ಈ ದೇಶದಲ್ಲಿ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳು ಮೂರು ಸಾವಿರದಷ್ಟು. ಹಿಂದು ಸಮಾಜ ತನ್ನ ವಶಕ್ಕೆ ಹಿಂದಿರುಗಿಸುವಂತೆ ಆಗ್ರಹಪಡಿಸುತ್ತಬಂದಿದ್ದುದು ಮೂರೇ ಮೂರು ಪೂಜಾಸ್ಥಾನಗಳನ್ನು. ಶಾಂತಿ ನೆಲೆಸಲೆಂದು ದೇಶವನ್ನೇ ಪಾಲು ಮಾಡಿ ಒಂದು ಭಾಗವನ್ನಿತ್ತ ಹಿಂದುಗಳಿಗೆ ಈ ಮೂರು ಪವಿತ್ರ ಸ್ಥಾನಗಳನ್ನು ಬಿಟ್ಟುಕೊಡುವುದು ಮುಸ್ಲಿಮರಿಗೆ ಭಾರವಾಗಬಾರದಿತ್ತು. ಇದಕ್ಕೆ ಅಡ್ಡಿ ಬರುತ್ತಿದ್ದವರು ವೋಟ್-ಅವಲಂಬಿ ರಾಜಕಾರಣಿಗಳು ಮತ್ತು ನಿರಂತರ ಮುಸ್ಲಿಮರ ಮೂಲಭೂತವಾದಕ್ಕೆ ಇಂಬುಗೊಡುತ್ತ ಬಂದಿದ್ದ ವಲಯಗಳು.
ಇತಿಹಾಸದ ಮುಂಜಾವಿಗೂ ಹಿಂದಿನಿಂದಲೇ ಸಮಸ್ತ ಹಿಂದು ಜನಾಂಗದ ಅಂತರಂಗದಲ್ಲಿ ಮರ್ಯಾದಾಪುರುಷೋತ್ತಮನೆಂದೂ ಭಗವಂತನ ಶ್ರೇಷ್ಠ ಅವತಾರವೆಂದೂ ಉದಾತ್ತ ಜೀವನಮೌಲ್ಯಗಳೆಲ್ಲದರ ಪ್ರತೀಕವೆಂದೂ ಅಧಿಷ್ಠಿತನಾಗಿರುವ ಶ್ರೀರಾಮನ ಜನ್ಮಸ್ಥಾನವನ್ನು ಅದಕ್ಕೆ ಅಂಟಿದ್ದ ಕಲಂಕದಿಂದ ರಾಷ್ಟ್ರವ್ಯಾಪಿ ಆಂದೋಲನದ ಮೂಲಕ ಮುಕ್ತಗೊಳಿಸಿ ಇದೀಗ ಅಲ್ಲಿ ಮಂದಿರನಿರ್ಮಾಣವೂ ನಡೆದಿರುವುದು ಒಂದು ಇತಿಹಾಸಾರ್ಹ ಘಟನೆ.
ಕೆಲವು ಶತಾಬ್ದಗಳಿಂದ ವಿವಿಧ ಕಾರಣಗಳಿಂದಾಗಿ ಅತಿಮಾರ್ದವವನ್ನು ರೂಢಿಸಿಕೊಂಡಿದ್ದ ಹಿಂದುಸಮಾಜ ಕಾಲಧರ್ಮ ಅಪೇಕ್ಷಿಸಿದಂತೆ ಈಗ ಕ್ಷಾತ್ರವನ್ನು ಮರಳಿ ಪಡೆದುಕೊಳ್ಳುತ್ತಿರುವುದರ ಸಂಕೇತವೂ ಇದಾಗಿದೆ.
ರಾಜ್ಯವ್ಯವಸ್ಥೆಗೆ ಅತೀತವಾದ ರಾಷ್ಟ್ರಕತೆ ಜಾಗೃತಗೊಂಡಾಗ ಹಿಂದುವಿನ ಪೌರುಷ ಹೇಗೆ ಎದ್ದುನಿಲ್ಲುತ್ತದೆಂಬುದನ್ನು ಇತಿಹಾಸ ಹಲವುಬಾರಿ ನಿದರ್ಶನಪಡಿಸಿದೆ. ಇಂದು ನಡೆದಿರುವುದೂ ಅಂಥದೇ ಒಂದು ಪರ್ವಕಾಲ.
ಸಾಮಾನ್ಯವಾಗಿ ಸುಪ್ತವಾಗಿರುವ ಹಿಂದು ಅಸ್ಮಿತೆ ಹಲವೊಮ್ಮೆ ಜಾಜ್ವಲ್ಯಮಾನವಾಗಿ ಪ್ರಕಟಗೊಳ್ಳುವುದುಂಟು. ಅಂಥ ಒಂದೊಂದು ಪ್ರಕಟೀಕರಣವೂ ನಮ್ಮ ಇತಿಹಾಸದ ಸುವರ್ಣಾಧ್ಯಾಯಗಳನ್ನು ಸೃಷ್ಟಿಸಿದೆ. ಆ ಅಸ್ಮಿತೆ ಯಾವುದೇ ಕಾರಣದಿಂದ ಮಾಸಿದಲ್ಲಿ ಕೆಲಕಾಲ ಸಮಾಜ ಅವನತ ಸ್ಥಿತಿಯಲ್ಲಿರುತ್ತದೆ. ಆ ಸ್ಥಿತಿಯಿಂದ ಮತ್ತೆ ಸಮಾಜವನ್ನು ಉನ್ಮುಖಗೊಳಿಸಲು ವ್ಯಾಪಕ ಅಭಿಯಾನಗಳು ನಡೆಯುತ್ತವೆ. ಕಳೆದ ಏಳೆಂಟು ದಶಕಗಳನ್ನು ಅಂಥ ಒಂದು ಪರ್ವಕಾಲವೆಂದು ಭಾವಿಸಿದರೆ ತಪ್ಪಾಗದು.
ಅಸ್ಮಿತೆಯ ಪ್ರಕಟೀಕರಣ
ಅಯೋಧ್ಯೆಯ ಘಟನೆಯನ್ನು ತಾಳ್ಮೆಯಿಂದ ಅವಲೋಕಿಸಿದಾಗ ಹೊಮ್ಮುವ ಅರ್ಥ ಒಂದು ಮಾತ್ರ: ಅದು ಹಿಂದು ಸಮಾಜದ ಅಸ್ಮಿತೆಯ ಅಸಂದಿಗ್ಧ ಪ್ರಕಟೀಕರಣವೆಂಬುದು.
