ಸಾಮಾಜಿಕ ಕಾರ್ಯಗಳಿಗೆ ಮಹತ್ತ್ವ ನೀಡಿದ ರಾಮಾನುಜಾಚಾರ್ಯರು ಕೆರೆನಿರ್ಮಾಣದಂತಹ ಜನೋಪಯೋಗಿ ಕೆಲಸಗಳನ್ನೂ ಮಾಡಿದ್ದಾರೆ. ಮೇಲುಕೋಟೆ ಸಮೀಪದ ತೊಂಡನೂರಿನ ಕೆರೆ ಅದಕ್ಕೊಂದು ಉದಾಹರಣೆ.
ಸಮಾಜವಿರಲಿ ಅಥವಾ ಜನಜೀವನವಿರಲಿ, ನಿಂತ ನೀರಾಗುವುದು ಸಾಧ್ಯವಿಲ್ಲ. ಸದಾ ಹರಿವು ಅಥವಾ ಚಲನೆ ಅದರ ಲಕ್ಷಣ. ಈ ಹರಿವು ಅಥವಾ ಚಲನೆ ಬದಲಾವಣೆ-ಪರಿವರ್ತನೆಗಳ ಇನ್ನೊಂದು ರೂಪವಾಗಿರುತ್ತದೆ. ಸಹಸ್ರಮಾನಗಳ ಇತಿಹಾಸವಿರುವ ಭಾರತದ ಸಂಸ್ಕೃತಿ-ನಾಗರಿಕತೆಗಳನ್ನು ಗಮನಿಸಿದರೆ ಜನರ ಧಾರ್ಮಿಕ ನಂಬಿಕೆ-ಆಚರಣೆಗಳಲ್ಲಿ ಆಗಿಂದಾಗ ಸಾಕ? ಬದಲಾವಣೆಗಳು ಆದುದನ್ನು ಗುರುತಿಸಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ಸಾಹಿತ್ಯವೆಂದು ಪರಿಗಣಿಸಲ್ಪಟ್ಟಿರುವ ಋಗ್ವೇದದಲ್ಲಿರುವ ದೇವತೆಗಳಿಗೂ ಇಂದು ನಾವು ಪೂಜಿಸುವ ದೇವತೆಗಳಿಗೂ ತುಂಬ ವ್ಯತ್ಯಾಸ ಇರುವುದನ್ನು ಗಮನಿಸಬಹುದು. ಋಗ್ವೇದದಲ್ಲಿ ನಿಸರ್ಗಕ್ಕೆ ಸಮೀಪವಿರುವ, ಮಳೆ-ಬೆಳೆ-ಸಮೃದ್ಧಿಗಳನ್ನು ತರುವ ಮತ್ತು ರಕ್ಷಿಸಿ ಪೋಷಿಸುವ ಇಂದ್ರನು ಪ್ರಧಾನ ದೇವತೆಯಾದರೆ ಮುಂದೆ ವಿ? ಪೋ?ಣೆ ಅಥವಾ ಸ್ಥಿತಿಯ ಹೊಣೆಯನ್ನು ವಹಿಸಿಕೊಂಡುದನ್ನು ಗಮನಿಸಬಹುದು. ಅದರೊಂದಿಗೆ ಭಕ್ತಿ ಮತ್ತು ಉಪಾಸನೆಗಳ ದಿಕ್ಕು ಬದಲಾಗದೆ ಇರುತ್ತದೆಯೆ? ವಿಷ್ಣು ಭಕ್ತಿ, ವಿಷ್ಣುವಿನ ಅವತಾರಗಳ ಪರಿಕಲ್ಪನೆ, ವಿ?ವಿನ ಆರಾಧನೆಯ ವಿವಿಧ ವಿಧಾನಗಳು, ನಿರ್ಗುಣ ಉಪಾಸನೆಯಿಂದ ಸಗುಣ, ಸಾಕಾರ ಉಪಾಸನೆಯತ್ತ ಚಲನೆ, ವಿಗ್ರಹಾರಾಧನೆ ಇವೆಲ್ಲ ಮುಂದಿನ ಹಂತಗಳಲ್ಲಿ ಬಂದವು.
ಹೆಚ್ಚುಕಡಮೆ ಒಂದೇ ಕಾಲಘಟ್ಟದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿಷ್ಣು ಭಕ್ತಿ, ವಿಷ್ಣುವಿನ ವಿವಿಧ ರೂಪಗಳ ಉಪಾಸನೆ-ಆರಾಧನೆಗಳು ಪ್ರಸಾರಗೊಂಡಿರಬೇಕು. ಅದರ ಒಂದು ಶಾಖೆ ದಕ್ಷಿಣಭಾರತದಲ್ಲಿ, ಮುಖ್ಯವಾಗಿ ತಮಿಳು ಮಾತೃಭಾಷೆ ಇರುವ ಜನರ ನಡುವೆ ಪಸರಿಸಿರಬೇಕು. ತಮಿಳು ದ್ರಾವಿಡಭಾಷೆ ಎಂದು ಗುರುತಿಸಲ್ಪಟ್ಟಂಥದ್ದು; ಪಂಡಿತರಿಗೆ, ಸಮಾಜದ ಮೇಲ್ವರ್ಗದವರಿಗೆ ಸೀಮಿತವಾದ ಭಾಷೆಯಲ್ಲ. ಆದ್ದರಿಂದ ವಿಷ್ಣುಭಕ್ತಿಯ ಶಾಖೆಯಲ್ಲಿ ವರ್ಣಾಶ್ರಮಭೇದವಿಲ್ಲದೆ ಸಮಾಜದ ಎಲ್ಲ ವರ್ಗಗಳವರೂ ಪಾಲ್ಗೊಂಡರು; ತಮ್ಮದಾದ ಅಪಾರವಾದ ಭಕ್ತಿಭಾವ, ಶರಣಾಗತಿಯ ಆಚರಣಾ ವಿಧಾನಗಳನ್ನು ಮೆರೆದರು. ಆಗ ಪ್ರತ್ಯೇಕವೆಂದು ಸಾಮಾನ್ಯವಾಗಿ ಭಾವಿಸಲ್ಪಡುವ ಪಂಡಿತವರ್ಗ, ಅಂದರೆ ಆ ಭಾಗದ ಬ್ರಾಹ್ಮಣ ಸಮುದಾಯವೂ ಹಿಂದೆ ಬೀಳಲಿಲ್ಲ; ಅದರೊಂದಿಗೆ ಸೇರಿಕೊಂಡು ಸಮನ್ವಯವನ್ನು ಸಾಧಿಸಿದರು. ಅವರಲ್ಲಿ ಪ್ರಮುಖರು ೯ನೇ ಶತಮಾನದ ನಾಥಮುನಿಗಳು; ಅನಂತರದ ಯಾಮುನಾಚಾರ್ಯರು ಹಾಗೂ ಕೊನೆಯದಾಗಿ ಶ್ರೀರಾಮಾನುಜಾಚಾರ್ಯರು (೧೦೧೭-೧೧೩೭). ಮೊದಲಿಗೆ ಶ್ರೀವೈಷ್ಣವ ಎನ್ನುವ ಹೆಸರು ಪಡೆದಿದ್ದ ಈ ಧಾರ್ಮಿಕ ಆಂದೋಲನವು ರಾಮಾನುಜಾಚಾರ್ಯರ ಕಾಲಕ್ಕೆ ಬರುವಾಗ ಖಚಿತವಾದ ರೂಪವನ್ನು ಪಡೆದುಕೊಂಡಿತು ಮತ್ತು ವಿಶಿ?ದ್ವೈತ ಎನ್ನುವ ಹೆಸರು ಅವರ ದರ್ಶನದ್ದಾಯಿತು.
ಇನ್ನು ಒಟ್ಟು ಭಾರತೀಯ ಸಂಸ್ಕೃತಿಯನ್ನು ಗಮನಿಸುವುದಾದರೆ ಧರ್ಮಪರಂಪರೆಯು ಇದರ ಮೇಲೆ ದಟ್ಟ ಪ್ರಭಾವವನ್ನು ಬೀರಿದೆ. ಜಗತ್ತಿನ ಬಹುತೇಕ ಎಲ್ಲ ಪ್ರಧಾನ ಮತಧರ್ಮಗಳಿಗೆ ಭಾರತವು ಆಶ್ರಯ ನೀಡಿದರೆ, ಇಲ್ಲೇ ಹುಟ್ಟಿಬೆಳೆದ ಹಿಂದೂಧರ್ಮ ಶಾಖೋಪಶಾಖೆಯಾಗಿ ಹರಡಿ ಭಾರತೀಯ ಸಂಸ್ಕೃತಿಯನ್ನು ಗಾಢವಾಗಿ ಪ್ರಭಾವಿಸಿದೆ. ಹಿಂದೂಧರ್ಮ ಮತ್ತು ದರ್ಶನಗಳು ಉತ್ತರದಲ್ಲಿ ತಡೆಗೋಡೆಯಂತಿದ್ದು ಈ ರಾಷ್ಟ್ರವನ್ನು ಕಾಯುತ್ತಿರುವ ಹಿಮಾಲಯದ ಬೃಹತ್ ಪರ್ವತಶ್ರೇಣಿಗಳ ಹಾಗೆಯೇ ಇವೆ ಎಂದರೆ ತಪ್ಪಲ್ಲ; ಅದರಲ್ಲಿ ಶಿಖರಗಳು ಅನೇಕ; ಮುಖ್ಯವಾದವು ಮೂರು – ಅದ್ವೈತ, ವಿಶಿ?ದ್ವೈತ ಹಾಗೂ ದ್ವೈತ. ಇವು ಮೂರಕ್ಕೂ ಆಧಾರ ಒಂದೇ – ಪ್ರಸ್ಥಾನತ್ರಯವೆನಿಸಿದ ವೇದೋಪನಿ?ತ್ತು, ಬ್ರಹ್ಮಸೂತ್ರ ಹಾಗೂ ಭಗವದ್ಗೀತೆ. ಇವುಗಳಿಗೆ ಭಾಷೆ ಬರೆಯುವುದು ಹಾಗೂ ತಮ್ಮ ಇತರ ಕಾರ್ಯಗಳ ಮೂಲಕ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನು ನೆಲೆಗೊಳಿಸಿದರು.
