ಕೆಲವರ ಅನಿಸಿಕೆಯ ಪ್ರಕಾರ ಜೀವನ ಎಂಬುದು ಸುಖ-ದುಃಖಗಳ ಮಿಶ್ರಣ. ಇನ್ನು ಕೆಲವರ ಪ್ರಕಾರ ಜಗತ್ತಿನಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚು. ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂದು ಅಲ್ಲಮಪ್ರಭು ಸಾರಿದ್ದಾನೆ. ಹಲವು ಪಾಶ್ಚಾತ್ಯ ಚಿಂತಕರ ಪ್ರಕಾರ ಜೀವನವೆಂಬುದು ದುರಂತಗಳ ಸರಮಾಲೆ. ಅದರಲ್ಲಿ ಯಾವುದೇ ಸಾರವಿಲ್ಲ.
ಮರುಭೂಮಿಯ ಖರ್ಜೂರ
ಜೀವನದಲ್ಲಿ ನಾವು ಅಪಾರ ಕಷ್ಟಗಳನ್ನು ಕಂಡರೂ ವಿರಳವಾದ ಸುಖಕ್ಕೆ ಕಷ್ಟದ ನೋವನ್ನು ಮರೆಸುವ ಶಕ್ತಿ ಇದೆ. ಬದುಕು ಬಂಜರುಭೂಮಿಯೆನಿಸಿದರೂ ಆ ಮರುಭೂಮಿಯಲ್ಲಿ ಅಲ್ಲಲ್ಲಿ ಕಾಣಲು ಸಿಗುವ ಓಯಸಿಸ್ಗಳನ್ನು ನಿರೀಕ್ಷಿಸಿ ಹೆಜ್ಜೆಹಾಕುವುದಿಲ್ಲವೇ? ‘ಬದುಕು ಮರುಭೂಮಿಯಾಯಿತೇ ಪೂರ? ಚಿಂತೆಯಿಲ್ಲ, ಅಲ್ಲಿಯೇ ಬೆಳೆಯುವುದು ಖರ್ಜೂರ!’ ಎಂಬುದಾಗಿ ಸಿ.ಪಿ.ಕೆ. ಹಾಡಿದ್ದಾರೆ. ಹಲವು ಕಾಲದ ನೋವು ಒಂದು ಕ್ಷಣದ ಅಪೂರ್ವವಾದ ಆನಂದದ ಅನುಭವದಿಂದ ಕರಗಿಹೋಗುವುದಿಲ್ಲವೆ? ಹಲವು ಬಾರಿ ಸೋತರೂ ವಿರಳವಾದ ಗೆಲವು ಬಂದಾಗ ನಾವು ದುಃಖವನ್ನು ಮರೆಯುವುದಿಲ್ಲವೆ?
ಎಷ್ಟೇ ಕಷ್ಟಗಳಿದ್ದರೂ, ಎಂತಹ ದುರಂತ ಸಂಭವಿಸಿದರೂ ಬದುಕು ಹಸನಾಗುವುದು ಸಕಾರಾತ್ಮಕ ಚಿಂತನೆಯಿಂದ. ಒಂದಲ್ಲ ಒಂದು ದಿನ, ಒಂದಲ್ಲ ಒಂದು ಕ್ಷಣ ಜೀವನದ ಅಂಧಕಾರವನ್ನೆಲ್ಲ ತೊಡೆದುಹಾಕುವ ಬೆಳಕಿನ ಕಿಡಿ ಕಾಣಿಸಿಕೊಂಡೀತೆಂಬ ಆಶಾಭಾವನೆ – ಅದೇ ಬದುಕಿಗೆ ನಿರಂತರತೆಯನ್ನೂ ಉತ್ಸಾಹದ ಚಿಲುಮೆಯನ್ನೂ ನೀಡುತ್ತದೆ.
ಜಗತ್ತಿನ ಯಾವ ಕ್ರಿಯೆಗಳೂ ಕಾರಣವಿಲ್ಲದೆ ಜರಗುವುದಿಲ್ಲ. ಎಲ್ಲ ಘಟನೆಗಳಿಗೂ ಕಾರ್ಯಕಾರಣ ಸಂಬಂಧಗಳಿರುತ್ತವೆ. ಕಾರ್ಯದ ಕಾರಣಗಳು ನಮ್ಮ ತಿಳಿವಳಿಕೆಗೆ ಬಂದಿಲ್ಲ, ಆದ್ದರಿಂದ ಇವೆಲ್ಲವೂ ಆಕಸ್ಮಿಕ ಎಂಬ ವಾದದಲ್ಲಿ ಅರ್ಥವಿಲ್ಲ. ಹೆಚ್ಚೆಂದರೆ ಜಗತ್ತಿನ ಆಗು-ಹೋಗುಗಳು ಯಾಕೆ, ಹೇಗೆ ಜರಗುತ್ತವೆ ಎಂಬುದು ನಮಗೆ ಅರ್ಥವಾಗುವುದಿಲ್ಲ ಎನ್ನಬಹುದೇ ಹೊರತು ಅವೆಲ್ಲವೂ ಆಕಸ್ಮಿಕ, ಅರ್ಥವಿಲ್ಲದ್ದು ಎಂದರೆ ನಮ್ಮ ಅಜ್ಞಾನ ಪ್ರದರ್ಶಿಸಿದಂತಾಗುತ್ತದೆ. ಜೀವನ ಆಕಸ್ಮಿಕವಲ್ಲ, ಜೀವನದ ಯಾವ ಘಟನೆಯೂ ನಿರರ್ಥಕವಲ್ಲ ಎಂಬುದು ಭಾರತೀಯ ತತ್ತ್ವಶಾಸ್ತ್ರದ ಚಿಂತನೆ.
