ಭಾರತೀಯ ಜನಸಂಘ ಹಾಗೂ ಅದರ ಉತ್ತರಾಧಿಕಾರಿ ಎನಿಸಿ ಹುಟ್ಟಿಕೊಂಡ ಪಕ್ಷ ಭಾರತೀಯ ಜನತಾ ಪಕ್ಷ – ಈ ಎರಡೂ ಪಕ್ಷಗಳು ತಾವು ಇತರ ಪಕ್ಷಗಳಿಗಿಂತ ಭಿನ್ನ ಮತ್ತು ಕಾರ್ಯಕರ್ತ-ಆಧಾರಿತ ಪಕ್ಷಗಳೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಆಂತರಿಕ ಶಿಸ್ತು ಇದ್ದ (ಇರುವ) ಪಕ್ಷಗಳು ಎಂಬ ಹೆಸರೂ ಇದೆ. ಮುಖ್ಯವಾಗಿ ಜನಸಂಘಕ್ಕೆ ಆ ಮೂಲಕ ಬಿಜೆಪಿಗೆ ಹರಿದುಬಂದ ಈ ಗುಣಗಳನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಕೇಳಿದರೆ ಬಹುತೇಕ ವಿವಾದಾತೀತವಾಗಿ ಬರುವ ಉತ್ತರವೆಂದರೆ – ‘ಪಂಡಿತ್ ದೀನದಯಾಳ್ ಉಪಾಧ್ಯಾಯ’ ಎಂದು.
‘ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಅದರಿಂದ ಪ್ರೇರಣೆ ಪಡೆದು ಹುಟ್ಟಿದ ಭಾರತೀಯ ಜನಸಂಘ ಮತ್ತು ಅದರ ಉತ್ತರಾಧಿಕಾರಿ ಭಾರತೀಯ ಜನತಾ ಪಾರ್ಟಿಗಳಿಂದಾಗಿ ರಾಜಕೀಯಕ್ಕೆ ಕೋಮುವಾದ ಪ್ರವೇಶಿಸಿತು; ಸಾರ್ವಜನಿಕ ಜೀವನದಲ್ಲಿ ಇವರು ಜನರನ್ನು ಮತಗಳ ಆಧಾರದಲ್ಲಿ ಒಡೆದರು; ಭೇದಭಾವ ಮತ್ತು ದ್ವೇಷಗಳನ್ನು ತಂದರು’ ಎಂದು ಟೀಕಿಸುವುದು, ಎಲ್ಲ ಅನಿಷ್ಟಗಳಿಗೂ ಅವರೇ ಮೂಲವೆಂದು ದೋಷಾರೋಪ ಮಾಡುವುದು ದೇಶದಲ್ಲೀಗ ಒಂದು ವರ್ಗಕ್ಕೆ ಅಭ್ಯಾಸವಾಗಿಹೋಗಿದೆ. ಇದರ ನಿರಂತರ ಪಠಣದಿಂದಾಗಿ ಅದನ್ನು ನಂಬುವ ಕೆಲವು ಜನ ಕೂಡ ಸೃಷ್ಟಿಯಾಗಿರಬಹುದೇನೋ.
ಆದರೆ ಇವರೆಲ್ಲ ಮರೆಯುವ ಒಂದು ಪ್ರಾಥಮಿಕ ಅಂಶವಿದೆ. ಯಾವುದೇ ಅಪರಾಧವಿದ್ದರೂ ಅದಕ್ಕೆ ಶಿಕ್ಷೆಯನ್ನು ನಿಗದಿಪಡಿಸುವುದಕ್ಕೆ ಮುನ್ನ ಇದು ಎಲ್ಲಿಂದ ಆರಂಭವಾಯಿತೆಂಬುದನ್ನು ಪತ್ತೆ ಮಾಡಲೇಬೇಕೆಂದು ಅಪರಾಧವಿಜ್ಞಾನ ಹೇಳುತ್ತದೆ. ದೇಶದಲ್ಲೀಗ ಕೋಮುವಾದ ಇದೆ ಎಂದಾದರೆ ಅದರ ವಿಷಯದಲ್ಲಿ ಅಪರಾಧವಿಜ್ಞಾನದ ಈ ಮೂಲಭೂತ ಅಂಶವನ್ನೇಕೆ ಮರೆಯಲಾಗುತ್ತಿದೆ? ಹೆಸರಿನ ಮುಂದೆ ೩-೪ ಪದವಿಗಳನ್ನು ಹಾಕಿಕೊಳ್ಳುವ ಮಹಾನ್ ವಿದ್ಯಾವಂತರಿಗೆ, ಅಪಾರ ಅನುಭವವುಳ್ಳ ರಾಜಕೀಯ ಮುತ್ಸದ್ದಿಗಳಿಗೆ, ಖ್ಯಾತಿವೆತ್ತ ಬುದ್ಧಿಜೀವಿಗಳಿಗೆ ಈ ಪುಟ್ಟ ಅಂಶ ಏಕೆ ಅರ್ಥವಾಗುವುದಿಲ್ಲ?
ಬಹುಸಂಖ್ಯಾತರ ಸಂಘಟನೆ
ಬಹುಸಂಖ್ಯಾತರಿಗೆ ಮತೀಯ ಸಂಘಟನೆ ಏಕೆ? ಅದು ಅನಗತ್ಯವಾದದ್ದು ಮತ್ತು ತಪ್ಪು ಕೆಲಸ ಎಂದು ಆಕ್ಷೇಪಿಸುವವರಿಗೆ ಕೂಡ ನಮ್ಮಲ್ಲಿ ಕೊರತೆ ಇಲ್ಲ. ಹಾಗೆ ಹೇಳುವವರು ಮಹಾನ್ ಚಿಂತಕರಾಗಿದ್ದಾಗಲೂ ಬಹುಸಂಖ್ಯಾತರಿಗೆ ಮತೀಯ ಸಂಘಟನೆ ಅವಶ್ಯವೆಂದು ಏಕೆ ಕಂಡುಬರುತ್ತಿದೆ? ಅವರಲ್ಲೇನಾದರೂ ಅಭದ್ರತೆಯ ಭಾವನೆ ಉಂಟಾಗಿದೆಯೆ? ಉಂಟಾಗಿದ್ದರೆ ಅದಕ್ಕೆ ಕಾರಣ ಏನು ಮತ್ತು ಯಾರು ಎಂದು ವಿವೇಚಿಸುವ ಸ್ವಲ್ಪವಾದರೂ ವ್ಯವಧಾನ ಬೇಡವೆ? ಸತ್ಯದ ಇನ್ನೊಂದು ಮುಖವನ್ನು ನೋಡುವಷ್ಟು ತಾಳ್ಮೆ, ಸಹಾನುಭೂತಿ ಇಲ್ಲವೆಂದರೆ ಇವರೆಂತಹ ಚಿಂತಕರು? ಎಂತಹ ಮುತ್ಸದ್ದಿಗಳು?
ಇರಲಿ; ಭಾರತದ ರಾಜಕಾರಣದಲ್ಲಿ ಧ್ರುವೀಕರಣ ಅನಿವಾರ್ಯ ಎಂಬ ಸ್ಥಿತಿಗೆ ನಾವು ತಲಪಿದ್ದೇವೆ. ಯಾವ ಕೆಟ್ಟ ಘಳಿಗೆಯಲ್ಲಿ ಮುಸಲ್ಮಾನರು ತಮಗೆ ಪ್ರತ್ಯೇಕ ದೇಶ ಬೇಕೆನ್ನುವ ದ್ವಿರಾಷ್ಟ್ರಸಿದ್ಧಾಂತವನ್ನು ಬ್ರಿಟಿಷರ ಮುಂದಿಟ್ಟು ಅಖಂಡ ಭಾರತವನ್ನು ಒಡೆದು ಪ್ರತ್ಯೇಕತೆಯ ಬೀಜವನ್ನು ಬಿತ್ತಿದರೋ! ಸ್ವಾತಂತ್ರ್ಯ ಹೋರಾಟದ ಹೊತ್ತಿಗೆ ಮತ್ತು ಅನಂತರ ಗಾಂಧಿ ಮತ್ತು ನೆಹರು ಅವರಂತಹ ಸ್ವಮತೀಯರಿಗೆ ದ್ರೋಹ ಬಗೆಯುವಂತಹ, ಹಿಂದುಗಳು ಲಕ್ಷ ಸಂಖ್ಯೆಯಲ್ಲಿ ಸಾಯುತ್ತಿದ್ದಾಗಲೂ ‘ಇನ್ನಷ್ಟು ತ್ಯಾಗ ಮಾಡಿ’ ಎಂದು ಬೋಧಿಸುವಂತಹ ನಾಯಕರು ನಮಗೆ ದೊರೆತರೋ, ಅದೇ ಒಂದು ಪರಂಪರೆಯಾಗಿ ವೋಟಿಗಾಗಿ ದೇಶವನ್ನೇ ಹರಾಜುಹಾಕಲೂ ಸಿದ್ಧ ಎಂಬಂತಹ ರಾಜಕೀಯ ವ್ಯವಸ್ಥೆ ಸೃಷ್ಟಿಯಾಯಿತೋ, ಅಲ್ಪಸಂಖ್ಯಾತರೇ (ಮುಸ್ಲಿಮರೆಂದು ಓದಿಕೊಳ್ಳಬಹುದು) ಈ ದೇಶದ ಸಂಪತ್ತು-ಸಂಪನ್ಮೂಲಗಳ ಮೊದಲ ಅಧಿಕಾರಿಗಳೆಂದು ಘೋಷಿಸುವವರು ಪ್ರಧಾನಿ ಹುದ್ದೆಗೂ ಬಂದು ಕುಳಿತರೋ, ಸಾಚಾರ್ ಸಮಿತಿಯೋ ಇನ್ನೇನೋ ಹೇಳಿ ಬಹುಸಂಖ್ಯಾತರನ್ನು ಇಲ್ಲಿ ದ್ವಿತೀಯದರ್ಜೆ ಪ್ರಜೆಗಳಾಗಿಸುವ ಪ್ರಕ್ರಿಯೆಗಳು ಆರಂಭವಾದವೋ, ಮತ್ತೆ ಇಲ್ಲಿ ಬಹುಸಂಖ್ಯಾತರಿಗೆ ಅರಬ್ಬಿ ಸಮುದ್ರಕ್ಕೋ ಬಂಗಾಳಕೊಲ್ಲಿಗೋ ಬೀಳುವುದು ಬಿಟ್ಟರೆ ಏನು ಉಳಿದಿದೆ? ಇಷ್ಟು ಮಾಡಿದ ಬಳಿಕವೂ ನೀವು ಬಹುಸಂಖ್ಯಾತರು ಸಂಘಟಿತರಾಗುವುದನ್ನು ತಪ್ಪು ಎನ್ನುವುದಾದರೆ ಅದಕ್ಕೆ ಬಹುಸಂಖ್ಯಾತರಲ್ಲಿ ಜೀವನೋತ್ಸಾಹವಿನ್ನೂ ಪೂರ್ತಿ ಬತ್ತಿಹೋಗಿಲ್ಲ ಎನ್ನುವ ಸಮರ್ಥನೆಯನ್ನಷ್ಟೇ ನೀಡಬೇಕಾಗುತ್ತದೆ. ಬಹುಸಂಖ್ಯಾತರ ವಿರುದ್ಧ ತಾರತಮ್ಯ ಹೆಚ್ಚಿದಷ್ಟೂ ಅವರ ಪರವಾಗಿ ನಿಲ್ಲುವ ಸಂಘಟನೆಗಳು, ಪಕ್ಷಗಳು ಸುಪುಷ್ಟವಾಗಿ ಬೆಳೆಯುತ್ತವೆ, ಅಷ್ಟೆ.
ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ದೇಶದ ಎಲ್ಲ ಒಲವುಗಳ ನಾಯಕರೂ ಒಂದಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ನೇತೃತ್ವದಲ್ಲಿ ಹುಳುಕುಗಳು ಕಂಡಂತೆ ಅಥವಾ ಹೋರಾಟವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಅನ್ನಿಸಿದಂತೆ ಹಲವರು ಹೊರಗೆ ಬಂದರು. ಅವರಲ್ಲಿ ಆರೆಸ್ಸೆಸ್ ಸಂಸ್ಥಾಪಕ ಡಾ|| ಕೇಶವ ಬಲಿರಾಂ ಹೆಡಗೆವಾರ್ ಅವರೂ ಒಬ್ಬರು. ದೇಶದ ಹಿತ ಕಾಪಾಡಲು ಸಂಘಟಿತ ಯುವಜನರ ಗುಂಪು ಬೇಕು; ವ್ಯಕ್ತಿತ್ವ ನಿರ್ಮಾಣದ ಮೂಲಕ ಸಮಾಜ ಮತ್ತು ರಾಷ್ಟ್ರದ ಹಿತ ಸಾಧಿಸಬೇಕು ಎನ್ನುವ ಅವರ ಕಾಳಜಿಯ ಹಿಂದೆ ‘ನ ಹಿಂದುಃ ಪತಿತೋ ಭವೇತ್’ (ಹಿಂದು ಪತಿತನಾಗಬಾರದು) ಎಂಬ ಆಶಯವೂ ಇತ್ತು. ಆಗಲೇ ಹಿಂದೂಮಹಾಸಭೆ, ರಾಮರಾಜ್ಯ ಪರಿಷತ್ನಂತಹ ಹಿಂದೂಪರ ಸಂಘಟನೆಗಳೂ ಇದ್ದವು. ಆದರೆ ಸಂಘಟನೆಯ ಒಳಗಿನ ಕೆಲವು ದೋಷಗಳಿಂದಾಗಿ ಅವು ಹೆಚ್ಚು ಮುಂದುವರಿಯಲಿಲ್ಲ. ಹೆಡಗೆವಾರ್ ತಮ್ಮ ಸಂಘಟನೆಗೆ ಹಾಕಿಕೊಟ್ಟ ಅಸ್ತಿಭಾರ ಮತ್ತು ಅವರ ನಂತರ ಎಂ.ಎಸ್. ಗೋಳವಲ್ಕರ್ (ಶ್ರೀಗುರೂಜಿ) ಅವರಂತಹ ಋಷಿಸದೃಶ ವ್ಯಕ್ತಿಗಳು ಸಂಸ್ಥೆಯನ್ನು ಬೆಳೆಸಿದ ಕಾರಣ ಆರೆಸ್ಸೆಸ್ ದೇಶವ್ಯಾಪಿಯಾಗಿ ಬೆಳೆಯಿತು.
ಜನಸಂಘದ ಉದಯ
ಭಾರತೀಯ ಜನಸಂಘದ ಕಾರ್ಯಕರ್ತರ ಜತೆಯಲ್ಲಿ ಪಂಡಿತ್ಜೀ
ಸ್ವಾತಂತ್ರ್ಯಪೂರ್ವದಲ್ಲೇ ಕಾಣಿಸಿಕೊಂಡ ಕಾಂಗ್ರೆಸ್ನ ದೋಷಗಳು ಸ್ವಾತಂತ್ರ್ಯೋತ್ತರದಲ್ಲಿ ಬೆಳೆಯುತ್ತಾ ಹೋದವು. ಕಾಂಗ್ರೆಸ್ ತೊರೆದು ಹೊರಬರುವ ನಾಯಕರ ಸಂಖ್ಯೆ ಹೆಚ್ಚಾಯಿತು. ಸರ್ದಾರ್ ಪಟೇಲರಂತಹ ನಿಷ್ಟಕ್ಷಪಾತಿ ದಿಟ್ಟನಾಯಕರು ಇಲ್ಲವಾಗಿ ಕಾಂಗ್ರೆಸ್ ಬಹುತೇಕ ಒಬ್ಬ ವ್ಯಕ್ತಿಯ ಅಡಿಯಾಳಾದ ಮೇಲಂತೂ ಆ ಪಕ್ಷದ ಬಗೆಗೆ ನಿರೀಕ್ಷೆ ಇಟ್ಟುಕೊಳ್ಳುವುದೂ ಕಷ್ಟವಾಗತೊಡಗಿತು. ದೇಶದಲ್ಲಿ ಅನೇಕ ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. ಅವುಗಳಲ್ಲಿ ಭಾರತೀಯ ಜನಸಂಘವೂ ಒಂದು; ಮುಂದೆ ಅದರ ಉತ್ತರಾಧಿಕಾರಿ ಎನಿಸಿ ಹುಟ್ಟಿಕೊಂಡ ಪಕ್ಷ ಭಾರತೀಯ ಜನತಾ ಪಕ್ಷ. ಈ ಎರಡೂ ಪಕ್ಷಗಳು ತಾವು ಇತರ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಳ್ಳುತ್ತಾ ಬಂದವು. ಆ ಮಾತಿನಲ್ಲಿ ಬಹಳಷ್ಟು ಸತ್ಯ ಇದ್ದುದು ಕೂಡ ನಿಜ. ಇವು ಕಾರ್ಯಕರ್ತ-ಆಧಾರಿತ ಪಕ್ಷಗಳೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಆಂತರಿಕ ಶಿಸ್ತು ಇದ್ದ (ಇರುವ) ಪಕ್ಷಗಳು ಎಂಬ ಹೆಸರೂ ಇದೆ. ಮುಖ್ಯವಾಗಿ ಜನಸಂಘಕ್ಕೆ ಆ ಮೂಲಕ ಬಿಜೆಪಿಗೆ ಹರಿದುಬಂದ ಈ ಗುಣಗಳನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಕೇಳಿದರೆ ಬಹುತೇಕ ವಿವಾದಾತೀತವಾಗಿ ಬರುವ ಉತ್ತರವೆಂದರೆ ಪಂಡಿತ್ ದೀನದಯಾಳ್ ಉಪಾಧ್ಯಾಯರು ಎಂಬುದು. ತಮ್ಮ ಸಾರ್ವಜನಿಕ ಜೀವನದ ದೊಡ್ಡಪಾಲು ಎಂದರೆ ಸುದೀರ್ಘ ೧೬ ವರ್ಷಗಳ ಕಾಲ ನಿರಂತರವಾಗಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಉಪಾಧ್ಯಾಯರು ಅದರ ಮೇಲೆ, ಅಂದು ಅಲ್ಲಿ ಬೆಳೆದ ನಾಯಕರ ಮೇಲೆ, ಮಾತ್ರವಲ್ಲ, ಪಕ್ಷದ ಕಾರ್ಯಕರ್ತರ ಮೇಲೆ ಕೂಡ ಅಚ್ಚಳಿಯದ ಪ್ರಭಾವ ಬೀರಿದರು; ಸುಲಭದ ಅಡ್ಡದಾರಿಗಳನ್ನು ಬಳಸದೆ ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು ಕಟ್ಟಿ ಬೆಳೆಸಿದರು. ಅವೇ ಗುಣಗಳು ಭಾರತೀಯ ಜನತಾ ಪಾರ್ಟಿಯಲ್ಲೂ ಹರಿದುಬಂದವು ಎನ್ನಬಹುದು.
ಶ್ರೀಗುರೂಜಿ ಅವರು ಸರಸಂಘಚಾಲಕರಾಗಿದ್ದ ಆ ಕಾಲಘಟ್ಟದಲ್ಲಿ ಪ್ರಚಾರಕ್ ಆಗಿದ್ದ ದೀನದಯಾಳ್ ಉಪಾಧ್ಯಾಯರು ಜನಸಂಘಕ್ಕೆ ಸೇರಿಕೊಂಡ ಸಂದರ್ಭವೂ ಕುತೂಹಲಕಾರಿ. ರಾಷ್ಟ್ರ ಕಂಡ ಓರ್ವ ಮಹಾನ್ ದೇಶಪ್ರೇಮಿ ನಾಯಕ ಡಾ|| ಶ್ಯಾಮಪ್ರಸಾದ್ ಮುಖರ್ಜಿ ಅವರು, ೧೯೫೦ರಲ್ಲಿ ಮಾಡಿಕೊಳ್ಳಲಾದ ನೆಹರು – ಲಿಯಾಖತ್ ಒಪ್ಪಂದವನ್ನು ವಿರೋಧಿಸಿ, ಕೇಂದ್ರಸರ್ಕಾರದ ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾಶ್ಮೀರಕ್ಕೆ ಸಂಬಂಧಿಸಿದ ನೆಹರೂ ನೀತಿ ಅಪಾಯಕಾರಿ ಎಂಬುದು ಅವರ ವಿಶ್ಲೇಷಣಿಯಾಗಿತ್ತು. ವಿರೋಧಪಕ್ಷಗಳ ಜೊತೆ ಸೇರಿಕೊಂಡು ಪ್ರಜಾಸತ್ತಾತ್ಮಕ ಶಕ್ತಿಗಳ ಒಂದು ಸಮಾನ ವೇದಿಕೆ ರಚಿಸಲು ಮುಂದಾದ ಡಾ|| ಮುಖರ್ಜಿ ಸರಸಂಘಚಾಲಕ ಶ್ರೀಗುರೂಜಿ ಅವರನ್ನು ಭೇಟಿಮಾಡಿ, ಅವರ ಸಹಕಾರವನ್ನು ಕೋರಿದರು. ಅರ್ಪಣಾ ಮನೋಭಾವದ ಕೆಲವು ಕಾರ್ಯಕರ್ತರನ್ನು ಒದಗಿಸುವಂತೆ ಕೇಳಿದರು. ಅಕ್ಟೋಬರ್ ೨೧, ೧೯೫೧ರಂದು ಭಾರತೀಯ ಜನಸಂಘ ಸ್ಥಾಪನೆಗೊಂಡಿತ್ತು. ಅದಕ್ಕೆ ಶ್ರೀಗುರೂಜಿ ಒದಗಿಸಿದ ಮಹತ್ತ್ವದ ವ್ಯಕ್ತಿಯೇ ದೀನದಯಾಳ್ ಉಪಾಧ್ಯಾಯರು. ಆಗ ಅವರು ಉತ್ತರಪ್ರದೇಶ (ಸಂಯುಕ್ತ ಪ್ರಾಂತ)ದ ಪ್ರಚಾರಕ್ ಆಗಿದ್ದರು. ಅವರನ್ನು ಪಕ್ಷದ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದರು. ೧೯೫೨ರ ಡಿಸೆಂಬರ್ ಕೊನೆಯಲ್ಲಿ (ಮೂರುದಿನ) ಪಕ್ಷದ ಪ್ರಥಮ ಅಧಿವೇಶನ ಕಾನ್ಪುರದಲ್ಲಿ ನಡೆಯಿತು. ಅಧಿವೇಶನ ತುಂಬ ಯಶಸ್ವಿಯಾಗಿದ್ದು, ದೀನದಯಾಳರ ಕಾರ್ಯದಕ್ಷತೆ, ಸಂಘಟನಾಕೌಶಲ ಮತ್ತು ವೈಚಾರಿಕ ಚಾತುರ್ಯಗಳು ಅಲ್ಲಿ ವ್ಯಕ್ತವಾದವು. ಅಧಿವೇಶನ ಅಂಗೀಕರಿಸಿದ ೧೫ ನಿರ್ಣಯಗಳಲ್ಲಿ ಏಳನ್ನು ಸ್ವತಃ ಅವರೇ ತಯಾರಿಸಿದ್ದರು. ಇದನ್ನು ಕಂಡ ಡಾ|| ಮುಖರ್ಜಿ, ನನಗೇನಾದರೂ ಇಬ್ಬರು ದೀನದಯಾಳರು ಸಿಗುತ್ತಿದ್ದರೆ ಭಾರತದ ರಾಜಕೀಯನಕ್ಷೆಯನ್ನೇ ಬದಲಾಯಿಸುತ್ತಿದ್ದೆ ಎಂದು ಉದ್ಗರಿಸಿದರು; ಈ ಮಾತು ತುಂಬ ಪ್ರಸಿದ್ಧವಿದೆ. ಮುಂದೆ ಉಪಾಧ್ಯಾಯರು ಅದಕ್ಕೆ ಅನುಗುಣವಾಗಿಯೇ ನಡೆದುಕೊಂಡರು ಎಂದರೆ ತಪ್ಪಲ್ಲ.