ಉಭಯವೇದಾಂತ
ವಿಶಿಷ್ಟಾದ್ವೈತವನ್ನು ಶ್ರೀವೈಷ್ಣವಮತ ಮತ್ತು ಉಭಯವೇದಾಂತ ಎಂದು ಕೂಡ ಕರೆಯಲಾಗುತ್ತದೆ. ಸಂಪ್ರದಾಯದ ಪ್ರಕಾರ ಇದಕ್ಕೆ ವಿಷ್ಣುವೇ ಆದಿಗುರು; ಅವನು ಲಕ್ಷ್ಮಿಗೆ ಉಪದೇಶಿಸಿದ್ದು ಎಂಬುದು ನಂಬಿಕೆ. ಅಲ್ಲಿಂದ ವಿ?ಕ್ಸೇನ, ಆಳ್ವಾರರು ಮತ್ತು ಆಚಾರ್ಯರುಗಳ ಮೂಲಕ ಅದು ಹರಿದು ಬಂತು. ಶ್ರುತಿ-ಸ್ಮೃತಿಗಳಲ್ಲಿ ಈ ಸಿದ್ಧಾಂತ ಮೊದಲೇ ಇತ್ತು ಎಂದು ಇತರ ಎರಡು ಮತಗಳವರಂತೆ ವಿಶಿಷ್ಟಾದ್ವೈತಿಗಳು ಕೂಡ ನಂಬುತ್ತಾರೆ. ದ್ರಾವಿಡ ಸಂಪ್ರದಾಯದ ಆಳ್ವಾರ್ ಎಂಬ ಶರಣರ ಪಾಶುರ(ಸೂಕ್ತಿ)ಗಳಲ್ಲಿ ಭಕ್ತಿತತ್ತ್ವವು ತುಂಬಿ ತುಳುಕುತ್ತಿತ್ತು. ಆಳ್ವಾರ್ ಎಂದರೆ ಮುಳುಗಿದವನು ಎಂದರ್ಥ (ಭಕ್ತಿಯಲ್ಲಿ ಮುಳುಗಿದವನು). ಅವರು ತಮ್ಮ ದರ್ಶನ ಮತ್ತು ಅನುಭವಗಳನ್ನು ತಮಿಳು ಪಾಶುರಗಳಲ್ಲಿ ಹಾಡಿದರು. ಒಟ್ಟು ಪಾಶುರಗಳು ೪೦೦೦ (ನಾಲಾಯಿರ ದಿವ್ಯಪ್ರಬಂಧ). ಆಳ್ವಾರರು ಹನ್ನೆರಡು ಮಂದಿ; ಅವರಲ್ಲಿ ಜಾತಿ-ಲಿಂಗಭೇದವಿಲ್ಲ. ಆರ್ಯ ಸಂಪ್ರದಾಯವೆಂದು ಹೇಳಲಾಗುವ ವಿಶಿ?ದ್ವೈತ ತತ್ತ್ವ ಮತ್ತು ದ್ರಾವಿಡ ಸಂಪ್ರದಾಯದ ಆಳ್ವಾರರ ಶರಣತತ್ತ್ವಗಳನ್ನು ಬೆಸೆದವರು ನಾಥಮುನಿಗಳು, ಶ್ರೀವೈಷ್ಣವ ಪೀಠದ ಆಚಾರ್ಯರಾಗಿದ್ದ ಯಾಮುನಾಚಾರ್ಯರು ಮತ್ತು ಮುಂದೆ ಆ ಪೀಠವನ್ನು ಅಲಂಕರಿಸಿದ ರಾಮಾನುಜಾಚಾರ್ಯರು. ಎರಡೂ ಸಿದ್ಧಾಂತಧಾರೆಗಳನ್ನು ಸಮೀಕರಿಸಿ, ಸಮನ್ವಯಗೊಳಿಸಿ ಆ ವಿಚಾರಗಳಿಗೆ ಸ್ಪ?ರೂಪ ನೀಡಿದ ರಾಮಾನುಜಾಚಾರ್ಯರು ಆ ಮೂಲಕ ವಿಶಿಷ್ಟಾದ್ವೈತವನ್ನು ರೂಪಿಸಿದರು. ಆ ಕಾರಣದಿಂದ ಇದನ್ನು ’ಉಭಯವೇದಾಂತ’ವೆಂದು ಕರೆಯಲಾಗುತ್ತದೆ.
ರಾಮಾನುಜಾಚಾರ್ಯರ ದೊಡ್ಡ ಕೊಡುಗೆ ಎಂದರೆ ವೈದಿಕ ಸಿದ್ಧಾಂತ ಮತ್ತು ಸಂಸ್ಕೃತ ಗ್ರಂಥಗಳಲ್ಲಿದ್ದ ಕ್ರಿಯಾವಿಧಾನ ಹಾಗೂ ಆಳ್ವಾರರ ಭಕ್ತಿಪರಂಪರೆಯನ್ನು ಹತ್ತಿರ ತಂದದ್ದು. ಆ ಕಾರಣದಿಂದಲೇ ಅದನ್ನು ಉಭಯವೇದಾಂತ, ಅಂದರೆ ಎರಡು ಪರಂಪರೆಗಳನ್ನು ಆಧರಿಸಿದ ವೇದಾಂತವೆಂದು ಗುರುತಿಸಲಾಗಿರುವುದು. ತಪ್ಪು ವ್ಯಾಖ್ಯಾನ ಮತ್ತು ದುರುಪಯೋಗಗಳ ಕಾರಣದಿಂದ ಆಧ್ಯಾತ್ಮಿಕ ಜ್ಞಾನ (ನೈಜ ಜ್ಞಾನ ಅಥವಾ ಜ್ಞಾನಯೋಗ) ಮತ್ತು ಭಕ್ತಿಯೋಗಗಳ ನಡುವೆ ಸಮತೋಲವು ಬೇಕೆನಿಸಿತ್ತು. ಅಂತಹ ಸಂದರ್ಭದಲ್ಲಿ ರಾಮಾನುಜರು ಬಂದರು. ಅವರನ್ನು ರಾಮಾಯಣದ ಲಕ್ಷ್ಮಣನ ಅವತಾರವೆಂದು ತಿಳಿಯಲಾಗುತ್ತದೆ.