ಕರ್ಮಣೈವಾಭಿಪದ್ಯತೆ
ದಿನನಿತ್ಯದ ವ್ಯವಹಾರದಲ್ಲಿ ಕಣ್ಣಿಗೆ ಕಾಣುವ ಕಾರಣಕ್ಕಿಂತ, ಕಣ್ಣಿಗೆ ಕಾಣದ ಕಾರಣವೇ ಅಧಿಕ. ಮನುಷ್ಯನ ಎಷ್ಟೋ ದುರಂತಗಳಿಗೆ, ದುಃಖಗಳಿಗೆ, ರೋಗಗಳಿಗೆ ಪೂರ್ವಜನ್ಮದ ಸಂಬಂಧವಿರುತ್ತದೆ. ನಾವು ಮಾಡಿದ ಕರ್ಮಕ್ಕೆ ಅನುಗುಣವಾಗಿಯೇ ನಮ್ಮ ಜೀವನ ಸಾಗುತ್ತದೆ. ಭಾಗವತದ 10ನೇ ಸ್ಕಂಧದಲ್ಲಿ ಒಂದು ಪ್ರಸಂಗ ಬರುತ್ತದೆ. ಗೋಪಾಲಕರು ಮಳೆಗಾಗಿ ಇಂದ್ರನ ಪೂಜೆ ಮಾಡಬೇಕು ಎಂಬುದಾಗಿ ಶ್ರೀಕೃಷ್ಣನ ಹತ್ತಿರ ಹೇಳುತ್ತಾರೆ. ಆಗ ಶ್ರೀಕೃಷ್ಣ ಹೇಳುತ್ತಾನೆ: “ನೀವು ಜೀವನದಲ್ಲಿ ನಿಮ್ಮ ಪಾಲಿಗೆ ಬಂದ ಕರ್ಮವನ್ನು ಸರಿಯಾಗಿ ಮಾಡಿದರೆ ಪೂಜೆಯ ಅಗತ್ಯವಿಲ್ಲ.” ಆತ ಮುಂದುವರಿದು ಹೇಳುತ್ತಾನೆ –
ಕರ್ಮಣಾ ಜಾಯತೇ ಜಂತುಃ
ಕರ್ಮಣೈವ ವಿಲೀಯತೇ
ಸುಖಂ ದುಃಖಂ ಭಯಂ
ಕ್ಷೇಮಂ ಕರ್ಮಣೈವಾಭಿಪದ್ಯತೇ ||
ನಮಗೆ ಜನನ, ಮರಣಗಳು ಕರ್ಮಕ್ಕೆ ಅನುಸಾರವಾಗಿ ದೊರಕುತ್ತವೆ. ಜೀವನದಲ್ಲಿ ಸುಖ, ದುಃಖ, ಭಯ, ಕ್ಷೇಮಾದಿಗಳು ನಾವು ಮಾಡಿದ ಕರ್ಮಕ್ಕೆ ಅನುಗುಣವಾಗಿ ಲಭ್ಯವಾಗುತ್ತವೆ.
ಕುರುಕ್ಷೇತ್ರದ ಯುದ್ಧದ ನಂತರ ಧೃತರಾಷ್ಟ್ರ ಶ್ರೀಕೃಷ್ಣನಲ್ಲಿ ಕೇಳುತ್ತಾನೆ: “ನನ್ನ ನೂರು ಜನ ಮಕ್ಕಳೂ ಯುದ್ಧದಲ್ಲಿ ಸತ್ತರು. ಇದಕ್ಕೆ ಕಾರಣವೇನು?” ಅದಕ್ಕೆ
ಶ್ರೀಕೃಷ್ಣ ಉತ್ತರಿಸುತ್ತಾನೆ: “50 ಜನ್ಮದ ಹಿಂದೆ ನೀನು ಬೇಡನಾಗಿದ್ದೆ. ಒಂದು ಗಂಡುಹಕ್ಕಿಗೆ ಬಿಟ್ಟ ಬಾಣ ಗುರಿ ತಪ್ಪಿ ಹಕ್ಕಿ ಹಾರಿಹೋಯಿತು. ಕೋಪದಲ್ಲಿ ಮರದ ಗೂಡಿನಲ್ಲಿದ್ದ ಆ ಗಂಡುಹಕ್ಕಿಯ ನೂರು ಮರಿಹಕ್ಕಿಗಳನ್ನು ಬೆಂಕಿಯಿಟ್ಟು ಕೊಂದೆ. ಆ ತಂದೆ ಹಕ್ಕಿ ತನ್ನ ನೂರು ಮರಿಗಳ ಸಾವನ್ನು ಅಸಹಾಯಕತೆಯಿಂದ ನೋಡಿ ದುಃಖಪಟ್ಟಿತು. ಆ ಹಕ್ಕಿಯ ನೋವು, ದುಃಖವೇ ನಿನ್ನ ಇಂದಿನ ದುರಂತಕ್ಕೆ ಕಾರಣ.”
ಪ್ರಸಿದ್ಧ ಮನಃಶಾಸ್ತ್ರಜ್ಞರಾದ ವಿಕ್ಟರ್ ಇ. ಫ್ರಾಂಕ್ಲ್ ಹೇಳುವಂತೆ ‘ದುಃಖಕ್ಕೂ ಅರ್ಥವಿದೆ’ ಎಂದು ತಿಳಿದಾಗ ದುಃಖವು ದುಃಖವಾಗಿ ಉಳಿಯುವುದಿಲ್ಲ. ಆದರೆ ದುಃಖದ ಅನುಭವಗಳಿಂದ ಪಾಠ ಕಲಿತು ಅಲ್ಲಿಂದ ಮೇಲೆಕ್ಕೇರಬೇಕು.
‘ದುಃಖ ಮತ್ತು ಕತ್ತಲೆಗಳು ತುಂಬಾ ಸುಂದರವಾಗಿರುತ್ತವೆ ಮತ್ತು ನಮ್ಮನ್ನು ಧ್ಯಾನಸ್ಥಸ್ಥಿತಿಗೆ ಕೊಂಡೊಯ್ಯುತ್ತವೆ’ ಎಂಬುದಾಗಿ ಡಂಕನ್ಶೇಕ್ ಹೇಳಿದ್ದಾನೆ.
ಭಗವಂತ ಎಲ್ಲವನ್ನೂ ಯೋಜನಾಬದ್ಧನಾಗಿ ಮಾಡುತ್ತಾನೆ. ದುರಂತದ ಕ್ರಿಯೆಯೂ ಇದಕ್ಕೆ ಹೊರತಾಗಿಲ್ಲ. ದುರಂತಕ್ಕೆ ಕಾರಣ ಕೆಲವೊಮ್ಮೆ ಮನುಷ್ಯನ ವಿವೇಚನೆಗೆ ನಿಲುಕುವುದಿಲ್ಲ.
ಉದಾಹರಣೆಗೆ ಈ ಬ್ರಹ್ಮಾಂಡದ ಸೃಷ್ಟಿ ಹೇಗೆ ಆಯಿತು, ಯಾಕೆ ಆಯಿತು ಎಂಬುದನ್ನು ಯೋಚಿಸಿದಷ್ಟೂ ನಿಗೂಢವಾಗುತ್ತದೆ. ಗ್ರಹಗಳ ಸುತ್ತುವಿಕೆ, ಸೂರ್ಯ ನಕ್ಷತ್ರಗಳ ಚಲನೆ, ಹಗಲು-ರಾತ್ರಿ, ಋತುಗಳ ಬದಲಾವಣೆ, ಮಳೆ, ಗಾಳಿ, ಚಳಿ, ಬಿಸಿಲು ಎಲ್ಲವೂ ವಿಸ್ಮಯವೇ!
