
’ಗೆಳೆತನವೆಂಬುದು ವರವಂತೆ ಗೆಳತಿ, ಜೀವಮಾನದ ತುಂಬೆಲ್ಲ ಬೆಳಗುವ ಪ್ರಣತಿ.’
ಎಷ್ಟು ಬ್ಯುಸಿಯಾಗಿ ಬಿಡುತ್ತೇವೆ ಈ ಬದುಕಿನೊಳಗೆ? ಒಬ್ಬರಿಗೊಬ್ಬರು ಮಾತನಾಡದಷ್ಟು, ಒಬ್ಬರನ್ನೊಬ್ಬರು ನೋಡದಷ್ಟು. ಜೊತೆಗಿದ್ದಾಗ ಕಳೆದ ಕ್ಷಣಗಳ ಮೆಲಕುಹಾಕಲೂ ಪುರುಸೊತ್ತು ಇಲ್ಲದಂತೆ ಕ್ಷಣಗಳು ದೌಡಾಯಿಸುತ್ತಿವೆ. ಛೆ! ಇದಕ್ಕೆ ಸಾಯುವುದೊಂದೇ ಪರಿಹಾರವೆನ್ನುವಷ್ಟು ಸಂಕಟ ಉಂಟಾದಾಗ, ಆವತ್ತು ಇನ್ನಿಲ್ಲದ ಬಿಡುವು ನಮಗೆ. ಅಯ್ಯೋ ಎಲ್ಲರೂ ಒಮ್ಮೆಲೆ ಮನಸ್ಸಿನೊಳಗೆ ಧಾವಿಸುತ್ತಾರೆ. ಎಲ್ಲಿಗಾದರೂ ಹೋಗಬೇಕು ಎನಿಸುತ್ತದೆ. ಹೊರಟರೆ ದಾರಿಯುದ್ದಕ್ಕೂ ನೆನಪುಗಳ ಸರಮಾಲೆ. ಪಕ್ಕದಲ್ಲಿ ಬಂದು ಕುಳಿತ ಹೆಂಗಸು ನಮ್ಮ ಪರಿಚಯದವರೇ ಆಗಿರಬಹುದು. ಆದರೆ ನಾವು ಕಳೆದುಹೋಗಿರುವ ಕ್ಷಣದೊಳಗೆ ಅವರು ಪ್ರವೇಶ ಪಡೆದುಕೊಳ್ಳಲು ಸಾಕಷ್ಟು ಗಳಿಗೆಗಳೇ ಬೇಕು. ಅವಳ ಕಾಲಲ್ಲಿದ್ದ ಪುಟ್ಟ ಮಗು ತನ್ನ ಗೆಜ್ಜೆಯೊಂದಿಗಿನ ಪುಟ್ಟ ಪಾದದಲ್ಲಿ ನಮ್ಮ ಕಾಲಿಗೆ ಒದ್ದಾಗಲೂ ನಾವು ಆ ಮಗುವನ್ನು ಮಾತ್ರ ಗಮನಿಸುತ್ತೇವೆ. ತಾಯಿಯನ್ನಲ್ಲ.
“ಹ್ಞಾಂ..! ಅರೆ, ಕಲ್ಯಾಣಿ ಟೀಚರ್…ಓಹ್ ಮೈ ಗಾಡ್… ಉಮ್ಮ್ಮ್…ಮ್ಮ.. ಎಷ್ಟು ಮುದ್ದಾಗಿದೆ ನಿಮ್ಮಗು.. ಸೋ ಕ್ಯೂಟ್? ಅಯ್ಯಪ್ಪಾ ನಂಗೆ ನಂಬೋಕೆ ಆಗ್ತಾ ಇಲ್ಲ. ಹೇಳಿ ಹೇಗಿದ್ದೀರಿ?”
“ಚೆನ್ನಾಗಿದ್ದೇನೆ. ನೀವ್ ಹಾಗೆ ಇದ್ದೀರಾ ಬಿಡಿ. ಅದೇ ಹುಡುಗಾಟಿಕೆ.
“ನೀವ್ ಸಿಕ್ಕಿರೋ ಖುಶಿ ಮುಂದೆ ಇದೇನೂ ಅಲ್ಲ. ನೀವ್ ಮತ್ತೆ ಸಿಗ್ತೀರೋ ಇಲ್ವೋ ಅನ್ಕೊಂಡಿದ್ದೆ. ಎಂತ ಟೀಚರ್ ಒಂದು ಫೋನ್ ಮಾಡೋದಲ್ವಾ?”
