ಪರಪ್ಪು ಎಂಬ ಬೆಳ್ತಂಗಡಿ ತಾಲೂಕಿನ ಪುಟಾಣಿ ಊರಿಗೆ ಬಂದು ಮೂರು ವರ್ಷದಲ್ಲೇ ಮಸೀದಿ ಕಮಿಟಿಯನ್ನು ಸೇರಿಕೊಂಡಿದ್ದವ ಊರಿನ ಎಲ್ಲರಿಗೂ ಪರಿಚಯವಿದ್ದ. ಹೊಸ ಒಕ್ಕಲು ಬಂದವರನ್ನು ಐದು ವರ್ಷಗಳ ಬಳಿಕ ಮಾತ್ರವೇ ಕಮಿಟಿಗೆ ತೆಗೆದುಕೊಳ್ಳಬೇಕೆಂಬ ಲಿಖಿತ ನಿಯಮವೊಂದು ಬದಿಗೆ ಸರಿದದ್ದೇ ಆಗ. ಝಕರಿಯ ಎಂಬ ಹೆಸರು ಮಾತ್ರ ಕೇಳಿದ್ದ ಊರಿನ ಜನಕ್ಕೆ ಈ ಸಕರಿಯ ಎಂಬ ಹೆಸರು ವಿಚಿತ್ರವಾಗಿ ಕಂಡಿತ್ತು. ಕೇರಳಿಗರು ‘ಝ’ ಅಕ್ಷರದ ಬದಲು ‘ಸ’ ಎಂದು ಬರೆದು ಹಾಗೆಯೆ ಉಚ್ಚರಿಸುತ್ತಿದ್ದ ಕಾರಣಕ್ಕೆ ಝಕರಿಯ ಹೆಸರು ಅಪಭ್ರಂಶಗೊಂಡು ‘ಸಕರಿಯ’ ಆಗಿದ್ದು ಅವನ ವ್ಯಕ್ತಿತ್ವಕ್ಕೆ ಒಪ್ಪುವಂತೆ ಭಿನ್ನವಾಗಿಯೇ ಉಳಿದುಕೊಂಡುಬಿಟ್ಟಿತ್ತು.

ಹಲೋ….ಹ ಹೇಳಿ ಹೇಳಿ ಎಲ್ಲಿದ್ದೀರಿ? ಗೇರುಕಟ್ಟೆಯಲ್ಲಾ… ಸರಿ ಸರಿ… ಇನ್ನೊಂದು ಅರ್ಧ ಕಿಲೋಮೀಟರ್ ಅಷ್ಟೇ… ಗೇರುಕಟ್ಟೆ ಜಂಕ್ಷನ್ ದಾಟಿ ಚೂರು ಮುಂದಕ್ಕೆ ಬಂದ್ರೆ ಪರಪ್ಪು ಮಸೀದಿ ಸಿಗ್ತದೆ, ಅಲ್ಲೇ ದರ್ಗಾ ಉಂಟು, ಅದರ ಎಡಕ್ಕೆ ಇರುವ ಡಾಮಾರು ರಸ್ತೆಯಲ್ಲಿ ಬನ್ನಿ. ಸ್ವಲ್ಪ ಮುಂದಕ್ಕೆ ಬಂದ್ರೆ ಬಲಬದಿಗೆ ಸ್ವಲ್ಪ ಮನೆಗಳು ಉಂಟು… ಅಲ್ಲಿಗೆ ನಮ್ಮ ಮನೆ ಕಾಣ್ತದೆ… ನೀಲಿ ಪೈಂಟಿದ್ದು… ಇಲ್ಲ ಇಲ್ಲ… ನಿಮಗೆ ರೋಡಿಗೆ ಚಂದ ಕಾಣ್ತದೆ… ಹಾ.. ಆಯ್ತು ಬನ್ನಿ.” – ಹೀಗೆ ತನ್ನ ಮನೆಗೆ ದಾರಿ ಹೇಳಿದ ಸಕರಿಯ ಪಂಚೆಯನ್ನು ಅಭ್ಯಾಸದಂತೆ ಮತ್ತೆ ಮೇಲಕ್ಕೆತ್ತಿ ಕಟ್ಟಿದವ ಅಡುಗೆಮನೆಗೆ ಓಡುಗಾಲಲ್ಲಿ ನಡೆದ. ಬ್ಯಾರಿ ಭಾಷೆಯಲ್ಲಿ ಯಾವುದೇ ತಯಾರಿ ಇಲ್ಲದೆ ತನ್ನ ಮನೆಗೆ ದಾರಿ ಹೇಳುವುದು ಕೊಂಚ ತ್ರಾಸವೆನಿಸಿದ್ದು ಆ ಗಡಿಬಿಡಿಯಲ್ಲೂ ಅವನಿಗೆ ಅರ್ಥವಾಗಿತ್ತು.
“ಅವರು ಬಂದ್ರು ಅಂತ ಕಾಣ್ತದೆ. ನೀನು ರೆಡಿ ಆಗು ಹೋಗು ಹೋಗು” ಎಂದು ಮಗಳಿಗೆ ಸೂಚನೆ ಕೊಟ್ಟ. ತನ್ನ ಕೋಣೆಯ ಮೂಲೆಗಿದ್ದ ಮರದ ಮೇಲೆ ಗಾಜು ಹಾಸಿದ ಟೀಫಾಯಿಯನ್ನು ಅಲ್ಲಿಂದಲೇ ಎತ್ತಿಹಿಡಿದು ಅದರ ಮೇಲಿದ್ದ ಬೈರಾಸನ್ನು ಬೇಕಂತಲೇ ತೆಳುವಾಗಿ ಜಾರಿಸಿ ಹಾಲಿನಲ್ಲಿರುವ ಸೋಫಾದ ಸಮಕ್ಷಮಕ್ಕೆ ಕೂರಿಸಿದ. ಕಿಟಕಿಯಿಂದ ತೂರಿಬಂದ ಬಿಸಿಲ ಕೋಲಿಗೆ ಟೀಫಾಯಿಯ ಮೇಲಿನ ಧೂಳಿನ ಎರಕಕಂಡು ತಾನು ಬೀಳಿಸಿದ ಅದೇ ಬೈರಾಸು ತಂದು ಒಂದೇ ಪೆಟ್ಟಿಗೆ ಪಟ್ಟಂತೆ ಉಜ್ಜಿದ. ಮೂಲೆಯಲ್ಲಿ ತುಂಡು ಚಂದ್ರನ ಆಕಾರದಲ್ಲಿ ಧೂಳಿನ ಕಣವೊಂದು ಹಾಗೆಯೆ ಉಳಿದುಬಿಟ್ಟದ್ದು ಅವನಿಗೆ ಕಾಣಲಿಲ್ಲ. ಇದೇ ಟೀಫಾಯಿಯ ಗಾಜು ಕೋಣೆಯ ಮಬ್ಬುಗತ್ತಲಲ್ಲಿ ಸಾಫುಸಾಫಾಗಿ ಶುಭ್ರವಾಗಿಯೇ ಕಂಡಿತ್ತು. ಮೊದಲ ಪೊದುವಿಗೆ ಮಗಳಿಗೆ ನಿಗಂಟು ಆದರೆ ಪರಪ್ಪು ಫಕೀರರ ದರ್ಗಾಕ್ಕೆ ಒಂದು ಕೆಜಿ ಕೊತ್ತಂಬರಿ ಕೊಡುವುದೆಂದು ನೇರ್ಚೆ ಮಾಡಿದವನಿಗೆ ಅರೆ, ಒಂದು ಕೆ.ಜಿ. ಸ್ವಲ್ಪ ಜಾಸ್ತಿಯಾಯಿತೆಂದು ಅನಿಸಿ ಕೊತ್ತಂಬರಿಯ ತೂಕವನ್ನು ಅರ್ಧಕ್ಕೆ ಇಳಿಸಿ ಮತ್ತೆ ಹರಕೆಯನ್ನು ತಿದ್ದಿ ನೀಯತ್ತು ಸರಿಪಡಿಸಿಕೊಂಡ.
ಅಂಗಳಕ್ಕೆ ಬಂದವ ಒಂಟಿಯಾಗಿ ಬಿದ್ದಿದ್ದ ಉಂಗುಷ್ಟ ಕಳಚಿಕೊಂಡ ಚಪ್ಪಲಿಯೊಂದನ್ನು ಎತ್ತಿ ಅತ್ತ ತೆಂಗಿನಬುಡಕ್ಕೆ ಕಟ್ಟಿದ್ದ ಕೆಂಪುಇಟ್ಟಿಗೆಯ ಆವರಣದೊಳಗೆ ಎಸೆದುಬಿಟ್ಟ. ಅದಾಗಲೇ ಕರೆ ಮಾಡಿದ್ದವರು ಬರುವುದು ಕಾಣಿಸದೆ ಗೋಣು ಚಾಚಿ ರಸ್ತೆಯ ಕಡೆಗೆ ನೋಡಿದರೆ, ಮಿರುಗುವ ಶ್ವೇತವರ್ಣದ ಕಾರಿನ ಗಾಜು ತುಸುವೇ ಜಾರಿದಂತೆ ಒಳಗೆ ಕೂತ ಒಂದಿಬ್ಬರು ಅತ್ತಿತ್ತ ನೋಡುತ್ತಿದ್ದರು.
