ಪ್ರತೀ ಬಾರಿ ಹುಡುಗಿಯರನ್ನು ಭೇಟಿಯಾಗಲು ಹೋದಾಗಲೂ ಕೊನೆಯಲ್ಲಿ ಹುಡುಗಿಯರು “ನಿಮ್ಗೆ ಕಾಲ್ ಮಾಡ್ತೀನಿ” ಎಂದೋ “ಹೇಳ್ತೀನಿ” ಎಂದೋ ಹೊರಟರು ಎಂದರೆ ಇನ್ನು ಕೆಲವೇ ಹೊತ್ತಿನಲ್ಲಿ “ನಿಮ್ ಜೊತೆ ಮಾತಾಡಿ ತುಂಬಾ ಖುಷಿಯಾಯ್ತು, ನೀವು ತುಂಬಾ ನೈಸ್ ಪರ್ಸನ್. ಆದ್ರೆ ಐ ಡೋಂಟ್ ವಾಂಟ್ ಟು ಕಂಟಿನ್ಯೂ ದಿಸ್ ಎನಿ ಫರ್ದರ್” ಎಂಬ ಮೆಸೇಜು ಅವರಿಂದ ಬರುತ್ತದೆ ಎಂದು ನಟೇಶನಿಗೆ ಅಭ್ಯಾಸವಾಗಿತ್ತು. ಬೇಸರದಲ್ಲಿ ಚಲ್ಲಘಟ್ಟದವರೆಗೆ ಗಾಡಿಯಲ್ಲಿ ಬಂದು ಇಡೀ ದಿನ ಮೈಮುರಿದು ದುಡಿದು ಕೆಳಗಿನ ಟೆಂಟುಗಳಲ್ಲಿ ನಿದ್ರೆ ಹೋಗಿರುವ ಕೆಲಸಗಾರರಿಗೆ ಗೊತ್ತಾಗದಂತೆ ನಿಶ್ಶಬ್ದವಾಗಿ ಇಪ್ಪತ್ತೆರಡು ಫ್ಲೋರುಗಳನ್ನು ಹತ್ತಿ ಮೇಲೆ ಬೀಸುವ ಕತ್ತಲೆಯ ಸುಳಿಗಾಳಿಗೆ ಮೈಯೊಡ್ಡುವುದು ನಟೇಶನ ವಾಡಿಕೆ. ಎಂತೆಂತಾ ಬೇಸರಗಳೆಲ್ಲಾ ಆ ಚಲ್ಲಘಟ್ಟದ ಬಿಲ್ಡಿಂಗಿನ ಮೇಲಿನ ಗಾಳಿಗೆ ಹಾಗೇ ಮಾಯವಾಗಿವೆ. ಆದರೆ ಯಾಕೋ ಇಂದು ಅಲ್ಲಿನ ಗಾಳಿಯಲ್ಲಿ ತಲೆ ನೇವರಿಸುವ ಕಾಳಜಿಯಿಲ್ಲ, ನೋವನ್ನು ಮರೆಸುವ ಔಷಧೀಯತೆಯಿಲ್ಲ. ಏನೋ ಒಂಥರಾ ಬಿಸಿಬಿಸಿ. ದಾರಿಯಲ್ಲಿ ಬರುವಾಗ ಕುಡಿದ ಬ್ಲೆಂಡರ್ಸ್ ಪ್ರೈಡ್ ಮತ್ತಿಗೆ ದಾರಿ ತಪ್ಪಿ ಕನಕಪುರ ರಸ್ತೆಯ ಬಿಲ್ಡಿಂಗಿಗೇನಾದರೂ ಬಂದುಬಿಟ್ಟೆನಾ ಎಂದು ಒಮ್ಮೆ ತೂರಾಡುತ್ತಾ ಮೊಬೈಲ್ ತೆಗೆದುಕೊಂಡು ಲೊಕೇಷನ್ ಆನ್ ಮಾಡಿ ನಟೇಶ ಖಾತ್ರಿಪಡಿಸಿಕೊಂಡ.
ಮೆಟ್ಟಿಲುಗಳನ್ನು ಹತ್ತುತ್ತಿದ್ದ ನಟೇಶ ಮತ್ತೊಮ್ಮೆ ಮೊಬೈಲ್ ತೆರೆದು ರಕ್ಷಾಳ ಪ್ರೊಫೈಲ್ ಫೋಟೋ ನೋಡಿದ. ಚಲ್ಲಘಟ್ಟದ ನಿರ್ಮಾಣ ಹಂತದ ಅಪಾರ್ಟ್ಮೆಂಟಿನ ಮೇಲೆ ಹೋಗಿ ನಿಂತಾಗ ಬಿಡದಿಯ ಕಡೆಯಿಂದ ಬೀಸುವ ತಂಗಾಳಿಯಂತೆ ಆಹ್ಲಾದವಾಯಿತು. ಅವನ ಜೊತೆಗೆ ಮದುವೆ.ಕಾಂ ವೆಬ್ಸೈಟ್ನಲ್ಲಿ ಮ್ಯಾಚ್ ಆಗಿ ಮಾತುಕತೆಯವರೆಗೆ ಬಂದಿರುವುದು ಇದೇ ಮೊದಲ ಪ್ರೊಫೈಲ್ ಏನಲ್ಲ, ಆದರೆ ಯಾಕೋ ಬದಿಯಲ್ಲಿ ಹೆಬ್ಬೆರಳ ಗಾತ್ರದ ಜಾಗದಲ್ಲಿ ಹಿಟ್ಟು ರುಬ್ಬುವ ಮೆಷಿನ್ನಿನ ಬೆಲ್ಟಿನ ತರಹ ಒಂದಾದ ಮೇಲೊಂದರಂತೆ ಸಾಗುತ್ತಿರುವ ಪ್ರೊಫೈಲುಗಳಲ್ಲಿ ರಕ್ಷಾಳ ಪ್ರೊಫೈಲ್ ಮಾತ್ರ ಇವನ ಗಮನವನ್ನು ಛಕ್ಕೆಂದು ಸೆಳೆದಿತ್ತು. ಬೇರೆ ಪ್ರೊಫೈಲುಗಳಿಗೆ ಲೈಕ್ ಒತ್ತುವಾಗ ಎಂದೂ ಹುಟ್ಟದಿದ್ದ ಭಯ ಇದ್ದಕ್ಕಿದ್ದಂತೆ ಇವಳ ಪ್ರೊಫೈಲ್ ನೋಡಿ ಹುಟ್ಟಿತ್ತು. ಎಲ್ಲಿ ಅವಳು ರಿಜೆಕ್ಟ್ ಮಾಡಿಬಿಟ್ಟರೆ ಎಂಬ ಭಯ. ಅರೇ! ಇಲ್ಲಿಯವರೆಗೆ ನಾನಾ ಕಾರಣಗಳಿಗೆ ನನ್ನನ್ನು ತಿರಸ್ಕರಿಸಿರುವ ಹುಡುಗಿಯರ ಸಂಖ್ಯೆ ಬರೋಬ್ಬರಿ ಎಪ್ಪತ್ತೆಂಟು! ಅದರ ಮೇಲೆ ಮತ್ತೊಂದು ತಿರಸ್ಕಾರವನ್ನು ತೆಗೆದುಕೊಳ್ಳದಂತೆ ದಿಗಿಲುಕ್ಕುತ್ತಿರಲು ಕಾರಣವೇನು? ನನಗೆ ಬರೀ ಈ ಒಂದು ಫೋಟೋ ನೋಡಿ ಅವಳ ಮೇಲೆ ಪ್ರೇಮಾಂಕುರವಾಗಿಬಿಟ್ಟಿತಾ? ಅಥವಾ ಈ ಒಂದು ಚಿಲ್ಲರೆ ವಾರದ ಮಾತುಕತೆಯಲ್ಲಿ ಪ್ರೀತಿ ಹುಟ್ಟಿರುವುದಾ? ನಂಬರ್ ಎಕ್ಸ್ಚೇಂಜ್ ಆದ ಮೇಲೆ ವಾಟ್ಸಾಪಿನಲ್ಲಿ ಮೆಸೇಜ್ ಮಾಡುವ ಮುನ್ನ ಡಿಪಿ ಚೆನ್ನಾಗಿಲ್ಲವೆನ್ನಿಸಿ, ಇರುವ ಯಾವ ಫೋಟೋಗಳೂ ನನ್ನನ್ನು ಇರುವುದಕ್ಕಿಂತ ಚೆನ್ನಾಗಿ ತೋರಿಸುತ್ತಿಲ್ಲವೆಂಬ ಭಾವನೆ ಹುಟ್ಟಿ ವಾರದ ಮಧ್ಯದಲ್ಲಿ ಹೋಗಿ ಕಟಿಂಗ್, ಶೇವಿಂಗು ಮಾಡಿಸಿ, ಆಗಲೇ ನೆತ್ತಿಯ ಕಡೆಗೆ ಹೊರಟಿರುವ ಹೇರ್ಲೈನು ಕಾಣದಂತೆ ಮುಖ ಬದಿಗೆ ತಿರುಗಿಸಿ ರೈಟ್ ಪ್ರೊಫೈಲಿನಲ್ಲಿ ಫೋಟೋ ತೆಗೆಸಿಕೊಂಡು ಅದನ್ನು ಡಿಪಿ ಮಾಡಿದ್ದೆ. ಒಂದೆರಡು ದಿನ ಒದ್ದಾಡಿದ್ದಕ್ಕೆ ಕಾರಣ ಇವಳನ್ನು ಕಳೆದುಕೊಳ್ಳಬಾರದೆನ್ನುವ ಅನುರಾಗದ ಪರಮೋಚ್ಚ ಸ್ಥಿತಿಯೇ? ಹಾಗಾದರೆ ಅವಳೂ ಕೂಡ ಅದೇ ರೀತಿ ಅಂಗೀಕಾರದ ಅನಿವಾರ್ಯತೆಗೆ ತಾನಿಲ್ಲದಷ್ಟು ಚಂದದ ಫೋಟೋ ಹಾಕಿರಬಹುದು. ಅಯ್ಯೋ, ಮೂವತ್ತು ದಾಟಿದ ಮೇಲೂ ಸಂಭಾವ್ಯ ಸಂಗಾತಿಯ ರೂಪಕ್ಕೆ ಬೆಲೆ ಕೊಡುತ್ತಾ ಕುಳಿತಿದ್ದೇನಲ್ಲ, ನಾನೆಂಥಾ ದುರುಳ! ನಟೇಶ ಕಟ್ಟಡದ ತುದಿಯನ್ನು ತಲಪಿದ್ದ.
