ಪ್ರತ್ಯಭಿಜ್ಞಾ ದರ್ಶನವನ್ನು ಕುರಿತವು: ಅ) ತಂತ್ರಾಲೋಕ (೮ ಸಂಪುಟಗಳಲ್ಲಿ ಪ್ರಕಟಿತ; ರಾಜಾನಕ ಜಯರಥನ ’ತಂತ್ರಾಲೋಕವಿವೇಕ’ ಎಂಬ ವ್ಯಾಖ್ಯಾನ ಇದೆ.) ಆ) ಮಾಲಿನೀವಿಜಯವಾರ್ತಿಕ (’ಮಾಲಿನೀವಿಜಯೋತ್ತರತಂತ್ರ’ ಗ್ರಂಥದ ಮೇಲಿನ ವ್ಯಾಖ್ಯಾನ) ಇ) ತಂತ್ರಸಾರ (೨ ಸಂಪುಟಗಳಲ್ಲಿ ಪ್ರಕಟಿತ) ಈ) ತಂತ್ರವಟಧಾನಿಕಾ ಉ) ಈಶ್ವರಪ್ರತ್ಯಭಿಜ್ಞಾವಿಮರ್ಶಿನೀ (ಉತ್ಪಲದೇವನ ಕಾರಿಕೆಗಳ ಮೇಲಿನ ವ್ಯಾಖ್ಯಾನ) ಊ)) ಈಶ್ವರಪ್ರತ್ಯಭಿಜ್ಞಾವಿವೃತಿವಿಮರ್ಶಿನೀ (೩ ಸಂಪುಟಗಳಲ್ಲಿ ಪ್ರಕಟಿತ; ಉತ್ಪಲದೇವನ ’ವಿವೃತಿ’ಯ ಮೇಲಿನ ವ್ಯಾಖ್ಯಾನ) ಋ) ಪರಾತ್ರೀಶಿಕಾವಿವರಣ (’ಕೌಲ’ಪ್ರಸ್ಥಾನದ ವಿವರಣೆ) ಎ) ಪರಮಾರ್ಥಸಾರ ಏ) ಪರ್ಯಂತಪಂಚಾಶಿಕಾ (ಡಾ|| ವಿ. ರಾಘವನ್ ಅವರಿಂದ ಸಂಪಾದಿತ) ಐ) ಭಗವದ್ಗೀತಾರ್ಥಸಂಗ್ರಹ
II. ಸಾಹಿತ್ಯವನ್ನು ಕುರಿತವು: ಅ) ಅಭಿನವಭಾರತೀ (ನಾಟ್ಯಶಾಸ್ತ್ರ ವಿವೃತಿ) (೪ ಸಂಪುಟಗಳಲ್ಲಿ ಪ್ರಕಟಿತ; ಭರತನ ನಾಟ್ಯಶಾಸ್ತ್ರದ ಮೇಲಿನ ವಿವರಣಗ್ರಂಥ) ಆ) ಧ್ವನ್ಯಾಲೋಕಲೋಚನ (ಆನಂದವರ್ಧನನ ’ಧ್ವನ್ಯಾಲೋಕ’ದ ಮೇಲಿನ ವ್ಯಾಖ್ಯಾನ) (ಉತ್ತುಂಗೋದಯನ ’ಕೌಮುದೀ’ ಮತ್ತು ಎಸ್. ಕುಪ್ಪುಸ್ವಾಮಿಶಾಸ್ತ್ರಿಗಳ ಇ) ’ಉಪಲೋಚನ’ ಎಂಬ ಉಪವ್ಯಾಖ್ಯಾನಗಳು ಇವೆ. ಕನ್ನಡದಲ್ಲಿ ಡಾ|| ಕೆ. ಕೃಷ್ಣಮೂರ್ತಿಗಳ ’ಲೋಚನಸಾರ’ ಲಭ್ಯವಿದೆ) ಈ) ಘಟಕರ್ಪರಕುಲಕವೃತಿ
ಕಾವ್ಯ ಮತ್ತು ಪ್ರತ್ಯಭಿಜ್ಞೆ
ಶಿವತತ್ತ್ವಕ್ಕೆ ’ಪ್ರಕಾಶ’ ಮತ್ತು ’ವಿಮರ್ಶ’ ಎಂಬ ಎರಡು ಆಯಾಮಗಳಿವೆ. ’ಪ್ರಕಾಶ’ವು ಸ್ವಸ್ವರೂಪ; ’ವಿಮರ್ಶ’ ಎಂಬುದು ನಿರಂತರ ಸೃಷ್ಟಿ, ಸ್ಥಿತಿ, ಸಂಹಾರ, ವಿಲಯ (ಅಥವಾ ತಿರೋಧಾನ) ಮತ್ತು ಅನುಗ್ರಹ – ಎಂಬ ಐದು ಕಾರ್ಯವಿಶೇಷಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ.