ಸಕರಿಯ “ಇಲ್ಲಿ…ಇಲ್ಲಿ…” ಎಂದು ಕೈಬೀಸುತ್ತಲೇ ಮುಂದಕ್ಕೆ ಬಂದು ಕಾರು ಅಂಗಳದಲ್ಲಿ ಪವಡಿಸುವವರೆಗೂ ಸಹಜ ಅಭಿವ್ಯಕ್ತಿಯಾದ ನಗುವಿಗೆ ಯಾಂತ್ರಿಕತೆಯ ಮಿಶ್ರಿತ ಕೊಟ್ಟವನಂತೆ ಅಲ್ಲೇ ಹಲ್ಲುಬಿಡುತ್ತ್ತ ನಿಂತುಕೊಂಡುಬಿಟ್ಟ. ಆರೂವರೆ ಅಡಿಯ ಸಕರಿಯನನ್ನು ಕಪ್ಪುಅಂಚಿನ ಬಿಳಿ ನೀಳ ಪಂಚೆಯಲ್ಲಿ ನೋಡಿದ ಆ ಹೊಟ್ಟೆ ಮುಂದೆ ಚಾಚಿದ್ದ ಮೈಕಾಲದ ಮಂದಿಗೆ ಸಕರಿಯ ತುಸು ಹೆಚ್ಚೇ ದೈತ್ಯವಾಗಿ ಕಂಡದ್ದು ಅವನು ಉಟ್ಟ ಪಂಚೆಯ ಮೈಚಳಕವೆಂದೇ ಹೇಳಬೇಕಾದೀತು.
ಹುಡುಗನ ತಾಯಿ ಮತ್ತು ಅಕ್ಕ ವಧು ಪರೀಕ್ಷೆಗೆಂಬಂತೆ ಬಂದಿದ್ದರು. ತಮಗೆ ಹಿಡಿಸಿದರೆ ಮಾತ್ರ ಹುಡುಗನನ್ನು ಎರಡನೇ ಹಂತಕ್ಕೆ ಕರೆತರುವುದು ಉಚಿತವೆಂಬುವುದು ಅವರ ಅಭಿಮತವೆಂದು ಮಾತಿನ ಮಧ್ಯೆ ಹೇಳಿದರು. “ಹುಡುಗ ನೋಡಿ ಬಿಟ್ಟು ಹೋಗುವುದು ಮತ್ತೆ ಹುಡುಗಿಗೆ ಒಂದು ಇದು ಅಲ್ವಾ” ಎಂದೇನೋ ಒಬ್ಬರು ಹೇಳಿದ್ದಕ್ಕೆ, “ನಮಗೂ ಹೆಣ್ಣುಮಕ್ಕಳು ಇದ್ದಾರಲ್ವಾ?” ಎಂದು ಮತ್ತೊಬ್ಬರು ವಾಕ್ಯವನ್ನು ದಡ ತಲಪಿಸಿದರು.
“ಹಾಗೇನೂ ಇಲ್ಲ, ಹುಡುಗಿ ಓಕೆ ಆದರೆ ಒಂದು ವರ್ತಮಾನ ತಿಳಿಸಿ, ಬೇಕಾದರೆ ಮಗಳದ್ದು ಫೋಟೋ ತೆಗೆದುಕೊಳ್ಳಿ. ಇಬ್ಬರಿಗೂ ಹಿಡಿಸಿ, ಎರಡೂ ಕುಟುಂಬಗಳಿಗೂ ಸಮ್ಮತವಾದರೆ ತಾನೇ ನಿಕಾಹ್ ನಡೆಯುವುದು, ಎಷ್ಟೆಷ್ಟು ಮದುವೆಗಳು ಹಿಂದಿನ ದಿನವೇ ಮುರಿದುಹೋಗುವುದಿಲ್ಲ ಹೇಳಿ?” ಎಂದೆಲ್ಲ ಒಂದೇ ದಮ್ಮಿಗೆ ಉಸುರಿದ ಸಕರಿಯಾನ ಮಾತುಗಳು ಆ ಕೋಣೆಯಲ್ಲಿದ್ದ ಅಪ್ಪಟ ಖಾಸಗಿತನವೊಂದನ್ನು ಅಲ್ಪವೇ ಸಡಿಲಗೊಳಿಸಿತ್ತು.
ಐಸು ಹಾಕಿದ ಬೊಂಡಾಶರಬತ್ತು ಕುಡಿದ ಇವರು ಇನ್ನೇನು ಹೊರಡಬೇಕು ಅನ್ನುವಾಗ ಅವರಲ್ಲೊಬ್ಬ “ನಿಮ್ಮ ಮನೆ ರೋಡಿಗೆ ಕಾಣುದಿಲ್ಲ ಇವ್ರೆ. ಈ ಮನೆ ಅಡ್ಡ ಅಲ್ವಾ?” ಎಂದು ಸಕರಿಯಾನ ಮನೆಯ ಎದುರಿಗೆ ಇರುವ ನೇರಳೆ ವರ್ಣದ ಎರಡು ಅಂತಸ್ತಿನ ಮನೆಗೆ ಕಣ್ಣು ತಿರುಗಿಸಿದರು. ಹೋ..ಹೌದಲ್ವಾ..! ಎಂದ ಸಕರಿಯ ಆತಿಥೇಯರನ್ನು ಬೀಳ್ಕೊಟ್ಟು ಬಂದವ ಸೋಫಾದಲ್ಲಿ ಒಂದು ನೀಳವಾದ ನಿಟ್ಟುಸಿರುಬಿಟ್ಟು ಕುಳಿತುಕೊಂಡ.
* * *
ಸಕರಿಯನಿಗೆ ಬ್ಯಾರಿ ಭಾಷಿಕರಂತೆ ಸಲೀಸಾಗಿ ನಾಲಗೆ ಹೊರಳುತ್ತಿರಲಿಲ್ಲವಾದರೂ ಹೊಸ ಭಾಷೆಗೆ ಒಗ್ಗಿಕೊಳ್ಳುವ ಜಾಯಮಾನ ಅವನಲ್ಲಿತ್ತು. ತಾನೊಬ್ಬ ಮಲೆಯಾಳಿ ಎಂಬ ಕಾರಣಕ್ಕೆ ಕರಾವಳಿಯ ಬ್ಯಾರಿಗಳು ಸಂಬಂಧ ಬೆಳೆಸಿಕೊಳ್ಳುವುದು ಕಷ್ಟವೆಂದು ತಿಳಿದಿದ್ದ ಅವನು ಸಂಕೋಚದಿಂದಲೇ ‘ಹ್ಮ್’ ಅಂದಿದ್ದ. ಮೂಲತಃ ಕೇರಳದ ಕಾಸರಗೋಡಿನವನಾದರೂ ಊರು ಕೇಳಿದರೆ ಅರೆಬರೆ ಮಲಯಾಳಂ ಮಿಶ್ರಿತ ಬ್ಯಾರಿ ಭಾಷೆಯಲ್ಲಿ “ನಿಮಗೆ ಹತ್ತು ವಿಕೆಟ್ಟು ತೆಗೆದ ಅನಿಲ್ಕುಂಬ್ಳೆ ಕೊತ್ತಿಲ್ವ? ಅವರು ನಮ್ಮ ಊರಿನವರು. ನಮ್ಮ ಮನೆಯ ಹತ್ತಿರದವರು” ಎಂದು ತನ್ನ ವಿಳಾಸವನ್ನು ಸರಳ ಮತ್ತು ಅಷ್ಟೇ ಚಂದವಾಗಿ ಹೇಳಿ ಕೈತೊಳೆದುಕೊಳ್ಳುತ್ತಿದ್ದ. ‘ನಮಗೂ’ ಅನ್ನುವುದನ್ನು ‘ನಮಕೂ’ ಎಂದು ‘ಗೊ’ ಅನ್ನು ‘ಕೊ’ ಎಂದು ಹೇಳುತ್ತಿದ್ದ ಅವನ ಕನ್ನಡವು ಮಲಯಾಳಂ ಭಾಷೆಯ ಸೊಗಡನ್ನು ಬಿಟ್ಟುಕೊಡುತ್ತಿರಲಿಲ್ಲ.
