ಗತಾರ್ಥಾನ್ನಾನುಶೋಚಂತಿ ನಾರ್ಥಯಂತೇ ಮನೋರಥಾನ್ |
ವರ್ತಮಾನೇನ ವರ್ತಂತೇ ತೇನ ಮೇ ಪಾಂಡವಾಃ ಪ್ರಿಯಾಃ ||
“ಆಗಿಹೋದದ್ದಕ್ಕಾಗಿ ಅವರು ಮರುಗುತ್ತ ಕೂಡುವುದಿಲ್ಲ. ಯಾವಾವುದೋ ಹೊಸ ಆಸೆಗಳನ್ನು ಕಲ್ಪಿಸಿಕೊಂಡು ಚಪಲಪಡುವುದಿಲ್ಲ. ಯಾವುದು ತಮ್ಮ ಪಾಲಿಗೆ ಒದಗಿದೆಯೋ ಅದನ್ನು ಸ್ವೀಕರಿಸಿ ತೃಪ್ತರಾಗಿರುತ್ತಾರೆ. ಈ ಕಾರಣದಿಂದ ಪಾಂಡವರು ನನಗೆ (ಶ್ರೀಕೃಷ್ಣನಿಗೆ) ಪ್ರಿಯರು.”
ಆಗಿಹೋದದ್ದನ್ನು ಚಿಂತಿಸುತ್ತ ಶೋಕಿಸಬಾರದು ಎಂಬುದರ ತಾತ್ಪರ್ಯ ಎಲ್ಲವನ್ನೂ ಮರೆತುಬಿಡಬೇಕೆಂದಲ್ಲ. ನಮ್ಮ ಪ್ರಯತ್ನವನ್ನು ಮೀರಿ ನಡೆದುಹೋಗುವ ಘಟನೆಗಳ ನೆನಪು ನಮ್ಮನ್ನು ದೀರ್ಘಕಾಲ ಕಾಡಿ ಅಸ್ವಸ್ಥರನ್ನಾಗಿಸಲು ಅವಕಾಶ ಕೊಡದೆ ಮನಸ್ಸಮಾಧಾನವನ್ನು ಅಭ್ಯಾಸ ಮಾಡಿಕೊಳ್ಳಬೇಕು – ಎಂಬುದು ಈ ಮಾತಿನ ಸಂದೇಶ. ಇದನ್ನೇ ಬುದ್ಧನ ಒಂದು ಜೀವನಪ್ರಸಂಗವು ಸ್ಫುಟೀಕರಿಸುತ್ತದೆ.
ಬುದ್ಧನು ಭಕ್ತಸಮಾವೇಶದಲ್ಲಿದ್ದಾಗ ಒಮ್ಮೆ ಒಬ್ಬ ಆಗಂತುಕನು ಅದೇಕೊ ಕ್ರೋಧಾವಿಷ್ಟನಾಗಿ ಬುದ್ಧನನ್ನು ವಾಚಾಮಗೋಚರ ಕೆಟ್ಟ ಮಾತುಗಳಲ್ಲಿ ನಿಂದನೆ ಮಾಡಿದ. ಮರುದಿನ ಆತನಿಗೆ ಪಶ್ಚಾತ್ತಾಪವಾಗಿ ಬುದ್ಧನಲ್ಲಿಗೆ ಬಂದು ತನ್ನನ್ನು ಕ್ಷಮಿಸುವಂತೆ ಪ್ರಾರ್ಥಿಸಿದ. ಬುದ್ಧನು “ನಾನು ನಿನ್ನನ್ನು ಕ್ಷಮಿಸಲಾರೆ” ಎಂದ. ಈ ಕಾಠಿಣ್ಯ ಎಲ್ಲರನ್ನೂ ಚಕಿತಗೊಳಿಸಿತು. ಬುದ್ಧನು ವಿವರಿಸಿದ:
“ನೋಡಪ್ಪಾ, ನಿನ್ನೆ ನೀನು ನಿಂದಿಸಿದ ವ್ಯಕ್ತಿ ಈಗ ಇಲ್ಲಿ ಇಲ್ಲ. ಅವನೇನಾದರೂ ನನಗೆ ಭೇಟಿಯಾದರೆ ನಿನ್ನನ್ನು ಕ್ಷಮಿಸುವಂತೆ ಆತನಲ್ಲಿ ವಿನಂತಿ ಮಾಡುತ್ತೇನೆ. ವಾಸ್ತವವೆಂದರೆ ನಮ್ಮ ಮನಸ್ಸು ಹರಿಯುವ ನದಿಯಂತೆ. ಈ ಪ್ರವಾಹ ಸದಾ ಹರಿಯುತ್ತಿರುತ್ತದೆ. ಒಂದೇ ನೀರಿನಲ್ಲಿ ನಾವು ಎರಡನೇ ಸಲ ಕಾಲನ್ನಿಡಲು ಸಾಧ್ಯವೇ ಇಲ್ಲ, ಅಲ್ಲವೆ?”
ಪ್ರತಿ ಕ್ಷಣವೂ ನಾವು ಹೊಸ ವ್ಯಕ್ತಿಗಳೇ – ಎಂಬ ನಿತ್ಯಪ್ರವಾಹತತ್ತ್ವವನ್ನು ನಾವು ಗ್ರಹಿಸಬೇಕು.