ಇರುಬ ಎನ್ನುವ ಹೆಸರು ಅಪಭ್ರಂಶವಾಗಿ ಇರ್ಬುವಾಗಿ, ಕೊನೆಯಲ್ಲಿ ಸಾಬಿ ಸೇರಿಕೊಂಡು ಧನ್ಯಾಡಿಯ ಫಾಸಲೆಯ ಹಳ್ಳಿಗಳೆಲ್ಲ ಇರ್ಬುಸಾಬಿಯಾಗಿ ಸಾಕಷ್ಟು ಹೆಸರುವಾಸಿಯಾಗಿದ್ದನು. ಬಹಳ ಎತ್ತರದ ಆಳು ಆಗಿರದ ಇರ್ಬುವು ಬಣ್ಣದಲ್ಲಿ ಕಪ್ಪು. ತುಂಬು ತೋಳಿನ ಬಿಳಿ ಅಂಗಿಯ ಕೈಗಳನ್ನು ಅರ್ಧಕ್ಕೆ ಮಡಚಿದ, ಅದರ ಕಾಲರಿಗೆ ಬೆವರು ಕಂತದೆ ಇರಲಿ ಎಂದು ಕರ್ಚೀಫನ್ನು ಸುತ್ತಿದ, ಬಿಳಿಬಣ್ಣದ ಪೈಜಾಮ ಹಾಗೂ ತಲೆಗೆ ಬಿಳಿ ಟವೆಲ್ಲನ್ನು ಸುತ್ತಿ ಅದರ ಚುಂಗನ್ನು ಹೆಗಲ ಮೇಲೆ ಹಾಕಿಕೊಂಡು ಇರುವುದು ಎಲ್ಲರೂ ನೋಡಿರುವ ಇರ್ಬುವಿನ ಅಲಂಕಾರ. ಅವನ ಮೂಲ ಎಲ್ಲಿ ಎನ್ನುವುದು ಯಾರಿಗೂ ಗೊತ್ತಿಲ್ಲ.
ಹತ್ತಿ ಹಿಂಜುವ ಬಿಲ್ಲನ್ನು ಹೆಗಲ ಮೇಲೆ ಇಟ್ಟುಕೊಂಡು ಬರುತ್ತಿದ್ದ ಇರುಬ ಸಾಹೇಬ, ಅಡಕೆಕಾಂಡವನ್ನು ಅರ್ಧ ಮಾಡಿ ಅರೆತೋಡಿಗೆ ಅಡ್ಡಲಾಗಿ ಕಟ್ಟಿದ ಕಾಲುಸಂಕದ ಮೇಲೆ ಬ್ಯಾಲೆನ್ಸು ಮಾಡುತ್ತ ಬರುವಾಗಲೇ ದೊಡ್ಡಪ್ಪ ಬಲರಾಮರಿಗೆ ಅವನು ಬರುವುದು ತಿಳಿಯುತ್ತಿತ್ತು. ಬೆಳಗ್ಗೆ ಮನೆಯ ಎದುರಿನ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೂ ಕೊಯ್ಯಲೆಂದೊ, ತೊಂಡೆ ಚಪ್ಪರಕ್ಕೆ ಗೋಬರ್ ಗ್ಯಾಸಿನ ಟ್ಯಾಂಕಿನ ಹೊರಹಾಕಿದ ಗಂಜಲವನ್ನು ಹಾಕುವಾಗಲೊ, ತಮ್ಮ ಎಂದಿನ ಹಿತ್ತಾಳೆ ಲೋಟದಲ್ಲಿ (ಲೋಟವೇ ಅದು? ಅಳತೆ ಮಾಡಿದರೆ ಒಂದು ಸೇರಿನ ಮಾಪನಕ್ಕೇನೂ ಕಡಮೆಯಿಲ್ಲದ ಲೋಟವೆಂಬ) ಕಾಸಂಡೆಯಲ್ಲಿ ಚಾ ಕುಡಿಯುವಾಗಲೊ ಅಥವಾ ಹೀಗೆ ಸುಮ್ಮನೆ ಆಲಸ್ಯವೆಂದು ನಾಲ್ಕಾರು ಒಣಅಡಕೆಯ ಚೂರಿನ ಜೊತೆ ಪರಮಾಶಿ ಸುಣ್ಣ ಹಚ್ಚಿದ ಒಂದೆರಡು ವೀಳ್ಯದೆಲೆ ಜಗಿಯುವಾಗಲೊ, ಕೆಂಪು ಎಂಜಲು ಹೊರಬರಬಾರದೆಂದು ಕೆಳಗಿನ ಗಲ್ಲವನ್ನು ಆದಷ್ಟು ಮುಂದೆ ಚಾಚಿ, ಮುಖವನ್ನು ಮೇಲೆತ್ತಿ ‘ಇರ್ಬುಸಾಬಿ ಬರುತ್ತ ಇದ್ದಾನೆ’ ಎಂದು ಭವಿಷ್ಯ ನುಡಿದರೆ, ಮನೆಯ ಮೂಲೆಮೂಲೆಯಲ್ಲಿ ಅವರವರ ಮಟ್ಟಿನ ಗಹನವಾದ ಕೆಲಸಗಳನ್ನು ಮಾಡುತ್ತಿದ್ದ ಮಕ್ಕಳೆಲ್ಲ ‘ಹೋ’ ಎನ್ನುತ್ತ, ಪತ್ತಾಸಿನ ಪಕ್ಕದಲ್ಲಿದ್ದ ಸಣ್ಣ ಬೆಂಚಿನ ಮೇಲೆ ಒಂದರ ಮೇಲೆ ಒಂದನ್ನು ನೆಲದ ಮಣ್ಣು ತಾಗದಂತೆ ಗೋಣಿಯಿಂದ ಸುತ್ತಿ ಪೇರಿಸಿಟ್ಟಿದ್ದ ತಮ್ಮ ತಮ್ಮ ಹಾಸಿಗೆಯನ್ನು ತಲೆಯ ಮೇಲೆ ಇಟ್ಟುಕೊಂಡು ಅಂಗಳದ ಈಶಾನ್ಯ ಮೂಲೆಯಲ್ಲಿದ್ದ ದನದ ಕೊಟ್ಟಿಗೆಯ ಎದುರು ನಿಲ್ಲುತ್ತಿದ್ದರು. ಅಲ್ಲಿ ಸೇರಿದ ಮಕ್ಕಳಲ್ಲಿ ದೊಡ್ಡಮಕ್ಕಳು ಇರ್ಬುಸಾಬಿಗೆ ಕೆಲಸ ಶುರುಮಾಡಲು ಮೊದಲು ಕೊಡಬೇಕಾದ ಕಪ್ಪು ಚಾ ಮಾಡಿಸಲು ಅಡುಗೆಮನೆಯೊಳಗೆ ಓಡಿದರೆ, ಮತ್ತೆ ಕೆಲವರು ಕೆಲಸದ ಮಧ್ಯೆ ಅವನಿಗೆ ನೀರಿನ ಜೊತೆ ತಿನ್ನಲು ಮುದ್ದೆ ಡಬ್ಬಿ ಬೆಲ್ಲವನ್ನು ಇಡಲು ಬಾಳೆಯೆಲೆ ತರಲು ತೋಟಕ್ಕೆ ಓಡಿದರು. ಇನ್ನೊಬ್ಬರು ಹಾರಿದ ಹತ್ತಿಯನ್ನು ಒಟ್ಟುಮಾಡಲು ಬೇಕಾಗಬಹುದೆಂದು ಪೊರಕೆ ತರಲು ಹೋದರು. ಉಳಿದ ಚಳ್ಳೆಪಿಳ್ಳೆ ಮಕ್ಕಳು ತಾವು ದೊಡ್ಡವರಾದ ಮೇಲೆ ಯಾವ ಕೆಲಸ ಮಾಡಬಹುದೆಂದು ಆಲೋಚಿಸುತ್ತ ತಮ್ಮ ತಮ್ಮ ಹಾಸಿಗೆಯನ್ನು ಹೆಬ್ಬಾಗಿಲಿನ ದಂಡೆಯಲ್ಲಿಟ್ಟು ಅವನ ಬರುವಿಕೆಗೆ ಕಾಯುತ್ತಿದ್ದರು.
ಇರ್ಬುಸಾಬಿಯ ಆದರೋಪಚಾರದಲ್ಲಿ ಅತಿಥಿಸತ್ಕಾರ ಒಂದು ಪಾಲಾದರೆ, ಅವನು ನಮ್ಮ ಮೇಲೆ ಕೃಪಾದೃಷ್ಟಿ ತೋರಿ ನಮ್ಮ ಹಾಸಿಗೆಗೆ ಒಂದಿಷ್ಟು ಹೆಚ್ಚು ಹತ್ತಿ ತುಂಬಿದರೆ ರಾತ್ರಿ ಸಾಲಲ್ಲಿ ಮಲಗಿದಾಗ ನಾವು ಉಳಿದವರಿಗಿಂತ ಎತ್ತರದಲ್ಲಿ ಮಲಗಬಹುದು ಎಂಬ ಸ್ವಾರ್ಥವೇ ಹೆಚ್ಚಿತ್ತು. ವರ್ಷಕ್ಕೆ ಒಂದಾವರ್ತಿ ನಮ್ಮ ಮನೆಗೆ ಬಂದು, ಒಂದೆರಡು ದಿನಗಳಲ್ಲಿಯೇ ಎಲ್ಲರ ಹಾಸಿಗೆಯ ಹತ್ತಿಯನ್ನು ಹೊರಗೆ ತೆಗೆದು, ಅವುಗಳನ್ನೆಲ್ಲ ತನ್ನ ಬಿಲ್ಲಿನಲ್ಲಿ ಹಿಂಜಿ, ಹಿಂಜಲು ಆಗದೆ ತುಂಬ ಗಟ್ಟಿಯಾದ ಹತ್ತಿಯನ್ನು ಬೇರೆ ಮಾಡಿ, ಹೊಸ ಹತ್ತಿಯನ್ನು ತನ್ನ ಚೀಲದಿಂದ ತೆಗೆದು ಹಾಸಿಗೆಯ ಒಳಗೆ ತುಂಬಿ, ಅದನ್ನು ಸಮತಟ್ಟಾಗಿ ಮಾಡಿ ಒಳಗಿನ ಹತ್ತಿ ಜಾರದಂತೆ ಅಲ್ಲಲ್ಲಿ ಒಂದೊಂದು ನೂಲಿನ ಗಂಟನ್ನು ಹಾಕಿ ಕೊಟ್ಟರೆ ಅದನ್ನು ಹೊತ್ತುಕೊಂಡು ಮನೆಯ ಒಳಗೆ ಹೋಗುವ ಅದರ ಯಜಮಾನರ ಗಾಂಭೀರ್ಯ ಯಕ್ಷಗಾನದ ಯಾವುದೇ ಎರಡನೆಯ ವೇಷವನ್ನು ಮೀರಿಸುವಂತದ್ದು. ಮಧ್ಯಾಹ್ನ ನಮ್ಮ ಮನೆಯಲ್ಲಿಯೇ ಊಟಮಾಡಿ ದೇವಸ್ಥಾನದ ಜಗುಲಿಯಲ್ಲಿ ಒಂದರ್ಧ ಗಂಟೆ ನಿದ್ದೆಮಾಡಿ ಮತ್ತೆ ಕೆಲಸಮಾಡಲು ತೊಡಗಿದರೆ ಸಂಜೆಯವರೆಗೆ ನಿರಂತರವಾಗಿ ದುಡಿಯುತ್ತಿದ್ದ ಇರ್ಬುಸಾಬಿ. ಮಧ್ಯದಲ್ಲಿ ದೊಡ್ಡಪ್ಪ ಬಂದು ಮಾತನಾಡಿಸಿದರೆ ಅವರ ಜೊತೆಯಲ್ಲಿ ಒಂದಿಷ್ಟು ಹರಟುತ್ತಿದ್ದ. ಬಿಲ್ಲಿನ ಎರಡು ತುದಿಗೆ ಬಿಗಿಯಾಗಿ ಕಟ್ಟಿದ್ದ ತಂತಿಯು ಹೊರಸೂಸುತ್ತಿದ್ದ ಕ್ರಮಬದ್ಧವಾದ ಜುಂಯ್… ಜುಂಯ್ ಎಂಬ ಶಬ್ದದ ಜೊತೆಯಲ್ಲಿ ಹಿಂಜಲ್ಪಡುತ್ತಿದ್ದ ಹತ್ತಿಯು ಮುಸ್ಸಂಜೆಯ ಸೂರ್ಯನ ಬೆಳಕಿನ ಹಿನ್ನೆಲೆಯಲ್ಲಿ ಬೀಸುವ ಮಂದಗಾಳಿಗೆ ನಿಧಾನವಾಗಿ ಹಾರುವಾಗ ಚಿನ್ನದಬಣ್ಣವನ್ನು ಪಡೆಯುತ್ತಿತ್ತು. ಅದರ ಹಿಂದೆ ಕುಕ್ಕರುಗಾಲಿನಲ್ಲಿ ಕುಳಿತು ಏಕಾಗ್ರಚಿತ್ತದಿಂದ ಹತ್ತಿಯನ್ನು ಬಡಿದು, ಬಿಡಿಸಿ, ಹಾಸಿಗೆಯನ್ನು ಹೊಸದು ಮಾಡುವ ಇರ್ಬುವು ಯಾವುದೋ ಅದೃಷ್ಟಶಕ್ತಿಯ ಸಮ್ಮೋಹನಕ್ಕೊಳಗಾಗಿ ನಿರಂತರವಾಗಿ ದುಡಿಯುವ ಕರ್ಮಯೋಗಿಯಂತೆ ಕಾಣುತ್ತಿದ್ದನು. ಹೀಗೆ ಪುನರ್ಜನ್ಮ ಪಡೆಯುವ ನಮ್ಮ ಹಾಸಿಗೆಗಳಿಗೆ ಇನ್ನೊಮ್ಮೆ ಇಂತಹ ಅದೃಷ್ಟ ಬರುವುದು ಮುಂದಿನ ವರ್ಷವೆ.