ಆಕ್ರಮಕರ ದಾಖಲೆಗಳೇ ‘ಜನ್ಮಸ್ಥಾನ್ ಮಸ್ಜಿದ್’ ಎಂದು ಹೆಸರಿಸಿರುವ ಕಟ್ಟಡಕ್ಕೆ ನಾಲ್ಕುನೂರ ಅರವತ್ತು ವರ್ಷಗಳ ನಂತರ ಸ್ವತಂತ್ರ ಭಾರತದ ಪ್ರಧಾನಮಂತ್ರಿಗಳೂ ಅವರ ಬೆಂಬಲಿಗ ‘ಸೆಕ್ಯುಲಾರಿಸ್ಟ್’ ವರ್ಗಗಳವರೂ ‘ಬಾಬರೀ ಮಸ್ಜಿದ್’ ಎಂದು ಪುನರ್ನಾಮಕರಣ ಮಾಡಿ ಧನ್ಯತೆ ಕಂಡುಕೊಂಡಿದ್ದರು.
ಯಾರ ದೇಶಪ್ರೇಮವನ್ನು ಅವರ ವಿರೋಧಿಗಳೂ ಶಂಕಿಸುವುದಿಲ್ಲವೋ ಅಂಥವರ ಸಂಘಟನೆಗಳ ಮೇಲೆ ಆಗಿನ ಸರ್ಕಾರ ನಿಷೇಧ ಹೇರಿತ್ತು.
ರಾಮಜನ್ಮಮುಕ್ತಿ ಅಭಿಯಾನ ಇಪ್ಪತ್ತನೇ ಶತಮಾನದ ಅತಿದೊಡ್ಡ ಜನಾಂದೋಲನವೆಂದು ಅನೇಕರು ಉದ್ಗರಿಸಿದ್ದುಂಟು. ಆ ಹೇಳಿಕೆಯಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಗಾತ್ರ, ವ್ಯಾಪ್ತಿಯಲ್ಲಂತೂ ಇದು ಬೃಹತ್ಪ್ರಮಾಣದ್ದಾಗಿದ್ದಿತೆಂಬುದು ಕಣ್ಣಿಗೇ ಕಾಣುವ ಸಂಗತಿ. ಆದರೆ ಗುರಿಯ ಉದಾತ್ತತೆಯನ್ನೂ ಅನನ್ಯತೆಯನ್ನೂ ಪರಿಭಾವಿಸಿದಾಗ ಆ ಆಂದೋಲನದ ಮಹತ್ತ್ವ ನೂರುಪಟ್ಟು ಹೆಚ್ಚಿನದೆನಿಸದಿರದು. ತೆರಿಗೆ ತಗ್ಗಿಸಬೇಕೆಂದೋ ಭತ್ಯೆ ಹೆಚ್ಚಿಸಬೇಕೆಂದೋ ಹಲವುನೂರು ಮಂದಿ ನಡೆಸುವ ಮೆರವಣಿಗೆಗಳೇ ವ್ಯಾಪಕ ಪ್ರಚಾರ ಪಡೆಯುತ್ತವೆ. ಒಂದು ದೇವಾಲಯದ ಸ್ಥಳವನ್ನು ಮರಳಿ ಸ್ವಾಧೀನಕ್ಕೆ ಪಡೆದುಕೊಳ್ಳಲು ಒಂದು ಸಮಾಜ ಪ್ರಚಂಡ ಶಾಸಕೀಯ ಶಕ್ತಿಯ ಹಾಗೂ ವಿಕೃತ ಮನೋಧರ್ಮದ ಹಲವು ಶಕ್ತಿಗಳ ಒಟ್ಟಿಲಿನ ವಿರುದ್ಧ ಹೋರಾಡಬೇಕಾಗಿ ಬಂದಿದ್ದುದು ಇತಿಹಾಸದ ಒಂದು ವಿಪರ್ಯಾಸ.
ಈ ದೇಶದಲ್ಲಿ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳು ಮೂರು ಸಾವಿರದಷ್ಟು. ಹಿಂದು ಸಮಾಜ ತನ್ನ ವಶಕ್ಕೆ ಹಿಂದಿರುಗಿಸುವಂತೆ ಆಗ್ರಹಪಡಿಸುತ್ತಬಂದಿದ್ದುದು ಮೂರೇ ಮೂರು ಪೂಜಾಸ್ಥಾನಗಳನ್ನು. ಶಾಂತಿ ನೆಲೆಸಲೆಂದು ದೇಶವನ್ನೇ ಪಾಲು ಮಾಡಿ ಒಂದು ಭಾಗವನ್ನಿತ್ತ ಹಿಂದುಗಳಿಗೆ ಈ ಮೂರು ಪವಿತ್ರ ಸ್ಥಾನಗಳನ್ನು ಬಿಟ್ಟುಕೊಡುವುದು ಮುಸ್ಲಿಮರಿಗೆ ಭಾರವಾಗಬಾರದಿತ್ತು.
ಇದಕ್ಕೆ ಅಡ್ಡಿ ಬರುತ್ತಿದ್ದವರು ವೋಟ್-ಅವಲಂಬಿ ರಾಜಕಾರಣಿಗಳು ಮತ್ತು ನಿರಂತರ ಮುಸ್ಲಿಮರ ಮೂಲಭೂತವಾದಕ್ಕೆ ಇಂಬುಗೊಡುತ್ತ ಬಂದಿದ್ದ ವಲಯಗಳು.
ಇಸ್ಲಾಂ, ಈಸಾಯಿ ಧರ್ಮಗ್ರಂಥಗಳ ಬೋಧೆಗಳು ಪ್ರಜಾಪ್ರಭುತ್ವಕ್ಕೂ ಸೆಕ್ಯುಲಾರಿಸಂಗೂ ಹೊಂದಿಕೆಯಾಗುತ್ತವೆಂದು ಹೇಳುವ ಸಾಹಸವನ್ನು ಸೆಕ್ಯುಲಾರಿಸ್ಟರೂ ಸಹ ಮಾಡಲಾರರು! ಕಟ್ಟಡ ವಿಧ್ವಂಸ ಇಸ್ಲಾಂಧರ್ಮಕ್ಕೆ ಪೂರ್ಣ ಸಮ್ಮತವಾದ ಕ್ರಿಯೆಯೇ ಅಲ್ಲವೆ?
