ಸ್ಟೇಶನ್ ತಲಪಿದ ಪೊಲೀಸ್, “ಇಲ್ಲಿ ಕೂತಿರಿ, ಸ್ವಲ್ಪ ಕಾಯಬೇಕಾಗುತ್ತೆ” ಎಂದು ಸುಧಾಕರನಿಗೆ ಹೇಳಿ, ಒಳಹೊಕ್ಕು ಮಾಯವಾದ. ಅಲ್ಲೇ ಇದ್ದ ಒಂದು ಹಳೆಯ ಮುರುಕುಬೆಂಚಿನ ಮೇಲೆ ಕೂತ ಸುಧಾಕರ ತಾನು ಯಾರಿಗಾಗಿ ಕಾಯಬೇಕು, ಯಾತಕ್ಕಾಗಿ ಕಾಯಬೇಕು ಎಂಬುದೂ ತಿಳಿಯದೆ, ಆದರೆ ಕಾಯುತ್ತಾ ಕುಳಿತ. ಸೊಳ್ಳೆಗಳು ಕಚ್ಚುತ್ತಿದ್ದವು. ಹೊರಗೆ ನಿಧಾನ ಕತ್ತಲು ಆವರಿಸುತ್ತಿತ್ತು. ಯಾರು ಯಾರೋ ಬರುತ್ತಿದ್ದರು, ಹೋಗುತ್ತಿದ್ದರು. ಬಸ್ ಇಳಿದವನು ತನ್ನ ಪಾಡಿಗೆ ತಾನು ಹೊರಡುವ ಬದಲು ಆ ಮುದುಕಿಯ ಬಗ್ಗೆ ಯಾಕೆ ಕರುಣೆ ತೋರಿದೆ, ಈಗ ಈ ವ್ಯೂಹದಿಂದ ಪಾರಾಗಲು ದಾರಿ ಯಾವುದು ಎಂದು ಚಿಂತಿಸುತ್ತ ಕಣ್ಮುಚ್ಚಿ ಕೂತ.

ಸರ್ಕಾರೀ ಬಸ್ನಿಲ್ದಾಣದಲ್ಲಿ ಬಸ್ಸಿಂದ ಇಳಿದವನೇ ಸುಧಾಕರ ಮೂತ್ರಾಲಯದತ್ತ ತುಸು ಅವಸರವಾಗೇ ನಡೆದ. ಇವನಂತೆಯೇ ಅವಸರವಾದವರೂ ಅತ್ತಲೇ ಧಾವಿಸುತ್ತಿದ್ದರು.
“ಬಸ್ ಹತ್ತು ನಿಮಿಷ ಮಾತ್ರ ನಿಲ್ಲುವುದು; ಚಾ, ಕಾಫಿ ಕುಡಿಯುವವರು ಕುಡಿಯಬಹುದು” ಎಂದು ಕಂಡಕ್ಟರ್ ಘೋಷಣೆ ಮಾಡಿದ್ದ. ಬೇಗ ಶೌಚಾಲಯದಿಂದ ಹೊರಬಿದ್ದರೆ ಕಾಫಿ ಕುಡಿಯಲು ಅವಕಾಶ ಸಿಗುತ್ತದೆ ಎಂಬ ಯೋಚನೆಯೂ ಕೆಲವರ ತರಾತುರಿಗೆ ಕಾರಣವಿದ್ದೀತು. ಸುಧಾಕರ ಅದೇ ಬಸ್ಸಿನಲ್ಲಿ ಮುಂದೆ ಪ್ರಯಾಣಿಸುವವನಾಗಿರಲಿಲ್ಲ. ಅಲ್ಲಿಂದ ಮೂವತ್ತು ಮೈಲು ದೂರದಲ್ಲಿದ್ದ ಅವನ ಊರಿಗೆ ಹೋಗುವ ಬಸ್ ಹೊರಡುವುದು ಏಳು ಗಂಟೆಗೆ. ಈಗಿನ್ನೂ ನಾಲ್ಕು. ಹಾಗಾಗಿ, ಅವನಿಗೆ ತರಾತುರಿಯಲ್ಲಿ ಕಾಫಿ ಕುಡಿಯುವ ಅಗತ್ಯ ಇರಲಿಲ್ಲ.
ಶೌಚಾಲಯದ ತುಸುವೇ ಈಚೆಗೆ ಕುಳಿತಿದ್ದ ಆ ಮುದುಕಿ ಕಂಡಳು. ಖಾಲಿಯಾದ ಬೆಂಚ್ಗಳಿದ್ದರೂ ಅದರಲ್ಲಿ ಕೂರದೆ, ನೆಲದ ಮೇಲೆ ಗೋಡೆಗೊರಗಿ, ಕಾಲು ಚಾಚಿ, ಕಣ್ಮುಚ್ಚಿ ಕೂತಿದ್ದಳು ಮುದುಕಿ. ಅರೆ! ಈ ಮುದುಕಿ ತಾನು ಬೆಳಗ್ಗೆ ಬಸ್ ಹತ್ತುವಾಗಲೂ ಇಲ್ಲಿ ಹೀಗೆಯೇ ಕೂತಿದ್ದಳಲ್ಲ ಎಂಬುದು ನೆನಪಾಗಿ, ಇವಳಿಗೆ ಏನಾಗಿರಬಹುದು ಎಂಬ ಯೋಚನೆ ಬಂತು. ಏನೋ ಸಮಸ್ಯೆ ಇರಬೇಕು, ಇಲ್ಲವಾದರೆ ಬೆಳಗ್ಗೆಯಿಂದ ಹೀಗೆ ಸಾಯಂಕಾಲದವರೆಗೆ ಬಸ್ನಿಲ್ದಾಣದಲ್ಲಿ ಯಾರು ಕೂರುತ್ತಾರೆ? ಅವಳು ಕಾಲುಚಾಚಿ, ಗೋಡೆಗೊರಗಿ, ಈ ಪ್ರಪಂಚಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಕೂತ ಹಾಗೆ ಸುಧಾಕರನಿಗೆ ಕಂಡಿತು.
ಮಾಸಿದ ಸೀರೆ. ಸುಕ್ಕುಮುಖ, ಮೈ. ಪಕ್ಕದಲ್ಲಿ ಒಂದು ಚಿಕ್ಕ ಗಂಟು. ಸುತ್ತಮುತ್ತಲೂ ಓಡಾಡುವ, ಕೂತಿದ್ದ ಯಾರೂ ಆ ಮುದುಕಿಯ ಬಗ್ಗೆ ಗಮನಹರಿಸಿದಂತೆ ಕಾಣಲಿಲ್ಲ. ಏನಾಗಿದೆ ಎಂದು ಅವಳನ್ನು ವಿಚಾರಿಸೋಣವೇ ಅನಿಸಿತು. ಜೊತೆಗೆ ಈ ಉಸಾಬರಿ ತನಗ್ಯಾಕೆ ಅಂತ ನಿಲ್ದಾಣದಿಂದ ಹೊರಹೊರಡಲು ಹತ್ತಾರು ಹೆಜ್ಜೆ ಇಟ್ಟ. ಇದ್ದಕ್ಕಿದ್ದಂತೆ, ಇತ್ತೀಚೆಗಷ್ಟೇ ತೀರಿಕೊಂಡಿದ್ದ ತನ್ನ ತಾಯಿಯ ಮುಖದಂತೆ ಇದೆಯಲ್ಲ ಇವಳ ಮುಖ ಅನಿಸಿ, ಮತ್ತೊಮ್ಮೆ ಅವಳತ್ತ ನೋಡಿದ. ತನ್ನ ತಾಯಿಯ ವಯಸ್ಸೇ ಇರಬಹುದು. ಬಡಕಲು ದೇಹ. ಬಟ್ಟಲು ಮುಖ. ಚಾಪೆಯ ಮೇಲೆ ಮಲಗಿಸಿದ್ದ ಅಮ್ಮನ ದೇಹವೂ ಹೀಗೇ ಇತ್ತು. ಕೂತಲ್ಲೇ ಇವಳೇನಾದರೂ ಸತ್ತೇ ಹೋಗಿದ್ದಾಳೆಯೇ? ಸಣ್ಣ ಕಂಪನ.