* * *
ಇರುಬ ಎನ್ನುವ ಹೆಸರು ಅಪಭ್ರಂಶವಾಗಿ ಇರ್ಬುವಾಗಿ, ಕೊನೆಯಲ್ಲಿ ಸಾಬಿ ಸೇರಿಕೊಂಡು ಧನ್ಯಾಡಿಯ ಫಾಸಲೆಯ ಹಳ್ಳಿಗಳೆಲ್ಲ ಇರ್ಬುಸಾಬಿಯಾಗಿ ಸಾಕಷ್ಟು ಹೆಸರುವಾಸಿಯಾಗಿದ್ದನು. ಬಹಳ ಎತ್ತರದ ಆಳು ಆಗಿರದ ಇರ್ಬುವು ಬಣ್ಣದಲ್ಲಿ ಕಪ್ಪು. ತುಂಬು ತೋಳಿನ ಬಿಳಿ ಅಂಗಿಯ ಕೈಗಳನ್ನು ಅರ್ಧಕ್ಕೆ ಮಡಚಿದ, ಅದರ ಕಾಲರಿಗೆ ಬೆವರು ಕಂತದೆ ಇರಲಿ ಎಂದು ಕರ್ಚೀಫನ್ನು ಸುತ್ತಿದ, ಬಿಳಿಬಣ್ಣದ ಪೈಜಾಮ ಹಾಗೂ ತಲೆಗೆ ಬಿಳಿ ಟವೆಲ್ಲನ್ನು ಸುತ್ತಿ ಅದರ ಚುಂಗನ್ನು ಹೆಗಲಮೇಲೆ ಹಾಕಿಕೊಂಡು ಇರುವುದು ಎಲ್ಲರೂ ನೋಡಿರುವ ಇರ್ಬುವಿನ ಅಲಂಕಾರ. ಅವನ ಮೂಲ ಎಲ್ಲಿ ಎನ್ನುವುದು ಯಾರಿಗೂ ಗೊತ್ತಿಲ್ಲ. ಮನೆಯ ಹಾಸಿಗೆಗಳಿಗೆ ರಿಪೇರಿ ಎಂದರೆ ಏನಂದೇ ಅರಿಯದ ಸಮಯದಲ್ಲಿ, ಊರಿಗೆ ಅಂತಹ ಕೆಲಸ ಮಾಡುವವನು ಬಂದಾಗ ಅವನನ್ನು ತುಂಬುಹೃದಯದಿಂದ ಸ್ವಾಗತಿಸದೆ, ಅವನ ಮೂಲವನ್ನು ಕೆದಕಿ ಸಮಯ ಹಾಳುಮಾಡುವುದು ಜಾಣರ ಲಕ್ಷಣವಲ್ಲವೆಂಬುದನ್ನು ಊರ ಮಹನೀಯರೆಲ್ಲ ಮೊದಲೇ ತಿಳಿದಿದ್ದುದರಿಂದ ಇರ್ಬು, ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ಬಂದು ನೆಲೆನಿಂತು ಸ್ವಲ್ಪ ಸಮಯದಲ್ಲೇ ಧನ್ಯಾಡಿಯವನೆ ಆಗಿ ಹೋದ. ಆತ ನಮ್ಮ ಊರಿನಲ್ಲಿ ಹಾಗೆ ನಿಲ್ಲಲು ಒಂದು ರೀತಿಯಲ್ಲಿ ಕಾರಣವಾದದ್ದು ಮನೆಯ ಹತ್ತಿರದ ಗೋಪಾಲಕೃಷ್ಣ ದೇವರ ಜಾತ್ರೆ. ಆ ದೇವರು ಊರಮಟ್ಟದಲ್ಲಿ ಕಾರಣಿಕವೆ. ಊರಿನವರು ತಮಗೋ, ತಮ್ಮ ರಾಸುಗಳಿಗೋ ಕಾಯಿಲೆ-ಕಸಾಲೆಯೆಂದು ಹರಕೆಯನ್ನು ಗೋಪಾಲಕೃಷ್ಣ ದೇವರಲ್ಲಿ ಹೇಳಿಕೊಂಡಿದ್ದರೆ, ಆ ಹರಕೆಯನ್ನು ಆ ವರ್ಷದ ಜಾತ್ರೆಯ ಮೊದಲು ತೀರಿಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ. ಕೊನೆಯವರೆಗೂ ಕಾದು ಕೊನೆಗೆ ಜಾತ್ರೆಯ ದಿನವೇ ಹೇಳಿಕೊಂಡ ಹರಕೆಯನ್ನು ತೀರಿಸಲು ಊರ-ಪರವೂರವರೆಲ್ಲರೂ ಬರುತ್ತಿದ್ದುದರಿಂದ ಜಾತ್ರೆಯ ದಿನ ಸಾಕಷ್ಟು ಜನರು ಒಟ್ಟಾಗುತ್ತಿದ್ದರು. ಹಾಗೆಯೇ ಆ ವರ್ಷ, ದೇವಸ್ಥಾನದ ಮೊಕ್ತೇಸರ ಹಾಗೂ ಅರ್ಚಕ ಎರಡೂ ಆಗಿದ್ದ ದೊಡ್ಡಪ್ಪ ಬೆಳಗ್ಗೆ ಬೇಗ ಧ್ವಜಾರೋಹಣಕ್ಕಾಗಿ ದೇವಸ್ಥಾನದತ್ತ ಹೋಗಿದ್ದರು. ಅನತಿ ದೂರದಲ್ಲಿದ್ದ ಕರೆಂಟು ಕಂಬದ ತುದಿಗೆ ಜೇಡರಬಲೆ ಕಟ್ಟಿದ ಬಲ್ಬಿನ ಹಳದಿ ಬೆಳಕಿನ ಅಡಿಯಲ್ಲಿ ಯಾರೋ ನಿಂತಂತೆ ಕಂಡಿತು. ಯಾರೋ ಹರಕೆ ತೀರಿಸಲು ಬೆಳಗ್ಗೆ ಬೇಗನೆ ಊರಿಂದ ಹೊರಟು ಇಲ್ಲಿಗೆ ಬಂದಿರಬಹುದು ಎಂದುಕೊಂಡು ದೊಡ್ಡಪ್ಪ ಮುಂದೆ ಹೋದಾಗ ಆ ವ್ಯಕ್ತಿ, “ಸಾಮಿ” ಎಂದು ದೊಡ್ದಪ್ಪನನ್ನು ಕರೆದನು.
ಆಗಲೇ ಸಾಕಷ್ಟು ದೂರ ಹೋಗಿದ್ದ ದೊಡ್ದಪ್ಪ ಅಲ್ಲಿಯೇ ನಿಂತು, “ಯಾರದು? ಮುಖ ಕಾಣಿಸುವುದಿಲ್ಲ. ಸ್ವಲ್ಪ ಮುಂದೆ ಬನ್ನಿ” ಎಂದರು.
ಹತ್ತಿರ ಬಂದ ಇರ್ಬು, “ನಾನು ಸಾಮಿ, ಇರುಬ” ಎಂದ.
ಊರಿಗೆ ಬಂದು ಬರೀ ಒಂದು ವಾರವಾಗಿದ್ದರೂ, ಊರಿನಲ್ಲಿ ಇರುವ ನೂರು ಮತ್ತೊಂದು ಜನರಲ್ಲಿ ಒಬ್ಬ ಹೆಚ್ಚಾದರೂ ಅಥವಾ ಕಮ್ಮಿಯಾದರೂ ಕ್ಷಣಮಾತ್ರದಲ್ಲಿ ಎಲ್ಲರಿಗೂ ಗೊತ್ತಾಗುವ ಸಮಯದಲ್ಲಿ ದೊಡ್ದಪ್ಪನಿಗೆ ಅವನ ಪರಿಚಯ ಆಗಲೇ ಆಗಿತ್ತು. ಹತ್ತಿರದಲ್ಲಿ ಗುಡಿಸಲು ಕಟ್ಟಿಕೊಂಡಿರಲು ತೆಂಗಿನಮರದ ಗರಿಗಳನ್ನು ಕೇಳಿಕೊಂಡು ಇರ್ಬುವು ಊರಿಗೆ ಬಂದ ದಿನ ಮನೆಗೆ ಬಂದಿದ್ದ. ಆಗ ದೊಡ್ದಪ್ಪ ತೆಂಗಿನಮರದ ಗರಿಗಳ ಜೊತೆ ಒಂದಿಷ್ಟು ಪಕ್ಕಾಸಿಗಳನ್ನು, ಒಂದಿಷ್ಟು ಪಾತ್ರೆಗಳನ್ನು ಕೊಟ್ಟು ಕಳುಹಿಸಿದ್ದರು.
“ಹೋ, ಇರುಬ. ಏನು ಇಷ್ಟು ಬೆಳಗ್ಗೆ?”
“ಸಾಮಿ, ನಿಮಗೆ ಗೊತ್ತು, ನನ್ನದು ಅಂತ ಅಂಗಡಿ ಅಂತ ಇಲ್ಲಿಲ್ಲ. ಮನೆಮನೆಗೆ ಹೋಗಿ ಹಾಸಿಗೆ ರಿಪೇರಿ ಮಾಡುವುದು ಮಾತ್ರ ಮಾಡಿಕೊಂಡಿದ್ದೇನೆ. ಇಲ್ಲಿ ಇವತ್ತು ಪೂಜೆಯಿದೆಯಲ್ಲ. ನಾನು ಇಲ್ಲೆ ಹತ್ತಿರ ಕುಳಿತುಕೊಂಡು ಒಂದೆರಡು ದಿಂಬು, ಹಾಸಿಗೆ ಮಾರಾಟ ಮಾಡಲಾ?”
