“ಮಹಾರಾಣಿಯವರೆ, ಬಾಲಕರೆಲ್ಲ ತಮ್ಮ ಬರುವಿಗಾಗಿ ಕಾದಿದ್ದಾರೆ” – ವಿನಯದಿಂದ ಅರಿಕೆ ಮಾಡಿದಳು ಪರಿಚಾರಿಕೆ.
ಮುಚ್ಚಿದ್ದ ಕಣ್ಣನ್ನು ಪ್ರಯತ್ನಪೂರ್ವಕ ತೆರೆದಳು ಡಿದ್ದಾ ರಾಣಿ. ಪರಿಚಾರಿಕೆ ಹೇಳಿದ್ದುದು ಅವಳಿಗೆ ಅರ್ಥವಾದಂತಿರಲಿಲ್ಲ. ತಾನು ಹೇಳಿದ್ದುದನ್ನು ಮತ್ತೆ ನಿವೇದಿಸಿದಳು, ಪರಿಚಾರಿಕೆ.
ಮಹಾರಾಣಿ ಕೇಳಿದಳು – ನರವಾಹನ ಮಂತ್ರಿಗಳ ಭೋಜನ ಆಯಿತೆ? ಹಾಗಾದರೆ ನಾನೂ ಭೋಜನವನ್ನು ಮುಗಿಸುತ್ತೇನೆ.
ಪರಿಚಾರಿಕೆಯರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಪರಿಚಾರಿಕೆಯರಲ್ಲೊಬ್ಬಳು ಮುಂದುವರಿಸಿದಳು – ಮಹಾರಾಣಿಯವರೆ, ಕಶ್ಮೀರ ರಾಜ್ಯಕ್ಕೆ ಯುವರಾಜನಿಯುಕ್ತಿಯ ಬಗೆಗೆ ಮಾತನಾಡಲು ತಾವು ತಮ್ಮ ಸೋದರರ ಪುತ್ರರಿಗಾಗಿ ಕರೆ ಕಳುಹಿಸಿದ್ದಿರಿ. ಅದರಂತೆ ಅವರೆಲ್ಲ ಬಂದಿದ್ದಾರೆ.
ರಾಣಿ ಡಿದ್ದಾದೇವಿ ಭ್ರಾಂತಳಾದಂತಿತ್ತು. ಸ್ವಲ್ಪ ಉತ್ಸಾಹವನ್ನು ತಂದುಕೊಂಡು ಕೇಳಿದಳು – ಫಲ್ಗುಣನು ಬಂದಿದ್ದಾನೆಯೆ? ಅವನು ನನ್ನನ್ನು ದಾಮರರಿಂದ ರಕ್ಷಿಸಲು ಸಜ್ಜಾಗಿ ಬಂದಿದ್ದಾನೆಯೆ? ಹಿಂದೆ ಅವನು ಶಸ್ತ್ರಸಂನ್ಯಾಸ ಮಾಡಿದ್ದ. ಈಗ ಮತ್ತೆ ಶಸ್ತ್ರಗಳನ್ನು ಧರಿಸಲಿದ್ದಾನೆಯೆ?
ಇಷ್ಟಾಗುವ ವೇಳೆಗೆ ಮಹಾರಾಣಿಯ ಮಂಪರು ಕಳೆದಿತ್ತು, ಸ್ಪೃಹೆ ಮರಳಿತ್ತು. ಒಂದಲ್ಲ ಎರಡಲ್ಲ, ಐವತ್ತೊಂದು ವರ್ಷಗಳ ದೀರ್ಘ ಸಮಯದಲ್ಲಿ ತಾನು ನಡೆಸಿದ್ದ ರಾಜಕೀಯ ಕುತಂತ್ರಗಳೆಲ್ಲ ನೆನಪಾದವು.
ನಾನು ಬರುತ್ತಿದ್ದೇನೆ. ನಾಲ್ಕೈದು ಮಂಕರಿ ಹಣ್ಣುಗಳನ್ನು ಸಜ್ಜುಗೊಳಿಸಿರಿ ಎಂದಳು ಕ್ಷೀಣ ಸ್ವರದಲ್ಲಿ. ಕನ್ನಡಿಯಲ್ಲಿ ತನ್ನ ಉತ್ಸಾಹಶೂನ್ಯ ಬಿಂಬವನ್ನು ನೋಡಿಕೊಂಡಳು. ಅವಳಿಗೆ ಒಂದು ಕಾಲು ಸ್ವಾಧೀನದಲ್ಲಿರಲಿಲ್ಲ. ನಡೆಯಲು ಆಗುತ್ತಿರಲಿಲ್ಲ. ಪರಿಚಾರಿಕೆಯರು ಅವಳನ್ನು ಇಡಿಯಾಗಿ ಎತ್ತಿ ಒಯ್ಯುತ್ತಿದ್ದರು. ಈಚೆಗೆ ಕೋಲಿನ ನೆರವಿನಿಂದ ಕೆಲವು ಹೆಜ್ಜೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ಶರೀರವೆಲ್ಲ ಸುಕ್ಕುಗಟ್ಟಿತ್ತು. ತಲೆಗೂದಲು ಬೆಳ್ಳಗಾಗಿತ್ತು. ಗಲ್ಲಗಳು ಒಳಕ್ಕೆ ಸೇದಿಕೊಂಡಿದ್ದವು.
ಅವಳ ಅಧಿಕಾರಾಕಾಂಕ್ಷೆ ಎಷ್ಟು ಆಳವಾಗಿತ್ತೆಂದರೆ ತನ್ನ ಸ್ವಂತ ಮಕ್ಕಳು- ಮೊಮ್ಮಕ್ಕಳನ್ನೆ ಕೊಲೆ ಮಾಡಿಸಲು ಹಿಂದೆಗೆದಿರಲಿಲ್ಲ. ತನ್ನನ್ನು ವಿರೋಧಿಸಿದ ಹಲವರನ್ನು ಇಲ್ಲವಾಗಿಸಿದ್ದಳು. ಈಗಂತೂ ಅವಳು ಸಂಜ್ಞೆ ಮಾಡಿದರೂ ಸಾಕು, ಅವಳ ಆಜ್ಞೆ ನೆರವೇರುತ್ತಿತ್ತು. ಆದರೂ ಮನಸ್ಸಿನ ಮೂಲೆಯಲ್ಲಿ ಒಂದು ಬಗೆಯ ನಿರ್ವಿಣ್ಣತೆ ತುಂಬಿತ್ತು. ತನ್ನನ್ನು ಸುತ್ತುವರಿದಿದ್ದವರೆಲ್ಲ ತಮ್ಮ ಪ್ರಯೋಜನದ ಸಾಧನೆಯಲ್ಲಿ ಆಸಕ್ತರಾಗಿದ್ದರೇ ಹೊರತು ಯಾರಿಗೂ ತನ್ನ ಬಗೆಗೆ ಪ್ರೀತಿ ಇರಲಿಲ್ಲ. ನರವಾಹನನ ಸಾವಿಗೆ ಕಾರಣಳಾಗಿದ್ದ ತನ್ನ ಬಗ್ಗೆ ಯಾರು ತಾನೆ ಉತ್ಸಾಹ ತಳೆದಿದ್ದಾರು? ಹೀಗೆ ಎಲ್ಲರನ್ನೂ ದೂರಮಾಡಿ ತಾನು ಸಾಧಿಸಿದ್ದುದಾದರೂ ಏನು?
