ಊರಿನ ಎಲ್ಲ ಬಿಸಿಬಿಸಿ ವರ್ತಮಾನ, ಬೆಳ್ಳಂಬೆಳಗ್ಗೆ ಉಪ್ಪಿಟ್ಟಿಗೆ ಹಾಕುವ ಉಳ್ಳಾಗಡ್ಡಿ ಒಗ್ಗರಣೆಯೊಂದಿಗೆ ಈರವ್ವಕ್ಕಳ ಬಾಣಲೆಗೆ ಬಂದು ಬೀಳುತ್ತಿದ್ದವು. ಉದ್ರಿ–ಬಾಕಿ ಉಳಿಸಿಕೊಂಡ ಕೆಲ ಬಾಯಿ ಚಪಲಿಗರು ಈಕೆಗೆ ನಿಷ್ಠೆಯ ಹನುಮನಂತಾದರು.
“ರೊಕ್ಕ ಎಲ್ಲಿ ಹೊಕ್ಕೈತಿ! ನಾಳೆ ನಾಡಿದ್ದು ಕೊಡು ಸಾಕು” ಎನ್ನುತ್ತಿದ್ದ ಈರವ್ವಕ್ಕಗ ‘ಏನು ಬೇಕು’ ಎಂಬುದು ಅವರಿಗೆ ಗೊತ್ತಾಗಿತ್ತು; ಊರಿನ ಮಾಜಿ ಅಧ್ಯಕ್ಷ ನೀಲಕಂಠಪ್ಪನ ಉಸಾಬರಿ ಈರಮ್ಮಗ ಬೇಕು. ಹೊಸಹೊಸ ಸುದ್ದಿ ಕೊಟ್ರ ಒಂದು ಒಗ್ಗರಣೆ ಫ್ರೀ.
ಅಂಥ ಒಂದು ಸಿಹಿಪಾಕದಂತಹ ಸುದ್ದಿ: ‘ನೀಲಕಂಠಗ ಸಕ್ರಿರೋಗ ಹತ್ತಿ, ಮುರುದ–ಮುದ್ದಿ ಆಗ್ಯಾನ’ ಎಂಬುದು.

ನನ್ನ ಕೆಲಸಕ್ಕೆ ಈ ಜಾಗವೇ ಪಕ್ಕಾ’ ಎಂದುಕೊಂಡು ಏರುಗಚ್ಚೆಯಲ್ಲಿದ್ದ ಈರಮ್ಮ, ಒಂದು ಕಾಲನ್ನು ಅಲ್ಲಿದ್ದ ಸಣ್ಣ ಬಂಡೆಯ ಮೇಲಿಟ್ಟು, ಸಂಚಿ ತೆಗೆದು ಅಡಕೆ ‘ಕಢಲ್ಲನೆ’ ಕಡಿದು, ಎಲೆ ಸುಣ್ಣ ಮಡಿಚಿ ಬಾಯಿಗಿಟ್ಟುಕೊಂಡಳು. ಸುತ್ತಲೂ ಒಮ್ಮೆ ಚಿರತೆನೋಟ ಬೀರಿದಳು. ಈ ಕಡೆ ಪಟ್ಟಣಕ್ಕೆ ಹೋಗುವ ದಾರಿ; ಆ ಕಡೆ ಹೊಲ-ಜಮೀನುಗಳಿಗೆ, ಇನ್ನೊಂದು ತನ್ನೂರಿಗೆ.
ಮೂರು ದಾರಿಗಳ ತಿರುವು ಅದು.
ತನ್ನ ಚಾದಂಗಡಿಗೆ ಇದೇ ತಕ್ಕ ಸ್ಥಳ.
ಅವಳಿಗೆ ಶಾಲೆ ಗೊತ್ತಿಲ್ಲ; ಅಕ್ಷರ ಗೊತ್ತಿಲ್ಲ; ಆದರೆ ಜಗತ್ತು ಗೊತ್ತು.
ಅವಳಿಗೆ ಚೆನ್ನಾಗಿ ಗೊತ್ತಿತ್ತು – ನಾಲಿಗೆ ರುಚಿಗೆ, ಪರನಾರಿಗೆ, ಅಧಿಕಾರಕ್ಕೆ, ಪ್ರತಿಷ್ಠೆಗೆ, ಹೆಚ್ಚಿನ ಲಾಭಕ್ಕೆ ಎಲ್ಲ ಜನ ಬಾಯಿಬಾಯಿ ಬಿಡುತ್ತಾರೆಂದು.
ಅವಳಿಗಿದ್ದ ಕುಶಲತೆ ಎರಡು: ಗಟ್ಟಿನಾಲಿಗೆ ಹಾಗೂ ರುಚಿಕಟ್ಟಾದ ತಿಂಡಿ ತಿನಿಸು ತಯಾರಿಸುವುದು. ಇದು ಅವಳು ಮತ್ತೊಂದು ಊರಲ್ಲಿ ಪಡೆದ ಅನುಭವ.
ಅವಳ ನಾಲಿಗೆ ಥೇಟ್ ದಬ್ಬಳವೇ. ನಾ ನೀ ಎಂಬಂಥ ಗಂಡಸರು ಪತರುಗುಟ್ಟುತ್ತಿದ್ದರು. ಆದರೂ ಆ ನಾಲಗೆಯಿಂದ ಅವಳಿಗೆ ತನ್ನ ತುಂಡು-ಜಮೀನನ್ನು ಮರಳಿ ಪಡೆಯಲಾಗಿರಲಿಲ್ಲ ಎಂಬುದೂ ಕೂಡಾ ಅಷ್ಟೇ ನಿಜ.
ಜಮೀನು ವಾಪಸ್ಸು ಪಡೆಯಲು ಪಟ್ಟ ಎಲ್ಲ ಪ್ರಯತ್ನಗಳೂ ಮಣ್ಣಲ್ಲಿ ಎಣ್ಣೆ ಸುರಿದಂತಾಗಿತ್ತು. ವಿಧಿಯಿಲ್ಲದೆ ಹಳ್ಳಿ ತೊರೆದು ಬೇರೆಲ್ಲೋ ಹೊಟ್ಟೆ ಹೊರೆಯಬೇಕಾಯಿತು. ಯಾವುದೋ ದಾಬಾದಲ್ಲಿ ಪಾತ್ರೆ-ಪ್ಲೇಟು ತೊಳೆದು ದಿನ ನೂಕಿದ್ದಳು. ಕ್ರಮೇಣ ತಿಂಡಿ-ತಿನಿಸು ತಯಾರಿಸುವುದರಲ್ಲಿ ಪರಿಣತಳಾದಳು. ಒಗ್ಗರಣೆ ಅವಳ ಕೈ ಬಿಡಲಿಲ್ಲ. ಹಾಗೆಯೇ ಡಾಬಾದ ಮುದುಕ ಕೂಡ ತಪ್ಪದೆ ಅವಳ ಕೂಲಿಯನ್ನು ಅವಳ ಕೈಗಿಡುತ್ತಿದ್ದ. ಒಂದು ದಿನ, “ಬೇಟಿ… ನನ್ಗೂ ವಯಸ್ಸಾಯ್ತು. ಇಲ್ಲಿ ರಸ್ತೆ ಬರುತ್ತಂತೆ. ನಾನೂ ದಾಬಾ ಮುಚ್ಚಿ ನನ್ನ ಮಕ್ಕಳ ಕಡೆ ಹೋಗ್ತೇನೆ” ಎಂದು ಇನ್ನೂ ಒಂದಿಷ್ಟು ಹಣ ನೀಡಿ ವಿದಾಯ ಹೇಳಿದ.
ಈರಮ್ಮಳಿಗೆ ಇದ್ದೊಂದು ಆಸರೆಯೂ ಬಟಾಬಯಲಾಯಿತು. ಒಳಗೊಳಗೆ ನಸುನಸು ಇದ್ದ ಆಸೆ ಭಗ್ಗನೆ ಹೊತ್ತಿಕೊಂಡಿತು. ಹಾಗೆ ಬಂದದ್ದೇ ತನ್ನೂರಿಗೆ. ಹೇಗೂ ಒಂದಿಷ್ಟು ಕಾಸು ಕೂಡಿತ್ತು. ಕೈಗೆ ಸೌಟು ಒಲಿದಿತ್ತು. ಒಂದಿಷ್ಟು ಕೂಲಿ ಕೊಟ್ಟು, ಅವರಿವರನ್ನು ಕರೆದು, ನಾಲ್ಕು ತಡಿಕೆ ನಿಲ್ಲಿಸಿದಳು. ಒಂದು ಚೌಕಾಕಾರದ ತಡಿಕೆ ಗುಡಿಸಲು ಎದ್ದು ನಿಂತಿತು. ಸುಣ್ಣದಲ್ಲಿ ಸೊಟ್ಟ-ಪಟ್ಟ ಅಕ್ಷರಗಳಿಂದ ‘ಚಾದಂಗಡಿ’ ಎಂದು ಬರೆದ ತಗಡಿನ ಹಾಳೆ ಸದಾ ಗಾಳಿಗೆ ಅಲುಗಾಡತೊಡಗಿತು.
ನಸುಕಿಗೆ ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಮಸಾಲಾ ಚುರುಮುರಿ ಪರಿಮಳ ಘಮ್ಮೆಂದರೆ, ಹೊಲಕ್ಕೆ ಹೋಗಿ-ಬರುವ ರೈತಾಪಿ ಕೂಲಿ ಜನಗಳೆಲ್ಲ ಮೂಗಿನ ಹೊಳ್ಳೆ ಅರಳಿಸಿಕೊಂಡು ದೀರ್ಘವಾಗಿ ಉಸಿರೆಳೆದುಕೊಳ್ಳತೊಡಗಿದರು. ಕೆಲವರಂತೂ ಬಹುಬೇಗನೆ ಖಾಯಂ ಗಿರಾಕಿಗಳಾಗಿಬಿಟ್ಟರು. ಇನ್ನು ಕೆಲವರು ಕಾಳುಕಡ್ಡಿ ಸುರುವುತ್ತ, ‘ತಿಂಗಳಿಗೊಮ್ಮೆ ಪಾವತಿ’ ಮಾಡುವ ವ್ಯವಸ್ಥೆ ರೂಢಿಸಿಕೊಂಡರು. ಇನ್ನೂ ಕೆಲಜನ ತಪ್ಪದೆ ಭೇಟಿಕೊಡುತ್ತ್ತ, ಅಡ್ಡ-ಫಳಿಯ ಮೇಲೆ ಆರಾಮಾಗಿ ಕುಳಿತು ಧ್ಯಾನಸ್ಥ ಸ್ಥಿತಿಯಲ್ಲಿ ಕಣ್ಣುಮುಚ್ಚಿಕೊಂಡು ಸೂಸಲಾ, ಗಿರಮಿಟ್ಟು ಮೆಲ್ಲತೊಡಗಿದರು. ತಿನ್ನೋದೆಲ್ಲ ತಿಂದ ಮೇಲೆ, “ಈಗ ಹೊಲಕ್ಕ ಹೊಂಟೇನಿ… ರೊಕ್ಕ ನಾಳೆ ಕೊಡತೇನಿ” ಎಂದರೆ ಈರಮ್ಮ, “ಇರಲಿ ಹೋಗೋ ಭಾಡಕೋ.. ಕೊಡಾವಂತೆ” ಎನ್ನುವಷ್ಟು ಧಾರಾಳಿಯಾದಳು ಹಾಗೂ ಅನುಕೂಲಸ್ಥೆಯಾದಳು. ಪ್ರತಿ ಸಂಜೆಯಂತೂ ಮಿರ್ಚಿ, ಗಿರಮಿಟ್ಟು… ಜನವೋ ಜನ. ಇಡೀ ಚಾದಂಗಡಿ ಟೆಂಟು, ಚಾ ತುಂಬಿದ ತಪ್ಪಲೆಯಂತೆ ತುಳುಕಾಡತೊಡಗಿತು.