“ಮಾಡು ಮಾರಾಯ. ಜಾಗವೇನು ನನ್ನದಲ್ಲ. ಆದರೆ ನೋಡು, ಇಲ್ಲಿ ಬರುವವರೆಲ್ಲ ಚಾಪೆಯ ಮೇಲೆ ಮಲಗುವ ಜನರೆ. ನಿನ್ನ ಹಾಸಿಗೆಯನ್ನು, ಅದೂ ಅಷ್ಟು ದುಡ್ಡು ಕೊಟ್ಟು ಯಾಕೆ ತೆಗೆದುಕೊಂಡು ಹೋಗುತ್ತಾರೆ?”
“ನನಗೆ ಜನ ಇವತ್ತು ತೆಗೆದುಕೊಂಡು ಹೋಗದೆ ಇದ್ದರೆ ತೊಂದರೆ ಇಲ್ಲ ಸಾಮಿ. ಆದರೆ ಇಲ್ಲೊಬ್ಬ ಹಾಸಿಗೆ ರಿಪೇರಿ ಮಾಡುವವನು ಇದ್ದಾನೆ ಎಂದು ಸುತ್ತಮುತ್ತಲಿನ ಊರಿನವರಿಗೆ ನನ್ನ ಗುರುತಾದರೆ, ಅದು ನನಗೇ ಉಪಯೋಗವಲ್ಲವಾ? ನಾಳೆ ದಿನ ಅವರ ಊರಿಗೆ ಹೋದಾಗ ಹಾಸಿಗೆಯಿದ್ದವರು ನನ್ನಲ್ಲಿ ರಿಪೇರಿ ಮಾಡಿಸಿಯಾರು. ಹಾಸಿಗೆಯಿಲ್ಲದವರು ನಾಲ್ಕು ಕಾಸು ಒಟ್ಟಾದಾಗ ನನ್ನಲ್ಲಿ ಹಾಸಿಗೆ ಕೊಂಡಾರು. ಕೊಂಡವರು ಇವತ್ತಲ್ಲ ನಾಳೆ ನನ್ನ ಹತ್ತಿರ ಅದಕ್ಕೆ ಹತ್ತಿ ತುಂಬಲು ಹೇಳಲೇಬೇಕಲ್ಲ.”
ಇರ್ಬುವಿನ ವ್ಯಾವಹಾರಿಕ ದೃಷ್ಟಿಯನ್ನು ಮೆಚ್ಚಿಕೊಂಡ ದೊಡ್ದಪ್ಪ, “ಎಲಾ ಸಾಬಿಯೆ” ಎಂದು ಅವನಿಗೆ ಅನುಮತಿಕೊಟ್ಟು ದೇವಸ್ಥಾನದ ಒಳಗೆ ಹೋದರು.
ಬೇರೆ ಮಾರಾಟಗಾರರು ಬರುವ ಮೊದಲೇ ಎಲ್ಲ ಕಡೆಯಿಂದಲೂ ಕಾಣಬಹುದಾದ ಸ್ಥಳವನ್ನು ಹಿಡಿದು ಇರ್ಬು ಸಾಬಿಯು ಕುಳಿತು, ಮನೆಯಲ್ಲಿ ಹೊಲಿದಿಟ್ಟಿದ್ದ ಒಂದೆರಡು ಹಾಸಿಗೆಗಳನ್ನು, ಅರ್ಧ ಹೊಲಿದಿದ್ದ ಒಂದಿಷ್ಟು ದಿಂಬುಗಳನ್ನು ತಂದು ಅಲ್ಲಿ ಕುಳಿತು ಅವುಗಳನ್ನು ಹೊಲಿಯತೊಡಗಿದ. ಅವನು ಎಣಿಸಿದಂತೆ ಎಂಟತ್ತು ಜನರು ಅವನನ್ನು ತಮ್ಮ ತಮ್ಮ ಮನೆಗೆ ಹಾಸಿಗೆ ರಿಪೇರಿಮಾಡಿಕೊಡಲು ಕರೆದರಂತೆ. ಹಾಗೆಯೇ ಕೆಲವರು ಒಂದಿಷ್ಟು ಅಲ್ಲಿಯೇ ವ್ಯಾಪಾರವನ್ನೂ ಮಾಡಿದರು.
ತಡರಾತ್ರಿ ದೊಡ್ದಪ್ಪ ದೇವಸ್ಥಾನಕ್ಕೆ ಬೀಗಹಾಕಿ ಮನೆಗೆ ಹೋಗಬೇಕೆಂದಿದ್ದಾಗ ಇರ್ಬು ಎದುರು ಸಿಕ್ಕಿದನಂತೆ. ಮುಖದಲ್ಲಿ ಮಂದಹಾಸವಿತ್ತು. ಆತನೇ, “ವ್ಯಾಪಾರ ಚೆನ್ನಾಗಾಯ್ತು ಸಾಮಿ. ನಿಮ್ಮ ಆಶೀರ್ವಾದ” ಎಂದು ಹೇಳಿ ಒಂದಿಷ್ಟು ಹಣವನ್ನು ದೊಡ್ದಪ್ಪನಿಗೆ ಕೊಡಲು ಬಂದನAತೆ.
“ಇದೇನಿದು?” ಎಂದು ಕೇಳಿದರು ದೊಡ್ದಪ್ಪ.
“ಕಾಣಿಕೆ ಸಾಮಿ. ನಿಮಗೆ”
“ನನಗ್ಯಾಕೆ ಕೊಡುತ್ತಿ? ಇಡೀ ದಿನ ಕುಳಿತು ವ್ಯಾಪಾರ ಮಾಡಿದ್ದು ನೀನು. ನಾನು ನಿನಗಾಗಿ ಏನೂ ಮಾಡಲಿಲ್ಲ. ನಿನಗೆ ಕೊಡಲೇಬೇಕೆಂದಿದ್ದರೆ ದೇವರ ಹುಂಡಿಗೆ ಹಾಕು.”
“ನಾನು ಒಳಗೆ ಬರಲಾ. ಎಷ್ಟು ಹಾಕಲಿ?” ಎಂದು ಮುಗ್ಧವಾಗಿ ಕೇಳಿದ.
“ದೇವರು ಒಬ್ಬನಿಗೋ ಒಂದಿಷ್ಟು ಜನರಿಗೋ ಸೇರಿದವನಲ್ಲ. ಸೂರ್ಯ ತನಗೆ ನಮಸ್ಕಾರ ಮಾಡಿದವನಿಗೆ ಮಾತ್ರ ಬೆಳಕು ಕೊಡುತ್ತಾನೆಯೆ? ಇದು ಹೀಗೆಯೆ. ನೀನು ಎಷ್ಟು ಕೊಡಬೇಕು ಅಂತ ಕೇಳಿದೆಯಲ್ಲ. ನಿನ್ನ ಮೊದಲ ವ್ಯಾಪಾರದ ಲಾಭಾಂಶವನ್ನು ಸಾಧ್ಯವಾದರೆ ದೇವರ ಹುಂಡಿಗೆ ಹಾಕು” ಎಂದು ಹೇಳಿ ದೊಡ್ದಪ್ಪ ಮನೆಗೆ ಬಂದರು.
ಈ ರೀತಿಯಲ್ಲಿ ವ್ಯಾಪಾರವನ್ನು ಗಟ್ಟಿಮಾಡಿಕೊಂಡು ಊರಿನಲ್ಲಿಯೇ ನೆಲೆಸಿ, ಪ್ರತೀವರ್ಷ ಖಾಯಂ ಆಗಿ ಜಾತ್ರೆಯ ದಿನ ಕುಳಿತುಕೊಂಡು ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡ. ಹಾಗೆಯೇ ತನ್ನ ಪ್ರಥಮ ವ್ಯಾಪಾರದ ಲಾಭವನ್ನು ಸಂಜೆ ಮನೆಗೆ ಹೋಗುವ ಮೊದಲು ದೇವರ ಹುಂಡಿಗೆ ಹಾಕಿಹೋಗುತ್ತಿದ್ದ.
ಇರ್ಬುಸಾಬಿಯ ಬಳಿ ಒಂದು ಮೋಟು ಕೊಳಲು ಇತ್ತು. ಆ ಕೊಳಲಿನ ಬಣ್ಣವೂ ಇರ್ಬುವಿನಂತೆಯೆ ಕಪ್ಪೆ. ಇರ್ಬುವಿನ ಮಾತಿನಲ್ಲಿಯೇ ಹೇಳುವುದಾದರೆ ಇದೊಂದೆ ಆತನಿಗೆ ಸಿಕ್ಕಿದ ಪಿತ್ರಾರ್ಜಿತ ಆಸ್ತಿ. ಆತನ ತಂದೆ ನ್ಯಾಶನಲ್ ಸರ್ಕಸ್ನಲ್ಲಿ ಬ್ಯಾಂಡ್ ಕಲಾವಿದರಾಗಿದ್ದರಂತೆ. ಅವರು ಸರ್ಕಸ್ಸಿನವರ ಜೊತೆ ದೇಶದ ಉದ್ದಗಲ ತಿರುಗುತ್ತಿದ್ದರಂತೆ. ಅಂತಹ ಒಂದು ತಿರುಗಾಟದ ಸಮಯ, ಆ ಕೊಳಲನ್ನು ತಂದಿದ್ದರಂತೆ. ಮನೆಯಲ್ಲಿ ಒಬ್ಬರೆ ಇದ್ದಾಗ ಅದರ ಅಭ್ಯಾಸ ಮಾಡುತ್ತಿದ್ದರಂತೆ. ಅವರಿದ್ದಷ್ಟು ಕಾಲ ಕೊಳಲಿನ ಹತ್ತಿರ ಹೋಗದಿದ್ದ ಇರ್ಬುವು ಊರುಬಿಟ್ಟು ಬರುವಾಗ ತಂದೆಯ ನೆನಪಿಗಿರಲಿ ಎಂದು ತೆಗೆದುಕೊಂಡು ಬಂದಿದ್ದನಂತೆ. ಇರ್ಬುವಿಗೆ ಇದ್ದ ಅಸಾಧಾರಣ ನೆನಪಿನಶಕ್ತಿಯಿಂದ ಆತನಿಗೆ ಯಾವುದೇ ಹಾಡನ್ನು ಕೇಳಿದಾಗ ಅದರ ಲಯ, ಸ್ವರ ಎರಡೂ ಆತನ ಮನಸ್ಸಿನಲ್ಲಿ ಉಳಿಯುತ್ತಿತ್ತು. ಹಾಗಾಗಿ ಸಮಯ ದೊರೆತಾಗ ಆ ನೆನಪಿನ ಅಂದಾಜಿನಲ್ಲಿಯೇ ಕೇಳಿದ ಹಾಡನ್ನು ಕೊಳಲಿನ ಮೂಲಕ ನುಡಿಸಲು ಅಭ್ಯಾಸ ಮಾಡುತ್ತಿದ್ದನು.