ಎಲ್ಲರಿಗೂ ಲಭ್ಯ
ಅರ್ಚನೆ ಸಾಮಾನ್ಯರಿಗೂ ಲಭ್ಯ ಮತ್ತು ಸಾಧ್ಯವೆಂದು ಶ್ರೀರಾಮಾನುಜರು ಪ್ರತಿಪಾದಿಸಿದರು. ಸಗುಣ-ಸಾಕಾರ ಪೂಜೆ, ವಿಗ್ರಹಾರಾಧನೆ, ಹಾಗೆಯೇ ಅದನ್ನು ಕುರಿತ ಆಗಮಶಾಸ್ತ್ರಕ್ಕೆ ವಿಶಿಷ್ಟಾದ್ವೈತದಲ್ಲಿ ಹಿರಿಯ ಸ್ಥಾನವನ್ನು ನೀಡಲಾಗಿದೆ. ವಿಗ್ರಹಾರಾಧನೆ ಮತ್ತು ದೇವಾಲಯಗಳಿಗೆ ವಿಶಿಷ್ಟಾದ್ವೈತದಲ್ಲಿ ವಿಶೇಷ ಸ್ಥಾನವಿದೆ. ವಿಶಿಷ್ಟಾದ್ವೈತವೆಂದರೆ ವಿಶಿಷ್ಟವಾದ ಅದ್ವೈತ. ಅವರ ಪ್ರಕಾರ ಬ್ರಹ್ಮವು ಅತ್ಯುನ್ನತ ಮತ್ತು ಸ್ವತಂತ್ರ ವಸ್ತು. ಜೀವ (ಚಿತ್) ಮತ್ತು ಪ್ರಕೃತಿ(ಅಚಿತ್) ಗಳು ಕೂಡ ಶಾಶ್ವತ ಸತ್ಯಗಳು, ಆದರೆ ಬ್ರಹ್ಮನನ್ನು ಆಧರಿಸಿದಂಥವು; ಅವನಲ್ಲಿ ಅವು ಸೇರಿವೆ. ಬ್ರಹ್ಮವೇ ಸರ್ವೇಶ್ವರ. ಸೃಷ್ಟಿ, ಸ್ಥಿತಿ, ಲಯಗಳಿಗೆ ಅದೇ (ಅವನೇ) ಕಾರಣ. ಜೀವಗಳು ಅಣುಗಾತ್ರದಲ್ಲಿದ್ದು ಅಪಾರ ಸಂಖ್ಯೆಯಲ್ಲಿರುತ್ತವೆ. ದೇಹದಿಂದ ಪ್ರತ್ಯೇಕವಾಗಿರುವ ಅವುಗಳಿಗೆ ಪ್ರಜ್ಞೆ ಇದೆ. ಮೋಕ್ಷ ಬಯಸುವವರು ಕರ್ಮ (ಕರ್ತವ್ಯ) ಮಾಡಬೇಕು. ಅದರಿಂದ ಮನಸ್ಸು ಶುದ್ಧವಾಗಿ ಜ್ಞಾನ-ಭಕ್ತಿಗಳ ಆಧ್ಯಾತ್ಮಿಕ ಮಾರ್ಗಕ್ಕೆ ನಾವು ಅರ್ಹರಾಗುತ್ತೇವೆ; ಅದರಲ್ಲಿ ಪ್ರಪತ್ತಿ ಅಥವಾ ಶರಣಾಗತಿ ಕೂಡ ಸೇರಿದೆ. ಭಕ್ತಿಯೋಗಕ್ಕಿಂತ ಪ್ರಪತ್ತಿ ಸುಲಭ. ಏಕೆಂದರೆ ಭಕ್ತಿಯೋಗದಲ್ಲಿ ಪ್ರಾರಬ್ಧಕರ್ಮವು ಮುಗಿಯಬೇಕೆನ್ನುವ ನಿರ್ಬಂಧವಿದೆ; ಪ್ರಪತ್ತಿಯಲ್ಲಿ ಹಾಗಿಲ್ಲ; ಅದು ಸುಲಭದ ಮುಕ್ತಜೀವಿಗಳು ನಾರಾಯಣನಿಗೆ ಸೇರಿದ ಪರಮಪದ ಅಥವಾ ವೈಕುಂಠದಲ್ಲಿರುತ್ತವೆ. ಶಾಶ್ವತವಾಗಿ ಅವನ ಜೊತೆ ಇರುವ ಅವು ಮತ್ತೆ ಈ ಪ್ರಪಂಚಕ್ಕೆ ಮರಳುವುದಿಲ್ಲ. “ನಾನು ದೇವರಲ್ಲ; ದೇವರಿಂದ ಬೇರೆಯೂ ಅಲ್ಲ; ನಾನು ದೇವರ ಅಂಶ” – ಹೀಗೆ ಈ ಪ್ರಸ್ಥಾನದಲ್ಲಿ ಜೀವಾತ್ಮ-ಪರಮಾತ್ಮರ ನಡುವೆ ವಿಶಿಷ್ಟವಾದ ಸಂಬಂಧವಿದೆ. ಅದೇ ವಿಶಿಷ್ಟಾದ್ವೈತ.
ದೇವಾಲಯಕ್ಕೆ ಮಹತ್ತ್ವ
ಭಕ್ತಿಪಾರಮ್ಯ ಮತ್ತು ಶರಣತತ್ತ್ವಗಳನ್ನು ರಾಮಾನುಜಾಚಾರ್ಯರು ಪ್ರತಿಪಾದಿಸಿದರು. ಅನೇಕ ದೇವಾಲಯಗಳನ್ನು ಕಟ್ಟಿಸಿ ಅವುಗಳನ್ನು ಶ್ರದ್ಧಾಕೇಂದ್ರಗಳಾಗಿ ಬೆಳೆಸಿದರು. ಅನೇಕ ದೇವಾಲಯಗಳ ಜೀರ್ಣೋದ್ಧಾರ ಮಾಡಿದರು; ಎಂಟು ಗ್ರಂಥಗಳನ್ನು ರಚಿಸಿದರು. ಅದರಲ್ಲಿ ಪ್ರಧಾನವಾದದ್ದು ಬ್ರಹ್ಮಸೂತ್ರಗಳಿಗೆ ಬರೆದ ಶ್ರೀಭಾಷೆ. ಉಳಿದವು ವೇದಾರ್ಥಸಂಗ್ರಹ (ವಿಶಿಷ್ಟಾದ್ವೈತ ಪಂಥದ ಪ್ರಕಾರ ಪ್ರಮುಖ ಉಪನಿ?ತ್ ವಾಕ್ಯಗಳ ಅರ್ಥ), ವೇದಾಂತದೀಪ ಮತ್ತು ವೇದಾಂತಸಾರ (ಬ್ರಹ್ಮಸೂತ್ರ ವ್ಯಾಖ್ಯಾನದ ಸಂಕ್ಷಿಪ್ತರೂಪ), ಭಗವದ್ಗೀತಾ ಭಾ?, ನಿತ್ಯಗ್ರಂಥ (ದೈನಿಕ ಆಚರಣೆಗಳ ಬಗ್ಗೆ ಮಾರ್ಗದರ್ಶನ) ಮತ್ತು ಗದ್ಯತ್ರಯ; ಅದರಲ್ಲಿ ಶರಣಾಗತಿಗದ್ಯ, ಶ್ರೀರಂಗಗದ್ಯ (ಸೇವಕನಾಗಿ ಸ್ವೀಕರಿಸುವಂತೆ ರಂಗನಾಥನಿಗೆ ಪ್ರಾರ್ಥನೆ) ಮತ್ತು ವೈಕುಂಠಗದ್ಯ(ವೈಕುಂಠದ ವರ್ಣನೆ)ಗಳು ಸೇರುತ್ತವೆ.
“ನಾನು ನರಕಕ್ಕೆ ಹೋದರೂ ಚಿಂತೆಯಿಲ್ಲ; ಜನರಿಗೆ ಮೋಕ್ಷ ಸಿಗಲಿ” ಎಂದು ಗುರುವಿನ ಆಜ್ಞೆಯನ್ನು ಮೀರಿ ಸಾಮಾನ್ಯಜನರಿಗೆ ಮಂತ್ರೋಪದೇಶವನ್ನು ಮಾಡಿದ ಕರುಣಾಮೂರ್ತಿ ಶ್ರೀ ರಾಮಾನುಜಾಚಾರ್ಯರು. ಅವರಿಗೆ ಮಂತ್ರೋಪದೇಶ (ಅಷ್ಟಾಕ್ಷರಿ) ನೀಡಿದ ಗೋಷ್ಠಿಪೂರ್ಣರು ಮಂತ್ರವನ್ನು ಗೌಪ್ಯವಾಗಿ ಇಡಬೇಕು; ಯಾರಿಗೂ ಬೋಧಿಸಬಾರದು ಎಂದು ವಿಧಿಸಿದ್ದರೂ ಕೂಡ ಜನಸಮೂಹವನ್ನು ಕಂಡ ರಾಮಾನುಜರು ದೇವಾಲಯದ ಗೋಪುರವನ್ನೇರಿ ಜನರಿಗೆ ಆ ಮಂತ್ರವನ್ನು ಬೋಧಿಸಿದರು. ಇದರಿಂದಾಗಿ ತಾನು ನರಕಕ್ಕೆ ಹೋದರೂ ಚಿಂತೆಯಿಲ್ಲ ಎಂಬುದು ಅವರ ನಿಲವಾಗಿತ್ತು. ಅವರ ಈ ಅಪಾರ ಕರುಣೆಯನ್ನು ಗುರುತಿಸಿದ ಸ್ವಾಮಿ ವಿವೇಕಾನಂದರು ಆಚಾರ್ಯರ ಆದರ್ಶವನ್ನು ಹೇಳುವಾಗ ಶಂಕರರ ಶಿರಸ್ (ಬುದ್ಧಿಮತ್ತೆ) ಮತ್ತು ರಾಮಾನುಜಾಚಾರ್ಯರ ಹೃದಯ ಎಂದು ಹೇಳಿದ್ದರು.