ಒಂದು ಮಟಮಟ ಮಧ್ಯಾಹ್ನ, ತರಗೆಲೆಯಂತಿದ್ದ, ಪರ್ರನೆ ತಲೆಗೂದಲಿದ್ದ ಹುಡುಗನೊಬ್ಬ, ಈರಮ್ಮನ ‘ಚಾದಂಗಡಿ’ ಕಡೆ ಆಸೆಗಣ್ಣಿಂದ ನೋಡುತ್ತ, ರಸ್ತೆಯ ಮೈಲಿಗಲ್ಲಿನ ಮೇಲೆ ಕುಳಿತೇ ಇದ್ದ. ಈಗೀಗ ಒಂದೆರಡು ಕೆಂಪು ಬಸ್ಸುಗಳು ಓಡಾಡುತ್ತಿದ್ದುದರಿಂದ ಅಪರಿಚಿತ ಗಿರಾಕಿಗಳೂ ಹೆಚ್ಚಿದ್ದರು. ಗಿರಾಕಿಗಳ ಸಂದಣಿ ತಗ್ಗಿದ ಮೇಲೆ, “ಯಾರಲಾ ನೀ, ಎಲ್ಲಿಯಂವಾ…. ಎಟ್ಟೊತ್ತಿನಿಂದ ಅಲ್ಲೇ ಕುಂತಿ?” ಕೇಳಿದ್ದಳು ಈರಮ್ಮ ಎಲೆಯಡಿಕೆ ಜಗಿಯುತ್ತ.
ಹುಡುಗನ ಹೆಸರು ಶಿವಬಸವ. ಹಳ್ಳಿಗರ ಬಾಯಲ್ಲಿ, ‘ಸೀಬಸೂ’ ಆದ. ಹಸಿವೆ ತಂದು ಬಿಸಾಕಿದ್ದ ಸೀಬಸೂ ನಿಷ್ಠೆಯಿಂದ ದುಡಿದ. ಹೀಗಾಗಿ ಈರಮ್ಮನ ಬಲಗೈ ಆದ. ಗಿರಾಕಿಗಳು ಹೆಚ್ಚಾದಂತೆ ಈರಮ್ಮ ಒಬ್ಬಳಿಂದಲೇ ನಿಭಾಯಿಸುವುದು ಕಷ್ಟವಾದ್ದರಿಂದ ಈ ‘ಸೀಬಸೂ’ನೇ ಈರಮ್ಮ ಕೆಫೆಯ ಮ್ಯಾನೇಜರ್ನಂತಾದ.
ಈರಮ್ಮ ಎಣಿಸಿದಂತೆ ನಡೆದುಹೋಗಿತ್ತು. ಇಡೀ ಹಳ್ಳಿಗೆ ಹಳ್ಳಿಯೇ ಈರಮ್ಮಳ ‘ಕೈಗೂಸು’ ಎಂಬಂತಾಯ್ತು. ಕೇಳಿದವರಿಗೆ ಉದ್ರಿ ಕೊಡುತ್ತಿದ್ದ ಈರಮ್ಮ ಈಗ ಎಲ್ಲರ ಬಾಯಲ್ಲಿ, ‘ಈರವ್ವಕ್ಕಾ’ ಆದಳು. ಅವಳಿಗೀಗ ಪುಡಿ-ರಾಜಕಾರಣಿಯಂಥ ವರ್ಚಸ್ಸು ಪ್ರಾಪ್ತವಾಯಿತು.
ಊರಿನ ಎಲ್ಲ ಬಿಸಿಬಿಸಿ ವರ್ತಮಾನ, ಬೆಳ್ಳಂಬೆಳಗ್ಗೆ ಉಪ್ಪಿಟ್ಟಿಗೆ ಹಾಕುವ ಉಳ್ಳಾಗಡ್ಡಿ ಒಗ್ಗರಣೆಯೊಂದಿಗೆ ಈರವ್ವಕ್ಕಳ ಬಾಣಲೆಗೆ ಬಂದು ಬೀಳುತ್ತಿದ್ದವು. ಉದ್ರಿ-ಬಾಕಿ ಉಳಿಸಿಕೊಂಡ ಕೆಲ ಬಾಯಿಚಪಲಿಗರು ಈಕೆಗೆ ನಿಷ್ಠೆಯ ಹನುಮನಂತಾದರು.
“ರೊಕ್ಕ ಎಲ್ಲಿ ಹೊಕ್ಕೈತಿ? ನಾಳೆ ನಾಡಿದ್ದು ಕೊಡು ಸಾಕು” ಎನ್ನುತ್ತಿದ್ದ ಈರವ್ವಕ್ಕಗ ‘ಏನು ಬೇಕು’ ಎಂಬುದು ಅವರಿಗೆ ಗೊತ್ತಾಗಿತ್ತು; ಊರಿನ ಮಾಜಿ ಅಧ್ಯಕ್ಷ ನೀಲಕಂಠಪ್ಪನ ಉಸಾಬರಿ ಈರಮ್ಮಗ ಬೇಕು. ಹೊಸಹೊಸ ಸುದ್ದಿ ಕೊಟ್ರ ಒಂದು ಒಗ್ಗರಣೆ ಫ್ರೀ.
ಅಂಥ ಒಂದು ಸಿಹಿಪಾಕದಂತಹ ಸುದ್ದಿ: ‘ನೀಲಕಂಠಗ ಸಕ್ರಿರೋಗ ಹತ್ತಿ, ಮುರುದ-ಮುದ್ದಿ ಆಗ್ಯಾನ’ ಎಂಬುದು.
* * *
‘ನೀಲಕಂಠ’ ಅನ್ನೋ ಹೆಸರು ಅವಳ ನೆನಪಿಗೆ ಗೀಚಿದಾಗಲೆಲ್ಲ, ನಿರ್ದಯಿ ನೆನಪುಗಳ ಅಂಡಿಗೆಗಳೇ ಉರುಳಿ, ಹಸಿ ಗಾಯವನ್ನು ಹಿಸುಕಿದಂತಾಗುತ್ತಿತ್ತು.
ತನ್ನ ಬರಡು ತುಂಡು ಮಸಾರಿ. ಮಳೆಯಾದರೆ ಸಾಕು ಕಲ್ಲುಗಳ ರಾಶಿಯನ್ನೆ ತಂದು ಸುರಿವ ಎದುರಿಗಿನ ಗುಡ್ಡ. ಗುಡ್ಡದ ತುದಿಗೆ ಸುಣ್ಣ ಬಳಿದ ರಾಮತೀರ್ಥ. ಅಲ್ಲಿ ಗವಿಯೊಳಗೆ ಬಿಳಿಲುಗುಂಟ ಹನಿವ ನೀರು. ಬದಿಗೆ ರಾಮಲಿಂಗೇಶ್ವರಮೂರ್ತಿ. ಏನೆಂದರೆ ಏನೂ ಬೆಳೆಯದ, ಬಹಳವೆಂದರೆ ವರ್ಷಕ್ಕೆ ಎರಡ್ಮೂರು ಚೀಲ ಸಜ್ಜೆ. ತಾನಾಗೇ ಬೆಳೆವ ಹಕ್ಕರಕಿ. ತುಂಡು ಜಮೀನಿನಲ್ಲೇ ಒಂದು ಬಂಡೆ. ಅದರ ಹೊಕ್ಕುಳಲ್ಲಿ ಒಂದು ಬನ್ನಿ ಗಿಡ. ಅಲ್ಲೇ ಕುಂತು ನಾನು, ನನ್ನ ಗಂಡ ರಾಮಲಿಂಗ ಕಟಿಕಟೀ ಸಜ್ಜಿ ರೊಟ್ಟಿ, ಉದರಗಾಳು ಪಲ್ಲೆ ಕರಿಂಡಿ ಮೆಲ್ಲುತ್ತಿದ್ದರೆ… ಆಹಾ! ಅದೆಷ್ಟು ಒಪ್ಪವಾಗಿದ್ದೆವು! ನನ್ನ ಗಂಡ ಸದಾ ದುಡಿವ ಸಾಧುಪ್ರಾಣಿ. ಮಾತಿಲ್ಲದ ಕೋಲೇಬಸವ. ಸಮಸ್ಯೆ ಎಂದರೆ, ಅವನಿಗೆ ವರ್ಷವಿಡೀ ಕುರುಗಳ ಬಾಧೆ. ಉಷ್ಣಕ್ಕೆ ಅವು ಹೆಚ್ಚಂತೆ. ಹಾಗೆ ಹತ್ತು ಮತ್ತೊಂದು ಕುರು. ಬಲಗಿವಿಯ ಹಿಂದೆ, ಕುತ್ತಿಗೆಯ ಏರಿಗೆ – ಎಲ್ಲ ಕುರುಗಳಂತೆ ಇದೂ ಕೂಡ ‘ಬುಗಾ’ ಆಗಿ, ಕೆಂಪು ಹುತ್ತಾಗಿ, ಕೀವಾಗಿ ಹಣ್ಣಾಗಿ ಒಡೆದು ಹೊಕ್ಕೈತಿ ಬಿಡು. ಕೀವು ಆಗಿ ಒಡೆದೂಹೋಯ್ತು, ಮತ್ತೆ ಅಲ್ಲೇ ಹುತ್ತಗಟ್ಟಿತ್ತು. ಗುಣವಾಗದೆ ಪದೇಪದೇ ಹುಣ್ಣಾದ್ದರಿಂದ ಪಟ್ಟಣದ ದೊಡ್ಡಾಸ್ಪತ್ರೆಗೆ ಹಣ ಹೊಂಚಿ ನಡೆದೆವು. ಏನೇನೋ ಕೊಯ್ದು, ಏನೇನೋ ತೆಗೆದು, ಎಲ್ಲೋ ಕಳಿಸಿ ಕೆಲದಿನಗಳ ಮೇಲೆ ಡಾಕುಟ್ರು ಹೇಳಿದ್ದು: “ಕ್ಯಾನ್ಸರ್!” ಹಾಂಗಂದ್ರ ಏನು ತಿಳೀಲಿಲ್ಲ. ಒಟ್ಟಾರೆ ಕೇಳಿದ್ದೆ. ಅದೊಂದು ಸಾಯೋವಂಥ ರೋಗ. ಆಗಷ್ಟೇ ಈ ನೀಲಕಂಠ ಹಳ್ಳಿ ಪಂಚಾಯತಿ ಅಧ್ಯಕ್ಷ. ರೊಕ್ಕಿಷ್ಟ ಸಾಲ ಕೊಡ್ತಾನ… ಆದರ ಬಡ್ಡಿ ದುಬಾರಿ. ರೋಗರುಜಿನ, ಸಂಕಟ, ಸಾವು-ನೋವುಗಳು ಬಡ್ಡಿಗೆ ಹೆರ್ಯಾವೆ? “ಹೆಚ್ಚಿನ ಔಷ್ದಿ ಕೊಡಿಸಬೇಕು ಬುದ್ಧೀ… ಹೀಗೀಗೆ… ಹೆಚ್ಚಿನ ಔಷ್ದಿಗೆ ರೊಕ್ಕ ಇಲ್ಲ… ಒಂದೆರಡು ಸಾವ್ರ ಕೊಟ್ಟಿರಿ. ಹೇಗೋ ಸಜ್ಜೆ ಬೆಳೆದ ನಿಂತೇತಿ, ಸುಗ್ಗಿಗೆ ಮಾರಿ ಕೊಡ್ತೀನಿ…” ಎಂದಿದ್ದೆ. “ನೋಡವಾ ಅದು ರೊಕ್ಕ ಐತಿ. ನಾಳೆ ನೀವ್ ಕೈ ಎತ್ತಿದ್ರ, ನಾನೇನ್ ಬೆನ್ನು ಕೆರಕೊಳ್ಲ್ಯಾ…? ನೋಡು. ಇದರ ಮ್ಯಾಲೆ ಇಬ್ರೂ ಹೆಬ್ಬೆಟ್ಟ ಒತ್ರಿ.” ಎಂದ. ಇಬ್ರೂ ಎರಡೆರಡ ಕಡೆ ಒತ್ತಿದ್ವು.. ಹೆಚ್ಚಿನ ಔಷ್ದಿ ಹೆಚ್ಚಿನ ಗುಣ ನೀಡಲಿಲ್ಲ. ಮತ್ತೆ ಹೆಬ್ಬೆಟ್ಟು… ಮತ್ತೆ ಔಷ್ದಿ… ಮತ್ತೆ ಮತ್ತೆ ಹೆಬ್ಬೆಟ್ಟು ಮತ್ತೆ ಮತ್ತೆ ಆಸ್ಪತ್ರೆ. ಬರಡು ಜಮೀನು ಅಡ ಇಟ್ಟö ಪತ್ರಗಳು ಬೆಳೆದವು. ಹುಣ್ಣು ಕೂಡ ಹಾಗೆಯೆ. ಕೊನೆಗೂ ರಾಮಲಿಂಗ ಬಂದು ಹೊಲದ ಬಂಡೆ ಮೇಲೆ ಮತ್ತೆ ಕೂಡ್ರಲೇ ಇಲ್ಲ! ಕುರುಹು ಆಗಿ ಈ ಬಂಡೆಯನ್ನೇ ನನಗೆ ಬಿಟ್ಟುಹೋದ. ಅದನ್ನಾದರೂ ಉಳಿಸಿಕೊಳ್ಳಲೆಂದರೆ ಆ ನೀಲಕಂಠ, ತನ್ನ ಸಾಲ ಎಲ್ಲವೂ ಬಡ್ಡಿ ಸಮೇತ ಈಗಿಂದೀಗಲೇ ಬೇಕೇಬೇಕು ಅಂದ. ಸೆರಗೊಡ್ಡಿ ಕಾಲ್ಹಿಡಿದು ಗೋಳಾಡಿ ಅಲವತ್ತುಕೊಂಡೆ. “ನಿಮ್ಮ ಸಾಲ ತೀರಿಸ್ತೇನಿ. ನನ್ನ ಕೈ-ಕಾಲು ಗಟ್ಟಿ ಅದಾವು. ಉತ್ತಾಕ-ಬಿತ್ತಾಕ ನನ್ನ ಜಮೀನು ನನಗ ಬಿಟ್ಟುಕೊಡ್ರೀ…” ಹಣದ ಥೈಲಿಗೆ ಕರುಣೆ ಇರ್ತೈತಾ? “…..ಎಲ್ಲೀದ ಬೇ… ಎಲ್ಲಾ ಲೆಕ್ಕ ಹಾಕಿದ್ರ ನೀನs ನನಗ ಕೊಡಬೇಕಾಕ್ಕತಿ” ಎಂದವನೇ ಪಂಚಾಯತಿ ಚಾವಡಿ ಕಡೆ ನಡೆದುಬಿಟ್ಟ. ಏನೇನೋ ಮಾಡಿದೆ. ಯಾರಾರಿಂದಲೋ ಹೇಳಿಸಿದೆ. ಈ ಜನ, ಈ ಸಮಾಜ, ಸದಾ ಬಲವಿದ್ದವರ ಸಂಗಾತ ರ್ತೆöÊತಿ. ಯಾವುದಾವುದೋ ದೇವರಿಗೆ ಹರಕೆ ಹೊತ್ತೆ. ನನ್ನ ರಾಮಲಿಂಗ ನನ್ನ ಕೈಬಿಟ್ಟಂತೆ, ಅವನ ಬೆವರು ಉಂಡ ತುಂಡು ಜಮೀನೂ ಅವನೊಂದಿಗೆ ನನ್ನ ಕೈಬಿಟ್ಟಿತು. ಇದ್ದೂರಲ್ಲಿ ಇದ್ದರೆ ಅವಮಾನ ಅಂತ ಹಳ್ಳಿ ತೊರೆದು ಎಲ್ಲೆಲ್ಲೋ ಅಲೆದೆ. ಕೈಗೆ ಸಿಕ್ಕ ದಗದ ಮಾಡಿದೆ. ವಯಸ್ಸು ಹಣ್ಣಾಗುತ್ತಿತ್ತು. ಎಲ್ಲೋ ಕೆಲಸಕ್ಕಿದ್ದ ಚಾದಂಗಡಿಯಲ್ಲಿ ಎಲ್ಲ ತಿನಿಸುಗಳನ್ನು ಹದವಾಗಿ ಮಾಡುವ ಕಲೆ ಒಲಿಯಿತು. ಕೈಯಲ್ಲಿ ‘ಸೊಲ್ಪ’ ರೊಕ್ಕ ಮಿಕ್ಕಿತು. ಆಗ ಬಂದ ‘ಇಚಾರ’ವೇ ನನ್ನೂರು. ನನ್ನ ರಾಮಲಿಂಗ. ಆ ತುಂಡು ಬರಡು ಜಮೀನು. ಗಂಡ, ಜಮೀನು ಎರಡೂ ನನ್ನ ಪಾಲಿಗೆ ಮಿಂಚಿ ಹೋದವುಗಳು. ಆದರೆ, ನನ್ನೂರು ಇನ್ನೂ ಅಲ್ಲೇ ಐತಿ. ಕೈಯಲ್ಲಿ ಸ್ವಲ್ಪ ಹಣ ಐತಿ. ಅಡುಗೆ ಮಾಡುವ ‘ಇದ್ಯೆ’ ಐತಿ. ನಡಿ… ತಡ ಯ್ಯಾಕೆ?
ಫಲಿತಾಂಶ: ‘ಈರಮ್ಮ ಚಾದಂಗಡಿ’.
* * *
“ಇವತ್ತ ‘ಚಾ’ಕ್ಕ ಸಕ್ರಿ ಹೆಚ್ಚ್ ಆಗೇತಿಬೇ” ಅಂತ ಯಾರಾದ್ರೂ ತಕರಾರು ತೆಗೆದ್ರ, ಸರ್ರನೆ ಸಿಟ್ಟಿಗೆ ರ್ತಿದ್ದ ಈರಮ್ಮ, “ಇವತ್ತ ನೀಲಕಂಠಗ ಸಕ್ರಿ ಹೆಚ್ಚಾಗಿ ಎಚ್ಚರದಪ್ಪಿ ಬಿದ್ದಿದ್ದನಂತ, ದವಾಖಾನಿಗೆ ಹಾಕ್ಯಾರ…” ಅಂತ ಯಾರಾದ್ರ ಹೇಳಿದ್ರ ‘ಭೋ’ ಖುಷಿಯಾಗುತ್ತಿದ್ದಳು. ಆಗ ಎಲ್ಲ ತಿನಿಸಿಗೂ ಎಣ್ಣಿ-ಉಳ್ಳಾಗಡ್ಡಿ ತುಸು ಹೆಚ್ಚಿಗೆ ಸುರಿದು, ‘ಕಮ್ಮಗೆ’ ರೋಡೆಲ್ಲ ಘಮಗುಡುವಂತೆ ಮಾಡುತ್ತಿದ್ದಳು.
