ಮಕ್ಕಳಿಗೆ ಸದಾ ಸಕಾರಾತ್ಮಕ ಸಂಗತಿಗಳನ್ನು ಹಾಗೂ ಕಥೆಗಳನ್ನು ಹೇಳಬೇಕು. ಮಕ್ಕಳಿಗೆ ಸಿನೆಮಾ ಹೀರೋಗಳನ್ನು ಆದರ್ಶವನ್ನಾಗಿಸದೆ ದೇಶಕ್ಕಾಗಿ, ಸಮಾಜಕ್ಕಾಗಿ ತ್ಯಾಗಮಾಡಿದವರನ್ನು, ಉನ್ನತ ಧ್ಯೇಯವಾಗಿ ಬದುಕಿದವರನ್ನು ಆದರ್ಶವನ್ನಾಗಿಸಬೇಕು. ಮಕ್ಕಳನ್ನು ಸಮಾಜಮುಖಿಯನ್ನಾಗಿ, ಜೀವನಮುಖಿಯನ್ನಾಗಿಸಬೇಕು. ಒಟ್ಟಿನಲ್ಲಿ ತನ್ನ ಮಕ್ಕಳನ್ನು ಜಗತ್ತಿಗೆ ಬೆಳಕನ್ನು ನೀಡುವ ಆದರ್ಶ ಮಹಾಪುರುಷರನ್ನಾಗಿ ಮಾಡುವ ಕನಸನ್ನು ನನಸನ್ನಾಗಿಸುವ ಪ್ರವೃತ್ತಿ, ಪ್ರಯತ್ನ ತಾಯಿಯಲ್ಲಿರಬೇಕು.
ಕಾಲ ಕೆಟ್ಟುಹೋಗಿದೆ, ಇಂದಿನ ಮಕ್ಕಳು ದಾರಿ ತಪ್ಪಿದ್ದಾರೆ, ಹಿರಿಯರ ಮಾತಿಗೆ ಬೆಲೆಯೇ ಇಲ್ಲ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ದಿನದಿಂದ ದಿನಕ್ಕೆ ಕಡಮೆ ಆಗುತ್ತಿದೆ’ – ಇಂತಹ ಮಾತುಗಳು ಸಮಾಜದಲ್ಲಿ ಆಗಾಗ ಕೇಳಿಬರುತ್ತದೆ. ಕಾಲ ಎಂದೂ ಕೆಡುವುದಿಲ್ಲ; ಕಾಲವನ್ನು ನಾವೇ ಕೆಡಿಸುತ್ತೇವೆ. ಅದೇ ರೀತಿ ಇಂದಿನ ಮಕ್ಕಳು ಕೆಟ್ಟಿದ್ದಾರೆ ಎಂಬ ವಾಕ್ಯವೂ ಸರಿಯಲ್ಲ. ಬದಲಿಗೆ ಇಂದಿನ ಮಕ್ಕಳನ್ನು ನಾವು ಕೆಡಿಸಿದ್ದೇವೆ ಎನ್ನುವ ಮಾತು ಸರಿ. ಯಾಕೆಂದರೆ ಮಕ್ಕಳು ಒದ್ದೆ ಗೋಡೆಯಂತೆ. ಅದಕ್ಕೆ ನಾವು ಏನು ಕೊಡುತ್ತೇವೆ ಅದನ್ನು ಅದು ಸ್ವೀಕರಿಸುತ್ತದೆ.
ಇಂಗ್ಲೀಷಿನಲ್ಲೊAದು ಮಾತಿದೆ: “Our Children are not useless; they are used less. Our children are not careless; they are cared less” – ಎಂಬುದಾಗಿ. ನಮ್ಮ ಮಕ್ಕಳನ್ನು ಸಂಸ್ಕಾರ ಕೊಟ್ಟು ಸರಿಯಾಗಿ ಬೆಳೆಸಿದರೆ ಅವರು ಮುಂದೆ ಸತ್ಪçಜೆಗಳಾಗುತ್ತಾರೆ. ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರ, ಹಿರಿಯರ, ಶಿಕ್ಷಕರ, ಬಂಧು-ಬಾಂಧವರ, ಸಮಾಜದ ಎಲ್ಲರ ಪಾತ್ರವಿದ್ದರೂ ವಿಶೇಷವಾಗಿ ತಾಯಿಯ ಪಾತ್ರ ಬಹಳ ಮುಖ್ಯ. ಯಾಕೆಂದರೆ ಮಕ್ಕಳ ಮೇಲೆ ಸಂಸ್ಕಾರ ಆರಂಭವಾಗುವುದೇ ಗರ್ಭಧಾರಣೆಯಿಂದ. ಹಲವರಿಗೆ ಅನಿಸಬಹುದು, ಗರ್ಭದಲ್ಲಿರುವ ಮಗುವಿನ ಅಂಗಾಂಗಗಳು ಪೂರ್ತಿಯಾಗಿ ಬೆಳೆದಿರುವುದಿಲ್ಲ. ಇಂತಹ ಅರೆಪ್ರಜ್ಞಾವಸ್ಥೆಯಲ್ಲಿರುವ ಮಗುವಿನ ಮೇಲೆ ತಾಯಿಯ ಪ್ರಭಾವ ಬೀಳುವುದಾದರೂ ಹೇಗೆ? – ಎಂದು. ಆದರೆ ಗರ್ಭಾವಸ್ಥೆಯಲ್ಲಿರುವ ಮಗುವಿನ ಮೇಲೆ ತಾಯಿಯ ಪ್ರಭಾವ ಬೀಳುತ್ತದೆ ಎಂಬುದು ಈಗ ವೈಜ್ಞಾನಿಕವಾಗಿ ಸಾಧಿಸಲ್ಪಟ್ಟಿದೆ.
ಕೆಲವು ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲಿ ೧,೦೦೦ ಅಪರಾಧಿಗಳ ತಾಯಂದಿರ ಜೀವನವನ್ನು ಅಧ್ಯಯನ ಮಾಡಿದರು. ಅದರಲ್ಲಿ ೮೦೦ಕ್ಕಿಂತ ಹೆಚ್ಚು ತಾಯಂದಿರು ಗರ್ಭಧಾರಣೆ ಮಾಡಿದಾಗ ಹೆಂಡ ಕುಡಿದಿದ್ದರು. ನಂತರ ೯ ತಿಂಗಳ ಗರ್ಭಿಣಿ ಇರುವಾಗಲೂ ಮಾಡಬಾರದ ಕೆಲಸ ಮಾಡಿದ್ದರು. ತಿನ್ನಬಾರದನ್ನು ತಿಂದಿದ್ದರು. ಕುಡಿಯಬಾರದ್ದನ್ನು ಕುಡಿದಿದ್ದರು. ಟಿ.ವಿ.ಯಲ್ಲಿ ನೋಡಬಾರದ್ದನ್ನು ನೋಡಿದ್ದರು. ಹೀಗೆ ಗರ್ಭಿಣಿಯ ಆಚಾರ-ವಿಚಾರಗಳು, ಆಹಾರ-ವಿಹಾರಗಳು ಮಕ್ಕಳ ಭವಿಷ್ಯವನ್ನು ರೂಪಿಸುತ್ತವೆ.