ತೊಂಬತ್ತರ ಸನಿಹ ಇದ್ದ ಅಮ್ಮನಿಗೆ ವಯೋಸಹಜವಾದ ಕಾಯಿಲೆಗಳು. ದುರ್ಬಲಗೊಂಡ ದೇಹ. ಮನಸ್ಸು ಮಾತ್ರ ಚುರುಕಾಗಿಯೇ ಇತ್ತು. “ಅಮ್ಮನಿಗೆ ಆರಾಮಿಲ್ಲ. ಆಸ್ಪತ್ರೆ ಸೇರಿಸಿದ್ದೀವಿ. ಕೊನೆಯ ದಿನಗಳು ಸಮೀಪಿಸಿದೆ ಅನಿಸುತ್ತೆ” ಅಂತ ಅಣ್ಣನ ಪತ್ರ ಬಂತು. ದೂರದೂರಿನಲ್ಲಿ ನೌಕರಿಯಲ್ಲಿದ್ದ ತಾನು ಕೂಡಲೇ ಊರಿಗೆ ಧಾವಿಸಿದ್ದ. ಆದರೆ, ಅವನು ಹೋಗುವಷ್ಟರಲ್ಲಿ ಅಮ್ಮ ಚೇತರಿಸಿಕೊಂಡು ಮನೆಗೆ ಬಂದಿದ್ದಳು. ಇದೇ ರೀತಿ ಮೂರು ಬಾರಿ ಆಗಿತ್ತು. ಮೂರನೆಯ ಬಾರಿಯೂ ಹಾಗೇ ಆದಾಗ ರಜೆ ಸುಮ್ಮನೆ ದಂಡವಾಗುತ್ತಿದೆ ಎಂಬ ಕಾರಣಕ್ಕಾಗಿ ತುಸು ಚಿಂತೆಯಾಗಿತ್ತು. ಹಾಗಾಗಿ, ನಾಲ್ಕನೆಯ ಬಾರಿ ಅಣ್ಣನ ಪತ್ರ ಬಂದಾಗ “ರಜೆ ಸಿಗುವುದು ಕಷ್ಟ. ಸಿಕ್ಕ ಕೂಡಲೇ ಬರುತ್ತೇನೆ” ಎಂದು ಉತ್ತರಿಸಿದ್ದ. ಮಾರನೆಯ ದಿನವೇ ಫೋನ್ ಬಂತು. ಅಮ್ಮ ಹೋಗಿಬಿಟ್ಟಿದ್ದಳು.
ಇದು ನೆನಪಾಗಿದ್ದೇ ಬಸ್ಸ್ಟ್ಯಾಂಡಿನ ಹೊರಗೆ ಬಂದಿದ್ದ ಸುಧಾಕರನಿಗೆ ಮುದುಕಿಯನ್ನು ವಿಚಾರಿಸದೆ ಮುಂದೆ ಹೋಗುವುದು ಸರಿಯಲ್ಲ ಎಂಬ ಭಾವನೆ ಬಂತು. ಮತ್ತೆ ಅವಳನ್ನು ಮಾತಾಡಿಸುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಮನಸ್ಸು ಉಯ್ಯಾಲೆಯಾಡಿತು. ಏನಾದರಾಗಲಿ ಎಂದು ಯೋಚಿಸಿದ ಸುಧಾಕರ, ಅವಳ ಹತ್ತಿರ ಹೋಗಿ, “ಅಜ್ಜಿ” ಎಂದ.
ಕಣ್ಣು ತೆರೆಯಿತು. ತುಂಬ ಹೊತ್ತಿಂದ ಕಣ್ಣು ಮುಚ್ಚಿಯೇ ಕೂತಿದ್ದಕ್ಕೋ ಏನೋ, ಬೆಳಕು ಕಣ್ಣಿಗೆ ಚುಚ್ಚಿದ ಅನುಭವವಾಗಿ ಮತ್ತೆ ಮುಚ್ಚಿತು. ಸುಧಾಕರನಿಗೆ ಸಮಾಧಾನವಾಯಿತು. ಎಚ್ಚರ ತಪ್ಪಿಲ್ಲ, ಸತ್ತಿಲ್ಲ ಈಕೆ. ಕಣ್ಣು ಮತ್ತೆ ಮುಚ್ಚಿದಾಗ ಸುಧಾಕರ ಮತ್ತೆ, “ಅಜ್ಜಿ, ಏನಾಗಿದೆ ನಿಮಗೆ? ಆರಾಮಿಲ್ಲವಾ? ಎಲ್ಲಿಂದ ಬಂದವರು? ಎಲ್ಲಿಗೆ ಹೋಗುವವರು?” ಎಂದು ಸಾಲಾಗಿ ಪ್ರಶ್ನೆಗಳನ್ನಿಟ್ಟ.
“ನೀರು ಬೇಕು, ಹಸಿವು” ಕ್ಷೀಣದನಿಯಲ್ಲಿ ಗೊಣಗಿದ್ದು ಸುಧಾಕರನಿಗೆ ಕೇಳಿಸಿತು. ಅಂಗಡಿಗೆ ಹೋಗಿ ಒಂದು ಬಾಟಲ್ ನೀರು ತಂದು ಕೊಟ್ಟ. ತುಸು ನೀರು ಕುಡಿದ ಅಜ್ಜಿ, ಕಣ್ಣೆತ್ತಿ ನೋಡಿ ಮತ್ತೆ, “ಹಸಿವು” ಅಂದಳು. ಇವಳು ಯಾರೋ ಏನೋ, ಏನು ತಿನ್ನುತ್ತಾಳೋ, ಗೊತ್ತಿಲ್ಲದೆ ತಾನು ತಿಂಡಿ ಕೊಡಿಸುವುದು ಸರಿಯೇ ಎಂಬ ಗೊಂದಲ ಹುಟ್ಟಿದರೂ, ಬೇರೆ ದಾರಿ ಏನೂ ತೋಚದೆ ಸುಧಾಕರ ಹೋಟೆಲ್ಗೆ ಹೋಗಿ ನಾಲ್ಕು ಇಡ್ಲಿ ತಂದುಕೊಟ್ಟು ತಿನ್ನಿ ಎಂದ. ಅಲ್ಲೇ ಬೆಂಚಿನ ಮೇಲೆ ಕೂತ. ಎಷ್ಟೋ ದಿನದಿಂದ ಆಹಾರವನ್ನೇ ಕಾಣದವಳಂತೆ ಅಜ್ಜಿ ಅದನ್ನು ತಿನ್ನತೊಡಗಿದಳು. ಮುಕ್ಕತೊಡಗಿದಳು ಎಂಬುದೇ ಸರಿ.
ಅವಳು ತಿಂಡಿ ತಿನ್ನುವುದನ್ನು ನೋಡುತ್ತಿದ್ದರೂ ಸುಧಾಕರನ ಮನಸ್ಸಿನಲ್ಲಿ ಬೇರೆ ಏನೇನೋ ಯೋಚನೆಗಳು ರಿಂಗಣಿಸುತ್ತಾ, ಅವಳ ಬಗ್ಗೆ ಗಮನ ತಪ್ಪಿತ್ತು. ಇದ್ದಕ್ಕಿದ್ದಂತೆ ಕೇಳಿದ ಕೆಮ್ಮಿನ ಧ್ವನಿ ಸುಧಾಕರನನ್ನು ಮತ್ತೆ ಈ ಪ್ರಪಂಚಕ್ಕೆ ಎಳೆತಂದಿತು. ನೋಡಿದರೆ, ಅವಸರ ಅವಸರವಾಗಿ ತಿಂಡಿ ತಿನ್ನುತ್ತಿದ್ದ ಮುದುಕಿ ಕೆಮ್ಮುತ್ತಿದ್ದಳು. ಅವಳ ಗಂಟಲಿಗೆ ಇಡ್ಲಿ ಸಿಕ್ಕಿಕೊಂಡಿತೇ ಅಥವಾ ನೀರು ಕುಡಿದದ್ದು ಗಂಟಲಿಗೆ ಸಿಕ್ಕಿ ಕೆಮ್ಮುತ್ತಿದ್ದಾಳೆಯೇ? ಕೆಮ್ಮುತ್ತಾ ಕೂತಿದ್ದ ಮುದುಕಿ ಹಾಗೆಯೆ ನೆಲಕ್ಕೊರಗಿ ಮಲಗಿದಳು. ಸುಧಾಕರನಿಗೆ ಏನು ಮಾಡಲೂ ತೋಚಲಿಲ್ಲ. ಕೂತಿದ್ದವನು ಎದ್ದು ನಿಂತ. ಅಲ್ಲೇ ಇದ್ದ ಇನ್ನಿಬ್ಬರು ಹತ್ತಿರ ಬಂದು ಏನಾಯಿತು ಎಂದು ಕೇಳಿ, ಆ ಮುದುಕಿಯನ್ನು ಎತ್ತಿ ಕೂರಿಸಲು ಯತ್ನಿಸಿದರು. ಕೆಮ್ಮು ನಿಂತಿತ್ತು.
