ನಾವು ಇಂದಿಗೂ ವರ್ಷಂಪ್ರತಿ ಹಾರಿಬಿಡುತ್ತಿರುವ ಉಪಗ್ರಹಗಳ ಉಡಾವಣೆಯ ಹಿಂದೆ ಕೆಲಸ ಮಾಡುತ್ತಿರುವುದೂ ಕೆಪ್ಲರನ ನಿಯಮವೇ…
ಆಕಾಶವನ್ನು ದಿನರಾತ್ರಿ ಬಿಡದೆ ಗಮನಿಸಿದ ಮೇಲೆ ಗ್ರೀಕರಿಗೆ ಒಂದಂಶ ಸ್ಪಷ್ಟವಾಯಿತು. ಅದೇನೆಂದರೆ ಭೂಮಿ ಸ್ಥಿರವಾಗಿದೆ. ಉಳಿದೆಲ್ಲ ಗ್ರಹತಾರೆಗಳು ಈ ಕೇಂದ್ರದ ಸುತ್ತ ಸುತ್ತುತ್ತಿವೆ. ಭೂಮಿಯೇ ಈ ಅಗಾಧ ವಿಶ್ವದ ಕೇಂದ್ರಸ್ಥಾನ. ಎಲ್ಲರೂ ನಮಗೆ ಅಧೀನರು. “ಇದಕ್ಕೇನಾದರೂ ಪುರಾವೆ ಇದೆಯೇ?” ಎಂದು ಕೇಳಿದವರಿಗೆ ಗ್ರೀಕರು ಖಡಕ್ಕಾಗಿ ಉತ್ತರ ಕೊಟ್ಟರು. “ಇಂತಹ ಅಸಂಬದ್ಧ ಪ್ರಶ್ನೆ ಕೇಳುವ ಮೊದಲು ಸ್ವಲ್ಪ ಆಕಾಶದತ್ತ ದಿಟ್ಟಿಸಿನೋಡಿ. ಅಲ್ಲಿ ಯಾವುದೂ ನಿಂತಿಲ್ಲ. ಎಲ್ಲವೂ ಪುರುಸೊತ್ತಿಲ್ಲದೆ ಚಲಿಸುತ್ತಿವೆ. ಸೂರ್ಯ ದಿನಬೆಳಗಾದರೆ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಚಂದ್ರ ತಿಂಗಳುಪೂರ್ತಿ ಇಲ್ಲಿಂದ ಅಲ್ಲಿಗೆ ಓಡುತ್ತಿರುತ್ತಾನೆ. ಇನ್ನು ಬೆಳ್ಳಿ, ಅಂಗಾರಕದಂತಹ ಗ್ರಹಗಳು ಕೂಡ ಒಂದೆಡೆ ಹುಟ್ಟಿ ಇನ್ನೊಂದು ಕಡೆಯಲ್ಲಿ ಮುಳುಗುತ್ತವೆ. ದೂರದಲ್ಲಿರುವ ಚುಕ್ಕಿಗಳು ಕೂಡ ವೃತ್ತಾಕಾರವಾಗಿ ಸುತ್ತುತ್ತಿವೆ. ಇಂತಹ ವ್ಯವಸ್ಥೆಯಲ್ಲಿ ಯಾರಿಗೂ ಕ್ಯಾರೇ ಮಾಡದೆ, ಯಜಮಾನನಂತೆ ಸ್ಥಿರವಾಗಿ ಕೂತಿರುವ ಏಕೈಕ ವ್ಯವಸ್ಥೆ ನಮ್ಮ ಭೂಮಿಯಲ್ಲವೆ?” ಎಂದು ದಬಾಯಿಸಿ ಪ್ರಶ್ನಿಸಿದವರ ಬಾಯಿ ಮುಚ್ಚಿಸಿದರು. ಇವರ ಬಾಯಿ ಎಷ್ಟು ದೊಡ್ಡದಿತ್ತೆಂದರೆ, ಕ್ರಿ.ಶ. ೯೩ರ ಹೊತ್ತಿಗೆ ಬೈಬಲ್ನಲ್ಲೂ ಬದಲಾವಣೆಯಾಗಿ “ಭೂಮಿ ವಿಶ್ವದ ಕೇಂದ್ರ” ಎಂಬ ವಾಕ್ಯ ಸೇರಿಸಲಾಯಿತು!
ಗ್ರೀಕ್ ನಾಗರಿಕತೆಯ ಪ್ರಮುಖ ಹೆಸರಾದ ಅರಿಸ್ಟಾಟಲ್ ಈ ವಾದವನ್ನು ಬಲವಾಗಿ ಅಪ್ಪಿಕೊಂಡ. ಅವನ ಎಲ್ಲಾ ಸಂಶೋಧನೆಗಳೂ ನಡೆದದ್ದು ಈ ವಾದವನ್ನು ಒಪ್ಪಿದ ಭೂಮಿಕೆಯ ಮೇಲೆಯೇ. ಉದಾಹರಣೆಗೆ ನೆಲದಲ್ಲಿ ನಿಂತು ಮೇಲೆಸೆದ ಕಲ್ಲು ಮರಳಿ ಭೂಮಿಗೆ ಬರುವುದಕ್ಕೇನು ಕಾರಣ? ಯಾಕೆಂದರೆ ಕಲ್ಲಿಗೆ ಈ ನೆಲ ಅಪ್ಯಾಯಮಾನ. ನೆಲವನ್ನು ಬಿಟ್ಟಿರಲಾರದ ಸೆಳೆತ. ಅದಕ್ಕೇ ಓಡೋಡಿ ಈ ಕೇಂದ್ರವನ್ನು ಸೇರುತ್ತದೆ! “ಒಪ್ಪೋಣ, ನೆಲದ ಮೇಲೆ ಅಷ್ಟು ಪ್ರೀತಿಯಿದ್ದರೆ ದೂರದಲ್ಲಿರುವ ಸೂರ್ಯ, ಚಂದ್ರಾದಿಗಳೂ ಬಂದು ನಮ್ಮನ್ನು ಅಪ್ಪಬೇಕಿತ್ತಲ್ಲ?” ಎಂದರೆ, “ಕಲ್ಲು ಅರಮನೆಯ ದಾಸಿಯ ಹಾಗೆ. ನೆಲವಿಲ್ಲದೆ ಅದಕ್ಕೆ ಅಸ್ತಿತ್ವವೇ ಇಲ್ಲ. ಆದರೆ ದೂರದಲ್ಲಿ ನಿಂತು ಸಲಾಮು ಹೊಡೆಯುವ ಸೂರ್ಯಚಂದ್ರತಾರೆಗಳು ಕೋಟೆಯನ್ನು ಪಹರೆ ಕಾಯುತ್ತ ಗಸ್ತು ತಿರುಗುವ ಯೋಧರಂತೆ. ಅವು ಅಲ್ಲಿಂದಲೇ ನಮ್ಮನ್ನು ಕಂಡು ತೃಪ್ತರಾಗಬೇಕೇ ಹೊರತು ಇಲ್ಲಿವರೆಗೆ ಅವುಗಳಿಗೆ ಪ್ರವೇಶವಿಲ್ಲ” ಎನ್ನುತ್ತಿದ್ದ ಅರಿಸ್ಟಾಟಲ್. ಪ್ರತಿ ಪ್ರಶ್ನೆಗೂ ಹೀಗೆ ಒಂದಿಲ್ಲೊಂದು ಉತ್ತರ ಹೇಳಿ ಕೇಳಿದವರೇ ಅಹುದಹುದು ಎನ್ನತ್ತ ತಲೆದೂಗುವಂತೆ ಮಾಡುತ್ತಿದ್ದ ಅರಿಸ್ಟಾಟಲ್ನ ಎಲ್ಲ ವಾದವನ್ನೂ ಜನ ಶರಣಾಗತ ಭಾವದಿಂದ ಒಪ್ಪಿಕೊಂಡರು. ಗ್ರೀಕರನ್ನು ಆಳಿದ ಕ್ಲಾಡಿಯಸ್ ಟಾಲೆಮಿ, ಈ ಎಲ್ಲ ತರ್ಕ-ಸಿದ್ಧಾಂತಗಳನ್ನೂ ಕ್ರೋಢೀಕರಿಸಿ `ಭೂಕೇಂದ್ರವಾದ’ವನ್ನು ಹುಟ್ಟಿಸಿದ. ಭೂಮಿಯ ಸುತ್ತ ಒಟ್ಟು ೭೦ ಗ್ರಹ, ತಾರೆಗಳಂತಹ ಕಾಯಗಳು ಸುತ್ತುತ್ತಿವೆ ಎನ್ನುವ ಸಂಶೋಧನೆಯನ್ನೂ ಈತ ಮಾಡಿದ! ವಿಶ್ವದಲ್ಲಿ ಭೂಮಿಯಂತೆಯೇ ಈ ವಾದವೂ ಸ್ಥಿರವಾಗಿ ಕೂತಿತು, ಬರೋಬ್ಬರಿ ಸಾವಿರ ವರ್ಷಗಳವರೆಗೆ! ಇಡೀ ಯೂರೋಪಿನಲ್ಲಿ, ಆಕ್ಸ್ಫರ್ಡ್ ವಿಶ್ವವಿದ್ಯಾಲಯವನ್ನೂ ಒಳಗೊಂಡು ಎಲ್ಲೆಲ್ಲೂ ಪಾಠ ಮಾಡುತ್ತಿದ್ದದ್ದು ಟಾಲೆಮಿಯ ಸಿದ್ಧಾಂತವನ್ನೇ!
ಹಾಗಾದರೆ ಆ ಕಾಲದಲ್ಲಿ ಈ ಕುತರ್ಕವನ್ನು ಪ್ರಶ್ನಿಸುವವರೇ ಇರಲಿಲ್ಲವೆ ಎಂದು ಅನ್ನಿಸಬಹುದು. ಅರಿಸ್ಟಾಟಲ್ಗಿಂತಲೂ ಹಿಂದೆ, ಕ್ರಿ.ಪೂ. ೬ನೇ ಶತಮಾನದಲ್ಲಿ ಬದುಕಿದ್ದ ಪೈಥಾಗೊರಸ್ “ಸೂರ್ಯನೇ ವಿಶ್ವದ ಕೇಂದ್ರ” ಎಂದ. ಅವರ ಕಾಲಕ್ಕೆ ಸೌರವ್ಯೂಹದ ಆಚೆಗಿನ ವಿಶ್ವಕ್ಕೆ ಅಸ್ತಿತ್ವವೇ ಇರಲಿಲ್ಲ. ನೀಹಾರಿಕೆ, ಬ್ರಹ್ಮಾಂಡಗಳ ಲೋಕದ ಬಗ್ಗೆ ತಿಳಿದೇ ಇರಲಿಲ್ಲ. ಇದು ಆ ಕಾಲದ ವೀಕ್ಷಣಾಯಂತ್ರಗಳ ಮಿತಿಯೇ ಹೊರತು ಜನ ದಡ್ಡರಾಗಿದ್ದರು ಎಂದೇನೂ ಅರ್ಥವಲ್ಲ. ಹಾಗಾದರೆ ಪೈಥಾಗೊರಸ್ ಸೂರ್ಯನನ್ನು ಕೇಂದ್ರ ಎಂದು ಒಪ್ಪಿಕೊಳ್ಳಲು ಕಾರಣವೇನು? ಅದಕ್ಕೆ ಗಣಿತೀಯವಾದ, ವೈಜ್ಞಾನಿಕವಾದ ಆಧಾರವೇನೂ ಇರಲಿಲ್ಲ. ಅವನ ತರ್ಕ ಹೊರಟದ್ದು ಶುದ್ಧ ಸೈದ್ಧಾಂತಿಕ ನೆಲೆಯಿಂದ. ಈ ವಿಶ್ವದ ಕೇಂದ್ರಭಾಗ ಬಹಳ ಪ್ರಕಾಶಮಾನವಾಗಿರಬೇಕು, ನಮ್ಮ ಕಣ್ಣಿಗೆ ಕಾಣುವ ಅತ್ಯಂತ ಪ್ರಕಾಶಮಾನ ಕಾಯ ಯಾವುದು? ಸೂರ್ಯ ಅಲ್ಲವೆ? ಹಾಗಾಗಿ, ಸೂರ್ಯನೇ ಈ ಎಲ್ಲ ವಿಸ್ಮಯಗಳ ಕೇಂದ್ರಬಿಂದು – ಇದು ಪೈಥಾಗೊರಸನ ತರ್ಕ! ಅವನ ಪ್ರಕಾರ ಎಲ್ಲ ಗೋಳಗಳೂ ಒಂದೊಂದು ಸ್ಫಟಿಕದ ಹಾಳೆಗೆ ಅಂಟಿಕೊಂಡಿವೆ. ಆ ಹಾಳೆ ತಿರುಗುವುದರಿಂದ ಈ ಗ್ರಹಗಳೂ ಚಲನೆ ತೋರಿಸುತ್ತಿವೆ. ಸುಮ್ಮನೆ, ಯಾವ ಆಧಾರವೂ ಇಲ್ಲದೆ ಗ್ರಹಗಳೆಲ್ಲ ಆಕಾಶದಲ್ಲಿ ತೊಟ್ಟಿಲ್ಲದ ಹಣ್ಣಿನಂತೆ ತೇಲುತ್ತಿವೆ ಎನ್ನುವ ಮಾತಿಗೆ ಅರ್ಥವೇ ಇಲ್ಲ ಎಂದು ಪೈಥಾಗೊರಸ್ ಭಾವಿಸಿದ್ದ. ಅವನ ಶಿಷ್ಯೋತ್ತಮರೆಲ್ಲ ಗುರುವಿನ ಮಾತನ್ನು ಶಿರಸಾವಹಿಸಿ ನಂಬಿದರು. ಪೈಥಾಗೊರಸನ ಶಿಷ್ಯ ಪ್ಲೇಟೋ ತನ್ನ ಗುರುವನ್ನು ಒಪ್ಪಿಕೊಂಡು ಎಲ್ಲ ಗ್ರಹಗಳೂ ನಿಖರವಾದ ವೃತ್ತಗಳಲ್ಲಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತವೆ ಎನ್ನುವುದನ್ನು `ದೇವರು ಒಬ್ಬ ಜ್ಯಾಮಿತಿ ತಿಳಿದ ಗಣಿತಜ್ಞ’ ಎಂಬ ಮಾತಿನಲ್ಲಿ ಅಡಗಿಸಿ ಹೇಳಿದ. ಆದರೆ, ಅವರಿಗಿಂತ ಹಲವುನೂರು ವರ್ಷಗಳ ನಂತರ ಹುಟ್ಟಿಬಂದ ಅರಿಸ್ಟಾಟಲ್ ಇದನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಿಬಿಟ್ಟ. “ಓಹೋ! ಹಾಗಾದರೆ ನಿಮ್ಮ ವಾದದ ಪ್ರಕಾರ ನಮ್ಮ ಭೂಮಿ ಕೂಡ ಸೂರ್ಯನ ಸುತ್ತ ತಿರುಗುತ್ತಿದೆ! ಅದರ ವೇಗಕ್ಕೆ ನಾವೆಲ್ಲ ಸ್ಥಿರವಾಗಿ ನೆಲದ ಮೇಲೆ ನಿಲ್ಲಲಾಗದೆ ವಾಲುತ್ತಾ ಬೀಳುತ್ತಾ ಇರಬೇಕಿತ್ತಲ್ಲ? ಭೂಮಿಯ ಸ್ಥಿರತೆಗೆ ಏನು ಕಾರಣ ಕೊಡುತ್ತೀರಿ?” ಎನ್ನುವ ಅರಿಸ್ಟಾಟಲನ ಅಪಹಾಸ್ಯಕ್ಕೆ ಮಾತ್ರ ಪೈಥಾಗೊರಿಯನ್ನರಿಗೆ ಉತ್ತರಿಸಲು ಆಗಲಿಲ್ಲ (ಸದ್ಯಕ್ಕೆ ಭೂಮಿ ಗಂಟೆಗೆ ೧೦೦೦ ಮೈಲಿ ಓಡುತ್ತ ತನ್ನ ಅಕ್ಷದ ಸುತ್ತ ಸುತ್ತುತ್ತಿದೆ ಎನ್ನುವ ವಿಚಾರ ಅರಿಸ್ಟಾಟಲ್ಗೆ ಗೊತ್ತಿರಲಿಲ್ಲ!). ಪೈಥಾಗೊರಸನ ವಾದ ಎತ್ತಿಹಿಡಿದ ಅರಿಸ್ಟಾರ್ಕಸ್ ಎಂಬ ವಿದ್ವಾಂಸನಿಗೂ ಇದೇ ಗತಿಯಾಯಿತು.
