ಗುಣದೋಷೌ ಬುಧೋ ಗೃಹ್ಣನ್ನಿಂದುಕ್ಷ್ವೇಡಾವಿವೇಶ್ವರಃ|
ಶಿರಸಾ ಶ್ಲಾಘತೇ ಪೂರ್ವಂ ಪರಂ ಕಂಠೇ ನಿಯಚ್ಛತಿ||
– ಕುವಲಯಾನಂದ
“ಚಂದ್ರನನ್ನೂ ವಿಷಗಳನ್ನೂ ಎರಡನ್ನೂ ಈಶ್ವರನು ಸ್ವೀಕರಿಸುತ್ತಾನಷ್ಟೆ. ಹಾಗೆಯೆ ವಿವೇಕಜ್ಞನಾದವನು ಇತರರ ಗುಣಗಳು, ದೋಷಗಳು ಎರಡನ್ನೂ ಗ್ರಹಿಸುತ್ತಾನೆ, ಇವುಗಳಲ್ಲಿ ಮೊದಲಿನದನ್ನು ಆದರಿಸಿ ಎರಡನೆಯದನ್ನು ಕಂಠದಲ್ಲಿಯೆ ತಡೆಹಿಡಿಯುತ್ತಾನೆ.”
ಅಮೆರಿಕದ ಅಧ್ಯಕ್ಷನಾಗಿದ್ದ ಏಬ್ರಹಂ ಲಿಂಕನನಿಗೆ ಸಂಬಂಧಿಸಿದ ಪ್ರಸಿದ್ಧ ಪ್ರಸಂಗ ಒಂದಿದೆ. ಲಿಂಕನನು ತನ್ನ ಸರ್ಕಾರದ ರಕ್ಷಣಾ ವಿಭಾಗದ ಮುಖ್ಯಸ್ಥನಾಗಿ ಒಬ್ಬಾತನನ್ನು ನೇಮಿಸಿದ. ಆತನಾದರೋ ಉದ್ಧಟ ಸ್ವಭಾವದವನೆಂದು ಹೆಸರಾಗಿದ್ದ. ಲಿಂಕನನನ್ನು ವೈಯಕ್ತಿಕವಾಗಿಯೂ ಪದೇಪದೇ ನಿಂದಿಸುತ್ತಿದ್ದ. ಅಂತಹ ದುರಾರಾಧ್ಯನನ್ನು ಲಿಂಕನನು ತುಂಬಾ ಹೊಣೆಗಾರಿಕೆಯ ಸ್ಥಾನಕ್ಕೆ ನೇಮಿಸಿದುದು ಲಿಂಕನನ ಸಹವರ್ತಿಗಳಿಗೆ ವಿಚಿತ್ರವೆನಿಸಿತು. ಅವರಲ್ಲಿ ಕೆಲವರು ಲಿಂಕನನ ಬಳಿಸಾರಿ ಅವನಿಗೆ ಪ್ರಸಕ್ತ ವ್ಯಕ್ತಿಯ ಗುಣಸ್ವಭಾವ ತಿಳಿದಿದೆಯೆ, ಅವನು ಸ್ವಯಂ ಲಿಂಕನನ ವಿಷಯದಲ್ಲಿಯೂ ಬಿರುನುಡಿಗಳನ್ನು ಆಡುವ ಅಭ್ಯಾಸದವನೆಂಬುದು ಗಮನಕ್ಕೆ ಬಂದಿದೆಯೆ – ಎಂದೆಲ್ಲ ಕಳಕಳಿಯಿಂದ ಪ್ರಶ್ನಿಸಿದರು. ಆ ಸಂಗತಿಗಳೆಲ್ಲ ತನಗೆ ಚೆನ್ನಾಗಿಯೆ ತಿಳಿದಿವೆ ಎಂದ, ಲಿಂಕನ್. “ಇದೆಲ್ಲ ಗೊತ್ತಿದ್ದೂ ತಾವು ಆತನಿಗೆ ಇಂತಹ ಉನ್ನತ ಸ್ಥಾನವನ್ನು ನೀಡಿದ್ದೀರಲ್ಲ!” ಎಂದ ಅವರಿಗೆ ಲಿಂಕನ್ ಉತ್ತರಿಸಿದ: “ಆತ ಕೆಲಸದಲ್ಲಿ ಸಮರ್ಥನಾಗಿದ್ದಾನೆ, ತನ್ನ ಪಾಲಿಗೆ ಬಂದ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಕುಶಲತೆಯಿಂದ ಮಾಡಿ ಮುಗಿಸುತ್ತಾನೆ. ಹೀಗೆ ಆತನಿಂದ ಮೇಲ್ಮಟ್ಟದ ಸೇವೆಯನ್ನು ನಿರೀಕ್ಷಿಸಬಹುದಾಗಿದೆ. ಅವನು ವೈಯಕ್ತಿಕವಾಗಿ ನನ್ನನ್ನು ನಿಂದಿಸಿದರೆ ಏನಾಯಿತು? ಈಗ ಬೇಕಾಗಿರುವುದು ದೇಶನಿಷ್ಠರೇ ಹೊರತು ಲಿಂಕನ್‌ಭಕ್ತರಲ್ಲ, ಅಲ್ಲವೆ?”