“ಮಾಡ್ಬೇಕಂತ ಎ? ಸಲ ಅನ್ನಿಸ್ತಿತ್ತು. ಆದ್ರೆ ಆಗ್ಲಿಲ್ಲ. ಏನೋ ಎಲ್ಲಾ ನಡೀತು. ನೀವ್ ಹೇಳಿ ಏನ್ ಕಥೆ ನಿಮ್ದು?”
“ಮಾಮೂಲಿ. ಹ್ಯಾಪ್ಪಿ ಎಲೋನ್. ನಿಮ್ದು ಹೇಳಿ. ಈಗ ಎಲ್ಲಿಗ್ ಹೊರಟ್ರಿ? ಎಲ್ಲಿಗಾದ್ರೂ ಹೋಗಿ. ಆದ್ರೆ ನನ್ ಜೊತೆಗೆ ನಮ್ ಕಾಫಿಶಾಪ್ಗೆ ಬರ್ಲೇಬೇಕು. ಹೇಳಿ ಯಾವ ಕಡೆಗೆ ಪ್ರಯಾಣ ನಿಮ್ದು?”
“ನಾನು ನಮ್ಮತ್ತೆ ಮನೆಗೆ ಹೊರಟಿದ್ದೀನಿ. ಎರಡು ವಾರ ಕಳ್ದು ಕತಾರ್ಗೆ ಹೋಗ್ತಾ ಇದ್ದೇವೆ. ಯಜಮಾನ್ರು ಊರಿಗೆ ಬಂದಿದ್ದಾರೆ.”
“ಯಜಮಾನ್ರು ಎಂದು ಭಾರಿ ರೆಸ್ಪೆಕ್ಟು? ತುಂಬಾನೆ ಅಡ್ಜಸ್ಟ್ ಆಗಿರ್ಬೇಕಲ್ವಾ? ತುಂಬಾನೇ ಖುಶಿಯಾಗ್ತಿದೆ ಟೀಚರ್. ಏನೇನೆಲ್ಲಾ ಆಗಿ ಹೋಯ್ತು. ಬರೇ ಫೋಟೋ ನೋಡ್ಕೊಂಡು ನೀವ್ ಮದ್ವೆಗೆ ಒಪ್ಪಿದ್ದು. ಅದೇನ್ ರಾದ್ಧಾಂತ ಅದೇನ್ ಅಳು? ಅಬ್ಬಾ ನೆನೆಸಿಕೊಂಡ್ರೆ ಈಗ್ಲೂ ಮೈ ಝುಮ್ಮಂತಿದೆ.”
“ಹ್ಞೂಂ. ಏನ್ ಮಾಡೋದು ಎಲ್ಲಾ ಪಡ್ಕೊಂಡು ಬಂದಿರ್ಬೇಕು. ನನ್ ಜೀವನದಲ್ಲೂ ಕೋರ್ಟ್ ಮೆಟ್ಲು ಹತ್ತುವ ದಿನ ಬರ್ಬೋದು, ಎರಡನೇ ಮದ್ವೆ ಆಗ್ಬೋದು ಅಂತೆಲ್ಲಾ ಅನ್ಕೊಂಡಿರ್ಲಿಲ್ಲ.”
“ಏನ್ ಟೀಚರ್, ಹ್ಞಾಂ…!”
“ಯಾಕೆ ಏನೂ ಮಾತಾಡ್ತಿಲ್ಲ? ಹಾಗೆ ಬಾಯಿ ತೆರೆದು ನೋಡ್ಬೇಡಿ ನೀವು. ಈಗ ಎಲ್ಲಿ ಇಳಿಯೋದು ಹೇಳಿ.”
“ನೀವೆ ಹೇಳಿ. ಟೀಚರ್ ನಂಗೆ ನಿಮ್ ಜೊತೆ ಮಾತಾಡ್ಲೇಬೇಕು. ಇವ್ಳು ಹೀಗೆ ಮಲ್ಗಿರ್ತಾಳಾ? ನೆಕ್ಸ್ಟ್ ಸ್ಟಾಪಲ್ಲಿ ಇಳಿದು ಆಟೋ ಮಾಡ್ಕೊಂಡು ಹೋಗೋಣ್ವಾ ಕಾಫಿಶಾಪ್ಗೆ?”
