ಅನಾಗತವಿಧಾತಾ ಚ ಪ್ರತ್ಯುತ್ಪನ್ನಮತಿಸ್ತಥಾ |
ದ್ವಾವೇತೌ ಸುಖಮೇಧೇತೇ ಯದ್ಭವಿಷ್ಯೋ ವಿನಶ್ಯತಿ ||
– ಪಂಚತಂತ್ರ
“ಯಾವುದೋ ವಿಪತ್ತು ಬರುವುದಕ್ಕಿಂತ ಮೊದಲೇ ಪೂರ್ವಾಲೋಚನೆಯಿಂದ ಸಿದ್ಧ ಪ್ರತಿಕ್ರಿಯೆ ತೋರುವವನು, ಬಂದೊದಗಿದ ಸಂದರ್ಭಕ್ಕೆ ಹೊಂದುವಂತೆ ಸಮರ್ಥವಾಗಿ ಬುದ್ಧಿಯನ್ನು ತೊಡಗಿಸುವವನು – ಇವರಿಬ್ಬರೂ ತೊಂದರೆಗೆ ಸಿಲುಕಿಕೊಳ್ಳದೆ ನೆಮ್ಮದಿಯನ್ನು ಪಡೆಯುತ್ತಾರೆ. ಹೀಗಲ್ಲದೆ ಏನಾದರಾಗಲಿ ಎಂದು ಅಲಕ್ಷ್ಯದಿಂದಿರುವವನು ವಿನಾಶ ಹೊಂದುತ್ತಾನೆ.”
ಬುದ್ಧಿಕೌಶಲದ ಸಾರ್ಥಕತೆ ಅದು ವ್ಯಕ್ತಿಗೆ ಪ್ರಯೋಜನಕರವಾಗುವುದರಲ್ಲಿ ಮತ್ತು ಹಾನಿಯನ್ನು ನಿವಾರಿಸುವುದರಲ್ಲಿ ಇದೆ – ಎಂಬುದು ಮೇಲಣ ಪ್ರಸಿದ್ಧೋಕ್ತಿಯ ಆಶಯ. ಮೇಲೆ ವಿವೃತವಾದ ಎರಡು ಸ್ಪಂದನಗಳಲ್ಲಿ ಮೊದಲನೆಯದರಲ್ಲಿ ಪ್ರಾಜ್ಞತೆಯೂ ಎರಡನೆಯದರಲ್ಲಿ ಪ್ರತಿಭೆಯೂ ಮಹತ್ತ್ವವನ್ನು ಪಡೆದಿವೆ.
ಗರ್ವಿಷ್ಠ ರಾಜನೊಬ್ಬ ಆಸ್ಥಾನಿಕರಲ್ಲಿ ಪ್ರಶ್ನಿಸಿದ – “ವಿವೇಕಜ್ಞರೇ, ನಾನು ಶ್ರೇಷ್ಠನೋ ದೇವರು ಶ್ರೇಷ್ಠನೋ ತಿಳಿಸಿರಿ” – ಎಂದು. ದೇವರು ಶ್ರೇಷ್ಠನೆಂದು ದಿಟ ಹೇಳಿದಲ್ಲಿ ಮೃತ್ಯುದಂಡನೆ ವಿಧಿಸಲ್ಪಡುವ ಸಂಭವವಿದ್ದಿತು. ಆ ಸನ್ನಿವೇಶದಲ್ಲಿ ಒಬ್ಬ ವಿದ್ವಾಂಸ ‘ಪ್ರತ್ಯುತ್ಪನ್ನ-ಮತಿ’ಯಾಗಿ ಉತ್ತರಿಸಿ ವಿನಾಶವನ್ನು ನಿವಾರಿಸಿದ. ಆತ ಹೇಳಿದ:
“ಪ್ರಭುಗಳೇ! ತಮ್ಮ ಪ್ರಶ್ನೆಗೆ ಸಮಾಧಾನ ಸ್ಪಷ್ಟವಿದೆ. ದೇವರಿಗಿಂತ ತಾವೇ ಶ್ರೇಷ್ಠರು. ಅದು ಹೇಗೆನ್ನುವಿರಾ? ಯಾರ ಮೇಲಾದರೂ ತಮಗೆ ಕೋಪ ಬಂದರೆ ತಾವು ಆತನಿಗೆ ಗಡಿಪಾರು ದಂಡನೆ ವಿಧಿಸಬಹುದು. ಆದರೆ ದೇವರು ಹೀಗೆ ಮಾಡಲು ಅಸಮರ್ಥ. ಏಕೆಂದರೆ ಅವನ ರಾಜ್ಯಕ್ಕೆ ಗಡಿಗಳೇ ಇಲ್ಲ!”