ಅಪ್ಪ ಅಮ್ಮ ಎಡವಿದ ಕಲ್ಲುಗಳು ಮಕ್ಕಳಿಗೆ ಮೆಟ್ಟಿಲಾಗಲು ಸಾಧ್ಯವಿಲ್ಲವೆ?
`ಹಣತೆಯಲ್ಲಿ ದೀಪ ಉರಿಯೆ ಬೆಳಗಿ ಬದುಕ ಕಾಣುವೆ.’ ಒಂದು ದೀಪಕ್ಕಿರುವ ಶಕ್ತಿ ಎಂಥದ್ದು? ಅದರ ಸುತ್ತ ಆವರಿಸಿರುವ ಪ್ರಭೆ ಎಷ್ಟು ಶುಭ್ರ! ಒಂದೇ ಒಂದು ಸಣ್ಣ ಧೂಳಿನ ಕಣವೂ ಇಲ್ಲ ಅದರಲ್ಲಿ. ಆದರದು ಎಲ್ಲಿವರೆಗೆ? ಬತ್ತಿ ಪೂರ್ತಿ ಉರಿದು ಖಾಲಿಯಾಗುವವರೆಗೆ. ಆಮೇಲೆ ಕೊನೆಯಲ್ಲಿ ಒಂದು ಚಿಕ್ಕ ಬೂದಿಯ ಚೂರು. ಬತ್ತಿಯನ್ನು ಹೊತ್ತುಕೊಂಡ ಮಣ್ಣ ಹಣತೆಗೂ ಒಂದು ರೀತಿ ಬೇಜಾರು. ಅಯ್ಯೋ ಇನ್ಯಾವಾಗ ದೀಪ ಹೊತ್ತು ತಿರುಗಾಡುವುದೇನೋ ಎಂಬ ಕಾತರ. ಆದರೆ ಬದುಕು ಇಷ್ಟಕ್ಕೇ ಮುಗಿದರೆ ಅದರಲ್ಲೇನಿದೆ ವಿಶೇಷ? ಆ ಪುಟ್ಟ ಹಣತೆ ಯಾರ ಜೊತೆಗೂ ಮಾತಾಡದೆ? ಮನೆಯೊಳಗೆ ಬೆಳ್ಳಿ ನೀಲಾಂಜನವೇ ದೇವರ ಮುಂದೆ ಜಂಭದಿಂದ ವಿಜ್ರಂಬಿಸುವುದು. ಹಾಗಾದರೆ ಹಣತೆಗೆ ಎಲ್ಲಿದೆ ಸ್ಥಾನ? ಮನೆಯ ಹೊಸ್ತಿಲ ಹೊರೆಗೆ. ತುಳಸಿಯ ಕಟ್ಟೆಯ ಬಳಿಯಲ್ಲಿ. ಯಾವತ್ತೂ ಕಾಯುವ ಗೆಳತಿಯಂತೆ ಕಾಯುವ ತುಳಸಿ ಹಣತೆ ಬರುವ ಕ್ಷಣ ಒಂದು ಗಳಿಗೆ ತಡವಾದರೂ ಚಟಪಡಿಸುತ್ತದೆ.
`ಯಾಕಿಷ್ಟು ತಡ ಇವತ್ತು? ಆಗಲೇ ಕಪ್ಪು ಕತ್ತಲೆ ಆಗಿಯಾಗಿದೆ?’
`ಅಯ್ಯೋ ಅವರು ಕಳುಹಿಸಿಕೊಡಬೇಕಲ್ಲಾ? ಬರಿ ನಾನು ಬರುವುದಾದರೆ ಎಂದೋ ಬಂದೇನು.’
`ಮತ್ತೆ ನಿನ್ನ ಜೊತೆ ಇನ್ಯಾರಿದ್ದಾರೆ ಬರುವವರು? ದಿನವೂ ನಾವಿಬ್ಬರೇ ತಾನೆ ಹರಟೆ ಹೊಡೆಯುವುದು?’
`ಅದು ಹೌದು. ಆದರೆ ಈ ದೀಪವಿಲ್ಲದೆ ನನ್ನನ್ನು ಮೂಸುವವರು ಯಾರು?’