ಮೈಸೂರಿಗೆ ಆಗಮನ
ಕಾವೇರಿ ನದೀದಡದ ಶ್ರೀರಂಗದಲ್ಲಿ ಯಾಮುನಾಚಾರ್ಯರ ಉತ್ತರಾಧಿಕಾರಿಯಾಗಿ ಶ್ರೀವೈ?ವ ಮಠದ ಆಚಾರ್ಯರಾಗಿದ್ದ ಶ್ರೀ ರಾಮಾನುಜರಿಗೆ ಊರನ್ನು ಬಿಡಬೇಕಾದ ಸಂದರ್ಭ ಎದುರಾಯಿತು: ರಾಮಾನುಜರು ವಿವಾಹವಾಗಿದ್ದರಾದರೂ ಅವರಿಗೆ ೩೦ ವರ್ಷ ಆಗುವುದರೊಳಗೆ ವಿಚ್ಛೇದನವಾಗಿತ್ತು. ತಮ್ಮ ಪತ್ನಿಯು ಬ್ರಾಹ್ಮಣೇತರರಾದ ಕಾಂಚೀಪೂರ್ಣರಿಗೆ ಮನೆಯಲ್ಲಿ ಗೌರವ ಕೊಡಲಿಲ್ಲವೆಂದು ರಾಮಾನುಜರಿಗೆ ಬೇಸರವಾಗಿತ್ತು. ಪತ್ನಿಯ ಜೊತೆ ಹೊಂದಾಣಿಕೆ ಇಲ್ಲವಾಗಿತ್ತು. ಆಕೆಯ ಮನೋರಥವನ್ನು ತಿಳಿದ ಅವರು ಆಕೆಗೆ ಬೇಕಾದ ದ್ರವ್ಯಗಳನ್ನು ನೀಡಿ ತವರಿಗೆ ಕಳುಹಿಸಿದರು. ಲೌಕಿಕದ ಆಸೆ ತ್ಯಜಿಸಿ ಸಂನ್ಯಾಸ ಸ್ವೀಕರಿಸಿದರು; ’ಯತಿರಾಜ’ ಎಂದು ಅವರಿಗೆ ಹೆಸರಾಯಿತು. ಶ್ರೀವೈಷ್ಣವ ಯತಿಗಳಿಗೆ ಶಿಖೆ ಮತ್ತು ಜನಿವಾರಗಳನ್ನು ತೆಗೆಯಬೇಕೆಂದಿಲ್ಲ; ಅವರನ್ನು ’ಜೀಯರ್’ ಎನ್ನುತ್ತಾರೆ. ರಾಮಾನುಜರ ಶ್ರೀವೈಷ್ಣವ ಸಿದ್ಧಾಂತ ಪ್ರಚಾರ ಮತ್ತು ಅವರ ಶಿಷ್ಟಸಂಪತ್ತು ಬೆಳೆಯುತ್ತಾ ಹೋದುದನ್ನು ಕಂಡು ಅಸಹನೆಗೊಂಡ ರಾಜ ಕುಲೋತ್ತುಂಗ ಚೋಳ ಕ್ರಿ.ಶ. ೧೦೭೪ರಲ್ಲಿ ಶೈವಪಕ್ಷಪಾತಿಯಾಗಿ ವೈಷ್ಣವರ ನಿರ್ಮೂಲನದ ಉದ್ದೇಶದಿಂದ ದಾಳಿಯನ್ನೇ ನಡೆಸಿದ. ರಾಮಾನುಜರನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳುವುದು ಆತನ ಉದ್ದೇಶವಾಗಿತ್ತು. ಅದನ್ನರಿತ ಆಚಾರ್ಯರು ವೇಷ ಮರೆಸಿಕೊಂಡು ಚೋಳಮಂಡಲದಿಂದ ಮೇಲುನಾಡಿಗೆ (ಮೈಸೂರು ಪ್ರಾಂತ) ಬಂದರು. ಕನ್ನಡದ ನೆಲ ಅವರಿಗೆ ಆಶ್ರಯ ನೀಡಿತು. ಸತ್ಯಗಾಲ, ಸಾಲಿಗ್ರಾಮ, ರಾಮನಾಥಪುರ, ತೊಂಡನೂರು, ಮೇಲುಕೋಟೆ ಮುಂತಾದ ಕಡೆ ನೆಲಸಿದರು.
ಹೊಯ್ಸಳ ರಾಜ ಬಿಟ್ಟಿದೇವ ಅವರನ್ನು ಸ್ವಾಗತಿಸಿದ. ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಆಚಾರ್ಯರು ಈ ಭಾಗದಲ್ಲಿದ್ದರು. ಅದರಲ್ಲಿ ಹದಿನಾಲ್ಕು ವರ್ಷ ಮೇಲುಕೋಟೆಯಲ್ಲಿ ಕಳೆದರು ಎನ್ನಲಾಗಿದೆ. ಮೇಲುಕೋಟೆಯ ಚೆಲುವನಾರಾಯಣ ದೇವಾಲಯದ ಜೀರ್ಣೋದ್ಧಾರವನ್ನು ನೆರವೇರಿಸಿದರು. ಆ ಊರು ತಿರುನಾರಾಯಣಪುರ ಎನಿಸಿತ್ತು. ಚೆಲುವನಾರಾಯಣ ಹೊಯ್ಸಳ ನಾಡಿನ ದೈವವಾದ; ಮತ್ತು ಅದು ಕರ್ನಾಟಕದಲ್ಲಿ ಸಂಸ್ಕೃತಿಗೆ ಒಂದು ನೆಲೆಯಾಯಿತು.
ಚೆಲುವನಾರಾಯಣನು ಕ್ರಮೇಣ ಆಚಾರ್ಯರ ಶಿಷ್ಯವರ್ಗದಲ್ಲ? ಆರಾಧ್ಯದೈವವಾಗಿ ಉಳಿಯದೆ ಜಾನಪದರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿಹೋದ; ಚೆಲುವ, ಚೆನ್ನಿಗ, ಚೆಲುವರಾಯ ಇವೆಲ್ಲ ಹಳ್ಳಿಗರ ಹೆಸರುಗಳಾದವು. ಚೆಲುವನಾರಾಯಣನು ವಸ್ತುವಾದ ಅನೇಕ ಪದಗಳು ರಚನೆಗೊಂಡು ಕನ್ನಡ ಜಾನಪದದಲ್ಲಿ ಸೇರಿಹೋದವು. ಮೇಲುಕೋಟೆ, ತಿರುನಾಮ, ಚೆಲುವನಾರಾಯಣ ಮುಂತಾದವು ಸಮಾಜದ ಎಲ್ಲ ಸ್ತರಗಳಲ್ಲೂ ಬೆಳೆದವು.
ಶ್ರೀವೈಷ್ಣವರಿಗೆ ದಿವ್ಯದೇಶಗಳೆಂಬ ೧೦೮ ಪವಿತ್ರಕ್ಷೇತ್ರಗಳಿವೆ; ಅವು ಆಳ್ವಾರರು ಹೋಗಿ ದೇವರನ್ನು ಹಾಡಿ ಭಜಿಸಿದ ಕ್ಷೇತ್ರಗಳು. ತಮಿಳನಾಡು, ಆಂಧ್ರಪ್ರದೇಶ, ಕೇರಳವಲ್ಲದೆ ಉತ್ತರಭಾರತದಲ್ಲೂ ಅಂತಹ ಕ್ಷೇತ್ರಗಳಿವೆ; ಆದರೆ ಕರ್ನಾಟಕದಲ್ಲಿಲ್ಲ ಎನ್ನುವ ನೀಲತ್ತಹಳ್ಳಿ ಕಸ್ತೂರಿ ಅವರು, ಬಹುಶಃ ಆಳ್ವಾರರು ಇಲ್ಲಿಗೆ ಬಾರದಿದ್ದುದೇ ಇದಕ್ಕೆ ಕಾರಣವಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಆದರೆ ಮೇಲುಕೋಟೆಗೆ ವಿಶೇಷ ಮಹತ್ತ್ವ ಇದೆ. ಒಬ್ಬ ಶ್ರೀವೈಷ್ಣವನು ನೋಡಬೇಕಾದ ನಾಲ್ಕು ಮುಖ್ಯ ಕ್ಷೇತ್ರಗಳಲ್ಲಿ ಇದು ಸೇರಿದೆ; ’ಯದುಶೈಲ ದೀಪಮ್’ ಎಂದು ಇದನ್ನು ಹೆಸರಿಸಲಾಗಿದೆ. ಶ್ರೀರಂಗದ ರಂಗನಾಥ, ತಿರುಪತಿ(ತಿರುಮಲೆ)ಯ ಶ್ರೀನಿವಾಸ ಮತ್ತು ಕಂಚಿಯ ವರದರಾಜ ಶ್ರೀವೈಷ್ಣವರು ನೋಡಲೇಬೇಕಾದ ಆರಾಧ್ಯದೈವಗಳು.
