ಸಂಸಾರದಲ್ಲಿ ಹೆಂಡತಿಗೆ ಗಂಡ ತನ್ನ ಹಿಡಿತದಲ್ಲಿರಬೇಕೆಂಬ ಅಪೇಕ್ಷೆ. ಗಂಡನಿಗೆ ಹೆಂಡತಿ ತಾನು ಹೇಳಿದಂತೆ ಬಿದ್ದಿರಬೇಕೆಂಬ ಬಯಕೆ. ಆದರೆ ಇಬ್ಬರ ಅಪೇಕ್ಷೆ – ಬಯಕೆಗಳು ಪೂರ್ತಿಯಾಗಿ ಈಡೇರಲಾರವು. ಗಂಡ ಹೆಂಡತಿಯ, ಹೆಂಡತಿ ಗಂಡನ ಕಾಲೆಳೆಯುವ ಪ್ರವೃತ್ತಿ ಪ್ರತಿಯೊಬ್ಬರ ಸಂಸಾರದಲ್ಲೂ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿದರೆ ಸಂಸಾರದ ಗಾಲಿಗಳು ಚಲಿಸುವುದಿಲ್ಲ.
ಸಂಸಾರದಲ್ಲಿ ಸಾರ ಇರುವುದೇ ದಂಪತಿಗಳ ಜಗಳದಲ್ಲಿ. ಭಿನ್ನಮತವಿಲ್ಲದ ಸಂಸಾರ ನಿಸ್ಸಾರವೇ ಸರಿ. ವಿರಸ ಅತಿಯಾದಾಗ ಸರಸ ಹುಟ್ಟುತ್ತದೆ. ಸರಸ ಅಧಿಕವಾದಾಗ ವಿರಸ ಹುಟ್ಟುತ್ತದೆ – ಸರಸ-ವಿರಸಗಳು ಒಂದೇ ನಾಣ್ಯದ ಎರಡು ಮುಖಗಳು. ಈ ಸರಸ-ವಿರಸದ ಸಾಗರದಲ್ಲಿ ಪೂರ್ತಿ ಮುಳುಗದೆ ಈಜಾಡಿ ಯಾರು ಮುಂದಕ್ಕೆ ಹೋಗುತ್ತಾರೊ ಅವರೇ ಸಂಸಾರದಲ್ಲಿ ಯಶಸ್ವಿಯಾಗಲು ಸಾಧ್ಯ. ಸರಸ-ವಿರಸ ಬೇಡವಾದರೆ ನಾವು ಸಂಸಾರಿಗಳಾಗದೆ ಸಂನ್ಯಾಸಿಗಳಾಗಬೇಕು. ಸಂನ್ಯಾಸಿಗಳ ಬದುಕು ಎಂದರೆ ಏರಿಳಿತವಿಲ್ಲದ ಅಂಕುಡೊಂಕಿನ ವಕ್ರರೇಖೆ. ಆದರೆ ವೈದ್ಯಕೀಯವಾಗಿ ಮನುಷ್ಯನ ಹೃದಯದ ಗತಿ ಇ.ಸಿ.ಜಿ ಮೂಲಕ ನೋಡಿದಾಗ ವಕ್ರರೇಖೆ ಜೀವಂತಿಕೆಯ ಲಕ್ಷಣ. ಸರಳರೇಖೆ ನಿರ್ಜೀವತೆಯ ಲಕ್ಷಣ. ಸಾವಿಲ್ಲದ ಮನೆಯಾದರೂ ಸಿಗಬಹುದು; ಆದರೆ ಜಗಳವಿಲ್ಲದ ಮನೆ ಸಿಗುವುದು ಕಷ್ಟ. ಜಗಳವೇ ಇಲ್ಲದಿದ್ದರೆ ಅದು ಮನೆಯೋ, ಸ್ಮಶಾನವೋ ಎಂಬ ಸಂಶಯ ಬರುತ್ತದೆ. ಮನೆಯಲ್ಲಿ ಕಲಹವೇ ಇಲ್ಲದಿದ್ದರೆ ದಂಪತಿಗಳಲ್ಲಿ ಯಾರಾದರೊಬ್ಬರಲ್ಲಿ ನ್ಯೂನತೆ ಇರಬೇಕೆಂದು ಜನ ಭಾವಿಸುತ್ತಾರೆ.
ನ್ಯಾಯಾಧೀಶನ ಬಳಿಗೆ ಬಂದ ಮಹಿಳೆಯೊಬ್ಬಳು ತನ್ನ ಸಮಸ್ಯೆಯನ್ನು ತೋಡಿಕೊಂಡಳು – “ನನ್ನ ಗಂಡ ಸಿಗರೇಟು ಸೇದುವುದಿಲ್ಲ, ಹೆಂಡ ಕುಡಿಯುವುದಿಲ್ಲ. ಪಾರ್ಟಿಗೆ ಹೋಗಿ ತಡವಾಗಿ ಬರುವುದಿಲ್ಲ. ಕೆಲಸದ ಮೇಲೆ ಭಾನುವಾರ ಆಫೀಸ್ಗೆ ಹೋಗುವುದಿಲ್ಲ. ಹೇಳಿದ ಸಮಯಕ್ಕಿಂತ ಮೊದಲೇ ಮನೆಗೆ ಬಂದುಬಿಡುತ್ತಾನೆ. ನನ್ನ ಬಯ್ಯುವುದಿಲ್ಲ, ಹೊಡೆಯುವುದಿಲ್ಲ, ಮಕ್ಕಳನ್ನು ಮುದ್ದು ಮಾಡುತ್ತಾನೆ. ನನ್ನ ಗಂಡ ಮಾದರಿ ಯಜಮಾನ.”
ನ್ಯಾಯಾಧೀಶ: “ಹಾಗಾದರೆ ನ್ಯಾಯಾಲಯಕ್ಕೆ ಏಕೆ ಬಂದೆ?
ಮಹಿಳೆ: “ನನ್ನ ಗಂಡ ನಿಜವಾದ ಗಂಡಸೇ ಅಲ್ಲ ನ್ಯಾಯಾಧೀಶರೆ…?”
ಸಂಸಾರದಲ್ಲಿ ಹೆಂಡತಿಗೆ ಗಂಡ ತನ್ನ ಹಿಡಿತದಲ್ಲಿರಬೇಕೆಂಬ ಅಪೇಕ್ಷೆ. ಗಂಡನಿಗೆ ಹೆಂಡತಿ ತಾನು ಹೇಳಿದಂತೆ ಬಿದ್ದಿರಬೇಕೆಂಬ ಬಯಕೆ. ಆದರೆ ಇಬ್ಬರ ಅಪೇಕ್ಷೆ – ಬಯಕೆಗಳು ಪೂರ್ತಿಯಾಗಿ ಈಡೇರುವುದೇ ಇಲ್ಲ. ಗಂಡ ಹೆಂಡತಿಯ, ಹೆಂಡತಿ ಗಂಡನ ಕಾಲೆಳೆಯುವ ಪ್ರವೃತ್ತಿ ಪ್ರತಿಯೊಬ್ಬರ ಸಂಸಾರದಲ್ಲೂ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿದರೆ ಸಂಸಾರದ ಗಾಲಿಗಳು ಚಲಿಸುವುದಿಲ್ಲ. ಅದು ನಿಂತ ಕೆಸರಿನ ನೀರಿನಂತಾಗಿ ಜೀವನವೆಲ್ಲ ದುರ್ಗಂಧವಾಗುತ್ತದೆ. ಆದ್ದರಿಂದ ದಾಂಪತ್ಯದಲ್ಲಿ ಟೀಕೆ-ಟಿಪ್ಪಣಿಗಳನ್ನು ಹಾಸ್ಯವಾಗಿ ಪರಿಗಣಿಸಿ ಅದನ್ನು ಪ್ರತಿಹಾಸ್ಯದಿಂದಲೇ ಪರಿಹರಿಸಬೇಕು.
