“ಶ್ರೀಕೃಷ್ಣನು ರುಚಿಯಾದ ಭಕ್ಷ್ಯಭೋಜ್ಯ ತಯಾರಿಸಿ ಕಾದುಕೊಂಡಿದ್ದ ದುರ್ಯೋಧನನ ಮನೆಗೆ ಊಟಕ್ಕೆ ಹೋಗದೆ ಬಡವನಾದ ವಿದುರನ ಮನೆಗೆ ಹೋಗಿ ಕದನ್ನವನ್ನು ತಿಂದದ್ದು ಏಕೆ? ಶ್ರೀಕೃಷ್ಣನಿಗೆ ಅದೇ ಮಾನಸಿಕ ಸುಖ ನೀಡಿತು. ರಾಣಾ ಪ್ರತಾಪನಿಗೆ ದಾಸ್ಯತೆಯ ಸುಖಭೋಗಕ್ಕಿಂತ ಸ್ವಾತಂತ್ರ್ಯದ ಒಣರೊಟ್ಟಿ, ಹುಲ್ಲು ಹಾಸಿಗೆಯೇ ಸುಖ-ಸಮಾಧಾನ ನೀಡಿತು. ಧ್ಯೇಯವಾದಿಗಳಿಗೆ ಧ್ಯೇಯಪ್ರಾಪ್ತಿಯೂ, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಸಾಧನೆಯೂ ಅಸೀಮ ಆನಂದ ನೀಡುತ್ತವೆ. ಅವರಿಗೆ ಆ ಮಾರ್ಗದಲ್ಲಿ ಸಿಗುವ ಕಷ್ಟಸಂಕಟಗಳೇ ಆನಂದ ತಂದುಕೊಡುತ್ತವೆ. ಹೀಗೆ ಪ್ರತಿಯೊಬ್ಬನ ಬದುಕಿಗೂ ಒಂದೊಂದು ಗುರಿ ಇರಬಹುದು. ಅವರೆಲ್ಲರೂ ಆನಂದ ಕಾಣುವುದು ಅದರ ಪ್ರಾಪ್ತಿಯಲ್ಲೇ.
ಇವು ಪಂಡಿತ್ ದೀನದಯಾಳ ಉಪಾಧ್ಯಾಯರ ಲೇಖನವೊಂದರಲ್ಲಿ ಬರೆದಿರುವ ವಾಕ್ಯಗಳು. ಕೇವಲ ಬರೆದದ್ದಷ್ಟೇ ಅಲ್ಲ, ಅದರಂತೆ ತಾನು ಸ್ವೀಕರಿಸಿದ್ದ ಧ್ಯೇಯವಾದಕ್ಕೆ ನೂರು ಪ್ರತಿಶತ ತಮ್ಮನ್ನು ಸಮರ್ಪಿಸಿಕೊಂಡ, ಆ ಮಾರ್ಗದಲ್ಲಿ ಎದುರಾದ ಕಷ್ಟಗಳನ್ನೆಲ್ಲ ನಗುನಗುತ್ತಾ ಸಹಿಸಿದ ಮತ್ತು ಗಮ್ಯದೆಡೆಗಿನ ಪಯಣದಲ್ಲಿಯೇ ಇಹದೇಹ ತ್ಯಜಿಸಿದ ಓರ್ವ ಅಪೂರ್ವ ಧ್ಯೇಯಜೀವಿ ದೀನದಯಾಳರು.
ಕಣ್ಣೀರು ಬಿಡುವವರು ಬಿರುದುಗಳ ಕೊಡುವವರು
ಎಲ್ಲರಿಗು ಇದ್ದಾರು; ಎಷ್ಟು ಜನರಿದ್ದಾರು
ಸುಖಭೋಗ ಬಿಡುವವರು ಜೀವನವ ಕೊಡುವವರು
ದೇಹಮುಕ್ತರ ಧ್ಯೇಯ ಪೂರೈಸೆ ಪಣವ ತೊಡುವವರು?
ಆ ಭಾಗ್ಯ ನಿಮಗುಂಟು
ದೇಶೋವಿಶಾಲ ನಿಮ್ಮ ನಂಟು.
(ಶಿವರಾಮುರವರ ‘ನನ್ನ ಜನ ನನ್ನ ಮನ’ ಕವನ ಸಂಕಲನದ ‘ಜಡಲೋಕದಿಂದ ಉಡುಲೋಕಕ್ಕೆ’ ಕವನದಿಂದ)
ಸಾಮರ್ಥ್ಯಶಾಲಿ ಬೌದ್ಧಿಕ ಕ್ಷತ್ರಿಯ
ಸ್ವತಂತ್ರ ಭಾರತ ಮಂತ್ರಿಮಂಡಲದ ಪ್ರಥಮ ಉದ್ಯೋಗ ಮಂತ್ರಿಯಾಗಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರು ೧೯೫೦ರಲ್ಲಿ ನಡೆದ ನೆಹರೂ-ಲಿಯಾಕತ್ ಒಪ್ಪಂದವನ್ನು ‘ರಾಷ್ಟ್ರಹಿತಕ್ಕೆ ಪೂರಕವಾಗಿಲ್ಲ’ ಎಂದು ವಿರೋಧಿಸಿ ರಾಜಿನಾಮೆ ನೀಡಿದ್ದರು. ಅಧಿಕಾರಕ್ಕಿಂತ ರಾಷ್ಟ್ರಹಿತವೇ ಪ್ರಮುಖ ಎಂದು ಭಾವಿಸುವ ರಾಜಕೀಯ ಪಕ್ಷದ ಅನಿವಾರ್ಯತೆಯನ್ನು ಮನಗಂಡು ಜನಸಂಘವನ್ನು ಆರಂಭಿಸಿದರು. ಶ್ರೀಗುರೂಜಿಯವರನ್ನು ಭೇಟಿ ಮಾಡಿ ಹೊಸ ಪಕ್ಷವನ್ನು ತಮ್ಮ ಹೆಗಲ ಮೇಲೆ ಹೊರುವ ಸಾಮರ್ಥ್ಯವಿರುವ, ಅನುಭವಿ ಕಾರ್ಯಕರ್ತರನ್ನು ಒದಗಿಸಿಕೊಡುವಂತೆ ಕೇಳಿಕೊಂಡಾಗ, ದೃಢನಿಶ್ಚಯವನ್ನುಳ್ಳ ನಿಷ್ಠಾವಂತರಾದ ಅನೇಕ ಕಾರ್ಯಕರ್ತರನ್ನು ಗೋಳ್ವಲ್ಕರ್ ಅವರು ಆರಿಸಿ ಹೊಸ ಪಕ್ಷವನ್ನು ನಿರ್ವಹಿಸುವ ಹೊಣೆ ನೀಡಿದರು. ಅದರಲ್ಲಿ ದೀನದಯಾಳ ಉಪಾಧ್ಯಾಯರೇ ಪ್ರಮುಖರು.
ದೀನದಯಾಳರು ೧೯೫೨ರಲ್ಲಿ ನಡೆದ ಭಾರತೀಯ ಜನಸಂಘದ ಮೊದಲ ಅಧಿವೇಶನದಲ್ಲಿಯೇ ಅದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅದರ ಹಿಂದಿನ ವರ್ಷವಷ್ಟೇ ಜನಸಂಘವನ್ನು ಸ್ಥಾಪಿಸಲಾಗಿತ್ತು. ಆಗಿನ್ನೂ ಡಾ. ಮುಖರ್ಜಿಯವರಿಗೆ ದೀನದಯಾಳರ ಪರಿಚಯ ಆಗಿರಲಿಲ್ಲ. ಆದರೆ ಮೊದಲ ಅಧಿವೇಶನದಲ್ಲಿಯೇ ತಮ್ಮ ಸಂಘಟನಾಕೌಶಲದ ಜೊತೆ ವೈಚಾರಿಕ ಸಾಮರ್ಥ್ಯವನ್ನೂ ದೀನದಯಾಳರು ಪ್ರಕಟಿಸಿದರು. ಆ ಮಹತ್ತ್ವಪೂರ್ಣ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ೧೫ ಗೊತ್ತುವಳಿಗಳಲ್ಲಿ ಏಳು ಗೊತ್ತುವಳಿಗಳನ್ನು ದೀನದಯಾಳರೇ ಏಕಾಂಗಿಯಾಗಿ ಸಿದ್ಧಪಡಿಸಿದ್ದರು. ‘`ನನಗೇನಾದರೂ ಇಬ್ಬರು ದೀನದಯಾಳರು ಸಿಗುವ ಹಾಗಾದರೆ, ನಾನು ಭಾರತದ ರಾಜಕೀಯ ನಕ್ಷೆಯನ್ನೇ ಬದಲಿಸಿಬಿಡಬಲ್ಲೆ”; ಇದು ದೀನದಯಾಳ ಉಪಾಧ್ಯಾಯರ ಕಾರ್ಯಶೈಲಿ, ಬೌದ್ಧಿಕ ಸಾಮರ್ಥ್ಯಗಳನ್ನು ಕಂಡು ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಹೇಳಿದ ಮಾತು.
