ಸರ್ಕಲ್ಲಿಗೊಂದು ಸಿಗ್ನಲ್ಲು, ಪ್ರತಿಮೆ ಬಂದು ಕೂತವು. ಯಾವಾಗ ಸರ್ಕಲ್ಲುಗಳು ಬೆಳೆದು ಟ್ರಾಫಿಕ್ಕು ಬೆಳೆದು, ಗಾಡಿಗಳು ಕೆಂಪುದೀಪಕ್ಕೆ ಬಯ್ಯುತ್ತ ಸರ್ಕಲ್ಲಿನಲ್ಲಿ ನಿಂತವೋ, ಆಗ ಮಂಗಳಮುಖಿಯರು ಕಾಣಿಸತೊಡಗಿದರು… ಪ್ರತಿಸಲ ಸರ್ಕಲ್ಲಿನಲ್ಲಿ ನಿಂತಾಗ, ಮೊದಲು ಕಣ್ಣು ಹೋಗುವುದು ಅವರು ಯಾರಾದರೂ ಇದ್ದಾರಾ ಅಂತ. ಇದೆಂತ ಭಯ? ಈ ಭಯದ ಮೂಲ ಯಾವುದು ಅಂತ ತುಂಬಾ ಸಲ ಯೋಚಿಸಿದ್ದೇನೆ. ಅದು ಅವರು ನನ್ನ ಮುಟ್ಟುವರು ಎಂಬ ಭಯವೇ? ಇಲ್ಲ ಜೇಬಿನಿಂದ ದುಡ್ಡು ಕಸಿದುಬಿಡುತ್ತಾರೆ ಎಂಬ ಭಯವೇ? ಇಲ್ಲ ಮತ್ತೇನೋ ಮಾಡಿ ಅಕ್ಕಪಕ್ಕದವರು ನೋಡಿದರೆ ಅವಮಾನ ಎಂಬ ಭ್ರಮೆಯೇ?
ಕಬ್ಬನ್ಪಾರ್ಕಿನಲ್ಲಿ ಇಬ್ಬರು ತಬ್ಬಿ ಹಿಡಿಯಲಾಗದಷ್ಟು ಅಗಲವಾದ ಕಾಂಡೊಮ್ ಮರವಿತ್ತು. ಮರದ ಕೆಳಗೆ ಕಾಂಡೊಮ್ಗಳು ಉದುರಿದ್ದವು.
* * *
ರಾತ್ರಿ ಮೆಟ್ರೋದ ಕೊನೆಯ ಟ್ರೈನಿಗಾಗಿ ನಮ್ಮ ಹೀರೊ ಓಡಿ ಬಂದು ಇನ್ನೇನು ಬಾಗಿಲು ಮುಚ್ಚುತ್ತೆ ಅನ್ನುವಾಗ ಹತ್ತಿಕೊಳ್ಳುತ್ತಾನೆ. ನೋಡುದ್ರೆ ಇಡೀ ಮೆಟ್ರೋ ಟ್ರೈನ್ ಖಾಲಿ ಖಾಲಿ. ಜೇಬಿನಿಂದ ಸೆಲ್ಫೋನ್ ಎತ್ತಿಕೊಂಡು ನೋಡುತ್ತ ಕೂರುತ್ತಾನೆ. ಮುಂದಿನ ನಿಲ್ದಾಣದಲ್ಲಿ ಒಬ್ಬ ಮುದುಕ ಹತ್ತುತ್ತಾನೆ, ಮುದುಕ ಕುಂಟ ಬೇರೆ. ಬಂದವನೇ ಇವನ ಎದುರು ಕೂರುತ್ತಾನೆ. ನಮ್ ಹೀರೋಗೆ ಗಾಬರಿ. ಮುದುಕ ನಮ್ ಹೀರೊಗೆ ‘ನಿನಗೆ ದೇವರಲ್ಲಿ ನಂಬಿಕೆ ಇದ್ಯಾ?’ ಎಂದು ಗೊಗ್ಗರುಧ್ವನಿಯಲ್ಲಿ ಕೇಳುತ್ತಾನೆ.
ನಮ್ ಹೀರೊ ಸ್ವಲ್ಪ ಇರುಸುಮುರುಸಾಗಿ ‘ಸಾರಿ’ ಎನ್ನಲು, ಮುದುಕ ಮತ್ತೆ ‘ದೇವರಲ್ಲಿ ನಿನಗೆ ನಂಬಿಕೆ ಇದೆಯಾ?’ ಎಂದು ಮತ್ತೆ ಅದೇ ಗೊಗ್ಗರುಧ್ವನಿಯಲ್ಲಿ ಕೇಳುತ್ತಾನೆ.
ನಮ್ ಹೀರೊ ‘ಹೌದು, ಯಾಕೆ?’ ಎನ್ನುತ್ತಾನೆ.
ಮುದುಕ ‘ನಂಗೊತ್ತಿತ್ತು’ ಎಂದು ನಗುತ್ತಾನೆ. ಇವನ್ಯಾರೋ ತಿಕ್ಕಲ ಎಂದುಕೊಂಡು ಹೀರೊ ಮತ್ತೆ ಮೊಬೈಲ್ನಲ್ಲಿ ಮುಳುಗಿ, ‘ಮುದುಕ ತನ್ನನ್ನೇ ನೋಡುತ್ತಿರಬಹುದಾ?’ ಎಂದು ತಲೆಯೆತ್ತಿ ನೋಡಿದರೆ ಮುದುಕ ಕಾಣೋದೇ ಇಲ್ಲ. ಒಂದು ಸಲ ಬಗ್ಗಿ ಅಕ್ಕಪಕ್ಕದ ಕಂಪಾರ್ಟ್ಮೆಂಟ್ ನೋಡುತ್ತಾನೆ, ‘ಅರೆ, ಎಲ್ಲಿ ಹೋದ?’ ಎಂದು ಮತ್ತೆ ಮೊಬೈಲ್ನಲ್ಲಿ ಮುಳುಗುತ್ತಾನೆ – ಎಂದು ಹೇಳಿ ನಿಲ್ಲಿಸಿ ನಾನು ಪ್ರತೀಕ್ ಮುಖವನ್ನು ನೋಡಿದೆ.
ಅವನು ‘ಆಮೇಲೆ?’ ಎಂದು ಕೇಳಿದ.
ಇದು ನಾನು ಕತೆ ನರೇಟ್ ಮಾಡುವಾಗ ಅನುಸರಿಸುವ ಟ್ರಿಕ್ಕು. ನನ್ನೊಳಗೆ ಹುಟ್ಟಿದ ಕತೆ ನನಗೆ ಯಾವತ್ತಿಗೂ ಎಕ್ಸೈಟ್ ಆಗಿದ್ದರೂ ಅದನ್ನು ಬೇರೆಯವರಿಗೆ ನರೇಟ್ ಮಾಡುವಾಗ ಅವರಿಗೂ ಆ ಕತೆ ಅಷ್ಟೇ ಎಕ್ಸೈಟ್ಮೆಂಟ್ ಕೊಡ್ತಾ ಇದೆಯಾ ಎಂದು ತಿಳಿದುಕೊಳ್ಳುವ ಆಸೆ. ಹಾಗೆ ತಿಳಿದುಕೊಳ್ಳಲು ನನಗೆ ಇರುವ ಏಕೈಕ ಮಾರ್ಗ ಪ್ಲಾಟ್ ಪಾಯಿಂಟ್ ಚೇಂಜ್ ಆಗುವ ಸಮಯದಲ್ಲಿ ನರೇಶನ್ಗೆ ಒಂದು ವಿರಾಮ ಕೊಟ್ಟು, ಕತೆ ಕೇಳಿಸಿಕೊಳ್ಳುತ್ತಿರುವವನ ಮುಖ ನೋಡುವುದು.
ಅವನ ಕಣ್ಣು ಕೆಂಪಾಗದೆ, ನಿದ್ದೆ ಬಾರದೆ, ಆಕಳಿಸದೆ ಅವನು ಅಷ್ಟೇ ಇಂಟರೆಸ್ಟ್ನಿಂದ ಕೇಳಿಸಿಕೊಳ್ಳುತ್ತಿದ್ದರೆ ಕತೆ ಒಂದು ಲೆವೆಲ್ಗೆ ಚೆನ್ನಾಗಿದೆ ಎಂದರ್ಥ. ಕೇಳಿಸಿಕೊಳ್ಳುವವನು ಆಕಳಿಸುತ್ತ, ನಿರುತ್ಸಾಹ ತೋರಿದರೆ ಅದೊಂದು ಡಬ್ಬಾ ಕತೆ ಎಂದು ಅಲ್ಲಿಗೇ ಬಿಟ್ಟು ಹೊಸ ಕತೆಯನ್ನು ಕಾಯುತ್ತ ಕೂರುವುದು.
“ಆಮೇಲೆ ಮೆಟ್ರೋ ನೆಕ್ಸ್ಟ್ ಸ್ಟೇಷನ್ನಲ್ಲಿ ನಿಲ್ಲುತ್ತೆ. ಬಾಗಿಲು ಓಪನ್ ಆಗುತ್ತೆ. ನಮ್ ಹೀರೊ ಕುಂಟುತ್ತ ಹೊರ ಬರ್ತಾನೆ ಅಷ್ಟೇ” ಎಂದು ಹೇಳಿ ನನ್ನ ಕತೆ ಅವನಿಗೂ ಅಷ್ಟೇ ಎಕ್ಸೈಟ್ ಮಾಡ್ತಾ ಅಂತ ಅವನ ಮುಖವನ್ನೇ ನೋಡುತ್ತ ಕೂತೆ.
ಪ್ರತೀಕ್ ‘ಸಖತ್ತಾಗಿದೆ, ಆದರೆ ಕೊನೆ ಸೀನ್ ಅರ್ಥ ಆಗ್ಲಿಲ್ಲ. ಅವನು ದೇವರಾಗಿಬಿಟ್ಟನಾ?’ ಎಂದು ಕೇಳಿದ.
ನಾನು ನಕ್ಕು ಅದೇ ಟ್ವಿಸ್ಟ್ ಎಂದು ಹೇಳುತ್ತಿದ್ದ ಹಾಗೆ ನಾವಿದ್ದ ಸ್ವಲ್ಪ ದೂರದಲ್ಲಿ ‘ಅವರು’ ಬರ್ತಿದ್ದರು. ನನ್ನ ಮುಖದಲ್ಲಿ ಆದ ಕಸಿವಿಸಿ ಕಂಡು ಪ್ರತೀಕ್ ಆ ಕಡೆ ನೋಡಿದ. ಅವನಿಗೆ ನನ್ನ ಮುಖದಲ್ಲಾದ ಕಸಿವಿಸಿ ಅರ್ಥವಾಯ್ತು ಅನಿಸುತ್ತೆ. ನನಗೆ ನಿಧಾನವಾಗಿ ಎದೆ ಹೊಡೆದುಕೊಳ್ಳುವುದರ ಜೊತೆಗೆ, ನಡುಕ ಶುರು ಆಯ್ತು. ಆ ತಂಪುಹೊತ್ತಲ್ಲೂ ಬೆವರು. ಪ್ರತಿ ಸಲ ಹೀಗೆ ಆಗುತ್ತೆ. ಕೈ ತಟ್ಟುತ್ತ ಇಬ್ಬರು ಮಂಗಳಮುಖಿಯರು ಬಂದರು. ಪ್ರತೀಕ್ನ ನೋಡಿ ಅವನ ಕೂದಲು ಸವರಿ, ಮುಖ ಸವರಿ, ತೆಗಿಯೋ ರಾಜಾ ಅನ್ನುತ್ತ ಕೈ ನೀಡಿದರು.