ನಿಧಾನವಾಗಿ ಹೆಜ್ಜೆಹಾಕುತ್ತ ಅವಳು ಸಭಾಭವನವನ್ನು ಪ್ರವೇಶಿಸುವ ವೇಳೆಗೆ ಅವಳ ತಮ್ಮಂದಿರೂ ತಮ್ಮಂದಿರ ಮಕ್ಕಳೂ ಎಲ್ಲರೂ ಬಂದು ಸೇರಿದ್ದರು.
ಅವಳು ಸಿಂಹಾಸನದಲ್ಲಿ ಕುಳಿತ ಮೇಲೆ ಸಭಿಕರೂ ಕುಳಿತರು.
ಮಂದಿರದ ಬಳಿ ಮರಗಳಿಂದ ಹಣ್ಣುಗಳು ಉದುರಿ ರಾಶಿಯಾಗಿ ಹರಡಿದ್ದವು. ಯಾರು ಅತಿಹೆಚ್ಚು ಹಣ್ಣುಗಳನ್ನು ಆಯ್ದುಕೊಂಡು ಬರುವರೋ ಅವರಿಗೆ ಯುವರಾಜ ಪದವಿಯನ್ನು ನೀಡಲಾಗುವುದು ಎಂದು ಘೋಷಿಸಿದಳು.
ಸ್ಪರ್ಧೆಗಾಗಿ ಎಲ್ಲರೂ ಧಾವಿಸಿದರು. ಸಿಂಹಾಸನದ ಆಕ?ಣೆ ಎಷ್ಟು ಬಲವಾಗಿರುತ್ತದೆ – ಎಂದುಕೊಂಡಳು. ಅವಳ ಮನಸ್ಸು ಹಿಂದಿನದನ್ನೆಲ್ಲ ಮೆಲುಕುಹಾಕತೊಡಗಿತ್ತು.
* * * *
ಡಿದ್ದಾದೇವಿಯು ಲೋಹಾರದ ರಾಜನಾಗಿದ್ದ ಸಿಂಹರಾಜನ ಪುತ್ರಿ. ಹಿತೈಷಿಗಳ ಸಲಹೆಯಂತೆ ಸಿಂಹರಾಜನು ಡಿದ್ದಾದೇವಿಯನ್ನು ಕಶ್ಮೀರಾಧಿಪ ಕ್ಷೇಮಗುಪ್ತನಿಗೆ ಕೊಟ್ಟು ವಿವಾಹವನ್ನು ನೆರವೇರಿಸಿದ್ದ.
ಲೌಕಿಕಾಬ್ದ 4026 ಎಂದರೆ ಕ್ರಿ.ಶ. 950ನೇ ವರ್ಷದಲ್ಲಿ ಸರ್ವಗುಪ್ತನು ಮೃತಿಹೊಂದಿದ ಮೇಲೆ ಕ್ಷೇಮಗುಪ್ತನು ಪದವಿಗೆ ಏರಿದ್ದ. ಇವನಾದರೂ ದ್ಯೂತ ಮದ್ಯಪಾನ ಲಂಪಟತೆಗಳಿಗೆಲ್ಲ ಆವಾಸವಾಗಿದ್ದ. ಅದರ ಲಾಭಪಡೆದು ಜಿ?ಪುತ್ರರು ಪರೋಕ್ಷವಾಗಿ ರಾಜ್ಯಸೂತ್ರಗಳನ್ನೆಲ್ಲ ಸ್ವಾಧೀನಪಡಿಸಿಕೊಂಡಿದ್ದರು. ತಮ್ಮ ಭಾರ್ಯೆಯರಲ್ಲಿ ರಾಜನು ಅನುರಕ್ತನಾಗುವಂತೆ ತಂತ್ರ ನಡೆಸಿ ಅದಕ್ಕೆ
ಪ್ರತಿಯಾಗಿ ಯಥೇಷ್ಟ ಬಹುಮಾನಗಳನ್ನೂ ಸವಲತ್ತುಗಳನ್ನೂ ಪಡೆದಿದ್ದರು.
ಇದೆಲ್ಲ ಡಿದ್ದಾದೇವಿಗೆ ಹಿಂದೆಯೆ ಗಮನಕ್ಕೆ ಬಂದಿತ್ತು.
ಅವಳಿಗೆ ಯೋಗ್ಯನೆಂದು ಕಂಡಿದ್ದ ಏಕೈಕ ಪಂಡಿತನೆಂದರೆ ಪಲ್ಲಕ್ಕಿ ಹೊರುವ ಕುಯ್ಯನ ಪುತ್ರ ಭುಯ್ಯ. ಭುಯ್ಯನು ರಾಣಿಗೆ ಸಲಹೆ ಮಾಡಿದ್ದ – ನರವಾಹನ ಮಾತ್ರ ಸಿಂಹಾಸನಕ್ಕೆ ಅರ್ಹನೆಂದು. ಫಲ್ಗುಣನು ಪ್ರತಿಭಾಶಾಲಿಯೇ ಆಗಿದ್ದರೂ ಅವನಲ್ಲಿ ಅಧಿಕಾರಾಕಾಂಕ್ಷೆಯೂ ತೀವ್ರವಾಗಿ ಇದೆ – ಎಂದಿದ್ದ.
ಡಿದ್ದಾದೇವಿಯು ತಂತ್ರಗಾರಿಕೆ ನಡೆಸಿ ಕ್ಷೇಮಗುಪ್ತನನ್ನು ಅವನ ಲೋಲುಪ ಮಹಿಳೆಯರ ಹಿಡಿತದಿಂದ ಬಿಡಿಸಿ ತನ್ನತ್ತ ಸೆಳೆದಳು. ಕ್ರಮೇಣ ಕ್ಷೇಮಗುಪ್ತನಿಗೆ ಡಿದ್ದಾದೇವಿಯೇ ಜಗತ್ತೆಲ್ಲ – ಎನಿಸತೊಡಗಿತ್ತು.
ಕ್ರಮಕ್ರಮವಾಗಿ ಡಿದ್ದಾದೇವಿಯು ರಾಜ್ಯಸೂತ್ರಗಳನ್ನು ಒಂದೊಂದಾಗಿ ತನ್ನ ವಶಕ್ಕೆ ತೆಗೆದುಕೊಂಡಳು.
ಕೆಲ ಸಮಯ ಕಳೆದ ಮೇಲೆ ರಾಣಿಯು ನರವಾಹನನಿಗೆ ಹೇಳಿಕಳಿಸಿದಳು. ನರವಾಹನನು ನಮ್ರತೆಯಿಂದ ನಮಸ್ಕರಿಸಿದಾಗ ಡಿದ್ದಾದೇವಿ ಸಂಕೋಚಕ್ಕೆ ಒಳಗಾದುದನ್ನು ಗಮನಿಸಿ ಹೇಳಿದ – ಮಹಾರಾಣಿಯವರೆ! ಕಶ್ಮೀರವೆಂದರೆ ಪಾರ್ವತೀಮಾತೆ, ನಾನು ಗೌರವವನ್ನು ಸಲ್ಲಿಸುತ್ತಿರುವುದು ಡಿದ್ದಾದೇವಿಯೆಂಬ ವ್ಯಕ್ತಿಗೆ ಅಲ್ಲ, ಅವರು ಪ್ರತಿನಿಧಿಸುವ ದೈವಿಕ ಶಕ್ತಿಗೆ ಎಂದ.