ಪರಪ್ಪು ಎಂಬ ಬೆಳ್ತಂಗಡಿ ತಾಲೂಕಿನ ಪುಟಾಣಿ ಊರಿಗೆ ಬಂದು ಮೂರು ವರ್ಷದಲ್ಲೇ ಮಸೀದಿ ಕಮಿಟಿಯನ್ನು ಸೇರಿಕೊಂಡಿದ್ದವ ಊರಿನ ಎಲ್ಲರಿಗೂ ಪರಿಚಯವಿದ್ದ. ಹೊಸ ಒಕ್ಕಲು ಬಂದವರನ್ನು ಐದು ವರ್ಷಗಳ ಬಳಿಕ ಮಾತ್ರವೇ ಕಮಿಟಿಗೆ ತೆಗೆದುಕೊಳ್ಳಬೇಕೆಂಬ ಲಿಖಿತ ನಿಯಮವೊಂದು ಬದಿಗೆ ಸರಿದದ್ದೇ ಆಗ. ಝಕರಿಯ ಎಂಬ ಹೆಸರು ಮಾತ್ರ ಕೇಳಿದ್ದ ಊರಿನ ಜನಕ್ಕೆ ಈ ಸಕರಿಯ ಎಂಬ ಹೆಸರು ವಿಚಿತ್ರವಾಗಿ ಕಂಡಿತ್ತು. ಕೇರಳಿಗರು ‘ಝ’ ಅಕ್ಷರದ ಬದಲು ‘ಸ’ ಎಂದು ಬರೆದು ಹಾಗೆಯೆ ಉಚ್ಛರಿಸುತ್ತಿದ್ದ ಕಾರಣಕ್ಕೆ ಝಕರಿಯ ಹೆಸರು ಅಪಭ್ರಂಶಗೊಂಡು ‘ಸಕರಿಯ’ ಆಗಿದ್ದು ಅವನ ವ್ಯಕ್ತಿತ್ವಕ್ಕೆ ಒಪ್ಪುವಂತೆ ಭಿನ್ನವಾಗಿಯೇ ಉಳಿದುಕೊಂಡುಬಿಟ್ಟಿತ್ತು.
ಸಕರಿಯನದು ತುಂಬಾ ಸ್ವಾಭಿಮಾನದ ಅಷ್ಟೇ ಸೂಕ್ಷ÷್ಮ ಮನಸ್ಸಿನ ವ್ಯಕ್ತಿತ್ವ. ‘ನಿಂಗೆ ಏನು ಮಾರಾಯಾ, ಅಪ್ಪ ಮಾಡಿಟ್ಟದ್ದು ಬೇಕಾದಷ್ಟು ಉಂಟಲ್ವಾ’ ಎಂದು ಯಾರೋ ಕುಶಾಲು ಮಾಡಿದ್ದು ಇವನಿಗೆ ದಂಡಪಿಂಡ ಎಂದು ಗೇಲಿಮಾಡಿದಂತೆ ಅನಿಸಿ ಆ ದಿನವಿಡೀ ಮಗ್ಗುಲು ಬದಲಿಸಿಯೇ ಬೆಳಕು ಹರಿಸಿದವ ಸೀದಾ ಹೊರಟು ಬಂದಿದ್ದ. ಅವನಿಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ತೀರಾ ಚಿಕ್ಕ ವಿಷಯಗಳು ಧಾರಾಳವಾಗುತ್ತಿತ್ತು.
ಯಾರದೋ ಪರಿಚಯದಲ್ಲಿ ಪರಪ್ಪಿಗೆ ಬಂದವ ಖಾದರ್ ಕಾಕಾರ ಹಳೆಯ ತೋಟದ ಮನೆಯಲ್ಲಿ ಬಾಡಿಗೆಗೆ ಇದ್ದುಬಿಟ್ಟ. “ರೆಂಟು ಗಿಂಟು ಏನು ಬೇಡ, ಸ್ವಲ್ಪ ತೋಟ ನೋಡ್ಕೊ” ಎಂದು ದಣಿಗಳು ಹೇಳಿದಕ್ಕೆ ಹಾಗೆಯೆ ಆಗಲಿ ಎಂದವ ಒಂದೆರಡು ತಿಂಗಳು ಮುಂದಕ್ಕೆ ಹಾಕಿದ. ತೋಟದ ಆಳಿಗೆಂದು ಇದ್ದ ಚಿಕ್ಕ ಗುಡಿಸಲಲ್ಲಿ ಹರಟೆಗೆ ಕುಳಿತುಕೊಳ್ಳುತ್ತ ದಣಿಗಳೊಂದಿಗೆ ಅಪಾರ ಸಲುಗೆ ಬೆಳೆಸಿಕೊಂಡುಬಿಟ್ಟ.
ಮೊಲ ಹೊಡೆಯುವುದು, ಜೋರು ಮಳೆಬಿದ್ದರೆ ರಾತ್ರಿ ಮೀನು ಕಡಿಯಲು ಹೋಗುವುದು, ಒಮ್ಮೊಮ್ಮೆ ಕೊಯ್ಯೂರಿನ ಕಡೆ ಕದ್ದುಮುಚ್ಚಿ ಶಿಕಾರಿಗೆ ತೆರಳುವುದು, ಯಾರದೋ ಮನೆಯಲ್ಲಿ ಉಡ ಸಿಕ್ಕರೆ ಇಬ್ಬಿಬ್ಬರೇ ತಿನ್ನುವುದು, ಪಕ್ಕದ ಎರುಕಡಪ್ಪಿನ ಕೆರೆಗೆ ವಾರದಲ್ಲಿ ಒಮ್ಮೆ ಗಾಳ ಹಾಕುತ್ತ ಕೂರುವುದು ಮಾಡುತ್ತಿದ್ದ. ಒಂದು ದಿನ ಸಂಜೆ ಹೀಗೆ ಕುಳಿತಿರಬೇಕಾದರೆ ಅಂತರಾಳದಲ್ಲಿ ಸ್ವಾಭಿಮಾನದ ಕಿಡಿಯೊಂದು ಕುಡಿಯೊಡೆದು ಮರುದಿನದಿಂದಲೇ ಮೇಸ್ತ್ರಿ ಕೆಲಸಕ್ಕೆ ಹೋಗುವುದಾಗಿ ದಣಿಗಳಿಗೆ ಹೇಳಿದ. ಸಕರಿಯನಿಗೆ ಬಾಡಿಗೆ ಕೊಡದೆ ಇರುವ ವಾಸ್ತವ್ಯ ಸರಿಯೆನಿಸುತ್ತಿರಲಿಲ್ಲ. ಒಂದು ವೇಳೆ ಹಾಗೆಯೆ ಇರುತ್ತಿದ್ದರೆ ಸಕರಿಯ ಈಗಲೂ ಅದೇ ತೋಟದ ಮನೆಯಲ್ಲಿ ಇರುತ್ತಿದ್ದನೋ ಏನೋ!
ಶುಕ್ರವಾರದಂದು ಒಂದು ರಜೆ ಬಿಟ್ಟರೆ ಬೇರೆ ದಿನಗಳಲ್ಲಿ ಚೆನ್ನಾಗಿ ದುಡಿಯುತ್ತಿದ್ದವ ಮಲಯಾಳಿಗಳ ತಿನಿಸುಗಳಿಗೆ ಇಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಮನೆಯವಳಲ್ಲಿ ಕರಿದ ವಿವಿಧ ನಮೂನೆಯ ತಿನಿಸುಗಳನ್ನು ಮಾಡಿಸಿ, ಇಬ್ರಾಯಿ ಕಾಕ, ಈಚಾಕ, ಐಡಿಯಲ್ ಸೂಪರ್ ಬಜಾರ್ಗಳಿಗೆ ಕೊಡಲು ಪ್ರಾರಂಭಿಸಿದ. ಕ್ರಮೇಣ ತನ್ನದೇ ಒಂದು ತಳ್ಳುಗಾಡಿ ಕೊಂಡು ಪರಪ್ಪು ಜಂಕ್ಷನ್ನಿನಲ್ಲಿ ಸ್ವಂತ ವ್ಯಾಪಾರವೇ ಪ್ರಾರಂಭಿಸಿಬಿಟ್ಟ. ಮೊದಮೊದಲು ಬೇಕಾಗುವ ಹಿಟ್ಟು ಅದು ಇದು ಎಂದು ಮನೆಯಲ್ಲೇ ಸಿದ್ಧಪಡಿಸಿ ಕೊಂಡೊಯ್ಯುತ್ತಿದ್ದವ, ಒಂದು ತಿಂಗಳು ದಾಟಿದ ಎರಡನೆಯ ವಾರಕ್ಕೆ ಗೂಡಂಗಡಿಯನ್ನೇ ತೆರೆದು ‘ಮಲಬಾರ್ ತಟ್ಟುಕಡ’ ಎಂದು ಬೋರ್ಡೂ ನೇತುಹಾಕಿದ.