ಸರಳ ಜೀವನ, ಉನ್ನತ ಚಿಂತನೆ
ರಾಜಕೀಯ ಪಕ್ಷವೊಂದರ ರಾಷ್ಟ್ರೀಯ ನಾಯಕರಾಗಿದ್ದರೂ ಸಹ ತಮ್ಮ ಬಟ್ಟೆಬರೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಸರಳ ಜೀವಿ ದೀನದಯಾಳರು. ತಮ್ಮ ಬನಿಯನ್ಗಳು ಹರಿದು ತುಂಡು ತುಂಡಾಗುವವರೆಗೂ ಬಳಸುತ್ತಿದ್ದರು. ಪಕ್ಷದ ಬೃಹತ್ ವೇದಿಕೆಗಳಲ್ಲಿ ಹರಿದ ಅಂಚುಗಳನ್ನು ಗಂಟುಹಾಕಿದ ಪಂಚೆಯನ್ನುಟ್ಟು ಮಾತನಾಡಲು ನಿಂತದ್ದಿದೆ. ಅವರು ಯಾವುದೇ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ಹೀಗಾಗಿ ಸಂಘ ಮತ್ತು ಜನಸಂಘ ಇವೇ ಅವರ ಜೀವನವಾಗಿತ್ತು. ಇದಕ್ಕೆ ಹೊರತಾಗಿ ಖಾಸಗಿ ಅಥವಾ ಸಾರ್ವಜನಿಕ ಜೀವನ ಅವರಿಗಿರಲಿಲ್ಲ.
ದೀನದಯಾಳರ ಸರಳತೆಯು ಬೋಳೆತನವಾಗಿರಲಿಲ್ಲ. ಭಾರತದ ಆಗಿನ ಕೇಂದ್ರಸರ್ಕಾರದ ರಕ್ಷಣಾ ಮಂತ್ರಿಯಾಗಿದ್ದ ಯಶವಂತರಾವ್ ಚೌಹಾಣ್ ಅವರು ದೀನದಯಾಳರನ್ನು ಕುರಿತು ಅವರು ಬಹಳ ಸರಳ ಮುಗ್ಧ ವ್ಯಕ್ತಿ ಎಂದು ಜನರು ಹೇಳುತ್ತಾರೆ. ಆದರೆ ನಾನು ಹಾಗೆಂದು ಭಾವಿಸುವುದಿಲ್ಲ. ಅವರನ್ನು ಮೋಸಪಡಿಸಲು ಸಾಧ್ಯವಿರಲಿಲ್ಲ. ಅವರನ್ನು ಮಾತುಗಳಲ್ಲಿ ಸಿಲುಕಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಖಂಡಿತವಾಗಿಯೂ ಒಬ್ಬ ನೇರ ನುಡಿಯ ಸರಳ ವ್ಯಕ್ತಿಯಾಗಿದ್ದರೂ ತಾವು ಹೇಳಬಯಸುತ್ತಿದ್ದುದನ್ನು ವಿನಯದಿಂದ ಆದರೆ ಸ್ಪಷ್ಟವಾದ ಮಾತುಗಳಲ್ಲಿ ಹೇಳಿ ಬಿಡುತ್ತಿದ್ದರು.
ನೋಡಲು ತೀರಾ ಸಾಧಾರಣರಂತೆ ಇದ್ದರೂ ಅವರ ಮಾತಿನಲ್ಲಿರುತ್ತಿದ್ದ ತೀವ್ರ ಪ್ರಾಮಾಣಿಕತೆ ಕೇಳುಗರನ್ನು ಧ್ಯೇಯದೆಡೆಗೆ ಸೆಳೆದೊಯ್ಯುತ್ತಿದ್ದವು. ಅವರ ಲೇಖನಿಯಿಂದ ಮೂಡಿಬಂದ ವಿಚಾರಗಳ ಹರಹು, ದ್ವಂದ್ವರಹಿತ ಸ್ಪಷ್ಟತೆ ಓದುಗರ ಹೃದಯ ತಟ್ಟುವಲ್ಲಿ ಯಶಸ್ವಿಯಾಗಿದ್ದವು. ದೀನದಯಾಳರಲ್ಲಿ ವಿಚಾರಗಳ ಸಮತೋಲನ, ಭಾಷೆ ಮತ್ತು ವಿದ್ವತ್ತುಗಳ ಅಪೂರ್ವ ಸಂಗಮವಿತ್ತು. ಸಮಕಾಲೀನ ರಾಜನೀತಿಯ ಕ್ಷೇತ್ರದಲ್ಲಿ ಅವರ ಛಾಪು ಒತ್ತಲ್ಪಟ್ಟಿತ್ತು. ಈ ವ್ಯಕ್ತಿ ಏನು ಹೇಳುತ್ತಾರೋ ಅದು ಆಳವಾದ ಅಧ್ಯಯನ ಹಾಗೂ ಚಿಂತನೆಗಳಿಂದ ಕೂಡಿರುತ್ತದೆ ಎಂದೇ ಪಕ್ಷಾತೀತವಾಗಿ ಎಲ್ಲರೂ ಪರಿಗಣಿಸುತ್ತಿದ್ದರು.
‘ಪ್ರಾತಃಕಾಲದಿಂದ ರಾತ್ರಿಯವರೆಗೂ ಅವಿರತವಾಗಿ ವಿಶ್ರಾಂತಿಯಿಲ್ಲದೆ ಕೆಲಸಗಳಲ್ಲಿ ಮಗ್ನರಾಗಿದ್ದರೂ ಸಹ, ವಿಭಿನ್ನ ವಿಷಯಗಳ ಅಧ್ಯಯನ ಮಾಡುತ್ತಿದ್ದ ಅವರಲ್ಲಿ ಯಾವುದೋ ಪವಾಡ ಅಡಗಿರಬೇಕು. ವಿವಿಧ ವಿಷಯಗಳ ಬಗ್ಗೆ ಅವರಿಗೆ ಬರೆಯಲೂ ಸಾಧ್ಯವಿತ್ತು. ಜನರಿಗೆ ಅಪೂರ್ವವಾದ ವಿಚಾರಗಳನ್ನು ನೀಡುತ್ತಿದ್ದ ಅವರು ಒಬ್ಬ ಸಾಹಸಿ, ಬುದ್ಧಿವಂತ ಹಾಗೂ ಕರ್ತವ್ಯನಿಷ್ಠ ಪುರುಷರಾಗಿದ್ದರು’ ಎಂದು ಶ್ರೀಗುರೂಜಿಯವರು ಉಲ್ಲೇಖಿಸಿದ್ದಾರೆ.
ದೀನದಯಾಳರ ಅಧ್ಯಯನವು ಬೇರೆ ಬೇರೆ ವಿಷಯಗಳಲ್ಲಿ, ಅಂದರೆ ಸಮಾಜಶಾಸ್ತ್ರ, ಧರ್ಮಶಾಸ್ತ್ರ, ರಾಜನೀತಿ, ಸಾಹಿತ್ಯ ಇತ್ಯಾದಿ ಎಲ್ಲಾ ವಿಚಾರಗಳಲ್ಲೂ ಗಹನವಾಗಿ, ಗಂಭೀರವಾಗಿ, ಆಳವಾಗಿ ಆಗಿತ್ತು ಎಂಬುದು ನನಗೆ ಅನುಭವವಾಗಿದೆ. ಅವರ ಕ್ಷಿಪ್ರಗತಿಯನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ಯಾವುದೇ ವ್ಯಕ್ತಿ ಕೇವಲ ಅಧ್ಯಯನದಲ್ಲೇ ತನ್ನ ಇಡೀ ಸಮಯವನ್ನು ವ್ಯಯಿಸಿ ಈ ರೀತಿಯ ಗತಿಯನ್ನು ಉತ್ಪನ್ನ ಮಾಡುತ್ತಾನೆ. ಆದರೆ ಅವರು ತಮ್ಮ ಎಲ್ಲಾ ಸಮಯವನ್ನು ಬರೀ ಅಧ್ಯಯನದಲ್ಲಿ ತೊಡಗಿಸಲಿಲ್ಲ, ಬದಲಾಗಿ ರಾಷ್ಟ್ರದ ಅಭ್ಯುದಯದಲ್ಲಿ, ಉತ್ಥಾನದಲ್ಲಿ, ರಾಷ್ಟ್ರದ ಸುಪ್ತ ಸಾಮರ್ಥ್ಯವನ್ನು ಜಾಗೃತಗೊಳಿಸುವಲ್ಲಿ, ಸಮಾಜದ ವ್ಯಕ್ತಿ ವ್ಯಕ್ತಿಗಳನ್ನು ಸೇರಿಸಿ ಅವರಿಂದ ಒಂದು ಸಂಘಟನಾ ಸಾಮರ್ಥ್ಯದ ಆವಿಷ್ಕಾರವನ್ನು ಮಾಡುವುದರಲ್ಲಿ, ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರ ಸಮಯವು ತೊಡಗಿಸಲ್ಪಟ್ಟಿತ್ತು.