`ಹೋ ಅದೂ ಸರಿಯೇ? ಈ ದೀಪದಿಂದಲ್ಲವೇ ನಾನೂ ಈ ಕಪ್ಪಿನಲ್ಲಿ ಕೃಷ್ಣ ತುಳಸಿಯಂತೆ ಹೊಳೆಯುವುದು.’
`ಎಲ್ಲರಿಗೂ ಅವರವರ ಚಿಂತೆ.’
`ಸರಿ ಈಗ ತಡವಾದುದಕ್ಕೆ ಕಾರಣವಾದರೂ ಏನು?’
`ಅದೇ ಅಮ್ಮಾವ್ರು ತಡವಾಗಿ ಮನೆಗೆ ಬಂದದ್ದು.’
`ನಿನ್ನೆ ಅದೇ ಕಾರಣಕ್ಕೆ ಜಗಳ ಆಗಿತ್ತಲ್ಲವೇ?’
`ಹ್ಞೂಂ..ನಿನ್ನೆ ಯಜಮಾನ್ರು ತಡವಾಗಿ ಬಂದಿದ್ರು.’
`ಅಯ್ಯೋ ಗಂಡ ಹೆಂಡಿರ ಜಗಳಕ್ಕೊಂದು ಕಾರಣ ಬೇಡವೇ?’
`ಎಲ್ಲವೂ ಸಕಾರಣವೇ. ಅರ್ಥವಿಲ್ಲದ ಸಂಬಂಧಕ್ಕೊಂದು ಅನರ್ಥವಾದ ಬಂಧನ.’
`ಅವರಿಬ್ಬರೂ ಪ್ರೀತಿಸಿ ಮದುವೆ ಆದವರಲ್ಲವೇ?’
`ಅವರದ್ದೆಂಥ ಪ್ರೀತಿ ಎಂಬುದು ಎಲ್ಲರಿಗೂ ತಿಳಿದದ್ದೇ.’
`ಮನೆಯವರು ಬಂಧು ಬಳಗದವರ ವಿರೋಧ ಕಟ್ಟಿಕೊಂಡು ಮದುವೆಯಾಗುವುದು ಈ ಸುಖಕ್ಕೇ ಏನು?’
`ಅದೊಂದು ಬಗೆಯ ನಾಟಕ. ಯಾರದೋ ಜೊತೆಗೆ ಮದುವೆಯಾದರೆ ಅವರನ್ನು ಅರ್ಥ ಮಾಡಿಕೊಂಡು ಜಗಳವಾಡುವುದಕ್ಕೆ ಕೆಲವು ವರ್ಷಗಳೇ ಬೇಕಾಗುತ್ತವೆ. ಇದು ಹಾಗಲ್ಲವಲ್ಲಾ? ಮದುವೆ ಆದಂದಿನಿಂದಲೇ ಮಹಾಭಾರತ ಶುರುಹಚ್ಚಿಕೊಳ್ಳಬಹುದು. ನನಗಂತೂ ಮಹಾಭಾರತ ಮುಗಿದು ಕಲಿಯುಗ ಬರಬಾರದೇ ಎನಿಸುತ್ತಿದೆ. ನೀನಾದರೋ ಪವಿತ್ರ ತುಳಸಿ. ಹಾಯಾಗಿ ಹೊರಗಿರುವವವಳು. ನಾನು ದೀಪವಿದ್ದರೆ ಮಾತ್ರ ಹೊರಗೆ. ಉಳಿದಂತೆ ಒಳಗೆ.’
`ಸುಯ್…ಸ್…’
`ಅಯ್ಯೋ ಇದೇನಿದು ಇಷ್ಟೊಂದು ರಭಸದ ಗಾಳಿ? ಕಾಪಾಡಪ್ಪಾ’
`ಇಂಥಾ ಗಾಳಿಗಲ್ಲವೇ ನಮ್ಮನ್ನಡಗಿಸುವ ಶಕ್ತಿ ಇರುವುದು? ಭೂಮಿಯೊಳಗೆ ಬೇರೂರಿ ಭದ್ರವಾಗಿ ನಿಂತಿರುವ ನೀನೇ ಇಷ್ಟೊಂದು ಭಯ ಪಟ್ಟರೆ ನನ್ನ ಪಾಡೇನು?’