ಅಪಮಾನದ ಸಂಕೇತ
ಹಿಂದು ಸಮಾಜ ಅಯೋಧ್ಯೆಯ ರಾಮಜನ್ಮಸ್ಥಾನವನ್ನು ಮರಳಿ ಪಡೆಯಬಯಸಿದುದು ಹಲವು ವಿಶಿಷ್ಟ ಕಾರಣಗಳಿಂದ. ಈ ನ್ಯಾಯವಾದ ಬೇಡಿಕೆಗೆ ಆಗಿನ ಸರ್ಕಾರ ಪ್ರತಿರೋಧ ತೋರಿದುದರಿಂದಾಗಿ. ಈಗ ಹಿಂದುಗಳಲ್ಲಿ ಇತರ ಹತ್ತಾರು ಸ್ಥಾನಗಳ, ಸಂಗತಿಗಳ ಬಗೆಗೂ ತಮಗಿರುವ ನೈಜ ಹಕ್ಕನ್ನು ಏಕೆ ಒತ್ತಾಯಿಸಬಾರದೆಂಬ ಮನಃಸ್ಥಿತಿಯುಂಟಾಯಿತು.
ಲಕ್ಷಾಂತರ ಜನರ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಐದಾರು ದಶಕಗಳ ಕಾಲ ಉದಾಸೀನ ಮಾಡಿದ್ದು ಸಾಲದೆಂಬಂತೆ ಮತ್ತಷ್ಟು ನಿಧಾನದ್ರೋಹವೆಸಗುತ್ತಲೇ ಬಂದರೂ ಜನ ಸೌಮ್ಯವಾಗಿ ಕಾದು ಕುಳಿತಿರಬೇಕೆಂಬ ಆಗಿನ ಸರ್ಕಾರದ ನಿರೀಕ್ಷೆಗೆ ಅರ್ಥವಿರಲಿಲ್ಲ.
ತಮ್ಮ ನಿಲವೇನೆಂಬುದನ್ನು ಸಾಧುಸಂತರೂ ವಿಶ್ವಹಿಂದು ಪರಿಷತ್ತಿನ ಪ್ರಮುಖರೂ ದೀರ್ಘಕಾಲದಿಂದ ಸ್ಪಷ್ಟಪಡಿಸಿಯೇ ಇದ್ದರು. ೧೯೯೨ರ ಡಿಸೆಂಬರ್ ೬ರಂದು ‘ವಿವಾದಿತ’ ಕಟ್ಟಡವನ್ನು ಕೆಳಗುರುಳಿಸಬೇಕೆಂಬ ಪೂರ್ವಯೋಜನೆ ಅವರಿಗಿದ್ದಿದ್ದಲ್ಲಿ ಹಾಗೆ ಕಂಠೋಕ್ತವಾಗಿ ಘೋಷಿಸಲು, ಹಾಗೆ ಸಮಾಜಕ್ಕೆ ಆದೇಶ ನೀಡಲು, ಮತ್ತು ಕಾರ್ಯಗತ ಮಾಡಿಸಲು ಪೂರ್ಣ ಸಾಮರ್ಥ್ಯ ಇದ್ದವರು ಅವರು. ಆದ್ದರಿಂದ ಅವರಾರ ವಿಷಯದಲ್ಲಿಯೂ ‘ಮುಚ್ಚುಮರೆ’ ಆಪಾದನೆಗೆ ಅವಕಾಶವಿಲ್ಲ.
ಭಾರತದ ಅಪಮಾನದ ಸಂಕೇತವಾಗಿದ್ದ ಆ ನಿರ್ಜೀವ ಕಟ್ಟಡದ ಅಸ್ತಿತ್ವದಲ್ಲಿಯೇ ಅದರ ವಿನಾಶದ ಬೀಜ ಅಡಗಿತ್ತು. ಯಾವ ಕಟ್ಟಡದ ಮೂಲವೇ ಅಧಾರ್ಮಿಕತೆಯಾಗಿತ್ತೋ ಅದು ರೂಪತಳೆದಂದಿನಿಂದಲೇ ವಿನಾಶವನ್ನು ಆಹ್ವಾನಿಸುತ್ತ ಕುಳಿತಿತ್ತು. ಹೀಗೆ ವಾಸ್ತವವಾಗಿ ಅದರ ಇರುವಿಕೆಗೆ ಅದೇ ಸ್ವಯಂ ಸವಾಲಾಗಿತ್ತೇ ವಿನಾ ಹಿಂದುಗಳಲ್ಲ. ವಿನಾಶವನ್ನೇ ಹಣೆಯಲ್ಲಿ ಬರೆದುಕೊಂಡು ಹುಟ್ಟಿದ್ದ ಆ ಅರ್ಥಶೂನ್ಯ ಕಟ್ಟಡದ ಅವಸಾನದಲ್ಲಿ ಹಿಂದುಗಳ ಪಾತ್ರ ಆಗಂತುಕವಷ್ಟೆ ಆಗಿತ್ತು.
‘ಸೌಹಾರ್ದ’ದ ಬೋಧನೆ
“ಸೌಹಾರ್ದದ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ನೆರವಾಗಿ”, “ಕಾರಸೇವೆ ಮಾಡಬೇಡಿ” ಎಂದೆಲ್ಲ ಹಿಂದು ಸಮಾಜಕ್ಕೆ ಎಡೆಬಿಡದೆ ಉಪದೇಶ ಮಾಡುತ್ತ ಬಂದಿದ್ದ ಆಗಿನ ಪ್ರಧಾನಮಂತ್ರಿಗಳಾಗಲಿ ಅವರ ಬೆಂಬಲಿಗರಾಗಲಿ ಮುಸ್ಲಿಂ ಸಮುದಾಯಕ್ಕೆ “ಕೋಟ್ಯಂತರ ಹಿಂದುಗಳ ಶ್ರದ್ಧಾಕೇಂದ್ರವಾಗಿರುವ ಈ ಸ್ಥಳವನ್ನು ಅವರಿಗೆ ಬಿಟ್ಟುಕೊಡುವುದು ನಿಮ್ಮ ನೆಮ್ಮದಿಗೂ ಪೋಷಕವಾಗುತ್ತದೆ” ಎಂದು ಅಪ್ಪಿತಪ್ಪಿಯೂ ಹಿತವಾದ ಹೇಳಲಿಲ್ಲವೇಕೆ? ಉಪದೇಶಕ್ಕೆ ಅರ್ಹರಾದವರು ಹಿಂದುಗಳು ಮಾತ್ರವೆ?
