ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿಯೇ ಒಂದು ಜಾಗವನ್ನು ಕೆಂಗಲ್ಲರು ವಿಶ್ವನಾಥನಿಗೆ ೯೯ ವರ್ಷದ ಗುತ್ತಿಗೆಯ ಆಧಾರದ ಮೇಲೆ ಮಂಜೂರು ಮಾಡಿದರು. ವಿಧಾನಸೌಧದ ಜೊತೆಜೊತೆಯಲ್ಲಿಯೇ ವಿಶ್ವನಾಥನ ಸುಲಭಶೌಚಾಲಯವೂ ನಿರ್ಮಾಣವಾಗತೊಡಗಿತು. ಮುಖ್ಯಮಂತ್ರಿಯ ಜೊತೆಯಲ್ಲಿ ಅಡ್ಡಾಡುವ ವ್ಯಕ್ತಿ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಾಣಕ್ಕೆ ಶಾಸನಸಭೆಯ ಸೌಧ ಕಟ್ಟುತ್ತಿದ್ದ ಗುತ್ತಿಗೆದಾರರೇ ಸ್ವಲ್ಪ ರಿಯಾಯ್ತಿ ದರದಲ್ಲಿ ಕಲ್ಲು ಮರಳು ಪೂರೈಸಿ ತುಂಬ ಚೆಂದ ಅನ್ನುವಹಾಗೆ ಕಟ್ಟಿಯೂ ಕೊಟ್ಟರು. ಶೌಚಾಲಯದ ಉದ್ಘಾಟನೆಗೆ ಮುಖ್ಯಮಂತ್ರಿಗಳಾದ ತಾವು ಬರುವುದು ಬೇಡ ಎಂದು ವಿಶ್ವನಾಥ ಹೇಳಿದರೂ, ಇದು ಜನರಿಗೆ ಅನುಕೂಲ ಒದಗಿಸುವ ಕೆಲಸ. ನಾಡಿನ ಜನರಿಗೆ ಇದು ಗೊತ್ತಾಗಬೇಕು. ನಾನು ಬಂದರೆ ಪತ್ರಿಕೆಯಲ್ಲಿ ಸುದ್ದಿಯೂ ಬರುತ್ತದೆ. ಪ್ರಚಾರವೂ ಆಗುತ್ತದೆ. ಅದರಿಂದ ನಿನಗೂ ಲಾಭ, ನಮ್ಮ ಪಕ್ಷಕ್ಕೂ ಲಾಭ – ಎಂದು ತಿಳಿಹೇಳಿದರು.

ಒಂದು ಕಾಲದಲ್ಲಿ ವಿಶ್ವನಾಥ ಯಾರು ಎಂದು ಕೇಳಿದರೆ ಬೆಂಗಳೂರಿನ ಬಹುತೇಕ ಜನರು ಗೊತ್ತಿಲ್ಲ ಎಂದು ಹೇಳುತ್ತಿರಲಿಲ್ಲ. ಟಾಯ್ಲೆಟ್ ವಿಶ್ವನಾಥನ ಬಿಟ್ಟರೆ ಬೆಂಗಳೂರಿನಲ್ಲಿ ಬೇರೆ ಯಾರೂ ಇಲ್ಲವೇನೋ ಎಂಬಷ್ಟು ಆತ ಬಳಕೆಯ ಹೆಸರಾಗಿಬಿಟ್ಟಿದ್ದ. ಗುಜರಾತಿನ ಯಾವುದೋ ಮೂಲೆಯ ಊರಿನಲ್ಲಿ ಹುಟ್ಟಿದ್ದ ಆತ ಸ್ವಂತ ಉದ್ಯೋಗ ಮಾಡುವ ಹುಮ್ಮಸ್ಸಿನಲ್ಲಿ ಆಗಿನ ಮದ್ರಾಸು ನಗರವನ್ನು ಸೇರಿಕೊಂಡಿದ್ದ. ಸಣ್ಣಪುಟ್ಟ ಉದ್ಯೋಗವನ್ನು ಮಾಡಿ ಅದರಲ್ಲಿ ಯಶಸ್ಸು ಕಂಡರೂ, ನಾನು ಮಾಡಬೇಕಾಗಿರುವುದು ಇನ್ನೂ ಏನೋ ಇದೆ ಎಂದು ಅವನ ಒಳಮನಸ್ಸು ಹೇಳಿಕೊಳ್ಳುತ್ತಿತ್ತು. ಈ ಒಳಮನಸ್ಸಿನ ಕಿರಿಕಿರಿ ಹೆಚ್ಚಾದ ಬಳಿಕ ಅವನು ಮದ್ರಾಸನ್ನು ಬಿಟ್ಟು ಬೆಂಗಳೂರು ಸೇರಿಕೊಂಡ.
ಆಗಿನ್ನೂ ಕೆಂಗಲ್ಲ ಹನುಮಂತಯ್ಯನವರು ವಿಧಾನಸೌಧಕ್ಕೆ ಅಡಿಗಲ್ಲನ್ನು ಇಟ್ಟು ಕೆಲಸಕ್ಕೆ ಹಸಿರು ನಿಶಾನೆ ತೋರಿಸಿ, ದಿನ ಬೆಳಗಾದರೆ ಒಮ್ಮೆ ಕಾಮಗಾರಿ ಪರಿಶೀಲನೆಗೆ ಬಂದುಹೋಗುತ್ತಿದ್ದರು. ಕೆಂಗಲ್ಲರು ಎಷ್ಟು ಸರಳವಾಗಿದ್ದರು ಎಂದರೆ ಯಾವುದೇ ಹಿಂಬಾಲಕರ ಪಟಾಲಾಂ ಇಲ್ಲದೆಯೇ ಮನೆಯಿಂದ ನಸುಕಿನಲ್ಲಿ ಒಬ್ಬರೇ ವಿಧಾನಸೌಧದ ಕಾಮಗಾರಿ ತಪಾಸಣೆಗೆ ಬರುತ್ತಿದ್ದರು. ಈ ಸಮಾಚಾರ ವಿಶ್ವನಾಥನ ಕಿವಿಗೆ ಬಿತ್ತು. ಆತ ತಾನೂ ಅವರು ಬರುವ ಸಮಯಕ್ಕೆ ಅವರ ಎದುರು ಮುಂಜಾನೆಯ ನಡಿಗೆಗಾಗಿ ಬಂದವನಂತೆ ಬರುವುದಕ್ಕೆ ಆರಂಭಿಸಿದ. ಕೆಂಗಲ್ಲರ ಗಮನ ಯಾವಾಗ ಅವನ ಮೇಲೆ ಬಿತ್ತೋ ಏನೋ ಅವನಿಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ಮೊದಲು ಕೆಲವು ದಿನ ಮುಗುಳುನಗೆ ನಗುವುದು, ನಂತರ ಕೆಲವು ದಿನ ಕೈ ಮುಗಿಯುವುದು ಇತ್ಯಾದಿಗಳು ನಡೆದ ಬಳಿಕ ಶುಭೋದಯ, ಶುಭಮುಂಜಾನೆ ವಿನಿಮಯದವರೆಗೂ ಈ ಮುಖಾಮುಖಿ ಬಂದು ನಿಂತಿತ್ತು.