ಲಕ್ಷಾಂತರ ವರ್ಷಗಳ ಈ ಭೂಮಿಯ ಇತಿಹಾಸದಲ್ಲಿ ಅಸಂಖ್ಯಾತ ದುರಂತಗಳು ನಡೆದಿವೆ. ಇದರಿಂದ ಕೆಲವು ಪ್ರಾಣಿ ಪ್ರಭೇದಗಳೇ ನಾಶವಾಗಿವೆ. ಕಾಡು, ಭೂಮಿ, ಸಮುದ್ರ ಎಲ್ಲವೂ ಅಲ್ಲೋಲಕಲ್ಲೋಲವಾಗಿವೆ. ಮನುಷ್ಯನ ಸೀಮಿತ ಮನಸ್ಸಿಗೆ ಈ ಎಲ್ಲ ಅನಾಹುತಗಳು ದುರಂತವಾಗಿಯೇ ಕಾಣುತ್ತವೆ. ಸುದೀರ್ಘ ಸೃಷ್ಟಿಕ್ರಿಯೆಯ ದೃಷ್ಟಿಕೋನದಲ್ಲಿ, ಭಗವದ್ಭಾವದಲ್ಲಿ ನೋಡಿದರೆ ದುರಂತಕ್ಕೂ ಅರ್ಥವಿರುವುದು ಗೋಚರಿಸಲು ಆರಂಭವಾಗುತ್ತದೆ. ಯಾವುದೇ ಘಟನೆಗಳನ್ನು ನಮಗೆ ಕಷ್ಟ-ನಷ್ಟ ಆಗಿದೆ ಎಂಬ ಮಾನದಂಡದಲ್ಲಷ್ಟೆ ಅಳೆಯಬಾರದು. ಇಡೀ ಸೃಷ್ಟಿಕ್ರಿಯೆಯಲ್ಲಿ ಈ ದುರಂತದ ಪಾತ್ರ, ಪ್ರಭಾವ, ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಕೊಂಡರೆ ದುರಂತದಲ್ಲೂ ಒಳಿತಿದೆ ಎಂಬುದೂ ಅರ್ಥವಾಗುತ್ತದೆ.
ಆಂಗ್ಲ ಕವಿ ಮಿಲ್ಟನ್ಗೆ ಆಕಸ್ಮಿಕವಾಗಿ ಕುರುಡುತನ ಬಂದಿತು. ಆಗ ಅವನು ದೇವರನ್ನು ಕೇಳುತ್ತಾನೆ: “ದಯಾಮಯನಾದ ಭಗವಂತನೇ, ನನ್ನ ಕಣ್ಣನ್ನು ಕಿತ್ತುಕೊಂಡುಬಿಟ್ಟೆ. ಹಗಲೇ ಕಾಣಲಾಗದ ನಾನು ಕತ್ತಲೆಯ ಕೂಪದಲ್ಲಿ ಬಾಳಬೇಕಾಗಿದೆ. ನಾನೇನು ನಿನ್ನ ಸೇವೆ ಮಾಡಲಿ?” ಆದರೆ ಸ್ವಲ್ಪ ಸಮಯದಲ್ಲಿಯೇ ಅವನು ಸಮಾಧಾನ ಹೊಂದಿ, “ಕುರುಡನ್ನು ಕೊಟ್ಟ ದೇವರು ನನಗೆ ಒಂದೇ ಕಡೆ ಇರುವಂತೆ ಆದೇಶಿಸಿದ್ದಾನೆ. ಅದೂ ಅವನ ಸೇವೆಯಾಗಿರುವುದರಿಂದ ಅದನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದು ನಿರ್ಧರಿಸುತ್ತಾನೆ.
ಭಗವಂತನ ಸೃಷ್ಟಿಯಲ್ಲಿ ಯಾವ ಕ್ರಿಯೆಯೂ ನಿಷ್ಪ್ರಯೋಜಕವೂ ಅಲ್ಲ, ನಿರರ್ಥವೂ ಅಲ್ಲ. ನಿರರ್ಥಕ ಎಂದು ನಮಗೆ ಕಾಣುವ ಕ್ರಿಯೆಯಲ್ಲಿ ಸಾರ್ಥಕತೆಯನ್ನು ಹುಡುಕುವ ಕೆಲಸ ಮನುಷ್ಯನಿಂದ ಆಗಬೇಕು.
ಸ್ಪೈನ್ ದೇಶದ ಜೂಲಿಯೋ ಎಂಬ ಹತ್ತುವರ್ಷದ ಬಾಲಕನಿಗೆ ಒಂದು ಕನಸಿತ್ತು. ತಾನೊಬ್ಬ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಬೇಕೆಂದು ಹಾಗೂ ತನ್ನ ದೇಶದ ಪ್ರಖ್ಯಾತ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ನ ಪರವಾಗಿ ಆಟವಾಡಬೇಕೆಂದು. ಅದಕ್ಕಾಗಿ ದಿನವೆಲ್ಲ ಫುಟ್ಬಾಲ್ ಆಟ ಆಡುತ್ತಿದ್ದ, ಅಭ್ಯಾಸ ಮಾಡುತ್ತಿದ್ದ. ಎಲ್ಲೇ ಫುಟ್ಬಾಲ್ ಆಟವಿದ್ದರೂ ಅಲ್ಲಿಗೆ ಹೋಗಿ ಆಸಕ್ತಿಯಿಂದ ಗಮನಿಸುತ್ತಿದ್ದ.
ಅವನಿಗೆ 20 ವರ್ಷವಾಗುವಷ್ಟರಲ್ಲಿ ಆಟದಲ್ಲಿ ಪರಿಣತಿ ಹೊಂದಿದ. ಅವನ ಆಟವಾಡುವ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ತನ್ನ ಅಚ್ಚುಮೆಚ್ಚಿನ ಕ್ಲಬ್ ರಿಯಲ್ ಮ್ಯಾಡ್ರಿಡ್ ಜೊತೆ ಆಟವಾಡಲು ಒಪ್ಪಂದವೂ ಆಯಿತು. ಫುಟ್ಬಾಲ್ ಪಂಡಿತರೂ ಸಹ ಇವನೊಬ್ಬ ಅತಿ ಶ್ರೇಷ್ಠ ಗೋಲ್ಕೀಪರ್ ಆಗುವನೆಂದೂ, ದೇಶಕ್ಕೆ ಕೀರ್ತಿ ತರುವನೆಂದೂ ಭವಿಷ್ಯ ನುಡಿದಿದ್ದರು.
