ಅಭಿನವಗುಪ್ತರ ಸಹಸ್ರಮಾನೋತ್ಸವ ಸಂದರ್ಭದಲ್ಲಿ ಎಸ್.ಆರ್. ರಾಮಸ್ವಾಮಿ ಅವರ ಲೇಖನಿಯಿಂದ ಮೂಡಿಬಂದ ವಿದ್ವತ್ಪೂರ್ಣ ಲೇಖನಸರಣಿಯ ಎರಡನೆಯ ಕಂತು ಇಲ್ಲಿದೆ.
ಭಾರತದ ವಿವಿಧ ಭಾಷಾಸಾಹಿತ್ಯಗಳಿಗೆ ಲಾಕ್ಷಣಿಕ ಆಧಾರವಾಗಿರುವುದು ಸಂಸ್ಕೃತದಲ್ಲಿನ ಅಲಂಕಾರ ಶಾಸ್ತ್ರವೇ. ಸಾಮಾನ್ಯ ಸಂವಾದದಲ್ಲಿ ಅಲಂಕಾರಶಾಸ್ತ್ರವೆಂಬ ಶಬ್ದವು ಬಳಕೆಯಾದಾಗ ಅದರಲ್ಲಿ ವಿವಕ್ಷಿತವಾಗುವುದು ಸಂಸ್ಕೃತದ ಅಲಂಕಾರಶಾಸ್ತ್ರವೇ. ಈ ಸಂಸ್ಕೃತ ಅಲಂಕಾರಶಾಸ್ತ್ರದ ವಿಕಾಸವರ್ಷಕ್ಕೂ ಮುಖ್ಯ ಅವಲಂಬವಾಗಿರುವವು ಭರತನ ನಾಟ್ಯಶಾಸ್ತ್ರ, ಆನಂದವರ್ಧನನ ಧ್ವನ್ಯಾಲೋಕ, ಅಭಿನವಗುಪ್ತರ ’ಅಭಿನವಭಾರತೀ’ ಮತ್ತು ’ಧ್ವನ್ಯಾಲೋಕಲೋಚನ’. ಅಭಿನವಗುಪ್ತರ ಕೃತಿಗಳಲ್ಲಿ ಅಲ್ಲಿಗೆ ಹಿಂದಿನ ಎಂದರೆ ಕ್ರಿಸ್ತಶಕ ಮೊದಲ ಸಹಸ್ರಾಬ್ದದ ಅಂತ್ಯದವರೆಗಿನ ಭಾರತೀಯ ಸಾಹಿತ್ಯಶಾಸ್ತ್ರಚಿಂತನೆಯ ಒಂದು ಸೀಳುನೋಟವು ಲಭ್ಯವಾಗಿರುವುದಲ್ಲದೆ ಕಾವ್ಯಶಾಸ್ತ್ರದಲ್ಲಿ ಅಂತರ್ಗತವಾದ ಮುಖ್ಯ ಗ್ರಂಥಿಸ್ಥಾನಗಳನ್ನು ಗುರುತಿಸಲಾಗಿದೆ. ರಸ, ಧ್ವನಿ, ಔಚಿತ್ಯ, ವಕ್ರೋಕ್ತಿ – ಇವುಗಳ ಲಕ್ಷಣವನ್ನೂ ವ್ಯಾಪ್ತಿಯನ್ನೂ ಕುರಿತು ಇಂದಿಗೂ ಸಂಗತವಾಗಿಯೆ ಉಳಿದಿರುವ ಹಲವು ಮೂಲಸಿದ್ಧಾಂತಗಳ ಮಂಡನೆ ಅಲ್ಲಿ ಬಂದಿದೆ.
ಮೊದಲಿಗೆ ’ನಾಟ್ಯಶಾಸ್ತ್ರವಿವೃತಿ’ ಎಂದು ಅಭಿನವಗುಪ್ತರು ಹೆಸರಿಸಿದ್ದ ವ್ಯಾಖ್ಯಾನವು ಅನಂತರ ಅವರ ಹೆಸರನ್ನೂ ಒಳಗೊಂಡು ’ಅಭಿನವಭಾರತೀ’ ಎಂದು ಪ್ರಸಿದ್ಧಿ ಪಡೆದಂತೆ ತೋರುತ್ತದೆ.
ಕಾವ್ಯಮೀಮಾಂಸೆ ಆನಂದವರ್ಧನ ಬರೆದ ’ಧ್ವನ್ಯಾಲೋಕ’ ಕೃತಿಯ ಮೇಲೆ ಅಭಿನವಗುಪ್ತರು ರಚಿಸಿರುವ ’ಧ್ವನ್ಯಾಲೋಕಲೋಚನ’ ವ್ಯಾಖ್ಯಾನವು ಅಲಂಕಾರಶಾಸ್ತ್ರವಾಙ್ಮಯದಲ್ಲಿ ಮೂರ್ಧನ್ಯಸ್ಥಾನವನ್ನು ಪಡೆದಿದೆ. ಈ ಕೃತಿಯಲ್ಲಿ ರಸನಿ?ತ್ತಿಯನ್ನು ಕುರಿತೂ ಧ್ವನಿಯನ್ನು ಕುರಿತೂ ಅಭಿನವಗುಪ್ತರು ನೀಡಿರುವ ಪರಿ?ರಣಗಳು ಕಾವ್ಯಮೀಮಾಂಸಾಪರಂಪರೆಯಲ್ಲಿ ಒಂದು ನಿರ್ಣಾಯಕ ಸ್ಥಾನವನ್ನು ಪಡೆದಿವೆ. ಧ್ವನಿಸಿದ್ಧಾಂತವನ್ನು ವಿರೋಧಿಸಿದ್ದ ಹಲವರು ಹಿಂದಿನವರ ಮಂಡನೆಗಳನ್ನು ಅಭಿನವಗುಪ್ತರು ಎಷ್ಟು ಪರಿಣಾಮಕಾರಿಯಾಗಿ ನಿರಸನಗೊಳಿಸಿದರೆಂದರೆ ಅನಂತರದ ಕಾಲದಲ್ಲಿ ಧ್ವನಿಪ್ರಕ್ರಿಯೆಯನ್ನು ಅಲ್ಲಗಳೆಯುವ ಸಾಹಸ ಮಾಡಿದವರು ವಿರಳ. ’ಧ್ವನ್ಯಾಲೋಕಲೋಚನ’ ಕೃತಿಯಲ್ಲಿನ ಚಿಂತನಸೌ?ವ, ತರ್ಕಕೌಶಲ, ಸಿದ್ಧಾಂತದ ಸಮಾಸಾದನ – ಎಲ್ಲವೂ ಸಮುನ್ನತ ಮಟ್ಟದ್ದಾಗಿದೆ. ಇದರ ಜೊತೆಗೆ ಶೈಲಿಯ ಮನೋಹರತೆಯೂ ಸೇರಿ ’ಲೋಚನ’ ಕೃತಿಯನ್ನು ಅನನ್ಯವಾಗಿಸಿದೆ.