“ಬೇಡ ಟೀಚರ್. ಇವ್ಳ ಅಜ್ಜಿ ಸಿಗ್ತಾರೆ ದೇವಸ್ಥಾನದ ಹತ್ರ. ಅವ್ರ ಜೊತೆ ಕಳ್ಸಿ ಆಮೇಲೆ ಹೋಗುವ.”
“ಹಾಗೇ ಆಗ್ಲಿ. ನಾನೂ ದೇವಸ್ಥಾನಕ್ಕೆ ಅಂತಾನೆ ಹೊರಟಿದ್ದೆ. ನಿಮ್ಮನ್ನು ನೋಡಿದ್ದೇ ಎಲ್ಲ ಮರ್ತೋಯ್ತು. ನೋಡಿ. ಸ್ಟಾಪ್ ಬಂತು ಇಳೀರಿ. ಅವ್ಳನ್ನು ನಾನ್ ಎತ್ಕೊಳ್ತೇನೆ, ಕೊಡಿ. ಹೇಗೂ ನಿದ್ದೆ ಬಂದಿದೆ ಅಲ್ವಾ? ಗೊತ್ತಾಗೋದಿಲ್ಲ. ಬಾರೆ ಪುಟ್ಟಿ. ಹ್ಞುಂ. ಚೋಚ…ಚೋಚ…ಮಾತಾಡ್ಬೇಡಿ. ಅವ್ಳಿಗೆ ಗೊತ್ತಾಗ್ಲಿಲ್ಲ. ನಿಧಾನಕ್ಕೆ ಇಳೀರಿ. ಈ ಬಸ್ ಕಂಡಕ್ಟರ್ಗಳಿಗೆ ಯಾವಾಗ್ಲೂ ಜೀವ ಎಳೀತಾನೆ ಇರೋದು.”
“ಅಲ್ಲಿ ನೋಡಿ, ನಮ್ಮತ್ತೆ ಬಂದ್ರು. ಅತ್ತೆ, ಇವ್ರು ನನ್ ಗೆಳತಿ. ತೇಜಸ್ವಿನಿ ಅಂತ. ನಾವಿಬ್ರೂ ಕಲಾಶಾಲೆಯಲ್ಲಿ ಒಟ್ಟಿಗೆ ಕೆಲ್ಸ ಮಾಡ್ತಿದ್ದದ್ದು.”
“ನಮಸ್ಕಾರ ತೇಜಸ್ವಿನಿ. ಚೆನ್ನಾಗಿದ್ದೀರಾ?”
“ಹ್ಞೂಂ ಅಮ್ಮ. ನೀವು ಆರಾಮಿದ್ದೀರಾ?”
“ಆರಾಂ. ಏನು ನಮ್ ಪುಟ್ಟಿ ನಿಮ್ ಕೈಗೆ ಬಂದ್ಲಾ? ಹಾಗೆಲ್ಲಾ ಯಾರ ಜೊತೆಗೂ ಹೋಗೋಳಲ್ಲ.”
“ಇಲ್ಲಮ್ಮಾ. ಅವ್ಳಿಗೆ ಎಚ್ಚರಾಗಿಲ್ಲ. ಹಾಗಾಗಿ ಜೊತೆಗಿದ್ದಾಳೆ.”
“ಅತ್ತೇ ನಾವು ದೇವಸ್ಥಾನಕ್ಕೆ ಹೋಗಿ ಬರ್ತೇವೆ. ನೀವು ಇವ್ಳನ್ನು ಕರ್ಕೊಂಡು ಮನೆಗೆ ಹೋಗಿರಿ. ಆಯ್ತಾ?”
“ಹ್ಞೂನಮ್ಮಾ. ಬೇಗ ಬಂದ್ಬಿಡು. ಬರ್ತೀನಿ ತೇಜಸ್ವಿನಿ.”
“ಬನ್ನಿ ಟೀಚರ್, ಆ ಓಣಿಯಲ್ಲಿ ಹಾಯ್ದು ಹೋಗೋಣ. ಜನಜಂಗುಳಿ ಇರೋದಿಲ್ಲ. ಆರಾಮಾಗಿ ಮಾತಾಡ್ತಾ ಹೋಗ್ಬೋದು.”
“ಏನೂ ಉಳಿದಿಲ್ಲ ಟೀಚರ್ ಮಾತಾಡೋದು. ಯಾವ್ದೂ ನಮ್ಮ ಕೈಯ್ಯಲ್ಲಿಲ್ಲ ಅನ್ನೋದು ಚೆನ್ನಾಗಿ ಅರ್ಥ ಆಯ್ತು ನೋಡಿ.”
