ಭಾರತೀಯ ಪ್ರಜ್ಞಾಪರಂಪರೆಯಲ್ಲಿ ಆಚಾರ್ಯ ಅಭಿನವಗುಪ್ತರ ಹಿರಿಮೆ ಸಾವಿರ ವರ್ಷಗಳಿಂದಲೂ ಜನಮಾನಸದಲ್ಲಿ ಉಳಿದುಬಂದಿದೆ. ಹತ್ತನೇ ಶತಮಾನದ ಕೊನೆಯ ಭಾಗದಲ್ಲಿ ಕಾಶ್ಮೀರದಲ್ಲಿ ಜೀವಿಸಿದ್ದ ಅಭಿನವಗುಪ್ತಪಾದರು ಶಿವನ ಅವತಾರವೆಂದೇ ಪ್ರಸಿದ್ಧರು. ಕಲಾಮೀಮಾಂಸೆ, ಭಾಷೆ, ತಂತ್ರಶಾಸ್ತ್ರಗಳಲ್ಲದೆ ಕಾಶ್ಮೀರ ಶೈವದ ಅಂಗವಾದ ಪ್ರತ್ಯಭಿಜ್ಞಾದರ್ಶನಕ್ಕೆ ಮೆರುಗುಕೊಟ್ಟವರು.
ಜಗತ್ತಿನ ಹತ್ತು ಮಂದಿ ಶ್ರೇಷ್ಟ ಚಿಂತಕರಲ್ಲಿ ಸೇರತಕ್ಕವರು ಅಭಿನವಗುಪ್ತರು ಎಂಬ ಪರಾಮರ್ಶನೆಯೂ ಉಂಟು.
ಭಾರತೀಯ ಬೌದ್ಧಿಕ ವಾರಸಿಕೆಯು ಆಧುನಿಕತೆಯ ಬಿರುಗಾಳಿಗಳಿಗೆ ಸಿಲುಕಿ ನಲುಗುತ್ತಿರುವ ಈಗಿನ ಸಂದರ್ಭದಲ್ಲಿ ಅಭಿನವಗುಪ್ತರಂಥ ಪ್ರತಿಭಾಶಾಲಿಗಳ ವಾರಸಿಕೆಯ ಅನುಸಂಧಾನ ಅತ್ಯಂತ ಅವಶ್ಯವಾಗಿದೆ. ಇದು ಭಾರತೀಯ ಪ್ರಜ್ಞಾಪರಂಪರೆಯ ಬೇರುಗಳನ್ನು ಮತ್ತೆ ಗಟ್ಟಿಯಾಗಿ ನೆಲೆಗೊಳಿಸಬಲ್ಲದು.
ಅಭಿನವಗುಪ್ತರ ಸಹಸ್ರಮಾನೋತ್ಸವ ಸಂದರ್ಭದಲ್ಲಿ ಎಸ್.ಆರ್. ರಾಮಸ್ವಾಮಿ ಅವರ ಲೇಖನಿಯಿಂದ ಮೂಡಿಬಂದ ವಿದ್ವತ್ಪೂರ್ಣ ಲೇಖನಸರಣಿಯ ಮೊದಲ ಕಂತು ಇಲ್ಲಿದೆ.
ಮಧ್ಯಯುಗದ ಭಾರತದಲ್ಲಿ ದಾರ್ಶನಿಕ ದಿಗಂತಗಳನ್ನು ಉಜ್ಜ್ವಲಗೊಳಿಸಿ ಪ್ರಕಾಶಪಡಿಸಿದ ಅಸಾಮಾನ್ಯ ಮೇಧಾವಿ ಕ್ರಿ.ಶ. ೧೦ನೇ ಶತಮಾನದಲ್ಲಿದ್ದ ಅಭಿನವಗುಪ್ತರು. ಅವರಂತೆ ವಿವಿಧಮುಖ ಪ್ರತಿಭೆಯನ್ನು ಮೆರೆದವರು ವಾಙ್ಮಯೇತಿಹಾಸದಲ್ಲಿ ವಿರಳ. ಕಾವ್ಯಶಾಸ್ತ್ರದಿಂದ ಶೈವದರ್ಶನದವರೆಗೆ ಹಲವು ಜ್ಞಾನಾಂಗಗಳಿಗೆ ಹೊಸ ತಿರುವನ್ನಿತ್ತ ಅಭಿನವಗುಪ್ತರು ಓರ್ವ ಶಿಖರಸದೃಶ ಸಾಧಕರೆಂಬುದು ವಿವಾದಾತೀತ. ಪ್ರಾಚೀನವಾದ ಶೈವದರ್ಶನವನ್ನು ಸ್ವೋಪಜ್ಞವಾದ ಆದರೆ ಪೂರ್ಣವಾಗಿ ಪರಂಪರಾನುಗುಣವಾದ ಉಪಪತ್ತಿವಿನ್ಯಾಸಗಳೊಂದಿಗೆ ಸಮಗ್ರಗೊಳಿಸಿದವರು ಅಭಿನವಗುಪ್ತರು. ಅವರು ಪರಿಷ್ಕರಗೊಳಿಸಿದ ರಸಸಿದ್ಧಾಂತವಾದರೂ ಅವರ ಕಕ್ಷೆಯಲ್ಲಿ ಶೈವದರ್ಶನದ ಅಂಗವೇ ಆಗಿದೆ.
ಪ್ರಮುಖ ಸಾಹಿತ್ಯಲಾಕ್ಷಣಿಕರಾದ ಅಭಿನವಗುಪ್ತರು ರಚಿಸಿದ ’ಅಭಿನವಭಾರತೀ’, `ಧ್ವನ್ಯಾಲೋಕಲೋಚನ’ – ಇವು ಅಲಂಕಾರಶಾಸ್ತ್ರದ ಮುಖ್ಯ ಆಧಾರಸ್ತಂಭಗಳೇ ಆಗಿವೆ. ಈಗಲೂ ಕಾವ್ಯಶಾಸ್ತ್ರದ ಕೇಂದ್ರದಲ್ಲಿರುವ ’ಸಹೃದಯ’ ಕಲ್ಪನೆಯನ್ನು ’ಲೋಚನ’ ವ್ಯಾಖ್ಯಾನದಲ್ಲಿ ವಿಕಾಸಗೊಳಿಸಿದವರು ಅಭಿನವಗುಪ್ತರು. ಅಂತೆಯೇ ಕಾವ್ಯಾಭ್ಯಾಸಕ್ಕೆ ’ಅಧಿಕಾರಿ’ (ಎಂದರೆ ಯೋಗ್ಯರು) ಯಾರೆಂಬುದನ್ನು ’ಅಭಿನವಭಾರತೀ’ ಗ್ರಂಥದಲ್ಲಿ ಅವರು ಸ್ಫುಟೀಕರಿಸಿದ್ದಾರೆ.
ಅಭಿನವಗುಪ್ತರು ತಾವು ಕೈಯಿರಿಸಿದ ಪ್ರತಿಯೊಂದು ಶಾಸ್ತ್ರಕ್ಕೂ ಅತ್ಯವಶ್ಯ ಪರಿಷ್ಕಾರಣವನ್ನು ಸಂಯೋಜಿಸಿ ಆ ಒಂದೊಂದು ಶಾಸ್ತ್ರಕ್ಕೂ ವಿಶೇಷವಾದ ಹೊಳಪನ್ನು ತಂದುಕೊಟ್ಟಿದ್ದಾರೆ. ಆನುವಂಶಿಕ ಸಾರಸ್ವತ ಪರಂಪರೆ, ಅಗಾಧವಾದ ಸ್ವೀಯ ಪಾಂಡಿತ್ಯಾರ್ಜನೆ, ಅಂತರ್ದೃಷ್ಟಿ, ನಿರಂತರ ತಾಂತ್ರಿಕ ಸಾಧನೆ, ರಚನಾಕೌಶಲ, ಮನೋಹರ ಶೈಲಿ – ಈ ಹಲವಾರು ವಿಶೇಷತೆಗಳ ಮೇಳನ ಅವರಲ್ಲಿ ಇದ್ದುದರಿಂದ ಅಷ್ಟೊಂದು ಬಹುಮುಖ ಸಾಧನೆ ಅವರಿಗೆ ಶಕ್ಯವಾಯಿತು. ಇಷ್ಟು ವಿಶಾಲಪ್ರಮಾಣದ ಸಾಧಕರು ಇತಿಹಾಸದಲ್ಲಿ ಹಲವರಷ್ಠೆ ಇದ್ದಾರೆ. ಅವರು ರಚಿಸಿದವೆಂದು ತಿಳಿದಿರುವ ಸುಮಾರು ನಲವತ್ತೈದು ಕೃತಿಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಾತ್ರ ಪ್ರಕಾಶನಗೊಂಡಿವೆ; ಹಸ್ತಪ್ರತಿ ರೂಪದಲ್ಲಿ ಕೆಲವು ಉಳಿದಿವೆ. ಒಟ್ಟು ಕೃತಿಗಳಲ್ಲಿ ಹತ್ತಿರಹತ್ತಿರ ಅರ್ಧದಷ್ಟು ಉಪಲಬ್ಧವಿಲ್ಲ. ಆದರೆ ಅಭಿನವಗುಪ್ತರ ಅಸಮಾನ ಕೀರ್ತಿಯನ್ನು ಎತ್ತಿಹಿಡಿಯಲು ಲಬ್ಧ ಕೃತಿಗಳೇ ಸಾಕು.
’ತಂತ್ರಾಲೋಕ’ದ ಪೂರ್ವಾರ್ಧಭಾಗ ಇನ್ನೂ ಮುದ್ರಣಗೊಂಡಂತಿಲ್ಲ. `ಈಶ್ವರಪ್ರತ್ಯಭಿಜ್ಞಾವಿವೃತಿವಿಮರ್ಶ ನೀ’ ಅಗಾಧ ಕೃತಿಯ ಪರಿ?ತ ಆವೃತ್ತಿಯೂ ಇದುವರೆಗೆ ಪ್ರಕಟಗೊಂಡಂತಿಲ್ಲ.