`ಈ ಗಾಳಿಗಿಂತಲೂ ನಿನ್ನೊಳಗಿರುವ ದೀಪದ ನರ್ತನವೇ ನನ್ನ ಭಯವನ್ನು ಹೆಚ್ಚಿಸುವುದು. ಎಂಥಾ ಅತಂತ್ರ ಸ್ಥಿತಿ?’
`ಈ ವಿಶ್ವದಲ್ಲಿರುವ ಪ್ರತಿಯೊಂದು ಜೀವವೂ ಪ್ರತಿಯೊಂದು ವಸ್ತುವೂ ಅಂತೆಯೇ. ಯಾವಾಗ ಯಾವ ಕ್ಷಣದಲ್ಲಾದರೂ ಇಲ್ಲವಾಗಬಹುದು. ಇದು ನಿಜವೇ ಆದರೂ ಈ ವಿಶ್ವದ ಮೇಲೆ ಮನುಷ್ಯನ ಅಟ್ಟಹಾಸ ಮಾತ್ರ ದಿನದಿಂದ ದಿನಕ್ಕೆ ಮೇರೆ ಮೀರುವಂತಿದೆ.’
`ವಿನಾಶ ಕಾಲೇ ವಿಪರೀತ ಬುದ್ಧಿ. ಅವನ ಅಂತ್ಯ ಅವನದೇ ಕೈಯ್ಯಲ್ಲಿ. ಪರಮಾತ್ಮ ಸುಮ್ಮನೇ ಹೇಳಿಯಾನೇ- ನಮ್ಮ ಮನಸ್ಸೇ ನಮಗೆ ಮಿತ್ರ, ನಮ್ಮ ಮನಸ್ಸೇ ನಮಗೆ ಶತ್ರು. ಅರೇ ನೋಡಲ್ಲಿ. ತಾಮ್ರದ ತಂಬಿಗೆಯೊಂದು ಹೊಸ್ತಿಲು ದಾಟಿ ಉರುಳಿ ನಿನ್ನ ಕಡೆಗೇ ಬರುತ್ತಿದೆ. ತಪ್ಪಿಸಿಕೋ.’
`ಅಯ್ಯೋ ಇಂಥದಕ್ಕೆಲ್ಲ ಹೆದರುವಂತಿಲ್ಲ. ಉರುಳಿಬಿದ್ದರೆ ಮರಣ ಅಷ್ಟೆ. ಅದರಲ್ಲಿ ಭಯವೆಂಥದ್ದು? ಆದರೆ ಈ ಗಂಡಹೆಂಡತಿಯ ನಡುವೆ ಕೂಸು ಬಡವಾಗುವುದೇ ಸರಿ.’
`ಅಷ್ಟೊಂದು ಪ್ರೀತಿಯಿದ್ದವರು ಈ ಮಟ್ಟದಲ್ಲಿ ದ್ವೇಷಿಸಲು ಸಾಧ್ಯವೇ?’
`ಯಾಕಾಗದು? ಕತ್ತಲಿದ್ದರಲ್ಲವೇ ಬೆಳಕು? ಹಾಗೆಯೇ ಪ್ರೀತಿಯಿದ್ದಲ್ಲಿ ದ್ವೇಷ. ಆಯ್ಕೆ ನಮ್ಮದು. ಪ್ರೀತಿಯೇ ಅಥವಾ ಕತ್ತಲೇ? ಪಕ್ವವಾದ ಪ್ರೀತಿಗೆ ಎಲ್ಲ ಬಗೆಯ ಶಕ್ತಿಯಿರುತ್ತದೆ. ಎಂಥಹದ್ದೇ ಸಂಶಯ, ಅಸಮಧಾನ, ತಪ್ಪು ಕಲ್ಪನೆಗಳು ದ್ವೇಷದ ಮನೆಯ ಬಾಗಿಲಿಗೆ ಹೋಗುವ ಮೊದಲೇ ತಡೆಯುತ್ತದೆ. ಹೊಕ್ಕ ಮೇಲೆ ಮೊದಲಿನಂತಿರುವುದು ಕಷ್ಟವೇ ಸರಿ.’
`ಇವರು ಹೀಗೆ ಕಚ್ಚಾಡುತ್ತಿದ್ದರೆ ಮಗಳೇನು ಮಾಡುತ್ತಿರುತ್ತಾಳೆ? ಅದಕ್ಕೆ ಮಂಕು ಬಡಿಯದಿದ್ದರೆ ಸಾಕು.’