ವಿಶ್ವನಾಥ ಹೀಗೆ ಬೆಳಗಿನ ನಡಿಗೆಗೆ ಬರುವಾಗ ಕೈಯಲ್ಲಿ ಒಂದು ಕನ್ನಡ ಮತ್ತು ಇನ್ನೊಂದು ಇಂಗ್ಲಿಷ್ ಪತ್ರಿಕೆ ಹಿಡಿದುಕೊಂಡು ಬರುತ್ತಿದ್ದ. ಎಲ್ಲೋ ಕಬ್ಬನ್ಪಾರ್ಕಿನ ಮೂಲೆಯಲ್ಲಿ ಕುಳಿತು ಆತ ಓದುತ್ತಾನೆ ಎಂದು ನೋಡಿದವರು ಅಂದುಕೊಳ್ಳುತ್ತಿದ್ದರು. ಅವನ ಕೈಯಲ್ಲಿ ದಿನವೂ ಪತ್ರಿಕೆಯನ್ನು ನೋಡುತ್ತಿದ್ದ ಕೆಂಗಲ್ಲರಿಗೆ ಒಮ್ಮೆ ಹಿಂದಿನ ದಿನ ಶಾಸನಸಭೆಯಲ್ಲಿ ನಡೆದ ಚರ್ಚೆ ಮತ್ತು ಅದಕ್ಕೆ ತಾವು ನೀಡಿದ ಉತ್ತರವು ಪತ್ರಿಕೆಯಲ್ಲಿ ಹೇಗೆ ವರದಿಯಾಗಿದೆ ಎಂದು ನೋಡುವ ಇಚ್ಛೆ ಉತ್ಕಟವಾಗಿತ್ತು. ಅದೇ ಕಾರಣಕ್ಕೆ ಅವರು ಮೊದಲಬಾರಿಗೆ ವಿಶ್ವನಾಥನನ್ನು ಮಾತನಾಡಿಸಿ, “ಪತ್ರಿಕೆ ಇವತ್ತಿನದಾಗಿದ್ದರೆ ನಾನು ಸ್ವಲ್ಪ ಕಣ್ಣಾಡಿಸಬೇಕಿತ್ತು” ಎಂದು ವಿನಂತಿಯ ದನಿಯಲ್ಲಿ ಕೇಳಿದರು. ವಿಶ್ವನಾಥನಿಗೆ ಸ್ವರ್ಗಕ್ಕೆ ಮೂರೇ ಗೇಣು. “ಶರಣು ಸ್ವಾಮಿ, ತಗೊಳ್ಳಿ” ಎಂದು ಅವನು ಕೆಂಗಲ್ಲರಿಗೆ ಕೊಟ್ಟನು. ಅವರು ಹತ್ತು ನಿಮಿಷ ಪತ್ರಿಕೆಯ ಮೇಲೆ ಕಣ್ಣಾಡಿಸಿ ನಂತರ ಅದನ್ನು ನೀಟಾಗಿ ಮಡಚಿ ವಿಶ್ವನಾಥನಿಗೆ ಹಿಂತಿರುಗಿಸಿದರು. ಸಾಮಾನ್ಯವಾಗಿ ಪತ್ರಿಕೆಯನ್ನು ಓದಲು ಪಡೆದವರು ಹೇಗೆಹೇಗೋ ಮಡಚಿ ಹಿಂತಿರುಗಿಸುತ್ತಾರೆ. ಆದರೆ ಕೆಂಗಲ್ಲರು ಮಾತ್ರ ಅಚ್ಚುಕಟ್ಟಾಗಿ ಆಗತಾನೆ ಅಂಗಡಿಯಿಂದ ಕೊಂಡು ತಂದAತೆ ಮಡಚಿ ಕೊಟ್ಟರು. ತಾನು ಮುಖ್ಯಮಂತ್ರಿಯೆಂಬ ಹಮ್ಮು ಅವರಲ್ಲಿ ಇನಿತೂ ಇರಲಿಲ್ಲ. ಅಭಿಮಾನ ತುಂಬಿದ ಕಣ್ಣುಗಳಿಂದ ಅವನು ಅವರನ್ನು ನೋಡುತ್ತ ಎರಡು ನಿಮಿಷ ನಿಂತಲ್ಲೇ ನಿಂತುಬಿಟ್ಟ. ಬಳಿಕ “ಬರುತ್ತೇನೆ” ಎಂದು ಹೇಳಿ ಹೊರಟ. ಆ ಬಳಿಕ ವಿಶ್ವನಾಥ ಮತ್ತು ಕೆಂಗಲ್ಲರ ಭೇಟಿ ವಿಧಾನಸೌಧದ ಬಳಿ ತೀರ ಸಾಮಾನ್ಯ ಎನ್ನುವ ಹಾಗೆ ಆಯಿತು.

ಈ ಪರಿಚಯದ ಹಿನ್ನೆಲೆಯಲ್ಲಿಯೇ ಕೆಂಗಲ್ಲರು ವಿಶ್ವನಾಥನ ಪೂರ್ವಾಪರ ಕೇಳಿಸಿಕೊಂಡರು. ನಿರ್ಮಾಣಹಂತದ ವಿಧಾನಸೌಧದ ಸುತ್ತಮುತ್ತ ಅವರು ನಡೆಯುವಾಗ ಈಗೀಗ ವಿಶ್ವನಾಥ ಅವರ ಹಿಂಬಾಲಕನಾದ. ಒಂದು ದಿನ ಹೀಗೆ ಹಿಂಬಾಲಿಸುವಾಗ, “ಸ್ವಾಮಿ, ನೀವು ಇಷ್ಟು ದೊಡ್ಡ ಶಾಸನಸಭೆ ಕಟ್ಟಿಸುತ್ತಿರುವಿರಿ. ಇದು ಪೂರ್ಣಗೊಂಡ ಬಳಿಕ ರಾಜ್ಯದ ಮೂಲೆಮೂಲೆಗಳಿಂದ ಜನರು ತಮ್ಮ ಕಷ್ಟಗಳನ್ನು ತೋಡಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಬರುವವರು ಹೆಚ್ಚಿನವರು ಬಡವರೇ ಇರುತ್ತಾರೆ. ಅವರಿಗೆ ಹೊಟೇಲುಗಳಲ್ಲಿ ಕೋಣೆಗಳನ್ನು ಬಾಡಿಗೆ ಹಿಡಿಯುವಷ್ಟು ಹಣಕಾಸಿನ ಅನುಕೂಲ ಇರುವುದಿಲ್ಲ. ಬೆಂಗಳೂರು ಈಗಾಗಲೇ ‘ಉದ್ಯಾನ ನಗರಿ’ ಎಂದು ಹೆಸರಾಗಿದೆ. ಉದ್ಯಾನ ನಗರಿ ಸ್ವಚ್ಛ ನಗರಿಯೂ ಆಗಿರಬೇಕಲ್ಲವೆ? ಈ ಭವನದ ಹತ್ತಿರದಲ್ಲೇ ಒಂದು ಸುಲಭಶೌಚಾಲಯವನ್ನು ನಿರ್ಮಿಸಿಕೊಟ್ಟರೆ, ಹೀಗೆ ಬೆಂಗಳೂರಿಗೆ ಬರುವ ಬಡವರಿಗೆ ಅನುಕೂಲವಾಗುತ್ತದೆ. ಬೆಂಗಳೂರಿನ ಸೌಂದರ್ಯವೂ ಹಾಗೆಯೇ ಇರುತ್ತದೆ” ಎಂದು ತುಸು ವಿವರವಾಗಿಯೇ ವಿಶ್ವನಾಥ ವಿವರಿಸಿದ. ಕೆಂಗಲ್ಲರಿಗೆ ಅದು ಹೌದೆನ್ನಿಸಿತು. “ಈ ಸುಲಭ ಶೌಚಾಲಯ ನೀವೇ ಏಕೆ ನಿರ್ಮಿಸಿ ನಿರ್ವಹಿಸಬಾರದು” ಎಂದು ಪ್ರಶ್ನಿಸಿದರು, ಕೆಂಗಲ್ಲರು. “ಅದು ನಿಜ, ತಾವು ಜಾಗ ಒದಗಿಸಿದರೆ ನಾನು ಸಿದ್ಧ” ಎಂದು ವಿಶ್ವನಾಥ ಹೇಳಿದ.
