ಕಾಡುಪ್ರಾಣಿಗಳು ಮನುಷ್ಯನನ್ನು ಕೊಂದದ್ದಕ್ಕಿಂತ ಅಧಿಕವಾಗಿ ಮನುಷ್ಯ ಮನುಷ್ಯನನ್ನು ಕೊಂದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಪ್ರಾಣಿಗಳು ಕೇವಲ ತಮ್ಮ ಅಸ್ತಿತ್ವಕ್ಕಾಗಿ ಕೊಂದರೆ ಮನುಷ್ಯ ಹಲವಾರು ಕ್ಷುಲ್ಲಕ ಕಾರಣಗಳಿಗೆ ಹಾಗೂ ಯಾವುದೇ ಕಾರಣವಿಲ್ಲದೆಯೂ ಪ್ರಾಣಿಗಳನ್ನು ಕೊಲ್ಲುತ್ತಾನೆ. ಜಿಂಕೆಯ ಕೊಂಬಿಗಾಗಿ ಜಿಂಕೆಯನ್ನು ಕೊಲ್ಲುತ್ತಾನೆ. ಆನೆಯ ದಂತಕ್ಕಾಗಿ ಆನೆಯನ್ನು, ಉಗುರು-ಚರ್ಮಕ್ಕಾಗಿ ಹುಲಿಯನ್ನು ಕೊಲ್ಲುತ್ತಾನೆ. ಕೊಂಬು, ದಂತ, ಚರ್ಮ ಇವೆಲ್ಲವನ್ನೂ ನಮ್ಮ ಮನೆಯ ಅಲಂಕಾರಕ್ಕಾಗಿ ಬಳಸುತ್ತೇವೆ. ಹೀಗೆ ಮನೆಯ ಅಂದಕ್ಕಾಗಿ ಮುಗ್ಧ ಪ್ರಾಣಿಗಳನ್ನು ಬಲಿಗೊಡುವುದು ಕ್ರೂರತೆಯಲ್ಲವೆ? ಈ ಕ್ರೂರತೆಯೆ ಮನುಷ್ಯನ ಸಹಜ ಸ್ವಭಾವವಾಗಿ ಬೆಳೆದು ಮನುಷ್ಯ ಮನುಷ್ಯನನ್ನೇ ಕೊಲ್ಲುವಷ್ಟು ಆತ ಅಧಃಪತನಕ್ಕಿಳಿದಿದ್ದಾನೆ.
ಜಗತ್ತಿನಲ್ಲಿ ಅತ್ಯಂತ ವಿಕಸಿತ ಪ್ರಾಣಿ ಎಂದರೆ ಮನುಷ್ಯ. ಅಂದರೆ ಪಶುತ್ವದಿಂದ ಎತ್ತರಕ್ಕೇರಿದವನು ಮನುಷ್ಯ. ಆದರೆ ಮನುಷ್ಯ ಪಶುಗಳಿಂದ ಕಲಿಯಲು ಬಹಳಷ್ಟಿದೆ. ವಿಕಸಿತ ಪ್ರಾಣಿಯಾದ ಮನುಷ್ಯನಲ್ಲಿರುವಷ್ಟು ಸ್ವಾರ್ಥ, ಅಹಂಕಾರ, ಕ್ರೂರತೆ, ದೌರ್ಬಲ್ಯ, ವಂಚನೆ ಯಾವ ಪ್ರಾಣಿಯಲ್ಲೂ ಇರಲಿಕ್ಕಿಲ್ಲ. “ಪ್ರಾಣಿಗಳಲ್ಲೆ ಅತ್ಯಂತ ಕ್ರೂರ ಪ್ರಾಣಿ ಎಂದರೆ ಮನುಷ್ಯ” ಎಂಬ ಫ್ರೆಡ್ರಿಕ್ ನೀಚೆಯ ಮಾತು ನಿಜ. ತನ್ನ ಬದುಕಿಗಾಗಿ ಮನುಷ್ಯ ಯಾವ ಪ್ರಾಣಿಯನ್ನೂ ಕೊಲ್ಲಲು ಹಿಂಜರಿಯುವುದಿಲ್ಲ. ಕಾಡು ಪ್ರಾಣಿಗಳು ತಮ್ಮ ಹಸಿವೆಗಾಗಿ ಮಾತ್ರ ಇತರ ಪ್ರಾಣಿಗಳನ್ನು ಕೊಂದು ತಿನ್ನುತ್ತವೆ. ಆದರೆ ಮನುಷ್ಯ ಹಸಿವೆಗಾಗಿ ಮಾತ್ರವಲ್ಲ, ಮೋಜಿಗಾಗಿಯೂ ಪ್ರಾಣಿಗಳನ್ನು ಕೊಂದು ಖುಷಿಪಡುತ್ತಾನೆ. ಇತರ ಪ್ರಾಣಿಗಳಿಗೆ ಹಿಂಸೆ ಕೊಟ್ಟು ಕೊಂದು ಸಂತೋಷಪಡುವುದು ಒಂದು ಕ್ರೂರತೆ.
ಕಾಡುಪ್ರಾಣಿಗಳು ಮನುಷ್ಯನನ್ನು ಕೊಂದದ್ದಕ್ಕಿಂತ ಅಧಿಕವಾಗಿ ಮನುಷ್ಯ ಮನುಷ್ಯನನ್ನು ಕೊಂದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಪ್ರಾಣಿಗಳು ಕೇವಲ ತಮ್ಮ ಅಸ್ತಿತ್ವಕ್ಕಾಗಿ ಕೊಂದರೆ ಮನುಷ್ಯ ಹಲವಾರು ಕ್ಷುಲ್ಲಕ ಕಾರಣಗಳಿಗೆ ಹಾಗೂ ಯಾವುದೇ ಕಾರಣವಿಲ್ಲದೆಯೂ ಪ್ರಾಣಿಗಳನ್ನು ಕೊಲ್ಲುತ್ತಾನೆ. ಜಿಂಕೆಯ ಕೊಂಬಿಗಾಗಿ ಜಿಂಕೆಯನ್ನು ಕೊಲ್ಲುತ್ತಾನೆ. ಆನೆಯ ದಂತಕ್ಕಾಗಿ ಆನೆಯನ್ನು, ಉಗುರು-ಚರ್ಮಕ್ಕಾಗಿ ಹುಲಿಯನ್ನು ಕೊಲ್ಲುತ್ತಾನೆ. ಕೊಂಬು, ದಂತ, ಚರ್ಮ ಇವೆಲ್ಲವನ್ನೂ ನಮ್ಮ ಮನೆಯ ಅಲಂಕಾರಕ್ಕಾಗಿ ಬಳಸುತ್ತೇವೆ. ಹೀಗೆ ಮನೆಯ ಅಂದಕ್ಕಾಗಿ ಮುಗ್ಧ ಪ್ರಾಣಿಗಳನ್ನು ಬಲಿಕೊಡುವುದು ಕ್ರೂರತೆಯಲ್ಲವೆ? ಈ ಕ್ರೂರತೆಯೆ ಮನುಷ್ಯನ ಸಹಜ ಸ್ವಭಾವವಾಗಿ ಬೆಳೆದು ಮನುಷ್ಯ ಮನುಷ್ಯನನ್ನೇ ಕೊಲ್ಲುವಷ್ಟು ಆತ ಅಧಃಪತನಕ್ಕಿಳಿದಿದ್ದಾನೆ.
ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ:
ಆಹಾರ-ನಿದ್ರಾ-ಭಯ-ಮೈಥುನಂ ಚ
ಸಾಮಾನ್ಯಮೇತತ್ ಪಶುಭಿಃ ನರಾಣಾಂ |
ಜ್ಞಾನಂ ತು ತೇಷಾಮ್ ಅಧಿಕೋ ವಿಶೇಷಃ
ಜ್ಞಾನೇನ ಹೀನಃ ಪಶುಭಿಃ ಸಮಾನಃ ||
ಆಹಾರ, ನಿದ್ರೆ, ಭಯ, ಮೈಥುನ ಈ ನಾಲ್ಕು ಮನುಷ್ಯರಿಗೂ, ಪ್ರಾಣಿಗಳಿಗೂ ಸಮಾನ. ಕೇವಲ ಜ್ಞಾನಶಕ್ತಿ ಮಾತ್ರ ಮನುಷ್ಯರಿಗೆ ವಿಶೇಷವಾದುದು. ಜ್ಞಾನವಿಲ್ಲದ ಮನುಷ್ಯನು ಪಶುವಿದ್ದಂತೆ.
ಆದರೆ ದುಃಖದ ಸಂಗತಿಯೆಂದರೆ ಭಗವಂತ ಜ್ಞಾನ ಕೊಟ್ಟಿದ್ದರೂ ಮನುಷ್ಯ ಇನ್ನೂ ದೈವತ್ವಕ್ಕೇರಲಿಲ್ಲ. ಮನುಷ್ಯನೂ ಆಗಲಿಲ್ಲ. ಕೇವಲ ಊಟ, ನಿದ್ರೆ, ಮೈಥುನ ಮತ್ತು ಮರಣ – ಇಷ್ಟೇ ನಮಗೆ ಸಾಕಿದ್ದರೆ ಅದಕ್ಕೆ ಈ ಮನುಷ್ಯದೇಹವೇ ಬೇಕಾಗಿರಲಿಲ್ಲ. ಪ್ರಪಂಚದ ಪ್ರತಿಯೊಂದು ಕ್ರಿಮಿ-ಕೀಟ ಪಶು-ಪಕ್ಷಿಗಳು ಈ ಕೆಲಸವನ್ನು ಅಂದರೆ ತಿನ್ನುವ, ಮಲಗುವ, ವಂಶಾಭಿವೃದ್ಧಿ ಮಾಡಿ ಸಾಯುವ ಕಾಯಕವನ್ನು ನಮಗಿಂತ ಅತ್ಯಂತ ಸಮರ್ಥವಾಗಿ ಮಾಡುತ್ತವೆ.
