಾವ ಹೆದರಿಕೆಯೂ ಇಲ್ಲ. ನನ್ನ ಬಳಿ ಬಂದೂಕಿಲ್ಲ. ನನ್ನದು ಅಹಿಂಸೆಯ ಅಸ್ತ್ರ” ಎಂದರು. ಅವರ ಮೇಲೆ ಗಾಂಧಿಯವರ ಮಾತು ಮೋಡಿ ಮಾಡಿತು. ಗಫಾರ್ ಅವರು ತಮ್ಮ ಕೈಯಲ್ಲಿದ್ದ ಬಂದೂಕನ್ನು ಕೆಳಗೆ ಎಸೆದರು. ಮುಂದೆಂದೂ ಅವರು ಬಂದೂಕು ಹಿಡಿಯಲೇ ಇಲ್ಲ. ಗಾಂಧಿಯವರ ಅನುಯಾಯಿಯಾದರು. ಸ್ವಾತಂತ್ರ್ಯಸಂಗ್ರಾಮದಲ್ಲಿ ಭಾಗವಹಿಸತೊಡಗಿದರು. ಅಹಿಂಸಾಮಾರ್ಗವನ್ನು ಅನುಸರಿಸಿದರು. ಮುಂದೆ ಅವರು ‘ಗಡಿನಾಡ ಗಾಂಧಿ’ ಎಂದೇ ಖ್ಯಾತರಾದರು.
ಮಾನಸಿಕತಜ್ಞರ ಪ್ರಕಾರ ಹಿಂಸೆಯು ಮಾನವನಲ್ಲಿ ಸಹಜವಾಗಿದೆ. ಅಹಿಂಸೆಯೊಂದಿಗೆ ಹಿಂಸೆ ಕೂಡ ಆತನಲ್ಲಿ ಅಡಗಿಕೊಂಡಿದೆ. ಸಮಯಾವಕಾಶ ಸಿಕ್ಕಿದಾಗ ಈ ಹಿಂಸೆ ಪುಟಿದೇಳುತ್ತದೆ. ಆದ್ದರಿಂದಲೇ ಯುಗಯುಗಗಳಿಂದಲೂ ಮನುಷ್ಯ ಹಿಂಸಕನಾಗಿಯೇ ಉಳಿದಿದ್ದಾನೆ. ಜಗತ್ತಿನ ಎಲ್ಲ ಧರ್ಮಗಳೂ ಮಾನವನನ್ನು ಸಾಧುವನ್ನಾಗಿ ಮಾಡಲು ಪ್ರಯತ್ನಿಸಿ ಸೋತಿವೆ. ಈ ಜಗತ್ತಿನಲ್ಲಿ ಹಲವಾರು ಶಾಂತಿದೂತರು ಆಗಿಹೋಗಿದ್ದಾರೆ. ಬುದ್ಧ, ಮಹಾವೀರ ಎಲ್ಲರೂ ಶಾಂತಿಯ, ಅಹಿಂಸೆಯ, ಸತ್ಯದ, ಪ್ರೇಮದ ಸಂದೇಶ ಸಾರಿದರು. ಆದರೆ ಜಗತ್ತಿನಲ್ಲಿ ಅಸತ್ಯ, ಹಿಂಸೆ, ಅಧ ರ್ಮ, ಅನ್ಯಾಯ, ದ್ವೇಷ ಯಾವುದೂ ಅಳಿಯಲಿಲ್ಲ. ಯಾಕೆಂದರೆ ಮನುಷ್ಯನ ಅಂತರಂಗದಲ್ಲೇ ಹಿಂಸೆ ಹುದುಗಿದೆ. ಹಿಂಸೆ-ಅಹಿಂಸೆ ಒಂದೇ ತಾಯಿಯ ಮಕ್ಕಳು. ಒಂದೇ ನಾಣ್ಯದ ಎರಡು ಮುಖಗಳು.
ದಯಾಹೀನ ಸೃಷ್ಟಿ
‘ಜೀವೋ ಜೀವಸ್ಯ ಜೀವನಂ’ ಎನ್ನುತ್ತದೆ ಒಂದು ಸಂಸ್ಕೃತೋಕ್ತಿ. ಒಂದು ಜೀವವು ಇನ್ನೊಂದು ಜೀವಕ್ಕೆ ಜೀವನವಾಗುತ್ತದೆ ಎಂದು ಇದರ ಅರ್ಥ. ಚಿಕ್ಕಮೀನು ದೊಡ್ಡಮೀನಿನ ಆಹಾರ. ಒಂದು ಇನ್ನೊಂದನ್ನು ತಿಂದೇ ಬದುಕಬೇಕಲ್ಲವೇ! ಬಹುಶಃ ಪ್ರಕೃತಿಯಲ್ಲಿ ಒಂದನ್ನೊಂದು ಕಬಳಿಸಿ ಬದುಕುತ್ತಿರುವುದೇ ಸಹಜಧರ್ಮವಾಗಿದೆ. ಈ ಹಿನ್ನೆಲೆಯಲ್ಲಿ ಹಿಂಸೆ ಜೀವನದ ಸಹಜಕ್ರಿಯೆ ಎನಿಸುತ್ತದೆ.