ದೀನದಯಾಳರ ಬಾಲ್ಯ, ವಿದ್ಯಾಭ್ಯಾಸ, ಅವರು ರೂಢಿಸಿಕೊಂಡ ಜೀವನಶೈಲಿ, ಸಂಘದ ಪ್ರಚಾರಕ್ ಆಗಿ ಅವರ ಸೇವೆ, ನಿರಂತರ ಶ್ರಮದಿಂದ ಜನಸಂಘವನ್ನು ಕಟ್ಟಿದ ರೀತಿ ಮತ್ತು ಹಠಾತ್ ಅಂತ್ಯ ಇವುಗಳನ್ನು ಗಮನಿಸಿದರೆ, ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಈ ಜಗತ್ತಿಗೆ ಬಂದು ಅದನ್ನು ಪೂರೈಸಿ ಹಾಗೆಯೇ ಹೊರಟುಹೋದ ಒಂದು ದಿವ್ಯಚೇತನವಾಗಿ ಅವರು ಕಾಣಿಸುತ್ತಾರೆ. ರಾಷ್ಟ್ರದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನಕ್ಕೆ ಅವರು ನೀಡಿದ ಕೊಡುಗೆಯಂತೂ ಇಂದಿಗೂ ಕಾಣವಂಥದ್ದು.
ಬಾಲ್ಯ, ವಿದ್ಯಾಭ್ಯಾಸ
ಉತ್ತರಪ್ರದೇಶದ ಮಥುರಾ ಜಿಲ್ಲೆಯ ನಗ್ಲಾ ಚಂದ್ರಭಾನ್ ಗ್ರಾಮದಲ್ಲಿ ಕೆಳಮಧ್ಯಮವರ್ಗದ ಒಂದು ಕುಟುಂಬದಲ್ಲಿ ಸೆಪ್ಟೆಂಬರ್ ೨೫, ೧೯೧೬ರಂದು ದೀನದಯಾಳರ ಜನನವಾಯಿತು. ತಂದೆ ಭಗವತೀಪ್ರಸಾದ್, ತಾಯಿ ರಾಮಪ್ಯಾರೀ. ಮುತ್ತಜ್ಜ ಹರಿರಾಮ ಉಪಾಧ್ಯಾಯರು ಪ್ರಸಿದ್ಧ ಜ್ಯೋತಿಷಿಯಾಗಿದ್ದರು. ತಂದೆ ಜಲೇಸರ್ನಲ್ಲಿ ಸಹಾಯಕ ಸ್ಟೇಷನ್ಮಾಸ್ಟರ್ ಆಗಿದ್ದರು; ತಾಯಿ ಧರ್ಮಶ್ರದ್ಧೆಯ ಮಹಿಳೆ. ದೀನಾರಿಗೆ ಒಡಹುಟ್ಟು ಒಬ್ಬ ತಮ್ಮ ಮಾತ್ರ. ಕೇವಲ ಎರಡೂವರೆ ವರ್ಷವಿದ್ದಾಗ ದೀನದಯಾಳ್ ತಂದೆಯನ್ನು ಕಳೆದುಕೊಂಡರು; ಮತ್ತೆ ತಾಯಿಯ ತವರುಮನೆಯನ್ನು ಆಶ್ರಯಿಸಿದ್ದಾಯಿತು. ಏಳು ವರ್ಷ ಆಗುವಷ್ಟರಲ್ಲಿ ಕ್ಷಯರೋಗ ಪೀಡಿತೆಯಾದ ತಾಯಿ ತೀರಿಕೊಂಡರು. ಮತ್ತೆರಡು ವರ್ಷ ಆಗುವಾಗ ಅಜ್ಜ (ತಾಯಿಯ ತಂದೆ) ನಿಧನ ಹೊಂದಿದರು. ಮತ್ತೆ ಸೋದರಮಾವನ ಆಶ್ರಯದಲ್ಲಿರುವಾಗ ವಾತ್ಸಲ್ಯಮಯಿ ಅತ್ತೆಯೂ ತೀರಿಕೊಂಡರು. ಆಗ ಅವರ ವಯಸ್ಸು ೧೫ ವರ್ಷ. ತಮ್ಮನಿಗೆ ಸಿಡುಬುರೋಗವಾಗಿ ೧೯೩೪ರಲ್ಲಿ ಆತನೂ ತೀರಿಕೊಂಡ. ಇದುತನಕ ಇದ್ದ ಅಜ್ಜಿಯ ವಾತ್ಸಲ್ಯ ೧೯೩೫ರಲ್ಲಿ ಆಕೆಯ ಸಾವಿನೊಂದಿಗೆ ಕೊನೆಗೊಂಡಿತು. ಈ ಬಗೆಯ ಸಾವಿನ ಸರಣಿ ಮತ್ತು ಆತ್ಮೀಯರ ಅಗಲುವಿಕೆಗಳು ಅವರಲ್ಲಿ ಒಂದು ಬಗೆಯ ವೈರಾಗ್ಯಭಾವವನ್ನು ಮೂಡಿಸಿರಬಹುದೇ ಎಂದು ಕೆಲವು ಜೀವನಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ; ಅವರ ಮನಸ್ಸಿನಲ್ಲೊಂದು ಅನಿಕೇತನ ಸ್ಥಿತಿ ನಿರ್ಮಾಣವಾಗಿತ್ತು.
ಅವರ ಅತ್ಯಂತ ಪಾರದರ್ಶಕ ನಡವಳಿಕೆ; ಶಿಸ್ತು, ನಿಯಮ-ನಿಬಂಧನೆಗಳಲ್ಲಿ ರಾಜಿ ಇಲ್ಲದಿರುವುದು; ಶಿಸ್ತುಬದ್ಧ ಕಾರ್ಯಕರ್ತರ ಪಡೆಯ ನಿರ್ಮಾಣ; ತಾವು ಜನಸಂಘದ ಬೆಂಬಲಿಗರು, ಕಾರ್ಯಕರ್ತರು ಎಂದು ಎದೆತಟ್ಟಿ ಹೇಳುವಂತಹ ವಾತಾವರಣ ನಿರ್ಮಾಣ; – ಇದು ಉಪಾಧ್ಯಾಯರ ಬಹುದೊಡ್ಡ ಸಾಧನೆ ಎನ್ನಬಹುದು.
ಸಾಕಷ್ಟು ತಡವಾಗಿ, ಒಂಭತ್ತು ವರ್ಷವಾದ ಬಳಿಕವೇ, ಅವರು ಶಾಲೆಗೆ ಸೇರಿದರು. ನಾಲ್ಕು ವರ್ಷ ಗಂಗಾಪುರದಲ್ಲಿದ್ದ ಮಾವನ ಮನೆಯಿಂದ ಶಾಲೆಗೆ ಹೋಗುವಷ್ಟರಲ್ಲಿ ಆ ಶಾಲೆ ಮುಗಿಯಿತು. ಮುಂದೆ ಮೂರು ವರ್ಷ ರಾಜಸ್ಥಾನದ ಕೋಟಾದಲ್ಲಿ ಸೆಲ್ಫ್-ಸಪೋರ್ಟಿಂಗ್ ಹೌಸ್ನಲ್ಲಿದ್ದು ಕಲಿತರು. ಬಳಿಕ ಎರಡು ವರ್ಷ ಆಲ್ವಾರ್ ಜಿಲ್ಲೆಯ ರಾಜಗಡದಲ್ಲಿ ಬಂಧುವೊಬ್ಬರ ಜೊತೆಗಿದ್ದು ಎರಡು ವರ್ಷ ಓದಿದರು. ಅವರಿಗೆ ವರ್ಗವಾದಾಗ ಅವರೊಂದಿಗೆ ಸೀಕರ ಸಂಸ್ಥಾನಕ್ಕೆ ಹೋದರು. ಅಲ್ಲಿ ಒಂದು ವರ್ಷ ಕಲಿಯುವಾಗ ೧೦ನೇ ತರಗತಿ ಮುಗಿಯಿತು. ಅನಂತರ ಎರಡು ವರ್ಷ ಪಿಲಾನಿಯಲ್ಲಿದ್ದು ಇಂಟರ್ಮೀಡಿಯೆಟ್ ಮಾಡಿದರು; ೧೯೩೬ರಲ್ಲಿ ಅದು ಮುಗಿಯಿತು. ಆಗ್ರಾದಲ್ಲಿ ಬಿ.ಎ. ಕಲಿಯುವಾಗ ಎರಡು ವರ್ಷ ರಾಜಮಂಡಿಯಲ್ಲಿದ್ದರು. ೧೯೪೧ರಲ್ಲಿ ಬಿ.ಟಿ. (ಶಿಕ್ಷಕರ ತರಬೇತಿ) ಪದವಿಗಾಗಿ ಪ್ರಯಾಗಕ್ಕೆ ಹೋದರು. ಇದು ಮುಂದೆ ಅವರು ಅಖಂಡ ಪ್ರವಾಸಿ ಆದುದರ ಮುನ್ಸೂಚನೆಯಂತಿತ್ತು; ೨೫ ವರ್ಷಗಳಲ್ಲಿ ಅವರು ಒಟ್ಟು ೧೧ ಕಡೆಗಳಲ್ಲಿದ್ದರು.
೯ನೇ ವರ್ಷದಷ್ಟು ತಡವಾಗಿ ಶಾಲೆಗೆ ಸೇರಿದರೂ, ಮಾವನ ಮನೆಯಲ್ಲಿದ್ದ ಕೌಟುಂಬಿಕ ಆಪತ್ತುಗಳ ಒತ್ತಡವಿದ್ದರೂ, ಮಾವ ರಾಧಾರಮಣರ ಅನಾರೋಗ್ಯದಿಂದಾಗಿ ಅವರ ಸೇವೆ ಮಾಡಬೇಕಿದ್ದರೂ ಕೂಡ ದೀನದಯಾಳ್ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಲೇ ಇದ್ದರು. ಎಂಟನೇ ತರಗತಿ ಎನ್ನುವಾಗ ಅಂಕಗಣಿತದ ಅವರ ಅದ್ಭುತ ಸಾಮರ್ಥ್ಯ ವ್ಯಕ್ತವಾಯಿತು. ೯ನೇ ತರಗತಿಯ ಅವರಿಂದ ಹತ್ತನೇ ತರಗತಿಯವರು ಕೇಳಿ ಕಲಿಯುತ್ತಿದ್ದರು. ಹತ್ತನೇ ತರಗತಿಯಲ್ಲಿ ಅವರು ಸಮಸ್ತ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮಸ್ಥಾನ ಗಳಿಸಿದಾಗ ಸೀಕರದ ಮಹಾರಾಜ ಕಲ್ಯಾಣಸಿಂಹರು ಚಿನ್ನದ ಪದಕ, ತಿಂಗಳಿಗೆ ಹತ್ತು ರೂ. ವಿದ್ಯಾರ್ಥಿವೇತನ ಮತ್ತು ಪುಸ್ತಕ ಖರೀದಿಸುವ ಬಗ್ಗೆ ೨೫೦ ರೂ. ನೀಡಿದರು.