ಒಂದು ಮಗು ಸುಮ್ಮನೆ ಅರಚಿಕೊಳ್ಳುತ್ತಿತ್ತು. ಮಗುವಿನ ತಾಯಿ ಗಂಡನಿಗೆ “ನೋಡ್ರೀ ಮಗೂ ಯಾಕೆ ಅರಚುತ್ತಾ ಇದೆ… ಗುಂಡುಕಲ್ಲಿನ ಹಾಗೆ ಕೂತುಬಿಡ್ತೀರಲ್ಲಾ?” ಎಂದಳು. ಬೇಸರದಿಂದ ಕುರ್ಚಿ ಬಿಟ್ಟು ಎದ್ದ ಗಂಡ ‘ಈ ಮುಂಡೇದಕ್ಕೆ ಬೇರೆ ಏನು ಗೊತ್ತು. ಮೂರು ಹೊತ್ತು ಬಡಕೊಳ್ತಾ ಇರುತ್ತದೆ’ ಎಂದು ಗೊಣಗುತ್ತ, “ಏ, ಸುಮ್ನಿರು. ಯಾಕೆ ಕಿರುಚಿಕೊಳ್ತಿಯಾ, ಏನು ಬೇಕು?” ಎಂದು ಕೇಳಿದಾಗ ಮಗು ಬೀದಿಯಲ್ಲಿ ನಿಂತಿದ್ದ ಒಂದು ಕತ್ತೆಯ ಕಡೆ ಕೈ ತೋರಿಸಿ… “ನಾನು ಅದರ ಮೇಲೆ ಕುಳಿತು ಸವಾರಿ ಮಾಡ್ಬೇಕು” ಎನ್ನುತ್ತ ಮತ್ತೆ ಅರಚಲು ಶುರುಮಾಡಿತು. ಇದನ್ನು ಕೇಳಿಸಿಕೊಂಡ ಮಗುವಿನ ತಾಯಿ… “ರೀ… ಏನೋ ಮಗು ಆಸೆ ಪಡುತ್ತದೆ.. ಒಂದೆರಡು ನಿಮಿಷ ನಿಮ್ಮ ಬೆನ್ನ ಮೇಲೆ ಕೂರಿಸ್ಕೊಂಡು ಆಟ ಆಡಿಸೋಕೆ ಆಗಲ್ವ?” ಎಂದಾಗ ಗಂಡ ಪೆಚ್ಚಾಗಿ ಮಗುವನ್ನು ಎತ್ತಿಕೊಂಡ.
ಗಂಡನಿಗೆ ಸಿಟ್ಟು ಬಂತು. ನನ್ನನ್ನೇ ಕತ್ತೆ ಎನ್ನುತ್ತಾಳಲ್ಲ! ಇವಳಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ನಿಶ್ಚಯಿಸಿದ. ಮರುದಿನ ಆತ ಒಂದು ಕತ್ತೆಯನ್ನು ಕೊಂಡುತಂದ. ಹೆಂಡತಿಯ ಮುಂದೆ ನಿಂತು, ತಾನೊಂದು ಕತ್ತೆ ತಂದಿರುವುದಾಗಿಯೂ, ಇಂದಿನಿಂದ ಅವಳು ಅದರ ಚಾಕರಿ ಮಾಡಬೇಕೆಂದು ಆಜ್ಞಾಪಿಸಿದ. ಅವಳೇನೊ ಸರಿಸುಮಾರಿನವಳಲ್ಲ. ಬಹಳ ಹಠವಾದಿ, ಘಮಂಡಿ ಹೆಣ್ಣುಮಗಳು. ಅವಳು ಸಾರಾಸಗಟು ಇವನ ಮಾತನ್ನು ತಿರಸ್ಕರಿಸಿದಳು. ತನ್ನಿಂದ ಸಾಧ್ಯವೇ ಇಲ್ಲವೆಂದೂ, ಕತ್ತೆ ಕೊಂಡುತರುವ ಮುನ್ನ ತನ್ನ ಅಭಿಪ್ರಾಯವನ್ನು ಕೇಳಿಲ್ಲವೆಂದೂ, ತನಗೆ ಮನೆಕೆಲಸವೇ ಸಾಕಷ್ಟಿದೆಯೆಂದೂ ಕೂಗಾಡಿದಳು.
ಮಾತಿಗೆ ಮಾತು ಬೆಳೆಯಿತು. ವಾಗ್ವಾದ ನಡೆಯಿತು. ಕಡೆಗೆ ಇಬ್ಬರು ಒಂದು ಒಪ್ಪಂದಕ್ಕೆ ಬಂದರು. ಇಬ್ಬರೂ ಒಬ್ಬರನ್ನೊಬ್ಬರು ಮಾತನಾಡಿಸಬಾರದು; ಯಾರು ಮೊದಲು ಮಾತನಾಡುತ್ತಾರೋ ಅವರು ಕತ್ತೆಯ ಚಾಕರಿ ಮಾಡಬೇಕು ಎಂದಾಯಿತು. ಹೆಂಡತಿ ಸಿಡಿಗುಟ್ಟುತ್ತಾ ತವರಿಗೆ ಹೊರಟುಹೋದಳು. ಗಂಡ ಒಂದು ಕೋಣೆಯ ಮೂಲೆ ಸೇರಿದ.
ರಾತ್ರಿಯಾಯಿತು. ಹೆಂಡತಿ ಮರಳಲಿಲ್ಲ. ಗಂಡನೂ ಕುಳಿತಲ್ಲಿಂದ ಅಲುಗಾಡಲಿಲ್ಲ. ವಿಷಯ ತಿಳಿದ ಕಳ್ಳನೊಬ್ಬ ಇವರ ಮನೆಹೊಕ್ಕ. ಇದ್ದಬದ್ದ ಸಾಮಾನುಗಳನ್ನೆಲ್ಲ ಗಂಟುಕಟ್ಟಿದ. ಮೂಲೆಯಲ್ಲಿ ಕಲ್ಲಿನ ವಿಗ್ರಹದಂತೆ ಕುಳಿತಿದ್ದ ಗಂಡನನ್ನು ಕಂಡ. ಇವನು ಸಾಮಾನು ಒಟ್ಟು ಮಾಡುವುದನ್ನು ಕಂಡರೂ, ಒಂದೂ ಮಾತನಾಡದ ಅವನನ್ನು ಕಂಡು ಹುಚ್ಚನೊ, ಬೆಪ್ಪನೊ ಇರಬೇಕೆಂದು ಭಾವಿಸಿದ.
ಗಂಡ ಕಳ್ಳನನ್ನು ನೋಡುತ್ತಲೇ ಇದ್ದ. ಸಿಟ್ಟು ಏರುತ್ತಿತ್ತು. ಮಾತನಾಡಿದರೆ ಕತ್ತೆಯ ಚಾಕರಿ ಮಾಡಬೇಕಾಗಿ ಬರುತ್ತದಲ್ಲ! ಹಾಗಾಗಿ ಸುಮ್ಮನೇ ಇದ್ದ. ಕಳ್ಳನ ಕೆಲಸ ಸುಲಭವಾಯಿತು. ಇವನು ಹಾಕಿಕೊಂಡ ನಿಲುವಂಗಿಯನ್ನು ಕಿತ್ತುಕೊಂಡ. ಕೆಲಸ ಮುಗಿಯಿತು. ಹೊರಗೆ ಬಂದವ ಗೂಟಕ್ಕೆ ಕಟ್ಟಿ ಹಾಕಿದ, ಹುಲ್ಲು ಮೇಯುತ್ತಿರುವ ಕತ್ತೆಯನ್ನು ಕಂಡ. ಎಲ್ಲ ಸಾಮಾನನ್ನು ಅದರ ಮೇಲೆ ಏರಿಸಿ, ಹೊರಟುಹೋದ!