ನೆಲದಡಿ ಪಾರ್ಕಿಂಗಿಗೆಂದು ಎರಡು ಫ್ಲೋರು, ನೆಲದ ಮೇಲೆ ಒಟ್ಟು ಇಪ್ಪತ್ತೆರಡು ಫ್ಲೋರು, ‘ಹಾ-ನೆಸ್ಟ್’ ಬಿಲ್ಡರುಗಳು ಸದ್ಯಕ್ಕೆ ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ಹದಿನಾರು ಅಪಾರ್ಟ್ಮೆಂಟ್ಗಳಲ್ಲಿ ಮಲತಾಯಿ ಧೋರಣೆಗೆ ಒಳಗಾಗಿರುವುದು ಎರಡು ಅಪಾರ್ಟ್ಮೆಂಟ್ಗಳು. ಒಂದು ಚಲ್ಲಘಟ್ಟದ್ದು, ಮತ್ತೊಂದು ಕನಕಪುರ ರಸ್ತೆಯಲ್ಲಿ ರವಿಶಂಕರ್ ಗುರೂಜಿಯವರ ಆಶ್ರಮದಿಂದಲೂ ಆಚೆಯಿರುವ ಇದು. ಈ ಎರಡರ ಜವಾಬ್ದಾರಿಯನ್ನು ಇಂಗ್ಲಿಷನ್ನು ಪಟಪಟನೆ ಮಾತನಾಡಲುಬಾರದ, ಮೇಲಿನವರ ಜೊತೆಗೆ ಸರಿಯಾಗಿ ವ್ಯವಹರಿಸಲು ಗೊತ್ತಿಲ್ಲದ, ಸಹೋದ್ಯೋಗಿಗಳೊಂದಿಗೆ ಸರಿಯಾಗಿ ಸೋಷಿಯಲೈಜ಼್ ಆಗಲೂಬಾರದ ನಟೇಶನಿಗೆ ವಹಿಸಿರುವುದರಲ್ಲಿ ಅಚ್ಚರಿಯೇನಿಲ್ಲ. ಅಪ್ಪ ಒಂದು ಮೂವತ್ತು-ಇಪ್ಪತ್ತು ಜಾಗವನ್ನು ತನ್ನದಾಗಿಸಿಕೊಂಡು ಅದರ ಮೇಲೆ ಮೂರು ಮಕ್ಕಳಿಗೂ ಒಂದೊಂದು ಕೋಣೆಯೂ ಬಾರದ ಸಣ್ಣಮನೆಯೊಂದನ್ನು ಕಟ್ಟಲು ಇಡೀ ಜೀವನ ಕಷ್ಟಪಟ್ಟರು. ಇಲ್ಲಿ ಮೂಡಲಿರುವ ಒಂದೊಂದು ಫ್ಲಾಟೂ ನಮ್ಮ ಇಡೀ ಮನೆಗಿಂತ ದೊಡ್ಡದಿರುತ್ತದೆ. ಎರಡು ಕಟ್ಟಡಗಳೆಂದರೆ ಸರಿಸುಮಾರು ಮುನ್ನೂರು ಮನೆಗಳು! ಇವುಗಳ ಬಗ್ಗೆ ಕಟ್ಟುತ್ತಿರುವವರಿಗೆ ಕೊಂಚ ಒಲವೂ ಇಲ್ಲ! ದುಡ್ಡಿರುವವರ ನಿರ್ಲಕ್ಷ್ಯ ನಟೇಶನಿಗೆ ಆಗಾಗ ಅಚ್ಚರಿ ತರುತ್ತದೆ. ಜೊತೆಗೆ ತಾನೂ ಕೂಡ ಇಷ್ಟರಲ್ಲಾಗಲೇ ಆ ದುಡ್ಡಿರುವವರ ಗುಂಪಿನ ಸದಸ್ಯನಾಗಬೇಕಿತ್ತು. ತನ್ನ ಸಹಪಾಠಿಗಳು ಐಟಿ ಸೇರಿ ಕೋಟಿಗಳಲ್ಲಿ ದುಡಿಯುತ್ತಿದ್ದಾರೆ, ತಾನು ಮಾತ್ರ ಚಲ್ಲಘಟ್ಟಕ್ಕೆ ಮೆಟ್ರೋ ಬೇಗ ಶುರುವಾದರೆ ಓಡಾಡಲು ಅನುಕೂಲವಾಗುತ್ತದೆ ಎಂದು ಯೋಚಿಸುತ್ತಿದ್ದೇನೆ ಎಂಬ ಬೇಸರವೂ ಆಗುತ್ತದೆ. ‘ಹಾ-ನೆಸ್ಟ್’ ಸಂಸ್ಥೆಯಲ್ಲಿ ಆಡಳಿತಪಕ್ಷದ, ವಿರೋಧಪಕ್ಷದ ಯಾವಾವ ಶಾಸಕರು ಎಷ್ಟೆಷ್ಟು ಹಣ ಹೂಡಿದ್ದಾರೆ, ಇದ್ದಕ್ಕಿದ್ದಂತೆ ಐಟಿ ದಾಳಿಯಾಗುತ್ತದೆ ಎಂದು ಗೊತ್ತಾದಾಗ ಅವಸರದಲ್ಲಿ ಹಾಳೆಯ ಮೇಲೆ ತೋರಿಸಲೆಂದು ತಮ್ಮ ಹೆಂಡತಿ, ಮಕ್ಕಳ ಹೆಸರಿನಲ್ಲಿ ಯಾರಾರು ಈ ಎರಡು ಕಟ್ಟಡಗಳನ್ನು ಕಟ್ಟಿಸಲು ‘ಹಾ-ನೆಸ್ಟ್’ ಸಂಸ್ಥೆಗೆ ಆದೇಶಿಸಿದರು, “ಎಷ್ಟಕ್ಕೆ ಬರುತ್ತೋ ಅಷ್ಟಕ್ಕೆ ಸೇಲ್ ಮಾಡಿ” ಎಂದು ಹಾ-ನೆಸ್ಟ್ ಮುಖ್ಯಸ್ಥರೇ ಬ್ರೋಕರುಗಳಿಗೆ ಹೇಳಿ ಅಗ್ಗವಾಗಿ ಬಿಕರಿಯಾಗಲು ತಯಾರಿದ್ದರೂ ಯಾರೂ ಕೊಳ್ಳಲು ಮುಂದೆಬಾರದ ಈ ಮನೆಗಳು ಯಾವ ಕೆರೆಯನ್ನು ನುಂಗಿ ನಿಂತಿವೆ ಎನ್ನುವುದರ ಬಗ್ಗೆಯೆಲ್ಲ ಬರೀ ಸಾವಿರದಿನ್ನೂರು ಚಂದಾದಾರರಿರುವ ಒಂದು ಯೂಟ್ಯೂಬ್ ಚಾನೆಲ್ ವರದಿ ಮಾಡುತ್ತಿರುತ್ತದೆ. ನಟೇಶ ಕೂಡಾ ಆ ಚಾನಲ್ಲಿಗೆ ಸಬ್ಸ್ಕ್ರೈಬ್ ಆಗದೆ ಇರುವುದರಿಂದ ಅವನಿಗೂ ಅದರ ಬಗ್ಗೆ ಗೊತ್ತಿಲ್ಲ.
ಇಪ್ಪತ್ತೆರಡು ಫ್ಲೋರ್ ಹತ್ತಿ ಬಂದ ಸುಸ್ತಿನ ಏದುಸಿರು ಹತ್ತು ನಿಮಿಷವಾದರೂ ಇಳಿಯದಾದಾಗ ನಟೇಶನಿಗೆ ಒಮ್ಮೆ ಭಯವಾಯಿತು. ಯಾವ ಎಣ್ಣೆ-ಸಿಗರೇಟಿನ ಸಹವಾಸವೂ ಇಲ್ಲದೆ ಶಿಸ್ತಾಗಿ ಬದುಕಿರುವುದಕ್ಕೆ ಕೊಂಚವಾದರೂ ಪ್ರತಿಫಲ ಬೇಕಲ್ಲವೇ ಎಂದು ಮೇಲೊಮ್ಮೆ ದೇವರತ್ತ ನೋಡುವಂತೆ ನೋಡಿದ. ಹೀಗೆ ಬೇಗ ಸುಸ್ತಾದರೆ ಹಾಸಿಗೆಯಲ್ಲಿ ನನ್ನ ಕಥೆಯೇನು, ರಕ್ಷಾ ಬೇಸರ ಮಾಡಿಕೊಳ್ಳುವುದಿಲ್ಲವೇ ಎಂಬ ಯೋಚನೆ ಬಂತು. ತಕ್ಷಣವೇ ಆಗಸದಲ್ಲಿ ಹಾರುತ್ತಿರುವ ಹಕ್ಕಿಗಳು ನೋಡಿಬಿಡುತ್ತಾವೇನೋ ಎಂಬಂತೆ ಅಕಾರಣವಾಗಿ ನಟೇಶ ನಾಚಿಕೊಂಡ. ಆ ಯೋಚನೆಯಲ್ಲಿರುವ ರಕ್ಷಾಳನ್ನು ತಾನು ಮದುವೆಯಾಗುವ ಸಾಧ್ಯತೆ ಅವನ ಶ್ವಾಸಕೋಶಗಳಿಗೆ ಹೊಸ ಹುರುಪು ನೀಡಿತು. ಚಲ್ಲಘಟ್ಟದ ಬಿಲ್ಡಿಂಗಿನ ಮೇಲೆ ಗಾಳಿ ಚೆನ್ನಾಗಿದೆ. ಇಲ್ಲಿ ಒಂಥರಾ ಎಷ್ಟು ಮೇಲೆ ಬಂದರೂ ಒಣಒಣ ಅನುಭವ. ಹೇಗಿದ್ದರೂ ಯಾರಿಗೂ ಬೇಡದ ಬಿಲ್ಡಿಂಗು, ನಾನು ಕೇಳಿದರೆ ಚಲ್ಲಘಟ್ಟದ ಬಿಲ್ಡಿಂಗಿನ ಪೆಂಟ್ಹೌಸಿನ ಆರು ಮನೆಗಳಲ್ಲಿ ಒಂದನ್ನು ಹಾ-ನೆಸ್ಟ್ ವ್ಯವಸ್ಥಾಪಕರು ನನಗೆ ಕೊಡುವುದಿಲ್ಲವೇ? ಅವರೇನು ಬಿಟ್ಟಿ ಕೊಡುವುದು ಬೇಡ, ಮಾರುಕಟ್ಟೆಯ ದರಕ್ಕಿಂತ ಒಂದು ಹತ್ತಿಪ್ಪತ್ತು ಲಕ್ಷ ಕಡಮೆಗೆ ಕೊಡಲಿ, ಹೇಗೋ ಸಾಲ ತೆಗೆದು ಕೊಟ್ಟುಬಿಡುತ್ತೇನೆ. ರಕ್ಷಾಳಿಗೆ ಟ್ರೆಕ್ಕಿಂಗ್ ಇಷ್ಟ, ಒದ್ದಾಡಿ ಆರೋಹಣ ಮಾಡಿದ ಮೇಲೆ ಸಿಗುವ ತಂಗಾಳಿ ಅವಳಿಗೆ ಕಿಕ್ ಕೊಡುತ್ತದೆಯಂತೆ. ಅವಳಿಗೆ ಚಲ್ಲಘಟ್ಟದ ಬಿಲ್ಡಿಂಗ್ ಆಪ್ಯಾಯಮಾನವಾಗಲೇಬೇಕು. ಅಪ್ಪ ಹೋಗಿಬಿಟ್ಟರು, ಅಮ್ಮ ಊರುಬಿಟ್ಟು ಬರುವುದಿಲ್ಲ. ಅತ್ತೆ ಮಾವನ ಜೊತೆಗೆ ಬದುಕಲು ಒಪ್ಪುತ್ತಾಳೋ ಇಲ್ಲವೋ ಎಂಬುದರ ಆಧಾರದ ಮೇಲೆ ಅವಳನ್ನು ಒಂದಿಷ್ಟು ಅಳೆಯುವ ಅವಕಾಶವಂತೂ ಇಲ್ಲ.
