ನೀಲಿ ಆಕಾಶದ ತುಂಬಾ ಚುಕ್ಕಿಗಳದ್ದೇ ಕಾರುಬಾರು. ಮನೆಯ ತಾರಸಿಯ ಮೇಲಿಂದ ಅವುಗಳನ್ನು ನೋಡಿ ಮೈಮರೆಯುವುದಕ್ಕಿಂತ ಉತ್ಸಾಹದಿಂದ ಮಾಡುವ ಕೆಲಸ ಇನ್ನೊಂದಿಲ್ಲ. ಚುಕ್ಕಿಗಳನ್ನು ಜೋಡಿಸಿ ಚಿತ್ರಿಸುವ ಚಿತ್ರ ಮನದಲ್ಲಿ ಅಚ್ಚೊತ್ತಬಾರದೆಂತಲೇ ಆ ಏಕಾಗ್ರತೆಯನ್ನು ಭಂಗಗೊಳಿಸಲೆಂದೇ ಚಂದಿರನ ಆಗಮನ. ಅವನೂ ಚಂದವೇ. ಬಿಡಿಯಾದರೂ ಇಡಿಯಾದರೂ. ಅಬ್ಬಾ!!! ಈ ನೀರ್ಕಾಗೆಗಳದ್ದೊಂದು ಗಲಾಟೆಯೇ? ಅದೇನು ಹಾರಾಟ ಅದೇನು ಮಾತು? ಮಾಡುವ ಕೆಲಸವೇನು ಕತ್ತಲಾದಾಗ ಗೂಡು ಸೇರುವುದು ಬಿಟ್ಟು? ನೀರು ತುಂಬಿದ ಗದ್ದೆಗೆ ಲ್ಯಾಂಡ್ ಆಗುವುದೇ ದೊಡ್ಡದೊಂದು ಸಾಹಸ. ಮಾಡುವಂಥದ್ದನ್ನು ಮೌನವಾಗಿ ಮಾಡಬಾರದೇ? ಅಯ್ಯೋ ಬೇಡ. ಈ ಮೌನ ಯಾವಾಗಲೂ ಸಹ್ಯವಲ್ಲ. ನಾನೂ ಹೀಗೆ ಯಾರ ಜೊತೆಗಾದರೂ ವಟವಟಾಂತ ಹರಟೆ ಹೊಡೀಬೇಕು.
ಕಾಲ ಎಷ್ಟೇ ಬದಲಾದ್ರೂ ಈ ಸಂಗತಿಗಳೆಲ್ಲಾ ಬದಲಾಗೋದೇ ಇಲ್ಲ…. ಕ್ರೌರ್ಯ ಇನ್ನಷ್ಟು ಹೆಚ್ಚಾಗ್ಬೋದು ಅಷ್ಟೆ….
“ಓಹ್… ಬನ್ನಿ ಕೂತ್ಕೊಳ್ಳಿ. ಮಾತಾಡೋಣ.”
“ಏನ್ ಮಾತಾಡೋದು ಬಿಡಿ….”
“ಅಯ್ಯೋ ಹಾಗಂದ್ರೆ ಹೇಗೆ? ಮಾತಾಡೋಕೆ ಎಷ್ಟ್ ವಿಷ್ಯ ಬೇಕು ನಿಮ್ಗೆ?”
“ಹಾಗಂತೀರಾ? ಸರಿ ಹಾಗಾದ್ರೆ ನೀವೆ ಶುರು ಮಾಡಿ. ನಾನ್ ಆಮೇಲೆ ಮುಂದುವರಿಸ್ತೀನಿ”
“ಹ್ಞುಂ…. ಆದ್ರೆ ಯಾವ್ ವಿಷ್ಯ ಮಾತಾಡೋದು? ಅದನ್ನು ನೀವ್ ಹೇಳಿ.”
“ಅಯ್ಯೋ ಮತ್ತೆ ನನ್ ತಲೆಗೆ ಕಟ್ಟಿದ್ರಾ? ಸರಿ, ನಾನೇ ಶುರು ಮಾಡ್ತೀನಿ ಬಿಡಿ. ಪೆಟ್ರೋಲ್ ಡೀಸೆಲ್ ಬೆಲೆ ಕಡಮೆ ಆಯ್ತಂತಲ್ಲಾ?”