ಪಕ್ಕದ ಮನೆಯವರು ಇದನ್ನು ನೋಡಿದರು. ಓಡುತ್ತಾ ಹೋಗಿ ಆತನ ಹೆಂಡತಿಗೆ ನಡೆದ ಸಂಗತಿಯನ್ನು ವಿವರಿಸಿದರು. ಅವಳಿಗೆ ಬ್ರಹ್ಮಾಂಡದಷ್ಟು ಸಿಟ್ಟು ಬಂತು. ನೇರವಾಗಿ ಬಂದು ನೋಡುತ್ತಾಳೆ, ಮನೆ ಪೂರ್ತಿ ಸೂರೆಯಾಗಿ ಹೋಗಿದೆ. ಒಂದು ಬೆತ್ತ ತಂದು ಗಂಡನಿಗೆ ನಾಲ್ಕು ಬಾರಿಸಿದಳು. “ನಿನ್ನಿಂದ ನನ್ನ ಬದುಕು ಹಾಳಾಯಿತು. ಮನೆಪೂರ್ತಿ ಸೂರೆಯಾದರೂ ಸುಮ್ಮನಿದ್ದ ನೀನೆಂಥ ಗಂಡು?” ಎಂದು ಕಿರುಚಾಡಿದಳು. ಗಂಡ ವಿಜಯದಿಂದ ಬೀಗುತ್ತಾ, “ಹೆಣ್ಣೇ ನಾ ಗೆದ್ದೆ. ಸೋತ ನೀನೀಗ ಕತ್ತೆಯ ಚಾಕರಿ ಮಾಡಬೇಕು”ಎಂದ. ‘ಕತ್ತೆಯ ಚಾಕರಿ ಮಾಡಲು ಕತ್ತೆನೆ ಇಲ್ಲವಲ್ಲ’ ಎನ್ನುತ್ತ ಬೆತ್ತದಿಂದ ಗಂಡನಿಗೆ ಇನ್ನೆರಡು ಬಾರಿಸಿದಳು. ಆದರೂ ಹೆಂಡತಿಯಿಂದ ಚಾಕರಿ ಮಾಡಿಸಲೇಬೇಕೆಂಬ ಹಟದಿಂದ ಗಂಡ ಹೊಸ ಕತ್ತೆಯೊಂದನ್ನು ತರಲು ಹೋದ.
* * *
ಒಂದು ಮನೆಯಲ್ಲಿ ಕತ್ತೆ ಒದ್ದು ಓರ್ವನ ಹೆಂಡತಿ ಸತ್ತುಹೋದಳು. ಆತ ಕತ್ತೆಗೆ ಶೃಂಗಾರ ಮಾಡಿಸಿ ಆಕೆಯ ಶವಯಾತ್ರೆಯನ್ನು ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸಾಗಿಸುತ್ತಿದ್ದ. ಕತ್ತೆಯ ಹಿಂದೆ ನೂರಾರು ಗಂಡಸರು ಸಾಲುಗಟ್ಟಿ ನಿಂತಿದ್ದರು. ‘ಶವಯಾತ್ರೆಗೆ ಇಷ್ಟೊಂದು ಗಂಡಸರು ಯಾಕೆ ಸಾಲುಗಟ್ಟಿ ನಿಂತಿದ್ದಾರೆ?’ ಎಂದು ಈತ ಕೇಳಿದ. ‘ಎಲ್ಲ ಗಂಡಸರು ಆ ಕತ್ತೆಯನ್ನು ದುಡ್ಡುಕೊಟ್ಟು ಕೊಂಡುಕೊಳ್ಳಬೇಕೆಂದು ‘ಕ್ಯೂ’ನಲ್ಲಿ ನಿಂತಿದ್ದಾರೆ’ ಎಂದು ಯಾರೊ ಉತ್ತರಿಸಿದರು. ನನ್ನಂತೆ ಸಮಾನದುಃಖಿಗಳು ಈ ಜಗತ್ತಿನಲ್ಲಿ ಹಲವಾರು ಗಂಡAದಿರಿದ್ದಾರೆ ಎಂಬ ಸಮಾಧಾನದಿಂದ ಗಂಡ ಮನೆಗೆ ಹಿಂತಿರುಗಿದ.
* * *
ಓರ್ವನ ಹೆಂಡತಿ ಕೋಮಾದಲ್ಲಿದ್ದಳು. ಆಕೆ ಸತ್ತಿದ್ದಾಳೆಂದು ಭಾವಿಸಿದ ಎಲ್ಲರೂ ದೇಹವನ್ನು ಸ್ಮಶಾನದತ್ತ ಹೊತ್ತೊಯ್ದರು. ದಾರಿಯಲ್ಲಿ ಲೈಟ್ಕಂಬವೊಂದಕ್ಕೆ ಡಿಕ್ಕಿ ಹೊಡೆದು ಹೆಂಡತಿಗೆ ಎಚ್ಚರವಾಗಿಬಿಟ್ಟಿತು! ಒಂದು ವರ್ಷದ ನಂತರ ಆಕೆ ನಿಜವಾಗಿಯೂ ಸತ್ತುಹೋದಳು. ಈ ಬಾರಿ ಶವಯಾತ್ರೆ ಹೊರಟಾಗ ಎಲ್ಲರೂ “ಗೋವಿಂದ, ಗೋವಿಂದ” ಎನ್ನುತ್ತಿದ್ದರೆ, ಗಂಡ ಮಾತ್ರ ಒಂದೇ ಮಾತನ್ನು ಪುನಃಪುನಃ ಹೇಳುತ್ತಿದ್ದ: “ಕಂಬ ಬಂತು ಹುಷಾರು, ಕಂಬ ಬಂತು ಹುಷಾರು!”
* * *
ಲಾಡ್ಜ್ವೊಂದರಲ್ಲಿ ಗಂಡ ಮತ್ತು ಹೆಂಡತಿ ತಂಗಿದ್ದರು. ಇಬ್ಬರ ನಡುವೆಯೂ ಜಗಳವಾಯಿತು. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆಂಡತಿ ಹೆದರಿಸಿದಳು. ಗಂಡ ಲಾಡ್ಜ್ನ ಕಸ್ಟಮರ್ಕೇರ್ಗೆ ಫೋನ್ ಮಾಡಿದ.
ಗಂಡ: “ನನ್ನ ಹೆಂಡತಿ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಹೇಳುತ್ತಿದ್ದಾಳೆ. ದಯವಿಟ್ಟು ಯಾರನ್ನಾದರೂ ಇಲ್ಲಿಗೆ ಕಳುಹಿಸಿ.”
ಆ ಕಡೆಯಿಂದ: “ಅದು ನಿಮ್ಮ ವೈಯಕ್ತಿಕ ಸಮಸ್ಯೆ. ನಾವು ಅದನ್ನೆಲ್ಲ ಬಗೆಹರಿಸುವುದಿಲ್ಲ.”
ಗಂಡ: “ವೈಯಕ್ತಿಕ ಸಮಸ್ಯೆ ಅಲ್ಲ. ಆಕೆ ಎಷ್ಟೇ ಪ್ರಯತ್ನಿಸಿದರೂ ಕಿಟಕಿಯ ಬಾಗಿಲು ಓಪನ್ ಆಗುತ್ತಿಲ್ಲ. ಕಿಟಕಿ ರಿಪೇರಿ ಮಾಡಿಸಬೇಕಾಗಿದ್ದು ನಿಮ್ಮ ಜವಾಬ್ದಾರಿ!”
* * *
ಗಂಡನೊಬ್ಬ ಎಲ್.ಐ.ಸಿ. ಏಜೆಂಟ್ನ ಬಳಿಗೆ ಹೋಗಿ: “ಸ್ವಾಮಿ ನನ್ನ ಹೆಂಡತಿಯ ಹೆಸರಿಗೆ ಒಂದು ಎಲ್.ಐ.ಸಿ. ಪಾಲಿಸಿ ಮಾಡಿ” ಎಂದನು.