ಯಾವ ಸ್ಥಳದಲ್ಲಿ ಹಿಂದಿನ ಆರು ದಶಕಗಳಿಂದ, ೧೯೩೪ರಿಂದಲೇ ಮುಸಲ್ಮಾನರು ದೂರ ಉಳಿದಿದ್ದರೋ, ಯಾವ ಸ್ಥಳದ ೨೦೦ ಗಜ ಫಾಸಲೆಯೊಳಗೆ ಮುಸಲ್ಮಾನರ ಪ್ರವೇಶವನ್ನು ನ್ಯಾಯಾಲಯ ೧೯೫೦ರಿಂದಲೇ ನಿಷೇಧಿಸಿತ್ತೋ, ಯಾವ ಸ್ಥಳದಲ್ಲಿ ೧೯೪೯ರಿಂದ ಹಿಂದುಗಳಿಂದ ಶ್ರೀರಾಮನಿಗೆ ನಿರಂತರ ಅರ್ಚನೆ ಸಲ್ಲುತ್ತಿತ್ತೋ, ಆ ಸ್ಥಳವನ್ನು ಹಿಂದುಗಳಿಗೆ ಸೌಹಾರ್ದದಿಂದ ಹಿಂದಿರುಗಿಸುವುದು ಯುಕ್ತ ಮಾರ್ಗವೆಂದು ಮುಸಲ್ಮಾನರಿಗೆ ಯಾವ ಕಾಂಗ್ರೆಸ್ ವರಿಷ್ಠರೂ ಎಂದೂ ಬೋಧಿಸಲಿಲ್ಲ.
೧೯೯೨ರ ಡಿಸೆಂಬರ್ ೬ರಂದು ಸಿಡಿದೆದ್ದ ಆಕ್ರೋಶ ಮುಸ್ಲಿಮರ ವಿರುದ್ಧವೂ ಅಲ್ಲ, ಇಸ್ಲಾಮಿನ ವಿರುದ್ಧವಂತೂ ಅಲ್ಲವೇ ಅಲ್ಲ. ಅಂದು ಉರುಳಿಬಿದ್ದುದು ಅರಾಷ್ಟ್ರೀಯತೆಯ ಒಂದು ಪ್ರತೀಕವಷ್ಟೆ. ಇಂಥ ವಿಕೃತ ಸ್ಮಾರಕ ಚಿರಸ್ಥಾಯಿಯಾಗಿರಬೇಕೆಂದು ಸೆಕ್ಯುಲಾರಿಸ್ಟ್ ರಾಜಕಾರಣಿಗಳು ಬಯಸುತ್ತಿದ್ದುದನ್ನು ಮನೋವ್ಯಾಧಿಗ್ರಸ್ತತೆಯೆಂದೇ ಕರೆಯಬೇಕಾಗುತ್ತದೆ.
ಇದು ಮೂಲತಃ ರಾಷ್ಟ್ರದ ಜೀವಸ್ವರದ ಪ್ರಶ್ನೆಯೇ ಹೊರತು ಮಂದಿರ-ಮಸೀದಿ ಅಥವಾ ಹಿಂದು-ಮುಸ್ಲಿಂ ಪ್ರಶ್ನೆಯಲ್ಲವೆಂದು ನೇತಾರರಿಗೆ ಮನವರಿಕೆಯಾಗಲು ದೀರ್ಘಕಾಲ ಹಿಡಿಯಿತು. ಈ ತಥ್ಯವನ್ನವರು ಅರಿತಿದ್ದಲ್ಲಿ ‘ರಾಮ ಇತಿಹಾಸಪುರುಷನೆ?’ ‘ಅವನು ಇಲ್ಲಿಯೆ ಹುಟ್ಟಿದನೆಂದು ಹೇಗೆ ಹೇಳುವಿರಿ?’ ‘ಇಲ್ಲಿ ಮಂದಿರವಿತ್ತೆನ್ನಲು ಸಾಕ್ಷ್ಯವೇನು?’ ಇತ್ಯಾದಿ ಹಾಸ್ಯಾಸ್ಪದ ಪ್ರಶ್ನೆಗಳನ್ನು ಅವರು ಕೇಳುತ್ತಿರಲಿಲ್ಲ. ವಾಸ್ತವ ಸ್ಥಿತಿಯೆಂದರೆ ಈ ಕೊಂಕುಮಾತುಗಳನ್ನವರು ರಾಜಕೀಯೋದ್ದೇಶದಿಂದ ಆಡುತ್ತಿದ್ದರೇ ಹೊರತು ನಿಜವಾಗಿ ಸಂದೇಹಗ್ರಸ್ತರಾಗಿ ಅಲ್ಲ. ಶಾಪಗ್ರಸ್ತ ಶಿಶುಪಾಲನು ತನ್ನನ್ನು ಯಥೇಷ್ಟ ನಿಂದಿಸಿದ್ದು ಮುಗಿಯಲೆಂದು ಅವಕಾಶವಿತ್ತ ಶ್ರೀಕೃಷ್ಣನಂತೆ ಠಕ್ಕಿನ ಜಾತ್ಯತೀತತೆಯ ವಿಪರಿಣಾಮಗಳ ಕುಂಭ ಭರ್ತಿಯಾಗಲೆಂದು ಹಿಂದು ಸಮಾಜ ಅಷ್ಟು ದಿವಸ ತಾಳ್ಮೆಯಿಂದ ಕಾದಿದ್ದಿತಷ್ಟೆ. ಪಾಪರಾಶಿಯು ‘ಕಾಲಪಕ್ವ’ವಾದೊಡನೆ ನವನಿರ್ಮಾಣಕ್ಕೆ ನಾಂದಿಯಾಯಿತು.
ಸತ್ತ್ವೋದ್ರೇಕ
೧೯೯೨ರ ಡಿಸೆಂಬರ್ ೫ರಂದು ಉತ್ತರಪ್ರದೇಶದ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹಮಂತ್ರಿಗಳು ಬರೆದ ಪತ್ರವೊಂದರಲ್ಲಿ “ಅಯೋಧ್ಯೆಯಲ್ಲಿ ನೆರೆದಿರುವ ಕಾರಸೇವಕರಿಗೆ ಸಿಟ್ಟು ಬಂದಿದೆ. ಆದ್ದರಿಂದ ನೀವು ವಿಶೇಷ ಎಚ್ಚರ ವಹಿಸಬೇಕು” – ಎಂದಿದ್ದರು. ಸಿಟ್ಟು ಬಂದಿದ್ದದ್ದು ನಿಜ – ಆದರೆ ಈಗಲ್ಲ, ೧೫೨೮ರಷ್ಟು ಹಿಂದಿನಿಂದಲೇ! ಈ ಹಿಂದೆ ‘ಜನ್ಮಸ್ಥಾನ’ವನ್ನು ಮರಳಿ ಪಡೆಯಲು ಹಿಂದು ಸಮಾಜ ೭೬ ಬಾರಿ ಪೂರ್ಣಪ್ರಮಾಣದ ಸಮರವನ್ನೇ ನಡೆಸಿತ್ತು; ಆವರೆಗೆ ಮೂರುಲಕ್ಷದಷ್ಟು ಮಂದಿ ಬಲಿದಾನ ಮಾಡಿದ್ದರು.