‘ತಟ್ಟುಕಡ’ ಮಲಯಾಳಂ ಹೆಸರಾಗಿದ್ದರೂ ಬೋರ್ಡು ಮಾತ್ರ ಅಚ್ಚಕನ್ನಡದಲ್ಲಿಯೇ ಇದ್ದಿತು. ಕನ್ನಡದ ಗೂಡಂಗಡಿ ಕೇರಳದ ಭಾಷೆಯಲ್ಲಿ ತಟ್ಟುಕಡ ಆಗಿ ವಲಸೆ ಬಂದಿತ್ತು. ಡಿಸೈನರ್ ಶೇಖರನ ಕೈಚಳಕದಲ್ಲಿ ಬೆಂದ ಆ ಬೋರ್ಡಿನಲ್ಲಿರುವ ಬಣ್ಣದ ತಿನಿಸುಗಳಿಗೆ ಎರಡನೇ ವಾರಕ್ಕೆ ಧೂಳು ಮೆತ್ತಿಕೊಂಡು ಅದರ ರುಚಿಯನ್ನು ಕುಗ್ಗಿಸಿತ್ತಾದರೂ ಅಲ್ಲಿ ಗಾಜಿನ ಒಳಗೆ ಜೋಡಿಸಿದ್ದ ತಿಂಡಿಯ ಕಮ್ಮನೆ ಅಲ್ಲೆಲ್ಲ್ಲ ಹರಡಿಕೊಂಡಿತ್ತು. ಕೇರಳದ ತಿನಿಸಿನ ರುಚಿಗೆ ಪರಪ್ಪು, ಗೇರುಕಟ್ಟೆ, ನಾಳ, ಜಾರಿಗೆಬೈಲ್ ಹೀಗೆ ಸುತ್ತಮುತ್ತಲಿನ ಜನರು ಸಂಜೆಯಾಗುತ್ತಲೇ ಬಾಳೆಎಲೆಯಲ್ಲಿ ಪೊಟ್ಟಣ ಕಟ್ಟಿಸಿಕೊಂಡು ಮನೆಗಳಿಗೆ ತೆರಳುತ್ತಿದ್ದರು.
ಕೂಲಿ ಕೆಲಸಕ್ಕೆಂದು ಹೋಗುವವರು ಬೆಳಗಿನ ಲಘು ಉಪಹಾರಕ್ಕೆ ತಟ್ಟುಕಡೆಯಲ್ಲಿ ಪುಟ್ಟು, ಕಡಲಕರಿ, ಅಪ್ಪಂ, ಇಡಿಯಪ್ಪಂ ಹಾಗೂ ಒಂದು ಕಡಕ್ ಸುಲೇಮಾನಿ ಕುಡಿಯುವುದನ್ನು ಖಾಯಂಗೊಳಿಸಿದರು. ಆ ‘ತಟ್ಟುಕಡೆ’ಯಲ್ಲಿ ‘ಬ್ಲಾಕ್ ಟೀ’ ಅಥವಾ ಬ್ಯಾರಿ ಭಾಷಿಗರು ಹೇಳುವ ‘ಕಣ್ಣಚಾ’ ಹೆಸರುಗಳು ಕೇಳುತ್ತಿದ್ದದ್ದು ಮೊದಲ ಒಂದೆರಡು ವಾರಗಳಲ್ಲಿ ಮಾತ್ರ. ನಂತರ ಏನಿದ್ದರೂ… “ಛೇಟ್ ಒಂದು ಕಡಕ್ ಸುಲೇಮಾನಿ..” ಎಂಬ ಆಪ್ತತೆಗೆ ಆ ಖಾಸಗಿತನ ಬದಲಾಗಿಯಾಗಿತ್ತು.
ತಿನಿಸುಗಳ ಹೆಸರಿನ ಪಟ್ಟಿಯಲ್ಲಿ ಪಯಂಪುರಿ, ವಡ, ಉಣ್ಣಿಅಪ್ಪಂ, ಅಚ್ಚಪ್ಪಂ, ನೆಯ್ಯಪ್ಪಂ, ಪುಟ್ಟು, ಪತ್ತಿರಿ, ಚಟ್ಟಿ ಪತ್ತಿರಿ – ಹೀಗೆ ಮಲಯಾಳಂ ಹೆಸರುಗಳನ್ನೇ ಕನ್ನಡದಲ್ಲಿ ಬರೆಯಲಾಗಿದ್ದರೂ ಯಾವುದೇ ತಕರಾರಿಲ್ಲದೆ ಊರ ಜನರು ಅದೇ ಹೆಸರಿಗೆ ಒಗ್ಗಿಕೊಂಡು ಕೊಂಡುಕೊಳ್ಳುತ್ತಿದ್ದರು. ಬೇಸಿಗೆ ಬಂತೆಂದರೆ ‘ಅವಿಲ್ ಮಿಲ್ಕ್’ ತಯಾರಾಗುತ್ತಿತ್ತು. ಅವಿಲ್ ಮಿಲ್ಕ್ ಊರ ಜನರಿಗೆ ಹೊಸತೊಂದು ಬಗೆಯ ಪೇಯವಾಗಿ ಸ್ವಲ್ಪ ಹೆಚ್ಚೇ ಹಿಡಿಸಿಬಿಡುತ್ತಿತ್ತು. ಸಂಜೆ ಹೊತ್ತು ಆಟ ಮುಗಿಸಿ ಬರುವ ಯುವಕರು ‘ಅವಿಲ್ ಮಿಲ್ಕ್’ ಪಂಥ ಕಟ್ಟಿಕೊಂಡು ಇಲ್ಲಿ ಅವಿಲ್ ಮಿಲ್ಕ್ ಏರಿಸಿಕೊಂಡು ‘ಹಾಯ್ ಛೇಟ್…ಬಾಯ್ ಛೇಟ್’ ಎಂದು ಬೈಕ್ ಹತ್ತಿ ವಿಶ್ ಮಾಡಿ ಗೂಡು ಸೇರುತ್ತಿದ್ದರು.
ಶಾಲೆ ಬಿಟ್ಟು ಬರುವ ಮಕ್ಕಳಿಗೆಂದೇ ಒಂದೆರಡು ರೂಪಾಯಿಗಳಿಗೆ ತಿನಿಸುಗಳನ್ನು ಮಾಡಿ ಇಡತೊಡಗಿದ ಮೇಲಂತೂ ಮಕ್ಕಳು ಸಂಜೆಯಾಗುತ್ತಲೇ ತಟ್ಟುಕಡೆಯ ಮುಂದೆ ರಾಶಿ ಬೀಳತೊಡಗಿದರು. ‘ಟೂ, ತ್ರಿ, ದ್ಯಾಟ್ ವನ್, ದಿಸ್ ವನ್, ವನ್ ಮೋರ್, ಯಮ್ಮಿ, ಫೇವ್ರೆಟ್’ ಎಂಬಿತ್ಯಾದಿ ಇಂಗ್ಲಿಷ್ ಪದಗಳು ಅದೇ ಪುಟಾಣಿ ಮಕ್ಕಳ ಸಹವಾಸದಿಂದ ಆ ಪರಿಸರಕ್ಕೆ ಗುರುತು ಹತ್ತತೊಡಗಿತ್ತು. ಒಂದೇ ಉಣ್ಣಿ ಅಪ್ಪವನ್ನೋ, ಪಯಂಪುರಿಯನ್ನೋ ಹಂಚಿಕೊಂಡು ತಿನ್ನುತ್ತಿದ್ದ ಈ ಎಳೆಯರ ಒಡನಾಟ ಅಲ್ಲಿರುವ ಗಿರಾಕಿಗಳಿಗೆ ಬಾಲ್ಯದ ನೆನಪುಗಳನ್ನು ಕೆಲವೊಮ್ಮೆ ತಮ್ಮ ಮೂಲ ಊರಿನ ಗೆಳೆಯರನ್ನು ಸ್ಮೃತಿಗೆ ತರುವಂತಿದ್ದವು.