ಅಭಿನವಗುಪ್ತರ ರಚನೆಗಳ ಗಾತ್ರವು ವಿಸ್ಮಯಕರ. ’ಮಹಾಮಾಹೇಶ್ವರಾಚಾರ್ಯಶಿರೋಮಣಿ’ ಉತ್ಪಲ ದೇವನ ’ಈಶ್ವರಪ್ರತ್ಯಭಿಜ್ಞಾವಿವೃತಿ’ಯ ಮೇಲಣ ಅಭಿನವಗುಪ್ತವ್ಯಾಖ್ಯಾನವೇ ಹದಿನೆಂಟು ಸಾವಿರ ಶ್ಲೋಕಗಳ? ವಿಸ್ತಾರವಾಗಿದೆಯೆನ್ನಲಾಗಿದೆ.
ಸಾರಸ್ವತೇತಿಹಾಸದ ಮೈಲಿಗಲ್ಲುಗಳು
ಸಂಸ್ಕೃತಸಾಹಿತ್ಯದ ವಿಸ್ತೃತ ಪರಿಜ್ಞಾನ ಇಲ್ಲದವರಲ್ಲಿ ಹೆಚ್ಚಿನವರಿಗೆ ಆಚಾರ್ಯ ಅಭಿನವಗುಪ್ತರ ಹೆಸರಿನ ಪರಿಚಯವಿರುವುದು ಭರತಮುನಿ ಪ್ರಣಿತವಾದ ನಾಟ್ಯಶಾಸ್ತ್ರದ ಮೇಲೆ ಅಭಿನವಗುಪ್ತರು ರಚಿಸಿರುವ ’ಅಭಿನವಭಾರತೀ’ ವ್ಯಾಖ್ಯಾನದ ಮೂಲಕ. ಈ ವ್ಯಾಖ್ಯಾನವಾದರೋ ಇಡೀ ಕಾವ್ಯಶಾಸ್ತ್ರಕ್ಕೇ ಆಧಾರಭೂತವೆನಿಸಿರುವ ಮಹತ್ತ್ವಪೂರ್ಣ ಗ್ರಂಥವಾಗಿದೆ. ’ನಾಟ್ಯವೇದವಿವೃತಿ’ ಎಂಬ ಹೆಸರನ್ನೂ ಪಡೆದಿರುವ ಈ ಗ್ರಂಥದಲ್ಲಿ ಪ್ರಾಚೀನ ವ್ಯಾಖ್ಯಾಕಾರರ ಮಂಡನೆಗಳ ಹಾಗೂ ನಾಟ್ಯಪ್ರಯೋಗಕ್ಕೆ ಸಂಬಂಧಿಸಿದ ಆಚರಣೆಗಳ ಸಮೀಕ್ಷೆ ಇದೆ. ಸಂಸ್ಕೃತ ನುಡಿಗಟ್ಟಿನಲ್ಲಿ ನಾಟ್ಯವೆಂಬ ಶಬ್ದದಲ್ಲಿ ನೃತ್ಯ, ಅಭಿನಯ, ಸಂಗೀತ, ಛಂದಸ್ಸು, ಅಂಗಹಾರ ಮೊದಲಾದ ವಿವಿಧ ಕಲಾಭಿವ್ಯಕ್ತಿಗಳು ಅಂತರ್ಗತವಾಗಿವೆ. ಹೀಗೆ ನಾಟ್ಯ, ಅಲಂಕಾರ ಮೊದಲಾದ ಶಾಸ್ತ್ರಗಳ ವಿಕಾಸದಲ್ಲಿ ’ಅಭಿನವಭಾರತೀ’ ವ್ಯಾಖ್ಯಾನವೂ ಕಾವ್ಯಶಾಸ್ತ್ರಪ್ರಕಾರದಲ್ಲಿ ಆನಂದವರ್ಧನಪ್ರಣೀತ ’ಧ್ವನ್ಯಾಲೋಕ’ದ ಮೇಲಣ ’ಧ್ವನ್ಯಾಲೋಕಲೋಚನ’ ವ್ಯಾಖ್ಯಾನವೂ ಮೈಲಿಗಲ್ಲುಗಳಾಗಿವೆ.
ಅಭಿನವಗುಪ್ತರು ವಿಪುಲ ಗ್ರಂಥಗಳ ಕರ್ತೃವಾಗಿದ್ದು ನಾಟ್ಯಶಾಸ್ತ್ರ ಮತ್ತು ಅಲಂಕಾರಶಾಸ್ತ್ರ ವ್ಯಾಖ್ಯಾನಗಳಿಂದ ಪ್ರಸಿದ್ಧರಾಗಿದ್ದರೂ ಅ? ಪ್ರೌಢವಾದ ಹಲವಾರು ಅನ್ಯ ದಾರ್ಶನಿಕ ಗ್ರಂಥಗಳನ್ನೂ ರಚಿಸಿದ್ದಾರೆ: ಪ್ರತ್ಯಭಿಜ್ಞಾದರ್ಶನಕ್ಕೆ ಸಂಬಂಧಿಸಿದವು, ತಂತ್ರಶಾಸ್ತ್ರಕ್ಕೆ ಸಂಬಂಧಿಸಿದವು, ಇತ್ಯಾದಿ. ’ಭಗವದ್ಗೀತಾರ್ಥಸಂಗ್ರಹ’ ಎಂಬ ಗೀತಾವ್ಯಾಖ್ಯಾನವೂ ಅವುಗಳಲ್ಲಿ ಸೇರಿದೆ.
ಶಾಸ್ತ್ರಪರಂಪರೆಯಲ್ಲಿ ಅಭಿನವಗುಪ್ತರ ಬಗೆಗೆ ಉಲ್ಲೇಖಗಳು ಇದ್ದರೂ ಅವರ ಪ್ರಸಿದ್ಧ ಕೃತಿಗಳೂ ಸಾರ್ವಜನಿಕರಿಗೆ ಲಬ್ಧವಾದದ್ದು ಈಗ್ಗೆ ೧೩೦ ವರ್ಷ ಹಿಂದೆಯಷ್ಟೇ; ಕೆಲವಂತೂ ೨೦ನೇ ಶತಮಾನದ ಆರಂಭದಲ್ಲ? ಪ್ರಕಾಶನಗೊಂಡವು. ’ಧ್ವನ್ಯಾಲೋಕಲೋಚನ’, ’ಅಭಿನವಭಾರತೀ’, ’ತಂತ್ರಾಲೋಕ’ – ಇವು ಪ್ರಕಟಗೊಂಡಾಗ ಭಾರತೀಯ ದರ್ಶನಾಭ್ಯಾಸಿಗಳಿಗೆ ದೊಡ್ಡ ನಿಧಿಯೇ ದೊರೆತಂತಾಯಿತು. ಅಲ್ಲಿಂದೀಚೆಗೆ ಶೈವದರ್ಶನಕ್ಕಾಗಲಿ ಅಲಂಕಾರಶಾಸ್ತ್ರಕ್ಕಾಗಲಿ ಸಂಬಂಧಿಸಿದ ಯಾವ ಚರ್ಚೆಯೂ ಅಭಿನವಗುಪ್ತರ ಕೊಡುಗೆಯ ಪ್ರಸ್ತಾವವಿಲ್ಲದೆ ಪೂರ್ಣಗೊಳ್ಳಲಾರದೆನಿಸಿದೆ. ಖ್ಯಾತ ವಿದ್ವಾಂಸ ಕಾಂತಿಚಂದ್ರ ಪಾಂಡೆ ಅವರು ಲಖ್ನೌ ವಿಶ್ವವಿದ್ಯಾಲಯದಲ್ಲಿ ಅಭಿನವಗುಪ್ತಪ್ರಣೀತ ವಾಙ್ಮಯದ ಅಧ್ಯಯನಕ್ಕೇ ಮೀಸಲಾದ ಶೋಧಸಂಸ್ಥಾನವನ್ನು ಸ್ಥಾಪಿಸಿದರು. ಅಭಿನವಗುಪ್ತಬೋಧಿತ ದರ್ಶನದ ಪ್ರಸಾರದಲ್ಲಿ ಗೋಪೀನಾಥಕವಿರಾಜರ ಪರಿಶ್ರಮವೂ ಸ್ಮರಣೀಯವಾಗಿದೆ. ಮಧ್ಯಯುಗೀನ ಭಾರತದ ಅತ್ಯುನ್ನತ ಮತ್ತು ಅತ್ಯಂತ ಪ್ರಭಾವೀ ದಾರ್ಶನಿಕರೆಂದರೆ ಅಭಿನವಗುಪ್ತರು ಎಂಬುದು ಸ್ಥಾಪಿತವಾಗಿದೆ.
ಅಭಿನವಗುಪ್ತರ ಹಲವಾರು ಕೃತಿಗಳು ಈಗಲೂ ಲಭ್ಯವಿಲ್ಲ. ಆದರೆ ಲಬ್ಧ ಕೃತಿಗಳೆಲ್ಲ ಪ್ರಗಾಢವೂ ಪಥದರ್ಶಕವೂ ಆಗಿವೆ. ಜಯರಥನ ವ್ಯಾಖ್ಯಾನದೊಡಗೂಡಿದ ತಂತ್ರಾಲೋಕವೇ ೧೨ ಸಂಪುಟಗಳಲ್ಲಿ ಹರಡಿಕೊಂಡಿದೆ. ಅದನ್ನು ತಂತ್ರಶಾಸ್ತ್ರದ ವಿಶ್ವಕೋಶವೆಂದೇ ಗಣಿಸಲಾಗಿದೆ. ಆದರೆ ಮಾಲಿನೀವಿಜಯವಾರ್ತಿಕ, ಪರಾತ್ರಿಂಶಿಕಾವಿವರಣ ಮೊದಲಾದವುಗಳನ್ನೂ ತಂತ್ರಾಲೋಕದೊಡಗೂಡಿ ಅಧ್ಯಯನ ಮಾಡುವುದು ಅನಿವಾರ್ಯ ಎಂದು ಸೂಚಿಸಿದ್ದಾರೆ ಅಭಿನವಗುಪ್ತರು.
