ಹುಟ್ಟಿದ ಮನುಷ್ಯ ಹಗಲು-ರಾತ್ರಿ ನಿರಂತರವಾಗಿ ಕೆಲಸದಲ್ಲಿ ತೊಡಗಿರುತ್ತಾನೆ. ಕೆಲಸವಿಲ್ಲದ ಜೀವನವೆಂಬುದಿಲ್ಲ. ಕೆಲಸ ಮಾಡದೆ ಇರುವುದು ನಿರ್ಜೀವತೆಯ ಲಕ್ಷಣ. ಹುಟ್ಟಿದ ಮೇಲೆ ಕೆಲಸ ಮಾಡದೆ ಇರುವ ಸ್ವಾತಂತ್ರ್ಯ ಮನುಷ್ಯನಿಗಿಲ್ಲ. ಆದರೆ ಏನು ಕೆಲಸ ಮಾಡಬೇಕು, ಹೇಗೆ ಮಾಡಬೇಕು, ಯಾವ ಭಾವನೆಯಿಂದ ಮಾಡಬೇಕು? – ಎಂಬ ಆಯ್ಕೆ ಮನುಷ್ಯನಿಗಿದೆ. ಮನುಷ್ಯ ಏನೇ ಕೆಲಸ ಮಾಡಿದರೂ ಅದಕ್ಕೊಂದು ಫಲಿತಾಂಶ ಇದೆ. ಪರಿಣಾಮವಿಲ್ಲದ ಕೆಲಸವೆಂಬುದೇ ಇಲ್ಲ. ‘Reaction is because of action only’ ಎಂಬ ಮಾತು ಅಕ್ಷರಶಃ ನಿಜ. ಆದರೆ ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲ ಬಂದಿಲ್ಲದಿದ್ದರೆ ಆ ಕರ್ಮದ ಅನಿವಾರ್ಯತೆಯಾದರೂ ಏನು? ಹಾಗಾದರೆ ಕ್ರಿಯೆಗಿಂತ ನಿಷ್ಕ್ರಿಯತೆಯೆ ಒಳ್ಳೆಯದಲ್ಲವೆ? – ಎಂಬುದು ಹಲವರ ವಾದ.
ಉದ್ಯೋಗಂ ಪುರುಷಲಕ್ಷಣಂ
ಆಂಗ್ಲಭಾಷೆಯಲ್ಲಿ ಒಂದು ಹೇಳಿಕೆ ಇದೆ: “ಮಿಣುಕುಹುಳು ಬೆಳಗುವುದು ಅದು ಹಾರುತ್ತಿರುವಾಗಲೇ.” “ಯಃ ಕ್ರಿಯಾವಾನ್ ಸಃ ಪಂಡಿತಃ” “ಯಾರು ಕ್ರಿಯಾಶೀಲನೋ ಅವನೇ ಜ್ಞಾನಿ” ಎಂಬ ಸಂಸ್ಕೃತ ಹೇಳಿಕೆಯೂ ಉಂಟು. “ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀಃ” “ಉದ್ಯೋಗಶೀಲನನ್ನೂ, ಪುರುಷಸಿಂಹನನ್ನೂ ಐಶ್ವರ್ಯ ಸಮೀಪಿಸುತ್ತದೆ” ಎಂಬ ಸಂಸ್ಕೃತ ಹೇಳಿಕೆಯನ್ನು ಸ್ವಾಮಿ ವಿವೇಕಾನಂದರು ಉದ್ಧರಿಸುತ್ತಿದ್ದರು. “ಮಾನವನೆಂದರೆ ಕರ್ಮಜೀವಿ, ಅದಿಲ್ಲದಿದ್ದರೆ ಅವನು ನಿರ್ಜೀವಿ” ಎಂದು ಜೋಸೆಫ್ ಕೊವಾರ್ಡ್ ಹೇಳುತ್ತಾರೆ. ನಿನ್ನ ಪಾಲಿಗೆ ಬಂದ ಕರ್ಮವನ್ನು ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಮಾಡು, ಅದರಲ್ಲೇ ಶ್ರೇಯಸ್ಸಿದೆ ಎಂಬುದೇ ಭಗವದ್ಗೀತೆಯಲ್ಲಿ ಕೃಷ್ಣನ ಉಪದೇಶವೂ ಆಗಿದೆ. ಅರ್ಜುನನಿಗೆ ಕೃಷ್ಣ ಹೇಳುತ್ತಾನೆ –
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ
ಶರೀರಯಾತ್ರಾýಪಿ ಚ ತೇ ನ ಪ್ರಸಿಧ್ಯೇದಕರ್ಮಣಃ ||
ಅಂದರೆ ನೀನು ನಿತ್ಯ ಕರ್ಮವನ್ನು ಮಾಡು. ಏಕೆಂದರೆ ಕರ್ಮ ಮಾಡದೆ ಇರುವುದಕ್ಕಿಂತ ಕರ್ಮ ಮಾಡುವುದು ಉತ್ತಮ. ಕರ್ಮ ಮಾಡದೆ ಇರುವುದರಿಂದ ನಿನಗೆ ಜೀವನಯಾತ್ರೆ ಕೂಡ ಸಾಧ್ಯವಾಗಲಾರದು.
ಕರ್ಮದ ಮಹತ್ತ್ವವನ್ನು ಕುರಿತು ಹೆನ್ರಿ ಫೋರ್ಡ್ ಒಂದು ಸುಂದರ ಮಾತು ಹೇಳುತ್ತಾನೆ: “Work give us our living and it is our life too!” ಕರ್ಮವು ನಮಗೆ ಬದುಕನ್ನು ಕೊಡುತ್ತದೆ ಹಾಗೂ ಬದುಕಲು ಬೇಕಾದದ್ದನ್ನೆಲ್ಲ ಒದಗಿಸುತ್ತದೆ.
ಹೀಗೆ ಮನುಷ್ಯನ ಜೀವನದಲ್ಲಿ ಕರ್ಮ ಅನಿವಾರ್ಯ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಇನ್ನೊಂದು ಮಾತನ್ನು ಹೇಳುತ್ತಾನೆ – ನಿನ್ನ ಪಾಲಿಗೆ ಬಂದ ಕರ್ಮವನ್ನು ಮಾಡು, ಆದರೆ ಫಲವನ್ನು ಅಪೇಕ್ಷಿಸಬೇಡ ಎಂಬುದಾಗಿ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ಕೃಷ್ಣನ ಮಾತು ಅರ್ಜುನನನ್ನು ಮಾತ್ರವಲ್ಲ ಜನಸಾಮಾನ್ಯರನ್ನೂ ಸ್ವಲ್ಪ ಗೊಂದಲದಲ್ಲಿ ಸಿಲುಕಿಸಿದೆ. ವ್ಯಾಪಾರ ಎಂಬ ಕರ್ಮವನ್ನು ಮಾಡುವಾಗ ಲಾಭವನ್ನು ಅಪೇಕ್ಷಿಸದೆ ಮಾಡಲಾದೀತೆ? ಕೃಷ್ಣ ಹೇಳುತ್ತಾನೆ: ವ್ಯಾಪಾರ ಕರ್ಮ ಮಾಡುವಾಗ ಕೇವಲ ಲಾಭವನ್ನೇ ಅಪೇಕ್ಷಿಸಬೇಡ. ವ್ಯಾಪಾರ ಎಂದ ಮೇಲೆ ಲಾಭ, ನಷ್ಟ ಎರಡೂ ಇರುತ್ತವೆ. ಪ್ರತಿಸಲ ಲಾಭವನ್ನೇ ನಿರೀಕ್ಷಿಸಿದರೆ, ಇಂತಿಷ್ಟೇ ಲಾಭ ಬರಬೇಕೆಂದು ಅಪೇಕ್ಷಿಸಿದರೆ ನೀನು ದುಃಖಿತನಾಗುತ್ತೀ. ನಾವು ಜೀವನದಲ್ಲಿ ದುಃಖ ಅನುಭವಿಸುವುದು ನಮ್ಮ ಕರ್ಮದಿಂದಲ್ಲ; ಬದಲಿಗೆ ಕರ್ಮಫಲದಲ್ಲಿ ಆಸಕ್ತರಾಗಿರುವುದರಿಂದ. ನಾವು ಮಾಡಿದ ಕರ್ಮಕ್ಕೆ ಫಲ ಬಂದೇ ಬರುವುದು. ಆದರೆ ನಮ್ಮ ಅಪೇಕ್ಷೆಯಂತೆ ಬರಬೇಕೆಂಬ ಆಗ್ರಹವೇ ಎಲ್ಲ ದುಃಖದ ಮೂಲ. ಫಲದ ಬಗ್ಗೆ ನಿರ್ಲಿಪ್ತನಾದರೆ ಮನುಷ್ಯನ ಜೀವನವೇ ಆನಂದಮಯವಾಗುತ್ತದೆ. ಇದು ಭಗವದ್ಗೀತೆಯ ಸಾರ ಸಂದೇಶ. ಫಲದ ಬಗ್ಗೆ ಗೊಣಗದೆ ಕೆಲಸ ಮಾಡು ಎಂಬುದು ಡಿವಿಜಿಯವರ ಅಭಿಮತ.