ಅಲ್ಪಸ್ವಲ್ಪ ತುಳುಭಾಷೆಯಲ್ಲೂ ವ್ಯವಹರಿಸುತ್ತಿದ್ದ ಸಕರಿಯ ಜಾತಿ ಭೇದವಿಲ್ಲದೆ ಅಲ್ಲಿರುವ ಎಲ್ಲರ ಹೊಟ್ಟೆಯೂ ತಣಿಸುತ್ತಿದ್ದ. ಒಂದು ತೀರಾ ಸಾರ್ವಜನಿಕ ವ್ಯಕ್ತಿಯಾಗಿ ಬರಬರುತ್ತ ಬದಲಾದ ಸಕರಿಯ ಜಾತ್ರೆ, ಉರೂಸುಗಳಲ್ಲಿ ತನ್ನ ತಟ್ಟುಕಡೆಯನ್ನು ತಳ್ಳುಗಾಡಿಗೆ ವರ್ಗಾಯಿಸಿ ಒಂದೆರಡು ದಿನಗಳಲ್ಲಿ ನಿದ್ದೆ ಬಿಟ್ಟು ಅಂಗಡಿ ತೆರೆದು ಒಮ್ಮೊಮ್ಮೆ ಒಂದಿಬ್ಬರು ಹುಡುಗರನ್ನು ಸೇರಿಸಿಕೊಂಡು ಚೆನ್ನಾಗಿಯೇ ದುಡಿಯುತ್ತಿದ್ದ. ಇತ್ತೀಚಿಗೆ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರಿದಾಗ ಒಂದೆರಡು ಜಾತ್ರೆಯ ಸಂತೆಯಲ್ಲಿ ಸುಮ್ಮನೆ ಸುತ್ತು ಹಾಕಿ ಬರತೊಡಗಿದನಾದರೂ, ಅವನ ಮಾಮೂಲು ತಟ್ಟುಕಡೆಯಲ್ಲಿ ಯಾವ ಸಂದರ್ಭದಲ್ಲೂ ಮಾಡಿಟ್ಟ ತಿಂಡಿ-ತಿನಿಸುಗಳು ಖಾಲಿಯಾಗದೆ ಇರುತ್ತಿರಲಿಲ್ಲ.
ಒಮ್ಮೆ ತನ್ನ ಕುಟುಂಬಸಮೇತ ಊರಿಗೆ ಹೋಗಿ ಒಂದು ವಾರ ಉಳಿದು ಬಂದಮೇಲೆ ಅದೇ ಖಾದರ್ ಕಾಕನ ಬಳಿ ಹತ್ತು ಸೆನ್ಸು ಭೂಮಿ ಖರೀದಿಸಿ ಕೇರಳದ ಉಸ್ತಾದರನ್ನು ಕರೆಸಿ ಮನೆಗೆ ‘ಕುಟ್ಟಿಹೊಡೆಸುವ’ ಶಿಲಾನ್ಯಾಸ ಕಾರ್ಯವನ್ನು ಸುಸೂತ್ರವಾಗಿಯೇ ನಡೆಸಿದ. ನಿಕಾಹಿನ ದಿನ ಹಾಕಿದ ‘ಮಹರ್’ ಅನ್ನು ಮಾರಿ, ಸಕರಿಯ ಜಾಗ ಖರೀದಿಸಿದ್ದಾನಂತೆ ಎಂಬ ಗಾಳಿ ಸುದ್ದಿಯೊಂದು ಒಂದಷ್ಟು ದಿನ ಊರೆಲ್ಲ ಸುತ್ತಾಡಿ ಸುತ್ತಾಡಿ ಸುಸ್ತು ಹೊಡೆಸಿಕೊಂಡು ಕೆಲವರ ಹೊಟ್ಟೆಯಲ್ಲೇ ಉಳಿದುಬಿಟ್ಟಿತ್ತು. ಅಂತೂ ಒಂದೆಡೆ ತಟ್ಟುಕಡೆ ಮತ್ತು ಮನೆಯ ನಿರ್ಮಾಣ ಕೆಲಸ ಎರಡನ್ನೂ ಒಟ್ಟಿಗೆ ಕೊಂಡೊಯ್ಯುವುದು ತ್ರಾಸವೆನಿಸಿದರೂ ಒಂದಿಬ್ಬರು ಆಳುಗಳನ್ನು ಅಗತ್ಯಬಿದ್ದರೆ ಮಾತ್ರ ಕೂಡಿಸಿಕೊಂಡು ತಾನೇ ಅಡಿಪಾಯದ ಕೆಲಸದವರೆಗೂ ಮಾಡಿ ಮುಗಿಸುತ್ತಿದ್ದ. ಒಮ್ಮೆ ಯಾರೋ ವಾಸ್ತು-ಗೀಸ್ತು ಎಂದು ಹುಳ ಬಿಟ್ಟದ್ದಕ್ಕೆ ತಮಿಳುನಾಡಿನ ಮುತ್ತು ಪೇಟಿಯಿಂದ ವಾಸ್ತು ನೋಡುವ ಮೌಲ್ವಿಯೊಬ್ಬರನ್ನು ಕರೆಸಿ ನಿಟ್ಟುಸಿರುಬಿಟ್ಟ.
ಇದಾಗಿ ಎಂಟು ತಿಂಗಳಲ್ಲಿ ಅಲ್ಲಿ ಇಲ್ಲಿ ಒಂದಿಷ್ಟು ಸಾಲ ಮಾಡಿದ, ಕೂಲಿ ಕೊಡುವುದನ್ನು ಉಳಿಸಿಕೊಳ್ಳಲು ಸುಮಾರು ಎಲ್ಲ ಕೆಲಸಗಳನ್ನು ಅವನೇ ಮಾಡಿ ಮುಗಿಸಿದ್ದ. ಊರ ಜನರು ಸಕರಿಯನ ಅಧ್ವಾನದಲ್ಲಿ ಅರಳಿದ ಮನೆಯ ‘ಗೃಹಪ್ರವೇಶ’ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸೇರಿದಾಗ, ಮನೆಗೆ ಬೇಕಾದಷ್ಟು ಸಾಮಗ್ರಿಗಳು ಉಡುಗೊರೆಯ ರೂಪದಲ್ಲಿ ಅವನನ್ನು ತಲಪಿದವು. ಕೇರಳದಿಂದ ಆಹ್ವಾನಿತರ ದೊಡ್ಡ ದಂಡೇ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿಯೇ ಬಂದಿದ್ದರು. ಗೃಹಪ್ರವೇಶಕ್ಕೆ ದಾರಿ ಎಂದು ಹಾಕಿದ ಬೋರ್ಡ್ ನೋಡಿ ‘ಇದರ ಅಗತ್ಯವಿಲ್ಲ ಬಿಡಿ, ನಿಮ್ಮ ಮನೆ ರೋಡಿಗೇ ಚಂದ ಕಾಣ್ತದಲ್ವಾ’ ಎಂಬ ಮಾತು ಕೇಳಿದ ಸಕರಿಯ ಒಳಗೊಳಗೆ ಹರ್ಷಗೊಂಡು ಕುಣಿದಿದ್ದ. ಹೊರಗಡೆ ಸಿಟ್ಔಟಿನಲ್ಲಿ ಸೋಫಾವೊಂದನ್ನು ಹಾಕಿ ಕುಳಿತುಕೊಂಡು ಅತ್ತಿತ್ತ ಓಡಾಡುವ ಪರಿಚಯದ ಮಂದಿಗೆ ಕೈ ಎತ್ತಿ ವಿಶ್ ಮಾಡುವುದು, ಕೆಲವೊಮ್ಮೆ ಮನೆಗೆ ಚಹಾಕ್ಕೆ ಕರೆಯುವುದು, ಶುಕ್ರವಾರ ನಮಾಜ್ ಮುಗಿಸಿ ತಡವಾಗಿ ಬರುವವರನ್ನು ಊಟಕ್ಕೆ ಆಹ್ವಾನಿಸುವುದು ಮಾಡುತ್ತಿದ್ದ.
