ಆ ಹಳೆಯ ಪತ್ರ ಸಿಕ್ಕಿ ಬಹಳ ದಿನವಾಗಿರಲಿಲ್ಲ. ನಾಗಪ್ಪ ಮಾಮ ತೀರಿಕೊಂಡಿದ್ದ. ಅವನ ವೈಕುಂಠಸಮಾರಾಧನೆಗೆಂದು ಗೋಕರ್ಣಕ್ಕೆ ಹೋದಾಗ ವಚ್ಚಲತ್ತೆ ಬಂದಿದ್ದಳು. ಲೋಕಾಭಿರಾಮದ ಮಾತಿನ ನಂತರ ಅವಳ ಬಳಿ ಭೀಮಬೊಪ್ಪನ ಸಾವಿನ ಬಗ್ಗೆ ಕೇಳಿದ್ದೆ. ಅವಳು ನನ್ನಿಂದ ನಿರೀಕ್ಷಿಸದ ಪ್ರಶ್ನೆಗೆ ಗಾಬರಿಯಾಗಿದ್ದಳು. ನಿನ್ನ ಹಳೆಯ ಪತ್ರ ಸಿಕ್ಕಿತು ಅದರಲ್ಲಿ ನೋಡಿದೆ ಎಂದೆ. ವಚ್ಚಲತ್ತೆ ಅಬ್ಬಾ ಎಂದು ದಂಗಾದಳು. “ಕಾಣಕೋಣದ ನಮ್ಮ ಮನೆಗೆ ಬಾ. ಅಲ್ಲಿ ಮಲ್ಲಿಕಾರ್ಜುನ ದೇವರ ದರ್ಶನ ಮಾಡಿದಂತೆಯೂ ಆಯಿತು, ಹಾಗೇ ಒಂದಿಡೀ ರಾತ್ರಿ ಕುಳಿತು ಭೀಮಬೊಪ್ಪನ ಕತೆ ಹೇಳುತ್ತೇನೆ ಆಗದೇ?’’ ಎಂದಳು. ನನಗೆ ತಿಳಿದುಕೊಳ್ಳುವ ಹಂಬಲ. ಅವನ ಅಂತ್ಯಕ್ರಿಯೆ ಕಥೆ ಏನು? ಎಂದೆ. “ಭೀಮಬೊಪ್ಪನ ಕತೆ ಎಂದರೆ ಮೀನಿಕೆಯೂ ಬರಬೇಕು. ರಾಮನ ಸಂಗಡ ಸೀತೆ ಬಂದರಷ್ಟೇ ರಾಮಾಯಣ ಪೂರ್ಣವಾಗುವುದಲ್ಲವೇ? ಹಾಗೆ’’ ಎಂದವಳೇ ಎದ್ದು ಇನ್ನೊಂದಿನ ಹೇಳುತ್ತೇನೆ ಎಂದು ನೆಂಟರ ಗುಂಪಿನಲ್ಲಿ ಸೇರಿಹೋಗಿದ್ದಳು.
ಮೊನ್ನೆ ಭೀಮಬೊಪ್ಪ ತೀರಿಕೊಂಡ. ಅವನ ಅಂತಿಮಕ್ರಿಯೆಯೇ ಒಂದು ಕಥೆ ಆಗಿಬಿಟ್ಟಿತು’. ಹಳೆಯ ಪತ್ರ ಒಂದರ ಸಾಲು ಒಗಟಿನಂತೆ ಎಷ್ಟು ಕಾಡಿತೆಂದರೆ ಅದರ ಒಳ ಅರ್ಥವನ್ನು ಕಂಡುಹಿಡಿಯುವವರೆಗೆ ಸಮಾಧಾನ ಇರಲಿಲ್ಲ. ಅಪ್ಪ ಜಗುಲಿಯ ಮೇಲೆ ಕುಳಿತು ಮಾಸಿದ ಕೆಂಪು ಕೈಚೀಲದಿಂದ ಹಳೆಯ ಕಾಗದಪತ್ರಗಳನ್ನು ಹೊರತೆಗೆದು, ಹರಡಿಕೊಂಡು ಏನೇನೋ ಹುಡುಕುತ್ತಿದ್ದ. ಮರಳಿ ಕಾಗದ ಪತ್ರಗಳನ್ನು ಚೀಲದಲ್ಲಿ ತುಂಬಿ ಕಬ್ಬಿಣದ ಟ್ರಂಕ್ನಲ್ಲಿ ಇಡುವಾಗ ಅವನ ಕಣ್ತಪ್ಪಿಯೊ ಏನೊ ಹಳೆಯ ಅಂತರ್ದೇಶೀಯ ಪತ್ರವೊಂದು ಜಗುಲಿಯ ಮೇಲೆ ಬಿದ್ದುಕೊಂಡಿತ್ತು. ಅತಿ ಹಳೆಯದಾದ ಆ ಪತ್ರವನ್ನು ಕುತೂಹಲಕ್ಕಷ್ಟೇ ಎತ್ತಿ ಕಣ್ಣಾಡಿಸಿದೆ. ಅದು ಹತ್ತೊಂಬತ್ತು ನೂರಾ ಅರವತ್ನಾಲ್ಕನೇ ಇಸವಿಯಲ್ಲಿ ಅಪ್ಪನ ತಂಗಿ ವಚ್ಚಲತ್ತೆ ಅಪ್ಪನಿಗೆ ಬರೆದ ಪತ್ರವಾಗಿತ್ತು. ಅದರಲ್ಲಿ ಭೀಮ ಬೊಪ್ಪ ಸತ್ತ ಸುದ್ದಿ ಇತ್ತು.
* * *

ನಾನು ಕಥೆಯೊಂದನ್ನು ಹೀಗೆ ಬರೆಯಲು ಪ್ರಾರಂಭಿಸಿದ್ದಕ್ಕೆ, ಯಾರೋ ತೀರಿಹೋದ ಸುದ್ದಿಯಿಂದ ಕಥೆ ಶುರುಮಾಡಬಾರದಿತ್ತು ಎಂದು ಹಿಮವಂತಿ ತಕರಾರು ತೆಗೆದಳು. “ಕಥೆಯನ್ನು ಸತ್ತ ಸುದ್ದಿಯಿಂದ ಪ್ರಾರಂಭಿಸುತ್ತಿರುವುದಕ್ಕೆ ನನಗೂ ಬೇಸರವಾಗುತ್ತದೆ. ಸಾವಿನ ಕುರಿತು ಬರೆಯಬಾರದು ಎಂದುಕೊಳ್ಳುತ್ತೇನೆ. ಆದರೆ ಸತ್ತವರೇ ನನ್ನನ್ನು ಹುಡುಕಿಕೊಂಡು ಬಂದು ಕಥೆಯಾಗುವೆನೆಂದರೆ ಏನು ಮಾಡಲಿ? ಜೀವಂತ ಇದ್ದವರು ಕಥೆಯಾಗುವುದು ಅಪರೂಪ. ನಿತ್ಯದ ನೂರಾರು ಕಥೆಗಳಲ್ಲಿ ಒಂದು ಪಾತ್ರವಾಗುತ್ತ, ಆಡಿದ ಮಾತನ್ನು ಮರೆಯುತ್ತ ಬದುಕುತ್ತಾರೆ. ಅವರು ಸತ್ತ ನಂತರ ಇದ್ದಕ್ಕಿದ್ದಂತೆ ಕಥೆ ಆಗಿಬಿಡುತ್ತಾರೆ! ಸತ್ತವರೆಲ್ಲ ನೆನಪಾಗುವುದಿಲ್ಲ. ನೆನಪಾದರೆ ಇತಿಹಾಸವಾಗುತ್ತಾರೆ. ಇತಿಹಾಸ ಆದವರು ಕಥೆ ಆಗಿರುತ್ತಾರೆ. ಇತಿಹಾಸ ಎಂದರೆ ನಡೆದುಹೋದ ಕಥೆಯೇ ಅಲ್ಲವೆ?’’ ಎಂದೆ.
ಹಿಮವಂತಿ ಮಹಾಪಾತ್ರ ಒಡಿಸ್ಸಾದ ಹುಡುಗಿ. ಇಂಡಿಯಾ ನೇಪಾಳಗಳ ವೇಶ್ಯೆಯರ ಬದುಕಿನ ಅಧ್ಯಯನಕ್ಕಾಗಿ ಕ್ರೂಗರ್ ಫೌಂಡೇಶನ್ನ ಫೆಲೋಶಿಪ್ ಪಡೆದು ನಮ್ಮಲ್ಲಿಗೆ ಬಂದಿದ್ದಳು. ನಾನು ಸಮಾಜಶಾಸ್ತ್ರ ಪ್ರೊಫೆಸರ್ ಆದ್ದರಿಂದ ‘ನಿನ್ನ ಸಹಕಾರ ಬೇಕು’ ಎಂದಿದ್ದಳು. ಮಲೆನಾಡಿನಲ್ಲಿ ಅನಾದಿಕಾಲದಲ್ಲಿ ವಿಧವೆಯರಿಗೆ ಹುಟ್ಟಿದ ಸಂತಾನವೇ ಒಂದು ವಿಶಿಷ್ಟ ಜಾತಿಯಾಗಿ ರೂಪಾಂತರಗೊAಡ ಬಗ್ಗೆ, ದೇವದಾಸಿಯರ ಬಗ್ಗೆ ಅಧ್ಯಯನ ಅವಳ ಕಾರ್ಯಕ್ರಮವಾಗಿತ್ತು.
ವಲಸೆ ಬಂದು ಗೋಕರ್ಣದಲ್ಲಿ ನೆಲೆನಿಂತ ನೇಪಾಳಿ ಕುಟುಂಬಗಳನ್ನು ಸಂದರ್ಶಿಸಿದ ನಂತರ ಅಧ್ಯಯನಕ್ಕೆ ಅನೂಹ್ಯ ಮಾಹಿತಿ ಸಿಕ್ಕಿದ್ದರಿಂದ ಹಿಮವಂತಿ ಇಂದು ಹುಚ್ಚು ಉಮೇದಿನಲ್ಲಿದ್ದಳು. ನಾವು ಗೋಕರ್ಣದ ಎತ್ತರದ ಗುಡ್ಡದ ಮೇಲೆ ಸಮುದ್ರದತ್ತ ಮುಖಮಾಡಿ ನಿಂತ ಅಯೋರಾ ರೆಸಾರ್ಟ್ನ ರೂಮಿನಲ್ಲಿ ಕುಳಿತು ವಿರಾಮದ ವೇಳೆಯಲ್ಲಿ ನನ್ನ ಕಥೆಯ ಆರಂಭವನ್ನು ಪರಾಮರ್ಶಿಸುತ್ತಿದ್ದೆವು. ನಂತರ ಹಿಮವಂತಿ, ಭಟ್ಟರು ಪ್ರಸಾದ ಎಂದು ದೊನ್ನೆ ತುಂಬಿಕೊಟ್ಟ ಪನಿವಾರವನ್ನು ಎದುರಿಗೆ ಇಟ್ಟುಕೊಂಡು, ಆಗಾಗ ಒಂದೊಂದೇ ಬೇಯಿಸಿದ ಕಡಲೆಕಾಳನ್ನು ಬಾಯಿಗೆ ಹಾಕುತ್ತ ನೋಟ್ಸ್ ತೆಗೆಯತೊಡಗಿದಳು. ನಾನು ಸಮುದ್ರದ ದಿಕ್ಕಿನ ಕಿಟಕಿಯ ಪರದೆ ಸರಿಸಿ ನಿಂತೆ. ಸಮುದ್ರ ಹವೆಯ ಘಾಟು ಗಾಳಿ ಮೂಗಿಗೆ ಸೋಕುತ್ತಿತ್ತು. ದೂರದಲ್ಲಿ ಕಾಣುವ ಸಮುದ್ರ, ಬಿಸಿಲಿಗೆ ಮಿಂಚಿ ನೆಗೆಯುತ್ತಿರುವ ತೆರೆಗಳು, ದಂಡೆಯ ಮೇಲೆ ಕಪ್ಪುಚುಕ್ಕಿ ಸರಿದಂತೆ ಕಾಣುವ ದೂರದಲ್ಲಿ ಓಡಾಡುವ ಜನರು, ಆಹ್ಲಾದತೆಯ ವಾತಾವರಣದಲ್ಲಿ ಕಥೆ ಬರೆದು ಮುಗಿಸುವ ಹುಕಿ ಬಂದು ಬರೆಯಲು ಕೈಹಚ್ಚಿದೆ. ನನ್ನ ಮುತ್ತಜ್ಜ ಭೀಮ ಬೊಪ್ಪ ಈಗ ಕಥೆ ಆಗಲಿದ್ದಾನೆ. ನಮ್ಮಿಬ್ಬರ ನಡುವೆ ಮೌನ. ಬರೆಯುವಾಗಿನ ಪೆನ್ನು ಹಾಳೆಯ ಸಸಸ ಸದ್ದು. ಹೊರಗೆ ಯಾವುದೋ ಪೊದೆಯ ಮರೆಯಲ್ಲಿ ಅವಿತು ಕುಳಿತು ಸಿಳ್ಳೆ ಹಾಕುವ ಗೋಪಿ ಹಕ್ಕಿಯ ಪ್ರೇಮನಾದದ ಕೂಗು. ಆಗಾಗ ತಲೆಯೆತ್ತಿ ನನ್ನತ್ತ ನೋಡುವ ಹಿಮವಂತಿ.