ಯಾರು ಮೇಲು?
ನಿಜವಾಗಿಯೂ ನಾವು ಈ ವಿಷಯದಲ್ಲಿ ಅವುಗಳಿಗೆ ಪ್ರತಿಸ್ಫರ್ಧಿಯಾಗುವುದು ಸಾಧ್ಯವಿಲ್ಲ. ಬೇಕಿದ್ದರೆ ತಿನ್ನುವುದನ್ನೇ ನೋಡಿ. ತಮ್ಮ ದೇಹದ ತೂಕಕ್ಕಿಂತ ಸಾವಿರಪಟ್ಟು ಹೆಚ್ಚು ಆಹಾರವನ್ನು 24 ಗಂಟೆಗಳಲ್ಲಿ ತಿಂದು ಮುಗಿಸುವ ಕೆಲವು ಕ್ರಿಮಿಗಳು ಈ ಜಗತ್ತಿನಲ್ಲಿವೆ. ಅದೇ ಪ್ರಮಾಣದಲ್ಲಿ ನಾವು ತಿನ್ನುವುದಾದರೆ, ನಮ್ಮ ಈಗಿನ ತೂಕ 60 ಕಿಲೋ ಇದ್ದರೆ ನಾವು ದಿನಕ್ಕೆ 60 ಟನ್ ಆಹಾರಸೇವನೆ ಮಾಡಬೇಕು. ಅಷ್ಟೊಂದು ಆಹಾರ ಸೇವನೆ ನಮ್ಮಿಂದ ಸಾಧ್ಯವೆ? ನಮ್ಮ ಸಾಮಥ್ರ್ಯಕ್ಕಿಂತ ತುಸು ಅಧಿಕ ತಿಂದರೆ ನಮ್ಮ ಆರೋಗ್ಯ ಕೆಡುತ್ತದೆ. ಅಂತಹ ದೇಹ ನಮ್ಮದು. ಹೀಗಾಗಿ ಊಟದ ವಿಷಯದಲ್ಲಂತೂ ನಾವು ಕೀಟಗಳಿಗಿಂತ ತೀರಾ ಕಳಪೆಯೇ ಸರಿ.
ನಿದ್ರೆಯಲ್ಲೂ ನಾವು ಪ್ರಾಣಿಗಳಿಗೆ ಸರಿಸಾಟಿಯಲ್ಲ. ಯಾಕೆಂದರೆ ಒಂದೇ ಸಲಕ್ಕೆ ಮೂರರಿಂದ ಆರು ತಿಂಗಳು ನಿದ್ರೆ ಮಾಡುವ ಪಕ್ಷಿಗಳು, ಕೀಟಗಳು ಮತ್ತು ಪ್ರಾಣಿಗಳಿವೆ. ಎಂತಹುದೇ ಸುಖಕರವಾದ ಹಾಸಿಗೆಯಿದ್ದರೂ ನಾವು ಸಾಮಾನ್ಯ ಮಲಗುವುದಕ್ಕಿಂತ ಕೆಲವು ಗಂಟೆ ಹೆಚ್ಚು ಮಲಗಲು ಸಾಧ್ಯವಿಲ್ಲ. ಸಂತಾನೋತ್ಪತ್ತಿಯಲ್ಲಂತೂ ಮನುಷ್ಯನನ್ನು ಪ್ರಾಣಿಗಳೊಂದಿಗೆ ಹೋಲಿಸಲು ಬರುವುದೇ ಇಲ್ಲ. ಒಂದು ಮಗುವನ್ನು ಹಡೆಯಲೇ ಎಷ್ಟೆಲ್ಲಾ ರಂಪ ಮಾಡುತ್ತೇವೆ. ಅವು ಸಾವಿರಾರನ್ನು ಹೆರುತ್ತವೆ. ಅಲ್ಲೂ ನಾವು ಸರಿಸಾಟಿಯಿಲ್ಲ. ಸಾವಿನಲ್ಲೂ ನಾವು ಎಷ್ಟೆಲ್ಲ ರಗಳೆ ಎಬ್ಬಿಸುತ್ತೇವೆ! ಇತರ ಜೀವಿಗಳು ತುಂಬಾ ಗೌರವಯುತವಾಗಿ ಮಣ್ಣಾಗುತ್ತವೆ.
ಒಂದು ಹಕ್ಕಿ ಮರಣಮುಖವಾಗಿತ್ತು. ಆದರೂ ಅದರ ಮುಖದ ಮೇಲೆ ಸಂತೃಪ್ತಿಯ ತೆರೆಯಾಡುತ್ತಿತ್ತು. ನಾಡ ನಲೆಗಾರ ಹಕ್ಕಿಗೆ ಕೇಳಿದ, “ಈ ಗಳಿಗೆಯಲ್ಲಿ ನಿನ್ನ ಭಾವನೆ ಏನು?” ಹಕ್ಕಿ: “ನಾನು ಅತ್ಯಂತ ಸಂತುಷ್ಟನಾಗಿದ್ದೇನೆ” ಎಂದಿತು. ನಲೆಗಾರ: “ಹಾಗಾದರೆ, ನೀನು ಪಕ್ಷಿಲೋಕದಲ್ಲಿ ಅಪಾರ ಸಿರಿ-ಸಂಪದ, ಅಧಿಕಾರ-ಅಂತಸ್ತು ಗಳಿಸಿರಬೇಕಲ್ಲವೆ?” ಎಂದ. ಹಕ್ಕಿ: “ಇಲ್ಲ, ನನ್ನದೆನ್ನುವ ಒಂದು ಹುಲ್ಲುಕಡ್ಡಿಯೂ ಈ ಜಗತ್ತಿನಲ್ಲಿ ಇಲ್ಲ” ಎಂದಿತು. ನಲೆಗಾರ: “ಹಾಗಾದರೆ, ನಿನ್ನ ಸಂತಸದ ಕಾರಣವೇನು?” ಹಕ್ಕಿ: “ಬಹುಶಃ ಭಗವಂತನಿಗೂ ಸಾಧ್ಯವಾಗದ ಒಂದು ಸಣ್ಣ ಕೆಲಸ ನಾನು ಮಾಡಿದೆ.” ನಲೆಗಾರ: “ಅದಾವುದು?” ಹಕ್ಕಿ: “ನನ್ನ ಆಯುಷ್ಯದ ಉದ್ದಕ್ಕೂ ನಿಃಸ್ವಾರ್ಥದಿಂದ ಹಾಡಿ ಕುಣಿದು ಆತನ ಈ ವಿಶಾಲ ವಿಶ್ವವನ್ನು ಸಂಗೀತಮಯಗೊಳಿಸಿದೆ! ರಸಭರಿತ ಮಾಡಿದೆ!” ಹಕ್ಕಿಯ ಸಂತೃಪ್ತ ಜೀವನ ಕಂಡ ನಲೆಗಾರನ ಹೃದಯ ತುಂಬಿಬಂದಿತ್ತು!
ಅದೇ ಪ್ರಶ್ನೆಯನ್ನು ಮರಣಶಯ್ಯೆಯಲ್ಲಿರುವ 80-90 ವರ್ಷದ ಮನುಷ್ಯನಿಗೆ ಕೇಳಿದರೆ ಅವನು ಏನು ಹೇಳಬಲ್ಲ? “ಜಗತ್ತಿನಲ್ಲಿ ನನ್ನಷ್ಟು ದುಃಖಿ ಯಾರೂ ಇಲ್ಲ” ಎಂದಲ್ಲವೆ? ಆತನಿಗೆ ನಾಲ್ಕು ಜನ ಮಕ್ಕಳು, ಹಲವಾರು ಮೊಮ್ಮಕ್ಕಳು, ಮರಿಮೊಮ್ಮಕ್ಕಳು. ಅಪಾರ ಸಿರಿಸಂಪದ ಇದೆ. ಆದರೂ ಆತ ಅತ್ಯಂತ ದುಃಖಿ. “ಇಷ್ಟೆಲ್ಲ ಇದ್ದೂ, ನೀನು ದುಃಖಿ ಏಕೆ?” ಎಂದು ಕೇಳಿದರೆ ಆತ ಹೇಳುವುದೇನು? “ಇದನ್ನೆಲ್ಲ ನಾನು ಹೇಗೆ ತೊರೆದು ಹೋಗಲಿ!” ಎಂದಲ್ಲವೆ? ಹಕ್ಕಿಯ ಭಾವಕ್ಕೂ ಮನುಷ್ಯನ ಭಾವಕ್ಕೂ ಎಷ್ಟು ವ್ಯತ್ಯಾಸ! ಹಕ್ಕಿ ಸದಾ ಸಂತೋಷಿ, ಮನುಷ್ಯ ಸದಾ ದುಃಖಿತ!
ಪ್ರಾಣಿಗಳು ಬದುಕನ್ನು, ಸಾವನ್ನು ಸಮರ್ಥವಾಗಿ ನಿಭಾಯಿಸುತ್ತವೆ. ಆದರೆ ಮನುಷ್ಯನಿಗೆ ಈ ಕಡೆಯಿಂದ ತೃಪ್ತಿಯಿಂದ ಬದುಕಲೂ ಗೊತ್ತಿಲ್ಲ, ಆ ಕಡೆಯಿಂದ ನೆಮ್ಮದಿಯಿಂದ ಸಾಯಲೂ ಗೊತ್ತಿಲ್ಲ. ಜೀವನವೆಲ್ಲ ಗೋಳಾಟ. ಭವಿಷ್ಯದ ಚಿಂತೆಯಲ್ಲೆ ಆತನ ಬದುಕೆಲ್ಲ ಬರಡಾಗಿರುತ್ತದೆ. ಗೋಳಿನ ಬದುಕಿಗೆ ನಮಗೆ ಇಂತಹ ಮನುಷ್ಯನ ದೇಹ, ಬುದ್ಧಿ ಬೇಕಾಗಿಲ್ಲ. ನಾವು ಬೇರೊಂದು ಸಾಧ್ಯತೆಯ ಸಲುವಾಗಿ ಮನುಷ್ಯನ ದೇಹ ಧರಿಸಿ ಈ ಜಗತ್ತಿಗೆ ಬಂದಿದ್ದೇವೆ. ಮನುಷ್ಯತ್ವದಿಂದ ಮುಮುಕ್ಷುತ್ವಕ್ಕೆ ಹೋಗುವುದರಲ್ಲೆ ನಮ್ಮ ಜೀವನದ ಸಾರ್ಥಕತೆ ಅಡಗಿದೆ. ಆದರೆ ಮನುಷ್ಯನಿಗೆ ಭಗವಂತ ವಿಶೇಷವಾದ ಬುದ್ಧಿ, ಜ್ಞಾನ ಕೊಟ್ಟಿದ್ದರೂ ಆತ ಕೆಲವೊಮ್ಮೆ ಪಶುಮಟ್ಟಕ್ಕಿಂತಲೂ ಕೀಳಾಗಿ ಬದುಕುತ್ತಾನೆ. ಕ್ರೂರ ಪ್ರಾಣಿಗಳನ್ನಾದರೂ ನಂಬಬಹುದು, ಆದರೆ ಮನುಷ್ಯನನ್ನು ಎಂದೂ ನಂಬಲಾಗದು.