“ಇಶ್ಶಪ್ಪಾ. ಅದೂ ಒಂದು ವಿಷ್ಯವಾ ಹರಟುವುದಕ್ಕೆ? ನೀವೊಬ್ರು……”
“ಅಯ್ಯೋ, ಇದು ಮುಖ್ಯ ವಿಷ್ಯ ಗೊತ್ತಾ? ಯಾಕೆ ಹೇಳಿ. ಊಟ ಇಲ್ದೇ ಇದ್ರು ಬದುಕ್ಬೋದು; ಪೆಟ್ರೋಲ್ ಡೀಸೆಲ್ ಇಲ್ದೇ ಅಲ್ಲ. ಏನಂತೀರಿ?”
“ಏನ್ ಪ್ರಯೋಜನ ಹೇಳಿ. ಸ್ಟ್ರೈಕ್ ಮಾಡದೆ ಬೆಲೆ ಇಳ್ಸಿದ್ರೂ ಮೋದಿಗೆ ಬಯ್ಯೋರ್ಗೇನ್ ಕಮ್ಮಿನಾ? ಬಡ್ಡಿಮಕ್ಳು ಒಬ್ರು ಯಾವ್ದಕ್ಕೂ ರೇಟ್ ಕಡ್ಮೆ ಮಾಡಲ್ಲ. ಅದ್ರ ಮೇಲೆ ಪೊಗ್ರು ತೋರಿಸ್ತಾರೆ.”
ಯಾವ್ದು ದೊಡ್ಸಂಗತಿ?
“ಅದೇನ್ ದೊಡ್ಡ ಸಂಗತಿ ಅಲ್ಲ; ಬಿಡಿ.”
“ಹಾಗಾದ್ರೆ ನೀವ್ ಹೇಳಿ, ದೊಡ್ ಸಂಗತಿ ಯಾವುದು ಅಂತ.”
” …. ”
“ಯಾಕೆ ಸುಮ್ನಾದ್ರಿ?”
“ಏನ್ ಹೇಳೋದು ಮಣ್ಣು? ಛೆ! ಈ ಹುಡುಗ್ರಿಗೆ ಅದೇನ್ ರೋಗ ಬಡ್ದಿದೆ ಅಂತ. ಹೆಣ್ಮಕ್ಳು ಹುಟ್ಲೇಬಾರ್ದು ಯಾರ್ಗೂ.”
“ಯಾಕೆ ಏನಾಯ್ತು?”
“ಆ ಹುಡ್ಗಿ ಸುದ್ದಿ ನೆನಪಾಯ್ತು. ಇದಕ್ಕೆಲ್ಲ ಯಾವಾಗ ಕೊನೆ ಅಂತ?”
“ಕತ್ತರಿಸಿ ಹಾಕ್ಬೇಕು ಅದನ್ನ. ಗಂಡಸ್ರು ಅಂತ ಹೇಳ್ಕೊಳೋಕೆ ಆಗ್ಬಾರ್ದು. ಆಗೆಲ್ಲಾ ಸರಿಯಾಗ್ತಾರೆ.”
“ನಾವಿನ್ನು ಭಾರತದಲ್ಲೇ ಇದೀವಿ. ಸೌದಿ ಅರೇಬಿಯಾದಲ್ಲಲ್ಲ.”
“ನೀವ್ ಹೇಳೊದು ಸರಿ. ಮನುಷ್ಯನಿಗೆ ಶಿಕ್ಷೆಯ ಭಯ ಇಲ್ದೇನೆ ಹೀಗೆಲ್ಲಾ ಆಗೋದು. ನಾನೆ ಕೆಲವು ಫೋಟೋಸ್ ನೋಡಿದೀನಿ. ಕುತ್ತಿಗೆವರೆಗೆ ಹೂತುಹಾಕಿ ಕಲ್ಲು ಹೊಡ್ದು ಸಾಯಿಸ್ತಿದ್ರು. ಅಂಥ ಶಿಕ್ಷೆ ಬೇಕು. ಭಯ ಇದ್ರೆ ಮಾತ್ರ ನೆಮ್ಮದಿ ಬದುಕು ಅನ್ನಿಸ್ತಿದೆ.”