ಬಹುಶಾಸ್ತ್ರಪರಿಣತಿ
ಅಭಿನವಗುಪ್ತರು ಸ್ಪರ್ಶಿಸದ ಶಾಸ್ತ್ರವಿ?ಯವೇ ಇಲ್ಲವೆನ್ನಬಹುದು. ಬಹುತೇಕ ಎಲ್ಲ ಜ್ಞಾನಾಂಗಗಳಿಗೂ ಅವರ ಮೌಲಿಕ ಕೊಡುಗೆ ಇದೆ. ಆದರೂ ಸೌಕರ್ಯಕ್ಕಾಗಿ ಅವರ ರಚನೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು: (೧) ದಾರ್ಶನಿಕ; (೨) ತಾಂತ್ರಿಕ ಅಥವಾ ಔಪಾಸನಿಕ; (೩) ಕಾವ್ಯಶಾಸ್ತ್ರ. ಅವರ ’ಈಶ್ವರ- ಪ್ರತ್ಯಭಿಜ್ಞಾವಿವೃತಿವಿಮರ್ಶನೀ’, ’ಭಗವದ್ಗೀತಾರ್ಥಸಂಗ್ರಹ’, ’ಪರಮಾರ್ಥಸಾರ’, ’ತತ್ತ್ವಾರ್ಥಪ್ರಕಾಶಿಕಾ’, ’ಬಿಂಬಪ್ರತಿಬಿಂಬವಾದ’ ಮೊದಲಾದವು ದಾರ್ಶನಿಕ ಪ್ರಕಾರದವು. ’ತಂತ್ರಾಲೋಕ’, ’ಯಂತ್ರಸಾರ’ ಹಾಗೂ ’ಭೈರವಸ್ತೋತ್ರ’, ’ದೇವೀಸ್ತೋತ್ರವಿವರಣ’ ಮೊದಲಾದವು ಔಪಾಸನಿಕ ಪ್ರಕಾರದವು. ನಾಟ್ಯಶಾಸ್ತ್ರದ ಸಮೀಕ್ಷೆಯಾದ ’ಅಭಿನವಭಾರತೀ’, ಆನಂದವರ್ಧನನ ಧ್ವನ್ಯಾಲೋಕದ ಮೇಲಣ ವ್ಯಾಖ್ಯಾನವಾದ ’ಧ್ವನ್ಯಾಲೋಕಲೋಚನ’, ’ಕಾವ್ಯಕೌತುಕವಿವರಣ’ ಮೊದಲಾದವು ಕಾವ್ಯಶಾಸ್ತ್ರಪ್ರಕಾರದವು. (ಇಲ್ಲಿ ಹೆಸರಿಸಿರುವ ಹಲವು ಕೃತಿಗಳು ಲಭ್ಯವಿಲ್ಲ.)
ಅಭಿನವಗುಪ್ತರು ಭಾರತೀಯ ದಾರ್ಶನಿಕ ಪರಂಪರೆಯ ಒಬ್ಬ ಉಜ್ಜ್ವಲ ಪ್ರತಿನಿಧಿಗಳು. ವಿಶೇಷವೆಂದರೆ ಅಭಿನವಗುಪ್ತರು ಬಿಟ್ಟುಹೋಗಿರುವ ಕೃತಿಗಳಲ್ಲಿ ವಿವಿಧ ವಿಷಯಗಳಲ್ಲಿ ಅವರಿಗೆ ಹಿಂದಿನ ಸಾವಿರಾರು ವರ್ಷಗಳಲ್ಲಿ ನಡೆದಿದ್ದ ಎಲ್ಲ ಚಿಂತನೆಯ ಪರಾಮರ್ಶನೆ ನಮಗೆ ದೊರೆಯುತ್ತದೆ. ಅಲ್ಲದೆ ಅವರ ಎಲ್ಲ ಬರಹವೂ ಸ್ವಾನುಭವದ ಮೂಸೆಯಲ್ಲಿ ಪರಿಷ್ಕಾರಗೊಂಡಿದ್ದುದು; ಆದುದರಿಂದ ಅವರ ಯಾವುದೇ ಅಭಿಮತವಾಗಲಿ ವಿಶ್ಲೇಷಣೆಯಾಗಲಿ ನಿರ್ಣಯವಾಗಲಿ ಪರಂಪರೆಯ ಪರಿಶುದ್ಧ ಪ್ರತಿಫಲನವೆಂದು ಸಿದ್ಧಪಟ್ಟಿದೆ.
ಗಮನಿಸಲೇಬೇಕಾದ ಒಂದು ಸಂಗತಿಯೆಂದರೆ ಅಧ್ಯಯನಸೌಕರ್ಯಕ್ಕಾಗಿ ಒಂದು ವಿಂಗಡಣೆಯನ್ನು ಮೇಲೆ ಸೂಚಿಸಿದೆಯಾದರೂ, ಅಭಿನವಗುಪ್ತರ ಬೇರೆಬೇರೆ ಕೃತಿಗಳು ಪೂರ್ಣವಾಗಿ ಬೇರೆಬೇರೆ ವಿ?ಯವ್ಯಾಪ್ತಿಯವೆಂದು ಹೇಳಲಾಗದು. ಅವರ ಅ? ಬರಹಗಳಲ್ಲಿ ಅನುಸ್ಯೂತತೆಯೂ ಅಂತಃಸಂಬದ್ಧತೆಯೂ ಇದೆ. ಉದಾಹರಣೆಗೆ ಅವರ ರಸ-ಸಿದ್ಧಾಂತ ವಿವೇಚನೆಯು ಅವರ ಪ್ರತ್ಯಭಿಜ್ಞಾದರ್ಶನಕ್ಕೆ ಅನುಬಂಧದ ರೀತಿಯಲ್ಲಿಯೆ ಇದೆ.
ನಮ್ಮ ಪಾರಂಪರಿಕ ಶಾಸ್ತ್ರಗ್ರಂಥಗಳ ಸಂರಚನೆಯೂ ತರ್ಕಾಧಾರವೂ ವಿ?ಯಮಂಡನರೀತಿಯೂ ಎ? ಪರಿ?ರಸಂಪನ್ನವಾಗಿರುತ್ತವೆ ಎಂಬುದಕ್ಕೆ ಒಂದು ಉತ್ತಮ ನಿದರ್ಶನವೆಂದರೆ ಅಭಿನವಗುಪ್ತರ ಕೃತಿಗಳು. ಈ ದೃಷ್ಟಿಯಿಂದ ಭಾರತೀಯ ಶಾಸ್ತ್ರವ್ಯಾಖ್ಯಾನಪರಂಪರೆಗೆ ಮಾನದಂಡವನ್ನು ನಿರ್ಮಿಸಿದವರೆಂದೂ ಅಭಿನವಗುಪ್ತರನ್ನು ಸ್ಮರಿಸಬೇಕು.
“ಇತರ ಶಾಸ್ತ್ರಕಾರರ ಬರಹ ನೀರಿನ ಮೇಲೆ ಬರೆದಂತೆ, ಆದರೆ ಅಭಿನವಗುಪ್ತರ ಬರಹ ಹೃದಯದಲ್ಲಿ ಕೆತ್ತಿದಂತೆ” ಎಂಬುದು ಮಧುರಾಜನ ಪ್ರಶಂಸೋಕ್ತಿ (’ಗುರುನಾಥಪರಾಮರ್ಶ’ದಲ್ಲಿ):
ಅಭಿನವಗುಪ್ತಪಾದಲಿಖಿತಂ ಲಿಖಿತಂ ಹೃದಯೇ |
ತದಿತರಶಾಸ್ತ್ರಕಾರಲಿಖಿತಂ ಲಿಖಿತಂ ಸಲಿಲೇ ||
ಬಹುಮುಖತೆಗೂ ಮಿಗಿಲಾದ ಸಂಗತಿಯೆಂದರೆ ಅಭಿನವಗುಪ್ತರ ತಲಸ್ಪರ್ಶಿ ಪರಾಮರ್ಶನಕ್ರಮ ಮತ್ತು ಅನನ್ಯವಾದ ಒಳನೋಟಗಳು. ಬಹುಶಾಸ್ತ್ರಪರಿಣತಿಯಿಂದ ’ಸರ್ವತಂತ್ರಸ್ವತಂತ್ರ’ ಎಂಬ ವರ್ಣನೆಗೆ ಭಾಜನರಾಗಿರುವವರಲ್ಲಿ ಅವರ ಹೆಸರು ಮೊದಮೊದಲಿಗೇ ಬರುತ್ತದೆ. ಇದರ ಜೊತೆಗೆ ಸಂಸ್ಕೃತವ್ಯಾಖ್ಯಾನಪರಂಪರೆಯ ಒಂದು ಉತ್ತುಂಗಶಿಖರವೆಂದೂ ಅಭಿನವಗುಪ್ತರನ್ನು ಗಣಿಸಲಾಗಿದೆ.
ಪ್ರಾಯಃ ಐವತ್ತಕ್ಕೂ ಮಿಗಿಲಾದಷ್ಟು ಕೃತಿಗಳನ್ನು ಅಭಿನವಗುಪ್ತರು ರಚಿಸಿದ್ದಿರಬಹುದು.