ಸಕರಿಯ ಮನೆಕಟ್ಟಿ ಒಂದೆರಡು ವರುಷ ಸಂದಿರಬೇಕು. ಖಾದರ್ ಕಾಕನಲ್ಲಿ ರೋಡಿಗೆ ತಾಗಿಕೊಂಡೇ ಇರುವ ಜಾಗವನ್ನು ದುಬೈಯಲ್ಲಿ ದುಡಿಯುವ ಒಂದು ಪಾರ್ಟಿ ದೊಡ್ಡ ಮೊತ್ತಕ್ಕೆ ಖರೀದಿಸಿತು. ಮನೆಯ ಕಾಮಗಾರಿಯ ಪ್ರಾರಂಭದಲ್ಲಿ ಪಾಯ ಕಲಸಲು ಹುಮ್ಮಸ್ಸಿನಲ್ಲಿ ನೀರು ಕೊಟ್ಟು ನೆರವಾದವನು ಸಕರಿಯ ಮಾತ್ರ. ನೋಡಿದರೆ ಎರಡೋ ಮೂರೋ ಎಂದು ಅರ್ಥವಾಗದ ವಿನ್ಯಾಸದಲ್ಲಿದ್ದ ಆ ಮನೆ ಪ್ರೇಮಿಯೊಬ್ಬ ಮೊದಲು ಬರೆದ ಕವಿತೆಯಂತೆ ಕಣ್ಣುತೆರೆಯುವುದರೊಳಗೆ ಎದ್ದು ನಿಂತಿತ್ತು. ಸಕರಿಯನ ಮನೆ, ಅವನ ಎದುರಿನ ಮನೆ, ಮೇಲೆ-ಕೆಳಗೆ ಅಲ್ಲಿ-ಇಲ್ಲಿ ಎಂದು ನೋಡನೋಡುತ್ತಿದ್ದಂತೆ ಅಲ್ಲೊಂದು ವಠಾರವೇ ರೂಪುಗೊಂಡಿತು. ಮನೆಗೊಂದರಂತೆ ಬೋರು ಕೊರೆಸುವುದಕ್ಕೆ ಪಂಚಾಯಿತಿಯಿಂದ ಅನುಮತಿ ಇಲ್ಲದ ಕಾರಣ ಆ ವಠಾರದ ನಾಲ್ಕೈದು ಮನೆಗಳಿಗೆ ಖಾದರ್ ಕಾಕ ಮೊದಲು ಅಲ್ಲೇ ಕೊರೆಸಿದ್ದ ಬೋರಿನಿಂದ ನೀರು ನೀಡುವುದಾಗಿ ಘೋಷಿಸಿದ್ದರು. ಆ ಬೋರು ಸಕರಿಯನ ಮನೆಯ ಅಂಗಳದಲ್ಲಿಯೇ ಇದ್ದು, ನೀರು ಬೇಕಿದ್ದವರು ಮೋಟರಿನ ಸ್ವಿಚ್ಚು ಹಾಕಿಸಿಕೊಂಡು ಬಂದು ನೀರು ತುಂಬಿದರೆ ಮತ್ತೆ ಆಫ್ ಮಾಡಿಸಲು ಬರಿಗಾಲಲ್ಲಿಯೇ ಓಡುತ್ತಿದ್ದರು. ಸಕರಿಯನಿಗೆ ಇದೊಂದು ಹೆಮ್ಮೆಯ ವಿಷಯದಂತೆ ಅನಿಸಿ ಖುಷಿ ಕೊಡುತ್ತಿತ್ತು.
ಇಡೀ ವಠಾರಕ್ಕೆ ನಾಯಕನಂತೆ ಇರುತ್ತಿದ್ದ ಸಕರಿಯಾನ ಮನದ ಕೊಳಕ್ಕೆ ಮೊದಲ ಕಲ್ಲುಬಿದ್ದದ್ದು ಮಗಳ ಪೊದು ನೋಡಲು ಬಂದಾಗ ವ್ಯಕ್ತಿಯೊಬ್ಬ ಹೇಳಿದ ಆ ವರ್ತಮಾನದಿಂದ. ಇದಾದ ಬಳಿಕ ತನ್ನ ಓರಗೆಯ ಗೆಳೆಯರೊಂದಿಗೆ ಈ ವಿಷಯವನ್ನು ಸೂಚ್ಯವಾಗಿ ಪ್ರಸ್ತಾಪಿಸಿದನಾದರೂ ಅವರಲ್ಲಿ ಯಾರಿಗೂ ಇವನ ಸಂಕಟ ಅರ್ಥವಾಗುವಂತಿರಲಿಲ್ಲ. ಬೀಡಿ ಖರೀದಿಸುವ ನೆಪ ಹೇಳಿಕೊಂಡು ಜಯರಾಜರ ಅಂಗಡಿಗೆ ಹೋಗಿ ಬರುವಾಗ, ಸುಮ್ಮನೆ ಬೈಕು ಹತ್ತಿ ಗೇರುಕಟ್ಟೆ ಜಂಕ್ಷನಿನಲ್ಲಿ ಸುತ್ತಾಡಿ ಮರಳುವಾಗ, ಅಗತ್ಯಕ್ಕೆ ಮನೆಯ ಹೊರಗೆ ನಡೆದಾಗ, ಅಂಗಡಿ ಮುಚ್ಚಿ ಹಿಂತಿರುಗುವಾಗ, ಕೆಲಸಕ್ಕೆಂದು ಹೊರಡುವಾಗ, ಹೀಗೆ ಹೋಗುವ, ಬರುವ ಎಲ್ಲ ಸಂದರ್ಭದಲ್ಲಿ ಅಂದರೆ ದೈನಿಕದ ಸರಿಸುಮಾರು ಮುಕ್ಕಾಲು ಪಾಲು ತನ್ನ ನೀಲಿಬಣ್ಣದ ಟೆರೇಸು ಮನೆ ರೋಡಿಗೆ ಕಾಣುತ್ತದೆಯೋ ಇಲ್ಲವೋ ಎಂಬುವುದನ್ನು ಪರೀಕ್ಷಿಸತೊಡಗಿದ. ಬಳಿಕ ವಿಚಿತ್ರವಾಗಿ ವರ್ತಿಸಲು ಶುರುವಿಟ್ಟುಕೊಂಡಿದ್ದ. ಮೊದಮೊದಲು ಮೌನವಾಗಿಯೇ ಇದ್ದು ಬಿಡುತ್ತಿದ್ದವ ಸಣ್ಣಪುಟ್ಟ ವಿಷಯಗಳಿಗೆ ದುಡುಕುವುದು, ಮನೆಯಲ್ಲಿ, ತನ್ನ ‘ತಟ್ಟುಕಡೆ’ಯ ಗಿರಾಕಿಗಳಲ್ಲಿ, ಸ್ವಲ್ಪ ಪಂಪ್ ಸ್ವಿಚ್ ಹಾಕಿಯೆನ್ನುವ ನೆರೆಯ ಮನೆಯವರಲ್ಲಿ, ಕರೆಂಟು ಬಿಲ್ ಕೊಡುವ ಕೆಇಬಿಯವನಲ್ಲಿ, ಅಂಗಡಿಗೆ ಸಿಗರೇಟು ಗುಟ್ಕಾ ಹಾಕುವ ಘಟ್ಟದ ಹುಡುಗನಲ್ಲಿ ಹೀಗೆ ಎಲ್ಲೆಂದರಲ್ಲಿ ಜಗಳಕಾಯುವುದು ಮಾಡುತ್ತಿದ್ದ.
ಬದುಕಿನ ಎಂಥೆಂತಹ ಸಿಕ್ಕುಗಳನ್ನು ಕಳಚಿಕೊಳ್ಳಬಲ್ಲವನಿದ್ದ ಸಕರಿಯಾನಿಗೆ ಈ ಸೂಕ್ಷ್ಮ ವಿಷಯವನ್ನು ಸಂಭಾಳಿಸುವುದು ಆಗಲೇ ಇಲ್ಲ. ಒಂದು ದಿನ ವಿನಾಕಾರಣ ಸಣ್ಣ ವಿಷಯಕ್ಕೆ ಎದುರು ಮನೆಯವರಲ್ಲಿ ಕಾಲ್ಕೆರೆದುಕೊಂಡು ಜಗಳಕ್ಕೆ ಹೋದವ ‘ಇನ್ನು ನಿಮ್ಕೆ ನೀರು ಕೊಡಲ್ಲ’ ಎಂದು ನೆರೆದವರ ಮುಂದೆ ಫರ್ಮಾನು ಹೊರಡಿಸಿಯೇ ಬಿಟ್ಟ. ವಿಷಯ ತಿಳಿದ ತಕ್ಷಣ ಖಾದರ್ ಕಾಕ ಪಂಚಾಯಿತಿಗೆಂದು ಆಳು ಸೂವಪ್ಪನೊಂದಿಗೆ ಬಂದರು. ದುಬೈಯಿಂದಲೇ ಮನೆಯ ಯಜಮಾನನ ದೂರು ಹೋಗಿರುವುದರಿಂದ ದಣಿಗಳು ಬಂದಿರಬಹುದೆಂದು ನೆರೆಯ ಜನರು ಗುಸುಗುಸು ಮಾಡುತ್ತಿದ್ದರು.