ಹಳ್ಳಿಹಳ್ಳಿಗಳಲ್ಲಿ
ರಾಮಾನುಜಾಚಾರ್ಯರು ಕರ್ನಾಟಕವನ್ನು ಪ್ರವೇಶಿಸಿದ ಮೇಲೆ ಬಹುಬೇಗ ಅವರಿಗೆ ಇಲ್ಲಿಯ ಜನಾದರಣೆ ಮತ್ತು ರಾಜಮನ್ನಣೆಗಳು ದೊರೆತವು. ಜೈನಮತಾನುಯಾಯಿಯಾಗಿದ್ದ ಬಿಟ್ಟಿದೇವ ಆಚಾರ್ಯರ ಪ್ರಭಾವದಿಂದ ಶ್ರೀವೈಷ್ಣವನಾಗಿ ವಿಷ್ಣುವರ್ಧನನಾದ. ಅನೇಕ ದೇವಾಲಯಗಳು ನಿರ್ಮಾಣಗೊಂಡವು; ಮತ್ತ? ದೇವಾಲಯಗಳ ಜೀರ್ಣೋದ್ಧಾರಕಾರ್ಯ ನಡೆಯಿತು. ಉತ್ಸವಾದಿಗಳು ವ್ಯವಸ್ಥಿತಗೊಂಡವು. ಅಗ್ರಹಾರಾದಿಗಳು ನಿರ್ಮಾಣಗೊಂಡವು. ಹೊಯ್ಸಳ ಸೀಮೆಯಾದ ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು, ತುಮಕೂರು ಪ್ರದೇಶಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಶ್ರೀವೈಷ್ಣವ ಸಂಪ್ರದಾಯಕ್ಕೆ ಅನುಗುಣವಾದ ದೇವಾಲಯಗಳು ಸ್ಥಾಪನೆಯಾದವು. ಅದರಂತೆ ಬೇಲೂರು, ಸಾಲಿಗ್ರಾಮ, ಚುಂಚನಕಟ್ಟೆ, ನೊಣವಿನಕೆರೆ, ಸಂಪಿಗೆ, ದೇವರಾಯನದುರ್ಗ, ಮಳ್ಳೂರು, ಮದ್ದೂರು, ನುಗ್ಗೇಹಳ್ಳಿ, ತಲಕಾಡು, ಬಿಂಡಿಗನವಿಲೆ, ಹೆಡತಲೆ, ದೇವನೂರು, ಶಾಂತಿಗ್ರಾಮ, ಕಳಲೆ, ತೆರಕಣಾಂಬಿ, ತೊಂಡನೂರು, ಗೋಪಾಲಹಳ್ಳಿ, ವಿಘ್ನಸಂತೆ, ಶ್ರೀರಾಂಪುರ, ಆನೆಕನ್ನಂಬಾಡಿ, ನಾಗಮಂಗಲ, ಹಾರ್ನಹಳ್ಳಿ, ಭಿನ್ನಮಂಗಲ, ಭದ್ರಾವತಿ, ಯಲ್ಲಂಬಳಸೆ, ಬೆಳ್ಳೂರು, ಹರದನಹಳ್ಳಿ, ಅರಕೆರೆ – ಇಲ್ಲೆಲ್ಲ ಅಂದು ನಿರ್ಮಾಣಗೊಂಡ ಶ್ರೀವೈಷ್ಣವ ದೇವಾಲಯಗಳು ಇಂದಿಗೂ ಇವೆ. ಈ ದೇವಾಲಯಗಳ ವೈಶಿ?ವೆಂದರೆ ಅವುಗಳ ಶಿಲ್ಪಕಲೆ. ಅದನ್ನು ಸಾಮಾನ್ಯವಾಗಿ ಹೊಯ್ಸಳ ಶಿಲ್ಪಕಲೆ ಎಂದು ಗುರುತಿಸಲಾಗಿದ್ದು, ಆ ಮೂಲಕ ರಾಜ್ಯದ ವಿಶಿಷ್ಟ ಶಿಲ್ಪಕಲೆಗೆ ಶ್ರೀವೈ?ವ ಮತವು ಪೋ?ಣೆ ನೀಡಿತೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಬಿಟ್ಟಿದೇವನಲ್ಲದೆ ವಿಜಯನಗರದ ದೊರೆಗಳು ಮತ್ತು ಮೈಸೂರಿನ ಒಡೆಯರು ಕೂಡ ಶ್ರೀವೈಷ್ಣವ ಪಂಥದ ಅನುಯಾಯಿಗಳಾದರು ಮತ್ತು ರಾಮಾನುಜಾಚಾರ್ಯರ ಮತಪ್ರಚಾರ ಮತ್ತು ಸೇವಾಕಾರ್ಯಗಳಿಗೆ ಒತ್ತಾಸೆ ನೀಡಿದರು; ಹಲವರು ಶ್ರೀವೈಷ್ಣವರಾದರು. ಮುಂದೆ ವಿಜಯನಗರದ ಅಚ್ಯುತರಾಯ, ಕೃಷ್ಣದೇವರಾಯ, ರಾಮರಾಯ, ತಿರುಮಲರಾಯ ಮುಂತಾದವರು, ಮೈಸೂರಿನ ಯದುರಾಯ, ರಾಜ ಒಡೆಯ, ಕಂಠೀರವ ನರಸರಾಜ ಒಡೆಯ, ಚಿಕ್ಕದೇವರಾಜ ಒಡೆಯ ಮುಂತಾದವರು ಶ್ರೀವೈಷ್ಣವರಾಗಿ ಆಶ್ರಯ, ಪ್ರೋತ್ಸಾಹಗಳನ್ನು ನೀಡಿದರು. ಮೈಸೂರಿನ ಒಡೆಯರು ನೀಡಿದ ಉತ್ಸವಗಳು ಮೇಲುಕೋಟೆಯಲ್ಲಿ ಇಂದಿಗೂ ಪ್ರಚಲಿತವಿವೆ. ಅಲ್ಲಿನ ವೈರಮುಡಿ ಉತ್ಸವವಂತೂ ಇಡೀ ನಾಡಿನ ಒಂದು ಅದ್ಭುತ ಸಂದರ್ಭವೆನಿಸಿದೆ.
ಮೇಲುಕೋಟೆ ಚೆಲುವನಾರಾಯಣ ದೇವಾಲಯದ ಜೀರ್ಣೋದ್ಧಾರ ಮತ್ತು ಉತ್ಸವಮೂರ್ತಿಯಾದ ಶೆಲ್ವಪಿಳ್ಳೈ ಅಥವಾ ರಾಮಪ್ರಿಯನನ್ನು ದೆಹಲಿಯಿಂದ ತಂದು ಪ್ರತಿಷ್ಠಾಪಿಸುವಲ್ಲಿ ಅಂತ್ಯಜರು ಸಹಾಯ ಮಾಡಿದರು; ಕೆಸರಿನ ಆಳದಲ್ಲಿ ಹೂತುಹೋಗಿದ್ದ ವಿಗ್ರಹವನ್ನು ಹುಡುಕಿ ಮೇಲೆತ್ತಲು ನೆರವಾದರು. ಅದಕ್ಕಾಗಿ ಅವರನ್ನು ಶ್ರೀರಾಮಾನುಜರು ಶ್ರೀಕುಲತ್ತಾರ್ (ಶ್ರೀಕುಲದವರು) ಎಂದು ಗೌರವಿಸಿದರು; ಮಾತ್ರವಲ್ಲ, ಪ್ರತಿವರ್ಷ ಉತ್ಸವದ ವೇಳೆ ಮೂರುದಿನ ದೇವಳಕ್ಕೆ ಬಂದು ಸೇವೆ ಮಾಡಲು ಅವರಿಗೆ ಅವಕಾಶ ಕಲ್ಪಿಸಿದರು. ಇದು ಆ ಕಾಲಕ್ಕೆ ಅತ್ಯಂತ ಕ್ರಾಂತಿಕಾರಿಯಾದ ಒಂದು ನಡೆಯಾಗಿತ್ತು.
ಸ್ವಯಮಾಚಾರ್ಯರು
ರಾಮಾನುಜಾಚಾರ್ಯರ ಇನ್ನೊಂದು ಮಹತ್ತ್ವದ ಯೋಜನೆ ಸ್ವಯಮಾಚಾರ್ಯರ ಸಂಘಟನೆಗೆ ಸಂಬಂಧಿಸಿದ್ದು. ಸಾತ್ತ್ವಿಕ ಜನರು ನಾಡಿನ ವಿವಿಧ ಭಾಗಗಳಲ್ಲಿದ್ದು ಸಾಮಾನ್ಯಜನರಿಗೆ ಸನ್ಮಾರ್ಗವನ್ನು ತೋರುವುದೇ ಆ ವ್ಯವಸ್ಥೆ. ಅದಕ್ಕಾಗಿ ೭೪ ಮಂದಿ ಸಜ್ಜನ ಶಿಷ್ಯರನ್ನು ಆರಿಸಿ ವಿವಿಧ ಕಡೆ ಅವರನ್ನು ನೆಲೆಗೊಳಿಸಿದರು. ಅವರನ್ನು ಸಿದ್ಧಾಂತಪತಿಗಳೆಂದು ಕರೆಯುತ್ತಾರೆ. ಅವರು ಸ್ವಯಮಾಚಾರ್ಯರು.