ತಿಮ್ಮಗುರು ತಮ್ಮ ಕಗ್ಗವೊಂದರಲ್ಲಿ ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ –
ಒಲ್ಲೆನೆನುವರದಾರ್ ಅಹಿಂಸೆತತ್ತ್ವದ ಸೊಬಗ? |
ಸಲ್ಲಿಸುವೆನಾ ವ್ರತವನೆನಲೊಂದು ತೊಡಕು ||
ಹುಲ್ಲೆಯನು ತಿನುವ
ಹುಲಿಯೊಣಹುಲ್ಲನುಣಲಹುದೆ? |
ಎಲ್ಲಿ ಸೃಷ್ಟಿಯಲಿ ದಯೆ? – ಮಂಕುತಿಮ್ಮ ||
(ಕಗ್ಗ – 244)
ಒಂದು ಜೀವಿ ಇನ್ನೊಂದು ಜೀವಿಯನ್ನು ಹಿಂಸಿಸಬಾರದು. ‘ತನ್ನಂತೆ ಇತರರ ಬಗೆದೊಡೆ ಕೈಲಾಸ ಬಿನ್ನಣವಕ್ಕು ಸರ್ವಜ್ಞ’ ಎಂದಂತೆ, ನನಗೆ ಹೇಗೆ ನೋವುಂಟಾಗುತ್ತದೆಯೋ, ಆ ಇನ್ನೊಂದು ಜೀವಿಗೂ ಹಾಗೆಯೇ ಅಲ್ಲವೇ? – ಎಂಬ ತತ್ತ್ವವೇ ಅಹಿಂಸಾತತ್ತ್ವ. ಇದನ್ನು ಧರ್ಮಗುರುಗಳೆಲ್ಲರೂ ಪ್ರತಿಪಾದಿಸುತ್ತ ಬಂದಿದ್ದಾರೆ.
ಆದರೆ ಈ ತತ್ತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವೆನೆಂದು ಹೊರಟರೆ ಒಂದು ಅಡಚಣೆ ನಮ್ಮ ಮನಸ್ಸಿನಲ್ಲುಂಟಾಗುತ್ತದೆ. ಈ ಸೃಷ್ಟಿಯಲ್ಲಿರುವ ಒಂದು ಹುಲಿ ಜಿಂಕೆಯನ್ನು ಬೇಟೆಯಾಡಿ ತಿಂದು ತೇಗುತ್ತದೆ. ದೇವರು ಅದಕ್ಕೆ ಮಾಡಿಟ್ಟ ಆಹಾರವದು. ಇಲ್ಲ, ನೀನು ಜಿಂಕೆಯನ್ನು ಕೊಂದು ತಿನ್ನಬೇಡ. ಅದು ಪ್ರಾಣಿಹಿಂಸೆ ಆಗುತ್ತದೆ. ಇನ್ನುಮೇಲೆ ಕೇವಲ ಒಣಹುಲ್ಲನ್ನು ತಿನ್ನು. ಅದರಿಂದ ಇನ್ನೊಂದು ಜೀವಿಗೆ ಹಿಂಸೆಯಾಗುವುದಿಲ್ಲವೆಂದು ಹುಲಿಗೆ ಬೋಧಿಸಲಾಗುತ್ತದೇನು? ಒಂದು ಜೀವಿ ಇನ್ನೊಂದು ಜೀವಿಯನ್ನು ಭಕ್ಷಿಸಿ ಬದುಕುವುದೇ ಸೃಷ್ಟಿಕರ್ತನ ಉದ್ದೇಶವಾಗಿದ್ದಲ್ಲಿ, ಈ ಸೃಷ್ಟಿಯಲ್ಲಿ ದಯೆಯೆಂಬುದು ಎಲ್ಲಿದೆ ಎಂದು ಹುಡುಕಿ ನೋಡಬೇಕು.