ಅವನು ನಗುತ್ತ ‘ಪರ್ಸ್ ತಂದಿಲ್ಲ ಅಕ್ಕ’ ಅಂದ. ಅವರಲ್ಲಿ ಒಬ್ಬ ಮಂಗಳಮುಖಿ ನಾಟಕೀಯವಾಗಿ ಅವನನ್ನು ಮೂದಲಿಸಿ, ಅವನ ಮೂತಿ ತಿವಿದು, ನನ್ನ ಬಳಿ ನಿಂತರು. ನಾನು ನಗುತ್ತ ‘ಇಲ್ಲ’ ಅಂದೆ, ‘ಹೇ ತೆಗಿಯೋ ರಾಜಾ ಸಾಕು, ಇನ್ನೂ ಯಾರೂ ಬೋನಿ ಮಾಡಿಲ್ಲ. ಬೇಜಾರ್ ಮಾಡ್ಬೇಡ’ ಅಂದರು. ನಾನು ಸ್ವಲ್ಪ ರೆಸಿಸ್ಟ್ ಮಾಡುತ್ತಲೇ ಪರ್ಸ್ ತೆಗೆದೆ, ಪರ್ಸ್ನಲ್ಲಿ ಐನೂರರ ನಾಲ್ಕು ನೋಟ್ ಅಷ್ಟೇ ಇತ್ತು. ಚಿಲ್ಲರೆ ಇರಬಹುದಾ ಎಂದು ತಡಕಾಡುವ ಹೊತ್ತಿಗೆ ಅವರಲ್ಲಿ ಒಬ್ಬ ಮಂಗಳಮುಖಿ ಪರ್ಸ್ ಕಿತ್ತುಕೊಂಡು, ಇದ್ದ ನಾಲ್ಕು ಐನೂರರ ನೋಟು ತೆಗೆದುಕೊಂಡು, ‘ಸೀರೆಗೆ ಆಗುತ್ತೆ ಬುಡು, ನಿಮ್ಮ ಅಕ್ಕಗೆ ಸೀರೆ ಕೊಡಿಸಿದೆ ಅಂದುಕೋ’ ಎಂದು ಹೇಳಿ ಕೈ ನಿವಾಳಿಸಿ ನಟಿಕೆ ತೆಗೆದು ಹೊರಟೇಬಿಟ್ಟರು. ನಾನು ಓಡಿಹೋಗಿ ಅವರನ್ನ ಕೇಳಬೇಕು ಎಂದುಕೊಂಡರೂ ಆ ಕ್ಷಣಕ್ಕೆ ಧೈರ್ಯವೇ ಬರಲಿಲ್ಲ. ನನಗಾದ ಅವಮಾನ ಮತ್ತೆ ಅವರು ದುಡ್ಡು ಹೊಡೆದು ಹೋದ ಪರಿ ಕಂಡು, ಬೆಪ್ಪು ಮೋರೆ, ಸಪ್ಪೆ ನಗು ಹಾಕಿಕೊಂಡು ‘ಏನೂ ಆಗಿಲ್ಲ’ ಎಂದು ನಟಿಸಲು ಪ್ರಯತ್ನಿಸಿ ಪ್ರತೀಕ್ ಮುಖ ನೋಡಿದೆ.
ಪ್ರತೀಕ್ “ಎಷ್ಟಿತ್ತು?’’ ಎಂದ, “ಇನ್ನೂರು ಚಿಲ್ರೆ” ಎಂದು ಸುಳ್ಳು ಹೇಳಿದೆ. ಅವನೇನು ಮಾತನಾಡಲಿಲ್ಲ. ಮತ್ತೆ ನನ್ನತ್ತ ತಿರುಗಿ “ಲಾಸ್ಟ್ ಸೀನಲ್ಲಿ ಹೀರೊ ಒಳಗೆ ಹೊಕ್ಕಿದ್ದು ದೇವರ?” ಅಂತ ನನ್ನ ಕೇಳಿ ಉತ್ತರಕ್ಕಾಗಿ ಕಾಯುತ್ತಿದ್ದ. ನಾನು ದುಡ್ಡು ಕಿತ್ತು ರವಿಕೆಯೊಳಗೆ ಸಿಕ್ಕಿಸ್ಕೊಂಡು ಬಳಕುತ್ತ ಹೋದ ಮಂಗಳಮುಖಿಯರನ್ನು ನೋಡುತ್ತ್ತ “ದೇವರಲ್ಲ, ದೆವ್ವ ಕಣ್ರೀ ದೆವ್ವ” ಅಂದೆ. ಹೊಸ ಕಿರುಚಿತ್ರದ ಕತೆ ಹೇಳಲು ನಾನು ಪ್ರತೀಕ್ನ ಮೂರನೇ ಸಲ ಭೇಟಿ ಮಾಡಿದ ದಿನ ಹೀಗಾಗಿಹೋಗಿತ್ತು.
ಅವತ್ತು ಪೂರ್ತಿ ನನ್ನ ಅಸಹಾಯಕತೆ ನೆನಸಿಕೊಂಡು ನನ್ನ ಪುಕ್ಕಲುತನ ಕಂಡು ಅದನ್ನು ಮರೆಮಾಚಲಿಕ್ಕೆ ಮಂಗಳಮುಖಿಯರನ್ನು ಕೆಟ್ಟದಾಗಿ ಬಯ್ದುಕೊಂಡೆ, ಶಪಿಸಿಕೊಂಡೆ. ಅವತ್ತು ನನ್ನ ಅವ್ವ ತುಂಬಾ ನೆನಪಾದಳು. ಪ್ರತಿ ಗೌರಿಹಬ್ಬದ ದಿನ “ಇರೋದು ಒಂದು ಹೆಣ್ ಮಗ, ನಾಲ್ಕ್ ಜನ ತಮ್ಮಂದಿರಿದ್ದೀರ. ಒಬ್ಬರಾದ್ರೂ ಹಬ್ಬಕ್ಕೆ ಒಂದ್ ದಿನ ಹೋಗಿ ಆ ಮಗುಗೆ ಸೀರೆ ಕೊಡಿಸಿ ಬರ್ತೀರಾ? ಇರೋ ಹೆಣ್ ಮಕ್ಳುನ ಅಳುಸ್ತಾ ಇದ್ರೆ ನಿಮಗೆ ಕಣ್ರಲಾ ದರಿದ್ರ ಬರೋದು” ಎಂದು ಅಳುತ್ತ ನಮ್ಮನ್ನು ಬಯ್ಯುತ್ತಿದ್ದ ಅವಳ ಚಿತ್ರ ನೆನಪಾಯ್ತು.
* * *
ಮಂಗಳಮುಖಿಯರನ್ನು ಖೋಜಾ, ಒಂಭತ್ತು, ಸಂಗ, ಟೊಯ್ಯ, ಅಕ್ಕಯ್ಯ, ಹಮಾಮ್ಸ್ ಎಂದೆಲ್ಲ ಕರೆಯುತ್ತಿದ್ದ ದಿನಗಳಿಂದ ನನಗೆ ಅವರೆಂದರೆ ಅದೆಂತದೋ ಭಯ. ಭಯದ ಮುಂಚೆ ಕುತೂಹಲವಿತ್ತು. ನಾನು ಚಿಕ್ಕವನಿದ್ದಾಗ ‘ಅವರನ್ನು ತೀರಾ ಅಪರೂಪ ನೋಡುತ್ತಿದ್ದುದು, ಸ್ವಲ್ಪ ಹೆಣ್ಣುದನಿಯಿದ್ದರೂ, ಸ್ವಲ್ಪ ಸದರದಿಂದ ನಡೆದುಕೊಳ್ಳುತ್ತಿದ್ದರೂ ಅವರನ್ನು ‘ಒಳ್ಳೆ ಖೋಜಾ ತರ ಆಡ್ತಾನೆ’ ಎಂದು ಆಡಿಕೊಳ್ಳುತ್ತಿದ್ದರು. ಅವಾಗಲೆಲ್ಲ ‘ಅವರನ್ನು ಯಾಕೆ ಹಾಗೆ ಅನ್ನುತ್ತಾರೆ? ಹಾಗೆಂದರೆ ಏನು?’ ಎಂದು ಭಯಂಕರ ಕುತೂಹಲ ಕಾಡುತ್ತಿತ್ತು. ಆದರೆ ಯಾರನ್ನೂ ಕೇಳುವ ಹಾಗಿಲ್ಲ ಬಿಡುವ ಹಾಗಿಲ್ಲ. ಬಳಕುತ್ತ, ನಡೆಯುತ್ತ, ಆಗಾಗ ಸೆರಗನ್ನು ಅಲ್ಲಾಡಿಸುತ್ತ, ಕೈ ತಟ್ಟುತ್ತ, ಜೊತೆ ಯಾರಾದರೂ ಮಧ್ಯವಯಸ್ಕರನ್ನ ಕಂಡರೆ ಗಿಂಟುತ್ತ ಹೋಗುತ್ತಿದ್ದ ಅವರನ್ನು ಕಂಡು ಮಂತ್ರಮುಗ್ಧ ಆದವನಂತೆ ನೋಡುತ್ತಿದ್ದೆ. ಅವರು ಯಾಕೆ ಹಾಗೆ ಬಳುಕಿಯೇ ನಡೆಯುತ್ತಾರೆ? ಅವರು ಯಾಕೆ ಕೈ ತಟ್ಟುತ್ತಾರೆ? ಅವರಿಗೆ ಸದಾಕಾಲ ನಗುತ್ತ ಇರಲು ಹೇಗೆ ಸಾಧ್ಯ? – ಎಂಬೆಲ್ಲ ಉತ್ತರವಿಲ್ಲದ ಪ್ರಶ್ನೆಗಳಿಂದ ಅವರು ಇನ್ನಷ್ಟು ಕುತೂಹಲದ ಮೂಟೆಯಾಗಿ ನನಗೆ ಕಾಣಿಸತೊಡಗಿದರು.
ಆ ಕಾಲಕ್ಕೆ ಅವರು ಕಾಣಿಸುತ್ತಿದ್ದುದು ಕೆಲವೇ ಸ್ಥಳಗಳಲ್ಲಿ. ಒಂದು ಬಾರಿನ ಬಳಿ, ಇನ್ನೊಂದು ಹಮಾಮ್ಸ್ ಬಾತ್ ಬಳಿ. ಅದು ಬಿಟ್ರೆ ಅವರು ಮಾತ್ರವಿದ್ದ ವಠಾರಗಳ ಬಳಿಯಲ್ಲಿ. ಸ್ಕೂಲಿಗೆ ನಡೆದು ಹೋಗುವಾಗ ಬಾರನ್ನು ದಾಟಿಯೇ ಹೋಗಬೇಕಿತ್ತು. ಅಪರೂಪಕ್ಕೊಮ್ಮೆ ಅವರು ಕಾಣಿಸುತ್ತಿದ್ದರು. ಅಲ್ಲೇ ಕೌಂಟರ್ ಬಳಿ ಪ್ಲಾಸ್ಟಿಕ್ ಗ್ಲಾಸ್ ಹಿಡಿದು, ಕಡಲೆಪುರಿ ಭರ್ತಿ ಬಾಯಿಗೆ ಹಾಕಿಕೊಂಡು ಬಾಯಲ್ಲೇ ಉಳಿದ ಮದ್ಯವನ್ನು ಯಾವ ಮುಲಾಜಿಲ್ಲದೆ ಒರೆಸಿಕೊಂಡು ತೂರಾಡಿಕೊಂಡು ಹೋಗುತ್ತಿದ್ದರು. ಅವರು ತೂರಾಡುತ್ತ ಹೋಗುವುದನ್ನೇ ಬಾರಿನವರು, ಕುಡುಕರು, ಅಕ್ಕಪಕ್ಕದ ಅಂಗಡಿಯವರು ನಗುತ್ತ ಇನ್ನೇನು ಅವರು ತೂರಾಡುತ್ತ ಬೀಳುತ್ತಾರೆ ಅಂದಾಗ ವೇಗದಲ್ಲಿ ಬಗ್ಗಿ ನೋಡುತ್ತಿದ್ದ ಆಶ್ಚರ್ಯದ ಪ್ರಶ್ನಾರ್ಥಕದ ಬುರುಡೆಗಳು, ಮುಖಗಳು ನನಗೆ ಇನ್ನೂ ಕಣ್ಣಿಗೆ ಕಟ್ಟುವಂತಿದೆ.