‘ಇದು ತಾಮಸಿಕ ಆವೇಶವಲ್ಲ; ಸತ್ತ್ವೋದ್ರೇಕ’ ಎಂದು ಸರ್ಕಾರವಾಗಲಿ ಬಾಡಿಗೆ ಬುದ್ಧಿಜೀವಿ ‘ಸೆಕ್ಯುಲಾರಿಸ್ಟ’ರಾಗಲಿ ಮನಗಾಣಲೇ ಇಲ್ಲ ಡಿಸೆಂಬರ್ ೬ರವರೆಗೆ. ಅದರ ತರುವಾಯ ಹೆಚ್ಚುಹೆಚ್ಚು ಮಂದಿಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗತೊಡಗಿತು; ಅವರ ಪರಿಭಾಷೆ ಬದಲಾಗತೊಡಗಿತು. ‘ರಾಷ್ಟ್ರೀಯತೆ’ ಎಂದರೆ ಏನು? ‘ಸೆಕ್ಯುಲಾರಿಸಂ’ ಎಂದರೆ ಏನು? ‘ಯಾರು ಸೆಕ್ಯುಲಾರಿಸ್ಟರು?’ ‘ರಾಜ್ಯಾಂಗಕ್ಕೂ ಸೆಕ್ಯುಲಾರಿಸಂಗೂ ಸಂಬಂಧವೇನು, ಹೊಂದಾಣಿಕೆ ಹೇಗೆ?’ ‘ರಾಜ್ಯಾಂಗಕ್ಕೂ ಜಾತ್ಯತೀತತೆಗೂ ಹೊಂದಾಣಿಕೆ ಹೇಗೆ?’ – ಮೊದಲಾದ ಪ್ರಶ್ನೆಗಳು ಅನಂತರದ ದಿನಗಳಲ್ಲಿ ದೇಶದ ಮೂಲೆಮೂಲೆಗಳಲ್ಲಿ, ವೇದಿಕೆ-ಪತ್ರಿಕೆಗಳಲ್ಲಿ ಚರ್ಚೆಗೆ ವಿಷಯಗಳಾದವು. ಸ್ವಾತಂತ್ರ್ಯಪ್ರಾಪ್ತಿಯ ಕಾಲದಿಂದ ನಡೆಯದಿದ್ದ ಈ ಮೂಲಭೂತ ಚರ್ಚೆ ಈಗಲಾದರೂ ಉಪಕ್ರಮಗೊಂಡದ್ದು ಮೆಚ್ಚಬೇಕಾದ್ದು. ದಶಕಗಳುದ್ದಕ್ಕೂ “ಸೆಕ್ಯುಲಾರಿಸಂ ಎಂದರೆ ನಿಮ್ಮ ಕಲ್ಪನೆ ಏನೆಂದು ಖಚಿತಪಡಿಸಿ” ಎಂಬ ಪ್ರಶ್ನೆಗೆ ನಿಷ್ಕೃಷ್ಟವಾಗಿ ಉತ್ತರಿಸಲು ಕಾಂಗ್ರೆಸ್ ಪಕ್ಷದ ಧುರೀಣರಿಗಾಗಲಿ ಅವರ ತತ್ತತ್ಕಾಲೀನ ಬೆಂಬಲಿಗರಿಗಾಗಲಿ ಪುರಸತ್ತೇ ದೊರೆತಿರಲಿಲ್ಲ; ಜಾರಿಕೆಯ ಜವಾಬುಗಳಷ್ಟೆ ಬರುತ್ತಿದ್ದವು.
ಹಿಂದುಧರ್ಮವೆಂದರೆಯೇ ಮೂಗುಮುರಿ-ಯುತ್ತಿದ್ದವರು ಈಗ ಹಿಂದುಧರ್ಮದ ಮೇಲೆ ವ್ಯಾಖ್ಯಾನ ನೀಡಲು ಉತ್ಸುಕರಾದರು.
ಯಾರು ಸ್ವಾತಂತ್ರ್ಯಾದೋಲನದ ಶೃಂಗಾಗ್ರದಶೆಯಲ್ಲಿ ನಿರ್ಲಜ್ಜೆಯಿಂದ ಆಂಗ್ಲ ಸಾಮ್ರಾಜ್ಯಶಾಹಿಯ ಹಸ್ತಕರಾಗಿ ಕೆಲಸ ಮಾಡಿ ನೇತಾಜಿ ಗಾಂಧಿಯಂಥ ಸೀಮಾಪುರುಷರನ್ನು ಹಿಟ್ಲರನ ಬಾಲಬಡುಕರು ಇತ್ಯಾದಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದರೋ ಆ ವಿದೇಶನಿಷ್ಠರನ್ನು ಆಗಿನ ಪ್ರಧಾನಿಯವರು ಈಗ ಬೆಂಬಲಕ್ಕಾಗಿ ಅಂಗಲಾಚಿದರು.
ಹಿಂದು ಮಾನಸದ ಅಭಿನ್ನ ಭಾಗವಾದ ರಾಮಭಕ್ತಿಯೂ ನೈಜ ರಾಷ್ಟ್ರಕ ಭಾವನೆಯೂ ಮೇಳವಿಸಿದಾಗ ವೋಟ್-ಆಧಾರಿತ ಸೆಕ್ಯುಲಾರಿಸಂ ನೆಲಕಚ್ಚದೆ ವಿಧಿಯಿಲ್ಲ. ಈ ‘ಗೋಡೆಬರಹ’ವನ್ನು ರಾಜಕಾರಣಿಗಳು ಅವಗತ ಮಾಡಿಕೊಳ್ಳುವುದರಲ್ಲಿ ವಿಳಂಬವಾಯಿತು.