ಸೀಬಸೂ ಹೆಚ್ಚಿನ ಎಲ್ಲ್ಲ ದೇಖರೇಕಿ ನೋಡಿಕೊಳ್ತಿದ್ದ. ಕಂಡವರೆಲ್ಲ ‘ಅಜ್ಜಿ-ಮೊಮ್ಮಗ’ ಎಂದೇ ದೃಢವಾಗಿ ನಂಬಿಕೊಂಡು ತಾವೇ ಹಾಗಂತ ತೀರ್ಮಾನಿಸಿಬಿಟ್ಟಿದ್ದರು. ಈರಮ್ಮಳ ದೌರ್ಬಲ್ಯವನ್ನು ಅಥವಾ ಅಭಿರುಚಿಯನ್ನು ಚೆನ್ನಾಗಿ ಅರಿತ ಸೀಬಸೂ, ಗಿರಾಕಿಗಳಿಂದ ನೀಲಕಂಠನ ಬಗ್ಗೆ ಏನೇನೆಲ್ಲ ಮಾಹಿತಿ ಕಲೆಹಾಕಿ, ಈರಮ್ಮಳ ಮುಂದೆ ಸಿನೆಮಾ ಥರ ಒಗ್ಗರಣೆ ಹಾಕಿ, ಚಿತ್ರಕಥೆ ಒಪ್ಪಿಸುತ್ತಿದ್ದ. ಆಗೆಲ್ಲ ಸೀಬಸೂ ಅವಳಿಗೆ ಅತ್ಯಂತ ಆಪ್ಯಾಯಮಾನವಾಗಿರುತ್ತಿದ್ದ. ತನ್ನ ತುಂಡುಜಮೀನನ್ನು ನೀಲಕಂಠ ನುಂಗಿದ್ದನ್ನು, ಅನೇಕ ಬಾರಿ ‘ಸಾದ್ಯಂತ’ ಕಥನ ಮಾಡಿ ಸೀಬಸೂನ ಮುಂದೆ ತೋಡಿಕೊಂಡಿದ್ದೂ ಆಗಿತ್ತು. ಹೀಗೆ ಸೀಬಸೂ ಈರಮ್ಮಳ ಚಾದಂಗಡಿಯ ಅವಿಭಾಜ್ಯ ಅಂಗವಾಗಿದ್ದ; ವೈನಾಗಿ ಹೊಂದಿಕೊಂಡಿದ್ದ. ಈರಮ್ಮನಿಗಿಂತ ಇವನ ಮಾತೇ ‘ಸಾಫ್ಟ್ ಆ್ಯಂಡ್ ಮಾಡರ್ನ್’ ಆಗಿದ್ದರಿಂದ, ಯಾರಾದ್ರೂ ‘ಛೊಲೋ’ ಗಿರಾಕಿ ಬಂದರೆ ಸೀಬಸೂನೇ ಸಂಭಾಳಿಸುತ್ತಿದ್ದ.
* * *
ಈಗ ಹಳ್ಳಿಗೂ ಪಕ್ಷ-ರಾಜಕೀಯ ಅಡಿಯಿಟ್ಟು, ಇಡೀ ಹಳ್ಳಿ ಸದಾ ಗುಮ್ಮನಗುಸಕನಂತಿರುತ್ತಿತ್ತು. ಊರಲ್ಲಿ ಬಿಜೆಪಿ, ಕಾಂಗ್ರೆಸ್ಸು, ಜೆಡಿಎಸ್ಸು… ಹೀಗೇ ಮೂರು ಮತ್ತೊಂದು ಗುಂಪುಗಳಾಗಿ ತಮ್ಮತಮ್ಮಲ್ಲಿ ಕಿಡಿಕಾರಿಕೊಳ್ಳುವುದೂ ಕೂಡ ಹೆಚ್ಚಾಗಿತ್ತು. ಯಾರಾದರ ವಿಷಯ ಬಂದ್ರೆ, ‘ಅವನು ಯಾವ್ ಪಾರ್ಟಿ?’ ಎಂಬ ಪ್ರಶ್ನೆ ಮೊಟ್ಟಮೊದಲು ಅಡಿಯಿಡುತ್ತಿತ್ತು. ಹೀಗೇ ಯಾವ್ಯಾವೋ ಪಕ್ಷಗಳ ಎರಚಾಟ. ಪಕ್ಷಾಂತರ, ಹಾಳುಮೂಳು… ಏನೇನೋ ಆಗಿ, ಹಳೆ ತಲಿ ನೀಲಕಂಠನಿಗೆ ಸದ್ಯದ ರಾಜಕೀಯ ‘ವಜ್ಜೆ’ ಎನ್ನಿಸತೊಡಗಿತು. ಒಂದೆರಡು ಬಾರಿ ರೊಕ್ಕ ಸುರುವಿ-ಹರವಿದರೂ, ಸೋತು ಸುಣ್ಣವಾಗಿ, ಈಗೀಗಂತೂ ಮಧುಮೇಹ ತಗುಲಿ, ಹಳೇಗುಡಿಸಲಿನಂತಾಗಿದ್ದ. ಮೊದಲಿನ ದರ್ಪ, ಖದರು, ರೊಕ್ಕದ ನಶಾ, ವಜನು… ಇದಾವುದೂ ಇಲ್ಲದೆ, ಸದ್ದಿಲ್ಲದ ಸುಬೇದಾರನಾಗಿದ್ದ. ಅವನ ಕೆಲ ಫಲವತ್ತಾದ ಜಮೀನುಗಳು, ಇವತ್ತಿನ ಚುನಾವಣೆ ಭರಾಟೆಯ ಪ್ರವಾಹದಲ್ಲಿ ಸುದ್ದಿ-ಸುಖಾನ ಇಲ್ಲದೆ ಕರಗಿಹೋಗಿದ್ದವು. ಆದರೆ, ಮಡ್ಡಿಯಾಗಿದ್ದ ಈರವ್ವನ ತುಂಡುಭೂಮಿ ಮಾತ್ರ ಎಲ್ಲೂ ಮಾರಾಟವಾಗದೆ, ‘ಇದ್ದ-ಹಾಗೇ’ ಉಳಿದುಕೊಂಡಿತ್ತು. ಮೇಲಾಗಿ ‘ಶುಗರ್’ ಏರಿಳಿತದ ನಡುವೆ, ನುಗ್ಗು-ನುಗ್ಗಾಗಿದ್ದ ನೀಲಕಂಠ ತೇಲುಗಣ್ಣು-ಮೇಲುಗಣ್ಣು ಬಿಡುತ್ತಿದ್ದ. ಈ ಎಲ್ಲದರ ನಡುವೆ ಈರವ್ವನ ಚಾದಂಗಡಿಯ ಉತ್ಥಾನ, ಉತ್ಕರ್ಷದ ವಿಷö್ಯ ಗೊತ್ತಾದರೂ… ಇಷ್ಟರೊಳಗಾಗಿ ಆ ತುಂಡು-ಜಮೀನು ಕೂಡಾ ಮಾರಾಟವಾಗಬೇಕಿತ್ತು, ಆದರೆ ಆಗಲಿಲ್ಲ ಎಂಬ ವಿಷಾದದಲ್ಲಿ ಮಿಡುಕುತ್ತ ಮುರುಟುತ್ತಿದ್ದ.
* * *
ಊರಿನ ಪ್ರಸಕ್ತ ರಾಜಕೀಯ ಚರ್ಚೆಗಳಿಗೆಲ್ಲ ಈರಮ್ಮನ ಚಾದಂಗಡಿಯೆ ವಿಧಾನಪರಿಷತ್ತು. ದಿಲ್ಲಿ ಚುನಾವಣೆಯಿಂದ ಹಿಡಿದು, ಗ್ರಾಮ ಪಂಚಾಯತಿ ಎಲೆಕ್ಷನ್ವರೆಗೂ, ತರ್ಕ-ವಿತರ್ಕ ಸಮಾಲೋಚನೆ, ವಾದ-ವಿವಾದ ಒಮ್ಮೊಮ್ಮೆ ತಾರಕಕ್ಕೇರಿ ಕೈ ಕೈ ಮಿಲಾಯಿಸುತ್ತಿದ್ದುದು ಕೂಡಾ ಈರಮ್ಮಳ ಬಿಸಿಬಿಸಿ ಮಿರ್ಚಿಗಳ ನಡುವೆಯೇ.
ಈ ಬಾರಿಯ ಒಂದು ಚಮತ್ಕಾರಿಕ ಸುದ್ದಿ: ವಂಶಪಾರಂಪರ್ಯವಾಗಿ ನೀಲಕಂಠನ ಮನೆತನವನ್ನು ದ್ವೇಷಿಸಿಕೊಂಡು ಬಂದಿದ್ದ, ಅವನ ದಾಯಾದಿ ಶೇಖರಪ್ಪ, ಹಲವಾರು ಬಾರಿ, ಬೇರೆ ಬೇರೆ ಕಾರಣಗಳಿಂದ ಸೋತಿದ್ದರೂ, ಈ ಬಾರಿ ಗೆದ್ದು ಬೀಗಿದ್ದ. ಅಧ್ಯಕ್ಷಗಾದಿಗೆ ಕೂಡ ಆಯ್ಕೆಯಾಗಿ ಜಯಭೇರಿ ಬಾರಿಸಿದ್ದ. ಎಷ್ಟೋ ವರ್ಷಗಳ ಸೋಲು, ಈ ಬಾರಿ ಗೆಲುವಾಗಿ ಮಾರ್ಪಟ್ಟಿತ್ತು. ಈ ಸರ್ತಿ ವಿರೋಧಪಕ್ಷ ಸೇರಿ ಕಮಾಲ್ ಮಾಡಿದ್ದ ಶರಣು ಎಂಬವ ಶೇಖರಪ್ಪನ ಖಾಸಾ ಸ್ನೇಹಿತ ಹಾಗೂ ಆಪ್ತ ಸಲಹೆಗಾರ. ಈಗ ಅವನೇ ಶೇಖರಪ್ಪನ ಖಾಸಗಿ ಸೆಕ್ರೆಟರಿ. ಈ ಶರಣು ಈರಮ್ಮನ ಚಾದಂಗಡಿಯ ಸಂಸ್ಥಾಪಕ ಗಿರಾಕಿ ಎಂದರೂ ಸರಿಯೇ. ಈಗ ನೀಲಕಂಠನ ಸೊಕ್ಕು ಹಾಗೂ ಸೊಂಟ ಮುರಿಯಲು ಕಾಯುತ್ತಿದ್ದ ಈರಮ್ಮನಿಗೆ, ‘ಹಾಲು ಉಕ್ಕಿದಂತೆ’ ಖುಷಿಯೋ ಖುಷಿ.
ಒಂದಿನ ಸಂದರ್ಭ ನೋಡಿ, ಈರಮ್ಮಾ ಶರಣುಗೆ, “ನೋಡ್ ಶರಣಪ್ಪ… ಒಂದ್ ಉಪ್ಕಾರಾ ಮಾಡಬೇಕ್. ಕೊಂಯ್ಯಾ-ಕರ್ರ ಅಂದೀ ಮತ್ತ…” ಎಂದು ಪೀಠಿಕೆ ಹಾಕಿದಳು.
“ಏನ್ ಹೇಳಬೇ ಈರವ್ವಕ್ಕ… ಶೇಖರಣ್ಣಗ ಏನಾರ ಹೇಳೂದೈತೇನ?” ಭುಜ ಕುಣಿಸುತ್ತಲೇ ಕೇಳಿದ.
