ನೈವಾರ್ಥೇನ ನ ಕಾಮೇನ ವಿಕ್ರಮೇಣ ನ ಚಾಜ್ಞಯಾ |
ಶಕ್ಯಾ ದೈವಗತಿರ್ಲೋಕೇ ನಿವರ್ತಯಿತುಮುದ್ಯತಾ ||
– ಸುಭಾಷಿತಸುಧಾನಿಧಿ
“ಹಣದಿಂದಾಗಲಿ ಕಾಮದಿಂದಾಗಲಿ ಶೌರ್ಯಪರಾಕ್ರಮಗಳಿಂದಾಗಲಿ ಆಧಿಕಾರಿಕವಾಗಿ ಅಪ್ಪಣೆ ಕೊಡುವುದರಿಂದಾಗಲಿ – ಈ ಯಾವುದೇ ಮಾನವಾಧೀನ ಮಾರ್ಗಗಳಿಂದಲೂ ಲೋಕದಲ್ಲಿ ಸರ್ವನಿಯಾಮಕವಾಗಿರುವ ದೈವಗತಿಯನ್ನು ತಪ್ಪಿಸುವುದು ಸಾಧ್ಯವಿಲ್ಲ.”
ಮನುಷ್ಯಪ್ರಯಾಸಗಳನ್ನೆಲ್ಲ ಸಫಲಗೊಳಿಸುವ ಅಥವಾ ವಿಫಲಗೊಳಿಸುವ ಅಧಿಶಕ್ತಿ ದೈವಗತಿ. ಇದನ್ನು ನಾನು ಮಾಡುತ್ತೇನೆ, ನಾನು ಶಕ್ತನಾಗಿದ್ದೇನೆ – ಎಂದು ಮನುಷ್ಯನು ಭಾವಿಸುವುದು ಭ್ರಾಮಕವಷ್ಟೆ. ವಿಧಿಯು ಅನುಕೂಲಕರವಾಗಿದ್ದರಷ್ಟೆ ಮನುಷ್ಯನು ನಾನು ಇದನ್ನು ಸಾಧಿಸಿದೆ ಎಂದು ಮೆರೆಯಬಹುದು. ದೈವದ ಲೆಕ್ಕಾಚಾರ ಮನುಷ್ಯನದಕ್ಕಿಂತ ಬೇರೆಯೇ ಇರುತ್ತದೆ, ಅತೀತವಾಗಿ ಇರುತ್ತದೆ.
ನಾನು ಅರ್ಜುನನ ರಥಕ್ಕೆ ಸಾರಥಿಯಾಗಿ ಮಾರ್ಗದರ್ಶನ ಮಾಡುತ್ತಿರುತ್ತೇನಷ್ಟೆ, ನಾನು ಶಸ್ತçಧಾರಣೆ ಮಾಡುವುದಿಲ್ಲ – ಎಂದು ಕೃಷ್ಣನ ಪ್ರತಿಜ್ಞೆ ಇತ್ತು. ಆದರೆ ಕೃಷ್ಣನು ಕೈಯಲ್ಲಿ ಶಸ್ತ್ರ ಹಿಡಿಯುವಂತೆ ಮಾಡಿಯೇ ತೀರುತ್ತೇನೆ – ಎಂದು ಭೀಷ್ಮನು ಪ್ರತಿಜ್ಞೆ ಮಾಡಿದ್ದ. ಭೀಷ್ಮನ ಬಾಣಪ್ರಹಾರ ಅರ್ಜುನನನ್ನು ಆಹುತಿ ತೆಗೆದುಕೊಳ್ಳುವ ಪ್ರಸಂಗ ಎದುರಾದಾಗ ಕೃಷ್ಣನು ಮಧ್ಯಪ್ರವೇಶ ಮಾಡಲೇಬೇಕಾಯಿತು; ರಥದ ಚಕ್ರವನ್ನೇ ‘ಶಸ್ತ್ರ’ವಾಗಿಸಿ ಅರ್ಜುನನನ್ನು ರಕ್ಷಿಸಿದ. ಭೀಷ್ಮನು ಮುಗುಳ್ನಕ್ಕು ಬಿಲ್ಲನ್ನು ಕೆಳಗಿಟ್ಟು “ಕೃಷ್ಣ, ನನಗೆ ನಿನಗೆದುರಾಗಿ ಯುದ್ಧ ಮಾಡುವ ಉದ್ದೇಶವಿರಲೇ ಇಲ್ಲ. ನಿನ್ನ ಕೈಯಲ್ಲಿ ಶಸ್ತçವನ್ನು ಹಿಡಿಸಬೇಕಾಗಿತ್ತು, ಅಷ್ಟೆ” ಎಂದ. ಇದಕ್ಕೆ ಕೃಷ್ಣನು ನೀಡಿದ ಉತ್ತರ ಪ್ರಬೋಧಕವಾಗಿದೆ:
“ಅಜ್ಜ, ನನ್ನ ಪ್ರತಿಜ್ಞೆಯನ್ನು ಅನೂರ್ಜಿತಗೊಳಿಸುವ ಶಕ್ತಿ ಯಾರಿಗೂ ಇಲ್ಲ. ಆದರೂ ನಾನು ಶಸ್ತ್ರ ಹಿಡಿದಂತೆ ಮಾಡಲು ಒಂದು ಕಾರಣ ಇತ್ತು. ನಾನು ನನ್ನ ಪ್ರತಿಜ್ಞೆಯನ್ನು ಉಳಿಸಲೇಬೇಕೆಂದು ಹಠ ಮಾಡಿದ್ದರೆ ‘ಸಂತನಾದ ಭೀಷ್ಮನ ವಚನಭಂಗವಾಯಿತು’ ಎಂಬ ಮಾತು ಲೋಕದಲ್ಲಿ ಪ್ರಚಲಿತವಾಗುತ್ತಿತ್ತು. ನನಗೆ ನನ್ನ ಮಾತು ಉಳಿಯಲಿ ಎಂಬುದಕ್ಕಿಂತ ನನ್ನ ಆರಾಧಕನಾದ ಭೀಷ್ಮನ ಮೇಲೆ ವಚನಭಂಗದ ಆರೋಪ ಬಾರದಿರಲಿ ಎಂಬ ಗಣನೆ ಮಹತ್ತ್ವದ್ದಾಗಿತ್ತು.”