ಅಭಿನವಗುಪ್ತರು ಯೋಗಸಾಧಕರೂ ಆಗಿದ್ದುದರಿಂದ ತಾಂತ್ರಿಕಪರಂಪರೆಯ ಓರ್ವ ಮೂರ್ಧನ್ಯವ್ಯಕ್ತಿಯೂ ಆಗಿದ್ದಾರೆ.
ಅಭಿನವಗುಪ್ತರ ಬೌದ್ಧಿಕವ್ಯಾಪ್ತಿಯು ವಿಶ್ವಕೋಶಸದೃಶವೇ ಆಗಿದೆ.
ಅಭಿನವಗುಪ್ತರು ವಿಶೇಷ ಆದರಣೆಗೆ ಪಾತ್ರರಾಗಿರುವುದು ಅವರ ರಚನೆಗಳ ವ್ಯವಸ್ಥಿತತೆಯಿಂದ. ಅಭಿನವಗುಪ್ತರಿಗೆ ಹಿಂದೆಯೂ ದಾರ್ಶನಿಕರೂ ಅಲಂಕಾರಾದಿಶಾಸ್ತ್ರಜ್ಞರೂ ಇದ್ದರು. ಆದರೆ ಸ್ಫುಟವಾದ ಮತ್ತು ಅತ್ಯಂತ ವೈಜ್ಞಾನಿಕರೀತಿಯ ವಿಷಯಪ್ರತಿಸಾಧನೆಯ ಕಾರಣದಿಂದಾಗಿ ಸಂಸ್ಕೃತವಾಙ್ಮಯ ಪರಂಪರೆಯಲ್ಲಿ ಅಭಿನವಗುಪ್ತರು ’ಬೆಂಚ್ಮಾರ್ಕ್’ ಎಂದು ಪರಿಗಣಿತರಾಗಿದ್ದಾರೆ.
ಅಭಿನವಗುಪ್ತರು ಮೆರೆದ ಬೌದ್ಧಿಕ ಪ್ರಖರತೆಯಿಂದಾಗಿ ಅವರು ಎಲ್ಲೆಡೆ ’ಅಭಿನವಗುಪ್ತಪಾದ’ ಎಂದು ಗೌರವಪುರಸ್ಸರ ವ್ಯವಹೃತರಾಗಿದ್ದಾರೆ.
ತಾನು ಕೇವಲ ಬುದ್ಧಿಶಕ್ತಿಯನ್ನು ಬಳಸಿ ಬರೆದವನಲ್ಲವೆಂದೂ (“ನ ಸ್ವೋಪಜ್ಞಮೇವ ಅಸ್ಮಾಭಿರುಕ್ತಮ್”) ಪೂರ್ವಾಚಾರ್ಯರು ಹೇಳಿದ್ದುದು ಕಾಲಗತಿಯಲ್ಲಿ ವಿಸ್ಮರಣೆಗೊಳಗಾಗಿದ್ದುದರಿಂದ ಲುಪ್ತವಾಗಿದ್ದ ಶೈವದರ್ಶನವನ್ನು ತಾನು ಉಜ್ಜೀವಿಸಿದೆನೆಂದೂ ಅಭಿನವಗುಪ್ತರ ಹೇಳಿಕೆಯಿದೆ. ’ಶಿವಚರಣಸ್ಮರಣದೀಪ್ತ’ರೆಂದೂ ತಮ್ಮನ್ನು ಕರೆದುಕೊಂಡಿದ್ದಾರೆ (’ಪರಮಾರ್ಥಸಾರ’ದಲ್ಲಿ).
ಆಚಾರ್ಯಸ್ಥಾನ
ಅಭಿನವಗುಪ್ತರು ಭಾರತೀಯ ದಾರ್ಶನಿಕ ಪರಂಪರೆಯ ಒಬ್ಬ ಉಜ್ಜ್ವಲ ಪ್ರತಿನಿಧಿಗಳು. ವಿಶೇಷವೆಂದರೆ ಅಭಿನವಗುಪ್ತರು ಬಿಟ್ಟುಹೋಗಿರುವ ಕೃತಿಗಳಲ್ಲಿ ವಿವಿಧ ವಿಷಯಗಳಲ್ಲಿ ಅವರಿಗೆ ಹಿಂದಿನ ಸಾವಿರಾರು ವರ್ಷಗಳಲ್ಲಿ ನಡೆದಿದ್ದ ಎಲ್ಲ ಚಿಂತನೆಯ ಪರಾಮರ್ಶನೆ ನಮಗೆ ದೊರೆಯುತ್ತದೆ. ಅಲ್ಲದೆ ಅವರ ಎಲ್ಲ ಬರಹವೂ ಸ್ವಾನುಭವದ ಮೂಸೆಯಲ್ಲಿ ಪರಿ?ರಗೊಂಡಿದ್ದುದು; ಆದುದರಿಂದ ಅವರ ಯಾವುದೇ ಅಭಿಮತವಾಗಲಿ ವಿಶ್ಲೇ?ಣೆಯಾಗಲಿ ನಿರ್ಣಯವಾಗಲಿ ಪರಂಪರೆಯ ಪರಿಶುದ್ಧ ಪ್ರತಿಫಲನವೆಂದು ಸಿದ್ಧಪಟ್ಟಿದೆ.
ಅಭಿನವಗುಪ್ತರು ಶಿವನ ಭೈರವರೂಪದ ಅವತಾರ – ಎಂದೆಲ್ಲ ಶೈವ ಸಿದ್ಧಾಂತಪರಂಪರೆಯಲ್ಲಿ ಹೇಳಿಕೆಗಳು ಇವೆ. ’ಕಾಶ್ಮೀರದ ಶಂಕರಾಚಾರ್ಯರು’ ಎಂದೂ ಅಭಿವನಗುಪ್ತರನ್ನು ಮಮ್ಮಟನು ಕರೆದಿದ್ದಾನೆ.
’ಅವತಾರ’ ಎಂಬುದು ಕೇವಲ ಸಾಹಿತ್ಯಕ ವರ್ಣನೆಯಲ್ಲ. ಒಬ್ಬ ಸಾಧಕನನ್ನು ಅವತಾರವೆಂದು ಪರಿಗಣಿಸಬೇಕಾದರೆ ಆರು ಲಕ್ಷಣಗಳನ್ನು ಶಾಸ್ತ್ರಗಳು ನಿರ್ದೇಶಿಸಿವೆ: ಆತ್ಯಂತಿಕ ಶಿವಭಕ್ತಿ, ಮಂತ್ರಸಿದ್ಧಿ, ಪಂಚಭೂತಗಳ ಮೇಲೆ ಪ್ರಭುತ್ವ, ಸ್ವವಿಹಿತ ಧ್ಯೇಯವನ್ನು ಸಾಧಿಸುವ ಸಾಮರ್ಥ್ಯ, ಕಾವ್ಯಾಲಂಕಾರಾದಿ ಪ್ರಕ್ರಿಯೆಗಳ ಸಮ್ಯಗ್ಜ್ಞಾನ, ಸಕಲ ಶಾಸ್ತ್ರಗಳ ಅರಿವು ಮತ್ತು ಅನುಸಂಧಾನ. ಈ ಆರೂ ಲಕ್ಷಣಗಳು ಅಭಿನವಗುಪ್ತರಲ್ಲಿ ಇದ್ದುದರಿಂದ ಪ್ರಾಪ್ತವಾಗಿದ್ದುದು ಅವರ ಆಚಾರ್ಯಸ್ಥಾನ.
ಯಾವ ಶಾರದಾಕ್ಷೇತ್ರವು ಶೈವದರ್ಶನ, ವಿವಿಧ ತಂತ್ರಮಾರ್ಗಗಳು, ಮೀಮಾಂಸಾ, ನ್ಯಾಯ, ವೈಶೇಷಿಕ ಮೊದಲಾದ ಹಲವು ಪ್ರಸ್ಥಾನಗಳ ನೆಲೆವೀಡಾಗಿದ್ದಿತೋ ಅದೇ ಕ್ಷೇತ್ರದಿಂದ ಪ್ರತ್ಯಭಿಜ್ಞಾದರ್ಶನವೂ ಹೊಮ್ಮುವಂತಾಯಿತು. ಪ್ರತ್ಯಭಿಜ್ಞಾದರ್ಶನದ ವಿಚಾರಧಾರೆಗೆ ಸ್ಪಂದದರ್ಶನ, ತ್ರಿಕದರ್ಶನ, ಷಡರ್ಧದರ್ಶನ ಮೊದಲಾದ ಬೇರೆ ಹೆಸರುಗಳೂ ರೂಢಿಯಲ್ಲಿವೆ. ತಾರ್ಕಿಕತೆ, ಸಮನ್ವಯಬುದ್ಧಿ, ವಿನಮ್ರತೆ – ಈ ಗುಣಗಳ ಅಪೂರ್ವ ಸಮಾವೇಶವನ್ನು ಅಭಿನವಗುಪ್ತರ ಬರಹದಲ್ಲಿ ಕಾಣುತ್ತೇವೆ. ತಾವು ಮಾಡಿರುವುದು ಪೂರ್ವಾಚಾರ್ಯರುಗಳ ಸಾಧನೆಯ ಮುಂದುವರಿಕೆಯಷ್ಟೇ ಎಂಬ ಮಾತು ಅವರ ವ್ಯಾಖ್ಯಾನಗಳಲ್ಲಿ ಪದೇ ಪದೇ ಬರುತ್ತದೆ. ಭರತಮುನಿಯ ರಸಸೂತ್ರದ ಮೇಲಣ ವ್ಯಾಖ್ಯೆ, ರಸಾವಿ?ರದ ಅಧಿ?ನವು ಭಾವುಕನ ಚಿತ್ತ ಎಂಬ ಆಶಯದ ಭಟ್ಟನಾಯಕನ ಸಿದ್ಧಾಂತದ ಮೇಲಣ ವ್ಯಾಖ್ಯೆ – ಮೊದಲಾದ ಸಂದರ್ಭಗಳಲ್ಲಿ ಅಭಿನವಗುಪ್ತರ ವಿನಮ್ರತೆಯು ಎದ್ದುಕಾಣುತ್ತದೆ.