ಅವಳನ್ನು ಮತ್ತೆ ಗೋಡೆಗೊರಗಿಸಿ ಕೂರಿಸಿ ಕೈಬಿಟ್ಟಾಗ, ಮುದುಕಿ ಮತ್ತೆ ವಾಲಿ ನೆಲಕ್ಕೊರಗಿದಳು. ಎಲ್ಲರೂ ಗಾಬರಿಗೊಂಡರು. ಇನ್ನೂ ನಾಲ್ಕಾರು ಜನ ಸೇರಿದರು. “ಎಚ್ಚರ ತಪ್ಪಿದ ಹಾಗಿದೆ” – ಯಾವನದೋ ಧ್ವನಿ. ಮತ್ತೊಂದು ಧ್ವನಿ – “ಉಸಿರು ಏನಾಗಿದೆ ನೋಡ್ರಿ.” ಯಾವನೋ ಒಬ್ಬ ಮೂಗಿನ ಬಳಿ ಬೆರಳು ಹಿಡಿದು, “ಉಸಿರು ನಿಂತಿದೆ” ಅಂದ. “ನಿಮ್ಮ ತಾಯಿಯಾ ಇವರು? ಹೋಗಿಬಿಟ್ಟಿದ್ದಾರೆ ಅನಿಸುತ್ತೆ” ಎಂದು ಸುಧಾಕರನನ್ನೇ ನೋಡುತ್ತ ವಿಷಾದ ವ್ಯಕ್ತಪಡಿಸಿದ. ತಟಕ್ಕನೆ ಮೌನ ಆವರಿಸಿತು.
ಈಗಿದ್ದ ಆ ಮುದುಕಿ, ಒಂದೇ ಕ್ಷಣದಲ್ಲಿ ಇಲ್ಲವಾಗಿದ್ದು ನಿಧಾನ ಮನಸ್ಸಿಗಿಳಿಯುತ್ತಿದ್ದಂತೆ ಎಲ್ಲರಲ್ಲೂ ಮೌನ. “ಛೇ, ಹೀಗಾಗಬಾರದಿತ್ತು” ಎಂದು ಯಾರೋ ಒಬ್ಬರು ಸುಧಾಕರನನ್ನೇ ನೋಡುತ್ತಾ ಹೇಳಿದರು. ಮೌನವಾಗಿ, ಇದೆಲ್ಲ ಏನು ಎಂಬುದು ಅರ್ಥವಾಗದವನಂತೆ ನಿಂತಿದ್ದ ಸುಧಾಕರನ ಕೈ ಹಿಡಿದು ಒಬ್ಬ, “ಸುಧಾರಿಸಿಕೊಳ್ಳಿ, ಅವರವರ ಕಾಲ ಬಂದಾಗ ಹೊರಡುವುದೇ” ಎಂದ. ಇವರೆಲ್ಲ ಈ ಮುದುಕಿಗೂ ತನಗೂ ಸಂಬಂಧ ಕಲ್ಪಿಸಿ ಮಾತಾಡುತ್ತಿದ್ದಾರೆ ಎಂಬುದು ಈಗ ಹೊಳೆದು ಸುಧಾಕರ ಬೆಚ್ಚಿದ. “ಇಲ್ಲ, ಅವರು ನನಗೆ ಸಂಬಂಧದವರಲ್ಲ” ಎಂದು ಅವನು ಹೇಳಿದ್ದು ಯಾರೂ ಗಮನಿಸಿದಂತೆ ತೋರಲಿಲ್ಲ.
ಯಾರೋ ಪೊಲೀಸಿಗೆ ತಿಳಿಸಿದರು ಎಂದು ಕಾಣುತ್ತದೆ. ತುಸು ದೊಡ್ಡ ಹೊಟ್ಟೆಯ ಪೊಲೀಸನೊಬ್ಬ ಪ್ರತ್ಯಕ್ಷವಾಗಿ, “ಸರಿಯಿರಿ, ಏನಾಗಿದೆ?” ಎಂದು ಯಾರನ್ನೂ ಉದ್ದೇಶಿಸದೆ, ಆದರೆ ಎಲ್ಲರನ್ನೂ ಉದ್ದೇಶಿಸಿ ಹೇಳುತ್ತ, ಬಾಗಿ ಆ ಮುದುಕಿಯನ್ನು ಮತ್ತೊಮ್ಮೆ ಪರೀಕ್ಷಿಸಿ, “ಜೀವ ಹೋದಂತಿದೆ” ಎಂದು ಮೊದಲಬಾರಿಗೆ ಗೊತ್ತಾದಂತೆ ಹೇಳಿದ. “ಇವರ ಕಡೆಯವರು ಯಾರಿದ್ದಾರೆ ಇಲ್ಲಿ?” ಎಂದು ಕೇಳುತ್ತಾ ಸುತ್ತಲೂ ದೃಷ್ಟಿ ಹರಿಸಿದಾಗ, ಸುಧಾಕರನನ್ನು ಸಮಾಧಾನಿಸಲು ಅವನ ಕೈ ಹಿಡಿದಿದ್ದ ವ್ಯಕ್ತಿ, ಇವರೇ ಅವರ ಮಗ ಎಂದು ಸುಧಾಕರನನ್ನು ತೋರಿಸಿದ.
ಎಲ್ಲರಂತೆಯೇ ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುತ್ತ, ಅದರಲ್ಲಿ ಭಾಗವಹಿಸದವನಂತೆ ನಿಂತಿದ್ದ ಸುಧಾಕರನಿಗೆ ಈ ಮಾತು ಕೇಳಿ, ತುಸು ತಡವಾಗಿ ಅದರ ಅರ್ಥ ಹೊಳೆದು ಗಾಬರಿಯಾಯಿತು. ತನಗೂ ಈ ಮುದುಕಿಗೂ ಏನೂ ಸಂಬಂಧವಿಲ್ಲ ಎಂದು ಹೇಳಲು ಸುಧಾಕರ ಬಾಯಿತೆರೆಯುವ ಮೊದಲೇ, ಆ ಪೊಲೀಸು “ಏನಾಗಿತ್ತು ನಿಮ್ಮ ತಾಯಿಗೆ?” ಎಂದು ಪ್ರಶ್ನಿಸಿದ. “ನನಗೆ ಗೊತ್ತಿಲ್ಲ” ಎಂದು ಸುಧಾಕರ ಸಹಜವಾಗಿ ಹೇಳಿ ಕೂಡಲೇ ತಾನು ಹಾಗೆ ಹೇಳುವ ಬದಲು ಅವಳು ನನ್ನ ತಾಯಿಯಲ್ಲ ಎಂದು ಹೇಳಬೇಕಿತ್ತಲ್ಲವೇ ಎಂದು ಯೋಚಿಸಿದ.