ಒಂದು ಇತಿಹಾಸ ಎಂದರೆ ನೂರು ಕಥೆ ಇರುತ್ತದೆ ಅಲ್ಲವೆ? ಭೀಮ ಬೊಪ್ಪ ಇತಿಹಾಸವಾಗಿದ್ದ. ಸತ್ತ ನಂತರ ನಮ್ಮ ಸಂಬಂಧಿಕರ ನಡುವೆ ಆಗಾಗ ನೆನಪಾಗುತ್ತಿದ್ದ. ಪ್ರಾಯದ ಗಂಡುಮಕ್ಕಳು ಮದುವೆಯಾಗಲು ನಿರಾಕರಿಸಿದಾಗ ನಮ್ಮ ಹಿರೀಕರು ‘ಭೀಮಬೊಪ್ಪನ ಹಾಗೆ ಆಗುವೆಯಾ?’ ಎನ್ನುತ್ತಿದ್ದರು. ಅಪರೂಪಕ್ಕೆ ಒಮ್ಮೆ ನೆನಪಾಗುವ ಅವನು ಇಂದು ಬೇರೆ ಕಾರಣಕ್ಕೆ ನೆನಪಾಗಿದ್ದ. ಅವನ ಅಂತಿಮ ಕ್ರಿಯೆಯ ಕಾರಣಕ್ಕಾಗಿ. ವಚ್ಚಲತ್ತೆಯ ಪತ್ರದ ಕಾರಣಕ್ಕಾಗಿ. ಅಲ್ಲಿಂದ ನನಗೆ ಭೀಮಬೊಪ್ಪ ಹೇಗೆ ಬದುಕಿದ ಎನ್ನುವುದಕ್ಕಿಂತ ಅವನ ಅಂತ್ಯಕ್ರಿಯೆಯ ಕಥೆ ಕೇಳಬೇಕೆಂಬ ಹುಚ್ಚು ಹತ್ತಿಕೊಂಡಿತು. ಯಾರನ್ನು ಕೇಳುವುದು?
ಉತ್ಥಾನ ಕಥಾಸ್ಪರ್ಧೆ 2023 ತೀರ್ಪುಗಾರರ ಟಿಪ್ಪಣಿ: ಜೋಗಿ : https://utthana.in/?p=14341
ಆ ಹಳೆಯ ಪತ್ರ ಸಿಕ್ಕಿ ಬಹಳ ದಿನವಾಗಿರಲಿಲ್ಲ. ನಾಗಪ್ಪ ಮಾಮ ತೀರಿಕೊಂಡಿದ್ದ. ಅವನ ವೈಕುಂಠಸಮಾರಾಧನೆಗೆಂದು ಗೋಕರ್ಣಕ್ಕೆ ಹೋದಾಗ ವಚ್ಚಲತ್ತೆ ಬಂದಿದ್ದಳು. ಲೋಕಾಭಿರಾಮದ ಮಾತಿನ ನಂತರ ಅವಳ ಬಳಿ ಭೀಮ ಬೊಪ್ಪನ ಸಾವಿನ ಬಗ್ಗೆ ಕೇಳಿದ್ದೆ. ಅವಳು ನನ್ನಿಂದ ನಿರೀಕ್ಷಿಸದ ಪ್ರಶ್ನೆಗೆ ಗಾಬರಿಯಾಗಿದ್ದಳು. “ನಿನ್ನ ಹಳೆಯ ಪತ್ರ ಸಿಕ್ಕಿತು, ಅದರಲ್ಲಿ ನೋಡಿದೆ” ಎಂದೆ. ವಚ್ಚಲತ್ತೆ ಅಬ್ಬಾ ಎಂದು ದಂಗಾದಳು. “ಕಾಣಕೋಣದ ನಮ್ಮ ಮನೆಗೆ ಬಾ. ಅಲ್ಲಿ ಮಲ್ಲಿಕಾರ್ಜುನ ದೇವರ ದರ್ಶನ ಮಾಡಿದಂತೆಯೂ ಆಯಿತು, ಹಾಗೇ ಒಂದಿಡೀ ರಾತ್ರಿ ಕುಳಿತು ಭೀಮಬೊಪ್ಪನ ಕಥೆ ಹೇಳುತ್ತೇನೆ, ಆಗದೇ?’’ ಎಂದಳು. ನನಗೆ ತಿಳಿದುಕೊಳ್ಳುವ ಹಂಬಲ. ‘ಅವನ ಅಂತ್ಯಕ್ರಿಯೆಯ ಕಥೆ ಏನು?’ ಎಂದೆ. “ಭೀಮಬೊಪ್ಪನ ಕಥೆ ಎಂದರೆ ಮೀನಿಕೆಯೂ ಬರಬೇಕು. ರಾಮನ ಸಂಗಡ ಸೀತೆ ಬಂದರಷ್ಟೇ ರಾಮಾಯಣ ಪೂರ್ಣವಾಗುವುದಲ್ಲವೆ? ಹಾಗೆ” ಎಂದವಳೇ ಎದ್ದು ಇನ್ನೊಂದು ದಿನ ಹೇಳುತ್ತೇನೆ ಎಂದು ನೆಂಟರ ಗುಂಪಿನಲ್ಲಿ ಸೇರಿಹೋಗಿದ್ದಳು.
ನಾನು ಅರಗೆಗೆ ಹೋದರೆ ಭೀಮಬೊಪ್ಪನ ಬಲ್ಲ ಹಳೆ ತಲೆಮಾರಿನವರು ಕೆಲವರಾದರೂ ಸಿಗಬಹುದು. ಜಮೀನುದಾರನಾಗಿದ್ದ ಅವನ ಭೂಮಿಯನ್ನು ಟೆನೆನ್ಸಿ ಕಾಯಿದೆಯಲ್ಲಿ ತಮ್ಮದಾಗಿಸಿಕೊಂಡು ಋಣದಲ್ಲಿರುವ ಒಕ್ಕಲು ಮಕ್ಕಳು ಸಿಕ್ಕಾರು. ಆದರೆ ಭೀಮಬೊಪ್ಪನ ಅಂತರಂಗ ಬಲ್ಲವರು ಮಾತ್ರ ಯಾರೂ ಇರಲಿಕ್ಕಿಲ್ಲ. ಅವನನ್ನು ಅರಿತ ಹಳೆ ತಲೆಮಾರಿನವರು ಗತಿಸಿಹೋಗಿರಬಹುದು – ಎಂದು ನಿರ್ಣಯಕ್ಕೆ ಬಂದೆ. ಅರಗೆಯ ದೊಡ್ಡಪ್ಪನ ಮನೆಗೊ, ಮಹೇಶ ಮಾಸ್ತರ ಮನೆಗೊ ಕಾರ್ಯನಿಮಿತ್ತ ಹೋದಾಗ ಈ ವಿಷಯ ಕೇಳಬೇಕು ಎಂದುಕೊಂಡೆ.
ಒಂದು ದಿನ ಅರಗೆಯಿಂದ ದೊಡ್ಡಪ್ಪನೇ ನಮ್ಮ ಮನೆಗೆ ಬಂದ. ಅವನೊಂದಿಗೆ ಉಗ್ರಾಣಿ ಗುಲ್ಲಾನಾಯ್ಕನೂ ಇದ್ದ. ಒಂದಿಷ್ಟು ಸೇಂಗಾ, ಗಿಳಿಮಾವಿನಕಾಯಿಯ ಪೊಟ್ಲೆಯನ್ನು ಧಾರೇಶ್ವರದಿಂದ ಹರನೀರು ತನಕ ಹೊತ್ತುಕೊಂಡು ಬಂದು ಹೈರಾಣಾಗಿದ್ದ. ಸುಮಾರು ಎಂಬತ್ತರ ಆಸುಪಾಸು ಇರುವ ತೀರಾ ವಯಸ್ಸಾದ ಗುಲ್ಲಾ ಬಹಳ ಮಾತುಗಾರನಾಗಿದ್ದ. ಹಳೆಯ ಉಗ್ರಾಣಿ ಆಗಿದ್ದರಿಂದ ಅವನಿಗೆ ಬ್ರಿಟಿಷರ ಕಾಲದ ಚರಿತ್ರೆಯೂ ಗೊತ್ತಿತ್ತು. ಲೋಕಾಭಿರಾಮದ ಮಾತುಕತೆಯ ನಂತರ ಅರಗೆಯ ವಿಷಯದ ನಡುವೆ ನನಗೆ ಮತ್ತೆ ಭೀಮಬೊಪ್ಪ ನೆನಪಾಗಿದ್ದ. ಚಿಕ್ಕಂದಿನಿಂದಲೂ ಭೀಮಬೊಪ್ಪನ ಜೊತೆಗೆ ಇದ್ದ ದೊಡ್ಡಪ್ಪನಿಗೆ ಆತನ ಬಗ್ಗೆ ಎಲ್ಲ ಮಾಹಿತಿ ಗೊತ್ತಿತ್ತು. ಆದರೆ ಹತ್ತು ಪ್ರಶ್ನೆ ಕೇಳಿದರೆ ಒಂದು ಉತ್ತರ ಕೊಡಬಲ್ಲ ಅವನಿಂದ ಹೆಚ್ಚಿನ ಮಾಹಿತಿ ಸಿಗುತ್ತಿರಲಿಲ್ಲ. ಯಾವುದೋ ಪ್ರಶ್ನೆಗೆ ಯಾವುದೋ ಉತ್ತರ ಕೊಟ್ಟು ತಾನೂ ಗೊಂದಲಕ್ಕೆ ಬಿದ್ದು ನಮ್ಮನ್ನೂ ದಿಕ್ಕುತಪ್ಪಿಸುತ್ತಿದ್ದ. ಹೇಳಬಾರದ ಹಲವು ಸಂಗತಿಗಳ ಬಗ್ಗೆ ಅವನಿಗೆ ಅರಿವಿತ್ತು. ನನಗೆ ಕುತೂಹಲ ಮೂಡಿಸಿದ ಭೀಮಬೊಪ್ಪನ ವಿಚಾರ ಕೇಳಿದೆ. ಹೇಳಬಾರದೆಂದೇ ಸಂಕಲ್ಪ ಮಾಡಿದ್ದನೋ ಏನೋ. “ಸತ್ತು ಸ್ವರ್ಗದಲ್ಲಿರೋ ಹಿರೀಕರ ಸುದ್ದಿ ನಿಮಗ್ಯಾಕೆ ಸಣ್ಣವರಿಗೆ?’’ ಎಂದುಬಿಟ್ಟ. ಭೀಮಬೊಪ್ಪನ ಬಗ್ಗೆ ಅಪಾರ ಗೌರವ ಇರುವ ನಮ್ಮ ಕುಟುಂಬಸ್ಥರು ಯಾರೂ ಅವನ ವಿಷಯ ಮಾತಾಡುತ್ತಿದ್ದಿಲ್ಲ.
ಭೀಮಬೊಪ್ಪ ನನ್ನ ಅಪ್ಪನಿಗೆ, ದೊಡ್ಡಪ್ಪನಿಗೆ ಕುಟುಂಬಸ್ಥನೇ. ಹತ್ತಿರದ ಸಂಬಂಧಿ. ಅಜ್ಜನೇ ಆಗಬೇಕು. ಅರಗೆಯ ನನ್ನ ದೊಡ್ಡಪ್ಪನ ಮೂಲಕುಟುಂಬದಲ್ಲಿ ಅವನೇ ಯಜಮಾನನಾಗಿದ್ದ. ಅವನು ಮೂಡಿಗೆರೆಯ ಜೋಶಿ ಕುಟುಂಬದ ಹುಡುಗಿಯನ್ನು ಮದುವೆ ಆಗಿದ್ದ. ಅವಳಿಗೆ ಮಕ್ಕಳಾಗಿರಲಿಲ್ಲ. ಬಹಳ ವರ್ಷ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಒಂದು ದಿನ ಸಂಕ್ರು ಬಾಗದ ಕೆರೆಯಲ್ಲಿ ಬಿದ್ದು ತೀರಿಹೋಗಿದ್ದಳು. ಅದನ್ನೇ ಭೀಮಬೊಪ್ಪ ಮನಸ್ಸಿಗೆ ಹಚ್ಚಿಕೊಂಡ. ಅವನ ಹತ್ತಿರದ ಸಂಬಂಧಿಕರು ಭೀಮಬೊಪ್ಪನನ್ನು ‘ಮತ್ತೊಂದು ಮದುವೆ ಆಗು’ ಎಂದು ಹೇಳುತ್ತಿದ್ದರು. ಆಗ ‘ನೀವಿರುವುದು ನನ್ನನ್ನ ಸಾಕಲೋ ಕತ್ತೆ ಕಾಯಲೋ’ ಎಂದು ಸಿಡುಕುತ್ತಿದ್ದ. ನಾನು ಸತ್ತ ನಂತರ ನನ್ನ ಜಮೀನನ್ನು ಹೊತ್ತುಕೊಂಡು ಹೋಗ್ತೀರೇನೋ ಎಂದು ಗದರಿಸುತ್ತಿದ್ದ. ಅವನ ಮನಸ್ಸಿಗೆ ಬೇಜಾರು ಮಾಡಬಾರದೆಂದು ಮದುವೆಯ ಒತ್ತಾಯ ಬಿಟ್ಟುಬಿಟ್ಟರಂತೆ. ಉದ್ದನೆಯ ಪಂಚೆ ತೊಟ್ಟು ಮುಂದೆ ಇಳಿಬಿದ್ದ ಅದರ ಚುಂಗನ್ನು ಹೆಗಲ ಮೇಲೆ ಹೊದ್ದು, ಬರೀ ಮೈಯಲ್ಲಿ ರೋಮಗಳಿರುವ ಎದೆಯನ್ನು ಉಬ್ಬಿಸಿ ಹೊರಟರೆ ಘಟೋತ್ಕಚನ ಹಾಗೆ ಕಾಣುತ್ತಿದ್ದನಂತೆ. ಇವೆಲ್ಲ ನಮ್ಮ ಹಿರಿಕರಿಂದ ಕೇಳಿದ ಸಂಗತಿಗಳು.