1963ರ ಒಂದು ಸಂಜೆ ಜೂಲಿಯೋ ತನ್ನ ಗೆಳೆಯರೊಡನೆ ಮನರಂಜನೆಗಾಗಿ ಕಾರಿನಲ್ಲಿ ತೆರಳಿದ್ದಾಗ ಘೋರ ಅಪಘಾತ ಸಂಭವಿಸಿ ಆತನ ಸೊಂಟದ ಕೆಳಗಿನ ಅಂಗ ಸಂಪೂರ್ಣ ನಿಷ್ಕ್ರಿಯವಾಯಿತು. ಆಟವಾಡುವುದಿರಲಿ, ಇನ್ನೆಂದಿಗೂ ನಡೆಯಲೂ ಸಾಧ್ಯವಾಗದಷ್ಟು ಹಾನಿಯಾಗಿದೆ ಎಂದುಬಿಟ್ಟರು ವೈದ್ಯರು. ಫುಟ್ಬಾಲ್ ತಾರೆಯಾಗಬಯಸಿದ್ದ ಜೂಲಿಯೋ ಹಾಸಿಗೆಯಲ್ಲೆ ಕಾಲಕಳೆಯುವಂತಾಯಿತು.
ನೋವು, ಪರಿತಾಪ, ದುಃಖ, ಕೋಪ, ವಿಷಾದಗಳಿಂದ ಕೂಡಿದ ಅವನ ಆಸ್ಪತ್ರೆಜೀವನ ಯಾತನಾಮಯವಾಗಿತ್ತು. ತನ್ನ ನೋವನ್ನು ಸ್ವಲ್ಪಮಟ್ಟಿಗೆ ಮರೆಯಲೆಂಬಂತೆ ಅವನು ಕೆಲವು ಕವನಗಳನ್ನು ಬರೆಯತೊಡಗಿದ. ತನಗೆ ಸರಿಯೆನಿಸುವ ರಾಗದಲ್ಲಿ ಅವನ್ನು ಹಾಡತೊಡಗಿದ. ಇದು ಅವನ ಮನಸ್ಸಿಗೆ ಸ್ವಲ್ಪ ಹಿತನೀಡುತ್ತಿದ್ದವು. ದಾದಿಯೊಬ್ಬಳು ಅವನಿಗೆ ಒಮ್ಮೆ ಒಂದು ಗಿಟಾರ್ ತಂದುಕೊಟ್ಟಳು. ಎಂದೆಂದೂ ಗಿಟಾರನ್ನು ಬಾರಿಸದ ಜೂಲಿಯೋ ತನಗೆ ತೋಚಿದಂತೆ ಅದನ್ನು ನುಡಿಸತೊಡಗಿದ. ಕೆಲವೇ ದಿನಗಳಲ್ಲಿ ಅವನಿಗೆ ಹಾಡಿಗೆ ತಕ್ಕಂತೆ ಗಿಟಾರ್ ನುಡಿಸಲು ಸಾಧ್ಯವಾಯಿತು.
ಹದಿನೆಂಟು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬರುವ ವೇಳೆಗೆ ಜೂಲಿಯೋ ಕವನಗಳನ್ನು ಬರೆಯುವುದರಲ್ಲಿ, ಹಾಡುವುದರಲ್ಲಿ ಪರಿಣತಿ ಹೊಂದಿದ್ದ. ಐದುವರ್ಷಗಳ ಬಳಿಕ ಸಂಗೀತಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಮೊದಲನೆಯ ಬಹುಮಾನವನ್ನೂ ಪಡೆದ. ಇದು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಅವನು ಫುಟ್ಬಾಲ್ ಆಟಗಾರನಾಗುವ ಕನಸು ನನಸಾಗದಿದ್ದರೇನಂತೆ, ಅವನೊಬ್ಬ ಶ್ರೇಷ್ಠ ಸಂಗೀತಗಾರನಾದ. ವಿಶ್ವದ ಶ್ರೇಷ್ಠ ಹತ್ತುಮಂದಿ ಸಂಗೀತಗಾರರಲ್ಲಿ ಅವನೂ ಒಬ್ಬ ಎಂದು ಹೆಗ್ಗಳಿಕೆಯನ್ನು ಗಳಿಸಿದ. ಅವನು ಹಾಡಿದ ಸಂಗೀತದ ಆಲ್ಬಮ್ಗಳು ಎಷ್ಟು ಜನಪ್ರಿಯವಾದವೆಂದರೆ, 300 ಮಿಲಿಯನ್ಗಳಷ್ಟು ಆಲ್ಬಮ್ಗಳು ಮಾರಾಟವಾಗಿ ಜಾಗತಿಕ ದಾಖಲೆಯನ್ನೇ ಸೃಷ್ಟಿಸಿತು.
ಜೂಲಿಯೋವಿಗೆ ಅಪಘಾತವಾಗದಿದ್ದರೆ ಅವನೊಬ್ಬ ಗೋಲ್ಕೀಪರ್ ಆಗಿ ಕೆಲಕಾಲದ ಮೇಲೆ ಜನರ ಮನಸ್ಸಿನಿಂದ ಮರೆಯಾಗುತ್ತಿದ್ದನೇನೋ. ಆದರೆ ಅಪಘಾತದ ದುರಂತ ಅವನನ್ನು ಪ್ರಸಿದ್ಧ ಸಂಗೀತಗಾರನನ್ನಾಗಿಸಿತು. ಅವನ ಸಂಗೀತ ಕಛೇರಿಗಳಿಗಂತೂ ಜನರು ಹುಚ್ಚೆದ್ದು ಅಧಿಕಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ದುರಂತದಿಂದಲೂ ಒಳಿತಾಗಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಒಂದು ಮಗು ಎಲ್ಲ ಮಕ್ಕಳಂತೆ ಆರೋಗ್ಯವಾಗಿತ್ತು. ಯಾವ ದೋಷವೂ ಇರಲಿಲ್ಲ. ಅವನಿಗೆ ಮೂರು ವರ್ಷ ಆಗಿದ್ದಾಗ ಒಂದು ದುರ್ಘಟನೆ ನಡೆದುಹೋಯಿತು. ತಂದೆ ಹೊರಗೆ ಹೋಗಿದ್ದಾಗ ಅವನು ಹರಿತವಾದ ದಬ್ಬಣವನ್ನು ತೆಗೆದುಕೊಂಡು ಆಡತೊಡಗಿದ. ಅಕಸ್ಮಾತ್ ಆಗಿ ದಬ್ಬಣವು ಕಣ್ಣಿಗೆ ತಾಗಿತು. ಎಷ್ಟೇ ಚಿಕಿತ್ಸೆ ಮಾಡಿದರೂ ಕಣ್ಣು ಸರಿಯಾಗಲಿಲ್ಲ. ಎರಡೂ ಕಣ್ಣುಗಳಿಗೆ ಸೋಂಕು ತಗಲಿ ಅವನು ಪೂರ್ತಿಯಾಗಿ ಅಂಧನಾದ.