“ಈ ಕೆಲ್ಸ ನೀ ಹೆಂಗಾರ್ ಮಾಡಬೇಕ್ ಏನಪಾ… ನಾ ಯಾವಾಗರ ನಿನ್ನ ಏನಾರ ಕೇಳೇನೇನು? ಈ ನನ್ನ ಕೆಲ್ಸ ನೀ ಮಾಡಿಸಿಕೊಟ್ರ ನಿನ್ನ ಎಲ್ಲ ಉದ್ರಿ ಬಾಕಿ ಮೊಫತ್ ಬಿಡತೇನ್ ನೋಡ. ಒಂದು ಪೈಸಾ ನೀ ಕೊಡಬ್ಯಾಡ ಏನಪಾ…” ಈರಮ್ಮ ಅವನ ಮೂಗಿಗೆ ಅಚ್ಚೇರು ಬೆಣ್ಣೆ ಸವರಿದ್ದಳು.
“ಹಿಂಗ್ಯಾಕಬೇ… ಅದs ಬ್ಯಾರೆ… ಇದs ಬ್ಯಾರೆ… ಏನ ಹೇಳ.”
“ಅದsನಪಾ… ನನ್ನ ಜಮೀನನ್ನ ಆ ನೀಲ್ಯಾ ಹಕ್ಕನಾಕ್ ನುಂಗಿಬಿಟ್ಟಾನ. ಅದ ನನಗೆ ಬರೀ ಮಡ್ಡಿ ಅಲ್ಲೆನಪಾ. ಅಲ್ಲೇ ನನ್ನ ಗಂಡನ ನೆನಪೈತಿ. ಅಲ್ಲೇ ನಮ್ಮ ಬೆವರು, ಕಣ್ಣೀರು ಇಂಗೇತಿ. ಅಲ್ಲೆ ಇನ್ನೂ ನನ್ನ ಗಂಡ ನಟ್ಟ ಕಡ್ಯಾಕತ್ತಾನ ಅಂತ ಅನಸ್ತೈತಿ. ನಡಬರ್ಕ ಒಂದು ನಂದಿ ಆಕಾರದ ಬಂಡಿ ಐತಿ ನೋಡ… ಅದನ ಕಂಡ್ರ ನನ್ನ ಗಂಡನs ಎದುರಿಗೆ ಕುಂತಂತಾಗಿ ಎದಿ ಬಡ್ಕೋತೈತಿ. ಅದರ ಹೊಟ್ಯಾಗ ಬನ್ನಿಗಿಡ ಆಗ ಬರೀ ಒಂದಾಳಿನಷ್ಟಿತ್ತು. ಈಗ ನೋಡ್ ಹರವಾಗಿ ಹಬ್ಬಿ, ‘ಅರಳಿ ಮರ’ ಆಗೇತಿ. ಏನಾರ ಮಾಡ ಶರಣಾ… ನನ್ನ ಜಮೀನ ಬಗ್ಗೆ ಶೇಖರಪ್ಪಗ ಹೇಳ ಏನಪಾ. ನಾನವಗ ಭೆಟ್ಟಿಯಾಗಂದರ ನಾನs ಭೆಟ್ಟಿಯಾಗತೇನಿ.” ಒಂದೇ ಉಸುರಿಗೆ ಎಲ್ಲವನ್ನೂ ಬಕಬಕಾ ಕಾರಿಕೊಂಡಳು.
“ಹ್ಹೇ.. ಸಾಕ್ ಬಿಡಬೇ.. ಮೊದಲs ಶೇಖರಣ್ಣ ನೀಲಕಂಠನ ಬಗ್ಗೆ ಹಲ್ ಕಡೀತಾನ… ನೀಲಕಂಠ ತನ್ನ ಉರದಾಟದಾಗ ಶೇಖರಣ್ಣನ ತುಸಾ ಕಾಡ್ಯಾನೇನ್.. ನೀಲಕಂಠನ ಮಗ್ಗಲ ಮಡಚಾಕ ಏನೇನ್ ಬೇಕ ನೋಡ ಎಲ್ಲಾನು ವ್ಯವಸ್ಥೆ ಮಾಡ್ಯಾನ. ಈಗ ನಿನ್ನ ಜಮೀನ ಒಂದ ಅಗದೀ ಪಸಂದ ಆಯುಧ ಸಿಕ್ತು ಅವಗ… ಶೇಖರಣ್ಣ ಇದನ್ನ ಬಿಡೂ ಆಸಾಮಿ ಅಲ್ಲ ಏನವಾ… ಈರವ್ವಕ್ಕಾ ನೀನೇನ್ ಚಿಂತಿ ಮಾಡಬ್ಯಾಡ. ಆದರ ಪಟ್ಟಣಕ್ಕೆ ಹೋಗಿ ಖರೀದಿ-ಗಿರೀದಿ ಕಾಗದ ಬರದ ಕೊಟ್ಟಿಲ್ಲಲ್ಲ…?”
“ಏನೋಪ್ಪ… ‘ಅಡ-ಪತ್ರ’ ಇಟ್ಕೋತೀನಿ ಅಂತ ಹೆಬ್ಬೆಟ್ಟು ಒತ್ತಿಸ್ಕೊಂಡಾನ.”
“ಹಾಂಗಾಂದ್ರೆ ಅದೇನ್ ಖರೀದಿ ಆಗಿಲ್ಲ ತೊಗೋ… ಪುಕ್ಕಟ್ಟ ನುಂಗಾಕ ನೋಡ್ಯಾನ… ಅದಕ ಅದು ಎಲ್ಲೂ ಮಾರಾಟ ಆಗಿಲ್ಲ. ನನಗ ಎರಡು ದಿನ ಟೈಂ ಕೊಡಬೇ… ನಾಡದ ನಿನಗ ಎಲ್ಲ ಬಂದ ಹೇಳ್ತೇನಿ…” ಹೊರಡಲನುವಾದ.
“ಏ… ಸೀಬಸ್ಯಾ… ಶರಣೂಗ ಇನ್ನೊಂದು ತೊಯ್ಸಿದ ಅವಲಕ್ಕಿ ಕೊಡೋ…” ಎಂದು ನವಿಲಂತೆ ಕುಣಿವ ಮನಸ್ಸಿನಿಂದ ‘ಗ್ರ್ಯಾಂಟ್’ ಮಾಡಿದಳು ಈರವ್ವ.
* * *
ನಾಲ್ಕಾರು ದಿನ ಉರುಳಿದರೂ ಶರಣೂ ಪತ್ತೆ ಇಲ್ಲ. ಈರಮ್ಮ ಒಳಗೊಳಗೆ ಮಿಡುಕತೊಡಗಿದಳು. “ಈ ರಾಜಕಾರಣದವರ ಹಣೇಬರನs ಇಷ್ಟ್… ಗಿಡದಾನ ಮಂಗ್ಯಾ ಕೈ ಬಿಡೋವಾಂಗ ಏನೇನೋ ಪಟರಂಗ ಬಿಚ್ಚಿಬಿಡ್ತಾರ. ನಾವ್ ಅದನ್ನs ನಂಬ್ಕೊಂಡ ಕಣ್-ಬಾಯಿ ಬಿಟ್ಕೊಂಡ ಕುಂರ್ತೇವ್…” ಎಂದೆಲ್ಲ ಪುಂಖಾನುಪುಂಖ ಶಪಿಸತೊಡಗಿದಳು ಈರಮ್ಮ. ಅದೆಷ್ಟು ಖತಿಗೊಂಡಿದ್ದಳೆಂದರೆ, ಯಾರೂ ಇಲ್ಲದಾಗ ಒಳಗೊಳಗೆ ಬಾಯಿಗೆ ಸೆರಗು ಒತ್ತಿ ಹಿಡಿದು ನಿಶ್ಶಬ್ದ ಅಳುತ್ತಿದ್ದಳು.
ಅಂದು ಇಡೀ ರಾತ್ರಿ ಕಣ್ಣಿಗೆ ಕಣ್ಣು ತಾಗಲಿಲ್ಲ. ರಾಮಲಿಂಗನ ಕರೀ ಬೆನ್ನು, ಬೆವರಿಂದ ತೊಯ್ದು ತೊಪ್ಪಡಿಯಾಗಿದ್ದರೂ, ಬರೀ ಧೋತರ ಗಂಡುಗಚ್ಚೆಯಲ್ಲಿ ‘ನಟ್ಟು’ ಕಡಿಯುವ ಚಿತ್ರ, ಕಣ್ಣಲ್ಲೇ ಎರಕವಾಗಿದ್ದನ್ನು ಪದೇಪದೇ ತಿರುವಿಹಾಕುತ್ತಿದ್ದಳು. ಬರೀ ಕಲ್ಲು-ಹರಳು ತುಂಬಿದ ತನ್ನ ಮಸಾರಿ. ನಡುವೆ ಬಿಳಿ ಹೋರಿಕರುವಿನಂಥ ಪುಟ್ಟ ಬಂಡೆ. ಅದರ ಬಿರುಕಿನಿಂದಲೆ ಟಿಸಿಲೊಡೆದು ಎದ್ದುನಿಂತ ಬನ್ನಿಗಿಡ. ಎಲ್ಲವೂ ಧಗಧಗ ಪಂಜಿನಂತೆ ಇವಳನ್ನು ಹಸಿಹಸಿ ಸುಡುತ್ತಿದ್ದವು. ಪಂಜುಗಳ ನಡುವೆ ನೀಲಕಂಠ ಥೇಟ್ ರಾಕ್ಷಸನಂತೆ ‘ಹ್ಹ… ಹ್ಹ… ಹ್ಹ…’ ಎಂದು ರಣಕೇಕೆ ಹಾಕುತ್ತ ‘ದಗಲ್-ದಗಲ್’ ಎಂದು ಕುಣಿಯುತ್ತಲೇ ಇದ್ದ. ಹಾಗೆಯೆ ಯಾರಿಗೂ ಸೋಲದ ಅಜೇಯ ಐರಾವಣ-ಮೈರಾವಣನಂತೆ ಠೇಂಕರಿಸುತ್ತ, ಇವಳ ಮಂಪರುನಿದ್ರೆಗೂ ಕರಾಳ ಕನಸಾಗಿ ಕಾಡಿದ್ದ. ಇವನ ಗೋರಿ ಮ್ಯಾಲೆ ಕರಿಕಿ ಬೀಳಲಿ ಎಂದೆಲ್ಲ್ಲ ಶಪಿಸುತ್ತ ಎಚ್ಚರವಾಗುತ್ತಿದ್ದಳು.
ಅಷ್ಟರಲ್ಲಿ ಬೆಳಗಿನ ಕತ್ತಲು ಹರಿದು, ನಸುನಸು ಬೆಳಕು.
