ಶಾಂತಿಖಡ್ಗಃ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |
ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ ||
– ಮಹಾಭಾರತ, ಉದ್ಯೋಗಪರ್ವ
“ಶಾಂತಿ ಎಂಬ ಖಡ್ಗಾಯುಧ ಯಾರ ಕೈಯಲ್ಲಿ ಇದೆಯೋ ಅಂತಹವನಿಗೆ ದುಷ್ಟನೂ ಕ್ರೂರಿಯೂ ಏನು ಹಾನಿ ಮಾಡಿಯಾನು? ಹುಲ್ಲಿನ ಮೇಲೆ ಬೀಳದಿರುವ ಬೆಂಕಿ ತಾನಾಗಿ ಶಾಂತವಾಗಿಬಿಡುತ್ತದೆ.”
ಹುಲ್ಲು ಗ್ರಾಸವಾಗಿ ದೊರೆತರೆ ಮಾತ್ರ ಬೆಂಕಿಯ ಪ್ರತಾಪಕ್ಕೆ ಅವಕಾಶವಾಗುತ್ತದೆ.
ರವೀಂದ್ರನಾಥ ಠಾಕೂರರು ಯಾವುದೊ ಗಂಭೀರ ಬರಹದಲ್ಲಿ ತಲ್ಲೀನರಾಗಿದ್ದರು. ಸಮಯ ನಡುರಾತ್ರಿ ದಾಟಿತ್ತು. ಏನನ್ನಾದರೂ ದೋಚಿಕೊಂಡು ಹೋಗಲು ಕಳ್ಳನೊಬ್ಬ ಕತ್ತಿ ಝಳಪಿಸುತ್ತ ಒಳಹೊಕ್ಕು ಅಬ್ಬರಿಸಿದ. ಠಾಕೂರರು ವಿಚಲಿತರಾಗದೆ ಹೇಳಿದರು: “ಮಹಾನುಭಾವ! ನಾನೀಗ ಮುಖ್ಯವಾದ ಬರವಣಿಗೆಯಲ್ಲಿ ತೊಡಗಿದ್ದೇನೆ. ಇದಕ್ಕೆ ಇನ್ನೊಂದು ಗಂಟೆಯಷ್ಟು ಕಾಲ ಹಿಡಿಯಬಹುದು. ಆಗ ನೀನು ಬಂದಲ್ಲಿ ನನ್ನನ್ನು ಕೊಲ್ಲಲು ಅಭ್ಯಂತರವಿರದು.” ಕಳ್ಳನಿಗೆ ಏನೆನ್ನಿಸಿತೊ – ಆಚೆ ಹೋಗಿ ಠಳಾಯಿಸುತ್ತಿದ್ದ. ಬರಹದಲ್ಲಿ ಠಾಕೂರರ ಮಗ್ನತೆ ಕಂಡು ಅದೇಕೋ ಮನಸ್ಸು ಬದಲಾಯಿಸಿ ಹೊರಟುಹೋದ. ನಾಲ್ಕೈದು ದಿವಸವಾದ ಮೇಲೆ ಠಾಕೂರರು ವಾಯುಸಂಚಾರಕ್ಕೆ ಹೋದಾಗ ಅದೇ ವ್ಯಕ್ತಿ ಎದುರಾದ. ಠಾಕೂರರು ಹೇಳಿದರು: “ಆ ದಿನ ನನ್ನ ಕೆಲಸ ಮುಗಿದೊಡನೆ ನಿನಗಾಗಿ ಹುಡುಕಿದೆ. ನೀನು ಕಾಣಲಿಲ್ಲ. ನನ್ನ ವಚನಭಂಗವಾದುದಕ್ಕೆ ನನಗೆ ಬೇಸರವಾಯಿತು.” ಅವರ ಶಾಂತಚಿತ್ತ ನೋಡಿ ಕಳ್ಳ ಕೇಳಿದ: “ಆ ದಿನ ನಾನು ಕತ್ತಿ ಹಿಡಿದು ಬಂದಾಗ ನಿಮಗೆ ಭಯವಾಗಲಿಲ್ಲವೆ?” ಠಾಕೂರರು ಮುಗುಳ್ನಕ್ಕು “ಬದುಕಿಗೂ ಸಾವಿಗೂ ಒಂದು ಗೆರೆಯಷ್ಟು ವ್ಯತ್ಯಾಸ, ಅಷ್ಟೇ ಅಲ್ಲವೆ? ಇದರಲ್ಲಿ ಹೆದರಬೇಕಾದ ವಿಷಯ ಏನಿದೆ? ಬದುಕಿರುವವರೆಗೆ ಒಂದೊಂದು ಕ್ಷಣವನ್ನೂ ಸಾರ್ಥಕವಾಗಿ ಕಳೆಯಬೇಕೆಂದು ನಾನು ನಿಶ್ಚಯಿಸಿಕೊಂಡಿರುವುದರಿಂದ ನಿಶ್ಚಿಂತನಾಗಿದ್ದೇನೆ.” ಈ ಮಾತನ್ನು ಕೇಳಿ ಕಳ್ಳನು ಪಶ್ಚಾತ್ತಾಪಪಟ್ಟು “ನಾನು ಇನ್ನು ಮೇಲೆ ಕೆಟ್ಟ ಕೆಲಸ ಮಾಡುವುದಿಲ್ಲ” ಎಂದು ಹೇಳಿ ಠಾಕೂರರ ಕಾಲಿಗೆರಗಿ ಹೊರಟುಹೋದ.