ಹೀಗೆ ದುರದೃಷ್ಟವಶಾತ್ ಕುರುಡನಾದ ಹುಡುಗನೇ ಲೂಯಿ ಬ್ರೆಯಿಲ್. ಅಗಾಧವಾದ ಜ್ಞಾನದಾಹ ಅವನನ್ನು ಕಾಡುತ್ತಿತ್ತು. ಹಾಗಾಗಿ ಅವನು ಅಂಧರಿಗಾಗಿ ಒಂದು ಲಿಪಿಯನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದ. ಹಲವು ವರ್ಷಗಳ ನಿರಂತರ ಪ್ರಯತ್ನದ ಬಳಿಕ ಅಂಧರು ಓದಲು ಬರೆಯಲು ಅನುಕೂಲವಾದ ಲಿಪಿಯೊಂದನ್ನು ಅವನು ಆವಿಷ್ಕರಿಸಿದ. ‘ಬ್ರೆಯಿಲ್ ಲಿಪಿ’ ಎಂದು ಕರೆಯಲ್ಪಡುವ ಈ ಲಿಪಿಯ ಸಹಾಯದಿಂದ ಇಂದು ಪ್ರಪಂಚದ ಮಿಲಿಯಗಟ್ಟಲೆ ಅಂಧರು ಶಿಕ್ಷಣ ಪಡೆಯುತ್ತಿದ್ದಾರೆ.
ಕುರುಡರಿಗಾಗಿ ಲಿಪಿ ಕಂಡುಹಿಡಿಯುವುದಕ್ಕಾಗಿಯೇ ಭಗವಂತ ಲೂಯಿ ಬ್ರೆಯಿಲ್ನ ಕಣ್ಣುಕಿತ್ತುಕೊಂಡನೋ ಎಂದು ಅನಿಸುತ್ತದೆ.
ಇಡೀ ಜಗತ್ತನ್ನೇ ನಡುಗಿಸಿದ ಮಹಾದುರಂತ ‘COVID-19’. ಅದರಿಂದಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಕೋಟ್ಯಂತರ ಜನರ ಆರ್ಥಿಕಸ್ಥಿತಿ ಬಿಗಡಾಯಿಸಿತು. ಎಷ್ಟೋ ಜನರು ತಮ್ಮ ಕೆಲಸವನ್ನು ಕಳಕೊಂಡರು. ಲಕ್ಷಾಂತರ ಮಂದಿ ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಿಗಳು ಬೀದಿಪಾಲಾದರು. ಕೊರೋನಾ ಪೀಡಿತರನ್ನು ಯಮದೂತರಂತೆ ಈ ಸಮಾಜ ಕಂಡಿತು. ದೃಶ್ಯಮಾಧ್ಯಮದಲ್ಲಿ ಕೊರೋನಾದ ಋಣಾತ್ಮಕ ಸುದ್ದಿಗಳನ್ನು ಕೇಳುವುದು ನಿತ್ಯದ ಹಿಂಸೆಯಾಯಿತು. ಹೀಗೆ ‘COVID-19’ ದುರಂತದ ಅವಾಂತರಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಈ ಎಲ್ಲದರ ನಡುವೆಯೂ ‘COVID-19’ ದುರಂತದಿಂದ ಸಮಾಜದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳೂ ಬೆಳವಣಿಗೆಗಳೂ ನಡೆದಿವೆ.
ಈ ಮಹಾದುರಂತದ ಸಮಯದಲ್ಲಿ ಈ ದೇಶದಲ್ಲಿ ಸಾಮಾಜಿಕ ಕಳಕಳಿಯ ಪರಿಚಯ ಸ್ಪಷ್ಟವಾಗಿ ಗೋಚರವಾಯಿತು. ಎಷ್ಟೋ ಜನರು ಬಡವರು, ಶ್ರೀಮಂತರು ಎನ್ನದೆ ಇನ್ನೊಬ್ಬರ ಸಹಾಯಕ್ಕೆ ಧಾವಿಸಿದರು. ಜನತಾ ಕಫ್ರ್ಯೂಗೆ ಎರಡು ತಿಂಗಳ ಪೂರ್ತಿ ಲಾಕ್ಡೌನ್ಗೆ ದೇಶಕ್ಕೆ ದೇಶವೇ ಸಹಕಾರ ನೀಡಿತು. ಎಲ್ಲಿಯೂ ಆಹಾರಕ್ಕಾಗಿ ಹಾಹಾಕಾರ ಏಳಲಿಲ್ಲ. ಜನ ದಂಗೆ ಏಳಲಿಲ್ಲ. ಕಾನೂನುರಕ್ಷಕರಾದ ಪೊಲೀಸರೂ ಮಾನವೀಯತೆಯಿಂದ ವರ್ತಿಸಿದರು. ಲಾಠಿ ಬಳಸುವ ಬದಲು ಹೃದಯವೈಶಾಲ್ಯದಿಂದ ನಡೆದುಕೊಂಡರು. ಎಷ್ಟೋ ಪೊಲೀಸರು ತಾವು ಹಸಿದಿದ್ದರೂ ಭಿಕ್ಷುಕರಿಗೆ, ಬೀದಿಪಾಲಾದ ಕಾರ್ಮಿಕರಿಗೆ ಊಟವನ್ನು ಕೊಟ್ಟರು. ಹೀಗೆ ದುರಂತವನ್ನು‘COVID-19’ ಎದುರಿಸಲು ಇಡೀ ದೇಶವೇ ಒಂದಾಗಿ ಎದ್ದು ನಿಂತಿತು.