ಅದಕ್ಕೆ ಏಜೆಂಟನು, “ಅಲ್ಲಯ್ಯಾ ನಿನ್ನ ಹೆಸರಿಗೆ ಬಿಟ್ಟು ನಿನ್ನ ಹೆಂಡತಿಯ ಹೆಸರಿಗೆ ಯಾಕೆ ಮಾಡಿಸುತ್ತೀಯಾ?”
ಅದಕ್ಕೆ ಗಂಡ ಬೇಸರದಿಂದ ಹೇಳಿದ: “ಇಲ್ಲ ಸ್ವಾಮಿ, ನನ್ನ ಹೆಂಡತಿ ಮಾತುಮಾತಿಗೆ ವಿಷಕುಡಿದು ಸಾಯುತ್ತೇನೆ, ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಹೇಳುತ್ತಿರುತ್ತಾಳೆ. ಅದಕ್ಕೆ ಒಂದು ಪಾಲಿಸಿ ಇರಲಿ ಎಂದು ಮಾಡಿಸುತ್ತಿದ್ದೇನೆ.”
ರೈತನ ಬಣವೆಗೆ ಬೆಂಕಿ ಬಿತ್ತು. ಜೀವ ವಿಮಾ ಅಧಿಕಾರಿ ಬಂದು ಹೇಳಿದ, “ನಿನಗೆ ಹಣ ನೀಡಲಾಗುವುದಿಲ್ಲ. ಅದರ ಬದಲು ಎಷ್ಟು ಸುಟ್ಟಿದೆಯೋ ಅಷ್ಟೇ ಹುಲ್ಲನ್ನು ನೀಡುತ್ತೇನೆ.” ಆತನ ಮಾತು ಕೇಳಿದ ರೈತ ಹೇಳಿದ: “ಹಾಗಾದರೆ ನನ್ನ ಹೆಂಡತಿಯ ಇನ್ಸೂರೆನ್ಸ್ ರದ್ದು ಮಾಡಿ.”
* * *

ಮುತ್ತಾತ ತನ್ನ ನೂರನೆಯ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ತಾ ಇದ್ದ. “ತಾತ ನಿನ್ನ ದೀರ್ಘಾಯುಷ್ಯದ ಗುಟ್ಟೇನು?” ಎಂದು ಕೇಳಿದ ಮೊಮ್ಮಗ. ತಾತ ಹೇಳಿದ, “ನಾನು ನಿಮ್ಮಜ್ಜೀನ ಮದುವೆಯಾಗಿ ೭೫ ವರ್ಷ ಆಯಿತು. ಜಗಳ ಆಡಿದಾಗಲೆಲ್ಲಾ ಜಗಳ ತೆಗೆದವರು, ಜಗಳದಲ್ಲಿ ಸೋತವರು ಬಯಲಲ್ಲಿ ವಾಕಿಂಗ್ ಹೋಗಬೇಕು ಎಂದು ಒಪ್ಪಂದಕ್ಕೆ ಬಂದೆವು. ಆವತ್ತಿನಿಂದ ಒಂದುದಿನವೂ ಬಿಡದೆ ಬಯಲಲ್ಲಿ ವಾಕಿಂಗ್ ಮಾಡುತ್ತಿದ್ದೇನೆ. ಅದೇ ಗುಟ್ಟು.”
“ನೀವು ಎಂದಾದರೂ ಅಜ್ಜಿಯೊಂದಿಗೆ ಜಗಳ ಆಡಿ ಗೆದ್ದಿದ್ದೀರಾ?” ಎಂದು ಮೊಮ್ಮಗ ಕೇಳಿದ.
“ಆ್ಹ…. ಹ್ಞೂಂ… ಒಂದು ಸಾರಿ ಗೆದ್ದ ನೆನಪು…. ಅದು ಬಹಳ ಹಿಂದೆ….”
“ಯಾವಾಗ?”
“ಅವಳ ಬಾಯಿ ತುಂಬಾ ತಲೆಕೂದಲ ಪಿನ್ನುಗಳಿದ್ದಾಗ.”
* * *
ಜಲ್ಲಿಕಟ್ಟು ಭಯಂಕರ ಆಟ ಎಂದು ಭಾವಿಸುವವರಿದ್ದಾರೆ. ಆದರೆ ‘ತಾಳಿಕಟ್ಟು’ ಎಂಬ ಸಾಂಪ್ರದಾಯಿಕ ಆಟ ಅದಕ್ಕಿಂತಲೂ ಭಯಂಕರವಾದದ್ದು! ಜಲ್ಲಿಕಟ್ಟುವಿನಲ್ಲಿ ಮಾತುಬಾರದ ಗೂಳಿಯೊಡನೆ ಕೆಲಗಂಟೆಗಳ ಹೋರಾಟ. ‘ತಾಳಿಕಟ್ಟು’ವಿನಲ್ಲಿ ಮಾತನಾಡುವ ಕಾಳಿಯೊಡನೆ ಜನ್ಮಪೂರ್ತಿ ಪರದಾಟ!
ಅದೇರೀತಿ ಪಾಣಿಗ್ರಹಣಕ್ಕೂ ಸೂರ್ಯಗ್ರಹಣಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಸೂರ್ಯಗ್ರಹಣದಲ್ಲಿ ಚಂದ್ರನ ದೆಸೆಯಿಂದ ಸೂರ್ಯ ಮಂಕಾಗುತ್ತಾನೆ. ಪಾಣಿಗ್ರಹಣದ ನಂತರ ಚಂದ್ರಮುಖಿಯರಿಂದಾಗಿ ಸೂರ್ಯನಂತಿದ್ದ ಗಂಡಂದಿರು ಕ್ರಮೇಣ ಮಂಕಾಗುತ್ತಾರೆ.
ಆದ್ದರಿAದಲೇ ಲಗ್ನಪತ್ರಿಕೆಯಲ್ಲಿ ಹುಡುಗನಿಗೆ ಚಿ|| ರಾ|| ಎಂದೂ, ಹುಡುಗಿಗೆ ಚಿ|| ಸೌ|| ಎಂದು ಅಚ್ಚು ಹಾಕಿಸುತ್ತಾರೆ. ಇದರ ಹಿಂದಿನ ಮರ್ಮವೇನು ಗೊತ್ತೆ? ಚಿಂತೆಯಿಲ್ಲದ ರಾಜಕುಮಾರನಿಗೆ ಚಿಂತೆಯ ಸೌಭಾಗ್ಯ ಕರುಣಿಸುವವಳು” ಎಂದು ಅರ್ಥ…!
ವಿಜಯದಶಮಿಯಂದು ರಾಮಲೀಲಾ ಮೈದಾನದಲ್ಲಿ ರಾವಣನ ಪ್ರತಿಮೆಗೆ ಬೆಂಕಿ ಹಚ್ಚಿ, ಉರಿಯುತ್ತಿರುವ ಅದನ್ನು ನೋಡುತ್ತಾ ನಿಂತ ಜನರನ್ನು ರಾವಣ ಕೇಳಿದನಂತೆ:
“ದುಷ್ಟರೇ, ನೀವೆಲ್ಲಾ ಸೇರಿ ನನಗೆ ಯಾಕೆ ಬೆಂಕಿ ಹಚ್ಚಿದ್ದೀರಾ? ನಾನೇನು ನಿಮ್ಮ ಹೆಂಡತೀನ ಎತ್ತಿಕೊಂಡು ಹೋಗಿದೀನಾ!?”
