ಸುಜನಾಃ ಪರೋಪಕಾರಂ ಶೂರಾಃ ಶಸ್ತ್ರಂ
ಧನಂ ಕೃಪಣಾಃ |
ಕುಲವತ್ಯೋ ಮಂದಾಕ್ಷಂ ಪ್ರಾಣಾತ್ಯವ
ಏವ ಮುಂಚಂತಿ ||
– ರಸಗಂಗಾಧರ
“ಸಜ್ಜನರು ಇನ್ನೊಬ್ಬರಿಗೆ ನೆರವಾಗುವ ಗುಣವನ್ನೂ, ಶೂರರು ಶಸ್ತçವನ್ನೂ, ಜಿಪುಣರು ಹಣವನ್ನೂ, ಕುಲಸ್ತ್ರೀಯರು ಲಜ್ಜೆಯನ್ನೂ ಪ್ರಾಣ ಹೋಗುವಾಗ ಮಾತ್ರ ಬಿಟ್ಟಾರು, ಬೇರೆ ಸಮಯದಲ್ಲಲ್ಲ.”
ಸತ್ಪುರುಷರ ಪರಹಿತಚಿಂತನಪ್ರವೃತ್ತಿ, ಸೈನಿಕರ ಶಸ್ತ್ರಶ್ರದ್ಧೆ ಮೊದಲಾದ ಗುಣಗಳು ಅಂಥವರಲ್ಲಿ ಎಷ್ಟು ಸ್ವಭಾವಗತವಾಗಿರುತ್ತವೆಂದರೆ ಅವರಿಗೆ ಆ ಆಚರಣೆಗಳನ್ನು ಕೈಬಿಡುವುದು ಸಾಧ್ಯವೇ ಆಗದು.
ಶ್ರೀಕೃಷ್ಣನನ್ನು ಯಾದವನೊಬ್ಬನು ಒಮ್ಮೆ “ನೀನೇಕೆ ಯುಧಿಷ್ಠಿರನನ್ನು ಸದಾ ಧರ್ಮರಾಜನೆಂದು ಹೊಗಳುತ್ತಿರುತ್ತೀ?” ಎಂದು ಕೇಳಿದ. ಶ್ರೀಕೃಷ್ಣ ಉತ್ತರಿಸಿದ: “ಒಂದು ಸಣ್ಣ ಸಂಗತಿಯೇ ನಿನ್ನ ಪ್ರಶ್ನೆಗೆ ಸಮಾಧಾನ ನೀಡಬಹುದು. ಮಹಾಭಾರತ ಯುದ್ಧದ ಸಮಯದಲ್ಲಿ ಸಂಜೆಯ ಹೊತ್ತು ಯುಧಿಷ್ಠಿರನು ವೇಷ ಬದಲಿಸಿಕೊಂಡು ಎಲ್ಲಿಗೋ ಹೋಗಿಬಿಡುತ್ತಿದ್ದ. ಅವನು ಎಲ್ಲಿಗೆ ಹೋಗುತ್ತಾನೆಂದು ತಿಳಿಯಲು ಅರ್ಜುನಾದಿಗಳಿಗೆ ಕುತೂಹಲ ಉಂಟಾಯಿತು; ಒಂದು ದಿನ ಹಿಂಬಾಲಿಸಿದರು. ಯುಧಿಷ್ಠಿರನು ಎರಡೂ ಪಾಳೆಯಗಳಿಗೆ ತೆರಳಿ ಯುದ್ಧದಲ್ಲಿ ಗಾಯಗೊಂಡಿದ್ದವರಿಗೆ (ಅವರಲ್ಲಿ ಕೌರವಸೇನೆಯವರೂ ಇದ್ದರು) ಆರೈಕೆ ಮಾಡುತ್ತಿದ್ದ. ಅನಂತರ ಎದುರಾಗಿ ಯುಧಿಷ್ಠಿರನನ್ನು ಪ್ರಶ್ನಿಸಿದರು – ‘ಅದು ಸರಿಯೆ, ನೀವು ಮಾರುವೇಷ ಧರಿಸುವುದೇಕೆ?’ ಇದಕ್ಕೆ ಯುಧಿಷ್ಠಿರ ಹೇಳಿದ: ‘ನಾನು ಯಾರೆಂದು ಅವರಿಗೆ ತಿಳಿದರೆ ಅವರು ತಮ್ಮ ನೋವನ್ನು ಹೇಳಿಕೊಳ್ಳಲು ಸಂಕೋಚಪಡುತ್ತಾರೆ. ಅದಕ್ಕಾಗಿ ಈ ವಿಧಾನವನ್ನು ಅನುಸರಿಸಿದ್ದೇನೆ.’ ಈಗ ನಿನಗೆ ತಿಳಿಯಿತೆ ನಾನು ಅವನನ್ನು ‘ಧರ್ಮರಾಜ’ನೆನ್ನುವುದು ಏಕೆಂದು?”