ಈರವ್ವ ಎದ್ದವಳೇ ಜಳಕ ಮುಗಿಸಿ ಗುಡ್ಡದ ರಾಮಲಿಂಗನ ಫೋಟೋಗೆ ವಿಭೂತಿ ಬಳಿದು, ತನ್ನ ನೊಸಲಿಗೂ ಇಟ್ಟುಕೊಂಡು, ಗಂಧದ ಕಡ್ಡಿ ಬೆಳಗಿ, ಕೈಮುಗಿದು ಏನೋ ಮಣಮಣ ತನ್ನೊಳಗೆ ಅಂದುಕೊAಡು, ತಡಿಕೆ ಸರಿಸಿ, ಅಡುಗೆ ಕಡೆ ಬಂದು ಒಲೆ ಹೊತ್ತಿಸಿ, ‘ಚಾ’ಕ್ಕೆ ಎಸರು ಇಟ್ಟು, ಉಪ್ಪಿಟ್ಟಿಗೆ ತಯಾರಿ ನಡೆಸಿದಳು. ಅಷ್ಟರಲ್ಲಿ ಬೆಳ್ಳನೆ ಬೆಳಕಾಯ್ತು. ಇನ್ನೂ ಉಪ್ಪಿಟ್ಟು ಉಮ್ಗೊಯ್ದಿರಲಿಲ್ಲ. ಆಗಲೇ ಕೆಲ ರೈತಾಪಿ ಜನ ಬೆಳಗಿನ ‘ಚಾ’ಕ್ಕೆ, ಕಟ್ಟಿಗೆ-ಫಳಿಯ ಮೇಲೆ ಸಾಲಾಗಿ ಹಕ್ಕಿಗಳಂತೆ ಬಿಟ್ಟ-ಗಣ್ಣಿಂದ ಕಾಯುತ್ತ ಕುಳಿತಿದ್ದರು.
ಸೂಸಲಕ್ಕೆ ಚುರುಮುರಿ ನೀರಲ್ಲಿ ನೆನೆಹಾಕುತ್ತಿದ್ದಳು.
ನೋಡುತ್ತಾಳೆ: ಬಾಗಿಲಲ್ಲಿ ಶರಣೂ!
“ಏನs ಮಾರಾಯಾ… ಎಲ್ಲೋ ಗಪ್ ಆಗಿಬಿಟ್ಟಿದ್ಯಲ್ಲಪ್ಪ… ಏನೇನೋ ಬಡಾಯಿ ಕೊಚ್ಚಿ ಸರಹೊತ್ತಿನ್ಯಾಗ ಹೋದರಂತ ಅನ್ನೋ ಹಾಂಗ್… ಏನ್ ಮಾಡಿದಿ? ನನ್ನ ಕೆಲಸ ಹಣ್ಣೋ… ಕಾಯೋ…?” ಪ್ರಶ್ನೆಗಳ ಸಿವುಡನ್ನೇ ಶರಣನ ಮಾರಿಗೆ ಹಿಡಿದಳು.
“ತಡೀ ಬೇ… ಅದನ್ನs ಹೇಳಾಕಂತ ಬಂದೀನಿ… ಮೊದ್ಲ ಒಂದು ಚಾ ಕೊಡ.”
“ಬರೇ ಚಾ ಯಾಕೋ ಮಾರಾಯಾ… ತೊಗೋ ಬಿಸಿ… ಉಪ್ಪಿಟ್ಟ ಆಗೇತಿ.”
“ಛೊಲೋ ಆತ ಕೊಡಬೆ.”
“ಏನಾತು?”
“ಅದs ಎಲ್ಲಾ ಸವಿಸ್ತಾರ ಹೇಳ್ದೆ… ಅವ್ಗೂ ಸೋಲ್ಪ ಸೋಲ್ಪ ಗೊತ್ತಿತ್ತ… ಹಾಂಗs ಮರುದಿನ ಪಂಚಾಯತಿಯೊಳಗ ಸರ್ವೆ ನಂಬ್ರ, ಉತಾರ ಎಲ್ಲ ತೆಗೆಸಿ, ಅವತ್ತs ಒಂದೀಟ್ ಕೆಲ್ಸದ ಮ್ಯಾಗ ತಾಲೂಕಿಗೆ ಹೋಗೋದಿತ್ತ. ನಿನ್ನ ಜಮೀನಿನ ಉತಾರ ಪ್ರಕಾರ, ಅದು ಖರೀದಿ ಆಗೇ ಇಲ್ಲ ಏನ್ಬೆ… ಅದೊಂದು ಮಸ್ತ ಸುದ್ದಿ ನೋಡ್… ಶೇಕ್ರಣ್ಣ ಪಸಂದ ಖುಷಿ ಆದ. ಇದರಾಗ ನೀಲಕಂಠನ ಸೊಕ್ಕ ಮರ್ಯಾಕ ರ್ತೇತಿ ನೋಡ್… ಇದನ್ನ ಬಿಡೋದ ಬ್ಯಾಡs… ಕೊನೆ ದಂಡಿಗೆ ಹಚ್ಚೇಬಿಡೂನ ಅಂತ ಅಂದಾನ ಶೇಖ್ರಣ್ಣ… ಪಾಪ! ಹೆಣ್ಣು ಹೆಂಗ್ಸು… ಒಂದಿಷ್ಟು ಚಿಲ್ರೆ ರೊಕ್ಕ ಚೆಲ್ಲಿ, ಇಡೀ ಜಮೀನ ನುಂಗ್ಯಾನ ಬಡ್ಡೀಮಗ… ಇದರಾಗ ಅವನ ಸೊಂಟಾ ಮರ್ಯಾಕ ರ್ತೇತಿ ಅಂದಾನ. ಅಷ್ಟೇ ಅಲ್ಲ, ಈರಮ್ಮಗ ಹೇಳು… ಇನ್ ಮುಂದಿನ ಆಟ ಎಲ್ಲಾ ನಮ್ದು ಐತಿ…” ಒಂದೇ ಉಸುರಿಗೆ ಎಲ್ಲ ಒದರಿದ ಶರಣು ದನಿಯಲ್ಲಿ, ಒಂದು ಯುದ್ಧ ಭಾಗಶಃ ಗೆದ್ದ ಹುರುಪು ಇತ್ತು.
ಈರವ್ವಗಂತೂ ಹೊರಗೆ ಬಂದು, ರೋಡಿಗೆ ನಿಂತು, ಕೇಕೆ ಹಾಕಬೇಕೆನ್ನಿಸಿತು. ಸೀಬಸೂ ಎಲ್ಲಿಲ್ಲದ ಲವಲವಿಕೆಯಿಂದ ಓಡಾಡುತ್ತಿದ್ದ. ಇವನ ಸಾಕಿದ ಅವ್ವ ಈರವ್ವ ಈ ಪಾಟಿ ಸಂತೋಷಪಟ್ಟಿದ್ದನ್ನು ಸೀಬಸೂ ಈವರೆಗೆ ನೋಡಿದ್ದೇ ಇಲ್ಲ.
* * *
ಮತ್ತೆರಡು ದಿನ ಬಿಟ್ಟ ಬಂದ ಶರಣು, ಇನ್ನೊಂದು ‘ಛೊಲೋ’ ಸುದ್ದಿ ಮೈಗೆ ಮೆತ್ತಿಕೊಂಡ ಬಂದಿದ್ದ.
“ನೋಡಬೇ ಈರಮ್ಮ… ಇವತ್ತು ಬೆಸ್ತವಾರ… ನಾಳೆ-ನಾಡದು ಬಿಟ್ಟರೆ ಆಯಿತಾರ ರ್ತೇತಿ… ಸ್ವಾಮಾರ ನಮ್ಮ ಜೋಡಿ ಮಧ್ಯಾಹ್ನಕ್ಕ ಅಲ್ಲಿ ಮುಟ್ಟೋಹಾಂಗ ಪಟ್ಟಣದ ರಿಜಿಸ್ಟ್ರೀ ಕಚೇರಿಗೆ ಬಂದ್ಬಿಡು… ಅವತ್ತ ನಿನ್ನ ಗಂಡನ ಹೆಸರ ಕಮ್ಮಿ ಮಾಡಿಸಿ ನಿನ್ನ ಹೆರ್ಗೆ ಹಕ್ಕಪತ್ರ ಮಾಡಸೂಣು… ಎಲ್ಲ ತಯಾರಿ ಆಗೇತಿ… ನೀಲಕಂಠಗ ಏನೂ ಮಾಡಾಕಾಗುದಿಲ್ಲ… ಅವ ಕೊಟ್ಟ ರೊಕ್ಕಕ್ ಇಷ್ಟ ದಿನ ನಿಮ್ಮ ಜಮೀನನ್ನ ಉಪಭೋಗಿಸ್ಯಾನ… ಅದಕ್ಕ ಅದ ಸರಿ ಆತ… ನೀ ಮಾತ್ರ ಸ್ವಾಮಾರಾ ತಪ್ಪಿಸಬ್ಯಾಡ… ಒಂದರ ಬಸ್ಸಿಗೆ ಬಂದಬಿಡ. ನಾವ್ ಬೆಳಗ್ಗೆನ ಹೋಗರ್ತೇವ… ನೀ ಬರಲಿಲ್ಲಂದ್ರ ನಿನ್ನ ಜಮೀನು ಖಾಯಂ ನೀಲಕಂಠಗ ಸೇರಿಬಿಡ್ತೇತಿ ನೋಡ್ ಮತ್ತ… ಅಲ್ಲಿ ಎಲ್ಲ ಕಾಗದ ಪತ್ರ ತೆಗೆಸರ್ತೀವಿ.” ಇಂಥ ಕೋಲ್ಮಿಂಚಿನಂಥ ಸುದ್ದಿ ಹೇಳಿ, ಬರೀ ಚಾ ಕುಡದ ಅವಸರವಸರವಾಗಿ ಅದೆಲ್ಲೋ ಹೋದ.
* * *
ಇಂದು ಸೋಮವಾರ.
ಒಂದಿಷ್ಟು ಖಾರಾ, ಉಪ್ಪಿಟ್ಟು ಮಾಡಿಟ್ಟು.. ಸೀಬಸೂನ ಕರೆದು, “ಇವತ್ತ ಇಷ್ಟರಮ್ಯಾಲೆ ಅಂಗಡಿ ನಡ್ಸು.. ನಾನ್ ಬರಾಕ ರಾತ್ರಿ ಆಕ್ಕೇತಿ… ನನ್ನ ದಾರೀ ನೋಡಬ್ಯಾಡ. ನೀ ಊಟ ಮಾಡಿ ಮಲಕ್ಕೋ. ಆ ನೀಲಕಂಠನ ಸೊಕ್ಕ ಮರ್ಯೋ ದಿನ ಇವತ್ತು…” ಎನ್ನುತ್ತ ಮತ್ತೊಮ್ಮೆ ಸೀರೆ ಎತ್ತಿ ಕಟ್ಟಿ, ನಡಪಟ್ಟಿ ಬಿಗಿ ಮಾಡಿಕೊಂಡಳು.