ನಿಷ್ಠೆ ಮತ್ತು ಕಪಟತೆ
ಒಬ್ಬ ಸಿರಿವಂತನಿದ್ದ. ಅವನ ಮನೆಯಲ್ಲಿ ಒಬ್ಬ ಸೇವಕನಿದ್ದ ಮತ್ತು ಒಂದು ನಾಯಿ ಇತ್ತು. ಇಬ್ಬರ ಮೇಲೂ ಮಾಲೀಕನಿಗೆ ಅಷ್ಟೇ ವಿಶ್ವಾಸ, ಪ್ರೇಮ. ಮೂವತ್ತು ವರುಷಗಳಿಂದ ಸೇವಕ ಮಗನಂತೆ ಅದೇ ಮನೆಯಲ್ಲಿದ್ದ. ಸೇವಕನಿಗೆ ಕೈತುಂಬ ಹಣ, ನಾಯಿಗೆ ಹೊಟ್ಟೆ ತುಂಬ ಊಟ ಕೊಡುತ್ತಿದ್ದ. ಯಾರಿಗೂ ಯಾವುದಕ್ಕೂ ಕೊರತೆಯಿರಲಿಲ್ಲ. ಒಂದು ದಿನ ಕಳ್ಳನೊಬ್ಬ ಸೇವಕನ ಗೆಳೆತನ ಮಾಡಿದ. ಮಾತನಾಡುತ್ತ ಕಳ್ಳ ಹೇಳಿದ: “ನೀನು ಮೂವತ್ತು ವರ್ಷ ಈ ಮನೆಯಲ್ಲಿ ದುಡಿದೆ. ನಿನ್ನ ಬಡತನವೇನೂ ಹೋಗಲಿಲ್ಲ! ಸಿರಿವಂತನ ಮನೆ ಮಡದಿ ಮಕ್ಕಳ ನೋಡು. ನಿನ್ನ ಮನೆ ಮಡದಿ ಮಕ್ಕಳ ನೋಡು. ಹೇಗಿದ್ದಾರೆ?” “ಅದು ನನ್ನ ಭಾಗ್ಯದಲ್ಲಿಲ್ಲ. ಅದಕ್ಕೆ ನಾನೇನು ಮಾಡಲಿ?” ಎಂದ ಸೇವಕ.
“ನನ್ನಲ್ಲೊಂದು ಯುಕ್ತಿ ಇದೆ’ ಎಂದ ಕಳ್ಳ. ಬಡವ ಕೇಳಿದ: “ಅದೇನದು?” “ಈ ಮನೆಯಲ್ಲಿ ಸಿರಿವಂತ ಎಲ್ಲೆಲ್ಲಿ ಸಂಪತ್ತನ್ನಿಟ್ಟಿದ್ದಾನೆ ಹೇಳು. ನಿನಗೆ ಕೈತುಂಬ ಹಣ ಕೊಡುತ್ತೇನೆ” ಎಂದು ಕಳ್ಳ ಹೇಳಿದ. ಸೇವಕನ ಮನಸ್ಸು ಚಂಚಲವಾಯಿತು. ತಾನೂ ದೊಡ್ಡ ಮನೆಯನ್ನು ಕಟ್ಟಿಸಿ ಅಲ್ಲಿ ಆಳುಕಾಳು ಇಟ್ಟಂತೆ ಕನಸು ಕಂಡ! ಸೇವಕನು ಕಳ್ಳನಿಗೆ ಎಲ್ಲ ಮಾಹಿತಿ ನೀಡಿದ. ಜೊತೆಗೆ ನಿಧಿ ಇರುವ ಮನೆಯ ನಕಲಿ ಕೀಲಿ ಕೈಯನ್ನೂ ಮಾಡಿಕೊಟ್ಟ. ಕಳೆದ ಮೂವತ್ತು ವರ್ಷಗಳಿಂದ ಅನ್ನವನ್ನಿತ್ತ ಮನೆಗೆ ಕನ್ನವನ್ನು ಹಾಕುವ ದ್ರೋಹ ಬಗೆದಿದ್ದ ಸೇವಕ.
ಅದೇ ದಿನ ಮಧ್ಯರಾತ್ರಿ ಕಳ್ಳನು ಸಿರಿವಂತನ ಮನೆಗೆ ಬಂದ. ಸೇವಕನಲ್ಲಿ, ನಾಯಿಯಲ್ಲಿ ಅಚಲ ನಂಬಿಕೆಯನ್ನಿಟ್ಟು ಒಡೆಯನು ನಿಶ್ಚಿಂತ ನಿದ್ರೆಯಲ್ಲಿದ್ದ. “ಸೇವಕನನ್ನೇ ಬದಲಿಸಿದ್ದೇನೆ, ನಾಯಿಯನ್ನು ಬದಲಿಸುವುದು ಕಷ್ಟವೆ?” ಎಂದು ಕಳ್ಳ ಧೈರ್ಯದಿಂದ ಬಂದಿದ್ದ. ನೋಡಿದರೆ ಬಾಯಿಗೆ ನೀರು ಬರಬೇಕು ಅಂಥ ಬೆಣ್ಣೆಯ ಬಿಸ್ಕತ್ತು ನಾಯಿಗೆ ತಂದಿದ್ದ. ಮನೆಯ ಹೊರಗೆ ಬಾಗಿಲ ಮುಂದೆ ನಿಂತಿದ್ದ ನಾಯಿಗೆ ಒಂದೆರಡು ಬಿಸ್ಕತ್ತು ಎಸೆದ. ನಾಯಿ ಮುಂದೆ ಬಂದು ಆ ಬಿಸ್ಕತ್ತನ್ನು ತಿರಸ್ಕಾರದಿಂದ ನೋಡಿ, “ನಿನ್ನ ಆಮಿಷಕ್ಕೆ ಒಳಗಾಗಲು ನಾನೇನು ಆ ಸೇವಕನಲ್ಲ. ನನಗೆ ನನ್ನ ಒಡೆಯನಲ್ಲಿ ಪೂರ್ಣ ವಿಶ್ವಾಸ. ನೀನು ನಿನ್ನ ಬಿಸ್ಕತ್ತಿನೊಂದಿಗೆ ಪಲಾಯನ ಮಾಡು. ಇಲ್ಲದಿದ್ದರೆ ನೋಡು…!” ಎಂದಿತು.
ಉಂಡ ಮನೆಯ ಕಾವಲು ಕಾಯುವುದು ನಾಯಿಯ ಗುಣ. ಉಂಡ ಮನೆಗೆ ಕನ್ನ ಹಾಕುವುದು ಮನುಷ್ಯನ ಗುಣ. ಆದರೆ ಈಗೀಗ ನಾಯಿಗಳಿಗೂ ಈ ಮನುಷ್ಯನನ್ನು ನೋಡಿದಾಗ ಗೊಂದಲ ಆಗುತ್ತಿದೆ. ಯಾರು ಕಳ್ಳರು, ಯಾರು ಸಂಭಾವಿತರು ಎಂಬುದೇ ಗೊತ್ತಾಗುತ್ತಿಲ್ಲ. ಮನೆ ಮಾಲೀಕನೆ ಕಳ್ಳನೊ ಅಥವಾ ಮನೆಗೆ ಬರುವವರು ಕಳ್ಳರೊ ಎಂಬುದಾಗಿ ನಿಖರವಾಗಿ ನಾಯಿಗೆ ಗೊತ್ತಾಗುತ್ತಿಲ್ಲ.
ಸಚಿವರೊಬ್ಬರ ಮನೆ ಕಾಯಲು ಹೋಗುತ್ತಿದ್ದ ಮರಿ ನಾಯಿಗೆ, ತಾಯಿ ನಾಯಿ ಬುದ್ಧಿ ಹೇಳಿತು: “ನಾನು ಈ ತನಕ ನಿನಗೆ ಕಳ್ಳರನ್ನು ಕಂಡಾಗ ಬೊಗಳಬೇಕೆಂದು ಹೇಳಿದ್ದೆ. ಇನ್ನು ಮುಂದೆ ಕಳ್ಳರು ಕಂಡರೆ ಸುಮ್ಮನಿದ್ದುಬಿಡು. ಆ ಮನೆಯಲ್ಲಿ ಕಳ್ಳರನ್ನು ನೋಡಿ ಬೊಗಳುವುದಾದರೆ ಇಪ್ಪತ್ತನಾಲ್ಕು ಗಂಟೆಯೂ ಬಾಯಿ ಮುಚ್ಚುವಂತಿಲ್ಲ.”