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |
ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ ||
( ಕಗ್ಗ 601 )
“ನಿನಗೆ ದೇವರು ಕೊಟ್ಟಿರುವ ಕೆಲಸವನ್ನು ಇದು ಮೇಲು ಅಥವಾ ಕೀಳು ಎನ್ನುವ ಭಾವನೆ ಬಿಟ್ಟು ಅದು ಎಷ್ಟೇ ಚಿಕ್ಕದಾಗಿದ್ದರೂ ಮನಸ್ಸಿಟ್ಟು ಆ ಕೆಲಸವನ್ನು ಮಾಡು. ಆ ಕೆಲಸ ಮಾಡಿದಾಗ ಸಿಕ್ಕಿದ ಪ್ರತಿಫಲವನ್ನು ಗೊಣಗದೆ, ದೇವರು ಕೊಟ್ಟ ಪ್ರಸಾದವೆಂದು ಸ್ವೀಕರಿಸು. ಪರಮಾರ್ಥವನ್ನು ಬಿಡದೆ ಜೀವನದ ಭಾರವನ್ನು ಹೊರು. ಇಷ್ಟೆಲ್ಲವನ್ನು ನೀನು ತೃಪ್ತಿಕರವಾಗಿ ಮಾಡಿದ ಮೇಲೆ ನೀನು ಮಾಡುವುದಿನ್ನೇನೂ ಉಳಿದಿರುವುದಿಲ್ಲ. ಆ ಪರಮಾತ್ಮನ ಕರೆ ಬಂದಾಗ ಅಳದೆ ಹೊರಡುತ್ತಿರು” ಎಂಬುದು ಇದರರ್ಥ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಫಲವನ್ನು ಅಪೇಕ್ಷಿಸಬೇಡ ಎಂದಿದ್ದಾನೆಯೇ ವಿನಾ ಫಲ ಸಿಗುವುದಿಲ್ಲ ಎನ್ನಲಿಲ್ಲ. ಎಲ್ಲ ಕರ್ಮಕ್ಕೂ ಅದರದ್ದೇ ಫಲ ಇದ್ದೇ ಇರುತ್ತದೆ.
‘ಮಾಡಿದ್ದುಣ್ಣೋ ಮಹರಾಯ’ ಎಂಬುದೇ ಕರ್ಮದ ನಿಯಮ.
ಬಿತ್ತಿದ್ದು ಬೆಳೆ
‘ಬೇವು ಬಿತ್ತಿ ಮಾವು ಬಯಸಬಹುದೆ?’ ಎಂಬುದು ಕನ್ನಡದ ಮಾತು. ಅಂದರೆ ಬೇವಿನ ಬೀಜವನ್ನು ಬಿತ್ತಿ ಬೇವಿನ ಮರವನ್ನು ಬೆಳೆಸಿದರೆ ಅದರಲ್ಲಿರುವುದು ಬೇವಿನಹಣ್ಣೇ ಹೊರತು ಮಾವಿನಹಣ್ಣು ಅಲ್ಲವಲ್ಲ! ಇದಕ್ಕೆ ಹೊಂದಿಕೊಳ್ಳುವಂತಹ ಮಾತೊಂದು ಬೈಬಲಿನಲ್ಲಿಯೂ ಇದೆ. “ಯು ರೀಪೆತ್ ಆ್ಯಸ್ ಯು ಸೋಯೆತ್!” ಅಂದರೆ ನೀವು ಏನು ಬಿತ್ತುತ್ತೀರೋ ಆ ಬೆಳೆಯನ್ನೇ ಪಡೆಯುತ್ತೀರಿ ಎಂಬುದು ಇದರರ್ಥ. ಈ ಮಾತುಗಳನ್ನು ಒಬ್ಬ ಮಧ್ಯವಯಸ್ಸಿನ ಸ್ಫುರದ್ರೂಪಿ ಮಹಿಳೆಯೊಬ್ಬರು ತಮ್ಮ ವೈದ್ಯರಿಗೆ ಹೇಳಿದ ಪ್ರಸಂಗ ಹೀಗಿದೆ.
ಸಿಗರೇಟು ಆಗಷ್ಟೇ ಮಾರುಕಟ್ಟೆಗೆ ಬಂದಿದ್ದ ಕಾಲ. ಸಿಗರೇಟನ್ನು ಜನಪ್ರಿಯಗೊಳಿಸುವುದಕ್ಕಾಗಿ ತಯಾರಕರು ಏನೇನೋ ಯೋಜನೆಗಳನ್ನು ಹೂಡುತ್ತಿದ್ದರು. ಒಮ್ಮೊಮ್ಮೆ ಅವರು ಕಣ್ಣುಕುಕ್ಕುವ ಉಡುಪು ಧರಿಸಿದ, ಸುರೂಪಿಯಾದ ಒಬ್ಬ ಯುವತಿಯನ್ನು ನಗರದ ಜನನಿಬಿಡ ರಸ್ತೆಯ ಪಕ್ಕದಲ್ಲಿ ನಿಲ್ಲಿಸುತ್ತಿದ್ದರು.
ಆಕೆಯ ಕೈಯಲ್ಲಿ ಸಿಗರೇಟು ಜೋಡಿಸಿಟ್ಟಿರುವ ಟ್ರೇ ಇರುತ್ತಿತ್ತು. ಆಕೆಯು ಪಾದಚಾರಿಗಳತ್ತ ಮೋಹಕ ಮುಗುಳ್ನಗೆಯನ್ನು ಬೀರಿ, ‘ಈ ಸಿಗರೇಟನ್ನು ಸೇದಿ ನೋಡಿ. ಇದು ನಿಮಗೆ ಉಚಿತ’ ಎನ್ನುತ್ತಿದ್ದರು. ಆಕೆಯ ಸೌಂದರ್ಯಕ್ಕೆ, ಮೋಹಕ ಮುಗುಳ್ನಗೆಗೆ, ಉಚಿತ ಕೊಡುಗೆಗೆ ಮರುಳಾದ ಜನರು ಸಿಗರೇಟನ್ನು ತೆಗೆದುಕೊಂಡು ಧೂಮ್ರಪಾನ ಮಾಡುತ್ತಿದ್ದರು. ಆಕೆ ಸಂಜೆಯ ಹೊತ್ತಿಗೆ ನೂರಾರು ಜನರಿಗೆ ಉಚಿತ ಸಿಗರೇಟ್ ಕೊಟ್ಟು ಅದರ ರುಚಿಯನ್ನು ಹತ್ತಿಸುತ್ತಿದ್ದರು. ಮರುದಿನ ಆಕೆ ಮತ್ತ್ಯಾವುದೋ ರಸ್ತೆಯಲ್ಲಿ ಇದೇ ಕೆಲಸ ಮಾಡುತ್ತಿದ್ದರು. ಇತ್ತ ಹಿಂದಿನ ದಿನ ಉಚಿತವಾಗಿ ಸಿಗರೇಟನ್ನು ಸೇದಿದ ಜನ ಮತ್ತೆ ಸಿಗರೇಟಿನ ಅನುಭವವನ್ನು ಬಯಸುತ್ತಿದ್ದರು. ಆದರೆ ಉಚಿತವಾಗಿ ಕೊಡಲು ಆಕೆ ಅಲ್ಲಿರುತ್ತಿರಲಿಲ್ಲ. ಆಗ ಅವರು ಅಂಗಡಿಗೆ ಹೋಗಿ ಸಿಗರೇಟನ್ನು ಕೊಂಡುಕೊಳ್ಳುತ್ತಿದ್ದರು. ಆನಂತರ ಅವರು ಅಜೀವಪರ್ಯಂತ ಸಿಗರೇಟ್ ಸೇವನೆಯ ಅಭ್ಯಾಸಕ್ಕೆ ದಾಸರಾಗುತ್ತಿದ್ದರು.