ರಾಣಿಯು ನರವಾಹನನಿಗೆ ರಾಜ್ಯದ ಪರಿಸ್ಥಿತಿಯನ್ನು ವರ್ಣಿಸಿ ಪರಿಹಾರಮಾರ್ಗ ಸೂಚಿಸುವಂತೆ ಕೋರಿದಳು. ನರವಾಹನನು ಒಂದೆರಡು ಕ್ಷಣ ಯೋಚಿಸಿ ಹೇಳಿದ: ಈಗ ಪಟ್ಟಭದ್ರರಾಗಿರುವವರನ್ನೆಲ್ಲ ಒಟ್ಟಿಗೇ ಎದುರುಹಾಕಿಕೊಳ್ಳುವುದು ಪ್ರಯೋಜನಕರವಾಗದು. ಅವರೆಲ್ಲ ಕೊಬ್ಬಿ ಬಲಿ?ರಾಗಿದ್ದಾರೆ. ಅವರಲ್ಲಿ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ದಮನ ಮಾಡಬೇಕು.
ಹಾಗಾದರೆ ಈಗ ನಾನು ಏನು ಮಾಡಬಹುದು?
ಮಹಾರಾಣಿಯವರೆ, ತಮ್ಮ ಮಾತಾಮಹ ಭೀಮಶಾಹಿ ಅಸಾಮಾನ್ಯ ಶೌರ್ಯವಂತ, ಆತನನ್ನು ಕಶ್ಮೀರಕ್ಕೆ ಕರೆಯಿಸಿರಿ. ಭೀಮಶಾಹಿಯು ತಮ್ಮೊಡನೆ ಇರುವುದನ್ನು ಕಂಡೇ ಅರ್ಧ ಮಂದಿ ತಣ್ಣಗಾಗುತ್ತಾರೆ. ಹೀಗೆ ಸಮಯಾವಕಾಶ ಕಲ್ಪಿಸಿಕೊಂಡು ನಮ್ಮ ಬಲವನ್ನು ದೃಢಪಡಿಸಿಕೊಳ್ಳಬೇಕು.
ಡಿದ್ದಾದೇವಿಗೆ ನರವಾಹನನ ಸಲಹೆ ಸಯುಕ್ತಿಕವೆನಿಸಿತು. ಅಲ್ಲದೆ ತನ್ನ ಮಾತಾಮಹನನ್ನು ಕಶ್ಮೀರಕ್ಕೆ ಕರೆಯಿಸುವುದರಿಂದ ಕಶ್ಮೀರಕ್ಕೆ ಲೋಹರ ರಾಜ್ಯಶಕ್ತಿಯೂ ಸೇರಿಕೊಂಡಂತೆ ಆಗುತ್ತದೆ – ಎಂದುಕೊಂಡಳು.
ನರವಾಹನನು ಹೊರಟು ನಿಂತಾಗ ಡಿದ್ದಾದೇವಿ ಒಮ್ಮೆ ನಿಟ್ಟುಸಿರಿಟ್ಟು ಹೇಳಿದಳು – ಮಹಾಮಂತ್ರಿಗಳೇ! ಯಾವುದೇ ಪರಿಸ್ಥಿತಿಯಲ್ಲಿಯೂ ತಾವು ನನಗೆ ಬೆಂಬಲವಾಗಿ ಇರುತ್ತೀರ??
ನರವಾಹನನು ಮುಗುಳ್ನಕ್ಕು ಹೇಳಿದ – ಮಹಾರಾಣಿಯವರೆ! ನಾನಾದರೊ ಸ್ವಧರ್ಮಪಾಲನೆಯಲ್ಲಿ ಶ್ರದ್ಧೆ ಇರಿಸಿರುವವನು. ಇದೀಗ ನಮ್ಮ ದೇಶದಲ್ಲಿ ಕಠಿನ ಪರಿಸ್ಥಿತಿ ಇದೆ. ವಿದೇಶೀಯರಿಂದ ಬಗೆಬಗೆಯ ಆಕ್ರಮಣಗಳು ಆಗುತ್ತಿವೆ. ಮುನ್ನೂರು ವರ್ಷ ಹಿಂದೆಯಷ್ಟೇ ತುರುಷ್ಕ ದೇಶಗಳಲ್ಲಿ ಹುಟ್ಟಿಕೊಂಡ ಮತವು ಬಿರುಗಾಳಿಯಂತೆ ಬಂದೆರಗಿದೆ. ಅವರದು ಎರಡೇ ಲಕ್ಷ್ಯಗಳು: ಇಲ್ಲಿಯ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆಯುವುದು ಮತ್ತು ಇಲ್ಲಿಯ ಪ್ರಜೆಗಳನ್ನು ತಮ್ಮ ಮತಕ್ಕೆ ಪರಿವರ್ತಿಸುವುದು. ಕಶ್ಮೀರವನ್ನು ಶಂಕರವರ್ಮನು ಪಾಲಿಸುತ್ತಿದ್ದ ಸಮಯದಲ್ಲಿ ಮಹಮ್ಮದ್ ಬಿನ್ ಕಾಸಿಮ್ ಸಿಕ್ರಿ ಎಂಬ ತುರುಷ್ಕ ಲೂಟಿಕೋರನು ಸಿಂಧೂನದಿ ಪರಿಸರ ಪ್ರಾಂತಗಳನ್ನು ಆಕ್ರಮಿಸಿಕೊಂಡು ಅಲ್ಲಿಯ ಜನರನ್ನು ತನ್ನ ಮತಕ್ಕೆ ಬಲಾತ್ಕಾರವಾಗಿ ಸೆಳೆದುಕೊಂಡ. ಅನಂತರ ಶಂಕರವರ್ಮನು ದಂಡಯಾತ್ರೆ ಕೈಗೊಂಡು ಕೆಲವು ತುರು? ಆಕ್ರಾಂತ ಪ್ರಾಂತಗಳನ್ನು ಗೆದ್ದುಕೊಂಡು ಅಲ್ಲಿಯ ಪ್ರಜೆಗಳು ಸ್ಪಧರ್ಮಕ್ಕೆ ಹಿಂದಿರುಗುವಂತೆ ಮಾಡಿದ. ಆದರೆ ಈಗ ದೇಶದಲ್ಲಿ ಬಲಿಷ್ಠವಾದ ಆಳ್ವಿಕೆ ಇಲ್ಲ. ಸಣ್ಣಸಣ್ಣ ರಾಜ್ಯಗಳು ತಮ್ಮೊಳಗೇ ಕಲಹಗಳನ್ನು ನಡೆಸುತ್ತ ದುರ್ಬಲವಾಗಿವೆ. ಕನಿಷ್ಠಪಕ್ಷ ಕಶ್ಮೀರ ರಾಜ್ಯವಾದರೂ ಬಲಯುತವಾಗಿ ಉಳಿಯಬೇಕು. ಭಗವಂತನು ನಮಗೆ ಪ್ರಾಕೃತಿಕ ರಕ್ಷಣೆಯನ್ನು ಕಲ್ಪಿಸಿದ್ದಾನೆ. ಆದರೆ ಮಾನವಪ್ರಯತ್ನ ನಡೆಯಬೇಕಾಗಿದೆ. ಈಗ ಅಧಿಕಾರಕ್ಕಾಗಿ ಹೊಂಚುಹಾಕುತ್ತಿರುವ ಸ್ವಾರ್ಥಿಗಳಿಂದ ಏನೂ ಲಾಭವಾಗದು. ಬಲಿಷ್ಠವಾದ ಪ್ರಭುತ್ವವನ್ನು ತಾವು ಮಾತ್ರ ನೀಡಬಲ್ಲಿರಿ. ಹಾಗೆ ಆದಲ್ಲಿ ನನ್ನ ಶಕ್ತಿಯ?ನ್ನೂ ತಮ್ಮ ನೆರವಿಗಾಗಿ ವಿನಿಯೋಗಿಸುವುದಕ್ಕಿಂತ ಬೇರೆ ಕರ್ತವ್ಯ ನನಗೆ ಏನಿದೆ?