ಎಷ್ಟು ಮನೋಹರವಾದ ಜ್ಯೋತ್ಸ್ನೆ ಹರಡಿದ್ದರೂ ಅದನ್ನು ನೋಡಿ ಆಸ್ವಾದಿಸುವ ಕಣ್ಣೊಂದಿರಬೇಕಲ್ಲ! ಆ ದೃಷ್ಟಿಯನ್ನು ಸಹೃದಯರಿಗೆ ನೀಡುವುದಕ್ಕಾಗಿ ತಾನು ’ಧ್ವನ್ಯಾಲೋಕಲೋಚನ’ ಬರೆದುದಾಗಿ ಅಭಿನವಗುಪ್ತರೇ ಹೇಳಿದ್ದಾರೆ:
ಕಿಂ ಲೋಚನಂ ವಿನಾ ಲೋಕೋ ಭಾತಿ ಚಂದ್ರಿಕಯಾsಪಿ ಹಿ |
ತೇನಾಭಿನವಗುಪ್ತೇನ ಲೋಚನೋನ್ಮೀಲನಂ ವ್ಯಧಾತ್ ||
‘ಲೋಚನ’ ಗ್ರಂಥದ ಆರಂಭದಲ್ಲಿಯೆ ಅಭಿನವಗುಪ್ತರು ಮಾಡಿರುವ ಮಂಡನೆ ಪ್ರಸಿದ್ಧವಾಗಿದೆ:
ಅಪೂರ್ವಂ ಯದ್ ವಸ್ತು ಪ್ರಥಯತಿ ವಿನಾ ಕಾರಣಕಲಾಂ
ಜಗದ್ಗ್ರಾವಪ್ರಖ್ಯಂ ನಿಜರಸಭರಾತ್ ಸಾರಯತಿ ಚ |
ಕ್ರಮಾತ್ ಪ್ರಖ್ಯೋಪಾಖ್ಯಾ – ಪ್ರಸರ-ಸುಭಗಂ
ಭಾಸಯತಿ ತತ್ ಸರಸ್ವತ್ಯಾಸ್ತತ್ತ್ವಂ ಕವಿಸಹೃದಯಾಖ್ಯಂ ವಿಜಯತೇ ||
“ಕವಿ ಮತ್ತು ಆಸ್ವಾದಕ – ಹೀಗೆ ಎರಡು ಕೇಂದ್ರಗಳನ್ನು ಹೊಂದಿರುವ ಕಲಾದೇವತೆಗೆ ಜಯವಾಗಲಿ. ಶೂನ್ಯದಿಂದ ಭವ್ಯವಾದ ಹೊಸ ಜಗತ್ತುಗಳನ್ನೇ ಸೃಷ್ಟಿಸಿರುವ ಮತ್ತು ಬಂಡೆಗಲ್ಲನ್ನೂ ರಸಸ್ಯಂದಿಯಾಗಿಸಿ ಪ್ರತಿಭೆಯ ಮತ್ತು ವಾಕ್ಕಿನ ಪ್ರವಾಹದಿಂದ ಸುತ್ತಲೂ ಎಲ್ಲೆಡೆ ಸೌಂದರ್ಯವನ್ನು ಪ್ರಸರಿಸುತ್ತಿರುವ ಕಲಾಧಿದೇವತೆಗೆ ಜಯವಾಗಲಿ.”
ಲಾಕ್ಷಣಿಕವಾಗಿ ವ್ಯಾಖ್ಯಾನಗಳೆಂದು ಕರೆಯಲ್ಪಟ್ಟಿದ್ದರೂ ’ಅಭಿನವಭಾರತೀ’ ಮತ್ತು ’ಧ್ವನ್ಯಾಲೋಕಲೋಚನ’ ನಿಜಾರ್ಥದಲ್ಲಿ ಸ್ವತಂತ್ರ ಗ್ರಂಥಗಳೇ ಆಗಿವೆ.
’ಅಭಿವ್ಯಕ್ತಿವಾದ’
’ಅಲಂಕಾರಶಾಸ್ತ್ರ’ವೆಂದು ಕರೆಯಲ್ಪಟ್ಟಿರುವ ಸಾಹಿತ್ಯಶಾಸ್ತ್ರದ ಅಂತರ್ಗತವಾಗಿ ಕಳೆದ ಸಾವಿರ ವರ್ಷಗಳಲ್ಲಿ ಸಾರ್ವತ್ರಿಕವಾಗಿ ಸ್ವೀಕೃತವಾಗಿರುವ ಹಲವು ಮೂಲತತ್ತ್ವಗಳ ಉದ್ಗಮವು ಭರತನಿಂದಲೂ ಆನಂದವರ್ಧನನಿಂದಲೂ ಆಗಿರುವುದಾದರೂ ಅವನ್ನು ಪರಿಸ್ಫುಟವಾಗಿ ಲಕ್ಷಣೀಕರಿಸಿದವರು ಅಭಿನವಗುಪ್ತರು. ಅವರಿಗೆ ಹಿಂದೆ ಇದ್ದ ಅಸ್ಪಷ್ಟತೆಗಳನ್ನು ನೀಗಿಸಿ ಸಾಹಿತ್ಯಶಾಸ್ತ್ರದ ಮೂಲದ್ರವ್ಯಗಳನ್ನು ಶಿಲ್ಪಸದೃಶವಾಗಿ ಕಡೆದು ನಿಲ್ಲಿಸಿದವರು ಅಭಿನವಗುಪ್ತರು. ಅಲ್ಲಿಂದಾಚೆಗೆ ನಡೆದ ಜಿಜ್ಞಾಸೆಯು ಬಹುತೇಕ ಅಭಿನವಗುಪ್ತರು ನೀಡಿರುವ ಪರಿಷ್ಕಾರಣಗಳ ಇನ್ನಷ್ಟು ವಿಸ್ತರಣೆಯಷ್ಟೇ ಆಗಿದೆ ಎನ್ನಬಹುದು.