“ನನ್ನ ಜಾಗದಲ್ಲಿ ಇರುವ ಬೋರಿನಿಂದ ಯಾರಿಗೆ ನೀರು ಕೊಡ್ಬೇಕು, ಕೊಡಬಾರದು ನಂಗೆ ಗೊತ್ತುಂಟು” ಎಂದು ಸಕರಿಯ ಕಡ್ಡಿಮುರಿದಂತೆ ಮಾತನಾಡಿದಾಗ ವಿಧಿಯಿಲ್ಲದೆ ಖಾದರ್ ಕಾಕ ಒಂದಿಷ್ಟು ಹೊತ್ತು ಎದುರು ಮನೆಯಲ್ಲಿ ಏನೋ ಸಮಾಧಾನ ಹೇಳಿದವರು, ಹೊರಟುಹೋದರು. ಅಲ್ಲೆಲ್ಲಿಯೂ ನೀರಿಗೆ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಆ ಮನೆಯವರು ಹತ್ತಿರದ ನೆಂಟರ ಮನೆಗೆ ಅದೇ ದಿನ ಕತ್ತಲಾಗುತ್ತಿದ್ದಂತೆ ಹೊರಟುಹೋದರು. ಒಮ್ಮೆ ಕೊರೆದ ಬೋರ್ವೆಲ್ಲನ್ನು ಸ್ಥಳಾಂತರ ಮಾಡುವ ಯಾವ ಸಾಧ್ಯತೆಯೂ ಇರಲಿಲ್ಲವಾದ್ದರಿಂದ ಸಕರಿಯ ಅದನ್ನೇ ಅಸ್ತçವಾಗಿ ಬಳಸಿಕೊಂಡಿದ್ದ. ನೀರಿನ ವಿಷಯದಲ್ಲಿ ದಿನಕ್ಕೊಂದರAತೆ ನಿಯಮಗಳನ್ನು ಮಾಡತೊಡಗಿದ. ಮನೆಯ ಅಂಗಳದಲ್ಲಿ ಬೋರಿನ ಪೈಪಿನಿಂದ ಅಲ್ಪಸ್ವಲ್ಪ ನೀರು ಸೋರುತ್ತಿರುವುದನ್ನೇ ನೆಪಮಾಡಿಕೊಂಡು ದಿನಕ್ಕೆ ಒಂದು ಮನೆಗೆ ಒಮ್ಮೆಯಂತೆ ಮಾತ್ರ ನೀರು ಬಿಡುವುದು ಎಂಬ ವರ್ತಮಾನ ಎಲ್ಲ ಮನೆಗಳಿಗೂ ಮಗಳಲ್ಲಿ ಹೇಳಿ ಕಳುಹಿಸಿದ.
ಆದರೆ, ಅದಾದ ಮಾರನೆ ದಿನ ಬೆಳಗ್ಗೆ ನೀರಿಗೆಂದು ಬಂದಿದ್ದ ಪಕ್ಕದ ಮನೆಯ ಹುಡುಗಿ ನೋಡಿದರೆ ಸಕರಿಯನ ಅರಮನೆಯ ಬಾಗಿಲು ಮುಚ್ಚಿತ್ತು.
ಖಾದರ್ ಕಾಕ ಇದಾದ ಒಂದು ವಾರದೊಳಗೆ ವಠಾರದ ಎಲ್ಲರ ಒಪ್ಪಿಗೆಯ ಮೇರೆಗೆ ಎಲ್ಲರದೂ ಪಾಲುದಾರಿಕೆಯಲ್ಲಿ ಒಂದು ಬೋರ್ವೆಲ್ ಕೊರೆಸಿದರು. ನೆಂಟರ ಮನೆಗೆ ಹೋದ ಎದುರುಮನೆಯ ಕುಟುಂಬವೂ ಊರು ಸೇರಿತು. ಯಾವುದೋ ಖಿನ್ನತೆಯಿಂದ ಸಕರಿಯ ಬಳಲುತ್ತಿದ್ದನೆಂದು ಕೆಲವರು ಮಾತನಾಡಿಕೊಂಡರಾದರೂ ಒಂದು ವರ್ತಮಾನವೂ ತಿಳಿಸದೆ ಎಲ್ಲಿಗೆ ಹೊರಟುಹೋದ ಈ ಮಹಾಶಯ ಎಂದು ಯಾರಿಗೂ ಅರ್ಥವಾಗಲೇ ಇಲ್ಲ.
* * *
ಇತ್ತ ಕಾಸರಗೋಡಿನ ತನ್ನ ಹುಟ್ಟೂರಿಗೆ ಹೋದವನಿಗೆ ಎಷ್ಟು ಪ್ರಯತ್ನಿಸಿದರೂ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ತಾನು ಈ ಊರಿಗೆ ಸೇರದವನಂತೆ, ತನ್ನನ್ನು ಯಾರೂ ಯಾವ ವಿಷಯಕ್ಕೂ ಗಣನೆಗೆ ತೆಗೆದುಕೊಳ್ಳದಂತೆ ಅನಿಸಿದಾಗಲೆಲ್ಲ ಮಗನ ಮುಂಜಿ ಕಾರ್ಯದಿಂದ ಮಗಳ ನಿಕಾಹಿನವರೆಗೂ ತನ್ನ ಅಭಿಪ್ರಾಯ ಕೇಳುತ್ತಿದ್ದ ಪರಪ್ಪಿನ ಮಟನ್ ಪುತ್ತನ ನೆನಪಾಗುತ್ತಿತ್ತು. ಮಸೀದಿಯ ಮಹಾಸಭೆಗಳಲ್ಲಿ “ನಿಮ್ಮ ಅಭಿಪ್ರಾಯ ಹೇಳಿ” ಎಂದು ತನ್ನನ್ನು ಪರ ಊರಿನವನೆಂಬ ಭೇದವಿಲ್ಲದೆ ವಿಶೇಷ ಗೌರವದಿಂದ ಕಾಣುತ್ತಿದ್ದ ಮಸೀದಿಯ ಉಸ್ತಾದರ ಮೇಲೆ ಹೆಮ್ಮೆಯೆನಿಸತೊಡಗಿತ್ತು. ಪರಪ್ಪು ಎಂಬ ತೀರಾ ಅನ್ಯವಾಗಿದ್ದೊಂದು ಊರು ತನ್ನನ್ನು ಒಡಲಲ್ಲಿ ಸೇರಿಸಿಕೊಂಡು ಬೆಚ್ಚಗಿಟ್ಟ ಬಗೆಗೆ ರೋಮಾಂಚನವಾಗುತ್ತಿತ್ತು. ಮಲಯಾಳಿ ಗೆಳೆಯರಲ್ಲಿ ಪರಪ್ಪು ಊರಿನ ಬಗ್ಗೆ ಮಾತಿಗೆ ತೊಡಗಿದರೆ ಕೆಲವೊಮ್ಮೆ ಮನಸ್ಸು ಆರ್ದ್ರಗೊಳ್ಳುತ್ತಿತ್ತು. ಮನೆಯ ಒಳಗಡೆ ಪಂಜರದ ಗಿಳಿಯಂತೆ ಮಾತ್ರ ಇರುತ್ತಿದ್ದ ಮಗಳು ಮತ್ತು ಪತ್ನಿಗೆ ಯಾವ ಊರಾದರೂ ಸೈ ಅನ್ನುವಂತಿದ್ದರೂ ಇವನಿಗೆ ಯಾರೊಂದಿಗಾದರೂ ಹರಟದೆ, ಟೀ ಕುಡಿಯುತ್ತ ಒಂದಿಡೀ ಶತಮಾನಕ್ಕೆ ಬೇಕಾಗುವಷ್ಟು ಮಾತನಾಡದೆ ಮಗ್ರಿಬಿನ ಸೂರ್ಯ ಕಂತುತ್ತಿರಲಿಲ್ಲ.
ತಿರುಗಿ ಮತ್ತೆ ಹೋಗಬೇಕೆ ಬೇಡವೇ ಎಂಬ ದ್ವಂದ್ವದಲ್ಲೇ ಇರಬೇಕಾದರೆ ಒಂದು ದಿನ ಅನಿರೀಕ್ಷಿತವಾಗಿ ಖಾದರ್ ಕಾಕನ ಕಾರು ಮನೆಯ ಅಂಗಳದಲ್ಲಿ ನಿಂತಿತ್ತು. ಎಲ್ಲೋ ಮಾಲಿಕ್ ದೀನಾರ್ ದರ್ಗಾಕ್ಕೆ ಹೋದವರು ಹುಡುಕಿಕೊಂಡು ಬಂದಿದ್ದರು. ಬಂದವರೇ ಹೆಗಲಿಗೆ ಕೈ ಹಾಕಿಕೊಂಡು “ಏನು ಮಾರಾಯಾ ಆ ಕಡೆ ಯಾವಾಗ ಬರ್ತಿ?” ಎಂದು ಆಪ್ತವಾಗಿ ಮಾತನಾಡಿದರು. ಚಾ ಕುಡಿಯುವ ಹೊತ್ತಿಗೆ. “ನಿನ್ನ ಮಗಳಿಗೊಂದು ಹುಡುಗ ಗೊತ್ತುಮಾಡಿದ್ದೇನೆ, ಅದೇ ಶಾಮಿಯಾನ ಶರೀಫ್ ಕಾಕನ ಎರಡನೇ ಮಗ, ಒಳ್ಳೆಯ ಸಂಬಂಧ, ಅವರು ಓಕೆ ಮಾಡಿ ಆಗಿದೆ. ನಿನ್ನ ಮಗಳನ್ನು ಯಾರದೋ ಮದುವೆಗೆ ಹಾಲಿನಲ್ಲಿ ನೋಡಿದ್ದಂತೆ. ಇಷ್ಟ ಆಗಿದೆಯಂತೆ, ಹುಡುಗ ಕೂಡ ಸ್ವಲ್ಪ ಉದ್ದ ಇದ್ದಾನಂತೆ, ಕರೆಕ್ಟ್ ಜೋಡಿ” ಎಂದವರೇ ಮಗಳು ಎಲ್ಲಿದ್ದಾಳೆಂದು ಹುಬ್ಬು ಹಾರಿಸಿ ವಿಚಾರಿಸಿಕೊಂಡರು. ಸಕರಿಯ ಮಾತುಗಳಿಲ್ಲದೆ ಮೌನವಾಗಿ ಕುಳಿತಿದ್ದ.