ಅವರಿದ್ದ ವಠಾರಕ್ಕೆ ನಮ್ಮನ್ನು ಯಾವತ್ತೂ ಬಿಡಲಿಲ್ಲ. ಅವರು ವಾಸಿಸುವ ವಠಾರದ ಮುಂದೆ ಹೋಗುವಾಗ ಮಕ್ಕಳ ಕಣ್ಣುಗಳನ್ನು ಮುಚ್ಚಿ, ಕೈ ಹಿಡಿದು ದರದರ ಎಳೆದುಹೋಗಿಬಿಡುತ್ತಿದ್ದರು. ಅಕಸ್ಮಾತ್ ಕೈ ಬಿಡಿಸಿ ನೋಡಿಬಿಟ್ಟರೆ ಯಾವುದೇ ಕರುಣೆಯಿಲ್ಲದೆ ಮಕ್ಕಳಿಗೆ ಹೊಡೆದು, ಅವರ ವಠಾರದ ಮುಂದೆ ಉಗಿದು ಹೋಗುತ್ತಿದ್ದರು. ಹೀಗೆ ಕಣ್ಣು ಮುಚ್ಚಿಕೊಂಡು, ದರದರ ನಡೆದು ಎಳೆದುಕೊಂಡು ಹೋಗುವಾಗ, ಆ ಕೆಲವೇ ಕ್ಷಣಗಳಲ್ಲಿ ಸೀರೆ ಸೆರಗು ಬೀಳಿಸ್ಕೊಂಡು, ಕಾಲು ಅಗಲಿಸಿ ಕೂತುಕೊಂಡು, ತಲೆಯಲ್ಲಿ ಕೂದಲೇ ಇಲ್ಲದ ಬುರುಡೆ ಹೊತ್ತುಕೊಂಡು, ಪಾಕೆಟ್ ಸಾರಾಯಿ ಹಲ್ಲಿನಲ್ಲಿ ಜಗ್ಗುತ್ತ, ಅದರಿಂದ ಎಗರಿದ ಸಾರಾಯಿ ಹನಿಗಳ ಚಿತ್ರ ಎಂದೂ ಅಳಿಸಲಾಗದ ಮೆಮೊರಿ ರಿಜಿಸ್ಟರಿನಲ್ಲಿ ಕೂತುಬಿಟ್ಟಿದೆ.
ನಮ್ಮ ಸ್ಕೂಲಿನಲ್ಲಿ ಹುಡುಗರು ಶೌಚಾಲಯಕ್ಕೆ ಹೋಗುತ್ತಿದ್ದ ಬಯಲಿನ ಒಂದು ಬದಿಗೆ ಹಮಾಮ್ಸ್ ಬಾತ್ ಇತ್ತು. ಅಲ್ಲಿ ಏನು ಇದೆ ಎಂಬ ಭಯಂಕರ ಕುತೂಹಲ. ಎಷ್ಟೋ ಸಲ ಅದರ ಮುಂದೆ ನಡೆಯಲಾಗದೆ, ಭಯಕ್ಕೆ ಓಡಿ ಹೋಗುತ್ತಿದ್ದೆವು. ಅಲ್ಲಿ ಬರುತ್ತಿದ್ದ ಜನರು ಕಮ್ಮಿ, ಹೊರಗಡೆ ಮೀಸೆ ಇರುವ ವ್ಯಕ್ತಿಯ ಪೇಂಟಿಂಗ್, ಅದರ ಕೆಳಗೆ ಹಮಾಮ್ಸ್ ಬಾತ್ ಅಂತ ಹಾಕಿ, ಸ್ನಾನಕ್ಕೆ ಗಂಟೆಗೆ 10 ರೂಪಾಯಿ ಎಂದು ಇರುತ್ತಿತ್ತು. ಸ್ನಾನ ಮಾಡಲು ಹತ್ತು ರೂಪಾಯಿ ಕೊಡಬೇಕಾ ಎಂಬುದಕ್ಕಿಂತ, ಅಲ್ಲಿ ಬಂದು ಯಾರು ಸ್ನಾನ ಮಾಡುತ್ತಾರೆ ಎನ್ನುವ ಕುತೂಹಲ. ಪ್ರೌಢಶಾಲೆ ತಲಪಿದಾಗ ನನಗೆ ಗೊತ್ತಾದುದು ಅದು ಮಂಗಳಮುಖಿಯರು ನಡೆಸುವ ಸ್ನಾನದ ಮನೆ. ಅಲ್ಲಿಗೆ ಬೇರೆ ಊರಿನ ಆಟೋಡ್ರೈವರ್, ಟ್ರಕ್ಕು ಓಡಿಸೋರು ಬಂದು ಸ್ನಾನ ಮಾಡುತ್ತಾರೆ, ಅವರಿಗೆ ಮಂಗಳಮುಖಿಯರೇ ಸ್ನಾನ ಮಾಡಿಸುತ್ತಾರೆ – ಎಂದು. ಅದು ತಿಳಿದ ಮೇಲಂತೂ ಆ ಜಾಗ ನನಗೆ ಭಯಮಿಶ್ರಿತ ಕುತೂಹಲ ಹುಟ್ಟಿಸುವ ಅನ್ಯ ಜಾಗದಂತೆ ಕಾಣಿಸತೊಡಗಿತು. ಆ ಕಡೆ ಹೋದಾಗಲೆಲ್ಲ ಏನಾದರೂ ಕಾಣಿಸಬಹುದಾ, ಯಾರಾದರೂ ಕಾಣಿಸಬಹುದಾ ಎಂದು ನೋಡುತ್ತಿದ್ದೆ. ನಾವು ನೋಡುವುದನ್ನು ಒಳಗಿನಿಂದ ಯಾರೋ ಗಮನಿಸಿ ನಮಗೆ ಕಾಣಿಸದಂತೆ ‘ಏಯ್ ಯಾರೋ ಅಲ್ಲಿ? ಬನ್ರೋ ನನ್ಮಕ್ಕಳ…’ ಎನ್ನುವ ಧ್ವನಿ ಕೇಳಿದಾಗ ನಾವೆಲ್ಲ ಎದ್ವೋ ಬಿದ್ವೋ ಅಂತ ಓಡಿ ತರಗತಿ ಸೇರಿಕೊಂಡು ಬಿಡುತ್ತಿದ್ದೆವು.
ಒಂದು ದಿನ ನಾನು ಅಲ್ಲಿ ಹೋಗಿ ಒಂದು ಮಾಡಿ ಬರುವಾಗ ಹಮಾಮ್ಸ್ ಕಡೆ ತಲೆಹಾಕಿದೆ. ಕುತೂಹಲದಿಂದ ಏನಾದರೂ ಕಾಣಿಸಬಹುದಾ ಎಂದು ನೋಡಿದೆ. ಬಾಗಿಲಿನಿಂದ ಸ್ವಲ್ಪ ದೂರದಲ್ಲಿ ಬೋಳುತಲೆಯ ಮಂಗಳಮುಖಿ, ಸೀರೆಯ ಸೆರಗನ್ನು ಕೈಯಲ್ಲಿ ಹಿಡಿದು, ತೊಡೆಯ ಮೇಲೆ ಯಾರನ್ನೋ ಮಲಗಿಸಿಕೊಂಡು ಗಾಳಿ ಬೀಸುತ್ತಿದ್ದಾರೆ; ತೊಡೆಯ ಮೇಲೆ ಮಲಗಿದ ಅರ್ಧಬೆತ್ತಲೆಯವ ಅವಳ ಕೆನ್ನೆಯ ಮೇಲೆ ಕೈ ಇಟ್ಟು ಸವರುತ್ತಿದ್ದಾನೆ. ಅದನ್ನು ನೋಡಿ ನನಗೆ ಕೈ-ಕಾಲು ನಡುಕ ಶುರುವಾಯ್ತು. ಬೆವರುತ್ತಿದ್ದೆ. ಹಾಗೆ ಅಲ್ಲೇ ಯಾಕೆ ನೋಡುತ್ತ ನಿಂತೆನೋ ಗೊತ್ತಿಲ್ಲ. ಹಾಗೆ ನಿಲ್ಲಿಸಿದ ಶಕ್ತಿ ಯಾವುದು ಗೊತ್ತಿಲ್ಲ. ಹಾಗೆ ನೋಡುವಾಗ ಬೋಳುತಲೆಯ ಮಂಗಳಮುಖಿ ನನ್ನತ್ತ ತಿರುಗಿ, ನನ್ನ ನೋಡಿ ‘ಏಯ್ ಯಾವನೋ ಅವನು? ನಿಂತ್ಕೋ ನಿಂಗೆ ಮಾಡ್ತೀನಿ’ ಎಂದು ಹೇಳಿದ್ದೆ ತಡ ಹುಚ್ಚು ನಾಯಿಯ ತರ ಓಡಿದೆ. ಓಡಿ ತರಗತಿ ಸೇರಿದೆ. ಆ ದೃಶ್ಯ ಹೆಚ್ಚುಕಮ್ಮಿ ಎರಡು-ಮೂರು ತಿಂಗಳ ಕಾಲ ಪದೇ ಪದೇ ನೆನಪಾಗಿ ಎಂತದೋ ಭಯದ ಅಲೆಗಳು ಎದೆಯಲ್ಲಿ ಎದ್ದು ಒದ್ದಾಡುತ್ತಿದ್ದೆ. ಆ ನಂತರ ಆ ಕಡೆ ತಲೆ ಹಾಕಲೇ ಇಲ್ಲ.
* * *
ಚಂದ್ರಾ ಲೇಔಟ್ನ ರಸ್ತೆ ಬದಿಯಲ್ಲಿ ಏಕಾಏಕಿ ನನ್ನಿಂದ ನಾನೂರು ಕಿತ್ತುಕೊಂಡು ಹೋದ ಮೇಲೆ ನನಗೆ ಮಂಗಳಮುಖಿಯರನ್ನು ಕಂಡರೆ ಆಗುತ್ತಿರಲಿಲ್ಲ. ಅವರ ವಿಷಯ ಬಂದಾಗಲೆಲ್ಲ ಅವರನ್ನು ಎಷ್ಟು ಶಪಿಸಬಹುದೋ ಅಷ್ಟು ಶಪಿಸಿ, ಎಷ್ಟು ಬೈಯಬಹುದೋ ಅಷ್ಟು ಬೈದು, ಅವರು ಈ ಭೂಮಿಯಲ್ಲಿ ಬದುಕಲು ಲಾಯಕ್ ಆದವರಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದೆ. ಈ ವಿಷಯವಾಗಿ ಒಮ್ಮೊಮ್ಮೆ ವಾಗ್ಯುದ್ಧಗಳು ನನ್ನ ಸ್ನೇಹಿತರ ವಲಯದಲ್ಲಿ ನಡೆಯುತ್ತಿದ್ದವು, ಎಂದೋ ಒಟ್ಟಿಗೆ ಸೇರಿ ಕಾಡ್ರ್ಸ್ ಆಡುವಾಗಲೋ, ಮತ್ಯಾವುದೋ ಸೋಷಿಯಲ್ ಪೊಲಿಟಿಕಲ್ ವಿಷಯ ಬಂದಾಗಲೋ, ವೈಯಕ್ತಿಕ ಲೈಂಗಿಕ ಹಕ್ಕುಗಳ ವಿಚಾರ ಬಂದಾಗಲೋ ಅವರ ಸ್ಥಿತಿಗತಿ ಬಗ್ಗೆ, ಜೊತೆಗೆ ಅವರ ಅಸ್ತಿತ್ವದ ಬಗ್ಗೆ ಮಾತಾಡುತ್ತಿದ್ದೆವು. ನನ್ನಿಂದ ಅವರು ನಾಲ್ಕು ಐನೂರರ ನೋಟು ಕಿತ್ತುಕೊಂಡು ಹೋದದ್ದನ್ನು ನಾನು ಯಾರಿಗೂ ಹೇಳಲೇ ಇಲ್ಲ. ಹೇಳಿದರೆ ನನ್ನ ಮರ್ಯಾದೆಯೇ ಹೋಗುವುದೆಂದು ಗೊತ್ತಾಗಿ ಅದನ್ನು ಹಾಗೆಯೆ ಮಣ್ಣುಮಾಡಿದ್ದೆ.