ಕಾವ್ಯತತ್ತ್ವಶೋಧನೆಗೆ ತೊಡಗಲು ಅಭಿನವಗುಪ್ತರಿಗೆ ಚೋದನೆ ದೊರೆತದ್ದು ಈಗ ಅನುಪಲಬ್ಧವಾಗಿರುವ ’ಕಾವ್ಯಕೌತುಕ’ ಗ್ರಂಥದ ರಚಯಿತನಾದ ಭಟ್ಟತೌತನಿಂದ. ಭರತಮುನಿಯ ನಾಟ್ಯಶಾಸ್ತ್ರದ ಮೇಲಣ ಹಿಂದಿನ ವ್ಯಾಖ್ಯಾತರ ಹಲವಾರು ನಿರ್ಣಯಗಳನ್ನು ನಿಕಷಕ್ಕೆ ಒಡ್ಡುವ ಕಾರ್ಯವೂ ಅಭಿನವಗುಪ್ತರಿಂದ ನಡೆಯಿತು. ಅಭಿನವಗುಪ್ತರು ಗಣಿತಶಾಸ್ತ್ರೋಪಮವೆನಿಸುವಷ್ಟು ಪರಿಷ್ಕಾರದಿಂದ ತಮ್ಮ ಕಾವ್ಯಶಾಸ್ತ್ರತತ್ತ್ವಗಳನ್ನು ಪ್ರದರ್ಶಿಸಿದ್ದಾರೆ. ಆ ಮೂಲತತ್ತ್ವಗಳು ಸಾವಿರ ವರ್ಷಗಳ ತರುವಾಯವೂ ಸಂಶಯಾತೀತವಾಗಿ ಉಳಿದಿವೆ. ಈ ಮಂಡನೆಯು ’ಅಭಿವ್ಯಕ್ತಿವಾದ’ ಎಂದೂ ಪ್ರಚಲಿತವಿದೆ.
ಇದರ ಹೃದ್ಭಾಗವೆಂದರೆ ರಸತತ್ತ್ವದ ಪ್ರಾಥಮಿಕತೆ; ಮತ್ತು ಗುಣ, ಔಚಿತ್ಯ, ಅಲಂಕರಣ ಮೊದಲಾದವಕ್ಕೆ ಪೋಷಕ ಅಥವಾ ಸಹಾಯಕ ಸ್ಥಾನವ? ಸಲ್ಲುತ್ತದೆ – ಎಂಬುದು. ರಸತತ್ತ್ವಕ್ಕೆ ಪ್ರಾಧಾನ್ಯ ನೀಡದ ಕೇವಲ ಅಲಂಕರಣಾದಿಗಳು ಜಡವಸ್ತುವಿಗೆ ಒಡವೆ ಹಾಕಿದಂತಷ್ಟೇ ಆಗುತ್ತದೆ. ರಸತತ್ತ್ವದಿಂದ ದೂರ ಸರಿದ ’ಔಚಿತ್ಯ’ವೂ ಬೇರುಗಳನ್ನೇ ಮರೆತು ಕೊಂಬೆಗಳನ್ನು ಅತಿಶಯಿಸಿದಂತೆ. ಇದಕ್ಕೂ ಮಿಗಿಲಾದ ಅಭಿನವಗುಪ್ತರ ಹೊಸ ಕಾಣ್ಕೆಯೆಂದರೆ (ಅವರು ಮೂಲತಃ ದಾರ್ಶನಿಕರೇ ಆಗಿರುವುದರಿಂದ) ತಾನು ’ತಂತ್ರಾಲೋಕ’ ಮೊದಲಾದೆಡೆ ಸಿದ್ಧಪಡಿಸಿರುವ ಆಗಮಶಾಸ್ತ್ರದ ಅಧಿಷ್ಠಾನವನ್ನು ಕಾವ್ಯಮೀಮಾಂಸೆಗೆ ಅನ್ವಯಿಸಿ ಸಮನ್ವಯಗೊಳಿಸಿರುವುದು. ಈ ಮೂಲಕ ಅಭಿನವಗುಪ್ತರು ರಸತತ್ತ್ವಕ್ಕೆ ಒಂದು ಹೊಸ ಆಯಾಮವನ್ನೇ ನೀಡಿದ್ದಾರೆ. ಈ ಮೀಮಾಂಸೆಯು ಸೂಕ್ಷ್ಮತೆಗಳಿಂದ ಕೂಡಿದೆ. ನಿದರ್ಶನಾರ್ಥ ಒಂದೆರಡು ವಿವರಗಳನ್ನು ಪ್ರಸ್ತಾವಿಸಬಹುದು.
ಸಾಧಾರಣೀಕರಣ
’ವಿಭಾವಾನುಭಾವವ್ಯಭಿಚಾರಿ-ಸಂಯೋಗಾದ್ ರಸನಿ?ತ್ತಿಃ’ ಎಂಬ ಪ್ರಸಿದ್ಧವೂ ಬಹುಚರ್ಚಿತವೂ ಆದ ಭರತೋಕ್ತಿಯನ್ನು ಅಭಿನವಗುಪ್ತರು ತಮ್ಮ ರಸಸಿದ್ಧಾಂತಕ್ಕೆ ಅನುಗುಣವಾಗಿ ಸ್ವೀಕರಿಸಿದ್ದಾರೆ. ’ವ್ಯಂಜನೆ’ಯ ಶಕ್ತಿಗಿಂತ ಅತೀತವಾದುದು ರಸಪ್ರಕ್ರಿಯೆ – ಎಂಬುದು ಅಭಿನವಗುಪ್ತರ ಸವರಣೆ. ಆ ರಸಪ್ರಕ್ರಿಯೆಯ ಮುಖ್ಯ ಕೇಂದ್ರವಾದರೋ ’ಸಾಧಾರಣೀಕರಣ’. ಅಂಶೀಕರಣದ ಮೂಲಕ ರಸವು ಉನ್ಮೇಷಗೊಳ್ಳಲಾರದು. ಆಲಂಕಾರಿಕ ಭಟ್ಟನಾಯಕನೂ ’ಭಾವಕತ್ವ’ ಎಂಬ ಕಲ್ಪನೆಯ ಮೂಲಕ ಕಾವ್ಯವ್ಯಾಪಾರವನ್ನು ಲಕ್ಷಣೀಕರಿಸಿದ್ದುದುಂಟು. ಆದರೆ ಅದರಲ್ಲಿ ಒಂದು ಪರಿಮಿತಿ ಇದ್ದಿತು. ಕಾವ್ಯದಲ್ಲಿ ನಿವಿಷ್ಠವಿರುವ ವಿಭಾವಾದಿಗಳು ತಮ್ಮ ಸ್ವರೂಪವನ್ನು ಲಂಘಿಸಿ ಸಾಧಾರಣ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ ಎಂಬ ಜಾಡಿನದು ಭಟ್ಟನಾಯಕನ ಮಂಡನೆಯಾಗಿತ್ತು. ಆದರೆ ಅಭಿನವಗುಪ್ತರು ಅದರಿಂದ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಸಪ್ರಕ್ರಿಯೆ ಎಂಬುದು ಒಂದು ಪ್ರತ್ಯೇಕ ತತ್ತ್ವವಾಗಿದ್ದು