ಯಾರೋ, “ಹಾರ್ಟ್ಫೇಲ್ ಆಗಿರಬೇಕು” ಎಂದರು. ಪೊಲೀಸನಿಗೂ ಅದೇ ಸರಿ ಅನ್ನಿಸಿ, “ಯಾವುದಕ್ಕೂ ಬಾಡಿಯನ್ನು ಆಸ್ಪತ್ರೆಗೆ ಒಯ್ಯುವುದು ಒಳ್ಳೆಯದು. ಅಲ್ಲಿ ಡಾಕ್ಟರ್ ಪರೀಕ್ಷಿಸಿ ಹೇಳಿದ ನಂತರ, ನೀವು ಬಾಡಿಯನ್ನು ಒಯ್ಯಬಹುದು” ಎಂದು ಸುಧಾಕರನಿಗೆ ಹೇಳಿದ. ಇನ್ನು ಇಲ್ಲೇನೂ ಸ್ವಾರಸ್ಯ ಉಳಿದಿಲ್ಲ ಎಂದು ಜನರೂ ತಮ್ಮ ಕೆಲಸ ನೆನಪಿಸಿಕೊಂಡು ಚೆದರತೊಡಗಿದರು.
“ಅವರು ನನ್ನ ತಾಯಿಯಲ್ಲ, ನನಗೆ ಅವರು ಯಾರೆಂದೂ ಗೊತ್ತಿಲ್ಲ” ಎಂದು ಈಗ ಸುಧಾಕರ ಪೊಲೀಸನಿಗೆ ಹೇಳಿದ. ಅಲ್ಲಿ ಇನ್ನೂ ನಿಂತಿದ್ದ ಒಂದಿಬ್ಬರಿಗೆ ಮತ್ತು ಆ ಪೊಲೀಸನಿಗೆ ಅಚ್ಚರಿಯಾಯಿತು.
“ಅಲ್ಲಯ್ಯಾ, ಇಷ್ಟು ಹೊತ್ತೂ ಈ ವಿಷಯಾನೇ ಹೇಳ್ದೆ ಸುಮ್ಮನಿದ್ದೆ. ಈಗ ಸತ್ತುಹೋಗಿದಾರೆ ಅನ್ನೋದು ಗೊತ್ತಾಗಿ ಹೀಗೆ ಅಂತಿದೀಯಾ? ಎಂಥ ಮಗ ನೀನು…” ಪೊಲೀಸನ ಮಾತು ಏಕವಚನಕ್ಕಿಳಿದು ತುಸು ಒರಟಾಯಿತು.
“ಅಲ್ಲಯ್ಯಾ… ನೀನು ಮಗ ಅಲ್ದೇ ಇದ್ರೆ ಇವಳಿಗೆ ಯಾಕೆ ನೀರು ತಂದುಕೊಟ್ಟೆ? ಯಾಕೆ ತಿಂಡಿ ತಂದುಕೊಟ್ಟೆ? ನಾನು ನೋಡಿದ್ನಲ್ಲ. ಅದೂ ಅಲ್ದೆ ನೀನು ಬೆಳಗ್ಗೆ ಬಸ್ಸ್ಟ್ಯಾಂಡಿಗೆ ಬಂದಾಗ ಇವಳು ನಿನ್ನೆ ಹಿಂದೇನೇ ಬಂದಿದ್ಲಲ್ಲ” – ಅಲ್ಲೇ ಇದ್ದ ಅಂಗಡಿಯವನು ಹೇಳಿದಾಗ ಪೊಲೀಸನಿಗೆ, ಅಲ್ಲಿದ್ದ ಉಳಿದವರಿಗೆ ಸುಧಾಕರ ಏನೋ ವಂಚನೆ ಮಾಡುತ್ತಿದ್ದಾನೆ ಎಂದೆನಿಸಿತು.
“ನೋಡಿ, ಅವಳು ನೀರು ಬೇಕು ಅಂದ್ಲು. ಪಾಪ ಅನ್ನಿಸಿ ತಂದುಕೊಟ್ಟೆ. ನೀರು ಕುಡಿದವಳು ಹಸಿವು ಅಂದಳು. ಪಾಪ ಅನ್ನಿಸಿ ತಿಂಡಿ ಕೊಟ್ಟೆ. ಅವಳನ್ನು ಕಂಡು ಇತ್ತೀಚೆಗೆ ತೀರಿಕೊಂಡ ಅಮ್ಮನ ನೆನಪಾಗಿ ಅಷ್ಟು ಮಾಡಿದ್ದು. ಅಷ್ಟು ಬಿಟ್ಟು ನನಗೆ ಬೇರೆ ಏನೂ ಅವಳ ಬಗ್ಗೆ ಗೊತ್ತಿಲ್ಲ. ಅವಳು ನನ್ನ ಹಿಂದೆ ಬಂದಿದ್ದೂ ನನಗೆ ಗೊತ್ತಿಲ್ಲ. ನನಗೆ ಅವಳು ಯಾವ ರೀತಿಯಲ್ಲೂ ಸಂಬಂಧದವಳಲ್ಲ. ಯಾರ ಜೊತೆ ಬಂದಿದ್ಲೋ” ಸುಧಾಕರ ವಿಷಯವನ್ನು ಸ್ಪಷ್ಟಪಡಿಸಿದ.
“ಇಷ್ಟು ಜನರಿದ್ದಾಗ, ಬೆಳಗಿಂದಲೂ ಇಲ್ಲೇ ಹೀಗೆ ಕೂತಿದ್ದ ಈ ಮುದುಕಿ, ಬೇರೆ ಯಾರ ಹತ್ತಿರವೂ ನೀರು ತಿಂಡಿ ಕೇಳದೆ ನೀನು ಬರುವವರೆಗೂ ಕಾದು ಕೂತಿದ್ದಳು ಅಂದರೆ ನಿನಗೆ ಸಂಬಂಧವಿದೆ ಅಂತಲೇ ಆಯ್ತಲ್ಲ” ಅಂಗಡಿಯವನು ತರ್ಕಿಸಿದ.
“ಅವಳು ಬೇರೆಯವರನ್ನು ಯಾಕೆ ಕೇಳಿಲ್ಲ ಎಂಬುದು ನನಗೇನು ಗೊತ್ತು? ನನ್ನ ಬಳಿ ಯಾಕೆ ಕೇಳಿದಳು ಎಂಬುದನ್ನು ಅವಳೇ ಹೇಳಬೇಕು. ನನಗೆ ಊರಿಗೆ ಹೋಗಲು ತಡವಾಗ್ತಿದೆ. ನಾನು ಹೋಗಬೇಕು” ಎನ್ನುತ್ತ ಸುಧಾಕರ ತಿರುಗಿದಾಗ, ಪೊಲೀಸು ಅವನ ಭುಜ ಹಿಡಿದು, “ಸ್ವಲ್ಪ ತಾಳಯ್ಯಾ, ಎಲ್ಲಿಗೆ ಓಡೋದು? ಏನು ನಾಟಕ ಆಡ್ತಿದೀಯಾ? ಸ್ಟೇಶನ್ಗೆ ಬರಬೇಕಾಗುತ್ತೆ ನೀನು. ಅಲ್ಲೇ ದೊಡ್ಡ ಸಾಹೇಬ್ರು ತನಿಖೆ ಮಾಡ್ತಾರೆ” ಎನ್ನುತ್ತಾ, ಸುಧಾಕರನ ಕೈ ಹಿಡಿದುಕೊಂಡೇ ಆ ಪೊಲೀಸು ಯಾರಿಗೋ ಫೋನ್ ಮಾಡಿದ. ಎರಡು ನಿಮಿಷದಲ್ಲಿ ಆಂಬ್ಯುಲೆನ್ಸ್ ಬಂತು. ಆ ಮುದುಕಿಯ ದೇಹವನ್ನು ಹೇರಿಕೊಂಡು ಸೈರನ್ ಕೂಗಿಸುತ್ತ ಹೊರಟಿತು.