ಅಷ್ಟಾವಕ್ರನು ತಾಯಿಯ ಗರ್ಭದಲ್ಲಿದ್ದ. ಶಿಷ್ಯರಿಗೆ ತಂದೆ ವೇದವನ್ನು ಹೇಳಿಕೊಡುತ್ತಿದ್ದ. ಪಾಠ ನಡೆಯುತ್ತಿದ್ದಾಗ ಹೆಂಡತಿಯೂ ಕುಳಿತುಕೊಳ್ಳುತ್ತಿದ್ದಳು. ಗರ್ಭದಲ್ಲಿದ್ದ ೯ ತಿಂಗಳೊಳಗೆ ಅಷ್ಟಾವಕ್ರ ನಾಲ್ಕೂ ವೇದಗಳನ್ನು ಕಂಠಪಾಠ ಮಾಡಿದ್ದ. ಹೆರಿಗೆ ಆಗುವ ನಾಲ್ಕೈದು ದಿನದ ಮೊದಲು ತಂದೆ ಪಾಠ ಮಾಡುತ್ತಿದ್ದಾಗ ಒಂದು ಕಡೆ ತಪ್ಪಿದ. ಆಗ ಗರ್ಭದಲ್ಲಿದ್ದ ಅಷ್ಟಾವಕ್ರ ತಂದೆಯನ್ನು ಕುರಿತು ‘ಇದು ಸರಿಯಿಲ್ಲ, ಇದು ತಪ್ಪು’ ಎಂದಾಗ ತಂದೆಗೆ ಆಶ್ಚರ್ಯವಾಯಿತು. ಸ್ವರ ಎಲ್ಲಿಂದ ಬರುತ್ತಿದೆ ಎಂದು ನೋಡುತ್ತಿದ್ದಾಗ ಆತನ ಸಹಧರ್ಮಿಣಿ ಹೇಳಿದಳು: ‘ನನ್ನ ಹೊಟ್ಟೆಯಿಂದ ಮಗು ಮಾತನಾಡುತ್ತಿದೆ’ ಎಂದು. ತಂದೆ ಸಿಟ್ಟಾಗಿ ‘ನೀನು ಹುಟ್ಟುವಾಗ ಎಂಟು ಕಡೆ ಕುರೂಪಿಯಾಗಿ ಅಷ್ಟಾವಕ್ರವಾಗಿ ಹುಟ್ಟು’ ಎಂದು ಶಾಪ ಕೊಟ್ಟ. ಪರಿಣಾಮವಾಗಿ ಮಗು ಅಷ್ಟಾವಕ್ರನಾಗಿ ಹುಟ್ಟಿದ. ಆದರೆ ಮಹಾವಿದ್ವಾಂಸನಾದ ಜನಕಮಹಾರಾಜನ ಆಸ್ಥಾನದ ಪಂಡಿತನಾದ. ಅಭಿಮನ್ಯುವಿಗೂ ಗರ್ಭದಲ್ಲಿದ್ದಾಗಲೆ ಚಕ್ರವ್ಯೂಹ ಭೇದಿಸುವ ಪಾಠ ಕೃಷ್ಣನಿಂದಾಯಿತು. ಇವೆಲ್ಲವೂ ಪುರಾಣದ ಕಟ್ಟುಕಥೆ ಎಂದು ಕೆಲವರು ಮೂಗು ಮುರಿಯುವವರಿದ್ದಾರೆ. ಆದರೆ ಆಧುನಿಕ ಕಾಲದಲ್ಲೂ ಇದಕ್ಕೆ ಹಲವಾರು ಉದಾಹರಣೆಗಳು ಕಂಡುಬರುತ್ತವೆ.
ಇಮಾಯಲ್ ಕುವೆ ಎಂಬವರು ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಅವರ ಮಿತ್ರರೊಬ್ಬರು ಮಿಲಿಟರಿ ಮೇಜರ್ ಒಂದು ಸಮ್ಮೋಹನ ಶಾಸ್ತçದ ಪುಸ್ತಕ ಓದುತ್ತಿದ್ದರು. ಆ ಪುಸ್ತಕದಲ್ಲಿ, ತಾಯಿಯ ಮನಸ್ಸಿನಲ್ಲಿಯ ಸಲಹೆಗಳೇನಿವೆಯೋ ಅವು, ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಮಗುವಿನವರೆಗೆ ಸಂಪ್ರೇಷಣೆ ಆಗಿಬಿಡುತ್ತದೆ – ಎಂದು ಬರೆದಿತ್ತು. ಅವರ ಪತ್ನಿ ಗರ್ಭಿಣಿಯಾಗಿದ್ದಳು. ಅವರು ತಮ್ಮ ಪತ್ನಿಯೊಂದಿಗೆ ಹೇಳಿದರು: “ಈ ಪುಸ್ತಕ ಓದುತ್ತಿದ್ದೇನೆ. ಈ ಪುಸ್ತಕದಲ್ಲಿ ‘ತಾಯಿಯ ಆಲೋಚನೆಗಳು, ಆಕೆ ಜೀವಿಸುವ ರೀತಿಗಳು, ಆಕೆಯ ಭಾವನೆಗಳು – ಅವೆಲ್ಲವೂ ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಸಂಪ್ರೇಷಣೆ ಆಗುತ್ತದೆ’ ಎಂದು ಬರೆದಿದೆ” ಎಂದರು. ಆ ವಿಚಾರವನ್ನು ಕೇಳಿ ಇಬ್ಬರೂ ನಕ್ಕು ಸುಮ್ಮನಾದರು.
ಸಂಜೆ ಅವರಿಬ್ಬರೂ ಒಂದು ಪಾರ್ಟಿಗೆ ಹೋದರು. ಆ ಮೇಜರ್ನ ಪತ್ನಿ, ಯಾವ ಜನರಲ್ನ ಸಂಮಾನಕ್ಕಾಗಿ ಪಾರ್ಟಿ ಏರ್ಪಡಿಸಲಾಗಿತ್ತೊ ಅವರ ಪಕ್ಕದಲ್ಲಿ ಕುಳಿತಳು. ಆ ಜನರಲ್ನ ಹೆಬ್ಬೆರಳು ಯುದ್ಧದಲ್ಲಿ ಅಪ್ಪಚ್ಚಿಯಾಗಿತ್ತು. ಆಕೆಗೆ ಅವರ ಹೆಬ್ಬೆರಳು ನೋಡಿ, ನಾನು ಈ ಹೆಬ್ಬೆರಳನ್ನು ನೋಡಬಾರದು; ನನ್ನ ಮಗುವಿನ ಹೆಬ್ಬೆರಳಿಗೆ ಏನಾದರೂ ಹಾನಿ ಆಗಬಹುದು – ಎಂದು ಪದೇಪದೇ ಅನಿಸುತ್ತಿತ್ತು. ಆಕೆ ಮಧ್ಯಾಹ್ನ ಗಂಡನಿಂದ ಆ ಮಾತನ್ನು ಕೇಳಿಸಿಕೊಂಡಿದ್ದಳು. ಸಂಜೆ ಪಾರ್ಟಿಯಲ್ಲಿ ಹೆಬ್ಬೆರಳನ್ನು ನೋಡದಿರಲು ಪ್ರಯತ್ನಿಸುತ್ತಿದ್ದಳು. ಯಾವುದರಿಂದ ತಪ್ಪಿಸಿಕೊಳ್ಳಲು ಬಯಸುತ್ತಿದ್ದಳೋ, ಅದು ಪದೇಪದೇ ಕಂಡುಬರುತ್ತಿತ್ತು. ಆಕೆಗೆ ಜನರಲ್, ಪಾರ್ಟಿ ಎಲ್ಲವೂ ಮರೆತುಹೋಯಿತು. ಆ ಹೆಬ್ಬೆರಳು ಮಾತ್ರ ಉಳಿದಿತ್ತು. ಆ ಜನರಲ್ ಊಟ ಮಾಡುವಾಗಲೂ, ಯಾರೊಂದಿಗಾದರೂ ಕೈ ಕುಲುಕುತ್ತಿದ್ದಾಗಲೂ ಆಕೆಗೆ ಅವರ ಹೆಬ್ಬೆರಳೇ ಕಾಣಿಸುತ್ತಿತ್ತು. ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು. ಎಷ್ಟು ಕಣ್ಣು ಮುಚ್ಚಿಕೊಳ್ಳುತ್ತಿದ್ದಳೋ ಅಷ್ಟು ಸ್ಪಷ್ಟವಾಗಿ ಅವರ ಹೆಬ್ಬೆರಳು ಕಾಣಿಸತೊಡಗಿತು. ಆಕೆ ಹೆದರಿದಳು, ಚಿಂತಿತಳಾದಳು. ಆ ಪಾರ್ಟಿ ನಡೆದ ಎರಡು-ಮೂರು ಗಂಟೆ ಹೆಬ್ಬೆರಳು ಆಕೆಯ ಸತ್ಸಂಗ ಆಗಿತ್ತು.