‘ಸೆಕ್ಯುಲಾರಿಸಂ’
‘ಸೆಕ್ಯುಲಾರಿಸಂ’ ಎಂಬ ಮಾತನ್ನು ವೇದವಾಕ್ಯವೆಂಬಂತೆ ಅಧಿಕಾರಾರೂಢ ಪಕ್ಷದವರೂ ಅವರ ಸಮರ್ಥಕರೂ ಜಪಿಸುತ್ತಬಂದಿದ್ದಾರೆ. ಸಂವಿಧಾನದೊಳಕ್ಕೆ ಬಲವಂತದಿಂದ ತುರುಕಲಾದ ಈ ಮಾತಿಗೆ ಸಂವಿಧಾನಿಕ ವ್ಯಾಖ್ಯೆ ಇನ್ನೂ ಹೊರಬರಬೇಕಾಗಿದೆ.
‘ಸೆಕ್ಯುಲಾರಿಸಂ’ ಎಂಬ ಹೆಸರಿಗೆ ಏನೇ ಲಕ್ಷಣನಿರೂಪಣೆ ನೀಡಿದರೂ ಅದು ಎಲ್ಲರಿಗೂ ಏಕರೀತಿಯಾಗಿ ಅನ್ವಯವಾಗಬೇಕಾಗುತ್ತದೆ. ಯಾವುದೋ ಒಂದು ಮತದವರಿಗೆ ಸರ್ಕಾರ ವಿನಾಯಿತಿ ತೋರಿದರೆ ಅದೇ ವಿನಾಯಿತಿಗೆ ಉಳಿದವರೂ ಅರ್ಹರಾಗುತ್ತಾರೆ. ಈ ಲೋಕರೂಢಿಯ ವ್ಯವಹಾರ ಧರ್ಮವನ್ನು ಕುರಿತು ಮಾತನಾಡುವವರು ಇಂದು ‘ಜಾತೀಯವಾದಿ’ಗಳೆನಿಸಿಬಿಡುತ್ತಾರೆ.
“ನಾನು ಆಕಸ್ಮಿಕವಾಗಿ ಹಿಂದುವಾಗಿ ಹುಟ್ಟಿದೆ, ನನ್ನ ರಕ್ತದಲ್ಲಿರುವುದು ಇಸ್ಲಾಮೀ ಸಂಸ್ಕೃತಿ, ನಾನು ಪಡೆದ ಶಿಕ್ಷಣ ಯೂರೋಪಿಯನ್ ಶಿಕ್ಷಣ” ಎಂದೇ ಪ್ರಾಮಾಣಿಕವಾಗಿ ಸಾರಿದ್ದ ಜವಾಹರಲಾಲ ನೆಹರು ಅವರು ಬಿಟ್ಟು ಹೋದ ವಾರಸಿಕೆ ಬೇರೆ ಏನಾಗಿರಲು ಸಾಧ್ಯ?
ತಾವು ಸ್ವಭಾವಸಹಜವಾಗಿ ಅನುಸರಿಸಿಕೊಂಡು ಬಂದಿದ್ದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಸ್ವಾತಂತ್ರ್ಯೋತ್ತರ ದಿನಗಳಲ್ಲಿಯೂ ಮುಂದುವರಿಸಲೋಸುಗ ನೆಹರು ‘ಸೆಕ್ಯುಲಾರಿಸಂ’ ಎಂಬ ‘ಸಭ್ಯ’ ಪದಪ್ರಯೋಗವನ್ನು ಹುಟ್ಟುಹಾಕಿದರು – ಎಂಬುದು ವಸ್ತುಸ್ಥಿತಿ.
ನೆಹರುರವರೂ ತಮ್ಮ ಸೆಕ್ಯುಲಾರಿಸಂ ಅನ್ನು ಬಿಕ್ರಿ ಮಾಡಿದ್ದು ಯಾರಿಗೆ? ಯಾರಿಗೆ ಅದರ ಅಗತ್ಯವಿರಲಿಲ್ಲವೋ ಆ ಹಿಂದುಗಳಿಗೇ ಹೊರತು ಇತರರಿಗಲ್ಲ. ನಾಸ್ತಿಕತೆಯನ್ನು ಆಧರಿಸಿದ ವಾಮಪಂಥೀಯರಿಗೆ ನೆಹರುಪ್ರಣೀತ ಸೆಕ್ಯುಲಾರಿಸಂ ವರವಾಯಿತು. ಭಾರತದ ಸಂದರ್ಭದಲ್ಲಿ ಸೆಕ್ಯುಲಾರಿಸಂ ಕಲ್ಪನೆಯೇ ಅಸಂಗತವೆಂಬುದು ಅವರಾರಿಗೂ ತೋರಲಿಲ್ಲ. ಹಲವಾರು ಶತಮಾನಗಳ ಕಾಲ ಧರ್ಮಾಧಿಕಾರಕ್ಕೂ ರಾಜ್ಯಾಧಿಕಾರಕ್ಕೂ ನಡುವೆ ನಡೆದ ಸ್ಪರ್ಧೆಯ ಹಿನ್ನೆಲೆಯಲ್ಲಿ ಯೂರೋಪಿನಲ್ಲಿ ರೂಪಗೊಂಡಿದ್ದ ಸೆಕ್ಯುಲಾರಿಸಂ ಕಲ್ಪನೆಯನ್ನು ಭಾರತದ ರಾಜ್ಯರಚನೆಯೊಳಕ್ಕೆ ತುರುಕಿದ ಅತಾರ್ಕಿಕ ಕ್ರಮದ ವಿಷಫಲವೇ ಇಂದು ಕಾಣುತ್ತಿರುವುದು.
ವಾಸ್ತವಾನುಭವ ಏನು?
ಎಂದೋ ನಡೆದ ಇತಿಹಾಸದ ಘಟನೆಗಳಿಗೆ ಪ್ರತಿವರ್ತನೆ ತೋರುವುದು ಸಭ್ಯತೆಯಲ್ಲ – ಎಂದು ಉಚ್ಚಸ್ವರದಲ್ಲಿ ಕಿರುಚಾಡುವ ಪಂಡಿತರು ಸಮಕಾಲೀನ ಜಾಗತಿಕ ಇತಿಹಾಸವನ್ನಾದರೂ ಅಭ್ಯಾಸ ಮಾಡುವುದು ಅವರಿಗೆ ಉದ್ಬೋಧಕವಾದೀತು.