ಮಹಾರಾಣಿಯು ಅವನಿಗೆ ವಿನಯದಿಂದ ನಮಸ್ಕರಿಸಿದಳು.
* * * *
ಕಶ್ಮೀರ ರಾಜ್ಯಕ್ಕೆ ಭೀಮಶಾಹಿಯ ಆಗಮನ ದೊಡ್ಡ ಉತ್ಸವದಂತೆ ಆಯಿತು. ಭೀಮಶಾಹಿ ತನ್ನ ಮೊಮ್ಮಗಳ ಮೇಲೆ ಕನಕವ?ವನ್ನೇ ಸುರಿಸಿದ. ಆತನ ಧನಬಲ ಎಣೆಯಿಲ್ಲದ್ದು. ತನ್ನ ಕಶ್ಮೀರ ಆಗಮನದ ಸಂಕೇತವಾಗಿ ಭೀಮಶಾಹಿಯು ಭೀಮ-ಕೇಶವ ಆಲಯಗಳನ್ನು ಕಟ್ಟಿಸಿದ. ಅವು ಕುಬೇರನ ಅರಮನೆಯನ್ನು ಮೀರಿಸುವಷ್ಟು ಭವ್ಯವಾಗಿದ್ದವು. ಎಲ್ಲೆಲ್ಲಿಯೂ ರತ್ನ ವಜ್ರ ಮಣಿ ಮಕರತ ಮಾಣಿಕ್ಯ ರಾಶಿಗಳು.
(ಈಗ ಆ ಆಲಯವು ಮುಸ್ಲಿಂ ಸಂತ ಬಾಬಾ ಬಮಾದಿನಿ ಸಾಹೇಬ್ ಹೆಸರಿನ ಮಂದಿರವಾಗಿ ಕರೆಯಿಸಿಕೊಳ್ಳುತ್ತಿದೆ.)
ಭೀಮಶಾಹಿಯು ಕಶ್ಮೀರದಲ್ಲಿ ಇದ್ದ ಸಮಯದಲ್ಲಿಯೆ ಕ್ಷೇಮಗುಪ್ತನು ಫಲ್ಗುಣನ ಪುತ್ರಿಯನ್ನು ವಿವಾಹವಾದ. ಇದಕ್ಕೆ ಭೀಮಶಾಹಿ ತೀಕ್ಷ್ಣವಾಗಿ ಆಕ್ಷೇಪಿಸಿದ.
ಡಿದ್ದಾರಾಣಿ ಹೇಳಿದಳು: ನಾನೇ ಈ ವಿವಾಹ ಆಗುವಂತೆ ಸಲಹೆ ಮಾಡಿದ್ದು. ಏಕೆಂದರೆ ಫಲ್ಗುಣನು ಅಪಾಯಕಾರಿ ವ್ಯಕ್ತಿ. ಅವನನ್ನು ಬಂಧುವನ್ನಾಗಿಸಿಕೊಂಡರೆ ಒಂದು ಅಪಾಯವನ್ನು ತಪ್ಪಿಸಿಕೊಂಡಂತೆ ಆಗುತ್ತದೆ.
ಭೀಮಶಾಹಿಯು ಸ್ವಲ್ಪ ಸಮಾಧಾನಗೊಂಡ.
ಕ್ಷೇಮಗುಪ್ತನು ಹೀಗೆ ದ್ವಿತೀಯ ವಿವಾಹ ಮಾಡಿಕೊಂಡನಾದರೂ ಎಂದೂ ಎರಡನೆ ರಾಣಿಯ ಅರಮನೆಯ ಕಡೆಗೆ ಹೆಜ್ಜೆಹಾಕಲಿಲ್ಲ. ಡಿದ್ದಾರಾಣಿಯ ಅರಮನೆಯಲ್ಲಿ ವಿಶ್ರಮಿಸದಿದ್ದ ಸಮಯದಲ್ಲಿ ಮೃಗಯಾವಿಹಾರಕ್ಕೆ ತೆರಳುತ್ತಿದ್ದ. ಅಂತಹ ಬಿಡುವಿನ ಸಮಯದಲ್ಲಿ ರಾಣಿಯು ಭುಯ್ಯನ ನೆರವಿನಿಂದ ಭಾರತೀಯ ಧರ್ಮವನ್ನೂ, ಕಶ್ಮೀರ ಚರಿತ್ರೆಯನ್ನೂ ಕುರಿತು ಅಧ್ಯಯನ ನಡೆಸುತ್ತಿದ್ದಳು.
ರಾಣಿ ಸುಗಂಧಾದೇವಿಯ ವೃತ್ತಾಂತವನ್ನು ಕೇಳಿ ಡಿದ್ದಾದೇವಿಯ ಮನಸ್ಸು ಆರ್ದ್ರವಾಯಿತು.
ಮಹಾರಾಣಿಯವರೆ! ಸ್ತ್ರೀಯರನ್ನು ಗೌರವಿಸದಿರುವ ದೇಶವು ವಿನಾಶದತ್ತ ಸಾಗುತ್ತದೆಂದು ಶಾಸ್ತ್ರಗಳು ಹೇಳಿವೆಯ?. ಅದು ಸತ್ಯವೆಂಬುದು ಸುಗಂಧಾದೇವಿಯ ಅವಸಾನದ ನಂತರದ ಘಟನೆಗಳು ನಿರೂಪಿಸಿದವು.
ಅದು ಹೇಗೆ? – ಕುತೂಹಲದಿಂದ ಕೇಳಿದಳು ಡಿದ್ದಾರಾಣಿ. ಭುಯ್ಯನು ಮುಂದುವರಿಸಿದ: ಸುಗಂಧಾದೇವಿಯು ಪಾರ್ಥನನ್ನು ಗಾದಿಯಲ್ಲಿ ಕುಳ್ಳಿರಿಸಿ ತಾನು ರಾಜಧಾನಿಯನ್ನು ಬಿಟ್ಟು ಹು?ಪುರಕ್ಕೆ ಹೊರಟುಹೋದಳು. ಇನ್ನೂ ಹತ್ತು ವ?ದವನಾಗಿದ್ದ ಪಾರ್ಥನ ಹೆಸರಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ನಿರ್ಜಿತವರ್ಮನ ದು?ತನವನ್ನು ಸಹಿಸಲಾರದೆ ಸುಗಂಧಾದೇವಿಗೆ ಮತ್ತೆ ಕರೆಕಳುಹಿಸಿದರು. ಹೀಗೆ ಧರ್ಮರಕ್ಷಣೆಗಾಗಿ ಸುಗಂಧಾದೇವಿಯು ರುದ್ರಾಕ್ಷಮಾಲೆಯನ್ನು ಬಿಟ್ಟು ಖಡ್ಗವನ್ನು ಧರಿಸಿದಳು. ಆದರೆ ಕಲಿಪ್ರವೇಶವಾದ ೨೦೦೦ ವ?ಗಳಾದ ಮೇಲೆ ಧರ್ಮವು ಅವನತಸ್ಥಿತಿಗೆ ತಲಪುತ್ತದೆಂದು ಪುರಾಣಗಳಲ್ಲಿ ಹೇಳಿರುವಂತೆ ಲೌಕಿಕಾಬ್ದ ೩೯೯೦ರ ವ?ದ ವೈಶಾಖಮಾಸದಲ್ಲಿ ನಡೆದ ಅಂತರ್ಯುದ್ಧದಲ್ಲಿ ಸುಗಂಧಾದೇವಿ ಬಂಧಿತಳಾದಳು. ಆಕೆಯನ್ನು ನಿ?ಲಕವೆಂಬ ವಿಹಾರದಲ್ಲಿ ಬಂಧನದಲ್ಲಿಟ್ಟು ಕೊಂದುಹಾಕಿದರು. ಸ್ತ್ರೀಯತ್ಯೆಗೆ ಪ್ರಾಯಶ್ಚಿತ್ತವೇ ಇಲ್ಲವೆಂಬಂತೆ ಸುಂದರ ಕಶ್ಮೀರಮಂಡಲವ? ಅಪಾರ ಹಾನಿಗೆ ತುತ್ತಾಯಿತು. ೩೯೯೩ರಲ್ಲಿ ಆದ ಅತಿವೃಷ್ಟಿಯಿಂದಾಗಿ ಬೆಳೆಗಳೆಲ್ಲ ನ?ವಾಗಿ ಕ್ಷಾಮ ತಲೆದೋರಿ ಜನರು ಸಾಯತೊಡಗಿದರು. ವಿತಸ್ತಾ ನದಿಯಲ್ಲಿ ಶವಗಳ ಪ್ರವಾಹವೇ ಕಾಣುತ್ತಿತ್ತು.