ಗುಡ್ಡ ಏರಿ, ರಾಮಲಿಂಗನ ಗುಡಿ ಇದ್ದ ಗವಿ-ತೀರ್ಥಕ್ಕೆ ಹೋದಳು.
ಮೈಮೇಲೆ ಬೀಳುತ್ತೇನೋ ಎಂಬಂತಿದ್ದ ಗುಡ್ಡದ ಆಣಿಯ ಬುಡದಲ್ಲಿ ಒಂದು ಕತ್ತಲಗವಿ. ಇಪ್ಪತ್ತಕ್ಕೂ ಹೆಚ್ಚು ಮೆಟ್ಟಿಲು.. ಗವಿಯ ಒಳಗೆ ಬಂಡೆಗಳ ನಡುವಿಂದ ಇಳಿಬಿದ್ದ ಬಿಳಿಲುಗಳಗುಂಟ ಸೆಣಬಿನಷ್ಟು ತೆಳ್ಳಗೆ ಜಿನುಗುವ ತಣ್ಣನೆ ನೀರ-ಧಾರೆ ಸದಾ. ಎಂಥ ಬರಗಾಲದಲ್ಲೂ ಬತ್ತದ ನಿರಂತರ ಜಲ. ಅಲ್ಲೇ ಬದಿಯ ಕಟ್ಟೆ ಮೇಲೆ ರಾಮಲಿಂಗೇಶ್ವರ. ನೀರು ಉಗ್ಗಿಕೊಂಡು ಮುಖ, ಕೈಕಾಲು ತೊಳೆದು ಮಗ್ಗುಲಿನ ಈಶ್ವರನಿಗೂ ನೀರು ಉಗ್ಗಿ, ಜಲಾಭಿಷೇಕ ಮಾಡಿದಳು. ಅಲ್ಲೇ ಇದ್ದ ಬೂದಿಯನ್ನು ಹಣೆ ತುಂಬ ಬಳಿದುಕೊಂಡಳು. ಕಿರಿದಾದ ಜಾಗದಲ್ಲೇ ಉದ್ದೋಉದ್ದಕ್ಕೆ ಬೋರಲಾಗಿ ಸಾಷ್ಟಾಂಗವೆರಗಿದಳು. ಕ್ಷಣಹೊತ್ತು ಮಲಗಿದಲ್ಲೇ ನಿಶ್ಚಲಳಾದಳು, ಸ್ತಬ್ಧಳಾದಳು. ಏಕೆಂದು ಅವಳಿಗೂ ಅಸ್ಪಷ್ಟ. ಸರಸರನೆ ಕಲ್ಲು ಚಪ್ಪಡಿಗಳ ಸಂದಿನಿಂದ ಕೆಳಗಿಳಿದು ಬಂದಳು. ಆಗಲೇ ಅವಳು ತೆರಳಬೇಕಿದ್ದ ಬಸ್ಸು ಬಂದು ಪರತ ಹೋಗಿರಬಹುದಾದ ಸಮಯ. ಊರೊಳಗೆ ಬಂದ ಆಕೆ ಗ್ರಾಮದೇವತೆಯ ಪುರಾತನ ದೇಗುಲದೊಳಗೆ ಭರಭರನೆ ಪ್ರವೇಶಿಸಿ, ಕೆಳಗೆ ಕುಕ್ಕರಿಸಿ, ದೇವಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ದುರುಗುಟ್ಟಿದಳು. ಅಲ್ಲೇ ಇದ್ದ ಕುಂಕುಮ ಭಂಡಾರವನ್ನು ಹಣೆ, ಗಲ್ಲ, ಕುತ್ತಿಗೆಗೆ ಢಾಳಾಗಿ ಮೆತ್ತಿಕೊಂಡು ತಾಸುಗಟ್ಟಲೆ ಶಿಲೆಯಂತೆ ಕುಳಿತಿದ್ದು, ಧಿಗ್ಗನೆ ಎದ್ದು, ಊರಿನ ಮಧ್ಯಭಾಗದ ಕಡೆಗೆ, ಸಿಡಿದ ಸಿಡಿಲಿನಂತೆ ನಡೆದುಬಂದಳು.
ಆಗಲೇ ಬಿಸಿಲು ಹಣ್ಣಾಗುತ್ತಿತ್ತು. ನೇರ ನೀಲಕಂಠನ ಮನೆಯ ಕಡೆ ತಿರುಗಿ ಬಿರಬಿರ ಬಿರುಸಿನ ಹೆಜ್ಜೆ ಹಾಕಿದಳು. ಏರಿಸಿ ಉಟ್ಟಿದ್ದ ಸೀರೆ. ಭಸ್ಮ, ಕುಂಕುಮ, ಭಂಡಾರ ಎಲ್ಲ ಕಲೆಸಿ ವಿಕಾರವಾಗಿ ಕಾಣುತ್ತಿದ್ದಳು. ಆಚೆ ಈಚೆ ಎಲ್ಲೂ ನೋಡದೆ, ಎಲ್ಲೋ ನೆಟ್ಟ ದೃಷ್ಟಿಯಿಟ್ಟು ನಡೆಯುತ್ತಿದ್ದಳು. ಊರಿನ ಜನ ಎಲ್ಲ ಬೆದರಿ, ಕಕ್ಕಾಬಿಕ್ಕಿಯಾಗಿ ಸುಮ್ಮನೆ ಬಾಯಿಬಿಟ್ಟುಕೊಂಡು, ತದೇಕಚಿತ್ತದಿಂದ ಈ ವಿಚಿತ್ರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ನೀಲಕಂಠನ ಮನೆಯ ವಿಶಾಲ ಅಂಗಳಕ್ಕೆ ಬಂದವಳೇ, ನೆಲದ ಮೇಲೆ ಕಾಲು ದೊಪ್ಪನೆ ಝಾಡಿಸಿ ಅದೆಲ್ಲಿತ್ತೋ ಏನೋ ದೊಡ್ಡ ಒಡಕುಧ್ವನಿಯಲ್ಲಿ, “ಲೇ.. ನೀಲಕಂಠಾ.. ಎಲ್ಲಿದ್ದೀಯಲೇ.. ಬಾರಲೆ ಹೊರಗೆ. ಲೇ ರಂಡೇರೆ.. ನೀವ್ಯಾಕೆ ಹೊರಗೆ ಇಣುಕ್ತೀರೇ? ನಾನು ಈರವ್ವಾ ಬಂದೇನಲೆ. ನಿಮ್ಮ ಯಜಮಾನನ್ನ ಹೊರಗ ಕಳಿಸ್ರೇ. ಲೇ ಹಳೇ ಅಧ್ಯಕ್ಷಾ.. ಹೊರಗ ಬಾರಲೆ. ನಿನ್ನ ಗಂಟಲ ಸೀಳಿ ರಕ್ತ ಕುಡಿತೀನಿ ಬಾರಲೆ.. ಗಂಡಸಾಗಿದ್ರ.. ಸೂ..ಮಗನೆ.. ಎಷ್ಟ್ ಬೇಡಿಕೊಂಡ್ನಲ್ಲೋ.. ದಯಾ ಬರಲಿಲ್ಲೆನಲೆ? ಬಡವರ ಸಂಕಟದ ಮ್ಯಾಲೆ ಹಬ್ಬದೂಟಾ ಮಾಡ್ತೀರೇನ್ಲೇ. ಹಸಿದವ್ರ ಎದ್ಯಾಗೀನ ಧಗಿಧಗಿ ನಿಮಗೇನ ಗೊತ್ತಲೇ.. ಲೋ ಬೋ.. ಮಗ ನೀಲಕಂಠಾ.. ನಿನಗ ಅದು ಬರೇ ಬರಡು-ಮಡ್ಡಿ.. ನಮಗ ಅದರಲ್ಲೇ ಉಸುರು, ಮನೆ, ಮನಸ್ಸು, ಜೀವ ಎಲ್ಲ ರ್ತದಲೆ. ನನ್ನ ಆ ತುಂಡುಭೂಮಿ ನಿನ್ನ ಹೆಣಾ ಮಣ್ಣ ಮಾಡಾಕ ಉಪೇಗ ಆಗ್ಲಿ ತೊಗೋ.. ಬಡವರ ಶಾಪದ ಉರಿ ನಿನ್ನ ಈ ದೊಡ್ಡ ಮನೆಯನ್ನ ಸುಟ್ಟಹಾಕ್ತದಲೆ ಅಯ್ಯೋ..” ಎಂದು ಕೆಳಗೆ ಬಿದ್ದು ಹೊರಳಾಡಿ, ವೀರಾವೇಶದಿಂದ ಚೀರಾಡುತ್ತಿದ್ದವಳು, ಒಮ್ಮೆಲೇ ದೊಡ್ಡ ದನಿಯಲ್ಲಿ ರೋದಿಸುತ್ತ “ನನ್ನ ಮನೆ ಮುಳುಗಿಸಿಬಿಟ್ಟೆಯಲ್ಲೊ.. ಆ ದೇವ್ರs ನನ್ನ ಗಂಡನ್ನ ಕಿತ್ಕೊಂಡಾ.. ನೀಲಕಂಠಾ ನಿನಗಿಂತ ಮೊದ್ಲು ಆ ದೇವರನ್ನು ಅಡ್ಡಡ್ಡ ಸಿಗಿಬೇಕೋ.. ನನಗ ಬಂದ ಕಷ್ಟ ನಿಮ್ಮ ಮನ್ಯಾಗ ಬರೂದ ಬ್ಯಾಡ.. ನಿಮಗ ತಡಕೊಳ್ಳಾಕ ಆಗುದುಲ್ಲಲೇ.. ನೀಲಕಂಠ ನನಗಿಂತ ನೀ ಚಂದಾಗೇ ಇರು.. ಆ ಹೇಡಿ ದೇವರು ಇದ್ದದ್ದಾದರ ನಿನ್ನನ್ನ ನೋಡ್ಕೋತಾನ.. ಅವನೇನ್ ನೋಡ್ಕೋತಾನ್.. ದೇವರಾ ಅವ? ನೀಲಕಂಠಾ ನೀ ಹೇಡಿ.. ಆ ದೇವರೂ ಹೇಡಿ.. ಈ ಜನ ಎಲ್ಲಾ ಹೇಡಿಗಳು” ಎಂದವಳೇ ಮತ್ತೆ ಎದ್ದು ನಿಂತು, “ನೋಡ್ಕೋತೇನೋ.. ಮುಂದಿನ ಜನ್ಮಕ್ಕ ಹೋದರೂ ನಿನ್ನ ಬಿಡುದುಲ್ಲ. ಲೇ.. ನೀಲಕಂಠಾ…” ಎಂದು ಗಹಗಹಿಸಿ ನಕ್ಕು ಕೆಳಗೆ ಬಗ್ಗಿ, ಎರಡೂ ಬೊಗಸೆಯಿಂದ ಮಣ್ಣು ಗೆಬರಿ, ನೀಲಕಂಠನ ಮನೆ ಕಡೆ ತೂರಿ, “ನಿನ್ನ ವಂಶ ನಿರ್ವಂಶ ಆಗಲಿ..” ಎನ್ನುತ್ತಲೇ ಅದೇ ಮಣ್ಣನ್ನು ತನ್ನ ತಲೆ ಮೇಲೂ ಸುರಿದುಕೊಂಡು ಒಮ್ಮೆ ಜೋರಾಗಿ ವಿಕಾರ ನಗೆ ನಕ್ಕು, ಚೀರಿ, ಕೇಕೆ ಹಾಕಿ ಅಲ್ಲಿಂದ ಬಿರಬಿರನೆ ಹೊರನಡೆದಳು.