ಹೀಗೆ ಆಕೆ ಹಲವಾರು ವರ್ಷಗಳ ಕಾಲ ರಸ್ತೆಯಿಂದ ರಸ್ತೆಗೆ, ನಗರದಿಂದ ನಗರಕ್ಕೆ ಸುತ್ತಾಡುತ್ತ ಉಚಿತ ಸಿಗರೇಟುಗಳನ್ನು ಹಂಚುವ ಕೆಲಸವನ್ನು ಮಾಡುತ್ತಿದ್ದರು. ಸ್ವತಃ ಆಕೆಗೆ ಸಿಗರೇಟು ಸೇದುವುದು ಹಿಡಿಸುತ್ತಿರಲಿಲ್ಲ, ಆ ಕೆಲಸವೂ ಹಿಡಿಸುತ್ತಿರಲಿಲ್ಲ. ಆದರೆ ಆಕರ್ಷಕ ವೇತನಕ್ಕಾಗಿ ಆಕೆ ಹಲವಾರು ವರ್ಷಗಳ ಕಾಲ ಈ ಕೆಲಸವನ್ನು ಮಾಡಿದರು.
ಮುಂದೊಂದು ದಿನ ಆಕೆಗೆ ಮದುವೆಯಾಯಿತು. ಪತಿ ಶ್ರೀಮಂತನಾಗಿದ್ದುದರಿಂದ ಕೆಲಸದ ಆವಶ್ಯಕತೆ ಇರಲಿಲ್ಲ. ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಗೃಹಿಣಿಯಾದರು; ಸುಖ ಸಂಸಾರ ನಡೆಸತೊಡಗಿದರು. ಇದಾದ ಕೆಲವು ವರ್ಷಗಳ ನಂತರ ಆಕೆಯ ಆರೋಗ್ಯದಲ್ಲಿ ಏರುಪೇರುಂಟಾಯಿತು. ವೈದ್ಯರ ಬಳಿಗೆ ಹೋದಾಗ ಆಕೆಯನ್ನು ಪರೀಕ್ಷಿಸಿದ ವೈದ್ಯರು, ‘ನಿಮಗೆ ಶ್ವಾಸಕೋಶದ ಕ್ಯಾನ್ಸರ್ ಬಂದಿದೆ. ಧೂಮ್ರಪಾನ ಮಾಡದ ನಿಮಗೆ ಶ್ವಾಸಕೋಶದ ಕ್ಯಾನ್ಸರ್ ಹೇಗೆ ಬಂತು ಎಂಬುದೇ ಆಶ್ಚರ್ಯ!’ ಎಂದಾಗ ಆಕೆಯು ಒಂದು ಕ್ಷಣ ಅವಾಕ್ಕಾದರು; ಅಲ್ಲೇ ಕುರ್ಚಿಯಲ್ಲಿ ಕುಸಿದರು. ಅನಂತರ ಚೇತರಿಸಿಕೊಂಡು, “ಡಾಕ್ಟರ್! ನಾನು ಸಿಗರೇಟ್ ಎಂದೂ ಸೇದಿಲ್ಲವೆನ್ನುವುದು ನಿಜ. ಆದರೆ ನಾನು ಕೆಲವು ವರ್ಷಗಳ ಹಿಂದೆ ಸಿಗರೇಟ್ ಕಂಪೆನಿಯೊಂದರಲ್ಲಿ ಪ್ರಚಾರಕಿಯಾಗಿದ್ದೆ. ಉಚಿತವಾಗಿ ಸಿಗರೇಟುಗಳನ್ನು ಹಂಚಿ ಜನರಿಗೆ ಸಿಗರೇಟ್ ಸೇವನೆಯ ಚಟವನ್ನು ಹತ್ತಿಸುತ್ತಿದ್ದೆ. ಅದರ ಪರಿಣಾಮ ಈಗ ನನ್ನ ಮೇಲಾಗಿದೆಯೇನೋ, ಯಾರಿಗೆ ಗೊತ್ತು! ‘ಯೂ ರೀಪೆತ್ ಆ್ಯಸ್ ಯೂ ಸೋಯೆತ್.’ ನಾವು ಬಿತ್ತಿದ್ದೇ ಬೆಳೆದು ಫಲ ಕೊಡುತ್ತದಲ್ಲವೆ? ನಾವು ಮಾಡಿದ ಕರ್ಮ ನಾವು ಅನುಭವಿಸಬೇಕಲ್ಲವೆ?” ಎನ್ನುತ್ತ ನಿಟ್ಟುಸಿರು ಬಿಟ್ಟರಂತೆ.
ಕರ್ಮಫಲ
ಕರ್ಮಫಲ ಯಾರನ್ನೂ ಬಿಡುವುದಿಲ್ಲ. ಈ ಸಿದ್ಧಾಂತದಲ್ಲಿ ಭಗವಂತ ಕೂಡ ಕೈಯಾಡಿಸುವುದಿಲ್ಲ. ನಮ್ಮ ಕರ್ಮಫಲವನ್ನು ಸ್ವತಃ ಅನುಭವಿಸಬೇಕೇ ವಿನಾ ಅದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಅಥವಾ ಅದನ್ನು ಇನ್ನೊಬ್ಬರಿಗೆ ವರ್ಗಾಯಿಸಲೂ ಬರುವುದಿಲ್ಲ. ಈ ಕರ್ಮಸಿದ್ಧಾಂತವನ್ನು ಪುರಸ್ಕರಿಸುವ ಸರ್ವಜ್ಞ ಹೇಳುತ್ತಾನೆ –
ಹಿಂದೆ ಮಾಡಿದ ಕರ್ಮವೆಂದಿಗೂ ಬೆಂಬಿಡದು
ಬಂದ ಭೋಗವನು ತಿಂದು ತೀರಲೇಬೇಕು
ನೊಂದೆವೆನಬೇಡ ಸರ್ವಜ್ಞ ||
ಪುರಂದರದಾಸರಂತೂ “ಆರೇನ ಮಾಡುವರು ಆರಿಂದಲೇನಹುದು ಪೂರ್ವಜನ್ಮದ ಕರ್ಮ ವಿಧಿ ಬೆನ್ನ ಬಿಡದು” ಎಂದು ಹಾಡುತ್ತ ಜನ್ಮಜನ್ಮಾಂತರದ ಲೆಕ್ಕವಿದು ಎಂದು ಸಾರಿದ್ದಾರೆ.
ಸುಭಾಷಿತವೊಂದು ಹೇಳುತ್ತದೆ –
“ಕರ್ಮಣಾ ಜಾಯತೇ ಸರ್ವಂ ಕರ್ಮೈವ ಗತಿಸಾಧನಂ |
ತಸ್ಮಾತ್ಸರ್ವಪ್ರಯತ್ನೇನ ಸಾಧು ಕರ್ಮ ಸಮಾಚರೇತ್ ||
ಅಂದರೆ ಕರ್ಮದಿಂದಲೇ ಎಲ್ಲವೂ ಆಗುತ್ತದೆ. ಕರ್ಮವೇ ನಮ್ಮ ಬೇರೆಬೇರೆ ಗತಿಗಳಿಗೆ ಕಾರಣ. ಆದುದರಿಂದ ಎಲ್ಲ ರೀತಿಯ ಪ್ರಯತ್ನಗಳಿಂದ ಒಳ್ಳೆಯ ಕೆಲಸವನ್ನು ಮಾಡಬೇಕು.
ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ ನಿಶ್ಚಿತ. ಈ ಬಗ್ಗೆ ಇನ್ನೊಂದು ಸುಭಾಷಿತ ಹೇಳುತ್ತದೆ –
ಶುಭೇನ ಕರ್ಮಣಾ ಸೌಖ್ಯಂ ದುಃಖಂ ಪಾಪೇನ ಕರ್ಮಣಾ |
ಕೃತಂ ಭವತಿ ಸರ್ವತ್ರ ನಾಕೃತಂ ವಿದ್ಯತೇ ಕ್ವಚಿತ್ ||
ಒಳ್ಳೆಯ ಕರ್ಮದಿಂದ ಸುಖವೂ ಕೆಟ್ಟ ಕರ್ಮದಿಂದ ದುಃಖವೂ ಉಂಟಾಗುತ್ತದೆ. ಮಾಡಿದ ಕರ್ಮಗಳೇ ಎಲ್ಲ ಕಡೆಗಳಲ್ಲಿಯೂ ಫಲಗಳನ್ನು ಕೊಡುತ್ತವೆ. ಕರ್ಮಗಳನ್ನು ಮಾಡದೆ ಫಲವೆಂಬುದು ಎಲ್ಲಿಯೂ ಇಲ್ಲ.
ಜಿ.ಪಿ. ರಾಜರತ್ನಂ ಒಂದೆಡೆ ಹೇಳುತ್ತಾರೆ: “ಕರ್ಮವೆಂಬುದು ನಮಗೆ ನೆರವಾಗುವ ನಾಣ್ಯ. ಪಾಪಭೀತಿ ಮತ್ತು ಪುಣ್ಯಪ್ರೀತಿ ಇವು ಅದರ ಎರಡು ಮುಖ. ಇದರಲ್ಲಿ ಯಾವ ಮುಖ ಸವಕಲಾದರೂ ನಾಣ್ಯ ಚಲಾವಣೆಯಾಗದು. ದೇವರ ವಿಷಯದಲ್ಲಾದರೂ ಅಪರಾಧ ಮಾಡಿ ಬದುಕಿಕೊಳ್ಳಬಹುದು. ಕರ್ಮದ ವಿಷಯದ ಮಟ್ಟಿಗೆ ಎಷ್ಟು ಎಚ್ಚರದಿಂದ ಇದ್ದರೂ ಸಾಲದು.” ನಾವಿಂದು ಅನುಭವಿಸುತ್ತಿರುವ ಎಲ್ಲ ಸುಖ-ದುಃಖಗಳಿಗೂ ಹಿಂದಿನ ಕರ್ಮವೇ ಕಾರಣ.
ಮಾಡಿದ್ದುಣ್ಣೋ ಮಹರಾಯ
ಮಹಾಭಾರತದ ಮಹಾಯುದ್ಧ ಮುಗಿಯಿತು. ಲಕ್ಷಾಂತರ ಸೈನಿಕರು ಪ್ರಾಣ ಕಳೆದುಕೊಂಡರು. ಅವರ ತಾಯಂದಿರ ಹೆಂಡಿರು-ಮಕ್ಕಳ ಆಕ್ರಂದನದಿಂದ ಭೂಮಿ ನಡುಗಿತು. ಇಂಥ ಹತಭಾಗ್ಯ ಹೆತ್ತವರಲ್ಲಿ ಕುರುವಂಶದ ರಾಜ ಧೃತರಾಷ್ಟ್ರ ಮತ್ತು ಅವನ ಪತ್ನಿ ಗಾಂಧಾರಿಯೂ ಸೇರಿದ್ದರು. ದುರ್ಯೋಧನನ ಸಾವಿನ ಸುದ್ದಿ ತಿಳಿಯುತ್ತಿರುವಂತೆ ಗಾಂಧಾರಿ ನೆಲಕ್ಕೆ ಕುಸಿದಳು. ಧೃತರಾಷ್ಟ್ರ ವಿಲಾಪ ಮಾಡುತ್ತಾ, “ಅಯ್ಯೋ, ನನ್ನಂಥ ಹತಭಾಗ್ಯರು ಯಾರೂ ಇರಲಿಕ್ಕಿಲ್ಲ. ಹುಟ್ಟಿನಿಂದ ದೃಷ್ಟಿಯಿಲ್ಲದ ನಾನು ಯಾವತ್ತೂ ನನ್ನ ಮಕ್ಕಳ ರೂಪ ನೋಡಲಿಲ್ಲ; ಅವರ ಮೈಬಣ್ಣ, ಚಹರೆ ಹೇಗಿದೆ ಯಾವುದನ್ನೂ ಕಾಣದ್ದರಿಂದ ಅವರನ್ನು ಕಲ್ಪಿಸಿಕೊಳ್ಳಲೂ ಆಗದ ಪಾಪಿ ನಾನು. ಜಗತ್ತೇ ನನಗೆ ಅಯೋಮಯ. ಇಂಥ ಘೋರ ಶಿಕ್ಷೆಗೆ ನಾನು ಅದು ಹೇಗೆ ಅರ್ಹ? ನಾನಾವ ಗುರುತರದ ಪಾಪ ಮಾಡಿದೆ? ಬಲ್ಲವರು ಹೇಳಿರಯ್ಯ…..” ಎಂದು ಬಡಬಡಿಸಿದ.
ಆಗ ಅಲ್ಲಿಗೆ ಬಂದ ಶ್ರೀಕೃಷ್ಣಪರಮಾತ್ಮ
“ದೊರೆಯೇ, ಈ ಸೃಷ್ಟಿಯಲ್ಲಿ ಎಲ್ಲವೂ ವ್ಯವಸ್ಥಿತವಾಗಿಯೇ ನಡೆಯುತ್ತದೆ. ನಾವು ಮಾಡಿದ ಕರ್ಮಗಳ ಫಲದಿಂದಲೇ ಫಲದಂತೆಯೇ ನಮ್ಮ ಬದುಕು” ಎಂದ. ಆಗ ಧೃತರಾಷ್ಟ್ರನು “ಕೃಷ್ಣ, ನಾನು ರಾಜಕುಮಾರನಾಗಿ ಹುಟ್ಟಿದೆ. ಹಾಗೆಯೇ ಬೆಳೆದೆ. ಕುರುಡಿನಿಂದ ನನ್ನ ಜೀವನ ಸೀಮಿತವಾಯಿತು. ಹೀಗಿರುವಾಗ ನನ್ನಿಂದ ಈ ಭಯಂಕರ ಶಿಕ್ಷೆ ಪ್ರಾಪ್ತಿಯಾಗುವಂಥ ಘೋರ ಪಾಪ ನಡೆದದ್ದು ಎಂತು? ಯಾವುದು? ದಯಮಾಡಿ ನನ್ನ ಈ ಶಿಕ್ಷೆಗೆ ನಾನೇ ಮಾಡಿದ್ದಾದರೂ ಸರಿಯೆ, ಕಾರಣ ತಿಳಿಸುವವನಾಗು ಸ್ವಾಮಿ” ಎಂದ. ಶ್ರೀಕೃಷ್ಣ ಅವನಿಗೆ ತನ್ನ ಪೂರ್ವಜನ್ಮವನ್ನು ನೋಡುವ ದಿವ್ಯದೃಷ್ಟಿಯನ್ನು ಅನುಗ್ರಹಿಸಿದ.
ನೂರು ಜನ್ಮಗಳ ಹಿಂದೆ ಧೃತರಾಷ್ಟ್ರ ಬೇಡನಾಗಿದ್ದ. ಹಕ್ಕಿಗಳನ್ನು ಹಿಡಿದು ವಿಕ್ರಯಿಸುತ್ತಿದ್ದ. ಕೊಂಡು ತಿನ್ನುತ್ತಿದ್ದ. ಒಂದು ಬಾರಿ ಅವನಿಗೆ ಹಕ್ಕಿಗಳಿಂದ ಗಿಜಿಗುಡುತ್ತಿದ್ದ ದೊಡ್ಡ ಪೆÇದೆಯೊಂದು ಕಂಡಿತು. ನೂರಾರು ಗೂಡುಗಳಲ್ಲಿ ಆಗತಾನೇ ಕಣ್ಣುಬಿಡುತ್ತಿದ್ದ, ಆಗತಾನೇ ಮೊಟ್ಟೆ ಒಡೆದು ಹೊರಬಂದ ಮರಿಹಕ್ಕಿಗಳು ಚಿಲಿಪಿಲಿ ಮಾಡುತ್ತಿದ್ದವು. ತಾಯಿಹಕ್ಕಿಗಳು ತರುವ ಗುಟುಕಿಗಾಗಿ ಕಾಯುತ್ತಿದ್ದವು.