“ಹೀಗಾಗ್ತದೆ ಅನ್ನೋದು ಒಂದು ಕಡೆ ನೋವಾದ್ರೆ ಅದರಲ್ಲೂ ರಾಜ್ಕೀಯ ಮಾಡ್ತಾರಲ್ಲ? ಅದು ಇನ್ನೂ ಸಂಕಟ ಆಗೋದು. ಇದು ಕಲಿಯುಗ ಹೌದಪ್ಪಾ”
“ಅಲ್ದಿದ್ರು ನಮ್ ಹೆಣ್ಮಕ್ಳಿಗೆ ಇಷ್ಟೆಲ್ಲಾ ಅಗ್ತಿದ್ರೂ ಬುದ್ಧಿ ಸ್ವಲ್ಪ ಕಮ್ಮಿನೇ ಬಿಡಿ. ಅಲ್ಲಾ, ಪರಿಚಯದವ್ರೇ ಆಗ್ಲಿ ಕರೆದ ಕೂಡ್ಲೇ ಹೋಗೇಬಿಡೋದಾ? ಅದೂ ಒಬ್ಳೇ!”
“ಅಯ್ಯೋ! ಅದೇನ್ ಮಂಕು ಮಾಡ್ತಾರೋ ಏನೋ? ಅರುವತ್ತು ವರ್ಷದ ಮುದುಕ ನೋಡಿ ಆ ಮುದ್ದು ಮಗುವನ್ನ ಅತ್ಯಾಚಾರ ಮಾಡಿದ್ನಂತೆ!”
“ಛೇ! ಮಹಿಳಾ ಸಬಲೀಕರಣ, ಅಭಿವೃದ್ಧಿ, ಸಮಾನತೆ ಏನೇನೋ ಎಲ್ಲಾ ಪುಂಗಿ ಊದ್ತಿರೋದು. ನಡೀತಿರೋದೆ ಬೇರೆ. ಮೊನ್ನೆ ಸ್ತ್ರೀಶಕ್ತಿ ಮೀಟಿಂಗಲ್ಲಿ ಆ ಲಾಯರ್ ಮಾತಾಡಿದ್ದನ್ನ ಕೇಳಿಲ್ಲವಾ? ಮಹಿಳೆಯರಿಗೆ ಕಾನೂನಿನಲ್ಲಿ ವಿಶೇಷ ಮನ್ನಣೆ ಅಂತೆ, ಹಾಗಂತೆ ಹೀಗಂತೆ. ಎದ್ದು ಮುಖಕ್ಕೆ ಹೊಡ್ದ ಹಾಗೆ ಹೇಳ್ಬೇಕು ಅನ್ನಿಸ್ತು. ಸಾಕು ಬಾಯ್ಮಿಚ್ಚಿ. ನ್ಯಾಯ ಕೇಳ್ಕೊಂಡು ಬಂದಾಗ ವಕೀಲ್ರು, ಪೋಲಿಸ್ನವರೆಲ್ಲ ಹೇಗ್ ನಡ್ಕೋತಿರಂತ ಹೇಳ್ಳಾ ಎಲ್ರಿಗೂ ಅಂತ.”
“ಮಾತಾಡಿ ಏನ್ ಸುಖ ಇಲ್ಲ.”
“ಹಾಗಂದ್ಕೊಂಡೇ ನಾವ್ ಹಾಳಾದ್ದು.”
“ಇನ್ನೇನ್ ಮಾಡೋದು, ಬಿಡಿ.”
ಮೊನ್ನೆ ಏನಾಯ್ತೂಂದ್ರೆ….