ಜಗತ್ತಿನಲ್ಲಿ ಇತರರನ್ನು ಹಿಂಸಿಸುವವರೂ ಇದ್ದಾರೆ, ತಮ್ಮನ್ನು ತಾವೇ ಹಿಂಸಿಸುವವರೂ ಇದ್ದಾರೆ. ತಮ್ಮನ್ನು ತಾವೇ ಹಿಂಸಿಸಿಕೊಳ್ಳುವವರನ್ನು ‘ಮ್ಯಾಸೋಚಿಸ್ಟ್ಸ್’ ಎಂದು ಕರೆಯುತ್ತಾರೆ. ಬೇರೆಯವರಿಗೆ ಹಿಂಸೆ ನೀಡಿ ಸಂತೋಷಪಡುವವರನ್ನು ‘ಸ್ಯಾಡಿಸ್ಟ್ಸ್’ ಎನ್ನುತ್ತಾರೆ. ಜಗತ್ತಿನಲ್ಲಿ ಸ್ಯಾಡಿಸ್ಟರೇ ಜಾಸ್ತಿ. ಹಿಂಸೆ ಎಂದರೆ ಇನ್ನೊಬ್ಬರ ದುಃಖದಲ್ಲಿ ಸುಖವನ್ನು ಅನುಭವಿಸುವ ಪ್ರವೃತ್ತಿ. ‘ಪರೋಪಕಾರಃ ಪುಣ್ಯಾಯ, ಪಾಪಾಯ ಪರಪೀಡನಮ್||’ ಎಂಬುದಾಗಿ ಸುಭಾಷಿತವೊಂದು ಹೇಳುತ್ತದೆ. ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ.
ಇಲ್ಲಿ ಹಾಫಿಸ್ ಎಂಬ ಸೂಫಿ ಸಂತನೊಬ್ಬನ ಮಾತುಗಳನ್ನು ಮೆಲುಕುಹಾಕಬಹುದು. “ನೀನು ಮದ್ಯ ಕುಡಿ; ಪವಿತ್ರ ಕುರಾನನ್ನು ಸುಟ್ಟುಹಾಕು. ಕಾಬಾಕ್ಕೆ ಬೆಂಕಿ ಹಚ್ಚು – ಇವೆಲ್ಲ ಅಪರಾಧಗಳನ್ನು ದೇವರು ಕ್ಷಮಿಸುತ್ತಾನೆ. ಆದರೆ ಮಾನವ ಮಾನವನಿಗೆ ಹಿಂಸೆ ಕೊಟ್ಟರೆ ಆ ಅಪರಾಧಕ್ಕೆ ಕ್ಷಮೆ ಇಲ್ಲ.”
ಸಮರ್ಥ ರಾಮದಾಸರು ಈ ರೀತಿ ಹೇಳಿದ್ದಾರೆ: “ನಮ್ಮನ್ನು ನಾವೇ ಚಿವುಟಿಕೊಂಡಾಗ ಸಹ ಪ್ರಾಣವು ಕಸಿವಿಸಿಗೊಳ್ಳುತ್ತದೆ. ಅದೇ ರೀತಿ ಪರರಿಗೂ ಕೂಡ ಎಂದು ನಾವು ಅರಿತಿರಬೇಕು.” ಆದ್ದರಿಂದಲೇ ಅವರು ‘ದಾಸಬೋಧ’ದಲ್ಲಿ ಮೂರ್ಖರ ಲಕ್ಷಣಗಳನ್ನು ವರ್ಣಿಸುವಾಗ ಸ್ಪಷ್ಟವಾಗಿ ಈ ರೀತಿ ಹೇಳಿದ್ದಾರೆ-
ಪರಪೀಡನೆಯಲ್ಲಿ ಸುಖವನ್ನು ಕಾಣುವವನು,
ಪರರ ಸಂತಸದಲ್ಲಿ ಸಂಕಟ ಪಡುವವನು,
ಕಳೆದುಹೋದ ವಸ್ತುಗಳನ್ನು ಕುರಿತು ದುಃಖಿಸುವವನು ಮೂರ್ಖನೇ ಸೈ|
ಶಸ್ತ್ರಸನ್ನದ್ಧತೆಯ ಅಗತ್ಯ
ಅಹಿಂಸೆಯು ಪರಾಕಾಷ್ಠೆಗೆ ತಲಪಿದಾಗ ಅಹಿಂಸಕರ ಮೇಲೆ ಹಿಂಸಕರಿಂದ ಹಿಂಸೆ ನಡೆಯುವುದು ಸಾಮಾಜಿಕ ಸತ್ಯ. ನಮ್ಮ ದೇಶಕ್ಕಂತೂ ಈ ಮಾತು ನೂರಕ್ಕೆ ನೂರು ಸತ್ಯ. ಬುದ್ಧನಂತಹ ಮಹಾಪುರುಷರ ಪ್ರಭಾವದಿಂದ ಈ ದೇಶದಲ್ಲಿ ನೂರಾರು ವರ್ಷ ಶಾಂತಿ ನೆಲಸಿತು. ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಯುದ್ಧವನ್ನು ತೊರೆದರು. ಅನ್ಯಾಯವಾದಾಗ ಅದನ್ನು ಎದುರಿಸಬೇಕೆನ್ನುವುದನ್ನೇ ಮರೆತರು. ಪರಿಣಾಮವಾಗಿ ಈ ದೇಶದ ಮೇಲೆ ವಿದೇಶೀಯರಿಂದ ನಿರಂತರ ದಾಳಿ, ದಬ್ಬಾಳಿಕೆ, ದೌರ್ಜನ್ಯ, ಹಿಂಸೆ ನಡೆಯಿತು. ಕ್ರಿ.ಶ. 1193ರಲ್ಲಿ ಜಗತ್ತಿನ ಅತಿ ದೊಡ್ಡ ವಿಶ್ವವಿದ್ಯಾನಿಲಯವಾದ ನಲಂದಾದ ಮೇಲೆ ಭಕ್ತಿಯಾರ್ ಖಿಲ್ಜಿಯ ಬೆರಳೆಣಿಕೆಯ ಮತಾಂಧ ಸೈನಿಕರು ದಾಳಿ ಮಾಡಿ ಲಕ್ಷಾಂತರ ಅಮೂಲ್ಯ ಗ್ರಂಥಗಳನ್ನು ಸುಟ್ಟುಹಾಕಿದರು. ಈ ದೃಶ್ಯಕ್ಕೆ ಅಲ್ಲಿದ್ದ ಸಾವಿರಾರು ಅಧ್ಯಾಪಕರು, ವಿದ್ಯಾರ್ಥಿಗಳು ಮೂಕಪ್ರೇಕ್ಷಕರಾದರು. ಅವರೆಲ್ಲರೂ ಸೇರಿ ಒಬ್ಬೊಬ್ಬರು ಒಂದೊಂದು ಕಲ್ಲನ್ನು ಎಸೆದಿದ್ದರೂ ಖಿಲ್ಜಿಯ ಸೈನಿಕರು ಕಾಲಿಗೆ ಬುದ್ಧಿಹೇಳುತ್ತಿದ್ದರು. ಆದರೆ ದುರದೃಷ್ಟದಿಂದ ಹಾಗೆ ಆಗಲಿಲ್ಲ. ಏಕೆಂದರೆ ಅಹಿಂಸೆ ನಮ್ಮ ಉಸಿರಾಗಿತ್ತು. ಶಾಂತಿ ನಮ್ಮ ಮಂತ್ರವಾಗಿತ್ತು. ಮತಾಂಧರು ಹಿಂಸೆಯಿಂದಲೇ ಅಹಿಂಸೆಯ ಉಸಿರುಗಟ್ಟಿಸಿದರು.
ಅಹಿಂಸೆಯೇ ಹಿಂಸೆಗೆ ಪ್ರಚೋದನೆ ನೀಡುತ್ತದೆ. ಅಹಿಂಸೆ ನಮ್ಮ ಶಕ್ತಿಯಾಗಲಿಲ್ಲ. ಬದಲಿಗೆ ದೌರ್ಬಲ್ಯವಾಯಿತು. ಅಹಿಂಸೆ ಮನುಷ್ಯನ ದೌರ್ಬಲ್ಯವಾದಾಗ ಆತನ ಮೇಲೆ ಹಿಂಸೆ ದೌರ್ಜನ್ಯ ನಡೆಸುತ್ತದೆ ಎಂಬುದು ಇತಿಹಾಸ ನಮಗೆ ಕಲಿಸಿದ ಪಾಠ.
ನ್ಯೂಜೀಲ್ಯಾಂಡಿನ ಸಮೀಪ ಚಾತಮ್ ಎನ್ನುವ ಪುಟ್ಟ ದ್ವೀಪವೊಂದಿದೆ. ಅಲ್ಲಿ ಸಾವಿರಾರು ವರ್ಷಗಳಿಂದ ಬುಡಕಟ್ಟು ಜನಾಂಗಗಳು ಬಾಳುತ್ತಿದ್ದವು. ಅವರವರಲ್ಲೇ ಆಗಾಗ ಘರ್ಷಣೆಗಳಾಗುತ್ತಿದ್ದವು. ಅನೇಕ ಮಂದಿ ಸಾಯುತ್ತಿದ್ದರು. ಬದುಕಿದವರೆಲ್ಲ ಅಂಗಾಂಗ ಊನವಾಗಿ ನಿಷ್ಪ್ರಯೋಜಕರಾಗಿದ್ದರು. ಹೀಗೆ ತಮ್ಮ ಜನಾಂಗ ನಾಶವಾಗುವುದನ್ನು ತಪ್ಪಿಸಲು ಅವರೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದರು. ಯಾವುದೇ ವಿವಾದವನ್ನು ಶಾಂತಿಯಿಂದ ಸಮಾಲೋಚಿಸಿ ಪರಿಹಾರ ಮಾಡಿಕೊಳ್ಳತಕ್ಕದ್ದು. ಹೊಡೆದಾಡುವುದು ಸಲ್ಲದು. ಇದನ್ನು ಪ್ರತಿಯೊಬ್ಬರೂ ಮಾನ್ಯ ಮಾಡಬೇಕು ಎಂಬ ಠರಾವನ್ನು ಮನ್ನಣೆ ಮಾಡಿದರು.