* * *
ವಿಶೇಷ ಉತ್ಪನ್ನವಿಲ್ಲದ ಕಾಲದಲ್ಲಿ ದೇವಸ್ಥಾನದ ಕೈಂಕರ್ಯಗಳನ್ನು ಮನೆಯ ಇತರ ಕೆಲಸಗಳಂತೆ ಕರ್ತವ್ಯವೆಂದು ಮಾಡಿಕೊಂಡು, ಅದರ ಜೊತೆಯಲ್ಲಿ ವರ್ಷಾವಧಿ ಸಣ್ಣಮಟ್ಟಿನ ಜಾತ್ರೆಯನ್ನು ದೊಡ್ದಪ್ಪ, ಮಧ್ಯದಲ್ಲಿ ನಾಲ್ಕೈದು ವರ್ಷ ಬಿಟ್ಟರೆ, ಅಪ್ಪನ ಸಹಾಯದಿಂದ ಮಾಡುತ್ತಿದ್ದರು. ಆ ನಾಲ್ಕೈದು ವರ್ಷವು ದೊಡ್ದಪ್ಪನ ಪ್ರಾಯದ ಉತ್ತುಂಗದ ಸಮಯವಾಗಿತ್ತು. ಒಂದು ಮಳೆಗಾಲ ಮುಗಿದು ವಿಜಯದಶಮಿಯ ಮಾರನೆಯ ದಿನ ಮಾಯವಾದ ದೊಡ್ದಪ್ಪ ಹಿಂದೆ ಬಂದದ್ದು ಕೆಲವು ವರ್ಷಗಳ ನಂತರವೆ. ಮನೆಯವರು ಯಾರು ಕೇಳಿದರೂ, ‘ನಾನು ಹಿಂದೆ ಎಲ್ಲಿದ್ದರೇನು? ಈಗ ಬಂದೆನಲ್ಲ’ ಎಂಬುದು ಮಾತ್ರವೇ ಅವರ ಉತ್ತರವಾಗಿತ್ತು. ಆದರೆ ಕೆಲವೊಮ್ಮೆ ಬೇರೆಯವರೊಂದಿಗೆ ಮಾತನಾಡುವಾಗ ‘ದಾದಾ’ ಎಂದು ಬಾಯ್ತಪ್ಪಿ ಕರೆಯುತ್ತಿದುದರಿಂದ ಹಾಗೂ ನಮಗೆ ಅಪರಿಚಿತ ಭಾಷೆಯ ಸಂಗೀತವಾಗಿದ್ದ, ಆದರೆ ಅಪ್ಪ ಆಗಾಗ ಸಿಲೋನ್ ರೇಡಿಯೋದಲ್ಲಿ ಕೇಳುತ್ತಿದ್ದ ರವೀಂದ್ರರ ಸಂಗೀತದAತಿದ್ದ ಹಾಡುಗಳನ್ನು ಗುನುಗುನಿಸುತ್ತಿದ್ದರಿಂದ ಬಹುಶಃ ಕೋಲ್ಕತ್ತಾ ಅಥವಾ ಅಲ್ಲಿಯ ಸುತ್ತಮುತ್ತಲಿನ ಸ್ಥಳದಲ್ಲಿ ಅವರು ಸ್ವಲ್ಪ ಸಮಯ ಕಳೆದಿರಬಹುದು ಎಂದು ಆಗ ಅಂದುಕೊಂಡಿದ್ದೆವು. ಆದರೆ ಅದು ಖಚಿತವಾದದ್ದು ನಾವು ದೊಡ್ಡವರಾದ ಮೇಲೆ ಅವರು ತಮ್ಮ ಹತ್ತಿರವಿದ್ದ ರವೀಂದ್ರನಾಥ ಠಾಗೋರರ ಗೀತಾಂಜಲಿಯ ಪುಸ್ತಕವನ್ನು ತೋರಿಸಿದಾಗ ಹಾಗೂ ಅದರಲ್ಲಿ ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್ನ ಯಾವುದೋ ಒಂದು ಪುಸ್ತಕದಂಗಡಿಯ ಮೊಹರು ಇದ್ದುದರಿಂದ.
ಮದುವೆಯಾಗದೆ ಉಳಿದ ದೊಡ್ದಪ್ಪನಿಗೆ ಇನ್ನೋರ್ವ ಅವಿವಾಹಿತ ಇರ್ಬುವಿನ ಪರಿಚಯ ಗಹನವಾದದ್ದು ಆ ವರ್ಷದ ಜಾತ್ರೆಯ ನಂತರವೆ. ಸಮಯ ದೊರೆತಾಗ ದೇವಸ್ಥಾನದ ಜಗುಲಿಯಲ್ಲಿ ಎದುರು-ಬದುರಾಗಿ ಕುಳಿತು ಹರಟೆ ಹೊಡೆಯುವುದು ಮಾಮೂಲಾಗಿತ್ತು. ಅದರ ಜೊತೆಯಲ್ಲಿ ಕೊಳಲಿನಲ್ಲಿ ನುಡಿಸಲು ಅಭ್ಯಸಿಸುತ್ತಿದ್ದ ಪಾಠವನ್ನು ದೊಡ್ದಪ್ಪನ ಎದುರು ಪ್ರದರ್ಶಿಸುತ್ತಿದ್ದ.
ಹಾಡಿನ ಧಾಟಿ ಮನಸ್ಸಿನಿಂದ ಬಾಯಿಗೆ, ‘ತನ್ನನ್ನ…’ ಎಂದು ಗುನುಗುನಿಸಿ ಮತ್ತೆ ಒಂದಾವೃತ್ತಿ ಕೊಳಲಿನಲ್ಲಿ ನುಡಿಸುತ್ತ ಇರುವುದು ಊರಿನವರೆಲ್ಲರೂ ನೋಡಿದ ದೃಶ್ಯವೆ. ದೊಡ್ದಪ್ಪನ ಎದುರು ಸಹ ತಾನು ಕಲಿತುದನ್ನು ನುಡಿಸುತ್ತಿದುದ್ದರಿಂದ ಆತನ ಪ್ರಗತಿಯ ಬಗ್ಗೆ ಅಧಿಕಾರಯುತವಾಗಿ ದೊಡ್ದಪ್ಪ ಹೇಳಬಲ್ಲವರಾಗಿದ್ದರು:
“ಆತ ಮೇಲೆ ಹೋಗುವುದರ ಒಳಗೆ ಒಂದು ಕೃತಿಯನ್ನಾದರೂ ಸಂಪೂರ್ಣವಾಗಿ ನನಗೆ ಕೇಳಿಸಿದ ಮೇಲೆಯೇ” ಎಂದು.
* * *
ಎರಡು ಗುಡ್ಡಗಳ ನಡುವಿನ ಕಾಡು ಹಾಗೂ ಅದರಲ್ಲಿ ಹರಿಯುವ ತೊರೆ. ಧನ್ಯಾಡಿ ಹಾಗೂ ಹತ್ತಿರದ ಮರ್ನಾಲ್ಕು ಹಳ್ಳಿಗಳನ್ನು ನಾಗರಿಕ ಪ್ರಪಂಚದಿಂದ ಬೇರೆ ಮಾಡಿದ್ದವು. ವಾರಕ್ಕೆ ಒಂದಾವರ್ತಿಯೊ, ಎರಡಾವರ್ತಿಯೊ ಬರುತ್ತಿದ್ದ ಮೋಪಿನ ಲಾರಿಯ ಡ್ರೈವರು, ಪೇಪರ್ ಏಜೆನ್ಸಿ ಕಾಮತರು ಕೊಟ್ಟ ಆ ವಾರದ ಪೇಪರುಗಳ ಬಂಡಲನ್ನು ತಂದು ರಸ್ತೆಯ ಪಕ್ಕದ ಚಾ ಅಂಗಡಿಯಲ್ಲಿ ಇಟ್ಟು ಹೋಗುತ್ತಿದ್ದನು. ಆ ಕಡೆ ಹೋದ ಊರವರು ಆ ಬಂಡಲನ್ನು ತಂದು ಊರ ಮರ್ನಾಲ್ಕು ಆಢ್ಯರ ಮನೆಗೆ ತಲಪಿಸುತ್ತಿದ್ದರು. ಈ ಪರಿಸ್ಥಿತಿ ಮುಂದಿನ ಹತ್ತಾರು ವರ್ಷಗಳ ನಂತರ ಸಹ ಬದಲಾಗಿರಲಿಲ್ಲ.
ರಾಮಜನ್ಮಭೂಮಿ ಗಲಭೆ ೧೯೯೨ರಲ್ಲಿ ಆಯಿತಲ್ಲ. ಆಗಲೂ ಸಹ ಗಲಭೆ ನಡೆದು ಮರ್ನಾಲ್ಕು ದಿನಗಳ ಮೇಲೆಯೇ ಊರವರಿಗೆ ವಿಷಯ ತಿಳಿದದ್ದು. ಅಯೋಧ್ಯೆಯ ಹೆಸರನ್ನು ಕನ್ನಡ ಕಾವ್ಯದಲ್ಲಿ, ಯಕ್ಷಗಾನದಲ್ಲಿ ಕೇಳಿ ತಿಳಿದಿದ್ದ, ಆದರೆ ಅದು ಯಾವ ರಾಜ್ಯದಲ್ಲಿದೆ ಎಂದು ಗಟ್ಟಿಯಾಗಿ ಕೇಳಿದರೆ ಬೆಬ್ಬೆಬ್ಬೆ ಎಂದು ಹೇಳುವವರೆ ಅಧಿಕವಾಗಿದ್ದ ಊರಿನಲ್ಲಿ ಗಲಭೆಯ ಬಗ್ಗೆ ತಲೆಬಿಸಿ ಮಾಡಿಕೊಂಡಿರಲಿಲ್ಲ. ಆದರೆ ಅದೇ ಸಮಯದಲ್ಲಿ ಪಕ್ಕದ ಊರಿನ ಜುಮ್ಮಾ ಮಸೀದಿಯ ಹಾಜಿ ಒಂದೆರಡು ಬಾರಿ ಧನ್ಯಾಡಿಗೆ ಬಂದು ಇರ್ಬುವನ್ನು ನೋಡಿ ಮಾತನಾಡಿಸಿದ ಘಟನೆಯ ಬಳಿಕ ಇರ್ಬುವನ್ನು ಕೆಲವರು ನೋಡುವ ರೀತಿ ಸ್ವಲ್ಪ ಬದಲಾಗಿತ್ತು. ಪೇಪರು ಊರಿಗೆ ಬಂದ ಮಾರನೆಯ ದಿನ ಇರ್ಬುವು ಗಡಿಬಿಡಿಯಿಂದ ಮನೆಗೆ ಓಡಿಬಂದ. ಕೈಯಲ್ಲಿ ನಾಲ್ಕು ದಿನದ ಹಿಂದಿನ ಪೇಪರು ಇತ್ತು.
“ಸಾಮಿ” ಎಂದು ಹೆಬ್ಬಾಗಿಲಿನಲ್ಲಿ ನಿಂತು ಕರೆದ. ದೊಡ್ದಪ್ಪ ಹೊರಗೆ ಬಂದರು.
ಕೈಯಲ್ಲಿದ್ದ ಪೇಪರನ್ನು ಬಿಡಿಸಿ ತೋರಿಸಿ, “ಸಾಮಿ, ನಮ್ಮನ್ನೆಲ್ಲ ಪಾಕಿಸ್ತಾನಕ್ಕೆ ಕಳುಹಿಸುತ್ತಾರಂತೆ ಹೌದಾ?” ಎಂದು ಆತಂಕದಲ್ಲಿ ಕೇಳಿದ.
“ನಿನಗ್ಯಾರಪ್ಪ ಹೇಳಿದ್ದು?” ಎಂದು ದೊಡ್ದಪ್ಪ ಕೇಳಿದರು.
“ಪೇಪರಿನಲ್ಲಿ ಬಂದಿದೆಯಂತೆ. ಇವತ್ತು ಸುಬ್ರಾಯನ ಬೀಡಾ ಅಂಗಡಿಯಲ್ಲಿ ಅದೇ ಚರ್ಚೆಯಾಗುತ್ತಿತ್ತು. ನೀನೂ ಪಾಕಿಸ್ತಾನಕ್ಕೆ ಹೋಗುತ್ತಿಯಾ? ಎಂದು ಅಕ್ಕಸಾಲಿ ಆಚಾರಿ ಬೇರೆ ಕೇಳಿದ. ನನಗೆ ಓದಲಿಕ್ಕೆ ಬರುತ್ತದೆಯಾ? ಅದಕ್ಕೆ ನಿಮಗೆ ತೋರಿಸಿ ಕೇಳುವ ಎಂದು ಅಲ್ಲಿದ್ದ ಪೇಪರನ್ನು ತೆಗೆದುಕೊಂಡು ಬಂದೆ” ಇರ್ಬುವಿನ ದನಿಯಲ್ಲಿ ಆತಂಕ ಮಡುಗಟ್ಟಿತ್ತು.