“ಏ ನಾನ್ ಒಪ್ಪೋದಿಲ್ಲ ಇದನ್ನ. ಮೊನ್ನೆ ಏನಾಯ್ತೂ ಅಂದ್ರೆ, ಲೇಡಿಸ್ ಸೀಟಲ್ಲಿ ಕೂತಿದ್ದೆ. ಹಿಂದಿಂದ ಒಬ್ಬ ಭೂಪ ಕೈ ಹಾಕಿ ಕಚಕುಳಿ ಹಾಕ್ತಾನೆ. ಎಲ್ಲಿತ್ತೊ ಕೋಪ? ಹಿಂದೆ ತಿರುಗಿ `ಮೂರು ಕಾಸಿನವ್ನೇ. ಸುಮ್ನಿಲ್ಲಾಂದ್ರೆ ಮುಖ ಮೂತಿ ನೋಡದೆ ಬಾರಿಸ್ತೀನಿ’ ಅಂದೆ. ಕಂಡಕ್ಟರನ್ನ ಕರ್ದು ಹೇಳ್ದೆ. `ಅವ್ನಿಗೆ ವಾರ್ನ್ ಮಾಡಿ ಇಲ್ಲಂದ್ರೆ ಬೇರೇನೋ ಮಾಡ್ಬೇಕಾಗತ್ತೆ’ ಅಂತ. ಅವ್ನು ಆ ಗಂಡಸಿಗೆ ಸರಿಯಾಗಿ ದಬಾಯಿಸಿದ. ಅಲ್ಲಿಗೆ ಮುಗೀತು. ಚಚ್ಚಿ ಹಾಕ್ಬೇಕು ಅನ್ನೋವಷ್ಟು ಸಿಟ್ ಬಂದಿತ್ತು ನೋಡಿ. ಆದ್ರೆ ಆಮೇಲೆ ಹೊಟ್ಟೆಯೊಳಗೆ ಸಣ್ಣ ಭೂಕಂಪಾನೂ ಆಯ್ತು. ಇದೇ ಗ್ರಜ್ಗೆ ಅವ್ನು ನನ್ನನ್ ಕಿಡ್ಯಾಪ್ ಮಾಡಿದ್ರೆ…. ಹಾಗಾದ್ರೆ ಹೀಗಾದ್ರೆ ಅಂತ. ಆಮೇಲೆ ಧೈರ್ಯ ತಂದ್ಕೊಂಡೆ. ಹಾಗೆಲ್ಲ ನನ್ನ ಜೀವನದಲ್ಲಿ ಆಗ್ಲೇಬೇಕಂತಿದ್ರೆ ಯಾರ್ಗೂ ತಪ್ಪಿಸೋಕಾಗಲ್ಲ. ನಮ್ ತಾತ ಹೇಳ್ತಿದ್ರು. `ಬಪ್ಪುದು ತಪ್ಪದು; ಆಗಮ ನಿರ್ಗಮ.’ ಎಷ್ಟು ಸತ್ಯ ಅಲ್ವಾ?”
“ಹ್ಞೂಂ. ಆದ್ರೆ ನೋಡಿ, ಎಲ್ಲಾ ಕಂಡಕ್ಟರ್ಗಳೂ ಹಾಗಿರಲ್ಲ. ಮೊನ್ನೆ ನಾನ್ ಬಸ್ ಹತ್ತಿದ್ದಷ್ಟೇ. ಜೀವ ಎಳೀತಿತ್ತೇನೊ ಅನ್ನೋ ಹಾಗೆ ರೈಟ್ ಕೊಟ್ಟ ಕಂಡಕ್ಟರ್. ಹೋಗಿ ಬ್ಯಾಲೆನ್ಸ್ ಮಾಡಿ ನಿಲ್ಲೋವಷ್ಟರಲ್ಲಿ ಸಾಕಾಯ್ತ. ಬಸ್ ಇನ್ನೂ ಹೊರಟೇ ಇಲ್ಲ. ದುಡ್ಡು ತೆಗ್ದು ಕೈಲಿ ಹಿಡ್ಕೊಂಡು ಆಮೇಲೆ ಡ್ರೈವರನ್ನ ನೋಡಿದ್ರೆ ಆರಾಮ್ಸೆ ದಂ ಬಿಡ್ತಾ ಇದಾನೆ ಖದೀಮ! ಬಸ್ಸೊಳಗೆ ಸುರುಳಿ ಸುರುಳಿಯಾಗಿ ಹೊಗೆ ಬಿಡ್ತಾ ನೋಡಿ ಖುಶಿ ಪಡ್ತಿದ್ದಾನೆ. ಆ ಅಡ್ಡ ಸೀಟಲ್ಲಿ ೪ ಜನ ಗಂಡಸ್ರು ಬೇರೆ ಕೂತಿದಾರೆ. ಕೆನ್ನೆಗೆ ನಾಲ್ಕು ಬಾರಿಸ್ಬೇಕು ಅನ್ನಿಸ್ತು. ಕಂಡಕ್ಟರ್ ಹಿಂದಿನ ಬಾಗಿಲಲ್ಲಿ ನೇತಾಡ್ತಿದ್ದ. ಬೋಳೆ ಕಣ್ ಮಾಡಿ ಕರ್ದೆ. ಹೆಜ್ಜೆ ಮೇಲೆ ಹೆಜ್ಜೆ ಇಟ್ಕೊಂಡೇ ಬಂದ. ಬಂದು ಕೇಳೋ ಸ್ಟೈಲ್ ನೋಡ್ಬೇಕು, `ಏನು’ ಅಂತ. ನಿಮ್ ಬಸ್ಸಲ್ಲಿ `ಧೂಮಪಾನ ನಿಷೇಧಿಸಲಾಗಿದೆ’ ಅಂತ ಬೋರ್ಡ್ ಪ್ರಯಾಣಿಕರಿಗೆ ಮಾತ್ರನಾ? – ಕೇಳ್ದೆ. ಟಿಕೆಟನ್ನು ಮಡ್ಚಿ ಕಿವಿಯೊಳ್ಗೆ ಹಾಕ್ಕೊಂಡು `ಯಾರೀಗ ಸಿಗ್ರೇಟ್ ಸೇದಿದ್ದು?’ ಅಂದ. ಇವ್ನಿಗೆ ಬಹುವಚನ ದುಬಾರಿಯಾಯ್ತು ಅನ್ಸಿ ಒರಟು ದನಿಯಲ್ಲೇ ಹೇಳ್ದೆ, `ನೋಡ್ ನಿನ್ ಬಸ್ ಡ್ರೈವರ್ರೇ ಸಿಗ್ರೇಟ್ ಸೇದ್ತಿರೊದು. ಒಳ್ಳೆ ಮಾತಲ್ಲಿ ಬಿಸಾಡೋದಕ್ಕೆ ಹೇಳು. ಇಲ್ಲಾಂದ್ರೆ ಮಾವನಿಗೆ ಹೇಳಿ ಟ್ರಿಪ್ ಕಟ್ ಮಾಡಿಸ್ಬೇಕಾಗ್ತದೆ’ ಅಂತ. ಸೊಳ್ಳೆ ತರಹ ಓಡಿದ ಡ್ರೈವರ ಹತ್ರ. ಅವನೋ ಕನ್ನಡಿಲಿ ನನ್ನನ್ನೊಮ್ಮೆ ಕೆಕ್ಕರಿಸಿದವನೆ ಕೈಲಿದ್ದ ಹೊಗೆಕಡ್ಡಿನ ಬಿಸಾಕಿದ. ಆಮೆ ಥರ ಹೋಗ್ತಿದ್ದ ಬಸ್ಸು ಜಿಂಕೆ ತರಹ ಓಡೋಕೆ ಶುರು ಮಾಡ್ತು. ಆ ದಿನ ಮಾತ್ರ ಅವ್ನಿಗೆ ಕನಸಿನಲ್ಲೂ ಫ್ರೀ ಎಂಟ್ರಿ ನಂದು.”
“ಹಹಹ… ನೀವ್ ಹೇಳೋದು ಸರಿ, ಕೆಲವೊಮ್ಮೆ ಮಾತಾಡ್ಲೇಬೇಕು.”
ಹೊಸ ಎಂಟ್ರಿ
“ಹೋ ನೀವಾ…. ಬನ್ನಿ ಬನ್ನಿ…. ನಿಮ್ಗಿಂತ ಮೊದ್ಲೇ ನಿಮ್ಮೂರನ್ನ್ ನೆನ್ಪಿಸಿಕೊಂಡ್ವಿ ನಾವು.”
“ಏನು ಆರಾಮಾಗಿ ಹರಟೆ ಹೊಡಿತಾ ಕೂತ್ಬಿಟ್ರಲ್ಲಾ?”
“ನೀವೂ ಈಗ ಅದಕ್ಕೇ ಬಂದಿದ್ದಲ್ವಾ?”
“ಇಲ್ಲಪ್ಪಾ…. ನಾನಿವ್ರನ್ನ ಕರ್ಕೊಂಡು ಹೋಗೋಣ ಅಂತ ಬಂದೆ.”
“ಹೌದಾ…. ನಿಮ್ಮನ್ನೆ ಕೇಳಿದ್ರೆ ಸತ್ಯ ಹತ್ತಿರಾಗ್ಬೋದು. ನಿಜವಾಗ್ಲೂ ಎನ್ ನಡೀತಿದೆ ನಿಮ್ಮಲ್ಲಿ?”