– ಶ್ರೀಗುರೂಜಿ
ಕಾದಂಬರಿಕಾರ ದೀನದಯಾಳ್
೧೯೪೬ರಲ್ಲಿ ದೀನದಯಾಳರು ಉತ್ತರಪ್ರದೇಶದ ಸಹ-ಪ್ರಾಂತಪ್ರಚಾರಕರಾಗಿದ್ದಾಗಿನ ಸಂದರ್ಭ. ‘ರಾ.ಸ್ವ ಸಂಘಕ್ಕೆ ಬರುವ ಕಿಶೋರರಿಗೆ ಅರ್ಥವಾಗುವಂತಹ ಸುಲಭ ಭಾಷೆಯಲ್ಲಿ ನಮ್ಮ ಸಾಹಿತ್ಯ ಬರಬೇಕು’ ಎಂಬ ಕಳಕಳಿ ಪ್ರಾಂತ ಪ್ರಚಾರಕರಾಗಿದ್ದ ಭಾವೂರಾವ್ ದೇವರಸ್ರಿಂದ ವ್ಯಕ್ತವಾಯಿತು. ಅಂದು ಇಡೀ ರಾತ್ರಿ ದೀನ ದಯಾಳರು ಬರೆಯುತ್ತಲೇ ಇದ್ದರು. ಬೆಳಗಾಗುವ ಹೊತ್ತಿಗೆ ‘ಸಮ್ರಾಟ್ ಚಂದ್ರಗುಪ್ತ’ ಪುಸ್ತಕದ ಹಸ್ತಪ್ರತಿಯನ್ನು ಭಾವೂರಾವ್ರವರಿಗೆ ಒಪ್ಪಿಸಿದ್ದರು! ಇದು ದೀನದಯಾಳರು ಮಕ್ಕಳಿಗಾಗಿ ಬರೆದ ಐತಿಹಾಸಿಕ ಕಾದಂಬರಿ. ಇದರಲ್ಲಿ ಚಂದ್ರಗುಪ್ತ ಮತ್ತು ಚಾಣಕ್ಯರ ಮೂಲಕ ದೀನದಯಾಳರು ಪರಾಕ್ರಮ ಹಾಗೂ ರಣನೀತಿಯ ಕೌಶಲಗಳಿಂದ ಕೂಡಿದ ಸ್ವಾತಂತ್ರ್ಯ ಪ್ರಯತ್ನಗಳೆಡೆ ಕಿಶೋರಹೃದಯಗಳನ್ನು ಪ್ರವೃತ್ತಗೊಳಿಸುವ ಪ್ರಯತ್ನ ಮಾಡಿದರು. ಪುಸ್ತಕವನ್ನು ವೈಚಾರಿಕ ಸಂಗತಿಗಳಿಂದ ತುಂಬದೇ ಮಕ್ಕಳ ಮನವನ್ನು ತಟ್ಟುವಂತೆ ಪ್ರಖರ ಭಾವನೆಗಳನ್ನು ಲಾಲಿತ್ಯಪೂರ್ಣ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
‘ಸಮ್ರಾಟ್ ಚಂದ್ರಗುಪ್ತ’ ಪುಸ್ತಕದ ಯಶಸ್ಸನ್ನು ಕಂಡು ಇಂತಹದೇ ರೀತಿಯ ಪುಸ್ತಕವನ್ನು ತರುಣರಿಗೂ ಬರೆಯಬೇಕೆಂದು ಸಂಘದ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಹಿನ್ನೆಲೆಯಲ್ಲಿ ರೂಪುಗೊಂಡಿದ್ದೇ ಎರಡನೇ ಕಾದಂಬರಿಯಾದ ‘ಜಗದ್ಗುರು ಶಂಕರಾಚಾರ್ಯ’. ಚಾರಿತ್ರಿಕ ಘಟನೆ ವಿಚಾರಗಳನ್ನು ಹೊಸ ಸನ್ನಿವೇಶಗಳಿಗೆ ಒಪ್ಪುವಂತೆ ಭಾವಪೂರಿತವಾಗಿ ಮರುನಿರ್ಮಿಸಿದ್ದಾರೆ. ‘ಯಾರು ತನ್ನ ಸಮಾಜದ ಜನರನ್ನು ತನ್ನವರೆಂದು ಭಾವಿಸಲಾರನೋ, ಯಾರ ಹೃದಯದಲ್ಲಿ ತನ್ನ ಜನರ ಬಗ್ಗೆ ಪ್ರೀತಿಯಿಲ್ಲವೋ, ಅಕ್ಕರೆಯಿಲ್ಲವೋ ಅವರು ನೀಡಿದ ಅನ್ನ ತಿಂದಲ್ಲಿ ಧರ್ಮದ ಬಗ್ಗೆ ಒಲವು ಮೂಡುವುದೇ? ನಿಮ್ಮ ನೆರೆಹೊರೆಯಲ್ಲಿ ಇಷ್ಟೊಂದು ನಿರ್ಗತಿಕ ಕುಟುಂಬದವರಿರುವಾಗ ನೀವು ಸ್ವಂತ ಸುಖ ಹಾಗೂ ವೈಭವದಿಂದ ಮೆರೆಯುತ್ತಿದ್ದು, ನಿಮ್ಮನ್ನು ಸಮಾಜಸೇವಕನೆಂದು ಹೇಳಿಕೊಳ್ಳುವುದು, ಧರ್ಮವನ್ನು ಮೆರೆಸುತ್ತೇನೆಂದು ಹೇಳುವುದು ಎಂತಹ ವಿಡಂಬನೆ!’ ಎಂದು ಹೇಳಿ ಯುವಸಂನ್ಯಾಸಿ ಶಂಕರ ಸಾಹುಕಾರನಿಂದ ಭಿಕ್ಷೆಯನ್ನು ನಿರಾಕರಿಸುತ್ತಾನೆ. ಹೀಗೆ ಇನ್ನೂ ಹಲವಾರು ಸನ್ನಿವೇಶಗಳ ಮೂಲಕ ಸಮಾಜಮುಖಿ ಜೀವನದ ಆದರ್ಶಗಳನ್ನು, ಧರ್ಮರಕ್ಷಣೆಯ ಅಗತ್ಯತೆಯನ್ನು ಯುವಹೃದಯಗಳಿಗೆ ಮನಗಾಣಿಸಿದರು.
ಈ ಕಾದಂಬರಿಯಲ್ಲಿ ಬರುವ ಪ್ರಕೃತಿವರ್ಣನೆಗಳು ಸಹ ಅತ್ಯಂತ ಜೀವಂತಿಕೆಯಿಂದ ಕೂಡಿದೆ. ಬುದ್ಧ, ಬೌದ್ಧಮತ, ವೈದಿಕತೆ, ಸಮಾಜ, ರಾಷ್ಟ್ರ ಹೀಗೆ ವಿಭಿನ್ನ ಆಯಾಮಗಳ ಚರ್ಚೆಗಳು ಈ ಕಾದಂಬರಿಯಲ್ಲಿ ಹಾಸುಹೊಕ್ಕಾಗಿವೆ. ಒಟ್ಟಿನಲ್ಲಿ ಐತಿಹಾಸಿಕ ಹಿನ್ನೆಲೆಯಲ್ಲಿ ವರ್ತಮಾನದ ವಾತಾವರಣವನ್ನು ಕೂಡಿಸಿ ಧ್ಯೇಯವಾದಿಗಳನ್ನು ನಿರ್ಮಿಸುವ ಉದಾತ್ತ ಪ್ರಯತ್ನಕ್ಕೆ ಸಾಕ್ಷಿ ಈ ಕೃತಿ.
ಬಹುಶಃ ಸಾಹಿತ್ಯಕ್ಷೇತ್ರದಲ್ಲಿ ದೀನದಯಾಳರು ತಮ್ಮ ಕೃಷಿಯನ್ನು ಮುಂದುವರಿಸಿದ್ದರೆ ನಮ್ಮ ದೇಶವು ಮಹೋನ್ನತ ಸಾಹಿತಿಯನ್ನು ಪಡೆಯುತ್ತಿತ್ತೇನೋ. ಆದರೆ ಇವೆರಡು ಕಾದಂಬರಿಗಳ ನಂತರ ದೀನದಯಾಳರ ಲೇಖನಿ ವಿಚಾರಪ್ರಧಾನ ಬರವಣಿಗೆಯತ್ತ ಹೊರಳಿತು. ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ದಾರ್ಶನಿಕ ಹೀಗೆ ಇನ್ನಿತರ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಿತಕ್ಕೆ ಪೂರಕವಾಗುವಂತಹ ನೂರಾರು ಲೇಖನಗಳು ಬೆಳಕು ಕಂಡವು.