ಇದಾಗಿ ಎಷ್ಟೋ ತಿಂಗಳಾದ ಮೇಲೆ ನಾನೂ ನನ್ನ ಸ್ನೇಹಿತರೂ ಮುಂಬಯಿಗೆ ಕಾರಿನಲ್ಲಿ ಹೋಗುತ್ತಿರುವಾಗ ಮತ್ತೆ ಅವರ ವಿಷಯ ಬಂತು. ನಾನು ನನ್ನ ಅಸಹನೆ ವ್ಯಕ್ತಪಡಿಸುತ್ತಿದ್ದೆ; ಅವರು ಈ ಸಮಾಜಕ್ಕೆ ಅಷ್ಟು ಮುಖ್ಯವಲ್ಲ ಎಂದು ಹೇಳುತ್ತಿದ್ದೆ. ನಮ್ಮ ಜೊತೆಯಲ್ಲಿದ್ದ ಶ್ರೀಧರ ಕಾರು ಓಡಿಸುತ್ತ್ತ “ಹಂಗೆಲ್ಲಾ ಹೇಳಬೇಡ ಮಗಾ, ಅವರ ಬದುಕು ನಾವು ಹೇಳಿದಷ್ಟು ಸುಲಭವಲ್ಲ. ಅವರಿಗೂ ಎಲ್ಲ ಕಡೆ ಮರ್ಯಾದೆ ಸಿಗಬೇಕು” ಎಂದು ವಾದಿಸುತ್ತಿದ್ದ. ವಿಷಯ ಕೊನೆಗೆ ಅವರು ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವುದು ಸರಿಯಾ ತಪ್ಪಾ ಎಂಬ ಕಡೆಗೆ ತಿರುಗಿತು. ಆಗ ಶ್ರೀಧರ ಎಲ್ಲ ಸರ್ಕಾರಿ ನೌಕರಿಯಲ್ಲಿ ಅವರಿಗೆ ಅಂತ ಉದ್ಯೋಗ ಕೊಟ್ಟರೆ, ಬೇರೆ ಬೇರೆ ವಲಯದಲ್ಲೂ ಉದ್ಯೋಗ ಕೊಟ್ಟರೆ, ಅವರನ್ನು ನಮ್ಮವರಲ್ಲಿ ಒಬ್ಬರು ಎನ್ನುವಂತೆ ನೋಡಿಕೊಂಡರೆ, ಅವರು ಯಾಕೆ ಭಿಕ್ಷೆ ಬೇಡುತ್ತಾರೆ – ಅಂದು ವಾದಿಸುತ್ತಿದ್ದ. ಅದಕ್ಕೆ ಬೆಂಬಲವಾಗಿ ಭೂಷಣ “ಹೌದು ಗುರು, ಅವರು ಕೂಡ ಮನುಷ್ಯರೇ ತಾನೇ? ಒಂದು ದೇವರು ಅವರಿಗೆ ದೈಹಿಕವಾಗಿ ನಮಗಿಂತ ಹೆಚ್ಚೇನೋ ಕೊಟ್ಟಿರುತ್ತಾನೆ, ಇಲ್ಲ ಕೊಡಬೇಕಿರುವುದನ್ನು ಕೊಟ್ಟಿರೋಲ್ಲ. ಅಷ್ಟಕ್ಕೇ ಅವರನ್ನು ಮನುಷ್ಯರೇ ಅಲ್ಲ ಅನ್ನುವುದು ಸರಿ ಇಲ್ಲ” ಎಂದು ತುಪ್ಪ ಸವರಿದ. ವಿಷಯ ಹೀಗೆ ಎಲ್ಲೆಲೋ ಹರಿದು ಹೋಗುವಾಗ ನನಗೆ ನೆನಪಾಗುತ್ತಿದ್ದುದೇ ನನ್ನ ಪರ್ಸಿನಿಂದ ನೋಟುಗಳನ್ನು ಎಣಿಸಿ, ರವಕೆಯೊಳಗೆ ಸೇರಿಸಿಕೊಂಡು ಓಡಿಹೋದ ಅವರು. ಮತ್ತೆ ಅಲ್ಲಿ ನಡೆಯುತ್ತಿರಬಹುದಾ ವಾದ ಎಲ್ಲಿಗೆ ಬಂದು ನಿಂತಿದೆ ಎಂದು ಕೇಳಿಸಿಕೊಳ್ಳುವಾಗ, ಶ್ರೀಧರ ಮಂಗಳಮುಖಿಯರು ಎಷ್ಟು ಅದೃಷ್ಟವಂತರು, ಅವರಿಂದ ಅವನಿಗೆ ಒದ್ದುಕೊಂಡು ಬಂದ ಅದೃಷ್ಟದ ಬಗ್ಗೆ ಹೇಳುತ್ತಿದ್ದ. ಶ್ರೀಧರನ ಬದುಕು ಬದಲಾಗಲು ಒಬ್ಬ ಮಂಗಳಮುಖಿಯೇ ಕಾರಣ ಎಂದು ಆ ಘಟನೆ ನೆನಪಿಸ್ಕೊಂಡು ಹೇಳತೊಡಗಿದ
“ಗುರು, ನೀವು ನಂಬೋಲ್ಲ, ನಂಗೂ ಮೊದಲು ಅವರು ಅಂದರೆ ತುಂಬಾ ಭಯ ಆಗ್ತಾ ಇತ್ತು. ಅವರೇನಾದ್ರೂ ಕಾಣಿಸಿಕೊಂಡರೆ ಅಲ್ಲಿಂದ ಮೊದಲು ಜಾಗ ಖಾಲಿ ಮಾಡಿಬಿಡ್ತಾ ಇದ್ದೆ. ನನಗೆ ಇನ್ನೂ ನೆನಪಿದೆ – ನಮ್ ಶೇಷಾದ್ರಿಪುರಂ ಕಾಲೇಜ್ ಹೊರಗಡೆ ನಾವೆಲ್ಲ ಹುಡುಗರಿಗೆ ಅಲ್ಲೊಂದು ಅರಳಿಕಟ್ಟೆ ತರ ಜಾಗ ಇದೆ, ಅದೇ ನಮ್ ಅಡ್ಡಾ. ಅಲ್ಲಿ ನಾವೆಲ್ಲ ಕೂತು ಹರಟೆ ಹೊಡೀತಿದ್ವಿ. ಒಂದು ದಿನ ಅವರು ಬಂದುಬಿಟ್ರು. ‘ಹೇ ದುಡ್ ಕೊಡ್ರೋ’ ಅಂತ ಕೈ ತಟ್ಟಿಕೊಂಡು ದುಡ್ಡು ಕೇಳ್ತಾ ಇದ್ರು. ನನಗೆ ಸಖತ್ ಭಯ. ಏನಪ್ಪಾ ಮಾಡೋದು ಅಂತ ಕೂತಿದ್ದೆ. ಒಂದು ಕಡೆಯಿಂದ ದುಡ್ಡು ತಗೊಂಡು ಬರ್ತಾ ಇದ್ರೂ, ನನ್ ಫ್ರೆಂಡ್ಸ್ ಎಲ್ಲ ಒಂದು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿ ಕೊಡ್ತಾ ಇದ್ರೂ ನನ್ ಜೇಬಲ್ಲಿ ಒಂದು ಬಸ್ಪಾಸ್ ಬಿಟ್ರೆ ಏನಿಲ್ಲ. ಏನಪ್ಪಾ ಮಾಡೋದು ಅಂತ ಒದ್ದಾಡ್ತಾ ಇದ್ದೆ. ಕೊನೆಗೆ ನನ್ ಹತ್ರ ಬಂದು ಕೇಳಿದ್ರು. ನನಗೆ ಆ ಟೈಮಲ್ಲಿ ಏನ್ ಅನಿಸಿತೋ ಏನೋ ಆ ಸಮಯದಲ್ಲಿ ಆ ಪದ ಹೆಂಗ್ ಬಂತೋ ಗೊತ್ತಿಲ್ಲ. ‘ಸಾರಿ ಅಮ್ಮ, ನನ್ನ ಹತ್ರ ದುಡ್ಡಿಲ್ಲ’ ಅಂದೆ. ಅವರಿಗೆ ಅದೇನ್ ಅನ್ನಿಸಿತೋ ಗೊತ್ತಿಲ್ಲ. ಅವರ ಕೈಯಲ್ಲಿದ್ದ ಒಂದು ರೂಪಾಯಿ ಕಾಯಿನ್ ತೆಗೆದುಕೊಂಡು, ಅದೆಂತದೋ ಮಂತ್ರ ಹೇಳಿ, ಅವರ ಹಣೆಗೆ ಭುಜಕ್ಕೆ ಒತ್ತಿಕೊಂಡು ಕಣ್ಮುಚ್ಚಿ ನನಗೆ ಕೊಟ್ಟು ಹೋಗಿಬಿಟ್ರು! ನೀವು ನಂಬೊಲ್ಲ, ಅವತ್ತಿನಿಂದ ಇವತ್ತಿನವರೆಗೂ ನಾನು ಯಾರ್ ಹತ್ರನೂ ದುಡ್ಡಿಗೆ ಕೈ ಚಾಚಿಲ್ಲ. ಅವರು ಕೊಟ್ಟ ಒಂದು ರೂಪಾಯಿ ಕಾಯಿನ್ ಇನ್ನೂ ನನ್ ಪರ್ಸ್ನಲ್ಲಿದೆ. ನನಗೆ ಸ್ಟ್ರಾಂಗ್ ಫೀಲಿಂಗ್ ಅವರನ್ನ ನೋಡುದ್ರೆ ಅವರಲ್ಲಿ ಏನೋ ಶಕ್ತಿ ಇದೆ ಅಂತ.”