ಮುಂದೆ ನೂರಾರು ವರ್ಷಗಳ ಕಾಲ ಅಲ್ಲಿ ಯುದ್ಧವೇ ನಡೆಯಲಿಲ್ಲ. ಮೊದಮೊದಲು ಶಸ್ತ್ರಾಸ್ತ್ರಗಳು ಮೂಲೆಗೆ ಬಿದ್ದವು. ಕ್ರಮೇಣ ಅವುಗಳ ಉಪಯೋಗವೇ ಮರೆತುಹೋಯಿತಲ್ಲದೆ, ದೈನಂದಿನ ಜೀವನದಿಂದ ಅವು ಮರೆಯಾಗಿ ಹೋದವು. ಶಾಂತಿಪೂರ್ಣ ಬದುಕಿನ ರುಚಿ ಕಂಡ ಅವರು ಸಾಮರಸ್ಯ, ಅಹಿಂಸೆಯ ಬದುಕನ್ನು ರಕ್ತಗತ ಮಾಡಿಕೊಂಡರು. ಜನಾಂಗದ ಹೆಸರು ಮೋರಿಯೋರಿ. ಕಾಲಕ್ರಮದಲ್ಲಿ ನ್ಯೂಜೀಲ್ಯಾಂಡ್ನ ಮೌರಿ ಬುಡಕಟ್ಟಿನವರಿಗೆ ಆ ಸಮೃದ್ಧ ದ್ವೀಪದ ಬಗ್ಗೆ ತಿಳಿಯಿತು. ದೋಣಿಗಳಲ್ಲಿ ದಂಡುಕಟ್ಟಿ ಅವರ ಮೇಲೇರಿ ಬಂದರು. ಗಾಬರಿಯಾದ ಮೋರಿಯೋರಿಗಳು ಮೌರಿಗಳನ್ನೂ ತಮ್ಮ ದ್ವೀಪದಲ್ಲಿ ಸೇರಿಸಿಕೊಳ್ಳುವ ನಿರ್ಧಾರ ಕೈಗೊಂಡು ಅವರನ್ನು ತಮ್ಮ ಮಣಿಸರ, ಆಹಾರ, ಜೇನುತುಪ್ಪ, ತುಪ್ಪಟಗಳಿಂದ ಸ್ವಾಗತಿಸಿದರು.
ಕ್ರೂರ ಮೌರಿಗಳಿಗೆ ಇದು ಅರ್ಥವಾಗಲೇ ಇಲ್ಲ. ಒಳಬರಲು ಬಿಟ್ಟದ್ದೇ ಮೋರಿಯೋರಿಗಳ ಮಾರಣಹೋಮ ನಡೆಸಿದರು. ಅವರ ಮಕ್ಕಳನ್ನು ಕೊಂದು ಬೇಯಿಸಿ ತಿಂದುಹಾಕಿದರು. ಎಳೆಯರನ್ನು ಜೀತಕ್ಕಿಟ್ಟುಕೊಂಡರು. ಅವರು ಒಪ್ಪದಿದ್ದಾಗ ನಿರ್ದಯವಾಗಿ ಕೊಂದುಹಾಕಿದರು. ಕೆಲವೇ ಸಮಯದಲ್ಲಿ ಮೋರಿಯೋರಿ ಜನಾಂಗವೇ ನಿರ್ಣಾಮವಾಗಿಹೋಯಿತು. ಇದು ನಡೆದದ್ದು ಕೇವಲ ಒಂದೂವರೆ ಶತಮಾನಗಳ ಹಿಂದೆಯಷ್ಟೆ!