ರಾತ್ರಿ ಎರಡು-ಮೂರು ಬಾರಿ ಹೆದರಿ ಎದ್ದಳು. ಬೆಳಗ್ಗೆ ತನ್ನ ಪತಿಯ ಬಳಿ ‘ನೀವು ಆ ಪುಸ್ತಕ ಎಲ್ಲಿಂದ ಓದಿದಿರಿ. ಹೊಟ್ಟೆಯೊಳಗಿನ ನನ್ನ ಮಗುವಿನ ಹೆಬ್ಬೆರಳು ಎಲ್ಲಿ ನಿಮ್ಮ ಮೇಜರ್ನಂತೆ ಆಗಿಬಿಡುವುದೋ ಎಂಬ ಭಯ ನನ್ನನ್ನು ಆವರಿಸಿದೆ’ – ಎಂದು ಕೇಳಿದಳು. ಆತ ‘ನಿನಗೆ ಮತಿಗೆಟ್ಟಿದೆಯೆ? ಯಾವುದೋ ಪುಸ್ತಕದಲ್ಲಿ ಯಾರೋ ಹೀಗೆ ಬರೆದಿದ್ದಾರೆ ಎಂದಮಾತ್ರಕ್ಕೆ ಹಾಗೆಯೇ ಆಗಿಬಿಡುತ್ತದೆಯೆ? ಬಿಡು ಆ ಮಾತನ್ನು’ – ಎಂದ. ಆದರೆ ಪತ್ನಿಗೆ ಬಿಡಲಾಗಲಿಲ್ಲ.
ಆಕೆಗೆ ಆ ದೃಶ್ಯ ಎಷ್ಟು ಪ್ರಯತ್ನಿಸಿದರೂ ಮರೆಯಲಾಗಲಿಲ್ಲ. ವಾಸ್ತವವಾಗಿ ನಾವು ಯಾವುದನ್ನು ಮರೆಯಲು ಹೆಚ್ಚುಹೆಚ್ಚು ಪ್ರಯತ್ನಿಸುತ್ತೇವೆಯೋ ಅದರ ನೆನಪೇ ಜಾಸ್ತಿಯಾಗಿ ನಮ್ಮನ್ನು ಕಾಡುತ್ತದೆ. ಅವಳಿಗೆ ಹಗಲಿರುಳು ಆ ಹೆಬ್ಬೆರಳಿನದ್ದೇ ಚಿಂತೆ. ಗಂಡ ಎಷ್ಟು ಧೈರ್ಯ ಹೇಳಿದರೂ ಸಮಾಧಾನವಾಗಲಿಲ್ಲ. ಹೆರಿಗೆಯಾಗುವ ತನಕವೂ ಆ ಅಪ್ಪಚ್ಚಿ ಹೆಬ್ಬೆರಳಿನದ್ದೆ ಯೋಚನೆ. ಮಗುವಿನ ಜನನದ ದಿನ ಹತ್ತಿರವಾಗುತ್ತಿದ್ದಂತೆ ಹೆಬ್ಬೆರಳು ಆಕೆಗೆ ಭಾರವಾಗುತ್ತಾ ಹೋಯಿತು. ಪ್ರಸವಪೀಡೆಯಾಗುತ್ತಿದ್ದಾಗ, ಮಗುವಿನ ಜನನವಾಗುತ್ತಿರುವಾಗಲೂ ಆಕೆಗೆ ಮಗುವಿಗಿಂತ ಹೆಬ್ಬೆರಳಿನದೇ ಸ್ಮರಣೆ. ಎಂತಹ ಅದ್ಭುತ ಘಟನೆ ಘಟಿಸಿತೆಂದರೆ, ಮಗು ಹುಟ್ಟಿದಾಗ ಹೆಬ್ಬೆರಳು ಅಪ್ಪಚ್ಚಿಯಾಗಿಯೇ ಇತ್ತು! ಮಗುವಿನ ಮತ್ತು ಜನರಲ್ನ ಹೆಬ್ಬೆರಳುಗಳ ಫೋಟೋ ಕೂಡಿಸಿ ನೋಡಿದಾಗ ಒಂದು ಇನ್ನೊಂದರ ನಕಲು ಆಗಿತ್ತು.
ಗರ್ಭಿಣಿಗೂ ಗರ್ಭದ ಮಗುವಿಗೂ ಅವಿನಾಭಾವ ಸಂಬAಧವಿರುತ್ತದೆ. ಮಗುವಿಗೆ ಹಾಲಿನಂತಹ ಪೌಷ್ಟಿಕ ಆಹಾರ ಕೊಡುವ ಬದಲು ಗರ್ಭಿಣಿಯರು ಹಾಲು ಕುಡಿದರೆ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ ಎಂದು ಗುಜರಾತ್ ಸರಕಾರಕ್ಕೆ ಖ್ಯಾತ ವೈದ್ಯರಾದ ಡಾ|| ಬಿ.ಎಂ. ಹೆಗ್ಡೆ ಕೆಲವು ವರ್ಷಗಳ ಹಿಂದೆ ಸಲಹೆ ಕೊಟ್ಟಿದ್ದರು. ಪರಿಣಾಮವಾಗಿ ಗುಜರಾತಿನ ಆಗಿನ ಮುಖ್ಯಮಂತ್ರಿಯಾಗಿದ್ದ ಮೋದಿ ಈ ಸಲಹೆಯನ್ನು ಸ್ವೀಕರಿಸಿ ಶಾಲಾಮಕ್ಕಳೊಂದಿಗೆ, ಗರ್ಭಿಣಿಯರಿಗೂ ಹಾಲನ್ನು ನೀಡುವ ಪದ್ಧತಿಯನ್ನು ಜಾರಿಗೆ ತಂದರು. ಗರ್ಭಿಣಿ ತಿಂದ ಆಹಾರ ಮಾತ್ರ ಹೊಕ್ಕುಳ ಬಳ್ಳಿಯಿಂದ ಮಗುವಿಗೆ ಹೋಗುವುದಿಲ್ಲ. ಗರ್ಭಿಣಿಯ ಆಲೋಚನೆಗಳೂ, ಭಾವನೆಗಳೂ ಕೂಡಾ ಹೊಕ್ಕುಳ ಬಳ್ಳಿಯಿಂದ ಮಗುವಿಗೆ ತಲಪುತ್ತವೆ. ಆದ್ದರಿಂದ ಗರ್ಭಿಣಿಯನ್ನು ಭಯಗ್ರಸ್ತ ವಾತಾವರಣದಲ್ಲಿ ಇರಿಸಬಾರದು. ಆಕೆ ಸದಾ ಸಂತೋಷವಾಗಿರಬೇಕು. ಚಿಂತೆಯ ಚಿತೆ ಆಕೆಯನ್ನು ಮಾತ್ರ ಸುಡುವುದಿಲ್ಲ, ಮಗುವನ್ನೂ ಬಾಧಿಸುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಆದ್ದರಿಂದ ಗರ್ಭಿಣಿಯ ಆರೈಕೆಯನ್ನು ಪ್ರೀತಿಯಿಂದ ಮಾಡಬೇಕು. ಪ್ರಾಯಶಃ ಗರ್ಭಿಣಿಯನ್ನು ತವರಿಗೆ ಕಳುಹಿಸುವ ಉದ್ದೇಶ ಇದೇ ಇರಬೇಕು. ಸಾಮಾನ್ಯವಾಗಿ ತಾಯಿಮನೆಯಲ್ಲಿ ಮಗಳು ಸಂತೋಷವಾಗಿರುತ್ತಾಳೆ.
‘ಯದ್ ಭಾವಂ ತದ್ಭವತಿ’ ಎಂಬ ಮಾತು ಗರ್ಭಿಣಿಗೆ ಸದಾ ಅನ್ವಯಿಸುತ್ತದೆ. ‘ತನ್ನ ಆಲೋಚನೆಯಂತೆ ತನ್ನ ಮಗು’ ಎಂಬುದನ್ನು ಗರ್ಭಿಣಿ ಎಂದೂ ಮರೆಯಬಾರದು. ‘ನೂಲಿನಂತೆ ಸೀರೆ, ತಾಯಿಯಂತೆ ಮಗು’ ಎಂಬ ಮಾತಿನಂತೆ ಮಗು ತಾಯಿಯ ತದ್ಭವ ರೂಪ. ಗರ್ಭಿಣಿಯ ಚಿಂತನೆಗಳೇ ಮಗುವಿನ ಭವಿಷ್ಯವನ್ನು ರೂಪಿಸುತ್ತವೆ. ಆದ್ದರಿಂದ ಗರ್ಭಿಣಿ ಸತ್ಸಂಗ, ಸತ್ಚಿಂತನೆ, ಸದ್ಗ್ರಂಥ ಪಠಣ, ಸತ್ಕಾರ್ಯ ಮೊದಲಾದವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೆ ಹುಟ್ಟುವ ಮಗು ಸಜ್ಜನನಾಗುತ್ತಾನೆ. ಗರ್ಭಿಣಿಯ ಮನಸ್ಸಿನ ಬಯಕೆಗಳೂ ಗರ್ಭದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ.
