ಸುಜನೋ ನ ಯಾತಿ ವೈರಂ ಪರಹಿತಬುದ್ಧಿರ್ವಿನಾಶಕಾಲೇಽಪಿ |
ಛೇದೇಽಪಿ ಚಂದನತರುಃ ಸುರಭಯತಿ ಮುಖಂ ಕುಠಾರಸ್ಯ ||
– ಸುಭಾಷಿತಸುಧಾನಿಧಿ
“ಉಳಿದ ಲೋಕಕ್ಕೆಲ್ಲ ಸದಾ ಒಳ್ಳೆಯದಾಗಲೆಂಬ ಭಾವನೆಯನ್ನು ಅಂತರಂಗದಲ್ಲಿ ತುಂಬಿಕೊಂಡವನು ತನಗೆ ವಿಪತ್ತು ಎರಗಿದಾಗಲೂ ದ್ವೇಷಕ್ಕೆ ಒಳಗಾಗುವುದಿಲ್ಲ. ಶ್ರೀಗಂಧದ ಮರವನ್ನು ತುಂಡರಿಸಿದಾಗಲೂ ಅದು ಆ ಕೊಡಲಿಯ ಬಾಯನ್ನು ಸುಗಂಧಮಯ ಮಾಡದಿರುವುದಿಲ್ಲ.”
ದೇಶಾಟನ ಮಾಡಬಯಸಿದ್ದ ಶಿಷ್ಯನನ್ನು ಬುದ್ಧನು ಪರೀಕ್ಷಿಸಲೆಳಸಿದಾಗ ನಡೆದ ಪ್ರಶ್ನೋತ್ತರ ಇದು:
“ಯಾರಾದರೂ ನಿನ್ನನ್ನು ನಿಂದಿಸಿದರೆ ನಿನಗೆ ಏನನ್ನಿಸುತ್ತದೆ?”
“ಅವರು ಬರಿಯ ಬೈಗುಳ ಬೈದರು, ಹೊಡೆಯಲಿಲ್ಲ. ಆದ್ದರಿಂದ ಅವರು ಒಳ್ಳೆಯವರು ಎಂದುಕೊಳ್ಳುತ್ತೇನೆ.”
“ಒಂದು ವೇಳೆ ಅವರು ಹೊಡೆಯಲೂಬಹುದು, ಆಗ?”
“ಹೊಡೆದರು ಅಷ್ಟೆ, ಕೊಲ್ಲಲಿಲ್ಲ ಎಂದು ಸಮಾಧಾನಪಡುತ್ತೇನೆ.”
“ಅವರು ನಿನ್ನನ್ನು ಕೊಂದು ನಿನ್ನ ದೇಹವನ್ನು ಛಿದ್ರ ಮಾಡಿ ಚೆಲ್ಲಲು ಮುಂದಾದರೆ?”
“ಈ ದುಃಖಮಯ ಜಗತ್ತಿನ ಸಂಸರ್ಗದಿಂದ ನನ್ನನ್ನು ಪಾರು ಮಾಡಿ ಉಪಕಾರವನ್ನೆಸಗುತ್ತಿರುವರೆಂದೇ ಅಂದುಕೊಳ್ಳುತ್ತೇನೆ.”
ಶಿಷ್ಯನ ಉತ್ತರವನ್ನು ಕೇಳಿ ಸಂತುಷ್ಟನಾದ ಬುದ್ಧನು ಹೇಳಿದ: “ನೀನು ಪರ್ಯಟನೆಗೆ ಯೋಗ್ಯನಾಗಿರುವೆ ಎಂದು ಈಗ ನನಗೆ ಭರವಸೆ ಬಂದಿತು. ಕೆಟ್ಟವರಲ್ಲಿಯೂ ಒಳ್ಳೆಯದನ್ನೇ ಕಾಣುವವನು ನಿಜವಾದ ಪರಿವ್ರಾಜಕ.”