ಸಂಜೆ ಗುಲ್ಲಾನಾಯ್ಕನೊಂದಿಗೆ ತಿರುಗಾಟದ ನೆಪದಲ್ಲಿ ಧಾರೇಶ್ವರದ ಸಮುದ್ರದಂಡೆಗೆ ಹೋಗಿ ಕುಳಿತೆ. ಅವನೊಂದಿಗೆ ಮಾತಾಡುವ ಉಮೇದಿನಲ್ಲಿ ಇವತ್ತು ಸಮುದ್ರದತ್ತ ಲಕ್ಷ್ಯ ಹೋಗಲಿಲ್ಲ. ಗುಲ್ಲಾ ತನ್ನ ಕಾಲದ ಶಾನುಭೋಗರ, ಸಾಹೇಬರ ಪುರಾಣಗಳನ್ನು ಬಿಚ್ಚತೊಡಗಿದ. “ಯಾವ ಯಾವುದೋ ಊರಿಂದ ನೌಕರಿಗೆ ಬಂದವರಿಗೆ ನಮ್ಮಲ್ಲಿಯ ಸೂಳೇರ ನೋಡುವ ಉಮೇದು. ಎರಡು ಮೂರು ಬಾರಿ ಇವರಿಗೆ ರಾತ್ರಿ ಆ ಹೆಂಗಸರ ಮನೆಗೆ ಬಿಟ್ಟು ಬರುವಾಗ ನಾಯಿ ಕಚ್ಚಿಸಿಕೊಂಡಿದ್ದೆ ಗೊತ್ತಾ” ಎಂದ. “ನಮ್ಮಲ್ಲಿಯ ಸೂಳೆಯರಿಗೆ ನಿಯತ್ತು ಇರುತ್ತದೆ. ಇಲ್ಲಿ ಅದು ದಂಧೆ ಅಲ್ಲ, ಬದುಕು” ಎಂದ. ‘ದೇವರ ಸೇವೆ’ ಎಂದ. ನನಗೆ ಅವನ ಯಾವ ಮಾತೂ ಮನಸ್ಸಿಗೆ ಹಿಡಿಯಲಿಲ್ಲ. ನಾನು “ನಿನಗೆ ನನ್ನ ಮುತ್ತಜ್ಜ ಗೊತ್ತಾ?’’ ಎಂದೆ. `ಯಾರು?’ ಎಂದ. “ಭೀಮಬೊಪ್ಪ” ಎಂದೆ. “ಹಬ್ಬು ಹಬ್ಬಯ್ಯ ದೊರೆ ಭೀಮಯ್ಯ” ಎಂದು ರಾಗವಾಗಿ ಹೇಳಿದವನೇ ದಂಡೆಯ ಅತ್ತ-ಇತ್ತ ನೋಡಿಕೊಂಡು ನನ್ನ ಬಳಿ ಬಾಗಿ ಸಣ್ಣಧ್ವನಿಯಲ್ಲಿ ಹೇಳಿದ, “ನಿಮ್ಮ ಮುತ್ತಜ್ಜನಿಗೆ ಮಕ್ಕಳಿರಲಿಲ್ಲ. ಆದರೆ ಅಪ್ಪನಾಗಿದ್ದರು.”
“ಹಾಗೆಂದರೆ?’’ ಎಂದೆ.
“ಅವರಿಗೆ ಮದುವೆ ಆಗಲಿಲ್ಲ, ಹೆಂಡತಿ ಇದ್ದಳು” ಎಂದ.
“ಮಕ್ಕಳಾಗಲಿಲ್ಲ ಎಂದು ಮುತ್ತಜ್ಜಿ ಕೆರೆಯಲ್ಲಿ ಬಿದ್ದು ತೀರಿದ್ದಳಂತಲ್ಲಾ?’’
“ತೀರಿದ್ದು ಅದಕ್ಕಲ್ಲ. ಗಂಡನಿಗೆ ಮದುವೆಯಾಗದ ಮತ್ತೊಂದು ಹೆಂಡತಿ ಇದ್ದಿದ್ದಕ್ಕೆ. ಅವಳಿಗೆ ಮಕ್ಕಳಾಗಿದ್ದಕ್ಕೆ, ಮನಸ್ಸಿಗೆ ಹಚ್ಚಿಕೊಂಡು ಸತ್ತುಹೋದಳು.’’
“ನಮ್ಮ ಕುಟುಂಬಸ್ಥರು ಈ ವಿಷಯ ಹೇಳುವುದೇ ಇಲ್ಲ. ಅವರ ನಂಬಿಕೆನೇ ಬೇರೆ” ಎಂದೆ.
ಮನೆತನದ ಮಾನ ಕಾಪಾಡೋದಕ್ಕೆ ಭೀಮ ಒಡೆಯನ ಮೇಲಿನ ಗೌರವದಿಂದ… ಇದು ಇಡೀ ಊರಿಗೆ ಗೊತ್ತಿರುವ ವಿಚಾರವೇ ಆಗಿತ್ತು. ಆದರೆ ಅವರ ಸಂಬಂಧದ ಬಗ್ಗೆ ಗೌರವವೂ ಇತ್ತು. ಮದುವೆ ಆಗದೆ ಪಕ್ಕಾ ಗಂಡ-ಹೆಂಡತಿ ಅಂತೆಯೇ ಬದುಕಿದ್ದರು. ಗಂಡ-ಹೆಂಡತಿಯೆ ಆಗಿದ್ದರು” ಎಂದ. ಗುಲ್ಲಾನಾಯ್ಕ ನನ್ನ ಮುತ್ತಜ್ಜನನ್ನು ತಾರೀಪು ಮಾಡುತ್ತಿದ್ದಾನೆಯೊ ತೆಗಳುತ್ತಿದ್ದಾನೆಯೊ ನನಗೆ ಅರ್ಥವಾಗಲಿಲ್ಲ. ಮಸುಕು ಕತ್ತಲೆಯಲ್ಲಿ ದೂರದಲ್ಲಿ ಎಲ್ಲೋ ‘ಐಸಾ ಐಸಾ’ ಎಂದು ಲಯವಾಗಿ ಅರಚುವ ಗದ್ದಲ ಕೇಳಿತು. ಸಮುದ್ರದತ್ತ ನೋಡಿದೆ. ದೋಣಿಯ ಮೇಲೆ ಕಮಾನಾಗಿ ಕಟ್ಟಿದ ಚಾವಣಿಗೆ ಲಾಂದ್ರ ತೂಗಬಿಟ್ಟು ಭಾರವಾದ ದೋಣಿಯನ್ನು ಸಮುದ್ರದತ್ತ ದೂಡುವ ಪ್ರಯತ್ನದಲ್ಲಿ, ನೀರಿಗೆ ಇಳಿಸುತ್ತಿದ್ದ ಬೆಸ್ತರ ಗುಂಪೊಂದು ಬದುಕಿನ ಹೋರಾಟಕ್ಕೆ ಸಜ್ಜಾಗುತ್ತಿತ್ತು. “ನೋಡಿ ಅವರು ಇನ್ನೂ ಬೆಳಗು ಸುರಿಗೆ ಮರಳಿ ಬರುತ್ತಾರೆ. ಅಲ್ಲಿಯವರೆಗೆ ನೀರಿನೊಡನೆ ಹೋರಾಟ ಪಾಪ” ಎಂದ ಗುಲ್ಲಾ. “ನೀರಿನಲ್ಲೆ ಸ್ವರ್ಗ-ನರಕ ಕಾಣುತ್ತಾರೆ. ಮೀನು ಸಿಕ್ಕರೆ ಬದುಕು, ಏನಾದರೂ ಅವಘಡ ಸಂಭವಿಸಿದರೆ ಮುಗೀತು” ಎಂದೆ. “ಹಾಗಾಗುವುದೇ ಇಲ್ಲ, ದೇವರು ಅವರ ಬೆನ್ನ ಹಿಂದೆ ಇರುತ್ತಾನೆ. ದೇವರ ಮೇಲಿನ ನಂಬಿಕೆಯೇ ಸಮ್ಮಂಧ ಬೆಸೆಯುವುದು, ಧರ್ಮ ಕಾಪಾಡೋದು…” ಅರ್ಧ ಗಂಟೆ ಇಂತಹದೇ ಮಾತಿನಲ್ಲಿ ಕಳೆದ. ನನಗೆ ಗುಲ್ಲಾ ನಾಯ್ಕನ ಮಾತು ಅರ್ಥವಾಗಲಿಲ್ಲ, ಬೇಸರ ತರಿಸುತ್ತಿತ್ತು. ಆಗ ಸಮುದ್ರದ ಕಡೆಯಿಂದ ಬೀಸುತ್ತಿದ್ದ ಮೈಗೆ ಹಿತ ಕೊಡುತ್ತಿದ್ದ ತಂಗಾಳಿ, ಜೋರಾಗಿ ಬೀಸಲು ಪ್ರಾರಂಭಿಸಿದ್ದಕ್ಕೋ ಏನೋ ಈಗ ಮೈಗೆ ಚಳಿ ಹುಟ್ಟಿಸುತ್ತಿತ್ತು.
“ನಿಯತ್ತು ನಂಬಿಕೆ ಇದ್ದರೆ ಬದುಕು ಭೂಮಿ ಮೇಲೂ ಅಷ್ಟೆಯಾ, ನೀರಿನಲ್ಲೂ ಅಷ್ಟೆಯಾ”. ಗುಲ್ಲಾ ನಾಯ್ಕ ತನ್ನ ಮಾತಿನ ಓಘದಿಂದ ಇನ್ನೂ ಹೊರಗೆ ಬಂದಿರಲಿಲ್ಲ. ದೂರದ ಸಮುದ್ರದಲ್ಲಿ ದೃಷ್ಟಿ ನೆಟ್ಟು ಮಾತನಾಡುತ್ತಿದ್ದ. “ಯಾರ ಬಗ್ಗೆ ಮಾತಾಡಿದ್ದು” ಎಂದೆ. “ನಿಮ್ಮ ಮುತ್ತಜ್ಜನ ಬದುಕಿನ ಬಗ್ಗೆ, ಆ ತರಹ ಬದುಕಿದ ನೂರಾರು ಜನರ ಬಗ್ಗೆ, ಅವರು ಹಿಡಿದುಕೊಂಡ ಜೀವನದ ಬಗ್ಗೆ” ಎಂದ. ಇನ್ನೂ ನಿಗೂಢ ವಿಷಯಗಳನ್ನು ಏನೇನೋ ಹೇಳಲಿದ್ದಾನೆ. ಅದಕ್ಕೆಂದೇ ಪೀಠಿಕೆ ಹಾಕುತ್ತಿದ್ದಾನೆ. ಅವನಿಗೆ ಆತಂಕಪಡಿಸದೆ ಸುಮ್ಮನೆ ಕೇಳಿ ಬಿಡಬೇಕು. ಹಾಗೆಂದು ಯೋಚಿಸುತ್ತಿದ್ದೆ. ಆದರೆ ಮನಸ್ಸಿನ ಬೇಸರದಿಂದ ಗುಲ್ಲಜ್ಜ, ಮಾತು ನಿಲ್ಲಿಸಿ ಮೌನವಾಗಿಬಿಟ್ಟ. ನಾನೇ “ಹೇಳು ಗುಲ್ಲಜ್ಜ, ನನ್ನ ಮುತ್ತಜ್ಜನ ಆ ಹೆಂಡತಿ ಯಾರು?’’ ನಾನು ಇದನ್ನು ಕೇಳಲಿ ಎಂದು ಕಾಯುತ್ತಿದ್ದನೇನೋ ಎನ್ನುವ ತರಹ ತಕ್ಷಣ ನನ್ನತ್ತ ತಿರುಗಿ “ಮೀನಿಕೇ” ಎಂದ. ಕೆಲವು ದಿವಸಗಳ ಹಿಂದೆ ಈ ಹೆಸರು ಕೇಳಿದ್ದೆನಲ್ಲ. ಗೋಕರ್ಣದಲ್ಲಿ ನಾಗಪ್ಪಮಾಮನ ದಿನ ಕಾರ್ಯದಲ್ಲಿ ಸಿಕ್ಕ ವಚ್ಚಲತ್ತೆಯೇ ಹೇಳಿ ಹೋಗಿದ್ದಳು. ಭೀಮ ಬೊಪ್ಪನ ಕಥೆ ಎಂದರೆ ಮೀನಿಕೆಯೂ ಬರಬೇಕು ಅಂತ. ಇವನೂ ಅದೇ ಹೆಸರು ತೆಗೆದ. ಈಗ ನನ್ನ ಊಹೆ ಕಲ್ಪನೆಯೂ ಮೀರಿ ವಿಷಯ ಸ್ಪಷ್ಟವಾಯಿತು. ಭೀಮಬೊಪ್ಪ-ಮೀನಿಕೆಯರ ಜೋಡಿ ಕಥೆ ಆಗಿಬಿಟ್ಟಿದ್ದರು. ಜನಪದ ಕಥೆ ಎಂದರೂ ಸರಿ. ಪತ್ರದಲ್ಲಿ ವಚ್ಚಲತ್ತೆ ದಾಖಲಿಸಿದ ಭೀಮಬೊಪ್ಪನ ಅಂತಿಮ ಕ್ರಿಯೆ ಕಥೆಯಾಗಿದ್ದಕ್ಕೂ ಸಂಬಂಧ ಇರಬಹುದೆಂದು ಊಹಿಸಿದೆ. ಈಗ ನನಗೆ ಅದಕ್ಕಿಂತ ಹೆಚ್ಚಾಗಿ ಅವರು-ಮೀನಿಕೆ ಬದುಕಿದ ಪರಿಯನ್ನು ತಿಳಿದುಕೊಳ್ಳುವ ಕುತೂಹಲವಾಯಿತು. ಅದನ್ನು ತಿಳಿದುಕೊಂಡರೆ ಅಂತ್ಯಕ್ರಿಯೆಯ ರಾದ್ಧಾಂತವೂ ಹೊರಗೆ ಬಂದೇ ಬರುತ್ತದೆ ಎಂದು ನನಗೆ ಖಾತ್ರಿ ಇತ್ತು.