ಆಗ ಒಬ್ಬ ಆಕ್ರೋಶದಿಂದ ಜೋರಾಗಿ ಕಿರುಚಿ ಹೇಳಿದನಂತೆ: “ನಮ್ಮ ಹೆಂಡತೀನ ಎತ್ತಿಕೊಂಡು ಹೋಗಿಲ್ಲ ಅಂತಾನೇ ನಾನು ನಿನಗೆ ಬೆಂಕಿ ಹಚ್ಚಿದ್ದು!”
* * *
ಜಗಳಗಂಟಿ ಹೆಂಡತಿಯ ಕಾಟ ತಾಳಲಾರದೆ ಗಂಡ ಕುಡಿತಕ್ಕೆ ದಾಸನಾದ. ಗಂಡ ಒಂದು ದಿನ ಕಂಠಮಟ್ಟ ಕುಡಿದು ಬಂದು ಮನೆಯ ಬಾಗಿಲು ಬಡಿದ. ಹೆಂಡತಿ ಬಾಗಿಲು ತೆರೆದಳು.
ಗಂಡ: “ಯಾರಮ್ಮ ನೀನು?”
ಹೆಂಡತಿ ಕೋಪದಿಂದ ಗಂಡನ ಶರ್ಟ್ನ ಕಾಲರ್ ಹಿಡಿದು ಅವನನ್ನು ಅಲ್ಲಾಡಿಸುತ್ತ ಕೇಳಿದಳು- “ನನ್ನನ್ನು ಯಾರೆಂದು ಕೇಳುತ್ತೀರಾ! ನಾನು ನಿಮ್ಮ ಹೆಂಡ್ತಿ ಕಣ್ರಿ…. ನಿಮ್ಮ ಜೊತೆ ಸಪ್ತಪದಿ ತುಳಿದು ನಿಮ್ಮ ಧರ್ಮಪತ್ನಿಯಾದವಳನ್ನೇ ಯಾರು ಎಂದು ಕೇಳುತ್ತೀರಲ್ರಿ…”
ಗಂಡ: “ಓ… ಸ್ಸಾರಿ ಕಣೇ! ಗೊತ್ತಾಗಲಿಲ್ಲ. ಸಾರಾಯಿ ಕುಡಿದಾಗ ಜನರು ಹಳೆಯ ನೋವನ್ನೆಲ್ಲ ಮರೆತುಬಿಡುತ್ತಾರೆ ನೋಡು!”
* * *

ಒಮ್ಮೆ ನ್ಯಾಯಾಲಯದಲ್ಲಿ ಮೊಕದ್ದಮೆಯೊಂದು ನಡೆಯುತ್ತಿತ್ತು.
ಜಡ್ಜ್: ನೀನೆಂತಾ ಗಂಡಸು ಕಣಯ್ಯಾ…? ಹೆಂಡತಿಯನ್ನು ಯಾಕೋ ಮಾರಿದೆ?
ಗಂಡ: ಅವಳೇ ಹೇಳಿದಳು ಸಾರ್!
ಜಡ್ಜ್: ಏನೆಂದು?
ಗAಡ: ನಾನು ಒಲಿದರೆ ನಾರಿ! ಮುನಿದರೆ ಮಾರಿ ಎಂದು!
ಜಡ್ಜ್: ಅದಕ್ಕೆ?
ಗಂಡ: ಮೊನ್ನೆ ಮುನಿದಿದ್ದಳು ಸಾರ್… ಅದಕ್ಕೆ ಮಾರಿಬಿಟ್ಟೆ!
* * *
ಪತ್ನಿ ಒಮ್ಮೆ ಹೇಳಿದಳು: “ನಾನು ನಿಮಗಾಗಿ ಸಂಪೂರ್ಣ ಜಗತ್ತಿನ ಜೊತೆಗೆ ಜಗಳವಾಡಬಲ್ಲೆ.”
ಪತಿ ಕೇಳಿದ: “ಆದರೆ ನೀನು ಯಾವಾಗಲೂ ನನ್ನ ಜೊತೆಯಲ್ಲೆ ಹೆಚ್ಚು ಜಗಳವಾಡುತ್ತಿರುವೆ…”
ಪತ್ನಿ: “ಹೌದು, ನೀವೇ ತಾನೆ ನನ್ನ ಪ್ರಪಂಚ!”
* * *
ಗಂಡ ಹೆಂಡತಿ ವಾಗ್ಯುದ್ಧದ ಬಳಿ ಪತ್ನಿ ತನ್ನ ಸಾಮಾನುಗಳನ್ನು ಪ್ಯಾಕ್ ಮಾಡುತ್ತಿದ್ದಳು.
ಪತಿ: “ಎಲ್ಲಿಗೆ ಹೊರಟಿರುವೆ?”
ಪತ್ನಿ: “ನನ್ನಮ್ಮನ ಮನೆಗೆ.”
ಪತಿ ಕೂಡ ತನ್ನ ಸಾಮಾನುಗಳನ್ನು ಪ್ಯಾಕ್ ಮಾಡತೊಡಗಿದನು.
ಪತ್ನಿ: “ಈಗ ನೀವೆಲ್ಲಿಗೆ ಹೊರಟಿರುವಿರಿ?”
ಪತಿ: “ನನ್ನಮ್ಮನ ಮನೆಗೆ.”
ಪತ್ನಿ: “ಹಾಗಿದ್ದರೆ ಮಕ್ಕಳ ಕಥೆಯೇನು?”
ಪತಿ: “ನೀನು ನಿನ್ನಮ್ಮನಲ್ಲಿಗೆ ಮತ್ತು ನಾನು ನನ್ನಮ್ಮನಲ್ಲಿಗೆ ಹೊರಟಿರುವಾಗ…. ನಿಯಮ ಪ್ರಕಾರ ಅವರು ಅವರಮ್ಮನಲ್ಲಿಗೆ ಹೊರಡಬೇಕು ತಾನೇ?”
ಮರುಮಾತಾಡದೆ ಪತ್ನಿ ತನ್ನ ಸಾಮಾನುಗಳನ್ನು ಯಥಾಸ್ಥಾನದಲ್ಲಿರಿಸಿದಳು.
* * *
ಬೇರೆಬೇರೆ ವೃತ್ತಿಯಲ್ಲಿರೋ ಗಂಡAದಿರೊಡನೆ ಅವರವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಹೆಂಡತಿಯರು ಜಗಳವಾಡುತ್ತಾರೆ. ಅವರ ಜಗಳದ ಶೈಲಿಯೇ ಅದ್ಭುತವಾದದ್ದು.
೧. ಪೈಲಟ್ ಹೆಂಡತಿ: ಜಾಸ್ತಿ ಹಾರಾಡಬೇಡಿ.
೨. ಟೀಚರ್ ಹೆಂಡತಿ: ನನಗೇ ಹೇಳಿಕೊಡುವುದಕ್ಕೆ ಬರಬೇಡಿ.
೩. ಪೇಂಟರ್ ಹೆಂಡತಿ: ಬಣ್ಣ ಬದಲಾಯಿಸಬೇಡಿ.
೪. ನಟನ ಹೆಂಡತಿ : ನಾಟಕ ಮಾಡಬೇಡಿ.
೫. ಧೋಬಿ ಹೆಂಡತಿ: ಒಗೆದು ಹಾಕಿಬಿಡುತ್ತೀನಿ.
೬. ಡೆಂಟಿಸ್ಟ್ ಹೆಂಡತಿ: ಹಲ್ಲು ಉದುರಿಸಿ ಬಿಡುತ್ತೀನಿ.
೭. ಸಿ.ಎ. ಹೆಂಡತಿ: ಲೆಕ್ಕ ಚುಕ್ತಾ ಮಾಡಿಬಿಡುತ್ತೀನಿ.
೮. ಇಂಜಿನಿಯರ್ ಹೆಂಡತಿ: ಪಾರ್ಟ್ಸ್ ಎಲ್ಲ ರಿಪೇರಿ ಮಾಡಿಬಿಡುತ್ತೀನಿ.