ಬೆಂಗಳೂರಿನ ಟ್ರಾಫಿಕ್ಗೆ ನನ್ನದೂ ಕೊಡುಗೆ ಕೊಡುವ ಮನಸ್ಸಿಲ್ಲ; ಇಬ್ಬರು ಮಕ್ಕಳಾಗಲಿ, ಆಮೇಲೆ ಕಾರು ತೆಗೆದುಕೊಳ್ಳೋಣ, ಸದ್ಯಕ್ಕೆ ಬೈಕ್ ಸಾಕು ಎನ್ನುತ್ತೇನೆ. ನನ್ನದೇನೂ ಹೆಚ್ಚು ಡಿಮಾಂಡ್ಸ್ ಇಲ್ಲ ಎಂದಿದ್ದಳಲ್ಲ, ಅವಳ ಬಣ್ಣ ಬಯಲು ಮಾಡುತ್ತೇನೆ. ಛೇ ಛೇ, ಚಿಕ್ಕಂದಿನಿಂದ ಸಾಕಷ್ಟು ಕಷ್ಟ ನೋಡಿದ್ದಾಳೆ, ಆಡಬೇಕಾದ ವಯಸ್ಸಿನಲ್ಲಿ ಅಪ್ಪನ ಟೈಲರಿಂಗ್ ಮೆಷಿನ್ ಪಕ್ಕ ಕೂತು ಕಾರ್ರು, ಗುಂಡಿ ಹಾಕಿದ್ದಾಳೆ, ಏನೋ ಕೊಂಚ ಸೌಕರ್ಯವನ್ನು ಆಸೆಪಟ್ಟರೆ ತಪ್ಪೇ? ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು, ಹದಿನೈದು ವರ್ಷವಾದ ಮೇಲೆ ಊರಿಗೆ ಹೋಗಿ ಸೆಟಲ್ ಆಗಿಬಿಡೋಣ, ವಾಶಿಂಗ್ಮೆಷಿನ್ ಇರಲಿ, ಆದರೆ ತಂಗಳುಪೆಟ್ಟಿಗೆ ಫ್ರಿಜ್ಜು ಬೇಡ ಎಂಬ ತನ್ನ ಅಸಂಬದ್ಧ ಬಯಕೆಗಳನ್ನೆಲ್ಲ ಅವಳೆದುರು ಹೇಳುವುದೇ ಬೇಡ ಎಂಬ ಉನ್ನತ ಆಲೋಚನೆ ಎತ್ತರದಲ್ಲಿದ್ದುದ್ದರಿಂದಲೋ ಏನೋ, ನಟೇಶನಿಗೆ ಹೊಳೆಯಿತು. ಸಮಯ ನೋಡಿಕೊಂಡ. ಎಂಟು ಗಂಟೆಗೆ ಇನ್ನೂ ನಾಲ್ಕು ಗಂಟೆ ಬಾಕಿಯಿತ್ತು. ವಾಟ್ಸಾಪಿನಲ್ಲಿ ಒಂದು ‘ಹಾಯ್’ ಕಳಿಸಿ ನೆನಪಿಸಲೇ ಎಂದು ಯೋಚಿಸಿದ. ಛೇ ಛೇ ತೀರಾ ಇದಕ್ಕೆಂದೇ ಕಾಯುತ್ತಿದ್ದೇನೆಂದು ತೋರಿಸಿಕೊಳ್ಳಬಾರದು, ಕಾಫಿ ಡೇಯಲ್ಲಿ ಮೀಟ್ ಆಗಿದ್ದ ನಲವತ್ತಾರನೇ ಹುಡುಗಿ “ನೀವ್ ತುಂಬಾ ಡೆಸ್ಪರೇಟ್ ಆಗಿದ್ದೀರಾ” ಎಂಬ ಕಾರಣಕೊಟ್ಟು ನಿರಾಕರಿಸಿದ್ದಳಲ್ಲ! ಹಾಗಾಗಬಾರದು. ಇವತ್ತಿನ ಮೀಟಿಂಗ್ ಅವಳಿಗೆ ನೆನಪಿದೆ ಎಂದೂ ಖಾತ್ರಿಗೊಳಿಸಿಕೊಳ್ಳಬೇಕು, ನನ್ನ ಕಾತುರವನ್ನೂ ತೋರಗೊಡಬಾರದು, ಮಧ್ಯದ ಮಾರ್ಗ ಯಾವುದಾದರೂ ಇದೆಯೇ ಎಂದು ಯೋಚಿಸುವಷ್ಟರಲ್ಲಿ ಬದಿಯಿಂದ “ಏನ್ ಸಾರ್ ಬೇಗ ಬಂದ್ರಲ್ಲ ಇವತ್ತು?’’ ಎಂಬ ಧ್ವನಿ ಕೇಳಿತು. ಸಿದ್ದಪ್ಪ ಸಿಮೆಂಟು ಮೆತ್ತುತ್ತಾ ಮೆತ್ತುತ್ತಾ ಇಪ್ಪತ್ತೆರಡನೇ ಫ್ಲೋರಿನವರೆಗೆ ಬಂದಿದ್ದ. ಕನಿಷ್ಠ ನೂರು ವರ್ಷವಾದರೂ ಬಾಳಿಕೆ ಬರಬೇಕಾದ ಈ ಅಪಾರ್ಟ್ಮೆಂಟನ್ನು ಕಟ್ಟಲು ಮಾತ್ರ ನೂರು ದಿನವೂ ನಿಲ್ಲದ ಬಿದಿರು ಬೊಂಬುಗಳ ಏಣಿಯೇ ಬೇಕು. ಒಂದಕ್ಕೊಂದು ಹಗ್ಗದಲ್ಲಿ ಬಿಗಿದು ನೂರು ಅಡಿಯವರೆಗೆ ಕಟ್ಟಿ ನಿಲ್ಲಿಸಿರುವ ಆ ನಾಜೂಕಾದ ತಾತ್ಕಾಲಿಕ ವ್ಯವಸ್ಥೆಯ ಮೇಲೆ ಜೀವವನ್ನೇ ಪಣಕ್ಕಿಟ್ಟು ದುಡಿಯಲು ಬರುತ್ತಾರಲ್ಲಾ, ಇವರಿಗೆಲ್ಲ ಯಾವ ದರ್ದು? ದೇವರ ದಯೆಯಿಂದ ನಾನು ಸೈಟ್ ಇಂಜಿನಿಯರ್ ಆದೆ, ಇಲ್ಲವಾದರೆ ನಾನೂ ಹೀಗೆ ಯಾವುದೋ ಕಟ್ಟಡ ಕಟ್ಟುತ್ತಲೋ, ರಸ್ತೆ ಕಾಮಗಾರಿಯಲ್ಲಿ ಕಾಂಕ್ರೀಟು-ಜಲ್ಲಿ ಮಿಶ್ರಣ ಮಾಡುತ್ತಲೋ ಇರಬೇಕಿತ್ತಲ್ಲವೆ? “ಸಂಜೆ ಒಂಚೂರ್ ಕೆಲಸ ಇದೆ ಸಿದ್ದಪ್ಪಾ” ಎಂಬ ಉತ್ತರ ಕೊಟ್ಟ ನಟೇಶ ಅಯಾಚಿತವಾಗಿ “ಮಕ್ಳು ಹೆಂಗಿದಾರೆ?’’ ಎಂದು ಕೇಳಿದ. ಹೌದು! ಸಿದ್ದಪ್ಪನಿಗೂ ಮದುವೆಯಾಗಿದೆ! ಆ ಅರಿವು ಮೂಡಿದ ತಕ್ಷಣ ನಟೇಶನ ಮುಖ ಬಾಡಿತು. ಸಿದ್ದಪ್ಪನ ಉತ್ತರಕ್ಕೂ ಕಾಯದೆ ಮೆಟ್ಟಿಲುಗಳನ್ನು ಇಳಿಯಲು ಶುರುಮಾಡಿದ.