ಇದನ್ನು ನೋಡಿದ ಬೇಡನ ಮನಸ್ಸಿನಲ್ಲಿ ಒಂದು ವಿಕೃತ ಯೋಚನೆ ಹುಟ್ಟಿತು. ಪೆÇದೆಯ ಸುತ್ತಲೂ ಒಣಗಿದ ಎಲೆಗಳನ್ನು ಹರಡಿದ. ದೂರದಲ್ಲಿ ತಾಯಿಹಕ್ಕಿಗಳನ್ನು ಕಾಣುತ್ತಲೇ ಅದಕ್ಕೆ ಬೆಂಕಿ ಹಚ್ಚಿದ. ಹೊಗೆಗೆ ತಮ್ಮ ಗೂಡುಗಳನ್ನು ಕಾಣದೆ ತಾಯಿ ಹಕ್ಕಿಗಳು ಗೊಂದಲಗೊಳ್ಳುವುದನ್ನು ನೋಡಿ ಸಂತೋಷಿಸಿದ. ಇತ್ತ ಮತ್ತೊಂದು ದುರಂತ ನಡೆದಿತ್ತು. ಹೊಗೆಯಿಂದ ನೂರಾರು ಮರಿಹಕ್ಕಿಗಳು ಕುರುಡಾದವು. ಮತ್ತೆ ಕೆಲವು ಸತ್ತೇ ಹೋದವು. ಅಮಾಯಕ ಜೀವಗಳನ್ನು ಕೊಂದ, ಕುರುಡು ಮಾಡಿದ ಪಾಪ ಬೇಡನಿಗೆ ಸುತ್ತಿಕೊಂಡಿತು.
ಅದು ಪ್ರಾರಬ್ಧಕರ್ಮವಾಗಿ ಜನ್ಮಾಂತರಗಳಲ್ಲಿ ಅವನನ್ನು ಹಿಂಬಾಲಿಸಿತು. ನೂರಾರು ಮಂದಿ ಮಕ್ಕಳಾಗುವವರೆಗೆ ಕಾದು ಕುಳಿತು ತಕ್ಕ ಸಮಯ ಬಂದಕೂಡಲೇ ಆ ಫಲ ಪ್ರಕಟಗೊಂಡಿತು. ನೂರಾರು ಮರಿಹಕ್ಕಿಗಳ ಕಣ್ಣು ಕುರುಡು ಮಾಡಿದ್ದರಿಂದ ಧೃತರಾಷ್ಟ್ರ ಕುರುಡನಾಗಿ ಜನ್ಮ ಕಳೆದ. ನೂರು ಪ್ರಾಣಹರಣ ಮಾಡಿ ಅದರಲ್ಲಿ ವಿಕೃತ ಸಂತೋಷ ಅನುಭವಿಸಿದ್ದ. ತನ್ನದೇ ಜನ್ಮಾಂತರ ಪಾಪಗಳು ತನ್ನನ್ನು ಈ ರೀತಿಯಾಗಿ ಹಿಂಬಾಲಿಸಿ ತನ್ನನ್ನು ಬಿಡುಗಡೆಗೊಳಿಸಿದವು ಎಂದು ತಿಳಿದ ಧೃತರಾಷ್ಟ್ರ ಸಮಾಧಾನ ಹೊಂದಿದ.
ಕರ್ಮ ಎಂಬುದು ವ್ಯಕ್ತಿ, ಸಮಾಜ, ದೇಶ, ಜಗತ್ತು ಎಲ್ಲದಕ್ಕೂ ಅನ್ವಯವಾಗುತ್ತದೆ. ಕೆಲವೊಮ್ಮೆ ವ್ಯಕ್ತಿಯೊಬ್ಬ ಮಾಡಿದ ಕರ್ಮ ಇಡೀ ಕುಟುಂಬ, ಸಮಾಜದ ಮೇಲೂ ಪರಿಣಾಮ ಬೀರುತ್ತದೆ.
ಯಾರೋ ಮಾಡಿದ ಕರ್ಮ ಇನ್ನಾರೋ ಅನುಭವಿಸುವ ಪ್ರಸಂಗವೂ ಬರುತ್ತದೆ.
“ಆಡಿ ನಳ ಕೆಟ್ಟ, ಮತ್ತಾಡಿ ಧರ್ಮಜ ಕೆಟ್ಟ
ನೋಡಿದ ನಾಲ್ವರು ತಿರಿದುಣಲು
ಲೆತ್ತವನು ಆಡಬೇಡೆಂದ ಸರ್ವಜ್ಞ”
ಜೂಜಾಡಿದ್ದು ಧರ್ಮರಾಯ ಒಬ್ಬನೇ ಆದರೂ, ಅದನ್ನು ನೋಡುತ್ತ ಕುಳಿತಿದ್ದವರು ಧರ್ಮಜನ ನಾಲ್ವರು ತಮ್ಮಂದಿರು. ಅದರ ಫಲವಾಗಿ ಅವರು ಹನ್ನೆರಡು ವರ್ಷ ಭಿಕ್ಷೆ ಬೇಡಬೇಕಾಯಿತು ಎನ್ನುತ್ತಾನೆ ಸರ್ವಜ್ಞ. ವಸಿಷ್ಠರ ಆಶ್ರಮದಿಂದ ಕಾಮಧೇನುವನ್ನು ಕದ್ದೊಯ್ಯಲು ಯೋಚಿಸಿದವನು ಒಬ್ಬ ವಸು ಮಾತ್ರ. ಆದರೆ ಜೊತೆಗೆ ಹೋದ ಉಳಿದ ಏಳು ಮಂದಿಯೂ ಅದರ ಪಾಪದ ಫಲವನ್ನು ಉಣ್ಣಬೇಕಾಯಿತು. ಹೀಗೆ ಸಮಾಜದಲ್ಲಿ ನಡೆಯುವ ಅನ್ಯಾಯಕ್ಕೆ ಅಧರ್ಮಕ್ಕೆ ನಾವು ಮೂಕಸಾಕ್ಷಿಗಳಾದರೂ, ಅದರ ಫಲವನ್ನು ನಾವು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಮಾಜದಲ್ಲಿ ನಡೆಯುವ ಅನ್ಯಾಯ ಅಧರ್ಮಗಳಲ್ಲಿ ನಾವು ಭಾಗಿಯಾಗದೆ ಇರುವುದು ಮಾತ್ರ ಮುಖ್ಯವಲ್ಲ. ಅದನ್ನು ಪ್ರಜ್ಞಾಪೂರ್ವಕವಾಗಿ ವಿರೋಧಿಸತಕ್ಕದ್ದು. ಇಲ್ಲದಿದ್ದರೆ ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಸೂಫಿಸಂತರ ಸಂದೇಶ
ಸೂಫಿಸಂತರೊಬ್ಬರು ತನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನು ಹಾಸ್ಯಮಯವಾಗಿ, ತಾರ್ಕಿಕವಾಗಿ ವಿವರಿಸಿದ್ದಾರೆ. ಒಮ್ಮೆ ಅವರು ಮಸೀದಿಯ ಪಕ್ಕದ ರಸ್ತೆಯೊಂದರಲ್ಲಿ ಹೋಗುತ್ತಿದ್ದರು. ಮಹಡಿಯ ಮೇಲಿಂದ ಮೌಲ್ವಿ ಆಕಸ್ಮಿಕವಾಗಿ ಅಲ್ಲಿಂದ ಕೆಳಗಿದ್ದ ಸೂಫಿಸಂತರ ತಲೆಯ ಮೇಲೆ ಬಿದ್ದ. ಸೂಫಿ ಸಂತರ ಕತ್ತು ಮುರಿಯಿತಾದರೂ ಮೌಲ್ವಿ ಸ್ವಲ್ಪವೂ ಪೆಟ್ಟಾಗದೆ ಪಾರಾದ. ಸೂಫಿಸಂತರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗಿ ಬಂದಿತು.