ಬಿರ್ಲಾ ಕಾಲೇಜಿನಲ್ಲಿ ಇಂಟರ್ಮೀಡಿಯೆಟ್ ಓದಿದಾಗಲೂ ಅವರು ಇಡೀ ಬೋರ್ಡ್ನಲ್ಲಿ ಪ್ರಥಮಸ್ಥಾನ ಗಳಿಸಿದರು. ಆಗ ಜಿ.ಡಿ. ಬಿರ್ಲಾ ಕೂಡ ತಿಂಗಳಿಗೆ ಹತ್ತೂ ರೂ. ವಿದ್ಯಾರ್ಥಿವೇತನ ಮತ್ತು ಪುಸ್ತಕ ಖರೀದಿಗೆ ೨೫೦ ರೂ. ಬಹುಮಾನವಿತ್ತರು. ಕಾನ್ಪುರದ ಸನಾತನಧರ್ಮ ಕಾಲೇಜಿನಲ್ಲಿ ಓದಿ ೧೯೩೯ರಲ್ಲಿ ಬಿ.ಎ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಬಳಿಕ ಇಂಗ್ಲಿಷ್ ಎಂ.ಎ. ಕಲಿಯುವ ಸಲುವಾಗಿ ಆಗ್ರಾದ ಸೈಂಟ್ ಜಾನ್ಸ್ ಕಾಲೇಜಿಗೆ ಸೇರಿದರು. ಆದರೆ ಎರಡನೇ ವರ್ಷದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಆಡಳಿತ (ಸ್ಪರ್ಧಾತ್ಮಕ) ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಮೊಳಕೆಯಲ್ಲಿಯೆ ಕಂಡ ಗುಣ
ನೈರೋಬಿಯಲ್ಲಿ ಪಂ|| ದೀನ್ದಯಾಳ್ಜೀ
ಅಪ್ರತಿಮ ಬುದ್ಧಿಮತ್ತೆ ಇದ್ದಂತೆಯೇ, ದೀನದಯಾಳರಲ್ಲಿ ಬಾಲ್ಯದಲ್ಲೇ ಕೆಲವು ವಿಶಿಷ್ಟ ಗುಣಗಳೂ ವ್ಯಕ್ತವಾಗಿದ್ದವು. ಅವರಿಗೆ ಏಳೆಂಟು ವರ್ಷವಿದ್ದಾಗ ಮನೆಗೆ ದರೋಡೆಕೋರರು ನುಗ್ಗಿದರು. ಒಬ್ಬ ದರೋಡೆ ಕೋರ ಈ ಬಾಲಕನ ಎದೆಯ ಮೇಲೆ ಕಾಲಿಟ್ಟು ‘ಆಭರಣ ಎಲ್ಲಿ?’ ಎಂದು ಜೋರುಮಾಡಿದಾಗ ಈತ ದರೋಡೆಕೋರರು ಸಾಹುಕಾರರ ಹಣ ಲೂಟಿಮಾಡಿ ಬಡವರನ್ನು ರಕ್ಷಿಸುತ್ತಾರೆಂದು ಕೇಳಿದ್ದೆ. ಆದರೆ ನೀನು ನನ್ನಂತಹ ಬಡವನಿಗೆ ಹೊಡೆಯುತ್ತಿರುವೆ ಎಂದನಂತೆ. ಅದನ್ನು ಕೇಳಿದ ದರೋಡಕೋರ ಅಲ್ಲಿಗೇ ಬಿಟ್ಟು ಹೊರಟುಹೋದನಂತೆ. ವಿದ್ಯಾರ್ಥಿಯಾಗಿದ್ದಾಗ ದೀನಾ ಸೋದರಮಾವಂದಿರ ಮಕ್ಕಳನ್ನು ಓದಿಸಲು ಸಹಕರಿಸಿದ್ದರು. ಮತ್ತು ಪಿಲಾನಿಯಲ್ಲಿ ಇಂಟರ್ (ಪಿಯುಸಿ) ಓದುತ್ತಿದ್ದಾಗ ದುರ್ಬಲ ವಿದ್ಯಾರ್ಥಿಗಳನ್ನು ಓದಿಸಲು ‘ಝೀರೋ ಅಸೋಸಿಯೇಷನ್’ ಎಂಬ ಬಳಗವನ್ನು ಹುಟ್ಟುಹಾಕಿದ್ದರು.
ತಾತ ದೇಶಮುಖರು ಬಾಲಕ ದೀನದಯಾಳ್ ಬಗ್ಗೆ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದರು. ಒಮ್ಮೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿಕೊಂಡು ಮನೆಗೆ ಬಂದಾಗ ಬಾಲಕ ದೀನಾ ತಾತನಲ್ಲಿ ನನ್ನಲ್ಲಿ ನಾಲ್ಕು ಕಾಸಿತ್ತು; ಅದರಲ್ಲಿ ಒಂದು ಸವೆದುಹೋದದ್ದು. ಅದನ್ನೇ ತರಕಾರಿ ಮಾರುವವಳಿಗೆ ಕೊಟ್ಟಿದ್ದೇನೆ. ಅದನ್ನು ವಾಪಸು ಪಡೆದು ಅವಳಿಗೆ ಸರಿಯಾದ ನಾಣ್ಯ ಕೊಟ್ಟುಬರೋಣ ಎಂದು ವರಾತಹಿಡಿದರು; ಮುಖದಲ್ಲಿ ಅಪರಾಧೀಭಾವ ಮಡುಗಟ್ಟಿತ್ತು. ವಾಪಸು ತರಕಾರಿ ಮಾರುವವಳ ಬಳಿಗೆ ಹೋಗಿ ವಿಷಯವನ್ನು ತಿಳಿಸಿದಾಗ ಆಕೆ, ನಿನ್ನ ಸವೆದ (ನಡೆಯದ) ಕಾಸನ್ನು ಯಾರು ಹುಡುಕುತ್ತಾರೆ? ಇರಲಿ ಬಿಡು, ಮನೆಗೆ ಹೋಗು ಎಂದಳು. ಆದರೆ ಹುಡುಗ ಒಪ್ಪಬೇಕಲ್ಲ! ಆ ಮುದುಕಿಯಿಂದ ನಾಣ್ಯಗಳ ಚೀಲವನ್ನು ತೆಗೆದುಕೊಂಡು ಸವೆದ ನಾಣ್ಯವನ್ನು ಹುಡುಕಿತೆಗೆದು ಆಕೆಗೆ ಬೇರೆ ನಾಣ್ಯವನ್ನು ನೀಡಿದ. ಆಗ ಆಕೆ, ಮಗೂ, ನೀನು ಎಷ್ಟು ಒಳ್ಳೆಯವನು! ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಬಾಯ್ತುಂಬ ಹರಸಿದಳು. ಇಂತಹ ಅಪ್ಪಟ ಪ್ರಾಮಾಣಿಕತೆ ಅವರಲ್ಲಿ ಜೀವನದುದ್ದಕ್ಕೂ ಇತ್ತು.
ಅದೇ ರೀತಿ ಇತರರ ಕಷ್ಟಕ್ಕೆ ಕರಗುವ ಗುಣ. ‘ಭಾರತ-ಭಾರತಿ’ ಸರಣಿಯ ‘ದೀನದಯಾಳ್ ಉಪಾಧ್ಯಾಯ’ದಲ್ಲಿ ನಂ. ಮಧ್ವರಾವ್ ಒಂದು ಘಟನೆಯನ್ನು ಹೀಗೆ ನೆನಪಿಸಿಕೊಂಡಿದ್ದಾರೆ: ಒಮ್ಮೆ ಅವರನ್ನು ಸ್ವಾಗತಿಸಲು ಬೆಂಗಳೂರು ರೈಲುನಿಲ್ದಾಣಕ್ಕೆ ಹೋಗಿದ್ದೆವು. ಸಾಮಾನುಗಳನ್ನು ನಾವೆಲ್ಲ ಒಂದೊಂದಾಗಿ ರೈಲುಡಬ್ಬಿಯಿಂದ ಇಳಿಸಿಕೊಂಡು ಆಚೆ ಇದ್ದ ಕಾರಿಗೆ ಸಾಗಿಸಲು ಅನುವಾದೆವು. ಕೂಡಲೆ ಪಂಡಿತ್ಜೀ ನಮ್ಮನ್ನೆಲ್ಲ ತಡೆದರು. ಹಮಾಲಿಯನ್ನು ಕರೆದು ‘ಅವನಿಗೆ ಕೊಡಿ’ ಎಂದರು. ನಾವು ಹೊರಲು ಎಷ್ಟು ಬಲವಂತ ಮಾಡಿದರೂ ನಾವು ಹೊರಲು ಬಿಡಲಿಲ್ಲ. ಹಮಾಲಿ ಸಾಮಾನುಗಳನ್ನೆಲ್ಲ ಕಾರಿನಲ್ಲಿ ತುಂಬಿದ ಮೇಲೆ ಒಳಗೆ ಕುಳಿತುಕೊಂಡು ಪಂಡಿತ್ಜೀ ತಮ್ಮ ನಿಧಾನವಾದ ಆದರೆ ಆತ್ಮೀಯ ಧ್ವನಿಯಲ್ಲಿ ಹೇಳಿದರು: ‘ಅರೆ ಭಯ್ಯಾ, ನೀವೇ ಸಾಮಾನುಗಳನ್ನೆಲ್ಲ ಹೊತ್ತರೆ ಅದನ್ನು ಹೊತ್ತು ಜೀವನಮಾಡುವ ಆ ಬಂಧುಗಳ ಗತಿಯೇನು? ಯೋಚಿಸಿದ್ದೀರಾ?’ ಕೇಳಿದ ನಾವೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.
ಸಂಘದ ಸಂಪರ್ಕ
ಭಾರತೀಯ ಜನಸಂಘದ ಸಮಾವೇಶವೊಂದರಲ್ಲಿ ಪಂಡಿತ್ಜೀ
೧೯೩೭ರಲ್ಲಿ ಬಿ.ಎ. ಓದಲು ಕಾನ್ಪುರಕ್ಕೆ ಹೋದಾಗ ಸಹಪಾಠಿ ಬಾಲಾಜಿ ಮಹಾಶಬ್ದೇ ಅವರ ಮೂಲಕ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ಡಾ|| ಹೆಡಗೆವಾರರ ಪರಿಚಯ ಕೂಡ ಆಯಿತು. ಕಾನ್ಪುರದಲ್ಲಿ ಸುಂದರಸಿಂಗ್ ಭಂಡಾರಿ ಕೂಡ ಉಪಾಧ್ಯಾಯರ ಸಹಪಾಠಿ ಆಗಿದ್ದರು. ೧೯೪೧ರಲ್ಲಿ ಬಿ.ಟಿ. ಪರೀಕ್ಷೆ ಉತ್ತೀರ್ಣರಾಗುವುದರೊಳಗೆ ಸಂಘದ ೪೦ ದಿನಗಳ ಪ್ರಥಮವರ್ಷ ಸಂಘಶಿಕ್ಷಾವರ್ಗ (೧೯೩೯)ವನ್ನು ಅವರು ಪೂರೈಸಿ ಆಗಿತ್ತು. ಎರಡನೇ ವರ್ಷದ ಶಿಕ್ಷಾವರ್ಗವನ್ನು ೧೯೪೨ರಲ್ಲಿ ಪೂರೈಸಿದರು. ಸಂಘದಲ್ಲಿ ಸಹವರ್ತಿಯಾದ ಬಾಬಾಸಾಹೇಬ್ ಆಪ್ಟೆ ದೀನಾ ಅವರ ಬಗ್ಗೆ ಹೀಗೆ ಹೇಳಿದ್ದರು: ಅವರ ವಿವೇಚನೆ ಬಹಳ ತೂಕದ ಸಂತುಲಿತ ಶಬ್ದಗಳಲ್ಲಿ ಇರುತ್ತಿತ್ತು; ಹಾಗೂ ತರ್ಕಬದ್ಧವಾಗಿರುತ್ತಿತ್ತು. ಅವರ ಪ್ರಭಾವಕ್ಕೊಳಗಾಗದೆ ಇರಲು ನನ್ನಿಂದ ಆಗಲಿಲ್ಲ.