ಮೂವತ್ತಾದರೂ ಮದುವೆಯಾಗದೆ ಉಳಿದಿರುವುದಕ್ಕೆ ನಿನ್ನ ಇಬ್ಬರು ತಂಗಿಯರೇ ಕಾರಣ ಎಂದು ಹೇಳಿದರೆ ಸಿಟ್ಟು ಮಾಡಿಕೊಳ್ಳುವಷ್ಟು ಒಳ್ಳೆಯ ವ್ಯಕ್ತಿ ನಟೇಶ. ಇಬ್ಬರಿಗೆ ಮದುವೆ ಮಾಡಲು ಅವನು ಎಷ್ಟು ಕಷ್ಟಪಟ್ಟಿಲ್ಲ? ಅವನೇನಾದರೂ ಭಗೀರಥನಾಗಿದ್ದರೆ ಗಂಗೆ ಮರ್ನಾಲ್ಕು ಬಾರಿ ಧರೆಗಿಳಿದು ಬಂದಿರುತ್ತಿದ್ದಳೇನೊ! ಆದರೂ ಅವನಿಗೆ ಕೇಳಿದರೆ “ನನ್ನ ಜವಾಬ್ದಾರಿ ಅಲ್ವಾ” ಎಂದು ಆಗಲೇ ಒಂದೆರಡು ಬಿಳಿ ಕೂದಲುಗಳು ಇಣುಕಿರುವ ಮೀಸೆಯ ಮರೆಯಲ್ಲಿ ಮುಗುಳ್ನಗುತ್ತಾನೆ. ಮೊದಲನೆಯವಳದ್ದು ಹಾಗೆ ನೋಡಿದರೆ ಒಂದು ಲೆಕ್ಕಕ್ಕೆ ಆರಾಮಾಗಿಯೇ ಆಯಿತೆನ್ನಬಹುದು. ಖರ್ಚು ಜಾಸ್ತಿಯಾಗಿ ಅಂಥಾ ನೀರಾವರಿಯೇನೂ ಇಲ್ಲದಿದ್ದ ಹೊಲವನ್ನು ಮಾರಬೇಕಾಗಿ ಬಂತು. ಕೈಸಾಲವನ್ನು ತೀರಿಸಲು ನಟೇಶ ಇದ್ದ ಒಂದು ಬಿಎಚ್ಕೆ ಮನೆಯಿಂದ ಕೆಲವು ಕಾಲ ಒಂದು ಸಣ್ಣ ರೂಮಿಗೆ ವರ್ಗಾವಣೆಯಾಗಬೇಕಾಗಿ ಬಂತೆನ್ನುವುದನ್ನು ಬಿಟ್ಟರೆ ತೀರಾ ಬೇರೆಯೇನೂ ಕಿರಿಕಿರಿಗಳಾಗಲಿಲ್ಲ. ಮೊನ್ನೆಮೊನ್ನೆ ಮಗುವಿನ ನಾಮಕರಣವೂ ಆಗಿದೆ. ಭಾವ ದೇವರಂಥಾ ಮನುಷ್ಯ. ಮೊದಲನೆಯ ಹೆರಿಗೆಯ ಖರ್ಚೆಲ್ಲ ತವರುಮನೆಯವರು ಕೊಡಬೇಕು ಎಂದೇನೂ ಒತ್ತಡ ಹಾಕಲಿಲ್ಲ. ಆದರೆ ಈ ಎರಡನೆಯವಳು ಸ್ವಲ್ಪ ಜಾಸ್ತಿ ಓದಿಕೊಂಡು ಸಮಸ್ಯೆ ಮಾಡಿಬಿಟ್ಟಳು. ನೋಡಲೂ ಕೊಂಚ ಜಾಸ್ತಿ ಚಂದ ಇದ್ದಳೆಂಬ ಜಂಭ ಬೇರೆ. ಎಂತೆಂಥಾ ಹುಡುಗರನ್ನು ಅವಳಿಗಾಗಿ ತಾನು ಹುಡುಕಿಲ್ಲ? ಐವತ್ತು ಎಕರೆ ಜಮೀನಿರುವವರಿಂದ ಹಿಡಿದು ವರ್ಷಕ್ಕೆ ಐವತ್ತು ಲಕ್ಷ ದುಡಿಯುವ ಇಂಜಿನಿಯರ್ ತನಕ ಎಲ್ಲರೂ ಇವಳನ್ನು ಇಷ್ಟಪಟ್ಟವರೇ. ಇವಳು ಮಾತ್ರ, ಅದು ಸರಿ ಇಲ್ಲ ಇದು ಸರಿ ಇಲ್ಲ – ಎಂದು ಅದೆಷ್ಟು ಒಳ್ಳೆಯ ಹುಡುಗರಿಗೆ ಕೀಳರಿಮೆ ಹುಟ್ಟಿಸಿಬಿಟ್ಟಳು. ಈಗ ಅದೆಲ್ಲೋ ನ್ಯೂಜಿಲ್ಯಾಂಡಿನಲ್ಲಿದ್ದಾಳೆ. ಆ ಭಾವನೂ ಒಂಥರಾ ವಿಚಿತ್ರ ಮನುಷ್ಯ! ಅವನ ತಂದೆತಾಯಿಯ ಜೊತೆಯೇ ಆ ವಯ್ಯ ಸರಿಯಾಗಿ ಮಾತನಾಡಿದ್ದನ್ನು ನಾನು ನೋಡಲಿಲ್ಲ. ಮೊನ್ನೆ ವಾಟ್ಸಾಪ್ ಡಿಪಿ ಬದಲಿಸಿದ್ದಾಳೆ. ಕುತ್ತಿಗೆಯಲ್ಲಿ ತಾಳಿಯೇ ಇಲ್ಲ! ಗಂಡ ಪಕ್ಕದಲ್ಲೇ ಇದ್ದಾನೆ! ಏನೋ ನನ್ನ ಜವಾಬ್ದಾರಿಯನ್ನು ಇಬ್ಬರೂ ತಂಗಿಯರ ವಯಸ್ಸು ಮೀರುವ ಮುನ್ನ ಮುಗಿಸಿಕೊಟ್ಟಿದ್ದೇನೆ, ಇನ್ನು ಅವಳ ಕರ್ಮ ಎಂದುಕೊಂಡ. ಕೆಳಗೆ ನಿಲ್ಲಿಸಿದ್ದ ಬೈಕ್ನ ಮೇಲೆ ನಿರ್ಮಾಣದ ಧೂಳು ಬೆಟ್ಟದಂತೆ ಕೂತಿತ್ತು. ಹೊರಗೇ ನಿಲ್ಲಿಸಬೇಕಿತ್ತು. ರಕ್ಷಾಳ ಬಗ್ಗೆ ಯೋಚಿಸುತ್ತ ಇಲ್ಲಿ ತಂದುಬಿಟ್ಟೆ ಎಂದು ಅಲವತ್ತುಕೊಳ್ಳುತ್ತ ಧೂಳು ಹೊಡೆಯಲು ಶುರುಮಾಡಿದ ನಟೇಶನಿಗೆ ರಕ್ಷಾಳಿಗೂ ನನ್ನಂತಹ ಅಣ್ಣ ಇದ್ದಿದ್ದರೆ ಇಷ್ಟೊತ್ತಿಗೆ ಅವಳಿಗೆ ಮದುವೆಯಾಗಿರುತ್ತಿತ್ತು; ನನಗೆ ಅವಳು ಸಿಗುತ್ತಲೇ ಇರಲಿಲ್ಲ ಎಂಬ ಅರಿವಾಯಿತು. ಇಪ್ಪತ್ತಾಗುವ ಮುನ್ನ ತೀರಿಹೋದ ಅಪ್ಪ, ಹಾಸಿಗೆ ಹಿಡಿದಿರುವ ಅಮ್ಮನಿಗೂ ಪಶ್ಚಾತ್ತಾಪದಲ್ಲೇ ವಂದಿಸಿದ. ಮರುಕ್ಷಣವೇ ಅವಳಿನ್ನೂ ನನಗೆ ಸಿಕ್ಕಿಲ್ಲ; ಎರಡು ವಾರ ಚಾಟ್ ಮಾಡಿದ್ದೇವೆ ಅಷ್ಟೇ. ಈಗ ರಾತ್ರಿ ಎಂಟು ಗಂಟೆಗೆ ಡಿನ್ನರ್ಗೆಂದು ಸಿಕ್ಕಾಗಲೇ ನನ್ನ ಕನಸುಗಳ ಭವಿಷ್ಯ ನಿರ್ಧಾರವಾಗುವುದು ಎಂದು ಅರಿವಾಗಿ ಎಪ್ಪತ್ತೆಂಟು ತಿರಸ್ಕಾರಗಳು ಹಾಗೆಯೇ ಕಣ್ಣೆದುರು ಒಮ್ಮೆ ಬಂದುಹೋದವು.
ಬೈಕಿನ ಮೇಲೆ ಕೂತವನು ‘ಈಗ ಒಂದೇ ಸಲಕ್ಕೆ ಗಾಡಿ ಸೆಲ್ಫ್ಸ್ಟಾರ್ಟ್ ಆದರೆ ಅವಳು ನನ್ನನ್ನು ಒಪ್ಪುತ್ತಾಳೆ, ಇಲ್ಲವಾದರೆ ಇಲ್ಲ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. ಒಂದೇ ಸಲಕ್ಕೆ ಸ್ಟಾರ್ಟ್ ಆಗಲಿ ದೇವರೇ ಎಂದು ಕಣ್ಮುಚ್ಚಿ ಸೆಲ್ಫ್ಸ್ಟಾರ್ಟ್ ಬಟನ್ನನ್ನು ಒತ್ತಿದ. ಕಟ್ಟಡ ನಿರ್ಮಾಣದ ಧೂಳಿಗೆ ಜೋರಾಗಿ ಕೆಮ್ಮುತ್ತಿರುವಂತೆ ಗಾಡಿ ಗುಡುಗುಡು ಸದ್ದು ಮಾಡುತ್ತ ಸ್ಟಾರ್ಟ್ ಆಯಿತು. ನಟೇಶನ ಮುಖದಲ್ಲಿ ಬಂದ ನಗೆಗೆ ಇನ್ನು ಎರಡು ಗಂಟೆ ಎದುರಿಸಬೇಕಾದ ಟ್ರಾಪಿಕ್ನ ಸುಸ್ತನ್ನೆಲ್ಲ ನಿವಾರಿಸುವಷ್ಟು ಶಕ್ತಿಯಿತ್ತು.
* * *
ಜಯನಗರದ ಸನ್ಮಾನ್ ಗಾರ್ಡೇನಿಯಾದ ಫ್ಯಾಮಿಲಿ ಹಾಲಿನಲ್ಲಿ ಆದಷ್ಟು ಮೂಲೆಯ ಟೇಬಲ್ ಹಿಡಿದು ಕೂತಿದ್ದ ನಟೇಶ ಈ ಬಾರಿ ಸಾಕಷ್ಟು ತಯಾರಾಗಿದ್ದ. ಮೂವತ್ತೈದೋ ಮೂವತ್ತಾರನೆಯದೋ ಹುಡುಗಿ ಇರಬೇಕು – ಮೊದಲ ಬಾರಿಗೆ ನಟೇಶನನ್ನು ಮುಖತಃ ಭೇಟಿಯಾಗಿದ್ದು. ಅಲ್ಲಿಯವರೆಗೆ ಮ್ಯಾಚ್ ಆದ ಪ್ರೊಫೈಲುಗಳೆಲ್ಲ ಜಾತಕದ ದೆಸೆಯಿಂದಲೋ, ಸಂಬಳದ ದೆಸೆಯಿಂದಲೋ, ಇವನಿಗೆ ಫಾರಿನ್ಗೆ ಹೋಗುವ ಅವಕಾಶವಿಲ್ಲವೆಂದೋ ಒಟ್ಟಿನಲ್ಲಿ ಮಾತುಕತೆಯವರೆಗೆ ಬಂದೇ ಇರಲಿಲ್ಲ. ಆ ಮೂವತ್ತಾರನೆಯ ಹುಡುಗಿಯ ಹೆಸರು ವಿದ್ಯಾಳೋ ದಿವ್ಯಾಳೋ ಏನೋ ಇರಬೇಕು. ಹೈಸ್ಕೂಲು ಕಾಲೇಜು ಆದಿಯಾಗಿ ಎಲ್ಲೂ ಯಾವ ಹುಡುಗಿಯ ಜೊತೆಗೂ ಫ್ರೆಂಡ್ಶಿಪ್ಪನ್ನೂ ಇಟ್ಟುಕೊಳ್ಳದ ಪರಮ ಸಂಕೋಚದ ನಟೇಶ ಮೊದಲ ಬಾರಿಗೆ ಹುಡುಗಿಯನ್ನು ಭೇಟಿಯಾಗುವ ಕ್ಷಣ ಬಂದಾಗ ಅಕ್ಷರಶಃ ಥರಥರ ನಡುಗಿಹೋಗಿದ್ದ. ಅವಳು ಬಂದ ತಕ್ಷಣ ಎದ್ದುನಿಲ್ಲಲು ಹೋದಾಗ ಪಕ್ಕದಲ್ಲಿ ಇಟ್ಟುಕೊಂಡಿದ್ದ ಹೆಲ್ಮೆಟ್ ಕೆಳಗೆ ಬಿದ್ದು ಬುಡುಬುಡು ಉರುಳಿಹೋಗಿ ಅದನ್ನು ಇವನು ಹಿಡಿಯಲು ಹೋದಾಗ ಜಾರಿಬಿದ್ದು ಅಂಗಿಯೆಲ್ಲ ಕೊಳೆಯಾಗಿ ಒಂದು ದೊಡ್ಡ ಉದ್ವಿಗ್ನತೆಯೇ ಸೃಷ್ಟಿಯಾಗಿತ್ತು. ಅದಕ್ಕಾಗಿ ಈ ಬಾರಿ ನಟೇಶ ಅರ್ಧ ಗಂಟೆ ಮುಂಚೆಯೇ ಬಂದು ಕೂತುಕೊಂಡಿದ್ದ. ಯಾವಾವ ಉತ್ತರ ಭಾರತದ ತಿನಿಸುಗಳು ಹೇಗೆಹೇಗೆ ಇರುತ್ತವೆ, ಡೆಸರ್ಟಿಗೆ ಯಾವ ಐಸ್ಕ್ರೀಮ್ ಆರ್ಡರ್ ಮಾಡಿದರೆ ತಾನು ಕೂಲ್ ಎಂದು ಕಾಣಿಸಿಕೊಳ್ಳುತ್ತೇನೆ, ಊಟವಾದ ಮೇಲೆ ಫಿಂಗರ್ಬೌಲಿನಲ್ಲಿ ಶಿಸ್ತಾಗಿ ಕೈ ತೊಳೆದುಕೊಳ್ಳುವ ರೀತಿ ಯಾವುದು, ಏನಾದರೂ ಆಗಲಿ ಕೊನೆಯಲ್ಲಿ ಇಡುವ ಸಿಹಿಹರಳುಗಳ ಜೊತೆಗಿನ ದೊಡ್ಡ ಜೀರಿಗೆಯನ್ನು ಬಾಯಿಗೆ ಹಾಕಿಕೊಳ್ಳಲೇಬಾರದು. ಹೀಗೆ ಎಲ್ಲ ರೀತಿಯಿಂದಲೂ ರಕ್ಷಾಳೆದುರು ಜಂಟಲ್ಮೆನ್ ಎನ್ನಿಸಿಕೊಳ್ಳಲು ನಟೇಶ ಸರ್ವಸನ್ನದ್ಧನಾಗಿದ್ದ.