ಶುದ್ಧತೆ, ವ್ಯಗ್ರತೆ
ಭಗವಾನ್ ರಮಣ ಮಹರ್ಷಿಗಳು ಅಹಿರ್ನಿಶಿಯೂ ಅಧ್ಯಾತ್ಮಭಾವದಲ್ಲಿಯೇ ಇರುತ್ತಿದ್ದವರು. ಅತಿ ಸಾಮಾನ್ಯ ಪ್ರಸಂಗಗಳಲ್ಲಿಯೂ ಅವರ ಪರಮಾರ್ಥದೃಷ್ಟಿಯು ಅಭಿವ್ಯಕ್ತವಾಗುತ್ತಿತ್ತು. ಒಮ್ಮೆ ಹೀಗಾಯಿತು. ದೀರ್ಘಕಾಲದಿಂದ ಮಹರ್ಷಿಗಳ ಶಿಷ್ಯೆಯಾಗಿದ್ದ ಒಬ್ಬಾಕೆಯ ವಿವಾಹ ನಿಶ್ಚಯವಾಗಿತ್ತು. ಆ ಸಂದರ್ಭದಲ್ಲಿ ಮಹರ್ಷಿಗಳ ಆಶೀರ್ವಾದ ಪಡೆದುಕೊಳ್ಳಬೇಕೆನಿಸಿತು ಅವಳಿಗೆ. ಅಂದು ಸಂಜೆ ಎಂದಿನಂತೆ ಮಹರ್ಷಿಗಳು ಸಮೀಪದ ಗುಡ್ಡದ ಮೇಲೆ ಒಂದಷ್ಟು ಹೊತ್ತು ನಡೆದಾಡಿ ಆಶ್ರಮಕ್ಕೆ ಹಿಂದಿರುಗುತ್ತಿದ್ದಾಗ ಅವರ ಪಾದಸ್ಪರ್ಶ ಮಾಡಿ ನಮಿಸಲು ಆಕೆ ಮುಂದಾದಳು. ಮಹರ್ಷಿಗಳು ಕೂಡಲೆ ಹಿಂದಕ್ಕೆ ಸರಿದು ದೂರದಿಂದಲೇ ಕೈಯೆತ್ತಿ ಆಶೀರ್ವದಿಸಿದರು. ಈ ವೇಳೆಗೆ ಆಶ್ರಮವಾಸಿ ನಾಯಿಯೊಂದು ಮಹರ್ಷಿಗಳ ಬಳಿ ಓಡಿ ಬಂದು ನಿಂತಿತು. ಮಹರ್ಷಿಗಳು ಅದನ್ನು ಪ್ರೀತಿಯಿಂದ ನೇವರಿಸಿದರು. ಅವರ ಈ ವರ್ತನೆಯಿಂದ ಖೇದಕ್ಕೊಳಗಾದ ಶಿಷ್ಯೆ ರೋದಿಸುತ್ತ “ನಾನು ಈ ನಾಯಿಗಿಂತ ಕೀಳಾದೆನೆ? ನನ್ನ ಸ್ಪರ್ಶ ನಿಮಗೆ ಮೈಲಿಗೆಯೆನಿಸಿತೆ?” ಎಂದು ಕೇಳಿದಳು. ಮಹರ್ಷಿಗಳು ಉತ್ತರಿಸಿದರು: “ಹಾಗಲ್ಲ ತಾಯಿ. ಶುಚಿ-ಅಶುಚಿ ಎಂಬ ವಿಕಲ್ಪಗಳೇ ಪ್ರಾಣಿಗಳೊಳಗೆ ಇರುವುದಿಲ್ಲ. ಅವುಗಳ ಅಂತರಂಗ ಸದಾ ಶುದ್ಧವಾಗಿರುತ್ತದೆ. ಆದರೆ ಮನುಷ್ಯನ ಅಂತರಂಗದಲ್ಲಿ ಇಂಥ ವಿಕಲ್ಪಗಳಿರುವುದರಿಂದ ಸ್ವಲ್ಪವಾದರೂ ಅಶುಚಿಯ ಸೋಂಕು ಅವರಿಗೆ ತಪ್ಪುವುದಿಲ್ಲ.”
ಮನುಷ್ಯ ಹಲವು ಪ್ರಾಣಿಗಳ ಪ್ರತಿನಿಧಿ. ಆತನಲ್ಲಿ ಹುಲಿಯ ಕ್ರೂರತೆ, ವಾನರನ ಚಂಚಲತೆ, ನರಿಯ ಕಪಟತೆ, ಊಸರವಳ್ಳಿಯ ಗೋಸುಂಬೆತನ, ತೋಳದ ಹೊಟ್ಟೆಬಾಕತನ ಎಲ್ಲದರ ಸಂಗಮವಿದೆ. ಈ ದೃಷ್ಟಿಯಲ್ಲಿಯೇ ತಿಮ್ಮಗುರು ಹೇಳುತ್ತಾರೆ:
ಪರಮೇಷ್ಠಿ ನಿಜಚಾತುರಿಯನಳೆಯ ನಿರವಿಸಿದ |
ನೆರಡು ಕೈಯಿಂದೆರಡು ಜಂತುಗಳ ಬಳಿಕ ||
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು |
ನರಿಯು ವಾನರವು ನರ – ಮಂಕುತಿಮ್ಮ ||
(ಕಗ್ಗ 193)
ಬ್ರಹ್ಮನು ತನ್ನ ಕುಶಲತೆಯನ್ನು ಪರೀಕ್ಷಿಸಲು, ತನ್ನ ಎರಡೂ ಕೈಗಳಿಂದ ಎರಡು ಪ್ರಾಣಿಗಳನ್ನು ಸೃಷ್ಟಿ ಮಾಡಿದನಂತೆ. ಅವನು ಅಷ್ಟಕ್ಕೇ ಸುಮ್ಮನಾಗದೆ, ಆ ಎರಡು ಪ್ರಾಣಿಗಳನ್ನೂ ಒಂದನ್ನಾಗಿ ಸೇರಿಸಿದನಂತೆ. ಆ ಎರಡು ಪ್ರಾಣಿಗಳೇ ನರಿ ಮತ್ತು ಕಪಿ (ವಾನರ). ಅವೆರಡನ್ನೂ ಸೇರಿಸಿ ಮಾಡಿದ ಪ್ರಾಣಿಯೇ ನರ. ಇವನನ್ನು ನೋಡಿ ಬ್ರಹ್ಮನಿಗೇ ಆಶ್ಚರ್ಯವಾಯಿತಂತೆ. ಆದುದರಿಂದಲೇ ಮನುಷ್ಯನಲ್ಲಿ ನರಿ ಮತ್ತು ಕಪಿಗಳೆರಡರ ಸ್ವಭಾವಗಳು ಸೇರಿಕೊಂಡಿರುವುದು.
ಎಲ್ಲ ದೇವತೆಗಳಿಗೆ ಪ್ರಾಣಿ ವಾಹನವಾಗಿದೆ. ಆದರೆ ಯಾವುದೇ ದೇವತೆಗಳಿಗೆ ಮನುಷ್ಯ ವಾಹನವಾಗಿಲ್ಲ. ಯಾಕೆಂದರೆ ದೇವತೆಗಳಿಗೂ ಮನುಷ್ಯನ ಮೇಲೆ ವಿಶ್ವಾಸವಿಲ್ಲ.
ಹಾಸ್ಯ ಸಾಹಿತಿ ಬೀಚಿಯವರು ಒಂದು ಪುಸ್ತಕ ಪ್ರಕಟಿಸಿದ್ದಾರೆ. ಅವರು ಅದರಲ್ಲಿ ಕಾಗೆ, ಕತ್ತೆ, ನಾಯಿ ಮೂರು ಪ್ರಾಣಿಗಳ ಚಿತ್ರ ಹಾಕಿ ಆ ಪುಸ್ತಕವನ್ನು ಅವುಗಳಿಗೆ ಅರ್ಪಿಸಿದ್ದಾರೆ.
ಕರೆದುಣ್ಣುವ ಕಾಗೆಯಾಗು
ದುಡಿದುಣ್ಣುವ ಕತ್ತೆಯಾಗು
ಪ್ರಾಮಾಣಿಕತೆಯಲ್ಲಿ ನಾಯಿಯಾಗು
ಎಂಬುದು ಬೀಚಿ ಉವಾಚ. ಕಾಗೆ ಹಂಚಿ ತಿನ್ನುತ್ತದೆ. ಕತ್ತೆ ದುಡಿದು ತಿನ್ನುತ್ತದೆ, ನಾಯಿ ಪ್ರಾಮಾಣಿಕವಾಗಿ ಬದುಕುತ್ತದೆ – ಎಂಬುದಕ್ಕಾಗಿಯೊ ಏನೊ ಅವರ ಪುಸ್ತಕವನ್ನು ಅವುಗಳಿಗೆ ಅರ್ಪಿಸಿದ್ದಾರೆ.
ಪ್ರಾಣಿಗಳಿಗೆ ಒಂದೊಂದು ದುರ್ಗುಣವಾದರೆ ಮನುಷ್ಯನಿಗೆ ಹಲವು ದುರ್ಗುಣಗಳು. ಮನುಷ್ಯನಿಗೆ ತೃಪ್ತಿಯೆಂಬುದೇ ಇಲ್ಲ. ತೃಪ್ತಿಯನ್ನು ನಾವು ಪ್ರಾಣಿಗಳಿಂದ ಕಲಿಯಬೇಕು. ಹೊಟ್ಟೆ ತುಂಬಿದ ಮೇಲೆ ದನ ಹತ್ತಿರ ಬಂದರೂ ಹುಲಿ ಸುಮ್ಮನಿರುತ್ತದೆ. ಆದರೆ ಮನುಷ್ಯ ಹೊಟ್ಟೆ ತುಂಬಿದ ಮೇಲೂ ತಿನ್ನಬೇಕು ಎನ್ನುತ್ತಾನೆ. ಭೋಗಿಸಿದ ಮೇಲೂ ಇನ್ನೂ ಭೋಗಿಸಬೇಕೆಂದು ಅಪೇಕ್ಷಿಸುತ್ತಿರುತ್ತಾನೆ. ಹೇರಳ ಸಂಪತ್ತಿದ್ದರೂ ಮುಗಿಯದ ಧನದಾಹ. ಇವೆಲ್ಲವೂ ಮನುಷ್ಯನ ಜೀವನಕ್ಕೆ ಶೋಭೆಯಲ್ಲ. ದುರ್ಗುಣಗಳನ್ನು ಕಡಮೆ ಮಾಡಿ ಸುಗುಣಗಳನ್ನು ಬೆಳೆಸುವುದೇ ನಿಜವಾದ ಜೀವನ.