ದಂಡೆಗೆ ಮುಕುರಿದ ಕತ್ತಲು ಭಯ ಹುಟ್ಟಿಸುತ್ತಿತ್ತು. ಸಮುದ್ರದ ತೆರೆಗಳು ದೊಡ್ಡದಾಗಿ ಏಳತೊಡಗಿದವು. ಭೋರ್ಗರೆತ ಜೋರಾಯಿತು. ಬೀಸುವ ಗಾಳಿಗೆ ಚಳಿ ಜೋರಾಗುತ್ತಿತ್ತು. ಮನೆಯತ್ತ ಹೊರಟೆವು.
ಅಂಬಿಗರ ಕೇರಿ ದಾಟಿ, ಗೌಜುಗದ್ದಲ ಕಡಮೆ ಆದ ನಂತರ “ಹೇಳು ಗುಲ್ಲಜ್ಜ ಅವರ ಜೀವನದ ಕಥೆಯಾ” ಎಂದೆ.
“ಈ ವಿಷಯ ನನ್ನ ಕೇಳಿದರೆ ಹೆಂಗೆ? ಆ ಹಡಬೆ ಹೆಂಗಸಿನ ಬಳಿಯೇ ಕೇಳಬೇಕು” ಎಂದ.
“ಅವಳು ಜೀವಂತ ಇದ್ದಾಳಾ? ಮೀನಿಕೆ ಹುಡುಕಿಕೊಂಡು ನಾ ಎಲ್ಲಿಗೆ ಹೋಗಲಿ?’’ ಎಂದೆ. “ನೀವು ಅರಗೆಗೆ ಬಂದರೆ ಅವಳು ಸಿಕ್ಕೇ ಸಿಗುತ್ತಾಳೆ. ಈಗಲೂ ನವ ತರುಣಿಯ ಹಾಗೆ ರೂಪ ಮಾಡಿಕೊಂಡು ಅಡ್ಡಾಡುತ್ತಾಳೆ. ಎಂಬತ್ತರ ಸನಿಹ ಬಂದರೂ ಹಾಗೆ ಕಾಣಿಸುವುದಿಲ್ಲ. ನಿಮ್ಮವರ ಮನೆಗೆ ನಾಕಾರು ಬಾರಿ ಅಡ್ಡಾಡುತ್ತ, ಜಗುಲಿಯ ಮೇಲೆ ಕುಳಿತು ಸುದ್ದಿ ಹೇಳುತ್ತ ನಿಮ್ಮವಳೆ ಆಗಿಬಿಟ್ಟಿದ್ದಾಳೆ. ರೂಪ, ಬಣ್ಣ, ಗುಣ, ನಡತೆ, ಭಾಷೆ ಯಾರೂ ಅಲ್ಲ ಅನ್ನುವ ಹಾಗಿಲ್ಲ. ನಿಮ್ಮ ಭೀಮಬೊಪ್ಪನೇ ತನ್ನ ಜಾತಿ ಗುಣ ರಿವಾಜುಗಳನ್ನು ಧಾರೆಯೆರೆದುಬಿಟ್ಟನೇನೋ ಎನ್ನುವ ತರಹ ಅಥವಾ ಅವರಿಂದ ಇವಳೇ ಹೀರಿಕೊಂಡಳೇನೋ ಎನ್ನುವ ತರಹ” ಎಂದ. ಮನಸ್ಸಿನಲ್ಲಿ ಅರಗೆ ದೊಡ್ಡಪ್ಪನ ಮನೆಗೆ ಹೋಗಬೇಕು ಎಂದು ನಿರ್ಧರಿಸಿಕೊಂಡೆ.
ನಾನು ಈ ಹಿಂದೆಯೂ ಹೀಗೆ ಸಂಬಂಧದ ಶೋಧ ಪ್ರಯತ್ನಕ್ಕೆ ಬಿದ್ದಿದ್ದುಂಟು. ನನ್ನ ಕುಟುಂಬದ, ಸಂಬಂಧಿಕರ ನಡುವೆ ಎಂದೋ ನಡೆದುಹೋದ ಘಟನೆಗಳನ್ನು, ಮರೆತುಹೋದ ವ್ಯಕ್ತಿಗಳನ್ನು ಪತ್ತೆಹಚ್ಚಿದ್ದುಂಟು. ನಾನು ನನ್ನ ಮನೆತನದ ಹಳೆಯ ವಿಷಯಗಳನ್ನೆಲ್ಲ ಶೋಧ ಮಾಡುವುದು ಕಂಡು ಅಮ್ಮ ಸಿಡುಕಿದ್ದಳು. ನೀನು ಇತಿಹಾಸ ಹುಡುಕುವುದರಲ್ಲಿ ಜಾಣನಿರಬಹುದು. ಮನೆಯವರ ನೆಮ್ಮದಿ ಕೆಡಿಸಲು ಹಳೆಯ ವಿಷಯವನ್ನು ಕೆರೆಯುವುದಕ್ಕೆ ನನ್ನ ಒಪ್ಪಿಗೆ ಇಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲ – ಎಂದಿದ್ದಳು. ಅವಳ ಆತಂಕಕ್ಕೆ, ನನಗೆ ನೀಡಿದ ಎಚ್ಚರಿಕೆಗೆ ಏನೇನು ಕಾರಣ ಇದ್ದವೋ! ನನಗೆ ಹೊಳೆದದ್ದು ಇಷ್ಟು. ಕುಟುಂಬ ಎಂದರೆ ಹರಿವ ಹೊಳೆ ಇದ್ದಂತೆ. ಶುದ್ಧನೀರಿಗೆ ಎಲ್ಲಿಂದಲೋ ಹರಿದು ಬರುವ ಮಲಿನನೀರು ಸೇರುತ್ತ, ಶುದ್ಧನೀರಿನ ಹರಿವಿನ ಬಲ ಹೆಚ್ಚಾದಂತೆ ಶುದ್ಧಜಲವಾಗಿಯೇ ಸಾಗುವ ನದಿ ಎಂದರೂ ಸರಿಯೇ! ಐದಾರು ತಲೆಮಾರುಗಳ ಹಿಂದೆಯೊ ಅಥವಾ ಹತ್ತಾರು ತಲೆಮಾರುಗಳ ಹಿಂದೆಯೊ ನಮ್ಮ ಹಿರಿಕರ ಪೈಕಿ ಯಾರೋ ಒಬ್ಬ ಬೇರೆ ಜಾತಿ ಪಂಗಡ ಅಥವಾ ಮತದವರನ್ನು ಮದುವೆಯಾಗಿ ಅವರಿಗೆ ಸಂತಾನ ಹುಟ್ಟಿ ಮತ್ತೆ ಸ್ವಂತ ಜಾತಿಯ ಜೊತೆ ಅಂತಹ ಸಂತಾನದ ವೈವಾಹಿಕ ಸಂಬಂಧದ ಕೊಂಡಿ ಬೆಸೆದು ತಾವು ಶುದ್ಧ ಶುದ್ಧ ಎಂದು ಭ್ರಮಿಸುವ ಮಂದಿಗೆ ನನ್ನ ಶೋಧ ನಿರಾಶೆ ಉಂಟುಮಾಡಬಹುದು. ಹಾಗೆ ಹೆಚ್ಚುಕಡಮೆ ಯಾವ ಮನೆತನ ತಾನೆ ಶುದ್ಧ ಇರುತ್ತದೆ! ಹೆಗ್ಗರ್ಸೆಯ ನನ್ನ ವೃದ್ಧ ಮಿತ್ರ ಮಂಜುನಾಥ ಹೆಗಡೆ ಎಂದೋ ಹೇಳಿದ್ದರು – ಕಾಲ ಕಳೆದ ಮೇಲೆ ಭೂಮಿಯೇ ಶುದ್ಧವಂತೆ. ಮನೆತನ, ಸಂತತಿ, ಕುಟುಂಬದ ವಿಚಾರದಲ್ಲೂ ಹಾಗೆಯೇ ಅಲ್ಲವೆ?
ಹಿಮವಂತಿಗೆ ದೀರ್ಘ ಕೆಲಸ ಬೋರ್ ಎನ್ನಿಸತೊಡಗಿತು. ರಿಲ್ಯಾಕ್ಸ್ ಆಗಲು ನನ್ನತ್ತ ತಿರುಗಿ ಕಥೆಯ ಬಗ್ಗೆ ಹೇಳು ಎಂದಳು. ಬರೆಯುವುದನ್ನು ನಿಲ್ಲಿಸಿ ಚರ್ಚಿಸತೊಡಗಿದಳು. “ಜಗತ್ತಿನ ಎಲ್ಲ ಕುಟುಂಬಗಳೂ ಮಲಿನ ಎನ್ನುತ್ತೀಯಾ?’’ ಎಂದಳು. “ಮಲಿನ ಅಲ್ಲ, ಸಂಕರ” ಎಂದೆ. “ನನ್ನ ಕುಟುಂಬವು ಶುದ್ಧ ಅಲ್ಲವಾ?” ಎಂದಳು. “ನೀನು ಬ್ರಾಹ್ಮಣಳಾಗಿದ್ದೂ ಮುಂಗೋಲಿಯನ್ ಬುಡಕಟ್ಟಿನವರ ತರಹ. ನಿನ್ನ ಕಪ್ಪೆಯಂತಹ ನೆಪ್ಪೆ ಮೂಗಿಗೆ ಕಾರಣ ಏನು? ಊಹಿಸು” ಎಂದೆ. “ಭಾವನಾತ್ಮಕ ಸಂಬಂಧಗಳು, ಅನಿವಾರ್ಯ ಪರಿಸ್ಥಿತಿ ಯಾವುದೋ ಕುಲದ ಜೊತೆ ಸಮ್ಮಂಧದ ಕೊಂಡಿ ಬೆಸೆದು ಬಿಡುತ್ತವೆ. ನಮಗೆ ಗೊತ್ತಿರುವಷ್ಟು ಹಿಂದಿನ ತಲೆಮಾರಿನಲ್ಲಿ ಹಾಗಾಗದೆ ಇರಬಹುದು. ನಾವು ನೋಡದ ತಿಳಿಯದ ಹತ್ತಾರು ತಲೆಮಾರುಗಳ ಹಿಂದೆ ತಳಿ ಶುದ್ಧ ಎಂದು ಕಂಡವರಾರು?” ಎಂದಳು. ನನ್ನ ವಾದವೂ ಅದೇ ಎಂದೆ.
ಈಗ ಭೀಮಬೊಪ್ಪನ ಸಂಬಂಧದ ಕಥೆ ಕೇಳಬೇಕು. ಆತ ಜೀವಂತ ಇದ್ದರೆ ಅವನನ್ನೇ ಕೇಳಬಹುದಿತ್ತು. ತೊಂದರೆ ಇಲ್ಲ. ಮೀನಿಕೆ ಇದ್ದಾಳೆ. ಅವಳ ಕಥೆ ಎಂದರೆ ಭೀಮಬೊಪ್ಪನ ಕಥೆಯೇ ಅಲ್ಲವೆ?