“ಎಂಥ ಕಾಲ ಬಂತು. ತಾಯಿ ಸತ್ತಳು ಎಂದ ಕೂಡಲೇ ಈ ಲೋಫರ್ ಅವಳು ತನ್ನ ತಾಯೀನೇ ಅಲ್ಲ ಅನ್ನೋದಾ?” ಎಂದು ತುಸು ಏರುಧ್ವನಿಯಲ್ಲಿ ಹಿಂದೆ ನಿಂತಿದ್ದ ಯಾರೋ ಕೂಗಿದಾಗ, ಸುತ್ತಲಿದ್ದವರು ಹೌದೆಂಬಂತೆ ತಲೆಯಾಡಿಸಿದರು. ಉತ್ತೇಜಿತನಾದ ಅವನು “ನಾಲ್ಕು ಬಿಟ್ಟರೆ ಬುದ್ಧಿ ಬರುತ್ತೆ” ಎಂದು ಉಮೇದಿನ ಮಾತಾಡಿದ. ಕೂಡಲೇ ಪೊಲೀಸನ ಬುದ್ಧಿ ಚುರುಕಾಯಿತು. ಒಂದು ಏಟು ಬಿದ್ದರೆ ಸಾಕು, ಮತ್ತೆ ಐವತ್ತು ಏಟು ಬೀಳಲು ತಡವಾಗುವುದಿಲ್ಲ. ಯಾರು ಯಾರಿಗೆ ಯಾಕಾಗಿ ಏಟು ಹಾಕುತ್ತಾರೆ ಎಂಬುದನ್ನೂ ಊಹಿಸಲು ಆಗುವುದಿಲ್ಲ. ಜಾತಿ ಧರ್ಮಗಳೆಲ್ಲ ಒಂದಕ್ಕೊಂದು ಸೇರಿ ಕಲಸುಮೇಲೋಗರವಾಗಿ, ತನ್ನ ನಿಯಂತ್ರಣವನ್ನೂ ಮೀರಿ ದೊಂಬಿಯೇ ಆಗಬಹುದು. ಮತ್ತೆ ಸಾಹೇಬರು ತನ್ನನ್ನು ಸಸ್ಪೆಂಡ್ ಮಾಡುತ್ತಾರೆ ಎಂದು ಯೋಚಿಸಿ ಗಾಬರಿಬಿದ್ದ. ಮನುಷ್ಯನ ಒಳಗಿರುವ ಯಾವುದೋ ರೊಚ್ಚು ಯಾವುದೋ ಸಂದರ್ಭದಲ್ಲಿ ಹೊರಬಂದು ಯಾರನ್ನೋ ಗುರಿಯಾಗಿಸುತ್ತದೆ ಎಂದು ಅನುಭವದಿಂದ ತಿಳಿದಿದ್ದ, ಅವನು.
ಆ ಕೂಡಲೇ, “ನೀವೆಲ್ಲ ಸುಮ್ಮನರ್ರಿ, ನಾನಿಲ್ವಾ ಇಲ್ಲಿ” ಎಂದು ಜನರತ್ತ ನೋಡುತ್ತ ಹೇಳಿ, ಸುಧಾಕರನತ್ತ ತಿರುಗಿ, “ನಡಿಯಯ್ಯಾ ಸ್ಟೇಶನ್ಗೆ” ಎಂದು ಅವನ ರಟ್ಟೆ ಹಿಡಿದು ಹೊರಟ. ನಾಲ್ಕು ಬಿಟ್ಟರೆ ಸರಿಯಾಗುತ್ತೆ ಎಂಬ ಕೂಗು ಕೇಳಿದ್ದ ಸುಧಾಕರನಿಗೂ ಭಯ ಆವರಿಸಿ, ಅಲ್ಲಿಂದ ಪಾರಾದರೆ ಸಾಕು ಎಂದನಿಸಿತು. ಪೊಲೀಸು ಹೇಳುವುದನ್ನೇ ಕಾಯುತ್ತಿದ್ದವನಂತೆ, ಅವನಿಗಿಂತ ಮುಂದೆ ಬಸ್ಸ್ಟ್ಯಾಂಡಿನಿಂದ ಹೊರಬಿದ್ದ. “ನೀವು ಅಂಗಡಿ ಬಾಗಿಲು ಮುಚ್ಚಿ ಬನ್ನಿ, ನಮಗೆ ನಿಮ್ಮ ಹೇಳಿಕೆ ಬೇಕು” ಎಂದು ಪೊಲೀಸು ಅಂಗಡಿಯವನಿಗೆ ತಾಕೀತು ಮಾಡುತ್ತ ಸುಧಾಕರನನ್ನು ಹಿಂಬಾಲಿಸಿದ.
ಸ್ಟೇಶನ್ ತಲಪಿದ ಪೊಲೀಸ್, “ಇಲ್ಲಿ ಕೂತಿರಿ, ಸ್ವಲ್ಪ ಕಾಯಬೇಕಾಗುತ್ತೆ” ಎಂದು ಸುಧಾಕರನಿಗೆ ಹೇಳಿ, ಒಳಹೊಕ್ಕು ಮಾಯವಾದ. ಅಲ್ಲೇ ಇದ್ದ ಒಂದು ಹಳೆಯ ಮುರುಕುಬೆಂಚಿನ ಮೇಲೆ ಕೂತ ಸುಧಾಕರ ತಾನು ಯಾರಿಗಾಗಿ ಕಾಯಬೇಕು, ಯಾತಕ್ಕಾಗಿ ಕಾಯಬೇಕು ಎಂಬುದೂ ತಿಳಿಯದೆ, ಆದರೆ ಕಾಯುತ್ತಾ ಕುಳಿತ. ಸೊಳ್ಳೆಗಳು ಕಚ್ಚುತ್ತಿದ್ದವು. ಹೊರಗೆ ನಿಧಾನ ಕತ್ತಲು ಆವರಿಸುತ್ತಿತ್ತು. ಯಾರು ಯಾರೋ ಬರುತ್ತಿದ್ದರು, ಹೋಗುತ್ತಿದ್ದರು. ಬಸ್ ಇಳಿದವನು ತನ್ನ ಪಾಡಿಗೆ ತಾನು ಹೊರಡುವ ಬದಲು ಆ ಮುದುಕಿಯ ಬಗ್ಗೆ ಯಾಕೆ ಕರುಣೆ ತೋರಿದೆ, ಈಗ ಈ ವ್ಯೂಹದಿಂದ ಪಾರಾಗಲು ದಾರಿ ಯಾವುದು ಎಂದು ಚಿಂತಿಸುತ್ತ ಕಣ್ಮುಚ್ಚಿ ಕೂತ.
* * *
ಪುಟ್ಟಪ್ಪ, ಯಲ್ಲಮ್ಮ ತಮ್ಮ ಮಗನ ಜೊತೆ ಬಸ್ಸ್ಟ್ಯಾಂಡಿನಲ್ಲಿ ಇಳಿದಾಗ ಗಂಟೆ ರಾತ್ರಿ ಒಂಬತ್ತಾಗಿಬಿಟ್ಟಿತ್ತು. ಇಳಿದವನೇ ಪುಟ್ಟಪ್ಪ “ಮಗನ ಕೈಹಿಡಿದುಕೋ” ಎಂದು ಹೆಂಡತಿ ಯಲ್ಲಮ್ಮಳಿಗೆ ಹೇಳಿ, ಇಡೀ ನಿಲ್ದಾಣದ ಉದ್ದಕ್ಕೂ ಕಣ್ಣು ಹಾಯಿಸಿದ. ಅಲ್ಲಲ್ಲಿ ಬೆಳಕು, ಅಲ್ಲಲ್ಲಿ ಕತ್ತಲು. ನಿಲ್ದಾಣದಲ್ಲಿ ಮೂವರೋ ನಾಲ್ವರೋ ಕೂತಿದ್ದರು. ಉಳಿದಂತೆ ನಿರ್ಜನವಾಗಿತ್ತು. ಪುಟ್ಟಪ್ಪ ನಿಲ್ದಾಣದುದ್ದಕ್ಕೂ ನಡೆದ. ಎಲ್ಲೂ ಅವನಿಗೆ ಅಮ್ಮ ಕಾಣಲಿಲ್ಲ.