ರಕ್ಷಾ ಪ್ರೊಫೈಲ್ ಫೋಟೋದಲ್ಲಿ ಇದ್ದಷ್ಟೇ ಚೆನ್ನಾಗಿದ್ದಳು. ಚಂದದ ತಿಳಿಗುಲಾಬಿ ಚೂಡಿದಾರ ಹಾಕಿಕೊಂಡು ಅಷ್ಟಾಗಿಯೇನೂ ಮೇಕಪ್ ಮಾಡಿಕೊಳ್ಳದೇ ಸಹಜ ಸುಂದರಿಯಂತೆ ಒಂದು ವ್ಯಾನಿಟಿಬ್ಯಾಗ್ ಹಿಡಿದುಕೊಂಡು ಬಂದಿದ್ದಳು. ನಟೇಶ ಎದ್ದು ಶೇಕ್ಹಾಂಡ್ ಕೊಟ್ಟು ಅರ್ಧ ಗಂಟೆಯಿಂದ ಹೇಳಬೇಕೆಂದು ತಯಾರಿ ಮಾಡಿಟ್ಟುಕೊಂಡಿದ್ದ “ಹಾಯ್, ನೈಸ್ ಟು ಮೀಟ್ ಯೂ” ಎನ್ನುವ ವಾಕ್ಯವನ್ನು ಹೇಳಲೂ ಅವಕಾಶ ಕೊಡದೆ “ಆರ್ಡರ್ ಮಾಡಿಲ್ವಾ? ಲೇಟ್ ಮಾಡ್ಬಿಡ್ತಾರೆ ಆಮೇಲೆ” ಎಂದಳು. ನಟೇಶನಿಗೆ ನಗುವನ್ನು ಬಿಟ್ಟರೆ ಬೇರೆ ಯಾವ ಪ್ರತ್ಯುತ್ತರ ಕೊಡಬೇಕೆಂದು ತಿಳಿಯಲಿಲ್ಲ. ಅವಳೇ ಒನ್ ಬೈ ಟು ಟೊಮಾಟೋ ಸೂಪು, ಒಂದು ಪ್ಲೇಟ್ ಹರಾಬರಾ ಕಬಾಬ್, ನಾಲ್ಕು ಬಟರ್ ನಾನ್, ಒಂದು ಮಿಕ್ಸ್ ವೆಜ್ ಕರಿ, ಒಂದು ಪನೀರ್ ಬಟರ್ ಮಸಾಲಾ ಆರ್ಡರ್ ಮಾಡಿ “ನಾವಿಬ್ರೂ ಮಾತಾಡೋ ಬದ್ಲು ಬರೀ ಫುಡ್ ಏನ್ ಆರ್ಡರ್ ಮಾಡೋದು ಅಂತಾನೇ ಡಿಸ್ಕಷನ್ ಆಗ್ಬಿಡುತ್ತೆ ಅದಕ್ಕೆ” ಎಂಬ ಸಮರ್ಥನೆಯನ್ನೂ ಕೊಟ್ಟು “ನೀನೇನಾದ್ರೂ ಪ್ರಿಪೇರ್ ಆಗಿದ್ಯಾ ಅಥ್ವಾ ನಾನೇ ಪ್ರಶ್ನೆ ಕೇಳೋಕೆ ಶುರು ಮಾಡ್ಲಾ” ಎನ್ನುವಂತೆ ನಟೇಶನ ಕಡೆಗೆ ನೋಡಿದಳು. “ನನ್ ಪ್ರೊಫೈಲ್ ಯಾಕೆ ಲೈಕ್ ಮಾಡಿದ್ರಿ?’’ ಎನ್ನುವ ಪ್ರಶ್ನೆ ಬಿಟ್ಟರೆ ನಟೇಶನ ಬಾಯಿಂದ ಬೇರೇನೂ ಹೊರಡಲಿಲ್ಲ. “ಎಕ್ಸ್ಪೆಕ್ಟೇಷನ್ಸ್ ಟ್ಯಾಬಿನಲ್ಲಿ ವೆಜ್ಜೋ ನಾನ್ವೆಜ್ಜೋ, ಯಾವ್ ಥರ ಬಟ್ಟೆ ಹಾಕ್ಬೇಕು, ಕೆಲಸಕ್ಕೆ ಹೋಗ್ಬಾರ್ದು- ಈ ತರ ಏನೂ ಬದಿರ್ಲಿಲ್ವಲ್ಲ, ಹಂಗಾಗಿ ಒಳ್ಳೇ ಮನುಷ್ಯ ರ್ಬೋದು ಅನಿಸ್ತು” ಎಂದಳು. ತನಗೆ ಗೊತ್ತಿಲ್ಲದಂತೆ ಜನ ತನ್ನನ್ನು ಮೆಚ್ಚುವ ಗುಣವೊಂದು ತನ್ನಲ್ಲಿದೆಯಾ ಎಂದು ನಟೇಶನಿಗೆ ಅಚ್ಚರಿಯಾಯಿತು. ಸಣ್ಣದಾಗಿ ಹೆಮ್ಮೆಯೂ ಆಯಿತು. ಆ ಖುಷಿಯಿಂದಲೇ ಅವನಿಗೆ ಗೊತ್ತಿಲ್ಲದಂತೆಯೇ “ಹಾಗಾದರೆ ನೀವೂ ನನ್ನ ಸಂಬಳ ಎಷ್ಟು ಅಂತ ಕೇಳಲ್ಲ ಅನ್ಕೋತೀನಿ’’ ಎಂದುಬಿಟ್ಟ. ಹೇಳಿದ ಮೇಲೆ ನನ್ನನ್ನು ನಾನೇ ಕೆಳಗೆ ಎಳೆದುಕೊಂಡಂತಾಯಿತೇನೋ ಎಂದು ಗಾಬರಿಯೂ ಆಯಿತು. ಆದರೆ ರಕ್ಷಾ ಮುಗುಳ್ನಕ್ಕು “ಸಾಲ ಮಾಡಿ ಮನೆ ಬಾಡ್ಗೆ ಕಟ್ಟುವಷ್ಟು ಕಡ್ಮೆ ಏನೂ ಬರಲ್ಲ ತಾನೆ?’’ ಎಂದಳು. ವೆಯ್ಟರ್ ಟೊಮಾಟೋ ಸೂಪಿನ ಜೊತೆಗೆ ಸ್ಟಾರ್ಟರನ್ನು ತಂದು ಇಡುವಷ್ಟರಲ್ಲಿ ಇಬ್ಬರ ಮಧ್ಯೆ ಒಂದು ಸ್ನೇಹದ ಎಳೆ ಹೊಲಿದುಕೊಳ್ಳಲು ಸ್ಟಾರ್ಟ್ ಆಗಿಬಿಟ್ಟಿತ್ತು.