* * *
ಅನಂತಜ್ಜನ ಶ್ರಾದ್ಧದ ನೆಪ ಮಾಡಿಕೊಂಡು ಅಂತೂ ಅರಗೆಗೆ ಹೋದೆ. ನನ್ನನ್ನು ಕಂಡು ದೊಡ್ಡಮ್ಮ ಚೈತನ್ಯ ಬಂದವಳ ತರಹ ಹಿಗ್ಗಿಹೋದಳು. “ನಮ್ಮ ಮನೆಯ ಮಕ್ಕಳಿಗೆ ಬುದ್ಧಿ ಇಲ್ಲ. ಹೆಣ್ಣುಮಕ್ಕಳೂ ಅಷ್ಟೆ, ಗಂಡುಮಕ್ಕಳೂ ಅಷ್ಟೆ. ಬೊಂಬಾಯಿ, ಪಣಜಿ ಸೇರಿದ ಮೇಲೆ ಅವರಿಗೆ ಮನೆಯೂ ಬೇಡ, ಜಮೀನೂ ಬೇಡ, ಅಪ್ಪ-ಅಮ್ಮನೂ ಬೇಡ. ಹತ್ತಿರದಲ್ಲಿರುವ ನಿನಗಾದರೂ ಈ ಮುದುಕರ ನೆನಪಾಗುವುದು ಬೇಡವಾ?” ಎಂದು ಅತ್ತಳು. ದುಃಖ ಬಂತು. “ನೀನು ನಾಲ್ಕು ದಿನ ಉಳಿದೇ ಹೋಗಬೇಕು” ಎಂದು ಹಟ ಮಾಡಿದಳು, “ಆಯಿತು” ಎಂದೆ.
ಬೆಳಗ್ಗೆ ಆಸರಿಗೆ ಮುಗಿಸಿ ಜಗುಲಿಯ ಮೇಲೆ ಕುಳಿತೆ. ಮುದುಕಿಯೊಬ್ಬಳು ಪತ್ತಲಸೊಪ್ಪಿನ ಬಳ್ಳಿ ರಾಶಿ ಹಿಡಿದುಕೊಂಡು ಜಗುಲಿಗೆ ಬಂದಳು. ಉದ್ದಕ್ಕೆ ಕಾಲು ಚಾಚಿ ಕುಳಿತು, ಪಾದಗಳಿಗೆ ಕನ್ನಡಿಯನ್ನು ವಾಲಿಸಿ ಇಟ್ಟುಕೊಂಡು ತಲೆ ಬಾಚಿಕೊಳ್ಳುತ್ತಿದ್ದ ದೊಡ್ಡಮ್ಮ “ತಂದ್ಯಾ?’’ ಎಂದಳು. ನನ್ನತ್ತ ತಿರುಗಿ “ನಿನಗೆ ಪತ್ಲದಡಿ ಪದಾರ್ಥ ಮಾಡಿ ಹಾಕುತ್ತೇನೆ ಆಗದೆ?’’ ಎಂದಳು. ಆ ಮುದುಕಿ ನನ್ನತ್ತ ಕೈ ತೋರಿಸಿ ದೊಡ್ಡಮ್ಮನ ಹತ್ತಿರ ಸನ್ನೆಯಲ್ಲೆ ‘ಯಾರು?’ ಎಂದು ಕೇಳಿದಳು. “ಹರಿನೀರಿನ ಮೈದುನನ ಮಗನಲ್ಲವೇ?” ದೊಡ್ಡಮ್ಮ ಬಾಯಿ ಒಡೆದೇ ಹೇಳಿದಳು. “ಹಿಳ್ಳೆ ಶಿಶು ಇದ್ದಾಗ ಕಂಡಿದ್ದು, ಆನಂತರ ಈಗಲೇ ನೋಡುತ್ತಿದ್ದೇನೆ” ಎಂದಳು ಮುದುಕಿ. ಅವಳು ಮುದುಕಿ ಆದರೂ ಗಟ್ಟಿಯಾಗಿಯೇ ಇದ್ದಳು. ಹಲ್ಲುಗಳೆಲ್ಲ ಬಿದ್ದು ಹೋಗಿ ಆಗಾಗ ಬೊಚ್ಚು ಬಾಯಿಯನ್ನು ಮುದುಡಿಸುತ್ತ, ಅರಳಿಸುತ್ತ ತುಂಟ ಕಣ್ಣುಗಳಿಂದ ಸುತ್ತಲೂ ನೋಡುತ್ತ, ನನ್ನತ್ತ ನಗೆ ಬೀರಿದಳು. ಅವಳು ಮುದುಕಿ ಅಂತ ಅನ್ನಿಸಲೇ ಇಲ್ಲ. ಒಳಗೆ ಹೋದ ದೊಡ್ಡಮ್ಮ “ಮೀನಿಕಾ, ಚಹಾ ಕುಡಿದುಕೊಂಡೇ ಹೋಗು” ಎಂದಳು. ‘ಮೀನಿಕಾ’ ಎಂದು ದೊಡ್ಡಮ್ಮ ಕರೆದದ್ದು ಕೇಳಿ ಅವಳತ್ತ ತಿರುಗಿ ನೋಡಿದೆ. ಇವಳೇ ಅಲ್ಲವೆ ಭೀಮಬೊಪ್ಪನ ಪ್ಯಾಣಿ? ಅವಳ ಚಹರೆಯ ಬಗ್ಗೆ ಗುಲ್ಲಾನಾಯ್ಕ ಹೇಳಿದ್ದು ಸರಿ ಇತ್ತು. ಹರಾಮಿ ಮುದುಕಿಯಂತೇನೂ ಕಾಣಿಸಲಿಲ್ಲ. ಅವಳ ಬಳಿ ನನ್ನ ಮುತ್ತಜ್ಜನ ಕಥೆ ಕೇಳಬಹುದು ಎಂದು ಅನ್ನಿಸಿತ್ತು. ಹಾಗೇ ಕ್ಷಣಕಾಲದಲ್ಲೇ ಮೀನಿಕಾಳೊಂದಿಗೆ ಮಾತನಾಡಲು ಮನಸ್ಸು ಅಳುಕಿತು. ಗುಲ್ಲಾನಾಯ್ಕನಿಂದ ಮೀನಿಕಾ ಜೀವಂತ ಇದ್ದಾಳೆ ಎಂದು ತಿಳಿದುಕೊಂಡ ನಂತರವೂ, ಅವಳ ನೆನಪಾದಾಗಲೆಲ್ಲ ಏನೇನೋ ಪ್ರಶ್ನೆ ಕೇಳಿ ವಿಚಾರ ತಿಳಿದುಕೊಳ್ಳಲು ಮನಸ್ಸಿನಲ್ಲೇ ಗುರುತು ಹಾಕುತ್ತಿದ್ದೆ. ಈಗ ಮೀನಿಕಾ ಅಲಾಯ್ದ ಎದುರಿಗೆ ಸಿಕ್ಕಿದ್ದಾಳೆ. ಆದರೆ ಮಾತೇ ಬರುತ್ತಿಲ್ಲ. ಅವಳೊಂದಿಗೆ ಮಾತಾಡಲು ಹೆದರಿಕೆ. ಕ್ಷಣಕಾಲದಲ್ಲೇ ನನ್ನ ಅಳುಕಿಗೂ ಕಾರಣ ಹೊಳೆದುಬಿಟ್ಟಿತು. ಭೀಮಬೊಪ್ಪ-ಮೀನಿಕಾ ಸಂಬಂಧ ಅನೈತಿಕವಾದದ್ದು. ಯಾರೂ ಇಷ್ಟಪಡಲಾರದ್ದು. ನಾನು ಸಹಜವಾಗಿ ಪ್ರಶ್ನೆ ಕೇಳಿದರೂ ಅದು ಅವರ ಅನೈತಿಕ ಸಂಬಂಧದ ಸುತ್ತಲೇ ಇರುತ್ತದೆ. ‘ನಿನ್ನ ಮುತ್ತಜ್ಜನಿಗೆ ಮದುವೆ ಆಗಲಿಲ್ಲ, ಹೆಂಡತಿ ಇದ್ದಳು…’ ಗುಲ್ಲಾ ಹೇಳಿದ ಮಾತು ಪದೇಪದೇ ನೆನಪಾಗುತ್ತಿದೆ. “ನಿನ್ನದು ಯಾವ ಕೆಲಸ?’’ ಮೀನಿಕಾ ಸಹಜವಾಗಿ ಕೇಳಿದಳು. “ನಾನು ಕಾಲೇಜಿನಲ್ಲಿ ಮಾಸ್ತರ” ಅವಳಿಗೆ ತಿಳಿಯುವಂತೆ ಹೇಳಿದೆ. ನಗೆ ಬೀರಿದಳು. “ನಿನ್ನ ಬಗ್ಗೆ ಅಪ್ಪ-ಅಮ್ಮ ಆಗಾಗ ನೆನಪು ಮಾಡಿ ಮಾತಾಡುತ್ತಾರೆ” ಎಂದೆ. ಹಣೆ ಚಚ್ಚಿಕೊಳ್ಳುತ್ತ “ನನ್ನ ಕರ್ಮ, ಎಲ್ಲರೂ ಎತ್ತಿ ಆಡುವಂತೆ ಬದುಕಿಬಿಟ್ಟೆ” ಎಂದಳು. “ನಿನ್ನ ಬಗ್ಗೆ ನನ್ನಪ್ಪನಿಗೆ ಪ್ರೀತಿ ಇದೆ” ಎಂದೆ. “ಅವನು ನನಗೆ ಹೊಸಬನೆ? ನನ್ನ ಕಣ್ಣೆದುರೇ ಹುಟ್ಟಿ ಬೆಳೆದ ಹುಡುಗನಲ್ಲವೆ?” ಎಂದಳು. ಚಹಾ ಮುಗಿಸಿದವಳೆ ಲೋಟ ತೊಳೆದಿಟ್ಟು “ನಾ ಹೋತಿ, ನಮ್ಮನೆಗೆ ಬಾರೋ” ಎಂದಳು. “ಇಲ್ಲಿ ಬೇಜಾರು, ಬರುತ್ತೇನೆ” ಎಂದು ಅವಳ ಮಾತನ್ನೇ ಗಟ್ಟಿ ಮಾಡಿದೆ.