ಆತಂಕ, ಭಯ ಆವರಿಸಿತು. ಬೆಳಗ್ಗೆ ಬೆಳ್ಳಕ್ಕಿ ದೇವಸ್ಥಾನಕ್ಕೆ ಹೋಗುವ ಉದ್ದೇಶದಿಂದ ಬಂದಿದ್ದ ಅವರು, ಬರುವ ಹೊತ್ತಿಗೆ ಬೆಳ್ಳಕ್ಕಿಗೆ ಹೋಗುವ ಬಸ್ ಹೊರಡಲು ತಯಾರಾಗಿದ್ದರಿಂದ ಅವಸರದಲ್ಲೇ ಬಸ್ ಏರಿದ್ದರು. ಆಗಲೇ ಬಸ್ಸಿನ ಹೊಟ್ಟೆ ಒಡೆಯುವಷ್ಟು ಜನರು ತುಂಬಿದ್ದ ಬಸ್ನಲ್ಲಿ ಇಬ್ಬರೂ ಮಗನ ಜೊತೆ ತೂರಿಕೊಂಡಿದ್ದರು. ಅಮ್ಮ ಬಸ್ ಹತ್ತಿದ್ದಾಳಾ ಎಂದು ತಿರುಗಿ ನೋಡಿದರೆ, ಬಸ್ನಲ್ಲಿ ತುಂಬಿದ್ದ ಜನರ ತಲೆ, ಮೈ ಕಂಡಿತು. ಅಷ್ಟರಲ್ಲೇ ಬಸ್ ಹೊರಟಿತು. ತಮ್ಮ ಹಿಂದೆಯೇ ಬರುತ್ತಿದ್ದ ಅವಳು ಹತ್ತಿರುತ್ತಾಳೆ ಎಂದು ಸಮಾಧಾನಿಸಿಕೊಂಡ ಯಲ್ಲಮ್ಮನೂ, “ನಮ್ಮ ಹಿಂದೆಯೇ ಅತ್ತೆ ಇದ್ದರು, ಹತ್ತಿರುತ್ತಾರೆ ಬಿಡಿ” ಅಂತ ಅಂದಳು.
ಬೆಳ್ಳಕ್ಕಿಯಲ್ಲಿ ಎಲ್ಲರೂ ಇಳಿದು ಬಸ್ ಖಾಲಿಯಾಯಿತು. ಕೆಳಗೆ ಇಳಿದು, ಅಮ್ಮ ಇಳಿಯುತ್ತಾಳೆ ಎಂದು ಕಾಯುತ್ತಿದ್ದ ಪುಟ್ಟಪ್ಪನಿಗೆ ಬಸ್ನಲ್ಲಿದ್ದವರೆಲ್ಲ ಇಳಿದರೂ ಅಮ್ಮ ಇಳಿಯದಿದ್ದುದು ನೋಡಿ ದಿಗಿಲಾಯಿತು. ಒಮ್ಮೆ ಬಸ್ ಹತ್ತಿ ಅಮ್ಮ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು, ಅಮ್ಮ ಹತ್ತಲೇ ಇಲ್ಲವೋ, ಅಥವಾ ಎಲ್ಲೋ ಇಳಿದುಬಿಟ್ಟಿದ್ದಾಳೋ ಎಂದು ಗಾಬರಿಪಡುತ್ತಾ, “ಅಮ್ಮ ಹತ್ತೇ ಇಲ್ಲ ಅಂತ ಕಾಣ್ಸುತ್ತೆ, ಇಲ್ಲೇ ನಿಂತಿರು” ಅಂತ ಹೆಂಡತಿಗೆ ಸೂಚಿಸಿ, ಪ್ರಯಾಣಿಕರಿಗೆ ಚಿಲ್ಲರೆ ಕೊಡುವುದರಲ್ಲಿ ಮಗ್ನನಾಗಿದ್ದ ಕಂಡಕ್ಟರ್ ಬಳಿ ಹೋಗಿ ನಿಂತ. ನಿಮಗೂ ಚಿಲ್ಲರೆ ಬರೋದಿದೆಯಾ ಎಂದು ಕಂಡಕ್ಟರ್ ವಿಚಾರಿಸಿದ. “ಇಲ್ಲ, ಅಮ್ಮ ಬಸ್ಸಿಂದ ಇಳಿದೇ ಇಲ್ಲ” ಎಂದ.
“ಇಳಿಯೋಕೆ ಹೇಳ್ರೀ. ಬಸ್ ಇಲ್ಲಿಂದ ಇನ್ನು ಕಲ್ಲೂರಿಗೆ ಹೋಗುತ್ತೆ.”
“ಬಸ್ನಲ್ಲಿ ಅವರು ಇಲ್ಲ.”
“ಅರೆ! ಬಸ್ನಲ್ಲಿ ಇಲ್ಲದೇ ಇದ್ದೋರು ಹ್ಯಾಗೆ ಇಳಿತಾರೆ?”
“ಹಾಗಲ್ಲ… ಅವರು ಬೇರೆಲ್ಲಾದರೂ ಇಳಿದರಾ, ನಿಮ್ಮ ಗಮನಕ್ಕೇನಾದರೂ ಬಂತಾ ಅಂತ.”
“ಎಲ್ಲೆಲ್ಲೋ ಯರ್ಯಾರೋ ಇಳ್ದಿದಾರೆ. ನಿಮ್ಮಮ್ಮ ಇಳಿದಿದಾರಾ ಇಲ್ವಾ ಅಂತ ನಂಗೆ ಹೆಂಗೆ ಗೊತ್ತಾಗುತ್ತೆ? ಬಸ್ ಹತ್ತಿದ್ದು ನೋಡಿದೀರಾ?”
“ನಮ್ಮ ಹಿಂದೆ ಇದ್ರು ಸಾರ್ದಲ್ಲಿ, ರಷ್ ಇತ್ತಲ್ಲಾ… ಹತ್ತಿದ್ರು ಅಂದ್ಕೊಂಡೆ.”
ಕಂಡಕ್ಟರ್ಗೂ ತಲೆ ಕೆಟ್ಟಿತು. “ಅಲ್ರೀ, ಹತ್ತಿದಾರೋ ಇಲ್ವೋ ಗೊತ್ತಿಲ್ಲ – ಇಲ್ಲಿ ಬಂದು ಇಳ್ದಿದಾರಾ ಕೇಳ್ತೀರಲ್ಲ. ಸಾಗರಕ್ಕೆ ಹೋಗಿ ವಿಚರ್ಸಿ. ಹತ್ತೇ ಇಲ್ವೇನೋ” ಎಂದು ಹೇಳುತ್ತ ಕಂಡಕ್ಟರ್ ಚಾ ಅಂಗಡಿಯತ್ತ ನಡೆದ.
ಪುಟ್ಟಪ್ಪನಿಗೆ ದಿಕ್ಕೆಟ್ಟಂತಾಯಿತು. ಎಂಬತ್ತು ವರ್ಷದ ಅಮ್ಮ, ಕೈಯಲ್ಲಿ ದುಡ್ಡಿಲ್ಲ, ಒಬ್ಬಳೇ ಸಾಗರದಲ್ಲಿ ಏನು ಮಾಡುತ್ತಾಳೋ ಎಂಬ ಯೋಚನೆ ಬಂದು ಭಯವಾಯಿತು. ಅವಸರವಸರವಾಗಿ ಹೆಂಡತಿಯ ಹತ್ತಿರ ಬಂದು, “ಅಮ್ಮ ಹತ್ತೇ ಇಲ್ಲ ಅಂತ ಕಾಣ್ಸುತ್ತೆ, ನಾವು ಈಗ ಬೇಗ ವಾಪಸ್ ಹೋಗಬೇಕು” ಎಂದ.