ಆಚಾರ್ಯರ ಈ ಕ್ರಮದಿಂದಾಗಿ ವಿಶಿಷ್ಟಾದ್ವೈತ ಮತವು ಜನಸಾಮಾನ್ಯರ ನಡುವೆ ಕೂಡ ಹರಡಿತು. ಕಾಳಹಸ್ತಿಯಲ್ಲಿ ಆಶ್ರಯ ಪಡೆದಿದ್ದ ಶೈವರು ಮತ್ತೆ ಶ್ರೀವೈಷ್ಣವರಾದರು ಎಂದು ವಿದ್ವಾಂಸರಾದ ಡಾ| ಪಿ. ರಾಮಾನುಜ ಅವರು ವಿವರಿಸುತ್ತಾರೆ. ಆಚಾರ್ಯರ ಭಕ್ತಿಮಾರ್ಗ, ದೇವಾಲಯ ಪರಿಕಲ್ಪನೆ, ಉತ್ಸವಾದಿಗಳು ಸರ್ವಜನಪ್ರಿಯವಾದವು; ಶ್ರೀವೈಷ್ಣವ ಮತವು ಮೇಲ್ವರ್ಗದಿಂದ ಅಂತ್ಯಜರವರೆಗೂ ಹಬ್ಬಿತು.
ಆಳ್ವಾರರ ಮೂಲಕ ತಮಿಳುನಾಡಿನಲ್ಲಿ ಆರಂಭಗೊಂಡ ಭಕ್ತಿಪಂಥವು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಗುಜರಾತ್ಗಳಲ್ಲದೆ ಉತ್ತರಭಾರತದಲ್ಲೂ ಪಸರಿಸಿತು. ಮುಂದೆ ದೂರದ ಅಸ್ಸಾಮಿಗೂ ಹೋಯಿತು. ಪರಕೀಯ ಆಕ್ರಮಣಕ್ಕೆ ತಡೆಯೊಡ್ಡಿ ಆ?ಯ ಸಂಪ್ರದಾಯದ ಉಳಿವಿಗೆ ಬಹಳಷ್ಟು ಕಾರಣವಾಯಿತು. ತಮಿಳಿನ ಆಳ್ವಾರರು, ನಾಯನಮಾರರು, ಕನ್ನಡದ ಹರಿದಾಸರು, ಶಿವಶರಣರು, ಮಹಾರಾಷ್ಟ್ರ, ಗುಜರಾತ್ಗಳ ಸಂತರು, ನಾಮದೇವ, ತುಕಾರಾಮ, ಜ್ಞಾನದೇವ ಮುಂತಾದವರು, ಉತ್ತರದ ಕಬೀರದಾಸ್, ತುಲಸೀದಾಸ್, ಸೂರದಾಸ್, ಮೀರಾಬಾಯಿ ಮುಂತಾದ ಸಂತ-ಭಕ್ತರು, ಕೃಷ್ಣಚೈತನ್ಯ, ವಲ್ಲಭಾಚಾರ್ಯ, ಅಸ್ಸಾಮಿನ ಶಂಕರದೇವ ಮೊದಲಾದ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಶ್ರೀವೈಷ್ಣವರಿಂದ ಪ್ರೇರಣೆ ದೊರಕಿದೆ ಎಂದು ನೀಲತ್ತಹಳ್ಳಿ ಹೇಳುತ್ತಾರೆ.
ಸಮನ್ವಯದೃಷ್ಟಿ
ಕನ್ನಡ ಸಂಸ್ಕೃತಿಗೆ ವಿಶಿಷ್ಟಾದ್ವೈತವು ನೀಡಿದ ಕೊಡುಗೆ ಹಲವು ಬಗೆಯದ್ದು; ಅದರಲ್ಲಿ ಮುಖ್ಯವಾದದ್ದು ಸಮನ್ವಯದೃಷ್ಟಿ ಎಂದು ಗುರುತಿಸಲಾಗಿದೆ. ದ್ವೈತ- ಅದ್ವೈತಗಳು ಪರಸ್ಪರ ವಿರೋಧಿ ನಿಲವಿಗೆ ಅಂಟಿಕೊಂಡರೆ ವಿಶಿಷ್ಟಾದ್ವೈತವು ಎರಡರ ಅಂಶಗಳನ್ನೂ ಹೊಂದಿಸಿ, ಎರಡೂ ಆಗಿರದೆ ತನ್ನದೇ ಮಧ್ಯಮಮಾರ್ಗವನ್ನು ಹೊಂದಿದೆ. ಅದು ಹೇಳುವ ಆತ್ಮ-ಪರಮಾತ್ಮರ ಸಂಬಂಧದಲ್ಲಿ ಭಿನ್ನತೆ ಉಂಟು; ಏಕತೆಯೂ ಉಂಟು. ಅದರಲ್ಲಿ ದಾಸಭಾವವಿದೆ; ಇಹಪರಗಳ ಸಮನ್ವಯವಿದೆ. ಅದ್ವೈತದಂತೆ ಇಹವು ಮಾಯೆ, ಕ್ಷಣಿಕ ಎನ್ನುವುದಿಲ್ಲ; ಆದರೆ ಅದೇ ಶಾಶ್ವತ ಎಂದು ಕೂಡ ಹೇಳುವುದಿಲ್ಲ. ಇಹದಲ್ಲಿ ಕಾಲು, ಪರದಲ್ಲಿ ದೃಷ್ಟಿ ಎಂಬಂತಿದ್ದು, ಇಹಪರಗಳ ಸಮನ್ವಯವನ್ನು ಹೇಳುತ್ತದೆ. ಜ್ಞಾನ, ಕರ್ಮಗಳಷ್ಟೇ ಭಕ್ತಿಯೂ ಮುಖ್ಯ ಎಂದು ಪ್ರತಿಪಾದಿಸುತ್ತದೆ; ಇವು ವಿಶಿಷ್ಟಾದ್ವೈತದ ಮುಖ್ಯ ಲಕ್ಷಣಗಳು.
ಈ ಹೊಂದಾಣಿಕೆ, ಸಮನ್ವಯದ ಸ್ವಭಾವವನ್ನು ವಿಶಿಷ್ಟಾದ್ವೈತಿಗಳಲ್ಲಿ ಕಾಣಬಹುದು; ಅದಲ್ಲದೆ ಅವರ ವಿಷ್ಣುಭಕ್ತಿಯು ಅಪಾರವಾದ ವಿನಯಶೀಲತೆಯನ್ನೂ ಒಳಗೊಂಡಂಥದು. ಎಲ್ಲೇ ಇದ್ದರೂ ಅವರು ಭಾಷೆ ಮತ್ತು ದೇಶಾಚಾರಗಳ ವಿಚಾರದಲ್ಲಿ ಯಾವ ಘರ್ಷಣೆಗೂ ಹೋಗುವುದಿಲ್ಲ. ಅಲ್ಲಲ್ಲಿನ ವಾತಾವರಣದಲ್ಲಿ ಹೊಂದಿಕೊಳ್ಳುತ್ತಾರೆ; ಸೇರಿಕೊಳ್ಳುತ್ತಾರೆ. ಬಹುಶಃ ಅದೇ ಕಾರಣದಿಂದ ಕನ್ನಡಸಾಹಿತ್ಯ, ಸಂಸ್ಕೃತಿಗಳಿಗೆ ಅವರ ಬಹುದೊಡ್ಡ ಕೊಡುಗೆ ಸಂದಿದೆ. ಮೇಲುಕೋಟೆಯಲ್ಲಿದ್ದ ಜಿನಮಂದಿರಕ್ಕೆ ಚೆಲುವನಾರಾಯಣ ದೇವಾಲಯದಿಂದ ಕಾಣಿಕೆ ಸಲ್ಲಿಸಲು ಸ್ವತಃ ರಾಮಾನುಜಾಚಾರ್ಯರೇ ವ್ಯವಸ್ಥೆ ಮಾಡಿದ್ದರಂತೆ. ಅಂಥದ್ದೇ ಇನ್ನೊಂದು ಪ್ರಸಂಗ ವಿಜಯನಗರಕ್ಕೆ ಸಂಬಂಧಿಸಿದ್ದು. ಬುಕ್ಕರಾಯನ ಕಾಲದಲ್ಲಿ ಶ್ರೀವೈಷ್ಣವರಿಗೂ ಜೈನರಿಗೂ ಏನೋ ಒಂದು ವಿವಾದ ಉಂಟಾಗಿತ್ತು. ದೊರೆ ಬುಕ್ಕರಾಯ ಎರಡೂ ಕಡೆಯ ಮುಖ್ಯಸ್ಥರನ್ನು ಕರೆಯಿಸಿ ಪರಸ್ಪರ ಕೈಹಿಡಿದು ರಾಜಿ ಏರ್ಪಡಿಸಿದನಂತೆ.