ಮೀನಿಕಾ ಹೇಳಿದಂತೆ ಸಂಜೆ ಬಂದಳು. ದೊಡ್ಡಪ್ಪ “ಹೋಗು” ಎಂದ. “ತೀರಾ ಸಂಜೆ ಆಯಿತು. ಅವನು ಹೊಸಬ. ಕೊರಕಲು ದಾರಿ. ನೀನೇ ಮನೆಗೆ ಕಳುಹಿಸಿ ಹೋಗು” ದೊಡ್ಡಮ್ಮ ಅಂದಳು. ಮೀನಿಕಾ ಗೋಣು ಅಲ್ಲಾಡಿಸಿ ಕರೆದುಕೊಂಡು ಹೊರಟಳು. ಅಚ್ಚುತಣ್ಣನ ಹಿತ್ತಲ ಅಂಚಿಗೆ ಇದ್ದ ದಣಪೆ ದಾಟಿ, ಹೊಯಿಗೆ ಮಣ್ಣಿನ ಗದ್ದೆ ಇಳಿದು, ಹಾಳೆ ಬದುವಿನ ಮೇಲೆ ನಡೆದು, ಬಲಕ್ಕೆ ತಿರುಗಿ ಸುಮಾರು ಹೊತ್ತು ನಡೆದ ನಂತರ ಗುಡ್ಡದ ಕೊರಕಲು ದಾರಿಗೆ ಬಂದೆವು. ಮೀನಿಕಾ ಮಾತಾಡಿದಳು. “ಅವರು ನನಗಾಗಿ ಈ ದಾರಿಯಲ್ಲಿ ಎಷ್ಟು ವರ್ಷ ಹಗಲು-ರಾತ್ರಿ ಪಾದ ಸವೆಸಿದರು ಗೊತ್ತಾ?” ಎಂದಳು. ನಾನು ಅವಳ ಮಾತು ಅರ್ಥವಾದರೂ “ಯಾರು?’’ ಎಂದೆ. “ಭೀಮ ಒಡೆಯಾ” ಎಂದಳು. ನಂತರ “ನಿನ್ನ ಅಜ್ಜನಲ್ಲವೆ?” ಎಂದಳು. “ಅಲ್ಲ, ಮುತ್ತಜ್ಜ” ಎಂದೆ. ಕೈಯಲ್ಲಿದ್ದ ಗುಬ್ಬಿ ಲಾಟೆನ್ ಅನ್ನು ತನ್ನ ಮುಖಕ್ಕೆ ಹಿಡಿದು “ಹಾಗಾದ್ರೆ ನಾನು ಮುತ್ತಜ್ಜಿ” ಎಂದು ನಕ್ಕಳು. ನನ್ನ ಸಂಬಂಧಿಕರಂತೆ, ಅರಗೆಯ ಜನರಂತೆ ನನ್ನ ಮನಸ್ಸು ಕೂಡ ಅವರ ಸಂಬಂಧವನ್ನು ಒಪ್ಪಿಕೊಂಡುಬಿಟ್ಟಿತು. ಅಲ್ಲಿಂದ ನೈತಿಕ-ಅನೈತಿಕ ವಿಚಾರ ಅಳಿಸಿಹೋಗಿ ಅಂತೂ ಮನುಷ್ಯರಾಗಿ ಬದುಕಿದರಲ್ಲ ಎಂಬ ಮಟ್ಟಕ್ಕೆ ವಿಚಾರಿಸತೊಡಗಿದೆ. ನಾವು ನಡೆಯುತ್ತ ಕಳಸದ ಮನೆ ದಾಟಿ, ಸದಾನಂದನ ಗದ್ದೆ ಹತ್ತಿರ ಬರುವಾಗ ಕೈ ತೋರಿಸಿ, “ಇಲ್ಲೆ ನೋಡು ರಾತ್ರಿ ಬರುವಾಗ ಕೋಣ ಒಂದು ಇವರನ್ನು ಬೆನ್ನು ಹತ್ತಿ ಬಂದದ್ದು, ದರಿದ್ರ ಜಾಗ. ಅದಾಗಿ ಅವರು ವಾರವೂ ಉಳಿಯಲಿಲ್ಲ” ಎಂದು ಅಳುವ ಧ್ವನಿ ಮಾಡಿದಳು. “ಏನಾಯ್ತು ಮುತ್ತಜ್ಜನಿಗೆ?’’ ಎಂದೆ. “ಅವರು ತೀರಿ ಐವತ್ತು ವರ್ಷ ಆಯಿತೇನೊ. ಆದರೂ ನಾನು ಈ ಜಾಗಕ್ಕೆ ಬಂದರೆ ಅವರು ಸತ್ತದ್ದೇ ನೆನಪಾಗುತ್ತದೆ. ಯಾವಾಗಲೂ ರಾತ್ರಿ ಮನೆಯಲ್ಲಿ ಉಂಡು ಲಾಟೆನ್ ಹಿಡಿದುಕೊಂಡು ನಮ್ಮ ಮನೆಗೆ ಬರುವುದು ರೂಢಿ. ಅದಕ್ಕೆ ಅವರ ಮನೆಯವರ ತಕರಾರು ಇರಲಿಲ್ಲ. ಊರಿನವರಿಗೂ ಅದು ಸಹಜವೇ ಆಗಿತ್ತು” ಎಂದಳು. ಹೀಗೆ ಅವಕಾಶ ಸಿಕ್ಕಾಗಲೆಲ್ಲ ತಾನು ನೈತಿಕತೆಯಿಂದ ಬದುಕಿದೆ ಎಂದು ತೋರಿಸಲು ಯತ್ನಿಸುತ್ತಿದ್ದಳು.
ರಾತ್ರಿ ದೊಡ್ಡಮ್ಮ ಹೇಳಿದ್ದು ನೆನಪಾಯಿತು. ಮೀನಿಕಾ ಆಗಾಗ ತನ್ನ ಬದುಕಿನ ಬಗ್ಗೆ ನೊಂದು ಮಾತಾಡಿದ್ದಳಂತೆ. ನನ್ನ ಮಗಳ ಬಗ್ಗೆ ಯೋಚಿಸಿದರೆ ನಿದ್ರೆನೇ ಬರುವುದಿಲ್ಲ ನೋಡು ಎಂದಿದ್ದಳಂತೆ. ಅವಳ ಕುಲದಲ್ಲಿ ಹೆಣ್ಣಾಗಿ ಹುಟ್ಟುವುದು ಮಹಾಪಾಪ. ‘ದೇವರೇ ಇವಳು ಹೇಗೆ ಕಳೆಯುತ್ತಾಳೆ’ ಎಂದು ಚಿಂತೆಗೆ ಬೀಳುತ್ತಿದ್ದಳಂತೆ. ಭೀಮಬೊಪ್ಪನ ಬಗ್ಗೆ ಅವಳಿಗೆ ಸಮಾಧಾನ ಇತ್ತು. ನನಗಾದರೂ ಬಂಗಾರದಂತ ಗಂಡ ಸಿಕ್ಕರು. ಒಂದು ಹನಿ ಬಯ್ಯಲಿಲ್ಲ, ಹೊಡೆಯಲಿಲ್ಲ. ಮುಖ ತಿರುಗಿಸಿ ಸಿಟ್ಟು ಮಾಡಲಿಲ್ಲ. ಗಂಡ ಎಂದರೆ ಗಂಡನಾಂಗೆ ಇದ್ದರು. ಮದುವೆ ಆಗದಿದ್ದರೇನಾಯಿತು. ಹೆಂಡತಿ ಹಾಂಗೆ ನಾನು. ಅವರು ಗಂಡನೇ ಎನ್ನುತ್ತಿದ್ದಳಂತೆ…
ಮಗಳು ದೊಡ್ಡವಳಾಗಿ ಮೀನಿಕೆಯ ಭವಿಷ್ಯ ನಿಜ ಆದಂತೆ ಹಳಗಾ ದೇವಸ್ಥಾನದ ಸೇವೆಗೆ ಹೋದಳು. ಯಾರೊಂದಿಗೊ ಸಂಸಾರ ಮಾಡಿ ಬದುಕು ಕಂಡಳು. ಮಗ ರತ್ನಗಿರಿಗೆ ಮೀನುಗಾರಿಕೆಗೆ ರಂಪಣಿ ಬಲೆ ಎಳೆಯಲು ಹೋದವ ಹತ್ತು ವರ್ಷವಾದರೂ ಮರಳಿ ಬಂದಿಲ್ಲ. ಅಂದಿನಿಂದ ಮೀನಿಕಾ ಒಂಟಿ ಆಗಿದ್ದಳು.
“ಯಾಕೆ ಹೀಗೆ?’’ ಕೇಳಿದ್ದೆ. “ಶಾಪಗ್ರಸ್ತ ಸಮಾಜ. ವೇಶ್ಯೆಯರ ಪಟ್ಟ ಕಟ್ಟಿಕೊಳ್ಳಲು ಮನಸ್ಸು ಮಾಡದೆ ಒಬ್ಬ ವ್ಯಕ್ತಿಯ ಸಂಗಡ ಸಂಸಾರ ಮಾಡವ ನೆಮ್ಮದಿ ಇಂತಹ ಪದ್ಧತಿಗೆ ಕಾರಣ ಇರಬಹುದು…” ಎಂದಳು. ಅವಳು “ಸೂಳೆಯಾ?’’ ಎಂದೆ. ನನ್ನ ಪ್ರಶ್ನೆಗೆ ದೊಡ್ಡಮ್ಮ ಬೇಸರಪಟ್ಟಿದ್ದಳು. “ನಿನ್ನ ಬಾಯಿ ಹೊಲಸು ಮಾಡಿಕೊಳ್ಳುವೆಯಲ್ಲೊ. ಹಾಗಾಗಬಾರದೆಂದೇ ಆ ಹೆಣ್ಣು ಮಗಳು ಇಂತಹ ಸಂಬAಧಕ್ಕೆ ಗಂಟು ಬಿದ್ದಿದ್ದು” ಎಂದಳು.
ನಾನು ದೊಡ್ಡಮ್ಮ ಆಡಿದ ಮಾತುಗಳನ್ನೇ ಯೋಚಿಸುತ್ತ ಮೂಕವಾಗಿರುವುದನ್ನು ಕಂಡು ಮೀನಿಕಾ “ಯಾಕೆ ಸುಮ್ಮನಾದೆ?” ಎಂದಳು. “ಹೇಳು ಆ ಕೋಣದ ಕಥೆ” ಎಂದೆ. “ರಾತ್ರಿ ಬರುವಾಗ ಕಳಸದ ಮನೆಯ ತಿರುವಿನಲ್ಲಿ ಒಂದು ಕಪ್ಪಾನು ಕಪ್ಪು ಕೋಣದಂತಹ ಪ್ರಾಣಿ ಹೂಂಕರಿಸಿ ಬೆನ್ನು ಹತ್ತಿದಾಂಗೆ ಆಯಿತು. ನಾ ಹೆದರಿ ಓಡಿ ಬಂದೆ ನೋಡು ಎಂದಿದ್ದರು. ಅದು ನಾಗು ಅಗೇರನ ಕೋಣ ಇತ್ತೊ ಏನೋ ಮೊನ್ನೆ ಹುಡುಕುತ್ತ ಇಲ್ಲಿಯವರೆಗೂ ಬಂದವ, “ಹಾಳು ಕೋಣ ನೆಸೆ ಬಂದು ಎಮ್ಮೆ ಮೂಸಾಕೆ ಹುಡ್ಕೊಂಡ್ ಹೋಗದೆ, ವಾರ ಆತು ನಾಪತ್ತೆ ಆಗದೆ” ಎಂದು ಹೇಳಿ ಹೋಗಿದ್ದ. ಅದೇ ಇರುಕೆ ಸಾಕು ಎಂದಿದ್ದೆ. ಅವರು ನನಗೆ ಹೆದರಿಕೆ ಆಗುತ್ತದೆ ಮೀನಿಕಾ, ಯಾರೋ ಬೆನ್ನು ಹತ್ತಿದ ಹಾಗೆ ಕನಸು, ವಿಕಾರ ಕೂಗಿನ ಕನಸು ಬೀಳುತ್ತಿದೆ. ಇವತ್ತು ಕೋಣ ಖರೆಯಾಗಲೂ ಬೆನ್ನು ಹತ್ತಿತೆಂದರೆ… ನನ್ನ ಕತೆ ಮುಗಿಯಿತೇನೋ ಎನ್ನಿಸುವುದಿಲ್ಲವೇ? – ಎಂದಿದ್ದರು. ನನ್ನ ಹೊಟ್ಟೆ ಉರಿಸೋಕೆ ಈ ಮಾತಾ ಎಂದಿದ್ದೆ. ಮಕ್ಕಳನ್ನು ತೋರಿಸುತ್ತ ‘ನಿಮ್ಮದೆ ಅಲ್ಲವೆ? ಎಲ್ಲರನ್ನೂ ಅನಾಥರಾಗಿ ಮಾಡಬೇಕೆಂಬ ಆಸೆಯಾ?’ ಎಂದಿದ್ದೆ. ಅವರು ಹಾಗೆ ಹೇಳಿ ಒಂದು ವಾರ ಕಳೆದಿರಲಿಲ್ಲ. ಹೋಗಿಬಿಟ್ಟರು – ಎಂದು ಅತ್ತಳು. ಅವರು ಸತ್ತಾಗ ಅಳಲಿಲ್ಲ ನೋಡು ಈಗ ನೆನಪಾದರೆ ದುಃಖವಾಗುತ್ತದೆ – ಎಂದಳು. ನೊಂದ ಜೀವ. ಮತ್ತೆ ನೋವು ಕೊಡಬಾರದೆಂದು ಸುಮ್ಮನೆ ಉಳಿದೆ. ಅವಳೇ ಮಾತು ತೆಗೆದು “ನೀನು ಏಕೆಂದು ಕೇಳಲೇ ಇಲ್ಲ” ಎಂದಳು. “ಏಕೆ?’’ ಎಂದೆ.