೯. ಆರ್ಕಿಟೆಕ್ಟ್ ಹೆಂಡತಿ: ಮುಖದ ಡಿಸೈನ್ನನ್ನೇ ಬದಲಾಯಿಸಿ ಬಿಡ್ತೀನಿ.
೧೦. ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್ ಹೆಂಡತಿ: ಜಾಸ್ತಿ ಮಾತಾಡಿದ್ರೆ ಓಎಲ್ಎಕ್ಸ್ನಲ್ಲಿ ಮಾರಿ ಬಿಡ್ತೀನಿ… ಹುಷಾರ್!
* * *
ಸ್ತ್ರೀಯರ ಬಗ್ಗೆ ಒಂದು ಮಾತಿದೆ. ಹೆಣ್ಣು ತನ್ನ ತಂದೆಯ ಮನೆಯಲ್ಲಿ ಇರುವಷ್ಟು ದಿನ ರಾಣಿಯ ಹಾಗೆ ಇರುತ್ತಾಳೆ.
ಮದುವೆಯಾಗಿ ಗಂಡ ಮನೆಗೆ ಬಂದಾಗ ‘ಲಕ್ಷ್ಮಿ’ ಎನಿಸಿಕೊಳ್ಳುತ್ತಾಳೆ.
ಗಂಡನ ಮನೆಯಲ್ಲಿ ಕೆಲಸದವಳಾಗಿ ಕೆಲಸ ಮಾಡ್ತಾ ‘ಭಾಯಿ’ ಆಗಿ ಬಿಡುತ್ತಾಳೆ.
ನಂತರ ಜೀವನಪೂರ್ತಿ ಗಂಡನ ಜೊತೆ ಯುದ್ಧ ಮಾಡ್ತಾ ‘ಝಾನ್ಸಿರಾಣಿ ಲಕ್ಷ್ಮಿಬಾಯಿ’ ಆಗ್ತಾಳೆ.
ಮದುವೆಯಾದ ಹೊಸದರಲ್ಲಿ ದಾಂಪತ್ಯದಲ್ಲಿ ಸರಸದ ಪಾಲೇ ಜಾಸ್ತಿಯಿರುತ್ತದೆ. ದಿನಹೋದಂತೆ ಇವರು ಭ್ರಮಾಲೋಕದಿಂದ ವಾಸ್ತವಲೋಕಕ್ಕೆ ಬಂದಾಗ ಆಗಾಗ ಮತಭೇದಗಳು ತಲೆದೋರುತ್ತವೆ. ಮುಂದೆ ಇಂತಹ ಮತಬೇಧಗಳೇ ಸಂಘರ್ಷಕ್ಕೆ ನಾಂದಿ ಹಾಡುತ್ತವೆ.
ನವವಿವಾಹಿತ ನನ್ನ ಸ್ನೇಹಿತನಿಗೆ ಹೇಳಿದ್ದು:
ಮೊದಲನೆಯ ವಾರ ನಾನು ಮಾತನಾಡುತ್ತಿದ್ದೆ, ನನ್ನ ಹೆಂಡತಿ ಕೇಳಿಸಿಕೊಳ್ಳುತ್ತಿದ್ದಳು. ಎರಡನೆಯ ವಾರ ಅವಳು ಮಾತನಾಡುತ್ತಿದ್ದಳು, ನಾನು ಕೇಳಿಸಿಕೊಳ್ಳುತ್ತಿದ್ದೆ. ಈಗ ಇಬ್ಬರೂ ಮಾತಾಡುತ್ತಿರುತ್ತೇವೆ, ಅಕ್ಕಪಕ್ಕದವರು ಕೇಳಿಸಿಕೊಳ್ಳುತ್ತಾರೆ.
ಕಾವ್ಯ ಮತ್ತು ಭಾಷಣಕ್ಕೆ ಇರುವ ವ್ಯತ್ಯಾಸವೇನು? ಎಂಬುದಾಗಿ ಹೆಂಡತಿ ಕೇಳಿದಳು. ಗರ್ಲ್ಫ್ರೆಂಡ್ ಮಾತನಾಡಿದರೆ ಕಾವ್ಯ, ಹೆಂಡತಿ ಮಾತನಾಡಿದರೆ ಅದು ಭಾಷಣ.
ಹೆಂಡತಿ ಹತ್ತಿರವಿದ್ದರೆ ಕಾಮನಬಿಲ್ಲು
ಹೆಂಡತಿ ದೂರವಿದ್ದರೆ ಫೋನ್ಬಿಲ್ಲು
ಹೆಂಡತಿಯೊಂದಿಗೆ ಜಗಳವಾದರೆ ಬಾರ್ಬಿಲ್ಲು
ಹೊಸದಾಗಿ ಮದುವೆಯಾದ ಗಂಡ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತ ಕುಳಿತಿದ್ದ. ಹೆಂಡತಿ ಬಂದು, “ಏನ್ರೀ, ಸದಾ ನನ್ನ ಮನೆ, ನನ್ನ ಸ್ಕೂರ್ರು, ನನ್ನ ಟಿ.ವಿ. ಎಂದು ಹೇಳುತ್ತ ಇರುತ್ತೀರಾ?” ಎಂದಳು.
“ಮತ್ತೇನು ಹೇಳಬೇಕು” ಕೇಳಿದ ಗಂಡ. ಮದುವೆ ಆದ ಮೇಲೆ ನಾನು, ನನ್ನದು ಎನ್ನಬಾರದು. ಎಲ್ಲ ನಮ್ಮದು, ನಾವು ಎನ್ನಬೇಕು ತಿಳಿಯಿತೇ?”
ಗಂಡ ಏನೂ ಮಾತಾಡಲಿಲ್ಲ. ಮರುದಿನ ಬೆಳಗ್ಗೆ ಹೆಂಡತಿ ಗೆಳತಿಯೊಂದಿಗೆ ಮಾತನಾಡುತ್ತಿದ್ದಳು. ಗಂಡ ಏನೋ ಹುಡುಕುತ್ತಿದ್ದುದನ್ನು ಕಂಡು “ಏನು ಹುಡುಕುತ್ತಿದ್ದೀರಿ ಅಷ್ಟೊತ್ತಿನಿಂದ” ಕೇಳಿದಳು.
“ನಾವು ದಿನಾ ಬೆಳಗ್ಗೆ ಶೇವ್ ಮಾಡ್ಕೋತಿವಲ್ಲ ರೇರ್ರು, ನಮ್ಮದು ಎಲ್ಲೋ ಕಾಣ್ತಾ ಇಲ್ಲ. ಅದಕ್ಕೆ ಹುಡುಕುತ್ತಿದ್ದೆ.”
* * *
ಗಂಡ ಹೆಂಡತಿಯನ್ನೊಮ್ಮೆ ಬೈದಾಗ, “ಯಾಕ್ರಿ ನನ್ನನ್ನು ಆ ರೀತಿ ಬೈಯ್ಯುತ್ತೀರಿ. ನಾನು ನಿಮ್ಮ ಅರ್ಧಾಂಗಿಯಲ್ಲವೆ?” ಎಂದು ಹೆಂಡತಿಯೆಂದಳು.
“ಹೌದು ಮದುವೆಯಾದ ಹೊಸದರಲ್ಲಿ ಮಾತ್ರ. ಈಗ ನನಗಿಂತ ಎರಡರಷ್ಟು ದಪ್ಪ ಆಗಿದ್ದೀಯಾ?” ಎಂದ ಗಂಡ ಮುನಿಸಿನಿಂದ.
ಅಂದಿಗೂ ಇಂದಿಗೂ ಕೇವಲ ಸಣ್ಣವ್ಯತ್ಯಾಸ ನಿನ್ನಲ್ಲಿ ಕಂಡುಬರುತ್ತಿದೆ.