ಅಭಿನವಗುಪ್ತರ ದೃಷ್ಟಿಯಲ್ಲಿ ಕಾವ್ಯದ ಮತ್ತು ಕಲೆಯ ಅನುಸಂಧಾನವು ಪ್ರತ್ಯಭಿಜ್ಞೆಯ ಸಾಕ್ಷಾತ್ಕರಣಕ್ಕೆ ಸಾಧನವೇ ಆಗಿದೆ. ಕಾವ್ಯದ ಸಂದರ್ಭದಲ್ಲಿ ಯಾರು ಸಹೃದಯನೆನಿಸಿದ್ದಾನೋ ಅವನೇ ಪ್ರತ್ಯಭಿಜ್ಞೆಯ ಸಂದರ್ಭದಲ್ಲಿ ಸಾಧಕನೆನಿಸುತ್ತಾನೆ. ಈ ವಿಕಸನಪ್ರಕ್ರಿಯೆಯನ್ನು ಸಂವಿತ್, ವಿಶ್ರಾಂತಿ, ಪರಮಾನಂದ, ಪರಮಭೋಗ, ವಿಮರ್ಶ, ಸ್ವರೂಪ, ಪ್ರತ್ಯಭಿಜ್ಞೆ – ಎಂದು ಸೋಪಾನಕ್ರಮದಲ್ಲಿ ವ್ಯಾಖ್ಯೆ ಮಾಡಿದ್ದಾರೆ. ಈ ಸಿದ್ಧಾಂತವಾದರೋ ಬೀಜರೂಪದಲ್ಲಿ ತಂತ್ರಾಲೋಕ ಗ್ರಂಥದಲ್ಲಿಯೆ ಲಬ್ಧವಿದೆ. ಪ್ರತಿಭೋನ್ಮೀಲನದ ಬಿಂಬ-ಪ್ರತಿಬಿಂಬ ವಿನ್ಯಾಸವನ್ನು ತಂತ್ರಾಲೋಕದ ಮೂರನೇ ಆಹ್ನಿಕದಲ್ಲಿ ಹೀಗೆ ಲಕ್ಷಣೀಕರಿಸಿದ್ದಾರೆ:
ಎಂದರೆ, ಶುಭ್ರವಾದ ಕನ್ನಡಿಯಲ್ಲಿ ಹೇಗೆ ಭೂಮಿ, ಜಲ ಮೊದಲಾದವು ಬೇರೆಬೇರೆಯಾಗಿ ಭಾಸವಾಗುತ್ತವೋ ಅದೇ ಪ್ರಕಾರದಲ್ಲಿ ಏಕೈಕ ಪ್ರಕಾಶರೂಪನಾದ ಪರಮೇಶ್ವರನಲ್ಲಿ ಸಮಸ್ತ ವಿಶ್ವವ್ಯವಹಾರವೂ ಅಮಿಶ್ರಿತ ರೂಪದಲ್ಲಿ ಪ್ರತಿಫಲಿತವಾಗಿದೆ. ಅದಕ್ಕೆ ಸಂವಾದಿಯೆಂಬಂತೆ ಸಹೃದಯನ ವಿಶದೀಭೂತ ಮನೋಮುಕುರದಲ್ಲಿ ಕಾವ್ಯಾರ್ಥಾದಿಗಳು ಸ್ಫುಟವಾಗಿ ಭಾಸಿತವಾಗುತ್ತವೆ:
ಎಂದರೆ ಕನ್ನಡಿ, ನೀರು ಮೊದಲಾದವುಗಳಲ್ಲಿ ಹೇಗೆ ಅವುಗಳ ಸ್ವಚ್ಛತೆಯ ಗುಣದಿಂದಾಗಿಯೆ ಪ್ರತಿಫಲನ ಏರ್ಪಡುತ್ತದೋ ಹಾಗೆಯೇ ಕಲಾ-ಕಾವ್ಯ ಸಂದರ್ಭದಲ್ಲಿಯ ಪ್ರತಿ-ಭಾಸವು ನಡೆಯುತ್ತದೆ.