“ಅವರು ರಾತ್ರಿ ನಮ್ಮ ಮನೆಗೆ ಬಂದವರು ಮಲಗಿದ್ದಲ್ಲೇ ತೀರಿಹೋದರು. ಬೆಳಗಿನ ಜಾವ ಬೇಗ ಎದ್ದು ಮನೆಗೆ ಹೊರಡುವವರು ಏಳಲಿಲ್ಲ. ನಾನು ಅವರನ್ನು ಎಚ್ಚರಿಸಲು ಪ್ರಯತ್ನಿಸಿದೆ, ಮೇಲೇಳಲಿಲ್ಲ. ನನ್ನ ದೊಡ್ಡವ್ವಿ ಮನೆಗೆ ಹೋಗಿ ಹೇಳಿದೆ. ನಮ್ಮ ಕೇರಿಯವರೆಲ್ಲ ಬಂದರು. ಆದರೆ ಯಾರೂ ಭೀಮ ಒಡೆಯಾನನ್ನು ಮುಟ್ಟಿನೋಡುವ ಧೈರ್ಯ ಮಾಡಲಿಲ್ಲ. ಅವರ ಜಾತಿಯವರನ್ನು ಮುಟ್ಟಲು ಹೆದರುತ್ತಿದ್ದರು. ಅವರ ಮನೆಯವರಿಗೆ ಸುದ್ದಿ ಮುಟ್ಟಿಸಿದರು. ಅಲ್ಲಿಂದ ನನ್ನ ಕಷ್ಟ ಶುರು ಆಯಿತು ನೋಡು. ಅವರ ಜಾತಿ ಸಮ್ಮಂಧಿಕರೆಲ್ಲ ನಮ್ಮ ಸಮಾಜದ ಮನೆಗೆ ಬರುವವರಲ್ಲ. ಅದು ಅನಾದಿಕಾಲದಿಂದ ಬಂದ ಕಟ್ಟಳೆ. ಅವರು ನಮ್ಮ ಕೇರಿಗೆ ಬಂದು ಭೀಮ ಒಡೆಯನ ಹೆಣ ಎತ್ತುವವರಲ್ಲ. ನಮ್ಮ ಜಾತಿಯವರು ಬ್ರಾಹ್ಮಣರ ಹೆಣ ಮುಟ್ಟುವಂತಿಲ್ಲ. ಹಾಗಾದರೆ ಭೀಮ ಒಡೆಯನ ಶವವನ್ನು ಏನು ಮಾಡುವುದು? ನಮ್ಮ ಮನೆಯಲ್ಲಿ ಸತ್ತುಬಿದ್ದ ಭೀಮ ಒಡೆಯ, ಮಧ್ಯಾಹ್ನ ಆದರೂ ಯಾವ ಉಪಾಯವೂ ಕಾಣಲಿಲ್ಲ. ನಮ್ಮವರೆಲ್ಲ ಬಂದು ಬಂದು ಹೆಣವನ್ನು ನೋಡಿಕೊಂಡು ಹೋಗುತ್ತಿದ್ದರು. ನಾನು ಜೀವಂತ ಸಾಯುತ್ತಿದ್ದೆ. ನನಗೆ ಭೀಮ ಒಡೆಯಾ ಸತ್ತಿದ್ದಕ್ಕಿಂತ ಅವರ ಹೆಣ ಮಸಾಣಕ್ಕೆ ತಗೊಂಡು ಹೋಗಿ ಸುಡುವುದೇ ದೊಡ್ಡದಾಗಿ ಕಂಡಿತು. ಆ ಒಂದು ಆತಂಕದಲ್ಲಿ ಅಳುವುದೇ ಮರೆತುಹೋಯಿತು. ಬಂದ ಕಷ್ಟದಿಂದ ಪಾರುಮಾಡು ಎಂದು ಊರಿನ ಮಾದೇವರಲ್ಲಿ ಬೇಡಿಕೊಂಡೆ. ಸಂಜೆ ಆಗುತ್ತ ಬಂತು. ಶವ ಕಪ್ಪಾಗಿ ಕೊರಡಾಗುತ್ತ ಬರುತ್ತಿತ್ತು. ಅವರಿಗೆ ಎಲ್ಲವೂ ಇದ್ದು, ಎಲ್ಲರೂ ಇದ್ದು ಅನಾಥರಾಗಿದ್ದರು. ನನ್ನನ್ನು ನಂಬಿದವರಿಗೆ ಶವಸಂಸ್ಕಾರದ ಕೊನೆಯ ಋಣ ತೀರಿಸಲಾಗಲಿಲ್ಲವಲ್ಲ ಎಂದು ಅತ್ತೆ. ಸತ್ತ ನಂತರ ಯಾರಿಗೂ ಬೇಡವಾದ ಜೀವ ಎಂದು ಬೇಜಾರಾಯಿತು. ಎಲ್ಲರೂ ಅವರಿಂದ ಉಪಕಾರ ತೆಗೆದುಕೊಂಡವರೇ. ಬದುಕಿಗಾಗಿ ಸುಖ ಸಿಗುತ್ತದೆ ಎಂದರೆ ರೀತಿ-ರಿವಾಜು ಮಾಡಿಕೊಳ್ಳಲಿ. ಕಷ್ಟ ಕಾಲದಲ್ಲಿ ಅದನ್ನು ಮೀರುವುದೇ ಮಾನವೀಯತೆ ಅಲ್ಲವೆ? ನಿಜವಾಗಿ ಮನುಷ್ಯರ ಸತ್ತ್ವಪರೀಕ್ಷೆ ನಡೆಯುವುದು ಇಲ್ಲೇ ಅಲ್ಲವೆ? ಅವರನ್ನು ಮುಟ್ಟುವುದು ನಮ್ಮ ಸಮಾಜದವರು ಮೀರಲಾರದ ಕಟ್ಟಳೆ. ನಮ್ಮ ಕೇರಿ ಮನೆಗೆ ಹೋಗಬಾರದು ಎಂಬುದು ಆ ಸಮಾಜದ ಕಟ್ಟಳೆ. ಅದರ ಬಿಸಿಗೆ ಸುಟ್ಟು ಹೋಗುತ್ತಿರುವ ನಾನು ಮತ್ತೆ ಭೀಮ ಒಡೆಯಾ.
ಹೊತ್ತೇರಿದಂತೆ ಕೇರಿಯಲ್ಲಿ ಹೆಣ ಇಟ್ಟುಕೊಂಡು ಕಳೆಯುವುದು ನಮ್ಮ ಜನರಿಗೂ ಕಷ್ಟ ಆಗುತ್ತಿತ್ತು. ಆ ದಿನ ಯಾರೂ ಮನೆಯಲ್ಲಿ ಒಲೆ ಹತ್ತಿಸಲಿಲ್ಲ. ಭೀಮ ಒಡೆಯಾನ ಸಮ್ಮಂಧಿಕರ ಪಾಡೂ ಅಷ್ಟೇ ಆಗಿತ್ತು. ಆ ಕಡೆಯಿಂದ ಉತ್ತರ ಬರಲಿಲ್ಲ. ನಮ್ಮವರು ಅಸಹಾಯಕರಾಗಿದ್ದರು. ಹೊತ್ತೇರಿದಂತೆ ಬೀಸುವ ಗಾಳಿಗೆ ದುರ್ನಾತ ಶುರು ಆಯಿತು. ಹಗೂರ ಊರ ತುಂಬ ಕೆಟ್ಟ ವಾಸನೆ ಹರಡುತ್ತಿತ್ತು. ‘ಯಾವಾಗಲೋ ಸತ್ತಿದ್ದು, ಹೆದರಿ ಅವರ ಸಾವನ್ನು ಮುಚ್ಚಿಟ್ಟೆ. ಇವತ್ತು ನಮಗೆ ತಿಳಿಸುವುದಾ?’ ಎಂದು ಊರವರು ಬಯ್ಯತೊಡಗಿದರು. ಬಿಟ್ಟುಬಿಟ್ಟು ಬರುವ ವಾಸನೆ ಜೋರಾಗುತ್ತಿತ್ತು. ನನಗೂ ಸತ್ತ ಹೆಣದಿಂದಲೇ ವಾಸನೆ ಬರುತ್ತಿತ್ತೇನೋ ಎಂಬ ಅನುಮಾನ ಶುರು ಆಯಿತು. ಬಂದವರು ಏನೇನು ಹೇಳಿದರೊ ಹಾಗೇ ಮಾಡಿದೆ. ‘ಹೆಣದ ಸುತ್ತಲೂ ಸೀಮೆಎಣ್ಣೆ ಚೆಲ್ಲು’ ಎಂದರು, ಚೆಲ್ಲಿದೆ. ‘ಮೇಲೆ ಸುಣ್ಣ ಉದುರಿಸು’ ಎಂದರು, ಉದುರಿಸಿದೆ. ಯಾರೋ ಫಿನೈಲ್ ತಂದುಕೊಟ್ಟರು. ಹೆಣದ ಮೇಲೆ ಚೆಲ್ಲಿದೆ. ಒಳ್ಳೆಯವರು ಕಣ್ಣೆದುರೇ ಕೊಳೆತು ನಾಶವಾಗುವ ಪರಿಸ್ಥಿತಿಗೆ ಅತ್ತೆ. ದುರ್ವಾಸನೆ ಹೆಚ್ಚುತ್ತಿತ್ತು. ನಮ್ಮ ಸಮಾಜದವರು ಒಡೆಯನ ಮನೆಯಿಂದ ಬರುವ ಮಾತಿಗಾಗಿ ಕಾದರು. ನನಗೆ ನಾನು ಬೆಂಕಿಯಲ್ಲಿ ಸುಟ್ಟುಕೊಂಡAತೆ. ಹಾಗೆ ಸುಟ್ಟಿಕೊಳ್ಳುವ ಎಂದು ಯೋಚನೆ. ಎದುರಿಗೆ ಎಲ್ಲರೂ ಇದ್ದೂ ಅನಾಥರಾಗಿ ಬಿದ್ದ ಭೀಮ ಒಡೆಯಾ. ಹೊರಗೆ ಬಂದು ಕುಳಿತೆ. ಬಂದ ಹೆಂಗಸರು ಸಮಾಧಾನ ಮಾಡಿದರು. ಮತ್ತೆ ಒಳಗೆ ಹೋಗಲು ಭಯ. ಜೋರಾಗುತ್ತಿದ್ದ ಕೆಟ್ಟ ವಾಸನೆ. ಸಂಜೆಯ ವೇಳೆಗೆ ಯಾರೋ ಅರಗೆಯ ಪೇಟೆಗೆ ಹೋದವರು ಕಳಸದ ಮನೆಯ ಸನಿಹದ ಕೊರಕಲಿನಲ್ಲಿ ಅಗೇರನ ಕೋಣ ಸತ್ತುಬಿದ್ದಿದ್ದನ್ನು ಕಂಡು ಸುದ್ದಿ ತಂದರು. ಅದೇ ಸತ್ತು ಕೊಳೆತು ಊರ ತುಂಬ ಕೆಟ್ಟ ವಾಸನೆ ಹರಡತೊಡಗಿತ್ತು. ‘ಪಾಪಿಷ್ಟ ಕೋಣ ಸತ್ತು ಬಿದ್ದರೂ ಅದನ್ನು ತಿಂದು ಮುಗಿಸಲು ಒಂದೇ ಒಂದು ಹಪ್ಪನ ಹಕ್ಕಿಯೂ ಬರಲಿಲ್ಲ. ಸತ್ತು ಕೊಳೆತೇಹೋಯಿತು’ ಎಂದು ನನ್ನ ದೊಡ್ಡವ್ವಿ ಎಂದಳು. ದುಃಖ ತಡೆಯಲಾಗಲಿಲ್ಲ. ನಾನು ನನ್ನ ಒಡೆಯನ ಹೆಣದತ್ತ ನೋಡಿದೆ.
ಭೀಮ ಒಡೆಯಾನ ಮನೆಯಿಂದ ಯಾರೂ ಬರುವ ಅಂದಾಜಿಲ್ಲ. ಏನು ಮಾಡುವುದು ಎಂದು ಅವರ ಮನೆಯವರೂ ಕಂಗಾಲಾಗಿರಬೇಕು. ನಾನೇ ಧೈರ್ಯಮಾಡಿ ನಮ್ಮ ಕೇರಿಯ ಜನರನ್ನು ಕರೆದುಕೊಂಡು ಭೀಮೊಡೆಯನ ಮನೆಗೆ ಹೋದೆ. ಕೈಮುಗಿದು ನನ್ನ ದೇವರಿಗೆ ಮುಕ್ತಿ ಕೊಡಿ ಎಂದೆ. ಅವರ ಮನೆಯಲ್ಲಿ ಅವರ ಸಮ್ಮಂಧಿಕರೆಲ್ಲ ಸೇರಿದ್ದರು. “ಬಡಪಾಯಿ ಒಂಟಿ ಹೆಂಗಸು ಏನು ಮಾಡುತ್ತಾಳೆ ಪಾಪ” ಅವರಲ್ಲಿ ಯಾರೋ ಹೇಳಿದ್ದು ಕೇಳಿತು. ನಾವೆಲ್ಲ ಗಟ್ಟಿ ಒಂದು ತೀರ್ಮಾನಕ್ಕೆ ಬಂದುಬಿಡೋಣ. ಹೇಗೂ ಅವರ ಕೇರಿಯವರೇ ಬಂದಿದ್ದಾರೆ ಎಂದ. ಅವರ ನಡುವೆ ಗಲಾಟೆ, ಗೌಜು, ಗುಸುಗುಸು ನಡೆಯುತ್ತಿತ್ತು. ಅಂಗಳದಲ್ಲಿ ಕುಳಿತ ನನಗೆ ಏನೂ ಕೇಳಿಸುತ್ತಿರಲಿಲ್ಲ. ನಂತರ ಒಂದು ತೀರ್ಮಾನ ಹೇಳಿದ್ದರು. ‘ನೋಡ್ರಪ್ಪಾ ನಾವಂತೂ ನಿಮ್ಮಲ್ಲಿಗೆ ಬರಲು ಸಾಧ್ಯವಿಲ್ಲ. ನೀವು ಹೆಣ ಮುಟ್ಟಲು ಸಾಧ್ಯವಿಲ್ಲ. ಬಹಳ ಹೊತ್ತು ಹೆಣವನ್ನು ಭೂಮಿಗೆ ಭಾರ ಮಾಡುವುದನ್ನು ಶಾಸ್ತ್ರ ಒಪ್ಪುವುದಿಲ್ಲ. ಹೆಣವನ್ನು ಮಲಗಿಕೊಂಡ ಹಾಸಿಗೆ ಸಮೇತ ದೇವಸ್ಥಾನದ ಅಂಗಳಕ್ಕೆ ತಂದು ಹಾಕಿ. ಅಲ್ಲಿಂದ ನಾವು ಹೊತ್ತುಕೊಂಡು ಹೋಗಿ ದಹನಕ್ರಿಯೆ ಮುಗಿಸಿಬಿಡುತ್ತೇವೆ.’ ಅವರಲ್ಲೇ ಯಾರೋ ಪುಣ್ಯಾತ್ಮ ಹೇಳಿದ. ಯಾರೆಂದು ಈಗ ನೆನಪಿಲ್ಲ. ನಮ್ಮವರಿಗೆ ಕೇರಿಯಿಂದ ಸತ್ತ ಹೆಣವನ್ನು ಹೊರಗೆ ಸಾಗಿಸಿದರೆ ಸಾಕಿತ್ತು. ಅಂಜುತ್ತಂಜುತ್ತಲೇ ಒಪ್ಪಿಕೊಂಡರು. ಅವರು ಎಂದಂತೆ ಹೆಣವನ್ನು ಮುಟ್ಟದೆ ಹಾಸಿಗೆ ಸಮೇತ ಎತ್ತಿ ಅಜಾನುಬಾಹು ದೇಹವನ್ನು ಶ್ರಮಪಟ್ಟು ದೇವಸ್ಥಾನದ ಅಂಗಳಕ್ಕೆ ತಂದು ಮಲಗಿಸಿದರು. ಕಾಯುತ್ತಿದ್ದ ಅವರ ಸಮ್ಮಂಧಿಕರು ಕೊನೆಯ ಕ್ಷಣದ ಶಾಸ್ತ್ರ ಪೂರೈಸಿ ಹೆಣವನ್ನು ಸ್ಮಶಾನಕ್ಕೆ ಸಾಗಿಸಿದರು. ನನಗೆ ಯಾವ ಸಮಾಧಾನವೂ ಆಗಲಿಲ್ಲ. ಅವರು ಚಿತೆಗೆ ಬಿದ್ದರೂ ಸುಟ್ಟಂತೆ ಅನ್ನಿಸಲಿಲ್ಲ. ಅವರು ಜೀವ ಹೋದಾಗಲೇ ದಹನವಾದರು. ನಾನು ಅವರ ಹೆಣ ಎದುರಿಗೆ ಇಟ್ಟುಕೊಂಡು ದಹನವಾದೆ” ಮೀನಿಕಾ ಅಳುತ್ತಿದ್ದಳು.