ಅದಾಗಿ ಒಂದೆರಡು ತಿಂಗಳಲ್ಲಿಯೇ ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿಯೇ ಒಂದು ಜಾಗವನ್ನು ಕೆಂಗಲ್ಲರು ವಿಶ್ವನಾಥನಿಗೆ ೯೯ ವರ್ಷದ ಗುತ್ತಿಗೆಯ ಆಧಾರದ ಮೇಲೆ ಮಂಜೂರು ಮಾಡಿದರು. ವಿಧಾನಸೌಧದ ಜೊತೆಜೊತೆಯಲ್ಲಿಯೇ ವಿಶ್ವನಾಥನ ಸುಲಭಶೌಚಾಲಯವೂ ನಿರ್ಮಾಣವಾಗತೊಡಗಿತು. ಮುಖ್ಯಮಂತ್ರಿಯ ಜೊತೆಯಲ್ಲಿ ಅಡ್ಡಾಡುವ ವ್ಯಕ್ತಿ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಾಣಕ್ಕೆ ಶಾಸನಸಭೆಯ ಸೌಧ ಕಟ್ಟುತ್ತಿದ್ದ ಗುತ್ತಿಗೆದಾರರೇ ಸ್ವಲ್ಪ ರಿಯಾಯಿತಿ ದರದಲ್ಲಿ ಕಲ್ಲು ಮರಳು ಪೂರೈಸಿ ತುಂಬ ಚೆಂದ ಅನ್ನುವ ಹಾಗೆ ಕಟ್ಟಿಯೂ ಕೊಟ್ಟರು. ಶೌಚಾಲಯದ ಉದ್ಘಾಟನೆಗೆ ಮುಖ್ಯಮಂತ್ರಿಗಳಾದ ತಾವು ಬರುವುದು ಬೇಡ ಎಂದು ವಿಶ್ವನಾಥ ಹೇಳಿದರೂ, ‘ಇದು ಜನರಿಗೆ ಅನುಕೂಲ ಒದಗಿಸುವ ಕೆಲಸ. ನಾಡಿನ ಜನರಿಗೆ ಇದು ಗೊತ್ತಾಗಬೇಕು. ನಾನು ಬಂದರೆ ಪತ್ರಿಕೆಯಲ್ಲಿ ಸುದ್ದಿಯೂ ಬರುತ್ತದೆ. ಪ್ರಚಾರವೂ ಆಗುತ್ತದೆ. ಅದರಿಂದ ನಿನಗೂ ಲಾಭ, ನಮ್ಮ ಪಕ್ಷಕ್ಕೂ ಲಾಭ’ ಎಂದು ತಿಳಿಹೇಳಿದರು. ಅಲ್ಲದೆ ಒಂದು ಶುಭ ಮುಹೂರ್ತದಲ್ಲಿ ಅದರ ಉದ್ಘಾಟನೆಯನ್ನೂ ನೆರವೇರಿಸಿಕೊಟ್ಟರು. ಶರೀರದ ಸ್ವಾಸ್ಥ್ಯ ಚೆನ್ನಾಗಿದ್ದರೆ ಮನಸ್ಸಿನ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಮನಸ್ಸಿನ ಸ್ವಾಸ್ಥ್ಯ ಚೆನ್ನಾಗಿದ್ದರೆ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಇವೆಲ್ಲ ಒಂದು ಕೊಂಡಿ ಇದ್ದಂತೆ. ವಿಧಾನಸೌಧಕ್ಕೆ ಬರುವ ಪ್ರಜೆಗಳು ಒಳಗಿನ ಮತ್ತು ಹೊರಗಿನ ಕೊಳೆಯನ್ನೆಲ್ಲ ಕಳೆದುಕೊಂಡು ಬಂದರೆ ಅವರ ಸಮಸ್ಯೆಯನ್ನು ಆಲಿಸಲು ತಮಗೂ ಸಂತೋಷವಾಗುತ್ತದೆ. ಆ ಒಂದು ಮಹತ್ತ್ವದ ಕಾರ್ಯದಲ್ಲಿ ಸಹಯೋಗ ನೀಡಿರುವ ವಿಶ್ವನಾಥ ಅವರನ್ನು ನಾನು ಅಭಿನಂದಿಸುತ್ತೇನೆ. ಶೌಚಾಲಯದ ಮಹತ್ತ್ವವನ್ನು ಅರಿತುಕೊಂಡೇ ಇದರ ಉದ್ಘಾಟನೆಗೆ ಮುಖ್ಯಮಂತ್ರಿಯಾದ ನಾನೇ ಆಗಮಿಸಿದ್ದೇನೆ” ಎಂದು ಹೇಳಿದರು. ಮರುದಿನ ಪತ್ರಿಕೆಯಲ್ಲಿ ಅವೆಲ್ಲವೂ ವಿವರವಾಗಿಯೇ ಪ್ರಕಟವಾದವು.
ಈ ರೀತಿಯ ಸುಲಭ ಶೌಚಾಲಯ ಹುಬ್ಬಳ್ಳಿಯಲ್ಲೊಂದು, ಮಂಗಳೂರಿನಲ್ಲೊಂದು, ಕಲಬುರ್ಗಿಯಲ್ಲೊಂದು ಹೀಗೆ ತುಂಬ ಅಪರೂಪವಾಗಿದ್ದವು. ಬೆಂಗಳೂರಿನಲ್ಲಿ ಆಗ ಎಂ.ಜಿ. ರೋಡಿನಲ್ಲಿ ಒಂದು, ರೆಸಿಡೆನ್ಸಿ ರೋಡಿನಲ್ಲಿ ಮತ್ತೊಂದು ಎಂದು ಎರಡೇ ಇತ್ತು. ಅದು ವಿಧಾನಸೌಧಕ್ಕೆ ಬರುವವರಿಗೆ ದೂರವೇ ಇದ್ದುದರಿಂದ ಸೌರ್ವಜನಿಕರಿಗೆ ಅದರಿಂದ ಹೆಚ್ಚು ಉಪಯೋಗ ಆಗುತ್ತಿರಲಿಲ್ಲ. ವಿಶ್ವನಾಥನ ‘ಪಬ್ಲಿಕ್ ಟಾಯ್ಲೆಟ್’ ಮಾತ್ರ ಬೆಂಗಳೂರಿಗೆ ಬೇಗ ಪ್ರಸಿದ್ಧವಾಯಿತು. ಜಾಗ ಬಹಳ ದೊಡ್ಡದೇ ಇತ್ತು. ಎತ್ತರದ ಗೋಡೆಗಳು, ಪಾಯಖಾನೆಗಳಲ್ಲದೆ ಸ್ನಾನದ ಕೋಣೆಗಳು, ಬಟ್ಟೆ ಬದಲಿಸುವ ಕೋಣೆಗಳು, ಪುರುಷರಿಗೆ ಮತ್ತು ಮಹಿಳೆಯರಿಗೆ ಎಂದೆಲ್ಲ ವಿಭಾಗಗಳಿದ್ದವು. ಆ ಕಾಲದಲ್ಲಿಯೇ ವೆಸ್ಟರ್ನ್ ಕಮೋಡ್ ಕೂಡ ಇಲ್ಲಿ ಅಳವಡಿಸಿದ್ದ. ಈ ಶೌಚಾಲಯದ ಬಾಗಿಲಲ್ಲಿಯೇ ಚಿಕ್ಕದೊಂದು ಉಪಾಹಾರಗೃಹವನ್ನೂ ವಿಶ್ವನಾಥ ತೆರೆದ. ಇದೆಲ್ಲ ಅವನೊಬ್ಬನಿಂದ ಎಲ್ಲಿ ಆಗುತ್ತದೆ? ಊರಿನಿಂದ, ಮದ್ರಾಸಿನಿಂದ ಕೆಲವರನ್ನು ಕರೆಯಿಸಿಕೊಂಡ. ಸುಲಭಶೌಚಾಲಯದ ಯಶಸ್ಸಿನಿಂದ ವಿಶ್ವನಾಥ ‘ಟಾಯ್ಲೆಟ್ ವಿಶ್ವನಾಥ’ನಾಗಿ ಪ್ರಸಿದ್ಧಿ ಪಡೆದ. ಆ ಪ್ರಸಿದ್ಧಿಯಿಂದಾಗಿಯೇ ವಿಧಾನಸೌಧದ ಮೊಗಸಾಲೆಯಲ್ಲೂ ಆತ ಆಗೀಗ ಕಾಣಿಸಿಕೊಳ್ಳುತ್ತಿದ್ದ. ಹಲವು ರಾಜಕಾರಣಿಗಳ ಪರಿಚಯ ಸಹಜವಾಗಿಯೇ ಅವನಿಗೆ ಆಯಿತು. ಕೆಂಗಲ್ಲರು ರಾಜ್ಯ ರಾಜಕೀಯದಿಂದ ದೂರವಾದರೂ ವಿಶ್ವನಾಥ ಮಾತ್ರ ತನ್ನ ಟಾಯ್ಲೆಟನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ಈತನ ಟಾಯ್ಲೆಟ್ನ ಸ್ವಚ್ಛತೆ, ನಿರ್ವಹಣೆಯ ವಿಧಾನ ಇವೆಲ್ಲ ಆಗಾಗ ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲಿ ಉದಾಹರಣೆ ರೂಪದಲ್ಲಿ ಪ್ರಸ್ತಾಪವಾಗುತ್ತಿದ್ದವು. ಇದೆಲ್ಲ ಮರುದಿನ ಪತ್ರಿಕೆಯಲ್ಲಿ ಓದಿ ವಿಶ್ವನಾಥ ಹೆಮ್ಮೆಪಡುತ್ತಿದ್ದ.