ಅವರ ಪ್ರಮುಖ ಕೃತಿಗಳಲ್ಲಿ ಮೊದಲ ವರ್ಗದವು ಸಾಹಿತ್ಯಶಾಸ್ತ್ರಸಂಬಂಧಿಯಾದವು. ಎರಡನೇ ವರ್ಗದವು ತಂತ್ರಸಾಧನಸಂಬಂಧಿಯಾದವು. ಅವರು ಆರಂಭಕಾಲದಲ್ಲಿ ಸಾಹಿತ್ಯಶಾಸ್ತ್ರಪ್ರವರ್ತಕ ಕೃತಿಗಳ ನಿರ್ಮಾಣಕ್ಕೂ ಅನಂತರದ ಕಾಲದಲ್ಲಿ ಶೈವದರ್ಶನಪ್ರವರ್ತಕ ಕೃತಿಗಳ ರಚನೆಗೂ ಹೆಚ್ಚಿನ ಗಮನವನ್ನು ಹರಿಸಿದರೆಂದು ಊಹಿಸಬಹುದು. ’ಅಭಿನವಭಾರತೀ’ ಮೊದಲಾದ ಕೃತಿಗಳಲ್ಲಿ ಅವರು ಸಾಂದ್ರವಾಗಿ ಪ್ರತಿಪಾದಿಸಿದ ರಸಸಿದ್ಧಾಂತವು ’ಅಭಿವ್ಯಕ್ತಿವಾದ’ ಎಂಬ ಹೆಸರಿನಲ್ಲಿ ವಿಶ್ರುತವಾಗಿದೆ. ’ಈಶ್ವರಪ್ರತ್ಯಭಿಜ್ಞಾವಿವೃತಿ- ವಿಮರ್ಶನೀ’, ’ತಂತ್ರಾಲೋಕ’ ಮೊದಲಾದ ಕೃತಿಗಳಲ್ಲಿ ಪ್ರತಿಪಾದಿಸಿದ ಶಿವತತ್ತ್ವೋಪಾಸನಪ್ರಸ್ಥಾನವು ’ಪ್ರತ್ಯಭಿಜ್ಞಾದರ್ಶನ’ ಎಂಬ ಹೆಸರಿನಿಂದ ಪ್ರಸಿದ್ಧವಿದೆ.
ಮೇಲಿನೆರಡೂ ಶಾಸ್ತ್ರಗಳು ಪ್ರಾಚೀನಕಾಲದಿಂದ ಇದ್ದವೇ. ಆದರೆ ಅವುಗಳ ಅಸ್ಪ? ಅಂಶಗಳನ್ನು ಸ್ಫುಟೀಕರಿಸಿ ಈ ದರ್ಶನಗಳಿಗೆ ಒಟ್ಟಂದವನ್ನು ನಿರ್ಮಿಸಿದವರು ಅಭಿನವಗುಪ್ತರು – ಎಂಬ ಕಾರಣದಿಂದ ಅವರು ಈ ಶಾಸ್ತ್ರಗಳ ಪ್ರಮುಖ ಪ್ರವರ್ತಕರೆಂಬ ಮಾನ್ಯತೆಗೆ ಪಾತ್ರರಾಗಿದ್ದಾರೆ.
ಮನೆತನದ ಹಿನ್ನೆಲೆ
ಸಂಸ್ಕೃತಪರಂಪರೆಯಲ್ಲಿ ಕೃತಿಕಾರರು ತಮ್ಮನ್ನು ಕುರಿತ ವಿವರಗಳನ್ನು ತಾವೇ ಒದಗಿಸಿರುವುದು ತೀರಾ ವಿರಳ. ಮುಕ್ಕಾಲು ಮುರವೀಸಪಾಲು ಕೃತಿಗಳ ರಚನೆಯ ಕಾಲವನ್ನೂ ಕೃತಿಕಾರರ ಹಿನ್ನೆಲೆಯನ್ನೂ ಸಾಕ್ಷ್ಯಾಂತರಗಳ ಆಧಾರದಿಂದ? ಊಹಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಅಪವಾದವೆಂಬಂತೆ ತಮ್ಮ ಆನುಪೂರ್ವಿಯನ್ನೂ ಸಾಧನೆಗಳನ್ನೂ ಅಭಿನವಗುಪ್ತರು ತಾವೇ ತಮ್ಮ ಕೃತಿಗಳಲ್ಲಿ ಲಭ್ಯವಾಗಿಸಿರುವುದು ಒಂದು ಅಪೂರ್ವತೆ.
ಕ್ರಿಸ್ತಾಬ್ದ ೮ನೇ ಶತಮಾನದಲ್ಲಿ ಗಂಗಾ-ಯಮುನಾ ಬಯಲು ಪ್ರಾಂತದಿಂದ ಕಾಶ್ಮೀರಕ್ಕೆ ವಲಸೆ ಬಂದ ಅತ್ರಿಗುಪ್ತರ ವಂಶದಲ್ಲಿ ವರಾಹಗುಪ್ತರ ಪೌತ್ರರಾಗಿ ಚುಕುಲ (ಚುಖುಲಕ) ಮತ್ತು ವಿಮಲಕಲಾ ದಂಪತಿಗಳ ಪುತ್ರನಾಗಿ ಜನನ, ವಿವಿಧ ಗುರುಗಳ ಶಿ?ತ್ವದಲ್ಲಿ ಅಪಾರ ಜ್ಞಾನಾರ್ಜನೆ, ಬಾಲ್ಯದಲ್ಲಿಯೆ ಮಾತೃವಿಯೋಗ, ತತ್ಪರಿಣಾಮವಾಗಿ ತಂದೆಯವರು ವಿರಕ್ತಜೀವನದ ಕಡೆಗೆ ವಾಲಿದುದು, ಅಭಿನವಗುಪ್ತರು ತಾವು ಅವಿವಾಹಿತರಾಗಿಯೆ ಉಳಿಯಲು ನಿರ್ಧರಿಸಿದುದು, ವಿಪುಲ ಶಾಸ್ತ್ರಗ್ರಂಥ ರಚನೆ, ವರ್ಷಗಳುದ್ದಕ್ಕೂ ಅಧ್ಯಯನ- ಅಧ್ಯಾಪನಗಳೊಡನೆ ಸ್ವೀಯ ಕಠಿಣ ತಾಂತ್ರಿಕ ಸಾಧನೆ, ಅಂತಿಮ ವ?ಗಳಲ್ಲಿ ಶ್ರೀನಗರ-ಗುಲ್ಮಾರ್ಗ್ ಪ್ರಾಂತದಲ್ಲಿರುವ ’ಭೈರವಗುಹಾ’ ಎಂಬ ಸಣ್ಣ ಗ್ರಾಮದಲ್ಲಿ ವಿವಿಕ್ತ ಜೀವನ – ಇವು ಅಭಿನವಗುಪ್ತರ ಬದುಕಿನ ಬಾಹ್ಯರೇಖೆಗಳು. ಅವರು ಅವಸಾನರಾದಾಗ ಅಂತ್ಯೇಷ್ಟಿಯ ಸಮಯದಲ್ಲಿ ಅವರಿಗೆ ಅಂತಿಮನಮನ ಸಲ್ಲಿಸಲು ಅವರ ೧೨೦೦ರ? ಶಿ?ರು ದೇಶದ ಬೇರೆಬೇರೆಡೆಗಳಿಂದ ಬಂದಿದ್ದರೆಂದು ಹೇಳಿಕೆ ಇದೆ. ಅವರ ಶಿ?ರ್ಜನೆಯ ಅಗಾಧ ಪರಿಮಾಣವನ್ನು ಇದರಿಂದ ಊಹಿಸಬಹುದು.
ಅವರ ಪ್ರಸಿದ್ಧಿಯ ಕಾರಣದಿಂದಾಗಿ ಅಭಿನವಗುಪ್ತರಿಗೆ ಸಂಬಂಧಿಸಿದಂತೆ ಹಲವು ದಂತಕಥೆಗಳು ಪ್ರಚಲಿತವಿವೆ. ಉದಾಹರಣೆಗೆ: ’ಗುಪ್ತಪಾದ’ವೆಂದರೆ ಸರ್ಪ. ಅವರು ತಮ್ಮ ಅಸಮಾನ ಪ್ರತಿಭೆಯಿಂದ ಸಂಗಡಿಗರನ್ನು ಸರ್ಪದಂತೆ ಕಾಡುತ್ತಿದ್ದ ಕಾರಣದಿಂದ ಅವರು ಕ್ರಮೇಣ ’ಅಭಿನವಗುಪ್ತಪಾದ’ರೆನಿಸಿದರು ಎಂಬುದು ಒಂದು ಉದಂತ!
ಕಲಿತದ್ದು ಊರ್ಜಿತವಾಗಿ ಉಳಿಯಬೇಕಾದರೆ ಕಲಿಕೆಯು ಗುರುಮುಖದ ಮೂಲಕವೇ ಆಗಿರಬೇಕೆಂಬುದು ಸಾಂಪ್ರದಾಯಿಕ ನಿಲವು. ಅಭಿನವಗುಪ್ತರು ಶುಶ್ರೂಷೆ ಮಾಡಿದ ಗುರುಗಳ ಸಂಖ್ಯೆ ದೊಡ್ಡದು. ಹೀಗೆ ನಮ್ಮ ದೇಶದ ಅನನ್ಯ ಅಧ್ಯಯನಪರಂಪರೆಗೆ ಶ್ರೇಷ್ಠ ನಿದರ್ಶನವೂ ಆಗಿದ್ದಾರೆ ಅವರು.