ಅದರಲ್ಲಿ ’ವಾಸನಾ’ ಎಂಬ ಅಂಶವೂ ಅಂತರ್ಗತವಿರುತ್ತದೆಂದು ಪ್ರತಿಪಾದಿಸಿದ್ದಾರೆ; ಹೀಗೆ ರಸಪ್ರಕ್ರಿಯೆಯನ್ನು ಸಾಹಿತ್ಯಪರಿಕರಗಳ ಕಕ್ಷೆಯಿಂದ ಮನೋವೈಜ್ಞಾನಿಕ ಸ್ತರಕ್ಕೆ ಉನ್ನತೀಕರಿಸಿದ್ದಾರೆ; ಕಾವ್ಯದ ಆವಿಷ್ಕಾರಣವು ನಡೆಯುವುದು ಆಲೋಚನೆಯ ಸ್ತರದಲ್ಲಿ ಎಂದು ಸ್ಫುಟೀಕರಿಸಿದ್ದಾರೆ. ಎಂದರೆ ರಸತತ್ತ್ವವು ಹೊಮ್ಮುವುದು ಕಾವ್ಯಪರಿಕರಗಳ ಮೂಲಕವಲ್ಲ, ಪ್ರತಿಯಾಗಿ ’ಸಹೃದಯ’ನ ತೊಡಗುವಿಕೆಯಲ್ಲಿ. ಯಾರು ಕಾವ್ಯವರ್ಣಿತ ವಿ?ಯದಲ್ಲಿ ಪೂರ್ಣ ತನ್ಮಯನಾಗಬಲ್ಲನೋ ಅವನೇ ’ಸಹೃದಯ’. ಅನ್ಯಥಾ ’ರಸ’ಗಳೆಂದು ಸಾಮಾನ್ಯವಾಗಿ ಕರೆಯಿಸಿಕೊಳ್ಳುವ ಶೃಂಗಾರ ರೌದ್ರ ಬೀಭತ್ಸಾದಿಗಳು ಮನಸ್ಸಿನಲ್ಲಿ ಈಗಾಗಲೇ ಸ್ಥಾಯಿಯಾಗಿ ನೆಲಸಿರುವ ’ವಾಸನಾ’ ಪ್ರಕಾರಗಳಷ್ಟೇ. ವಿಶಿಷ್ಟ ಸಂದರ್ಭಗಳಲ್ಲಿ ’ವಾಸನೆ’ಗಳು ಜಾಗೃತಗೊಂಡು ಸಚೇತನವಾಗುತ್ತವೆ. ಅಂತರಂಗದಲ್ಲಿ ವಾಸನಾರೂಪದಲ್ಲಿರುವ ಭಾವಗಳಿಗೆ ಪ್ರಕಟ ಅಸ್ತಿತ್ವವನ್ನು ಕಲ್ಪಿಸಬಲ್ಲದ್ದು ರಸಪ್ರಕ್ರಿಯೆಯಾದುದರಿಂದ ಈ ಇಡೀ ವ್ಯಾಪಾರದಲ್ಲಿ ಸಾರ್ವಭೌಮಸ್ಥಾನ ಸಲ್ಲುವುದು ರಸತತ್ತ್ವಕ್ಕೆ.
ಅಭಿನವಗುಪ್ತರು ನೀಡಿರುವ ಮತ್ತೊಂದು ಸ್ಫುಟೀಕರಣವೆಂದರೆ ಕಾವ್ಯಾಭ್ಯಾಸದ ಪರಮಲಕ್ಷ್ಯವು ಸಿದ್ಧಿಸುವುದು ಆತ್ಮಸ್ವರೂಪಸಾಕ್ಷಾತ್ಕರಣದಿಂದ ಎಂಬುದು. ಕೆಳಗಿನ ಸ್ತರದ ಆಕಾಂಕ್ಷೆಗಳ ಪೂರೈಕೆಯಿಂದ ಲಭಿಸುವ ಸಮಾಧಾನವು ಪರಿಮಿತವಾದುದು, ಕ್ವಚಿತ್ಕಾಲದ್ದು. ಪೂರ್ಣ ಆನಂದದ ಅನುಭವವಾಗುವುದು ಆತ್ಮಸ್ವರೂಪಸಾಕ್ಷಾತ್ಕಾರದಿಂದ ಮಾತ್ರ. ರಸಪ್ರತೀತಿಯಾಗುವುದು ’ಅಭಿಧಾ’ ವೃತ್ತಿಯಿಂದ ಆಚೆಯ ’ವ್ಯಂಜನಾ’ ಶಕ್ತಿಯು ಪ್ರಬಲಿಸುವುದರಿಂದ. ಹೀಗೆ ಕಾವ್ಯಪ್ರಕ್ರಿಯೆಯು ಪರ್ಯವಸಿತವಾಗಬೇಕಾದುದು ’ಶೈವಾದ್ವೈತ’ದಲ್ಲಿ. ಕಾವ್ಯತತ್ತ್ವವನ್ನೂ ಶೈವಾಗಮವನ್ನೂ ಹೀಗೆ ಸಮನ್ವಿತಗೊಳಿಸಲಾಗಿದೆ.
ಅನುಭವಸೋಪಾನ
ಅಲಂಕಾರಶಾಸ್ತ್ರ ವಾಙ್ಮಯದಲ್ಲಿ ಅತ್ಯಂತ ಪ್ರಸಿದ್ಧ ಉಕ್ತಿಗಳಲ್ಲೊಂದಾದ ಅಭಿನವಗುಪ್ತರ ಈ ತತ್ತ್ವನಿರೂಪಣೆ ನಾಟ್ಯಶಾಸ್ತ್ರದಿಂದಾಚೆಗೂ ಸಲ್ಲುತ್ತದೆ:
ಊರ್ಧ್ವೋರ್ಧ್ವಮಾರುಹ್ಯ ಯದರ್ಥತತ್ತ್ವಂ
ಧೀಃ ಪಶ್ಯತಿ ಶ್ರಾಂತಿಮವೇದಯನ್ತೀ |
ಫಲಂ ತದಾದ್ಯೈಃ ಪರಿಕಲ್ಪಿತಾನಾಂ
ವಿವೇಕಸೋಪಾನಪರಂಪರಾಣಾಮ್ ||
(’ಅಭಿನವಭಾರತೀ’)
ಮೇಲುಮೇಲಕ್ಕೇರಿ ಅರ್ಥತತ್ತ್ವವನಿದೋ
ಬಳಲಿಕೆಯನರಿಯದೆಯೆ ಬುದ್ಧಿ ಕಾಣುತಿದೆ |
ಫಲಸಿದ್ಧಿಯಿದು ಮೊದಲ ಸೂರಿಗಳು ನಿರ್ಮಿಸಿದ
ಸುವಿಚಾರ-ಸೋಪಾನ-ಸರಣಿಗಳಿಗೆ |
(ಅನುವಾದ: ತೀ. ನಂ. ಶ್ರೀ.)
“ಪೂರ್ವಾಚಾರ್ಯರು ಲಭ್ಯವಾಗಿಸಿರುವ ನಿಚ್ಚಣಿಗೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತುತ್ತಹೋದಂತೆ ಸ್ವಲ್ಪವೂ ಆಯಾಸವೆನಿಸದೆ ಲಕ್ಷ್ಯವಾದ ಉದಾತ್ತ ತತ್ತ್ವವು ಸಾಧಕನ ಬುದ್ಧಿಗೆ ಹೆಚ್ಚುಹೆಚ್ಚು ಸ್ಫುಟವಾಗಿ ಗೋಚರಿಸುತ್ತಹೋಗುತ್ತದೆ.”