ನಿಕೊಲಾಸ್ ಕೋಪರ್ನಿಕಸ್
ಹೀಗೆ ಸಾವಿರಕ್ಕೂ ಹೆಚ್ಚು ವರ್ಷಗಳು ಕಳೆದ ಮೇಲೆ ಹುಟ್ಟಿದವನು ನಿಕೋಲಾಸ್ ಕೋಪರ್ನಿಕಸ್. ಸ್ಥಳ ಪೋಲೆಂಡಿನ ತೊರುನ್; ೧೪೭೩ರ ವರ್ಷ. ನಿಕೋಲಾಸ್ ಚಿಕ್ಕ ಹುಡುಗನಿದ್ದಾಗಲೇ ತಂದೆ ತೀರಿಕೊಂಡದ್ದರಿಂದ, ಅವನ ಪಾಲನೆ-ಪೋಷಣೆಯ ಜವಾಬ್ದಾರಿಯೆಲ್ಲವೂ ಸೋದರಮಾವನ ತಲೆಮೇಲೆ ಬಿತ್ತು. ಮಾವ ಊರಿನ ಕೆಥೆಡ್ರಲ್ನಲ್ಲಿ ಬಿಷಪ್ ಆಗಿದ್ದವನು. ಹಾಗಾಗಿ ಕೋಪರ್ನಿಕಸ್ಗೆ ಬಹಳ ಎಳವೆಯಲ್ಲೇ ಚರ್ಚ್ನ ಸಾಂಗತ್ಯ ಒದಗಿಬಂತು. ಹುಡುಗ ಚೆನ್ನಾಗಿ ಕಲಿತು, ಸಕಲಶಾಸ್ತ್ರಪಾರಂಗತನಾಗಿ ಚರ್ಚ್ನ ಪಾದರಿಯೋ ಊರ ಗುರಿಕಾರನೋ ಆಗಬೇಕೆನ್ನುವುದು ಮಾವನ ಹಂಬಲ. ಹದಿನೆಂಟರ ಎಳವೆಯಲ್ಲೇ ಹುಡುಗ ಕ್ರಕೋವ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದು ಹೊರಬಂದ. ಅಷ್ಟಕ್ಕೇ ನಿಲ್ಲದೆ ಕಾನೂನು ಕಲಿಯಲು ಬೊಲೋನಕ್ಕೆ ಹೋದ. ಅದು ಮುಗಿದ ಮೇಲೆ ವೈದ್ಯಕೀಯ ಕಲಿತ! ರಜೆಯ ಸಮಯಕ್ಕೆ ಮನೆಗೆ ಬಂದರೂ ಕೋಪರ್ನಿಕಸ್ ಚರ್ಚ್ನ ಮಾಡು ಹತ್ತಿ, ಎತ್ತರದ ಕಟ್ಟಡಗಳ ಗೋಡೆ ಹತ್ತಿ ರಾತ್ರಿಹೊತ್ತು ನಕ್ಷತ್ರಗಳ ಸ್ಥಾನ ಗೊತ್ತುಪಡಿಸುವ, ಅದೇನೇನೋ ಗೊತ್ತಾಗದಷ್ಟು ಸಂಕೀರ್ಣವಾದ ಲೆಕ್ಕಮಾಡುವ ಗಡಿಬಿಡಿಯಲ್ಲೇ ಕಳೆಯುತ್ತಿದ್ದ. ವಿಶ್ವವಿದ್ಯಾಲಯಕ್ಕೆ ಹೋಗಿಬಂದವನಾದ್ದರಿಂದ ಅವನಿಗೆ ಗ್ರೀಕ್ ನಾಗರಿಕತೆಯಲ್ಲಿ ಆದ ಬೆಳವಣಿಗೆಗಳೆಲ್ಲ ಗೊತ್ತಿದ್ದವು. ಅರಿಸ್ಟಾಟಲ್ನ ಅದೆಷ್ಟೋ ವಿವರಣೆಗಳು ತಪ್ಪು ಮತ್ತು ಬಾಲಿಶ ಎಂಬ ಅನುಮಾನ ಅವನಿಗೆ ಆಗಾಗ ಬರುವುದಿತ್ತು. ಗ್ರಹ-ತಾರೆಗಳ ವಿಷಯದಲ್ಲಿ ಅರಿಸ್ಟಾಟಲ್, ಟಾಲೆಮಿ, ಯೂಡಕ್ಸಸ್ ಮುಂತಾದವರು ಹೇಳಿದ ಮಾತು ನಿಜವಿರಲಿಕ್ಕಿಲ್ಲ; ಭೂಮಿ ವಿಶ್ವದ ಕೇಂದ್ರವಿರಲಾರದು ಎನ್ನುವ ಅಂತರ್ಬೋಧೆ ಆಗಾಗ ಆಗುತ್ತಿತ್ತು. ಸೂರ್ಯನನ್ನು ಕೇಂದ್ರ ಎಂದು ಗಣಿಸಿ ಉಳಿದೆಲ್ಲ ಗ್ರಹಚಾರರು ಅವನಿಗೆ ಶರಣುಹೊಡೆಯುತ್ತಾರೆಂದು ಕಲ್ಪಿಸಿಕೊಂಡರೆ ಲೆಕ್ಕಾಚಾರ ಸುಲಭವಾಗುತ್ತದೆ ಎನ್ನಿಸುತ್ತಿತ್ತು. ಟಾಲೆಮಿ ಬರೆದ ಸಿದ್ಧಾಂತದಲ್ಲಿ ಮಂಗಳಗ್ರಹದ ಚಲನೆ ವಿಚಿತ್ರವಾಗಿತ್ತು. ಅದು ಒಂದೆರಡು ತಿಂಗಳು ಮುಂದೆ ಹೋಗುತ್ತ, ಮತ್ತೆರಡು ವಾರ ತುಸು ಹಿಂದೆ ಸರಿಯುತ್ತ, ಮತ್ತೆ ಮುಂದೋಡುತ್ತ ಒಂದು ಬಗೆಯ ವಿಚಿತ್ರ ಪ್ರದಕ್ಷಿಣೆ ಹಾಕುತ್ತಿತ್ತು. ಈ ವಿಶ್ವದ ಸೃಷ್ಟಿಯನ್ನು ನಿಜವಾಗಿಯೂ ದೇವರೇ ಮಾಡಿದ್ದರೆ, ಆತ ಗ್ರಹಗಳಿಗೆ ಇಷ್ಟೊಂದು ಅಸಂಬದ್ಧವಾದ ಚಲನೆಯನ್ನು ದಯಪಾಲಿಸಿರಲಾರ. ಅವನ ಸೃಷ್ಟಿಯಲ್ಲಿ ಎಲ್ಲವೂ ಸುಲಭಗ್ರಾಹ್ಯವೂ ಸರಳೀಕೃತವೂ ಆಗಿರಬೇಕು ಎನ್ನುವುದು ಕೋಪರ್ನಿಕಸ್ ಆಲೋಚನೆಯಾಗಿತ್ತು. ಪೈಥಾಗೊರಸ್, ಪ್ಲೇಟೋರನ್ನು ಓದಿ ಮೆಚ್ಚಿದ್ದ ಕೋಪರ್ನಿಕಸ್, ಎಲ್ಲ ಗ್ರಹಗಳೂ ಸೂರ್ಯನಿಗೆ ಅತ್ಯಂತ ಕರಾರುವಾಕ್ಕಾದ ವೃತ್ತಗಳಲ್ಲಿ ಸುತ್ತುತ್ತಿವೆ – ಎಂಬ ಹೊಸ ತರ್ಕವನ್ನು ರೂಪಿಸಿದ.
ರೂಪಿಸಿದ್ದೇನೋ ಸರಿ, ಆದರೆ ಅದನ್ನು ಘಂಟಾಘೋಷವಾಗಿ ಜಗತ್ತಿಗೆ ಸಾರುವುದು ಹೇಗೆ? ಕ್ರೈಸ್ತಧರ್ಮದ ಮೇಲ್ಮೆಯನ್ನು ಒಪ್ಪದ ಎಲ್ಲ ಸಾಹಸಿಗಳನ್ನೂ ಚರ್ಚ್ನ ಮಡಿವಂತರು ಕುಣಿಕೆಹಾಕಿ ಪರಲೋಕಕ್ಕೆ ಕಳಿಸುತ್ತಿದ್ದ ಕಾಲ ಅದು. ಅಂತಹ ದೈತ್ಯರೆದುರು ನಿಂತು “ನಿಮ್ಮ ಬೈಬಲ್ಲಿನಲ್ಲೇ ತಪ್ಪಿದೆ ನೋಡಿ” ಎಂದರೆ ಹೇಗಾದೀತು! ಕೋಪರ್ನಿಕಸ್ ತನ್ನ ಸಂಶೋಧನೆಯ ಗುಟ್ಟು ಬಿಟ್ಟುಕೊಡದೆ ವೀಕ್ಷಣೆಗಳನ್ನು ಮಾತ್ರ ಮುಂದುವರಿಸಿದ. ಮುಂದೆ ಹಲವಾರು ವರ್ಷ, ದಶಕಗಳ ಕಾಲ ಏಕಾಂಗಿಯಾಗಿ ನಡೆಸಿದ ಎಲ್ಲ ವೀಕ್ಷಣೆಯ ವಿವರಗಳೂ ಆತನ ತರ್ಕ ಸರಿಯಾಗಿದೆ ಎಂದೇ ಹೇಳುತ್ತಿದ್ದವು. ಟಾಲೆಮಿಗೆ ತಲೆನೋವಾಗಿದ್ದ ಮಂಗಳನ ವಿಚಿತ್ರ ಹಿಂದುಮುಂದೋಟವೂ ಕೋಪರ್ನಿಕಸ್ನ ವಾದದಲ್ಲಿ ಸರಿಯಾಗಿಬಿಡುತ್ತಿತ್ತು. ಎಣ್ಣೆ ತುಂಬಿದ ಕಾವಲಿಯಲ್ಲಿ ಜಹಾಂಗೀರು ಬಿಡಿಸುತ್ತ ಹೋದಹಾಗೆ, ಹಿಂದೆಮುಂದೆ ಸುತ್ತಾಡುತ್ತ ಮಂಗಳ ಹುಟ್ಟಿಸುವ ಸುರುಳಿಪಥಕ್ಕೆ ಎಪಿಸೈಕಲ್ ಎಂದು ಹೆಸರು. ಇಂತಹ ಕ್ಲಿಷ್ಟ, ಸಂಕೀರ್ಣ ಲೆಕ್ಕಗಳು ಸೂರ್ಯನೇ ಕೇಂದ್ರವೆನ್ನುವ ತನ್ನ ಸಿದ್ಧಾಂತದಲ್ಲಿ ತಲೆಹಾಕುವುದಿಲ್ಲ; ಮಂಗಳವೂ ಉಳಿದ ಗ್ರಹಗಳಂತೆ ಸರಳವಾದ ಏಕಮುಖಿ ವೃತ್ತಪಥದಲ್ಲೇ ಚಲಿಸುತ್ತಿದೆ – ಎನ್ನುವುದು ಕೋಪರ್ನಿಕಸ್ ವಾದವಾಗಿತ್ತು. ಪೈಥಾಗೊರಿಯನ್ನರು `೩೬ ವರ್ಷದ ನಿಯಮ’ ಎಂಬ ವಿಲಕ್ಷಣ ಪದ್ಧತಿಯೊಂದನ್ನು ಅನುಸರಿಸುತ್ತಿದ್ದುದು ಕೋಪರ್ನಿಕಸ್ಗೆ ಗೊತ್ತಿತ್ತು. `ದೇವರ ನಿಸರ್ಗದಾಟಗಳನ್ನು ಭೇದಿಸಿದ ಯಾರೇ ಆಗಲಿ, ಅದನ್ನು ಒಟ್ಟು ೩೬ ವರ್ಷ ರಹಸ್ಯವಾಗಿಡಬೇಕು. ಯಾರ ಜೊತೆಯೂ ಅದರ ಯಾವ ವಿವರವನ್ನೂ ಹಂಚಿಕೊಳ್ಳಬಾರದು. ೩೬ ವರ್ಷದ ಗಡುವು ಮುಗಿದಮೇಲೆ ಬೇಕಾದರೆ ಆ ಗುಟ್ಟನ್ನು ರಟ್ಟುಮಾಡಬಹುದು’ ಎಂಬ ಕ್ರಮ ಅದು! ೪ ಮತ್ತು ೯ – ಎರಡೂ ವರ್ಗಸಂಖ್ಯೆಗಳಾದ್ದರಿಂದ, ಅವುಗಳ ಗುಣಲಬ್ಧ ೩೬ ಒಂದು ವಿಶೇಷಸಂಖ್ಯೆಯಾಗಿರಬೇಕು ಎನ್ನುವ (ತಲೆಬುಡವಿಲ್ಲದ) ತರ್ಕ ಅವರಲ್ಲಿ ಚಾಲ್ತಿಯಲ್ಲಿತ್ತು. ಪೈಥಾಗೊರಸನ ಹಾದಿಯಲ್ಲೇ ನಡೆಯುತ್ತಿದ್ದ ಕೋಪರ್ನಿಕಸ್ ಕೂಡ ಈ ನಿಯಮಕ್ಕೆ ತಲೆಬಾಗಿದನೇ? ತನ್ನ ಯೋಚನೆಯನ್ನು ೩೬ ವರ್ಷ ಕಾಲ ಅಜ್ಞಾತವಾಸದಲ್ಲಿಟ್ಟನೆ? ಸಿದ್ಧಾಂತಿಗಳು ಈಗಲೂ ಚಿಂತಿಸುತ್ತಾರೆ. ಯಾಕೆಂದರೆ ೭೦ ವರ್ಷ ಬಾಳಿದ ಕೋಪರ್ನಿಕಸ್ ತನ್ನ ಮೂವತ್ತರ ಎಳವೆಯಲ್ಲೇ ಈ ಸಿದ್ಧಾಂತವನ್ನು ಕಾಗದಲ್ಲಿ ಮೂಡಿಸಿದ್ದರೂ, ಅದರ ಬಗ್ಗೆ ಮೂರೂವರೆ ದಶಕಗಳಿಗೂ ಹೆಚ್ಚುಕಾಲ ಮೌನ ಮೆರೆದ! ಕೊನೆಕೊನೆಗೆ, ತನ್ನ ಸಾವು ಹತ್ತಿರಬಂತೆಂದು ಅನ್ನಿಸತೊಡಗಿದ ಮೇಲಷ್ಟೇ ಸಮಾನಮನಸ್ಕರನ್ನು ಕಲೆಹಾಕಿ ತನ್ನ ಯೋಚನೆಗಳನ್ನು ಹಂಚಿಕೊಳ್ಳತೊಡಗಿದ. ೧೫೪೦ರಲ್ಲಿ ಅವನ ಒಬ್ಬ ನೆಚ್ಚಿನ ಗೆಳೆಯ (ಮತ್ತು ಬಹುಮಟ್ಟಿಗೆ ಕಿರಿಯನಾಗಿದ್ದ) ರೆಟಿಕಸ್, ಕೋಪರ್ನಿಕಸ್ನ ಮನೆವರೆಗೆ ಬಂದು, ಅವನ ಬಾಯಿಂದಲೇ ಸೂರ್ಯಸಿದ್ಧಾಂತವನ್ನು ಕೇಳಿದ. “ಸುಮ್ಮನೆ ನಾಲ್ಕುಜನರ ಮುಂದಷ್ಟೇ ಹೇಳಿದರೆ ಏನು ಬಂತು? ಇದನ್ನೆಲ್ಲ ಪುಸ್ತಕವಾಗಿ ಪ್ರಕಟಿಸಿದರೆ ಲೋಕದ ಜನಕ್ಕೆ ಅನುಕೂಲ” ಎಂದು ಪುಸಲಾಯಿಸಿದವನೂ ಅವನೇ. ಅಲ್ಲದೆ, ಕೋಪರ್ನಿಕಸ್ ಹೇಳಿದ ಮಾತುಗಳ ಆಧಾರದ ಮೇಲೆಯೇ ಅವನ ಸಿದ್ಧಾಂತವನ್ನು ಮರುನಿರೂಪಿಸಿ, ಜಗತ್ತಿನ ವಿಜ್ಞಾನದಲ್ಲಿ ಇದೊಂದು ಮಹತ್ತ್ವದ ಹೆಜ್ಜೆ ಎಂದು ರೆಟಿಕಸ್ ಲೇಖನವನ್ನೂ ಬರೆದ. ಈಗ ಮಾತ್ರ ಕೋಪರ್ನಿಕಸ್ ಸುಮ್ಮನೆ ಕೂರುವಂತಿರಲಿಲ್ಲ. ಅಲ್ಲದೆ ಇಷ್ಟು ವರ್ಷ ಬಚ್ಚಿಟ್ಟ ಗುಟ್ಟನ್ನು ಹೊರಹಾಕಲು ಅವನ ಆತ್ಮವೂ ಹಂಬಲಿಸಿತೆಂದು ಕಾಣುತ್ತದೆ. ೧೫೪೩ರಲ್ಲಿ ಕೋಪರ್ನಿಕಸನ `ಡಿ ರೆವೊಲ್ಯೂಶನಿಬಸ್ ಓರ್ಬಿಯಂ ಸೆಲೆಸ್ಟಮ್’ (ಅಂದರೆ, `ವಿಶ್ವದ ಕಾಯಗಳ ಪ್ರದಕ್ಷಿಣೆಗಳ ಕುರಿತು’) ಎಂಬ ಉದ್ಗ್ರಂಥ ಬೆಳಕುಕಂಡಿತು.