ಪತ್ರಿಕಾ ಕ್ಷೇತ್ರದಲ್ಲಿ
೧೯೪೨ರಲ್ಲಿ ಸಂಘದ ಪ್ರಚಾರಕರಾಗಿ ಹೊರಟ ದೀನದಯಾಳರ ವಿಚಾರಶಕ್ತಿಯನ್ನು ಸಂಘಟನೆಯು ಸಮರ್ಥವಾಗಿಯೇ ಬಳಸಿಕೊಂಡಿತು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಂಘದ ಅಪೇಕ್ಷೆಯಂತೆ ಅವರು ‘ಪಾಂಚಜನ್ಯ’ ಸಾಪ್ತಾಹಿಕ ಮತ್ತು ‘ಸ್ವದೇಶ’ ದಿನಪತ್ರಿಕೆಗಳ ಪ್ರಕಟಣೆಯ ಹೊಣೆ ಹೊತ್ತರು. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳ ವಿದ್ಯಮಾನಗಳ ಒಳಸುಳಿಗಳನ್ನು ರಾಷ್ಟ್ರೀಯದೃಷ್ಟಿಯಿಂದ ಬಿಡಿಸಿಡುವ ಬರವಣಿಗೆಗಳನ್ನು ಪ್ರಕಟಿಸಿದರು. ಪತ್ರಿಕಾ ವೃತ್ತಿಯಲ್ಲಿದ್ದಾಗ ಅನೇಕ ಬಾರಿ ಸಂಪಾದಕನಾಗಿ ಮಾತ್ರವಲ್ಲದೇ ಸುದ್ದಿಗಾರನಾಗಿಯೂ ಬರೆಯುತ್ತಿದ್ದರು. ತೋಳು ಮಡಚಿ ಬೈಂಡರ್ ಆಗಿಯೂ, ಕಂಪೋಸಿಟರ್ ಮತ್ತು ವಿತರಕನಾಗಿಯೂ ಸಹ ಕೆಲಸ ಮಾಡಿದ್ದಿದೆ. ಮುದ್ರಣಯಂತ್ರದ ಮುಂದೆಯೂ ನಿಂತು ಮೈಯನ್ನು ಮಸಿ ಮಾಡಿಕೊಂಡದ್ದಿದೆ. ಒಟ್ಟಿನಲ್ಲಿ ಯಾವುದೇ ಕಾರ್ಯವಿರಲಿ ಅವರ ಸಮರ್ಪಣಭಾವ ಎದ್ದುಕಾಣುತ್ತಿತ್ತು.
‘ಕೇವಲ ಭೌಗೋಳಿಕ ಏಕತೆಯೊಂದೇ ರಾಷ್ಟ್ರನಿರ್ಮಾಣಕ್ಕೆ ಸಾಲದು. ಒಂದು ದೇಶದಲ್ಲಿ ವಾಸಿಸುವ ಜನರನ್ನು ಒಂದು ಸಂಸ್ಕೃತಿಯ ಮೂಲಕ್ಕೆ ತಂದಲ್ಲಿ ಮಾತ್ರ ಅವರಲ್ಲಿ ಏಕತೆಯ ಭಾವ ಸ್ಫುರಿಸುತ್ತದೆ. ಹೀಗಿದ್ದಾಗ ಅನೇಕ ರಾಜ್ಯಗಳಿದ್ದರೂ ಮೂಲಭೂತವಾಗಿ ರಾಷ್ಟ್ರೀಯತೆಯು ಅಸ್ತಿತ್ವದಲ್ಲಿರುತ್ತದೆ. ವಿದೇಶೀಯರು ಈ ಏಕತ್ವಭಾವವನ್ನು ಛಿದ್ರಗೊಳಿಸಿ ಭಿನ್ನ ಭಿನ್ನ ಸಂಸ್ಕೃತಿಗಳಿಂದಲೇ ಈ ರಾಷ್ಟ್ರ ರೂಪುಗೊಂಡಿದೆಯೆಂದು ತಿಳಿಸಲೆತ್ನಿಸಿದರು.’ ಹೀಗೆ ರಾಷ್ಟ್ರನಿರ್ಮಾಣದ ಮಾರ್ಗಗಳನ್ನು ತಲಸ್ಪರ್ಶಿಯಾಗಿ ವಿಮರ್ಶಿಸುತ್ತಾ ಭೌಗೋಳಿಕ ಅಥವಾ ಪ್ರಾದೇಶಿಕ ರಾಷ್ಟ್ರವಾದವನ್ನೂ ಮೀರಿ ಸಾಂಸ್ಕೃತಿಕ ಪುನರುತ್ಥಾನದ ಕಲ್ಪನೆಯನ್ನು ಮನಗಾಣಿಸುವ ಅನೇಕ ಪ್ರಯತ್ನಗಳು ಅವರ ಲೇಖನಗಳಲ್ಲಿವೆ. ಇದೇ ಹಿನ್ನೆಲೆಯಲ್ಲಿಯೇ ಭಾರತೀಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಉಲ್ಲೇಖಿಸುತ್ತಾ ‘ಹಿಂದೂ ಸಮಾಜಕ್ಕೆ ಸೇರಿದ ನಮ್ಮದೇ ಅಂಗಗಳು’ ಎಂಬ ಶಬ್ದಪುಂಜವನ್ನು ಬಳಸಿದ್ದಾರೆ. ಇವರನ್ನು ಭಾರತೀಯ ಜನಜೀವನದ ಅಂಗವೆಂದು ಸ್ವೀಕರಿಸುವುದೇ ಕೋಮುವಾದಕ್ಕೆ ಪರ್ಯಾಯ ಎಂಬ ಚಿಂತನೆಯನ್ನಿಲ್ಲಿ ಕಾಣಬಹುದು.
ದೀನದಯಾಳರ ಪ್ರಯತ್ನದಿಂದ ಮಾಸಪತ್ರಿಕೆಯಾಗಿ ‘ರಾಷ್ಟ್ರಧರ್ಮ’ ೧೯೪೫ರಲ್ಲಿ ಹೊರಬರಲಾರಂಭಿಸಿತು. ಆಗ ನಮ್ಮ ಆಳರಸರಾಗಿದ್ದ ಆಂಗ್ಲರು ತಮ್ಮ ಕುಟಿಲತೆಯ ಮೂಲಕ ಸ್ವಾತಂತ್ರ್ಯ ಚಳವಳಿಯನ್ನು ಅಧಿಕಾರಲೋಲುಪತೆಯ ಅಭಿಯಾನವನ್ನಾಗಿ ಬದಲಾಯಿಸಿದ್ದರು. ದೇಶ ತುಂಡಾದರೂ ಸರಿ ಅಧಿಕಾರ ಬೇಕೆಂಬ ಬಯಕೆ ನಾಯಕವರ್ಗದಲ್ಲಿ ಮೇಲೆದ್ದಾಗ, ಅಲ್ಲಲ್ಲಿ ಆರಂಭಗೊಂಡಿದ್ದ ರಕ್ತಪಾತಗಳಿಂದ ಹಿಂದೂ ಸಮಾಜ ದಿಕ್ಕುತೋಚದಿದ್ದಾಗ ಮಾರ್ಗಸೂಚಕ ಲೇಖನಗಳನ್ನು ದೀನದಯಾಳರು ಪ್ರಕಟಿಸಿದರು. ‘ಅಖಂಡ ಭಾರತ, ದೇಶದ ಭೌಗೋಳಿಕ ಏಕತೆಯ ಪ್ರತೀಕವಾಗಿರುವುದಲ್ಲದೆ, ಜೀವನದ ಬಗೆಗಿನ ಭಾರತೀಯ ದೃಷ್ಟಿಕೋನದ ಪ್ರತೀಕವಾಗಿಯೂ ಇದೆ. ಇದು ವಿವಿಧತೆಯಲ್ಲಿ ಅಡಗಿರುವ ಏಕತೆಯನ್ನು ತೋರಿಸಿಕೊಡುತ್ತದೆ. ಹೀಗಾಗಿ ಅಖಂಡ ಭಾರತವೆಂದರೆ ಅದು ನಮ್ಮ ಪಾಲಿಗೆ ಯಾವುದೇ ರಾಜನೈತಿಕ ಘೋಷಣೆಯಲ್ಲ, ಅದು ನಮ್ಮ ಸಂಪೂರ್ಣ ಜೀವನದರ್ಶನದ ಮೂಲಾಧಾರವೇ ಆಗಿದೆ.’ ಈ ರೀತಿಯ ಸಂದೇಶಗಳನ್ನು ಸಾರುತ್ತಾ ಭಾರತದ ಅಖಂಡತೆಯ ಅಗತ್ಯತೆಯನ್ನು ಮನಗಾಣಿಸುವ ಅಧ್ಯಯನ ಪೂರ್ಣ ಲೇಖನಗಳು ಆ ಸಮಯದಲ್ಲಿ ಬೆಳಕು ಕಂಡವು.
‘ದೀನದಯಾಳರು ತಮ್ಮ ಪರಿಶ್ರಮ, ಬುದ್ಧಿ ಮತ್ತು ಅಧ್ಯಯನದಿಂದ ಪದವಿಯನ್ನು ಗಳಿಸಿದರು. ಅದರೊಂದಿಗೇ, ಎಷ್ಟು ಬೇರೆ ವಿಚಾರಗಳ ಬಗ್ಗೆ ಅಧ್ಯಯನ ಮಾಡಿದ್ದರೆಂದರೆ ಆಶ್ಚರ್ಯವಾಗುತ್ತದೆ – ಈ ಪುಟ್ಟ ತಲೆಯಲ್ಲಿ ಇಷ್ಟೊಂದು ವಿಚಾರ ತುಂಬಿಕೊಂಡಿದ್ದಾದರೂ ಹೇಗೆ ಎಂದು!’ ಇದು ದೀನದಯಾಳರ ಅಧ್ಯಯನಪರತೆ ಕುರಿತು ಶ್ರೀಗುರೂಜಿಯವರ ಹೇಳಿಕೆ.