ಜರ್ಮನಿಯಲ್ಲಿ ಹಿಟ್ಲರನ ದಮನಶಾಹಿಯ ದಿನಗಳಲ್ಲಿ ಲಕ್ಷಾಂತರ ಜನ ಯಹೂದ್ಯರನ್ನು ವಿಷಾನಿಲದಿಂದ ಕೊಂದ ಔಶ್ವಿಟ್ಸ್ ಮೃತ್ಯುಕೂಪದ ಸಮೀಪದಲ್ಲಿ ಕ್ರೈಸ್ತ ಮಿಶನರಿ ಸಂಸ್ಥೆಯೊಂದಿದ್ದುದು ಅಪಮಾನಕಾರಿ ಎಂದು ಯಹೂದ್ಯರು ಪಟ್ಟುಹಿಡಿದಾಗ ಆ ಸಂಸ್ಥೆಯನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.
ಎಷ್ಟೋ ದಶಕಗಳ ಹಿಂದೆ ಕೊರಿಯಾದ ಮೇಲೆ ಜಪಾನ್ ನಡೆಸಿದ್ದ ಆಕ್ರಮಣಕ್ಕಾಗಿ ಆಮೇಲಿನ ಕಾಲದ ಜಪಾನಿನ ದೊರೆ ಕೊರಿಯಕ್ಕೆ ಭೇಟಿಯಿತ್ತಾಗ ತಾವಾಗಿ ತಮ್ಮ ದೇಶದ ಪರವಾಗಿ ಕ್ಷಮಾಪಣೆ ಕೇಳಿದರು.
“ವಿಶ್ವಹಿಂದು ಪರಿಷದ್ ಮುಂತಾದವರು ಹಿಂದುಧರ್ಮವನ್ನು ಸೆಮೆಟಿಕ್ ಧರ್ಮವಾಗಿಸುತ್ತಿದ್ದಾರೆ” – ಎಂಬ ಕುತೂಹಲಕರ ಟೀಕೆಯನ್ನು ವಾಮಪಂಥೀಯರೂ ಮುಶೀರುಲ್ಹಸನ್ ಮುಂತಾದ ಇತಿಹಾಸ ತಜ್ಞರೂ ಮಾಡತೊಡಗಿದರು. ಹಿಂದುಧರ್ಮ ಕಳಪೆ ಎಂದು ಹೇಳುತ್ತಿದ್ದ ಈ ಬುದ್ಧಿವಂತರ ವ್ಯಾಖ್ಯೆಯಲ್ಲಿ ಸೆಮೆಟಿಕ್ ಧರ್ಮಗಳ ಅವಹೇಳನವೂ ಈಗ ಸೇರಿದಂತಾಯಿತು! ಅವರ ಟೀಕೆಗಳಲ್ಲಿ ತಾರ್ಕಿಕತೆಯನ್ನರಸುವುದು ವ್ಯರ್ಥ ಪ್ರಯಾಸವಾಗುತ್ತದೆ.
ವಿಕೃತ ಮನೋಧರ್ಮ
ಅಯೋಧ್ಯೆಯ ಮೂಲ ರಾಮಮಂದಿರದ ಅಸ್ತಿತ್ವವನ್ನು ಸಾಬೀತುಗೊಳಿಸುವ ರಾಶಿರಾಶಿ ಪುರಾವೆಗಳನ್ನು ನಿರ್ಲಕ್ಷಿಸಿ ಪತ್ರಿಕೆಗಳು ವಿಕೃತ ವರದಿಗಳನ್ನೇ ನೀಡುತ್ತ ಬಂದವು. ನಾಲ್ಕೂವರೆ ಅಡಿ ಅಗಲ, ಎರಡು ಅಡಿ ಎತ್ತರದ ೧೧-೧೨ನೆ ಶತಮಾನದ ಶಿಲಾಶಾಸನವೂ ಸೇರಿದಂತೆ ೨೮೩ ಅವಶೇಷಗಳು ರಾಮಜನ್ಮಸ್ಥಾನದಲ್ಲಿ ದೊರೆತಿದ್ದವು. ೧೯೯೨ರ ಜನವರಿ ಮೊದಲ ವಾರದಲ್ಲಿ ಸರ್ಕಾರವೇ ಮಂದಿರದ ಬಂದೋಬಸ್ತು ಮಾಡುತ್ತಿದ್ದಾಗಲೇ ದೊರೆತ ಪುರಾವೆಗಳ ಬಗ್ಗೆ ಸರ್ಕಾರವೂ ಪತ್ರಿಕೆಗಳೂ ಮೌನವಾದವು. ಅದು ಹಾಗಿರಲಿ, ಜಮ್ಮು-ಕಾಶ್ಮೀರದಲ್ಲಿ ಉಧ್ವಸ್ತಗೊಂಡ ಹಿಂದು ದೇವಾಲಯಗಳ ಬಗ್ಗೆಯಾಗಲಿ ತಮ್ಮ ತಾಯ್ನೆಲದಲ್ಲೆ ಮನೆಮಾಡು ಕಳೆದುಕೊಂಡು ನಿರಾಶ್ರಿತರಾಗಿರುವ ಎರಡು ಲಕ್ಷಕ್ಕೂ ಮಿಗಿಲಾದ ಕಾಶ್ಮೀರಿಗಳ ಬಗ್ಗೆಯಾಗಲಿ ಪೂರ್ವಗ್ರಹಗ್ರಸ್ತ ಪತ್ರಿಕೆಗಳಾಗಲಿ ‘ಜಾತ್ಯತೀತ’ ಧುರೀಣರಾಗಲಿ ತಾತ್ಪೂರ್ತಿಕವಾಗಿ ಕಾಂಗ್ರೆಸ್ ಸರ್ಕಾರದ ಬೆಂಬಲಿಗರಾಗಿರುವ ವಾಮಪಂಥೀಯರಾಗಲಿ ಚಕಾರವೆತ್ತದಿರುವುದನ್ನು ಪ್ರಾಮಾಣಿಕತೆಯೆನ್ನಲಾದೀತೆ? ನೂರಕ್ಕೆ ಹನ್ನೊಂದರಷ್ಟು ಇರುವ ಅಲ್ಪಸಂಖ್ಯಾತ ವರ್ಗಗಳಿಗೆ ಅಧಿಕಾರಾರೂಢ ಪಕ್ಷವೂ ಅದರ ಬೆಂಬಲಿಗ ವರ್ಗಗಳೂ ಮಹತ್ತ್ವ ಕೊಡುವುದಾದರೆ ಉಳಿದ ಶೇ. ಎಂಬತ್ತೊಂಬತ್ತರಷ್ಟು ಮಂದಿ ನಿರಂತರ ಅಪಮಾನವನ್ನು ಸಹಿಸುತ್ತಿರಬೇಕೆಂದು ನಿರೀಕ್ಷಿಸಬಹುದೆ? ಇಡೀ ರಾಜ್ಯಾಂಗ ವ್ಯವಸ್ಥೆಯನ್ನೆಲ್ಲ ಅಲ್ಪಸಂಖ್ಯಾತ ವರ್ಗಗಳಿಗೆ ಅಭಿಮುಖವಾಗಿಸಿ ವಿರೂಪಗೊಳಿಸಿರುವ ನಿದರ್ಶನ ದೊರೆಯುವುದು ಬಹುಶಃ ಭಾರತದಲ್ಲಿ ಮಾತ್ರ.
