ನಿಷೇವತೇ ಪ್ರಶಸ್ತಾನಿ ನಿಂದಿತಾನಿ ನ ಸೇವತೇ |
ಅನಾಸ್ತಿಕಃ ಶ್ರದ್ದಧಾನ ಏತತ್ ಪಂಡಿತಲಕ್ಷಣಮ್ ||
– ಮಹಾಭಾರತ, ಉದ್ಯೋಗಪರ್ವ
“ಯಾರು ಸದಾ ಒಳ್ಳೆಯ ಕೆಲಸಗಳಲ್ಲಿ ನಿರತನಾಗಿರುತ್ತಾನೋ, ಯಾರು ಕೆಟ್ಟ ಕರ್ಮಗಳಿಂದ ದೂರವಿರುತ್ತಾನೋ, ಯಾರು ಆಸ್ತಿಕನೂ ಶ್ರದ್ಧಾವಂತನೂ ಆಗಿರುತ್ತಾನೋ ಅವನು ಪಂಡಿತನೆನಿಸುತ್ತಾನೆ.”
ಪಂಡಿತನ ಲಕ್ಷಣಗಳನ್ನು ಹೇಳಹೊರಟ ಈ ವಾಕ್ಯದಲ್ಲಿ ವಿವಿಧ ಜ್ಞಾನಸಂಗ್ರಹ ಶಾಸ್ತ್ರ ಜ್ಞಾನಾದಿಗಳಿಂದ ಪಕ್ಕಕ್ಕೆ ಸರಿದು ಅಂತರಂಗಸಂಸ್ಕಾರವನ್ನು ಪ್ರತಿಫಲಿಸುವ ಅಂಶಗಳನ್ನು ವಿಶೇಷಿಸಿ ಹೇಳಿರುವುದನ್ನು ಗಮನಿಸಬೇಕು. ಹತ್ತೊಂಬತ್ತನೇ ಶತಮಾನದ ನಡುಭಾಗದಲ್ಲಿ ಅಮೆರಿಕದ ಅಧ್ಯಕ್ಷನಾಗಿದ್ದ ಆ್ಯಂಡ್ರೂ ಜಾನ್ಸನನನ್ನು ಮಿತ್ರನೊಬ್ಬನು “ಮೂರ್ಖನು ಯಾರು, ಬುದ್ಧಿವಂತನು ಯಾರು – ಎಂಬುದನ್ನು ಗುರುತಿಸುವುದು ಹೇಗೆ?” – ಎಂದು ಕೇಳಿದುದಕ್ಕೆ ಆತ ಹೀಗೆ ಉತ್ತರಿಸಿದನಂತೆ: “ಇದಕ್ಕೆ ಒಬ್ಬೊಬ್ಬರೂ ಅವರವರ ದೃಷ್ಟಿಕೋನಕ್ಕೆ ಅನುಗುಣವಾಗಿ ಉತ್ತರಿಸಿಯಾರು. ನನ್ನ ಅಭಿಪ್ರಾಯವೇನೆಂದರೆ: ಯಾರು ತನ್ನ ಅನುಭವವನ್ನೇ ಪ್ರಮುಖವೆಂದು ಭಾವಿಸಿ ಎಲ್ಲರೂ ಅದನ್ನು ಮನ್ನಿಸಬೇಕೆಂದು ನಿರೀಕ್ಷಿಸುತ್ತಾನೋ ಅವನೇ ಮೂರ್ಖನು. ಯಾರು ಇತರರ ಅನುಭವಗಳಿಂದಲೂ ಪಾಠ ಕಲಿತು ಅಂತಹ ತಪ್ಪುಗಳನ್ನು ತಾನು ಮಾಡುವುದಿಲ್ಲವೋ, ಯಾರು ಎಂದೂ ಬೇರೆಯವರಿಗೆ ಹಾನಿ ಮಾಡುವುದಿಲ್ಲವೋ – ಅಂತಹವನನ್ನು ಬುದ್ಧಿವಂತನೆಂದು ಪರಿಗಣಿಸಬಹುದು. ಯಾರು ತನ್ನ ಮತ್ತು ಬೇರೆಯವರ ಅನುಭವಗಳಿಂದ ಪಾಠ ಕಲಿಯುವುದಿಲ್ಲವೋ ಅವನನ್ನು ಮೂರ್ಖನೆನ್ನಬೇಕಾಗುತ್ತದೆ.”