“ಟೀಚರ್ ಅಳ್ಬೇಡಿ ಪ್ಲೀಸ್. ಯಾಕೆ ಡಿವೋರ್ಸ್ ಆಯ್ತು? ಮನೆಯವರೆಲ್ಲಾ ನೋಡೀಯೇ ಮಾಡಿದ್ದಲ್ವಾ? ಅವರಿಗೋಸ್ಕರ ನಿಮ್ ಪ್ರೀತೀನೇ ತ್ಯಾಗ ಮಾಡಿದ್ರಿ?”
“ಎಷ್ಟೆಲ್ಲಾ ಕನಸಿತ್ತು. ಸುಧಾಕರ್ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದೆ. ಜಾತಿ ಅಂತಸ್ತು ಕುಲ ಗೋತ್ರ ಯಾವುದೂ ಸಮಸ್ಯೆಯೇ ಆಗಿರ್ಲಿಲ್ಲ. ಹುಡುಗ ಚೆನ್ನಾಗಿಲ್ಲ ಅನ್ನುವುದೇ ಅಮ್ಮನ ಸಮಸ್ಯೆ. ಬಣ್ಣ ರೂಪ ಎಲ್ಲ ಬದುಕಿನಲ್ಲಿ ಎ? ಮುಖ್ಯ ಅಂತ ನಿಜವಾಗಿಯೂ ಈಗ ನನ್ಗೆ ಅರ್ಥ ಆಗ್ತಿದೆ.”
“ಯಾಕೆ ನಿಮ್ಗೆ ಡಿವೋರ್ಸ್ ಆಯ್ತು? ಹೇಳ್ತಾನೇ ಇಲ್ಲ ನೀವು? ಚೆನ್ನಾಗಿರೋ ಹುಡುಗನನ್ನೇ ನಿಮ್ಮಮ್ಮ ನೋಡಿದ್ರು ಅಲ್ವಾ?”
“ಅವ್ನು ಹುಡುಗ ಆಗಿದ್ರೆ ಅಲ್ವಾ?”
“ಹ್ಞಾಂ!”
“ಮತ್ತೆ ಹಾಗೆ ಬಾಯಿ ತೆರೆದು ನೋಡ್ಬೇಡಿ ನೀವು. ಅವ್ನು ಹುಡ್ಗನೂ ಅಲ್ಲ, ಹುಡುಗಿಯೂ ಅಲ್ಲ.”
“ಮತ್ತೆ?”
“ಮತ್ತೆ ಅಂದ್ರೆ ಅದನ್ನು ನಾನೇ ಹೇಳ್ಬೇಕಾ? ಅವ್ನು ನಪುಂಸಕ. ಹಾಗಂತ ಅವ್ನೇ ಹೇಳಿದ್ದು.”
“ಮತ್ತೆ ಆ ಲೋಫರ್ ಮದ್ವೆ ಯಾಕಾದ್ನಂತೆ?”
“ಅವ್ನಿಗೆ ಮನ್ಸಿದ್ದ ಹಾಗೆ ಇರ್ಲಿಲ್ಲ. ಮದ್ವೆ ದಿನ ರಾತ್ರಿ ನನ್ನನ್ನ ನೋಡಿ ಕೈ ಮುಗಿದು ಜೋರಾಗಿ ಅತ್ತ. ಯಾರಿಗೂ ಹೇಳ್ಬೇಡಿ. ಎರಡು ವಾರದೊಳಗೆ ಫಾರಿನ್ನಿಗೆ ಹೋಗ್ತೇನೆ. ಆಮೇಲೆ ಯೋಚ್ಸಿದ್ರಾಯ್ತು” ಅಂದ. “ಇಂಥದ್ದೆಲ್ಲಾ ಧಾರಾವಾಹಿಗಳಲ್ಲಿ ನೋಡೋವಾಗ ಏನೂ ಅನ್ನಿಸೋದಿಲ್ಲ. ಸತ್ಯಕ್ಕೆ ದೂರವಾದುದನ್ನೇ ತೋರಿಸ್ತಾರೆ ಅಂತೇವೆ. ನನ್ ಬದುಕಲ್ಲೂ ಆದದ್ದೆಲ್ಲಾ ಇಂಥದ್ದೇ.”