“ಲವ್ ಗಿವ್ ಎಲ್ಲ್ಲ ಫ್ಯಾನ್ಸಿ ವರ್ಡ್ಸ್ ಅಷ್ಟೇ, ನಾವಿಬ್ರೂ ಒಬ್ರನ್ನೊಬ್ರು ಸಹಿಸ್ಕೊಂತೀವಾ ಅನ್ನೋದಷ್ಟೇ ಮ್ಯಾಟರ್ ಆಗೋದು” ಎಂದು ರಕ್ಷಾ ಹೇಳುವವರೆಗೆ ನಟೇಶ ತನ್ನ ಜೀವನ ಸೆಟಲ್ ಆಯಿತು ಎನ್ನುವ ಖುಷಿಯಲ್ಲಿ ಆಗಸದಲ್ಲೆಲ್ಲೋ ಹಾರಾಡುತ್ತಿದ್ದ. ಒಮ್ಮೆಗೇ ಅವಳು ಏನು ಹೇಳಿದಳೆಂದು ಅವನಿಗೆ ಅರ್ಥವೇ ಆಗಲಿಲ್ಲ. “ಎರಡ್ಮೂರು ರಿಲೇಷನ್ಶಿಪ್ ಆಗ್ಬೇಕಾಯ್ತು ರಿಯಲೈಜ಼್ ಆಗೋಕೆ. ನಾವು ಜೀವನಾನ ತುಂಬಾ ರೊಮ್ಯಾಂಟಿಸೈಜ಼್ ಮಾಡಿ ಹಾಳ್ ಮಾಡ್ಕೋತೀವಿ. ನಾವು ಒಬ್ರನ್ನ ಇಷ್ಟಪಡ್ತೀವಿ ಅಂದ ತಕ್ಷಣ ಅವ್ರ ಎದುರು ನಾವು ವೀಕ್ ಆಗೋಗ್ತೀವಿ. ಅಲ್ಲಿಂದ ಯಾವತ್ತೂ ಒಂದು ರಿಲೇಷನ್ಶಿಪ್ನಲ್ಲಿ ಇಬ್ರೂ ಈಕ್ವಲ್ ಆಗಿರೋಕೆ ಸಾಧ್ಯಾನೇ ಇಲ್ಲ” ಎಂದಾಗ ನಟೇಶನಿಗೆ ಸಿಟ್ಟೇ ಬಂತು. “ಹಾಗಾದ್ರೆ ಮದುವೆ ಆದ್ಮೇಲೆ ಒಂಚೂರೂ ಲವ್ ಇಲ್ದೇ ಇನ್ನೊಂದ್ ಐವತ್ತು ವರ್ಷ ಬದುಕ್ಬೇಕು ಅಂತಿದ್ದೀರಾ?’’ ಎಂದು ಕೇಳಿದ. “ಖಂಡಿತಾ. ಲವ್ ಇಲ್ಲ ಅಂದ್ರೆ ನಿರೀಕ್ಷೆ ಇಲ್ಲ, ನಿರೀಕ್ಷೆ ಇಲ್ಲ ಅಂದ್ರೆ ಆರಾಮಾಗಿ ಬದುಕ್ಬೋದು” ಎಂದು ನಿರ್ಲಿಪ್ತವಾಗಿ ರಕ್ಷಾ ನುಡಿದಳು. “ನಿಮ್ಮನ್ನು ಮದ್ವೆ ಆಗೋರು ರೊಮ್ಯಾಂಟಿಕ್ ಪರ್ಸನ್ ಆಗಿದ್ರೆ?’’ ಎಂದು ಬಹುತೇಕ ನಡುಗುತ್ತಿರುವ ಸ್ವರದಲ್ಲಿ ನಟೇಶ ಕೇಳಿದ. ಅದಕ್ಕವಳು “ರೊಮ್ಯಾನ್ಸ್ ಅನ್ನೋದೆಲ್ಲ ಬೋಗಸ್. ಫಿಸಿಕಲ್ ನೀಡ್ಸ್ ಅಷ್ಟೇ. ಮರ್ನಾಲ್ಕು ತಿಂಗ್ಳಿಗೆ ಎಲ್ಲ ಕಡ್ಮೆ ಆಗಿ ನಾರ್ಮಲ್ ಆಗ್ತಾರೆ” ಎಂದು ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಳು. “ಇಷ್ಟೊಂದ್ ಕ್ಲಿಯರ್ ಆಗಿರೋರಿಗೆ ಮದ್ವೆ ಯಾಕೆ? ಸಿಂಗಲ್ ಆಗೇ ಫಿಸಿಕಲ್ ನೀಡ್ಸ್ ತೀರಿಸ್ಕೊಂಡ್ ರ್ಬೋದಲ್ಲ” ಎಂದು ನಟೇಶ ಹತಾಶೆಯಲ್ಲಿ ಹೇಳಿದ. ಅವಳು ತಣ್ಣಗೆ “ನೇಚರ್. ನಂಗೂ ಮಗು ಬೇಕು ಅನ್ನಿಸ್ತಿದೆ. ಬಯಾಲಜಿಕಲ್ ಕ್ಲಾಕ್ ಓಡ್ತಾ ಇದೆ. ಇನ್ನೊಂದೆರಡು ವರ್ಷದಲ್ಲಿ ಮಗು ಆಗ್ಬಿಟ್ರೆ ಒಳ್ಳೇದು. ಅಮ್ಮ ಒಬ್ಳೇ ಮಗೂನ ಬೆಳೆಸೋಕೆ ಆಗಲ್ಲ. ಒಬ್ಬ ಒಳ್ಳೇ ಅಪ್ಪ ಇದ್ರೆ ಬೆಟರ್” ಎಂದಳು. ನಟೇಶ ಫಿಂಗರ್ ಬೌಲ್ ಬರುವವರೆಗೂ ಕಾಯದೆ ಎದ್ದುನಿಂತು “ಹೇಳ್ತೀನಿ” ಎಂದು ರಕ್ಷಾಳ ಮುಖವನ್ನೂ ನೋಡದೆ ಹೊರಗೆ ಬಂದು ಕೈ ತೊಳೆದು, ಬಿಲ್ ಕಟ್ಟಿ ಅಲ್ಲಿಂದ ಹೊರಟ. ಯಾಕೋ ರೂಮಿಗೆ ಹೋಗಬೇಕೆನ್ನಿಸಲಿಲ್ಲ. ಸೀದಾ ಗಾಡಿ ಎತ್ತಿಕೊಂಡು ಮೈಸೂರು ರಸ್ತೆಯ ಕಡೆಗೆ ಹೊರಟ.
ಪ್ರತೀ ಬಾರಿ ಹುಡುಗಿಯರನ್ನು ಭೇಟಿಯಾಗಲು ಹೋದಾಗಲೂ ಕೊನೆಯಲ್ಲಿ ಹುಡುಗಿಯರು “ನಿಮ್ಗೆ ಕಾಲ್ ಮಾಡ್ತೀನಿ” ಎಂದೋ “ಹೇಳ್ತೀನಿ” ಎಂದೋ ಹೊರಟರು ಎಂದರೆ ಇನ್ನು ಕೆಲವೇ ಹೊತ್ತಿನಲ್ಲಿ “ನಿಮ್ ಜೊತೆ ಮಾತಾಡಿ ತುಂಬಾ ಖುಷಿಯಾಯ್ತು, ನೀವು ತುಂಬಾ ನೈಸ್ ಪರ್ಸನ್. ಆದ್ರೆ ಐ ಡೋಂಟ್ ವಾಂಟ್ ಟು ಕಂಟಿನ್ಯೂ ದಿಸ್ ಎನಿ ಫರ್ದರ್” ಎಂಬ ಮೆಸೇಜು ಅವರಿಂದ ಬರುತ್ತದೆ ಎಂದು ನಟೇಶನಿಗೆ ಅಭ್ಯಾಸವಾಗಿತ್ತು. ಬೇಸರದಲ್ಲಿ ಚಲ್ಲಘಟ್ಟದವರೆಗೆ ಗಾಡಿಯಲ್ಲಿ ಬಂದು ಇಡೀ ದಿನ ಮೈಮುರಿದು ದುಡಿದು ಕೆಳಗಿನ ಟೆಂಟುಗಳಲ್ಲಿ ನಿದ್ರೆ ಹೋಗಿರುವ ಕೆಲಸಗಾರರಿಗೆ ಗೊತ್ತಾಗದಂತೆ ನಿಶ್ಶಬ್ದವಾಗಿ ಇಪ್ಪತ್ತೆರಡು ಫ್ಲೋರುಗಳನ್ನು ಹತ್ತಿ ಮೇಲೆ ಬೀಸುವ ಕತ್ತಲೆಯ ಸುಳಿಗಾಳಿಗೆ ಮೈಯೊಡ್ಡುವುದು ನಟೇಶನ ವಾಡಿಕೆ. ಎಂತೆಂತಾ ಬೇಸರಗಳೆಲ್ಲ ಆ ಚಲ್ಲಘಟ್ಟದ ಬಿಲ್ಡಿಂಗಿನ ಮೇಲಿನ ಗಾಳಿಗೆ ಹಾಗೇ ಮಾಯವಾಗಿವೆ. ಆದರೆ ಯಾಕೋ ಇಂದು ಅಲ್ಲಿನ ಗಾಳಿಯಲ್ಲಿ ತಲೆ ನೇವರಿಸುವ ಕಾಳಜಿಯಿಲ್ಲ, ನೋವನ್ನು ಮರೆಸುವ ಔಷಧೀಯತೆಯಿಲ್ಲ. ಏನೋ ಒಂಥರಾ ಬಿಸಿಬಿಸಿ. ದಾರಿಯಲ್ಲಿ ಬರುವಾಗ ಕುಡಿದ ಬ್ಲೆಂಡರ್ಸ್ ಪ್ರೈಡ್ ಮತ್ತಿಗೆ ದಾರಿ ತಪ್ಪಿ ಕನಕಪುರ ರಸ್ತೆಯ ಬಿಲ್ಡಿಂಗಿಗೇನಾದರೂ ಬಂದುಬಿಟ್ಟೆನಾ ಎಂದು ಒಮ್ಮೆ ತೂರಾಡುತ್ತಾ ಮೊಬೈಲ್ ತೆಗೆದುಕೊಂಡು ಲೊಕೇಷನ್ ಆನ್ ಮಾಡಿ ನಟೇಶ ಖಾತ್ರಿಪಡಿಸಿಕೊಂಡ. ಇಲ್ಲ ಇದು ಚಲ್ಲಘಟ್ಟದ್ದೇ ಬಿಲ್ಡಿಂಗು. ತೊಂದರೆಯಿರುವುದು ಗಾಳಿಯಲ್ಲೇ. ನೂರಾರು ಅಡಿ ಕೆಳಗಿರುವ ನೆಲದ ಮೇಲೆ ಗಾಳಿಯ ರಭಸಕ್ಕೆ ಪ್ರಬಲಾತಿಪ್ರಬಲ ಮರಗಳೆಲ್ಲ ಇನ್ನೇನು ಬಿದ್ದೇಬಿಟ್ಟವೆಂಬಂತೆ ಹುಯ್ದಾಡುತ್ತಿದ್ದವು. ನಾನು ಸಿವಿಲ್ ಇಂಜಿನಿಯರಿಂಗು ಕಲಿತುಬಂದು ಈ ಕಟ್ಟಡಗಳಿಗೆ ಸರಿಯಾಗಿ ಏರೋಡೈನಾಮಿಕ್ಸ್ ಸೂತ್ರಗಳನ್ನು ಅರಿತು ವೈಜ್ಞಾನಿಕವಾಗಿ ಪ್ಲಾನಿಂಗು ಹಾಕಿಕೊಡದೆ ಇದ್ದಿದ್ದರೆ ಈ ಕಟ್ಟಡ ಮೈಸೂರಿನ ಕಡೆಯಿಂದ ಬೀಸುವ ಈ ಕುಳಿರ್ಗಾಳಿಗೆ ಎಂದೋ ನಡುಮುರಿದು ಬಿದ್ದಿರುತ್ತಿತ್ತು. ಇಂತಹ ಮಹಾನ್ ವ್ಯಕ್ತಿಗೆ ಹಾ-ನೆಸ್ಟ್ ಸಂಸ್ಥೆಯವರು ಮೂರು ವರ್ಷಗಳಿಂದ ಸಂಬಳ ಹೆಚ್ಚಿಸಿಲ್ಲ! “ಬೋಳೀಮಕ್ಳಾ” ಎಂದು ಜೋರಾಗಿ ಒಮ್ಮೆ ಕಿರುಚಿದ. ‘ಥೂ, ಇಡೀ ಬಾಟಲಿಯನ್ನು ಅಲ್ಲೇ ಖಾಲಿ ಮಾಡಬಾರದಿತ್ತು, ತೆಗೆದುಕೊಂಡು ಕನಕಪುರ ರಸ್ತೆಯ ಬಿಲ್ಡಿಂಗಿಗಾದರೂ ಹೋಗಿದ್ದರೆ ಸಿದ್ದಪ್ಪನ ಜೊತೆಗೆ ಪಾರ್ಟಿ ಮಾಡಬಹುದಿತ್ತು. ಸುಮ್ಮನೆ ಇಲ್ಲೇನೋ ಗಾಳಿ ಚೆನ್ನಾಗಿರುತ್ತದೆಂದು