ಸಣ್ಣಕತೆಯ ಜಗತ್ತಿನಷ್ಟು ಪರಿವರ್ತನಶೀಲವಾದ ಸಾಹಿತ್ಯಪ್ರಕಾರ ಮತ್ತೊಂದಿಲ್ಲ. ವರ್ಷದಿಂದ ವರ್ಷಕ್ಕೆ ಸಣ್ಣಕತೆಗಳು ವಸ್ತು, ಆಶಯ, ನಿರೂಪಣಾ ವಿಧಾನವನ್ನು ಬದಲಾಯಿಸಿಕೊಳ್ಳುತ್ತಲೇ ನಡೆದಿವೆ. ಆಧುನಿಕತೆಯ ಅಂಶಗಳನ್ನು ಕೂಡ ಕತೆಗಳು ಮೈಗೂಡಿಸಿಕೊಳ್ಳುತ್ತಿವೆ. ಇವತ್ತು ಬರುತ್ತಿರುವ ವೆಬ್ಸೀರೀಸ್ಗಳಿಂದ ಹಿಡಿದು, ಕಿರುಚಿತ್ರಗಳ ತನಕ ದೃಶ್ಯಮಾಧ್ಯಮ ನಿರ್ವಹಿಸುವ ವಸ್ತುಗಳು ಕೂಡ ಒಂದು ಸಣ್ಣಕತೆಯಂತೆಯೇ ಇರುವುದನ್ನು ನಾವು ಗಮನಿಸಬಹುದು.
ಇಂಥ ಹೊತ್ತಲ್ಲಿ ಉತ್ಥಾನ ಕಥಾಸ್ಪರ್ಧೆಯ ಕೊನೆಯ ಸುತ್ತಿಗೆ ಬಂದ ೩೦ ಕತೆಗಳನ್ನು ಓದುವ ಅವಕಾಶವನ್ನು ಪತ್ರಿಕೆಯ ಸಂಪಾದಕರು ನನಗೆ ಕಲ್ಪಿಸಿಕೊಟ್ಟಿದ್ದಾರೆ. ಅನೇಕ ಕಾರಣಗಳಿಗೆ ಮತ್ತು ಸ್ವಂತ ಆಸಕ್ತಿಯಿಂದ ಸಣ್ಣಕತೆಗಳನ್ನು ನಾನು ನಿರಂತರವಾಗಿ ಗಮನಿಸುತ್ತಲೇ ಬಂದಿದ್ದೇನೆ. ಒಂದು ಕಾಲದಲ್ಲಿ ಕನ್ನಡದ ಸಣ್ಣಕತೆಗಳು ಅತ್ಯಂತ ಆಧುನಿಕವೂ ಸಮಕಾಲೀನತೆಯನ್ನು ಮೈಗೂಡಿಸಿಕೊಂಡವೂ ಆಗಿದ್ದವು.
ಇವತ್ತು ಅದೇ ಮಾತನ್ನು ಈ ಸ್ಪರ್ಧೆಗೆ ಬಂದಿರುವ ಕತೆಗಳನ್ನು ಮುಂದಿಟ್ಟುಕೊಂಡು ಹೇಳುವುದು ಕಷ್ಟ. ಇಲ್ಲಿ ಹಲವು ಅತ್ಯುತ್ತಮ ಪ್ರಯತ್ನಗಳಿವೆ. ಸಂದಿಗ್ಧವನ್ನು ಕತೆಯ ಮೂಲಕ ಬಗೆಯುವ ಪ್ರಯತ್ನಗಳನ್ನು ಅನೇಕರು ಮಾಡಿದ್ದಾರೆ. ಹೊಸ ವಸ್ತುಗಳಿಗೆ ಕೈ ಚಾಚಿದ್ದಾರೆ. ಅಂಥ ಭರವಸೆಯ ನಡುವೆಯೂ ಹೆಚ್ಚಿನ ಕತೆಗಳು ಅದೇ ಹಳೆಯ ವಸ್ತುವಿನ್ಯಾಸಕ್ಕೆ ಕಟ್ಟುಬಿದ್ದಿರುವುದನ್ನೂ ನೋಡಬಹುದು.