“ಟೀಚರ್ ಅಳ್ಬೇಡಿ. ಅಲ್ನೋಡಿ. ನಮ್ ಕಲಾಶಾಲೆಯಲ್ಲಿ ಎಗ್ಸಿಬಿಶನ್ ನಡೀತಿದೆ. ಹೋಗೋಣ್ವಾ? ಆ ದಿನಗಳೆಲ್ಲಾ ನೆನಪಾಗ್ತಿವೆ. ಎ? ನಗು? ಎ? ಮಜಾ? ಅಲ್ವಾ? ನೋಡಿ ನಾನ್ ಹೇಳಿದಕೂಡ್ಲೇ ನಿಮ್ ಕಣ್ಣೂ ಅರಳ್ತಿದೆ.”
“ಹ್ಞೂಂ ಟೀಚರ್, ಇನ್ಯಾವತ್ತೂ ಆ ದಿನಗಳೆಲ್ಲ ಮರಳಿ ಬರೋದಿಲ್ಲ ಅಲ್ವಾ? ಆಂಟಿಕ್ ಬೆಲೆಯದ್ದು ಅಂತ ಪಾತ್ರೆಗಳನ್ನೆಲ್ಲಾ ತೊಳಿಸಿದ್ರು ನಮ್ಮತ್ರ. ಜೊತೆಗೆ ಟೈಂಪಾಸಿಗೆ ಅಂತ ಅವ್ರ ಒಂದ? ಜೋಕುಗಳು. ಆ ವಸ್ತುಗಳನ್ನು ಇಡುವ ಕಪಾಟುಗಳಿಗೆಲ್ಲಾ ಬಣ್ಣ ನಮ್ಮತ್ರಾನೆ ಕೊಡ್ಸಿದ್ರು. ಹಹಹ…ನಾವಂತೂ ಪೈಂಟರ್ಗಳ ಥರಾ ಮೈಯ್ಯೆಲ್ಲಾ ಮಸಿ ಬಳ್ಕೊಂಡು ಎ? ನಗಾಡ್ತಿದ್ವಿ ಅಂದ್ರೆ! ಅದಕ್ಕೇ ಹೇಳೋದು ತುಂಬಾ ನಕ್ಕರೆ ಅ? ಅಳೋದಿಕ್ಕೂ ಇರ್ತದೆ ಅಂತ.”
“ಟೀಚರ್ ನೋಡಿ ನೀವ್ ಮತ್ತೆ ಅದನ್ನೆಲ್ಲ ಹೇಳ್ಬೇಡಿ. ಖುಶಿಯಲ್ಲಿದ್ದಾಗ ನೋವಿನ ಕ್ಷಣಗಳನ್ನು ಮರಿಲೇಬೇಕು. ಬೇಗ ನಡೀರಿ. ದೇವಸ್ಥಾನಕ್ಕೆ ಹೋಗಿ ಅಲ್ಲಿಗೆ ಹೋಗ್ಬೇಕಲ್ಲಾ?”
“ಎಂಥಾ ದಿನಗಳವು? ಕೈಯ್ಯಲ್ಲಿ ದುಡ್ಡಿರ್ಲಿಲ್ಲ. ಶ್ರೀಮಂತಿಕೆ ಬೇಕಾಗಿರ್ಲಿಲ್ಲ. ನಿಮ್ ಗೆಳೆತನ, ಅವ್ನ ಪ್ರೀತಿ, ಈ ಕಲಾಶಾಲೆ, ಎಷ್ಟು ಚಂದದ ಬದುಕು. ಇವೆಲ್ಲಾ ಇಲ್ಲದ ದಿನಗಳನ್ನು ಎರಡು ವರ್ಷಗಳ ಕಾಲ ಕಳೆದೆ. ಮನೆಯಲ್ಲೂ ಯಾರಿಗೂ ಹೇಳಿಲ್ಲ. ಅವನು ಫಾರಿನ್ನಿಗೆ ಹೋಗಲೂ ಇಲ್ಲ. ಕುಡಿತದ ಚಟ ಇತ್ತು. ಹಿಂಸೆ ಸಹಿಸಲಸಾಧ್ಯ ಅಂತ ಆಗಿ, ಆತ್ಮಹತ್ಯೆಗೂ ಟ್ರೈ ಮಾಡಿದ್ದೆ.”
“ಸ್ಟಾಪಿಟ್ ಟೀಚರ್, ಇಷ್ಟೆಲ್ಲ ಆಗುವಾಗ್ಲೂ ನನ್ನ ನೆನಪು ಆಗಿಲ್ಲ ಅಲ್ವಾ ನಿಮ್ಗೆ?”