ಆಗೆಲ್ಲ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ಅಸ್ಮಿತೆಯ ಕೂಗು ಹೆಚ್ಚಾಗಿ ಕೇಳಿಬರುತ್ತಿದ್ದವು. ಅ.ನ. ಕೃಷ್ಣರಾಯರು, ಮ. ರಾಮಮೂರ್ತಿಯವರು ಮತ್ತಿತರ ಕನ್ನಡ ಧುರೀಣರು ಪರಭಾಷಿಗರು ಬೆಂಗಳೂರಿನಲ್ಲಿ ಮೇಲುಗೈ ಸಾಧಿಸಿ ಸ್ಥಳೀಯರ ಅವಕಾಶಗಳನ್ನು ಕಬಳಿಸುತ್ತಿರುವುದರ ವಿರುದ್ಧ ಹೋರಾಟ ಸಂಘಟಿಸುತ್ತಿದ್ದರು. ಬೆಂಗಳೂರಿಗೆ ವಲಸೆ ಬಂದವರಲ್ಲಿ ತಾನೂ ಒಬ್ಬನಾಗಿದ್ದ ಕಾರಣ ವಿಶ್ವನಾಥನಲ್ಲಿ ಒಳಗೊಳಗೆ ಒಂದು ಭಯ ಇತ್ತು. ಅದಕ್ಕಾಗಿ ಅವನು ಒಂದು ಕನ್ನಡ ಸಂಘಟನೆಯಲ್ಲಿ ಸೇರಿಕೊಂಡ. ಆಗಾಗ ದೊಡ್ಡವರ ಹೋರಾಟದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದನು. ಜನರು ಕಡಮೆ ಇದ್ದರೆ ತನ್ನ ಉಪಾಹಾರಗೃಹದಿಂದಲೇ ಬೆಳಗಿನ ತಿಂಡಿಯನ್ನು, ಅಗತ್ಯಬಿದ್ದರೆ ಮಧ್ಯಾಹ್ನದ ಊಟವನ್ನೂ ಸರಬರಾಜು ಮಾಡಿಸುತ್ತಿದ್ದನು. ತನ್ನ ಶೌಚಾಲಯದ ಎತ್ತರದ ಗೋಡೆಯ ಮೇಲೆ ಅ.ನ. ಕೃಷ್ಣರಾಯರ ದೊಡ್ಡ ಕಟೌಟ್ಅನ್ನು ಕಣ್ಣಿಗೆ ರಾಚುವ ಹಾಗೆ ನಿಲ್ಲಿಸಿಬಿಟ್ಟನು. ಶುದ್ಧ ಕನ್ನಡದಲ್ಲಿ ‘ನಿಮ್ಮ ನಗರವನ್ನು ಸ್ವಚ್ಛವಾಗಿಡಿ’ ಎಂದು ಬರೆಯಿಸಿದನು.
ಕೃಷ್ಣರಾಯರ ಕಟೌಟ್ ಕಣ್ಣಿಗೆ ಬೀಳುತ್ತಲೆ ಸಿನೆಮಾರಂಗದ ಕಣ್ಣು ಆ ಜಾಗದ ಮೇಲೆ ಬಿತ್ತು. ರಾತ್ರಿಹೊತ್ತಿನಲ್ಲಿ ಶೌಚಾಲಯದ ಗೋಡೆಯ ಮೇಲೆ ಕದ್ದು ಅಂಟಿಸುವ ಪ್ರಯತ್ನ ನಡೆಯಿತು. ವಿಶ್ವನಾಥ ತನ್ನ ಹುಡುಗರ ಸಹಾಯದಿಂದ, ಹಾಗೆಯೇ ಪೊಲೀಸರ ನೆರವಿನಿಂದ ಅದನ್ನು ತಡೆದನು. ಹೀಗಾಗಿ ಸಿನೆಮಾ ಜನರೇ ನೇರವಾಗಿ ಅವನ ಜೊತೆ ಮಾತುಕತೆಗೆ ಬಂದರು. ವ್ಯಾವಹಾರಿಕವಾಗಿ ಜಾಣನಾಗಿದ್ದ ವಿಶ್ವನಾಥ ಸಿನೆಮಾದ ಪೋಸ್ಟರ್ ಅಂಟಿಸುವುದಕ್ಕೆ ಪೋಸ್ಟರಿನ ಅಳತೆಗನುಗುಣವಾಗಿ ದರವನ್ನು ನಿಗದಿ ಮಾಡಿದ. ಕಟೌಟಿಗೂ ಬೇರೆಯದೇ ದರವನ್ನು ನಿಗದಿ ಮಾಡಿದ. ಅಪ್ಪಿತಪ್ಪಿಯೂ ಕನ್ನಡ ಬಿಟ್ಟು ಬೇರೆ ಭಾಷೆಯ ಪೋಸ್ಟರ್ ಬರದಹಾಗೆ ನೋಡಿಕೊಂಡನು. ಅ.ನ.ಕೃ ಅವರ ಕಟೌಟನ್ನೂ ಮೀರಿಸುವ ಹಾಗೆ ರಾಜಕುಮಾರ ಅವರ ಸಿನೆಮಾದ ಪೋಸ್ಟರುಗಳು ಮಿಂಚತೊಡಗಿದವು. ಪೋಸ್ಟರುಗಳನ್ನು ಅಂಟಿಸುವುದರ ಮೂಲಕ ಆದಾಯ ಪಡೆಯಬಹುದು ಎಂಬುದನ್ನು ಬೆಂಗಳೂರು ನಗರಾಡಳಿತಕ್ಕೆ ಮೊದಲಬಾರಿ ಈ ಮೂಲಕ ತೋರಿಸಿಕೊಟ್ಟವನು ಈ ವಿಶ್ವನಾಥ.