‘ಅಂತರಂಗದೊಳಗೂ ಒಂದು ಸಂಬಂಧ’ ಕತೆಯು ಆಧುನಿಕತೆ ಮತ್ತು ಸಂಪ್ರದಾಯದ ನಡುವಿನ ಸಂಘರ್ಷವನ್ನು ಕುರಿತಾದದ್ದು. ಆಧುನಿಕತೆ ಎಂಬುದು ಓದು, ನಗರಜೀವನ, ಐಷಾರಾಮದಲ್ಲಿ ಇರುವುದಲ್ಲ, ಅದು ಅಂತರ್ಗತವಾದ ಒಂದು ಜೀವನಮೌಲ್ಯ, ಬದುಕನ್ನು ಸುಂದರಗೊಳಿಸುವ ಕ್ರಮ – ಎನ್ನುವುದನ್ನು ಈ ಕತೆ ಬಹಳ ಸೊಗಸಾಗಿ ಹೇಳುತ್ತಹೋಗುತ್ತದೆ. ಈ ಕತೆಯಲ್ಲಿ ಬರುವ ಮೀನಿಕೆಯ ಪಾತ್ರದ ಮೂಲಕ ಕತೆಯ ಅಂತರಂಗವನ್ನು ಕತೆಗಾರರು ಸ್ಪರ್ಶಿಸುವ ಕ್ರಮ ಬಹಳ ಹೊಸದಾಗಿದೆ.
ಆಧುನಿಕದ ಜಂಜಾಟದಲ್ಲಿ ಸಿಲುಕಿಕೊಂಡ ಮನುಷ್ಯನ ಕತೆಯನ್ನು ‘ವ್ಯೂಹ’ ಹೇಳುತ್ತದೆ. ಒಂದು ಮನುಷ್ಯಸಹಜ ಕ್ರಿಯೆ ಕೂಡ ಹೇಗೆ ಒಬ್ಬನನ್ನು ವ್ಯವಸ್ಥೆಯ ಜಾಲದಲ್ಲಿ ಸಿಲುಕಿಸಬಹುದು ಎನ್ನುವುದನ್ನು ಕತೆಗಾರರು ಗಾಢವಾಗಿ ಹೇಳುತ್ತಾ ಹೋಗಿದ್ದಾರೆ.
‘ಮರೀಚಿಕೆ’ ಕತೆ ಮನುಷ್ಯನ ಅಸಹಾಯಕತೆ ಮತ್ತು ಅದನ್ನು ಮೀರಲು ಆತ ಸದಾ ಹವಣಿಸುತ್ತಿರುವುದನ್ನು ಕುರಿತಾದದ್ದು. ಈ ಪ್ರಯತ್ನದಲ್ಲಿ ಅವನಿಗೆ ಎದುರಾಗುವ ಸಂಗತಿಗಳನ್ನೂ ಕತೆಗಾರರು ಸರಿಯಾದ ವಿವರಗಳ ಜತೆ ಕಟ್ಟುತ್ತಾ ಹೋಗಿದ್ದಾರೆ. ಈ ಕತೆ ನಾಯಕನ ಹುಡುಕಾಟದಲ್ಲಿ ಈ ಕಾಲದ ಸಕಲ ಸಮಸ್ಯೆಗಳೂ ಅಡಕವಾದಂತಿದೆ. ಕತೆಗಾರರಿಗೆ ಬಹಳ ಮುಖ್ಯವಾದದ್ದು ಬೇರೆ ಕತೆಗಳ ಓದು. ಜಾಗತಿಕವಾಗಿ ಸಣ್ಣಕತೆ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಅತ್ಯುತ್ತಮವಾದ ಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವುಗಳನ್ನು ಓದುವುದು ಕಥಾವಸ್ತುವನ್ನು ನಿಭಾಯಿಸುವ ಕ್ರಮ ಮತ್ತು ಕ್ರಾಫ್ಟ್ಗೆ ಸಂಬಂಧಿಸಿದಂತೆ ಕತೆಗಾರರಿಗೆ ನೆರವಾಗುತ್ತದೆ ಎಂದು ಹೇಳುತ್ತಾ ಬಹುಮಾನಿತ ಕತೆಗಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.