ವಿವೇಕಾನಂದರ ತಾಯಿ ಭುವನೇಶ್ವರಿದೇವಿಗೆ ೫ ಜನ ಹೆಣ್ಣುಮಕ್ಕಳು. ಗಂಡುಮಗು ಆಗಬೇಕೆಂದು ಕಾಶಿಯ ಶಿವನ ವ್ರತ ಹಿಡಿದಳು. ಪ್ರತಿ ಸೋಮವಾರ ಉಪವಾಸ ಮಾಡಿ ಗರ್ಭಿಣಿಯಾದಳು. ಗರ್ಭಿಣಿಯಾಗಿರುವ ೯ ತಿಂಗಳು ಶಿವನ ಧ್ಯಾನ, ಜಪ-ತಪ ಮಾಡಿದಳು. ಪರಿಣಾಮವಾಗಿ ಶಿವನಂತಿರುವ ವಿವೇಕಾನಂದರು ಹುಟ್ಟಿದರು.
ಈ ಜಗತ್ತಿನಲ್ಲಿ ಏನು ಸಿಕ್ಕಿದರೂ ತಾಯಂದಿರಿಗೆ ತೃಪ್ತಿಯಿಲ್ಲ. ಆದರೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಸಮಾಜದಲ್ಲಿ ಆದರ್ಶನಾದಾಗ, ಲೋಕಪ್ರಿಯನಾದಾಗ ಆಕೆಗೆ ತೃಪ್ತಿಯಾಗುತ್ತದೆ. ಸಮಾಜ ಆಕೆಯನ್ನು ಗುರುತಿಸುವುದು ಆಕೆಯ ಮಕ್ಕಳಿಂದ. ಆದ್ದರಿಂದ ಮಕ್ಕಳು ಕೀರ್ತಿವಂತರಾದಾಗ ಆಕೆ ತುಂಬಾ ಆನಂದಿತಳಾಗುತ್ತಾಳೆ. ಇದಕ್ಕಿಂತ ಸಂತೋಷದ ಸಂಗತಿ ಆಕೆಗೆ ಬೇರೊಂದಿರಲಿಕ್ಕಿಲ್ಲ.
‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತಿನಂತೆ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹಳ ಪ್ರಾಮುಖ್ಯದ್ದಾಗಿರುತ್ತದೆ.
ಕಯಾದು ಮತ್ತು ಹಿರಣ್ಯಕಶಿಪುವಿನ ಮಗ ಪ್ರಹ್ಲಾದ. ಕಯಾದು ಗರ್ಭಿಣಿಯಾಗಿದ್ದ ೯ ತಿಂಗಳೂ ನಾರದ ಕೊಟ್ಟ ವಿಷ್ಣುಮಂತ್ರವನ್ನು ಜಪಿಸುತ್ತಿದ್ದಳು. ಆದ್ದರಿಂದ ಹಿರಣ್ಯಕಶಿಪು ವಿಷ್ಣುವನ್ನು ದ್ವೇಷಿಸುವ ರಾಕ್ಷಸನಾದರೂ ತಾಯಿಯಾದ ಕಯಾದುವಿನ ಗುಣ ವಿಷ್ಣುಭಕ್ತಿ ಪ್ರಹ್ಲಾದನಿಗೆ ಬಂತು.
ಗರ್ಭದ ಮಕ್ಕಳಿಗೆ ಗ್ರಹಣಶಕ್ತಿ ಇರುತ್ತದೆ. ಇಂತಹ ಮಕ್ಕಳ ಸುಲಭಗ್ರಾಹಿಯಾದ ಕಿವಿಗಳಿಗೆ ಉತ್ತಮವಾದ ಹಾಗೂ ಸುಸಂಸ್ಕೃತವಾದ ಭಾವನೆಗಳು ಉಪದೇಶಿಸಲ್ಪಡುತ್ತಿರಬೇಕು. ಅವರ ಪ್ರಾರಂಭದ ಭಾವನೆಗಳೇ ಬಹುಕಾಲ ಅತಿ ಖಚಿತವಾಗಿ ಉಳಿಯುತ್ತವೆ. ಇಂತಹ ಸುಸಂಸ್ಕೃತ ನುಡಿಗಳೇ, ವಿಚಾರಗಳೇ ಮಕ್ಕಳನ್ನು ಸಾತ್ತ್ವಿಕರನ್ನಾಗಿ, ಸಜ್ಜರನ್ನಾಗಿ ಮಾಡುತ್ತವೆ.
ಮಗುವನ್ನು ಬಾಲ್ಯದಲ್ಲಿ ಪ್ರೀತಿಯಿಂದ ಬೆಳೆಸಬೇಕೇ ವಿನಾ ಮೋಹದಿಂದಲ್ಲ. ಹಾಗೆಂದು ಮಗು ತಪ್ಪು ಮಾಡಿದಾಗಲೂ ಪ್ರೀತಿ ಮಾಡಬೇಕೆಂದು ಇದರರ್ಥವಲ್ಲ. ಸಂಸ್ಕೃತದಲ್ಲಿ ಸುಭಾಷಿತವೊಂದಿದೆ:
ಲಾಲನಾತ್ ಬಹವೋ ದೋಷಾಃ
ತರ್ಜನಾದ್ ಬಹವೋ ಗುಣಾಃ |
ತಸ್ಮಾತ್ ಪುತ್ರಂ ಚ ಶಿಷ್ಯಂ ಚ
ತರ್ಜಯೇತ್ ನ ತು ಲಾಲಯೇತ್ ||
ಮಕ್ಕಳನ್ನು ಮತ್ತು ಶಿಷ್ಯರನ್ನು ಅತಿಯಾಗಿ ಮುದ್ದು ಮಾಡುವುದರಿಂದ ಅನೇಕ ದೋಷಗಳೂ, ಅವಶ್ಯವಿದ್ದಾಗ ಗದರಿಸುವುದರಿಂದ ಅನೇಕ ಗುಣಗಳೂ ನಿರ್ಮಾಣವಾಗುತ್ತವೆ. ಆದ್ದರಿಂದ ಮಕ್ಕಳು ಮತ್ತು ಶಿಷ್ಯರನ್ನು ಶಿಸ್ತಿನಿಂದ ನಿಯಂತ್ರಿಸುತ್ತಿರಬೇಕೆ ಹೊರತು ಯಾವಾಗಲೂ ತುಂಬಾ ಮುದ್ದು ಮಾಡುತ್ತಿರಬಾರದು.
ತಪ್ಪು ಮಾಡಿದಾಗಲೂ ಮುದ್ದಿಸುತ್ತಿದ್ದರೆ ಮುಂದೆ ಆ ಮಗು ರೌಡಿಯಾಗಿ, ಸಮಾಜಘಾತುಕನಾಗಿ ವಂಶಕ್ಕೆ ಕಳಂಕ ತರಬಹುದು. ಅದರೆ ಮಕ್ಕಳನ್ನು ಅಗತ್ಯವಿದ್ದಾಗ ಶಿಕ್ಷಿಸುತ್ತ, ಶಿಸ್ತಿನಿಂದ ಕಾಪಾಡುತ್ತಿದ್ದರೆ ಮುಂದೆ ದೊಡ್ಡ ಮಹಾಪುರುಷನೇ ಆಗಬಹುದು. ಮಕ್ಕಳನ್ನು ಬೆಳೆಸುವಾಗ ಶಿಕ್ಷೆಯೂ ಒಂದು ಶಿಕ್ಷಣ. ಆದರೆ ಶಿಕ್ಷೆ ಮಕ್ಕಳನ್ನು ಭಯಗ್ರಸ್ತ ಕೂಪಕ್ಕೆ ತಳ್ಳದೆ ತನ್ನ ತಪ್ಪನ್ನು ತಿದ್ದಿ ಸಂಸ್ಕಾರವAತರಾಗಲು ಸಹಕಾರಿಯಾಗಬೇಕು. ದಾರಿ ತಪ್ಪಿದಾಗ ಮಕ್ಕಳನ್ನು ಹೊಡೆದು-ಬಡಿದು ಹಿಂಸಿಸಬೇಕಾಗಿಲ್ಲ. ಆದರೆ ಬೆತ್ತ ಕೈಯಲ್ಲಿರಲಿ. ತಪ್ಪು ಮಾಡಿದಾಗ ಮಕ್ಕಳ ಮುಂದೆ ಮುಖದಲ್ಲಿ ಕೋಪದ ನಟನೆಯಿರಲಿ. ಆದರೆ ಹೃದಯದಲ್ಲಿ ನೈಜ ಪ್ರೀತಿಯಿರಲಿ.