“ಹಾಗಲ್ಲ ಅದೂ..”
“ಮಾತಾಡ್ಬೇಡಿ ನೀವು. ಛೆ! ನಾನ್ ನಿಮ್ ಬೆಸ್ಟ್ ಫ್ರೆಂಡ್ ಅಂತ ಹೇಳೋಕೆ ನಾಚಿಕೆ ಆಗ್ತಿದೆ ನಂಗೆ. ಯಾಕ್ ಹೀಗ್ ಮಾಡಿದ್ರಿ? ನಂಗೆ ಒಂದು ಮಾತು ಹೇಳ್ಬೇಕಿತ್ತಲ್ವಾ?”
“ಬನ್ನಿ ಈಗ. ನೀವೆಲ್ಲಿದ್ರಿ ಹೇಳೋಕೆ? ಎಂ.ಎ. ಮಾಡ್ಬೇಕು ಅಂತ ಯೂನಿವರ್ಸಿಟಿಗೆ ಹೋಗಿದ್ರಿ. ಯಾರಿಗೆ ಹೇಳಿದ್ರೂ ಏನೂ ಉಪಯೋಗ ಇಲ್ಲ ಬಿಡಿ.”
“ಟೀಚರ್ ಹೀಗೆ ಕೇಳಿದೆ ಅಂತ ಬೇಜಾರ್ ಮಾಡ್ಕೊಬೇಡಿ. ಡೈವೋರ್ಸ್ ಆದದ್ದು ಒಳ್ಳೇದೇ ಆಯ್ತು. ಆದ್ರೂ ಇನ್ನೊಂದು ಮದ್ವೆ ಆಗುವಾಗಲಾದ್ರೂ ಸುಧಾಕರನನ್ನು ನೆನಪು ಮಾಡ್ಕೋಬೇಕಿತ್ತಲ್ವಾ?”
“ನೆನಪುಗಳಿಗೇನು? ಈಗ್ಲೂ ಆಗ್ತಾನೆ. ಪ್ರೀತಿಗೆ ಒಂದು ಸಲ ಮೋಸ ಆದ್ರೆ ಮತ್ತೆ ಹೃದಯ ಧೈರ್ಯ ತಂದುಕೊಳ್ಳೋದು ಅಸಾಧ್ಯ. ಮದುವೆಯ ಮೊದಲನೇ ರಾತ್ರಿನೇ ನಿರ್ಧಾರ ಮಾಡಿದ್ದೆ ನನ್ನ ಬದುಕಿನ ನದಿ ಇನ್ನು ಹೇಗೆ ಹರಿಯುತ್ತೋ ಹಾಗೆ ಹೋಗೋದು ಅಂತ. ಪುಣ್ಯಾತ್ಮ ಡೈವೋರ್ಸಿಗೆ ತೊಂದ್ರೆ ಕೊಡ್ಲಿಲ್ಲ.”
“ನಿಮ್ ಯಜಮಾನ್ರು ಹೇಗೆ? ಒಳ್ಳೆಯವ್ರಾ?”
“ವಯಸ್ಸಾಗಿದೆ ಅನ್ನೋದು ಬಿಟ್ರೆ ಬೇರೇನೂ ತೊಂದ್ರೆ ಇಲ್ಲ ಟೀಚರ್. ಅವ್ರ ಮನೆಯವ್ರಿಗೆ ನಾನ್ ಅವ್ರ ಕೈ ಹಿಡಿದೆ ಅನ್ನೋದೇ ಸಂಭ್ರಮ. ಬದುಕು ಹೇಗೋ ನಡೀತಿದೆ. ಪುಟ್ಟಿ ಹೇಳ್ತಿರ್ತಾಳೆ. ’ಡ್ಯಾಡಿ ಹೇರ್ ಕಲರ್ ಹಾಕಿ. ಎಲ್ಲರ ಹೇರ್ ನೋಡಿ ಬ್ಲಾಕ್ ಬ್ಲಾಕ್’ ಅಂತ. ಜೋರಾಗಿ ನಗ್ತಾರೆ ನನ್ನೆಜಮಾನ್ರು. ನೋಡಿ ಅಲ್ಲಿ ಕಲಾಶಾಲೆಯಲ್ಲಿ ಎಲ್ರೂ ನಮ್ಮನ್ನೇ ನೋಡ್ತಿದಾರೆ. ಬನ್ನಿ.”