ಅಂದು, ‘ಏಳು ಮಲ್ಲಿಗೆ ತೂಕದವಳೆ… ಎನ್ನಬೇಕಾಗುತ್ತಿತ್ತು.
ಇಂದು, ‘ಏಳು ಮೆಲ್ಲಗೆ ತೂಕದವಳೆ….” ಎನ್ನಬೇಕಾಗಿದೆ.
* * *
ಹೆಂಡತಿಯ ತೂಕವನ್ನು ಆಕೆಗೆ ತೋರಿಸಬೇಕೆಂದು ಬಸ್ ನಿಲ್ದಾಣದಲ್ಲಿರುವ ತೂಕದ ಯಂತ್ರದ ಮೇಲೆ ನಿಲ್ಲಿಸಿ ಎರಡು ರೂಪಾಯಿ ನಾಣ್ಯ ಹಾಕಿದ. ಭವಿಷ್ಯವಾಣಿ ಚೀಟಿಯಲ್ಲಿ ಭವಿಷ್ಯವಾಕ್ಯ ಬರದೆ ‘ಒಮ್ಮೆಗೆ ಒಬ್ಬರು ಮಾತ್ರ ನಿಲ್ಲಬೇಕೆಂಬ’ ಸೂಚನೆ ಬಂತು.
* * *
ನೀನು ಡಬಲ್ ಡೆಕ್ಕರ್, ಗಜಗಮನೆ ಎಂದು ಹೆಂಡತಿಯನ್ನು ದಿನಾಲೂ ತಮಾಷೆ ಮಾಡುತ್ತಿದ್ದ ಗಂಡ. ಆಕೆಯ ದೇಹಭಾರದಿಂದ ಆಯತಪ್ಪಿ ಬಿದ್ದಾಗಲೆಲ್ಲಾ ತಮಾಷೆ ಮಾಡಿ ನಗುತ್ತಿದ್ದ. ಒಮ್ಮೆ ಆಕೆ ಆಯತಪ್ಪಿ ಗಂಡನ ಮೇಲೆಯೇ ಬಿದ್ದಳು. ತದನಂತರ ಗಂಡನ ನಗುವೆಲ್ಲ ಬತ್ತಿಹೋಯಿತು.
* * *
ಸದಾ ಸಿಡುಕಿ, ಜಗಳಗಂಟಿ, ಹೆಂಡತಿಯನ್ನು ಯಾರೊ ಕಳ್ಳ ಅಪಹರಿಸಿದ. ಆತ ಪೋಸ್ಟ್ ಆಫೀಸಿಗೆ ಹೋಗಿ ಈ ಬಗ್ಗೆ ದೂರುಕೊಟ್ಟ. ಆಗ ಅವರು ಇದು ಪೊಲೀಸ್ ಸ್ಟೇಷನ್ ಅಲ್ಲ, ಪೋಸ್ಟ್ ಆಫೀಸ್ ಎಂದರು. ಆನಂದ ಅತಿರೇಕವಾದಾಗ ಪೊಲೀಸ್ ಸ್ಟೇಷನ್ ಯಾವುದು, ಪೋಸ್ಟ್ ಆಫೀಸ್ ಯಾವುದು ಅಂತಹ ಗೊತ್ತಾಗುವುದಿಲ್ಲವೆಂದು ಮನೆಗೆ ಬಂದ.
ಹೆAಡತಿಯ ಕಿರುಬೆರಳನ್ನು ಕತ್ತರಿಸಿ ಗಂಡನಿಗೆ ಪಾರ್ಸೆಲ್ ಕಳುಹಿಸಿ, ಅಪಹರಣಕಾರ ಫೋನ್ ಮಾಡಿದ.
ಗಂಡ: “ಹಲೋ, ಯಾರು?”
ಅಪಹರಣಕಾರ: “ನಾನು ನಿನ್ನ ಹೆಂಡತಿಯನ್ನು ಕಿಡ್ನ್ಯಾಪ್ ಮಾಡಿದ್ದೇನೆ. ಒಂದು ಲಕ್ಷ ರೂಪಾಯಿ ಕೊಟ್ಟು ಬಿಡಿಸಿಕೊಂಡು ಹೋಗು.”
ಗಂಡ: “ನಾನು ನಂಬುವುದಿಲ್ಲ.”
ಅಪಹರಣಕಾರ: “ನಿನಗೆ ನಂಬಿಕೆ ಬರಲಿ ಎಂದೇ ಕಿರುಬೆರಳನ್ನು ಕಳಿಸಿದ್ದು.”
* * *
ಗಂಡ-ಹೆಂಡತಿಯರ ಸರಸ-ವಿರಸದಲ್ಲಿ ಸಮತೋಲನವಿದ್ದರೆ ಸುಖ-ಸಂಸಾರ. ಇಲ್ಲದಿದ್ದರೇ ಅದೇ ದುಃಖಸಾಗರ. ಯಾವುದೂ ಅತಿಯಾಗಬಾರದು. ಎಲ್ಲವೂ ಮಿತಿಯಲ್ಲಿರಬೇಕು. ಹಂಗೇರಿಯಲ್ಲಿ ನಡೆದ ನೈಜ ಘಟನೆ ಇದು:
ಸತಿ-ಪತಿ ಇಬ್ಬರೇ ಇದ್ದ ಕುಟುಂಬ. ಎಲ್ಲ ದಂಪತಿಯಂತೆ ಅವರೂ ಆಗಿಂದಾಗ್ಗೆ ಜಗಳವಾಡುತ್ತಿದ್ದರು. ಸಕಾರಣವೋ, ಅಕಾರಣವೋ ಜಗಳವಾಗುತ್ತಿತ್ತು. ಆಗ ಸತಿ ‘ನಿಮ್ಮೊಂದಿಗಿನ ಬದುಕು ಸಾಕುಸಾಕಾಗಿದೆ. ನಾನು ತವರಿಗೆ ಹೋಗಿಬಿಡುತ್ತೇನೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳುತ್ತಾ ಮುಸಿಮುಸಿ ಅಳುತ್ತಿದ್ದರು. ಪತಿಯೂ ಅಷ್ಟೇ ‘ನನಗೂ ಸಾಕಾಗಿದೆ, ನಾನೂ ಎಲ್ಲಾದರೂ ದೇಶಾಂತರ ಹೋಗಿಬಿಡುತ್ತೇನೆ’ ಎಂದು ಬೆದರಿಸುತ್ತಿದ್ದರು. ಆಕೆ ತವರಿಗೂ ಹೋಗುತ್ತಿರಲಿಲ್ಲ, ಆತ ದೇಶಾಂತರವೂ ಹೋಗುತ್ತಿರಲಿಲ್ಲ. ‘ಕೆಲವೊಮ್ಮೆ ರಾಜಿ, ಕೆಲವೊಮ್ಮೆ ಜಗಳ’ದಲ್ಲಿ ಬದುಕು ಸಾಗುತ್ತಿತ್ತು. ಒಮ್ಮೆ ಜಗಳ ತಾರಕಕ್ಕೇರಿತು. ಸತಿ ದಾಪುಗಾಲು ಹಾಕುತ್ತಾ ಮನೆಯಿಂದ ಹೊರಟುಹೋದರು. ಆಗ ಪತಿ, ‘ನಾನಿಂದು ಆತ್ಮಹತ್ಯೆ ಮಾಡಿಕೊಂಡAತೆ ನಟಿಸಿ ಆಕೆಗೆ ಹೆದರಿಕೆಯನ್ನು ಹುಟ್ಟಿಸುತ್ತೇನೆ. ಆಗಲಾದರೂ ಆಕೆಗೆ ಬುದ್ದಿ ಬರಬಹುದು’ ಎಂದು ಯೋಚಿಸಿ ಕಾಯುತ್ತ ಕುಳಿತರು. ಒಂದೆರಡು ಗಂಟೆಗಳ ನಂತರ ಪತ್ನಿ ಮನೆಗೆ ಮರಳಿದಳು. ಆಕೆ ಮುಂಬಾಗಿಲ ಬಳಿ ಬರುವಷ್ಟರಲ್ಲಿ ಇವರು ಫ್ಯಾನಿಗೊಂದು ಬಟ್ಟೆ ಕಟ್ಟಿ ಅದರ ತುದಿಯನ್ನು ತಮ್ಮ ಕೊರಳಿಗೆ ಸುತ್ತಿಕೊಂಡು ನೇತಾಡುತ್ತಿರುವಂತೆ ನಟಿಸತೊಡಗಿದರು. ಆಕೆ ಒಳಗೆ ಬಂದು ನೋಡಿದಾಗ ಗಂಡ ಫ್ಯಾನಿಗೆ ನೇತುಹಾಕಿಕೊಂಡಿರುವುದು ಕಾಣಿಸಿತು. ಗಂಡ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಭಾವಿಸಿ ‘ಅಯ್ಯಯ್ಯೋ!’ ಎಂದು ಕಿರುಚಿಕೊಂಡು ಕುಸಿದುಬಿದ್ದು, ಪ್ರಜ್ಞಾಹೀನರಾದರು. ಗಂಡ ಕಣ್ಣಂಚಿನಲ್ಲೇ ಹೆಂಡತಿ ಬಿದ್ದುದನ್ನು ನೋಡಿ ಒಳಗೊಳಗೇ ನಗುತ್ತ, ಇನ್ನಾದರೂ ಜಗಳ ನಿಲ್ಲಬಹುದೇನೋ ಎಂದುಕೊಂಡರು!