`ಈಗ ಆಗಿರುವುದೂ ಅದೇ. ಹರೆಯಕ್ಕೆ ಕಾಲಿಟ್ಟ ಹುಡುಗಿಯ ಮುಂದೆ ಇವರು ಹೀಗಾಡುವುದೆಂದರೆ? ಮೊದಲೆಲ್ಲಾ ಅದು ಚಾವಡಿಯಲ್ಲಿದ್ದರೆ ಭಯ ಪಟ್ಟು ಮೂಲೆ ಹಿಡಿದು ಕೂತಿರುತಿತ್ತು. ಈಗ ಅದಕ್ಕೆಂದೇ ಒಂದು ಕೋಣೆ ಬಿಟ್ಟುಕೊಟ್ಟಿದ್ದಾರೆ. ಇವರ ಜಗಳ ಶುರುವಾಗುತ್ತಿದ್ದಂತೆ ಕೋಣೆಗೆ ಹೋಗಿ ದಢಾರೆಂದು ಬಾಗಿಲು ಹಾಕಿಕೊಂಡುಬಿಡುತ್ತದೆ. ಆ ಶಬ್ದಕ್ಕೆ ಒಂದು ಕ್ಷಣ ಇವರಿಬ್ಬರೂ ಬೆಚ್ಚಿಬೀಳುತ್ತಾರಾದರೂ ಅರೆಗಳಿಗೆಯೊಳಗೆ ಮತ್ತೆ ಶುರು ಮಾಡುತ್ತಾರೆ.’
`ಛೆ! ಇಂಥ ಅಪ್ಪ ಅಮ್ಮಂದಿರಿಂದಾಗಿಯೇ ಮಕ್ಕಳು ಹಾಳಾಗಿರುವುದು. ಮನೆಯಲ್ಲಿ ಸಿಗದೆ ಇರುವ ಪ್ರೀತಿಯನ್ನು ಎಲ್ಲೆಲ್ಲೋ ಹುಡುಕುವುದಕ್ಕೆ ಮನಸ್ಸು ಮಾಡ್ತಾರೆ.’
`ಇನ್ನು ಮಾಡಬೇಕಾದುದೇನಿಲ್ಲ. ಅದಾಗಲೇ ಆಗಿ ಆಗಿದೆ. ಕರೆಂಟು ಹೋದಾಗಲೆಲ್ಲ ನನ್ನನ್ನು ಕರೆದೊಯ್ಯುತ್ತಿದ್ದಳು. ನೀನು ಯಾವಾಗಲೂ ಕೇಳುತ್ತಿದ್ದೆ ನನ್ನನ್ನು ಯಾಕೆ ಬರಲಿಲ್ಲ ಎಂದು. ಆ ದಿನಗಳಲ್ಲಿ ಅವಳೊದಿಗೆ ನನ್ನ ವಾಸ. ಕರೆಂಟು ಹೋದಾಗ ಈ ಗಂಡ ಹೆಂಡತಿಯೂ ಸುಮ್ಮನಾಗುತ್ತಾರೆ. ಅಕ್ಕ ಪಕ್ಕದ ಮನೆಗಳಿಗೆ ಗುಟ್ಟು ರಟ್ಟಾಗದಂತೆ ಜಾಗ್ರತೆ ವಹಿಸುತ್ತಾರೆ. ಈ ಮನುಷ್ಯರು ಎಷ್ಟು ಬುದ್ಧಿವಂತರಾಗಿರುತ್ತಾರಲ್ಲವೇ?’
`ಆ ಬುದ್ಧಿವಂತಿಕೆಗೆ ನನ್ನಂಥ ಹಸಿರು ಗಿಡಗಳೆಲ್ಲಾ ಬಲಿ ಆಗುತ್ತಿರುವುದು.’