ಪುಸ್ತಕವೇನೋ ಬಂತು. ಆದರೆ ಅಲ್ಲೊಂದು ವಿಚಿತ್ರ ನಡೆದಿತ್ತು. ಅದರ ಕರಡುಪ್ರತಿ ತಿದ್ದಿಕೊಟ್ಟ ಓಸ್ಲಾಂಡರ್ ಎಂಬ ತತ್ತ್ವಜ್ಞಾನಿ ಕೋಪರ್ನಿಕಸ್ನ ಹೆಸರಲ್ಲಿ ಮುನ್ನುಡಿ ಬರೆದು `ಇದೊಂದು ಶಾಸ್ತ್ರಗ್ರಂಥ ಎಂದು ಯಾರೂ ಭಾವಿಸಬಾರದು. ಇಲ್ಲಿ ನಾನು ಚರ್ಚಿಸಿರುವ ವಿಷಯಗಳನ್ನು ಲಘುವಾಗಿ ಪರಿಗಣಿಸಬೇಕೇ ಹೊರತು, ಅದೇ ಸತ್ಯವೆಂಬ ಅತಿರೇಕಕ್ಕೆ ಹೋಗಬಾರದು. ಈ ಹೊತ್ತಗೆಯ ಮುಖ್ಯ ಉದ್ದೇಶ, ಆಕಾಶವೀಕ್ಷಕರ ಗಣಿತಲೆಕ್ಕಾಚಾರಗಳನ್ನು ಸುಲಭಗೊಳಿಸುವುದು ಮಾತ್ರ’ ಎಂಬ ಷರಾ ಸೇರಿಸಿದ. ಮೂವತ್ತುವರ್ಷಗಳ ತಪಸ್ಸಿನ ಫಲಕ್ಕೆ ಬೆಂಕಿ ಹಿಡಿದು ಬೂದಿಮಾಡಿದಂತಿತ್ತು ಈ ಸಾಲುಗಳು. ಕೋಪರ್ನಿಕಸ್ ಏನೆಲ್ಲ ಬಗೆದಿದ್ದನೋ ಅವೆಲ್ಲಕ್ಕೂ ವಿರುದ್ಧಾರ್ಥಕ ರೀತಿಯಲ್ಲಿ ಈ ಮುನ್ನುಡಿಯನ್ನು ಬರೆಯಲಾಗಿತ್ತು. ಓದುಗನಿಗೆ ಇಡೀ ಪುಸ್ತಕವೇ ಕೋಪರ್ನಿಕಸ್ ತನ್ನನ್ನು ತಾನು ಅಪಹಾಸ್ಯ ಮಾಡಿಕೊಂಡಂತೆ ಕಾಣುವಂತಿತ್ತು. ಪುಸ್ತಕ ಅಚ್ಚಾಗಿ ಪ್ರೆಸ್ಸಿನಿಂದ ಹೊರಬಂತು ಎನ್ನುವಷ್ಟರಲ್ಲಿ ಕೋಪರ್ನಿಕಸ್ ಮಡಿದ. `ಇಲ್ಲ, ಅವನು ಬದುಕಿದ್ದ. ಹಾಸಿಗೆಯಲ್ಲಿ ಕೊನೆದಿನಗಳನ್ನು ಎಣಿಸುತ್ತ ಮಲಗಿದ್ದ ಕೋಪರ್ನಿಕಸ್ ಕೈಯಲ್ಲಿ ಪುಸ್ತಕದ ಮೊದಲಪ್ರತಿಯನ್ನಿಟ್ಟರು’ ಎಂದು ಹೇಳುವ ವಾದವೂ ಇದೆ, ಇರಲಿ. `ಕರಡು ತಿದ್ದಿ ಪುಸ್ತಕಸಂಪಾದನೆ ಮಾಡಿದ ಸ್ವತಃ ಓಸ್ಲಾಂಡರಿಗೇ ಆ ಸೂರ್ಯಸಿದ್ಧಾಂತದ ಮೇಲೆ ನಂಬಿಕೆಯಿರಲಿಲ್ಲ. ಏನೋ ಕಾಟಾಚಾರಕ್ಕೆ ಸೌಜನ್ಯ ತೋರಿಸಿ ಕೋಪರ್ನಿಕಸನಿಗೆ ಕೆಲಸ ಮಾಡಿಕೊಟ್ಟಿರಬೇಕು, ಅಷ್ಟೆ. ಅಲ್ಲದೆ ಅವನು ಬೈಬಲ್ಲಿನ ಒಡಂಬಡಿಕೆಗಳನ್ನು ಹದಿನಾರಾಣೆ ನಂಬುವ ಆಸ್ತಿಕನೂ ಆಗಿದ್ದಿರಬಹುದು’ ಎನ್ನುವ ವರ್ಗ ಒಂದೆಡೆ. `ಹಾಗೇನೂ ಇಲ್ಲ. ತನ್ನ ಸಿದ್ಧಾಂತವನ್ನು ಒಪ್ಪದವನ ಕೈಯಲ್ಲಿ ಕರಡು ತಿದ್ದಿಸಿ ಟೀಕೆ ಬರೆಸುವಷ್ಟು ಕೋಪರ್ನಿಕಸ್ ದಡ್ಡನಾಗಿರಲಿಲ್ಲ. ಓಸ್ಲಾಂಡರ್ ಕೋಪರ್ನಿಕಸನ ಗೆಳೆಯನಾದ್ದರಿಂದಲೇ, ಅವನ ಹಿತ ಬಯಸಿ ಆ ರೀತಿ ಬರೆದಿದ್ದಾನೆ. ಇದೊಂದು ಕ್ರಾಂತಿಕಾರೀ ಪುಸ್ತಕವಾಗಿ, ಚರ್ಚ್ನ ಕೆಂಗಣ್ಣಿಗೆ ಗುರಿಯಾಗಿ, ಚರ್ಚ್ ಕೋಪರ್ನಿಕಸ್ನನ್ನು ಅವನ ವೃದ್ಧಾಪ್ಯವನ್ನೂ ಲೆಕ್ಕಿಸದೆ ಎಳೆದುಕೊಂಡು ಹೋಗಿ ಚಿತ್ರಹಿಂಸೆ ಕೊಡುವುದು ಓಸ್ಲಾಂಡರ್ಗೆ ಬೇಕಿರಲಿಲ್ಲ. ಹಾಗಾಗಿ, ಅದರ ಕಾವು ತಣಿಸುವಂತೆ ಅವನೇ ಕೋಪರ್ನಿಕಸ್ನ ಹೆಸರಲ್ಲಿ ಟಿಪ್ಪಣಿ ಬರೆದ’ ಎನ್ನುವ ವಾದ ಇನ್ನೊಂದು ವರ್ಗದ್ದು. ಒಟ್ಟಿನಲ್ಲಿ ಓಸ್ಲಾಂಡರ್ ಮಾಡಿದ್ದು ಅಪಚಾರವೋ ಉಪಕಾರವೋ ಕಾಲಗರ್ಭದಲ್ಲಿ ಹೂತುಹೋದ ರಹಸ್ಯ.
ಪುಸ್ತಕ ಯಾರ ಕಣ್ಣಿಗೆ ಬೀಳಬೇಕಿತ್ತೋ ಅವರ ಕಣ್ಣಿಗೆ ಬಿತ್ತು. ಅದನ್ನು ಓದಿದ ಕ್ರಾಂತಿಕಾರಿ ಬುದ್ಧಿವಂತರು, ಬೈಬಲ್ನಲ್ಲಿ ಬಂದ ಕತೆಯೆಲ್ಲ ಸುಳ್ಳು ಎಂದು ಹೇಳಿಯೇ ಹೇಳಿದರು! ಚರ್ಚ್ ಅಂಥವರನ್ನೆಲ್ಲ ಹಿಡಿದುಹಿಡಿದು ಹಿಂಸೆ ಕೊಟ್ಟಿತು. ಮೇಲಾಗಿ ಕೋಪರ್ನಿಕಸನ ಪುಸ್ತಕವನ್ನೇ ಮುಟ್ಟುಗೋಲು ಹಾಕಿಕೊಂಡು ನಿಷೇಧಿತಸಾಹಿತ್ಯ ಎಂಬ ಹಣೆಪಟ್ಟಿ ಹಚ್ಚಿತು! `ನೀವೇನೇ ಮಾಡಿದರೂ ಕೋಪರ್ನಿಕಸ್ ಹಿಡಿದುತೋರಿಸಿದ ಸತ್ಯಕ್ಕೆ ಬೂಜುಹಿಡಿಯುವುದು ಸಾಧ್ಯವಿಲ್ಲ. ಸೂರ್ಯನೇ ಸೃಷ್ಟಿಯ ಕೇಂದ್ರ. ಈ ಜಗತ್ತು ಕ್ಷಿತಿಜದಾಚೆಗೆ ಅನಂತಕ್ಕೆ ಚಾಚಿದೆ. ಅಷ್ಟೇ ಅಲ್ಲ, ಇದರಾಚೆಗೆ ಇದರಂಥದ್ದೇ ಇನ್ನೊಂದು, ಮತ್ತೊಂದು ವಿಶ್ವವೂ ಇವೆ. ನಮ್ಮ ಸೌರವ್ಯೂಹ ಅನನ್ಯಸೃಷ್ಟಿಯೇನಲ್ಲ!’ ಎಂಬ ಸಿಡಿಗುಂಡಿನಂತಹ ಮಾತುಗಳನ್ನು ಹೇಳಿದ ಗಾರ್ಡಿಯಾನೋ ಬ್ರೂನೋ ಎಂಬ ಸಿದ್ಧಾಂತಿಯನ್ನು ೧೬೦೦ರಲ್ಲಿ ಚರ್ಚ್ನವರು ಹಿಡಿದು ಕಟ್ಟಿಹಾಕಿ ಜೀವಂತ ಸುಟ್ಟುಬಿಟ್ಟರು! ನಮ್ಮ ಕಣ್ಣೆವೆಯಾಚೆ ಇನ್ನೊಂದು ಭೂಮಿಯಿದೆಯೆಂದಾದರೆ, ಅಲ್ಲಿ ಕ್ರಿಸ್ತನಿಗೊಬ್ಬ ಪ್ರತಿಸ್ಪರ್ಧಿಯೂ ಹುಟ್ಟುತ್ತಾನೆ ಎಂದಲ್ಲವೆ! ಕೋಪರ್ನಿಕಸ್ನ ಸಿದ್ಧಾಂತವನ್ನು ಒಪ್ಪಿ ಅಪ್ಪಿಕೊಂಡ ಇನ್ನೊಬ್ಬ ಮೇಧಾವಿ ಗೆಲಿಲಿಯೋನನ್ನು ಗೃಹಬಂಧನದಲ್ಲಿರಿಸಿ ವಿಚಾರಣೆ ಹೆಸರಲ್ಲಿ ಕೊಂದರು.
ಟೈಕೋ ಬ್ರಾಹೆ
ಕೋಪರ್ನಿಕಸ್ ೧೫೪೩ರಲ್ಲಿ ತೀರಿಕೊಂಡ. ಅದಾಗಿ ಮೂರುವರ್ಷದ ಮೇಲೆ ಡೆನ್ಮಾರ್ಕಿನ ಸೆನಿಯಾದಲ್ಲಿ ಟೈಕೋ ಬ್ರಾಹೆ ಹುಟ್ಟಿದ. (ಇವನನ್ನು ಟ್ಯೂಶೋ ಬ್ರಾಹೆ ಎಂದು ಕೂಡ ಕರೆಯುತ್ತಾರೆ. ಆಡುವ ಭಾಷೆಗೆ ಅನುಗುಣವಾಗಿ ಈ ರೀತಿಯ ವ್ಯತ್ಯಾಸಗಳು ಕಾಣಿಸುತ್ತವೆ ಅಷ್ಟೆ.) ಬ್ರಾಹೆ ಪ್ರಚಂಡ ಮೇಧಾವಿ, ಮೇಲಾಗಿ ಸಹಪಾಠಿಗಳನ್ನು ಅಂಕೆಯಲ್ಲಿಟ್ಟುಕೊಳ್ಳಬಲ್ಲ ಗಟ್ಟಿಗ. ಮೊದಲಿಗೆ ಕೋಪನ್ಹೇಗನ್ನಲ್ಲಿ ಕಾನೂನು ಅಧ್ಯಯನ ಮಾಡಿದವನು ಜರ್ಮನಿಯ ಲೈಪ್ಜಿಗ್ ಎಂಬಲ್ಲಿಗೆ ಹೋಗಿ ರಾಜಕೀಯಶಾಸ್ತ್ರ ಓದಿದ. ಯಾವುದೇ ಮಾತಿರಲಿ, ವಾದವಿರಲಿ; ತನ್ನ ಮೂಗಿನ ನೇರಕ್ಕೆ ಕಂಡದ್ದು ಮಾತ್ರ ಸತ್ಯ ಎನ್ನುವ ಧಿಮಾಕು, ಹಮ್ಮು ಅವನ ರಕ್ತದಲ್ಲೇ ತುಂಬಿತ್ತು ಎನ್ನಬೇಕು. ಒಮ್ಮೆ, ಯಾವುದೋ ಕ್ಷುಲ್ಲಕ ವಿಚಾರಕ್ಕೆ ವಾದ ಬೆಳೆದು, ಬ್ರಾಹೆ ತನ್ನ ಗೆಳೆಯನೊಬ್ಬನ ಜೊತೆ “ಕತ್ತಿಯುದ್ಧ ಮಾಡಿ ನಿರ್ಧರಿಸೋಣ ಬಾ!” ಎಂದು ಆಹ್ವಾನಿಸಿದ್ದೂ ಇದೆ! ಪ್ರತಿ ಕೋಪಕ್ಕೂ ಹೊಸ ಬಾವಿಗೆ ನೆಗೆಯುವ ಇವನ ಸೊಕ್ಕು ಮುರಿಯಬೇಕೆಂದು ಅವನ ಗೆಳೆಯ ಕತ್ತಿಯುದ್ಧದ ಆಹ್ವಾನ ಒಪ್ಪಿಕೊಂಡು, ಕಾಳಗದ ನಡುವೆ ಬ್ರಾಹೆಯ ಮೂಗನ್ನೇ ಕತ್ತರಿಸಿಹಾಕಿದ! ಮೂಗಿಲ್ಲದೆ ಮುಖ ಮುಚ್ಚಿಕೊಳ್ಳುವ ಪ್ರಸಂಗ ಬ್ರಾಹೆಗೆ ಬಂತು! ರಾಜಕೀಯಕ್ಕೆ ತಿಲಾಂಜಲಿಯಿಟ್ಟು ಬ್ರಾಹೆ ವೈದ್ಯಕೀಯ ಕಲಿಯಲು ಸೇರಿಕೊಂಡ.