ಆರ್ಥಿಕ ತಜ್ಞ
ವಿಶ್ವವಿದ್ಯಾಲಯದಲ್ಲಿ ಪಂಡಿತ್ಜೀಯವರ ಮುಖ್ಯ ಅಧ್ಯಯನದ ವಿಷಯ ಗಣಿತಶಾಸ್ತ್ರ. ಸಂಸ್ಕೃತವಂತೂ ಅವರಿಗೆ ಅತ್ಯಂತ ಪ್ರಿಯವಾದ ವಿಷಯವಾಗಿತ್ತು. ಆದರೆ ಸಾರ್ವಜನಿಕ ಜೀವನದಲ್ಲಿ ಅರ್ಥಶಾಸ್ತ್ರಕ್ಕಿರುವ ಪ್ರಾಮುಖ್ಯವನ್ನು ಅರಿತು ಆಳವಾಗಿ ಅದನ್ನೂ ಅಧ್ಯಯನ ಮಾಡಿದರು. ಅರ್ಥಶಾಸ್ತ್ರದ ಸಿದ್ಧಾಂತಗಳಲ್ಲಿ ಪರಿಣತಿ ಗಳಿಸಿದರು. ಅವರನ್ನು ಒಬ್ಬ ಆರ್ಥಿಕ ತಜ್ಞರೆಂದೇ ಗುರುತಿಸಬಹುದಾಗಿತ್ತು. ದೇಶದಲ್ಲಿನ ಹಣದುಬ್ಬರದಿಂದಾಗಿ ಗೊಂದಲಮಯವಾಗಿರುವ ಗ್ರಾಹಕನ ಪರಿಸ್ಥಿತಿಯ ಬಗ್ಗೆ ಮತ್ತು ಆಗಿನ ಕೇಂದ್ರಸರ್ಕಾರದ ಆರ್ಥಿಕ ಕ್ರಮಗಳ ವೈಫಲ್ಯಗಳ ಕುರಿತ ವಿಶ್ಲೇಷಣೆಗಳನ್ನು ದೀನದಯಾಳರು ‘ರೂಪಾಯಿ ಅಪಮೌಲ್ಯ Devaluation – A great fall)’’ ಎಂಬ ಪುಸ್ತಕದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಅರ್ಥಶಾಸ್ತ್ರಕ್ಕೆ ದೀನದಯಾಳರ ಮತ್ತೊಂದು ಮಹಾನ್ ಕೊಡುಗೆ ಎಂದರೆ ಭಾರತದ ಮೊದಲ ಎರಡು ಪಂಚವಾರ್ಷಿಕ ಯೋಜನೆಗಳ ತಲಸ್ಪರ್ಶಿ ವಿಮರ್ಶೆಗಳನ್ನೊಳಗೊಂಡ ‘ಎರಡು ಯೋಜನೆಗಳು (ಖಿತಿo Pಟಚಿಟಿs)’ ಎಂಬ ಪುಸ್ತಕ. ೧೯೫೮ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ನೆಹರೂರವರ ಮಹತ್ತ್ವಾಕಾಂಕ್ಷೆಯ ಈ ಯೋಜನೆಗಳು ಹೇಗೆ ಪರಿಸ್ಥಿತಿಯ ಸರಿಯಾದ ವಿಶ್ಲೇಷಣೆಯನ್ನು ಮಾಡದೆ, ಸಮಗ್ರವಾದ ದೃಷ್ಟಿಕೋನವನ್ನು ಇಟ್ಟುಕೊಳ್ಳದೆ ಹಾಗೂ ನೀತಿನಿಯಮಗಳನ್ನು ಸರಿಯಾಗಿ ರೂಪಿಸಿಕೊಳ್ಳದೆ ಇಡೀ ದೇಶವನ್ನು ಸಂಕಷ್ಟಗಳ ಸರಮಾಲೆಗಳಲ್ಲಿ ಸಿಲುಕಿಸುತ್ತಿದೆ ಎಂಬ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.
ಅಭಿವೃದ್ಧಿಯ ಕಲ್ಪನೆಯ ಮಟ್ಟದಿಂದ ಪ್ರತ್ಯಕ್ಷ ಕಾರ್ಯದ ಪ್ರಾರಂಭದ ಹಂತದವರೆಗೆ ಈ ಯೋಜನೆಗಳು ಸಾಧನ ಸಂಪತ್ತುಗಳ ಊಹೆ, ಅಂದಾಜುಗಳ ಮೇಲೆಯೇ ಕಟ್ಟಲ್ಪಟ್ಟಿದ್ದು, ಅದಕ್ಕೂ ವಾಸ್ತವತೆಗೂ ಯಾವುದೇ ಸಂಬಂಧವಿಲ್ಲ. ಒಟ್ಟಿನಲ್ಲಿ ಪಂಚವಾರ್ಷಿಕ ಯೋಜನೆಯ ಇಡೀ ಕಸರತ್ತು ಆಸೆಯ ಬಿಸಿಲ್ಗುದುರೆಯ ಮೇಲಿನ ಸವಾರಿ, ಎಂದು ಗೊಂದಲರಹಿತ ಶಬ್ದಗಳಲ್ಲಿ ವಿಮರ್ಶಿಸಿದ್ದಾರೆ.
ಭಾರತದ ಆರ್ಥಿಕ ವ್ಯವಸ್ಥೆಯ ಬಗ್ಗೆ ಬರೆದಿರುವ ಕೃತಿ ‘ಭಾರತೀಯ ಅರ್ಥನೀತಿ’. ಮನುಷ್ಯ-ಯಂತ್ರ, ಔದ್ಯೋಗಿಕ ವಿಚಾರಗಳು, ಹಣಕಾಸಿನ ವ್ಯವಸ್ಥೆ, ಕೃಷಿ ವ್ಯವಸ್ಥೆ, ಭಾರತೀಯ ಸಂಸ್ಕೃತಿಯಲ್ಲಿ ಅರ್ಥವ್ಯವಸ್ಥೆ ಈ ವಿಚಾರಗಳ ಕುರಿತು ಇಲ್ಲಿ ಪರಾಮರ್ಶಿಸಿದ್ದಾರೆ.
ಅಧಿಕೃತ ಅಂಕಿ ಅಂಶಗಳು ಮತ್ತು ಸರ್ಕಾರದ ನೀತಿನಿಯಮಗಳನ್ನು ಸಮಗ್ರವಾಗಿ ವಿವೇಚನೆಗೊಳಪಡಿಸಿರುವ ಈ ಕೃತಿಗಳು ಇಂದಿಗೂ ಆರ್ಥಿಕ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಿ ಕೃತಿಗಳೆನಿಸಿಕೊಂಡಿವೆ.
ರಾಜಕೀಯ ದಿನಚರಿ
ಟೀಕೆ, ಆರೋಪ, ಪ್ರತ್ಯಾರೋಪ, ನಿಂದೆಗಳೇ ರಾಜಕೀಯ ವ್ಯಕ್ತಿಗಳ ಪ್ರಮುಖ ಚಾಳಿ ಎಂಬ ಸಾರ್ವತ್ರಿಕ ಭಾವನೆಗಳ ನಡುವೆಯೂ ವ್ಯಕ್ತಿಭಾವದಿಂದ ಮೇಲೆದ್ದು ರಾಷ್ಟ್ರಭಾವದಿಂದ ರಾಜಕೀಯ ಲೇಖನ ಕಾರ್ಯ, ಭಾಷಣಗಳನ್ನು ಮಾಡುತ್ತಿದ್ದವರು ಮತ್ತು ಶುದ್ಧ ಅಂತಃಕರಣದಿಂದ ವಿರೋಧಿಗಳೊಂದಿಗೂ ಒಡನಾಟ ಇಟ್ಟುಕೊಂಡಿದ್ದವರು ದೀನದಯಾಳರು.
ಜನಸಂಘದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾಗಲೂ ಸಹ `ಆರ್ಗನೈಸರ್’ ಪತ್ರಿಕೆಗೆ ನಿಯಮಿತವಾಗಿ ‘ಪೊಲಿಟಿಕಲ್ ಡೈರಿ’ ಎಂಬ ಅಂಕಣದಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಬರೆಯುತ್ತಿದ್ದರು. ದೀನದಯಾಳರು ವಿರೋಧಪಕ್ಷದ ಪ್ರಮುಖ ಮುಂದಾಳಾಗಿದ್ದರು. ಆಗಿನ ಸರ್ಕಾರದ, ಆಡಳಿತದ ದೋಷಗಳನ್ನು ಎತ್ತಿ ಖಂಡಿಸುವುದು ಸಹಜವೇ ಆಗಿತ್ತು. ಆದರೆ ಅವರ ಲೇಖನಗಳಲ್ಲಿ ಯಾವುದೇ ಕಟುತ್ವ ಇರುತ್ತಿರಲಿಲ್ಲ. ತೀವ್ರತರ ಭಾವನೆಗಳಿಂದ ಕೂಡಿದ ಶಬ್ದಗಳನ್ನು ಉಪಯೋಗಿಸಿದರೂ ಕೂಡ ವಿರೋಧಿ ಸಿದ್ಧಾಂತವಾದಿಗಳ ಮನಸ್ಸನ್ನು ಘಾಸಿಗೊಳಿಸದೆ ಪ್ರೇಮದಿಂದಲೇ ಖಂಡಿಸುತ್ತಿದ್ದರು. ಕೆಡುಕನ್ನು ದಾಖಲಿಸುವಾಗಲೂ ಅಪಶಬ್ದಗಳನ್ನು ಬಳಸುತ್ತಿರಲಿಲ್ಲ. ಸತ್ಯವಿಚಾರವನ್ನು ಹೇಳುವಾಗ ಇದು ನನ್ನ ಧರ್ಮವೇ ಹೊರತು ರಾಜಕೀಯ ಆಟವಲ್ಲ ಎಂಬ ಭಾವನೆ ಅವರಲ್ಲಿತ್ತು.
ದೀನದಯಾಳರ ಈ ಲೇಖನಗಳಲ್ಲಿ ರಾಜಕೀಯ ವಾದವಿವಾದಗಳಿವೆ. ಚುನಾವಣೆಯ ಫಲಿತಾಂಶಗಳ ವಿವೇಚನೆಗಳಿವೆ. ಬಜೆಟ್, ಬೆಲೆ ನಿಯಂತ್ರಣ, ಹಣದುಬ್ಬರ ಇತ್ಯಾದಿ ಆರ್ಥಿಕ ಚಿಂತನೆಗಳು; ವಿದೇಶಾಂಗ ನೀತಿ, ಭಾರತ ಚೀನಾ, ಪಾಕಿಸ್ತಾನ ಇತ್ಯಾದಿ ನೆರೆಹೊರೆ ಸಂಬಂಧಗಳ ಚರ್ಚೆಗಳಿವೆ. ಜನಸಾಮಾನ್ಯರನ್ನು ಚಿಂತನೆಗೆ ಹಚ್ಚುವ ಮತಾಧಿಕಾರದ ಬಳಕೆ, ಪ್ರಜಾಪ್ರಭುತ್ವ, ಅಭ್ಯರ್ಥಿ, ರಾಜಕೀಯ ಪಕ್ಷಗಳ ಸಿದ್ಧಾಂತ ಇವುಗಳ ವಿಮರ್ಶೆಯಿದೆ. ಭಾಷೆ, ಸಂಸ್ಕೃತಿ, ಬುಡಕಟ್ಟು ಜನರು, ಗೋವು ಹೀಗೆ ಸಾಂಸ್ಕೃತಿಕ ಆಯಾಮಗಳ ಬಗ್ಗೆಯೂ ಇವರ ಲೇಖನಿ ಚಿಂತನೆಗಳನ್ನು ಮೂಡಿಸಿದೆ.
‘ಪೊಲಿಟಿಕಲ್ ಡೈರಿ’ ಎಂಬ ಹೆಸರಿನಲ್ಲಿ ಪುಸ್ತಕವಾಗಿಯೇ ಹೊರಬಂದಿರುವ ಈ ಲೇಖನಸಂಗ್ರಹವು ಅಂದಿನ ದಿನಗಳ ಇತಿಹಾಸವನ್ನು ತಿಳಿಯಬೇಕೆನ್ನುವವರಿಗೆ ಅತ್ಯಂತ ಅಮೂಲ್ಯ ಆಕರಗಳೇ ಆಗಿವೆ. ಆ ಕಾಲಘಟ್ಟದ ನಿರ್ದಿಷ್ಟ ವ್ಯಕ್ತಿಗಳು ಹೇಗೆ ಜನಮಾನ್ಯರಾದರು, ನಿರ್ದಿಷ್ಟ ಘೋಷಣೆಗಳು ಹೇಗೆ ಜನಪ್ರಿಯ ಕಲ್ಪನೆಗಳಾಗಿ ಜನಮನವನ್ನು ಹೊಕ್ಕವು, ಆಗ ಕಾರ್ಯರೂಪದಲ್ಲಿದ್ದ ಕುಟಿಲ ರಾಜಕೀಯ ತಂತ್ರಗಳು ಇವೆಲ್ಲವನ್ನೂ ಸಂವೇದನಾಶೀಲ ರಾಜಕೀಯ ನೇತಾರನ ನುಡಿಗಳು ನಿರೂಪಿಸುತ್ತವೆ. ಕಾಂಗ್ರೆಸ್ನ ಪ್ರಮುಖ ಮುಂದಾಳು ಮತ್ತು ಕಾಶಿ ವಿದ್ಯಾಪೀಠದ ಕುಲಪತಿಗಳಾಗಿದ್ದ ಸಂಪೂರ್ಣಾನಂದರೇ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ದೀನದಯಾಳರ ವ್ಯಕ್ತಿತ್ವಕ್ಕಿದ್ದ ಗೌರವ ಮತ್ತು ವಿಚಾರಗಳ ಗಟ್ಟಿತನಕ್ಕೆ ಸಾಕ್ಷಿ.
ರಾಷ್ಟ್ರವಾದಿ ದೀನದಯಾಳ್
ಅಖಂಡ ಭಾರತದ ಪರಿಕಲ್ಪನೆಗೆ ಸಂಬಂಧಿಸಿದ ಐತಿಹಾಸಿಕ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳನ್ನು ಉಪಾಧ್ಯಾಯರು ‘ಅಖಂಡ ಭಾರತ ಏಕೆ?’ ಎಂಬ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ.
‘……ದೆಹಲಿಯಲ್ಲಿ ನಮ್ಮ ನಾಯಕರು ಹಣೆಯ ಮೇಲೆ ಕುಂಕುಮದ ತಿಲಕ ಇರಿಸಿಕೊಳ್ಳುತ್ತಿದ್ದರೆ, ಪಂಜಾಬಿನಲ್ಲಿ ಅಕ್ಕತಂಗಿಯರ ಬೈತಲೆಯ ಕುಂಕುಮ ಅಳಿಸಿ ಹೋಗುತ್ತಿತ್ತು. ಒಂದೆಡೆ ‘ವಂದೇ ಮಾತರಂ’ ಎಂದು ಜಯಘೋಷ ಮಾಡುತ್ತಿದ್ದರೆ ಮತ್ತೊಂದೆಡೆ ಆಶೀರ್ವದಿಸಲು ಬೇಕಾದ ತಾಯಿಯ ಕೈಗಳನ್ನೇ ಕತ್ತರಿಸಿ ಹಾಕಲಾಗುತ್ತಿತ್ತು….. ಯಾವ ರಾವಿ ನದಿಯ ದಡದಲ್ಲಿ ನಿಂತು ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ಮಾಡಲಾಗಿತ್ತೋ, ಅದನ್ನೇ ನಮ್ಮಿಂದ ಕಸಿದುಕೊಳ್ಳಲಾಯಿತು.’
ಹೀಗೆ ಮನಸ್ಸಿನ ಭಾವವನ್ನು ಜಾಗೃತಗೊಳಿಸುವ, ಹೃದಯತಟ್ಟುವ, ದೇಶಪ್ರೇಮದ ಕಿಚ್ಚು ಹಬ್ಬಿಸುವ ಬರೆಹಗಳನ್ನು ಈ ಕೃತಿಯಲ್ಲಿ ಕಾಣಬಹುದು.
ಸ್ವರಾಜ್ಯದ ಕಲ್ಪನೆ, ಪ್ರಜಾಪ್ರಭುತ್ವ ಮತ್ತು ಸಮಾಜವಾದ, ಸ್ವಾತಂತ್ರೋತ್ತರ ಭಾರತೀಯ ಚಿಂತನೆ, ರಾಜನೀತಿ ಮತ್ತು ಸಂಸ್ಕೃತಿ, ಪ್ರಜಾತಂತ್ರ ಮತ್ತು ಸಮಾಜವಾದದಲ್ಲಿನ ಸಮನ್ವಯ ಮತ್ತು ಸಂಬಂಧಗಳನ್ನು ಕುರಿತು ಹಾಗೂ ವಿದೇಶೀ ಪ್ರಭಾವದಿಂದ ಮುಕ್ತಗೊಂಡ ಹೊಸ ಆರೋಗ್ಯಪೂರ್ಣ ಮತ್ತು ಚೈತನ್ಯಮಯೀ ರಾಷ್ಟ್ರನಿರ್ಮಾಣದ ಆವಶ್ಯಕತೆಯನ್ನು ಕುರಿತು ‘ಸ್ವತಂತ್ರತಾ ಕೀ ಸಾಧನಾ ಔರ್ ಸಿದ್ಧಿ’ ಎಂಬ ಕೃತಿಯಲ್ಲಿ ದೀನದಯಾಳರು ಚರ್ಚಿಸಿದ್ದಾರೆ.
ರಾಷ್ಟ್ರ ಮತ್ತು ರಾಜ್ಯ, ರಾಷ್ಟ್ರದ ಆತ್ಮದ ಸ್ವರೂಪ, ಜಾತ್ಯತೀತತೆಯ ಅರ್ಥ, ವ್ಯಕ್ತಿ ಮತ್ತು ಸಮಾಜದ ಸಂಬಂಧ, ವಿಕೇಂದ್ರೀಕರಣ, ನಮ್ಮ ರಾಷ್ಟಧ್ವಜ, ರಾಷ್ಟ್ರ ಪ್ರಕೃತಿ ಮತ್ತು ವಿಕೃತಿ, ರಾಷ್ಟ್ರವಾದ, ಸ್ವದೇಶೀ ಮತ್ತು ವಿದೇಶೀ, ಗುರುವಿನ ಕಲ್ಪನೆ ಇತ್ಯಾದಿ ವಿಚಾರಗಳನ್ನು ವಿಮರ್ಶಾಪೂರ್ವಕವಾಗಿ ಓದುಗರಿಗೆ ದೀನದಯಾಳರು ‘ರಾಷ್ಟ್ರಜೀವನ್ ಕೀ ದಿಶಾ’ ಎಂಬ ಪುಸ್ತಕದಲ್ಲಿ ತಿಳಿಸಿದ್ದಾರೆ.