ಪೋಸ್ಟರುಗಳ ಉದ್ದ ಅಗಲ ಲೆಕ್ಕಹಾಕಿ ಅದನ್ನು ಅಂಟಿಸುವುದಕ್ಕೆ ಹಣ ನಿಗದಿ ಮಾಡುವುದು ಒಂದು ರೀತಿಯಾದರೆ, ಆ ಪೋಸ್ಟರು ಜನರಿಗೆ ಕಾಣುವ ಹಾಗೆ ಜಾಗವನ್ನು ಗೊತ್ತುಪಡಿಸುವುದಕ್ಕೂ ಪ್ರತ್ಯೇಕ ಶುಲ್ಕವನ್ನು ಅವನು ನಿಗದಿ ಮಾಡಿದ. ‘ಇದು ನಿಮಗಷ್ಟೇ ವಿಶೇಷ ರಿಯಾಯಿತಿಯ ಕೊಡುಗೆ’ ಎಂದು ದೇಶಾವರಿ ನಗೆ ಬೀರುತ್ತ ರಸೀದಿ ಹರಿಯುತ್ತಿದ್ದ ವಿಶ್ವನಾಥ. ಎಲ್ಲ ರಾಜಕಾರಣಿಗಳಿಗೂ ಸಮಾನ ಆದ್ಯತೆ. ಹುಟ್ಟಿದ ಹಬ್ಬದ ಪೋಸ್ಟರುಗಳನ್ನು ಹಚ್ಚಬೇಕೆಂದು ಬಂದವರಿಗೆ, ಅಣ್ಣಾವರ ಒಂದು ದೊಡ್ಡ ಕಟೌಟ್ ನಿಲ್ಲಿಸಿದರೆ ಒಳ್ಳೆಯದಲ್ಲವೆ? ಕಳೆದ ವಾರ ಅಮರನಾಥ ಅವರು ದೊಡ್ಡ ಕಟೌಟ್ ಹಾಕಿಸಿದ್ದರು. ನಿಮ್ಮ ಅಭಿಮಾನಿಗಳಿಗೆ ಹೇಳಿದರೆ ಅವರೇ ಹಣ ಹೊಂದಿಸುತ್ತಾರೆ. ನಿಮ್ಮ ಗೌರವವೂ ಹೆಚ್ಚುತ್ತದೆ ಎಂದು ಪುಸಲಾಯಿಸುವ ಧ್ವನಿಯಲ್ಲಿ ಹೇಳುತ್ತಿದ್ದ. ಆ ಮೇಲೆ ಅದು ಬಂದೇ ಬರುತ್ತಿತ್ತು. ಕನ್ನಡ ಹೋರಾಟದ ಯಾವುದೇ ಪೋಸ್ಟರ್ ಇದ್ದರೂ ಯಾವುದೇ ಹಣ ಸ್ವೀಕರಿಸದೆ ಅವರು ಹೇಳಿದ ಜಾಗದಲ್ಲಿ ಅಂಟಿಸುವುದಕ್ಕೆ ಬಿಡುತ್ತಿದ್ದ. ಒಂದು ಸಲ ಏನಾಯಿತು ಎಂದರೆ, ಯುವ ರಾಜಕಾರಣಿಯೊಬ್ಬರ ಹುಟ್ಟುಹಬ್ಬ. ದೊಡ್ಡದಾದ ಕಟೌಟ್ ನಿಲ್ಲಿಸಿದ್ದರು. ಮರುದಿನ ನೋಡಿದರೆ ಕೌಟೌಟಿನ ಮುಖಕ್ಕೆ ಸೆಗಣಿಯ ಮುದ್ದೆಯನ್ನು ಯಾರೋ ಎಸೆದಿದ್ದರು. ಒಂದು ಇಡೀ ದಿನ ಬೆಂಗಳೂರಿನ ಜನಸಾಗರ ಅದನ್ನು ನೋಡಿ ಮುಸಿಮುಸಿ ನಗಾಡಿತು. ಯುವರಾಜಕಾರಣಿಗೆ ಕೋಪ ನೆತ್ತಿಗೇರಿತು. ಆತನ ಬೆಂಬಲಿಗರು ವಿಶ್ವನಾಥನ ಮನೆಗೆ ಮುತ್ತಿಗೆ ಹಾಕಿ ಅವನನ್ನು ಹೊರಗೆಳೆದು ನಾಲ್ಕು ತದಕಿದರು. ‘ಇದರಲ್ಲಿ ನನ್ನದೇನೂ ತಪ್ಪಿಲ್ಲ’ ಎಂದು ಆತ ಪದೇಪದೇ ಅಲವತ್ತುಕೊಂಡರೂ ಅವರು ಕ್ಯಾರೇ ಅನ್ನಲಿಲ್ಲ. ಹಾಗೆಯೇ ಮುಸ್ಲಿಮರ ಈದ್ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಪ್ರವಾದಿಗೆ ಸಂಬಂಧಿಸಿದ ಪೋಸ್ಟರ್ ಯಾರೋ ಅಂಟಿಸಿದ್ದರು. ಅದು ಉರ್ದುವಿನಲ್ಲಿ ಇದ್ದುದರಿಂದ ಅದರಲ್ಲಿ ಏನು ಬರೆದಿದೆ ಎಂಬುದು ವಿಶ್ವನಾಥನಿಗೆ ಗೊತ್ತಿರಲಿಲ್ಲ. ಕಾಸು ಪಡೆದುಕೊಂಡು ಪೋಸ್ಟರ್ ಅಂಟಿಸುವುದಕ್ಕೆ ಬಿಟ್ಟಿದ್ದ. ಮೆರವಣಿಗೆ ಬಂದಾಗ ಅದರಲ್ಲಿ ಏನೋ ಕೆಟ್ಟದ್ದು ಇದೆ, ಮುಸ್ಲಿಮರ ಭಾವನೆಗಳಿಗೆ ನೋವುಂಟುಮಾಡುವ ವಿಷಯ ಇದೆ ಎಂಬುದು ಗೊತ್ತಾಯಿತು. ಮುಸ್ಲಿಮರಲ್ಲದ ಯಾರೋ ಕಿಡಿಗೇಡಿಗಳ ಕೃತ್ಯ ಎಂಬುದೂ ತಿಳಿಯಿತು. ಅಷ್ಟುಹೊತ್ತಿಗೆ ಪರಿಸ್ಥಿತಿ ಕೈ ಮೀರಿತ್ತು. ಮೆರವಣಿಗೆಯಲ್ಲಿ ಬಂದವರು ಕೈಗೆ ಕಲ್ಲು ಎತ್ತಿಕೊಂಡರು. ಕಿಸೆಯಲ್ಲಿದ್ದ ಬೆಂಕಿಪೆಟ್ಟಿಗೆ ತೆಗೆದುಕೊಂಡು ಪೋಸ್ಟರು ಅಂಟಿಸಿದ್ದ ಗೋಡೆಗೆ ಬೆಂಕಿ ಹಚ್ಚಿದರು. ಅಲ್ಲಿದ್ದ ಉಪಾಹಾರಗೃಹವನ್ನು ಧ್ವಂಸ ಮಾಡಿದರು. ಪೊಲೀಸರು ಬಂದರು. ಲಾಠಿಪ್ರಹಾರ ಮಾಡಿದರು. ಪರಿಸ್ಥಿತಿ ತಿಳಿಯಾಗಲು ಹಲವು ದಿನಗಳೇ ಬೇಕಾದವು. ಇದರಿಂದ ವಿಶ್ವನಾಥ ದೊಡ್ಡ ಪಾಠವನ್ನು ಕಲಿತನು.
ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಕೆಂಗಲ್ಲರು ಕೇಂದ್ರ ರಾಜಕಾರಣಕ್ಕೆ ಹೋದರು. ಕಡಿದಾಳರು ಬಂದರು, ನಿಜಲಿಂಗಪ್ಪನವರು ಬಂದರು. ಅವರೂ ಪಕ್ಷದ ಹುದ್ದೆಗೆ ಹೋದರು. ಕೇಂದ್ರದಲ್ಲಿ ಅಧಿಕಾರ ಬದಲಾಗುತ್ತಿತ್ತು. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದರು. ಈ ನಡುವೆ ಬಾಂಗ್ಲಾ ವಿಮೋಚನೆಯೂ ನಡೆಯಿತು. ಅವರನ್ನು ದುರ್ಗೆಯ ಅವತಾರ ಎಂದು ಎಲ್ಲರೂ ಕೊಂಡಾಡುತ್ತಿದ್ದರು. ಅತಿಯಾದ ವ್ಯಕ್ತಿಪೂಜೆ ಅವರಲ್ಲಿ ಆತ್ಮರತಿಯನ್ನು ಹುಟ್ಟುಹಾಕಿತ್ತು. ಭಟ್ಟಂಗಿಗಳು ಅವರ ಕಾಲು ನೆಲದ ಮೇಲೆ ಇರಿಸದಂತೆ ನೋಡಿಕೊಳ್ಳುತ್ತಿದ್ದರು. ಚುನಾವಣೆ ಅಕ್ರಮದ ಹಿನ್ನೆಲೆಯಲ್ಲಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡರು. ನಿಜ ಹೇಳಬೇಕು ಎಂದರೆ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ಪಡೆದುಕೊಳ್ಳಬಹುದಿತ್ತು ಅಥವಾ ತಮ್ಮ ಪದವಿಗೆ ರಾಜೀನಾಮೆ ನೀಡಬಹುದಿತ್ತು. ಅವೆರಡನ್ನೂ ಮಾಡದೆ ಅವರು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಘೋಷಿಸಿದರು.
ಆಗ ರಾಜ್ಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ತುಂಬ ಜನಾನುರಾಗಿಯಾಗಿದ್ದ ಅರಸು ಅವರ ಬಗ್ಗೆ ವಿಶ್ವನಾಥನಿಗೆ ಅಪಾರವಾದ ಗೌರವ ಇತ್ತು. ಆದರೆ ತುರ್ತುಪರಿಸ್ಥಿತಿಯ ಹೇರಿಕೆಯಿಂದಾಗಿ ವಿಶ್ವನಾಥ ಇಂದಿರಾ ಗಾಂಧಿಯವರ ಮೇಲೆ ಮುನಿಸಿಕೊಂಡ. ಈ ಬಡಪಾಯಿ ಪಬ್ಲಿಕ್ ಟಾಯ್ಲೆಟ್ಟಿನ ಮನುಷ್ಯ ಎವರೆಸ್ಟ್ ಸಮಾನರಾದ ಇಂದಿರಾ ಗಾಂಧಿಯವರಿಗೆ ಏನುತಾನೆ ಮಾಡಬಲ್ಲ? ತುರ್ತುಪರಿಸ್ಥಿತಿಯ ಕರಾಳ ಮುಖವನ್ನು ತೋರಿಸುವ ಪೋಸ್ಟರುಗಳು ಅವನ ಟಾಯ್ಲೆಟ್ಟಿನ ಗೋಡೆಯ ಮೇಲೆ ರಾರಾಜಿಸತೊಡಗಿದವು. ಜೈಲಿಗೆ ಹೋದ ಪ್ರತಿಪಕ್ಷದ ನಾಯಕರ ಕಟೌಟುಗಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಅಲ್ಲಿ ಎದ್ದುನಿಲ್ಲತೊಡಗಿದವು. ಅರಸು ಸರ್ಕಾರಕ್ಕೆ ಇದು ಮುಜುಗರದ ವಿಷಯವಾಯಿತು. ಪೊಲೀಸರ ಮೂಲಕ ವಿಶ್ವನಾಥನಿಗೆ ಎಚ್ಚರಿಕೆಯನ್ನು ನೀಡಲಾಯಿತು. ಸರ್ಕಾರದ ವಿರೋಧಿ ಬರಹಗಳು ಅಲ್ಲಿ ಕಾಣಬಾರದು ಎಂದು ಎಚ್ಚರಿಸಿದರು. ಯಾವುದೇ ಪೋಸ್ಟರ್ ಅಲ್ಲಿ ಅಂಟಿಸುವಾಗಲೂ ವಿಧಾನಸೌಧದ ಪೊಲೀಸ್ಠಾಣೆಯಿಂದ ಅನುಮತಿ ಪತ್ರವನ್ನು ಪಡೆಯಬೇಕು. ಅದರಲ್ಲಿರುವ ಒಕ್ಕಣೆಯನ್ನು ಠಾಣೆಗೆ ಒಪ್ಪಿಸಬೇಕು. ಅದರಲ್ಲಿ ನಂತರ ತಿದ್ದುಪಡಿಯಾದರೆ ಟಾಯ್ಲೆಟ್ ಬಂದ್ ಮಾಡಿಸುತ್ತೇವೆ ಎಂದು ತಿಳಿಸಿ ಹೇಳಿದರು. ‘ನನಗೆ ಗೊತ್ತಿಲ್ಲದೆ, ನನಗಾಗದವರು ಯಾರಾದರೂ ಅಲ್ಲಿ ಅಂಟಿಸಿದರೆ ನಾನೇನು ಮಾಡಲಿ?’ ಎಂದು ವಿಶ್ವನಾಥ ಅಲವತ್ತುಕೊಂಡ. ಒಂದು ಕಾಲದಲ್ಲಿ ಆತನಿಗೆ ಮಿತ್ರರಾಗಿದ್ದವರು, ಅವರ ವರ್ಗಾವಣೆ, ಬಡ್ತಿಗಳಿಗೆ ಅವನ ನೆರವು ಪಡೆದವರು, ಪರಿಸ್ಥಿತಿಗೆ ಹೊಂದಿಕೊಂಡು ಹೋಗುವಂತೆ ಬುದ್ಧಿ ಹೇಳಿದರು.