“ದೇವಿಗೆ ಹರಕೆ ತೀರಿಸಲೆಂದೇ ಇಲ್ಲೀವರೆಗೂ ಬಂದು, ಹಾಗೇ ಹೋಗೋದಾ?” ಹೆಂಡತಿ ಅಸಮಾಧಾನ ವ್ಯಕ್ತಪಡಿಸಿದಳು. “ನೋಡಿ, ಅಮ್ಮ ಹತ್ತೇ ಇಲ್ಲ ಅಂದ್ರೆ ಅಲ್ಲೇ ಕೂತರ್ತಾರೆ. ಅದೇನು ಕಾಡಲ್ಲ. ಏನೂ ಅಪಾಯ ಆಗಲ್ಲ. ನಾವು ಬೇಗ ದರ್ಶನ ಮಾಡಿ ಹೋಗೋಣ. ಇಲ್ಲೀವರೆಗೂ ಬಂದು ಹಾಗೇ ಹೋಗೋದು ಅಶುಭ” ಎಂದು ಸೂಚಿಸಿದಳು. ಪುಟ್ಟಪ್ಪನಿಗೆ ಅದೂ ಸರಿ ಅನಿಸಿತು. ಅರ್ಧ ಗಂಟೆಯಲ್ಲಿ ದರ್ಶನ ಮುಗಿಸಿ ಹೊರಟರಾಯಿತು ಎಂದು ತೀರ್ಮಾನಿಸಿ, “ಸರಿ, ಹೋಗೋಣ ದೇವಸ್ಥಾನಕ್ಕೆ” ಎಂದ. ನೆಲಕ್ಕಿಟ್ಟಿದ್ದ ಚೀಲ ಎತ್ತಿಕೊಳ್ಳುತ್ತ ಯಲ್ಲವ್ವ ಅತ್ತಿತ್ತ ನೋಡಿ, “ಮಗಾ ಎಲ್ಲಿ?” ಎಂದು ಗಾಬರಿಯಿಂದ ಕೇಳಿದಳು. “ಅಯ್ಯೋ… ನಾನು ಕಂಡಕ್ಟರ್ ಹತ್ರ ಹೋದಾಗ ಇಲ್ಲೇ ನಿನ್ನ ಬಳಿ ಇದ್ನಲ್ಲೇ” ಎಂದು ಪುಟ್ಟಪ್ಪನೂ ಗಾಬರಿಗೊಂಡು ಅತ್ತಿತ್ತ ನೋಡುತ್ತ ಹೇಳಿದ.
“ಅವನು ನಿಮ್ಮ ಹಿಂದೆಯೇ ಬಂದಿದ್ದನಲ್ಲ. ನಿಮ್ಮ ಗಮನಕ್ಕೆ ಬಂದಿದೆ ಎಂದು ನಾನು ಸುಮ್ಮನಿದ್ದೆ.” ಯಲ್ಲವ್ವಳ ದನಿಯಲ್ಲಿ ಆತಂಕದ ಜೊತೆ ದುಃಖವೂ ತುಂಬಿಕೊಂಡಿತು. “ಮೊದಲು ಅವನನ್ನು ಹುಡುಕೋಣ, ದೇವಸ್ಥಾನ ಆಮೇಲೆ” ಎಂದು ಯಲ್ಲವ್ವ ಹೇಳುತ್ತಲೇ, ಚೀಲವನ್ನು ಅಲ್ಲಿಯೇ ಬಿಟ್ಟು, “ಪುಟ್ಟಾ… ಪುಟ್ಟಾ…” ಎಂದು ಕೂಗುತ್ತ ಆ ಜನಜಂಗುಳಿಯಲ್ಲಿ ನುಗ್ಗಿದಳು. ಪುಟ್ಟಪ್ಪನೂ ಅಷ್ಟೇ ಆತಂಕದಿಂದ ಮತ್ತೊಂದು ದಿಕ್ಕಿಗೆ ತಿರುಗಿ ಮಗನನ್ನು ಹುಡುಕತೊಡಗಿದ. ಅತ್ತ ಇತ್ತ, ಅಂಗಡಿ ಸಾಲು, ಹೋಟೆಲ್ ಬದಿಗೆ ಇಣುಕುತ್ತ್ತ, ಎಲ್ಲೂ ಮಗನನ್ನು ಕಾಣದೆ ಪುಟ್ಟಪ್ಪ ಒಂದು ಮರದ ಕೆಳಗೆ ನಿಂತ. ಮಗನ ಕೈಹಿಡಿದುಕೊಳ್ಳದ ಹೆಂಡತಿಯ ಬಗ್ಗೆ, ತನ್ನನ್ನು ಹಿಂಬಾಲಿಸಿ ಬಂದ ಮಗನ ಬಗ್ಗೆ ಸಿಟ್ಟು ಬಂದು, “ಸಿಗಲಿ ಅವನು, ಬಾರಿಸುತ್ತೇನೆ ನಾಲ್ಕು” ಎಂದು ಅಂದುಕೊಂಡ.
ಉದ್ದನೆಯ ಕೋಲಿಗೆ ಬಲೂನ್ಗಳನ್ನು ಕಟ್ಟಿ, ಬಲೂನ್… ಬಲೂನ್ ಎಂದು ಕೂಗುತ್ತಾ ಅದೇ ಮರದ ಕೆಳಗೆ ಬಂದು ನಿಂತವನನ್ನು, “ಕರಿ ಚಡ್ಡಿ, ನೀಲಿ ಅಂಗಿ ಹಾಕಿದ ಮಗು ಏನಾದರೂ ಕಂಡಿತಾ? ತಪ್ಪಿಸಿಕೊಂಡಿದ್ದಾನೆ” ಎಂದು ವಿಚಾರಿಸಿದ. “ಸುಮಾರು ಹೊತ್ತಿನ ಹಿಂದೆ ಹಾಗೆ ಬಟ್ಟೆ ಹಾಕಿದ್ದ ಮಗು ನನ್ನ ಬಳಿ ನಿಂತು, ಬಲೂನ್ ನೋಡಿತು. ನಂತರ ಹೀಗೇ ಹೋಯಿತು” ಎಂದು ಬಲೂನ್ ಮಾರುವವ ದೇವಸ್ಥಾನದ ದಿಕ್ಕು ತೋರಿಸಿದ. ಪುಟ್ಟಪ್ಪ, ದೇವರೇ, ಮಗ ಅಲ್ಲೇ ಇರಲಪ್ಪ ಅಂದುಕೊಳ್ಳುತ್ತ ಒಳಹೊಕ್ಕ.
ಅಂತೂ ದೇವಸ್ಥಾನದ ಪ್ರಾಂಗಣದ ಮೂಲೆಯಲ್ಲಿ ಮಲಗಿದ್ದ ಮಗ ಸಿಗುವಾಗ ನಾಲ್ಕು ಗಂಟೆಯಾಗಿಬಿಟ್ಟಿತ್ತು. ಪುಟ್ಟಪ್ಪನಿಗೆ ಈಗ ಮತ್ತೆ ಅಮ್ಮನ ನೆನಪಾಯಿತು. ಇನ್ನು ತಡಮಾಡೋದು ಬೇಡ ಎಂದು ಬಸ್ಸ್ಟ್ಯಾಂಡಿಗೆ ಬಂದು ವಿಚಾರಿಸಿದರೆ, ಬಸ್ ಇರುವುದು ಆರು ಗಂಟೆಗೆ, ಸಾಗರ ತಲಪುವುದು ಒಂಬತ್ತು ಆಗಬಹುದು ಎಂದು ತಿಳಿಯಿತು. ಬೇರೇನೂ ಮಾಡಲು ತೋಚದೆ, ಅಲ್ಲೇ ಕೂತರು. ಈ ಅತ್ತೆಯ ಕಾಲದಲ್ಲಿ ದೇವರ ದರ್ಶನವೂ ತಪ್ಪಿತು ಎಂದು ಯಲ್ಲವ್ವ ಅಸಮಾಧಾನದಲ್ಲಿ ಮುಖ ಊದಿಸಿದಳು.