ಅವರ ಶಿಷ್ಯಂದಿರು ಅಲ್ಲಿ ನೆರೆದರು. ಏಕೆಂದರೆ ಸೂಫಿ ಸದ್ಗುರು ಪ್ರತಿಯೊಂದು ಸನ್ನಿವೇಶವನ್ನು ಶಿಷ್ಯಂದಿರಿಗೆ ಸಂದೇಶವನ್ನು ಕೊಡಲು ಬಳಸುತ್ತಿದ್ದರು. ಹೀಗಾಗಿ ಅವರೆಲ್ಲರೂ ನೆರೆದು ಸದ್ಗುರುವನ್ನು ಕೇಳಿದರು: “ಈ ಪರಿಸ್ಥಿತಿಯನ್ನು ನೀವು ಹೇಗೆ ಅರ್ಥೈಸುವಿರಿ?”
ತಮ್ಮ ಕಣ್ಣುಗಳನ್ನು ತೆರೆದು ಸೂಫಿ ಸದ್ಗುರು ಹೇಳಿದರು, “ಈ ಕರ್ಮಫಲದ ಸಿದ್ಧಾಂತವು ಸುಳ್ಳು. ಏಕೆಂದರೆ ಅವರು ‘ನೀನು ಏನನ್ನು ಬಿತ್ತುವೆಯೋ ಅದರ ಫಲವನ್ನು ಪಡೆಯುವೆ’ ಎನ್ನುತ್ತಾರೆ: ಬಿತ್ತುವವನು ನೀನು, ಫಲ ಪಡೆಯುವವನೂ ನೀನೇ ಎಂದು. ಆದರೆ ಇದು ಶುದ್ಧ ಸುಳ್ಳು, ನೋಡಿ! ಯಾರೋ ಬೀಳುತ್ತಾನೆ, ಮತ್ತಾರದೋ ಕತ್ತು ಮುರಿಯುತ್ತದೆ. ಹೀಗಾಗಿ ಯಾರೋ ಬಿತ್ತುತ್ತಾನೆ ಮತ್ತು ಇನ್ನಾರೋ ಫಲ ಅನುಭವಿಸುತ್ತಾನೆ.”
ಗಾಧಿಯ ಮಗನಾದ ವಿಶ್ವಾಮಿತ್ರನಿಗೂ ವಸಿಷ್ಠಮಹರ್ಷಿಗೂ ಒಮ್ಮೆ ಇಂದ್ರನ ಒಡ್ಡೋಲಗದಲ್ಲಿ ವಾಗ್ವಾದ ನಡೆಯಿತು. ಭೂಮಿಯಲ್ಲಿ ಅತ್ಯಂತ ಸತ್ಯವಂತನು ಯಾರು ಎಂದು. ವಸಿಷ್ಠನು ಹರಿಶ್ಚಂದ್ರನ ಹೆಸರು ಹೇಳಿದನು. ವಿಶ್ವಾಮಿತ್ರನು ಅವನನ್ನು ಪರೀಕ್ಷಿಸುತ್ತೇನೆಂದು ಭೂಮಿಗೆ ಬಂದ. ಪರಿಣಾಮವಾಗಿ ಹರಿಶ್ಚಂದ್ರನು ತನ್ನ ರಾಜ್ಯವನ್ನು ಕಳೆದುಕೊಂಡು, ಹೆಂಡತಿ-ಮಕ್ಕಳನ್ನು ಮಾರಿಕೊಂಡು, ಸಾಲಿಗನಾಗಿ, ತಾನು ಚಂಡಾಲನಿಗೆ ದಾಸನಾಗಿ, ಕಡೆಗೆ ತನ್ನ ಹೆಂಡತಿಯನ್ನು ತಾನೇ ಕೈಯಾರೆ ಕಡಿಯಬೇಕಾದ ಇಕ್ಕಟ್ಟಿಗೂ ಸಿಕ್ಕಿದನು. ಹೀಗೆ ವಿಶ್ವಾಮಿತ್ರ ಮತ್ತು ವಸಿಷ್ಠರ ಪಂದ್ಯದ ಪರಿಣಾಮ ಬೀರಿದ್ದು ಮಾತ್ರ ಹರಿಶ್ಚಂದ್ರನ ಮೇಲೆ. ಅವರ ಕರ್ಮದಿಂದ ಹರಿಶ್ಚಂದ್ರ ಪಡಬಾರದ ಕಷ್ಟಗಳನ್ನು ಪಡಬೇಕಾಯಿತು. ಹೀಗೆ ನಮಗೆ ಗೊತ್ತಿಲ್ಲದ ಕಾರಣದಿಂದ ಕೆಲವೊಮ್ಮೆ ನಮ್ಮ ದುಃಖವನ್ನು ಅನುಭವಿಸಬೇಕಾಗುತ್ತದೆ. ಆದರೆ ಅದರ ಹಿಂದೆ ಕಾರ್ಯಕಾರಣ ಸಂಬಂಧ ಇದ್ದೇ ಇರುತ್ತದೆ. ‘ಹೆತ್ತವರು ಮಾಡಿದ ಕರ್ಮ ಮಕ್ಕಳು ತಿನ್ನುತ್ತಾರೆ’ ಎಂಬ ಮಾತಿನಲ್ಲೂ ಇದೇ ರೀತಿಯ ಅಗೋಚರ ಕರ್ಮಸಿದ್ಧಾಂತ ಅಡಗಿದೆ. ತಂದೆಯ ಆಸ್ತಿಗೆ ಹೇಗೆ ಮಕ್ಕಳು ಹಕ್ಕುದಾರರೋ ಅದೇ ರೀತಿಯಲ್ಲಿ ಅವರು ಮಾಡಿದ ಕರ್ಮವನ್ನು ಉಣ್ಣಲು ಮಕ್ಕಳು ಬಾಧ್ಯಸ್ಥರು.
ವ್ಯಕ್ತಿಯೊಬ್ಬ ತೀರಿಹೋದಾಗ ಆತನ ಮಕ್ಕಳು ಆತನ ಅಪರ ಕರ್ಮ ಮಾಡುವಾಗ ಹನ್ನೆರಡನೆಯ ದಿನ ಪಿಂಡ ಇಡುವ ಕ್ರಮ ನಮ್ಮ ಸಮಾಜದಲ್ಲಿದೆ. ಮೃತ ವ್ಯಕ್ತಿ ತನ್ನ ಆಸೆಯನ್ನೆಲ್ಲ ಪೂರೈಸಿ ತೀರಿಹೋದಲ್ಲಿ ಪಿಂಡವನ್ನು ಕಾಗೆ ತಕ್ಷಣ ತಿನ್ನುತ್ತದೆ. ಆತನ ಬಯಕೆಯೇನಾದರೂ ಬಾಕಿಯಿದ್ದರೆ ಕಾಗೆ ಪಿಂಡವನ್ನು ಮುಟ್ಟುವುದಿಲ್ಲ – ಎಂಬ ಬಲವಾದ ನಂಬಿಕೆ ನಮ್ಮ ಸಮಾಜದಲ್ಲಿದೆ. ಆಗ ಮೃತವ್ಯಕ್ತಿಯ ಮಕ್ಕಳು ತೀರಿಹೋದ ಹೆತ್ತವರ ಆಸೆಯನ್ನು ಈಡೇರಿಸುತ್ತೇವೆ ಎಂಬುದಾಗಿ ಮನದಾಳದಿಂದ ಆಶ್ವಾಸನೆ ಕೊಟ್ಟಾಗಲೇ ಕಾಗೆ ಬಂದು ಪಿಂಡ ತಿಂದ ಸಾಕಷ್ಟು ನಿದರ್ಶನಗಳು ನಮ್ಮ ನಡುವೆ ಇವೆ. ಹೀಗೆ ಹೆತ್ತವರ ಕರ್ಮಕ್ಕೆ ಅವರ ಮಕ್ಕಳು ಬಾಧ್ಯಸ್ಥರು ಎಂಬುದಾಗಿ ಕರ್ಮಸಿದ್ಧಾಂತವನ್ನು ನಂಬುವವರು ಒಪ್ಪುತ್ತಾರೆ.