ಟಿಬೆಟ್ನಲ್ಲೂ ಇದೇ ಕತೆ. ಟಿಬೆಟ್ ಶಾಂತಿಪ್ರಿಯ ದೇಶ. ಚೀಣೀಯರ ಉಪಟಳ ತಾಳಲಾರದೆ 1957ರಲ್ಲಿ 15 ವರ್ಷದ ದಲೈಲಾಮಾ, ಸುಮಾರು ಒಂದೂವರೆ ಸಾವಿರ ಟಿಬೆಟಿಗರು ನಿರಾಶ್ರಿತರಾಗಿ ಭಾರತಕ್ಕೆ ಬಂದರು. ಅಲ್ಲಿದ್ದವರು ಚೀಣೀಯರ ಕ್ರೂರ ಆಕ್ರಮಣಕ್ಕೆ ಸಿಲುಕಿದರು. ಅವರನ್ನು ಅಮಾನುಷವಾಗಿ, ನಿರ್ದಯವಾಗಿ, ಅಷ್ಟೇ ವ್ಯವಸ್ಥಿತವಾಗಿ ಹಿಂಸೆಕೊಟ್ಟು ದಮನಿಸಲಾಯಿತು. ಲಕ್ಷಾಂತರ ಮಂದಿ ಕಾಣೆಯಾದರು.
ಇಂದಿಗೂ ಅವರ ಗತಿಯೇನಾಯಿತೆಂದು ಪ್ರಪಂಚಕ್ಕೆ ತಿಳಿದಿಲ್ಲ. ಇಂದು ಟಿಬೆಟ್ನಲ್ಲಿ ಟಿಬೆಟಿಗರಿಗಿಂತ ಹೆಚ್ಚು ಚೀಣೀಯರಿದ್ದಾರೆ. ಟಿಬೆಟ್ ಶಾಲೆಗಳಲ್ಲಿ ಚೀಣಾ ಅವರಿಗೆ ಮಾಡಿದ ಉಪಕಾರಗಳನ್ನು ಮಕ್ಕಳಿಗೆ ಮನದಟ್ಟುಮಾಡಿಸುವ ಪ್ರಯತ್ನ ನಡೆಯುತ್ತಿದೆ. ಕಾಡುಮೃಗಗಳನ್ನು ಮನುಷ್ಯರನ್ನಾಗಿಸಿದ ಚೀಣಾಕ್ಕೆ ಕೃತಜ್ಞತೆ ಸಲ್ಲಿಸಲಾಗುತ್ತದೆ. ಟಿಬೆಟಿಗರು ಚೀಣೀಯರಾಗಿ ಬೆಳೆಯುತ್ತಿದ್ದಾರೆ. ಹೀಗೆ ಪ್ರಾಚೀನ ಮೌಲ್ಯಾಧಾರಿತ ಶಾಂತಿಪ್ರಿಯ ಜನಾಂಗ ಚೀಣೀಯರ ಹಿಂಸೆಯಿಂದ ನಿರ್ಣಾಮವಾಗುತ್ತಿದೆ.
‘ಅಹಿಂಸಾ ಪರಮೋ ಧರ್ಮಃ’ ಎಂದವು ಸ್ಮøತಿಗಳು. ‘ಸತ್ಯಾನ್ನ ಪರೋ ಧರ್ಮಃ’ ಎಂದರು ವೈದಿಕ ಋಷಿಗಳು. ಶಬ್ದ ಬೇರೆ ಬೇರೆಯಾದರೂ ಅರ್ಥ ಒಂದೇ. ಅಹಿಂಸೆ ಎಂದರೂ ಒಂದೇ, ಸತ್ಯ ಎಂದರೂ ಒಂದೇ. ಸತ್ಯಕ್ಕಿಂತ ದೊಡ್ಡ ಧರ್ಮವಿಲ್ಲ. ಆದ್ದರಿಂದ ಧರ್ಮದ ರಕ್ಷಣೆ ಮಾಡುವ ಹಿಂಸೆ ಹಿಂಸೆಯಲ್ಲ. ಶ್ರೀಕೃಷ್ಣ ಪರಮಾತ್ಮ ಧರ್ಮಸಂಸ್ಥಾಪನೆಗಾಗಿಯೇ ಮಹಾಭಾರತ ಯುದ್ಧ ಮಾಡಿಸಿದ. ಕೈಲಾಗದವರು ಅಹಿಂಸೆಯನ್ನು ಕುರಿತು ಅತಿಯಾಗಿ ಮಾತನಾಡುತ್ತಾರೆ. ಶಕ್ತರಾದವರು ಅಹಿಂಸೆಯ ಮಿತಿಯನ್ನು ಆಚರಿಸುತ್ತಾರೆ. ಅಹಿಂಸೆಯ ಪ್ರತಿಪಾದಕರಾದ ಜೈನರೇ ಇದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ.