“ಮತ್ತೆ ನಿನ್ನ ತಟ್ಟುಕಡೆ ಅಲ್ಲಿಂದ ತಾತ್ಕಾಲಿಕವಾಗಿ ತೆಗೆಸಬೇಕು. ಅಲ್ಲೆಲ್ಲ್ಲ ರೋಡು ಕೆಲಸ ಆಗ್ತಾ ಉಂಟಲ್ವಾ, ಇನ್ನು ಪರಪ್ಪು ಸಿಟಿ ಸಿಟಿ ಆಗ್ತದೆ” ಎಂದು ಜೋರಾಗಿ ಸದ್ದುಮಾಡಿ ನಕ್ಕಿದ್ದು ಇಡೀ ಮನೆಗೆ ಕೇಳಿಸುವಂತೆ ಪ್ರತಿಧ್ವನಿಸಿತು. ಖಾದರ್ ಕಾಕ ಬಂದದ್ದು ಪರಪ್ಪು ಊರೇ ತನ್ನನ್ನು ಕಾಳಜಿಯಿಂದ ಆಮಂತ್ರಿಸಲು ಬಂದಿದೆ ಎಂಬಂತೆ ಸಕರಿಯನಿಗೆ ತೋರಿದ ಆ ಕ್ಷಣದಲ್ಲಿ ಅವನಿಗೆ ಆದ ಅನುಭವದ ಹೆಸರು ‘ಗೂಸ್ಬಮ್ಸ್’.
ಒಂದು ದಿನ ಶುಕ್ರವಾರದ ನಮಾಝಿಗೆ ಸರಿಯಾಗಿ ಸಕರಿಯ ಪರಪ್ಪು ಮಸೀದಿಯನ್ನು ತಲಪಿದ. ರಸ್ತೆಯ ಇಕ್ಕೆಲಗಳಲ್ಲೂ ದೈತ್ಯಾಕಾರದ ಗಾಡಿಗಳಿದ್ದವು. ರೋಡ್ರೋಲರುಗಳು ತಮ್ಮ ಭಾರದ ಜೀವವನ್ನು ಹೊತ್ತು ತುಸುವೇ ಚಲಿಸುತ್ತಿದ್ದವು. ಡಾಮಾರು ಬೇಯಿಸುತ್ತಿದ್ದ ಕಡೆಯಿಂದ ದಟ್ಟ ಹೊಗೆ ಸುರುಳಿ ಸುರುಳಿಯಾಗಿ ಮುಗಿಲಿಗೆ ಮುತ್ತಿಕ್ಕಲು ಗುಂಪಾಗಿ ಹಾರುತಲಿತ್ತು. ಘಟ್ಟದ ಕಡೆಯ ಹೆಂಗಸರು ಹರಕು ಸೀರೆ ಉಟ್ಟುಕೊಂಡು ಅತ್ತಿತ್ತ ಓಡಾಡುತ್ತಿದ್ದರು. ಅವರ ಪುಟಾಣಿಮಕ್ಕಳು ಅಮ್ಮನ ಗೊಡವೆಯೇ ಇಲ್ಲದಂತೆ ಅಲ್ಲಲ್ಲಿ ಆಟವಾಡುತ್ತಿದ್ದರು. ರಸ್ತೆಯ ಎರಡು ಬದಿಯ ಗಿಡಮರಗಳಲ್ಲಿ ಧೂಳು ತುಂಬಿಕೊಂಡು ಹಸಿರುಬಣ್ಣವೇ ಕಣ್ಮರೆಯಾಗಿ, ಇಡೀ ಪರಪ್ಪು ಊರೇ ಹೊಗೆ ತುಂಬಿಕೊಂಡು ಕತ್ತಲಾವರಿಸಿದಂತೆ ಸ್ತಬ್ಧವಾಗಿ ಚಳಿಗೆ ಮುದುಡಿ ಕುಳಿತ ಮಗುವಿನಂತೆ ಇತ್ತು. ವುಲೂ ಮಾಡಿ ಮಸೀದಿ ತಲಪಿದಾಗ ಆ ದಿನ ಖುತುಬಾ ಓದುವ ಉಸ್ತಾದರು ಮಿಂಬರಿನಲ್ಲಿ ಪಾರಾಯಣ ತೊಡಗಿದ್ದರು. ನಮಾಝು ಮುಗಿಸಿ ದುವಾ ಮುಗಿದ ಬಳಿಕ ಕಂಡವರೆಲ್ಲರೂ ಆಪ್ತವಾಗಿಯೇ ಮಾತನಾಡಿಸಿದರು. ಯುವಕರ ಒಂದು ಗುಂಪು ತಟ್ಟುಕಡೆ ಮತ್ತೆ ಪ್ರಾರಂಭಿಸಬೇಕೆಂದು ಜೊತೆಯಾಗಿ ಬಂದು ವಿನಂತಿಸಿಕೊಂಡರು. ಆ ಮಸೀದಿಯಲ್ಲಿ ನಮಾಝಿಗೆಂದು ಬಂದವರು ಯಾರೂ ತನ್ನನ್ನು ಹೊರಗಿನವನಂತೆ ನಡೆಸಿಕೊಳ್ಳದುದ್ದನ್ನು ಕಂಡು ಸಕರಿಯನಿಗೆ ಅಚ್ಚರಿಯೆನಿಸಿತು. ಊರ ಜನರ ಪ್ರೀತಿ ನಂಬಿಕೆಗೆ ಅವನ ಒಳಗು ತಣ್ಣಗಾಯಿತು.
ದರ್ಗಾದಲ್ಲಿ ಪ್ರಾರ್ಥನೆ ಮಾಡಿದವ ಸೀದ ಮನೆಯ ಕಡೆಗೆ ಆ ಧೂಳು ತುಂಬಿದ ದಾರಿಯಲ್ಲಿ ಪಂಚೆಯನ್ನು ತುಸುವೇ ಎತ್ತಿಹಿಡಿದುಕೊಂಡು ನಡೆದ. ತನ್ನ ಎಂದಿನ ಅಭ್ಯಾಸದಂತೆ ಮನೆ ರೋಡಿಗೆ ಕಾಣುತ್ತದೆಯೋ ಇಲ್ಲವೋ ಎಂದು ನೋಡುವುದಿಲ್ಲವೆಂದು ನಿರ್ಧರಿಸಿದ್ದನಾದರೂ ಕಣ್ಣು ಯಾಂತ್ರಿಕವೆಂಬಂತೆ ಅತ್ತ ಕಡೆಗೆ ಚಲಿಸಿತು. ತನ್ನ ಮನೆಯ ಎದುರಿಗಿದ್ದ ಆ ಚಂದದ ವಿನ್ಯಾಸದ ಮನೆಯ ಮುಂದೆ ಒಂದು ಬ್ಯಾನರು ಹಾಕಲಾಗಿತ್ತು. “ರಸ್ತೆ ಅಗಲೀಕರಣದ ನಿಮಿತ್ತ ಈ ಮನೆಯನ್ನು ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.”
ರಸ್ತೆ ಅಗಲೀಕರಣದ ಸಲುವಾಗಿ ಸರ್ಕಾರವೇ ಮನೆಯನ್ನು ನೆಲಸಮಗೊಳಿಸಿ ಪರಿಹಾರವನ್ನು ಘೋಷಿಸುವುದಿತ್ತು. ಇದಾವುದರ ಅರಿವೇ ಇಲ್ಲದ ಸಕರಿಯ ಒಂದು ವಿಚಿತ್ರ ಅಪರಾಧಭಾವದೊಂದಿಗೆ ಎದೆಭಾರವನ್ನು ಹೊತ್ತುಕೊಂಡು ಸೀದಾ ಖಾದರ್ ಕಾಕನ ಹಳೆಯ ತೋಟದ ಮನೆಯ ಕಡೆಗೆ ಪಾದ ಜೋಡಿಸುತ್ತಿದ್ದ. ಶುಕ್ರವಾರದ ಆ ದಿನ ತೋಟದ ಮನೆಯಲ್ಲಿ ಯಾರೂ ಇರುವುದಿಲ್ಲವೆಂದು ಖಾತ್ರಿಯಿದ್ದರೂ ಅವನ ಕಾಲು ಯಾಂತ್ರಿಕವೆಂಬಂತೆ ಚಲಿಸುತ್ತಲೇ ಇತ್ತು.