ವ್ಯಕ್ತಿಗಿಂತ ಕೃತಿಯು ಮುಖ್ಯ – ಎಂಬ ಗತಾನುಗತಿಕ ಧೋರಣೆಗೆ ಅಪವಾದವೆಂಬಂತೆ ಶೋಧಕರ ಶ್ರಮವನ್ನು ನಿವಾರಿಸಿ ಅಭಿನವಗುಪ್ತರು ತಮ್ಮ ಮನೆತನದ ಹಾಗೂ ಅಧ್ಯಯನದ ವಿವರಗಳನ್ನು ತಾವೇ ಒದಗಿಸಿದ್ದಾರೆ – ’ಪರಾತ್ರಿಂಶಿಕಾವಿವರಣ’ ಗ್ರಂಥದಲ್ಲಿ ಮತ್ತು ಬೇರೆಡೆಗಳಲ್ಲಿ.
ಗುರುಪರಂಪರೆ
ಅಭಿನವಗುಪ್ತರ ಪೂರ್ವಜರು ಪ್ರಕಾಂಡ ಪಾಂಡಿತ್ಯಕ್ಕಾಗಿ ಹೆಸರಾಗಿದ್ದು ಕಾಶ್ಮೀರಾಧಿಪತಿ ಲಲಿತಾದಿತ್ಯನಿಂದ (೮ನೇ ಶತಮಾನದ ಮಧ್ಯಭಾಗ) ಸಂಮಾನಿತರಾಗಿದ್ದರು. ಸಾಂಪ್ರದಾಯಿಕ ಶಾಸ್ತ್ರ ವಿದ್ವತ್ತೆಯಲ್ಲಿ ಮಾತ್ರವಲ್ಲದೆ ಅಭಿನವಗುಪ್ತರು ತಮ್ಮ ಮನೆತನದ ಹಿಂದಿನವರಂತೆ ತಾಂತ್ರಿಕ ಸಾಧನೆಯಲ್ಲಿಯೂ ಉನ್ನತರೆನಿಸಿದ ಯೋಗಾಚಾರ್ಯರೂ ಆಗಿದ್ದರು. ಆ ಮನೆತನಕ್ಕೆ ಕಾಶ್ಮೀರದ ರಾಜರುಗಳು ಸಮೃದ್ಧ ಜಹಗೀರುಗಳನ್ನು ಕೊಟ್ಟಿದ್ದರು.
ಅಭಿನವಗುಪ್ತರ ಪೂರ್ವಜರಲ್ಲಿ ಪ್ರಸಿದ್ಧನಾಗಿದ್ದ ಅತ್ರಿಗುಪ್ತನು ಕನ್ನೌಜದ ಯಶೋವರ್ಮನ ಸಂಪರ್ಕದಲ್ಲಿ ಇದ್ದವನು; ಸರ್ವಶಾಸ್ತ್ರಪಾರಂಗತ. ಗಂಗಾ- ಯಮುನಾ ನಡುವಣ ದೋಆಬ್ ಕ್ಷೇತ್ರದಲ್ಲಿ ನೆಲಸಿದ್ದ ಅತ್ರಿಗುಪ್ತನನ್ನು ಲಲಿತಾದಿತ್ಯನು ಕಾಶ್ಮೀರ ಆಸ್ಥಾನಕ್ಕೆ ಕರೆಯಿಸಿಕೊಂಡ. ಅಲ್ಲಿಂದಾಚೆಗೆ ಅತ್ರಿಗುಪ್ತವಂಶಜರು ಕಾಶ್ಮೀರನಿವಾಸಿಗಳಾಗಿದ್ದರು. ಅವರು ಶಾಸ್ತ್ರಪಾಂಡಿತ್ಯ, ಆಧ್ಯಾತ್ಮಿಕ ಸಾಧನೆ – ಎರಡರಲ್ಲಿಯೂ ಸಮುನ್ನತಿ ಪಡೆದಿದ್ದರು. ’ಪ್ರತ್ಯಭಿಜ್ಞಾದರ್ಶನ’ ಎಂದು ಸಂಕೇತಿಸಲ್ಪಟ್ಟಿರುವ ತಾಂತ್ರಿಕ ಪ್ರಸ್ಥಾನವನ್ನು ವಿಕಸಿತಗೊಳಿಸಿ ಪ್ರತಿಷ್ಠಾಪಿಸಿದ್ದವರು ಆ ವಂಶಿಕರೇ. ಈ ಸಾಧನಮಾರ್ಗವಾದರೋ ಯೋಗಮಾರ್ಗದ ಮಾಧ್ಯಮದಿಂದ ಆಧ್ಯಾತ್ಮಿಕೋತ್ಕರ್ಷ, ಲೌಕಿಕಜೀವನದ ಮೇಲ್ಮೆ – ಎರಡಕ್ಕೂ ದಾರಿಮಾಡುವುದಾದುದರಿಂದ ಅಧಿಕ ಜನರನ್ನು ಆಕರ್ಷಿಸಿದ್ದಿರಬೇಕು.
ಈ ವಿಶಿಷ್ಟ ದರ್ಶನದ ಪ್ರವರ್ತಕರಾದುದರಿಂದ ಅಭಿನವಗುಪ್ತರ ವಂಶಜರು ’ಮಹಾಮಾಹೇಶ್ವರರು’, ’ಮಾಹೇಶ್ವರಾಚಾರ್ಯರು’ ಮೊದಲಾದ ಉಪಾಧಿಗಳನ್ನು ಪಡೆದಿದ್ದರು.
ಅಭಿನವಗುಪ್ತರು ತಮ್ಮ ಆವಾಸವಾಗಿ ಮಾಡಿಕೊಂಡಿದ್ದ ವಿತಸ್ತಾನದೀತೀರದ ಭವ್ಯ ಹರ್ಮ್ಯವು ಅಂದಿಗೆ ಸುಮಾರು ಇನ್ನೂರು ವ? ಹಿಂದೆ ಅತ್ರಿಗುಪ್ತನು ನಿರ್ಮಿಸಿದ್ದುದು.
ಕಾಶ್ಮೀರ-ಶೈವ-ದರ್ಶನದ ಪ್ರಮುಖಾಂಶಗಳಾದ ಪ್ರತ್ಯಭಿಜ್ಞಾ ಪ್ರಮೇಯಗಳನ್ನು ತಮಗೆ ಬೋಧಿಸಿದ ಗುರುವೆಂದು ಲಕ್ಷ್ಮಣಗುಪ್ತನಿಗೆ ಅಭಿನವಗುಪ್ತರು ತಂತ್ರಾಲೋಕದ ಆರಂಭದಲ್ಲಿಯೆ ನಮನ ಸಲ್ಲಿಸಿದ್ದಾರೆ:
ಗುರೋರ್ಲಕ್ಷ್ಮಣಗುಪ್ತಸ್ಯ
ನಾದಸಂಮೋಹಿನೀಂ ನುಮಃ ||
ನಾಟ್ಯಶಾಸ್ತ್ರವನ್ನು ಅಭಿನವಗುಪ್ತರು ಆಳವಾಗಿ ಅಧ್ಯಯನ ಮಾಡಿದುದು ಭಟ್ಟತೌತರಲ್ಲಿ.
ಹಲವಾರು ಗುರುಗಳಿಂದ ವಿವಿಧಶಾಸ್ತ್ರಗಳನ್ನು ಪಾಠಮಾಡಿದವರಾದರೂ ಅವನ್ನೆಲ್ಲ ಮಥಿಸಿ ನೂತನ ಅರ್ಥಸೂಕ್ಷ್ಮಗಳನ್ನೂ ಪರಿ?ರಗಳನ್ನೂ ಹೊರತೆಗೆದು ಪ್ರಕಾಶಪಡಿಸಿದವರು ಅಭಿನವಗುಪ್ತರು:
ಪೂರ್ವಶ್ರುತಾನ್ಯಾಕಲಯನ್ ಸ್ವಬುದ್ಧ್ಯಾ
ಶಾಸ್ತ್ರಾಣಿ ತೇಭ್ಯಃ ಸಮವಾಪ್ಯ ಸಾರಂ… ||
(ತಂತ್ರಾಲೋಕ)
ತಾವು ’ಯೋಗಿನೀ-ಭೂ’ ಎಂದರೆ ಯೋಗಿನಿಯಿಂದ ಜನಿಸಿದವರು ಎಂದು ಅಭಿನವಗುಪ್ತರದೇ ಮಾತು ಇದೆ.
ಅಭಿನವಗುಪ್ತರು ಕೇವಲ ಬೋಧಕ-ಲೇಖಕರ? ಆಗಿರಲಿಲ್ಲ; ಸ್ವಯಂ ಸಾಧಕರಾಗಿದ್ದರು, ಎಂದರೆ ಶಾಸ್ತ್ರೋಪದೇಶಾನುಸಾರಿಯಾದ ಜೀವನಕ್ರಮ ಅವರದಾಗಿತ್ತು. ಶಾಸ್ತ್ರಾಧ್ಯಯನ, ಸ್ವಾನುಭವ, ಶ್ರುತ್ಯನುಗುಣ ತರ್ಕಾನುಸಂಧಾನ – ಈ ಮೂರರ ಆಧಾರದಿಂದ ತನ್ನಲ್ಲಿ ನಿಶ್ಚಯವೇರ್ಪಟ್ಟಿತು – ಎಂದು ಅಭಿನವಗುಪ್ತರೇ ಹೇಳಿದ್ದಿದೆ. ಅಭಿನವಗುಪ್ತರು ಆಜೀವನ ಬ್ರಹ್ಮಚಾರಿಗಳಾಗಿದ್ದು ನಿರಂತರ ಶಿವೋಪಾಸನೆಯಲ್ಲಿ ತತ್ಪರರಾಗಿರುತ್ತಿದ್ದರು.