ವಸ್ತು ಮತ್ತು ಸ್ಪಂದನದ ನೈರಂತರ್ಯವೇ ಇಲ್ಲಿಯ ಮೂಲತತ್ತ್ವ. ಇದೇ ತತ್ತ್ವದ ಪರಿಣಾಮೋನ್ನತಿಯನ್ನು ಹೀಗೆ ವಿವರಿಸಿದ್ದಾರೆ:
ಸ್ವಸ್ಮಿನ್ ಅಭೇದಾದ್ ಭಿನ್ನಸ್ಯ ದರ್ಶನಕ್ಷಮತೈವ ಯಾ |
ಅವ್ಯಕ್ತಸ್ವಪ್ರಕಾಶಸ್ಯ ನೈರ್ಮಲ್ಯಂ ತದುದೀರಿತಮ್ ||
ತಾತ್ಪರ್ಯವೆಂದರೆ ಕನ್ನಡಿಯಲ್ಲಿ ನೈರ್ಮಲ್ಯ ಇರುವ ಕಾರಣದಿಂದಲೇ ಪ್ರತಿಫಲನಸಾಮರ್ಥ್ಯ ಏರ್ಪಟ್ಟಿರುವುದು.
ಸಾಧನೆಯ ವಿಷಯಕ್ಕೆ ಬಂದರೆ ಲಕ್ಷ್ಯವನ್ನು ಸೇರಲು ಹಲವು ಮಾರ್ಗಗಳು ಇರಬಹುದೆಂಬುದೂ ಸ್ವೇತರಮಾರ್ಗಗಳನ್ನು ಖಂಡಿಸಲು ಹೋಗಬಾರದೆಂಬುದೂ ಅಭಿನವಗುಪ್ತರ ಉದಾರ ನಿಲವು:
ಉಪಾಯೇ ನಾಗ್ರಹಃ ಕಾರ್ಯಃ ||
(ಪರ್ಯಂತಪಂಚಾಶಿಕಾ)
ಅನುಸಂಧಾನದ ಮಹತಿ
ಅಭಿನವಗುಪ್ತರ ಚಿಂತನಧಾರೆಯ ಒಂದು ಪ್ರಮುಖ ಲಕ್ಷಣವೆಂದರೆ ಪರಂಪರೆಯಿಂದ ಭಿನ್ನವಾದ ಏನನ್ನೋ ಹೇಳಬೇಕೆಂಬುದಕ್ಕಿಂತ ಮಿಗಿಲಾಗಿ ತಮಗೆ ಹಿಂದೆ ಏನು ಶಾಸ್ತ್ರಜಿಜ್ಞಾಸೆ ನಡೆದಿತ್ತೋ ಅದನ್ನು ಸಮಕಾಲೀನರಿಗೆ ಪರಿಚಯಿಸಿ ಜಿಜ್ಞಾಸೆಯ ಮುಂದುವರಿಕೆಗೆ ಪರಿಕರಗಳನ್ನು ಒದಗಿಸುವುದು. ಈ ಭವಿಷ್ಯದ್ ದೃಷ್ಟಿಯೂ ಅವರ ಸ್ವೋಪಜ್ಞ ಚಿಂತನರಾಶಿಯಷ್ಟೆ ಮಹತ್ತ್ವದ್ದು. ಅವರ ಬೌದ್ಧಿಕ ವಾರಸಿಕೆ ಸಾವಿರ ವ?ಗಳ ತರುವಾಯವೂ ಸಂಗತವೆನಿಸಿರುವುದು ಈ ಭೂಮಿಕೆಯಿಂದ.