ಆದರ್ಶಗುಣಗಳು
ಪಂಚತಂತ್ರದಲ್ಲಿ ಹಲವಾರು ನೀತಿಕಥೆÉಗಳು ಬರುತ್ತವೆ. ಅದರಲ್ಲಿ ಹೆಚ್ಚಿನವು ಮನುಷ್ಯನ ಜೀವನವನ್ನು ಪ್ರಾಣಿಗಳೊಂದಿಗೆ ಹೋಲಿಸಿವೆÉ. ಪ್ರಾಣಿಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಎಂಬುದನ್ನು ಈ ಕಥೆÉಗಳು ಸಾರುತ್ತವೆ. ಮನುಷ್ಯನಲ್ಲಿ ಏನಾದರೂ ಸಾಮಥ್ರ್ಯ, ಪ್ರತಿಭೆ ಇದ್ದರೆ ಅದನ್ನು ಪ್ರಾಣಿಗಳೊಂದಿಗೆ ಹೋಲಿಸುತ್ತಾರೆ.
‘ಆತನ ಕಂಠ ಕೋಗಿಲೆಯಿದ್ದ ಹಾಗಿದೆ’. ‘ಆತನ ಕುಣಿತ ಅಂದರೆ ನವಿಲಿನ ನೃತ್ಯವಿದ್ದ ಹಾಗೆ.’ ‘ಏನು ಓಡ್ತಾನ್ರಿ, ಚಿರತೆ ಓಡಿದ ಹಾಗೆ ಓಡುತ್ತಾನೆ.’ ‘ಆತನ ಬಲ ಎಂದರೆ ಆನೆಯ ಬಲ ಇದ್ದ ಹಾಗೆ.’ ‘ನಾನು ಚಾತಕಪಕ್ಷಿಯಂತೆ ಕಾದೆ.’ ‘ಆತನ ಬುದ್ಧಿ ನರಿ ಬುದ್ಧಿ’ – ಹೀಗೆ ಪ್ರಾಣಿಯ ಗುಣವನ್ನು ಮನುಷ್ಯನಿಗೆ ಉಪಮೆಯಾಗಿ ಬಳಸುವುದು ಲೋಕರೂಢಿ. ನಾವು ಮನುಷ್ಯನ ಗುಣಗಾನಕ್ಕಿಂತ ಪ್ರಾಣಿಗಳ ಗುಣಗಾನ ಮಾಡುವುದೇ ಹೆಚ್ಚು.
ಮಧುರ ಗುಣವ ಇರುವೆ ಬಲ್ಲದು.
ವೇಳೆಯ ಗುಣವ ಕೋಳಿ ಬಲ್ಲದು.
ಗೋತ್ರದ ಗುಣವ ಕಾಗೆ ಬಲ್ಲದು.
ಈ ಮನುಷ್ಯ ಜನ್ಮದಲ್ಲಿ ಹುಟ್ಟಿ,
ಶಿವಜ್ಞಾನಿಗಳ ಉರವನರಿಯದಿದ್ದಡೆ
ಆ ಕೋಳಿ ಕಾಗೆ ಇರುವೆಗಿಂತಲು ಕರಕಷ್ಟ ಕಾಣಾ
ಕೂಡಲ ಚೆನ್ನ ಸಂಗಮದೇವಾ
– ಎಂಬುದಾಗಿ ಚನ್ನಬಸವ ತನ್ನ ವಚನವೊಂದರಲ್ಲಿ ಪ್ರಾಣಿಗಳ ಗುಣಗಾನ ಮಾಡಿ ಮನುಷ್ಯನಾಗಿ ಹುಟ್ಟಿ ಶಿವಜ್ಞಾನಿಗಳನ್ನು ಅರಿಯದಿದ್ದರೆ ಆತ ಕಾಗೆ-ಕೋಳಿಗಳಿಗಿಂತ ಕಡೆ ಎಂಬುದಾಗಿ ಜರಿಯುತ್ತಾರೆ.
ಕಾಲದ ಪರಿಜ್ಞಾನ ಪ್ರಾಣಿಗಳಿಗೆ ಇರುವಷ್ಟು ಮನುಷ್ಯನಿಗಿರುವುದಿಲ್ಲ. ಭೂತ, ಭವಿಷ್ಯ, ವರ್ತಮಾನ ಎಲ್ಲ ಕಾಲದ ಜ್ಞಾನ ಪ್ರಾಣಿಗಳಿಗೆ ಇರುತ್ತದೆ. ಎಲ್ಲಿಯೊ ಒಂದುಕಡೆ ಕಳ್ಳತನವಾಗಿ ಎಷ್ಟೋ ಸಮಯವಾದ ಮೇಲೂ ನಾಯಿ ತನ್ನ ಮೂಗಿನ ಮುಖಾಂತರ ಮೂಸಿ ಕಳ್ಳನನ್ನು ಗುರುತಿಸುತ್ತದೆ. ಹುಂಜ ಭವಿಷ್ಯತ್ ಕಾಲ ಸರಿಯಾಗಿ ಹೇಳುತ್ತದೆ, ಸೂರ್ಯೋದಯ ಆಗುವ ಸಾಕಷ್ಟು ಮುಂಚೆಯೇ ಅದು ಕೂಗುತ್ತದೆ. ಯುದ್ಧದಲ್ಲಿ ಆನೆಯನ್ನು ಬಳಸುತ್ತಾರೆ. ಆನೆಯು ಎದುರು ಪಕ್ಷದವರನ್ನೆ ಕೊಲ್ಲುತ್ತದೆಯೇ ವಿನಾ ತಮ್ಮ ಪಕ್ಷದವರನ್ನು ಕೊಲ್ಲುವುದಿಲ್ಲ. ಭೂಕಂಪ, ಸುನಾಮಿ ಬರುವ ಸಾಕಷ್ಟು ಮೊದಲೇ ಪ್ರಾಣಿಗಳಿಗೆ ಗೊತ್ತಾಗುತ್ತದೆ. ಆ ಸಮಯದಲ್ಲಿ ಅವು ವಿಚಿತ್ರವಾಗಿ ವರ್ತಿಸುತ್ತವೆ.
ಪ್ರಾಣಿ ಕೇವಲ ಕಾಲವನ್ನು ಮಾತ್ರ ತಿಳಿದಿರುವುದಿಲ್ಲ, ಕಲಾತ್ಮಕ ರಚನೆಯಲ್ಲೂ ಮನುಷ್ಯನಿಗಿಂತ ಅದು ಮುಂದಿದೆ. ಗೀಜಗನ ಪಕ್ಷಿ ತನಗಿರುವ ದೇಹವನ್ನೇ ಬಳಸಿಕೊಂಡು ಎಷ್ಟು ಕಲಾತ್ಮಕವಾಗಿ ಬದುಕುತ್ತದೆ! ಅದು ಕಟ್ಟುವ ಗೂಡು ನೋಡಲು ಅದೆಷ್ಟು ಚೆಂದ! ಆ ಗೂಡು ನೂರಕ್ಕೆ ನೂರು ಹವಾನಿಯಂತ್ರಿತ. ಚಳಿಯಲ್ಲಿ ಬೆಚ್ಚಗೆ, ಬಿಸಿಲಿನಲ್ಲಿ ತಂಪು, ಯಾವ ತಂತ್ರಜ್ಞರಿಗೇನೂ ಕಡಮೆಯಿಲ್ಲದೆ ಮನೆಯ ವಿನ್ಯಾಸ ಹಾಗೂ ರಚನೆ ಗೀಜಗನ ಗೂಡಿನದು! ಇಷ್ಟಿದ್ದರೂ ಗೂಡಿನ ವ್ಯಾಮೋಹ ಅದಕ್ಕಿಲ್ಲ. ಅದರ ಮರಿಗಳು ಕಣ್ತೆರೆಯುವುದೇ ತಡ ಅವುಗಳನ್ನು ಹೊರಗೆ ತಂದು ಹಾರಲು, ಹಾಡಲು ಕಲಿಸುತ್ತದೆ ತಾಯಿ ಗೀಜಗ. ಏಕೆಂದರೆ ಪಕ್ಷಿಗಳು ಈ ಜಗತ್ತಿಗೆ ಬಂದುದು ಹಾರಲು, ಹಾಡಲು ವಿನಾ ಮನುಷ್ಯರಂತೆ ಮನೆಯನ್ನು ಹಿಡಿದು ಕೂಡಲು ಅಲ್ಲ. ಮನುಷ್ಯನು ಸಂಸಾರಕ್ಕಾಗಿ ಮನೆ, ಆಸ್ತಿಯನ್ನು ಮಾಡಿಕೊಳ್ಳಬೇಕು; ಆದರೆ ಅದಕ್ಕೆ ಜೋತುಬೀಳದೆ ಅದರ ಬಗ್ಗೆ ನಿರ್ಲಿಪ್ತವಾಗಿ ತಾನು ಭೂಮಿಗೆ ಬಂದ ಉದ್ದೇಶವನ್ನು ಅರಿತುಕೊಂಡು ಆ ದಿಕ್ಕಿನತ್ತ ಪ್ರವೃತ್ತನಾಗಬೇಕೆಂಬುದೇ ಗೀಜಗನ ಜೀವನ ಸಂದೇಶ.
ಜೀವನೋತ್ಸಾಹ, ಸ್ವಾಭಿಮಾನ, ಸ್ವಾವಲಂಬನೆ ಮೊದಲಾದ ಗುಣಗಳನ್ನು ನಾವು ಪ್ರಾಣಿಗಳಿಂದ ಕಲಿಯಬೇಕಾಗಿದೆ.