ಸುಬ್ರಾಯ ಆಚಾರಿ ಹಾಗೆ ಕೇಳಲು ಕಾರಣವೂ ಸಹ ಹಾಜಿ ಬಂದು ಇರ್ಬುವನ್ನು ಭೇಟಿಯಾದದ್ದು. ದೇಶದ ಉದ್ದಗಲದಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಹಾಗೂ ಊರಿಗೆ ಹಾಜಿಯು ಬಂದು ಇರ್ಬುವನ್ನು ಮಾತನಾಡಿಸುತ್ತಿದುದ್ದನ್ನು ತಾಳೆಹಾಕಿ ಬಹುಶಃ ಹಾಜಿಯು ತನ್ನ ಊರಿನ ಸುತ್ತಮುತ್ತಲಿನ ಮುಸಲ್ಮಾನರನ್ನು ಒಟ್ಟುಮಾಡಿ ಗಲಭೆಯಿಂದ ರಕ್ಷಿಸಲು ದೇಶದಿಂದ ಹೊರಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡುತ್ತಿರಬಹುದು ಎಂದು ಆತ ತರ್ಕಿಸಿ ಇರ್ಬುವನ್ನು ಕೇಳಿದ್ದನು.
ಇರ್ಬುವಿನ ಆತಂಕವನ್ನು ಅರಿತ ದೊಡ್ದಪ್ಪ, “ಹಾಗೆಲ್ಲ ಒಬ್ಬರನ್ನು ಇನ್ನೊಂದು ದೇಶಕ್ಕೆಲ್ಲ ಕಳುಹಿಸಲು ಬರುವುದಿಲ್ಲ. ನೀನು ಏನು ಹೆದರುವುದು ಬೇಡ. ಈ ಊರಿನ ನೀರಿನ ಋಣ ಇನ್ನೂ ನಿನಗೆ ತೀರಿಲ್ಲ. ಅಕ್ಕಸಾಲಿ ಆಚಾರಿಗೆ ಪಾಕಿಸ್ತಾನ ಯಾವ ದಿಕ್ಕಿನಲ್ಲಿದೆ ಎಂದು ಗೊತ್ತಿರಲಿಕ್ಕಿಲ್ಲ. ಅವನಿಗೆ ಹಾಕಿದ ಹೊಗೆಸೊಪ್ಪು ನೆತ್ತಿಗೆ ಏರಿದರೆ ತಲೆಯಲ್ಲಿ ಬೇಡದ್ದೆಲ್ಲ ಓಡುತ್ತದೆ. ಮಾತನಾಡಲು ಕುಳಿತರೆ ಒಂದಕ್ಕೆ ಒಂದು ಸೇರಿಸಿ ಅಲ್ಲಿಯೇ ಎಲ್ಲವನ್ನು ಫೈಸಲ್ ಮಾಡುತ್ತಾನೆ ಅಂವ” ಎಂದರು ಮುನಿಸಿನಿಂದ.
ಸ್ವಲ್ಪ ನಿರಾಳನಾದ ಇರ್ಬುವು ಅಲ್ಲಿಯೇ ನಿಂತಿದ್ದನು. ಆತನ ಮನಸ್ಸು ಸಮಾಧಾನವಾದದ್ದನ್ನು ಗಮನಿಸಿದ ದೊಡ್ಡಪ್ಪ, “ಇರ್ಬು, ನಿನ್ನನ್ನು ಹಾಜಿಯು ಬಂದು ಮಾತನಾಡಿಸಿದನಂತೆ. ಏನು ವಿಷಯ?” ಎಂದು ಕೇಳಿದರು.
“ಓ ಅದಾ ಸಾಮಿ. ಪಕ್ಕದೂರಿನ ಜುಮ್ಮಾ ಮಸೀದಿಯ ಹಾಜಿಗೆ ಏನೋ ನನ್ನ ಮೇಲೆ ಬಹಳ ಕನಿಕರ ಬಂದಾಗೆ ಇದೆ. ನಾನು ಒಬ್ಬನೆ ಧನ್ಯಾಡಿಯಲ್ಲಿ ಇರುವ ಮುಸಲ್ಮಾನ. ನಾನೊಬ್ಬನೆ ಇಲ್ಲಿರುವುದಕ್ಕಿಂತ ಅವರ ಊರಿಗೆ ಬಂದು ನಿಲ್ಲುವ ಹಾಗೆ ಆದರೆ ನಾನೂ ಅವರ ಜೊತೆಯಲ್ಲಿಯೇ ನಮಾಜು ಮಾಡಬಹುದು. ಅದರ ಜೊತೆಯಲ್ಲಿ ನಾನು ನನ್ನ ಜಾತಿಬಾಂಧವರ ಜೊತೆಯಲ್ಲಿ ಇರಬಹುದು. ಅದಕ್ಕಾಗಿ ಬೇಕಿದ್ದರೆ ಮಸೀದಿಯ ಪಕ್ಕದಲ್ಲಿ ಇರುವ ಖಬರಿಸ್ತಾನದ ಎದುರಿನ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಬಹುದು ಎಂದು ಹೇಳಿದರು. ನನಗೆ ಅದರ ಆವಶ್ಯಕತೆಯಿಲ್ಲ. ಈ ಊರಿನಲ್ಲಿಯೇ ಆರಾಮವಾಗಿದ್ದೇನೆ ಎಂದು ಹೇಳಿದೆ. ಕೊನೆಗೆ ಉಳ್ಳಾಲದಿಂದ ಬಂದ ಅವುಲಿಯಾನೂ ಧನ್ಯಾಡಿಯನ್ನು ಬಿಟ್ಟುಬರಲು ನನಗೆ ಹೇಳಿದರು ಎಂದು ಹಾಜಿಯವರು ಇನ್ನೊಮ್ಮೆ ಬಂದಾಗ ಹೇಳಿದರು. ಇಷ್ಟು ಸಮಯದಿಂದ ನಾನಿಲ್ಲಿದ್ದೇನೆ, ಇಲ್ಲಿಯವರೆಗೆ ನನ್ನ ನೆನಪು ನಿಮಗೆ ಅಗಿಲ್ಲ. ಈಗೇಕೆ ಎಂದು ಕೇಳಿದೆ. ಪರಿಸ್ಥಿತಿ ಈಗ ಸರಿಯಿಲ್ಲ ಎಂದೆಲ್ಲ ಹೇಳಿದರು. ಆಗ ನಾನು ನಿಮ್ಮ ಹೆಸರು ಹೇಳಿ, ನೀವು ಅವುಲಿಯಾರ ತರಹವೆ. ನಿಮ್ಮಿಂದಾಗಿ ನಾನು ಈ ಊರಿನಲ್ಲಿದ್ದೇನೆ. ನೀವು ಇರುವವರೆಗೆ ನನಗೆ ಇಲ್ಲಿರಲು ಏನೂ ತೊಂದರೆಯಿಲ್ಲ ಎಂದು ಹೇಳಿದೆ. ಹಾಜಿಯವರು ನಿನ್ನಿಷ್ಟ ಎಂದು ಹೇಳಿ ಹಿಂದೆ ಹೋದರು” ಎಂದನು.
“ಒಳ್ಳೆ ಕೆಲಸ ಮಾಡಿದ್ದಿ. ಒಂದು ತಿಳಿದಿಕೋ. ದೇಶದ ಯಾವುದೋ ಮೂಲೆಯಲ್ಲಿ ಏನೊ ಆಯಿತೆಂದರೆ ಅದರ ಪರಿಣಾಮ ಇಲ್ಲಿ ಆಗಲೇ ಬೇಕೆಂದೇನಿಲ್ಲ. ನೀನು ಈ ಊರು ಬಿಡಬೇಕಾಗಿಲ್ಲ ಅಥವಾ ದೇಶ ಬಿಡಬೇಕಾಗಿಯೂ ಇಲ್ಲ. ನೀನು ಮುಂಚಿನ ತರಹ ಆರಾಮವಾಗಿರು” ಎಂದು ಇರ್ಬುವನ್ನು ಸಮಾಧಾನಪಡಿಸಿದರು.
“ಸಾಮಿ”
“ಇನ್ನೇನಪ್ಪಾ?”
“ಇಷ್ಟೆಲ್ಲ ಗಲಾಟೆಯಾದ ಮೇಲೆ ನಾನು ಹೊಲಿದ ಹಾಸಿಗೆಯನ್ನು ನಿಮ್ಮ ಧರ್ಮದವರು ಇನ್ನು ತಕೋತಾರಾ ಸಾಮಿ?”
“ನಿನಗೆ ಇಂತಹ ಆಲೋಚನೆ ಹೇಗೆ ಬರುತ್ತದೆ ಮಾರಾಯಾ? ನಿನ್ನಲ್ಲಿ ಯಾರಾದರೂ ನಿನ್ನೆ ಬಂದ ಪೇಪರು ಓದಿ ಹಾಸಿಗೆ ಬೇಡ ಎಂದು ಹೇಳಿದ್ದಾರೋ ಅಥವಾ ಬೀಡಾ ಅಂಗಡಿಯಲ್ಲಿ ಒಂದಿಷ್ಟು ಹೊಗೆಸೊಪ್ಪನ್ನು ನೀನೂ ಹಾಕಿಕೊಂಡು ಇಲ್ಲಿಗೆ ಬರುವವರೆಗೆ ಏನೆಲ್ಲ ಆಗಬಹುದು ಅಂತ ಯೋಚಿಸುತ್ತ ಬಂದೆಯೋ? ಒಂದು ವೇಳೆ ತಗೊಳ್ಳಲಿಲ್ಲ ಅಂತ ಅಂದುಕೊ. ನಾಲ್ಕು ದಿನ ಜಿದ್ದಿನಲ್ಲಿ ಚಾಪೆ ಮೇಲೆ ಮಲಗುತ್ತಾರೆ. ಕೊನೆಗೆ ಬೆನ್ನು ನೋವು ಬಂದು ನೀನು ಮಾಡಿದ ಹಾಸಿಗೆಯಲ್ಲಿಯೇ ಮಲಗುತ್ತಾರೆ. ಅದು ಹಾಳಾದರೆ ನಿನ್ನಲ್ಲಿಯೇ ರಿಪೇರಿ ಮಾಡಿಸುತ್ತಾರೆ. ನೋಡು, ದೇಶದಲ್ಲಿ ಹೊಟ್ಟೆಯ ಚಿಂತೆಯೇ ಜಾಸ್ತಿಯಿದ್ದವರು ಇರುವುದು. ಅವರಿಗೆ ಈ ಗಲಾಟೆ ಮುಖ್ಯವಲ್ಲ. ಪೇಪರಿನಲ್ಲಿ ಬಂದ ಮಾತ್ರಕ್ಕೆ ಎಲ್ಲವೂ ಹಾಳಾಗಿದೆ ಎಂದು ಅಂದುಕೊಳ್ಳುವುದೂ ಬೇಡ. ನಿನ್ನೆಯವರೆಗೆ ನಮ್ಮ ಊರಿನಲ್ಲಿ ನಿನ್ನನ್ನು ಬೇರೆಯಾಗಿ ನೋಡಿದ್ದಾರೋ ಅಥವಾ ನೀನು ಇಲ್ಲಿನವನಲ್ಲ ಅಂತ ಅನ್ನಿಸಿತ್ತೊ ಇಲ್ಲವಲ್ಲ. ಹಾಗಾದರೆ ನಿನ್ನೆಯಿಂದ ಇವತ್ತಿನವರೆಗೆ ಇಲ್ಲಿ ಏನು ಬದಲಾವಣೆಯಾಯಿತು? ಏನೂ ಇಲ್ಲವಲ್ಲ, ಈ ಪೇಪರನ್ನು ನೀನು ನೋಡಿದ್ದು ಬಿಟ್ಟರೆ. ಆದ್ದರಿಂದ ಇದರ ಬಗ್ಗೆ ಜಾಸ್ತಿ ಮಂಡೆಬಿಸಿ ಮಾಡಿಕೊಳ್ಳಬೇಡ” ಎಂದರು.