ಗ್ರಹಿಸಬೇಕಾಗಿರುವ ಎರಡನೆಯ ವೈಶಿಷ್ಟ್ಯವೆಂದರೆ ವೈದಿಕಯುಗದಿಂದ ನೆಲೆಗೊಂಡಿದ್ದ ಅಧ್ಯವಸಾಯಾತ್ಮಕ, ಅನುಸಂಧಾನಾತ್ಮಕ – ಈ ಎರಡು ಪ್ರಸ್ಥಾನಗಳಲ್ಲಿ ಅವರು ಎರಡನೆಯದಕ್ಕೆ ಪ್ರಾಧಾನ್ಯ ನೀಡಿದುದು. ಅಧ್ಯವಸಾಯಾತ್ಮಕ (ಎಂದರೆ ವಿಶ್ಲೇ?ಣಾತ್ಮಕ) ಆಯಾಮವೇ ಪ್ರಾಥಮ್ಯವನ್ನು ಪಡೆದುಕೊಂಡರೆ ಅದು ಮೌಲ್ಯಹ್ರಾಸದಲ್ಲಿ ಪರ್ಯವಸಾನಗೊಳ್ಳುವ ಸಂಭವವಿರುತ್ತದೆಂಬುದು ಲೋಕಾನುಭವ. ಇದನ್ನು ಗಮನಿಸಿದಾಗ ಅಭಿನವಗುಪ್ತರು ತಳೆದ ದೃಷ್ಟಿಯು ತುಂಬಾ ಮಹತ್ತ್ವದ್ದೆನಿಸುತ್ತದೆ. ಪೃಥಕ್ಕರಣಕ್ಕಿಂತ ಸಮನ್ವಯ ಮತ್ತು ಮೌಲ್ಯಪರತೆಗಳೇ ಜೀವನವನ್ನು ಹೆಚ್ಚು ಅರ್ಥಪೂರ್ಣಗೊಳಿಸುವುದು. ಈ ನಿಲವನ್ನು ಮಾನ್ಯಮಾಡಿದರೆ ಹಲವು ವೈರುಧ್ಯಗಳೂ ತಾರತಮ್ಯಗಳೂ ಕೂಡಾ ನಿವಾರಣೆಯಾದಾವು. ತಾರತಮ್ಯಾನುಸರಣೆಯು ದೈವದ್ರೋಹವೆಂದೇ ಅಭಿನವಗುಪ್ತರು ಘೋಷಿಸಿದ್ದಾರೆ. ಕಲೆ ಮತ್ತು ಅಧ್ಯಾತ್ಮಾನುಸಂಧಾನ ಕ್ಷೇತ್ರಗಳಲ್ಲಿ ಅಭಿನವಗುಪ್ತರು ಸಾಧಾರಣೀಕರಣಕ್ಕಾಗಿ ಪ್ರಯಾಸ ನಡೆಸಿದುದೂ ಇದೇ ಕಾರಣಕ್ಕಾಗಿ.
ಉಜ್ಜ್ವಲ ವಾರಸಿಕೆ
ವಿಶಾಲ ದರ್ಶನಪ್ರಪಂಚವನ್ನು ಅಭಿನವಗುಪ್ತರು ಊರ್ಜಿತಗೊಳಿಸಿದಂತೆಯೇ ಅವರ ಉಜ್ಜ್ವಲ ವಾರಸಿಕೆಯು ಕ್ಷೇಮರಾಜ, ಕ್ಷೇಮೇಂದ್ರ ಮೊದಲಾದವರ ಮೂಲಕ ಪ್ರಜ್ವಲವಾಗಿ ಮುಂದುವರಿಯಿತು, ಇಡೀ ಭಾರತದಲ್ಲಿ ವ್ಯಾಪಿಸಿತು – ಆಸಿಂಧುಸಿಂಧುಪರ್ಯಂತ.