* * *
ನನ್ನ ಕಥೆಯೊಳಗಿನ ಮೀನಿಕೆಯ ಪಾತ್ರ ಹಿಮವಂತಿಗೆ ಅವಳನ್ನು ನೋಡುವ ಹುಚ್ಚು ಹತ್ತಿಸಿತ್ತು. “ಮೀನಿಕೆಯ ಸಂದರ್ಶನವನ್ನು ಇಂಗ್ಲಿಷ್ ಮ್ಯಾಗಜಿನ್ನಲ್ಲಿ ಪ್ರಕಟಿಸಲು ಉತ್ಸುಕಳಾಗಿದ್ದೇನೆ” ಎಂದಳು. “ಮೀನಿಕಾ ಸೂಳೆಯಲ್ಲ, ಸಂಭಾವಿತ ಹೆಂಗಸು, ನೆನಪಿಡು” ಎಂದು ಮತ್ತೆ ಎಚ್ಚರಿಸಿದೆ. ಹಿಮವಂತಿ ನಕ್ಕಳು. ನಂತರ ತನ್ನ ಈವರೆಗಿನ ಕ್ಷೇತ್ರ ಕಾರ್ಯದ ಅಧ್ಯಯನದ ವರದಿ ನೀಡಲು ಒಡಿಸ್ಸಾಕ್ಕೆ ಹೊರಟು ನಿಂತಳು. ಎರಡನೇ ಭೇಟಿಯಲ್ಲಿ ಮಲೆನಾಡಿನ ಬದುಕಿನ ಅಧ್ಯಯನ ನೆನಪಿಡು ಎಂದಳು. ನಿನಗಾಗಿ ಮಲೆನಾಡ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದೆ.
ಮೀನಿಕಾ ಕ್ರಮೇಣ ಹಳೆಯ ಮರೆವು ಆದಳು. ಬಹಳ ದಿನ ಅರಗೆ ಕಡೆಯಿಂದ ಸುದ್ದಿ ಇರಲಿಲ್ಲ. ನಡುವೆ ದೊಡ್ಡಮ್ಮನಿಗೆ ತೀರಾ ಆರಾಮ್ ಇಲ್ಲ ಎಂದು ಸುದ್ದಿ ಬಂತು. ಅಮ್ಮ ಆತಂಕದಿಂದ ನನ್ನನ್ನು ಅರಗೆಗೆ ಕಳಿಸಿದಳು. ನಾನು ಇಷ್ಟಪಡುವ ಮುದಿ ಜೀವಿಗಳು, ಆತಂಕದಿಂದಲೇ ಅರಗೆಗೆ ಓಡಿದೆ. ದೊಡ್ಡಮ್ಮ ತೀರಾ ಅನಾರೋಗ್ಯದಿಂದ ಮಲಗಿದ್ದಳು. ನನ್ನನ್ನು ನೋಡಿದವಳೇ “ನನ್ನ ಕತೆ ಮುಗಿಯಿತು ಮಗನೆ” ಎಂದಳು. “ಯಾಕೆ ಇಂತ ಮಾತು?’’ ಎಂದೆ. “ಮೀನಿಕಾ ದಾಟಿಕೊಂಡುಬಿಟ್ಟಳು, ಈಗ ಇರುವುದು ನಾನೊಬ್ಬಳೆ” ಎಂದಳು. “ಏನಾಯಿತು?’’ ಎಂದೆ. “ಅವಳು ತೀರಿಕೊಂಡು ಬಿಟ್ಟಳಲ್ಲ. ಇನ್ನು ನನಗೆ ಯಾರಿದ್ದಾರೆ?’’ ಎಂದು ಅತ್ತಳು. ನನಗೆ ಬೇಸರ ಆಯಿತು. ಹೇಗೆ ಸತ್ತಳು ಎಂದೆ. ತಿಂಗಳು ಕಳೆಯಿತು. ರಾತ್ರಿ ಮಲಗಿದವಳು ಮೇಲೇಳಲಿಲ್ಲ. ಪುಣ್ಯವಂತೆ ಸುಖದ ಸಾವು ಕಂಡಳು. ನನಗೂ ದೇವರು ಅಂತದೇ ಸಾವು ಕೊಟ್ಟರೆ ಸಾಕು ಎಂದು ನರಳಿದಳು. ದೊಡ್ಡಮ್ಮ ಮೀನಿಕಾಳನ್ನು ತೀರಾ ಹಚ್ಚಿಕೊಂಡಿದ್ದಳು. ಅವಳ ಸಾವಿನಿಂದ ಇವಳು ಕಂಗಾಲಾಗಿ ಹಾಸಿಗೆ ಹಿಡಿದಿದ್ದಾಳೆ. ಮೀನಿಕಳಿಲ್ಲದೆ ದೊಡ್ಡಮ್ಮನಿಗೆ ತಾನು ಅನಾಥವಾಗುತ್ತಿದ್ದೇನೆ ಎನ್ನಿಸುತ್ತಿದೆ. ನನಗೆ ಎಲ್ಲ ಸ್ಪಷ್ಟವಾಗುತ್ತ ಹೋಯಿತು. “ಮೀನಿಕಾ ನನಗೆ ಬೇರೆಯವಳು ಅನ್ನಿಸಲಿಲ್ಲ. ಎಂಥ ಒಳ್ಳೆಯ ಹೆಂಗಸು” ಎಂದು ಅತ್ತಳು. “ನಿನ್ನ ದೊಡ್ಡಪ್ಪನೂ ಬಹಳ ನೊಂದುಕೊಂಡರು. ಅವರು ತಾವೇ ಮುಂದೆ ನಿಂತು ಅವರ ಕೇರಿಯವರ ಜೊತೆ ಸೇರಿ ಮೀನಿಕೆಯನ್ನು ಸುಟ್ಟು ಬಂದರು. ಅವಳು ನಮ್ಮವಳಾಗಿಯೂ ನಮ್ಮವಳಾಗದೇ ಬದುಕಿದಳು” ದೊಡ್ಡಮ್ಮ ಮಾತನಾಡುತ್ತಲೇ ಇದ್ದಳು.
“ಈಗ ಮೀನಿಕೆ ಮನೆಯಲ್ಲಿ ಯಾರಿದ್ದಾರೆ?’’ ಎಂದೆ. “ಮಗಳು ಬಂದು ಉಳಿದುಕೊಂಡಿದ್ದಾಳೆ. ಅಂತರಂಗದಲ್ಲಿ ಒಂದು ಸಂಬಂಧ ಇರುತ್ತದೆಯೋ ಏನೋ ಅದಕ್ಕೆ ದ್ರೋಹ ಬಗೆಯಲು ಮನಸ್ಸು ಬರುವುದಿಲ್ಲ ನೋಡು. ಸಂಬಂಧಿಕರು ಸತ್ತರೆ ಸೂತಕದ ಮನೆಗೆ ಹೋಗಿ ಮಾತಾಡಿಸುವ ನಮ್ಮ ಕುಟುಂಬದ ಶಾಸ್ತ್ರದಂತೆ ನಾನು ಅವಲಕ್ಕಿ, ಕಾಯಿ, ಸಿಹಿ ತಿಂಡಿ ತೆಗೆದುಕೊಂಡು ಹೋಗಿ ಮಗಳನ್ನು ಮಾತಾಡಿಸಿ ಬಂದೆ. ನಿನ್ನ ದೊಡ್ಡಪ್ಪನೇ ಮುಂದೆ ನಿಂತು ಗೋಕರ್ಣದಲ್ಲಿ ದಿನ ಕಾರ್ಯ ಮುಗಿಸಿದ್ದಾಯಿತು. ಋಣ ಮುಗಿಸಿಬಿಡೋಣ ಎಂದರೂ ಋಣಾನುಬಂಧ ಹಿಡಿದುಕೊಂಡುಬಿಡುತ್ತದೆ ನೋಡು” ಎಂದಳು. “ಅವಳ ಮಗಳು ಏನು ಮಾಡುತ್ತಿದ್ದಾಳೆ?” ಎಂದೆ. “ಅವಳದು ಮುಗಿದ ಕಥೆ” ಎಂದು ದೊಡ್ಡಪ್ಪ ಮೌನ ಮುರಿದು ಮಾತನಾಡಿ ಮೌನವಾದ. ಆ ಕ್ಷಣದಿಂದ ಇಡೀ ಮನೆಗೆ ತುಂಬಿಕೊAಡ ಮೌನ ಮೀನಿಕೆಯ ಬದುಕಿನ ಹೋರಾಟ ವ್ಯರ್ಥವಾದ ಬಗ್ಗೆ ಹೇಳುತ್ತಿತ್ತು. ಅವಳ ಮಗಳಿಗೆ ನೀನು ಬದುಕುವ ಪರಿ ಹಾಗಲ್ಲ ಮಗಳೆ ಎಂದು ಹೇಳುವ ಹಕ್ಕು ಯಾರಿಗೂ ಇರಲಿಲ್ಲ. ಮೀನಿಕೆ ತನ್ನ ನಿಗೂಢ ಸಂಬಂಧದ ಬಗ್ಗೆ ಹೇಳಲಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಮೀನಿಕೆಯ ಮಗಳಿಗೂ ಇರಲಿಲ್ಲ. ಜೀವಂತ ಇದ್ದಾಗ ತನ್ನಂತೆಯಾದರೂ ಬದುಕು ಎಂದು ಹೇಳುವ ಧೈರ್ಯ ಮೀನಿಕೆಗೆ ಇರಲಿಲ್ಲ. ಮೀನಿಕೆಗೆ ಭೀಮಬೊಪ್ಪ ‘ಗಂಡ’ನಾಗಿರಲಿಲ್ಲ. ಮಗಳಿಗೆ ‘ಅಪ್ಪ’ನಾಗಿರಲಿಲ್ಲ. ಯಾರಿಗೆ ಯಾರೂ ಸಂಬಂಧಿಕರಲ್ಲ!
೨೦೨೩ರ ಸಾಲಿನ ‘ಉತ್ಥಾನ’ ಕಥಾಸ್ಪರ್ಧೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಲ್ಲದೆ, ಹೊರರಾಜ್ಯಗಳು ಹಾಗೂ ವಿದೇಶಗಳು ಸೇರಿದಂತೆ ಒಟ್ಟು ೩೫೬ ಕಥೆಗಳು ಬಂದಿದ್ದವು. ಇದರಲ್ಲಿ ಮೊದಲಸುತ್ತಿನಲ್ಲಿ ಆಯ್ಕೆಯಾದ ೪೦ ಕಥೆಗಳನ್ನು ತೀರ್ಪುಗಾರರಿಗೆ ನೀಡಲಾಗಿತ್ತು.
– ಸಂಪಾದಕ