ಮನಸ್ಸಿಗೆ ನಿರಾತಂಕವಾದಂತಾಯಿತು ಇರ್ಬುವಿಗೆ. ಸ್ವಲ್ಪ ಹೊತ್ತಿನ ನಂತರ ಅದೇ ಲಹರಿಯಲ್ಲಿ ಇರ್ಬುವು ಜೋಳಿಗೆಯಿಂದ ತನ್ನ ಕೊಳಲನ್ನು ನಿಧಾನವಾಗಿ ಹೊರಗೆ ತೆಗೆದನು. ದೊಡ್ದಪ್ಪ, “ನೋಡು, ನಿನಗೂ ಒಳಗಿರುವ ಗೋಪಾಲಕೃಷ್ಣನ ನಡುವೆ ಜಾಸ್ತಿ ವ್ಯತ್ಯಾಸವಿಲ್ಲ. ಅವನ ಕೈಯಲ್ಲೂ ಕೊಳಲು, ಈಗ ನಿನ್ನ ಕೈಯಲ್ಲೂ ಕೊಳಲು. ಅವನು ಕಪ್ಪು, ನೀನು ತೊಳೆದಿಟ್ಟ ಯಜ್ಞೇಶ್ವರ. ಒಂದೇ ಒಂದು ವ್ಯತ್ಯಾಸವೆಂದರೆ ಅವನು ನುಡಿಸಿದರೆ ದನಗಳು ಓಡಿಬರುತ್ತಾವೆ. ನೀನು ನುಡಿಸಿದರೆ ಅವು ಬರುವುದು ಖಾತ್ರಿಯಿಲ್ಲ, ಆದರೆ ಓಡಿಹೋಗುವುದು ಗ್ಯಾರಂಟಿ” ಎಂದರು ಗಟ್ಟಿಯಾಗಿ ನಗುತ್ತ.
ಇರ್ಬುವು “ಅದೇಕೆ ಹಾಗೆ ಹೇಳುತ್ತೀರಿ ಸಾಮಿ? ನಿಮ್ಮ ಮನೆಯ ಹಸುಗಳನ್ನು ಒಮ್ಮೆ ಇಲ್ಲಿ ಬಿಟ್ಟು ನೋಡಿ. ನಾನು ಒಮ್ಮೆ ನುಡಿಸುತ್ತೇನೆ. ಅವುಗಳು ನನ್ನ ಸುತ್ತಲೂ ನಿಲ್ಲುತ್ತಾವೊ, ಇಲ್ಲವೊ ನೀವೇ ನೋಡಿ” ಎಂದನು.
“ಬೇಡ ಮಾರಾಯ. ಅವುಗಳು ಕೊಡುವುದು ಸಿದ್ದೆ ಹಾಲು. ನಿನ್ನ ಕೊಳಲ ನಾದ ಕೇಳಿ ಒಂದು ವೇಳೆ ಅವು ಈಗ ಕೊಡುವ ಹಾಲನ್ನೂ ಕೊಡುವುದನ್ನು ನಿಲ್ಲಿಸಿಬಿಟ್ಟರೆ? ಆ ಧೈರ್ಯ ಮಾಡಲಾರೆ” ಎಂದರು.
ಹೆಹ್ಹೆಹ್ಹೆ ಎಂದು ಎಲೆ ಅಡಕೆ ಜಗಿದು, ಸವೆದು ಅರ್ಧ ಅಳತೆಗೆ ಬಂದ ತನ್ನ ಹಲ್ಲುಗಳನ್ನು ಪ್ರದರ್ಶಿಸುತ್ತ ನಕ್ಕನು ಇರ್ಬು. ಬೇಲಿಯ ಮಣ್ಣಿನ ಮೇಲೆ ಬಾಯಲ್ಲಿ ತುಂಬಿದ್ದ ಬೀಡಾದ ಜೊತೆ ಒಂದಿಷ್ಟು ಎಂಜಲನ್ನು ‘ಥುಪ್’ ಎಂದು ಉಗಿದು, ಮನೆಯ ಹತ್ತಿರ ಬಂದು ಒಂದು ಚೊಂಬು ನೀರನ್ನು ತೆಗೆದುಕೊಂಡು ಬಾಯನ್ನು ಚೆನ್ನಾಗಿ ತೊಳೆದುಕೊಂಡು ಬಂದು ತನ್ನ ಕೊಳಲನ್ನು ಹಿಡಿದುಕೊಂಡನು.
“ಸಂಗೀತ ವಿದ್ವಾಂಸರು ಅಷ್ಟಾವಧಾನ ಸೇವೆ ನಡೆಸಲು ತಯಾರಾದರೋ?” ದೊಡ್ದಪ್ಪ ನಕ್ಕು ಲಘುಧಾಟಿಯಲ್ಲಿ ನುಡಿದರು.
ಹೆಹ್ಹೆಹ್ಹೆ.. ಅಷ್ಟೇ ಇರ್ಬುವಿನ ಉತ್ತರವಾಗಿತ್ತು.
ಕೊಳಲನ್ನು ಮುಖದ ಎಡದ ಭಾಗದಲ್ಲಿ ಇಟ್ಟುಕೊಂಡು ಷಡ್ಜವನ್ನು ಅಭ್ಯಸಿಸಿ ನಂತರ ಕಣ್ಣನ್ನು ಮುಚ್ಚಿಕೊಂಡು ಜಗದೋದ್ಧಾರನಾ… ಎಂದು ನುಡಿಸತೊಡಗಿದ. ಯಾವುದನ್ನೂ ಗುರುಮುಖೇನ ಕಲಿಯದೆ, ತಾನು ನುಡಿಸುತ್ತಿರುವುದು ಕಾಪಿರಾಗದ ಅಪೂರ್ವವಾದ ಹಾಡು ಎಂಬುದನ್ನೂ ಅರಿಯದೆ, ಎಲ್ಲಿಯೋ ಒಮ್ಮೆ ಕೇಳಿದ ಹಾಡನ್ನ ಮನನ ಮಾಡಿಕೊಂಡು ಅದನ್ನು ಕೊಳಲ ಮೂಲಕ ನುಡಿಸಲು ಸಾಧ್ಯವಾಗುವುದು ಹುಟ್ಟು ಪ್ರತಿಭೆಯಿಂದ ಹಾಗೂ ಮನಸ್ಸಿನ ಆ ಕ್ಷಣದ ಅನುಭಾವದ ಸ್ಥಿತಿಯಿಂದ ಮಾತ್ರ ಎಂದು ಅರಿತಿದ್ದ ದೊಡ್ದಪ್ಪ, ಇರ್ಬುವಿನ ಗಾನದಲ್ಲಿ ಅಂದು ಎಂದೂ ಇರದ ಅನನ್ಯತೆಯನ್ನು ಗಮನಿಸಿದರು. ಅವನ ಸಂಗೀತದಲ್ಲಿ ಮುಳುಗಿಹೋದರು. ಹಾಡನ್ನು ಮುಗಿದು ಅರೆಕ್ಷಣ ಕಣ್ಣುಮುಚ್ಚಿಕೊಂಡೆ ಉಳಿದ ದೊಡ್ದಪ್ಪ, ಏನೋ ನೆನಪಾದಂತೆ, “ಒಂದು ನಿಮಿಷ ಬಂದೆ” ಎಂದು ಮನೆಗೆ ಬಂದು ರವೀಂದ್ರನಾಥ ಠಾಕೂರರ ಗೀತಾಂಜಲಿಯನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹಿಂದೆ ಬಂದರು.
ಅದರ ಒಂದು ಪುಟವನ್ನು ತೆಗೆದು ಅದರಲ್ಲಿಯೇ ತಲ್ಲೀನರಾದಂತೆ ಓದತೊಡಗಿದರು,
‘This little flute of a reed thou hast carried
over hills and dales, and hast breathed through it
melodies eternally new.
At the immortal touch of thy hands my little
heart loses its limits in joy and gives birth to
utterances ineffable.’
ಅದನ್ನೇ ಕನ್ನಡದಲ್ಲಿ ಹೇಳಿದರು:
“ಈ ಸಣ್ಣ ಬಿದಿರ ಕೊಳಲನ್ನು ಹಿಡಿದುಕೊಂಡು ಗುಡ್ಡಕಾಡುಗಳಲ್ಲೆಲ್ಲ ತಿರುಗಾಡಿ ಅದರಲ್ಲಿ ನಿನ್ನ ಶಾಶ್ವತವಾದ ಗಾನವನ್ನು ನುಡಿಸಿದ್ದೀಯೆ.
ನಿನ್ನ ಶಾಶ್ವತವಾದ ಸ್ಪರ್ಶದಿಂದ ಈ ನನ್ನ ಸಣ್ಣ ಹೃದಯವು ಖುಷಿಯಿಂದ ಎಲ್ಲೆಯನ್ನು ಮೀರಿ ಅವರ್ಣನೀಯ ನುಡಿಗೆ ಸಾಧನವಾಗುತ್ತದೆ.”
ಆಕಾಶದತ್ತ ನೋಡಿ ಕೈಯನ್ನು ಮುಗಿದರು.
ಇರ್ಬುವಿಗೆ ಅರ್ಥವಾಗದೆ ಏನು ಹೇಳುವುದೆಂದು ತಿಳಿಯದೆ ನಿಂತಲ್ಲಿ ನಿಂತನು ಒಳಗೆ ಗರ್ಭಗುಡಿಯಲ್ಲಿರುವ ಗೋಪಾಲಕೃಷ್ಣನಂತೆ. ಮುಂದೆ ಬಂದ ದೊಡ್ದಪ್ಪ, ಇರ್ಬುವಿನ ಕೊಳಲನ್ನು ಹಿಡಿದ ಕೈಯನ್ನು ಹಿಡಿದುಕೊಂಡು, “ಇರ್ಬು, ಈಗ ನಾನು ಹೇಳಿದುದನ್ನು ಬರೆದವರು ಯಾರು ಎಂದು ಗೊತ್ತಾ? ಬಂಗಾಳದ ರವೀಂದ್ರನಾಥ ಠಾಕೂರರು. ಬದುಕನ್ನು ನೋಡುವ ರೀತಿಯನ್ನು ಬದಲಿಸಿದ ಪುಸ್ತಕವಿದು. ಅವರು ಈ ಕವನದಲ್ಲಿ ನೀನು ಅಂತ ಹೇಳುತ್ತಾರಲ್ಲ. ಆ ನೀನು ಎನ್ನುವುದು ನನಗೆ ನನ್ನ ಪರಮಾತ್ಮ, ನಿನಗೆ ನಿನ್ನ ಪರಮಾತ್ಮ. ನಿನ್ನ ನುಡಿಸುವಿಕೆಯಲ್ಲಿ ಶಾಸ್ತ್ರೀಯತೆಯನ್ನು ಹುಡುಕುವುದಕ್ಕೆ ಹೋಗುವುದಿಲ್ಲ. ಅದರ ಅಗತ್ಯ ನನಗಾಗಲಿ ನಿನಗಾಗಲಿ ಬೇಡ. ಆದರೆ ನಿನ್ನ ಮುಗ್ಧತೆ ಇಂದು ಸಂಗೀತವಾಗಿ ಈ ಪರಿಸರದಲ್ಲಿ ಹರಡಿದೆ. ಅದಕ್ಕೆ ಕಾರಣ ನಿನ್ನ ಪರಮಾತ್ಮ. ಅದು ನನಗೆ ನನ್ನ ಪರಮಾತ್ಮನನ್ನು ನೆನಪಿಸಿತು” ಎಂದು ನುಡಿದು ಆತನ ಕೈಗಳನ್ನು ಹಿಡಿದು ತನ್ನ ತಲೆಯನ್ನು ತಾಗಿಸಿ ವಂದಿಸಿದರು.
ಅವಕ್ಕಾದ ಇರ್ಬುವು ಒಮ್ಮೆಲೆ ನಾಚಿಕೆಯಿಂದ ಹಿಡಿಯಷ್ಟಾಗಿ, “ಬರುತ್ತೇನೆ ಸಾಮಿ” ಎಂದು ನುಡಿದು ಮನೆಗೆ ಹೋಗಲು ಹಿಂದೆ ತಿರುಗಿದ್ದ ಇರ್ಬುವು ಏನೋ ನೆನಪಾದಂತೆ, “ಸಾಮಿ” ಎಂದನು.
“ಏನು?”
“ಅದೇನೋ ಅಷ್ಟಾವಧಾನ ಸೇವೆ ಅಂದಿರಲ್ಲ?”
“ಹೌದು.”