ಜಯರಥ, ಕ್ಷೇಮರಾಜ, ಮಧುರಾಜ ಮೊದಲಾದ ಹಲವಾರು ನೇರ ಶಿಷ್ಯರ ಮೂಲಕವೂ ಅಭಿನವಗುಪ್ತರ ಚಿಂತನಪರಂಪರೆ ಮುಂದುವರಿದದ್ದು ಒಂದು ಮುದಾವಹ ಸಂಗತಿ.
ತಮ್ಮ ಜೀವಿತಕಾರ್ಯ ಮುಗಿದಿದೆ ಎನಿಸಿದಾಗ ಅಭಿನವಗುಪ್ತರು ಶಿಷ್ಯಸಮೇತರಾಗಿ ಕಾಶ್ಮೀರದ ಬಡಗಾಂವ ಜಿಲ್ಲೆಯಲ್ಲಿರುವ ಗುಹೆಯನ್ನು ಪ್ರವೇಶಿಸಿ ಶಿವಸಾನ್ನಿಧ್ಯ ಪಡೆದರೆಂದು ಪ್ರತೀತಿ ಇದೆ.
ಅವಸಾನಕಾಲದಲ್ಲಿ ಅಭಿನವಗುಪ್ತರು ಭೈರವಗುಹಾಪ್ರವೇಶ ಮಾಡಿ ಭೈರವನಲ್ಲಿ ಲೀನರಾದರೆಂಬ ಪಾರಂಪರಿಕ ಹೇಳಿಕೆಯನ್ನು ಯಥಾರ್ಥವಾಗಿಯಾದರೂ ಗ್ರಹಿಸಬಹುದು, ಅಥವಾ ಜೀವನ್ಮುಕ್ತರಾದರೆಂದಾದರೂ ಅರ್ಥೈಸಿಕೊಳ್ಳಬಹುದು.
ದುರ್ಭಾಗ್ಯದ ವಿಷಯವೆಂದರೆ ಒಂದೊಮ್ಮೆ ಇಡೀ ಭಾರತದಲ್ಲಿಯೆ ಪ್ರಮುಖ ವಿದ್ಯಾಕೇಂದ್ರವಾಗಿದ್ದು ಎಲ್ಲ ಜ್ಞಾನಾಂಗಗಳಲ್ಲಿಯೂ ಅಗ್ರಪಂಕ್ತಿಯವೆನಿಸಿರುವ ಅದ್ಭುತ ಕೃತಿಗಳಿಗೆ ಜನ್ಮಸ್ಥಾನವಾಗಿದ್ದ ಕಾಶ್ಮೀರ ರಾಜ್ಯವು ಈಗ ಗೊಂದಲದ ಬೀಡಾಗಿದೆ; ಸಾರಸ್ವತಕಾರ್ಯಕ್ಕೆ ಪೋಷಕವಾದ ಪರಿಸರ ಅಲ್ಲಿ ಉಳಿದಿಲ್ಲ. ಕಾಶ್ಮೀರವು ಭಾರತದ ಭಾಗವಾಗಿ ಉಳಿದೀತೆ ಎಂಬುದನ್ನೇ ಸಂದೇಹಿಸಬೇಕಾದ ವಾತಾವರಣ ಅಲ್ಲಿ ಇದೆ. ಶಾರದಾದೇವಿಗೆ ’ಕಾಶ್ಮೀರಪುರವಾಸಿನಿ’ಯಾಗಿ ಉಳಿಯುವುದು ದುಷ್ಕರವಾಗುತ್ತಿದೆ.