ಅಭಿನವಗುಪ್ತರೇ ’ಈಶ್ವರಪ್ರತ್ಯಭಿಜ್ಞಾವಿವೃತಿವಿಮರ್ಶನೀ’ ಗ್ರಂಥದಲ್ಲಿ ಸೂಚಿಸಿರುವಂತೆ ಅವರ ಜೀವನದ ಅತ್ಯಂತ ಕ್ರಿಯಾಶೀಲ ಅವಧಿ ’ಸಪ್ತರ್ಷಿಶಕೆ’ಯ ೪೦೬೬ ರಿಂದ ೪೦೯೦ರ ವರೆಗಿನ ವ?ಗಳು – ಎಂದರೆ ಕ್ರಿಸ್ತಾಬ್ದ ೯೫೦ರಿಂದ ೯೭೦ ರವರೆಗಿನದು. ಈ ಮತ್ತು ಇತರ ಉಲ್ಲೇಖಗಳ ಆಧಾರದ ಮೇಲೆ ಅಭಿನವಗುಪ್ತರ ಜನನವು ಕ್ರಿ.ಶ. ೯೩೦ರ ಆಸುಪಾಸಿನಲ್ಲಿ ಆಗಿದ್ದಿರಬಹುದೆಂದು ಅನುಮಾನಿಸಲಾಗಿದೆ.
ಅಭಿನವಗುಪ್ತರ ಜನ್ಮನಾಮವು ’ಮಾಹೇಶ್ವರ’ ಎಂದು ಇದ್ದಿರಬಹುದೆಂದೂ ಅವರ ಅನುಪಮ ಸಾಧನೆಯಿಂದಾಗಿ ಅನಂತರದ ಕಾಲದಲ್ಲಿ ಜನರು ಅವರನ್ನು ’ಅಭಿನವ’ ಎಂಬ ಪ್ರಶಂಸಕ ಹೆಸರಿನಿಂದ ಕರೆಯತೊಡಗಿದರೆಂದೂ ಊಹಿಸಲು ಅವಕಾಶವಿದೆ. ಈ ಅಭಿಪ್ರಾಯವನ್ನೇ ಕಾವ್ಯಪ್ರಕಾಶ ವ್ಯಾಖ್ಯಾಕಾರ ವಾಮನನು ವ್ಯಕ್ತಪಡಿಸಿದ್ದಾನೆ.
ಅವರ ಪ್ರಸಿದ್ಧಿಯ ಕಾರಣದಿಂದಾಗಿ ಅಭಿನವಗುಪ್ತರಿಗೆ ಸಂಬಂಧಿಸಿದಂತೆ ಹಲವು ದಂತಕಥೆಗಳು ಪ್ರಚಲಿತವಿವೆ. ಉದಾಹರಣೆಗೆ: ’ಗುಪ್ತಪಾದ’ವೆಂದರೆ ಸರ್ಪ. ಅವರು ತಮ್ಮ ಅಸಮಾನ ಪ್ರತಿಭೆಯಿಂದ ಸಂಗಡಿಗರನ್ನು ಸರ್ಪದಂತೆ ಕಾಡುತ್ತಿದ್ದ ಕಾರಣದಿಂದ ಅವರು ಕ್ರಮೇಣ ’ಅಭಿನವಗುಪ್ತಪಾದ’ರೆನಿಸಿದರು ಎಂಬುದು ಒಂದು ಉದಂತ!
ಸಾಧನೌನ್ನತ್ಯ
ಅಭಿನವಗುಪ್ತರ ವಿಶಿಷತೆಯೆಂದರೆ ಅವರೊಬ್ಬರೇ ಹಲವಾರು ಶಾಸ್ತ್ರಗಳನ್ನು ಪರಿಷ್ಕರಿಸಿ ನಿಷ್ಕೃಷ್ಟಗೊಳಿಸಿದುದು ಮಾತ್ರವಲ್ಲದೆ ಆಂತರಂಗಿಕ ಸಾಧನೆಯ ಉನ್ನತಿಯಿಂದಲೂ ಅತುಲ್ಯರಾಗಿದ್ದುದು.
ಅಭಿನವಗುಪ್ತರು ಲಕ್ಷ್ಮಣಗುಪ್ತರಂತಹ ಶ್ರೇ?ರಲ್ಲಿ ಶಿ?ತ್ವ ಮಾಡಿ ಪ್ರತ್ಯಭಿಜ್ಞಾಶಾಸ್ತ್ರವನ್ನು ಅವಗತ ಮಾಡಿಕೊಂಡರು; ಆಂತರಂಗಿಕ ಸಾಧನೆಯಲ್ಲಿ ತಮ್ಮ ಪಿತೃವರ್ಯರೇ ಆದ ನರಸಿಂಹಗುಪ್ತರಿಂದ ಮಾರ್ಗದರ್ಶನ ಪಡೆದರು. ಅಲ್ಲದೆ ಪ್ರತ್ಯಭಿಜ್ಞಾಶಾಸ್ತ್ರಪರಂಪರೆಯಲ್ಲಿ ಅಸೀಮ ಕೀರ್ತಿಶಾಲಿಗಳಾಗಿದ್ದ ಮಹಾಮಾಹೇಶ್ವರ ಶಂಭುನಾಥರ ನಿಕಟ ಸಾನ್ನಿಧ್ಯವೂ ಅವರಿಗೆ ಪ್ರಾಪ್ತವಾಗಿದ್ದಿತು.
ಅಭಿನವಗುಪ್ತರ ಜ್ಞಾನತೃಷೆಯು ಮೇರೆವರಿಯದುದು. ಅವರು ಬೇರೆಬೇರೆ ಗುರುಗಳ ಅನುಚರಣೆ ಮಾಡಿ ಬೇರೆಬೇರೆ ಶಾಸ್ತ್ರಗಳ ಪರಿಣತಿಯನ್ನು ಸಾಧಿಸಿದರು. ಹೀಗೆ ಅವರನ್ನು ಬಹುಶಾಸ್ತ್ರ ಪಾರಂಗತರನ್ನಾಗಿ ರೂಪಿಸಿದವರು – ವ್ಯಾಕರಣಶಾಸ್ತ್ರದಲ್ಲಿ ತಂದೆ ನರಸಿಂಹಗುಪ್ತರು, ನಾಟ್ಯಶಾಸ್ತ್ರದಲ್ಲಿ ಭಟ್ಟತೌತ, ಧ್ವನಿಸಿದ್ಧಾಂತದಲ್ಲಿ ಭಟ್ಟೇಂದುರಾಜ, ದ್ವೈತಾದ್ವೈತತಂತ್ರದಲ್ಲಿ ವಾಮನಾಥ, ದ್ವೈತವಾದಿ ಶೈವ ಸಂಪ್ರದಾಯದಲ್ಲಿ ಭೂತಿರಾಜತನಯ, ’ಕ್ರಮ’- ’ತ್ರಿಕ’ಯುಕ್ತ ಪ್ರತ್ಯಭಿಜ್ಞಾಶಾಸ್ತ್ರದಲ್ಲಿ ಲಕ್ಷ್ಮಣಗುಪ್ತ, ಬ್ರಹ್ಮವಿದ್ಯಾ ಸಂಪ್ರದಾಯ ಮತ್ತು ’ಕ್ರಮ’ ದರ್ಶನದಲ್ಲಿ ಭೂತಿರಾಜ, ಕೌಲಾಗಮದಲ್ಲಿ ಶಂಭುನಾಥ, ಸಾಹಿತ್ಯದಲ್ಲಿ ಅಭಿನಂದ (’ಕಾದಂಬರೀಕಥಾಸಾರ’ ರಚಯಿತ).
ನರಸಿಂಹಗುಪ್ತರಿಗೆ ದುಃಖಲ, ಚುಖುಲಕ ಮೊದಲಾದ ಇತರ ಬಳಕೆಯ ಹೆಸರುಗಳೂ ಇದ್ದವು. ನರಸಿಂಹಗುಪ್ತರ ಪತ್ನಿ ವಿಮಲಕಲಾ. ಶಿವ-ಶಕ್ತಿ ಸ್ವರೂಪರಾದ ಈ ದಂಪತಿಗಳಿಗೆ ಜನಿಸಿದ ಪುತ್ರರೇ ಅಭಿನವಗುಪ್ತರು. ತನ್ನ ಪೂರ್ವಜರು ’ಶಂಭುಸೇವಾಸಂಪೂರಿತ’ರಾಗಿದ್ದರೆಂದೂ ಅಭಿನವಗುಪ್ತರು ವರ್ಣಿಸಿದ್ದಾರೆ. ಮೇಲೆ ಹೆಸರಿಸಿದ ಒಂಬತ್ತು ಜನ ಪ್ರಮುಖ ಗುರುಗಳಲ್ಲದೆ ಹದಿಮೂರು ಜನ ಅನ್ಯ ಗುರುಗಳಲ್ಲಿಯೂ ತಾವು ಅಧ್ಯಯನವನ್ನು ನಡೆಸಿದುದಾಗಿ ಅಭಿನವಗುಪ್ತರು ಬೇರೆಡೆ ಹೇಳಿದ್ದಾರೆ (ಉದ್ಧೃತ: ಮಮ್ಮಟನ ’ಕಾವ್ಯಪ್ರಕಾಶ’ದಲ್ಲಿ).