ಚಾಣಾಕ್ಷ ವಿದ್ಯಾರ್ಥಿಯಾದ ದೀನದಯಾಳ್ ವಿದ್ಯಾಭ್ಯಾಸ ಮುಗಿದೊಡನೆ ಒಳ್ಳೆಯ ಸಂಬಳ ತರುವ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆನ್ನುವ ನಿರೀಕ್ಷೆ ಎಲ್ಲ ಬಂಧುಗಳದಾಗಿತ್ತು. ಆದರೆ ನಡೆದದ್ದೇ ಬೇರೆ. ದೇಶದ ಅಂದಿನ ಸಾಮಾಜಿಕ-ರಾಜಕೀಯ ಸಂದರ್ಭ ಅವರನ್ನು ಕೈಬೀಸಿ ಕರೆಯಿತೆಂದರೆ ತಪ್ಪಲ್ಲ; ಅವರು ಸೀದಾ ಸಂಘದ ಪ್ರಚಾರಕ್ ಆದರು. ಸಂದರ್ಭ ಹೀಗಿದೆ:
೧೯೩೭ರ ಚುನಾವಣೆಯಲ್ಲಿ ಸಂಯುಕ್ತ ಪ್ರಾಂತ (ಉತ್ತರಪ್ರದೇಶ)ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಸ್ಲಿಂಲೀಗ್ ಮತ್ತು ಕಾಂಗ್ರೆಸ್ಗಳ ಒಪ್ಪಂದ ಮುರಿಯಿತು. ಲೀಗ್ ನಾಯಕ ಖಾಲಿಕ್ ಅಜುಮಾ ನಾವು ಜೊತೆಗೂಡಿ ರಾಜ್ಯವಾಳಲು ಆಗದಿದ್ದರೆ ಸಹಬಾಳ್ವೆ ಮಾಡುವುದಕ್ಕೂ ಅಸಾಧ್ಯ ಎಂದರು. ಅದೇ ದ್ವಿರಾಷ್ಟ್ರ ಘೋಷಣೆಯೂ ಆಯಿತು; ಅಲ್ಲಿಂದ ಮಸ್ಲಿಮರು ಆಕ್ರಮಣಕಾರಿಗಳಾಗಿ ಪರಿವರ್ತನೆಗೊಂಡರು. ೧೯೪೦ರಲ್ಲಿ ನಡೆದ ಲಾಹೋರ್ ಮುಸ್ಲಿಂಲೀಗ್ ಅಧಿವೇಶನದಲ್ಲಿ ಪಾಕಿಸ್ತಾನ ರಚನೆಯ ಪ್ರಸ್ತಾವವನ್ನು ಮಂಡಿಸಲಾಯಿತು. ಈ ಪ್ರತ್ಯೇಕತಾವಾದ ರಾಷ್ಟ್ರವಾದಿಗಳ ಮನಸ್ಸನ್ನು ಫಾಸಿಗೊಳಿಸಿತು; ದೀನದಯಾಳರ ಯುವಮನಸ್ಸು ಕೂಡ ನೊಂದಿತು.
ದ್ವಿರಾಷ್ಟ್ರವಾದವನ್ನು ಆಧರಿಸಿ ಹಿಂಸೆಗೆ ಇಳಿದವರಿಗೆ ರಾಷ್ಟ್ರೀಯ ಏಕಾತ್ಮತೆಯ ಉತ್ತರವನ್ನು ನೀಡಬೇಕಿತ್ತು. ಸಾಮ್ರಾಜ್ಯವಾದಿ ಆಂಗ್ಲರಂತೂ ದ್ವಿರಾಷ್ಟ್ರವಾದಿಗಳ ಕೋಮುಭಾವನೆಗೆ ಬೆಂಬಲ ನೀಡಿದರು. ಆಗ ದೀನದಯಾಳ್ ಕೋಮುವಾದ ಆಧರಿಸಿದ ಪ್ರತ್ಯೇಕತಾವಾದ ಮತ್ತು ದ್ವಿರಾಷ್ಟ್ರವಾದಗಳಿಗೆ ತೀವ್ರವಾಗಿ ಪ್ರತಿಭಟಿಸಲು ಬಯಸಿದರು. ಆರೆಸ್ಸೆಸ್ಗೆ ಸೇರಿ ಪ್ರಚಾರಕರಾಗುವುದಕ್ಕೆ ಅದೇ ಕಾರಣವೆನ್ನಬಹುದು. ಸಂಘದ ವಿಚಾರ, ಚಟುವಟಿಕೆಗಳು ಅವರಿಗೆ ಹಿಡಿಸಿದವು. ಸಾವರ್ಕರ್ ಕಾನ್ಪುರಕ್ಕೆ ಬಂದಾಗ ಅವರನ್ನು ಶಾಖೆಗೆ ಕರೆದು ಬೌದ್ಧಿಕ್ ಏರ್ಪಡಿಸಿದ್ದರು. ಆಂಗ್ಲರನ್ನು ಗುಂಡುಹಾಕಿ ಸಾಯಿಸುವುದಷ್ಟೇ ದೇಶಭಕ್ತಿ ಅಲ್ಲ; ಸ್ವಾತಂತ್ರ್ಯ ಕೇವಲ ಘೋಷಣೆಯ ವಿಷಯವಾಗಿರದೆ ಸಂಸ್ಕಾರವುಳ್ಳ ಸಂಘಟಿತ ಸಮಾಜವೇ ಸ್ವಾತಂತ್ರ್ಯಕ್ಕೆ ನಿಜವಾದ ಅಧಿಕಾರಿ ಆಗುತ್ತದೆ ಎನ್ನುವ ಅರಿವು ಅವರದಾಯಿತು. ೧೯೪೧-೫೧ರ ಅವಧಿಯಲ್ಲಿ ಪೂರ್ಣಾವಧಿ ಪ್ರಚಾರಕ್ ಹೊಣೆ ಹೊತ್ತರು.
ರಾಷ್ಟ್ರದ ಕರೆಗೆ ಓಗೊಟ್ಟದ್ದು
ಒಂದು ಕಾರ್ಯಕರ್ತ ಸಮಾವೇಶದಲ್ಲಿ ಶ್ರೀಗುರೂಜಿ ಜತೆಯಲ್ಲಿ ಪಂಡಿತ್ಜೀ
ಇದರಿಂದ ಆತ್ಮೀಯರಿಗೆ ಬೇಸರವಾಯಿತು. ಆಡಳಿತ ಪರೀಕ್ಷೆಯಲ್ಲಿ ಪಾಸಾದರೂ ಅಂತಹ ಕೆಲಸಕ್ಕೆ ಸೇರಲಿಲ್ಲವೆಂದು ಮಾವನಿಗೆ ಸಿಟ್ಟುಬಂದರೆ, ಬಿ.ಟಿ. ಮುಗಿಸಿದವನು ಅಧ್ಯಾಪಕನಾದರೂ ಆಗಲೆಂದು ಆತ್ಮೀಯರು ಬಯಸಿದ್ದರು. ಉತ್ತರಪ್ರದೇಶದ ಲಖೀಂಪುರ ಜಿಲ್ಲಾ ಪ್ರಚಾರಕ್ ಆಗಿ ಅವರನ್ನು ನೇಮಿಸಲಾಯಿತು. ಸೋದರಮಾವನ ಮಗ ಬನವಾರಿಲಾಲ್ ಮಾವನ ಕಾಯಿಲೆ ಬಗ್ಗೆ ತಿಳಿಸಿ ಮನೆಗೆ ಬರುವಂತೆ ಪತ್ರ ಬರೆದರು. ಅದಕ್ಕೆ ಉಪಾಧ್ಯಾಯರು, ಮೊನ್ನೆ ನಿಮ್ಮ ಪತ್ರ ಕೈಸೇರಿತು. ಅಂದಿನಿಂದ ನನ್ನ ಆಲೋಚನೆಯಲ್ಲಿ ಭಾವನೆಗಳು ಹಾಗೂ ಕರ್ತವ್ಯಗಳ ದ್ವಂದ್ವಯುದ್ಧ ನಡೆಯುತ್ತಿದೆ. ನಾನು ಒಂದು ಜಿಲ್ಲೆಯಲ್ಲಿ ಕಾರ್ಯವೆಸಗಬೇಕಾಗಿದೆ. ಹೀಗೆ ಮಾಡುವ ಮೂಲಕ ಮಲಗಿರುವ ಹಿಂದೂಸಮಾಜವನ್ನು ಎಚ್ಚರಿಸುವಂಥ ಕಾರ್ಯಕರ್ತರ ಕೊರತೆಯನ್ನು ನಿವಾರಿಸಬೇಕಾಗಿದೆ. ಇಡೀ ಜಿಲ್ಲೆಯಲ್ಲಿ ಕೆಲಸಮಾಡಬೇಕಾದ ಕಾರಣ ಒಂದೇ ಸ್ಥಳದಲ್ಲಿ ಮೂರು-ನಾಲ್ಕು ದಿವಸಗಳಿಗಿಂತ ಹೆಚ್ಚಾಗಿ ಇರಲು ಸಾಧ್ಯವಾಗುವುದಿಲ್ಲ. ಸ್ವಯಂಸೇವಕರ ಪಾಲಿಗೆ ಸಮಾಜದ ಹಾಗೂ ದೇಶದ ಕೆಲಸಗಳು ಮೊದಲನೆಯ ಆದ್ಯತೆಯ ಕೆಲಸಗಳಾಗಿರುತ್ತವೆ. ಅನಂತರ ತಮ್ಮ ವೈಯಕ್ತಿಕ ಕಾರ್ಯಗಳು. ಆದ್ದರಿಂದ ಸಮಾಜಕಾರ್ಯಕ್ಕಾಗಿ ನನಗೆ ದೊರೆತಿರುವ ಆದೇಶವನ್ನು ನಾನು ಪಾಲಿಸಬೇಕಾಗಿದೆ.
ಹಿಂದುಸ್ತಾನದಲ್ಲಿಯೇ ತಾವು ನಮ್ಮ ಮಹಾಮಹಾ ವ್ಯಕ್ತಿಗಳನ್ನು ತೆಗೆದುಕೊಳ್ಳಿ. ಇದು ಅವರ ನಿಜವಾದ ಏಳಿಗೆಯೆ? ಮುಸಲ್ಮಾನ ಗೂಂಡಾಗಳು ಈ ಮಹಾವ್ಯಕ್ತಿಗಳ ಗೌರವವನ್ನು ಒಂದೇ ಕ್ಷಣದಲ್ಲಿ ಮಣ್ಣುಪಾಲುಮಾಡುತ್ತಾರೆ. ಏಕೆಂದರೆ ಆ ವ್ಯಕ್ತಿಗಳು ಸ್ವಯಂ ಎಷ್ಟೇ ಉನ್ನತಮಟ್ಟದವರಾಗಿದ್ದರೂ ಅವರು ಯಾವ ಸಮಾಜದ ಅಂಗವಾಗಿದ್ದಾರೋ ಅದು ದುರ್ಬಲವಾಗಿದೆ, ಅಧೋಗತಿಗಿಳಿದಿದೆ, ಶಕ್ತಿಹೀನವಾಗಿದೆ ಹಾಗೂ ಸ್ವಾರ್ಥಿಯಾಗಿದೆ. ಸಂದರ್ಭಬಂದಾಗ ನಿಮಗೆ ಸಮಾಜದ ಸಹಕಾರ ದೊರೆಯುತ್ತದೆ ಎಂಬ ಭರವಸೆ ಇದೆಯೆ? ಇಲ್ಲ; ಏಕೆಂದರೆ ನಮ್ಮ ಸಮಾಜ ಸಂಘಟಿತವಾಗಿಲ್ಲ, ದುರ್ಬಲವಾಗಿದೆ. ಹೀಗಾಗಿ ನಮ್ಮ ಆರತಿಯ ಹೆಸರಿನಲ್ಲಿ ಹಾಗೂ ವಾದ್ಯಗಳ (ಮಸೀದಿ ಬಳಿ) ಹೆಸರಿನಲ್ಲಿ ಹೊಡೆದಾಟಗಳು ಉಂಟಾಗುತ್ತವೆ. ಆಗ ನಮ್ಮ ತಾಯಂದಿರನ್ನು ಸಹೋದರಿಯರನ್ನು ಮುಸಲ್ಮಾನರು ಹಾರಿಸಿಕೊಂಡು ಹೋಗುತ್ತಾರೆ. ಆಂಗ್ಲ ಸಿಪಾಯಿಗಳು ಹಾಡುಹಗಲೇ ಅವರ ಮೇಲೆ ಅತ್ಯಾಚಾರವೆಸಗುತ್ತಾರೆ. ತಮ್ಮ ಮರ್ಯಾದೆಯ ಕುರಿತು ಸಾರಿಹೇಳುವ, ಸಮಾಜದಲ್ಲಿ ತಮ್ಮ ಉನ್ನತ ಸ್ಥಾನಮಾನದ ಬಗ್ಗೆ ಬೀಗುವವರು ಆ ಹೊತ್ತಿಗೆ ಕೇವಲ ಕಣ್ಣುಬಾಯಿಬಿಟ್ಟು ನೋಡುತ್ತಿರುತ್ತಾರೆ. ನಾವು ಅದಕ್ಕೆ ಪ್ರತೀಕಾರ ಎಸಗುವುದಿಲ್ಲ. ಹೆಚ್ಚೆಂದರೆ ಪತ್ರಿಕೆಗಳಲ್ಲಿ ಬಿಸಿ-ಬಿಸಿ ಸುದ್ದಿ ನೀಡುತ್ತೇವೆ ಅಥವಾ ಮಹಾತ್ಮರು ‘ಹರಿಜನ’ದಲ್ಲಿ ಒಂದು ಲೇಖನವನ್ನು ಬರೆಯುತ್ತಾರೆ. ಹೀಗೇಕೆ? ಹಿಂದುಗಳಲ್ಲಿ ಇಂತಹ ದುಷ್ಟರನ್ನು ಎದುರಿಸುವಂತಹ ಬಲಿಷ್ಠರು ಇಲ್ಲವೆ? ಸಂಘಟನೆಯ ಕೊರತೆಯೇ ನಮ್ಮ ವಿನಾಶಕ್ಕೆ ಕಾರಣವಾಗಿದೆ. ಇನ್ನು ವೈಯಕ್ತಿಕ ಕೀರ್ತಿ ಹಾಗೂ ಯಶಸ್ಸಿನ ವಿಷಯಕ್ಕೆ ಬಂದರೆ ನಿಮಗೆಲ್ಲ ಗೊತ್ತಿರುವಂತೆ ಗುಲಾಮಗಿರಿಗೆ ಕೀರ್ತಿ ಹಾಗೂ ಯಶಸ್ಸು ಎಲ್ಲಿಯಾದರೂ ದೊರೆಯುವುದುಂಟೆ? ಎಂದು ಸುದೀರ್ಘವಾಗಿ ತಾವು ಹಿಡಿದ ಹಾದಿಯನ್ನು ಸಮರ್ಥಿಸಿಕೊಂಡರು (ನೋಡಿ – ಪಂ. ದೀನದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು – ಸಂಪುಟ ೧; ಅದರಲ್ಲಿ ಡಾ|| ಮಹೇಶಚಂದ್ರ ಶರ್ಮಾ ಅವರ ಲೇಖನ. ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು). ಹೀಗೆ ಪತ್ರದಲ್ಲಿ ಸಂಘಕಾರ್ಯಗಳ ಬಗೆಗಿನ ಅವರ ಒಲವು ಹಾಗೂ ತ್ಯಾಗ ಮಾಡಬೇಕೆಂಬ ಮಹತ್ತರ ಪ್ರೇರಣೆಗಳು ದಟ್ಟವಾಗಿ ಕಾಣಿಸುತ್ತವೆ.
