ಪ್ರಶಮಶ್ಚ ಕ್ಷಮಾ ಚೈವ ಆರ್ಜವಂ ಪ್ರಿಯವಾದಿತಾ |
ಅಸಾಮರ್ಥ್ಯಫಲಾ ಹ್ಯೇತೇ ನಿರ್ಗುಣೇಷು ಸತಾಂ ಗುಣಾಃ ||
– ರಾಮಾಯಣ
“ಉದ್ವೇಗಗೊಳ್ಳದಿರುವುದು, ಕ್ಷಮೆ, ನೇರ ನಡೆ, ಹಿತವೆನಿಸುವ ಸೌಮ್ಯ ಮಾತು – ಸಜ್ಜನರ ಈ ವರ್ತನೆಗಳು ಗುಣಹೀನರ ದೃಷ್ಟಿಯಲ್ಲಿ ದೌರ್ಬಲ್ಯಗಳೆಂದೇ ಪರಿಗಣಿತವಾಗಿ ನಿಷ್ಪ್ರಯೋಜಕಗಳಾಗುತ್ತವೆ.”
ಈಚಿನ ಕಾಲದಲ್ಲಿ ಸದಾ ಅಪವ್ಯಾಖ್ಯಾನಗೊಳ್ಳುತ್ತ ಬಂದಿರುವ ಒಂದು ಶಬ್ದ ‘ಅಹಿಂಸೆ’. ಯಾವುದೇ ಸಂದರ್ಭದಲ್ಲಿಯೂ ಸಶಕ್ತ ಪ್ರತಿಕ್ರಿಯೆ ಕೂಡದು ಎಂಬ ಅಶಾಸ್ತ್ರೀಯವೂ ಅವ್ಯವಹರ‍್ಯವೂ ಆದ ಮಂಡನೆ ಇಪ್ಪತ್ತನೇ ಶತಮಾನದಲ್ಲಿ ನಡೆದು ಬಗೆಬಗೆಯ ಆಭಾಸಗಳಿಗೆ ಕಾರಣವಾಯಿತು. ಪೌರ್ವಾಪರ್ಯವನ್ನು ಗಣಿಸದ ಅಹಿಂಸಾಚರಣೆಯು ನಿಂದ್ಯವೆಂದು ರಾಮಾಯಣದ ಒಂದು ಪ್ರಸಂಗ ಸ್ಪಷ್ಟಪಡಿಸಿದೆ.
ಸೈನ್ಯಸಮೇತ ಲಂಕೆಗೆ ಹೋಗಲು ಉದ್ಯುಕ್ತನಾದ ರಾಮನು ಸಮುದ್ರವನ್ನು ದಾಟುವುದಕ್ಕೆ ಮುಂಚೆ ಸಮುದ್ರದೇವತೆಯಾದ ವರುಣನನ್ನು ಒಲಿಸಿಕೊಳ್ಳೋಣವೆಂದು ಮೂರು ದಿನ ಅನ್ನಾಹಾರಗಳನ್ನು ಬಿಟ್ಟು ತಪಸ್ಸನ್ನು ಆಚರಿಸುತ್ತಾನೆ. ಆದರೂ ವರುಣನು ಪ್ರತ್ಯಕ್ಷನಾಗಲೇ ಇಲ್ಲ. ವರುಣನು ಮೆರೆದ ಸೊಕ್ಕಿನ ಸಂದರ್ಭದಲ್ಲಿ ರಾಮನು ಹೇಳಿದುದು ‘ಪ್ರಶಮಶ್ಚ…..’ ಎಂಬ ಮೇಲಿನ ಮಾತು. ರಾಮನು ಕುಪಿತನಾಗಿ ಅಭಿಮಂತ್ರಿತ ಬಾಣವನ್ನು ಪ್ರಯೋಗಿಸಲುಜ್ಜುಗಿಸಿದಾಗ ವರುಣನು ದಾರಿಗೆ ಬಂದ; ರಾಮನೆದುರಿಗೆ ಪ್ರತ್ಯಕ್ಷನಾಗಿ ಕೈಜೋಡಿಸಿದ.