ಆರಂಭದಿಂದ ಬಂದ ಗುಣವನ್ನು ವಿಶಿಷ್ಟಾದ್ವೈತವು ಆನಂತರವೂ ಮುಂದುವರಿಸಿತು. ಇದು ವೈದಿಕ ಬ್ರಾಹ್ಮಣರಿಗೆ ಸೀಮಿತವಲ್ಲ; ಇತರರಿಗೆ ಕೂಡ ವೈಷ್ಣವ ದೀಕ್ಷೆಗೆ ಅವಕಾಶವಿದೆ. ಆಳ್ವಾರರಲ್ಲಿ ನಾನಾ ವರ್ಣದವರಿದ್ದಾರೆ. ತಮಿಳುನಾಡಿನಲ್ಲಿ ದಿವ್ಯಪ್ರಬಂಧವನ್ನು ಹಾಡುವ ಎಲ್ಲ ಜಾತಿಯವರಿದ್ದಾರೆ. ಹೊಯ್ಸಳ ರಾಜರು ಮತ್ತು ಮೈಸೂರಿನ ಒಡೆಯರು ಹುಟ್ಟಿನಿಂದ ಬ್ರಾಹ್ಮಣರಲ್ಲವಾದರೂ ಶ್ರೀವೈಷ್ಣವ ದೀಕ್ಷೆಯನ್ನು ಪಡೆದಿದ್ದರು. ಶ್ರೀವೈ?ವರ ಉಪಾಸನೆ ಮತ್ತು ಆರಾಧನೆಗಳಲ್ಲೂ ಸಮನ್ವಯವಿದೆ. ವೈದಿಕರಲ್ಲಿ ಪೂಜೆ, ಆಚಾರಕಲ್ಪಗಳೆಲ್ಲ ಸಂಸ್ಕೃತದಲ್ಲಿರುತ್ತವೆ; ಮಂತ್ರವೆಲ್ಲ ಸಂಸ್ಕೃತ. ರಾಮಾನುಜಾಚಾರ್ಯರು ಸಂಸ್ಕೃತ ಮಂತ್ರ-ತಂತ್ರಗಳ ಜೊತೆಗೆ ಜನರ ಭಾಷೆ ತಮಿಳನ್ನು ಸೇರಿಸಿದರು. ತಮಿಳು ಆಳ್ವಾರ್ ಪ್ರಬಂಧಗಳ ಪಠನವಿಲ್ಲದೆ ಶ್ರೀವೈಷ್ಣವರ ಆರಾಧನೆ ಪೂರ್ಣಗೊಳ್ಳುವುದಿಲ್ಲ. ಸಂಸ್ಕೃತದ ಮಂತ್ರ-ತಂತ್ರಗಳನ್ನು ಬಳಸಿದರೂ ಕಿರೀಟಪ್ರಾಯವಾಗಿ ’ಶಾತ್ತುಮೊರೈ’ ಇರುತ್ತದೆ; ಅದೇ ಶರಣಾಗತಿ(ಪ್ರಪತ್ತಿಯ)ಯ ಸೂಚಕ. ದೇವಾಲಯಗಳಲ್ಲೂ ಅದೇ ಪದ್ಧತಿಯನ್ನು ಅನುಸರಿಸುತ್ತಾರೆ; ಮಾತ್ರವಲ್ಲ, ಯಾರಾದರೂ ತೀರಿಕೊಂಡಾಗ ವೈಕುಂಠ ಸಮಾರಾಧನೆಯ ವೇಳೆ ಕೂಡ ತಮಿಳು ಪ್ರಬಂಧದ ಪಾರಾಯಣವಿರುತ್ತದೆ.
ಶಿವಶರಣರ ಮೇಲೆ ಪ್ರಭಾವ
ಶ್ರೀವೈಷ್ಣವರ ಈ ಕ್ರಮ ಕನ್ನಡನಾಡಿನ ಶಿವಶರಣರ ಮೇಲೂ ಪ್ರಭಾವ ಬೀರಿರಬೇಕೆಂದು ಭಾವಿಸಲಾಗಿದೆ. ಅವರು ತಮ್ಮ ತತ್ತ್ವ-ಸಿದ್ಧಾಂತ ಪ್ರತಿಪಾದನೆಗೆ ಕನ್ನಡವನ್ನು ಬಳಸಿದರು. ಮಾಧ್ವರಲ್ಲೂ ದೇವರನಾಮಗಳನ್ನು ಹಾಡುವ ಕ್ರಮವನ್ನು ಕಾಣುತ್ತೇವೆ. ಭಕ್ತಿಗಾಗಿ ಅವರು ಎಲ್ಲರಿಗೂ ಬಾಗಿಲು ತೆರೆದರು; ಜೊತೆಗೆ ಜನರ ಭಾಷೆಯೂ ಬಂತು. ದಾಸಸಾಹಿತ್ಯದ ಉಗಮಕ್ಕೆ ದಿವ್ಯಪ್ರಬಂಧವು ಕಾರಣವಿರಬೇಕೆಂದು ಸೂಚಿಸುವ ಇನ್ನೊಂದು ಸಂದರ್ಭವೂ ಇದೆ. ದ್ವೈತ ಆಚಾರ್ಯರಾದ ಶ್ರೀಪಾದರಾಜರು ಕೆಲವು ಸಮಯ ಶ್ರೀರಂಗದ ರಂಗನಾಥ ದೇವಾಲಯದಲ್ಲಿದ್ದರು. ಅಲ್ಲಿ ದಿನವೂ ಹಾಡುತ್ತಿದ್ದ ಶಾತ್ತುಮೊರೈಯನ್ನು ಅವರು ಕೇಳುತ್ತಿದ್ದರು. ಅವರಲ್ಲಿ ಕುತೂಹಲ ಉಂಟಾಗಿ ಕನ್ನಡದಲ್ಲೂ ಅಂಥದ್ದೇ ಬರಬೇಕು ಅನ್ನಿಸಿ ದ್ವೈತ ಮತಾನುಯಾಯಿಗಳು ದಾಸರಾಗಿ ಕಾಣಿಸಿಕೊಂಡರು.
ಶ್ರೀವೈಷ್ಣವರು ವಿಗ್ರಹಾರಾಧನೆಗೆ ಬಹಳಷ್ಟು ಮಹತ್ತ್ವ ನೀಡುತ್ತಾ ಬಂದರು. ಅಂತಿಮವಾಗಿ ನಿರಾಕಾರ, ನಿರ್ಗುಣ ಉಪಾಸನೆಯನ್ನು ಅವರು ಒಪ್ಪಿಕೊಳ್ಳುತ್ತಾರಾದರೂ ದೇವಾಲಯಗಳು ವಿಶಿಷ್ಟಾದ್ವೈತ ಸಂಸ್ಕೃತಿಯ ಮುಖ್ಯ ನೆಲೆಗಳಾಗಿವೆ. ದೇವಾಲಯಗಳ ಜೀರ್ಣೋದ್ಧಾರ, ಪ್ರತಿಷ್ಠಾಪನೆ, ಪೂಜಾವ್ಯವಸ್ಥೆ, ಉತ್ಸವಾದಿಗಳು – ಈ ಆಗಮಕಾರ್ಯ- ಕೈಂಕರ್ಯಗಳ ಕ್ರೋಡೀಕರಣವು ರಾಮಾನುಜಾಚಾರ್ಯರ ಒಂದು ದೊಡ್ಡ ಸಾಧನೆಯಾಗಿದೆ. ದೇವಾಲಯವು ಸುಂದರವಾಗಿರಬೇಕು; ಅದು ಸಾಕ್ಷಾತ್ ವೈಕುಂಠದ ಪ್ರತೀಕ, ಭಗವಂತನ ನೆಲೆ. ಅದರ ಶಿಲ್ಪವಿನ್ಯಾಸ, ಅಲಂಕಾರ, ಹಾಡು-ಹಸೆ, ಹಬ್ಬ ಎಲ್ಲವೂ ವೈಕುಂಠಸದೃಶ. ಮೇಲಾಗಿ ವಿ? ಅಲಂಕಾರಪ್ರಿಯ. ಶ್ರೀವೈಷ್ಣವ ದೇವಾಲಯಗಳಲ್ಲಿ ಆ ಚೆಲುವು, ಅಲಂಕಾರಗಳು ಎದ್ದುಕಾಣುತ್ತವೆ. ಜನರ ಮನಸ್ಸನ್ನು ಸೆಳೆಯುವಲ್ಲಿ ಅವೂ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲಿನ ಪ್ರಸಾದಗಳು ಕೂಡ ಹಾಗೇ. ಕೇವಲ ಸಾಂಕೇತಿಕವಲ್ಲ; ಶುಚಿ-ರುಚಿ ಪದಾರ್ಥಗಳು, ಪುಳಿಯೋಗರೆ, ಪೊಂಗಲ್, ಸಕ್ಕರೆಪೊಂಗಲ್, ತುಣಿತೇಂಗೊಳಲು, ಮನೋಹರ, ಸಜ್ಜಪ್ಪ, ಕ್ಷೀರಾನ್ನ, ಪುಳಿವಿಳಂಗಾಯ ಮುಂತಾದವು ದೇವಾಲಯದಲ್ಲಿ ಪ್ರಸಾದವಾಗಿ ನೀಡಲಾಗುವ ಅಯ್ಯಂಗಾರ್ ವಿಶೇಷಗಳು.