ಕತ್ತಿ ವರಸೆ ನಿರತ ಬ್ರಾಹೆ (ಕಲಾವಿದನ ಕಲ್ಪನೆ)
ಅವನು ಹಾಗೆ ವಿಷಯಾಂತರ ಮಾಡಿದ್ದಕ್ಕೆ ಒಂದು ಗುಪ್ತ ಕಾರಣವೂ ಇತ್ತು. ಆ ಕಾಲದಲ್ಲಿ ವೈದ್ಯಶಾಸ್ತ್ರ ಕಲಿಯುವವರು ತಮ್ಮ ಅಧ್ಯಯನದ ಒಂದು ಭಾಗವಾಗಿ ರಸವಿದ್ಯೆಯನ್ನೂ ಕಲಿಯುತ್ತಿದ್ದರು. ರಸವಿದ್ಯೆ ಅಥವಾ ಆಲ್ಕೆಮಿಯನ್ನು ಕಲಿಯುವವರು ಲೋಕದ ಕಣ್ಣಲ್ಲಿ ಯಾವುದೋ ಮಂತ್ರವಾದಿಗಳಂತೆ ಅಥವಾ ಭೂಗತಚಟುವಟಿಕೆ ಮಾಡುವ ಕೇಡಿಗಳಂತೆ ಕಾಣುತ್ತಿದ್ದರು. ಯಾಕೆಂದರೆ ಹೆಚ್ಚಿನ ಆಲ್ಕೆಮಿಸ್ಟ್ಗಳು ತಮ್ಮ ವಿದ್ಯೆಯನ್ನು ಹೊರಗೆಲ್ಲೂ ಸಾರ್ವಜನಿಕಗೊಳಿಸುತ್ತಿರಲಿಲ್ಲ. ಅಲ್ಲದೆ ಅವರ ಮುಖ್ಯ ಉದ್ದೇಶ ಯಾವುದೇ ಲೋಹವನ್ನೂ ಚಿನ್ನವಾಗಿ ಪರಿವರ್ತಿಸುವ ಮಾಯಾದ್ರವ್ಯವನ್ನು ಕಂಡುಹಿಡಿಯುವುದಾದ್ದರಿಂದ, ಅವರ ವ್ಯಕ್ತಿತ್ವಕ್ಕೇ ಐಂದ್ರಜಾಲಿಕರ ಹೊಳಪು ಬಂದುಬಿಟ್ಟಿತ್ತು. ಬ್ರಾಹೆಗೆ ಈ ಚಿನ್ನದ ಬೇಟೆಯಲ್ಲಿ ಆಸಕ್ತಿಯಿತ್ತೋ ಇಲ್ಲವೋ ಗೊತ್ತಿಲ್ಲ; ಆದರೆ ಅವನಿಗೆ ಲೋಹಗಳ ಗುಣವಿಶೇಷಗಳನ್ನು ತಿಳಿದುಕೊಳ್ಳುವುದರಲ್ಲಿ ಅಪರಿಮಿತ ಆಸಕ್ತಿ ಹುಟ್ಟಿತು. ಹಾಗೆ, ರಸವಿದ್ಯೆಯಲ್ಲಿ ತಕ್ಕಷ್ಟು ಪರಿಶ್ರಮ ಇದೆ ಎನ್ನುವ ಧೈರ್ಯ ಬಂದ ಮೇಲೆ, ಒಂದು ದಿನ ಅವನು ತನ್ನ ಮೂಗಿನ ರಚನೆಯನ್ನೇ ಹೋಲುವ ಲೋಹದ ನಾಸಿಕವನ್ನು ತಯಾರುಮಾಡಿದ. ಅದೂ ಅಂತಿಂಥ ಲೋಹದ್ದಲ್ಲ, ಅಪ್ಪಟ ಚಿನ್ನದ ನಾಸಿಕ! ಹೀಗೆ ತಾನೇ ತಯಾರು ಮಾಡಿದ ಚಿನ್ನದ ಮೂಗನ್ನು ಕಟ್ಟಿಸಿಕೊಂಡ ಮೇಲೆ ಅವನಿಗೆ ಮುಜುಗರ ಕಮ್ಮಿಯಾಗಿ ಸಾರ್ವಜನಿಕವಾಗಿ ಮುಖ ತೋರಿಸುವ ದಿಟ್ಟತನ ಬಂತು.
೧೫೭೨ರಲ್ಲಿ ಅವನಿಗೆ ಬಾನಂಗಳದಲ್ಲಿ ಒಂದು ಬೃಹತ್ ಎನ್ನಬಹುದಾದ ತಾರೆ ಕಾಣಿಸಿಕೊಂಡಿತು. ಇಡೀ ಯೂರೋಪಿನಲ್ಲಿ ಈ ನಕ್ಷತ್ರದ್ದೇ ಚರ್ಚೆ ಎದ್ದಿತು. ಸಹಜವಾಗಿಯೇ ಇದು ಬ್ರಾಹೆಯ ಆಸಕ್ತಿಯನ್ನೂ ಕೆರಳಿಸಿತು. ಅವನು ಅದರ ಹಿಂದೆಬಿದ್ದ! ಆದರೆ ತಾರೆಗಳ ಬಗ್ಗೆ ತಿಳಿಯಬೇಕಾದರೆ ಖಗೋಳ ಕಲಿಯಬೇಕಲ್ಲ? ಸರಿ, ಅದಕ್ಕೂ ಜಿಗಿದ! ತೊಡಗಿಕೊಂಡ ಯಾವ ಕ್ಷೇತ್ರದಲ್ಲೂ ಅರೆಬರೆ ಕಲಿತು ಹೊರಬರುವುದು ಬ್ರಾಹೆಯ ಲಕ್ಷಣವೇ ಅಲ್ಲ; ಇಳಿದ ಮೇಲೆ ಮುಳುಗುಹಾಕಬೇಕು, ಈಸಿ ಜಯಿಸಿ ದಡಸೇರಬೇಕು ಎನ್ನುವುದು ಅವನ ಸಿದ್ಧಾಂತ. ಖಗೋಳದ ಬಗ್ಗೆ ಎಬಿಸಿಡಿಯಿಂದ ಕಲಿಯಲು ಕೂತರೂ ಬಹಳ ಬೇಗ ಅದರ ಎಲ್ಲ ಪ್ರಾಥಮಿಕಪಾಠಗಳನ್ನೂ ಕಲಿತು ಪ್ರವೀಣನಾಗಿ ಉನ್ನತ ಶಾಖೆಗಳಿಗೆ ಹಾರಿದ. ಆಗ ಅವನಿಗೆ ಕೋಪರ್ನಿಕಸ್ ಬರೆದ ಪುಸ್ತಕದ ಬಗ್ಗೆ ಗೊತ್ತಾಯಿತು. ಆ ಪುಸ್ತಕದಲ್ಲಿ ಬಂದ ವಿಚಾರದ ಹೊಸತನ, ಅರಿಸ್ಟಾಟಲ್ ಹೂಡಿದ್ದ ತರ್ಕ, ಚರ್ಚ್ನವರು ಕೋಪದಲ್ಲಿ ಮಾಡಿದ ಕೃತ್ಯಗಳು – ಎಲ್ಲದರ ಬಗ್ಗೆ ಮಾಹಿತಿ ಕಲೆಹಾಕಿದ. ಆ ಬಗ್ಗೆ ಹೆಚ್ಚುಹೆಚ್ಚು ಓದುತ್ತ ಹೋದಂತೆ ಅವನ ತಲೆಯೇ ಗೊಂದಲದ ಗೂಡಾಗಿಬಿಟ್ಟಿತು. ಕೋಪರ್ನಿಕಸ್ ಹೇಳಿದ್ದೇ ಸರಿ ಎಂದುಬಿಟ್ಟರೆ, ಹತ್ತರಲ್ಲಿ ಹನ್ನೊಂದು ಎನ್ನುವಂತೆ ತನ್ನನ್ನೂ ಪಾದರಿಗಳು ಬೆಂಕಿಯಲ್ಲಿ ಬೇಯಿಸಿಬಿಡಬಹುದು ಎನ್ನುವ ಅಳುಕೂ ಅವನಿಗಿತ್ತು. ಹಾಗೆಂದು ಪೂರ್ತಿ ಬೈಬಲ್ನ ಪರವಾಗಿ ವಾದಹೂಡುವುದೂ ಅವನ ಮನಸ್ಸಿಗೆ ಒಪ್ಪಲಿಲ್ಲ. ಹಾವೂ ಸಾಯಬಾರದು, ಕೋಲೂ ಮುರಿಯಬಾರದು; ಅಂಥಾದ್ದೊಂದು ಮಧ್ಯಮಮಾರ್ಗ ಹಿಡಿಯಬೇಕು ಎಂದುಕೊಂಡ. ಕೊನೆಗೆ ತನ್ನ ಕಲ್ಪನೆಯ ಬ್ರಹ್ಮಾಂಡದ ಚಿತ್ರ ಬರೆದ. ಬ್ರಾಹೆ ಬರೆದ ಚಿತ್ರ ಆ ಕಾಲದ ಎಲ್ಲ ಗೊಂದಲಗಳಿಗೆ ಕನ್ನಡಿ ಹಿಡಿದಂತಿದೆ. ಅಲ್ಲಿ ಸೂರ್ಯನಿದ್ದಾನೆ. ಅವನ ಸುತ್ತ ಬುಧ, ಶುಕ್ರ, ಮಂಗಳ, ಶನಿಗ್ರಹಗಳು ಸುತ್ತುತ್ತಿವೆ. ಆದರೆ, ಅಷ್ಟೆಲ್ಲ ವಿಧೇಯರಿಂದ ಪ್ರದಕ್ಷಿಣೆ ಹಾಕಿಸಿಕೊಳ್ಳುವ ಅವನು ಮಾತ್ರ ವಿನೀತನಾಗಿ ಭೂಮಿಗೆ ಪ್ರದಕ್ಷಿಣೆ ಬರುತ್ತಿದ್ದಾನೆ! ಹಾಗಾದರೆ, ಭೂಮಿಯೇ ಶ್ರೇಷ್ಠ ಎಂಬ ವಾದಕ್ಕೆ ಪುರಸ್ಕಾರ ಸಿಕ್ಕಹಾಗಾಯಿತಲ್ಲ? ಸೂರ್ಯಸಿದ್ಧಾಂತವನ್ನೂ ವಿರೋಧಿಸಿದ ಹಾಗಾಗಲಿಲ್ಲ; ಚರ್ಚುಗಳನ್ನೂ ಎದುರು ಹಾಕಿಕೊಂಡಂತಾಗಲಿಲ್ಲ! ಆಗಿನ ಕಾಲದ ಯೂರೋಪಿನ ರಾಜರು ಎಂತಹ ಮೊದ್ದುಗಳಾಗಿದ್ದರೆಂದರೆ, ಡೆನ್ಮಾರ್ಕಿನ ದೊರೆ ಎರಡನೇ ಫ್ರೆಡರಿಕ್ಗೆ ಬ್ರಾಹೆ ಬರೆದ ಚಿತ್ರ ತುಂಬ ಇಷ್ಟವಾಗಿ, ಅವನನ್ನು ತನ್ನ ಆಸ್ಥಾನಜ್ಯೋತಿಷಿಯಾಗುವಂತೆ ಕೇಳಿಕೊಂಡೇಬಿಟ್ಟ!
ಬ್ರಾಹೆಗೆ ರಾಜಕೀಯ ಇಚ್ಛಾಸಕ್ತಿಗಳು ಇದ್ದದ್ದೇನೋ ನಿಜ; ಆದರೆ ತನ್ನ ಕುತೂಹಲ ಕೆರಳಿಸಿರುವ ಖಗೋಳವಿಜ್ಞಾನವನ್ನು ಬಿಟ್ಟು ಜ್ಯೋತಿಷಕ್ಕೆ ಅಂಟಿಕೊಳ್ಳುವುದು ಅವನಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವನು ತನಗೋಸ್ಕರ ಒಂದು ಪುಟ್ಟ ದ್ವೀಪವೇನಾದರೂ ಬಿಟ್ಟುಕೊಟ್ಟರೆ, ಇನ್ನೂ ಹೊಸ ಸಂಗತಿಗಳನ್ನು ಹುಡುಕಿ ತೆಗೆಯುವ ಇರಾದೆ ಇದೆ ಎಂದ. ರಾಜ ಅವನಿಗೆ ಹುಎನ್ ಎಂಬ ಸುಂದರ ದ್ವೀಪವನ್ನು ಬಿಟ್ಟುಕೊಟ್ಟ; ಮಾತ್ರವಲ್ಲ ಬ್ರಾಹೆಯ ಎಲ್ಲಾ ಸಲಹೆಸೂಚನೆ ತೆಗೆದುಕೊಂಡು ಆ ಕಾಲಕ್ಕೇ ಅತ್ಯಂತ ಆಧುನಿಕ ಮತ್ತು ಸುಂದರ ಎನ್ನಬಹುದಾದ ಒಂದು ಬೃಹತ್ ವೀಕ್ಷಣಾಲಯವನ್ನು ಕಟ್ಟಿಕೊಟ್ಟ. ಬ್ರಾಹೆಗೆ ತನ್ನ ವಿದ್ಯಾರ್ಥಿಗಳಿಗೆ ಬೋಧಿಸುವ, ಸಮಾನಾಸಕ್ತರ ಜೊತೆ ಚರ್ಚಿಸುವ, ಸಮಾಜದ ಅತಿಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿ ಆದರಿಸುವ ಎಲ್ಲ ಅಧಿಕಾರ ಸಿಕ್ಕಿತು. ಅವನು ಆ ಕಟ್ಟಡದ ನೆಲಮಾಳಿಗೆಯಲ್ಲಿ ಒಂದು ಸುಸಜ್ಜಿತವಾದ ಕಮ್ಮಾರಸಾಲೆ ತೆರೆದ. ತಾನು ಕಲಿತಿದ್ದ ರಸವಿದ್ಯೆಯ ಎಲ್ಲ ಅನುಭವವನ್ನು ಧಾರೆ ಎರೆದು, ಪ್ರಯೋಗಾಲಯಕ್ಕೆ ಬೇಕಾದ ಎಲ್ಲ ಆಧುನಿಕ ಯಂತ್ರೋಪಕರಣಗಳನ್ನೂ ಅಲ್ಲೇ ತಯಾರು ಮಾಡಿದ. ಅವನು ಬಳಸುತ್ತಿದ್ದ ಖಗೋಳವೀಕ್ಷಕ ಉಪಕರಣಗಳು ಆ ಕಾಲದಲ್ಲಿ ಬಳಕೆಯಲ್ಲಿದ್ದ ಇತರ ಯಾವುದೇ ಪರಿಕರಗಳಿಗಿಂತ ಹತ್ತುಪಟ್ಟು ನಿಖರವಾದ ರೀಡಿಂಗ್ ಕೊಡುತ್ತಿದ್ದವು ಎಂದರೆ ಬ್ರಾಹೆಯ ಕ್ರತುಶಕ್ತಿಯನ್ನು ಅಳೆಯಬಹುದು.