ನಮ್ಮ ಪರಂಪರೆಯಲ್ಲಿ ಆಲಂಕಾರಿಕರೂ ಇದ್ದಾರೆ, ದಾರ್ಶನಿಕರೂ ಇದ್ದಾರೆ. ಆದರೆ ಅಲಂಕಾರಶಾಸ್ತ್ರ ಅಥವಾ ಕಾವ್ಯಶಾಸ್ತ್ರಕ್ಕೂ ಶೈವದರ್ಶನಕ್ಕೂ ನಡುವಣ ಜೈವಿಕ ಆಂತರಿಕ ಸಂಬಂಧವನ್ನು ಸೋಪಪತ್ತಿಕವಾಗಿ ಪ್ರತಿಪಾದಿಸಿರುವವರು ಅಭಿನವಗುಪ್ತರು ಮಾತ್ರ. ಹೀಗೆ ಪ್ರತ್ಯಭಿಜ್ಞಾದರ್ಶನದಲ್ಲಿ ಸಮಗ್ರತೆ ಇದೆ.
ರಸಾನುಭವವು ಏರ್ಪಡುವುದು ಶಬ್ದವಸ್ತುವಿನ್ಯಾಸಕ್ಕಿಂತ ಮಿಗಿಲಾಗಿ ದರ್ಶನದ ತಾದಾತ್ಯ್ಮದಲ್ಲಿ – ಎಂಬ ಪರಿಷ್ಕರಣವನ್ನು ಸ್ಥಾಪಿಸಿರುವುದು ಅಭಿನವಗುಪ್ತರ ಒಂದು ವಿಶಿ? ಸಾಧನೆ. ’ಸಹೃದಯ’ ಎಂಬ ಕಲ್ಪನೆಯನ್ನು ಪಾರಿಭಾಷಿಕವಾಗಿ ವಿನ್ಯಾಸಗೊಳಿಸಿದವರು ಅಭಿನವಗುಪ್ತರು. ಯಾರ ಅಂತರಂಗವು ನಿರ್ಮಲವಾಗಿರುವುದೋ, ಯಾರು ದೃ? ವಸ್ತುವಿನೊಡನೆ ತನ್ಮಯಗೊಳ್ಳುವ ಸ್ವಭಾವವನ್ನು ಬೆಳೆಸಿಕೊಂಡಿದ್ದಾನೋ ಅವನೇ ನಿಜಾರ್ಥದಲ್ಲಿ ರಸಾನುಭವಕ್ಕೆ ಅಧಿಕಾರಿಯಾಗುತ್ತಾನೆ. ಪರಿಮಿತ ಪ್ರಾಕಾರದಿಂದ ಅಧಿಕ ಉದಾತ್ತವಾದ ಸ್ಥಿತಿಗೆ ಏರುವುದಕ್ಕೇ ರಸಾನುಭವ ಎಂದು ಕರೆಯಲಾಗಿರುವುದು. ಇದು ಮನುಷ್ಯಚೇತನಕ್ಕೆ ಶಕ್ಯವಿರುವ ಆತ್ಯಂತಿಕ ಉನ್ನತಿಯೆಂದೂ ಅಭಿನವಗುಪ್ತರ ಅಭಿಮತವಿದೆ.
ವಿಶಿಷ್ಟ ಶಬ್ದಸಂಘಾತದಿಂದ ವ್ಯಂಗ್ಯಾದಿ ವಿಸ್ತೃತಾರ್ಥದ್ಯೋತನ ಸಿದ್ಧಿಸುವುದು ಮೊದಲಾದ ಧ್ವನಿಸಿದ್ಧಾಂತವೇನೋ ಆನಂದವರ್ಧನಾದಿಗಳಿಂದಲೇ ಮಂಡಿತವಾಗಿತ್ತು. ಮೊದಮೊದಲು ಅದು ಒಂದಷ್ಟು ಟೀಕೆಗೂ ಗುರಿಯಾಗಿತ್ತು. ಧ್ವನಿಸಿದ್ಧಾಂತವನ್ನು ದೃಢವಾಗಿ ಸ್ಥಾಪಿಸಿದ ಶ್ರೇಯಸ್ಸು ಅಭಿನವಗುಪ್ತರದು. ಅವರೇ ಈ ಸಿದ್ಧಾಂತಕ್ಕೆ ಅವಶ್ಯವಿದ್ದ ಉಪಪತ್ತಿಗಳನ್ನು ಸಂಯೋಜಿಸಿದವರು. ವಾಚ್ಯ ಮತ್ತು ವ್ಯಂಗ್ಯಗಳ ನಡುವಣ ಗಡಿಯನ್ನು ಅಸಂದಿಗ್ಧವಾಗಿ ಗುರುತಿಸಿದವರು ಅವರು. ಕಾವ್ಯದಲ್ಲಿ ಅರ್ಥದ ಸ್ಫೋಟದ ರೀತಿಯನ್ನು ಪ್ರತಿಷ್ಠಾಪಿಸಿದ ಅಭಿನವಗುಪ್ತರ ರಸವಿಸ್ಕರಣಸಿದ್ಧಾಂತವನ್ನು ಅನಂತರ ಮಮ್ಮಟ, ವಿಶ್ವನಾಥ, ಜಗನ್ನಾಥ ಮೊದಲಾದವರು ಇನ್ನಷ್ಟು ವಿಕಾಸಗೊಳಿಸಿದರು. ಮಹಿಮಭಟ್ಟ, ಮಮ್ಮಟರಿಂದ (ಕ್ರಿ.ಶ. ೧೧ನೇ ಶತಮಾನ) ಜಗನ್ನಾಥ ಪಂಡಿತರಾಜನ (ಕ್ರಿ.ಶ. ೧೭ನೇ ಶತಮಾನ) ವರೆಗಿನ ಪ್ರಮುಖ ಆಲಂಕಾರಿಕರೆಲ್ಲರೂ ರಸತತ್ತ್ವಪರಾಮರ್ಶನೆಯಲ್ಲಿ ’ಅಭಿನವಭಾರತೀ’ ಕೃತಿಯಲ್ಲಿ ಲಬ್ಧವಿರುವ ಪಥದರ್ಶನವನ್ನು ಬಳಸಿಕೊಂಡಿದ್ದಾರೆ.
ರಸಾನುಭವದಿಂದ ಆಧ್ಯಾತ್ಮಿಕತೆಯೆಡೆಗೆ
ಅತಿಶಯವೆಂದರೆ ಕಾವ್ಯರಸಾನುಭವವು ಆಧ್ಯಾತ್ಮಿಕಾನುಭವದ ಒಂದು ಆಯಾಮ ಎಂದು ಅಭಿನವಗುಪ್ತರು ನಿರೂಪಿಸಿರುವುದು. ಹೀಗೆ ವಸ್ತುವಿಷಯದ ಸ್ತರದಿಂದ ವಿಷಯಾತೀತ ಸ್ಥಿತಿಯವರೆಗೆ ವ್ಯಾಪಿಸಿರುವುದು ಅಭಿನವಗುಪ್ತರು ನಿರೂಪಿಸಿರುವ ಅನುಭವಸೋಪಾನ.