ಯಾವ ಮಕ್ಕಳೂ ಕೆಟ್ಟವರಿರುವುದಿಲ್ಲ. ಅವರು ಮುಗ್ಧರಾಗಿಯೇ ಇರುತ್ತಾರೆ. ಮಕ್ಕಳು ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಬದಲಿಗೆ ಅವರಿಂದ ಅನುದ್ದೇಶಪೂರ್ವಕವಾಗಿ ತಪ್ಪು ನಡೆಯಬಹುದು. ಆದ್ದರಿಂದ ಮಕ್ಕಳಲ್ಲಿ ತಪ್ಪು ಹುಡುಕುವವರಿಗಿಂತ ಅವರಿಗೆ ಯೋಗ್ಯ ಮಾರ್ಗದರ್ಶನ ನೀಡಬಲ್ಲ ತಾಯಂದಿರ ಅಗತ್ಯ ಹೆಚ್ಚಾಗಿದೆ. ಮುಗ್ಧ ಮಕ್ಕಳು ಆವೆಮಣ್ಣಿನಂತೆ. ತಾಯಿಯಾದವಳು ಆ ಮಣ್ಣಿನಿಂದ ರಾವಣನ ಮೂರ್ತಿಯನ್ನೂ ಮಾಡಬಹುದು, ರಾಮನ ಮೂರ್ತಿಯನ್ನೂ ಮಾಡಬಹುದು. ಬೆಳೆಯಲಾರಂಭಿಸಿದ ಪುಟ್ಟ ಮಕ್ಕಳಲ್ಲಿ ನೀವು ಏನು ಹಾಕುವಿರೋ, ಅದು ಅವರ ರಕ್ತದಲ್ಲಿ, ಉಸಿರಿನಲ್ಲಿ, ಅನಿಸಿಕೆಯಲ್ಲಿ, ಕೃತಿಯಲ್ಲಿ ಬೆರೆತುಕೊಳ್ಳುತ್ತದೆ. ನೀವು ಪ್ರೀತಿ ಮಾಡುವುದನ್ನು ಕಲಿಸಿದರೆ, ಅವರು ಪ್ರೀತಿ ಮಾಡುತ್ತಾರೆ. ದ್ವೇಷ ಮಾಡುವುದನ್ನು ಕಲಿಸಿದರೆ, ಅವರು ದ್ವೇಷ ಮಾಡುವುದನ್ನು ಕಲಿತುಕೊಳ್ಳುತ್ತಾರೆ.
ಕಲ್ಲು, ಕಟ್ಟಿಗೆಗಳಲ್ಲಿ ಏನೂ ಇರುವುದಿಲ್ಲ. ಆದರೆ ಅವು ಒಬ್ಬ ಕುಶಲ ಶಿಲ್ಪಿಯ ಕೈಗೆ ಸಿಕ್ಕರೆ, ಅದ್ಭುತ ಕೆತ್ತನೆ ಅವುಗಳಲ್ಲಿ ಕಂಗೊಳಿಸುತ್ತದೆ. ಅದೇ ರೀತಿ ಮುಗ್ಧಮಕ್ಕಳು ಯೋಗ್ಯ ತಾಯಂದಿರ ಕೈಯಲ್ಲಿ ಸಿಕ್ಕಿದರೆ ಅವರು ನಿಜವಾದ ಅರ್ಥದಲ್ಲಿ ಮಾನವರಾಗಿ ನಿರ್ಮಾಣವಾಗುತ್ತಾರೆ. ನಮ್ಮ ಎಲ್ಲ ಕವಿಗಳು, ಪಂಡಿತರು, ವಿಜ್ಞಾನಿಗಳು, ಕಲಾವಿದರು, ತಂತ್ರಜ್ಞರು, ಕುಶಲಕರ್ಮಿಗಳು, ಆಡಳಿತಗಾರರು, ಯೋಧರು, ಸಾಹಸಿಗರು – ಎಲ್ಲರೂ ನಮ್ಮ ಮನೆಗಳಲ್ಲಿಯೇ ಕೆತ್ತಲ್ಪಟ್ಟ ಶಿಲ್ಪಿಗಳು. ಈ ದೇಶಾದ್ಯಂತ ಅನೇಕ ಶಿಲ್ಪಿಗಳು ಹಲವಾರು ದೇವಸ್ಥಾನಗಳಲ್ಲಿ ಸುಂದರವಾದ ಸಾವಿರಾರು ದೇವಮೂರ್ತಿಗಳನ್ನು ಕೆತ್ತಿದ್ದಾರೆ. ಆದರೆ ಅಸಂಖ್ಯಾತ ತಾಯಂದಿರು ಮನೆಮನೆಯಲ್ಲಿ ತಮ್ಮ ಮಕ್ಕಳನ್ನು ತಿದ್ದಿ ತೀಡಿ ಸಂಸ್ಕಾರಕೊಟ್ಟು ದೇವಮಾನವರನ್ನಾಗಿ ಮಾಡಿದ್ದಾರೆ. ಶಿವಾಜಿ, ಭಗತ್ಸಿಂಗ್, ರಾಮ್ಪ್ರಸಾದ ಬಿಸ್ಮಿಲ್, ಸ್ವಾಮಿ ವಿವೇಕಾನಂದ, ಸರ್.ಎಂ. ವಿಶ್ವೇಶ್ವರಯ್ಯ, ವಿನೋಬಾ ಭಾವೆ – ಇವರೆಲ್ಲರನ್ನು ನಿರ್ಮಿಸಿದ್ದು ಅವರವರ ತಾಯಂದಿರು. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಸಮಾಜಸೇವಕನನ್ನಾಗಿ ಅಥವಾ ಸಮಾಜಘಾತುಕನನ್ನಾಗಿ ಮಾಡುವುದು ತಾಯಿಯ ಕೈಯಲ್ಲಿದೆ.
ತಾಯಿ-ಮಗನ ನಡುವೆ ನಡೆದ ಒಂದು ಸಂಭಾಷಣೆ:
ತಾಯಿ: ಯಾವುದೋ ಪುಸ್ತಕ ಅದು, ಅಷ್ಟು ತಲ್ಲೀನನಾಗಿ ಓದುತ್ತಿದ್ದೀಯಾ?
ಮಗ: ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಹೇಗೆ ಎಂಬ ಪುಸ್ತಕ.
ತಾಯಿ: ಅದನ್ನು ನಾನು ಓದಬೇಕು. ಎಲ್ಲ ಬಿಟ್ಟು ನೀನು ಯಾಕೆ ಅದನ್ನು ಓದುತ್ತಿರುವೆ?
ಮಗ: ನೀನು ನನ್ನನ್ನು ಸರಿಯಾಗಿ ಬೆಳೆಸುತ್ತಿರುವೆಯೋ ಇಲ್ಲವೋ ಎಂದು ಓದಿ ತಿಳಿದುಕೊಳ್ಳುತ್ತಿದ್ದೇನೆ!
ಗ್ರೀಸ್ ದೇಶದ ೭ ಮಂದಿ ಜ್ಞಾನಿಗಳಲ್ಲಿ ಒಬ್ಬನಾದ ಸೊಲೋನನ ಪ್ರಶ್ನೆಯೊಂದು ಎಲ್ಲರನ್ನು ಕಾಡುತ್ತಿತ್ತು. ಆತ ಕೊಳೆತ ಸೇಬಿನ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ತಾನು ಭೇಟಿಯಾಗುತ್ತಿದ್ದ ಎಲ್ಲರಲ್ಲಿಯೂ ಪ್ರಶ್ನಿಸುತ್ತಿದ್ದ – “ಈ ಕೊಳೆತ ಸೇಬಿನಹಣ್ಣನ್ನು ಉಪಯುಕ್ತವನ್ನಾಗಿಸುವುದು ಹೇಗೆ?” – ಎಂದು. ಯಾರೊಬ್ಬರೂ ಆ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಈ ಕೊಳೆತ ಹಣ್ಣಿನಿಂದ ಏನು ತಾನೆ ಮಾಡಲಾದೀತು? – ಎಂದು ಜನ ಯೋಚಿಸಿದರು. ಆದರೆ ಸೊಲೋನನು ಆ ಸೇಬಿನಹಣ್ಣನ್ನು ಕತ್ತರಿಸಿ ಅದರೊಳಗಿದ್ದ ಬೀಜಗಳನ್ನು ತೆಗೆದುಕೊಂಡು ಅವರಿಗೆ ಹೇಳಿದನು: “ಭೂಮಿಯಲ್ಲಿ ಈ ಬೀಜಗಳನ್ನು ಬಿತ್ತಿದರೆ ಮರದಿಂದ ಒಳ್ಳೆಯ ಸೇಬುಹಣ್ಣುಗಳನ್ನು ಪಡೆಯಬಹುದು.”