ಬ್ರಾಹೆಗೆ ಸುಸಜ್ಜಿತವಾದ ಪ್ರಯೋಗಾಲಯ, ಬೇಕುಬೇಕಾದ ಆಧುನಿಕ ಉಪಕರಣ, ಸಹಾಯಕ್ಕೆ ಆಳುಕಾಳು ಎಲ್ಲ ಸಿಕ್ಕಿತು ನಿಜ; ಆದರೆ ತನ್ನ ಇಂಗಿತವನ್ನರಿತು ಕೆಲಸ ಮಾಡಬಲ್ಲ, ತನ್ನೊಡನೆ ಪ್ರಯೋಗ ಮತ್ತು ಆಕಾಶವೀಕ್ಷಣೆಗಳಿಗೆ ಹೆಗಲುಜೋಡಿಸಿ ಕೆಲಸ ಮಾಡಬಲ್ಲ ಪಂಡಿತರ ಕೊರತೆ ಮಾತ್ರ ಇತ್ತು. ಅಲ್ಲದೆ, ಖಗೋಳಶಾಸ್ತ್ರ ಎಂದರೇನೇ ಹಲವಾರು ಕ್ಲಿಷ್ಟ ಲೆಕ್ಕಗಳ ಗೋಜಲು. ಅದರ ಸಿಕ್ಕುಗಳನ್ನು ಕಡಿದು ದುರ್ಗಮ ಕಾಡಿಗೆ ದಾರಿ ಕೊರೆಯಲು ಗಣಿತದಲ್ಲಿ ವಿಶೇಷ ಪಾಂಡಿತ್ಯ ಇರಬೇಕು. ಇಷ್ಟೆಲ್ಲ ಇದ್ದರೂ ಅವರು ಬ್ರಾಹೆಯ ಎಲ್ಲ ತಿಕ್ಕಲುತನ-ಕೋಪಾವೇಶಗಳನ್ನು ಸಹಿಸಿಕೊಂಡು ಕೆಲಸ ಮಾಡುತ್ತಾರೆನ್ನುವ ಗ್ಯಾರಂಟಿಯಿಲ್ಲ! ಹೀಗೆ ಸಮರ್ಥ ಸಹಾಯಕನ ತಲಾಶಿನಲ್ಲಿದ್ದಾಗಲೇ ಅವನಿಗೊಂದು ದಿನ ಒಂದು ಟಪ್ಪಾಲು ಬಂತು. ಅದೊಂದು ಖಗೋಳದ ಪುಸ್ತಕ. ಬರೆದವನು ಆ ಇಡೀ ಹೊತ್ತಗೆಯನ್ನು ತನ್ನ ನಿಬಿಡ ಸಂಖ್ಯಾರಣ್ಯದಿಂದ ತುಂಬಿಸಿ, “ಇದೇನಾದರೂ ನಿಮ್ಮಲ್ಲಿ ಆಸಕ್ತಿ ಮೂಡಿಸಿದರೆ ಪ್ರತಿಕ್ರಿಯಿಸಿ” ಎಂದು ಬರೆದಿದ್ದ. ಟೈಕೋ ಬ್ರಾಹೆಗೆ ಆ ಪುಸ್ತಕ ನೋಡಿ ಎಷ್ಟೊಂದು ಆನಂದಾತಿರೇಕಗಳು ಎದ್ದವೆಂದರೆ “ಕೂಡಲೇ ಡೆನ್ಮಾರ್ಕಿಗೆ ಹೊರಟು ಬಾ. ಬಂದ ದಿನವೇ ನನ್ನ ಸಹಾಯಕನಾಗಿ ಸೇರಿಕೊಂಡುಬಿಡು!” ಎಂದು ಮಾರೋಲೆ ಬರೆದ. ವಜ್ರದಂತಹ ಕಠಿಣ ವ್ಯಕ್ತಿತ್ವದ ಬ್ರಾಹೆಯನ್ನೇ ಕುಸುಮದಂತೆ ಮೃದುವಾಗಿಸಿದ ಈ ತರುಣನೇ ಯೋಹಾನ್ ಕೆಪ್ಲರ್!
ಯೋಹಾನ್ ಕೆಪ್ಲರ್
ಕೆಪ್ಲರ್ ಹುಟ್ಟಿದ್ದು ಜರ್ಮನಿಯ ವೀಲ್ ದೆರ್ ಸ್ತಾತ್ ಎಂಬಲ್ಲಿ; ೨೭ ಡಿಸೆಂಬರ್ ೧೫೭೧ರಲ್ಲಿ. ಕೆಪ್ಲರ್ನ ಅಜ್ಜ ಒಂದಾನೊಂದು ಕಾಲದಲ್ಲಿ ಇಡೀ ಊರಿಗೆ ಮೇಯರ್ ಆಗಿದ್ದವನಂತೆ. ಆದರೆ, ಕೆಪ್ಲರ್ ಹುಟ್ಟುವ ಕಾಲಕ್ಕೆ ಮಾತ್ರ ಕುಲಾವಿ ಹೊಲಿಸಲಿಕ್ಕೂ ಭಿಕ್ಷೆ ಬೇಡುವಂತಹ ಸ್ಥಿತಿಗೆ ಬಂದಿತ್ತು ಕುಟುಂಬ. ಅವನು ತನ್ನ ತಂದೆಯ ಮುಖ ನೋಡಿದ್ದೇ ಅಪರೂಪ. ಯುದ್ಧಭೂಮಿಯಲ್ಲೇ ಜೀವನ ಕಳೆದ ಆತ ಕೆಪ್ಲರ್ ಐದು ವರ್ಷದ ಹಸುಳೆಯಾಗಿದ್ದಾಗ ಹಾಲೆಂಡ್ನ ನೆಲದಲ್ಲಿ ಒಂದು ಯುದ್ಧದಲ್ಲಿ ಹೋರಾಡುತ್ತ ಮರಣವನ್ನಪ್ಪಿದ. ಇನ್ನು ಅವನ ತಾಯಿಯೋ ಯಾವಾವುದೋ ಕೆಲಸಕ್ಕೆ ಬಾರದ ಹುಡಿಗೆಲಸ ಮಾಡಿಕೊಂಡು ಉದರಂಭರಣ ಮಾಡುತ್ತಿದ್ದಳು. ಅವಳು ಡಾಕಿಣಿ, ಮಾಟಮಾಡುವವಳು ಎಂಬ ಅಪಕೀರ್ತಿಯೂ ಸಾಕಷ್ಟು ಹಬ್ಬಿತ್ತು. ೧೫೭೭ರಲ್ಲಿ ಆಕೆ ತನ್ನ ಆರು ವರ್ಷದ ಪುಟ್ಟ ಮಗನನ್ನು ಎತ್ತಿಕೊಂಡು ಗುಡ್ಡದ ನೆತ್ತಿಗೆ ಹೋಗಿ ಧೂಮಕೇತುವನ್ನು ತೋರಿಸಿದ್ದೂ ಇದೆ. ೧೫೮೦ರಲ್ಲಿ ಕೆಪ್ಲರ್ ತನ್ನ ಜೀವಮಾನದ ಮೊದಲ ಚಂದ್ರಗ್ರಹಣವನ್ನು ನೋಡಿದ. ಗ್ರಹಣದ ಸಮಯದಲ್ಲಿ ಚಂದ್ರನ ಮುಖ ಸಾಕಷ್ಟು ಕೆಂಪಗಿದೆಯಲ್ಲ ಅಂತಲೂ ಅವನಿಗೆ ಅನಿಸಿತ್ತಂತೆ. ಇನ್ನೂ ಹನ್ನೆರಡು ತುಂಬುವ ಮೊದಲೇ ಕೆಪ್ಲರ್ಗೆ ಸಿಡುಬು ರೋಗ ಬಂತು. ಆ ಕಾಲದಲ್ಲಿ ಆ ರೋಗ ಬಂದರೆ ಸಾಕು, ಮೈಯೆಲ್ಲ ಬೊಕ್ಕೆ ಎದ್ದು ಎರಡೇ ವಾರದಲ್ಲಿ ಇಹಲೋಕ ತ್ಯಜಿಸುತ್ತಿದ್ದವರೇ ಬಹಳ. ಆದರೆ, ಕೆಪ್ಲರ್ ಮಾತ್ರ ಔಷಧೋಪಚಾರದಿಂದ ಪವಾಡ ಎನ್ನುವಂತೆ ಬದುಕುಳಿದ. ಜೀವವನ್ನೇ ಎಳೆದೊಯ್ಯುತ್ತೇನೆಂದು ಬಂದಿದ್ದ ರೋಗ ಕೊನೆಗೆ ಅವನ ಕಣ್ಣುಗಳ ದೃಷ್ಟಿಯನ್ನು ಮಂದವಾಗಿಸಿ ಹೊರಟುಹೋಯಿತು. ಹೀಗೆ ಚಿಕ್ಕಂದಿನಲ್ಲೇ ಕಣ್ಣುಗಳ ಸಾಮರ್ಥ್ಯ ಕಳೆದುಕೊಂಡ ಕೆಪ್ಲರ್ಗೆ ಆಕಾಶದತ್ತ ಮುಖ ಮಾಡಿದರೆ ಯಾವ ನಕ್ಷತ್ರವೂ ಕಾಣುತ್ತಿರಲಿಲ್ಲ. ಖಗೋಳದ ಬಗ್ಗೆ ಅಪರಿಮಿತ ಎನ್ನುವಷ್ಟು ಆಸೆ, ಕನಸು, ಪ್ರೀತಿಗಳಿದ್ದ ಅವನಿಗೆ ಇದರಿಂದ ಆದ ನಿರಾಸೆ ಎಷ್ಟೋ, ಲೆಕ್ಕಕ್ಕೆ ಸಿಗಲಿಕ್ಕಿಲ್ಲ. ಕಣ್ಣು ಹೋದರೇನಂತೆ, ಬುದ್ಧಿಯ ಪಟುತ್ವ ಇನ್ನೂ ಹಾಗೆಯೇ ಇದೆಯಲ್ಲ! ಗಣಿತದ ಮೂಲಕವಾದರೂ ತನ್ನ ಆಸೆ ಈಡೇರಿಸಿಕೊಳ್ಳಬೇಕೆಂದು ಬಾಲಕ ಕೆಪ್ಲರ್ ನಿರ್ಧರಿಸಿದ. ಅವನಿಗೆ ಗಣಿತದಲ್ಲಿ ಅಮಿತಾಸಕ್ತಿ ಬೆಳೆಯಲು ಇದೂ ಒಂದು ಕಾರಣ.
ಆದರೆ ಖಗೋಳತಜ್ಞನೇ ಆಗಬೇಕೆಂದು ಬಹಳ ಚಿಕ್ಕಂದಿನಲ್ಲೆ ನಿರ್ಧರಿಸಿದ ಕೆಪ್ಲರ್ ಅದಕ್ಕೆ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದ. ಗಣಿತದಲ್ಲಿ ಅದ್ಭುತ ಎನ್ನುವಂತಹ ಆಸಕ್ತಿಯನ್ನೂ ಸಾಮರ್ಥ್ಯವನ್ನೂ ತೋರಿಸಿದ. ತ್ಯೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಉನ್ನತಾಭ್ಯಾಸ ಮಾಡಿದ. ಆ ಕಾಲಕ್ಕೆ ಖಗೋಳದ ಜೊತೆ ತಳುಕುಹಾಕಿಕೊಂಡಿದ್ದ ಜ್ಯೋತಿಷವನ್ನೂ ಬಹಳ ತನ್ಮಯತೆಯಿಂದ ಕಲಿತ. ಜಾತಕ ಬರೆಯುವುದರಲ್ಲಿ ಪ್ರವೀಣನಾದ! ಮಿಷಾಯಿಲ್ ಮೆಸ್ಲಿನ್ ಎಂಬ ತನ್ನ ಪ್ರಾಧ್ಯಾಪಕನ ಮೆಚ್ಚಿನ ಶಿಷ್ಯ ಅನ್ನಿಸಿಕೊಂಡ. ಮೆಸ್ಲಿನ್ನ ಶಿಫಾರಸಿನ ಮೇಲೆ ಆಸ್ಟ್ರಿಯದ ಶಾಲೆಯೊಂದರಲ್ಲಿ ಅವನಿಗೆ ಗಣಿತಶಿಕ್ಷಕನ ಕೆಲಸವೂ ಸಿಕ್ಕಿತು. ಅಲ್ಲಿರುವಾಗ, ತನ್ನ ೨೫ನೆಯ ವಯಸ್ಸಿಗೇ ಕೆಪ್ಲರ್ ತಾನು ಇದುವರೆಗೆ ಕಂಡುಹಿಡಿದ ಎಲ್ಲ ಮಾಹಿತಿಯನ್ನು ಒಟ್ಟುಸೇರಿಸಿ `ವಿಶ್ವ ರಹಸ್ಯ’ ಎಂಬ ಪುಸ್ತಕ ಬರೆದ. ಬ್ರಾಹೆಗೆ ಕಳಿಸಿದ ಪುಸ್ತಕ ಕೂಡ ಅದೇ.