ಪುಟ್ಟಪ್ಪ, ಯಲ್ಲಮ್ಮ ತಮ್ಮ ಮಗನ ಜೊತೆ ಸಾಗರದ ಬಸ್ಸ್ಟ್ಯಾಂಡಲ್ಲಿ ಇಳಿದಾಗ ಗಂಟೆ ರಾತ್ರಿ ಒಂಬತ್ತಾಗಿಬಿಟ್ಟಿತ್ತು. ಇಳಿದವನೇ ಪುಟ್ಟಪ್ಪ ಮಗನ ಕೈಹಿಡಿದುಕೋ ಎಂದು ಹೆಂಡತಿ ಯಲ್ಲಮ್ಮಳಿಗೆ ಹೇಳಿ, ಇಡೀ ನಿಲ್ದಾಣದ ಉದ್ದಕ್ಕೂ ಕಣ್ಣು ಹಾಯಿಸಿದ. ಅಲ್ಲಲ್ಲಿ ಬೆಳಕು, ಅಲ್ಲಲ್ಲಿ ಕತ್ತಲು. ನಿಲ್ದಾಣದಲ್ಲಿ ಮೂವರೋ ನಾಲ್ವರೋ ಕೂತಿದ್ದರು. ಉಳಿದಂತೆ ನಿರ್ಜನವಾಗಿತ್ತು. ನಿಂತಲ್ಲಿಂದ ಕಾಣುವುದಿಲ್ಲ ಎಂದು ಪುಟ್ಟಪ್ಪ ನಿಲ್ದಾಣದುದ್ದಕ್ಕೂ ನಡೆದ. ಎಲ್ಲೂ ಅವನಿಗೆ ಅಮ್ಮ ಕಾಣಲಿಲ್ಲ. ಆತಂಕ, ಭಯ. ಇದ್ದ ಒಂದು ಅಂಗಡಿಯ ಬಾಗಿಲೂ ಹಾಕಿಬಿಟ್ಟಿತ್ತು. ಇದ್ದಕ್ಕಿದ್ದಂತೆ ಬೆಳ್ಳಕ್ಕಿಗೆ ಹೊರಟಿದ್ದಕ್ಕೆ, ಹಾಗೆ ಹೊರಟಾಗ ಅಮ್ಮನೂ ಬರಲಿ ಎಂದು ಕರೆದುಕೊಂಡು ಹೊರಟಿದ್ದಕ್ಕೆ, ಅವಳನ್ನು ಮೊದಲು ಬಸ್ ಹತ್ತಿಸದೆ ಇದ್ದುದಕ್ಕೆ, ಮಗನ ಕೈಹಿಡಿದುಕೊಳ್ಳದ ಹೆಂಡತಿಯ ಬಗ್ಗೆ ಸಿಟ್ಟಿಗೇಳುತ್ತಾ ಪುಟ್ಟಪ್ಪ ಚಡಪಡಿಸಿದ.
ಕಂಟ್ರೋಲ್ ರೂಮಿನಲ್ಲಿ ಇಣುಕಿದರೆ ಖಾಲಿ ಇತ್ತು. ಬೆಂಚಿನ ಮೇಲೆ ಬಸ್ಸಿಗೆ ಕಾಯುತ್ತ ಕೂತಿದ್ದವರ ಬಳಿ ಹೋಗಿ, “ಇಲ್ಲಿ ಒಬ್ಬ ಮುದುಕಿ ಕೂತಿದ್ದನ್ನು ನೋಡಿದಿರಾ?” ಎಂದು ವಿಚಾರಿಸಿದ. “ಯಾವ ಮುದುಕಿ, ನಾವು ಇಲ್ಲಿಗೆ ಬಂದು ಅರ್ಧ ಗಂಟೆಯಾಯಿತು, ಯಾರೂ ಕಂಡಿಲ್ಲಪ್ಪ” ಎಂದರು. ಅಷ್ಟರಲ್ಲಿ ಕಂಟ್ರೋಲ್ ರೂಮಿಗೆ ಯಾರೋ ಹೊಕ್ಕಿದ್ದು ಕಂಡು ಅತ್ತ ಓಡಿದ. ಇವನು ಹೇಳುವುದನ್ನು ಸಾವಧಾನವಾಗಿ ಕೇಳಿಸಿಕೊಂಡ ಅವನು, “ನನ್ನ ಡ್ಯೂಟಿ ಶುರುವಾಗುವುದೇ ಈಗ. ನೀವು ಸೀದಾ ಸ್ಟೇಶನ್ಗೆ ಹೋಗಿ ಮೊದಲು ಒಂದು ಕಂಪ್ಲೇಂಟ್ ಕೊಡಿ” ಎಂದು ಸಲಹೆ ಕೊಟ್ಟ.
ಸ್ಟೇಶನ್ಗೆ ಹೋದ ಪುಟ್ಟಪ್ಪ, ಯಲ್ಲವ್ವನನ್ನು ಮುರುಕುಬೆಂಚಿನಲ್ಲಿ ಸುಧಾಕರನ ಪಕ್ಕ ಕೂರಿಸಿ, ಮಗನ ಕೈಹಿಡಿದುಕೋ, ಜೋಪಾನ ಎಂದು ಮತ್ತೊಮ್ಮೆ ಎಚ್ಚರಿಸಿ, ತನಗೂ ಅರ್ಥವಾಗದ ಗೊಂದಲ, ಆತಂಕದಲ್ಲಿ ಕೂತಿದ್ದ ಸುಧಾಕರನಿಗೆ “ಸ್ವಲ್ಪ ಇವರ ಬಗ್ಗೆ ಗಮನವಿಡಿ ಸಾರ್” ಎಂದು ಕೋರಿಕೊಂಡು, ಪೊಲೀಸರು ಕೂತಿದ್ದ ರೂಮಿನತ್ತ ಹೆಜ್ಜೆಹಾಕಿದ.
ಎರಡು ನಿಮಿಷ ಬಿಟ್ಟು ವಾಪಾಸು ಬಂದು, “ಸಾಹೇಬ್ರು ಇಲ್ವಂತೆ, ಸ್ವಲ್ಪ ಕಾಯ್ತಿರಿ ಅಂದ್ರು” ಅಂತ ಯಲ್ಲವ್ವನಿಗೆ ಹೇಳಿ, ಅದೇ ಮುರುಕುಬೆಂಚಿನ ಮೇಲೆ ಸುಧಾಕರನ ಪಕ್ಕ ಕಾಯುತ್ತಾ ಕೂತ.
* * *
ಪುಟ್ಟ ಅಮ್ಮನಿಗೊರಗಿ ನಿದ್ದೆಹೋಗಿದ್ದ. ಯಲ್ಲವ್ವ, ಪುಟ್ಟಪ್ಪ ಮತ್ತು ಸುಧಾಕರ ಮೂವರಿಗೂ ಕೂತಲ್ಲೇ ಮಂಪರು ಹತ್ತಿತ್ತು. ಇದ್ದಕ್ಕಿದ್ದಂತೆ ದೊಡ್ಡ ಧ್ವನಿ ಕೇಳಿಸಿತು. “ಆ ಮುದುಕಿ ಕಡೆಯವರು ಯರ್ರೀ?” ಗಡಬಡಿಸಿ ಮೂವರೂ ಎದ್ದುನಿಂತರು. “ಆ ಮುದುಕಿಯ ಬಾಡಿ ಆಸ್ಪತ್ರೆಯಲ್ಲಿದೆ. ತೆಗೆದುಕೊಂಡು ಹೋಗಿ” ಎಂದು ಪೊಲೀಸು ಹೇಳಿದ. “ಯಾವ ಬಾಡಿ?” ಎಂದು ಪುಟ್ಟಪ್ಪ ಕೇಳಿದ. “ಆ ಬಾಡಿ ನನಗೆ ಸಂಬAಧಿಸಿದ್ದಲ್ಲ” ಎಂದು ಸುಧಾಕರ ಹೇಳಿದ. “ಹಾಗಿದ್ದರೆ ಆ ಮುದುಕಿಯ ಕಡೆಯವರು ಯಾರು?” ಎಂದು ಪೊಲೀಸು ಕೇಳಿದ.
ಸುಧಾಕರ ಪುಟ್ಟಪ್ಪನನ್ನು ನೋಡಿದ. ಪುಟ್ಟಪ್ಪ ಸುಧಾಕರನನ್ನು ನೋಡಿದ. ಯಲ್ಲವ್ವ ಅವರಿಬ್ಬರನ್ನೂ ನೋಡುತ್ತ ನಿಂತಳು.