ಸ್ವತಂತ್ರ ಭಾರತದ ರಾಜಕೀಯ ಮೌಲಿಕತೆ, ಭಾಷಾ ಸಮಸ್ಯೆ, ಭಾರತೀಯ ಸಂವಿಧಾನ, ಹಿಂದುತ್ವ, ಸಮಾಜವಾದ ಮತ್ತು ಪ್ರಜಾಪ್ರಭುತ್ವ ಇವೆಲ್ಲವುಗಳ ಬಗ್ಗೆ ಬೆಳಕುಚೆಲ್ಲುವ ಲೇಖನಗಳನ್ನು ‘ರಾಷ್ಟಜೀವನ್ ಕೀ ಸಮಸ್ಯಾಯೇಂ’ ಎಂಬ ಕೃತಿಯಲ್ಲಿ ಸಂಗ್ರಹಿಸಿ ಪ್ರಕಟಿಸಲಾಗಿದೆ.
ಭಾರತ ವಿಭಜನೆಗೊಂಡ ನಂತರ ಉಂಟಾದ ದುಷ್ಪರಿಣಾಮಗಳನ್ನು ವಿವರವಾಗಿ ‘ಅಖಂಡ್ ಭಾರತ್ ಔರ್ ಮುಸ್ಲಿಂ ಸಮಸ್ಯಾಯೇಂ’ ಎಂಬ ಕೃತಿಯಲ್ಲಿ ದೀನದಯಾಳರು ಚರ್ಚಿಸಿದ್ದಾರೆ.
ಹೀಗೆ ರಾಷ್ಟಜೀವನದ ಮೇಲೆ ಪ್ರಭಾವ ಬೀರುವ ಎಲ್ಲ ವಿಷಯಗಳ ವಿಮರ್ಶೆಗಳು ದೀನದಯಾಳರ ಲೇಖನಗಳ ಮೂಲಕ ಅಕ್ಷರರೂಪವನ್ನು ಪಡೆದುಕೊಂಡಿವೆ.
ಸಂಸ್ಕೃತಿ ಚಿಂತಕ ದೀನದಯಾಳ್
‘ಮನುಷ್ಯರು ಅವರವರ ಪ್ರಕೃತಿಗೆ ತಕ್ಕಂತೆ ವಿವಿಧ ವಿಷಯಗಳಲ್ಲಿ ಸುಖವನ್ನು ಕಾಣುತ್ತಾರೆ. ಬುದ್ಧಿ, ಮನಸ್ಸು, ಶರೀರ – ಈ ಮೂರರ ಪಾತ್ರವೂ ಇದರಲ್ಲಿದೆ. ಪರಿಶುದ್ಧ ಬುದ್ಧಿಯಿಂದ ಗ್ರಹಣಮಾಡಿದ ಕೆಲಸ ಸಾತ್ತ್ವಿಕವಾದುದು. ಬುದ್ಧಿಗ್ರಾಹ್ಯವಲ್ಲದೆ ಕೇವಲ ಮನಸ್ಸಿಗೆ ಹಿತವೆಂದು ಮಾಡಿದುದು ರಾಜಸಿಕ ಕರ್ಮ. ಇವೆರಡೂ ಇಲ್ಲದೆ ಕೇವಲ ಪ್ರಮಾದದಿಂದ, ಮೋಹ ಅಜ್ಞಾನ ಅಹಂಕಾರಗಳಿಂದ ಮಾಡುವ ಕೆಲಸ ತಾಮಸಿಕವಾದದ್ದು.’ ಹೀಗೆ ಮನುಷ್ಯನ ಮೂಲಭೂತ ಸ್ವಭಾವಗಳು, ಗುಣಗಳು, ಆತನ ವಿಕಾಸ, ಪ್ರಕೃತಿಯೊಂದಿಗೆ ಅವನ ಸಾಮರಸ್ಯ, ಸಮಾಜ ಮತ್ತು ಸಂಸ್ಕೃತಿಯ ಪ್ರಭಾವ ಹೀಗೆ ಅನೇಕ ವಿಷಯಗಳ ಕುರಿತು ‘ನಮ್ಮ ಸಂಸ್ಕೃತಿಯ ಒಳ ನೋಟ’ ಎಂಬ ಲೇಖನದಲ್ಲಿ ದೀನದಯಾಳರು ಚರ್ಚಿಸಿದ್ದಾರೆ. ‘ವಿಚಾರ ರಶ್ಮಿ’ಯೆಂಬ ಪುಸ್ತಕದಲ್ಲಿ ಇಂತಹ ೧೪ ಲೇಖನಗಳು ಅಡಕವಾಗಿವೆ.
‘ಕಾಗೆ ಕೋಗಿಲೆಯ ಮರಿಯನ್ನು ತನ್ನದೆಂದು ಭ್ರಮಿಸಿ ಸಲಹುತ್ತದೆ. ಆದರೆ ಆ ಮರಿ ಸ್ವಲ್ಪ ಬಲಿತೊಡನೆ ಅಲ್ಲಿಂದ ಹಾರಿ ಹೋಗುತ್ತದೆ. ರಾಷ್ಟ್ರೀಯತೆಯ ಬಗ್ಗೆಯೂ ಇದು ಸತ್ಯ. ಅರಾಷ್ಟ್ರೀಯ ವಿಷಯಗಳ ಪೋಷಣೆಯಿಂದ ರಾಷ್ಟ್ರೀಯತೆ ಬೆಳೆದು ನಿಲ್ಲಲಾರದು.’ ಇಂತಹ ಜನಸಾಮಾನ್ಯರ ಅನುಭವದಲ್ಲಿ ದಾಖಲಾಗಿರುವ ಅಂಶಗಳನ್ನು ಉದಾಹರಿಸುವುದರ ಮೂಲಕ ಅತ್ಯಂತ ಸರಳವಾಗಿ ಆಪ್ತವೆನಿಸುವ ಧಾಟಿಯಲ್ಲಿ ಗಂಭೀರ ವಿಚಾರಗಳನ್ನು ದೀನದಯಾಳರು ತಮ್ಮ ‘ರಾಷ್ಟ್ರೀಯತೆಯ ಮೂಲಮಂತ್ರ’ ಲೇಖನದಲ್ಲಿ ವಿವರಿಸುತ್ತಾರೆ.
ವ್ಯಕ್ತಿಸುಖದ ರಹಸ್ಯ, ಚಿತಿ, ಸಮಾಜದ ನೈಜರೂಪ, ಲೋಕಹಿತದ ರಾಜಮಾರ್ಗ ಇತ್ಯಾದಿ ಲೇಖನಗಳಲ್ಲಿ ನಮ್ಮ ಪಾರಂಪರಿಕ ವಿಚಾರ, ಸಂಸ್ಕೃತಿ, ಜೀವನಮೌಲ್ಯಗಳ ಆಧಾರದ ಮೇಲೆ ಪ್ರತಿ ವ್ಯಕ್ತಿಯೂ ನಡೆಸಬೇಕಾದ ರಾಷ್ಟ್ರೀಯಜೀವನದ ಆವಶ್ಯಕತೆ, ಅನಿವಾರ್ಯತೆಗಳನ್ನು ದೀನದಯಾಳರು ಸಮರ್ಥವಾಗಿ ಮನಗಾಣಿಸುತ್ತಾರೆ.
ದೀನದಯಾಳರು ಬಹಳ ಸರಳ ಮುಗ್ಧ ವ್ಯಕ್ತಿ ಎಂದು ಜನರು ಹೇಳುತ್ತಾರೆ. ಆದರೆ ನಾನು ಹಾಗೆಂದು ಭಾವಿಸುವುದಿಲ್ಲ. ಅವರನ್ನು ಮೋಸಪಡಿಸಲು ಸಾಧ್ಯವಿರಲಿಲ್ಲ. ಅವರನ್ನು ಮಾತುಗಳಲ್ಲಿ ಸಿಲುಕಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಖಂಡಿತವಾಗಿಯೂ ಒಬ್ಬ ನೇರ ನುಡಿಯ ಸರಳ ವ್ಯಕ್ತಿಯಾಗಿದ್ದರೂ ತಾವು ಹೇಳಬಯಸುತ್ತಿದ್ದುದನ್ನು ವಿನಯದಿಂದ ಆದರೆ ಸ್ಪಷ್ಟವಾದ ಮಾತುಗಳಲ್ಲಿ ಹೇಳಿಬಿಡುತ್ತಿದ್ದರು
– ಭಾರತದ ಆಗಿನ ಕೇಂದ್ರಸರ್ಕಾರದ ರಕ್ಷಣಾ ಮಂತ್ರಿ ಯಶವಂತರಾವ್ ಚೌಹಾಣ್
ಏಕಾತ್ಮಮಾನವತೆ
ದೀನದಯಾಳರು ಸರಳತೆಯ ಮೂರ್ತಿಯಾಗಿದ್ದಂತೆಯೇ, ಹೃದಯಕಾರುಣ್ಯ ಹಾಗೂ ಸೌಮ್ಯಸ್ವಭಾವವನ್ನು ಹೊಂದಿದ್ದರು. ವಿದ್ಯಾರ್ಥಿಭಾವ ಹೊಂದಿದ ನಿರಂತರ ಜಿಜ್ಞಾಸುಗಳಾಗಿದ್ದರು. ಓರ್ವ ರಾಜಕಾರಣಿ ಹಾಗೂ ಉತ್ತಮ ಸಂಘಟಕರಾಗಿದ್ದರು. ಅದಕ್ಕೂ ಹೆಚ್ಚಾಗಿ ಆಧುನಿಕ ದೃಷ್ಟಿಯನ್ನುಳ್ಳ ಮೌಲಿಕ ಚಿಂತಕರಾಗಿದ್ದರು. ಹೀಗೆ ವಿವಿಧ ಆಯಾಮಗಳ ವ್ಯಕ್ತಿತ್ವವನ್ನು ಹೊಂದಿದ್ದರೂ ವ್ಯಷ್ಟಿ, ಸಮಷ್ಟಿಗಳ ಸಮನ್ವಯದಲ್ಲಿ ನಂಬಿಕೆಯಿಟ್ಟ ಸಮಗ್ರತೆಯ ದೃಷ್ಟಿಯನ್ನು ಹೊಂದಿದ್ದರು.