ದರ್ಶನ, ಕಾವ್ಯಶಾಸ್ತ್ರ, ತಂತ್ರಶಾಸ್ತ್ರ – ಈ ಮೂರು ಅನುಭವಧಾರೆಗಳ ಸಮುಚ್ಚಯವನ್ನು ಪ್ರಾಯಃ ಮೊದಲಿಗೆ ಪ್ರತಿಪಾದಿಸಿದವರು ಅಭಿನವಗುಪ್ತರೇ. ಈ ವಿಶೇ?ತೆಗೆ ’ಅಭಿನವ’ ಎಂಬ ಅಭಿಧಾನವನ್ನು ನೀಡಿರುವವರೂ ಅವರೇ. ಇದನ್ನೇ ಶಬ್ದಾಂತರಗಳಲ್ಲಿ ಹೇಳಬೇಕೆಂದರೆ: ರಸತತ್ತ್ವದ ’ಪ್ರತೀತಿ’ ಆಗುವುದು ಕಾವ್ಯದ (ಎಂದರೆ ಕಲೆಯ) ’ಅನುಕಾರ್ಯ’ದಲ್ಲಿ; ’ಅನುಕರ್ತ’ರು ನಟರೇ ಮೊದಲಾದ ಮಧ್ಯವರ್ತಿಗಳು; ’ಅನುಭವಕರ್ತ’ನು ಸಹೃದಯ. ಯಾರ ಮನಃಸ್ಪಂದನವು ಕಾವ್ಯಾನುಶೀಲನ ಅಥವಾ ಕಲಾನುಶೀಲನದಿಂದ ಆತ್ಯಂತಿಕ ಸ್ವಚ್ಛತೆ ಪಡೆಯಬಲ್ಲದೋ ಅವನು ’ಸಹೃದಯ’. ಈ ಪಕ್ರಿಯೆಯ ಪರಿಪಕ್ವಸ್ಥಿತಿಯೇ ’ತನ್ಮಯೀಭವನ’. ಜನರ ಉತ್ತಮ ಪ್ರತಿನಿಧಿಗಳಾದುದರಿಂದ ಸಹೃದಯರು ’ಸಾಮಾಜಿಕ’ರೆಂದೂ ವ್ಯವಹೃತರಾಗಿರುವುದುಂಟು. ಈ ಸಮಸ್ತ ಕಲಾಪವೂ ಸಾಮಾನ್ಯಾರ್ಥದ ಕಕ್ಷೆಯಿಂದ ಅತೀತವಾಗಿ ಆಂತರಂಗಿಕ ಎಂದರೆ ಮಾನಸಿಕ ಸ್ತರದಲ್ಲಿ ನಿವಿಷ್ಠವಾಗಿರುತ್ತದೆ – ಎಂಬುದು ಅಭಿನವಗುಪ್ತರ ಮಂಡನೆ. ಯಾವ ಪ್ರಕಾರದ್ದಾದರೂ ಆಗಬಹುದಾದ ರಸಸಿದ್ಧಿಯನ್ನು ’ಆನಂದಾನುಭವ’ವೆಂದೇ ಕಡೆದು ನಿಲ್ಲಿಸಿರುವವರು ಅಭಿನವಗುಪ್ತರು. ಹೀಗೆ ಅಭಿನವಗುಪ್ತಪ್ರತಿಪಾದಿತ ಕಾವ್ಯಮೀಮಾಂಸೆಯು ಅವರ ಪ್ರತ್ಯಭಿಜ್ಞಾದರ್ಶನದ ಅಂಗವಾಗಿಯೇ ವಿವೃತವಾಗಿದೆ; ಹೀಗೆ ರಸತತ್ತ್ವಕ್ಕೆ ಅವರು ಅಲೌಕಿಕತೆಯನ್ನು ಎಂದರೆ ಲೋಕೋತ್ತರತೆಯನ್ನು ಪ್ರದಾನ ಮಾಡಿದ್ದಾರೆ.
ಈ ಸಿದ್ಧಿಯು ಯಾವಾವ ಹಂತಗಳ ಮೂಲಕ ಸಾಗಿ ಪರಿಣತಸ್ಥಿತಿ ಪಡೆಯುತ್ತದೆ ಎಂಬುದನ್ನೂ ಅಭಿನವಗುಪ್ತರು ವಿವರವಾಗಿ ಲಕ್ಷಣೀಕರಿಸಿದ್ದಾರೆ – ಸಂಭವಗ್ರಹಣ, ದೇಶಕಾಲವಿಶೇ?, ಸ್ವೀಯ ಸುಖದುಃಖಾದಿಗಳೊಡನೆ ಸಾಂಗತ್ಯ, ರಸಸಿದ್ಧಿಯಲ್ಲಿನ ನ್ಯೂನತೆಯ ಅನುಭವ, ಅದರ ತರುವಾಯ ಯಥಾರ್ಥ ರಸದ ಸ್ಫೋಟ, ಗೌಣಸ್ಥಿತಿಯಿಂದ ಪ್ರಧಾನಸ್ಥಿತಿಗೆ ಕ್ರಮಣ. ರಸತತ್ತ್ವದ ಪ್ರಾಥಮಿಕ ಅವಯವಗಳ ಅಪರ್ಯಾಪ್ತತೆಯ ಗ್ರಹಿಕೆ ’ಸಂಶಯಯೋಗ’ ಎಂಬುದು.
ಮೇಲಣ ಮಾರ್ಗದಿಂದ ರಸತತ್ತ್ವವನ್ನು ನಿ?ದನೆ ಮಾಡಿರುವುದರಿಂದ ಅಭಿನವಗುಪ್ತರು ’ಧ್ವನಿ ಸಂಪ್ರದಾಯ’ದ ಪ್ರತಿಷ್ಠಾಪಕರೆನಿಸಿದ್ದಾರೆ.
ಹೀಗೆ ಭರತಕೃತ ನಾಟ್ಯಶಾಸ್ತ್ರದ ಸಾರದ್ರವ್ಯದ ಸ್ಫುಟೀಕರಣ, ಧ್ವನಿ ಸಂಪ್ರದಾಯದ ಪ್ರತಿ?ಪನೆ, ಶೈವದರ್ಶನದ ವಿಶೇಷ ಆಯಾಮವೊಂದರ ಲಾಕ್ಷಣಿಕತೆ – ಹೀಗೆ ಮೂರು ಭಿನ್ನಗಳಾದ ಆದರೆ ಪರಸ್ಪರ ಸಂಬದ್ಧಗಳಾದ ಶಾಸ್ತ್ರಪ್ರಕ್ರಿಯೆಗಳಿಗೆ ಅಭಿನವಗುಪ್ತರು ಆಚಾರ್ಯರೆನಿಸಿದ್ದಾರೆ. ’ಅಭಿನವಗುಪ್ತೋsಯಂ ಲೋಚನೋನ್ಮೀಲನಂ ವ್ಯಧಾತ್’ – ’ಮಬ್ಬುಬೆಳಕಿನ ನಡುವೆ ಅಭಿನವಗುಪ್ತರು ಕಣ್ಣನ್ನು ತೆರೆಸಿದರು’ ಎಂಬ ಘೋಷಣೆಯಲ್ಲಿ ಉತ್ಪ್ರೇಕ್ಷೆಯಿಲ್ಲ.