“ಕೂಡಲೇ ನನ್ನಲ್ಲಿಗೆ ಬಂದು ಕೆಲಸಕ್ಕೆ ಸೇರಿಬಿಡು” ಎಂದು ಬ್ರಾಹೆ ಹೇಳಿದಾಗ ಕೆಪ್ಲರ್ಗೆ ಖುಷಿಯಾದರೂ ಪ್ರಾಗ್ಅನ್ನು ಬಿಟ್ಟು ಹೋಗಲು ಅವನ ಮನಸ್ಸು ಒಪ್ಪಲಿಲ್ಲವೋ ಏನೋ. ಮೆಸ್ಲಿನ್ ಕೊಡಿಸಿದ ಕೆಲಸವನ್ನು ಎರಡೇ ವರ್ಷಗಳಲ್ಲಿ ಬಿಟ್ಟು ಗುಳೆಹೋಗುವುದು ಒಳ್ಳೆಯದಲ್ಲ ಎಂದಾತ ಎಣಿಸಿರಬಹುದು. ಆದರೆ, ಮುಂದೆ ನಡೆದ ಕೆಲವೊಂದು ಘಟನೆಗಳು ಅವನ ಮನಃಸ್ಥಿತಿಯನ್ನು ಬದಲಾಯಿಸಿ ಬ್ರಾಹೆಯ ಬಳಿ ಹೋಗುವಂತೆ ಮಾಡಿದವು. ಕ್ರೈಸ್ತರಲ್ಲಿ ಮುಖ್ಯವಾಗಿ ಎರಡು ಪಂಗಡಗಳು. ಒಂದು ಕ್ಯಾಥೊಲಿಕ್ರದ್ದಾದರೆ ಇನ್ನೊಂದು ಪ್ರಾಟೆಸ್ಟೆಂಟ್ಗಳದ್ದು. ಹದಿನಾರನೇ ಶತಮಾನದಲ್ಲಿ ಯೂರೋಪಿನಲ್ಲಿ ಇವೆರಡು ಬಣಗಳಿಗೂ ಹಾವು-ಮುಂಗುಸಿಯ ನಂಟು. ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಲೇ ಇದ್ದರು. ಬೈಬಲ್ಅನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಅದರ ಎಲ್ಲಾ ತತ್ತ್ವಗಳನ್ನು ಅನುಸರಿಸುತ್ತಿದ್ದವರು ಕ್ಯಾಥೊಲಿಕ್ಗಳು. ಚರ್ಚ್ನ ಎಲ್ಲ ಅಧಿಕಾರ ಇದ್ದದ್ದು ಅವರ ಬಳಿಯಲ್ಲೇ. ಅವರ ಚಿಂತನೆಯನ್ನು ಅಲ್ಲಲ್ಲಿ ಮುರಿದು, ವಿರೋಧಿಸಿ ಜಗಳಕ್ಕೆ ಇಳಿಯುತ್ತಿದ್ದವರು ಪ್ರಾಟೆಸ್ಟೆಂಟ್ಗಳು. ಕೆಪ್ಲರ್ ಮೊದಲಿನಿಂದಲೂ ಈ ಎರಡನೇ ಬಣದ ಜೊತೆ ಗುರುತಿಸಿಕೊಂಡಿದ್ದವನು. ಈ ಎರಡು ಬಣಗಳ ನಡುವೆ ಆಗಾಗ ಭುಗಿಲೆದ್ದು ಹೊಯ್ಕೈಗೆ ಕಾರಣವಾಗುತ್ತಿದ್ದ ಕ್ಷುಲ್ಲಕ ಜಗಳಗಳು ದಿನಕಳೆಯುತ್ತಿದ್ದಂತೆ ಯುದ್ಧದ ಸ್ವರೂಪ ಪಡೆದವು. ಇಡೀ ನಗರವನ್ನೇ ಕ್ಯಾಥೊಲಿಕರು ಕೈವಶ ಮಾಡಿಕೊಂಡಮೇಲೆ ಪ್ರೊಟೆಸ್ಟೆಂಟ್ಗಳು ಊರುಬಿಟ್ಟು ಗುಳೆ ಹೋಗಬೇಕಾದ ಪರಿಸ್ಥಿತಿ ಬಂತು.
ಇತ್ತ ದುರದೃಷ್ಟಕ್ಕೆ ಅದೇ ಸಮಯದಲ್ಲಿ ಬ್ರಾಹೆಯ ಗ್ರಹಚಾರ ಕೂಡ ಕೆಟ್ಟಿತ್ತು! ಅವನನ್ನು ಇದುವರೆಗೂ ಸಾಕಿಕೊಂಡಿದ್ದ; ಯಾವುದಕ್ಕೂ ಕಿಂಚಿದೂನವಾಗದಂತೆ ಸುಖವಾಗಿ ನೋಡಿಕೊಂಡಿದ್ದ ಫ್ರೆಡರಿಕ್ ತೀರಿಕೊಂಡ ಮೇಲೆ ಬಂದ ಬೇರೆ ರಾಜನಿಗೆ ಬ್ರಾಹೆಯ ಮೇಲೆ ಗೌರವ, ಪ್ರೀತಿ, ವಿಶ್ವಾಸಗಳೇನೂ ಇರಲಿಲ್ಲ. ಈ ಉದ್ಧಟನಿಗೆ ಒಂದಿಡೀ ದ್ವೀಪವನ್ನು ಬಿಟ್ಟುಕೊಟ್ಟು ಕೆಲಸ ತೆಗೆಸುವಂಥಾದ್ದೇನಿದೆ; ಅಷ್ಟಕ್ಕೂ ಇವನ ಸಂಶೋಧನೆಯಿಂದ ಯಾರಿಗೇನು ಲಾಭ – ಎಂದು ಬಗೆದವನೇ ಬ್ರಾಹೆಯನ್ನು ದ್ವೀಪ ಬಿಟ್ಟು ತೆರಳುವಂತೆ ಖಡಕ್ಕಾಗಿ ಹೇಳಿದ. ಇನ್ನೊಬ್ಬರ ಮರ್ಜಿಯಲ್ಲಿ ದಿನ ಕಳೆಯುವುದು ಬ್ರಾಹೆಗೆ ಆಗದ ಕೆಲಸ. ಆತ ಬೇಕಾದರೆ ಉಪವಾಸ ಇದ್ದು ನರಳಿಯಾನು, ಪರರೆದುರು ಗಂಜಿಗಾಗಿ ಕೈಯೊಡ್ಡಲಾರ. ಸ್ವಪ್ರತಿಷ್ಠೆಗೆ ಧಕ್ಕೆ ಬಂದೊಡನೆ ಬ್ರಾಹೆ ತನ್ನ ಸಾಮಾನು-ಸರಂಜಾಮುಗಳನ್ನು ಕಟ್ಟಿಕೊಂಡು ವೀಕ್ಷಣಾಲಯದಿಂದ ಹೊರನಡೆದೇಬಿಟ್ಟ! ಹಾಗೆ ಹೊರಬಂದವನು ಯೂರೋಪಿನಲ್ಲಿ ದೇಶದಿಂದ ದೇಶಕ್ಕೆ ಅಲೆಯುತ್ತ ತನ್ನ ಪ್ರಯೋಗ-ಸಂಶೋಧನೆಗಳನ್ನು ಮುಂದುವರಿಸಲು ಬೇಕಾದ ಸವಲತ್ತು ಒದಗಿಸಬಲ್ಲವರ ಹುಡುಕಾಟಕ್ಕೆ ತೊಡಗಿದ. ಆಗ ಅವನ ಜಾಣ್ಮೆ-ಧೀಮಂತಿಕೆಗಳ ಬಗ್ಗೆ ತಿಳಿದ ಪ್ರಾಗ್ನ ರಾಜ ಎರಡನೇ ರುಡೋಲ್ಫಿ ಎಂಬವನು ತನ್ನಲ್ಲಿಗೆ ಬರುವಂತೆ ಬ್ರಾಹೆಗೆ ಕೇಳಿಕೊಂಡ. ಅವನ ಕೋರಿಕೆ ಮನ್ನಿಸಿ ಬ್ರಾಹೆ ಪ್ರಾಗ್ಗೆ ಬಂದ. ಹೊಸ ಪ್ರಯೋಗಾಲಯ ಕಟ್ಟಿದ. ತನ್ನ ಸಹಾಯಕನಾಗಿರುವಂತೆ ಕೇಳಿ ಕೆಪ್ಲರ್ಗೆ ಪತ್ರ ಬರೆದ. ಇಂಥದೊಂದು ಸದವಕಾಶಕ್ಕಾಗಿ ಕಾಯುತ್ತಿದ್ದ ಕೆಪ್ಲರ್ಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಪ್ರಾಗ್ಗೆ ಹೊರಟುನಿಂತ.
೧೬೦೦ನೆಯ ಇಸವಿ. ಯೂರೋಪಿನಲ್ಲಿ ಪ್ರಕ್ಷುಬ್ಧತೆಯ ಕಾಲ. ಸೂರ್ಯಸಿದ್ಧಾಂತವನ್ನು ಪ್ರತಿಪಾದಿಸಿದ, ಬೆಂಬಲಿಸಿದ ಎಲ್ಲರನ್ನೂ ಬರ್ಬರವಾಗಿ ಬೆಂಕಿಗೆ ಹಾಕಿ ಜೀವಂತ ಸುಡುತ್ತಿದ್ದ ಸಮಯ ಅದು. ವಿಜ್ಞಾನ ಚರ್ಚ್ಗಳ, ಪಾದರಿಗಳ ಕೈಯಲ್ಲಿ ಲ್ಯಾಬೊರೇಟರಿಯ ಕಪ್ಪೆಯಂತೆ ನರಳುತ್ತಿತ್ತು. ಮಂಚಕ್ಕೆ ಮೂರೇ ಕಾಲು ಎಂದು ಪಾದರಿ ಹೇಳಿದರೆ ಇಡೀ ದೇಶವೇ ಹೌದಪ್ಪ ಹೌದು ಎಂದು ತಲೆಯಾಡಿಸಿ ಒಪ್ಪಿಕೊಳ್ಳುತ್ತಿದ್ದ ವಿಷಮ ಸನ್ನಿವೇಶ! ಪ್ರಯೋಗ, ವೀಕ್ಷಣೆ, ಕಾರ್ಯಕಾರಣಸಂಬಂಧ, ತರ್ಕ ಮುಂತಾದವುಗಳಿಗೆ ಯಾವ ಕಿಮ್ಮತ್ತೂ ಇರಲಿಲ್ಲ. ಅಂತಹ ಹೊಗೆಗೂಡಲ್ಲಿ ಕೂತು ಸತ್ಯ ಹೇಳಲು ಹೋಗಿ ತಾನೂ ಬೂದಿಯಾಗುವುದು ಬ್ರಾಹೆಗೆ ಬೇಕಿರಲಿಲ್ಲ. ಅವನ ಚಿತ್ರ ರೂಪುಗೊಂಡದ್ದು ಇಂತಹ ಹಿನ್ನೆಲೆಯಲ್ಲಿ. ಆದರೆ, ಕೆಪ್ಲರ್ ಬ್ರಾಹೆಯ ಈ ವಿಚಿತ್ರವಾದವನ್ನು ಒಪ್ಪಲು ತಯಾರಿರಲಿಲ್ಲ. ಲೋಕದ ವ್ಯವಹಾರ ಇಷ್ಟೊಂದು ಸಂಕೀರ್ಣವಾಗಿರಬೇಕಾಗಿಲ್ಲ; ಎಲ್ಲಾ ಗ್ರಹಗಳೂ ಸೂರ್ಯನ ಸುತ್ತಲೇ ಸುತ್ತುತ್ತವೆ ಎನ್ನುವುದು ಕೆಪ್ಲರ್ನ ವಾದವಾಗಿತ್ತು. ಆದರೆ ತನ್ನ ವಾದ ಮುಂದಿಡುವ ಆತುರದಲ್ಲಿ ತಾನೂ ಒಂದಷ್ಟು ತಪ್ಪುಗಳನ್ನು ಮಾಡಿಬಿಟ್ಟಿದ್ದ. ಅವನ ಪ್ರಕಾರ ಬೇರೆಬೇರೆ ಗ್ರಹಗಳು ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಬೇರೆಬೇರೆ ವಿನ್ಯಾಸಗಳನ್ನು ಅನುಸರಿಸುತ್ತವೆ. ಉದಾಹರಣೆಗೆ ಬುಧ ಅಷ್ಟಭುಜಾಕೃತಿಯ ಆಕಾರದಲ್ಲಿ, ಶುಕ್ರ ೧೧ ಭುಜಗಳ ಆಕೃತಿಯ ಆಕಾರದಲ್ಲಿ, ಭೂಮಿ ದ್ವಾದಶಭುಜಾಕೃತಿಯ ವಿನ್ಯಾಸದಲ್ಲಿ ಸುತ್ತುತ್ತದೆ ಎಂದು ಕೆಪ್ಲರ್ ಊಹಿಸಿದ್ದ! ಕೆಪ್ಲರ್ನ ಎಲ್ಲ ಬಗೆಯ ಊಹೆಗಳೂ ಬರುತ್ತಿದ್ದದ್ದು ಅವನು ಕಾಗದದ ಮೇಲೆ ಬರೆಯುತ್ತಿದ್ದ ನೂರಾರು ಪ್ರಮೇಯ, ಸೂತ್ರ, ಸಮೀಕರಣಗಳಿಂದ. ಆಕಾಶದಲ್ಲಿ ಪೂರ್ಣಚಂದ್ರನನ್ನು ಮಾತ್ರ ತಪ್ಪಿಲ್ಲದೆ ನೋಡಲು ಸಾಧ್ಯವಿದ್ದ, ಇನ್ನುಳಿದ – ಮಿನುಗುವ ನಕ್ಷತ್ರಗಳ ಬಗ್ಗೆ ಅಷ್ಟೊಂದು ಸೂಕ್ಷ್ಮವಾಗಿ ನೋಡುವ ಅನುಕೂಲ ಇಲ್ಲದಿದ್ದ ಕೆಪ್ಲರ್ಗೆ ತಾನು ಬರೆದ ಲೆಕ್ಕವನ್ನು ಪರೀಕ್ಷೆಗೊಡ್ಡಬೇಕಾಗಿತ್ತು. ಅದಕ್ಕಾಗಿ, ಬ್ರಾಹೆ ಇದುವರೆಗೆ ಬರೆದಿರುವ ವೀಕ್ಷಣವಿವರಣೆಗಳನ್ನು ಹಂಚಿಕೊಳ್ಳಬೇಕೆಂದು ಕೇಳಿದ. ತಾನು ಮೂರುದಶಕಗಳ ಕಾಲ ನಿದ್ದೆಯಿಲ್ಲದೆ ಕೂತು ಬರೆದಿಟ್ಟ ವಿವರಣೆಗಳನ್ನು ಈಗಷ್ಟೇ ಬಂದ ಹೊಸ ಸಹಾಯಕನ ಜೊತೆ ಹಂಚಿಕೊಳ್ಳುವುದೆ? ಬ್ರಾಹೆಗೆ ಈ ಒಡಂಬಡಿಕೆ ಸ್ವಲ್ಪವೂ ಹಿಡಿಸಲಿಲ್ಲ. ದಿನಗಳೆದಂತೆ ಕೆಪ್ಲರ್ಗೆ ಬ್ರಾಹೆ ತನ್ನನ್ನು ಎರಡನೇದರ್ಜೆಯ ವ್ಯಕ್ತಿಯಂತೆ ನಡೆಸಿಕೊಳ್ಳುತ್ತಿದ್ದಾನೆ ಅನ್ನಿಸತೊಡಗಿತು. ಆಗಾಗ ಜಗಳಹತ್ತುವುದು ಸಾಮಾನ್ಯವಾಯಿತು. ತಾನು ಹೇಳಿದ್ದೇ ಸರಿ ಎಂದು ಚಿನ್ನದ ಮೂಗಿನ ನೇರಕ್ಕೆ ವಾದಿಸುತ್ತಿದ್ದ ಬ್ರಾಹೆ ಕೆಪ್ಲರ್ನ ವಾದಕ್ಕೆ ಕವಡೆಯ ಕಿಮ್ಮತ್ತೂ ಕೊಡುವುದಿಲ್ಲ ಎನ್ನುವುದು ಗುಟ್ಟಾಗಿ ಉಳಿಯಲಿಲ್ಲ.