ಲಾಕ್ಡೌನ್ ಸಮಯದಲ್ಲಿ ಜನಜೀವನ ಸ್ತಬ್ಧವಾದದ್ದರಿಂದ ಕಾರ್ಖಾನೆಗಳು ಸ್ಥಗಿತವಾದದ್ದರಿಂದ ಪರಿಸರ ಸ್ವಚ್ಛವಾಯಿತು. ಈ ದೇಶದ ಗಂಗೆ, ತುಂಗಾ, ಯಮುನಾ, ನರ್ಮದಾ, ಕಾವೇರಿ ಮುಂತಾದ ನದಿಗಳೆಲ್ಲ ಪರಿಶುದ್ಧವಾದವು. ಸರಕಾರದ ಕೋಟ್ಯಂತರ ರೂಪಾಯಿಯಿಂದ ಆಗದ ಶುದ್ಧಿಕಾರ್ಯ ಲಾಕ್ಡೌನ್ನಿಂದ ಆಯಿತು. ಪಂಜಾಬ್ನಿಂದ ಹಿಮಾಲಯ ಎಂದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆದರೆ ಲಾಕ್ಡೌನ್ ಸಮಯದಲ್ಲಿ ಸುಮಾರು 200 ಕಿ.ಮೀ. ದೂರದಿಂದ ಹಿಮಾಲಯ ಸ್ಪಷ್ಟವಾಗಿ ಶುಭ್ರವಾಗಿ ಕಂಡುಬರುತ್ತಿತ್ತು. ಹೀಗೆ ದುರಂತದಿಂದ ಗಾಳಿ, ನೀರು, ಪರಿಸರ ಎಲ್ಲವೂ ಶುದ್ಧವಾಯಿತು.
ಪ್ರಧಾನಮಂತ್ರಿಯವರ ‘ಆತ್ಮನಿರ್ಭರ’ ಕರೆಗೆ ಓಗೊಟ್ಟು ಸ್ವಾವಲಂಬಿಯಾಗುವುದರಲ್ಲಿ ಈ ದೇಶದ ಜನ ತ್ರಿವಿಕ್ರಮನ ಹೆಜ್ಜೆಯನ್ನಿಟ್ಟಿತು. ನಮ್ಮ ದೇಶ ಹಿಂದೆ Toilet paperನಿಂದ Sanitizerf ವರೆಗೆ ಚೀನಾದ ಮೇಲೆ ಅವಲಂಬಿತವಾಗಿತ್ತು. ‘COVID-19’ ದುರಂತದಿಂದ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಎಲ್ಲವೂ ಈವತ್ತು ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ದಿನವೊಂದಕ್ಕೆ 2 ಲಕ್ಷ ಪಿಪಿಇ ಕಿಟ್ಗಳನ್ನು ಉತ್ಸಾದನೆ ಮಾಡುವಷ್ಟು ನಮ್ಮ ದೇಶ ಸಶಕ್ತವಾಯಿತು.
ನಮ್ಮ ದೇಶದಲ್ಲೆ ಹುಟ್ಟಿ ಬೆಳೆದ ಆಯುರ್ವೇದ ಔಷಧಿಯನ್ನು ಜನರು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ‘ಹಿತ್ತಲ ಗಿಡ ಮದ್ದಲ್ಲ’ ಎಂಬ ತಾತ್ಸಾರದ ಭಾವನೆ ನಮ್ಮವರಲ್ಲಿ ಬಲವಾಗಿ ಬೇರೂರಿತ್ತು. ಆದರೆ ಕೊರೋನಾ ದುರಂತದಿಂದ ‘ಹಿತ್ತಲ ಗಿಡವೇ ಮದ್ದು’ ಎಂಬ ಪರಿಸ್ಥಿತಿಗೆ ಪರಿವರ್ತನೆಯಾಗುವಂತಾಯಿತು. ಜಗತ್ತೆ ಇಂದು ಆಯುರ್ವೇದದತ್ತ ಆಶಾಭಾವದಿಂದ ನೋಡುತ್ತಿದೆ.
‘ಈ ಹಿಂದೆ ನಮ್ಮ ದೇಶದಲ್ಲಿ ಹುಟ್ಟಿದ ಯೋಗ ಜಗತ್ಪ್ರಸಿದ್ಧವಾಯಿತು. ಈ ಬಾರಿ ಆಯುರ್ವೇದದ ಸರದಿ’ ಎಂಬುದಾಗಿ ಈ ದೇಶದ ಪ್ರಧಾನಿಯವರೇ ಹೇಳಿದರು. ‘ಸ್ವಸ್ಥಸ್ಯ ಸ್ವಾಸ್ಥ್ಯರಕ್ಷಣಂ, ಆತುರಸ್ಯ ರೋಗನಿವಾರಣಂ’ – ಎಂದರೆ ಆರೋಗ್ಯವಂತರ ಆರೋಗ್ಯ ಕಾಪಾಡುವುದರಲ್ಲಿ ಹಾಗೂ ರೋಗಿಗಳ ರೋಗ ನಿವಾರಿಸುವುದರಲ್ಲಿ ಆಯುರ್ವೇದವೂ ಒಂದು ವೈಜ್ಞಾನಿಕವಾದ ಸಮರ್ಥವಾದ ವೈದ್ಯಕೀಯ ಪದ್ಧತಿ ಎಂಬುದನ್ನು ಇಡೀ ಜಗತ್ತೇ ಗುರುತಿಸುವುದರಲ್ಲಿ ಕೊರೋನಾ ದುರಂತ ಕಾರಣವಾಯಿತು.
‘COVID-19’ ದುರಂತದಿಂದ ನಮ್ಮ ದೇಶದ ಪಾಲಿಗೆ ಇನ್ನೊಂದು ಸಕಾರಾತ್ಮಕ ಬದಲಾವಣೆಯಾಗಿದೆ. ಇಂದು ಚೀಣಾ ದೇಶ ಜಗತ್ತಿನಲ್ಲಿ ಒಂಟಿಯಾಗಿದೆ. ಚೀಣಾ ವೂಹಾನ್ದಿಂದ ಯಾವ ವೈರಸ್ ಜಗತ್ತಿಗೆ ಹರಡಿತೋ ಅದೇ ವೈರಸ್ ಜಗತ್ತಿನಾದ್ಯಂತ ಚೀಣಾದ ಮೇಲಿನ ವಿಶ್ವಾಸವನ್ನು ಘಾಸಿಗೊಳಿಸಲು ಕಾರಣವಾಯಿತು. ಹಲವು ಮುಂದುವರಿದ ದೇಶಗಳು ಚೀಣಾದಿಂದ ತಮ್ಮ ಬಂಡವಾಳ ಹಿಂದಕ್ಕೆ ತೆಗೆದುಕೊಂಡು ಭಾರತದಲ್ಲಿ ಹೂಡುವ ಇಚ್ಛೆಯನ್ನು ಪ್ರಕಟಿಸಿವೆ. ಇದರಿಂದ ನಿಕಟ ಭವಿಷ್ಯದಲ್ಲಿ ಭಾರತ ಆರ್ಥಿಕತೆಯಲ್ಲಿ ಚೀಣಾವನ್ನು ಹಿಂದಕ್ಕೆ ಹಾಕಿ ಜಗತ್ತಿನಲ್ಲೆ ಅತ್ಯಂತ ಮುಂದುವರಿದ ದೇಶವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಸ್ತರಣವಾದಿ, ಮಹತ್ತ್ವಾಕಾಂಕ್ಷಿ ಚೀಣಾ ಭಾರತದೊಂದಿಗೆ ಗಡಿಭಾಗದಲ್ಲಿ ಕಾಲುಕೆದರಿ ಜಗಳಕ್ಕೆ ನಿಂತಾಗ ಇಡೀ ಜಗತ್ತೇ ಭಾರತದ ಪರವಾಗಿ ನಿಲ್ಲಲು ಕೊರೋನಾ ದುರಂತ ಕಾರಣವಾಯಿತು.