1960ರ ಸುಮಾರಿನಲ್ಲಿ ಹುಬ್ಬಳ್ಳಿಯಲ್ಲಿ ಗುರುನಾಥ ಎಂಬ ಪ್ರತಿಭಾವಂತ ವಿದ್ಯಾರ್ಥಿಯೊಬ್ಬರಿದ್ದರು. ಬಿ.ಎ. ಪರೀಕ್ಷೆಯಲ್ಲಿ ಇಡೀ ಕಾಲೇಜಿಗೆ ಮೊದಲಿಗರಾಗಿದ್ದಲ್ಲದೆ, ಎಂ.ಎ. ಪರೀಕ್ಷೆಯಲ್ಲೂ ಒಳ್ಳೆಯ ಅಂಕದೊಂದಿಗೆ ಉತ್ತೀರ್ಣರಾಗಿದ್ದರು. ಅವರಿಗೆ ದ.ರಾ. ಬೇಂದ್ರೆ, ವಿ.ಕೃ. ಗೋಕಾಕರಂಥ ಹಿರಿಯ ಕವಿಗಳೊಂದಿಗೆ ಆತ್ಮೀಯ ಬಾಂಧವ್ಯ ಇತ್ತು. ಸಾಹಿತ್ಯಕ್ಷೇತ್ರದಲ್ಲೂ ಆಸಕ್ತಿಯಿದ್ದ ಅವರ ಒಂದು ಕವನ ಸಂಗ್ರಹವೂ ಪ್ರಕಟವಾಗಿತ್ತು.
ಆದರೆ ಅವರಿಗೆ ಯಾವ ಉದ್ಯೋಗವೂ ತಕ್ಷಣ ಸಿಗಲಿಲ್ಲ. ಎಷ್ಟೋ ಅರ್ಜಿಗಳನ್ನು ಸಲ್ಲಿಸಿದರೂ ಸಂದರ್ಶನಕ್ಕೆ ಕರೆಗಳು ಬರುತ್ತಿರಲಿಲ್ಲ. ಕನ್ನಡ ಪರಿಸ್ಥಿತಿಯನ್ನು ಅರಿತಿದ್ದ ಬೇಂದ್ರೆಯವರು “ನಿನಗೆ ಒಳ್ಳೆಯ ವಿದ್ಯಾರ್ಹತೆಗಳಿದ್ದರೂ ಕೆಲಸ ಸಿಕ್ಕಿಲ್ಲವೆಂದರೆ ಮತ್ತೇನೋ ಕಾರಣವಿರಬೇಕು. ನಿನ್ನ ಬಾಲ್ಯಮಿತ್ರರಾದ ಇಲ್ಲಿನ ಹೆಸರಾಂತ ಜ್ಯೌತಿಷಿ ಜೋಗಳೇಕರರಿಗೆ ನಿನ್ನ ಜಾತಕವನ್ನು ನೋಡಲು ಹೇಳು. ಅದರಲ್ಲಿ ಏನಾದರೂ ದೋಷವಿರಬಹುದು” ಎಂದು ಸೂಚಿಸಿದರು.
ಗುರುನಾಥರು ಜಾತಕದೊಂದಿಗೆ ಜೋಗಳೇಕರರನ್ನು ಕಂಡಾಗ ಅವರು, “ನಿನ್ನ ಜಾತಕದಲ್ಲಿ ಎಲ್ಲವೂ ಸರಿಯಾಗಿದೆ. ಆದರೆ ನಿನ್ನ ತಂದೆಯವರ ಕಡೆಯಿಂದ ಏನೋ ದೋಷ ಇರುವಂತಿದೆ” ಎಂದುಬಿಟ್ಟರು. ಗುರುನಾಥರು ತಮ್ಮ ತಂದೆಯವರಲ್ಲಿ ವಿಚಾರಿಸಿದಾಗ ಅವರು ಹಿಂದಿನದನ್ನೆಲ್ಲ ನೆನಪಿಸಿಕೊಂಡು “ಹೌದು ಮಗು! ಬಹಳ ಹಿಂದೆ ನಾನು ಉದ್ಯೋಗ ಅರಸುತ್ತಿದ್ದಾಗ ನನಗೊಂದು ಕೆಲಸ ಸಿಕ್ಕರೆ ನನ್ನ ಮೊದಲ ತಿಂಗಳ ಸಂಬಳವನ್ನು ನಮ್ಮ ಕುಲದೇವರಾದ ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕುವುದಾಗಿ ಹರಸಿಕೊಂಡಿದ್ದೆ. ಕೆಲವೇ ದಿನಗಳಲ್ಲಿ ನನಗೆ ಕೆಲಸವೇನೋ ಸಿಕ್ಕಿತು. ಆದರೆ ನನ್ನ ತಿಂಗಳ ಸಂಬಳ ಎಂಟು ರೂಪಾಯಿಗಳು. ಏನೇನೋ ಕಾರಣಗಳಿಂದ ಹರಕೆಯನ್ನು ತೀರಿಸಲು ಸಾಧ್ಯವಾಗಲಿಲ್ಲ” ಎಂದು ಒಪ್ಪಿಕೊಂಡರು. ಅಂಚೆ ಇಲಾಖೆಯಲ್ಲಿ ಜವಾನರಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಅವರು ಸಬ್ ಪೋಸ್ಟ್ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
‘ಆ ಹಣವನ್ನು ನೀನೇ ತಿರುಪತಿಗೆ ಹೋಗಿ ಹುಂಡಿಯಲ್ಲಿ ಹಾಕಿ ಬಾ. ಆಗ ನಿನಗೆ ಖಂಡಿತವಾಗಿಯೂ ಕೆಲಸ ಸಿಗುತ್ತದೆ’ ಎಂಬುದಾಗಿ ಗುರುನಾಥರಿಗೆ ಬೇಂದ್ರೆಯವರು ಸೂಚಿಸಿದರು. ಗುರುನಾಥರು ತಂದೆಯವರು ಒಪ್ಪಿಸಬೇಕಾದ ಎಂಟು ರೂಪಾಯಿಗಳನ್ನು ರೇಷ್ಮೆವಸ್ತ್ರದಲ್ಲಿ ಕಟ್ಟಿ ದೇವರಮನೆಯಲ್ಲಿ ಮುಡುಪಾಗಿಟ್ಟರು. ಅದಾದ ಒಂದೇ ವಾರದಲ್ಲಿ ಗುರುನಾಥರಿಗೆ ಮುಂಬಯಿಯಲ್ಲಿ ಅಧ್ಯಾಪಕರ ಕೆಲಸ ಸಿಕ್ಕಿತು. ಮೊದಲನೇ ತಿಂಗಳ ಸಂಬಳ ಸಿಕ್ಕ ತಕ್ಷಣ ಅವರು ತಿರುಪತಿಗೆ ಹೋಗಿ ತಂದೆಯವರ ಎಂಟು ರೂ.ಗಳನ್ನೂ, ತಮ್ಮ ಮೊದಲ ತಿಂಗಳ ಸಂಬಳವನ್ನೂ ಹುಂಡಿಗೆ ಹಾಕಿದರು. ಮುಂದೆ ಗುರುನಾಥರು
ಡಾಕ್ಟರೇಟ್ ಗಳಿಸಿದರು. ಕಾಲೇಜ್ ಪ್ರಿನ್ಸಿಪಾಲ್ ಆಗಿ ನಿವೃತ್ತರಾದರು. ಅವರು ಕನ್ನಡ, ಇಂಗ್ಲಿಷ್ನಲ್ಲಿ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ನಾ ಕಂಡ ಬೇಂದ್ರೆ’, ‘ನಾ ಕಂಡ ಗೋಕಾಕ’ ಪುಸ್ತಕಗಳು ಮೌಲಿಕಗ್ರಂಥಗಳಾಗಿವೆ. ಈ ಗುರುನಾಥರೇ ಹೆಸರಾಂತ ಬರಹಗಾರರೂ, ಉಪನ್ಯಾಸಕರೂ ಆದ ಜಿ.ವಿ. ಕುಲಕರ್ಣಿಯವರು. ಇವರ ಮಗ ರಾಘವೇಂದ್ರರೂ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಪಾಸಾಗಿ ಉದ್ಯೋಗ ದೊರೆತ ನಂತರ ತಮ್ಮ ಮೊದಲ ತಿಂಗಳ ಸಂಬಳವನ್ನು ತಿರುಪತಿಯಲ್ಲಿನ ಹುಂಡಿಗೆ ಹಾಕಿ ಬಂದರಂತೆ.