ಇಲ್ಲಿ ಬಂದು ಸತ್ತೆ’ ಎಂದು ನಟೇಶ ತನ್ನನ್ನು ತಾನು ಹಳಿದುಕೊಂಡ. ಸಿದ್ದಪ್ಪನದು ಜೀವನವೇ ಜೀವನ. ಗಾರೆ ಮೆತ್ತುತ್ತಾ ಆಗಾಗ ಸುಮ್ಮನೇ “ಕೂಕ್” ಎಂದು ಕೂಗುತ್ತಾನೆ. ಕೆಳಗೆ ಟೆಂಟಿನಲ್ಲಿ ಗಂಜಿ ಬೇಯಿಸುತ್ತಿರುವ ಅವನ ಹೆಂಡತಿ ಹೊರಗೆ ಬಂದು ಅವನತ್ತ ನೋಡಿ ಮುಗುಳ್ನಗುತ್ತಾಳೆ. ನನ್ನ ಬಳಿಯೇ ಲಾಲ್ಬಾಗಿನ ವಿಳಾಸ ತಿಳಿದುಕೊಂಡು, ಮಕ್ಕಳನ್ನು ಟೆಂಟಿನಲ್ಲಿಯೇ ಬಿಟ್ಟು ಹೆಂಡತಿಯನ್ನು ಪುಷ್ಪ ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದನಲ್ಲ, ಬಡವಾ! ಇಬ್ಬರೂ ಒಬ್ಬರಿಗೊಬ್ಬರು ತುತ್ತು ತಿನ್ನಿಸಿಕೊಳ್ಳುವುದೇನು, ಕೆನ್ನೆ ಹಿಂಡಿಕೊಳ್ಳುವುದೇನು! ಈ ಸಿದ್ದಪ್ಪ ಆಗಾಗ “ನನ್ ಹತ್ರ ಜಾಸ್ತಿ ದುಡ್ ಇಲ್ದೇ ರ್ಬೋದು ಸಾರ್, ಆದ್ರೆ ನನ್ ಜೀವನಾನೇ ಜೀವನ” ಎಂದು ಹೇಳುವುದು ನನ್ನನ್ನು ಕುಟುಕಲಿಕ್ಕೇ ಅಲ್ಲವೆ? ಅಲ್ಲಿಗೆ ಎಣ್ಣೆ ತೆಗೆದುಕೊಂಡು ಹೋಗದಿದ್ದುದೇ ಸರಿಯಾಯ್ತು, ಗಂಜಿ ಕುಡಿದು ಮಲಗಲಿ ಹಲ್ಕಾ ಬಡ್ಡಿಮಗ ಎಂದು ನಟೇಶ ಕ್ಯಾಕರಿಸಿ ಉಗಿದ. ಗಾಳಿಯ ಜೋರಿಗೋ, ವಿಸ್ಕಿಯ ಜೋರಿಗೋ ಕಾಲುಗಳಿಗೆ ಸುಸ್ತಾಗಿ ಕೊನೆಗೂ ಕೆಳಗೆ ಮಂಡಿಯೂರಿದ. ಮೊಬೈಲ್ ತೆಗೆದು ರಕ್ಷಾಳ ಪ್ರೊಫೈಲ್ ಫೋಟೋವನ್ನೊಮ್ಮೆ ನೋಡಿದ. ಹೊಟ್ಟೆಯೆಲ್ಲಾ ಕಿವುಚಿದಂತಾಯಿತು. ನಾನು ಮದುವೆಯಾಗುವ ಹುಡುಗಿಯ ಜೊತೆಗೆ ನನ್ನ ಮೊದಲ ಸ್ಪರ್ಶ, ಮೊದಲ ಚುಂಬನ, ಮೊದಲ ರಾತ್ರಿ ಎಲ್ಲವೂ ಹೇಗಿರಬೇಕು, ಮದುವೆಯಾಗಿ ಇಪ್ಪತ್ತು ವರ್ಷವಾದಮೇಲೂ ಮಕ್ಕಳ ಕಣ್ತಪ್ಪಿಸಿ ಆಗಾಗ ನಾನು ಹೇಗೆ ಅವಳಿಗೆ ಮುತ್ತಿಕ್ಕಬೇಕು, ಹಾ-ನೆಸ್ಟಿನವರು ನನಗೆ ಕಡಮೆ ಬೆಲೆಗೆ ಕೊಡುವ ಫ್ಲಾಟಿನ ಮನೆಯಲ್ಲಿ ಹೇಗೆ ನಾವಿಬ್ಬರೂ ಪ್ರಣಯ ಗೀತೆಗಳನ್ನು ಪಕ್ಕದ ಮನೆಯವರಿಗೆ ಹೊಟ್ಟೆಯುರಿಯುವಂತೆ ಹಾಡುತ್ತಾ ಆದರ್ಶ ದಂಪತಿಗಳಾಗಿ ಬಾಳಬೇಕು, ಪ್ರತೀ ಭಾನುವಾರ ಸಂಜೆ ಇಲ್ಲೇ, ಇದೇ ಜಾಗದಲ್ಲಿ ಬಂದು ಕೂತು ಗಾಳಿಯ ಮಧ್ಯೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಯಾರು ಮೊದಲು ಕಣ್ಣು ಮುಚ್ಚುತ್ತಾರೋ ಅವರು ಗೆದ್ದವರಿಗೆ ಮುತ್ತು ಕೊಡಬೇಕೆಂಬ ಹುಚ್ಚು ಆಟಗಳನ್ನೆಲ್ಲ ಆಡಬೇಕು, ಎಂತೆಂಥಾ ಕನಸುಗಳು ನನ್ನವು! ಇವಳು ನೋಡಿದರೆ ಹೀಗೆ ಆಡಿದಳು. ಇಷ್ಟೊಂದು ಪ್ರಾಕ್ಟಿಕಲ್ ಆಗಿರುವವರು ಬದುಕುವುದಾದರೂ ಏಕೆ? ಇದೇ ಬಿಲ್ಡಿಂಗಿಗೆ ಕರೆದುಕೊಂಡು ಬರುತ್ತೇನೆ, ಹಾರಿಬಿಡಲಿ ಎಂದು ಸಿಟ್ಟಿನಲ್ಲಿ ನಟೇಶ ರಕ್ಷಾಳ ಫೋಟೋಗೆ ಬೈದ. ಸಿಟ್ಟಿನಲ್ಲಿ ಮದುವೆ.ಕಾಂ ಓಪನ್ ಮಾಡಿದ. ಹೊಸದಾಗಿ ಯಾವ ಪ್ರೊಫೈಲುಗಳೂ ಮ್ಯಾಚ್ ಆಗಿರಲಿಲ್ಲ. ರಕ್ಷಾಳನ್ನು ವಾಟ್ಸಾಪಿನಲ್ಲಿ ಬ್ಲಾಕ್ ಮಾಡುತ್ತೇನೆ ಎಂದು ಹೋದ. ಅಷ್ಟರಲ್ಲಿ ಅವಳಿಂದ ಮೆಸೇಜು ಬಂತು. “ರೀಚ್ ಆದ್ರಾ?’’ ಎಂದು. ಎಲ್ಲಿಗೆ ರೀಚ್ ಆಗುವುದು? ನಾನೇನು ಸಂಸಾರಸ್ಥನೇ, ಎಲ್ಲಿಗಾದರೂ ರೀಚ್ ಆಗುವುದಕ್ಕೆ? ಇವತ್ತು ರಾತ್ರಿ ಇಲ್ಲಿಯೇ ಮಲಗಿದರೂ ಯಾರಾದರೂ ಕೇಳುತ್ತಾರೆಯೆ? ನಾನು ಎಲ್ಲಿಗೆ ರೀಚ್ ಆಗುವುದಿದೆ? ಸಿಟ್ಟಿನಲ್ಲಿ “ನನ್ನ ಬಯಾಲಜಿಕಲ್ ಕ್ಲಾಕ್ ನಿಂತಿದೆ. ನಾನು ಎಲ್ಲಿಗೂ ರೀಚ್ ಆಗುವುದಿಲ್ಲ” ಎಂದು ರಿಪ್ಲೈ ಮಾಡಿದ. ಅತ್ತ ಕಡೆಯಿಂದ ತುಂಬಾ ನಿರ್ಲಿಪ್ತವಾಗಿ “ನಾಳೆ ಸಂಜೆ ಒಳಗೆ ಓಕೆ ನಾ ಅಂತ ಹೇಳಿ. ನೀವು ನೋ ಅಂದ್ರೆ ಬೇರೆ ಪ್ರೊಫೈಲ್ಸ್ ನೋಡ್ತೀನಿ” ಎಂದು ಕಳುಹಿಸಿದಳು. ಸಿಟ್ಟಿನಿಂದ ಮೊಬೈಲನ್ನು ದೂರಕ್ಕೆ ಎಸೆದ.
ಎರಡನೆಯ ತಂಗಿ ನ್ಯೂಜಿûಲ್ಯಾಂಡಿನಿಂದ ಗಂಡನೊಡನೆ ಜಗಳವಾಡಿಕೊಂಡು ವಿಮಾನ ಹತ್ತಿ ಬಂದುಬಿಟ್ಟಿದ್ದಾಳೆ ಎಂದು ಹೇಳಲು ಅಮ್ಮ ಕರೆ ಮಾಡದೆ ಇದ್ದಿದ್ದರೆ ನಟೇಶ ಬಹುಶಃ ಮಧ್ಯಾಹ್ನವಾದರೂ ಏಳುತ್ತಿರಲಿಲ್ಲವೇನೊ. ಐಎಸ್ಡಿ ಕರೆಗಳನ್ನು ಮಾಡಿ ಭಾವನ ಜೊತೆ ಮಾತನಾಡುತ್ತಾ, ಮೊದಲೇ ಗಂಟಿಕ್ಕಿಕೊಂಡಿರುವ ಮುಸುಡಿಯನ್ನು ಮತ್ತಷ್ಟು ಗಂಟಿಕ್ಕಿಕೊಂಡಿದ್ದ ತಂಗಿಗೆ ಸರಿಯಾಗಿ ಬೈಯುತ್ತ ಇಡೀ ದಿನ ಕಳೆದಿದ್ದರಿಂದ ನಟೇಶನಿಗೆ ರಕ್ಷಾ ಮರೆತೇಹೋಗಿದ್ದಳು ಎನ್ನಬಹುದು. “ಯೋಚ್ನೆ ಮಾಡಿದ್ರಾ?’’ ಎನ್ನುವ ಅವಳ ಮೆಸೇಜು ಸರಿಯಾಗಿ ಹಿಂದಿನ ದಿನ ಅವರಿಬ್ಬರೂ ಮೊದಲ ಬಾರಿಗೆ ಹಸ್ತಲಾಘವ ಮಾಡಿದ ಸಮಯಕ್ಕೇ ಬಂದು ಆಗಿನ್ನೂ ತಂಗಿಯ ಮೇಲೆ ಕಿರುಚಾಡಿ ಸುಸ್ತಾಗಿದ್ದ ನಟೇಶನನ್ನು ಮತ್ತೆ ಸಿಟ್ಟು ಮಾಡಿಕೊಳ್ಳಲು ಪ್ರೇರೇಪಿಸಿತು. ಇದ್ದಕ್ಕಿದ್ದಂತೆ ರಕ್ಷಾಳಿಗೆ ಕರೆ ಮಾಡಿ ಅವಳಿಗೆ ಮಾತಾಡಲೂ ಬಿಡದೇ “ನಾನು ಮೂವತ್ತೆರಡು ವರ್ಷ ತುಂಬಾ ಪ್ರಾಕ್ಟಿಕಲ್ ಆಗಿ ಬೋರಿಂಗ್ ಆಗಿ ಬದ್ಕಿದೀನಿ. ನಂಗೆ ಮದುವೆಯಿಂದ ಬೇಕಾಗಿರೋದು ಹೆಂಡತಿ ಅಲ್ಲ, ಲವ್ರ್ರು, ನಂಗೂ ನಿಮ್ಗೂ ಮ್ಯಾಚ್ ಆಗಲ್ಲ” ಎಂದು ಹೇಳಿ ಫೋನಿಟ್ಟ. ಅಮ್ಮ ಇದ್ದವರು “ಇವ್ಳು ಮನೆಗ್ ಬಂದ್ ಕೂತ್ಲು ಅಂತ ನೀನ್ ಮದ್ವೆ ಆಗ್ದೇ ರ್ಬೇಡ ಕಣಪ್ಪಾ. ಇನ್ನಾದ್ರೂ ನಿಂಗೋಸ್ಕರ ಬದ್ಕು” ಎಂದಾಗ ಅವರ ಮೇಲೂ ಹರಿಹಾಯ್ದು “ನೀನು ದುಡ್ದು ಸಾಕ್ತೀಯಾ ಇವ್ಳನ್ನು?’’ ಎಂದು ಕಿರುಚಿದ್ದೂ ಆಯಿತು.