ಇರೋದನ್ನ ಸ್ವಲ್ಪ ಮಸಾಲೆ ಸೇರಿಸಿ ಮಾತಾಡೋದು ಶ್ರೀಧರ, ಅವನು ಹೇಳಿದ ಈ ಕತೆಯಲ್ಲಿ ಅದೆಷ್ಟು ಮಸಾಲೆ ಹಾಕಿದ್ನೋ, ಇಲ್ವೋ ಗೊತ್ತಿಲ್ಲ. ಆದರೆ ಒಂದಂತೂ ನಿಜ ಆತ ಯಾರ ಮುಂದೆಯೂ ಹಣಕ್ಕೆ ಕೈ ಚಾಚಿದ್ದು ನಾವು ಯಾವತ್ತೂ ಕೇಳಿಲ್ಲ, ನೋಡಿಲ್ಲ. ವರ್ಷದಿಂದ ವರ್ಷ ನಮ್ಮ ಊಹೆಗೂ ಮೀರಿ ಬೆಳೆದಿದ್ದ. ಮಂಗಳಮುಖಿಯನ್ನು ಅಮ್ಮ ಎಂದು ಕರೆದು ಅವರ ಹತ್ತಿರ ಒಂದು ರೂಪಾಯಿ ಕಾಯಿನ್ ಪಡೆದು ಅವನ ಅದೃಷ್ಟ ಕುದುರಿದ ಹಾಗೆ, ನನ್ನಿಂದ ಅವರು ಹಣ ಕಿತ್ತುಕೊಂಡು, ಅದೃಷ್ಟವನ್ನು ಕಿತ್ತುಕೊಂಡು ಹೋಗಿಬಿಟ್ರಾ – ಅನ್ನೋ ಒಂದು ಪ್ರಶ್ನೆ ಮನಸ್ಸಿನಲ್ಲಿ ಮೂಡಿ, ಭವಿಷ್ಯದ ಭಯವಾಗಿ, ಅವನು ಹೇಳಿದ ಅಷ್ಟು ಕತೆ ಸುಳ್ಳಾಗಿರಲಿ, ಸುಳ್ಳಾಗಿರುತ್ತೆ ಎಂದುಕೊಂಡೆ.
* * *
ಬೆಂಗಳೂರು ಬೆಳೆದಂತೆ ರಸ್ತೆಗಳು ಬಂದು ಇಳಿದವು, ರಸ್ತೆಗಳು ಬೆಳೆದಂತೆ ಸರ್ಕಲ್ಲುಗಳು ಸೃಷ್ಟಿ ಆದವು, ಸರ್ಕಲ್ಲಿಗೊಂದು ಸಿಗ್ನಲ್ಲು, ಪ್ರತಿಮೆ ಬಂದು ಕೂತವು. ಯಾವಾಗ ಸರ್ಕಲ್ಲುಗಳು ಬೆಳೆದು ಟ್ರಾಫಿಕ್ಕು ಬೆಳೆದು, ಗಾಡಿಗಳು ಕೆಂಪುದೀಪಕ್ಕೆ ಬಯ್ಯುತ್ತ ಸರ್ಕಲ್ಲಿನಲ್ಲಿ ನಿಂತವೋ, ಅವಾಗ ಮಂಗಳಮುಖಿಯರು ಕಾಣಿಸತೊಡಗಿದರು. ಸ್ವಲ್ಪ ಹಂಗೆ ಯೋಚಿಸಿ ನೋಡಿದರೆ ಬೆಂಗಳೂರು ಬೆಳೆದಂತೆ ಮಂಗಳಮುಖಿಯರ ಸಂಖ್ಯೆಯೂ ಬೆಳೆಯಿತಾ ಅನ್ನೋ ಸಣ್ಣ ಅನುಮಾನ ಕೂಡ ನನಗೆ. ಪ್ರತಿಸಲ ಸರ್ಕಲ್ಲಿನಲ್ಲಿ ನಿಂತಾಗ, ಮೊದಲು ಕಣ್ಣು ಹೋಗುವುದು ಅವರು ಯಾರಾದರೂ ಇದ್ದಾರಾ ಅಂತ. ಇದೆಂತ ಭಯ? ಈ ಭಯದ ಮೂಲ ಯಾವುದು ಅಂತ ತುಂಬಾ ಸಲ ಯೋಚಿಸಿದ್ದೇನೆ. ಅದು ಅವರು ನನ್ನ ಮುಟ್ಟುವರು ಎಂಬ ಭಯವೇ? ಇಲ್ಲ ಜೇಬಿನಿಂದ ದುಡ್ಡು ಕಸಿದುಬಿಡುತ್ತಾರೆ ಎಂಬ ಭಯವೇ? ಇಲ್ಲ ಮತ್ತೇನೋ ಮಾಡಿ ಅಕ್ಕಪಕ್ಕದವರು ನೋಡಿದರೆ ಅವಮಾನ ಎಂಬ ಭ್ರಮೆಯಾ? ಗೊತ್ತಿಲ್ಲ. ಒಟ್ಟಿನಲ್ಲಿ ಸಿಗ್ನಲ್ ಕೆಂಪುಬಣ್ಣಕ್ಕೆ ತಿರುಗಿದರೆ ಕೆಂಪುಬಣ್ಣದ ದೀಪದ ಮೇಲೆ ಇರುವ ಟೈಮರ್ ಟೈಮ್ ಬಾಂಬ್ ತರ ನನಗೆ ಪ್ರತಿ ಸೆಕಂಡುಗಳನ್ನು ಜೊತೆಗೆ ಪ್ರತಿ ಸೆಕಂಡಿಗೂ ಚಲನೆಯಲ್ಲಿರುವ ಮಂಗಳಮುಖಿಯರನ್ನು ನೋಡುತ್ತ ಇರುತ್ತೇನೆ. ಸಿಗ್ನಲ್ನ ಆಸುಪಾಸಿನಲ್ಲಿ ಪಾನ್ ಜಗಿಯುತ್ತಲೋ ಇಲ್ಲ ಸೆರಗು ಹರಿಬಿಟ್ಟು ಖುಲ್ಲಂಖುಲ್ಲಾಗಿ ಹಾಡು ಹಾಡುತ್ತಲೋ, ಅಲ್ಲೇ ನಿಂತ ಪೋಕರಿಗಳನ್ನು, ಟ್ರಾಫಿಕ್ ಪೊಲೀಸರನ್ನು ಛೇಡಿಸುತ್ತ ನಿಂತ ಅವರು ಒಂದು ಕಣ್ಣನ್ನು ಸದಾಕಾಲ ಸಿಗ್ನಲ್ ಮೇಲೆ ಇಟ್ಟಿರುತ್ತಾರೆ. ಅವರಿಗೆ ಕೆಂಪು ಸಿಗ್ನಲ್ ಎಂದರೆ ಪ್ರೀತಿ. ಹಸಿರೆಂದರೆ ಮೂತಿ ಮುರಿದು ಶಾಪ ಹಾಕುತ್ತಾರೆ. ಸಿಗ್ನಲ್ ಬಿದ್ದೊಡನೆ ಯಾವ ಮುಲಾಜಿಲ್ಲದೆ ಕೈ ತಟ್ಟುತ್ತ ಶುರು ಮಾಡುತ್ತಾರೆ, ಕೈ ಮುಂದೆ ನೀಡಿ ಕೇಳುತ್ತಾರೆ. ಕೊಟ್ಟರೆ ಹೂನಗೆ ಚೆಲ್ಲುತ್ತಾರೆ, ಕೊಡದೆ ಸತಾಯಿಸಿದರೆ ಗಲ್ಲ ಗಿಂಟಿ ಮುಂದಿನ ವಾಹನದ ಸವಾರನತ್ತ ನಗು ಚೆಲ್ಲುತ್ತಾರೆ. ಎಷ್ಟೋ ಸಲ ನಾನು ನನ್ ಹತ್ರ ಇಲ್ಲ ಎಂದು ಗೋಣು ಅಲ್ಲಾಡಿಸಿದಾಗ ನನ್ನ ಮೂತಿ ತಿವಿದು ಹೋಗಿದ್ದಾರೆ. ನನ್ನ ಹಿಂದೆ ನನ್ನ ಪ್ರೇಯಸಿಯೋ, ಈ ಕಾಲಕ್ಕೆ ಹೆಂಡತಿಯಾದ ಅದೇ ಪ್ರೇಯಸಿ ಕೂತಾಗ, ನನ್ನಲ್ಲೊಂದು ಮಾನವೀಯತೆ ಮೈ ತಳೆದು ಅವಳನ್ನ ಕೇಳುತ್ತೇನೆ ‘ಚೇಂಜ್ ಇದೆಯ?’ ಇದ್ದರೆ ಕೊಟ್ಟು ಸಿಗ್ನಲ್ ಬಿಟ್ಟೊಡನೆ ಹೋಗಿಬಿಡೋದು. ಒಮ್ಮೊಮ್ಮೆ ಶ್ರೀಧರನ ಮಾತು ನಿಜವಿರಬಹುದು ಎಂದು ಹತ್ತು ರೂಪಾಯಿ ನೋಟು ಕೊಟ್ಟದ್ದು ಉಂಟು. ಹಾಗೆ ಕೊಟ್ಟಾಗ ಕೆಲವು ಮಂಗಳಮುಖಿಯರು ತಲೆ ಮುಟ್ಟಿ ಒಳ್ಳೆಯದಾಗಲಿ ಎಂದರೆ, ಇನ್ನು ಕೆಲವರು ತನ್ನ ಕೈಲಿ ಇರುವ ಒಂದು ರೂಪಾಯಿ ಕಾಯಿನ್ ಆಶೀರ್ವದಿಸಿ ಕೊಟ್ಟು ಹೋಗುತ್ತಾರೆ. ಆದರೂ ಒಂದು ಸಲ ಒಂದು ರೂಪಾಯಿ ಕೊಡದೆ ಸುಮ್ಮನೆ ಕುಳಿತುಕೊಳ್ಳುವ, ಒಮ್ಮೊಮ್ಮೆ ದುಡ್ಡು ಇದ್ದರೂ ಕೊಡಲು ತಡವರಿಸುವ, ಒಮ್ಮೊಮ್ಮೆ ಉದಾರಿಯಾಗಿ ಹತ್ತು ರೂಪಾಯಿ ಕೊಡುವ ಈ ನನ್ನ ದಿಕ್ಕೆಟ್ಟತನಕ್ಕೆ ಏನನ್ನಬಹುದು ಗೊತ್ತಿಲ್ಲ. ಸಿಗ್ನಲ್ನಲ್ಲಿ ಮಂಗಳಮುಖಿಯರು ನಿರಪಾಯಿಗಳು, ತುಂಬಾ ಕಮ್ಮಿ ಅವರು ಶಾಪ ಹಾಕಿರೋದು, ಬೈದಿರೋದು ನೋಡಿದ್ದು. ಕೆಲವು ಸಲ ಯಾರೋ ಮಂಡೆಗೆಟ್ಟವರು ಅವರು ದುಡ್ಡು ಕೇಳಿದಾಗ, ಎಂದಿನಂತೆ ಕೆನ್ನೆ ಜಿವುಟಿದಾಗ, ಇಲ್ಲ ಜೇಬಿಗೆ ಕೈ ಹಾಕಿದಾಗ, ‘ಏಯ್ ಎತ್ತೋ’ ಅಂತಲೋ, ಇನ್ನೆಂತಹುದೋ ಅವಾಚ್ಯ ಶಬ್ದ ಬಳಸಿ ಬೈದಾಗ ಮಂಗಳಮುಖಿಯರು ಕೆರಳುತ್ತಾರೆ. ಆಗಂತೂ ಅವರನ್ನು ನೋಡಲಿಕ್ಕಾಗಲ್ಲ. ಥೇಟು ವೀರಭದ್ರ ಇಲ್ಲವೇ ಮಹಾಕಾಳಿಯರೇ ಸರಿ.
ಒಮ್ಮೆ ನಾನು ಕಾಲೇಜಿನಿಂದ ಮನೆಗೆ ಹೋಗುವಾಗ ಯಾವುದೋ ಸಿಗ್ನಲ್ನಲ್ಲಿ ಹೀಗೆ ಯಾರೋ ಅವರನ್ನು ರೇಗಿಸಿ, ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಅದಕ್ಕೆ ಮಂಗಳಮುಖಿಯರೆಲ್ಲ ರೊಚ್ಚಿಗೆದ್ದು, ಬೈದವನನ್ನು ಸುತ್ತುವರಿದು, ಸೀರೆ ಕಿತ್ತೆಸೆದು, ರವಕೆ ಬಿಚ್ಚಿ ಸೀರೆ ಎತ್ತಿ, ಅವನಿಗೆ ಬೈದ ದೃಶ್ಯ ನನ್ನ ಕಣ್ಣಲ್ಲಿನ್ನೂ ಹಾಗೆಯೆ ಇದೆ. ಅವರೊಂಥರಾ ಸಮುದ್ರ – ಶಾಂತ ಮತ್ತು ರೌದ್ರ.