ಆದರ್ಶ ಸ್ವಯಂಸೇವಕ
೧೯೪೨-೪೫ರ ಅವಧಿಯಲ್ಲಿ ಅವರು ಲಖೀಂಪುರದಲ್ಲಿ ಪ್ರಚಾರಕ್ ಆಗಿ ಮೊದಲಿಗೆ ಜಿಲ್ಲೆ, ಅನಂತರ ವಿಭಾಗದ ಕೆಲಸ ಮಾಡಿದರು. ೧೯೪೫ರಲ್ಲಿ ಇಡೀ ಉತ್ತರಪ್ರದೇಶದ ಸಹ-ಪ್ರಾಂತಪ್ರಚಾರಕ್ ಆದರು. ಉತ್ತರಪ್ರದೇಶ ಪ್ರಾಂತೀಯ ಪ್ರಚಾರಕ್ ಭಾವೂರಾವ್ ದೇವರಸ್ ಅವರು ದೀನದಯಾಳರಿಗೆ ಬರೆದ ಒಂದು ಪತ್ರದಲ್ಲಿ ಸಂಘದ ಆರಂಭದ ದಿನಗಳಲ್ಲಿ, ಅದರ ಚಟುವಟಿಕೆ ಕಂಟಕಮಯವಾಗಿದ್ದಾಗ, ನೀನು ಕಾರ್ಯಪ್ರವೃತ್ತನಾದೆ. ಅಂದು ಉತ್ತರಪ್ರದೇಶದಲ್ಲಿ ಸಂಘಕಾರ್ಯಗಳ ಅರಿವು ಯಾರಿಗೂ ಇರಲಿಲ್ಲ. ಈ ರಾಜ್ಯದಲ್ಲಿ ಸಂಘಕಾರ್ಯಗಳ ಅಡಿಪಾಯದಲ್ಲಿ ನೀನಿರುವಿ. ಸಂಘದ ಇಂದಿನ ಸ್ವರೂಪ ನಿನ್ನ ಪರಿಶ್ರಮ ಮತ್ತು ಕರ್ತವ್ಯಗಳ ಪರಿಣಾಮವೇ ಆಗಿದೆ. ಅನೇಕ ಕಾರ್ಯಕರ್ತರು ನಿನ್ನ ಜೀವನದಿಂದ ಪ್ರೇರಣೆ ಪಡೆದಿದ್ದಾರೆ. ಸಂಘದ ಸಂಸ್ಥಾಪಕರಿಂದ ಆದರ್ಶ ಸ್ವಯಂಸೇವಕನ ಗುಣಗಳ ಬಗೆಗಿನ ಭಾಷಣಗಳನ್ನು ಕೇಳಿದ್ದೆ. ನೀನು ಅದಕ್ಕೆ ಸಾಕ್ಷಾತ್ ಉದಾಹರಣೆಯಾಗಿರುವೆ; ನೀನು ತೀಕ್ಷ್ಣಬುದ್ಧಿಯ, ಅಸಾಮಾನ್ಯ ಕೆಲಸದ, ನಿರಹಂಕಾರದ ನಮ್ರತೆಯ ಮಾದರಿಯಾದೆ ಎಂದಿದ್ದಾರೆ. ಇದಕ್ಕಿಂತ ಉತ್ತಮ ಸರ್ಟಿಫಿಕೇಟ್ ಬೇಕೆ? ಅವರ ಕೆಲಸಗಳಿಂದಾಗಿ ಉತ್ತರಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ಕೂಡ ಸಂಘವು ಚಿಗುರೊಡೆದು ಬೆಳೆಯಿತು.
ಗಾಂಧಿಹತ್ಯೆ (ಜನವರಿ ೩೦, ೧೯೪೮) ಬಳಿಕ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಿದಾಗ ಪಂಡಿತ್ಜೀ ಪ್ರಚಾರ ಮತ್ತು ಸತ್ಯಾಗ್ರಹಗಳ ಸಂಚಾಲನೆಯ ಸೂತ್ರಧಾರಿಯಾದರು. ಸಂಘದ ‘ಪಾಂಚಜನ್ಯ’ ಪತ್ರಿಕೆ ನಿಷೇಧಗೊಂಡಾಗ ‘ಹಿಮಾಲಯ’ ಎಂಬ ಪತ್ರಿಕೆಯನ್ನು ಹೊರಡಿಸಿದರು. ಬಹುತೇಕ ಅದೇ ಹೊತ್ತಿಗೆ ಸಂಘದ ಸಂವಿಧಾನ ರಚನೆಯಾಯಿತು. ಅದರಲ್ಲಿ ಅವರು ಮಹತ್ತ್ವದ ಪಾತ್ರ ವಹಿಸಿದರು. ಸಂಘಶಿಕ್ಷಾವರ್ಗಕ್ಕಾಗಿ, ಮುಖ್ಯವಾಗಿ ಅದರ ವೈಚಾರಿಕ ಶಿಕ್ಷಣಕ್ಕಾಗಿ ದೀನದಯಾಳರು ದೇಶಾದ್ಯಂತ ಪ್ರವಾಸ ಮಾಡಿದರು. ಜನಸಂಘಕ್ಕೆ ಸೇರಿದ ಮೇಲೆ ಕೂಡ ಅದು ಮುಂದುವರಿಯಿತು. ಸರಳ, ಸ್ನೇಹಮಯ ನಡವಳಿಕೆಯಿಂದಾಗಿ ಸ್ವಯಂಸೇವಕರ ನಡುವೆ ದೀನದಯಾಳರು ತುಂಬ ಜನಪ್ರಿಯರಾದರು. ಖ್ಯಾತಿಯಿಂದ ದೂರ ಉಳಿಯುತ್ತಿದ್ದ ಅವರದ್ದು ಯಾವಾಗಲೂ ಮೌನ ಸಾಧನೆ.
ಲೇಖಕ, ಪತ್ರಕರ್ತ
ಪಂಡಿತ್ಜೀ ಜತೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ
ಈ ನಡುವೆ ಪಂಡಿತ್ಜೀ ಅನಾಯಾಸವಾಗಿ ಓರ್ವ ಲೇಖಕ ಹಾಗೂ ಪತ್ರಕರ್ತನಾಗಿ ರೂಪುಗೊಂಡು ಬೆಳೆದರು. ಆಪ್ಟೆ ಅವರು ಹೇಳಿದಂತೆ ಅವರ ಲೇಖನಿಯಲ್ಲಿ ಸತ್ತ್ವ ಆರಂಭದಿಂದಲೇ ಇತ್ತು. ೧೯೪೬ರ ಏಪ್ರಿಲ್ನಲ್ಲಿ ಒಂದು ಪ್ರಾಂತೀಯ ಸಭೆಯಲ್ಲಿ ಪ್ರಾಂತಪ್ರಚಾರಕ್ ಭಾವೂರಾವ್ ಅವರು ನಮ್ಮ ವಿಚಾರಗಳು ಬಾಲಸುಲಭ ಭಾಷೆಯಲ್ಲಿಲ್ಲ. ಮಕ್ಕಳ ಸಾಹಿತ್ಯ ಬಹಳ ಅವಶ್ಯ ಎಂದರು. ಅದನ್ನೇ ಸವಾಲಾಗಿ ಸ್ವೀಕರಿಸಿದ ಉಪಾಧ್ಯಾಯರು ಇಡೀ ರಾತ್ರಿ ಬರೆದು ಬೆಳಗ್ಗೆ ಮಕ್ಕಳ ಕಾದಂಬರಿ ‘ಸಮ್ರಾಟ್ ಚಂದ್ರಗುಪ್ತ’ದ ಹಸ್ತಪ್ರತಿಯನ್ನು ಭಾವೂರಾವ್ ಅವರ ಕೈಯಲ್ಲಿ ಇಟ್ಟರಂತೆ; ಅದು ಎಲ್ಲರಿಗೂ ಆಶ್ವರ್ಯ ಉಂಟುಮಾಡಿತ್ತು. ತರುಣರಿಗಾಗಿ ಮತ್ತೊಂದು ಪುಸ್ತಕ ಬರೆಯುವ ಅಪೇಕ್ಷೆ ಉಂಟಾಗಿ ಎರಡನೇ ಕಾದಂಬರಿ ‘ಜಗದ್ಗುರು ಶಂಕರಾಚಾರ್ಯ’ವನ್ನು ಬರೆದರು. ಇದರಲ್ಲಿ ಕೂಡ ಪಾತ್ರ, ಘಟನೆಗಳು ಹಳತಾದರೂ ಭಾವ, ವಿಚಾರ, ಸನ್ನಿವೇಶಗಳು ಹೊಸತು; ತರುಣರಿಗೆ ಪ್ರೇರಣೆ, ದೇಶದ ಸಾಂಸ್ಕೃತಿಕ ಗೌರವದ ಬಗ್ಗೆ ಹೆಮ್ಮೆ ಮೂಡಿಸುವುದು ಗುರಿ.
