ಡಾ. ಬಿ.ಕೆ.ಎಸ್. ವರ್ಮಾ
ಡಾ. ಬಿ.ಕೆ.ಎಸ್. ವರ್ಮಾ ಸಮಕಾಲೀನ ಚಿತ್ರಕಲಾವಿದರಲ್ಲಿ ಪ್ರಸಿದ್ಧರು. ಅವರು ಚಿತ್ರಿಸಿರುವ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ, ಆದಿಶಂಕರಾಚಾರ್ಯ ಹಾಗೂ ಭಾರತ ಮಾತೆಯ ಚಿತ್ರಗಳು ಇಂದು ಮನೆಮನೆಯ ಗೋಡೆಗಳಲ್ಲಿ ರಾರಾಜಿಸುತ್ತಿವೆ ಎಂಬುದು ಅವರ ಜನಪ್ರಿಯತೆಗೆ ಸಾಕ್ಷಿ.
ಪರಿಸರ ಮತ್ತು ಸಾಮಾಜಿಕ ಕಾಳಜಿಯುಳ್ಳ ವಸ್ತುಗಳನ್ನು ಆಯ್ದುಕೊಂಡು ಅವುಗಳನ್ನು ಸರಿಅಲಿಸ್ಟಿಕ್ (ಅತಿವಾಸ್ತವಿಕತೆ) ಆಗಿ ಚಿತ್ರಿಸುವುದು ವರ್ಮಾ ಅವರ ಕಲಾಶೈಲಿ. ಮಾತ್ರವಲ್ಲ, ಭಾರತೀಯ ದೇವಿ-ದೇವತೆಯರನ್ನು ವಿಶಿಷ್ಟವಾದ ಕಲಾಭಾಷೆ ಯಲ್ಲಿ ಚಿತ್ರಿಸುವುದರಿಂದಾಗಿಯು ಸುಪ್ರಸಿದ್ಧ ಕಲಾವಿದರ ಸಾಲಿನಲ್ಲಿ ಅವರು ತಮ್ಮ ಅಸ್ತಿತ್ವವನ್ನು ಪ್ರತ್ಯೇಕವಾಗಿ ಉಳಿಸಿ ಕೊಂಡಿದ್ದಾರೆ. ಇವರಿಗೆ ಗುರುಗಳಾಗಿ ಮಾರ್ಗದರ್ಶನ ಮಾಡಿ ದವರು ಬೆಂಗಳೂರಿನ ಕಲಾಮಂದಿರದ ಎ.ಎನ್. ಸುಬ್ಬರಾವ್ ಹಾಗೂ ದೇವನಹಳ್ಳಿಯ ಎ.ಸಿ.ಎನ್. ಆಚಾರ್ಯರು.
ವರ್ಮಾ ಅವರು ಕೆಲವು ಪ್ರಸಿದ್ಧ ಪತ್ರಿಕೆಗಳಿಗೆ (‘ಉತ್ಥಾನ’ದ ಆರಂಭಿಕ ಸಂಚಿಕೆಗಳೂ ಸೇರಿ) ಚಿತ್ರಕಲಾವಿದರಾಗಿ ಚಿತ್ರಗಳನ್ನು ರಚಿಸಿಕೊಟ್ಟಿರುವರು. ರಾಜ್ಯೋತ್ಸವ ಪ್ರಶಸ್ತಿ, ಲಲಿತಕಲಾ ಅಕಾಡಮಿ ಪ್ರಶಸ್ತಿ ಇತ್ಯಾದಿ ಹಲವು ಸಮ್ಮಾನಗಳಿಗೆ ಪಾತ್ರರಾದ ವರ್ಮಾ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ೨೦೧೧ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
‘ಮೇಘ ರಂಜಿನಿ’
“ಸಂಪೂರ್ಣ ಅರ್ಪಣೆ ಮಾತ್ರವೇ ಅಸಾಧ್ಯವಾದದ್ದನ್ನು ಸಾಧಿಸಲು ಇರುವ ಏಕೈಕ ಮಾರ್ಗ ಮತ್ತು ಎಲ್ಲವೂ ಆರಂಭವಾಗುವುದು ಅಂತಹ ಪವಿತ್ರ ಪ್ರೇಮದಿಂದಲೇ” – ಡಾ. ಬಿ.ಕೆ.ಎಸ್. ವರ್ಮಾ.
‘ಉತ್ಥಾನ’ದ ಹೊಸ ಅಂಕಣ – ‘ಕ್ಯಾನ್ವಸ್ಗಾಗಿ ಡಾ. ವರ್ಮಾ ಪ್ರೀತಿಯಿಂದ ಆಯ್ದು ನೀಡಿರುವ ಚಿತ್ರ : ‘ಮೇಘ ರಂಜಿನಿ’. ಇದು ಕಾಗದದ ಮೇಲೆ ವಾಟರ್‌ಕಲರ್ ಮೂಲಕ ಅವರು ರಚಿಸಿದ ಚಿತ್ರ. ಸುಂದರ ಯುವಜೋಡಿಯೊಂದು ಕಾಮನಬಿಲ್ಲನ್ನೇರಿ, ತಮ್ಮದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುವ ಸುಂದರ ಚಿತ್ರಣ ಇಲ್ಲಿದೆ.
‘ಕ್ಯಾನ್ವಸ್ ಅಂಕಣಕ್ಕೆ ಸ್ವರಚಿತ ಚಿತ್ರಗಳನ್ನು ಕಳಿಸುವ ಕಲಾವಿದರು ತಮ್ಮ ರಚನೆಯ High Resolution, Jpeg Format ಛಾಯಾಪ್ರತಿಯನ್ನು ವಿವರಗಳೊಡನೆ, ಭಾವಚಿತ್ರ, ಕಿರುಪರಿಚಯ ಹಾಗೂ ವಿಳಾಸಗಳೊಡನೆ – [email protected] – ಈ ವಿಳಾಸಕ್ಕೆ ಈಮೇಲ್ ಮೂಲಕ ಕಳುಹಿಸಬಹುದು.