`ಆ ಹುಡುಗಿಯನ್ನು ಕಂಡಾಗಲೆಲ್ಲಾ ಅವಳ ಮುಂದಿನ ಭಯಾನಕ ದಿನಗಳ ಚಿತ್ರವೇ ಕಣ್ಣ ಮುಂದೆ ಬರುವುದು. ಅವಳೂ ಯಾವುದೋ ಹುಡುಗನನ್ನು ಪ್ರೀತಿಸುತ್ತಿದ್ದಾಳೆ. ಅವನು ಇವರ ಜಾತಿಯವನಲ್ಲ. ಎಂಥಾ ವಿಪರ್ಯಾಸ ನೋಡು. ಅಪ್ಪ ಅಮ್ಮನಿಗೆ ಯಾವುದೇ ಬಗೆಯ ನೈತಿಕ ಧ್ವನಿ ಉಳಿದಿಲ್ಲ ಅವಳನ್ನು ತಡೆದು ಹಿಡಿಯೋದಿಕ್ಕೆ. ಅವರೂ ಇಂಥದ್ದೊಂದು ತಪ್ಪಿನ ತೆಪ್ಪದಲ್ಲಿ ಹಾರಿ ಕುಳಿತು ಈಗ ನೀರಿಲ್ಲದ ಕಡೆಗೆ ಬಂದು ತೆಪ್ಪವನ್ನು ತಳ್ಳುತ್ತಿದ್ದಾರೆ. ಅವರ ನಡುವೆ ಏನೇನೂ ಉಳಿದಿಲ್ಲ. ಈ ಮಗುವೂ ಅವರೊಂದಿಗೆ ಉಳಿಯುವುದೋ ತಿಳಿದಿಲ್ಲ.’
`ಅಬ್ಬಾ ಮನುಷ್ಯರ ಬದುಕು ಎಷ್ಟು ಕಷ್ಟ ಅಲ್ಲವೇ? ಅವರು ಬದುಕಿದ ರೀತಿಯೇ ಅವರ ಮುಂದಿನ ದಿನಗಳನ್ನು ನಿರ್ಧರಿಸುವುದು. ಅಪ್ಪ ಅಮ್ಮ ಎಡವಿದ ಕಲ್ಲುಗಳು ಮಕ್ಕಳಿಗೆ ಮೆಟ್ಟಿಲಾಗಲು ಸಾಧ್ಯವಿಲ್ಲವೇ?’
`ಅಸಾಧ್ಯವೇನಲ್ಲ. ಆದರೆ ಅವರು ನನ್ನಂತೆ ನಿನ್ನಂತೆ ಇನ್ನೊಬ್ಬರಿಗಾಗಿ ಬದುಕುತ್ತಿಲ್ಲವಲ್ಲಾ?’
`ಅದೂ ಸರಿಯೆ. ಅದಕ್ಕಿಂತ ವಿಚ್ಛೇದನ ಪಡೆಯಬಾರದೇಕೆ?’
`ಸಮಾಜದಲ್ಲಿ ಗೌರವ ಉಳಿಯುವುದಿಲ್ಲವಲ್ಲಾ? ಸಂಸಾರವೂ ಬೇಕು ಗೌರವವೂ ಬೇಕು ಎಂದಾದರೆ ಸಹಿಸಿಕೊಳ್ಳುವ ಗುಣವಿರಬೇಕು. ಈಗ ನಾನಿಲ್ಲವೇ ಈ ಸುಡುವ ಉರಿಯುವ ದೀಪದೊಂದಿಗೆ!’
`ಮತ್ತೆ ನಂದೇನು ಪಾಡು? ಕಟ್ಟೆಯಲ್ಲಿ ಕುಳಿತಿದ್ದೇನೆ ಎಂಬ ಕಾರಣಕ್ಕೆ ಬದುಕಿದ್ದೇನೆ. ಹೊಸ ಮನೆ ಕಟ್ಟುವಾಗ ಎಲ್ಲಿಗೆ ಎತ್ತಂಗಡಿ ಮಾಡುತ್ತಾರೋ ಏನೋ?’
`ಹ್ಞುಂ, ಆ ವಿಷಯ ಹೇಳುವುದನ್ನೇ ಮರೆತಿದ್ದೆ. ಹೊಸಮನೆಯ ಕೆಳಭಾಗವನ್ನು ಬಾಡಿಗೆ ಕೊಡುವುದೆಂದು ನಿಶ್ಚಯಿಸಿದ್ದಾರಲ್ಲಾ? ಅದು ಅವಳ ಕ್ರಿಶ್ಚಿಯನ್ ಗೆಳತಿಗೆ ಕೊಡಬೇಕೆಂದು ಅವಳ ವಾದ. ಇವನೋ ತಾನು ಅದನ್ನು ವಸ್ತು ಸಂಗ್ರಹಾಲಯ ಮಾಡುವವನೆಂದು ಹಠ.’