೩೯೯೭ರ (ಕ್ರಿ.ಶ. ೯೩೧) ಪು?ಮಾಸದಲ್ಲಿ ನಿರ್ಜಿತವರ್ಮನು ಪಾರ್ಥನನ್ನು ಪದಚ್ಯುತಗೊಳಿಸಿ ಮಾಘಮಾಸದಲ್ಲಿ ತನ್ನ ಎಳೆವಯಸ್ಸಿನ ಮಗ ಚಕ್ರವರ್ಮನಿಗೆ ಅಭಿ?ಕ ಮಾಡಿ ಮರಣ ಹೊಂದಿದ.
ಹೀಗೆ ಚಕ್ರವರ್ಮನ ಕಡೆಯವರಿಗೂ ಪಾರ್ಥನ ಕಡೆಯವರಿಗೂ ಕೊನೆಯಿಲ್ಲದ ಸಂಘ? ಏರ್ಪಟ್ಟಿತು. ಯಾರಿಗೆ ಹೆಚ್ಚಿನ ಧನಬಲ ಇದ್ದಿತೋ ಅವರು ರಾಜರೆನಿಸತೊಡಗಿದರು. ಕಲಿಯುಗಾಬ್ದ ೪೦೧೧ರಲ್ಲಿ (ಕ್ರಿ.ಶ. ೯೩೫) ಚಕ್ರವರ್ಮನು ಮತ್ತೆ ರಾಜಪದವಿಗೆ ಏರಿದ. ಚಕ್ರವರ್ಮನ ಅತ್ಯಾಚಾರಗಳು ಎಣಿತಪ್ಪಿದಾಗ ದಾಮೂರರು ಅವನನ್ನು ಹತ್ಯೆ ಮಾಡಿ ಪಾರ್ಥನ ಪುತ್ರ ಉನ್ಮತ್ತಾವಂತನನ್ನು ರಾಜನಾಗಿಸಿದರು. ಇವನ ದುಶ್ಚರ್ಯೆಗಳಂತೂ ಭಯಾನಕವಾಗಿದ್ದವು, ತನ್ನ ಸ್ವೈರಕ್ಕೆ ಅಡ್ಡಿಯಾದಾನೆಂದು ತನ್ನ ಸ್ವಂತ ತಂದೆಯನ್ನೇ ಕೊಲ್ಲಿಸಿದ. ದೈವವಿಪಾಕವೆಂಬಂತೆ ಅವನು ಭೀಕರ ರೋಗದಿಂದ ಮೃತನಾದ. ಉನ್ಮತ್ತನ ಪುತ್ರನು ಬಾಲಕನಾಗಿದ್ದ ಸನ್ನಿವೇಶವನ್ನು ಲಕ್ಷಿಸಿ ಕಮಲವರ್ಧನನು ರಾಜ್ಯದ ಮೇಲೆ ಆಕ್ರಮಣ ನಡೆಸಿದ. ಅದನ್ನು ವಿಫಲಗೊಳಿಸಿ ಸ್ಥಾನಿಕರು ದೇಶಾಂತರದಲ್ಲಿದ್ದು ಬಂದಿದ್ದ ಯಶಸ್ಕರನೆಂಬವನನ್ನು ರಾಜನನ್ನಾಗಿ ಮಾಡಿದರು. ಯಶಸ್ಕರನಾದರೋ ಹೊಣೆಗಾರಿಕೆಯಿಂದ ರಾಜ್ಯಭಾರ ನಡೆಸಿ ಅನೇಕ ಸತ್ಕಾರ್ಯಗಳನ್ನು ಮಾಡಿದ. ಒಂಬತ್ತು ವ? ಆಳ್ವಿಕೆ ನಡೆಸಿದ ಮೇಲೆ ೪೦೨೪ರಲ್ಲಿ (ಕ್ರಿ.ಶ. ೯೪೮) ಭಾದ್ರಪದ ಬಹುಳ ತದಿಗೆಯಂದು ಸ್ವರ್ಗಸ್ಥನಾದ. ಅನಂತರ ರಾಜನಾದ ಪರ್ವಗುಪ್ತನ ಕಾಕದೃಷ್ಟಿ ಯಶಸ್ಕರನ ರಾಣಿಯ ಮೇಲೆ ಬಿದ್ದಿತು. ಅದನ್ನು ನಿವಾರಿಸಲಾಗದೆ ರಾಣಿಯು ತನ್ನ ಪತಿಯು ನಿರ್ಮಿಸಲು ಆರಂಭಿಸಿದ್ದ ದೇವಾಲಯವನ್ನು ಪೂರ್ತಿಗೊಳಿಸಿದ ಮೇಲೆ ತಾನು ಪರ್ವಗುಪ್ತನಿಗೆ ಅನುವರ್ತಿಯಾಗುವುದಾಗಿ ಹೇಳಿ ಸಮಯಾವಕಾಶ ಪಡೆದುಕೊಂಡಳು. ಆಲಯದ ನಿರ್ಮಾಣ ಮುಗಿಯುತ್ತಿದ್ದಂತೆ ಅಗ್ನಿಕುಂಡದಲ್ಲಿ ಹಾರಿಕೊಂಡು ಪ್ರಾಣತ್ಯಾಗ ಮಾಡಿದಳು.
ಇದನ್ನೆಲ್ಲ ಕೇಳುತ್ತಿದ್ದ ಡಿದ್ದಾದೇವಿ ಅಶ್ರುಪೂರ್ಣಳಾದಳು.
ಅಲ್ಲಿಂದಾಚೆಗೆ ಒಂದೇ ವ? ಕಳೆದಿದ್ದಾಗ ಪರ್ವಗುಪ್ತನು ಮೃತಿಹೊಂದಿದ. ಅವನ ಪುತ್ರ ಕ್ಷೇಮಗುಪ್ತನು ಪಟ್ಟಕ್ಕೆ ಏರಿದ. ದುರದೃ?ದಿಂದ ಅವನು ಎಂಟೇ ವ?ದಲ್ಲಿ ರೋಗಗ್ರಸ್ತನಾಗಿ ಅಸುನೀಗಿದ.