ಜೈನಪಂಥಕ್ಕೆ ಸೇರಿದ ಪಂಪ ಕನ್ನಡದ ಆದಿಕವಿ. ಚಾಲುಕ್ಯರಾಜನಾದ ಅರಿಕೇಸರಿಯ ಬಳಿ ದಂಡನಾಯಕನಾಗಿದ್ದ. ರಾಜ್ಯದಲ್ಲಿ ಎಲ್ಲ ಸುಭಿಕ್ಷವಾಗಿರುವಾಗ, ಶಾಂತವಾಗಿರುವಾಗ, ತನ್ನ ಆರಾಧ್ಯದೈವವಾದ ಆದಿನಾಥನನ್ನು ಕುರಿತು ಹದಿನಾಲ್ಕು ಆಶ್ವಾಸಗಳ ಕಾವ್ಯವನ್ನು ಬರೆದ. ‘ದಯಾಮೂಲಂ ಧರ್ಮಂ’ ಎಂಬ ರಸಮಯವಾದ ಸಿದ್ಧಾಂತವನ್ನು ಪ್ರತಿಪಾದಿಸಿದ. ಆದಿಪುರಾಣವನ್ನು ರಚಿಸಿದ್ದರಿಂದ ತನ್ನ ಕರ್ಮಗಳೆಲ್ಲ ನಾಶವಾಗುವುದೆಂದು ಆತ ನಂಬಿದ್ದ. ಆದರೂ ತನ್ನ ಅರಸನು ಶತ್ರುಗಳ ಬಾಧೆಗೆ ಒಳಗಾದಾಗ ಬರೆಯುವ ಕಂಟವನ್ನು ಬದಿಗಿರಿಸಿ ಬೀಸುವ ಕತ್ತಿಯನ್ನು ಕೈಗೆತ್ತಿಕೊಂಡ. ರಣರಂಗಕ್ಕೆ ಹೋಗಿ ಶತ್ರುನಾಯಕರ ಪಟ್ಟನ್ನು ಹಾರಿಸಿದ. ಪುನಃ ದೇಶದಲ್ಲಿ ಶಾಂತಿ ನೆಲಸಿದಾಗ, ಸ್ವಯಂ ವಿಕ್ರಮಶಾಲಿಯಾದ ಪಂಪ, ತನ್ನ ಅರಸನ ವೀರವಿಕ್ರಮಕ್ಕೆ ಮಾರುಹೋಗಿ, ಅವನನ್ನು ಅರ್ಜುನನಿಗೆ ಹೋಲಿಸಿ, ಲೋಕೈಕವಾದ ‘ವಿಕ್ರಮಾರ್ಜುನ ವಿಜಯ’ವನ್ನು ಬರೆದ.
ಶ್ರವಣಬೆಳಗೊಳದಲ್ಲಿರುವ ಸೌಮ್ಯಮುಖದ ಸುಂದರ ಗೊಮ್ಮಟಬಿಂಬವನ್ನು ಮಾಡಿಸಿದ ಚಾವುಂಡರಾಯನಾದರೂ ಎಂಥವನು! ಅವನ ಜೈನಶ್ರದ್ಧೆಗೆ ಈ ವಿಗ್ರಹದ ನಿರ್ಮಾಣ ಒಂದೇ ಸಾಕ್ಷಿ ಸಾಲದೆ? ಅವನು ಕಟ್ಟಿಸಿದ ನೇಮಿನಾಥನ ಬಸದಿ ಸಾಲದೆ? ಅವನಿಗೋಸ್ಕರ ಅವನ ಗುರು ಬರೆದ ‘ಗೊಮ್ಮಟಸಾರ’ ಸಾಲದೆ? ಅವನ ‘ಚಾವುಂಡರಾಯ ಪುರಾಣ’ದ ರಚನೆ ಸಾಲದೆ? ಆದರೂ ಅಹಿಂಸೆಯ ಭಕ್ತನಾದ ಈತ ಸಮರಧುರಂಧರ, ರಣರಂಗಸಿಂಗ, ಭುಜವಿಕ್ರಮ, ಸಮರಪರಶುರಾಮ, ವೀರ ಮಾರ್ತಾಂಡ ಎಂದು ಯುದ್ಧಗಳಲ್ಲಿ ಗೆದ್ದು ಹೆಸರು ಪಡೆದವನು.