ಒಂದು ಅಧ್ಯಯನದ ಪ್ರಕಾರ ಕೊರೋನಾ ದುರಂತದ ಸಮಯದಲ್ಲಿ ಹೃದಯಾಘಾತಗಳು ಕಡಮೆಯಾಗಿವೆ. ಜಂಕ್ಫುಡ್ನ ಸೇವನೆಯಿಲ್ಲದೆ ಮನೆಯ ಶುಚಿ-ರುಚಿಯ ಆಹಾರದ ಸೇವನೆಯಿಂದ, ಧಾವಂತದ ಬದುಕಿಲ್ಲದೆ ಮನೆಯಲ್ಲಿ ಎಲ್ಲರೂ ಒಟ್ಟಿಗಿರುವುದರಿಂದ ಆದ ನೆಮ್ಮದಿಯ ಬದುಕಿನ ಪರಿಣಾಮವಾಗಿ ಹೃದಯಾಘಾತಗಳು ಕಡಮೆಯಾಗಿರಬಹುದು ಎಂದು ತಜ್ಞರ ಅಭಿಪ್ರಾಯ. ಕೊರೋನಾ ದುರಂತದಿಂದ ಕೌಟುಂಬಿಕ ಸಾಮರಸ್ಯ ಬೆಳೆದಿದೆ. ‘ಮನೆಯಿಂದಲೆ ಕೆಲಸ’ ಎಂಬುದರಿಂದ ಎಷ್ಟೋ ಕುಟುಂಬಗಳು ಒಟ್ಟಿಗೆ ವಾಸಿಸುತ್ತವೆ. ಇದರಿಂದ ವಿವಾಹ ವಿಚ್ಛೇದನಗಳು ಕಡಮೆಯಾದಾವು ಎಂಬುದನ್ನು ಸಾಮಾಜಿಕ ತಜ್ಞರು ಗುರುತಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟಣೆಯಾದ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸುವುದು ಉಚಿತವಾದುದು.
ದಾವಣಗೆರೆಯ ಹುಡುಗ ಪ್ರಕಾಶ, ಬೆಂಗಳೂರಿನ ಮಾನಸಿ ಇಬ್ಬರೂ ಎಂಎನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ಮನೆಯವರ ವಿರೋಧವಿದ್ದಾಗಲೂ ಮದುವೆಯಾದರು. ವರ್ಷ ಕಳೆದು, ಆಕರ್ಷಣೆಯ ದಿನಗಳು ಮುಗಿಯುತ್ತಿದ್ದಂತೆ ಪ್ರಕಾಶ-ಮಾನಸಿಯ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಸಣ್ಣ-ಪುಟ್ಟ ಸಂಗತಿಗಳಿಗೂ ಜಗಳವಾಗಿ ಡೈವೋರ್ಸ್ ಕೊಡುವವರೆಗೂ ಬಂತು. ಕೇಸ್ ಹಿಯರಿಂಗ್ಗೆ ವಾರವಷ್ಟೇ ಬಾಕಿಯಿದೆ ಎನ್ನುವಾಗಲೇ ಲಾಕ್ಡೌನ್ ಆರಂಭವಾದದ್ದರಿಂದ ಪ್ರಕಾಶನೂ, ಮಾನಸಿಯೂ ಅಪಾರ್ಟ್ಮೆಂಟ್ನ ಆ ಮನೆಯಲ್ಲಿ ಒಟ್ಟಿಗೇ ಇರಬೇಕಾಗಿ ಬಂದಿತ್ತು.
ಆಫೀಸ್ಗೆ ಹೋಗುತ್ತಿದ್ದಾಗ, ಬೆಳಗ್ಗೆಯಿಂದ ಸಂಜೆಯವರೆಗಷ್ಟೇ ಕೆಲಸ ಮಾಡುತ್ತಿದ್ದರು. ಆದರೆ ಮನೆಯಿಂದ ಕೆಲಸ ಮಾಡುವಾಗ ಸಮಯದ ಮಿತಿಯೇ ಇರುತ್ತಿರಲಿಲ್ಲ. ಹೀಗೆ ಇಡೀ ದಿನ ಬ್ಯುಸಿ ಇದ್ದುದರಿಂದ
ಆಕರ್ಷಣೆಗೆ ಒಳಗಾಗದಿರಲು, ಆಯಾಸದ ಕಾರಣಕ್ಕೆ ಬೇಗ ನಿದ್ರೆಗೆ ಜಾರಲು ಸಹಾಯವಾಯಿತು. ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬ ಭಾವದಲ್ಲಿ ಇಬ್ಬರೂ ಇರತೊಡಗಿದರು. “ಕೊರೋನಾ’’ ಎಂಬ ಮಾತು ಕೇಳಿದ್ದೆ, ಮಾನಸಿ ಬೆಚ್ಚಿಬಿದ್ದಳು. ಮೂರು ದಿನಗಳ ನಂತರವೂ ಜ್ವರ ಬಿಡದಿದ್ದರೆ, ಕೊರೋನಾ ಪಾಸಿಟಿವ್ ಎಂದು ರಿಪೋರ್ಟ್ ಬಂದುಬಿಟ್ಟರೆ, ಅಪ್ಪ-ಅಮ್ಮನನ್ನು ನೋಡುವ ಮೊದಲೇ ಸತ್ತು ಹೋಗಿಬಿಟ್ಟರೆ… ಇಂಥವೇ ಯೋಚನೆಗಳು ಅವಳನ್ನು ಹಣ್ಣು ಮಾಡಿದವು. ಆದರೆ ಈಗ, ಅಂಥ ಎಲ್ಲಾ ಸೆಂಟಿಮೆಂಟ್ಗಳನ್ನೂ ಕೊರೋನಾ ನಿರ್ದಯವಾಗಿ ಹೊಸಕಿಹಾಕಿತ್ತು.