ಮೇಲ್ಪಂಕ್ತಿ
ಓರ್ವ ಶ್ರೀಮಂತನ ಹಿತ್ತಲ ಮನೆಯಲ್ಲಿ ಒಂದು ಗಿಡವಿತ್ತು. ಆ ಗಿಡದ ಮೇಲೊಂದು ಸಣ್ಣ ಗುಬ್ಬಿ. ಅದಕ್ಕೆ ಮಕ್ಕಳುಮರಿಯಿಲ್ಲ. ಇನ್ನೂ ತತ್ತಿಯೇ ಇಟ್ಟಿಲ್ಲ. ಗೂಡನ್ನೂ ಕಟ್ಟಿಲ್ಲ. ಇದೀಗ ಗೂಡುಕಟ್ಟುವ ಕೆಲಸ ಕೈಗೆತ್ತಿಕೊಂಡಿದೆ. ಅಲ್ಲಿಂದ-ಇಲ್ಲಿಂದ ಕಡ್ಡಿಗಳನ್ನು ಆಯ್ದು ತರುತ್ತದೆ. ಆಯ್ದ ಕಡ್ಡಿಗಳನ್ನು ಗಿಡದಲ್ಲಿಟ್ಟು ಬೇರೆ ಕಡ್ಡಿಗಳನ್ನು ತರಲು ಹೋಗುತ್ತದೆ. ಬರುವುದರಲ್ಲಿ ಗಿಡದಲ್ಲಿದ್ದ ಎಷ್ಟೊ ಕಡ್ಡಿಗಳು ಗಾಳಿಗೆ ಹಾರಿಹೋಗಿರುತ್ತವೆ. ಮತ್ತೆ ತರುತ್ತದೆ, ಮತ್ತೆ ಹಾರುತ್ತದೆ. ಹೀಗೆ ಹತ್ತಾರು ಸಲ ನಡೆಯುತ್ತದೆ. ದಣಿವಾಗಿ ಒಂದಷ್ಟು ಹೊತ್ತು ಗಿಡದಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತದೆ. ಅದನ್ನು ದೂರದಿಂದಲೇ ನೋಡುತ್ತಿದ್ದ ಮನೆಯ ಮಾಲೀಕ ಸಿರಿವಂತ ಕನಿಕರಿಸಿ ಕೆಳಗೆ ಬಂದು ಗುಬ್ಬಿಗೆ ಕೇಳುತ್ತಾನೆ: “ಗೂಡುಕಟ್ಟಲು ನೀನೆಷ್ಟು ಕಷ್ಟಪಡುತ್ತಿರುವಿ. ಆದರೆ ಗಾಳಿ ನಿನಗೆ ಗೂಡುಕಟ್ಟಲು ಕೊಡುತ್ತಿಲ್ಲ. ನಿನಗೆ ನಿರಾಶೆ ಆಗುವುದಿಲ್ಲವೇ?”
ಗುಬ್ಬಿ: “ನನ್ನ ಗೂಡು ಕೆಡಹುವ ಗಾಳಿಗೇ ಬೇಸರವಿಲ್ಲ. ಗೂಡು ಕಟ್ಟುವ ನನಗೇಕೆ ಬೇಸರ? ನಿರಾಶೆಯ ಪ್ರಶ್ನೆಯೇ ಇಲ್ಲ. ದಣಿವಾಗಿದೆಯೆಂದು ಒಂದು ಕ್ಷಣ ವಿಶ್ರಮಿಸುತ್ತಿರುವೆನಷ್ಟೆ.” ಮಾಲೀಕ: “ಅದೇಕೆ? ನಿನಗಾಗಿ ನಾನೊಂದು ಕಟ್ಟಿದ ಮನೆಯನ್ನೇ ಕೊಡುತ್ತೇನೆ. ಬಂದು ಇರು. ನನಗೆಷ್ಟೋ ಸಮಾಧಾನವಾಗುತ್ತದೆ.”
“ನಿನಗೆ ಸಮಾಧಾನವಾಗುವುದಾದರೆ ಬರುತ್ತೇನೆ” ಎಂದು ಗುಬ್ಬಿಯು ಸಿರಿವಂತನು ಕಟ್ಟಿಸಿದ ಹಾಲುಗಲ್ಲಿನ ಮನೆಯಲ್ಲಿ ಹೋಗಿ ಕುಳಿತಿತು. ಸ್ವಲ್ಪ ಸಮಯ ಗುಬ್ಬಿ ಅವನ ಮನೆಯಲ್ಲಿದ್ದು, ಮತ್ತೆ ಹಾರಿಹೋಗಿ ಕಡ್ಡಿಗಳನ್ನಾಯ್ದು ತಂದಿತು. ಆಶ್ಚರ್ಯಚಕಿತನಾದ ಮಾಲೀಕ ಕೇಳಿದ – “ಅದೇಕೆ ಮತ್ತೆ ಕಡ್ಡಿಗಳನ್ನಾಯ್ದು ಮನೆಯಲ್ಲಿ ತರುತ್ತಿರುವೆ?”
ಗುಬ್ಬಿ – “ಈ ಮನೆಯಲ್ಲೊಂದು ನನ್ನ ಮನೆಯನ್ನು ಕಟ್ಟುತ್ತಿದ್ದೇನೆ!”
ಮಾಲೀಕ – “ಅದೇಕೆ, ನಿನಗೆ ಈ ಮನೆ ಇಷ್ಟವಾಗಲಿಲ್ಲವೆ?”
ಗುಬ್ಬಿ – “ಇಷ್ಟವಾಗಿದೆ, ಆದರೆ ನಾವೆಲ್ಲ ನಾವೇ ಕಟ್ಟಿದ ಮನೆಯಲ್ಲಿ ಇರುವವರೇ ವಿನಾ ಯಾರೋ ಕೊಟ್ಟ ಮನೆಯಲ್ಲಿ ಇರುವವರಲ್ಲ!” ಆತ ಗುಬ್ಬಿಯ ಸ್ವಾಭಿಮಾನವನ್ನು ಮೆಚ್ಚಿಕೊಂಡು ಹೇಗಾದರಾಗಲಿ ಒಟ್ಟಿನಲ್ಲಿ ಗುಬ್ಬಿ ತನ್ನ ಮನೆಯಲ್ಲಿದ್ದರೆ ಸಾಕೆಂದು ಸುಮ್ಮನಾದ.
ಗುಬ್ಬಿ ಪುಟ್ಟ ಗೂಡನ್ನು ಕಟ್ಟಿ ಒಂದೆರಡು ತತ್ತಿಗಳನ್ನಿಟ್ಟು ಮರಿ ಮಾಡಿತು. ಮರಿಗಳಿಗೆ ನೋವಾದೀತೆಂದು ಸಿರಿವಂತ ಗೂಡಿನ ಕಡ್ಡಿಯ ಮೇಲೆ ಅರಳೆಯ ಹಾಸಿಗೆ ಹಾಸಿದ. ಹೊರಗಿನಿಂದ ಬಂದ ತಾಯಿ ಗುಬ್ಬಿಯು ಹಿಂದು-ಮುಂದೆ ನೋಡದೆ ಆ ಮೆತ್ತನೆ ಹಾಸಿಗೆಯನ್ನು ಹೊರಚೆಲ್ಲಿತು. ಮಾಲೀಕ – “ಅದೇಕೆ, ನಿನ್ನ ಮರಿಗಳಿಗೆ ಹಾಸಿಗೆ ಬೇಡವೆ?” ಗುಬ್ಬಿ – “ನನ್ನ ಮರಿಗಳು ನಾನು ಕಟ್ಟಿದ ಗೂಡಿನ ಕಡ್ಡಿಯ ಮೇಲೆ ಬೆಳೆಯಬೇಕೇ ವಿನಾ ಅನ್ಯರನ್ನು ಅವಲಂಬಿಸಬಾರದು” ಎಂದಿತು. ಗುಬ್ಬಿಯ ಛಲ-ಬಲ ಮೆಚ್ಚಿಕೊಂಡ ಸಿರಿವಂತ.
ನೂರಾರು ಬಾರಿ ಗೂಡು ಹಾಳಾದರೂ ಗುಬ್ಬಿ ಬೇಸರಿಸುವುದಿಲ್ಲ, ನಿರಾಶೆಗೊಳ್ಳುವುದಿಲ್ಲ. ಅಂಥದು ಅದರ ಕಾರ್ಯೋತ್ಸಾಹ. ನಾವಾದರೋ ಒಮ್ಮೆ ಎಡವಿಬಿದ್ದರೆ ಮುಗಿಲೇ ಹರಿದುಬಿದ್ದಂತೆ ಗೋಳಾಡುತ್ತೇವೆ, ಕೈಚೆಲ್ಲಿ ಕೂರುತ್ತೇವೆ. ಅದು ಕರ್ಮಯೋಗದ ಲಕ್ಷಣವಲ್ಲ.