ಪುಟ್ಟ ಮಕ್ಕಳು ಮಾನವಜನಾಂಗದ ಬೀಜಗಳು. ಅವರ ಮೃದುವಾದ ಹೃದಯಗಳಲ್ಲಿ ಸುಸಂಸ್ಕೃತಿಯ ಹಾಗೂ ಸಚ್ಚಾರಿತ್ರ್ಯದ ಬೀಜಗಳನ್ನು ಬಿತ್ತುವ ಸಂಸ್ಕಾರವನ್ನು ನೀಡಿದರೆ ಮಾನವಜಗತ್ತು ನಂದನವನವಾಗುತ್ತದೆ. ಮಕ್ಕಳು ಕೊಳೆತ ಸೇಬಿನಂತೆ ಯಾವುದಕ್ಕೂ ಪ್ರಯೋಜನವಿಲ್ಲವೆಂದು ಪರಿಗಣಿಸಲ್ಪಟ್ಟಾಗ, ತಾಯಿಯಾದವಳು ಆ ಮಗುವಿನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿ, ಪ್ರೇರೇಪಿಸಿ ಸಾಧಕನನ್ನಾಗಿ ಮಾಡಿದ ಹಲವು ಉದಾಹರಣೆಗಳಿವೆ.
೧೦ ವರ್ಷದ ಹುಡುಗನೊಬ್ಬ ಹೆಸರಾಂತ ಸಂಗೀತಗಾರನಾಗಲು ಆಶಿಸಿ ಧ್ವನಿಪರೀಕ್ಷೆಗೆ ಹೋದನು. ಅವನನ್ನು ಕೂಡಲೇ ತಿರಸ್ಕರಿಸಲಾಯಿತು. ಅವನ ಧ್ವನಿಯು ಗೋಡೆಗೆ ಮೊಳೆ ಹೊಡೆಯುವಂತಿದೆ ಎಂದರು. ಹಳ್ಳಿಯ ಹೆಂಗಸಾದ ಅವನ ತಾಯಿ ಮಗನ ಪ್ರತಿಭೆಯನ್ನು ಅರಿತಿದ್ದಳು. ಅವಳು ಅವನಿಗೆ ತನ್ನ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡುವಂತೆ ಪ್ರೇರೇಪಿಸಿದಳು. ಅವಳ ನಿರಂತರ ಪ್ರೋತ್ಸಾಹದಿಂದ ಮುಂದೆ ಆ ಚಿಕ್ಕ ಹುಡುಗ ತನ್ನ ಸುಮಧುರ ಧ್ವನಿಯಿಂದ ಇಡೀ ವಿಶ್ವವನ್ನು ಗೆದ್ದ. ಅವನೇ ಇಡೀ ವಿಶ್ವದ ಅತ್ಯಂತ ಪ್ರಖ್ಯಾತ ಗಾಯಕ ಎನ್ರಿಕೊ ಕರುಸೊ.
ಒಂದು ದಿನ ಮಗು ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು ತನ್ನ ತಾಯಿಯ ಕೈಗೆ ಒಂದು ಪತ್ರ ನೀಡಿ, ‘ಅಮ್ಮಾ, ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ’ ಎಂದ. ಅದನ್ನು ನೋಡಿದ ತಾಯಿ ಮಗನಿಗಾಗಿ ಗಟ್ಟಿಯಾಗಿ ಓದಿದಳು; ಕಣ್ಣು ಒದ್ದೆಯಾಯಿತು: “ನಿಮ್ಮ ಮಗ ತುಂಬಾ ಬುದ್ಧಿವಂತನಿದ್ದಾನೆ. ನಮ್ಮ ಶಾಲೆ ಅವನ ಬುದ್ಧಿವಂತಿಕೆಗೆ ತುಂಬಾ ಸಣ್ಣದು ಹಾಗೂ ಅವನಿಗೆ ಕಲಿಸಬಲ್ಲ ಅರ್ಹತೆ ನಮ್ಮ ಯಾವ ಉಪಾಧ್ಯಾಯರಿಗೂ ಇಲ್ಲ. ಆದುದರಿಂದ ಅವನ ವಿದ್ಯಾಭ್ಯಾಸವನ್ನು ನೀವೇ ಮನೆಯಲ್ಲಿ ನಡೆಸುವುದು ಒಳಿತು.” – ಎಂದು.
ತಾಯಿ ಮಗನ ವಿದ್ಯಾಭ್ಯಾಸಕ್ಕೆ ಮನೆಯಲ್ಲಿಯೇ ವ್ಯವಸ್ಥೆ ಮಾಡಿದಳು.
ತುಂಬಾ ವರ್ಷಗಳ ನಂತರ ಎಡಿಸನನ ತಾಯಿ ಮರಣಹೊಂದುತ್ತಾರೆ. ಆಗ ಎಡಿಸನ್ ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗನಾಗಿದ್ದ. ಆಗ ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತುಗಳನ್ನು ಪರಿಶೀಲಿಸುತ್ತಿದ್ದಾಗ ಮಡಚಿದ ಕಾಗದವೊಂದು ಕಣ್ಣಿಗೆ ಬಿತ್ತು. ಬಿಡಿಸಿ ನೋಡಿದರೆ ಅದರಲ್ಲಿ ಹೀಗೆ ಬರೆದಿತ್ತು: “ನಿನ್ನ ಮಗ ಒಬ್ಬ ಬುದ್ಧಿಮಾಂದ್ಯ, ಅವನನ್ನು ನಾವು ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ.”
ತನ್ನ ಮಗುವಿನ ಮೃದು ಮನಸ್ಸನ್ನು ನೋಯಿಸದಿರಲು ಅಂದು ವಿರುದ್ಧವಾಗಿ ಓದಿದ ತಾಯಿಯನ್ನು ನೆನೆದು ಎಡಿಸನ್ ಗದ್ಗದಿತನಾಗಿ ಗಂಟೆಗಟ್ಟಲೆ ಬಿಕ್ಕಿಬಿಕ್ಕಿ ಅತ್ತನು. ತನ್ನ ದಿನಚರಿಯಲ್ಲಿ “ಥಾಮಸ್ ಆಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ ಅವನ ಶ್ರೇಷ್ಠ ಮಾತೆಯ ದೆಸೆಯಿಂದ ಅವನು ಶತಮಾನದ ಬುದ್ಧಿವಂತನಾಗುತ್ತಾನೆ” – ಎಂದು ಬರೆಯುತ್ತಾನೆ.
ಹೀಗೆ ಮಕ್ಕಳ ಶ್ರೇಯಸ್ಸಿಗಾಗಿ ತಾಯಿಯಾದವಳು ಹಗಲಿರುಳು ಶ್ರಮಿಸುತ್ತಾಳೆ. ತಾಯಿಯ ತ್ಯಾಗಕ್ಕೆ ಎಲ್ಲ ಮಕ್ಕಳು ಶರಣಾಗುತ್ತಾರೆ. ಊರಿಗೆ ಅರಸನಾದರೂ ತಾಯಿಗೆ ಮಗನಲ್ಲವೇ? ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಿಯ ಋಣ ಅವರ ಮೇಲಿರುತ್ತದೆ. ಯಾರ ಋಣ ತೀರಿಸಿದರೂ ತಾಯಿಯ ಋಣ ತೀರಿಸಲು ಆಗುವುದಿಲ್ಲ. ಆದ್ದರಿಂದ ಸಂಸ್ಕಾರವAತ ಮಕ್ಕಳು ತಾಯಿಯ ಮಾತಿಗೆ ತಲೆಬಾಗುತ್ತಾರೆ.