* * *
ನಾನು ಡಿಪ್ಲೊಮಾ ಓದಿದ್ದು ಕಬ್ಬನ್ಪಾರ್ಕ್ ಹತ್ತಿರದ ಕಾಲೇಜಿನಲ್ಲಿ. ಪ್ರತಿ ಸಲ ಇಂಟರ್ನಲ್ಸ್ ಬಂದಾಗ ನಾವು ಹೋಗಿ ಸೆಟಲ್ ಆಗುತ್ತಿದ್ದುದು ಕಬ್ಬನ್ಪಾರ್ಕಿನಲ್ಲಿ. ಕಾಲೇಜಿನ ಗ್ರೌಂಡ್, ಕ್ಲಾಸು, ಲೈಬ್ರರಿ, ಕ್ಯಾಂಟೀನ್ ಎಲ್ಲ ಕಡೆ ಅಲ್ಲಲ್ಲೇ ಸಣ್ಣ ಗುಂಪು ಮಾಡಿಕೊಂಡು ಓದುತ್ತಿದ್ದಾಗ ಜಾಗ ಹುಡುಕುವುದು ಕಷ್ಟದ ಕೆಲಸ. ಹಾಗಾಗಿ ಕಬ್ಬನ್ಪಾರ್ಕ್ ಓದಿಕೊಳ್ಳಲು ಹೇಳಿ ಮಾಡಿಸಿದ ಜಾಗ. ಮಧ್ಯಾಹ್ನ ಚೆನ್ನಾಗಿ ತಿಂದು, ಹೋಟೆಲಿನಿಂದ ರಸ್ತೆ ದಾಟಿ, ಸೆಂಟ್ರಲ್ ಲೈಬ್ರರಿ ಆಚೆಗೆ ಹೋಗಿ ಕೂತುಬಿಡುತ್ತಿದ್ದೆವು. ನಮ್ಮಲ್ಲೂ ಕೆಲವರು ಹುಡುಗರು ಒಟ್ಟಿಗೆ ಓದಲು ಬಯಸದೆ ದೂರ ಕುಳಿತು ಕೂಡ ಓದುತ್ತಿದ್ದರು, ಗುಂಪಿನಲ್ಲಿ ಒಂದಿಬ್ಬರು ಇತ್ತ ಓದಲು ಪುಸ್ತಕ ತೆಗೆದು ಓದಿಕೊಳ್ಳದೆ ಅಲ್ಲೇ ಅಡ್ಡಾಡುವ ಯುವ ನವಪ್ರೇಮಿಗಳನ್ನು, ಅಲ್ಲೆಲ್ಲೋ ದೂರ ಕುಳಿತು ಮುತ್ತಿಡುತ್ತ ಕೂತ ರತಿ ಮನ್ಮಥರನ್ನು, ಇನ್ನೆಲ್ಲೋ ಹಸಿರುಹುಲ್ಲಿನಲ್ಲೇ ಮಲಗಿ ಒದ್ದಾಡುವ ಭಯಂಕರ ಪ್ರೇಮಿಗಳನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದೆವು.
ಒಂದು ಸಲ ನಮ್ಮೆಲ್ಲರ ಉತ್ಸಾಹ ನೋಡಿ, ನಮ್ಮ ಗುಂಪಿನಲ್ಲೇ ಹಿರಿಯನಾದ ಶ್ರೀನಿ “ಬನ್ರೋ ಲೇ ನಿಮಗೆ ಕಾಂಡೊಮ್ ಮರ ತೋರಿಸ್ತೀನಿ” ಎಂದ. ನಮಗೆಲ್ಲ ಆಶ್ಚರ್ಯ, ನಮ್ಮ ಶೀನ ಎರಡನೇ ವರ್ಷಕ್ಕೆ ನಮ್ಮ ಜೊತೆ ಬಂದದ್ದು; ಅವನು ಹತ್ತನೇ ತರಗತಿ ಮುಗಿಸಿ, ಐಟಿಐ ಮುಗಿಸಿ, ಆಮೇಲೆ ಡಿಪ್ಲೊಮಾ ಸೇರಿದ್ದು. ಹಾಗಾಗಿ ಅವನು ಈ ತರದ ವಿಷಯಗಳಲ್ಲಿ ನಮಗೆ ಗುರು. ನಮ್ಮಲ್ಲಿ ಕುತೂಹಲದ ಗೂಡಾಗಿ, ಮೊಟ್ಟೆ ಇಟ್ಟುಕೊಂಡ ಎಷ್ಟೋ ವಿಷಯಗಳನ್ನು ಮರಿ ಮಾಡಿದ ಕೀರ್ತಿ ಅವನಿಗೆ ಸಲ್ಲಬೇಕು. ಹೆಣ್ಣುಮಕ್ಳು ಎಷ್ಟು ದಿನಕ್ಕೆ ಋತುಮತಿ ಆಗ್ತಾರೆ, ಪ್ರಣಯ ಎಂದರೆ ಏನು, ಹಾದರ ಅಂದ್ರೆ ಏನು ಅಲ್ಲದೆ, ನಮಗೆಲ್ಲ ನಿದ್ದೆಗೆಡಿಸುವ ರೋಚಕ ಕತೆಗಳನ್ನು ಅವನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ. ಅದನ್ನು ಕೇಳಕೇಳುತ್ತಲೇ ನಾವು ದೊಡ್ಡವರಾಗಿಬಿಟ್ಟಿರಬಹುದು. ಅವತ್ತು ಅವನು ಕಾಂಡೊಮ್ ಮರ ಅಂದಾಗ, ನಾವೆಲ್ಲಾ ನಕ್ಕು ಕುತೂಹಲದಿಂದ ಅವನ ಹಿಂದೆ ಹೋದೆವು. ಅವನು ಪ್ರತಿಸಲ ಅಲ್ಲಿಗೆ ಹೋಗುವಂತೆ, ತೀರಾ ಪರಿಚಿತ ರಸ್ತೆಯಲ್ಲಿ ನಡೆದಂತೆ, ಒಂದು ಬಗಲಿಗೆ ಬ್ಯಾಗ್ ಹಾಕಿಕೊಂಡು, ಒಂದು ಕೈಯನ್ನು ಜೇಬಲ್ಲಿ ಬಿಟ್ಟು, ಆಗಾಗ ನಮ್ಮತ್ತ ತಿರುಗಿ “ಬರ್ರಲೇ ಜಲ್ದಿ ಜಲ್ದಿ” ಎನ್ನುತ್ತ ನಡೆಯುತ್ತ ಹೋಗುತ್ತಿದ್ದ.
“ಇದೇ ನೋಡ್ರಲೇ ಕಾಂಡೊಮ್ ಮರ” ಎಂದ. ಅವನು ಹೇಳಿದ ಕಾಂಡೊಮ್ ಮರ ಎಲ್ಲ ಮರಗಳಂತೆಯೆ ಇತ್ತು. ನೋಡಿದ ಕೂಡಲೇ ನಮಗೆ ಭ್ರಮನಿರಸನ. ಅದೊಂದು ಕಬ್ಬನ್ಪಾರ್ಕ್ನಲ್ಲಿ ಕಾಣುವ ಸಾಮಾನ್ಯ ಮರ. ಆದರೆ ತುಂಬಾ ದೊಡ್ಡದಾದ ಮರ, ತುಂಬಾ ಎತ್ತರ ಬೇರೆ. ಅವತ್ತಿನ ಬಿಸಿಲಿಗೆ ಆ ಮರ ಅಡ್ಡಲಾಗಿ ನಿಂತು ಎಷ್ಟೋ ಜಾಗದವರೆಗೂ ತನ್ನ ನೆರಳು ಚಾಚಿತ್ತು. ಏನಿಲ್ಲವೆಂದರೂ ಇಬ್ಬರು ತಬ್ಬಿ ಹಿಡಿಯಲಾಗದಷ್ಟು ಬುಡವಿರುವ ಮರ ಅದು. ನಮ್ಮೆಲ್ಲರ ಸೋರಿದ ಮುಖಗಳನ್ನು ನೋಡಿ, ಅದರ ಕಾರಣ ಕೂಡ ಗೊತ್ತಾಗಿ, “ಬನ್ರೀ ಇಲ್ಲಿ, ಇಲ್ಲಿ ನೋಡಿ” ಅಂದ. ನಾವೆಲ್ಲ್ಲನೋಡಿದೆವು. ಅಲ್ಲಿ ಎಣಿಸಲಾಗದಷ್ಟು ಬಿದ್ದ ಕ್ರೀಮ್ ಕಲರಿನ ಕಾಂಡೊಮ್ಗಳು! ನಮಗೆಲ್ಲ ಅದು ಕಾಂಡೊಮ್ ಅಂತಲೇ ಗೊತ್ತಿರದ ದಿನಗಳು. ಹೆಚ್ಚುಕಮ್ಮಿ ಒಂದಿಬ್ಬರು ಬಿಟ್ಟರೆ, ಅವತ್ತೇ ನಾವು ಕಣ್ಣಾರೆ ಕಾಂಡೊಮ್ ಅಂದರೆ ಹಾಗಿರುತ್ತೆ ಎಂದು ನೋಡಿದುದು. ಅದಕ್ಕಿಂತಲೂ ಆಶ್ಚರ್ಯವಾದುದು ಎಣಿಸಲೇ ಆಗದಷ್ಟು ಕಾಂಡೊಮ್ಗಳು ಅಲ್ಲಿ ಮರದ ಬುಡದ ಸುತ್ತಲೂ ಬಿದ್ದಿದ್ದವು. ಎಂದೋ ಆಕಾಶದಿಂದ ಉದುರಿದಂತೆ! “ಸರಿ, ಇತ್ತ ಬನ್ನಿ” ಎಂದು ಶೀನ ಮರದ ಇನ್ನೊಂದು ಕಡೆಯ ಬುಡ್ಡೆಯನ್ನು ತೋರಿಸಿದ. ಅಲ್ಲಿ ಬುಡದಲ್ಲಿ ಹಸಿರು ಮಾಯವಾಗಿ ಕೆಂಪನೆಯ ಮಣ್ಣಿನ ನೆಲವಿದ್ದು, ಬುಡಕ್ಕೆ ಅಂಟಿಕೊಂಡು ಎತ್ತರಕ್ಕೆ ಇತ್ತು. ಅದನ್ನು ತೋರಿಸಿ ‘ಇಲ್ಲೇ ಅಕ್ಕಯ್ಯಂದಿರು ಇದು ಮಾಡಿಸಿಕೊಳ್ಳೋದು’ ಎಂದು ಕೈ ಸನ್ನೆಯಲ್ಲಿ ತೋರಿಸಿದ. ಲೈಂಗಿಕ ಕ್ರಿಯೆಯ ಸನ್ನೆಯದು. ಅಲ್ಲಿಯವರೆಗೂ ಅಸ್ಪಷ್ಟವಾಗಿ ನಿಂತ ಚಿತ್ರವೊಂದು ಮೂರ್ತರೂಪ ಪಡೆದು ಎದೆ ಹೊಡೆದುಕೊಳ್ಳತೊಡಗಿತು. ಅಲ್ಲಿಯವರೆಗೂ ಬರಿ ಭಿಕ್ಷೆ ಅವರ ಆದಾಯ ಎಂದು ತಿಳಿದಿದ್ದ ನಮಗೆ ದೇಹ ಕೂಡ ಅರ್ಪಿಸಿ ಅವರು ದುಡಿದುಕೊಳ್ಳುವರೆಂಬ ಕಲ್ಪನೆ ಸಿಕ್ಕಿತ್ತು. ನನಗೆ ಶೀನ ಇನ್ನೂ ಏನೇನೋ ವಿವರಿಸುವಾಗ ತಲೆ ಸುತ್ತು ಬಂದಂತೆ ಎನಿಸಿ, ಪಕ್ಕದ ಗೆಳೆಯನನ್ನು ಆತುಕೊಂಡು ಕಣ್ಮುಚ್ಚಿ ನಿಂತೆ. ಆವತ್ತು ಹಮಾಮ್ಸ್ ಬಳಿ ಬೋಳುತಲೆಯ ಮಂಗಳಮುಖಿಯ ಕೆನ್ನೆ ಸವರುತ್ತಿದ್ದ ಅರ್ಧ ಬೆತ್ತಲು ಆದವನು ನನ್ನತ್ತ ತಿರುಗಿ ನೋಡಿ ನಕ್ಕಂತೆ ಆಯ್ತು, ಕಣ್ಣು ತೆರೆದೆ. ಶೀನ ಇನ್ನೂ ಏನೋ ಒದರುತ್ತಿದ್ದ. ಅಲ್ಲಿ ಬಿದ್ದ ಕಾಂಡೊಮ್ಗಳು ಮಂಗಳಮುಖಿಯರ ನರಳಿದ ಆತ್ಮಗಳಂತೆ ಕಂಡವು.