ಈರವ್ವನ ಈ ಆಟಾಟೋಪಕ್ಕೆ ನೀಲಕಂಠನ ಮನೆಯ ಬಾಗಿಲು-ಕಿಟಕಿ ಎಲ್ಲ ಮುಚ್ಚಿಕೊಂಡಿದ್ದವು. ನೀಲಕಂಠ ಒಳಗೇ ಬೆವರಿದ್ದ.
ಈ ವೀರಭದ್ರ ಅವತಾರದಲ್ಲಿ ಈರವ್ವ ಅಲ್ಲಿಂದ ಯಾವಾಗ ಹೊರಬಿದ್ದಳೋ ಅವಳಿಗೇ ಅರಿವಿರಲಿಲ್ಲ.
ಊರವರೆಲ್ಲ ಮಾಳಿಗೆ ಏರಿ, ಭಯಾಶ್ಚರ್ಯದಿಂದ ಕಣ್ಣು ಮಿಟುಕಿಸದೆ ನೋಡುತ್ತಿದ್ದರು. ಯಾರಿಗೂ ಈರವ್ವನ ಹತ್ತಿರ ಸುಳಿಯಲು ಧೈರ್ಯವಿರಲಿಲ್ಲ.
ಈರವ್ವ ಅಳುತ್ತ, ಶಪಿಸುತ್ತ, ನಗುತ್ತ.. ಮತ್ತೆ ಅಳುತ್ತ.. ಕೇಕೆ ಹಾಕುತ್ತ್ತ ಓಣಿಗುಂಟ ಧಿಗಧಿಗನೆ ದಾಪುಗಾಲಿಕ್ಕಿ ಹಳ್ಳಿ ದಾಟಿ ಬರುವಾಗ ಕತ್ತಲಾಗಿತ್ತು.
ಈರವ್ವನ ರೋಷಾವೇಶಕ್ಕೆ ಯಾರಿಗೂ ಅವಳನ್ನು ಸಂತೈಸಲು ಸಾಧ್ಯವಾಗಲಿಲ್ಲ.
ಮೈಯಲ್ಲಿ ದೆವ್ವ ಹೊಕ್ಕವರಂತೆ ಕ್ರೋಧಾವಿಷ್ಟಳಾಗಿ. ಖರೇ ಖರೇ ದುರ್ಗೆಯಂತೆ ಊರ ದಾಟಿ ಹೊರಗೆ ಹೋಗುತ್ತಿದ್ದಾಗ..
ಶರಣು ಮತ್ತು ಶೇಖರಣ್ಣ ಇಬ್ಬರೂ ಇದಿರಾದರು.
“ಇವತ್ತ್ಯಾಕೆ ಬರಲಿಲ್ಲಬೇ? ಇವತ್ತ ನಿನ್ನ ಹೆರ್ಲೆ ಆಗಿಬಿಡ್ತಿತ್ತು… ನಾವು ಕಾದು ಕಾದು ಸಾಕಾಗಿ ಬಂದ್ವಿ” ಎಂದು ಕೇಳಬೇಕೆಂದಿದ್ದ ಶರಣು, ಇವಳ ಈ ಅನಿರೀಕ್ಷಿತ ‘ಕಾಳಿಕಾ ರೂಪ’ ಕಂಡು, ಅವಾಕ್ಕಾಗಿ ನಿಂತುಬಿಟ್ಟ. ಇವನ ಹಿಂದೆ ಶೇಖರಣ್ಣ ಏನೂ ತಿಳಿಯದೆ ಪಿಳಿಪಿಳಿ ಕಣ್ಣುಬಿಡುತ್ತಿದ್ದ.
* * *
ಇವಳು ನೇರ ಹೋದದ್ದೇ ತನ್ನ ಜಮೀನಿಗೆ. ಆಗ ರಾತ್ರಿ ಎಂಟು ಮೀರಿರಬೇಕು. ಮೊದಲೇ ಹಾಳು-ಮಡ್ಡಿ. ಎಷ್ಟೋ ವರ್ಷಗಳಿಂದ ಉತ್ತು ಬಿತ್ತು ಪೈರು ಇಲ್ಲದೆ ರೌರವ ರೂಕ್ಷಗೊಂಡ ಭೂಮಿ. ಬೆಳೆದ ಕಸ, ಮುಳ್ಳು-ಕಂಟಿ, ಹಾವು-ಚೇಳು, ಜರಿ ಅದಾವುದರ ಪರಿವೆ ಇಲ್ಲದ ಈರವ್ವ, ನೇರ ಬಂಡೆಗೆ ಹೋದಳು. ಬಗ್ಗಿ ಕೈ ಆಧಾರ ಮಾಡಿಕೊಂಡು ಬಂಡೆ ಏರಿದಳು. ತಾನು ತನ್ನ ಗಂಡ ಸದಾ ಕುಳಿತಿರುತ್ತಿದ್ದ ಜಾಗ ಆಯ್ದು, ಸ್ವಸ್ಥ ಕುಳಿತುಬಿಟ್ಟಳು! ಅದೆಷ್ಟು ಹೊತ್ತು ಕುಳಿತಿದ್ದಳೋ ಅವಳಿಗೂ ಅರಿವಿಲ್ಲ. ಅದೆಂಥದೋ ಶಾಂತಿ. ಅದೆಂಥದೋ ನಶೆ. ಅದೆಂಥದೋ ಸೇಡು.. ಅದೆಂಥದೋ ಋಣ.. ಅದೆಂಥದೋ ಕಾರಣ.. ಕುಳಿತೇ ಇದ್ದಳು. ನಿಶ್ಚಲ ಕಡೆದ ಪ್ರತಿಮೆಯಂತೆ. ಕೊಂಚ ಕೂಡ ಅಲುಗಾಡದೆ ಭಯವಿಲ್ಲದೆ ನಿರಂಬಳತೆಯಿಂದ ಕುಳಿತೇ ಇದ್ದಳು. ಯಾರಾದರೂ ಕಂಡಿದ್ದರೆ ಬನ್ನಿಗಿಡದ ಕಡುಗತ್ತಲಲ್ಲಿ ಬಂಡೆ ಮೇಲೆ ಸ್ತಬ್ಧ ಕುಳಿತ ದೆವ್ವವೆಂದೇ ಬಗೆಯುತ್ತಿದ್ದರೇನೋ.
ಅದೆಷ್ಟೊ ಹೊತ್ತಿಂದ ಈರವ್ವ ಬಂಡೆ ಮೇಲೆ ಪ್ರತಿಷ್ಠಾಪಿತಳಾಗಿದ್ದಳು. ಎದೆತುಂಬಿ ಬರುವವರೆಗೆ, ಮನಸ್ಸಿನ ಹೊಯ್ದಾಟ ನಿಲ್ಲುವವರೆಗೆ. ಆಮೇಲೆ ಮಧ್ಯರಾತ್ರಿಗೆ, ಅಲ್ಲಿಂದ ಇಳಿದು ತನ್ನ ಹಳ್ಳಿ ಕಡೆ ಒಂದು ಕ್ಷಣ ಕೂಡಾ ಹಿಂತಿರುಗಿ ನೋಡದೆ ಅದೆಲ್ಲೋ ಕತ್ತಲಲ್ಲಿ ಕರಗಿಹೋದಳು.
ಬಹುಶಃ ವಿಶಾಲ ಜಗತ್ತಿನ ವಿರುದ್ಧ ದಿಕ್ಕಿನ ಕಡೆಗೆ; ಕಾಣದ ನೆಮ್ಮದಿಯ ಕಾಣುವೆಡೆಗೆ.
* * *
ಅವತ್ತಿಂದ ‘ಈರಮ್ಮ’ ಎನ್ನುವ ಘಾಟಿ ವ್ಯಕ್ತಿತ್ವವನ್ನು ಮತ್ತೇ ಕಂಡವರಿಲ್ಲ!
ಮೂರು ದಾರಿ ಸೇರುವ ಮತ್ತೊಂದು ಜಾಗವನ್ನು ನೋಡಿಕೊಂಡು ಹೋದಳೋ.. ಅಥವಾ?
ತಾನೇ ತಡಿಕೆ ಹೊದಿಸಿ ಕಟ್ಟಿ ನಿಲ್ಲಿಸಿದ ಚಾದಂಗಡಿಯ ಸರ್ವಸ್ವವನ್ನೂ ಇಷ್ಟು ದಿನ ನಿಷ್ಠೆಯಿಂದ ದುಡಿದ ಸೀಬಸೂಗೆ ಬಿಟ್ಟು ಹೋಗಿದ್ದಳು. ಅದಕ್ಕೆಂದೇ ಹೇಳಿದ್ದಳೋ ಏನೋ ‘ನನ್ನ ದಾರಿ ಕಾಯಬೇಡ’ ಎಂದು.
ನಾಲ್ಕಾರು ದಿನ ಒಗ್ಗರಣೆ ಘಮ ಹೊರಡಲೇ ಇಲ್ಲ.
ಮತ್ತೆ ತಡಿಕೆ ಬಾಗಿಲು ಬಿಚ್ಚಿಕೊಂಡಿತು.
ಎಲ್ಲಾ ಮತ್ತೆ ಯಥಾಸ್ಥಿತಿ!