ಮೋದಿಯವರು ಮೊತ್ತಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ತಾಯಿಯ ಆಶೀರ್ವಾದ ಪಡೆಯಲು ಹೋಗಿದ್ದರು. ಆಗ ಆ ತಾಯಿ ಮಗನನ್ನು ಆಶೀರ್ವದಿಸುತ್ತ, “ಬೇಟಾ, ಯಾವತ್ತೂ ಲಂಚಕ್ಕೆ ಕೈ ಚಾಚಬೇಡ’ ಎಂದು ಹೇಳಿದರು. ಆ ರೀತಿ ಆಶೀರ್ವಾದ ಮಾಡುವ ತಾಯಂದಿರೂ, ಹಾಗೆ ನಡೆದುಕೊಳ್ಳುವ ಮಕ್ಕಳೂ ಎಷ್ಟು ಮಂದಿ ಇರುತ್ತಾರೆ? ಇಂತಹ ತಾಯಂದಿರು ಆದರ್ಶ ಮಕ್ಕಳನ್ನು ಸಮಾಜಕ್ಕೆ ಕೊಡುತ್ತಾರೆ.
ಸರ್ ಎಂ. ವಿಶ್ವೇಶ್ವರಯ್ಯನವರು ಆಡಳಿತದಲ್ಲಿ ತುಂಬಾ ಶಿಸ್ತಿನ ವ್ಯಕ್ತಿ. ಯಾರ ಮಾತಿಗೂ ಬಗ್ಗಿ, ದಾಕ್ಷಿಣ್ಯಕ್ಕೆ ಒಳಗಾಗಿ ಅನ್ಯಾಯದ ದಾರಿ ಹಿಡಿಯುತ್ತಿರಲಿಲ್ಲ. ಅಂತಹ ವ್ಯಕ್ತಿ ಕೆಲಸ ಸಿಕ್ಕಿದ ಕೂಡಲೇ ತಾಯಿಯ ಹತ್ತಿರ ಹೋಗಿ ತನ್ನಿಂದ ಕೆಲಸ ಮಾಡಿಸಬೇಕೆಂದು ಯಾರನ್ನೂ ಆಕೆ ಶಿಫಾರಸು ಮಾಡಬಾರದೆಂದು ವಚನ ತೆಗೆದುಕೊಳ್ಳುತ್ತಾರೆ. ಏಕೆಂದರೆ ಇಂತಹವರ ಕೆಲಸ ಮಾಡಿಕೊಡು ಎಂದು ತಾಯಿ ಏನಾದರೂ ಶಿಫಾರಸು ಮಾಡಿದರೆ ವಿಶ್ವೇಶ್ವರಯ್ಯನವರು ಉಭಯಸಂಕಟಕ್ಕೆ ಒಳಗಾಗುತ್ತಿದ್ದರು. ಹೀಗೆ ಕಡುಬಡತನದಲ್ಲೂ ಎಂ.ವಿ. ಅವರು ಜಗದ್ವಿಖ್ಯಾತರಾಗಲು ತಾಯಿಯ ಪಾತ್ರ ಬಹಳಷ್ಟಿದೆ. ಎಂ.ವಿ.ಯವರಿಗೆ ೧೨ ವರ್ಷವಾದಾಗಲೇ ತಂದೆ ತೀರಿಹೋಗಿದ್ದರು. ತಾಯಿಯಾದ ವೆಂಕಟಲಕ್ಷ್ಮಮ್ಮ ಎಂ.ವಿ.ಯವರನ್ನು ಬೆಳೆಸಿದರು. ಸಾತ್ತ್ವಿಕ ವೆಂಕಟಲಕ್ಷ್ಮಮ್ಮನAತಹ ತಾಯಿಯಿಂದ ಈ ಜಗತ್ತಿಗೆ ಎಂ.ವಿ.ಯವರAತಹ ಕ್ರಿಯಾಶೀಲ, ಸೃಜನಶೀಲ, ಪ್ರಾಮಾಣಿಕ, ಸಜ್ಜನ ಇಂಜಿನಿಯರ್ ದೊರೆತರು.
ತಾಯಿಯಾದವಳು ಮಕ್ಕಳ ಮುಂದೆ ಸುಳ್ಳು ಹೇಳಬಾರದು. ಮಕ್ಕಳನ್ನು ಸುಳ್ಳು ಹೇಳಲು ಪ್ರೇರೇಪಿಸಬಾರದು. ಮಕ್ಕಳು ಬಾಲ್ಯದಲ್ಲಿ ತಮಾಷೆಗಾಗಿಯೂ ಕಳ್ಳತನ ಮಾಡಿದರೂ ತಾಯಿಯಾದವಳು ಅದನ್ನು ತಕ್ಷಣ ತಡೆದು ಮಕ್ಕಳಿಗೆ ಇದು ತಪ್ಪು ಎಂದು ಮನವರಿಕೆ ಮಾಡಿಕೊಡಬೇಕು. ಮಕ್ಕಳ ಮುಂದೆ ಗಂಡನೊಡನೆ ಜಗಳವಾಡಬಾರದು. ಸಂಸಾರದ ತಾಪತ್ರಯವನ್ನು ಮಗುವಿನ ಮುಂದೆ ಚರ್ಚಿಸಬಾರದು ಹಾಗೂ ಅವರ ಮೇಲೆ ಸಂಸಾರದ ಸಮಸ್ಯೆಗಳನ್ನು ಹೇರಬಾರದು. ಮಗುವಿನಲ್ಲಿ ಒಂದು ವಿಶೇಷ ಕಲೆ ಹಾಗೂ ಬುದ್ಧಿವಂತಿಕೆಯಿದೆಯೆAದು ತಿಳಿದುಕೊಂಡು ಅದನ್ನು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಸದಾ ಸಕಾರಾತ್ಮಕ ಸಂಗತಿಗಳನ್ನು ಹಾಗೂ ಕಥೆಗಳನ್ನು ಹೇಳಬೇಕು. ಮಕ್ಕಳಿಗೆ ಸಿನೆಮಾ ಹೀರೋಗಳನ್ನು ಆದರ್ಶವನ್ನಾಗಿಸದೆ ದೇಶಕ್ಕಾಗಿ, ಸಮಾಜಕ್ಕಾಗಿ ತ್ಯಾಗಮಾಡಿದವರನ್ನು, ಉನ್ನತ ಧ್ಯೇಯವಾಗಿ ಬದುಕಿದವರನ್ನು ಆದರ್ಶವನ್ನಾಗಿಸಬೇಕು. ಮಕ್ಕಳನ್ನು ಸಮಾಜಮುಖಿಯನ್ನಾಗಿ, ಜೀವನಮುಖಿಯನ್ನಾಗಿಸಬೇಕು. ಒಟ್ಟಿನಲ್ಲಿ ತನ್ನ ಮಕ್ಕಳನ್ನು ಜಗತ್ತಿಗೆ ಬೆಳಕನ್ನು ನೀಡುವ ಆದರ್ಶ ಮಹಾಪುರುಷರನ್ನಾಗಿ ಮಾಡುವ ಕನಸನ್ನು ನನಸನ್ನಾಗಿಸುವ ಪ್ರವೃತ್ತಿ, ಪ್ರಯತ್ನ ತಾಯಿಯಲ್ಲಿರಬೇಕು. ಇದಕ್ಕೆ ತಾಯಿಯ ವೈಯಕ್ತಿಕ ಹಿತಾಸಕ್ತಿಗಳು, ವೃತ್ತಿಯ ಒತ್ತಡಗಳು ಯಾವುದೇ ಅಡ್ಡಿಯಾಗಬಾರದು. ಬಿಡುವಿಲ್ಲದ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದವರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದವರೂ ತಮ್ಮ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ಕೊಟ್ಟ ಹಲವಾರು ತಾಯಂದಿರ ಉದಾಹರಣೆ ನಮಗೆ ಕಂಡುಬರುತ್ತದೆ.
ಶ್ರೀಮತಿ ಸೀಗ್ರಿಡ್ ಊನ್ಸೆಟ್ (Smt. Sigrid Undset- ೨೦ ಮೇ ೧೮೮೨ – ೧೦ ಜೂನ್ ೧೯೪೯) ನಾರ್ವೆ ದೇಶದ ಶ್ರೇಷ್ಠ ಸಾಹಿತಿ. ಅವರಿಗೆ ೧೯೨೮ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಘೋಷಿಸಲ್ಪಟ್ಟಿತ್ತು. ಸ್ವಾಭಾವಿಕವಾಗಿಯೇ ಮಾಧ್ಯಮದವರು, ಪತ್ರಕರ್ತರು ಬರತೊಡಗಿದರು. ಹಲವು ಮಂದಿ ವರದಿಗಾರರು ಮತ್ತು ಛಾಯಾಚಿತ್ರ ಗ್ರಾಹಕರು ಅವರ ಮನೆಗೆ ಧಾವಿಸಿದರು. ಆದರೆ ಅಷ್ಟರೊಳಗೆ ರಾತ್ರಿಯಾಗಿತ್ತು.
