ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ |
ಕರ್ತವ್ಯೋ ಮಮಕಾರಃ ಕಿಂ ತು ಸ ಸರ್ವತ್ರ ಕರ್ತವ್ಯಃ ||
– ಅಪ್ಪಯ್ಯ ದೀಕ್ಷಿತ
“ನಾನು-ನನ್ನದು ಎಂಬ ಮಮಕಾರವನ್ನು ಬಿಡಬೇಕೆಂಬುದು ಸರಿಯೆ; ಆದರೆ ಇದು ಎಲ್ಲರಿಗೂ ಸುಲಭವಲ್ಲ. ಆದ್ದರಿಂದ ಮಮಕಾರವನ್ನು ಕರ್ತವ್ಯವೆಂದೇ ಭಾವಿಸೋಣ; ಆದರೆ ಈ ಮಮಕಾರವನ್ನು ಎಲ್ಲೆಡೆ ಎಲ್ಲರ ವಿಷಯದಲ್ಲಿಯೂ ಆಚರಿಸೋಣ. ಇದು ತಾರಕವಾಗುತ್ತದೆ.”
ತೆಲುಗಿನ ಪ್ರಸಿದ್ಧ ಲೇಖಕ ಉಷಶ್ರೀ ವಿಜಯವಾಡ ನಿವಾಸಿಯಾಗಿದ್ದರು. ಅವರ ಮನೆಯಲ್ಲಿ ಒಂದು ನಮೂನೆಯ ಪಾಲಿಶ್ ಮಾಡಿದ ಅಕ್ಕಿಯನ್ನು ಬಳಸುತ್ತಿದ್ದರು. ಅದು ಕೆಲವು ಅಂಗಡಿಗಳಲ್ಲಿ ಮಾತ್ರ ಸಿಗುತ್ತಿತ್ತು. ಒಮ್ಮೆ ಯಾರೋ ಕಳಿಸಿದ್ದರೆಂದು ಹೇಳಿ ಆಟೋರಿಕ್ಷಾದವನೊಬ್ಬ ಒಂದು ಮೂಟೆ ಅಕ್ಕಿಯನ್ನು ಇವರ ಮನೆಗೆ ತಲಪಿಸಿ ಹೊರಟುಹೋದ. ಅನಂತರ ಮನೆಯವರು ಉಷಶ್ರೀಯವರನ್ನು ಕೇಳಿದರು – “ಗುರುತು ಪರಿಚಯ ಇಲ್ಲದ ಯಾರ ಮೂಲಕವೋ ಈ ದುಬಾರಿ ಸರಕನ್ನು ತರಿಸಿದಿರಲ್ಲ! ಅವನು ತಾನೇ ಅದನ್ನು ಛಪಾವಣೆ ಮಾಡಿಬಿಟ್ಟಿದ್ದಿದ್ದರೆ?!”
ಉಷಶ್ರೀ ನಕ್ಕು ಉತ್ತರಿಸಿದರು: “ಅವನು ಒಯ್ದಿದ್ದಿದ್ದರೆ ಅವನ ಮನೆಯಲ್ಲಿ ಅವನ ಹೆಂಡಿರುಮಕ್ಕಳು ಊಟ ಮಾಡುತ್ತಿದ್ದರು, ಅಷ್ಟೇ ತಾನೆ! ಅಕ್ಕಿ ಇರುವುದು ಅಡಿಗೆ ಮಾಡುವುದಕ್ಕೆ. ಆ ಕೆಲಸ ಇಲ್ಲಿಗೆ ಬದಲಾಗಿ ಬೇರೊಂದು ಕಡೆ ನಡೆದರೆ ನಾವೇಕೆ ವ್ಯಥೆಪಡಬೇಕು?”