ಮುಕ್ತಿಪ್ರಾಪ್ತಿಯು ನಿರ್ಮಲತೆಯಿಂದ ’ಸಹೃದಯ’ ಎಂಬ ಮಾತಿನಲ್ಲಿನ ’ಹೃದಯ’ ಎಂಬುದು ನಿರ್ಮಲತೆಯ ವಾಚಕವೇ – ಎಂಬುದು ಇಲ್ಲಿ ಅಂತರ್ಗತವಾಗಿರುವ ಸೂಕ್ಷ್ಮತೆ. ’ಹೃದಯ’ ಎಂಬುದು ತಂತ್ರಶಾಸ್ತ್ರದಲ್ಲಿ ಶಕ್ತಿ, ವಿಮರ್ಶ, ಸ್ಪಂದ, ಸ್ಫುರತಾ ಮೊದಲಾದ ಆಯಾಮಗಳನ್ನು ಒಳಗೊಂಡಿದೆ.
ಪರಾಪರಾತ್ಪರಂ ತತ್ತ್ವಂ ಸೈಷಾ ವಿನಿಗದ್ಯತೇ |
ತತ್ಸಾರಂ ತಚ್ಚ ಹೃದಯಂ ಸ ವಿಸರ್ಗಃ ಪರಃ ಪ್ರಭುಃ ||
(ತಂತ್ರಾಲೋಕ)
ಕಾವ್ಯ, ಪರಮಶಿವ – ಎರಡರ ಸಂಬಂಧಗಳಲ್ಲಿಯೂ ತನ್ಮಯೀಭವನದ ಆಧಾರವಾಗುವುದು ನಿರ್ಮಲತೆಯೇ. ಎಂದರೆ ಯಾರಲ್ಲಿ ತನ್ಮಯೀಭವನದ ಯೋಗ್ಯತೆ ಇದೆಯೋ ಅವನೇ ಸಹೃದಯನೆನಿಸುತ್ತಾನೆ. ಆ ಯೋಗ್ಯತೆ ಇಲ್ಲದವನು ಅಹೃದಯ. ಹೃದಯದಲ್ಲಿ ಸ್ಥಿತಗೊಂಡಿರುವುದು ಪರಮಾತ್ಮನ ಪ್ರತೀಕವೇ. ಇದೇ ಅನುಭವದ ಚಕ್ರೀಯತೆ.
ರಸಾನುಭವದ ಅತ್ಯಂತ ಪರಿಣತ ಸ್ಥಿತಿಯೇ ಮುಕ್ತಿ – ಎಂಬುದು ಅಭಿನವಗುಪ್ತರ ಪ್ರತಿಪಾದನೆ. ಆಧ್ಯಾತ್ಮಿಕ ನೆಲೆಯಲ್ಲಿ ಮುಕ್ತಿ ಎಂದರೆ ಅಜ್ಞಾನಾವರಣವನ್ನು ಕಳಚಿಕೊಳ್ಳುವುದು. ವಿಘ್ನಗಳು (ಎಂದರೆ ವಿಕಲ್ಪಗಳು) ಪರಿಹೃತವಾದ ಸ್ಥಿತಿಯೆಂದರೆ ಆನಂದಾನುಭೂತಿಯೇ – ಎಂಬುದು ಪ್ರತ್ಯಭಿಜ್ಞಾದರ್ಶನಾನುಗುಣ ರಸಸಿದ್ಧಾಂತ.
ರಸಾನುಭೂತಿಯು ದೇಶಕಾಲಾದಿ ಸನ್ನಿವೇಶಗಳಿಂದ ವ್ಯತಿರಿಕ್ತವಾದುದು. ರಸಪ್ರತೀತಿಯು ಸಿದ್ಧಿಸಿತೆಂದರೆ ಶಿವ-ಶಕ್ತಿ ಸಾಮರಸ್ಯದ ಸಾಕ್ಷಾತ್ಕರಣವಾದಂತೆಯೇ:
ಸರ್ವಪ್ರಮಾತೃತಾದಾತ್ಮ್ಯಂ ಪೂರ್ಣರೂಪಾನುಭಾವಕಮ್ ||
(ತಂತ್ರಾಲೋಕ)
ಈ ಸಮನ್ವಯಪ್ರತಿಪಾದನೆಯು ಶು? ಲಾಕ್ಷಣಿಕರಿಗೆ ದುರ್ಗ್ರಾಹ್ಯವೆನಿಸಬಹುದಾದರೂ ಅನುಭವತತ್ಪರರಾದವರ ಪಾಲಿಗೆ ಸರಳವೇ ಆಗಿದೆ. ವೇದಾಂತದ ನೆಲೆಯಲ್ಲಿ ಯಾವುದು ಬ್ರಹ್ಮವಿವರ್ತವೆನಿಸಿದೆಯೋ ಅದೇ ಕಾವ್ಯಶಾಸ್ತ್ರದ ಪ್ರಕಾರದಲ್ಲಿ ವ್ಯಂಜನಾವ್ಯಾಪಾರ ಅಥವಾ ಧ್ವನಿಯ ಆವಿ?ರಣವೆನಿಸುತ್ತದೆ. ತಾತ್ತ್ವಿಕವಾಗಿ ನೋಡುವಾಗ ಲೋಕದ ಎಲ್ಲ ಅನುಭವಗಳೂ ಪರಬ್ರಹ್ಮದ ವಿವರ್ತಗಳೇ ತಾನೆ! ಈ ಆಧಾರತತ್ತ್ವಕ್ಕೆ ಶಾಸ್ತ್ರೀಯ ಅಧಿ?ನವನ್ನು ನಿರ್ಮಿಸಿದುದು ಅಭಿನವಗುಪ್ತರ ವಿಶಿ?ತೆ. ಆದರೆ ಈ ಸಮನ್ವಯಪ್ರಜ್ಞೆಯು ಅಲಂಕಾರಶಾಸ್ತ್ರದ ಮುಖ್ಯಧಾರೆಯ ಮಂಡನೆಗಳಲ್ಲಿ ಪ್ರತಿಬಿಂಬಿತವಾಗಿರುವುದು ವಿರಳ.