ಒಂದು ಉದಾಹರಣೆಯನ್ನು ಗಮನಿಸುವುದಾದರೆ, ಶಂಕರರು ಸಂನ್ಯಾಸದೀಕ್ಷೆ ತೆಗೆದುಕೊಳ್ಳುವ ಬಗ್ಗೆ ತಾಯಿ ಆರ್ಯಾಂಬಾ ಅವರನ್ನು ಒಪ್ಪಿಸುವಾಗ ಸಂಘದ ಕಾರ್ಯಕರ್ತ ಪ್ರಚಾರಕನಾಗಲು ಹೊರಟಾಗ ಮನೆಯವರನ್ನು ಒಪ್ಪಿಸುವ ಸಂದರ್ಭದ ಹೊಳಹುಗಳು, ಭವಿಷ್ಯದಲ್ಲಿರುವ ದೇಶಾಟನೆ ಮುಂತಾದ ಕಾರ್ಯಗಳು ಪರ್ಯಾಯವಾಗಿ ಧ್ವನಿಸುತ್ತವೆ. ಇವೆರಡೂ ಶ್ರೇಷ್ಠಮಟ್ಟದ ಬರಹಗಳು. ಆದರೆ ದೀನದಯಾಳ್ಜೀ ಮುಂದೆ ಮತ್ತೆ ಕಥೆ-ಕಾದಂಬರಿ ರೂಪದ ಬರವಣಿಗೆಗೆ ಮುಂದಾಗಲಿಲ್ಲ; ವಿಚಾರಸಾಹಿತ್ಯ ಅವರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿತು. ಅದರಲ್ಲಿ ದೊಡ್ಡಪಾಲು ಪತ್ರಿಕಾಬರಹಗಳದ್ದು. ಪ್ರಚಾರಕರಾಗಿದ್ದಾಗ ಅವರು ಅನೇಕ ಪತ್ರಿಕೆ, ನಿಯತಕಾಲಿಕಗಳ ರೂವಾರಿಯೂ ಆದರು. ೧೯೪೫ರಲ್ಲಿ ಮಾಸಪತ್ರಿಕೆ ‘ರಾಷ್ಟ್ರಧರ್ಮ’ ಮತ್ತು ವಾರಪತ್ರಿಕೆ ‘ಪಾಂಚಜನ್ಯ’ಗಳನ್ನು ಶುರುಮಾಡಿದರು. ಅನಂತರ ‘ಸ್ವದೇಶ’ ಎಂಬ ದಿನ ಪತ್ರಿಕೆಯನ್ನೂ ಮಾಡಿದರು. ಅವರೆಂದೂ ಈ ಪತ್ರಿಕೆಗಳ ಸಂಪಾದಕರಾಗಿರಲಿಲ್ಲ; ಆದರೆ ಸಂಚಾಲಕ, ಸಂಪಾದಕ, ಕಂಪೋಸಿಟರ್, ಮುದ್ರಣಕಾರ ಹೀಗೆ ಎಲ್ಲ ಕೆಲಸಗಳನ್ನೂ ಮಾಡಿದರು.
ಪಟೇಲ್ ನಿಧನದ ಬಳಿಕ
ಜನಸಂಘದ ಕಲ್ಲಿಕೋಟೆ ಅಧಿವೇಶನಕ್ಕೆ ಆಗಮಿಸುತ್ತಿರುವ ಪಂಡಿತ್ಜೀ; ಜತೆಯಲ್ಲಿ ಅಟಲ್ಜೀ
ದೀನದಯಾಳರು ‘ರಾಜಕೀಯದಲ್ಲಿ ಸಾಂಸ್ಕೃತಿಕ ರಾಯಭಾರಿ’ ಆಗಿದ್ದರೆಂದು ಡಾ|| ಮಹೇಶಚಂದ್ರ ಶರ್ಮಾ ಗುರುತಿಸುತ್ತಾರೆ. ಸರ್ದಾರ್ ಪಟೇಲ್ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪುರುಷೋತ್ತಮದಾಸ ಟಂಡನ್ ಆರೆಸ್ಸೆಸ್ ಮತ್ತು ಕಾಂಗ್ರೆಸ್ ಜೊತೆಯಾಗಿ ಕೆಲಸಮಾಡಬೇಕೆನ್ನುವ ಅಭಿಪ್ರಾಯವನ್ನು ಹೊಂದಿದ್ದರು. ಪಟೇಲ್ ನಿಧನದ ಬಳಿಕ ಅಂತಹ ವಿಚಾರಕ್ಕೆ ಕಾಂಗ್ರೆಸ್ನ ಬಾಗಿಲು ಮುಚ್ಚಿತು; ಪರಿಣಾಮವಾಗಿ ಜನಸಂಘ ಸ್ಥಾಪನೆಯಾಯಿತು ಎಂದು ಅವರು ಅಭಿಪ್ರಾಯಪಡುತ್ತಾರೆ. ಆಗ ‘ಆರ್ಗನೈಸರ್’ ಪತ್ರಿಕೆಯಲ್ಲಿ ಉಪಾಧ್ಯಾಯರು ಹೀಗೆ ಬರೆದಿದ್ದರು: ಟಂಡನ್ ನಿಶ್ಚಯವಾಗಿಯೂ ಕಾಂಗ್ರೆಸ್ನ ಕಟ್ಟಕಡೆಯ ವಿಚಾರಶೀಲವ್ಯಕ್ತಿ. ಅವರು ಪಕ್ಷದಲ್ಲಿ ಭಾರತೀಯತತ್ತ್ವವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಮುಂದೆ ಅವರು ನೆಹರು ಎದುರಿನಲ್ಲಿ ಕಾಂತಿಹೀನರಾಗಿ ಪಕ್ಷದ ಅಧ್ಯಕ್ಷತೆಯನ್ನು ತೊರೆದರು. ಕಾಂಗ್ರೆಸ್ ರಾಷ್ಟ್ರವಾದಿ ವಿಚಾರಗಳಿಂದ ದೂರಹೋಯಿತು. ಟಂಡನ್ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿದಿದ್ದಲ್ಲಿ, ಕಾಂಗ್ರೆಸ್ ಅವರ ಆಲೋಚನೆಗಳನ್ನು ಸ್ವೀಕರಿಸಿದ್ದಲ್ಲಿ ಜನಸಂಘ ಸ್ಥಾಪಿಸುವ ಅಗತ್ಯ ಬರುತ್ತಿರಲಿಲ್ಲ.
ಇನ್ನು ನೆಹರು ಅವರ ಸಂಪುಟದಲ್ಲೇ ಮಂತ್ರಿಯಾಗಿದ್ದ ಡಾ|| ಶ್ಯಾಮಪ್ರಸಾದ್ ಮುಖರ್ಜಿ ಅಲ್ಲಿಂದ ಹೊರಬಂದು ಜನಸಂಘ ಸ್ಥಾಪಿಸುವ ಸಂದರ್ಭ ಬಂದುದನ್ನು ಈಗಾಗಲೆ ಉಲ್ಲೇಖಿಸಲಾಗಿದೆ. ತಾವು ೧೬ ವರ್ಷ ಪ್ರಧಾನ ಕಾರ್ಯದರ್ಶಿಯಾಗಿ, ಕೊನೆಯಲ್ಲಿ (೪೪ ದಿನ) ಅಧ್ಯಕ್ಷರಾಗಿ ಮುನ್ನಡೆಸಿದ ಜನಸಂಘದ ಕುರಿತು ಒಮ್ಮೆ ದೀನದಯಾಳ್ ಅವರು ಭಾರತೀಯ ಜನಸಂಘ ಒಂದು ಬಗೆಯ ಭಿನ್ನ ಪಕ್ಷ. ಹೇಗಾದರೂ ಅಧಿಕಾರಕ್ಕೆ ಬರಬೇಕೆಂದು ಲಾಲಸೆಪಡುವ ಜನರ ಗುಂಪಲ್ಲ. ಇದೊಂದು ಪಕ್ಷ ಅಲ್ಲ; ಒಂದು ಆಂದೋಲನ. ರಾಷ್ಟ್ರೀಯ ಅಭಿಲಾಷೆಯ ಸ್ವಯಂಸ್ಫೂರ್ತಿಯ ನಿರ್ಝರಿಣಿ. ರಾಷ್ಟ್ರದ ಲಕ್ಷ್ಯವನ್ನು ಆಗ್ರಹಪೂರ್ವಕವಾಗಿ ಸಾಧಿಸುವ ಮಹತ್ತ್ವಾಕಾಂಕ್ಷೆ ಎಂದು ಬಣ್ಣಿಸಿದ್ದರು. ಅಧಿಕಾರಕ್ಕೆ ಹಾತೊರೆಯುವ ಯಾರಿಗೂ ಪಕ್ಷದ ನೇತೃತ್ವವು ಲಭ್ಯವಿರಲಿಲ್ಲ. ಡಾ|| ಮುಖರ್ಜಿ ಅವರು ಕಾಶ್ಮೀರದ ಚಳವಳಿಯಲ್ಲಿ ನೇರವಾಗಿ ಪಾಲ್ಗೊಂಡು ಸಂಶಯಾಸ್ಪದ ಸನ್ನಿವೇಶದಲ್ಲಿ ತೀರಿಕೊಂಡಾಗ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಆರಿಸುವ ಅಗತ್ಯ ಬಂತು.
‘ಹೊರಗಿನ ನಾಯಕ ಬೇಡ’
ಆಗ ದೀನದಯಾಳರು ಹೀಗೆ ಹೇಳಿದರು: ನಮ್ಮ ಮುಂದಿರುವ ಆದರ್ಶವಾದ ಹಾಗೂ ಅದರಿಂದ ಮೂಡಿಬಂದಿರುವ ನಮ್ಮ ಸತತ ಶ್ರದ್ಧೆಯ ಆಂತರಿಕಶಕ್ತಿಯನ್ನು ಅರಿಯುವಲ್ಲಿ ಬಹಳಷ್ಟು ಜನ ಅಸಮರ್ಥರಾಗಿದ್ದಾರೆ. ಆದ್ದರಿಂದಲೇ ನಮ್ಮ ಪಕ್ಷದ ಅಧ್ಯಕ್ಷರ ಸ್ಥಾನದ ಬಗ್ಗೆ ಮನಸ್ಸಿಗೆಬಂದ ಊಹಾಪೋಹಗಳನ್ನು ಮಾಡಲಾಗುತ್ತಿದೆ. ಗಾಳಿಯಲ್ಲಿ ಹಲವಾರು ಹೆಸರುಗಳು ಹಾರಿಬರುತ್ತಿವೆ. ಅದರಲ್ಲಿ ಬಹಳಷ್ಟು ಜನ ಜನಸಂಘದ ಸದಸ್ಯರೂ ಆಗಿಲ್ಲ. ನಾವು ನಮ್ಮ ನಾಯಕನಿಗೆ ಪ್ರಪಂಚವಿಡೀ ಹುಡುಕಾಡುತ್ತೇವೆ; ಹಾಗೂ ಎಲ್ಲಿ ಯಾರಾದರೂ ಕಣ್ಣಿಗೆಬಿದ್ದರೆ ಅವರ ಕೊರಳಿಗೆ ಮಾಲೆಹಾಕುತ್ತೇವೆ ಎಂದು ಯಾರೂ ತಿಳಿಯಬಾರದು. ನಮ್ಮ ನಾಯಕ ಯಾವುದೇ ವ್ಯಕ್ತಿವಿಶೇಷವಾಗಿರದೆ ಸಂಘಟನೆಯ ಅಭಿನ್ನ ಅಂಗವಾಗಿರುತ್ತಾನೆ. ನಾಯಕರದೇ ಆದ ಒಂದು ಜಾತಿ ಇರುತ್ತದೆ ಎಂದು ನಾವು ಭಾವಿಸಿಲ್ಲ. ಆದ್ದರಿಂದ, ಹಿಂದೂಮಹಾಸಭೆಯ ಬಳಿ ನಾಯಕರಿದ್ದಾರೆ ಹಾಗೂ ಜನಸಂಘದ ಬಳಿ ಸಬಲ ಸಂಘಟನೆಯಿದೆ; ಆದ್ದರಿಂದ ಇವೆರಡೂ ಒಂದಾಗಬೇಕು ಎಂದು ಹೇಳುವವರ ಮಾತನ್ನು ನಾವು ಒಪ್ಪುವುದಿಲ್ಲ. ಇಲ್ಲಿ ಕಾಣುವ ಒಬ್ಬ ನಾಯಕನ ಆತ್ಮವಿಶ್ವಾಸ ಯಾರನ್ನೂ ಬೆರಗುಗೊಳಸದೆ ಇರದು. ಅದರಲ್ಲೂ ‘ನಾಯಕರದೇ ಒಂದು ಜಾತಿ ಇರುತ್ತದೆ ಎಂದು ನಾವು ಭಾವಿಸಿಲ್ಲ’ ಎನ್ನುವಲ್ಲಿನ ಕೆಚ್ಚು, ದಿಟ್ಟತನಗಳನ್ನು ಗಮನಿಸಿ; ಉತ್ತಮ ಕಾರ್ಯಕರ್ತರನ್ನೇ ನಾಯಕರನ್ನಾಗಿ ಬೆಳೆಸಲು ಸಾಧ್ಯ; ನಾವದನ್ನು ಮಾಡಿತೋರಿಸುತ್ತೇವೆ ಎಂಬಂತಹ ಇಲ್ಲಿನ ಧೀಮಂತ ನಿಲವು ಅತ್ಯಂತ ಶ್ಲಾಘನೀಯವಾಗಿದೆ.