ಇವತ್ತು ಮನುಷ್ಯನು ಪ್ರಾಣಿ ವರ್ಗಕ್ಕೆ ಆದರ್ಶವಾಗುವ ಬದಲು ಪ್ರಾಣಿಗಳು ಮನುಷ್ಯನಿಗೆ ಮಾದರಿಯಾಗುತ್ತಿದೆ. ನಾವು ಪ್ರಾಣಿಗಳಿಗೆ ಕಲಿಸುತ್ತೇವೆ. ಆದರೆ ಪ್ರಾಣಿಗಳಿಂದ ನಾವು ಕಲಿಯುವುದಿಲ್ಲ. ಸಂಸ್ಕøತದ ಸುಭಾಷಿತವೊಂದು ಹೇಳುತ್ತದೆ:
ಸಿಂಹಾದೇಕಂ ಬಕಾದೇಕಂ ಷಟ್ ಶುನಃ ತ್ರೀಣಿ ಗರ್ದಭಾತ್|
ವಾಯಸಾತ್ ಪಂಚ ಶಿಕ್ಷೇಚ್ಚ ಚತ್ವಾರಿ ಕುಕ್ಕುಟಾದಪಿ ||
ಸಿಂಹದಿಂದ (ಕರ್ತವ್ಯಶ್ರದ್ಧೆ) ಒಂದನ್ನೂ, ಕೊಕ್ಕರೆಯಿಂದ (ಏಕಾಗ್ರತೆ) ಒಂದನ್ನೂ, ನಾಯಿಯಿಂದ (ಅಲ್ಪಾಹಾರ ಸೇವನೆ, ಅಲ್ಪಾಹಾರದಿಂದಲೇ ತೃಪ್ತಿ, ಸುಖನಿದ್ರೆ, ಸದಾಪಟುತ್ವ, ಸ್ವಾಮಿನಿಷ್ಠೆ, ಶೌರ್ಯ) ಆರನ್ನೂ, ಕತ್ತೆಯಿಂದ (ವಿಶ್ರಾಂತಿ ಇಲ್ಲದೆ ಸದಾ ಕೆಲಸಗಳನ್ನು ಮಾಡುವುದು, ಗಾಳಿ ಬಿಸಿಲುಗಳಿಗೆ ಅಂಜದಿರುವುದು, ಸದಾ ಸಂತೋಷವಾಗಿರುವುದು) ಮೂರನ್ನೂ, ಕಾಗೆಯಿಂದ (ಗೂಢವಾಗಿ ರತಿಕ್ರಿಯೆ, ಧೈರ್ಯಪ್ರವೃತ್ತಿ, ಇತರ ಕಾಗೆಗಳನ್ನೂ ಆಹ್ವಾನಿಸುವುದು, ಯಾವಾಗಲೂ ಎಚ್ಚರಿಕೆಯಿಂದಿರುವುದು, ಸೋಮಾರಿಯಾಗದಿರುವಿಕೆ) ಐದನ್ನೂ, ಹುಂಜದಿಂದ (ಶತ್ರುವಿನ ವಿರುದ್ಧ ಧೈರ್ಯವಾಗಿ ಹೋರಾಟ, ಬೆಳಗ್ಗೆ ಮುಂಚಿತವಾಗಿ ಏಳುವುದು, ತನ್ನ ಪರಿವಾರದವರೊಂದಿಗೆ ಭೋಜನಕೂಟ, ತನ್ನ ಪತ್ನಿಯನ್ನು ಎಂದರೆ ಕೋಳಿಯನ್ನು ಸಂಕಟದಿಂದ ರಕ್ಷಿಸಲು ನಿರ್ಭಯದ ಯುದ್ಧ) ನಾಲ್ಕು ಪಾಠಗಳನ್ನೂ ಮನುಷ್ಯ ಕಲಿಯಬೇಕೆಂದು ಈ ಸುಭಾಷಿತ ಹೇಳುತ್ತದೆ.
ತಾಳ್ಮೆ, ಸಹನೆ
ಪ್ರಾಣಿಗಳು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತವೆ. ಬಿಸಿಲು-ಮಳೆ, ಗಾಳಿ-ಚಳಿಯೆಂದು ಗೊಣಗದೆ ಸಹಿಸಿಕೊಳ್ಳುತ್ತವೆ. ಪ್ರಾಣಿಗಳು ರಾತ್ರಿ, ಬಿರುಗಾಳಿ, ಹಸಿವು, ನಿದ್ದೆ ಇಂಥವನ್ನೆಲ್ಲ ಶಾಂತ ಮನೋಭಾವದಿಂದಲೇ ಎದುರಿಸುತ್ತವೆ. ಹಾಗಾಗಿ ಅವುಗಳಲ್ಲಿ ಖಿನ್ನತೆ, ಉದ್ವೇಗ, ನರವೈಫಲ್ಯ ಕಂಡುಬರುವುದಿಲ್ಲ. ಅವು ಎಂದೂ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುವುದಿಲ್ಲ. ಆತ್ಮಹತ್ಯೆಯ ಪರಿಚಯವೇ ಪ್ರಾಣಿಗಳಿಗಿರುವುದಿಲ್ಲ.
ಪ್ರಾಣಿಗಳು ಮನುಷ್ಯನೊಂದಿಗೆ ಪೂರ್ವಗ್ರಹ ಪೀಡಿತತೆಯಿಂದ ವರ್ತಿಸುವುದಿಲ್ಲ. ಅದು ತನ್ನ ಆತ್ಮರಕ್ಷಣೆಗೋಸ್ಕರ ಮನುಷ್ಯನ ಮೇಲೆ ಒಮ್ಮೊಮ್ಮೆ ಆಕ್ರಮಣ ಮಾಡುತ್ತವೆಯೇ ವಿನಾ ದ್ವೇಷದಿಂದಲ್ಲ. ಯಾವುದೇ ಕಾರಣವಿಲ್ಲದೆ, ಯಾವುದೇ ಲಾಭವಿಲ್ಲದೆ ಇನ್ನೊಬ್ಬನಿಗೆ ತೊಂದರೆ ಕೊಡುವುದು ಮನುಷ್ಯನ ಸ್ವಭಾವ.
ಮಿಹಿರ್ ಸೇನರು ವೃತ್ತಿಯಿಂದ ಕೋಲ್ಕತಾದ ಹಿರಿಯ ವಕೀಲರು. ಪ್ರವೃತ್ತಿಯಿಂದ ಸಾಗರದ ಈಜುಗಾರರು. ಅವರು ಜಗತ್ತಿನ ಶ್ರೇಷ್ಠ ಕಡಲುಗಾಲುವೆಗಳನ್ನೆಲ್ಲ ಈಜಿದರು. ಸಾಗರದಲ್ಲಿ ಭಯಂಕರ ಜಲಚರಪ್ರಾಣಿಗಳು ಮತ್ತು ಪರ್ವತಗಾತ್ರದ ತೆರೆಗಳು ಇರುತ್ತವೆ. ಅಂಥ ಸಾಗರವನ್ನು ನಗುನಗುತ್ತಲೇ ಈಜಿ ಅಷ್ಟೆಲ್ಲ ಸಾಹಸ ಮಾಡಿದರು. ಅವರು ತಮ್ಮ ಸಾಧನೆಯನ್ನು ಕುರಿತು ಒಂದು ಮಾತು ಹೇಳಿರುವರು: “ನನಗೆ ಎರಡು ಸಂಗತಿಗಳಲ್ಲಿ ಅಪಾರ ವಿಶ್ವಾಸ; (1) ಎಂದೂ ಸೋಲದ ನನ್ನ ಬಾಹುಗಳ ಸಾಮಥ್ರ್ಯದ ಮೇಲೆ; (2) ಸಾಗರದಲ್ಲಿರುವ ಪ್ರಾಣಿಗಳ ಪ್ರಾಮಾಣಿಕತೆಯ ಮೇಲೆ. ಅವು ಎಂದೂ ನನ್ನನ್ನು ಮುಟ್ಟಲಿಲ್ಲ. ಏಕೆಂದರೆ ಅವು ನನಗೆ ವಿರೋಧಿಗಳಲ್ಲ.” ಜಲಚರಪ್ರಾಣಿಗಳ ಮೇಲೆ ವಿಶ್ವಾಸವನ್ನಿಟ್ಟು ಮಿಹಿರ್ ಸೇನರು ಸಾಗರಗಳನ್ನೇ ಈಜಿದರು. ನಾವಾದರೂ ನಮ್ಮ ನೆರೆಹೊರೆಯವರ ಮೇಲೂ ವಿಶ್ವಾಸವನ್ನಿಡುವುದಿಲ್ಲ.
ನಾವು ಪ್ರಾಣಿಯನ್ನು ಸ್ವಲ್ಪ ಪ್ರೀತಿಸಿದರೆ ಸಾಕು ಅದು ಅದರ ಸಾವಿರಪಟ್ಟು ಅಧಿಕವಾಗಿ ನಮ್ಮನ್ನು ಪ್ರೀತಿಸುತ್ತದೆ. ಕ್ರೂರ ಪ್ರಾಣಿಗಳೂ ಕೂಡ ಪ್ರೀತಿಗೆ ಸ್ಪಂದಿಸುತ್ತವೆ. ನಾವು ಮಾಡಿದ ಉಪಕಾರಕ್ಕೆ ಅದು ಪ್ರತ್ಯುಪಕಾರ ಮಾಡುತ್ತದೆ. ಮಾಡಿದ ಉಪಕಾರವನ್ನು ಮರೆಯುವ ಜಾಯಮಾನ ಮನುಷ್ಯರಲ್ಲಿ ಮಾತ್ರ ಕಂಡುಬರುತ್ತದೆ.