“ಏನಂತ ಹೇಳೋದು? ಯಾವ್ದು ಸತ್ಯ ಯಾವ್ದು ಸುಳ್ಳು ಒಂದೂ ಗೊತ್ತಾಗ್ತಿಲ್ಲ.”
“ಅಂದ್ರೆ ಏನೂ ನಡ್ದೇ ಇಲ್ಲಾಂತೀರಾ?”
“ಆ ಹುಡುಗಿಗೆ ಅವ್ನ ಜೊತೆ ಸ್ನೇಹ ಇತ್ತು ಅಂತಾರೆ ಕೆಲವರು. ಅತ್ಯಾಚಾರ ನಡ್ದೇ ಇಲ್ಲಾಂತಾರೆ ಇನ್ನು ಕೆಲವರು. ಏನು ನಡೀತಿದೆ ಅನ್ನೋದು ನಮ್ಗೇ ನಿಗೂಢ ಅನ್ನಿಸ್ತಿದೆ.”
“……..”
“ಆ ಘಟನೆಗೂ ಹರಿದಾಡ್ತಿರೋ ಸುದ್ದಿಗಳಿಗೂ ಒಂದಕ್ಕೊಂದು ಸಂಬಂಧ ಜೋಡಿಸುವಲ್ಲಿ ನಾವೆಲ್ಲಾ ಹೈರಾಣಾಗಿದೀವಿ. ನಮ್ ಮಕ್ಳನ್ನ ನಾವ್ ಜೋಪಾನ ಮಾಡ್ಕೋಬೇಕು ಅನ್ನೋದೆ ವಾಸ್ತವ.”
“ಕೊನೆಗೆ ಮೊಸಳೆ ಬಂತು ಮೊಸಳೆ ಗಾದೆನೇ ನಿಜಾಗೋದು ನೋಡಿ ಬೇಕಾದ್ರೆ.”
“ಏನೋಪ್ಪಾ ಜೀವಮಾನದಲ್ಲಿ ಇಂಥದ್ದೊಂದು ಘಟನೆ ಸಾಕು ನೋಡಿ ನಮ್ಮನ್ನು ಭೂತದ ಹಾಗೆ ಕಾಡೋದಿಕ್ಕೆ.”
“ಅದು ನಿಜ. ನಾನ್ ಡಿಗ್ರೀಲಿರ್ತಾ ಆದದ್ದು. ಅದೇ ಮನೆ ಹತ್ರದ ಹುಡುಗೀನ ಪ್ರೀತ್ಸಿ ಅವ್ಳು ಒಪ್ಲಿಲ್ಲಾಂತ ಕಲ್ಲಲ್ಲಿ ಹೊಡ್ದು ಸಾಯಸಿದ್ರು ಪಾಪಿಗಳು. ಎಷ್ಟು ಚಂದದ ಹುಡುಗಿ? ಈಗ್ಲೂ ನೆನ್ಪಿಸಿಕೊಂಡ್ರೆ ಮುಳ್ಳು ಚುಚ್ಚಿದ ಹಾಗಾಗ್ತಿದೆ”
“ಕಾಲ ಎಷ್ಟೇ ಬದಲಾದ್ರೂ ಈ ಸಂಗತಿಗಳೆಲ್ಲಾ ಬದಲಾಗೋದೇ ಇಲ್ಲ ನೋಡಿ. ಕ್ರೌರ್ಯ ಇನ್ನಷ್ಟು ಹೆಚ್ಚಾಗ್ಬೋದು ಅಷ್ಟೆ. ಅಯ್ಯೋ ಹೊತ್ತು ಕಳ್ದದ್ದೇ ಗೊತ್ತಾಗ್ಲಿಲ್ಲ. ನಾವಿನ್ನು ಬರ್ತೀವಿ.”
“ಇನ್ಯಾವಾಗ?”
“ಬಂದಾಗ ಖಂಡಿತ ಸಿಗ್ತೀವಿ.”
“ಆಗ್ಲಿ…..”
“ಮತ್ತೆ ನೀವೆಲ್ಲಿಗೆ ಹೊರಟ್ರಿ?”
“ನಾನಾ….? ಪಕ್ಕದ್ಮನೆಗೆ….. ಇನ್ನೊಂದು
ಹರಟೆಗೆ ಹೊರಟೆ….”