ಅದಾಗಿ ಕಾಲೇಜು ಮುಗಿದು ಎಷ್ಟೋ ದಿನ ಅದೇ ಹಾದಿಯಲ್ಲಿ ಬೈಕಿನಲ್ಲಿ ಹೋಗುವಾಗ ಕಣ್ಣು ಒಂದು ಸಲ ಅತ್ತಕಡೆ ತಿರುಗುತ್ತದೆ, ಆ ಮರ ಅಷ್ಟೇ ಅಚಲವಾಗಿ ನಿಂತಿರುವುದನ್ನು ನೋಡಿದ್ದೇನೆ, ಅಷ್ಟೇ ಎತ್ತರ, ಅಷ್ಟೇ ಅಗಲ. ಒಂದೊಂದು ಸಲ ಆ ಮರದ ಬುಡದಲ್ಲಿ ಯಾವುದೋ ನವಪ್ರೇಮಿಗಳು ಕೂತಿರುತ್ತಾರೆ, ಅಲ್ಲಿ ಇನ್ನೂ ಕಾಂಡೊಮ್ಗಳು ಬಿದ್ದಿರಬಹುದಾ? – ಎಂದು ಯೋಚಿಸುತ್ತೇನೆ. ಕಾಂಡೊಮ್ಗಳೆಲ್ಲ ನಕ್ಷತ್ರಗಳ ಹಾಗೆ ಹೊಳೆಯುವಂತೆ ಭಾಸವಾಗುತ್ತೆ. ಅಲ್ಲಿ ಮಂಗಳಮುಖಿಯರ ಸ್ವಾಭಿಮಾನ ದೋಚಿ ಹೋದ ಗಂಡಸರ, ಪೊಲೀಸರ ಚಿತ್ರ ಎದುರಾಗುತ್ತೆ. ಅವರೆಲ್ಲ ಅಸ್ಪಷ್ಟ. ಅಲ್ಲಿ ಹಿತವಾಗಿ ನರಳಿದ ಸದ್ದು ಇಲ್ಲ, ಅಳುತ್ತ ಜೋರು ಕಿರುಚಿಕೊಂಡ, ಕೂದಲು ಕೆದರಿಕೊಂಡ, ಕುಂಕುಮ ಅಳಿಸ್ಕೊಂಡ, ಬಳೆ ಒಡೆಸಿಕೊಂಡ ಬೋಳು ಮಂಗಳಮುಖಿಯರ ಸದ್ದು ಕೇಳಿಸುತ್ತದೆ. ಗರ್ಭಗುಡಿ ಕಾಯುವಂತೆ ನಾಗರಕಟ್ಟೆಯ ಮೇಲೆ ಬೆಳೆದು ನಿಂತ ಆಲದಮರದಂತೆ, ಮಂಗಳಮುಖಿಯರನ್ನು ಕಾಪಾಡಲೆಂದು ಭೂಮಿಯಿಂದ ಎದ್ದು ಬಂದು ಎತ್ತರಕ್ಕೆ ಬೆಳೆದು ನಿಂತ ಮರ ಈ ಕಾಂಡೊಮ್ ಮರ ಇರಬಹುದಾ ಅನಿಸುತ್ತೆ.
ಕಾಂಡೊಮ್ ಮರ, ಉದುರಿದ ಕಾಂಡೊಮ್ಗಳು!
* * *
ಕೊರೋನಾ ಬಂದ ಸಮಯದಲ್ಲಿ ಮೊದಲ ಲಾಕ್ ಡೌನ್ ಸಮಯದಲ್ಲಿ ಹೊಸ ಆಪ್ ಕ್ಲಬ್ಹೌಸ್ ಶುರುವಾಗಿ, ಅದರಲ್ಲಿ ಎಲ್ಲ ಕ್ಷೇತ್ರದ ದಿಗ್ಗಜರು ಬಂದು ಇಡೀ ದಿನ ಮಾತಾಡುತ್ತ ಕೂತಿರುತ್ತಿದ್ದರು. ನನ್ನ ಬಹುಪಾಲು ಸಮಯ ಅಲ್ಲಿ ಬಂದು ಮಾತಾಡುವವರ ಮಾತು ಕೇಳಿಸಿಕೊಳ್ಳುವುದರಲ್ಲೇ ಇದ್ದು, ಸಮಯ ಕೊಲ್ಲುವುದು ಸುಲಭವಿತ್ತು. ಆ ಸಂಜೆ ಒಂದು ಮಾಧ್ಯಮ ಗುಂಪಿನಲ್ಲಿ ಮಂಗಳಮುಖಿಯರ ಹಕ್ಕುಗಳಿಗಾಗಿ ಹೋರಾಡಿದ ಲೈಂಗಿಕ ಕಾರ್ಯಕರ್ತೆಯನ್ನು ಕರೆಸಿದ್ದರು. ಗಂಡಾಗಿ ಹುಟ್ಟಿ, ಅವನೊಳಗೆ ಹೆಣ್ಣೊಂದು ಜನ್ಮ ತಳೆದು, ಅದು ಮನೆಯವರಿಗೆ ತಿಳಿದು, ಸ್ನೇಹಿತರಿಗೂ ತಿಳಿದು ಅಪಮಾನವಾಗಿ, ನೋವುಂಡು ಮನೆಯಿಂದ ಹೊರಬಿದ್ದು, ಮಾರ್ಕೆಟ್ ಬಳಿ ತನ್ನ ಸಮುದಾಯದವರು ಸಿಕ್ಕಿ, ಅವರ ಜೊತೆ ನಾಲ್ಕೈದು ವರ್ಷ ಭಿಕ್ಷೆ ಬೇಡಿ, ಸೆಕ್ಸ್ ವರ್ಕ್ ಮಾಡಿ, ಫೇಕ್ ಪೊಲೀಸ್ ಕೇಸುಗಳನ್ನು ಹಾಕಿಸಿಕೊಂಡು, ಅದಕ್ಕೆ ತಿಲಾಂಜಲಿ ಇಟ್ಟು, ಹೊಸ ಬದಲಾವಣೆಗೆ ನಾಂದಿ ಹಾಡಿದ ಮಂಗಳಮುಖಿಯನ್ನು ಮಾತನಾಡಿಸುತ್ತಿದ್ದರು. ಆಕೆ ಮಾತನಾಡುವಾಗ ಕಬ್ಬನ್ಪಾರ್ಕ್ ವಿಷಯ ಬಂತು. ಎಷ್ಟೋ ವರುಷಗಳ ಹಿಂದೆ ‘ಇದೇ ನೋಡ್ರೋ ಕಾಂಡೊಮ್ ಮರ’ ಎಂದು ನಮ್ಮನ್ನು ಹೊಸಲೋಕಕ್ಕೆ ಪರಿಚಯಿಸಿದ ಆ ಕಾಂಡೊಮ್ ಮರದ ಬುಡದಲ್ಲಿ ಆ ಲೈಂಗಿಕ ಕಾರ್ಯಕರ್ತೆಯ ಮೇಲೆ ಎಷ್ಟೋ ಕಿರುಕುಳವಾಗಿತ್ತು, ಅಲ್ಲಿ ಲೋಕಲ್ ಗೂಂಡಾಗಳು, ಪೊಲೀಸರು, ರೌಡಿಗಳು ಅವಳ ಜೀವ ತಿಂದು, ಅವಳಿಗೆ ನೋವು ಕೊಟ್ಟಿದ್ದು ಅದೇ ಮರದ ಬುಡದಲ್ಲಿ. ಅದೇ ಮರದ ಬುಡದಲ್ಲಿ ಅವಳು ಒಲ್ಲದ ಮನಸ್ಸಿನಿಂದ, ನಡುಗುವ ಕೈಗಳಿಂದ ಎಷ್ಟೋ ಪ್ಯಾಂಟುಗಳನ್ನು ಕೆಳಕ್ಕೆ ಇಳಿಸಿದ ಮಾತುಗಳನ್ನು ಕೇಳುತ್ತ ನಾನು ನಡುಗುತ್ತಿದ್ದೆ.
ಆ ಕಾರ್ಯಕ್ರಮದ ಅಂತ್ಯದಲ್ಲಿ ಅವಳೊಂದು ಮಾತು ಹೇಳಿದ್ದಳು – ‘ನಾನು ಮಂಗಳಮುಖಿ ಎಂದು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ, ನನ್ನ ದೇಹದಲ್ಲಿ ಹೆಣ್ಣಿದ್ದಾಳೆ. ಮಂಗಳ-ಅಮಂಗಳ, ಶುಭ-ಅಶುಭ ಎಲ್ಲ ಈ ಸಮಾಜ ಮಾಡಿದ್ದು, ನಾವೆಲ್ಲ ಮಂಗಳಮುಖಿ ಆದರೆ, ನಿಮ್ಮ ಅಕ್ಕ ಅಮ್ಮಂದಿರರು ಎಲ್ಲ ಅಮಂಗಳೆಯರೆ?’ ಎಂದು ಪ್ರಶ್ನಿಸಿದ್ದಳು.
* * *
ಮತ್ತೆ ಪ್ರತೀಕನನ್ನು ಭೇಟಿ ಮಾಡುವ ಸಮಯ ಬಂತು.
ಈ ಸಲ ರಸ್ತೆಬದಿಯಲ್ಲಿ ಭೇಟಿ ಆಗದೆ, ಇಂದಿರಾನಗರದ ಕಾಫಿ ಡೇಯಲ್ಲಿ ಭೇಟಿ ಆದೆವು. ಕುಶಲೋಪರಿ ಮಾತುಕತೆ ಆದಮೇಲೆ, ನಾನು ಕತೆ ನರೇಟ್ ಮಾಡತೊಡಗಿದೆ.