ವ್ಯಷ್ಟಿ–ಸಮಷ್ಟಿ
ಕರ್ಮಕ್ಕೆ ಎರಡು ಮುಖ. ಒಂದು ವೈಯಕ್ತಿಕ, ಇನ್ನೊಂದು ಸಾಮಾಜಿಕ. ಆದ್ದರಿಂದ ವ್ಯಷ್ಟಿಗೂ ಸಮಷ್ಟಿಗೂ ಒಳಿತಾಗುವ ಕರ್ಮವನ್ನು ಮಾಡಬೇಕು. ಸಮಾಜಕ್ಕೆ ಹಾನಿಯಾದರೂ ಆಗಲಿ ನನ್ನ ವೈಯಕ್ತಿಕ ಕರ್ಮ ನನಗೆ ಮುಖ್ಯ ಎಂಬುದು ಸರಿಯಲ್ಲ. ರಾವಣ ದೊಡ್ಡ ದೈವಭಕ್ತನಾದರೂ, ವೈಯಕ್ತಿಕವಾಗಿ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದರೂ, ವೇದಪಾರಂಗತನಾದರೂ ಸಮಾಜಕಂಟಕನಾಗಿ ಬೆಳೆದಿದ್ದರಿಂದ ಆತನ ಜೀವನ ದುರಂತವಾಯಿತು. ಸತ್ಯ, ಧರ್ಮ, ನ್ಯಾಯ, ನಿಷ್ಠೆ, ಪ್ರಾಮಾಣಿಕತೆಯಿಂದ ವೈಯಕ್ತಿಕ ಕರ್ಮ ಮಾಡಿ ಮೋಕ್ಷ ಪಡೆಯಬಹುದು. ಅದೇ ರೀತಿ ಸಮಾಜದ ಹಿತಕ್ಕಾಗಿ ಪ್ರಾಮಾಣಿಕವಾಗಿ ದುಡಿದು ನಿಃಸ್ವಾರ್ಥಿಯಾಗಿ, ನಿರಹಂಕಾರಿಯಾಗಿ ಸಮಾಜಸೇವೆ ಮಾಡುವುದರಿಂದಲೇ ಮೋಕ್ಷ ಪಡೆಯಬಹುದು. ಇದನ್ನೇ ಸ್ವಾಮಿ ವಿವೇಕಾನಂದರು ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬುದಾಗಿ ಹೇಳಿದರು. ಜಗದ ಹಿತದ ಕೆಲಸ ಮಾಡಿದರೆ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎಂಬುದಾಗಿ ತಮ್ಮ ಜೀವನದಿಂದಲೇ ತೋರಿಸಿದರು. ಇದನ್ನೇ ನಿಷ್ಕರ್ಮ ಎನ್ನುವುದು.
ನಿಷ್ಕಾಮ ಕರ್ಮ
ನಿಷ್ಕರ್ಮ ಎಂದರೆ ನಿಷ್ಕ್ರಿಯತೆ ಅಲ್ಲ. ನಿಷ್ಕರ್ಮ ಎಂದರೆ ಕರ್ಮದಲ್ಲಿ ‘ನಾನು’ ಎಂಬ ಅಹಂಕಾರ ಇರಬಾರದು. ಕೃಷ್ಣ ಅರ್ಜುನನಿಗೆ ಹೇಳುತ್ತಾನೆ, ‘ನೀನು ಮಾಡುತ್ತಿರುವವನು ಎಂಬುದನ್ನು ಬಿಟ್ಟರೆ ಸಾಕು, ನೀನು ಮಾಡುವ ಕರ್ಮವೆಲ್ಲವೂ ನಿಷ್ಕರ್ಮವಾಗುತ್ತದೆ.’ ‘ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ||’ ‘ಅಹಂಕಾರದಿಂದ ಮೂಢನಾದವನು ಮಾತ್ರ ನಾನು ಮಾಡುತ್ತೇನೆ ಎಂದು ಭಾವಿಸುತ್ತಾನೆ’ ಎಂಬುದಾಗಿ ಶ್ರೀಕೃಷ್ಣ ಹೇಳುತ್ತಾನೆ.
ಕರ್ಮಬಂಧನದಿಂದ ಬಿಡುಗಡೆಯಾಗಬೇಕೆಂಬ ಉದ್ದೇಶದಿಂದ ಕರ್ಮದಿಂದಲೇ ಪಲಾಯನ ಮಾಡುವವರು ಅಜ್ಞಾನಿಗಳು. ಕರ್ಮಗಳಲ್ಲಿ ಯಾವ ಬಂಧನವೂ ಇಲ್ಲ. ಕರ್ಮ ‘ನಾನು ಮಾಡಿದ್ದು’ ಎಂಬುದರಲ್ಲಿ ಬಂಧನ ಇದೆ. ಕರ್ಮ ಪರಮಾತ್ಮನದ್ದು ಎಂದಾಗ ಕರ್ಮ ನಿಷ್ಕರ್ಮವಾಗುತ್ತದೆ. ಆಗ ಕರ್ಮಬಂಧನಗಳು ಕಳಚಿಹೋಗುತ್ತವೆ. ಎಲ್ಲ ಕರ್ಮಗಳನ್ನು ಭಗವಂತನಿಗೆ ಅರ್ಪಿಸಿದಾಗ ಅದೇ ಕರ್ಮ ಯಜ್ಞವಾಗುತ್ತದೆ. ಕೃಷ್ಣ ಭಗವದ್ಗೀತೆಯಲ್ಲಿ ಮುಂದುವರಿದು ಹೇಳುತ್ತಾನೆ, ‘ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ|’ ‘ನನ್ನಲ್ಲಿ ಸರ್ವ ಕರ್ಮಗಳನ್ನು ಅಧ್ಯಾತ್ಮ ದೃಷ್ಟಿಯ ಮೂಲಕ ಅರ್ಪಣೆ ಮಾಡಿ’. ಹೀಗೆ ಭಗವದ್ಭಾವದಿಂದ, ಸಮರ್ಪಣಭಾವದಿಂದ ಕರ್ಮಯಜ್ಞವನ್ನು ಮಾಡಿದರೆ ‘ನಾನು ಕೇವಲ ಪಾತ್ರಧಾರಿ, ಆತನೇ ಸೂತ್ರಧಾರಿ’ ಎಂಬ ಅರಿವು ನಮಗೆ ಬರುತ್ತದೆ. ಎಲ್ಲ ಕರ್ಮಗಳ ಹಿಂದೆ ಅಡಗಿರುವ ಶಕ್ತಿ ಅವನೇ ಎಂಬ ಭಾವದಿಂದ ಕರ್ಮ ಮಾಡಿದರೆ ಕರ್ಮಲೇಪವಿರುವುದಿಲ್ಲ. ಪ್ರೇರಕ, ಚಾಲಕ, ಸಂಹಾರಕ ಎಲ್ಲವೂ ಅವನೇ ಆಗಿರುವಾಗ ನಾವು ಕೇವಲ ನಿಮಿತ್ತ ಮಾತ್ರ. ಆದ್ದರಿಂದಲೇ, ‘ನಿಮಿತ್ತಮಾತ್ರಂ ಭವ ಸವ್ಯಸಾಚಿನ್’ ಎಂಬುದಾಗಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದುದು.
ಆದ್ದರಿಂದ ಕರ್ಮಬಂಧನದಿಂದ ಬಿಡುಗಡೆ ಆಗಬೇಕಾದರೆ ಕರ್ಮವನ್ನಲ್ಲ, ‘ಕರ್ತ’ನನ್ನು ತ್ಯಾಗ ಮಾಡಬೇಕು. ‘ಕರ್ತ’ಭಾವವನ್ನು ತ್ಯಾಗಮಾಡಿ ಕರ್ಮ ಮಾಡುವುದೇ ಮುಕ್ತಿಗೆ ದಾರಿ.