ಸೌಂದರ್ಯಾನುಭವ
ಪ್ರಧಾನವಾಗಿ ನಾಟ್ಯಕಲೆಯನ್ನು ಕುರಿತಿರುವ ಭರತಪ್ರಣೀತ ನಾಟ್ಯಶಾಸ್ತ್ರದ ಹಂದರದಿಂದ ಸೌಂದರ್ಯತತ್ತ್ವವನ್ನು ಸ್ಫೋಟಗೊಳಿಸಿರುವವರು ಅಭಿನವಗುಪ್ತರು. ಅಲಂಕಾರಶಾಸ್ತ್ರಕ್ಕೂ ಸೌಂದರ್ಯತತ್ತ್ವಕ್ಕೂ ನಡುವಣ ಜೈವಿಕ ಸಂಬಂಧವನ್ನು ಸ್ಫುಟೀಕರಿಸಿರುವುದು ಅಭಿನವಗುಪ್ತರ ವಿಶೇ? ಕೊಡುಗೆ.
ನಾಟಕಕಲೆಗೂ ಸಂಗೀತ ನೃತ್ಯ ಶಿಲ್ಪಾದಿ ಅನ್ಯ ನಿ?ನ್ನ ಕಲಾಪ್ರಕಾರಗಳಿಗೂ ನಡುವಣ ನಂಟನ್ನು ಪ್ರತಿಪಾದಿಸಿ ತೋರಿಸಿರುವವರು ಅಭಿನವಗುಪ್ತರೇ. ರಸಾನುಭವಕ್ಕೆ ಎಂದರೆ ಸೌಂದರ್ಯಾನುಭವಕ್ಕೆ ’ವ್ಯಂಜನಾ’ ವ್ಯಾಪಾರವೇ ಅಡಿಪಾಯವೆಂಬುದನ್ನು (ಧ್ವನ್ಯಾಲೋಕಲೋಚನ ಕೃತಿಯಲ್ಲಿ) ಯುಕ್ತಿಯುಕ್ತವಾಗಿ ಪ್ರತಿಪಾದಿಸಿರುವವರೂ ಅಭಿನವಗುಪ್ತರೇ. ಅಲಂಕಾರಮೀಮಾಂಸೆಯ ಅಂತರ್ಗತವಾಗಿ ಕಾವ್ಯಕ್ಕೂ ನಾಟಕಕ್ಕೂ ಇರುವ ಆಪಾತ ಭೇದವನ್ನು ನಿವಾರಿಸಿರುವವರೂ ಅಭಿನವಗುಪ್ತರೇ.
ಅಭಿನವಭಾರತೀ ಮತ್ತು ಧ್ವನ್ಯಾಲೋಕಲೋಚನ – ಈ ವ್ಯಾಖ್ಯಾನಗ್ರಂಥಗಳಲ್ಲಿ ಅಭಿನವಗುಪ್ತರು ಭರತಮುನಿಗಳ ಮತ್ತು ಆನಂದವರ್ಧನರಚಿತ ಕೃತಿಗಳಲ್ಲಿ ದಿಙನಿರ್ದೇಶರೀತಿಯವಾಗಿದ್ದ ಸೂಕ್ಷ್ಮಾಂಶಗಳನ್ನು ಹೊರಹೊಮ್ಮಿಸಿ ಅಲಂಕಾರಶಾಸ್ತ್ರ ಪ್ರಾಕಾರವನ್ನು ದೃಢಗೊಳಿಸಿದ್ದಾರೆ. ಆಗಮಪ್ರೋಕ್ತವಾದ ಭೂಮ್ಯಾಧಿ ೩೬ ತತ್ತ್ವಗಳು ಪರಶಿವನ ಅಭಿವ್ಯಕ್ತಿಗಳೆಂದು ಅಭಿನವಗುಪ್ತರಿಂದ ವ್ಯಾಖ್ಯಾನಗೊಂಡಿದೆ. ಹೀಗೆ ಕಾವ್ಯರಸಾನುಸಂಧಾನ, ಶಿವತತ್ತ್ವಾನುಸಂಧಾನ – ಇವು ಉದ್ದಕ್ಕೂ ಒಟ್ಟೊಟ್ಟಿಗೇ ನಡೆದಿವೆ. ಅವರ ರಸಸಿದ್ಧಾಂತವು ಪ್ರತ್ಯಭಿಜ್ಞಾದರ್ಶನದ್ದೇ ಒಂದು ಮಜಲು. ಈ ವಿಶಿ? ಪ್ರಾಕಾರದಿಂದಾಗಿ ಅನೇಕ ಪ್ರಬೋಧಕ ಒಳನೋಟಗಳು ಹೊಮ್ಮಿವೆ. ಉದಾಹರಣೆಗೆ: ಅಹಂಕಾರವನ್ನು ನೀಗಿಕೊಂಡು ’ಸದ್ವಿದ್ಯೆ’ಯ ಎಂದರೆ ಸಮ್ಯಗ್ಜ್ಞಾನದ ಕಡೆಗೆ ಪಯಣಿಸುವುದಕ್ಕೇ ’ಪ್ರತಿಭೆ’ ಎಂದು ಹೆಸರು; ಇತ್ಯಾದಿ. ಆವರಣದ ವ್ಯಾವರ್ತನವೇ ಪ್ರತ್ಯಭಿಜ್ಞೆ ಅಥವಾ ಶಿವಸಾಕ್ಷಾತ್ಕಾರ.
ತಥಾ ಹ್ಯೇಕಾಗ್ರ ಸಕಲ ಸಾಮಾಜಿಕ ಜನಃ ಖಲು
ನೃತ್ತಂ ಗೀತಂ ಸುಧಾಸಾರ-ಸಾಗಸ್ವೇನ ಮನ್ಯತೇ |
ತಥ ಏವೋಚ್ಯತೇ ಮಲ್ಲನಟ ಪ್ರೇಕ್ಷೆಪದೇಶನೇ
ಸರ್ವಪ್ರಮಾತೃತಾದಾತ್ಮ್ಯಂ
ಪೂರ್ಣರೂಪಾನುಭಾವಕಮ್ ||
(ತಂತ್ರಾಲೋಕ)
ಎಂದರೆ, ಪ್ರೇಕ್ಷಕನು ನೋಡುತ್ತಿರುವ ನಾಟಕವು ಉಂಟುಮಾಡುವ ಅನುಭವದ ಚರಮಸ್ಥಿತಿಯೆಂದರೆ ತಾನು ಮತ್ತು ಇನ್ನೊಬ್ಬರು ಎಂಬ ಭೇದಕಲ್ಪನೆಯೇ ವಿಸ್ಮೃತವಾಗಿಬಿಡುವುದು; ಅರ್ಥಾತ್ ಸಾಮಾನ್ಯವಾಗಿ ಚಿತ್ತವನ್ನು ಕವಿದಿರುವ ಭೇದಸ್ಥಿತಿಯೇ ಇಲ್ಲವಾಗುವುದು.
(ಸಶೇಷ)