ಊನ್ಸೆಟ್ ಹೊರಗೆ ಬಂದು ಅವರಿಗೆ ನಮಸ್ಕಾರ ಸೂಚಿಸಿದರು. “ಮಿತ್ರರೇ, ನೀವು ಏಕೆ ಬಂದಿರೆಂದು ನನಗೆ ತಿಳಿಯಿತು. ನೊಬೆಲ್ ಬಹುಮಾನ ಘೋಷಿತವಾದ ವಿಚಾರ ತಂತಿ ಸಂದೇಶದ ಮೂಲಕ ನನಗೆ ಗೊತ್ತಾಗಿದೆ. ಆದರೆ ಈಗ ನಾನು ನಿಮಗೆ ಸಂದರ್ಶನ ನೀಡಲಾರೆ. ದಯವಿಟ್ಟು ಕ್ಷಮಿಸಿ” ಎಂದರು.
ಪತ್ರಕರ್ತರಿಗೆ ಆಶ್ಚರ್ಯ “ಯಾಕೆ?” ಎಂದು ಕೇಳಿದರು. “ಏಕೆಂದರೆ ಈಗ ಮಕ್ಕಳು ನಿದ್ರಿಸುವ ವೇಳೆ. ಓರ್ವ ತಾಯಿಯಾಗಿ ಸಕಾಲಕ್ಕೆ ಅವರನ್ನು ನಿದ್ರೆ ಮಾಡಿಸುವುದು ನನ್ನ ಕರ್ತವ್ಯ. ಪ್ರಶಸ್ತಿ ಸಿಕ್ಕಿದ್ದು ಸಂತೋಷ. ಆದರೆ ಇದಕ್ಕಿಂತ ಹರ್ಷ ಕೊಡುವ ಸಂಗತಿ ಮಕ್ಕಳಿಗೆ ವಾತ್ಸಲ್ಯ ತೋರಿಸುವುದು” ಎಂದು ಆ ಪ್ರಸಿದ್ಧ ಲೇಖಕಿ ಹೇಳಿದರು.
ಮಹಾಭಾರತಯುದ್ಧ ಮುಗಿದ ಮೇಲೆ ತನ್ನನ್ನು ಭೇಟಿಯಾಗಲು ಬಂದ ಶ್ರೀಕೃಷ್ಣನನ್ನು ಗಾಂಧಾರಿ ಪ್ರಶ್ನಿಸುತ್ತಾಳೆ: “ಕೃಷ್ಣ, ನನ್ನ ಹಾಗೂ ಕುಂತಿಯಲ್ಲಿ ಯಾಕಿಷ್ಟು ವ್ಯತ್ಯಾಸ? ನಾನೇನು ನಿನಗೆ ಕೆಟ್ಟದ್ದನ್ನು ಮಾಡಿದ್ದೇನೆ? ಕುಂತಿಯೇನು ನಿನಗೆ ಒಳ್ಳೆಯದನ್ನು ಮಾಡಿದ್ದಾಳೆ? ಅವಳ ೫ ಮಕ್ಕಳನ್ನು ಬದುಕುವಂತೆ ಮಾಡಿರುವೆ, ನನ್ನ ನೂರುಮಕ್ಕಳೂ ಸಾಯುವಂತೆ ಮಾಡಿದೆ. ಯಾಕೆ ಈ ರೀತಿಯ ಪಕ್ಷಪಾತ ಮಾಡಿರುವೆ? ಇದು ಅನ್ಯಾಯವಲ್ಲವೆ?” ಎಂದು.
ಆಗ ಕೃಷ್ಣ ಹೇಳಿದ: “ತಾಯಿ ಗಾಂಧಾರಿ, ಇದರಲ್ಲಿ ನನ್ನ ತಪ್ಪೇನಿಲ್ಲ. ಎಲ್ಲವೂ ನಿನ್ನ ಹಾಗೂ ಕುಂತಿಯ ಮಹಿಮೆ. ಮದುವೆಯಾದಾಗಿನಿಂದ ಗಂಡನಿಗಿಲ್ಲದ ದೃಷ್ಟಿ ನನಗೂ ಬೇಡ ಎಂದು ನೀನು ಕಣ್ಣಿಗೆ ಪಟ್ಟಿ ಕಟ್ಟಿ ಕುರುಡಳಾದೆ. ಹೊರಗಿನಿಂದ ಮಾತ್ರವಲ್ಲ, ಒಳಗಿನಿಂದಲೂ ಕುರುಡಳಾಗಿ ಕುಳಿತುಬಿಟ್ಟೆ. ದುರ್ಯೋಧನಾದಿ ನಿನ್ನ ಮಕ್ಕಳು ತಪ್ಪು ಮಾಡಿದಾಗಲೂ ಅವರನ್ನು ನೀನು ತಡೆಯಲಿಲ್ಲ. ದಾರಿ ತಪ್ಪಿದಾಗಲೂ ತಿದ್ದಲಿಲ್ಲ. ಸಂಸ್ಕಾರ ಕೊಡಲಿಲ್ಲ. ಒಟ್ಟಿನಲ್ಲಿ ತಾಯಿಯ ಕರ್ತವ್ಯವನ್ನು ನೀನು ಸರಿಯಾಗಿ ನಿಭಾಯಿಸಲಿಲ್ಲ. ತಾಯಿಯ ಆರೈಕೆಯಲ್ಲಿ ಬೆಳೆಯುವ ಬದಲು ನಿನ್ನ ಮಕ್ಕಳು ದುಷ್ಟ ಮಾಮ ಶಕುನಿಯ ಮಾರ್ಗದರ್ಶನದಂತೆ ನಡೆದುಕೊಂಡರು. ಕೆಟ್ಟವರ ಸಂಗ ಮಾಡಿ ದುರ್ಜನರಾದರು. ಪರಿಣಾಮವಾಗಿ ಅವರೆಲ್ಲರೂ ನಾಶವಾದರು.
“ಕುಂತಿಯಾದರೂ ಕಣ್ಣಲ್ಲಿ ಕಣ್ಣಿಟ್ಟು ತನ್ನ ಮಕ್ಕಳನ್ನು ಬೆಳೆಸಿದಳು. ಅವರಿಗೆ ಒಳ್ಳೆಯ ಸಂಸ್ಕಾರ ಕೊಟ್ಟಳು. ಯಾವುದು ಸರಿ, ಯಾವುದು ತಪ್ಪು ಎಂದು ಹೇಳಿಕೊಟ್ಟಳು. ಯಾವುದು ವಿಕೃತಿ, ಯಾವುದು ಪ್ರಕೃತಿ, ಯಾವುದು ಸಂಸ್ಕೃತಿ ಎಂದು ಮನವರಿಕೆ ಮಾಡಿಕೊಟ್ಟಳು. ಯಾವುದು ಧರ್ಮ, ಯಾವುದು ಅಧರ್ಮ ಎಂಬುದನ್ನು ಮಕ್ಕಳ ಅಂತರAಗದಲ್ಲಿ ಸ್ಥಾಪಿಸಿದಳು. ಹೀಗೆ ತಾಯಂದಿರು ಕೊಟ್ಟ ಸಂಸ್ಕಾರದಿAದ ಕೌರವರು ಅಧರ್ಮಿಗಳಾದರು, ಪಾಂಡವರು ಧರ್ಮಿಷ್ಠರಾದರು” ಎಂದು ಕೃಷ್ಣ ವಾಸ್ತವ ಸಂಗತಿಯನ್ನು ಗಾಂಧಾರಿಯ ಎದುರು ತೆರೆದಿಟ್ಟ.
ನಾವು ಗಾಂಧಾರಿಯಾಗಿ ನಮ್ಮ ಮಕ್ಕಳನ್ನು ಕೌರವರಾಗಿ ಬೆಳೆಸುವ ಬದಲು ಕುಂತಿಯಾಗಿ ನಮ್ಮ ಮಕ್ಕಳನ್ನು ಪಾಂಡವರನ್ನಾಗಿ ಬೆಳೆಸುವ ಸಂಕಲ್ಪ ಮಾಡೋಣ.