ವಿಶ್ವನಾಥ ಅದರ ಕುರಿತು ತಲೆಕೆಡಿಸಿಕೊಳ್ಳಲಿಲ್ಲ. ಟಾಯ್ಲೆಟ್ ಹೇಗೆ ಬಂದ್ ಮಾಡಿಸುತ್ತಾರೆ? ತುರ್ತು ನಿಸರ್ಗಕರೆ ಬಂದವರು ತುರ್ತು ಪರಿಸಿತ್ಥಿ ಇದೆ ಎಂದು ಕಟ್ಟಿಕೊಳ್ಳಲಾಗುತ್ತದೆಯೆ? ಸ್ವಚ್ಛ ಬೆಂಗಳೂರು ಗಬ್ಬು ನಾರುವ ಬೆಂಗಳೂರು ಆಗುವ ದಿನ ದೂರವಿಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡ. ಪೊಲೀಸರ ಕಣ್ಣು ತಪ್ಪಿಸಿ ತನ್ನ ವಿರೋಧವನ್ನು ತೋರಿಸಲು ಆತ ಒಂದು ಉಪಾಯ ಮಾಡಿದ. ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಆತ ಚಿತ್ರಕಲಾವಿದರ ನೆರವನ್ನು ಪಡೆದುಕೊಂಡನು. ಚಕ್ರಗಳೇ ಇಲ್ಲದ ಬಸ್ಸಿನ ಚಿತ್ರದ ಮೇಲೆ, “ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದೆ” ಎಂದು ಬರೆಯಿಸಿದನು. ಪೊಲೀಸರ ದಪ್ಪ ತಲೆಗೆ ಅದು ಹೋಗಲೇ ಇಲ್ಲ. ಯುವ ಕಾಂಗ್ರೆಸ್ಸಿನ ಮರಿಪುಢಾರಿಗಳೂ ಅದನ್ನು ಗಮನಿಸಲಿಲ್ಲ. ಪೋಸ್ಟರಿನಲ್ಲಿಯ ವ್ಯಂಗ್ಯ ಸಂದೇಶ ನಿಧಾನಕ್ಕೆ ಜನರ ಮಾತಿಗೆ ವಸ್ತುವಾಯಿತು. ಚೂಯಿಂಗ್ಗಮ್ನಂತೆ ಅದನ್ನೇ ಮತ್ತೆ ಮತ್ತೆ ಅಗಿದಗಿದು ಉಗುಳು ನುಂಗಿದರು. ಇದು ಡೆಲ್ಲಿ ದರಬಾರನ್ನೂ ತಲಪಿತು. ವಿಧಾನಸೌಧದಿಂದ ಪೊಲೀಸರಿಗೆ ಸೂಚನೆ ಹೋಯಿತು. ಅವರು ಈ ಟಾಯ್ಲೆಟ್ಟಿಗೆ ಹೋಗುವ ನೀರಿನ ಪೈಪ್ ಕಟ್ ಮಾಡಿಸಿದರು. ಹೋರಾಟಗಾರರ ಜೊತೆಯಲ್ಲಿ ಬೆಳೆದ ವಿಶ್ವನಾಥನಿಗೆ ಇದು ಸರ್ಕಾರದ ಕುತಂತ್ರ ಎಂದು ಅರಿಯುವುದು ಕಷ್ಟವಾಗಲಿಲ್ಲ. ಟ್ಯಾಂಕರುಗಳಿಂದ ನೀರು ಹಾಕಿಸಿದ. ವಿದ್ಯುತ್ ಕಟ್ ಮಾಡಿಸಿದರು. ಜನರೇಟರ್ ತಂದಿಟ್ಟ. ಆತನನ್ನು ತಡೆಯುವುದು ಹೇಗೆಂದು ಅವರಿಗೆ ತಿಳಿಯಲಿಲ್ಲ. ಸಾರ್ವಜನಿಕರ ಕಕ್ಕಸು. ಹಾಗೆ ನೋಡಿದರೆ ಗೋಡೆಯು ವಿಶ್ವನಾಥನ ನಿಯಂತ್ರಣದಲ್ಲಿ ಬರುವುದಿಲ್ಲ. ಏನು ಮಾಡುವುದು? ಕೊನೆಯ ಅಸ್ತçವೆಂಬಂತೆ ವಿಶ್ವನಾಥನನ್ನು ಬಂಧಿಸುವುದೇ ಸರಿ ಎಂಬ ನಿರ್ಧಾರಕ್ಕೆ ಬಂದರು. ತುರ್ತುಪರಿಸ್ಥಿತಿಯಲ್ಲಿ ಬಂಧಿಸುವುದಕ್ಕೆ ಯಾವುದೇ ಕಾರಣಗಳು ಬೇಕಿರಲಿಲ್ಲ. ಪೊಲೀಸ್ ಇಲಾಖೆಯಲ್ಲಿಯೇ ಇದ್ದ ಸ್ನೇಹಿತರ ಮೂಲಕ ವಿಶ್ವನಾಥನಿಗೆ ವಿಷಯ ತಿಳಿಯಿತು. ಇವರ ಕೈಗೆ ಇನ್ನು ಸಿಗಬಾರದು ಎಂದು ಅವನು ಭೂಗತನಾಗಿಬಿಟ್ಟ.
ಕಾಲಚಕ್ರ ಉರುಳುತ್ತಿತ್ತು. ತುರ್ತುಪರಿಸ್ಥಿತಿ ಕೊನೆಗೊಂಡಿತು. ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋತರು. ಭೂಗತರಾದವರೆಲ್ಲ ಪ್ರತ್ಯಕ್ಷರಾದರು. ವಿಶ್ವನಾಥನೂ ತುರ್ತುಪರಿಸ್ಥಿತಿ ಹೀರೋ ಎಂಬಂತೆ ಪ್ರತಿಪಕ್ಷಗಳಿಂದ ಗೌರವಿಸಲ್ಪಟ್ಟನು. ಮತ್ತೆ ತನ್ನದೇ ಪಬ್ಲಿಕ್ ಟಾಯ್ಲೆಟ್ ಚೆಂದಗೊಳಿಸಿ ಜನರಿಗೆ ತೆರೆದನು. ರಾಜ್ಯದಲ್ಲಿ ದೇವರಾಜ ಅರಸು ಅಧಿಕಾರ ಹೋಗಿತ್ತು. ಗುಂಡೂರಾಯರು ಅಧಿಕಾರಕ್ಕೆ ಬಂದಿದ್ದರು. ವಿಶ್ವನಾಥನಿಗೆ ಅವನಿಗೇ ಗೊತ್ತಿಲ್ಲದಂತೆ ಶತ್ರುಗಳೂ ಹುಟ್ಟಿಕೊಂಡಿದ್ದರು. ಟಾಯ್ಲೆಟ್ಟನ್ನೂ ಹೇಗೆ ಒಂದು ಬಿಸಿನೆಸ್ ಮಾಡಬಹುದು ಎಂಬುದನ್ನು ವಿಶ್ವನಾಥ ಅಂಥವರಿಗೆಲ್ಲ ತೋರಿಸಿಕೊಟ್ಟಿದ್ದ. ಅವರೆಲ್ಲ ದುಡ್ಡಿದ್ದ ಶ್ರೀಮಂತರು, ರಾಜಕಾರಣಿಗಳ ನೆರವನ್ನು ಪಡೆದು ಬೆಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ತೆರೆದರು. ಆದಾಯದ ಮೂಲಕ್ಕೆ ವಿಶ್ವನಾಥನೇ ಅವರಿಗೆ ಮಾದರಿಯಾಗಿದ್ದ. ಹೀಗಾಗಿ ಅವನ ಆದಾಯ ಹರಿದುಹಂಚಿಹೋಯಿತು. ಹೊಸದಾಗಿ ಶೌಚಾಲಯ ತೆರೆದವರು ಸರ್ಕಾರದಿಂದ ವಿವಿಧ ರೀತಿಯ ನೆರವನ್ನು, ಅನುದಾನವನ್ನು ಪಡೆದುಕೊಳ್ಳತೊಡಗಿದರು. ಸ್ವಚ್ಛ ಬೆಂಗಳೂರು ನಿಧಿಯ ಬಹುಪಾಲು ಹಣವು ಇಂಥ ಶೌಚಾಲಯ ಮಾಲೀಕರ ಪಾಲಾಗುತ್ತಿತ್ತು. ಶೌಚಾಲಯ ನಡೆಸಲು ಎಂದೂ ಸರ್ಕಾರದ ನೆರವು ಕೋರದ ವಿಶ್ವನಾಥನಿಗೆ ಮಂಡಿಯೂರುವುದು ಇಷ್ಟವಾಗಲಿಲ್ಲ.