ಸತಿಯ ಕಿರುಚಾಟ ಪಕ್ಕದ ಮನೆಯಾಕೆಗೂ ಕೇಳಿಸಿತ್ತು. ಆಕೆ ಧಾವಿಸಿ ಬಂದು ನೋಡಿದಾಗ ನೇತಾಡುವ ಸ್ಥಿತಿಯಲ್ಲಿದ್ದ ಪತಿ, ಸ್ಮೃತಿ ತಪ್ಪಿ ಬಿದ್ದಿದ್ದ ಪತ್ನಿ ಕಾಣಿಸಿದರು. ಇಬ್ಬರೂ ಸತ್ತೇ ಹೋಗಿದ್ದಾರೆಂದು ಆಕೆ ಭಾವಿಸಿದಳು. ಆಕೆ ಸುತ್ತಮುತ್ತಲಿನವರನ್ನು ಕರೆಯಬಹುದಿತ್ತು; ವೈದ್ಯರನ್ನು ಕರೆಯಬಹುದಿತ್ತು; ಆದರೆ ಅದನ್ನೆಲ್ಲ ಮಾಡಲಿಲ್ಲ. ಬದಲಾಗಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲ ಒಂದು ಚೀಲಕ್ಕೆ ತುಂಬಿಕೊಂಡಳು. ಅತ್ತಿತ್ತ ನೋಡುತ್ತಾ, ಕಳ್ಳ ಹೆಜ್ಜೆ ಹಾಕುತ್ತ ಅಲ್ಲಿಂದ ಹೊರಡಲು ಅನುವಾದರು.
ಇದೆಲ್ಲವನ್ನೂ ಗಂಡ ಕಣ್ಣಂಚಿನಲ್ಲೇ ಗಮನಿಸಿದರು. ಆತ್ಮೀಯಳೆಂದುಕೊಂಡಿದ್ದ ಆಕೆಯ ಕಳ್ಳಾಟವನ್ನು ಕಂಡು ಆತನಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಸಿಟ್ಟಿನ ಭರದಲ್ಲಿ ಆತ ನೇತಾಡುತ್ತಲೇ ಆಕೆಗೆ ಜೋರಾಗಿ ಒದ್ದರು. ಹೆಣವೇ ತನ್ನನ್ನು ಒದೆಯುತ್ತಿದೆಯೆಂದು ಭಾವಿಸಿದ ನೆರೆಮನೆಯಾಕೆ ಆಘಾತದಿಂದ ಕುಸಿದುಬಿದ್ದು ಪ್ರಜ್ಞಾಹೀನರಾದರು. ಈಗ ಗಾಬರಿಯಾಗುವ ಸರದಿ ಗಂಡನದ್ದು! ಅವರು ನೇಣಿನಿಂದ ಇಳಿದು ಆ ಮಹಿಳೆಯನ್ನು ಪರೀಕ್ಷಿಸಿದಾಗ ಆಕೆ ಸತ್ತುಹೋದದ್ದು ತಿಳಿಯಿತು. ಆತ ಹೆಂಡತಿಗೆ ನೀರುಚಿಮುಕಿಸಿ ಎಬ್ಬಿಸಿದರು. ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಯಥಾಪ್ರಕಾರ ಪೊಲೀಸ್ ವಿಚಾರಣೆ; ಕೋರ್ಟಿಗೆ ಪ್ರದಕ್ಷಿಣೆ. ಕೊನೆಗೆ ಇವರ ತಪ್ಪಿಲ್ಲ ಎಂಬ ತೀರ್ಪು. ಪತಿ-ಪತ್ನಿ ನಿರಾಳವಾದರು. ಅಂದಿನಿಂದ ಅವರ ಸಮರಗಳು ವಿರಳವಲ್ಲ, ಮಾಯವಾದವು! ಅವರದ್ದು ಅನ್ಯೋನ್ಯವಾದ ಬದುಕಾಯಿತಂತೆ.
ಎಲ್ಲದಕ್ಕೂ ಮಿತಿ ಇದ್ದಂತೆ ಸಂಸಾರದಲ್ಲಿ ಜಗಳಕ್ಕೂ ಒಂದು ಮಿತಿಯಿರಲಿ. ಮಿತಿಯನ್ನು ಮೀರಿದರೆ ಸಂಸಾರ
ದುರಂತವಾಗುವ ಸಾಧ್ಯತೆ ಇದೆ. ಸಂಸಾರದಲ್ಲಿ ಕೋಲಾಹಲದಿಂದ ಉತ್ಪನ್ನವಾದ ಹಾಲಾಹಲವನ್ನು ಅಮೃತವನ್ನಾಗಿಸೋಣ. ಇದಕ್ಕೆ ನಮ್ಮಲ್ಲಿ ಹಾಸ್ಯಪ್ರವೃತ್ತಿ ಇರಬೇಕು. ಹಾಸ್ಯಕ್ಕೆ ವಿಷವನ್ನು ಅಮೃತವನ್ನಾಗಿಸುವ, ನರಕವನ್ನು ಸ್ವರ್ಗವನ್ನಾಗಿಸುವ ಸಾಮರ್ಥ್ಯ ಇದೆ. ಜೀವನದಲ್ಲಿ ಹಾಸ್ಯಪ್ರವೃತ್ತಿ ಇದ್ದರೆ ಸಂಸಾರ ಸಹ್ಯವಾಗುತ್ತದೆ. ಆದ್ದರಿಂದ ಕವಿಯೊಬ್ಬ ಹಾಡಿದ್ದಾನೆ:
ಹೆಂಡತಿ ನಕ್ಕರೆ
ಮುಂಗಾರು ಮಳೆ
ಗಂಡ ನಕ್ಕರೆ
ಹಿಂಗಾರು ಮಳೆ
ಇಬ್ಬರೂ ನಕ್ಕರೆ
ಬಂಪರ್ ಬೆಳೆ!
ಅಂಬಿಕಾತನಯದತ್ತ ಹೇಳಿದಂತೆ
‘ಸರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ’ – ಎನ್ನುವುದನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮನಮ್ಮ ಸಂಸಾರವನ್ನು ಆನಂದಸಾಗರವನ್ನಾಗಿಸೋಣ.