ಸಹ–ಬಾಳ್ವೆ
ಸಖರಾಯಪಟ್ಟಣದಲ್ಲಿ ವೆಂಕಟಾಚಲ ಅವಧೂತರೆಂಬ ಸಾಧುಗಳಿದ್ದರು. ಅವರು ಪವಾಡ ಪುರುಷರೇ ಆಗಿದ್ದರು. ಅವರನ್ನು ಅವರ ಶಿಷ್ಯರೆಲ್ಲರೂ ಗುರುನಾಥರೆಂಬುದಾಗಿ ಸಂಬೋಧಿಸಿ ಗೌರವಿಸುತ್ತಿದ್ದರು. ಅವರು ಹೇಳಿದ ಘಟನೆಯೊಂದು ಹೀಗಿದೆ:
ಒಮ್ಮೆ ಗುರುಬಂಧುವೊಬ್ಬರು ತಮ್ಮ ಸ್ವಂತ ಬಸ್ಸನ್ನು ಓಡಿಸುತ್ತಿರುವಾಗ ಇದ್ದಕ್ಕಿದ್ದಂತೆ ಬಸ್ಸಿಗೆ ಅಡ್ಡವಾಗಿ ಬಂದ ನಾಗರಹಾವನ್ನು ಉಳಿಸಲು ಬ್ರೇಕ್ ಹಾಕಿದ ಕಾರಣ ಬಸ್ಸಿನ ಟೈರ್ ಉಜ್ಜಿಹೋಗಿತ್ತು. ಅವರು ಒಂದು ಹೊಸ ಟೈರನ್ನು ಖರೀದಿಸಿ ಬಸ್ಸಿನ ಮೇಲೆ ಇಟ್ಟಿದ್ದರು. ಆ ಟೈರ್ ಯಾವ ಮಾಯದಲ್ಲೋ ಬಸ್ಸಿನಿಂದ ಕೆಳಗೆ ಬಿದ್ದದ್ದು ಅವರ ಗಮನಕ್ಕೆ ಬಂದಿರಲಿಲ್ಲ. ಒಂದು ದಿನ ಬಸ್ಸನ್ನು ನಿಲ್ಲಿಸಿ ಮನೆಗೆ ಹೋಗುವ ಮುನ್ನ ಟೈರ್ ಕಾಣದಿರುವುದನ್ನು ಕಂಡು ಎಲ್ಲರಲ್ಲೂ ವಿಚಾರಿಸಿ ಎಲ್ಲ ಕಡೆಯಲ್ಲೂ ಹುಡುಕಿದರೂ ಸಿಗದೆ ಚಿಂತಿತರಾದರು. ಟೈರ್ ಕಳೆದುಹೋಗಿದ್ದ ಐದನೇ ದಿನದಂದು ಗುರುನಾಥರನ್ನು ಕಂಡು ನಮಸ್ಕರಿಸಿ ನಡೆದ ವಿಚಾರ ಎಲ್ಲವನ್ನೂ ತಿಳಿಸಿದರಂತೆ. ಆಗ ಗುರುನಾಥರು ‘ಚಿಂತಿಸಬೇಡ, ನೀವು ಕಾಪಾಡಿದ್ದ ನಾಗರಹಾವೇ ನಿಮ್ಮ ಟೈರನ್ನು ಕಾಯುತ್ತಿದೆ. ಇಂಥ ಕಡೆಯಲ್ಲಿ ನಿಮ್ಮ ಬಸ್ಸಿನ ಟೈರ್ ಇದೆ. ಹುಷಾರು, ಅದರ ಕೆಳಗೆ ನಾಗರಹಾವು ಕಾಣದಂತಿದೆ’ ಎಂದರಂತೆ. ಅವರು ಅಲ್ಲಿಗೆ ಹೋಗಿ ನೋಡಿದಾಗ ಟೈರ್ ಸಿಕ್ಕಿತು. ಅಲ್ಲಿದ್ದ ನಾಗರಹಾವಿಗೆ ನಮಸ್ಕರಿಸಿ ಟೈರ್ ತೆಗೆದುಕೊಂಡು ಬಂದರು. ಪ್ರಾಣಿಗಳು ಮನುಷ್ಯನ ಋಣವನ್ನು ಯಾವತ್ತೂ ಇಟ್ಟುಕೊಳ್ಳುವುದಿಲ್ಲ.
ದತ್ತಾತ್ರೇಯನ ಆದರ್ಶ
ಮನುಷ್ಯ ತನ್ನನ್ನು ತಾನೆ ಶ್ರೇಷ್ಠ ಪ್ರಾಣಿ ಎಂಬುದಾಗಿ ಘೋಷಿಸಿಕೊಂಡಿದ್ದಾನೆ. ಆದರೆ ಪ್ರಾಣಿಗಳಲ್ಲಿರುವ ಮುಗ್ಧತೆ, ಪರಿಶುದ್ಧತೆ, ಪ್ರಾಮಾಣಿಕತೆ, ನಿಃಸ್ವಾರ್ಥತೆ, ಪ್ರೀತಿ, ನಿಷ್ಕಪಟತೆ, ಪ್ರತ್ಯುಪಕಾರಬುದ್ಧಿ ಮನುಷ್ಯನಲ್ಲಿ ಮಾಯವಾಗುತ್ತಿದೆ. ಜಗತ್ತಿನ ಆದಿಗುರುವೆನಿಸಿದ ದತ್ತಾತ್ರೇಯ ‘ಪ್ರಕೃತಿಯ 24 ತತ್ತ್ವಗಳಿಂದ ನಾನು ಪಾಠ ಕಲಿತಿದ್ದೇನೆ’ ಎಂಬುದಾಗಿ ಹೇಳಿದ್ದಾನೆ. ಎಂದರೆ ಸೂರ್ಯ, ಚಂದ್ರ, ಭೂಮಿ ಮೊದಲಾದವುಗಳಿಂದ ಹಾಗೂ ಹಲವಾರು ಪ್ರಾಣಿಗಳಿಂದಲೂ ದತ್ತಾತ್ರೇಯ ಪಾಠ ಕಲಿತಿದ್ದಾನೆ. ಪಾರಿವಾಳದಿಂದ ‘ಮೋಹ ಸಲ್ಲದು’, ಹೆಬ್ಬಾವಿನಿಂದ ‘ಹೊಟ್ಟೆ ತುಂಬಿದ ಮೇಲೆ ಧ್ಯೇಯ ಸಾಧನೆಯತ್ತ ಗಮನಹರಿಸಬೇಕು’, ಪತಂಗದಿಂದ ‘ಆಸೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು’, ಜೇನುನೊಣದಿಂದ ‘ಅತಿಯಾದ ಸಂಗ್ರಹ ಸಲ್ಲದು’, ಆನೆಯಿಂದ ‘ಕಾಮವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು’, ದುಂಬಿಯಿಂದ ‘ಇತರರಿಗೆ ತೊಂದರೆಯಾಗದಂತೆ ಹಿತಮಿತವಾಗಿ ನಾವು ಪಡೆಯಬೇಕು’, ಹದ್ದಿನಿಂದ ‘ವಸ್ತು, ವ್ಯಕ್ತಿ, ಪದವಿ ಮುಂತಾದವನ್ನು ಬಿಟ್ಟುಗೊಟ್ಟು ನಿಶ್ಚಿಂತೆಯನ್ನು ಪಡೆಯಬೇಕು’, ಜಿಂಕೆ, ಮೀನಿನಿಂದ ‘ಆಮಿಷಕ್ಕೆ ಬಲಿಯಾಗಬಾರದು’, ಜೇಡರ ಹುಳದಿಂದ ‘ತನ್ನಿಂದಲೇ ಈ ಸೃಷ್ಟಿಯನ್ನೆಲ್ಲ ಹೊಮ್ಮಿಸಿ, ಕೊನೆಗೆ ತನ್ನಲ್ಲೇ ಅಡಗಿಸಿಕೊಂಡುಬಿಡುತ್ತದೆ!’ ಎಂಬಿತ್ಯಾದಿ ಪಾಠಗಳನ್ನು ದತ್ತಾತ್ರೇಯ ಪ್ರಾಣಿ, ಪಕ್ಷಿಗಳಿಂದ ಕಲಿತಿದ್ದಾನೆ.
ಹೀಗೆ ಜಗತ್ತಿನ ಆದಿಗುರುವೇ ಪ್ರಾಣಿಗಳಿಂದ ಇಂತಹ ಪಾಠಗಳನ್ನು ಕಲಿಯಬೇಕಾದರೆ, ಹುಲುಮಾನವರಾದ ನಾವು ಕೂಡ ಪ್ರಾಣಿಗಳಿಂದ ಕಲಿಯಬೇಡವೆ? ದತ್ತಾತ್ರೇಯನು ಭ್ರಾಮರಿಯಿಂದ ಬಹು ದೊಡ್ಡ ಪಾಠವೊಂದನ್ನು ಕಲಿತಿದ್ದಾನೆ. ಒಂದು ಬಗೆಯ ಭ್ರಾಮರಿಯಿದೆ. ಅದು ಕೀಟವನ್ನು ಹಿಡಿದು ತಂದು, ಗೂಡುಕಟ್ಟಿ ಅದರಲ್ಲಿ ಕೂಡಿಡುತ್ತದೆ. ಆಗಾಗ ಬಂದು ಗೂಡಿನಲ್ಲಿರುವ ಆ ಕೀಟವನ್ನು ಕುಟುಕುತ್ತದೆ. ಭ್ರಾಮರಿ ಕುಟುಕುವ ಭಯದಿಂದ ನರಳಿ ನರಳಿ ಕೀಟ ಕ್ರಮೇಣ ಭ್ರಾಮರಿಯಾಗಿಯೇ ಪರಿವರ್ತನೆಯಾಗಿ ಗೂಡನ್ನು ಮುರಿದು ಹಾರಿಹೋಗುತ್ತದಂತೆ! ಅದೇ ರೀತಿ ‘ಯದ್ಭಾವಂ ತದ್ಭವತಿ’ ಎಂಬ ಮಾತಿನಂತೆ ನಾವು ಏನನ್ನು ಉತ್ಕಟವಾಗಿ ಆಲೋಚಿಸುತ್ತೇವೆಯೋ, ಅದೇ ಆಗುತ್ತೇವೆ ಎನ್ನುವ ತಥ್ಯವನ್ನು ಇದರಿಂದ ದತ್ತಾತ್ರೇಯ ಕಲಿತ. ಬ್ರಹ್ಮಚಿಂತನೆ ಮಾಡುತ್ತ ಬ್ರಹ್ಮವೇ ಆಗುವ ಜಾಣ್ಮೆಯನ್ನು ಕಲಿತ. ಹೀಗೆ ಪಶು-ಪಕ್ಷಿಗಳಿಂದ ಏನೆಲ್ಲ ಒಳ್ಳೆಯ ಪಾಠಗಳನ್ನು ಕಲಿಯಲಾಗುತ್ತದೊ ಅವನ್ನೆಲ್ಲ ಕಲಿತು ಜೀವನ್ಮುಕ್ತರಾಗಲು ನಾವೂ ಪ್ರಯತ್ನಿಸೋಣ.