* * * *
ಕಲಿಯುಗಾಬ್ದ ೪೦೩೪ರಲ್ಲಿ (ಕ್ರಿ.ಶ. ೯೫೮) ಕ್ಷೇಮಗುಪ್ತ ಮೃತನಾದಾಗ ರಾಣಿ ಡಿದ್ದಾದೇವಿಯು ಸಹಗಮನ ಮಾಡಲಿದ್ದಾಳೆಂಬ ವಾರ್ತೆ ಕಾಳ್ಗಿಚ್ಚಿನಂತೆ ಹರಡಿತ್ತು. ವಾಸ್ತವವಾಗಿ ಈ ಸುದ್ದಿಯನ್ನು ಪ್ರಚಾರ ಮಾಡಿಸುತ್ತಿದ್ದವನು ಫಲ್ಗುಣ.
ಸರಿಯಾದ ಸಮಯಕ್ಕೆ ನರವಾಹನನು ಧಾವಿಸಿ ಬಂದು ಅನಾಹುತವನ್ನು ನಿವಾರಿಸಿದ. ಬಾಲಕ ಅಭಿಮನ್ಯುವಿಗೆ ಅಭಿ?ಕ ಮಾಡಿಸಿ ತಾನು ಸಂರಕ್ಷಕಳಾಗಿ ಇರುವಂತೆ ಡಿದ್ದಾದೇವಿಯನ್ನು ಓಲೈಸಿದ.
ಹೀಗೆ ತನ್ನ ದು?ಥಕ ವಿಫಲಗೊಂಡುದಕ್ಕೆ ಫಲ್ಗುಣನು ಆಕ್ರೋಶಗೊಂಡು ಹಲವಾರು ಅಧಿಕಾರಿಗಳನ್ನು ತನ್ನ ಕಡೆಗೆ ಸೆಳೆದುಕೊಂಡು ಕುಟಿಲ ಸಂಧಾನಗಳನ್ನು ನಡೆಸತೊಡಗಿದ.
ತುಂಗೇಶ್ವರ ಪ್ರಾಂತದಲ್ಲಿ ದೊಡ್ಡ ಅಗ್ನಿಪ್ರಮಾದ ಘಟಿಸಿದಾಗ ಪರಿಹಾರಕಾರ್ಯಕ್ಕಾಗಿ ನರವಾಹನನು ಅಲ್ಲಿಗೆ ತೆರಳಿದ. ಅವನು ರಾಜಧಾನಿಯಲ್ಲಿ ಇಲ್ಲದ ಅವಕಾಶವನ್ನು ಬಳಸಿಕೊಂಡು, ಫಲ್ಗುಣನು ಬಂಡಾಯವನ್ನು ಯೋಜಿಸಿದ.
ಆದರೆ ಡಿದ್ದಾದೇವಿ ಕುಶಲ ತಂತ್ರಗಾರಿಕೆ ನಡೆಸಿ ಫಲ್ಗುಣನೊಡನಿದ್ದ ಅನೇಕ ಅಧಿಕಾರಿಗಳನ್ನು ತನ್ನೆಡೆಗೆ ಆಕರ್ಷಿಸಲು ಶಕ್ತಳಾದಳು.
ಎಲ್ಲ ಕುಟಿಲೋಪಾಯಗಳೂ ವಿಫಲಗೊಂಡಾಗ, ಫಲ್ಗುಣನು ವರಾಹಸ್ವಾಮಿ ಆಲಯಕ್ಕೆ ಹೋಗಿ ಶಸ್ತ್ರತ್ಯಾಗ ಮಾಡಿ ತೀರ್ಥಯಾತ್ರೆಗೆ ನಿ?ಮಿಸಿದ.
ಇದನ್ನೆಲ್ಲ ಸೂಕ್ಷ್ಮ ಮಾರ್ಗದಿಂದ ಡಿದ್ದಾದೇವಿಯು ಸಾಧಿಸಿದುದು ನರವಾಹನನನ್ನು ವಿಸ್ಮಯಗೊಳಿಸಿತು.
* * * *
ಸುಲಭವಾಗಿ ವಿಜಯ ಸಾಧಿಸುವ ನಿರೀಕ್ಷೆಯಲ್ಲಿದ್ದ ಶೂರಸೇನನು ಅಲ್ಪಸಮಯದಲ್ಲಿ ಪರಾಭವಕ್ಕೆ ಈಡಾದುದು ಅವನನ್ನು ದಿಗ್ಭ್ರಾಂತಗೊಳಿಸಿತು. ಲಲಿತಾದಿತ್ಯಪುರದ ವಿಪ್ರರೆಲ್ಲ ಬಂಡಾಯದಿಂದ ವಿಮುಖರಾಗಿದ್ದರು.
ಅನಿವಾರ್ಯ ಪರಿಸ್ಥಿತಿಯಲ್ಲಿ ಮಹಿಮನು ರಾಣಿಯೊಡನೆ ಸಂಧಿಯನ್ನು ಮಾಡಿಕೊಂಡ. ಅವನ ಅನುಚರರಿಗೆ ಎಲ್ಲಿಯವರೆಗೆ ರಾಜದ್ರೋಹ ನಡೆಯದೋ ಅಲ್ಲಿಯವರೆಗೆ ನೀವು ಯಾರೂ ಭಯಪಡಬೇಕಾದ ಆವಶ್ಯಕತೆಯಿಲ್ಲ ಎಂದು ಆಶ್ವಾಸನೆ ನೀಡಿದಳು, ರಾಣಿ.
ನರವಾಹನನು ಹಿಂದಿರುಗಿದ ಮೇಲೆ ರಾಜ್ಯದಲ್ಲಿ ನಡೆದಿದ್ದ ಘಟನೆಗಳು ಹೇಗೆ ಶಕ್ಯವಾದವೆಂದು ವಿಸ್ಮಯಗೊಂಡ. ರಾಣಿಯು ತಾನು ಬಳಸಿದ್ದ ತಂತ್ರಗಳನ್ನು ತಿಳಿಸಿದಳು. ಲಲಿತಾದಿತ್ಯಪುರದ ವಿಪ್ರರಿಗೆ ಧನಕನಕಗಳ ಉಡುಗೊರೆ ನೀಡಲಾಗಿತ್ತು. ಯಶೋಧರನಿಗೆ ಅವನ ಪ್ರತಿಕಕ್ಷಿ ದಖ್ಖ್ನ್ನ ಮೇಲೆ ಆಕ್ರಮಣ ನಡೆಸಲು ಅನುಮತಿ ನೀಡಲಾಗಿತ್ತು ದಖ್ಖ್ನ್ನನು ರಾಜ್ಯದಲ್ಲಿ ಕೊಳ್ಳೆಹೊಡೆದ ಧನವನ್ನೆಲ್ಲ ಯಶೋಧರನ ವಶಕ್ಕೇ ನೀಡಲಾಗಿತ್ತು. ಉದಯಗುಪ್ತನು ಬಯಸಿದ್ದಂತೆ ಅವನಿಗೆ ಭವ್ಯ. ಅರಮನೆಯೊಂದನ್ನು ಕೊಡಲಾಗಿತ್ತು. ಹೀಗೆ ಪ್ರಮುಖರನ್ನು ಬಂಡಾಯದ ಬಣದಿಂದ ವಿಮುಖಗೊಳಿಸಲಾಗಿತ್ತು. ಆದರೆ ಈ ಗೊಂದಲಗಳ ಪರಿಣಾಮವಾಗಿ ಅನೇಕ ಅಮಾಯಕರು ಪ್ರಾಣ ತೆರಬೇಕಾಗಿ ಬಂದಿತ್ತು. ಪ್ರಜೆಗಳ ತೀವ್ರ ಅಸಮಾಧಾನಕ್ಕೆ ಶೂರಸೇನನು ಗುರಿಯಾಗಿದ್ದ. ರಾಣಿಯು ಬಯಸಿದ್ದುದೂ ಅದನ್ನೇ.