ಅಭಿನವಗುಪ್ತರು ನಮ್ಮ ನಾಡಿಗೆ ನೀಡಿದ ದರ್ಶನವನ್ನು ’ಪ್ರತ್ಯಭಿಜ್ಞಾ’ ಎಂದು ಕರೆದಿದ್ದಾರೆ. ’ಅಭಿಜ್ಞಾನ’ವೆಂದರೆ ಮರೆತುಹೋಗಿರುವ ಮುಖ್ಯ ಸಂಗತಿಯ ಪುನಃಸ್ಮರಣೆ. ಈಚಿನ ಕಾಲದಲ್ಲಿ ಆಪಾತರಮಣೀಯವೂ ತರ್ಕಹೀನವೂ ಆದ ಧೋರಣೆಗಳು ವ್ಯಾಪಕವಾಗಿ ಪ್ರಚಲನೆಗೊಂಡಿರುವ ಕಾರಣದಿಂದ ಸನಾತನಧರ್ಮಪ್ರಜ್ಞೆಯೂ ಋಜುವಾದ ಪಾಂಡಿತ್ಯವೂ ಆಘಾತಗಳಿಗೆ ಒಳಗಾಗಿವೆ. ನೈಜ ಮೌಲ್ಯಗಳು ದೃಢವಾಗಿ ಪುನಃಸ್ಥಾಪನೆಗೊಳ್ಳಬೇಕಾಗಿದೆ. ಈ ಉದ್ಯಮಕ್ಕೆ ಆಚಾರ್ಯ ಅಭಿನವಗುಪ್ತರ ಸಹಸ್ರಾಬ್ದದ ಆಚರಣೆಯು ಉತ್ತೇಜಕವಾಗಲಿ ಎಂದು ಹಾರೈಸೋಣ. ಈಗಲಾದರೋ ಅಭಿನವಗುಪ್ತರಂತಹ ದಿಗಂತವ್ಯಾಪಿ ಮೇಧಾವಿಯ ಪರಿಚಯವು ಅಲಂಕಾರಶಾಸ್ತ್ರ ಮತ್ತು ಕಾಶ್ಮೀರ-ಶೈವ ದರ್ಶನ ಕ್ಷೇತ್ರಗಳ ಹಲವರಿಗಷ್ಟೆ ಸೀಮಿತವಾಗಿರುವಂತಿದೆ. ಸಹಸ್ರಾಬ್ದ ಆಚರಣೆಯ ವ್ಯಾಜದಲ್ಲಾದರೂ ಅಭಿನವಗುಪ್ತರ ಗಹನವೂ ಬಹುಮುಖವೂ ಆದ ಸಾಧನೆಯ ಪರಿಚಯ ಹೆಚ್ಚಿನವರಿಗೆ ಆಗಲಿ ಎಂದು ಆಶಿಸಬೇಕಾಗಿದೆ.
ಅಭಿನವಗುಪ್ತರ ಚಿಂತನೆಯಲ್ಲಿ ಪ್ರಖರತೆಯೂ ಪೂರ್ಣತೆಯೂ ಇದೆ. ಏನೇನೋ ಚಿಂತನೆಯ ಗೊಂದಲಗಳು ತುಂಬಿರುವ ೨೧ನೇ ಶತಮಾನದ ಪರಿಸರದಲ್ಲಿ ಅಭಿನವಗುಪ್ತರು ನೀಡಿರುವ ಸಮನ್ವಯಾಧಾರಿತ ಪರಿಸ್ಫುಟತೆಯು ಅತ್ಯಂತ ಉಪಾದೇಯವೆನಿಸುತ್ತದೆ. ಸಹಸ್ರಾಬ್ದದ ನಿಮಿತ್ತದಲ್ಲಿಯಾದರೂ ಅಭಿನವಗುಪ್ತಪ್ರಣೀತ ವಾಙ್ಮಯರಾಶಿಯು ಹೆಚ್ಚಿನ ಅಧ್ಯಯನವನ್ನು ಆಕರ್ಷಿಸಲಿ ಎಂದು ಹಾರೈಸೋಣ.
ಕೇವಲ ₹ 1000 /- (5 ವರ್ಷಕ್ಕೆ) & 1 ವರ್ಷಕ್ಕೆ – ₹ 220 /-
ಬ್ಯಾಂಕ್ ಖಾತೆ ಮೂಲಕಚಂದಾದಾರರಾಗಿ
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ.
ಬ್ಯಾಂಕ್ ಹೆಸರು: HDFC Bank Ltd, ಕಾವೇರಿ ಭವನ ಶಾಖೆ, ಬೆಂಗಳೂರು
ಖಾತೆದಾರರ ಹೆಸರು : UTTHANA TRUST
IFSC CODE: HDFC0000509
A/C No: 50100283886338
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: [email protected]