ಈ ಸಂದರ್ಭದಲ್ಲಿ ಎದುರುಮನೆಯ ದಂಪತಿಗಳು ಆಗಾಗ ಜಗಳವಾಡುತ್ತಿದ್ದರೂ, ಸುಗಮವಾಗಿ 25 ವರ್ಷ ಆದರ್ಶ ದಾಂಪತ್ಯ ಜೀವನ ನಡೆಸಿದ ಆ ದಂಪತಿಗಳ ಮಾತು ನೆನಪಾಯಿತು – “ಜಗಳ ಇದ್ದಾಗಲೇ ‘ಜಗುಲ್ಬಂದಿ’ ಸಾಧ್ಯ. ಆದ್ರೆ ಒಂದು ವಿಷಯ ನೆನಪಿಡಬೇಕು. ಗಂಡ-ಹೆಂಡತಿ ಮಧ್ಯೆ ಜಗಳ ತಂದುಹಾಕೋಕೆ ಜನ ಕಾಯ್ತಾ ಇರ್ತಾರೆ. ಅವರು ಹಾಲಿಗೆ ಹುಳಿ ಹಿಂಡುವ ಮೊದಲೇ ನಾವು ಹೆಪ್ಪು ಹಾಕಿಬಿಡಬೇಕು. ನಾಲ್ಕು ಮಂದಿ ಮೆಚ್ಚುವ ಹಾಗೆ ಬಾಳಬೇಕೇ ಹೊರತು ಹತ್ತು ಜನ ಆಡಿಕೊಂಡು ನಗುವಂತೆ ಬಾಳಬಾರದು…”
ಪ್ರಕಾಶನ ಮನದಲ್ಲಿ ಈ ಮಾತುಗಳು ತುಂಬಾ ಪ್ರಭಾವ ಬೀರಿತು. ಮುಂದೇನನ್ನೂ ಯೋಚಿಸಲು ಅವನಿಗೆ ಮನಸ್ಸಾಗಲಿಲ್ಲ. ಮದ್ದು ತರಲು ಎಂದು ಡಾಕ್ಟರ್ ಹತ್ತಿರ ಹೋದವ ದಡಬಡಿಸಿ ಮನೆ ಬಂದು ನೋಡಿದ. ಮಾನಸಿ ಮುದುರಿಕೊಂಡು ಮಲಗಿದ್ದಳು. ಆವತ್ತು ಇಡೀ ದಿನ ಅವಳ ಪಕ್ಕದಲ್ಲೇ ಕುಳಿತವನಿಗೆ, ಅವಳೊಂದಿಗೆ ಕಳೆದ ಮಧುರ ಕ್ಷಣಗಳೆಲ್ಲ ನೆನಪಾದವು. ಅದೇ ಸಮಯಕ್ಕೆ ಅವಳು ನಿದ್ರೆಯಲ್ಲಿ ಕನವರಿಸುತ್ತಾ – ‘ಪ್ರಕಾಶೂ ಸಾರಿ ಕಣೋ’ ಎಂದಾಗ, ಇವನಿಗೆ ಕೂತಲ್ಲಿಯೇ ಗಂಟಲು ಕಟ್ಟಿತು.
ಅಬ್ಬಾ ಕಡೆಗೂ ಜ್ವರ ಬಿಟ್ಟಿದೆ. ಕೊರೋನಾ ಇಲ್ಲ ಎಂದು ಗ್ಯಾರಂಟಿ ಆಯ್ತು. ಅಷ್ಟು ಸಾಕು ಎಂದುಕೊಳ್ಳುತ್ತಾ ರೂಮ್ನಿಂದ ಆಚೆ ಬಂದಳು ಮಾನಸಿ. ಆಗಲೇ ಇನ್ನೊಂದು ರೂಮಿನಿಂದ ಪ್ರಕಾಶನ ಮಾತು ಕೇಳಿಸಿತು; “ಅಮ್ಮಾ ನಾನಂತೂ ಡೈವೋರ್ಸ್ ಕೊಡಲ್ಲ. ಅರ್ಜಿ ವಾಪಸ್ ತಗೋತೇನೆ. ಕಷ್ಟವೋ ಸುಖವೋ… ಅವಳ ಜೊತೆನೇ ಬದುಕುತ್ತೇನೆ…”
ಬದುಕು ಎನ್ನುವುದು ಪಟ್ಟಿ ಮಾಡಿದಂತೆ ಒಂದಾದ ಮೇಲೊಂದು ಬರುವ ಘಟನೆಗಳಲ್ಲ. ಅದು ಅನಿರೀಕ್ಷಿತವಾಗಿ ಬಂದೊದಗುವ ಅವಕಾಶಗಳ ಸಮುದ್ರ. ಒಂದೊಂದು ದುರಂತವೂ ನಮಗೆ ದೊರಕುವ ಒಂದು ಅವಕಾಶ, ಒಂದು ಅನುಭವ. ಇಂತಹ ಅನುಭವದಿಂದಲೂ ನಮ್ಮ ಬದುಕು ಬೆಳೆಯಬಹುದು, ಬೆಳಗಬಹುದು.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಆ್ಯಪಲ್ ಕಂಪೆನಿಯ ಸ್ಥಾಪಕ, ಮಾಲಿಕ ಸ್ಟೀವ್ ಜಾಬ್ಸ್ ಯಮನ ಮನೆಯ ಕದತಟ್ಟಿ ವಾಪಸ್ಬಂದ ಮೇಲೆ ಸಾವನ್ನು ‘Life’s change agent’ ಎಂದು ವರ್ಣಿಸಿದ್ದರು.
ಸಾವನ್ನು ಪರಿಚಯಿಸುವ ದುರಂತವೂ ಮನುಷ್ಯನ ಕ್ಷಣಿಕ ಬದುಕಿನ ಸಾಮಥ್ರ್ಯ, ಮಿತಿಯನ್ನು ತಿಳಿಸಿ ಭಗವಂತನ ಅರಿವನ್ನುಂಟುಮಾಡುವ ಒಂದು ಅನುಭವ.
ಸೃಷ್ಟಿಯಲ್ಲಿ ದುರಂತಗಳು ಅನಿವಾರ್ಯವೂ ಹೌದು, ಅನಿರೀಕ್ಷಿತವೂ ಹೌದು. ಆದುದರಿಂದ ದುರಂತಗಳು ಬಾರದಿರಲಿ ಎಂಬುದಾಗಿ ಭಗವಂತನಲ್ಲಿ ಬೇಡುವುದಕ್ಕಿಂತ ದುರಂತವನ್ನು ಎದುರಿಸುವ ಶಕ್ತಿ-ಸಾಮಥ್ರ್ಯಗಳನ್ನು ದಯಪಾಲಿಸು ಎಂಬುದಾಗಿ ಬೇಡುವುದು ಒಳ್ಳೆಯದು.