ದೊಡ್ಡ ಜನವರ್ಗದ ಅಸಂತೃಪ್ತಿಯನ್ನು ಸಹಿಸಲಾರದೆ ಶೂರಸೇನನು ನಡುರಾತ್ರಿಯಲ್ಲಿ ರಾಜಧಾನಿಯನ್ನು ಬಿಟ್ಟು ಪಲಾಯನ ಮಾಡಿದ.
ಮಹಿಮನು ಯಾವುದೊ ವಿಚಿತ್ರ ರೋಗಕ್ಕೆ ಸಿಲುಕಿ ಮೃತನಾದ.
ಯಶೋಧರನು ದಖ್ಖ್ನ್ನನನ್ನು ಸೋಲಿಸಿ ಶೇಖರಿಸಿದ್ದ ಧನವನ್ನು ರಾಜಕೋಶಾಗಾರಕ್ಕೆ ಜಮೆ ಮಾಡಿರಲಿಲ್ಲ. ಇದರಿಂದ ರಾಣಿಯು ಅಸಂತು?ಗೊಂಡಳು. ರಾಣಿಯ ಪಕ್ಷದವರು ಯಶೋಧರನ ಪಕ್ಷದವರ ಮೇಲೆ ಯುದ್ಧ ನಡೆಸಿದರು. ನರವಾಹನನು ಯುದ್ಧವನ್ನು ಚಾಣಾಕ್ಷತೆಯಿಂದ ನಿರ್ವಹಿಸಿದ. ಓಡಿಹೋಗುವ ಯತ್ನದಲ್ಲಿದ್ದ ಯಶೋಧರ ಬಂದಿಯಾದ. ಉದಯಗುಪ್ತನು ದೇಶಬಿಟ್ಟು ಹೋದ.
ಅಲ್ಪಕಾಲದಲ್ಲಿ ರಾಜದ್ರೋಹಿಗಳನ್ನೆಲ್ಲ ಅಣಗಿಸಲಾಯಿತು. ಹೀಗೆ ಡಿದ್ದಾರಾಣಿಯನ್ನು ದುರ್ಗಾದೇವಿಯೆಂದೇ ಪ್ರಜೆಗಳು ಭಾವಿಸತೊಡಗಿದರು.
ಬಹಿರಂಗಸಭೆಯಲ್ಲಿ ರಾಣಿಯು ನರವಾಹನನನ್ನು ಸಂಮಾನಿಸಿದುದಲ್ಲದೆ ಅವನನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದಳು.
ಡಿದ್ದಾರಾಣಿ, ನರವಾಹನ, ಭುಯ್ಯ – ಇವರ ನೇತೃತ್ವದಲ್ಲಿ ಕಶ್ಮೀರವು ಏಳ್ಗೆ ಹೊಂದಿತು.
ಆದರೆ ಅರಮನೆ ವ್ಯವಹಾರಗಳು ಎಲ್ಲಿಯೂ ಏಕರೂಪವಾಗಿ ನಡೆಯುವುದಿಲ್ಲ. ಪಿಶುನತೆಗಳು, ಪಿತೂರಿಗಳು, ಬುದ್ಧಿ ಭೇದಗಳು ತಪ್ಪುವುದಿಲ್ಲ.
ಎಲ್ಲ ಅಧಿಕಾರಗಳನ್ನೂ ವಶದಲ್ಲಿರಿಸಿಕೊಂಡಿದ್ದ ನರವಾಹನನು ತಾನೇ ಮುಂದೆ ರಾಜನಾಗುವ ಆಕಾಂಕ್ಷೆ ತಳೆದಿದ್ದಾನೆಂದು ಕುಟಿಲ ಜನರು ರಾಣಿಯ ತಲೆ ಕೆಡಿಸಿದರು. ಇಬ್ಬರ ನಡುವೆ ಹಿಂದಿನಿಂದ ಇದ್ದ ವಿಶ್ವಾಸ ಸಡಿಲಗೊಳ್ಳತೊಡಗಿತು. ಅಭಿಪ್ರಾಯಭೇದಗಳು ತಲೆದೋರತೊಡಗಿದವು. ಸಂಗ್ರಾಮನೆಂಬ ದಾಮರನು ವಿಶ್ವಾಸಪಾತ್ರನೆಂಬ ನರವಾಹನನ ಅಭಿಪ್ರಾಯವನ್ನು ತಿರಸ್ಕರಿಸಿ ರಾಣಿಯು ಸಂಗ್ರಾಮನನ್ನು ಸಂಹರಿಸುವಂತೆ ಆಜ್ಞೆ ಮಾಡಿದಳು.
ಇಂತಹ ಸನ್ನಿವೇಶ ನರವಾಹನನಿಗೆ ಅತೀವ ಬೇಸರ ತಂದಿತು. ಜೀವಿಸಿರುವ ಇಚ್ಛೆಯೇ ಕಮರಿತು.
ಅದೊಂದು ದಿನ ನರವಾಹನನು ಆತ್ಮಹತ್ಯೆ ಮಾಡಿಕೊಂಡನೆಂಬ ವಾರ್ತೆಯು ಇಡೀ ಕಶ್ಮೀರವನ್ನು ತಲ್ಲಣಗೊಳಿಸಿತು.
ಅಂದಿನಿಂದಲೆ ಡಿದ್ದಾದೇವಿಯ ಪತನಕ್ಕೆ ನಾಂದಿಯಾಯಿತು.
ಇದರ ಹಿಂದುಗೂಡಿ ದಾಮರರೆಲ್ಲ ಸ್ಥಾನೇಶ್ವರದಲ್ಲಿ ಸಮಾವೇಶಗೊಂಡು ರಾಣಿಯ ವಿರುದ್ಧ ಬಂಡೇಳಲು ಸಿದ್ಧತೆ ನಡೆಸಿದ್ದಾರೆಂಬ ವಾರ್ತೆ ಬಂದಿತು.
ತಾನು ವಿವೇಕಭ್ರ?ಳಾಗಿ ವರ್ತಿಸಿದ್ದೆನೆಂಬ ಮನವರಿಕೆಯಾಗಿ ರಾಣಿಯು ಖಿನ್ನಳಾದಳು. ಆದರೆ ಸಮಯ ಮೀರಿತ್ತು.
ಬೇರೇನೂ ಮಾರ್ಗ ಕಾಣದೆ ಫಲ್ಗುಣನಲ್ಲಿಗೆ ಹೋಗಿ ನೆರವನ್ನು ಕೋರಲು ರಾಣಿಯು ನಿಶ್ಚಯಿಸಿದಳು.
* * * *
ಮಹಾರಾಣಿಯವರೆ! ನಾನು ಶಸ್ತ್ರಸಂನ್ಯಾಸ ಮಾಡಿ ಆಗಿದೆ. ಈಗ ಮನಸ್ಸನ್ನು ಬದಲಿಸಲಾರೆ ಎಂದ, ಫಲ್ಗುಣ.