ತನಗೆ ಇದೆಲ್ಲ ಸಾಕು ಎಂದು ಅವನಿಗೆ ಅನಿಸುತ್ತಿರುವಾಗ, ಒಬ್ಬ ಉದ್ಯಮಿ ಕಂ ರಾಜಕಾರಣಿ ಅದನ್ನು ತನಗೆ ನಡೆಸಲು ಕೊಡುವಂತೆ ಕೋರಿದನು. ಏಕೆಂದರೆ ಅದನ್ನು ಮಾರುವ ಅಧಿಕಾರ ವಿಶ್ವನಾಥನಿಗೆ ಇರಲಿಲ್ಲ. ಸರ್ಕಾರದ ಲೀಸ್ ಭೂಮಿ ಅದಾಗಿತ್ತು. ವಿಶ್ವನಾಥ ಸ್ವಲ್ಪ ಹಣ ಪಡೆದು ಅದನ್ನು ನಡೆಸುವ ಹಕ್ಕನ್ನು ಆ ಉದ್ಯಮಿಗೆ ಬಿಟ್ಟುಕೊಟ್ಟನು. ಈ ಉದ್ಯಮಿ ನಗರದಲ್ಲಿ ಇನ್ನೂ ಒಂದು ಅತ್ಯಾಧುನಿಕ ಸುಲಭಶೌಚಾಲಯ ಹೊಂದಿದ್ದನು. ಆದರೆ ಇದು ಆಯಕಟ್ಟಿನ ಜಾಗದಲ್ಲಿ ಇದ್ದುದರಿಂದ, ಜನರಿಗೆ ಬಹಳ ಪರಿಚಿತ ಆಗಿದ್ದುದರಿಂದ ಇದನ್ನು ಆತ ವಹಿಸಿಕೊಂಡಿದ್ದ. ಶೌಚಾಲಯಕ್ಕೆ ಬಂದವರಿಗೆ ಉಚಿತ ವೈಫೈ ವ್ಯವಸ್ಥೆಯನ್ನೂ ಆತ ಕೊಟ್ಟನು. ಹಾಗೆಯೇ ಅರ್ಧ ಬೆಲೆಗೆ ಚಾ, ತಿಂಡಿ, ಊಟದ ವ್ಯವಸ್ಥೆಯನ್ನೂ ಮಾಡಿದ. ಆದರೆ ಪೋಸ್ಟರುಗಳನ್ನು ಯಾರದು ಬೇಕಾದರೂ ಹಾಕುವಂತಿರಲಿಲ್ಲ. ಪೋಸ್ಟರಿನಿಂದ ಆತನಿಗೆ ಹಣ ಮಾಡುವ ಉದ್ದೇಶ ಇರಲಿಲ್ಲ. ತಾನು ಇಷ್ಟಪಟ್ಟ ರಾಜಕಾರಣಿಯ, ತಾನು ಇಷ್ಟಪಟ್ಟ ರಾಜಕೀಯ ಪಕ್ಷದ ಪೋಸ್ಟರ್ ಅಂಟಿಸುವುದಕ್ಕೆ ಗೋಡೆಗಳನ್ನು ಮೀಸಲಿಟ್ಟ. ಮೊದಮೊದಲಿಗೆ ಅವನು ಯಾವ ರಾಜಕೀಯ ಒಲವಿನವನು ಎಂದು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲ ಪಕ್ಷದ ನಾಯಕರಿಗೂ ಮಿತ್ರನಂತಿದ್ದು ಶಾಸನಸಭೆಗೂ ಆಯ್ಕೆಯಾದನು. ಆಮೇಲೆ ಆಮೇಲೆ ಈ ಟಾಯ್ಲೆಟ್ ನಡೆಸುವುದರಿಂದ ಲಾಭ ಇಲ್ಲ ಎಂದು ಅವನಿಗೆ ಮನವರಿಕೆ ಆಗುತ್ತ ಬಂತು. ಮುಚ್ಚುವ ಹಾಗೂ ಇಲ್ಲ ಬಿಡುವ ಹಾಗೂ ಇಲ್ಲ. ಆದಾಯ ವೆಚ್ಚ ಹೊಂದಿಸಲು ಕೆಲಸದ ಜನರನ್ನು ಕಡಮೆ ಮಾಡಿದ. ಕೆಲಸಗಾರರು ಕಡಮೆಯಾಗುತ್ತಿದ್ದಂತೆ ವಿಶ್ವನಾಥನ ಟೌಯ್ಲೆಟ್ ನಾತ ಹೂರಸೂಸಲು ಆರಂಭಿಸಿತು. ನಾತಕ್ಕೆ ಅಂಜಿ ಜನರು ಅತ್ತಕಡೆ ಮುಖ ಮಾಡುತ್ತಲೇ ಇರಲಿಲ್ಲ. ಹೀಗಾಗಿ ಹೊಸ ಮಾಲೀಕನಿಗೆ ತನ್ನದೇ ಪೋಸ್ಟರ್ ಅಲ್ಲಿ ಅಂಟಿಸುವುದಕ್ಕೂ ಮುಜುಗರವಾಗತೊಡಗಿತು. ಆಗ ಯಾರು ಬೇಕೆಂದರೂ ಅಲ್ಲಿ ತಮಗೆ ಬೇಕಾದ ಪೊಸ್ಟರ್ ಅಂಟಿಸತೊಡಗಿದರು.
ವಿಧಾನಸೌಧ ಕಟ್ಟುವ ಸುಮಾರಿಗೇ ನಿರ್ಮಿಸಿದ್ದ ವಿಶ್ವನಾಥನ ಸುಲಭಶೌಚಾಲಯ ಈಗ ಒಳಗೊಳಗೇ ಶಿಥಿಲಗೊಂಡಿದೆ. ಬಿರುಕುಗೊಂಡ ಗೋಡೆಯಿಂದ ಕಲ್ಲುಗಳನ್ನು ಸುಲಭವಾಗಿ ಕೀಳಬಹುದಾಗಿದೆ. ಹೊರಗೆ ಪೋಸ್ಟರುಗಳು ದಪ್ಪಗೆ ಅಂಟಿಕೊಂಡಿದ್ದರಿಂದ ಒಳಗಿನ ಕಲ್ಲು ಕಿತ್ತದ್ದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹಾಗೆ ಕಿತ್ತ ಕಲ್ಲುಗಳು ಅಲ್ಪಸ್ವಲ್ಪ ದೂರದಲ್ಲಿ ಹೊಸದಾಗಿ ತಲೆ ಎತ್ತುತ್ತಿದ್ದ ಶೌಚಾಲಯದ ಗೋಡೆಗಳಿಗೋ ಬುನಾದಿಗೋ ಪೂರೈಕೆಯಾಗುತ್ತಿದ್ದವು. ಚೆನ್ನಾಗಿ ಕೆತ್ತಿ ಕೂಡಿಸಿದ್ದು, ಹೊಸದಾಗಿ ಕೆತ್ತುವ ಅಗತ್ಯ ಇಲ್ಲ ಎಂದು ಅದನ್ನು ಕೊಳ್ಳುವವರು ಸ್ವಲ್ಪ ಹೆಚ್ಚಿನ ಬೆಲೆ ಕೊಟ್ಟೇ ಖರೀದಿಸುತ್ತಿದ್ದರು.
ಇದೀಗ ಒಳಗಿನ ಗೋಡೆಯ ಕಲ್ಲೆಲ್ಲ ಕದ್ದೋಗಿವೆ. ಪೋಸ್ಟರುಗಳು ಗೋಡೆ ಇದೆ ಎಂಬ ಭ್ರಮೆಯನ್ನು ಉಳಿಸಿವೆ. ಒಂದು ಗಟ್ಟಿಯಾದ ಒದೆ, ಒಂದು ಕಿಡಿ ಬೆಂಕಿ ಯಾವುದಿದ್ದರೂ ಸರಿ ಅದನ್ನು ಇಲ್ಲವಾಗಿಸಲು. ಅಂದಹಾಗೆ ವಿಶ್ವನಾಥ ನಾಲ್ಕೆöÊದು ವರ್ಷಗಳ ಹಿಂದೆಯೇ ಕಾಲವಾಗಿದ್ದಾನೆ. ಅವನೊಡನೆ ಒಡನಾಟ ಇದ್ದ ಕೆಲವರು ಮಾತ್ರ ಅವನನ್ನು ನೆನೆಯುತ್ತಿರುತ್ತಾರೆ. ವರ್ಷಕ್ಕೊಮ್ಮೆ ಯಾವುದೋ ಬಾರಿನ ಮೂಲೆಯಲ್ಲಿ ಕುಳಿತು ಅವನ ಹೆಸರಿನಲ್ಲಿ ತಮ್ಮನ್ನು ತಾವೇ ಮರೆಯುವಷ್ಟು ಕುಡಿಯುತ್ತ ಮಧ್ಯರಾತ್ರಿ ಕಳೆದ ಮೇಲೆ ಕ್ಯಾಬಿನಲ್ಲಿ ಸೇರಿಕೊಳ್ಳುತ್ತಾರೆ.