ಬರಬರುತ್ತ ಅವರ ನಡುವಿನ ಸಂಬಂಧ ಹಳಸಲು ಶುರುವಾಯಿತು. ಸೈದ್ಧಾಂತಿಕವಾಗಿ ತೀರ ಭಿನ್ನವಾಗಿದ್ದ ಇಬ್ಬರೂ ಕಲೆತು ಕೆಲಸ ಮಾಡುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಉದ್ಭವಿಸಿತು. ಎಷ್ಟುಮಾತ್ರಕ್ಕೂ ಬ್ರಾಹೆಯ ಸೌರಮಂಡಲದ ವಿವರಣೆಯನ್ನು ಕೆಪ್ಲರ್ ಒಪ್ಪಲಿಲ್ಲ; ಕೆಪ್ಲರ್ನ ಜೊತೆ ತನ್ನ ಮೂವತ್ತು ವರ್ಷಗಳ ಆಕಾಶವೀಕ್ಷಣೆಯ ವಿವರಗಳನ್ನು ಹಂಚಿಕೊಳ್ಳಲು ಬ್ರಾಹೆಯೂ ಸಿದ್ಧನಿರಲಿಲ್ಲ. ಇವರಿಬ್ಬರ ಭೇಟಿಯಾಗಿ ಒಂದು ವರ್ಷದ ತರುವಾಯ, ಬ್ರಾಹೆ ಇದ್ದಕ್ಕಿದ್ದಂತೆ ತೀರಿಕೊಂಡ! ರಾಜನ ಜೊತೆ ರಾತ್ರಿಯ ಭೋಜನಕ್ಕೆ ಹೋಗಿದ್ದ ಬ್ರಾಹೆಗೆ ಅಂದು ರಾತ್ರಿ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತು. ಅದಾಗಿ ಹನ್ನೊಂದು ದಿನಗಳ ಕಾಲ ಅವನಿಗೆ ಮೂತ್ರವನ್ನು ವಿಸರ್ಜಿಸಲಾಗದೆ ಹೊಟ್ಟೆ ಉಬ್ಬರಿಸಿಕೊಂಡಿತು. ಒಂದೂವರೆ ವಾರ ಅಂತಹ ವಿಚಿತ್ರಯಾತನೆಯಿಂದ ನರಳಿ ಬ್ರಾಹೆ ಕೊನೆಗೆ ದಾರುಣವಾಗಿ ತೀರಿಕೊಂಡ. ಅವನ ದೇಹವನ್ನು ಇತ್ತೀಚೆಗೆ ಸಮಾಧಿಯಿಂದ ಹೊರತೆಗೆದು ಪರೀಕ್ಷಿಸಿದ ಸಂಶೋಧಕರಿಗೆ ಅದರಲ್ಲಿ ಪಾದರಸ ಸೇರಿಕೊಂಡಿದ್ದದ್ದು ಗೊತ್ತಾಗಿದೆಯಂತೆ. ಬ್ರಾಹೆಯ ಸಾವು ಸಹಜವಲ್ಲ; ಅವನಿಗೆ ವಿಷಪ್ರಾಶನ ಮಾಡಿಸಲಾಯಿತು ಎನ್ನುವ ಒಂದು ವಾದ ಇಂದಿಗೂ ಜೀವಂತವಾಗಿದೆ. ಆದರೆ, ಯಾರು ಮಾಡಿಸಿದರು, ಯಾಕಾಗಿ ಮಾಡಿದರು ಎನ್ನುವುದು ಕಾಲನ ಒಡಲಲ್ಲಿ, ಯಾರಿಗೂ ಕಾಣದಷ್ಟು ಆಳದಲ್ಲಿ ಕೆನೆಗಟ್ಟಿ ಕೂತಿದೆ. ಬ್ರಾಹೆ ತೀರಿಕೊಂಡ ವಾರದಲ್ಲೇ ಕೆಪ್ಲರ್ ತನ್ನೊಬ್ಬ ಗೆಳೆಯನಿಗೆ ಬರೆದಿದ್ದ ಪತ್ರದಲ್ಲಿ “ನಾನು ಅಜ್ಞಾತನಾಗಿ ಜೀವನ ಸವೆಸಿ ಸಾಯಬಯಸುವುದಿಲ್ಲ” ಎಂಬ ಮಾತನ್ನು ಮೂರ್ನಾಲ್ಕು ಸಲ ಆಡಿದ್ದಾನೆ. ಇದು ಬ್ರಾಹೆಯ ಅಂತ್ಯದಲ್ಲಿ ಕೆಪ್ಲರನ ಕೈವಾಡ ಇತ್ತು ಎನ್ನುವುದರ ಸೂಚನೆಯೇ?
ಬ್ರಾಹೆಯ ಮರಣಾನಂತರ ಆ ಜಾಗವನ್ನು ಅರಸಿಬರುವ ಗಟ್ಟಿಗರು ಯಾರೂ ಇಲ್ಲದ್ದರಿಂದ, ಅವನ ಜೊತೆ ಒಂದು ವರ್ಷ ಕೆಲಸ ಮಾಡಿದ್ದ ಕೆಪ್ಲರನಿಗೇ ಆ ಜವಾಬ್ದಾರಿ ಕೊಡಲಾಯಿತು. ಹೀಗೆ ಕೆಪ್ಲರ್ ರಾಜ್ಯದ ಮುಖ್ಯಜ್ಯೋರ್ತಿವಿಜ್ಞಾನಿಯಾಗಿ ಆಯ್ಕೆಯಾದ! ತಮಾಷೆಯೆಂದರೆ ಆ ಕಾಲದ `ಜ್ಯೋರ್ತಿವಿಜ್ಞಾನಿ’ಯ ಮುಖ್ಯ ಕೆಲಸ ರಾಜನ, ರಾಜ್ಯದ ಜಾತಕ ಬರೆದು ಫಲಾಫಲಗಳನ್ನು ಹೇಳುವುದು! ವಿಜ್ಞಾನಿಗಳು ಪ್ರಯೋಗಾಲಯ, ವೀಕ್ಷಣಾಲಯಗಳನ್ನು ಕಟ್ಟಿಕೊಂಡು ತಮ್ಮ ಬದುಕನ್ನೇ ಬದಲಿಸಬಲ್ಲ ಕುಜ, ಬುಧ, ಶನಿಗಳಂತಹ ಗ್ರಹಗಳ ಚಲನೆಯನ್ನು ನೋಡುತ್ತಿರುತ್ತಾರೆ ಎಂದೇ ರಾಜರು ನಂಬಿದ್ದರು! `ಅದು ಹಾಗಲ್ಲ, ನಿಮ್ಮ ಜೀವನಕ್ಕೂ ನಮ್ಮ ಕೆಲಸಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದೇನಾದರೂ ಈ ಪಂಡಿತರು ಸುಭಗರಂತೆ ಹೇಳಹೋದರೆ ಒಂದೋ ಅವರ ಕೆಲಸ ಹೋಗುತ್ತಿತ್ತು, ಇಲ್ಲವೇ ತಲೆಯೇ ಉರುಳುತ್ತಿತ್ತು. ಹಾಗಾಗಿ, ರಾಜರನ್ನು ಮೆಚ್ಚಿಸಲು, ತಮ್ಮ ಕೆಲಸ ಮತ್ತು ಜೀವ ಉಳಿಸಿಕೊಳ್ಳಲು ನಂಬಿಕೆಗಳಲ್ಲಿ ನಂಬಿಕೆ ಇಲ್ಲದ ಬುದ್ಧಿವಂತರೂ ಜಾತಕ ಬರೆದುಕೊಡಬೇಕಾಗಿತ್ತು. ಕೆಪ್ಲರ್ ಜಾತಕ ಬರೆಯಬಲ್ಲಷ್ಟು ಗಣಿತ ಗೊತ್ತಿರುವವನು, ಅಲ್ಲದೆ ವಾರ್ಷಿಕ ಪಂಚಾಂಗವನ್ನೂ ಸಿದ್ಧಪಡಿಸಬಲ್ಲ ಪಂಡಿತ ಎನ್ನುವುದು ಗೊತ್ತಿದ್ದರಿಂದಲೇ, ಅವನನ್ನು ರಾಜ ಉಳಿಸಿಕೊಳ್ಳುವ ಯೋಚನೆ ಮಾಡಿದ್ದು. ತನ್ನ ಕೆಲಸ ಮಾಡಿಸಿಕೊಳ್ಳಲು ರಾಜನ ಈ ಪೆದ್ದುತನವನ್ನೇ ಉಪಯೋಗಿಸಿಕೊಳ್ಳುವ ಹಂಚಿಕೆಹಾಕಿದ ಕೆಪ್ಲರ್, ರಾಜನಿಗೆ ಬೇಕುಬೇಕಾದ ರೀತಿಯಲ್ಲಿ ಜಾತಕ, ಪಂಚಾಂಗ ಬರೆದುಕೊಟ್ಟು ಬ್ರಾಹೆಯ ಕಪಾಟುಗಳ ಕೀಲಿಕೈ ಸಂಪಾದಿಸಿದ. ಬ್ರಾಹೆ ಒಂದೇ ಒಂದಿರುಳೂ ಉದಾಸೀನ ಮಾಡದೆ, ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಬರೆದಿಟ್ಟ ಕರಾರುವಾಕ್ ಮಾಹಿತಿಗಳ ಬೆಟ್ಟವೇ ಕೆಪ್ಲರನ ಎದುರು ಬಂದು ಬಿತ್ತು!
ಕೆಪ್ಲರ್ ಈ ಉಗ್ರಾಣದಲ್ಲಿ ಇಳಿದು, ಮುಳುಗಿಹೋದ. ವರ್ಷಾನುಗಟ್ಟಲೆ ಅದರ ಜೊತೆ ಗುದ್ದಾಡಿದ. ಬ್ರಾಹೆಯ ಜೊತೆ ಎಷ್ಟೆಲ್ಲ ಜಗಳಗಳಿದ್ದರೂ, ಒಂದು ವಿಷಯದಲ್ಲಿ ಮಾತ್ರ ಕೆಪ್ಲರ್ಗೆ ಬ್ರಾಹೆಯ ಮೇಲೆ ಸಂಪೂರ್ಣ ನಂಬಿಕೆಯಿತ್ತು. ಅದು, ವೀಕ್ಷಣೆಯಲ್ಲಿ ಬ್ರಾಹೆಗಿದ್ದ ನಿಷ್ಕೃಷ್ಟತೆಯ ಛಲ. ಕಾಯಗಳ ಸ್ಥಾನನಿರ್ದೇಶನ ಮಾಡುವಾಗ ಒಂದೇ ಒಂದು ಡಿಗ್ರಿಯ ವ್ಯತ್ಯಾಸವನ್ನೂ ಬ್ರಾಹೆ ಸಹಿಸುತ್ತಿರಲಿಲ್ಲ. ಹಾಗೇನಾದರೂ ಒಂದು ಕೂದಲೆಳೆಯಷ್ಟು ತಪ್ಪು ನುಸುಳಿಬಿಟ್ಟಿತು ಎಂದು ಗೊತ್ತಾದ ದಿನ ಅನ್ಯಮನಸ್ಕನಾಗಿರುತ್ತಿದ್ದ. ಹಾಗಾಗಿ, ಬ್ರಾಹೆ ಬರೆದದ್ದನ್ನು ಅನುಮಾನಿಸಲು ಯಾವ ಕಾರಣಗಳೂ ಇರಲಿಲ್ಲ. ಅವನು ಬರೆದಿಟ್ಟ ಮಾಹಿತಿಗಳ ಕಣಜ ಎಷ್ಟು ದೊಡ್ಡದಿತ್ತೆಂದರೆ, ಅದನ್ನು ಪೂರ್ತಿಯಾಗಿ ವಿಶ್ಲೇಷಿಸಿ ಒಂದು ಹಂತದವರೆಗೆ ತನ್ನ ಸಂಶೋಧನೆಯನ್ನು ಎಳೆದುತರಲಿಕ್ಕೇ ಕೆಪ್ಲರ್ಗೆ ಹದಿನೈದು ವರ್ಷಗಳು ಹಿಡಿದವು! ಬ್ರಾಹೆಯ ವೀಕ್ಷಣವಿವರಣೆಯನ್ನು ಎದುರಿಟ್ಟುಕೊಂಡು ಕೋಪರ್ನಿಕಸನ ವಾದವನ್ನು ಸಾಧಿಸಲು ಹೋದಾಗೆಲ್ಲ ಅವನಿಗೆ ಗೊಂಡಾರಣ್ಯದ ನಡುವೆ ದಾರಿತಪ್ಪಿದ ಪಥಿಕನಂತೆ ಅನ್ನಿಸುತ್ತಿತ್ತು. ಅವೆರಡಕ್ಕೂ ಬಹಳದೊಡ್ಡ ಅಂತರದ ಕಂದರ ಸೃಷ್ಟಿಯಾಗುತ್ತಿತ್ತು. ಎರಡರಲ್ಲೊಂದು ವಾದ ದಾರಿತಪ್ಪಿರುವ ಸಾಧ್ಯತೆ ಅಧಿಕವಾಗಿತ್ತು. ಕೆಪ್ಲರ್, ಕೋಪರ್ನಿಕಸನ ವಾದವನ್ನು ತಾತ್ಕಾಲಿಕವಾಗಿ ಬದಿಗಿಟ್ಟು ಬ್ರಾಹೆಯ ವಿವರಣೆಗಳನ್ನಷ್ಟೇ ಎತ್ತಿಕೊಂಡು ಮುಂದುವರಿದು, ಕೊನೆಗೆ ಎಲ್ಲವನ್ನೂ ಕ್ರೋಢೀಕರಿಸಿ ಎರಡು ನಿಯಮಗಳನ್ನು ಮಂಡಿಸಿದ:
೧. ಪ್ರತಿಯೊಂದು ಗ್ರಹವೂ ಸೂರ್ಯನ ಸುತ್ತ ದೀರ್ಘವೃತ್ತ – ಅಂದರೆ ಎಲಿಪ್ಟಿಕ್ ಕಕ್ಷೆಯಲ್ಲಿ ಸುತ್ತುತ್ತದೆ. ಸೂರ್ಯನ ನೆಲೆ ಇದರ ಒಂದು ನಾಭಿ.
೨. ಸಮಕಾಲಾವಧಿಗಳಲ್ಲಿ ಗ್ರಹ ರೇಖಿಸುವ ಸಲೆಗಳು ಸಮವಾಗಿರುತ್ತವೆ.
ಈ ಎರಡು ನಿಯಮಗಳ ಮೂಲಕ ಕೆಪ್ಲರ್, ಕೋಪರ್ನಿಕಸ್ ಮತ್ತು ಬ್ರಾಹೆಯವರನ್ನು ಒಪ್ಪಿಕೊಂಡೂ ಅವರ ತಪ್ಪು ಹೇಳಿಕೆಗಳನ್ನು ಎತ್ತಿತೋರಿಸುವ ಕೆಲಸ ಮಾಡಿದ. `ಎಲ್ಲಾ ಗ್ರಹಗಳೂ ಸೂರ್ಯನ ಸುತ್ತ ವೃತ್ತಾಕಾರದಲ್ಲಿ ಸಮವೇಗದಲ್ಲಿ ಸುತ್ತುತ್ತವೆ’ ಎಂದು ಕೋಪರ್ನಿಕಸ್ ಹೇಳಿದ್ದರಲ್ಲಿ `ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ’ ಎಂಬುದಷ್ಟೇ ಸರಿ; `ವೃತ್ತಾಕಾರದಲ್ಲಿ, ಸಮವೇಗದಲ್ಲಿ’ ಎನ್ನುವುದು ತಪ್ಪು ಎನ್ನುವುದನ್ನು ತೋರಿಸಿಕೊಟ್ಟದ್ದು ಕೆಪ್ಲರನ ಹೆಗ್ಗಳಿಕೆ. ಗ್ರಹಗಳ ಕಕ್ಷೆ ವೃತ್ತವಲ್ಲ; ದೀರ್ಘವೃತ್ತ ಎನ್ನುವುದು ಆ ಕಾಲಕ್ಕೆ ಕ್ರಾಂತಿಕಾರಕ ವಿಚಾರವೇ ಆಗಿತ್ತೆನ್ನಬೇಕು. ಇನ್ನು `ಸಮವೇಗದಲ್ಲಿ ತಿರುಗುತ್ತವೆ’ ಎನ್ನುವ ಚಿಂತನೆಯನ್ನು ಕೆಪ್ಲರನ ಎರಡನೆಯ ನಿಯಮ ಬುಡಮೇಲುಮಾಡಿತು. ಗ್ರಹ ಸೂರ್ಯನ ಸನಿಹ ಸರಿಯುವಾಗ ವೇಗ ಗಳಿಸುತ್ತದೆ. ಸೂರ್ಯನಿಗಿಂತ ದೂರ ಹೋಗುವಾಗ ಅದರ ವೇಗ ತಗ್ಗುತ್ತದೆ ಎನ್ನುವುದು ಅದರ ತಿರುಳು. ಹೀಗೆ ಗ್ರಹದ ವೇಗವನ್ನು ಹೆಚ್ಚುಕಡಮೆ ಮಾಡುವ ಶಕ್ತಿ ಯಾವುದು ಎನ್ನುವುದು ಮಾತ್ರ ಗೊತ್ತಾಗಲಿಲ್ಲ. ಗ್ರಹಗಳನ್ನು ತನ್ನ ಸುತ್ತ ತಿರುಗುವಂತೆ ಮಾಡುವ ಒಂದು ವಿಶೇಷ ಶಕ್ತಿ ಸೂರ್ಯನಿಗಿದೆ ಎಂದು ಕೆಪ್ಲರ್ ತರ್ಕಿಸಿದ. ಅಂತಹದೇ ವಿಚಿತ್ರ ಶಕ್ತಿ ಚಂದ್ರನನ್ನು ವಸುಂಧರೆಯ ಸುತ್ತ ತಿರುಗಿಸುತ್ತಿದೆ ಎಂದೂ ಊಹಿಸಿದ. ನ್ಯೂಟನ್ನ ಗುರುತ್ವದ ಕಲ್ಪನೆಯ ಬೀಜ ಮೊಳೆತಿದ್ದು ಇಲ್ಲೇ!