“ಒಂದು ಊರು. ಅಲ್ಲೊಂದು ಮನೆ. ಮನೆಯಲ್ಲೊಬ್ಬ ನಲವತ್ತು ವರ್ಷ ವಯಸ್ಸಿನ ಪುರುಷ. ಮನೆಯಲ್ಲಿ ಯಾರೂ ಇಲ್ಲ ಅಂದ್ಕೊಳ್ಳಿ, ದಿನ ಬೆಳಗೆದ್ದು ತನ್ನ ಕೆಲಸ ತಾನೇ ಮಾಡಿಕೊಂಡು, ವ್ಯವಸಾಯ ಮಾಡುತ್ತ ಬದುಕುತ್ತಿದ್ದಾನೆ. ಒಂದು ತರ ಏಕಾಂಗಿ ಬದುಕು. ಅಷ್ಟೇನೂ ಏರಿಳಿತವಿಲ್ಲದ ಬದುಕು. ಆದರೆ ಪ್ರತಿದಿನ ಅವನಿಗೆ ಜಾಸ್ತಿ ಖುಷಿ ಕೊಡುವ ಸಂಗತಿಯೆಂದರೆ ಗಿಡ ನೆಡುವುದು. ಈಗ ಒಂದು ಹೊಸ ಗಿಡ ತಂದು ಇಟ್ಟುಕೊಂಡಿದ್ದಾನೆ. ಅವನ ಮನೆಯಲ್ಲೊಂದು ಫೋಟೋ ಇದೆ. ಇಬ್ಬರು ಚಿಕ್ಕ ಹುಡುಗರು ನಗುತ್ತ ಹೆಗಲ ಮೇಲೆ ಕೈ ಹಾಕಿಕೊಂಡು ಪೋಸು ಕೊಟ್ಟ ಫೋಟೋ, ಅದ್ ಬಿಟ್ರೆ ಅಪ್ಪ-ಅಮ್ಮನ ಫೋಟೋ. ಆ ಫೋಟೋದಲ್ಲಿ ಒಬ್ಬ ಇವನಿದ್ದು, ಇನ್ನೊಬ್ಬ ಅವನ ತಮ್ಮನಿರಬಹುದು, ಇಲ್ಲ ಅಣ್ಣನಿರಬಹುದು. ಅದನ್ನು ದಿನವೂ ನೋಡುತ್ತಾನೆ. ತಂದ ಹೊಸ ಗಿಡ ನೆಡಲು ಗುಂಡಿ ತೋಡಿದ್ದಾನೆ, ಗಿಡ ನೆಟ್ಟಿದ್ದಾನೆ. ದಿನವೂ ನೀರು ಬೇರೆ ಹಾಕುತ್ತಿದ್ದಾನೆ, ವ್ಯವಸಾಯ, ಫೋಟೋ ನೋಡು, ಗಿಡ ನೆಡು, ಅಪರೂಪಕ್ಕೆ ರೈಲ್ವೆ ಸ್ಟೇಷನ್ಗೆ ಹೋಗಿ ಸ್ವಲ್ಪ ಹೊತ್ತು ಕೂತು ಬರೋದು ಇಷ್ಟೇ ಕೆಲಸ.
ಇನ್ನೊಂದು ಇದಕ್ಕೆ ಪ್ಯಾರಲಲ್ ಆದ ಕತೆ ಇದೆ. ಅದರಲ್ಲಿ ಒಬ್ಬ ಮಂಗಳಮುಖಿ. ಅವಳು ಪ್ರತಿದಿನ ಹೆಬ್ಬಾಳ ಫ್ಲೈಓವರ್ ಕೆಳಗೆ ನಿಲ್ಲುತ್ತಾಳೆ, ಅಪರೂಪಕ್ಕೆ ಗಿರಾಕಿ ಸಿಕ್ಕಾಗ ಅವರನ್ನು ಕರೆದುಕೊಂಡು ಲಾರಿ ಸ್ಟಾಂಡ್ ಹಿಂದಕ್ಕೆ ಹೋಗುತ್ತಾಳೆ. ಗಿರಾಕಿ ಸಿಗದ ದಿನಗಳಲ್ಲಿ ಸಿಗ್ನಲ್ನಲ್ಲಿ ನಿಂತು ಚಪ್ಪಾಳೆ ತಟ್ಟಿ ಭಿಕ್ಷೆ ಬೇಡುತ್ತಾಳೆ. ದಿನ ದಿನ ಕಳೆದು ತಿಂಗಳಾಗಿವೆ. ತಿಂಗಳು ತಿಂಗಳು ಕಳೆದು ವರುಷಗಳಾಗಿವೆ. ಮನೆ ಬಿಟ್ಟು ಈ ಜೀವನ ಆಯ್ಕೆ ಮಾಡಿಕೊಂಡು. ಕೊರೋನಾ ಬಂದ ಮೇಲೆ ಅವಳ ಬದುಕು ಹದಗೆಟ್ಟಿದೆ. ಪ್ರತಿ ದಿನ ಒಬ್ಬ ವಯಸ್ಸಾದ ವ್ಯಕ್ತಿ ಕಾರಿನಿಂದ ಕಿಟಕಿ ಇಳಿಸಿ, ಅವಳನ್ನು ನೋಡಿ ನಕ್ಕು, ಹತ್ತು ರೂಪಾಯಿ ಕೊಟ್ಟು ಕಾಯಿನ್ ಪಡೆದು ಹೋಗುತ್ತ ಇರುತ್ತಾನೆ. ಒಂದು ದಿನ ಮಂಗಳಮುಖಿ ಕಾಣುವುದಿಲ್ಲ. ಅವನು ಕಾದು ಹೋಗುತ್ತಾನೆ. ಆಮೇಲೆ ಎಷ್ಟೋ ದಿನ ಮಂಗಳಮುಖಿ ಕಾಣುವುದೇ ಇಲ್ಲ. ಅವನು ಪ್ರತಿ ದಿನ ಬಂದು ಕಾದು ಹೋಗುತ್ತಿರುತ್ತಾನೆ.
ಇತ್ತ ಊರಿನಲ್ಲಿ ಇರುವ ಆ ಒಂಟಿ ವ್ಯಕ್ತಿ ಸಂಜೆ ಗಿಡಕ್ಕೆ ನೀರು ಹಾಕಿ, ರೈಲ್ವೆ ಸ್ಟೇಶನ್ ಬಳಿ ಕೂತಿರಲು, ರೈಲು ಬಂದು ನಿಲ್ಲುತ್ತೆ. ರೈಲಿನಿಂದ ಇಳಿದ ಮಂಗಳಮುಖಿ ಅವನನ್ನು ನೋಡಿದ ಕೂಡಲೇ, ಕಣ್ಣು ಅರಳಿ. ಕಣ್ಣೀರು ಜಿನುಗುತ್ತೆ, ಅಲ್ಲೇ ಅಳುತ್ತ ಕುಸಿಯುತ್ತಾಳೆ. ಇವನು ಅವಳನ್ನು ನೋಡುತ್ತಾನೆ…”
ಇಷ್ಟು ಹೇಳಿ ಸುಮ್ಮನಾಗಿ ಪ್ರತೀಕ್ ಮುಖ ನೋಡಿದೆ. ಅವನು ತುಂಬಾ ಆಸಕ್ತಿಯಿಂದ ಕಥೆ ಕೇಳಿಸಿಕೊಳ್ಳುತ್ತಿದ್ದ. ‘ಆಮೇಲೆ?’ ಎಂದ. ಮತ್ತೆ ಮುಂದುವರಿಸಿದೆ.
“ಒಂಟಿ ವ್ಯಕ್ತಿ ನಗುತ್ತ ಬಂದು ತನ್ನ ಹಳೆಯ ಫೋಟೋ ಪಕ್ಕ ಹೊಸ ಫೋಟೋ ತಂದು ಇಡುತ್ತಾನೆ, ಅದರಲ್ಲಿ ಅವನು ಮತ್ತು ಮಂಗಳಮುಖಿ ನಗುತ್ತ ಹೆಗಲ ಮೇಲೆ ಕೈ ಹಾಕಿಕೊಂಡಿದ್ದಾರೆ.
ಅಸಲು ಅವರಿಬ್ಬರೂ ಅಣ್ಣ ತಮ್ಮ, ತಮ್ಮನಿಗೆ ಒಂದು ಫ್ಲ್ಯಾಶ್ಬ್ಲಾಕ್ ಇದೆ. ಅವಳಲ್ಲಿ ಹೆಣ್ಣೊಂದು ಹೊಕ್ಕು ಅದೇ ತರ ಆಡುವಾಗ ಅವರ ಅಪ್ಪ ಅವಳನ್ನು ಓಡಿಸಿರುತ್ತಾನೆ. ಅವನು ಬೆಂಗಳೂರಿಗೆ ಬಂದು ಮಂಗಳಮುಖಿಯಾಗಿರುತ್ತಾನೆ.
ಕೊನೆ ಶಾಟ್ನಲ್ಲಿ ಆ ಗಿಡ ತೋರಿಸುತ್ತೇವೆ. ಅದು ಆಲೂಗಡ್ಡೆ ಮತ್ತು ಟೊಮ್ಯಾಟೊ ಸೇರಿಸಿ ಕ್ರಾಸ್ ಕಸಿ ಮಾಡಿದ ಪೊಮ್ಯಾಟೋ ಗಿಡ, ಅದರಿಂದ ಒಂದು ಪೊಮ್ಯಾಟೋ ಕಾಯಿ ಅರಳಿ ನಗುತ್ತಿದೆ.”
ಕಥೆ ಮುಗಿದ ಮೇಲೆ ಪ್ರತೀಕ್ ಮುಖ ನೋಡಿ ಹೇಗಿದೆ ಎಂದು ಕೇಳಿದೆ. “ಹೇ ತುಂಬಾ ಚೆನ್ನಾಗಿದೆ ಸರ್” ಎಂದು, “ಆದರೆ ಅಲ್ಲಿ ಪ್ರತಿ ದಿನ ಕಾರಿನಲ್ಲಿ ಬಂದು ಕಾಯುತ್ತ ನಿಂತ್ಕೊಂಡಿದ್ದನಲ್ಲ ಆ ಮುದುಕ ಏನಾದ?” ಎಂದು ಕೇಳಿದ.
ನಾನು ಯೋಚಿಸಿ “ಗೊತ್ತಿಲ್ಲ ಇನ್ನೂ ಕಾಯುತ್ತಿರಬಹುದು, ಇಲ್ಲ ಕಾದು ಪ್ರಯೋಜನ ಇಲ್ಲ ಎಂದು ಸುಮ್ಮನಾಗಿರಬಹುದು” ಎಂದೆ. ಪ್ರತೀಕ್ ಕತ್ತು ಅಲ್ಲಾಡಿಸುತ್ತ ಏನೋ ಯೋಚಿಸುತ್ತಿದ್ದ.
ಅಲ್ಲಿಂದ ಹೊರಟು ಮನೆಗೆ ಬರುವಾಗ ಕಬ್ಬನ್ಪಾರ್ಕ್ ಬಳಸಿ ಬರಬೇಕಿತ್ತು. ಹಾಗೆ ಬಳಸಿ ಬರಬೇಕಾದರೆ ಸಂಜೆ ಇಳಿದು, ಇನ್ನೇನು ಕತ್ತಲು ಶುರುವಾಗುತ್ತಿತ್ತು. ಬರಬೇಕಾದರೆ ಇನ್ನೂ ಆ ಕಾಂಡೊಮ್ ಮರ ಅಲ್ಲೇ ಇದ್ಯಾ ನೋಡಿದೆ. ಸ್ವಲ್ಪ ದೂರದಲ್ಲಿ ಅಸ್ಪಷ್ಟವಾಗಿ ಆ ಮರ ಕಾಣಿಸಿತು. ಇನ್ನೂ ಅಲ್ಲೇ ಇತ್ತು. ಹಾಗೆ ನೋಡುತ್ತಿದ್ದಂತೆ ಯಾರೋ ಅವಸರದಲ್ಲಿ ಆ ಮರದ ಹಿಂದೆ ಹೋದರು. ಅದರ ಹಿಂದೆ ಇನ್ನೊಬ್ಬ ವ್ಯಕ್ತಿ ಮರದ ಹಿಂದೆ ಹೋಗಿ ಮರೆಯಾದ.
ಇಡೀ ಕಬ್ಬನ್ಪಾರ್ಕ್ ಕತ್ತಲಿಗೆ ಜಾರುತ್ತಿತ್ತು.