ಪಕ್ಷದ ಸಂವಿಧಾನದಲ್ಲಿ ಬಹುಕಾಲ ‘ಸಮಾಜದ ಓರ್ವ ಗೌರವಾನ್ವಿತರು ಅಧ್ಯಕ್ಷರಾಗುವುದು, ಕಾರ್ಯಕಲಾಪಗಳನ್ನು ಬಹುತೇಕ ಪ್ರಧಾನ ಕಾರ್ಯದರ್ಶಿಯೇ ನಿರ್ವಹಿಸುವುದು’ ಎಂಬ ವಿಧಾನವನ್ನು ಅನುಸರಿಸಿಕೊಂಡುಬಂದರು. ಡಾ|| ಮುಖರ್ಜಿ ಅವರ ನಂತರ ಹಲವರು ಅಧ್ಯಕ್ಷರಾದರು, ನಿರ್ಗಮಿಸಿದರು. ಆದರೆ ಪಕ್ಷದ ಮುನ್ನಡೆಗೆ ಯಾವುದೇ ಕುಂದು-ಕೊರತೆ ಬಾರದಂತೆ ಪ್ರಧಾನ ಕಾರ್ಯದರ್ಶಿ ನಿರ್ವಹಿಸಿದರು. ಮುಖ್ಯವಾಗಿ ಮೂರು ಲೋಕಸಭಾ ಚುನಾವಣೆಗಳು (೧೯೫೭, ೧೯೬೨, ೧೯೬೭) ಅವರ ನೇತೃತ್ವದಲ್ಲಿ ನಡೆದವು. ಅಲ್ಲಿ ಅವರ ಅತ್ಯಂತ ಪಾರದರ್ಶಕ ನಡವಳಿಕೆ; ಶಿಸ್ತು, ನಿಯಮ-ನಿಬಂಧನೆಗಳಲ್ಲಿ ರಾಜಿ ಇಲ್ಲದಿರುವುದು; ಶಿಸ್ತುಬದ್ಧ ಕಾರ್ಯಕರ್ತರ ಪಡೆಯ ನಿರ್ಮಾಣ; ತಾವು ಜನಸಂಘದ ಬೆಂಬಲಿಗರು, ಕಾರ್ಯಕರ್ತರು ಎಂದು ಎದೆತಟ್ಟಿ ಹೇಳುವಂತಹ ವಾತಾವರಣ ನಿರ್ಮಾಣ; – ಇದು ಉಪಾಧ್ಯಾಯರ ಬಹುದೊಡ್ಡ ಸಾಧನೆ ಎನ್ನಬಹುದು.
ಕ್ರಮೇಣ ಬೆಳೆದ ಪಕ್ಷ
ರಾಜಕೀಯ ಎಂದರೆ ಸಮಯಸಾಧಕತನ ಎಂಬುದು ಈಗಿನಷ್ಟಲ್ಲವಾದರೂ ೧೯೫೦-೬೦ರ ದಶಕದ ಆಹೊತ್ತಿಗೇನೇ ಬರಲು ಆರಂಭವಾಗಿತ್ತು ಎಂಬುದು ಕಟುಸತ್ಯ. ಆದರೆ ಉಪಾಧ್ಯಾಯರು ಅಂತಹ ರಾಜಿ ಮಾಡಿಕೊಳ್ಳಲಿಲ್ಲ. ಅಧಿಕಾರಕ್ಕೆ ಬರುವುದಷ್ಟೇ ತಮ್ಮ ಧ್ಯೇಯವಲ್ಲವೆಂದು ನೇರವಾಗಿಯೇ ಹೇಳಿ ಹಾಗೆ ನಡೆದುಕೊಂಡರು. ಅದರಿಂದ ಪಕ್ಷಕ್ಕೆ ಆಯಾ ಸಂದರ್ಭಗಳಲ್ಲಿ ನಷ್ಟವಾಗಿರಲೂಬಹುದು. ಆದರೆ ಜನಸಂಘ ಚುನಾವಣೆಯಿಂದ ಚುನಾವಣೆಗೆ ಬೆಳೆಯಿತು. ಲೋಕಸಭೆ, ವಿಧಾನಸಭೆಗಳಲ್ಲಿ ಪಕ್ಷದ ಸದಸ್ಯರ ಸಂಖ್ಯೆ ಕ್ರಮೇಣ ಹೆಚ್ಚಾಯಿತು. ಮುಖ್ಯವಾಗಿ ರಾಷ್ಟ್ರಮಟ್ಟದಲ್ಲಿ ಗಳಿಸಿದ ಶೇಕಡಾವಾರು ಮತ ಬೆಳೆದುಬಂತು. ಕಾಂಗ್ರೆಸೇತರ ಪಕ್ಷಗಳಲ್ಲಿ ಒಂದನೆಯ ಸ್ಥಾನವನ್ನು ಗಳಿಸಿಕೊಂಡಿತು. ೧೯೬೭ರ ಮಹಾಚುನಾವಣೆಯಲ್ಲಂತೂ ಪಕ್ಷ ಸಾಕಷ್ಟು ದೊಡ್ಡ ಸಾಧನೆಯನ್ನೇ ಮಾಡಿತು.
ಆದರೆ ಅಂತಹ ಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಲು ದೀನದಯಾಳ್ಜೀ ಹೆಚ್ಚುಕಾಲ ಉಳಿಯಲಿಲ್ಲ. ೧೯೬೭ರ ಕೊನೆಯಲ್ಲಿ ನಡೆದ ಕಲ್ಲಿಕೋಟೆ ಅಧಿವೇಶನದಲ್ಲಿ ಅವರನ್ನು ಅಧ್ಯಕ್ಷರಾಗಿ ಆರಿಸಲಾಯಿತು. ಪಕ್ಷವು ಉಚ್ಛ್ರಾಯಸ್ಥಿತಿಗೆ ಬಂದು ನಿಂತಿತ್ತು. ದಕ್ಷಿಣ ಭಾರತದಲ್ಲೂ ವಿಸ್ತರಿಸಬೇಕು ಎಂಬ ಹುಮ್ಮಸ್ಸನ್ನು ಹೊಂದಿತ್ತು. ಆದರೆ ಅಜ್ಞಾತ ಹಂತಕರು ಉಪಾಧ್ಯಾಯರ ಪಕ್ಷಾಧ್ಯಕ್ಷತೆಯನ್ನು ಕೇವಲ ೪೪ ದಿನಗಳಿಗೆ ಅಂತ್ಯಗೊಳಿಸಿದರು.
‘ಶರಣನ ಗುಣವನ್ನು ಮರಣದಲ್ಲಿ ನೋಡು’ ಎನ್ನುವ ಒಂದು ಗಾದೆಯಿದೆ. ದೀನದಯಾಳ್, ಸುಭಾಶ್ಚಂದ್ರಬೋಸ್ರಂಥವರಿಗೆ ಬಂದ ಕೊನೆಯನ್ನು ಕಾಣುವಾಗ ನಾವು ಮೂಕರಾಗುತ್ತೇವೆ. ಯಾತಕ್ಕಾಗಿ ಅವರ ಅಂತ್ಯ ಆಯಿತು; ಅದನ್ನು ಮಾಡಿದವರು ಯಾರು ಎಂದು ತಿಳಿಯುವ ಅರ್ಹತೆ ಕೂಡ ನಮಗಿಲ್ಲವೆ?
ಈ ಹತ್ಯೆಯ ಹಿನ್ನೆಲೆ ಬೆಳಕಿಗೆ ಬರಲೇ ಇಲ್ಲ…
ಆಗ ಅವರ ವಯಸ್ಸು ಕೇವಲ ೫೨ ವರ್ಷ. ಫೆಬ್ರುವರಿ ೧೦, ೧೯೬೮ರಂದು ಅವರು ಲಕ್ನೋದಲ್ಲಿದ್ದರು. ದೆಹಲಿಗೆ ಹೊರಡಬೇಕು ಎಂದಿದ್ದಾಗ ಪಕ್ಷದ ಬಿಹಾರ ಸಂಘಟನಾ ಕಾರ್ಯದರ್ಶಿ ಮರುದಿನದ ರಾಜ್ಯ ಕಾರ್ಯಕಾರಿಣಿಗೆ ಬರುವಂತೆ ಕರೆದರು. ಸಂಜೆ ೭ ಗಂಟೆಗೆ ರೈಲಿನಲ್ಲಿ ಪಟ್ನಾಕ್ಕೆ ಹೊರಟರು. ರಾತ್ರಿ ೧೨ ಗಂಟೆಗೆ ಜೌನ್ಪುರ ನಿಲ್ದಾಣದಲ್ಲಿ ಕಾರ್ಯಕರ್ತರು ಅವರನ್ನು ಭೇಟಿ ಮಾಡಿದ್ದರು. ಬಳಿಕ ೨-೧೫ಕ್ಕೆ ರೈಲು ಮೊಗಲ್ಸರಾಗೆ ಬಂದಿತ್ತು. ಅಲ್ಲಿ ಅವರಿದ್ದ ಬೋಗಿಯನ್ನು ಬದಲಿಸಿ ದೆಹಲಿ-ಹೌರಾ ಎಕ್ಸ್ಪ್ರೆಸ್ಗೆ ಜೋಡಿಸಲಾಯಿತು. ರೈಲು ಬೆಳಗಿನ ಜಾವ ಪಟ್ನಾಕ್ಕೆ ಬರುವಾಗ ಅದರಲ್ಲಿ ಉಪಾಧ್ಯಾಯರು ಇರಲಿಲ್ಲ.
ಅದೇ ಬೆಳಗಿನ ಜಾವ ೩-೪೫ಕ್ಕೆ ಮೊಗಲ್ಸರಾ ರೈಲುನಿಲ್ದಾಣದಿಂದ ಸುಮಾರು ೧೫೦ ಗಜದೂರ ಜಲ್ಲಿಕಲ್ಲಿನ ಮೇಲೆ ಅವರ ಶವ ಕಂಡುಬಂತು. ದೊಡ್ಡ ಸುದ್ದಿ ಆಯಿತು. ಆದರೆ ಒಬ್ಬ ಅಜಾತಶತ್ರುವಿನ ಈ ಹತ್ಯೆಯ ಹಿನ್ನೆಲೆ ಬೆಳಕಿಗೆ ಬರಲೇ ಇಲ್ಲ. ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರು ಆ ಬಗ್ಗೆ ಹೇಳುತ್ತಾ, ನ್ಯಾಯಾಂಗತನಿಖೆ ನಡೆಸಬೇಕೆಂದು ವಿವಿಧ ಪಕ್ಷಗಳ ಸಂಸದರು ಒತ್ತಾಯಿಸಿದರು. ನ್ಯಾ| ವೈ.ವಿ. ಚಂದ್ರಚೂಡ್ ಅವರ ನೇತೃತ್ವದಲ್ಲಿ ತನಿಖೆ ನಡೆಯಿತು. ವರದಿಯಲ್ಲಿ ಅವರು ‘ಕೊಲೆಗೆ ರಾಜಕೀಯ ಆಯಾಮ ಇಲ್ಲ; ಸಾಮಾನ್ಯ ಕೊಲೆ’ ಎಂದರು. ಅದರಿಂದ ಯಾರಿಗೂ ಸಮಾಧಾನ ಆಗಲಿಲ್ಲ ಎಂದಿದ್ದಾರೆ.
ಘಟನೆ ಇಂದಿಗೂ ನಿಗೂಢವೇ ಆಗಿ ಉಳಿದಿದೆ. ಹತ್ಯೆಗೈದವರು ಯಾರೋ! ಏಕೋ! ಅದನ್ನು ಬಚ್ಚಿಡುವ ಪ್ರಯತ್ನ ನಡೆದಿದೆಯೆ? ನಡೆಸಿದವರು ಯಾರು? ಅದಾದರೂ ತಿಳಿಯಬಹುದೆ?