ಅಷ್ಟಕ್ಕೇ ನಿಲ್ಲದೆ ಮುಂದುವರಿದು, ಹತ್ತು ವರ್ಷಗಳ ಬಳಿಕ ಕೆಪ್ಲರ್ ಮೂರನೇ ನಿಯಮವನ್ನು ಬರೆದ. ಗ್ರಹದ ಪರಿಭ್ರಮಣೆಯ ಕಾಲಾವಧಿಯ ವರ್ಗ, ಸೂರ್ಯ-ಗ್ರಹಗಳ ನಡುವಿನ ಸರಾಸರಿ ಅಂತರದ ಘನಕ್ಕೆ ಅನುಲೋಮ ಅನುಪಾತದಲ್ಲಿರುತ್ತದೆ ಎನ್ನುವುದು ಅದರ ಹೇಳಿಕೆ. ಸರಳವಾಗಿ ಹೇಳಬೇಕೆಂದರೆ, ಸೂರ್ಯನಿಗೆ ತುಂಬ ಹತ್ತಿರದಲ್ಲಿ ಪರಿಭ್ರಮಿಸುವ ಗ್ರಹಗಳು ವೇಗವಾಗಿ ಗಿರಕಿಹೊಡೆಯುತ್ತವೆ; ದೂರದಲ್ಲಿರುವ ಕಾಯಗಳು ಮಂದಗತಿಯಲ್ಲಿ ನಡೆಯುತ್ತವೆ – ಎನ್ನುವುದು ಅದರ ತಿರುಳು. ಇದೆಲ್ಲ ವಿಷಯಗಳನ್ನು ವಿವರಿಸುವ `ಗ್ರಹಕಾಯಗಳ ಸಾಂಗತ್ಯ’ ಎಂಬ ಪುಸ್ತಕ ೧೬೧೯ರಲ್ಲಿ ಹೊರಬಂತು. `ಇಲ್ಲಿ ಬರೆದಿರುವ ವಿಚಾರಗಳನ್ನು ಸರಿಯಾಗಿ ತಿಳಿಯಬಲ್ಲ ಓದುಗನಿಗಾಗಿ ಈ ಹೊತ್ತಗೆ ಇನ್ನೂ ನೂರು ವರ್ಷ ಕಾಯಬೇಕಾಗಬಹುದು! ತನ್ನ ಸೃಷ್ಟಿಯ ರಹಸ್ಯಗಳನ್ನು ಬೇಧಿಸಬಲ್ಲ ವಿಜ್ಞಾನಿ ಅವತರಿಸಲು ಸ್ವತಃ ಭಗವಂತನೇ ಆರು ಸಾವಿರ ವರ್ಷ ಕಾಯಲಿಲ್ಲವೆ!’ ಎಂದು ಆ ಪುಸ್ತಕದಲ್ಲಿ ಕೆಪ್ಲರ್ ಬರೆದ.
ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ಗಳ ನಡುವಿನ ವೈಮನಸ್ಯ, ದ್ವೇಷದ ಉರಿ ಕಡಮೆಯಾಗಲೇ ಇಲ್ಲ. ೧೬೧೮ರಲ್ಲಿ ಬೊಹೆಮಿಯದಲ್ಲಿ ಶುರುವಾದ ಯುದ್ಧ ಮುಂದಿನ ಮೂವತ್ತು ವರ್ಷಗಳ ಕಾಲ ನಡೆಯಿತು, ಮಾತ್ರವಲ್ಲ ಇಡೀ ಯೂರೋಪಿಗೇ ಹರಡಿತು. ಅದರ ನಡುವಲ್ಲೇ ಕೆಪ್ಲರನ ತಾಯಿ ಮಾಟಗಾತಿ ಎಂದು ವಿಚಾರಣೆ, ಬಂಧನ, ಶಿಕ್ಷೆಗಳು ನಡೆದವು. ತಾಯಿಯನ್ನು ಈ ಎಲ್ಲ ತಾಪತ್ರಯಗಳಿಂದ ರಕ್ಷಿಸಲು ಕೆಪ್ಲರ್ ಮಾಡಿದ ಪ್ರಯತ್ನಗಳೆಲ್ಲ ನೀರಲ್ಲಿ ಹುಣಿಸೆ ತೊಳೆದಂತಾದವು. ರಾಜನ ಕೃಪಾದೃಷ್ಟಿ ಇದ್ದರೂ, ಚರ್ಚ್ನ ಧರ್ಮಗುರುಗಳು ರಾಜನಿಗಿಂತ ಒಂದು ಮಡಿ ಎತ್ತರದಲ್ಲಿ ಕೂತಿದ್ದರಿಂದ, ಕೆಪ್ಲರ್ ಕೊನೆಗೆ ಕೈಚೆಲ್ಲಬೇಕಾಯಿತು. ೧೬೧೭ರಿಂದ ೨೧ರವರೆಗೆ ನಾಲ್ಕು ವರ್ಷಗಳ ಕಾಲ ತನ್ನ ಸಂಶೋಧನೆಗಳನ್ನೆಲ್ಲ ಪೂರ್ತಿ ನಿಲ್ಲಿಸಿ ಈ ವಿವಾದದ ಸಂಬಂಧ ಓಡಾಡುವುದೇ ಅವನ ಮುಖ್ಯ ಕಸುಬಾಗಿತ್ತು. ಆಗಿನ ಅವನ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ಗ್ರಹಗಳ ಸಾಂಗತ್ಯದ ಮೇಲೆ ಬರೆದ ಪುಸ್ತಕದಲ್ಲಿ ಮುಚ್ಚುಮರೆಯಿಲ್ಲದೆ ವಿವರಿಸಿಕೊಂಡಿದ್ದಾನೆ. ಅದೇ ಕಾರಣಕ್ಕೆ ಅದೊಂದು ಸಂಶೋಧನೆಯ ಹೆಸರಲ್ಲಿ ಬರೆದುಕೊಂಡ ಆತ್ಮಚರಿತ್ರೆ ಎಂದೂ ಹೇಳುವವರುಂಟು. ಕೆಪ್ಲರ್ನ ಬಾಲ್ಯ ಹೂವಿನಂತೆ ಸುಂದರವಾಗಿರಲಿಲ್ಲ; ಮದುವೆಯಾದ ಮೇಲೂ ಹೆಂಡತಿಯೊಂದಿಗೆ ಸುಖವಾದ ಬಾಳುವೆ ಮಾಡಲು ಸಾಧ್ಯವಾಗಲಿಲ್ಲ; ತಾಯಿಯ ಮೇಲೆ ಆರೋಪಗಳು ಬಂದಾಗೆಲ್ಲ ಅವನ ಮನಸ್ಸು ಬಿಸಿನೀರಿಗೆ ಬಿದ್ದ ಕಪ್ಪೆಯಂತೆ ಹೊಯ್ದಾಡುತ್ತಿತ್ತು. ಪ್ರೊಟೆಸ್ಟೆಂಟ್ ಆದ್ದರಿಂದ ಬೆನ್ನಿಗೆ ಮೊಳೆಹೊಡೆಯುವ ಧರ್ಮಗುರುಗಳ ಕಣ್ಣುತಪ್ಪಿಸಿಯೇ ಜೀವನದ ಬಹುಕಾಲ ಕಳೆಯಬೇಕಾಯಿತು. ಬ್ರಾಹೆಯ ಸಾವಿನ ನಂತರ, ಹಲವಾರು ಸಂಶಯದ ಹುತ್ತಗಳು ಸುತ್ತ ಬೆಳೆದು ಅವನ ಉಸಿರಾಟವನ್ನೇ ಅಸಹನೀಯವಾಗಿಸಿದವು. ಒಟ್ಟಲ್ಲಿ ಜೀವನಪೂರ್ತಿ ಒಂದಲ್ಲ ಒಂದು ಕ್ಲೇಶದಿಂದ ಬೇಯುತ್ತಲೇ ಇದ್ದ ಕೆಪ್ಲರ್ಗೆ ನೆಮ್ಮದಿ ಮರೀಚಿಕೆಯಾಗಿಯೇ ಉಳಿಯಿತು. ಅವನು ಜೀವಂತವಿದ್ದಷ್ಟು ಕಾಲ, ಅವನು ರೂಪಿಸಿದ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆ, ಆಸಕ್ತಿ ಮೊಳೆಯಲೇ ಇಲ್ಲ ಯಾರಿಗೂ! ಇನ್ನು, ಜೀವನದ ಕೊನೆಯಲ್ಲಿ ಅವನು ರಾಜನ ಪ್ರೀತ್ಯರ್ಥ ತನಗೊಲ್ಲದ ಜಾತಕ ಬರೆಯುವ ಕೆಲಸವನ್ನೂ ಮಾಡಬೇಕಾಯಿತು. ತಾನು ನಂಬಿದ ವಿಜ್ಞಾನಕ್ಕೆ ಪೂರ್ತಿ ವಿರುದ್ಧವಾಗಿದ್ದ ಮೂಢ ಕೆಲಸಗಳನ್ನು ಮಾಡಲು ಮನಸ್ಸು ಕೇಳದೆ ಅವನು ವೃದ್ಧಾಪ್ಯದಲ್ಲಿ ರೇಹಾನ್ಸ್ಬರ್ಗ್ ಎಂಬ ತನ್ನ ಪೂರ್ವಿಕರ ಹಳ್ಳಿಗೆ ಹೊರಟುಹೋದ. ಅಲ್ಲಿಗೆ ತೆರಳಿದ ಒಂದು ವರ್ಷದೊಳಗಾಗಿ, ೧೬೩೦ರ ನವೆಂಬರ್ ೩೦ರಂದು ಕೆಪ್ಲರ್ ಮಡಿದ. ವಿಧಿ ಅವನ ಪಾಲಿಗೆ ಎಷ್ಟು ಕ್ರೂರವಾಗಿತ್ತೆಂದರೆ, ಅವನ ಕಳೇಬರವನ್ನು ಊರ ಹೊರಗಿನ ಪ್ರೊಟೆಸ್ಟೆಂಟ್ ಸಮಾಧಿಯಲ್ಲಿ ಮಣ್ಣುಮಾಡಲಾಯಿತು. ಯುದ್ಧದ ಸಮಯದಲ್ಲಿ ಕ್ಯಾಥೊಲಿಕರು ಈ ಜಾಗವನ್ನೂ ಪೂರ್ತಿ ನಾಶಮಾಡಿದ್ದರಿಂದ, ಅವನ ಸಮಾಧಿ ಮುಂದಿನ ಒಂದು ದಶಕದ ಕಾಲ ಪಾಳುಬಿದ್ದಿತ್ತು!
ಆಧುನಿಕ ಖಗೋಳಶಾಸ್ತ್ರ ಬೆಳೆಯಲು ಕಾರಣವಾದ ಮೂರು ಮುಖ್ಯ ನಿಯಮಗಳನ್ನು ಕೊಟ್ಟ ಹೆಗ್ಗಳಿಕೆ ಕೆಪ್ಲರನದ್ದು. ಬ್ರಾಹೆ ಒದಗಿಸಿದ ಫಲವತ್ತಾದ ಭೂಮಿಯಲ್ಲಿ ಅಷ್ಟೇ ಶ್ರಮಪಟ್ಟು ಕೈತೋಟ ಮಾಡಿ, ಗಿಡ ನೆಟ್ಟು ಶತಮಾನಗಳ ಕಾಲ ಹಣ್ಣು ಕೊಡಬಲ್ಲ ಹೆಮ್ಮರಗಳನ್ನು ಬೆಳೆಸಿದವನು ಅವನು. ಅಲ್ಲದೆ, ಖಗೋಳಶಾಸ್ತ್ರ ಎಂದರೆ ದುರ್ಬೀನಿಟ್ಟು ಆಕಾಶ ನೋಡುವುದು ಎಂದಷ್ಟೇ ತಿಳಿದಿದ್ದ ಕಾಲದಲ್ಲಿ ವೀಕ್ಷಣೆಯಿಂದ ಕ್ರೋಢೀಕರಿಸಿದ ಮಾಹಿತಿಯನ್ನು ಸಂಸ್ಕರಿಸಿ ಸೂತ್ರ, ಸಮೀಕರಣಗಳನ್ನು ತೆಗೆಯುವ ಹೊಸ ಸಾಧ್ಯತೆಗಳನ್ನು ತೋರಿಸಿದ ಪಂಡಿತ ಕೆಪ್ಲರ್. `ಇಡೀ ವಿಶ್ವದ ಎಲ್ಲ ವ್ಯವಹಾರಗಳನ್ನೂ ಸಂಖ್ಯೆಗಳ ಮೂಲಕ ವಿವರಿಸಬಹುದು’ ಎಂದ ಪೈಥಾಗೊರಸನ ಹಾದಿಯಲ್ಲಿ ನಡೆದು ಸೃಷ್ಟಿಯ ರಹಸ್ಯಗಳನ್ನು ಸೂತ್ರಗಳಲ್ಲಿ ಹಿಡಿದಿಟ್ಟ ಕೆಪ್ಲರ್ ಹಿಡಿದ ಕಂದೀಲಿನ ಬೆಳಕು ಮುಂದಿನ ಮೂರು ಶತಮಾನಗಳಿಗೂ ಬೆಳಕು ಹರಿಸಿತು ಎನ್ನಬಹುದು. ತುಂಬ ಕುತೂಹಲದ ಮಾತೆಂದರೆ, ಕೆಪ್ಲರನ ಎರಡು ಮತ್ತು ಮೂರನೇ ನಿಯಮಗಳು ಜಗತ್ತಿನ-ಮಾತ್ರವಲ್ಲದೆ-ವಿಶ್ವದ ಯಾವುದೇ ಕಾಯವ್ಯವಸ್ಥೆಗೂ ಅನ್ವಯವಾಗುತ್ತದೆ! ನಾವು ಇಂದಿಗೂ ವರ್ಷಂಪ್ರತಿ ಹಾರಿಬಿಡುತ್ತಿರುವ ಉಪಗ್ರಹಗಳ ಉಡಾವಣೆಯ ಹಿಂದೆ ಕೆಲಸ ಮಾಡುತ್ತಿರುವುದೂ ಕೆಪ್ಲರನ ನಿಯಮವೇ ಎಂದರೆ ಅಚ್ಚರಿಯಾಗುತ್ತಲ್ಲವೆ?
Comments are closed.