ತಂದೆ ನರಸಿಂಹಗುಪ್ತರಿಂದ ವ್ಯಾಕರಣಶಾಸ್ತ್ರ ಶಿಕ್ಷಣ ಪಡೆದ ಬಳಿಕ ಮೇಲೆ ಹೇಳಿದಂತೆ ಆ ಕಾಲದ ಶ್ರೇ? ಆಚಾರ್ಯರುಗಳಲ್ಲಿ ವೇದಾಂತ, ತಂತ್ರಶಾಸ್ತ್ರ, ನಾಟ್ಯಶಾಸ್ತ್ರ, ಅಲಂಕಾರಶಾಸ್ತ್ರ ಮೊದಲಾದ ವಿವಿಧ ಜ್ಞಾನಾಂಗಗಳನ್ನು ಅಭಿನವಗುಪ್ತರು ಗಾಢವಾಗಿ ಅಭ್ಯಾಸ ಮಾಡಿದರು; ವಿಪುಲವಾಗಿ ಗ್ರಂಥರಚನೆ ಮಾಡಿದರು. ಈಶ್ವರಪ್ರತ್ಯಭಿಜ್ಞಾ ಪ್ರಮೇಯವನ್ನು ಒಳಗೊಂಡ ಕಾಶ್ಮೀರ-ಶೈವ ದರ್ಶನ ಪ್ರಸ್ಥಾನಕ್ಕೆ ಸಂಬಂಧಿಸಿದಂತೆಯಂತೂ ಅತ್ಯಂತ ಪ್ರಭಾವೀ ಪ್ರತಿಪಾದಕರೆಂದು ಹೆಸರಾದರು.
ಇಷ್ಟೊಂದು ಗುರುಗಳ ಪದತಲದಲ್ಲಿ ಕಲಿತವನಿಗೆ ತಾನು ಬೋಧಿಸಬೇಕಾದ ವಿಷಯಕ್ಕೆ ಬಡತನವೆಲ್ಲಿದ್ದೀತು! – ಎಂದು ಅಭಿನವಗುಪ್ತರದೇ ಉದ್ಗಾರವಿದೆ: “ತಸ್ಯ ಮೇ ಸರ್ವಶಿಷ್ಯಸ್ಯ ನೋಪದೇಶದರಿದ್ರತಾ” (ಜಯರಥನಿಂದ ಉದ್ಧೃತ).
ಆರಂಭಕಾಲದಲ್ಲಿ ಸಾಹಿತ್ಯಸಾಗರದಲ್ಲಿ ವಿಹರಿಸುತ್ತಿದ್ದ ನಾನು ಕಾಲಕಳೆದಂತೆ ಆತ್ಮಸಾಕ್ಷಾತ್ಕಾರದ ತೀವ್ರಾಕಾಂಕ್ಷೆಗೆ ಒಳಗಾದೆ – ಎಂದಿದ್ದಾರೆ ಅಭಿನವಗುಪ್ತರು.
ಆದರೆ ಕಾವ್ಯಮಾರ್ಗ, ಶೈವಾನುಸಂಧಾನ – ಇವುಗಳ ನಡುವೆ ಎ? ಮಾತ್ರವೂ ವಿರೋಧವಿಲ್ಲ – ಎಂದು ನೆನಪಿಡಬೇಕು.
’ಆನಂದಯೋಗ’
ಅಭಿನವಗುಪ್ತರ ಚಿಂತನೆಯ ಪ್ರಗಾಢತೆಯಷ್ಟೇ ಅವರ ಬೋಧಕತ್ವಕೌಶಲವೂ ಪ್ರಶಂಸ್ಯವಾಗಿದೆ. ತಮ್ಮ ಸ್ವೋಪಜ್ಞಚಿಂತನೆಯ ಪ್ರಸಾರದ ಪರಿಕರಗಳನ್ನೂ ಅವರೇ ಒದಗಿಸಿ ಉಪಕರಿಸಿದ್ದಾರೆ. ನಿದರ್ಶನಕ್ಕೆ: ತಂತ್ರಾಲೋಕ ಗ್ರಂಥದ ದುರವಗಾಹತೆಯನ್ನು ಗಮನದಲ್ಲಿರಿಸಿಕೊಂಡು ಅವರೇ ತಂತ್ರಸಾರ, ತಂತ್ರೋಚ್ಚಯ, ತಂತ್ರವಟಧಾನಿಕಾ ಮೊದಲಾದ ಸಂಕ್ಷಿಪ್ತ ಕೈಪಿಡಿಗಳನ್ನೂ ನೀಡಿದ್ದಾರೆ.
ಬೌದ್ಧಿಕತೆಯ ಪರಾಕಾ? ಸ್ಥಿತಿಯಲ್ಲಿ ವಿಹರಿಸುವವರಾದರೂ ಅಭಿನವಗುಪ್ತರು ಭಗವದ್ಭಕ್ತಿಯ ಪ್ರಾಕಾರದಿಂದ ದೂರ ಸರಿಯುವುದಿಲ್ಲ. ಅವರು ರಚಿಸಿರುವ ಸ್ತೋತ್ರಗಳನ್ನು ಕುರಿತೇ ಪ್ರತ್ಯೇಕ ಅಧ್ಯಯನಗಳು ನಡೆದಿವೆ.
ತಮ್ಮ ಯೋಗ-ಜ್ಞಾನ-ಭಕ್ತಿ ಸಮನ್ವಿತತೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಅಭಿನವಗುಪ್ತರು ತಮ್ಮ ಯೋಗಪ್ರಸ್ಥಾನವನ್ನು ’ಆನಂದಯೋಗ’ ಎಂದು ಕರೆದಿರುವುದು. ಇದರ ವಿವರವಾದ ವ್ಯಾಖ್ಯೆಯನ್ನು ’ಮಾಲಿನೀವಿಜಯವಾರ್ತಿಕ’ ಮೊದಲಾದ ಕೃತಿಗಳಲ್ಲಿ ಕಾಣಬಹುದು.
ಶಬ್ದಶಾಸ್ತ್ರಕ್ಕೂ ಅಭಿನವಗುಪ್ತರ ಕೊಡುಗೆ ಇದೆ. ಅರ್ಥವು ಶಬ್ದದಿಂದ ಸ್ಫುರಿತವಾದುದು ಎಂಬ ಭರ್ತೃಹರಿಯ ಸಿದ್ಧಾಂತದಿಂದ ಕಿಂಚಿದ್ ಭಿನ್ನವಾಗಿ ಅಭಿನವಗುಪ್ತರು ಶುದ್ಧಶಬ್ದವನ್ನು ’ಪರಾವಾಕ್’ ಪ್ರಜ್ಞೆಯೊಂದಿಗೆ ಸಮೀಕರಿಸಿದ್ದಾರೆ.
ಹೀಗೆ ಅಭಿನವಗುಪ್ತರ ಚಿಂತನಭಿತ್ತಿಯು ಅತ್ಯಂತ ವಿಶಾಲವಾದುದು; ಮತ್ತು ಅವರ ಎಲ್ಲ ಸಿದ್ಧಾಂತಗಳ ನಡುವೆ ಅಂತಃಸಂಬದ್ಧತೆ ಇದೆ.
ಸ್ವೋಪಜ್ಞತೆ, ಸಮಗ್ರತೆ – ಎರಡೂ ಅಭಿನವಗುಪ್ತರಲ್ಲಿ ಸಮ್ಮಿಳಿತವಾಗಿವೆ.
ತಂತ್ರಶಾಸ್ತ್ರ ಕ್ಷೇತ್ರದಲ್ಲಿಯೂ ರಸಸಿದ್ಧಾಂತ ಅಥವಾ ಅಲಂಕಾರಶಾಸ್ತ್ರ ಕ್ಷೇತ್ರದಲ್ಲಿಯೂ ಹಿಂದಿನ ಶತಮಾನಗಳಲ್ಲಿ ಏನೇನು ಚಿಂತನೆ ನಡೆದಿತ್ತು ಎಂಬುದರ ಪರಿಚಯ ನಮಗೆ ದೊರೆತಿರುವುದು ಅಭಿನವಗುಪ್ತರಲ್ಲಿಯೆ. ಹೀಗೆ ಐತಿಹಾಸಿಕವಾಗಿಯೂ ಅಭಿನವಗುಪ್ತರ ಸಾಧನೆ ಮಹತ್ತ್ವದ್ದಾಗಿದೆ.
ತಮ್ಮ ಕಕ್ಷೆಗೆ ಬಂದ ಯಾವುದೇ ವಿಷಯವನ್ನು ತಲಸ್ಪರ್ಶಿಯಾಗಿ ಶೋಧಿಸುವುದು ಅಭಿನವಗುಪ್ತರ ಮಾರ್ಗ. ಉದಾಹರಣೆಗೆ: ತಂತ್ರಾಲೋಕ ಮೊದಲಾದ ಕೃತಿಗಳಲ್ಲಿ ಕಾಣುವ ಅಭಿನವಗುಪ್ತರ ಸಂಗೀತಶಾಸ್ತ್ರ ಪರಿಜ್ಞಾನವೂ ಆಶ್ಚರ್ಯಜನಕವಾಗಿದೆ. ಅವರ ಶಿಷ್ಯಪ್ರಮುಖರೊಬ್ಬರು ರಚಿಸಿದ ಚಿತ್ರದಲ್ಲಿ ಅಭಿನವಗುಪ್ತರು ವೀಣೆಯನ್ನು ನುಡಿಸುತ್ತಿರುವುದರ ಚಿತ್ರಣವಿದೆ.
ಕಲಾನುಭವಪ್ರಕ್ರಿಯೆಯಲ್ಲಿ ತಂತ್ರಶಾಸ್ತ್ರೀಯ ಮತ್ತು ಯೌಗಿಕ ಆಯಾಮಗಳನ್ನು ಪ್ರವೇಶಗೊಳಿಸಿರುವ ಅನನ್ಯ ದಾರ್ಶನಿಕರು ಅಭಿನವಗುಪ್ತರೇ.
(ಸಶೇಷ)
ಸಹಸ್ರಾಬ್ದ ಲೇಖನ 2ನ್ನು ಇಲ್ಲಿ ಓದಬಹುದು