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಭಾರತೀಯರನ್ನು ಅನಾಗರಿಕರೆಂದು ಚಿತ್ರಿಸುತ್ತಿದ್ದಂತೆಯೇ ಇಂದಿನ ಸೆಕ್ಯುಲಾರಿಸ್ಟರ ಮತ್ತು ವಾಮಪಂಥೀಯರ ಕಣ್ಣಿನಲ್ಲಿ ಅವರ ದೇಶಬಾಂಧವರು ಧರ್ಮಾಂಧರಾಗಿಬಿಟ್ಟಿದ್ದಾರೆ.
ಯಾವುದನ್ನು ವಾಮಪಂಥೀಯರೂ ‘ಬುದ್ಧಿಜೀವಿ’ಗಳೂ ಸಂಕುಚಿತತೆಯೆಂದೂ ಧರ್ಮಾಂಧತೆಯೆಂದೂ ಕರೆಯುತ್ತಾರೋ ಅದರ ಬಗ್ಗೆ ನಿರ್ಮಲಹೃದಯರಾದ ಜನಸಾಮಾನ್ಯರಿಗೆ ಹೆಮ್ಮೆಯೇ ಇದೆ.
ದೀರ್ಘಕಾಲ ಪೋಷಿಸಿಕೊಂಡು ಬಂದಿದ್ದ ಹಲವಾರು ಸುಳ್ಳುಗಳು ಅಯೋಧ್ಯಾ ಆಂದೋಲನದ ನಂತರ ಒಮ್ಮೆಗೇ ಬಯಲಾದಂತಾಗಿರುವುದು ಅವುಗಳ ಪೋಷಕರಿಗೆ ದಿಗ್ಭçಮೆಯನ್ನುಂಟುಮಾಡಿತು.
‘ರಾಷ್ಟ್ರ’ ಬೇರೆ, ‘ರಾಜ್ಯ’ ಬೇರೆ – ಎಂಬ ಪ್ರಾಥಮಿಕ ಸಂಗತಿಯನ್ನು ಎಲ್ಲರೂ ರಾಮಜನ್ಮಭೂಮಿ ಸಾಕಾರಗೊಂಡ ಮೇಲೆ ಸ್ವಲ್ಪಮಟ್ಟಿಗೆ ಮನಗಾಣುವಂತಾಗಿದೆ. ಸೆಕ್ಯುಲಾರಿಸಂ ಮೊದಲಾದ ಕಲ್ಪನೆಗಳೆಲ್ಲ ರಾಜ್ಯವ್ಯವಸ್ಥೆಯ ಕಕ್ಷೆಗೆ ಸೇರಿರುವವು, ರಾಷ್ಟ್ರೀಯತೆ ಇವೆಲ್ಲಕ್ಕಿಂತ ಮೀರಿದ್ದು – ಎಂಬ ಮೂಲತಥ್ಯದತ್ತ ಈಗ ದೇಶದ ಬಹುಮಂದಿಯ ಗಮನ ಹರಿಯುವಂತೆ ಆಗಿದೆ. ತಥೋಕ್ತ ‘ಬುದ್ಧಿಜೀವಿಗಳು’ ವರ್ಷಗಳುದ್ದಕ್ಕೂ ಆಚರಿಸಿಕೊಂಡು ಬಂದಿರುವ ವಿಧಾನಗಳನ್ನು ‘ಸೆಕ್ಯುಲಾರಿಸಂ’ ಎಂದು ನಿರ್ದೇಶಿಸುವುದಾದರೆ ಇವರ ‘ಸೆಕ್ಯುಲಾರಿಸಂ’ ಮಟ್ಟಕ್ಕೆ ಇಂಗ್ಲೆಂಡ್ ಅಮೆರಿಕ ಮುಂತಾದ ರಾಷ್ಟ್ರಗಳೂ ಏರಲಾರವು! ಇನ್ನು ಇಸ್ಲಾಮೀ ರಾಷ್ಟ್ರಗಳ ‘ಸೆಕ್ಯುಲರ್’ ಆಚರಣೆಯಂತೂ ಜಗಜ್ಜಾಹೀರಾದ ಸಂಗತಿ.
* * *
ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯರ ಸಹಜ ಮಾನಸಿಕತೆಗೆ ತಾಳಿಕೆಯಾಗುವಂಥ ಪರ್ಯಾಯಗಳನ್ನು ಈಗ ಅರಸುವುದು ಅನಿವಾರ್ಯವಾಗಿದೆ. ಇಂಥ ವ್ಯಾಪಕ ಪರಿವರ್ತನೆಯ ಮುನ್ಸೂಚನೆ – ಅಯೋಧ್ಯೆಯ ಘಟನಾವಳಿ. ‘ಇಂಡಿಯ’ ಸತ್ತು ‘ಭಾರತ’ ಪುನರವತರಿಸುತ್ತಿರುವುದರ ಮುಂಬೆಳಕೆನ್ನಬಹುದು ರಾಮಮಂದಿರ ನಿರ್ಮಾಣವನ್ನು.
ಸುದೀರ್ಘ ವೈಚಾರಿಕ-ರಾಜಕೀಯ-ನ್ಯಾಯಾಂಗಾಧೀನ ಸಂಘರ್ಷದ ಫಲರೂಪವಾಗಿ ಅಯೋಧ್ಯೆಯಲ್ಲಿ ಹಿಂದು ಸಮಾಜದ ಬಹುಕಾಲದ ಕನಸಾದ ರಾಮಮಂದಿರ ನಿರ್ಮಾಣವು ಸಾಕಾರಗೊಂಡದ್ದನ್ನು ಕಣ್ಣಿನಿಂದ ನೋಡಲು ಸಾಧ್ಯವಾಗಿರುವುದು ೨೦೨೩-೨೪ರ ಪೀಳಿಗೆಯವರ ಪಾಲಿಗೆ ಅಮೃತಪರ್ವವಾಗಿದೆಯೆಂಬುದು ನಿಸ್ಸಂದೇಹ.