`ಅಂತೂ ನನಗೆ ಉಳಿಗಾಲವಿಲ್ಲ ಎಂಬುದು ದಿಟವೇ. ಇನ್ನು ಕೆಲವೇ ದಿನಗಳ ಭೇಟಿ ನಮ್ಮದು.’
`ನನ್ನನ್ನು ನನ್ನಿಂದ ಬೇರ್ಪಡಿಸುವ ಧೈರ್ಯ ಅವರಿಗಿನ್ನೂ ಬಂದಂತಿಲ್ಲ. ಅದಕ್ಕೆ ಮೇಲಿನ ಮನೆಯ ಮೂಡಣ ದಿಕ್ಕಿನ ಕೋಣೆಯ ಬದಿಯಲ್ಲಿಯೇ ನಿನ್ನನ್ನು ಕುಳ್ಳಿರಿಸುವ ಬಗ್ಗೆ ತೀರ್ಮಾನವಾಗಿದೆ. ನೀನಿನ್ನೂ ನನಗೆ ಹತ್ತಿರವೇ ಆದೆ.’
`ಸಂತೋಷವೇ. ಆದರೆ ಪ್ರಕೃತಿಯಿಂದ ಇನ್ನಷ್ಟು ದೂರವಾದೆ. ಅದೇ ಅಲ್ಲವೇ ಮನುಷ್ಯನ ಜೀವನದ ಉದ್ದೇಶ. ತಾನೂ ಪ್ರಕೃತಿಯ ಮಡಿಲಲ್ಲಿ ಇರಲಾರ. ಇರುವವರನ್ನೂ ಬಿಡಲಾರ.’
`ನಮ್ಮ ಕೈಯ್ಯಲ್ಲಿಲ್ಲದ ವಿಷಯಗಳನ್ನು ಚಿಂತಿಸುವುದು ವ್ಯರ್ಥವೇ ಸರಿ. ನೋಡು ಮತ್ತೆ ಶುರುವಾಯಿತು ರಾಮಾಯಣ…’
`ರಾಮಾಯಣ ಅಲ್ಲ ಮಹಾಭಾರತ. ಆ ಹುಡುಗಿ ಬಂತು ನೋಡು ಹೊರಗೆ. ಕಿವಿಗೆ ಕೈ ಹಿಡಿದುಕೊಂಡು.’
`ಅಲ್ಲಿ ಆ ಕಡೆಗೆ ನೋಡು ಪಕ್ಕದ ಮನೆ ಲಲಿತಕ್ಕ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದಾರೆ.’
`ಅವರ ಟೀವಿಯಲ್ಲಿ ಬರುವ ಮಹಾಭಾರತಕ್ಕಿಂತ ಇದೇ ಚೆನ್ನಾಗಿದೆ ಅನ್ನಿಸಿರಬೇಕು.’
`ಶ್ಶ್.. ಮಾತನಾಡಬೇಡ. ಸುಮ್ಮನಿರು. ಈ ಹುಡುಗಿ ಅದೇನೋ ಫೋನಿನಲ್ಲಿ ಹರಟೆ ಹೊಡೆಯುತ್ತಿದ್ದಾಳೆ. ನನಗನ್ನಿಸುತ್ತದೆ ಆ ಕಡೆಯಲ್ಲಿ ಅವಳು ಪ್ರೀತಿಸುವ ಹುಡುಗನೇ ಇರಬೇಕು. ಕೇಳೋಣ.’
`ಎಷ್ಟೊಂದು ನಿಧಾನವಾಗಿ ಮಾತನಾಡುತ್ತಿದ್ದಾಳೆ ಆ ಫೋನಿಗಾದರೂ ಕೇಳಿಸೀತೆ?’
`ಸುಮ್ಮನಿರು. ಪ್ರೇಮಿಗಳೆಲ್ಲ ಫೋನಿನಲ್ಲಿ ಹೀಗೇ ಮಾತನಾಡುವುದು. ನನಗೆ ಕೇಳಿಸುತ್ತದೆ. ನೀನೂ ಮೌನವಾಗಿದ್ದರೆ ಪ್ರೀತಿಯ ಮಾತುಗಳೂ ನಿನಗೂ ಕೇಳಸಿಯಾವು. ಶ್ಶ್…’
Comments are closed.