ಎರಡು ವಾರದ ಬಳಿಕ ಒಂದು ದಿನ ಚಲ್ಲಘಟ್ಟದ ಬಿಲ್ಡಿಂಗನ್ನು ಸೈಟ್ ವಿಸಿಟ್ ಮಾಡೋಣ ಎಂದು ಹೋದ ನಟೇಶನನ್ನು ಸರ್ಕಾರದ ಬೇಲಿ ಸ್ವಾಗತಿಸಿತು. ಚಲ್ಲಘಟ್ಟದಿಂದ ಅವತ್ತಷ್ಟೇ ವೈಟ್ಫೀಲ್ಡ್ನವರೆಗೆ ಮೆಟ್ರೋ ಮಾರ್ಗ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಂಡಿತ್ತು. ಕೊನೆಯ ಬಾರಿಗೊಮ್ಮೆ ಪ್ರಯಾಣ ಮಾಡೋಣ ಎಂದು ಅಲ್ಲಿಂದ ಮೆಟ್ರೋ ಹತ್ತಿ ಇಂದಿರಾನಗರದಲ್ಲಿರುವ ಹಾ-ನೆಸ್ಟ್ ಸಂಸ್ಥೆಯ ಮುಖ್ಯ ಕಚೇರಿಗೆ ಹೋದ ನಟೇಶನನ್ನು ಮ್ಯಾನೇಜರು ಗುರುತೇ ಹಿಡಿಯಲಿಲ್ಲ. ಅವನಿಗೊಂದಿಷ್ಟು ಸೀನಿಯಾರಿಟಿ ಇದ್ದ ಕಾರಣ ಅವನನ್ನು ತಕ್ಷಣಕ್ಕೆ ಕೆಲಸದಿಂದ ತೆಗೆದು ಹಾಕುವುದೂ ಸಾಧ್ಯವಿರಲಿಲ್ಲ. ಅವನನ್ನು ಡೆಸ್ಕ್ ಜಾಬಿಗೆ ಹಾಕಿ ಮ್ಯಾನೇಜರು ಕೈ ತೊಳೆದುಕೊಂಡ. ಸೈಟ್ ಇಂಜಿನಿಯರು ಎಂದರೆ ಚಂದದ ಕೆಲಸ. ಇಂಗ್ಲಿಷಿನ ಅಗತ್ಯವೇ ಇಲ್ಲ. ಕೆಲಸಗಾರರು, ಕಂಟ್ರಾಕ್ಟರು, ಮೆಟಿರಿಯಲ್ ಪೂರೈಕೆದಾರರು ಎಲ್ಲರಿಗೂ ಕನ್ನಡ ಬರುತ್ತಿತ್ತು. ಅವರು ನಡೆಯುತ್ತಿರುವ ದಾರಿ ಸರಿಯಿದೆಯಾ ನೋಡಿ ತಪ್ಪಿದ್ದರೆ ಒಂಚೂರು ಹಾದಿ ಹಾಕಿಕೊಟ್ಟರೆ ಸಾಕು, ಕೆಲಸ ಅದರಷ್ಟಕ್ಕದು ಸಾಗುತ್ತಿರುತ್ತದೆ. ಅದೇ ಈ ಡೆಸ್ಕ್ ಜಾಬೆಂದರೆ ಹಿಂಸೆಯ ಕೆಲಸ. ನೂರೆಂಟು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಬೇಕು, ನೂರಾರು ಜನರ ಎದುರಿಗೆ ಇಂಗ್ಲಿಷಿನಲ್ಲಿ ವಿವರಿಸಬೇಕು, ಸಹೋದ್ಯೋಗಿಗಳೊಂದಿಗೆ ಊಟಕ್ಕೆ ಹೋದರೆ ತನಗೆ ಗೊತ್ತಿಲ್ಲದ ಟೇಬಲ್ ಮ್ಯಾನರ್ಸುಗಳನ್ನು ಕಲಿತು ಪಾಲಿಸಬೇಕು. ಒಂದೆರಡು ತಿಂಗಳೊಳಗೆ ನಟೇಶ ಹೈರಾಣಾಗಿ ಹೋದ. ಅತ್ತ ತಂಗಿಯೂ ವಾಪಸ್ ವಿಮಾನ ಹತ್ತುವ ಲಕ್ಷಣವಿರಲಿಲ್ಲ. ಮನೆಯಲ್ಲೂ ಹತಾಶೆ, ಕಚೇರಿಯಲ್ಲೂ ಹತಾಶೆ. ಒಟ್ಟಿನಲ್ಲಿ ಜೀವನವನ್ನು ಸಹಿಸಿಕೊಳ್ಳುವುದೇ ಕಷ್ಟವಾಯಿತು. ಅಂತಹದೆ ಒಂದು ಹತಾಶೆಯ ದಿನ ಕ್ಲಯೆಂಟುಗಳ ಎದುರು ಪ್ರೆಸೆಂಟೇಷನ್ ಕೊಡುವಾಗ ‘ರ್ಯಾಟಿಕ್ ಕನ್ಸ್ಟ್ರಕ್ಷನ್’ ಎಂದು ಹೇಳುವ ಬದಲು ‘ಎರಾಟಿಕ್ ಕನ್ಸ್ಟ್ರಕ್ಷನ್ಸ್’ ಎಂದು ಹೇಳಿದ. ಎಲ್ಲರೂ ನಕ್ಕರು. ಸಿಟ್ಟಿನಲ್ಲಿ ಕೈಯಲ್ಲಿದ್ದ ಲೇಸರ್ ಮಾರ್ಕರನ್ನು ಎಸೆದು ರಾಜೀನಾಮೆ ಪತ್ರವನ್ನೂ ಬರೆಯದೇ ನಟೇಶ ಅಲ್ಲಿಂದ ಹೊರಟ.
ಕನಕಪುರದ ಬಿಲ್ಡಿಂಗಿನ ಬಳಿ ಸಿದ್ದಪ್ಪನನ್ನು ಹುಡುಕಿಕೊಂಡು ಬಂದವನಿಗೆ ಖಾಲಿ ಟೆಂಟು ಸ್ವಾಗತ ಕೋರಿತು. ಸಿದ್ದಪ್ಪ ಎಲ್ಲಿ ಇದ್ದರೂ ಬದುಕುತ್ತಾನೆ. ಕೆಲಸ ಇದ್ದರೂ, ಕೆಲಸ ಇಲ್ಲದಿದ್ದರೂ ಅವನ ಜೊತೆಗೆ ಅವನ ಹೆಂಡತಿ ಇರುತ್ತಾಳೆ. ಇಬ್ಬರೂ ಹೇಗೋ ಬದುಕಿಬಿಡುತ್ತಾರೆ ಎಂದು ತನಗೆ ತಾನೇ ಎಂಬಂತೆ ಹೇಳಿಕೊಂಡ. ಯಾರೂ ಕಾಯಲು ನಿಂತಿರದಿದ್ದ ಸರ್ಕಾರೀ ಬೇಲಿಯನ್ನು ದಾಟಿ ಕನಕಪುರದ ಬಿಲ್ಡಿಂಗಿನ ಇಪ್ಪತ್ತೆರಡನೇ ಫ್ಲೋರು ತಲಪಿ ನಿಂತ. ಸಂಜೆಯಾಗುತ್ತಿತ್ತು. ಇನ್ನೇನು ರವಿಶಂಕರ್ ಗುರೂಜಿ ಆಶ್ರಮದವರೆಗೆ ಬರಲಿದ್ದ ಮೆಟ್ರೋ ನಿರ್ಮಾಣಕಾರ್ಯ ಕಾಣುತ್ತಿತ್ತು. ಜೇಬಿನಿಂದ ಮೊಬೈಲ್ ತೆಗೆದು ವಾಟ್ಸಾಪಿನಲ್ಲಿ ರಕ್ಷಾಳ ಫೋಟೋವನ್ನೊಮ್ಮೆ ನೋಡಿದ. ಆನ್ಲೈನ್ ಇದ್ದಾಳೆ ಎಂದು ತೋರಿಸುತ್ತಿತ್ತು. ಇಷ್ಟರಲ್ಲಾಗಲೇ ಅವಳಿಗೊಬ್ಬ ಪ್ರಾಕ್ಟಿಕಲ್ ಗಂಡ ಸಿಕ್ಕಿ ಅವಳು ಹಸೆಮಣೆಯನ್ನೂ ಏರಿರಬಹುದು ಎಂಬ ಸಾಧ್ಯತೆ ಕಣ್ಮುಂದೆ ಬಂತು. ನಟೇಶನಿಗೆ ಅಳು ಬಂದಂತಾಯಿತು. ತಡೆದುಕೊಂಡು ನಡುಗುವ ಕೈಗಳಲ್ಲಿ ‘ಓಕೆ’ ಎಂದು ಟೈಪಿಸಿ ರಕ್ಷಾಳಿಗೆ ಕಳುಹಿಸಿದ. ಹತ್ತು ಸೆಕೆಂಡುಗಳ ನಂತರ “ಇವತ್ತು ಒಬ್ಬರನ್ನು ಮೀಟ್ ಮಾಡಿದ್ದೆ. ನಾಳೆ ಹೇಳ್ತೀನಿ ಅಂದಿದ್ದಾರೆ. ಅವ್ರು ನೋ ಅಂದ್ರೆ ನೋಡೋಣ” ಎಂಬ ರಿಪ್ಲೈ ಬಂತು. ನಟೇಶ ಒಂದು ಸ್ಮೈಲಿ ಕಳಿಸಿದ. ಕೆಳಗಿಳಿದು ನಾನು ಗಾಡಿ ಸ್ಟಾರ್ಟ್ ಮಾಡಿದಾಗ ಒಂದೇ ಸಲಕ್ಕೆ ಸೆಲ್ಫ್ಸ್ಟಾರ್ಟ್ ಆದರೆ ರಕ್ಷಾ ನನಗೆ ಸಿಗುತ್ತಾಳೆ ಎಂದರ್ಥ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. ಮುಖಕ್ಕೊಮ್ಮೆ ಜೋರಾಗಿ ಗಾಳಿ ಬಡಿಯಿತು. ಅಚ್ಚರಿಯೆಂಬಂತೆ ಆ ಗಾಳಿ ಚಲ್ಲಘಟ್ಟದ ಬಿಲ್ಡಿಂಗಿನ ಮೇಲಿನ ಗಾಳಿಯಂತೆಯೇ ಆಹ್ಲಾದಕರವಾಗಿತ್ತು.