ನಮ್ಮ ಎಲ್ಲ ದೇವತೆಗಳೂ ಶಾಂತಿದೂತರೇ. ಆದರೂ ಹೆಚ್ಚಿನ ದೇವತಾಮೂರ್ತಿಗಳ ಕೈಯಲ್ಲಿ ಶಸ್ತ್ರಗಳೂ ಇವೆ, ಅಭಯಹಸ್ತವೂ ಇದೆ. ಅಂದರೆ ದುಷ್ಟರ ಶಿಕ್ಷೆಗೆ, ಶಿಷ್ಟರ ರಕ್ಷಣೆಗೆ ಶಸ್ತ್ರ ಅನಿವಾರ್ಯ. ಮುಗ್ಧರ ಮೇಲೆ, ಸಜ್ಜನರ ಮೇಲೆ, ಧರ್ಮದ ಮೇಲೆ ದಾಳಿ ದಬ್ಬಾಳಿಕೆ ನಡೆದಾಗ ಶಸ್ತ್ರ ಹಿಡಿಯಲೇಬೇಕು. ಆದರೆ ದುರ್ಜನರ ಸಂಹಾರದ ನಂತರ ನಾವು ಅಹಿಂಸಕರಾಗಬೇಕು. ಉಗ್ರನರಸಿಂಹ ಹಿರಣ್ಯಕಶಿಪುವನ್ನು ಕೊಂದ ಬಳಿಕ ಶಾಂತರೂಪ ತಾಳಿ ಪ್ರಹ್ಲಾದನನ್ನು ಉದ್ಧರಿಸಿದ. ಹೀಗೆ ಅನಿವಾರ್ಯ ಸಂದರ್ಭದಲ್ಲಿ ನಾವು ದಂಡಕರಾಗಬೇಕೇ ವಿನಾ ಅದೇ ನಮ್ಮ ಸ್ವಭಾವವಾಗಬಾರದು. ಮಕ್ಕಳು ತಪ್ಪು ಮಾಡಿದಾಗ ಮಾತ್ರ ಶಿಕ್ಷೆ ಕೊಡಬೇಕೇ ವಿನಾ ಅವರನ್ನು ಸದಾ ಹಿಂಸೆ ಕೊಟ್ಟು ಭಯದ ವಾತಾವರಣದಲ್ಲಿ ಬೆಳೆಸಬಾರದು. ಉಳಿದ ಸಮಯದಲ್ಲಿ ಪ್ರೀತಿಯಿಂದ ಬೆಳೆಸಬೇಕು.
ಮರವನ್ನೇ ಕೊರೆಯುವ ಶಕ್ತಿಯಿರುವ ದುಂಬಿ ಕಮಲದ ಕೋಮಲ ದಳಗಳಲ್ಲಿ ಬಂದಿಯಾಗುತ್ತದೆ. ಕೋಮಲತೆಯಲ್ಲಿ ಬಹಳಷ್ಟು ಶಕ್ತಿಯಿದೆ. ಇಂಗ್ಲಿಷಿನಲ್ಲಿ ಒಂದು ಮಾತಿದೆ; ‘Not hammer-strokes, but the dance of the water sings the pebbles into perfection’ ಎಂಬುದಾಗಿ. ‘ಕಲ್ಲು ಹರಳೊಂದು ನಯಗೊಳ್ಳುವುದು ಸುತ್ತಿಗೆಯ ಏಟುಗಳಿಂದಲ್ಲ; ಆದರೆ ಹರಿವ ನೀರಿನ ನಲಿವಿನಿಂದ’ ಎಂಬುದು ಇದರರ್ಥ. ಅದೇ ರೀತಿ ಹಿಂಸೆಯ ವಾತಾವರಣದಲ್ಲಿ ವ್ಯಕ್ತಿಯೊಬ್ಬನನ್ನು ಸಂಸ್ಕಾರಗೊಳಿಸಲಾಗುವುದಿಲ್ಲ; ಬದಲಿಗೆ ಪ್ರೀತಿ, ಮಮತೆ, ಕರುಣೆ, ಕ್ಷಮೆ, ತ್ಯಾಗ ಮುಂತಾದ ದೈವೀಗುಣಗಳಿಂದ ಮನುಷ್ಯನೊಬ್ಬನನ್ನು ದೈವತ್ವಕ್ಕೇರಿಸಲು ಸಾಧ್ಯವಿದೆ. ಹಿಂಸೆ ಯಾವ ಸಮಸ್ಯೆಗೂ ಸೂಕ್ತ ಉತ್ತರವೂ ಅಲ್ಲ, ಶಾಶ್ವತ ಪರಿಹಾರವೂ ಅಲ್ಲ. ಹಿಂಸೆ ಎನ್ನುವುದು ಪ್ರತಿಯೊಬ್ಬರಲ್ಲಿ ಹುದುಗಿದ್ದರೂ ಅದು ನಮ್ಮ ಆಪದ್ಧರ್ಮವಾಗಬೇಕೇ ವಿನಾ ಅದೇ ಶಾಶ್ವತ ಧರ್ಮವಾಗದಿರಲಿ.