“ಅದನ್ನ ಜಾತ್ರೆಯಲ್ಲಿ ಮಾಡುತ್ತಾರಲ್ಲ. ಈ ಬಾರಿಯ ಜಾತ್ರೆಯಲ್ಲಿ ನಾನು ಮಾಡಬಹುದಾ?”
ಆತನ ಮಾತನ್ನು ಕೇಳಿ ನಕ್ಕ ದೊಡ್ದಪ್ಪ, “ನಾನು ತಮಾಷೆಗೆ ಹಾಗೆ ಹೇಳಿದ್ದು ಇರ್ಬು. ಅದೆಲ್ಲ ಬೇಡ” ಎಂದರು. ಇರ್ಬುವು ತಲೆ ಅಲ್ಲಾಡಿಸಿ ಆಯಿತು ಎಂದು ಹೇಳಿ ಹೊರಟನು.
ಕೊನೆಗೆ ಏನೋ ಆಲೋಚನೆ ಮಾಡಿ ನಿರ್ಧಾರಕ್ಕೆ ಬಂದಂತೆ, ದೊಡ್ದಪ್ಪ,
“ಇರ್ಬು ನಿಲ್ಲು” ಎಂದರು. ಹಾಗೆಯೇ ಮುಂದುವರಿದು, “ನೀನು ಸೇವೆ ಮಾಡುವುದು ದೇವರಿಗಾದರೆ ಅದನ್ನು ತಡೆಯಲು ನಾನು ಯಾರು? ಆಗಲಿ ಈ ಬಾರಿಯ ಜಾತ್ರೆಗೆ ಅದೂ ಆಗಿ ಹೋಗಲಿ” ಎಂದರು.
ಆ ವರ್ಷದ ಜಾತ್ರೆಗೆ ನಾಗಸ್ವರ, ಚಂಡೆ, ಕೋಡಂಗಿ, ಸಾಮವೇದ ಪಠಣದ ಜೊತೆಯಲ್ಲಿ ಇರ್ಬುವಿನ ವೇಣುವಾದನ ಸೇವೆಯೂ ಸೇರಿತು. ನಾಲ್ಕು ಜನರಲ್ಲಿ ‘ಅಡ್ಡಿಲ್ಲ ನಮ್ಮ ಇರ್ಬು’ ಎಂದು ಹೇಳಿಸಿಯೂಕೊಂಡ. ಮುಂದೆ ಪ್ರತೀವರ್ಷ ಜಾತ್ರೆಗೆ ಅವನ ವೇಣುವಾದನ ಅಷ್ಟಾವಧಾನ ಸೇವೆಯ ಭಾಗವಾಗಿಯೇ ಉಳಿಯಿತು.
* * *
ಆಗಾಗ ಮನೆಗೆ ಬರುತ್ತಿದ್ದ ಇರ್ಬುಸಾಬಿಯ ಜೊತೆಯಲ್ಲಿ ದೊಡ್ದಪ್ಪನ ಆತ್ಮೀಯತೆ ಕ್ರಮೇಣ ಹೆಚ್ಚಾಗತೊಡಗಿತು. ಇಬ್ಬರೂ ದೇವಸ್ಥಾನದ ಬಾಗಿಲಿನ ಎರಡು ಬದಿಯಲ್ಲಿದ್ದ ಜಗುಲಿಯಲ್ಲಿ ಕುಳಿತು ಮನಸೋಇಚ್ಛೆ ಮಾತಾಡುತ್ತಿದ್ದರು. ಹಾಗಂತ ಅವರ ನಡುವೆಯಿದ್ದ ಸಮಾನ ಆಸಕ್ತಿ ಯಾವುದು ಎಂಬುದು ಯಾರಿಗೂ ತಿಳಿದಿರಲಿಲ್ಲ. ಯಾರಾದರೂ ದೇವಸ್ಥಾನದ ಒಳಗೆ ಹೋದರೆ ಅವರ ಮಾತುಕತೆ ನಿಂತು ಬಂದವರನ್ನು ಮಾತನಾಡಿಸಿ ಅವರು ಹೋದಮೇಲೆ ಕೆಲವು ನಿಮಿಷದ ಮೌನದ ನಂತರ ಮತ್ತೆ ಅವರ ಕಾಲಕ್ಷೇಪ ಮುಂದುವರಿಯುತ್ತಿತ್ತು, ಸಮಯದಂತೆ. ಕಾಲವು ದೊಡ್ದಪ್ಪ ಹಾಗೂ ಇರ್ಬು ಇಬ್ಬರನ್ನು ಬಿಡದೆ ಸಮಾನವಾಗಿ ಆವರಿಸಿತು. ವಾರದಲ್ಲಿ ಒಂದು ದಿನವೆಲ್ಲಾದರೂ ಹಾಸಿಗೆ ರಿಪೇರಿಯ ಪ್ರಯುಕ್ತ ಇರ್ಬುಸಾಬಿ ಊರೂರು ಸುತ್ತುತ್ತಿದ್ದರೆ, ಮತ್ತುಳಿದ ನಾಲ್ಕಾರು ದಿನ ಕಾಲು ಗಂಟಿಗೆ ವಾತದ ನೋವೆಂದು, ನಂಜನಗೂಡಿನ ಪಂಡಿತರ ಎಣ್ಣೆಯನ್ನು ಎರಡೂ ಗಂಟುಗಳಿಗೆ ದಪ್ಪವಾಗಿ ಹಚ್ಚಿಕೊಂಡು ಎಲ್ಲಿಯೂ ದೂರಹೋಗದೆ ದೇವಸ್ಥಾನದ ಎದುರಿನ ಜಗುಲಿನಲ್ಲಿ ಪ್ರತ್ಯಕ್ಷನಾಗುತ್ತಿದ್ದ. ವರ್ಷಕ್ಕೊಮ್ಮೆ ಬರುತ್ತಿದ್ದ ದೇವಸ್ಥಾನದ ಜಾತ್ರೆಯಲ್ಲಿ ಇರ್ಬುಸಾಬಿಯ ವ್ಯಾಪಾರ ಹಾಗೂ ಹೊಸಹೊಸ ಹಾಡಿನ ಅಷ್ಟಾವಧಾನ ಸೇವೆ ಮಾತ್ರ ಚಾಚೂತಪ್ಪದೆ ನಡೆಯುತ್ತ ಇತ್ತು.
ಮನೆಯಲ್ಲಿ ಎಲ್ಲರಿಗೂ ಕೋಣೆ ದೊರಕಿ ಎಲ್ಲ ಕೋಣೆಗಳಲ್ಲಿ ಹತ್ತಿಯ ಹಾಸಿಗೆ ಬದಲಿಗೆ ಕರ್ಲಾನ್ ಬಂದಿತು. ಆದರೆ ದೊಡ್ದಪ್ಪ ಮಾತ್ರ ಅದನ್ನು ಅಪೇಕ್ಷಿಸದೆ ತನಗೆ ಹತ್ತಿಯ ಹಾಸಿಗೆಯಿಲ್ಲದಿದ್ದರೆ ನಿದ್ದೆ ಬರುವುದಿಲ್ಲ. ಮತ್ತೆ ಆ ರೆಡಿಮೇಡ್ ಹಾಸಿಗೆಗಳೆಲ್ಲ ಹೀಟು ಎಂದು ಹೇಳಿ ಇರ್ಬುವು ಹೊಲಿಯುತ್ತಿದ್ದ ಹತ್ತಿಯ ಹಾಸಿಗೆಯನ್ನೇ ನೆಚ್ಚಿಕೊಂಡಿದ್ದರು.
* * *
ಈಗೀಗ ಇರ್ಬುಸಾಬಿ ನಮ್ಮ ಮನೆಗೆ ಬಂದು ದೊಡ್ದಪ್ಪನ ಹಾಸಿಗೆಯನ್ನು ಬಿಡಿಸಿ ಸರಿ ಮಾಡುವುದು ಜಾಸ್ತಿಯಾಗಿತ್ತು. ಅದೂ ಒಂದು ತಿಂಗಳಲ್ಲಿ ಮೂರು ಬಾರಿ ದೊಡ್ದಪ್ಪನ ಹಾಸಿಗೆಯನ್ನು ಸರಿ ಮಾಡಲು ಬಂದಿದ್ದನು. ನಮಗೆಲ್ಲ ಅದು ಆಶ್ಚರ್ಯವನ್ನುಂಟುಮಾಡಿತ್ತು. ಪೇಟೆಯಲ್ಲಿ ದಿನಸಿ ಸಾಮಾನನ್ನು ಕೊಳ್ಳಲು ಕಮ್ತಿಯವರ ಅಂಗಡಿಗೆ ಹೋಗಿದ್ದಾಗ ಎದುರಿಗೆ ಸಿಕ್ಕ ಇರ್ಬುವಿನಲ್ಲೆ ಕೇಳಿದೆ, “ಏನು ಇರ್ಬು, ಈ ಬಾರಿ ಮರ್ನಾಲ್ಕು ಸಲ ಮನೆಗೆ ಬಂದೆ. ಏನಾಗಿತ್ತು ದೊಡ್ದಪ್ಪನ ಹಾಸಿಗೆಗೆ?’
“ಏನಿಲ್ಲ ಸಾಮಿ. ಅವರ ಬೆನ್ನಿಗೆ ಹತ್ತಿಯ ಉಂಡೆ ತಾಗುತ್ತಿತ್ತಂತೆ. ಸರಿಮಾಡಿ ಕೊಡು ಅಂದರು. ಅದಕ್ಕೆ ಬಂದೆ” ಎಂದನು. ಹೇಳಿದ ರೀತಿಯನ್ನು ನೋಡಿದರೆ ಇರ್ಬುವಿಗೆ ತನ್ನ ಮಾತಿನಲ್ಲಿಯೇ ನಂಬಿಕೆ ಇರಲಿಲ್ಲವೆಂಬಂತೆ ತೋರಿತು.
“ಇರ್ಬು, ನೀನು ಸುಳ್ಳು ಹೇಳಿದಂತೆ ನನಗೆ ಅನ್ನಿಸುತ್ತಿದೆ. ಏನು ವಿಷಯ?” ಕೇಳಿದೆ.
“ಸಾಮಿ…” ಸ್ವಲ್ಪ ಅಳುಕಿನಂದಲೇ ನುಡಿದ.
“ನಿಮ್ಮ ದೊಡ್ದಪ್ಪ ಯಾರಿಗೂ ಹೇಳಬೇಡ ಎಂದು ನನ್ನಲ್ಲಿ ಹೇಳಿದ್ದರು.”
“ನೀನು ಹೇಳಿದ್ದು ಎಂದು ಯಾರಲ್ಲೂ ಹೇಳುವುದಿಲ್ಲ. ಏನಾಯಿತು?”
“ನಿಮ್ಮ ದೊಡ್ದಪ್ಪನಿಗೆ ಈಗೀಗ ಮಲಗಿದಾಗ ಅಲ್ಲಿಯೇ ಉಚ್ಚೆ ಹೋಗುತ್ತದಂತೆ. ಅವರಿಗೆ ಗೊತ್ತೇ ಆಗುವುದಿಲ್ಲವಂತೆ. ನಿಮ್ಮಲ್ಲಿ ಹೇಳಲು ಮುಜುಗರವಾಗುತ್ತದಂತೆ. ಅವರಿಗೆ ಹಾಸಿಗೆಯ ಮೇಲೆ ಪ್ಲಾಸ್ಟಿಕ್ ಶೀಟ್ ಹಾಕಿ ಮಲಗಲು ಇಷ್ಟವಿಲ್ಲವಂತೆ. ಅದಕ್ಕೆ ಹಾಸಿಗೆಯ ಬಟ್ಟೆಯ ಒಳಗೆ, ಹತ್ತಿಯ ಮೇಲೆ ಒಂದು ಪ್ಲಾಸ್ಟಿಕ್ ಶೀಟು ಹಾಕಿ ಒಟ್ಟಿಗೆ ಹೊಲಿದು ಬಿಡು ಮಾರಾಯ. ಬಟ್ಟೆ ಒದ್ದೆಯಾದರೂ ಅದನ್ನು ಬಿಸಿಲಿಗೆ ಹಾಕಬಹುದು. ಹತ್ತಿ ಒದ್ದೆಯಾಗಿ ಒಣಗಿಸಿದರೆ ಅದರ ಬಾಳಿಕೆ ಕಡಮೆಯಾಗುತ್ತದೆ. ನಾನು ಹೇಗಾದರೂ ಮಲಗುತ್ತೇನೆ ಅದೊಂದು ಮಾಡಿಕೊಡು ಎಂದು ಹೇಳುತ್ತಿದ್ದರು. ನಾನು ಅದು ಸರಿಯಾಗುವುದಿಲ್ಲವೆಂದು ಹೇಳಿದೆ. ಆದರೂ ಕೇಳಲಿಲ್ಲ. ಮತ್ತೆ ಅವರ ಕಷ್ಟ ನೋಡಲಾರದೆ ಮಾಡಿಕೊಟ್ಟೆ. ಅದನ್ನು ಸರಿಮಾಡಲು ಮೂರು ಸಲ ಬರಬೇಕಾಯಿತು” ಎಂದನು.