ಸಂಸ್ಕೃತಿಯು ರಾಷ್ಟ್ರದ ಪ್ರಾಣ ಎಂಬುದು ಅವರ ನಂಬಿಕೆ. ನಮ್ಮ ಭಾರತೀಯ ಸಂಸ್ಕೃತಿಯ ತಳಹದಿಯೇ ಏಕಾತ್ಮತೆ. ದೇಹ, ಮನಸ್ಸು, ಬುದ್ಧಿ, ಆತ್ಮ – ಇವೆಲ್ಲವುಗಳ ಒಟ್ಟು ಮುನ್ನಡೆಯೇ ನಮ್ಮ ಆದರ್ಶ. ನಮ್ಮ ಸಂಸ್ಕೃತಿಯ ಮೌಲ್ಯಗಳಲ್ಲಿ ಪ್ರತಿಷ್ಠಾಪಿತವಾಗಿರುವ ಧರ್ಮ, ಪುರುಷಾರ್ಥಗಳ ಕಲ್ಪನೆಗಳು ಮನುಷ್ಯನನ್ನು ಆತನ ಸ್ವಹಿತಕೇಂದ್ರಿತ ಗುಣ, ಸ್ವಭಾವಗಳಿಂದ ಮೇಲೆತ್ತಿ ಸಕಲ ಜೀವಹಿತಸಾಧನೆಯ ಹಿನ್ನೆಲೆಯಲ್ಲಿ ಜೀವನವನ್ನು ರೂಪಿಸಿಕೊಳ್ಳಲು ಪ್ರೇರೇಪಿಸುತ್ತವೆ. ಈ ಎಳೆಯಲ್ಲಿ ಆಳವಾಗಿ ಚಿಂತಿಸಿ ದೀನದಯಾಳರು ‘ಏಕಾತ್ಮಮಾನವವಾದ’ ಅಥವಾ `ಏಕಾತ್ಮಮಾನವದರ್ಶನ’ವೆಂಬ ವಿಚಾರಧಾರೆಯನ್ನು ನೀಡಿದರು.
ಶ್ರೀ ಬದ್ರಿಶಾಹ್ ಟುಲಧಾರಿಯವರ ‘ದೈಶಿಕ ಶಾಸ’, ಲೋಕಮಾನ್ಯ ತಿಲಕರ ‘ಕರ್ಮಯೋಗ’ ಮುಂತಾದ ಅನೇಕ ಆಧುನಿಕ, ಪ್ರಾಚೀನ ಭಾರತೀಯ ತತ್ತ್ವದರ್ಶನಗ್ರಂಥಗಳಲ್ಲಿ ಅಡಕವಾಗಿದ್ದ ಅಮೂಲ್ಯ ಅಂಶಗಳನ್ನು ಹೆಕ್ಕಿ ತಮ್ಮ ಪ್ರಖರ ಚಿಂತನೆಯ ಮೂಸೆಯಲ್ಲಿ ಪುಟವಿಟ್ಟು ಈ ನವದರ್ಶನವನ್ನು ನೀಡಿದ್ದಾರೆ ದೀನದಯಾಳರು. ಇದನ್ನು ರಾಜಕೀಯಪಕ್ಷವಾದ ಭಾರತೀಯ ಜನಸಂಘವು ತನ್ನ ಮಾರ್ಗದರ್ಶೀ ಸಿದ್ಧಾಂತದ ರೂಪದಲ್ಲಿಯೇ ಸ್ವೀಕರಿಸಿತು.
ಪ್ರಾತಃಕಾಲದಿಂದ ರಾತ್ರಿಯವರೆಗೂ ಅವಿರತವಾಗಿ ವಿಶ್ರಾಂತಿಯಿಲ್ಲದೆ ಕೆಲಸಗಳಲ್ಲಿ ಮಗ್ನರಾಗಿದ್ದರೂ ಸಹ, ವಿಭಿನ್ನ ವಿಷಯಗಳ ಅಧ್ಯಯನ ಮಾಡುತ್ತಿದ್ದ ಅವರಲ್ಲಿ ಯಾವುದೋ ಪವಾಡ ಅಡಗಿರಬೇಕು. ವಿವಿಧ ವಿಷಯಗಳ ಬಗ್ಗೆ ಅವರಿಗೆ ಬರೆಯಲೂ ಸಾಧ್ಯವಿತ್ತು. ಜನರಿಗೆ ಅಪೂರ್ವವಾದ ವಿಚಾರಗಳನ್ನು ನೀಡುತ್ತಿದ್ದ ಅವರು ಒಬ್ಬ ಸಾಹಸಿ, ಬುದ್ಧಿವಂತ ಹಾಗೂ ಕರ್ತವ್ಯನಿಷ್ಠ ಪುರುಷರಾಗಿದ್ದರು
– ಶ್ರೀಗುರೂಜಿ
ವೈಚಾರಿಕ ನವಯುಗ
ರಾಷ್ಟ್ರಜೀವನದ ಹಿರಿಮೆಯನ್ನು ಕಂಡುಕೊಳ್ಳದೆ ಆಗಿನ ರಾಜಕೀಯ ನೇತೃತ್ವ ಪ್ರಮಾದಗಳ ಮೇಲೆ ಪ್ರಮಾದಗಳನ್ನೆಸಗುತ್ತಿದ್ದಾಗ, ದೇಶಭಕ್ತರು ವಿಘಟಿತ ಸಮಾಜಜೀವನವನ್ನು ಕಂಡು ಹಲುಬುತ್ತಿದ್ದಾಗ, ಜನಸಾಮಾನ್ಯರಲ್ಲಿಯೂ ನೈರಾಶ್ಯದ ಕಾರ್ಮೋಡಗಳು ಕವಿಯತೊಡಗಿದ್ದಾಗ ದೀನದಯಾಳರ ರೂಪದಲ್ಲಿದ್ದ ದಾರ್ಶನಿಕ ಹೊಸ ಬೆಳಕಿನ ಸೆಲೆಯೊಂದನ್ನು ಸೃಷ್ಟಿಸಿದರು. ವೈಚಾರಿಕ ಅಂಧಕಾರದ ಜಗತ್ತಿನಿಂದ ವ್ಯಕ್ತಿ, ಸಮಾಜ, ರಾಷ್ಟ್ರಗಳು ಪರಸ್ಪರ ಪೂರಕವಾಗಿ ಸಾಗಬೇಕಾದ ಮಾರ್ಗವನ್ನು ಬೆಳಗಿದರು ಎನ್ನುವುದು ಖಂಡಿತ ಅತಿಶಯೋಕ್ತಿಯಲ್ಲ.
ಬಹುಶಃ ಸಾಹಿತ್ಯಕ್ಷೇತ್ರದಲ್ಲಿ ದೀನದಯಾಳರು ತಮ್ಮ ಕೃಷಿಯನ್ನು ಮುಂದುವರಿಸಿದ್ದರೆ ನಮ್ಮ ದೇಶವು ಮಹೋನ್ನತ ಸಾಹಿತಿಯನ್ನು ಪಡೆಯುತ್ತಿತ್ತೇನೋ.
ಒಂದೆರಡು ಟೀ ಒಂದೆರಡು ರೊಟ್ಟಿ
ಮತ್ತೆಲ್ಲ ಮೇಜವಾನಿಗು ಸುಟ್ಟಿ
ಉಡುತೊಡುವ ಸಾಮಾನ್ಯ ಬಟ್ಟೆ
ಮೈ ಬಾಗಿಯೂ ಬಾಗದಿಹ ನಿಷ್ಠೆ
ಇಷ್ಟಿತ್ತು ಸ್ವತ್ತು : ಎಷ್ಟಿತ್ತೊ ಸತ್ತ್ವ!
ಅರಿಯುವುದು ಅಳೆಯುವುದು ಅಳವಲ್ಲ
ಅರಿವಿಹುದು ಅಳಿವಿಲ್ಲ ಅದಕೆಂಬುದಷ್ಟೇ!
(ಶಿವರಾಮುರವರ ‘ನನ್ನ ಜನ ನನ್ನ ಮನ’ ಕವನ ಸಂಕಲನದ ‘ಜಡಲೋಕದಿಂದ ಉಡುಲೋಕಕ್ಕೆ’ ಕವನದಿಂದ)
The 6th line of Shivaramu, so poem is apt to describe the great son of the soil, Deendayalu