ದೇಶವು ಕ್ಲಿ? ಪರಿಸ್ಥಿತಿಯಲ್ಲಿ ಇದೆಯೆಂಬ ವಾದವಾಗಲಿ, ಎಲ್ಲ ವಿಧ ಧನದಾನ್ಯ ರಾಶಿಗಳ ಲಭ್ಯತೆಯ ಪ್ರಲೋಭನವಾಗಲಿ, ದೇಶದ ಸೇವೆಯಿಂದ ಅತಿಶಯ ಸಂತೃಪ್ತಿ ದೊರೆಯುತ್ತದೆಂಬ ಓಲೈಕೆಯಾಗಲಿ – ಯಾವುದೂ ಫಲ್ಗುಣನ ನಿಶ್ಚಯವನ್ನು ಕದಲಿಸಲಿಲ್ಲ. ಅವನ ಆಗಮನಕ್ಕಾಗಿ ಕಾಯುತ್ತಿರುವೆನೆಂದು ಹೇಳಿ ರಾಣಿಯು ಹಿಂದಿರುಗಿದಳು.
ಆದರೆ ಪರಿಸ್ಥಿತಿಯು ಅಡ್ಡತಿರುಗಿತು. ಜಯಗುಪ್ತನನ್ನು ಜೊತೆಗಿರಿಸಿಕೊಂಡು ಫಲ್ಗುಣನು ಲೂಟಿ-ದಾಂಧಲೆಗಳಲ್ಲಿ ತೊಡಗಿದ.
ಅಭಿಮನ್ಯುವು ವಧೆಗೀಡಾದ.
೪೦೪೮ರಲ್ಲಿ (ಕ್ರಿ.ಶ. ೯೭೩) ಅಭಿಮನ್ಯುವಿನ ಪುತ್ರ ಅಲ್ಪವಯಸ್ಕ ನಂದಿಗುಪ್ತನನ್ನು ರಾಣಿಯು ರಾಜನನನ್ನಾಗಿ ನಿಯುಕ್ತಿ ಮಾಡಿದಳು.
ಪುತ್ರಶೋಕವು ರಾಣಿಯನ್ನು ತೀವ್ರವಾಗಿ ಅಸ್ವಸ್ಥಗೊಳಿಸಿತ್ತು. ಒಂದ? ಸತ್ಕಾರ್ಯಗಳಿಂದ ಸಮಾಧಾನ ದೊರೆತೀತೆಂಬ ಭುಯ್ಯನ ಸಲಹೆಯಂತೆ ರಾಣಿಯು ಮಗನ ಹೆಸರಿನಲ್ಲಿ ಅಭಿಮನ್ಯುಪುರ ಎಂಬ ಪಟ್ಟಣವನ್ನು ನಿರ್ಮಿಸಿದಳು; ತನ್ನ ಹೆಸರಿನಲ್ಲಿಯೆ ಡಿದ್ದಪುರವನ್ನು ನಿರ್ಮಿಸಿ ಆಲಯವನ್ನೂ ಕಟ್ಟಿಸಿದಳು. ಪತಿಯ ಹೆಸರಿನಲ್ಲಿಯೂ ಕಂಕಣಪುರವನ್ನು ನಿರ್ಮಿಸಿದಳು. ವಿದೇಶಗಳಿಂದ ಬರುವವರಿಗಾಗಿ ವಿಹಾರವನ್ನು, ಅನ್ಯ ಪ್ರಾಂತಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗಾಗಿ ಮಠವನ್ನೂ ನಿರ್ಮಿಸಿದಳು. ತಂದೆ ಸಿಂಹರಾಜನ ಹೆಸರಿನಲ್ಲಿ ಸಿಂಹಸ್ವಾಮಿಮಂದಿರವನ್ನು ಕಟ್ಟಿಸಿದಳು.
ಆದರೆ ವಿಧಿವೈಪರೀತ್ಯವೆಂಬಂತೆ ಒಂದ? ಸಮಯದ ನಂತರ ರಾಣಿಯು ಸುಖಾಪೇಕ್ಷೆಯನ್ನು ಅಣಗಿಸಿಕೊಳ್ಳಲಾರದೆ ಬಾಣನ ಪುತ್ರ ತುಂಗನ ಬಗಲಿಗೆ ಬಿದ್ದಳು. ಇದು ಅನುಚಿತವೆಂದು ಹಿತವಾದ ಹೇಳಿದ ಭುಯ್ಯನನ್ನು ದೂರಮಾಡಿದಳು.
ಕಲಿಯುಗಾಬ್ದ ೪೦೫೬ರಿಂದ (ಕ್ರಿ.ಶ. ೯೮೦) ರಾಣಿಯು ತಾನೇ ರಾಜ್ಯಭಾರವನ್ನು ವಹಿಸಿಕೊಂಡಳು. ಅನಭಿ?ಕ್ತ ರಾಜನಂತಿದ್ದ ತುಂಗನು ಲೋಲುಪಜೀವನ ನಡೆಸಿದ್ದ.
ಈ ವೇಳೆಗೆ ಅಪರವಯಸ್ಕಳಾಗಿದ್ದ ರಾಣಿಗೆ ಲೌಕಿಕ ವ್ಯವಹಾರಗಳೆಲ್ಲ ಅರ್ಥಹೀನವೆನಿಸಿ ಬೇವಸ ಉಂಟಾಗಿತ್ತು.
* * * *
ಇತರರ ಅಸಹಾಯತೆ ಅಜ್ಞಾನಗಳಿಂದಲೂ ಸಂಗ್ರಾಮಸಿಂಗನು ಲಾಭಗಳಿಸುವುದರಲ್ಲಿ ನಿರತನಾಗಿದ್ದುದು ರಾಣಿಯನ್ನು ವಿಚಲಿತಗೊಳಿಸಲಿಲ್ಲ. ಪ್ರತಿಯಾಗಿ ಕಲಿಯುಗದಲ್ಲಿ ಇಂಥವರೇ ರಾಜರಾಗಲು ಅರ್ಹರೆಂಬ ಅನಿಸಿಕೆಗೊಳಗಾಗಿ ಸಂಗ್ರಾಮಸಿಂಗನನ್ನೇ ಯುವರಾಜನನ್ನಾಗಿ ಮಾಡಿದಳು.
ಹೀಗಿದ್ದರೂ ತಾನು ಕಶ್ಮೀರಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೇ ಅನ್ಯಾಯವೆಸಗಿರುವೆನೆಂಬ ಅಪರಾಧಿಪ್ರಜ್ಞೆ ಮನಸ್ಸಿನ ಅಂತರಾಳದಲ್ಲಿ ಅವಳನ್ನು ಬಾಧಿಸದಿರಲಿಲ್ಲ.
ಭುಯ್ಯುನು ಹೇಳುತ್ತಿದ್ದ ಹಿತವಚನಗಳು ಪದೇ ಪದೇ ನೆನಪಿಗೆ ಬರುತ್ತಿದ್ದವು.
ಡಿದ್ದಾದೇವಿಯು ಕೊನೆಯುಸಿರೆಳೆದುದು ಕಲಿಯುಗಾಬ್ದ ೪೦೭೯ರ (ಕ್ರಿ.ಶ. ೧೦೦೩) ಭಾದ್ರಪದ ಶುದ್ಧ ಅ?ಮಿಯಂದು.
ದಾಷ್ಟೀಕವಂತ ಹೆಣ್ಣುಮಕ್ಕಳಿಗೆ ಡಿದ್ದಾದೇವಿಯ ಹೆಸರನ್ನಿಡುವ ರೂಢಿ ಕಶ್ಮೀರದಲ್ಲಿ ಈಗಲೂ ಮರೆಯಾಗಿಲ್ಲ.
ಕಶ್ಮೀರ ರಾಣಿ ಡಿದ್ದಾದೇವಿ
Month : June-2016 Episode : ರಾಜತರಂಗಿಣಿ ಕಥಾವಳಿ - 13 Author : ಎಸ್.ಆರ್. ರಾಮಸ್ವಾಮಿ