ನನಗೆ ಆಶ್ಚರ್ಯವಾಯಿತು, ದುಃಖವೂ ಆಯಿತು. ನಮ್ಮ ಹತ್ತಿರ ಹೇಳದೆ ಇರ್ಬುವಿನಲ್ಲಿ ಹೇಳಿ ತಾವೇ ಹೇಗೋ ಪರಿಹಾರವನ್ನು ಹುಡುಕಲು ಹೊರಟಿದ್ದಕ್ಕೆ ಆಶ್ಚರ್ಯವೂ. ಮೊದಲೇ ತಿಳಿದಿದ್ದರೆ ಯಾರಾದರೂ ವೈದ್ಯರ ಹತ್ತಿರ ಕರೆದುಕೊಂಡು ಹೋಗಬಹುದಿತ್ತು ಎಂದು ದುಃಖವೂ ಆಯಿತು. ಆದರೆ ಆ ಹಾಸಿಗೆಯಲ್ಲಿ ಅವರ ಶಯನ ಹೆಚ್ಚು ದಿನ ನಡೆಯಲಿಲ್ಲ. ಅವರ ದೇಹಾರೋಗ್ಯ ಕ್ರಮೇಣ ಕ್ಷೀಣಿಸಿ, ಅವರ ಓಡಾಟ ಕಡಮೆಯಾಗಿ ಕೊನೆಗೆ ನೀರಿನ ಬೆಡ್ಡಿನ ಮೇಲೆ ಮಲಗುವಂತಾಯಿತು. ಅವರು ಆ ಸ್ಥಿತಿಯಲ್ಲಿರುವಾಗ ಇರ್ಬುಸಾಬಿಯು ಬಂದಿದ್ದ. ದೊಡ್ದಪ್ಪನಲ್ಲಿ ಇರ್ಬು ಬಂದಿದ್ದಾನೆ ನೋಡಿ ಎಂದೆ. ಮಲಗಿದ್ದ ದೊಡ್ದಪ್ಪ ಹಾಗೆಯೇ ಕಣ್ಣು ಬಿಟ್ಟು ನೋಡಿದರು, ಆತನನ್ನು ನೋಡಿ ಮೆಲುವಾಗಿ ನಕ್ಕರು. ಅವರ ಎಡಗಣ್ಣಿನಿಂದ ಬಿದ್ದ ನೀರು ಅವರ ದಿಂಬಿನ ಮೇಲೆ ಬಿತ್ತು. ಹೆಚ್ಚು ಉಪಯೋಗವಾಗದ ಇರ್ಬುವಿನ ಹೊಸ ಹಾಸಿಗೆ ದೊಡ್ಡಪ್ಪನ ಕೋಣೆಯ ಒಂದು ಬದಿಯಲ್ಲಿತ್ತು. ಅದನ್ನು ಒಮ್ಮೆ ನೋಡಿದ ಇರ್ಬುವಿಗೆ ದೊಡ್ದಪ್ಪನನ್ನು ಆ ಸ್ಥಿತಿಯಲ್ಲಿ ನೋಡಲು ಇಷ್ಟವಾಗದೆ ಏನೂ ಮಾತನಾಡದೆ ಹಾಗೆಯೇ ಹಿಂದೆ ಹೋದ.
ಅದೇ ಕೊನೆ. ಇರ್ಬುವನ್ನು ನಾನು ಊರಿನಲ್ಲಿ ಕಾಣಲಿಲ್ಲ.
* * *
ಇದು ನಡೆದು ಇಪ್ಪತ್ತೆöÊದು ವರ್ಷಗಳಾಗಿರಬಹುದು. ಗೋಪಾಲಕೃಷ್ಣ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಹಾಗೂ ಅರ್ಚಕರಾಗಿದ್ದ ದೊಡ್ದಪ್ಪ ಈಗ ಇಲ್ಲ. ಅದೇ ಪ್ರಾಯದ ಇರ್ಬುವು ಪ್ರಾಯಶಃ ಇಹದ ಕಾರ್ಯವನ್ನು ಮುಗಿಸಿ ಹೋಗಿರಲೂಬಹುದು. ಊರು ಬಿಟ್ಟ ನಾವೆಲ್ಲರೂ, ನಮಗ್ಯಾರಿಗೂ ದೇವಸ್ಥಾನದ ಮೇಲೆ ಹಕ್ಕು ಇಲ್ಲ ಎಂದು ಬರೆದುಕೊಟ್ಟಾಯಿತು. ಊರಿನವರೆಲ್ಲ ಒಟ್ಟಾಗಿ ಒಂದು ಟ್ರಸ್ಟ್ ಮಾಡಿಕೊಂಡು ಗೋಪಾಲಕೃಷ್ನ ದೇವಸ್ಥಾನದ ಜೀರ್ಣೋದ್ಧಾರ, ಶಿಲಾಮಯ ಗರ್ಭಗುಡಿ, ಬ್ರಹ್ಮಕಲಶ ಮಾಡಿದ್ದಾರೆ. ಪೂಜೆಗೆಂದು ಬೇರೆಯವರನ್ನು ನೇಮಿಸಿದ್ದಾರೆ. ಆರ್ಥಿಕ ಶಕ್ತಿ ಚೆನ್ನಾಗಿರುವ ಅವರು ದೊಡ್ದಪ್ಪನಿಗಿಂತಲೂ ವೈಭೋಗದಿಂದ ಜಾತ್ರೆಯನ್ನು ಮಾಡುತ್ತಿದ್ದಾರೆ ಎಂಬುದು ಅವರು ನಾನು ಈಗ ಇರುವ ಚಂಡೀಗಢಕ್ಕೆ ಕಳುಹಿಸುತ್ತಿದ್ದ ಜಾತ್ರೆಯ ಆಮಂತ್ರಣ ಪತ್ರಿಕೆ ನೋಡಿ ತಿಳಿಯುತ್ತಿತ್ತು.
ಬೆಳಗ್ಗೆ ಬರುವ ಇಂಡಿಯನ್ ಎಕ್ಸ್ಪ್ರೆಸ್ ಓದಿ, ಮೊಬೈಲ್ನಲ್ಲಿ ಎಲ್ಲ ಕನ್ನಡಪತ್ರಿಕೆಗಳನ್ನು ಓದಿದ ಮೇಲೂ ಸಹ ಸಂಜೆ ಆಫೀಸಿನಿಂದ ಹಿಂದೆ ಬರುವಾಗ ಸರ್ದಾರ್ಜಿಯೋರ್ವನ ಬೀಡಾ ಅಂಗಡಿಯಲ್ಲಿ ತಂದಿಡುತ್ತಿದ್ದ ಬಾಲ್ಯದಿಂದಲೂ ಓದುತ್ತಿದ್ದ ಕನ್ನಡ ವೃತ್ತಪತ್ರಿಕೆಯನ್ನು ತೆಗೆದುಕೊಂಡು ಮನೆಗೆ ಬಂದೆ. ಮುಖಪುಟದ ವಿಷಯ ಸಂಜೆಯ ಹೊತ್ತಿಗೆ ಹಳತಾಗಿರುವುದರಿಂದ ಒಳಗಿನ ಪುಟಗಳಲ್ಲಿರುವ ಪ್ರಾದೇಶಿಕ ವಿಷಯಗಳನ್ನೇ ಓದುವುದು ಆಪ್ಯಾಯಮಾನವೆನ್ನಿಸುತ್ತಿತ್ತು. ಮೂರನೆಯ ಪುಟದ ಬಾಕ್ಸ್ ವಿಷಯ ನನ್ನ ಗಮನವನ್ನು ಸೆಳೆಯಿತು. ಧನ್ಯಾಡಿಯ ಗೋಪಾಲಕೃಷ್ಣ ಜಾತ್ರೆಯಲ್ಲಿ ಇತರೆ ಧರ್ಮದವರು ವ್ಯಾಪಾರ ಮಾಡಬಾರದು ಎಂದು ಟ್ರಸ್ಟಿನವರು ಅಪ್ಪಣೆ ಕೊಡಿಸಿದ್ದಾರೆ ಎಂದು ಸಾರುವ ಬ್ಯಾನರಿನ ಚಿತ್ರದ ಜೊತೆಯಲ್ಲಿ ವಿಷಯವನ್ನು ಸಹ ಅಚ್ಚುಹಾಕಿದ್ದರು.
ಭಲಾ! ಕುಗ್ರಾಮ ಧನ್ಯಾಡಿಯ ಹೆಸರು ಪೇಪರಿನಲ್ಲಿ ಬರುವಷ್ಟು ಪ್ರಸಿದ್ಧವಾಗಿದೆ ಎಂಬ ವ್ಯಂಗ್ಯ ಮನಸ್ಸಿನಲ್ಲಿ ಮೂಡಿತು. ಓದುವುದನ್ನು ನಿಲ್ಲಿಸಿ ಅದನ್ನು ಟೀಪಾಯಿಯ ಮೇಲಿಟ್ಟೆ. ದೊಡ್ಡಪ್ಪ ಹಾಗೂ ಇರ್ಬುಸಾಬಿಯರ ಸ್ನೇಹ ನೆನಪಾಯಿತು. ಇರ್ಬುವು ದೊಡ್ದಪ್ಪನಿಗಾಗಿ ಹೊಲಿದ ಹಾಸಿಗೆ ನೆನಪಾಯಿತು. ನನ್ನ ಕಣ್ಣುಗಳು ಅಪ್ರಯತ್ನವಾಗಿ ಮುಚ್ಚಿಕೊಂಡವು. ಅಂದು ಅಂಗಳದಲ್ಲಿ ಹಾಸಿಗೆಯನ್ನು ಹಿಡಿದುಕೊಂಡು ಅದರ ರಿಪೇರಿಗಾಗಿ ಕಾಯುತ್ತಿದ್ದಾಗ ಸಂಜೆ ಬೆಳಕಿನಲ್ಲಿ ಹೊನ್ನಬಣ್ಣವನ್ನು ಪಡೆದು ಹಾರುತ್ತಿದ್ದ ಹತ್ತಿಯಲ್ಲಿ ಅವರಿಬ್ಬರ ಮುಖ ಅಕ್ಷಿಪಟಲದಲ್ಲಿ ಕಂಡಂತಾಗಿ ಕೊನೆಗೆ ಅದು ಆಕಾಶದಿಂದ ದಿಗಂತದತ್ತ ತೇಲಿಹೋದಂತೆ ಭಾಸವಾಯಿತು. ಸಮಾಜದ ಇಂದಿನ ಉಪದ್ವ್ಯಾಪವನ್ನು ನೋಡಲಿಕ್ಕೆ ಅವರು ಇರದೆ ಇದ್ದದ್ದು ಒಳ್ಳೆಯದೆ ಆಯಿತು ಎಂಬ ಭಾವನೆ ಮನದಲ್ಲಿ ಕ್ರಮೇಣ ಮೂಡಿ ಅದೇ ಗಟ್ಟಿಯಾಗಿ ಉಳಿಯಿತು.