ಮಠಸ್ಥಾಪನೆ
ಭಾರತೀಯ ಸಂಸ್ಕೃತಿಯಲ್ಲಿ ಹಿಂದೆ ಮಠಗಳು ಇರಲಿಲ್ಲ. ಜೈನರು ಮತ್ತು ಬೌದ್ಧರಿಂದ ಮಠಗಳು ಆರಂಭಗೊಂಡವು. ಶಂಕರಾಚಾರ್ಯರು ಮಠಗಳ ಅಗತ್ಯವನ್ನು ಮನಗಂಡು ಮಠಗಳನ್ನು ಸ್ಥಾಪಿಸಿದರು. ಆನಂತರ ಬಂದ ರಾಮಾನುಜಾಚಾರ್ಯರು ಮಠ ಕಟ್ಟಲಿಲ್ಲ. ಆಗ ಶ್ರೀರಂಗದಲ್ಲಿ ಆಚಾರ್ಯ ಸ್ಥಾನವಿತ್ತು. ಅವರ ನೂರು ವರ್ಷಗಳ ಬಳಿಕ ವೇದಾಂತದೇಶಿಕರ ಶಿಷ್ಯರ ಕಾಲದಲ್ಲಿ ಮಠ ಅಸ್ತಿತ್ವಕ್ಕೆ ಬಂತು. ಬ್ರಹ್ಮತಂತ್ರಸ್ವತಂತ್ರ ಜೀಯರ್ ಅವರ ಕಾಲದಲ್ಲಿ ಕಂಚಿಯಲ್ಲಿ ಮೊದಲ ಶ್ರೀವೈಷ್ಣವ ಮಠ ಸ್ಥಾಪನೆಗೊಂಡಿತು. ಮೈಸೂರಿನಲ್ಲಿ ಸ್ಥಾಪನೆಗೊಂಡ ಪರಕಾಲ ಮಠಕ್ಕೆ ಮೈಸೂರಿನ ಒಡೆಯರ ಆಶ್ರಯ ದೊರೆಯಿತು. ರಾಮಾನುಜಾಚಾರ್ಯರು ಪೂಜಿಸಿದ ಹಯಗ್ರೀವ ವಿಗ್ರಹವು ಪರಕಾಲ ಮಠದ ಆರಾಧ್ಯದೈವವಾಗಿದೆ; ಮೇಲುಕೋಟೆಯಲ್ಲಿ ಶ್ರೀಯತಿರಾಜ ಮಠವಿದೆ.
ಸಾಮಾಜಿಕ ಕಾರ್ಯಗಳಿಗೆ ಮಹತ್ತ್ವ ನೀಡಿದ ರಾಮಾನುಜಾಚಾರ್ಯರು ಕೆರೆನಿರ್ಮಾಣದಂತಹ ಜನೋಪಯೋಗಿ ಕೆಲಸಗಳನ್ನೂ ಮಾಡಿದ್ದಾರೆ. ಮೇಲುಕೋಟೆ ಸಮೀಪದ ತೊಂಡನೂರಿನ ಕೆರೆ ಅದಕ್ಕೊಂದು ಉದಾಹರಣೆ. ಶ್ರೀವೈಷ್ಣವ ದೀಕ್ಷೆಯನ್ನು ಸ್ವೀಕರಿಸಿದ ಮೈಸೂರಿನ ಚಿಕ್ಕದೇವರಾಜ ಒಡೆಯರು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು; ’ಚಿಕ್ಕದೇವರಾಯ ಬಿನ್ನಪ’ ಎಂಬ ಶರಣಾಗತಿತತ್ತ್ವಪ್ರತಿಪಾದಕ ಕೃತಿ ಮತ್ತು ’ಗೀತಗೋಪಾಲ’ ಎಂಬ ಕಾವ್ಯಪ್ರಬಂಧವನ್ನು ಆತ ರಚಿಸಿದ್ದಾರೆ. ಆತನ ಆಸ್ಥಾನದಲ್ಲಿದ್ದ ಚಿಕುಪಾಧ್ಯಾಯ ’ದಿವ್ಯಸೂರಿ ಚರಿತೆ’ ಇತ್ಯಾದಿ ವಿಶಿ?ದ್ವೈತಪರ ಗ್ರಂಥಗಳ ಕರ್ತೃವಾದರೆ ಸಿಂಗರಾರ್ಯ ಕನ್ನಡದ ಮೊದಲ ನಾಟಕ(ಮಿತ್ರವಿಂದಾ ಗೋವಿಂದ)ವನ್ನು ರಚಿಸಿದ. ’ಜೈಮಿನಿ ಭಾರತ’ ಬರೆದ ಕವಿ ಲಕ್ಷ್ಮೀಶ, ಬೇಲೂರು ವೈಕುಂಠದಾಸ, ಅನ್ನಮಾಚಾರ್ಯ, ಕನಕದಾಸ ಇವರೆಲ್ಲ ಶೀವೈಷ್ಣವ ದೀಕ್ಷೆ ಪಡೆದವರು; ಪ್ರಭಾವಕ್ಕೊಳಗಾದವರು. ವೈಕುಂಠದಾಸರು ಕನಕದಾಸರಿಗೆ ಗುರುಗಳಷ್ಟೇ ಅಲ್ಲ; ಸೋದೆಮಠದ ವಾದಿರಾಜಸ್ವಾಮಿಗಳು ಕೂಡ ವೈಕುಂಠದಾಸರ ಭಕ್ತಿ, ಆಧ್ಯಾತ್ಮಿಕ ಸಾಧನೆಗೆ ಬೆರಗಾಗಿದ್ದರಂತೆ. ವೈಕುಂಠದಾಸರ ಭಕ್ತಿ ಮತ್ತು ವ್ಯಕ್ತಿತ್ವಗಳು ಅನೇಕ ಶ್ರೀವೈ?ವ ಹರಿದಾಸರಿಗೆ ಸ್ಫೂರ್ತಿ ನೀಡಿರಬೇಕೆಂದು ನಂಬಲಾಗಿದೆ.
ಕನಕದಾಸರು
ಕನಕದಾಸರು ತಮ್ಮ ಕೀರ್ತನೆ ಮತ್ತು ಕಾವ್ಯಗಳಲ್ಲಿ ಶ್ರೀರಾಮಾನುಜರ ಪ್ರಪತ್ತಿಮಾರ್ಗವನ್ನು ಧ್ವನಿಸಿದ್ದಾರೆ. ಬೇಲೂರು ವೈಕುಂಠದಾಸರಲ್ಲದೆ ರಾಮಾನುಜರನ್ನು ಮತ್ತು ಕೃಷ್ಣದೇವರಾಯನ ರಾಜಗುರುವಾಗಿದ್ದ ತಿಳುಮಲೈ ತಾತಾಚಾರ್ಯರನ್ನು ಕೂಡ ಆತ ಗುರುಸ್ಥಾನದಲ್ಲಿರಿಸಿ ಸ್ತುತಿಸಿದ್ದನ್ನು ಕಾಣಬಹುದು. ಕನಕದಾಸರ ಸಾಹಿತ್ಯದಲ್ಲಿ ಶ್ರೀವೈಷ್ಣವ ಪರಿಭಾಷೆಯನ್ನು ಕೂಡ ಗುರುತಿಸಲಾಗಿದೆ.
ಕನ್ನಡದ ನವೋದಯಪೂರ್ವ, ನವೋದಯ ಕಾಲದಿಂದ ಆರಂಭಿಸಿ ಹೊಸಯುಗದ ಸಾಹಿತ್ಯದ ಮೊದಲಿಗರಲ್ಲಿ ತುಂಬ ಜನ ಶ್ರೀವೈ?ವರಿದ್ದಾರೆ. ಅವರು ಎಷ್ಟುಮಟ್ಟಿಗೆ ಈ ನೆಲದ ಭಾಷೆ-ಸಂಸ್ಕೃತಿಗಳಲ್ಲಿ ಸೇರಿಹೋಗಿದ್ದಾರೆಂದರೆ ಅವರನ್ನು ಅನ್ಯಭಾಷಿಕರೆಂದು ಗುರುತಿಸುವುದು ಅಪಚಾರ ಎಸಗಿದಂತೆ ಎನಿಸುತ್ತದೆ. ಮಾಸ್ತಿಯವರು, ಪು.ತಿ.ನ. – ಇವರನ್ನೆಲ್ಲ ಕನ್ನಡಿಗರಲ್ಲವೆಂದು ಹೇಳಲು ಯಾರಿಗೆ ತಾನೇ ಸಾಧ್ಯ? ಈ ಗುಣ ಶ್ರೀರಾಮಾನುಜರ ವಿಶಿಷ್ಟಾದ್ವೈತದಲ್ಲೇ ಇದೆ ಎಂದು ಹೇಳಬೇಕಷ್ಟೆ.
ತಮ್ಮ ’ಕನ್ನಡಸಾಹಿತ್ಯ ಚರಿತ್ರೆ’ಯಲ್ಲಿ ರಂ.ಶ್ರೀ. ಮುಗಳಿ ಅವರು “ಕನ್ನಡದಲ್ಲಿ ಶ್ರೀವೈಷ್ಣವ ತತ್ತ್ವ, ಮತ ಮತ್ತು ಸಂಪ್ರದಾಯಗಳನ್ನು ತಿಳಿಸಿ ಹೇಳುವ ಪ್ರೌಢ ಮತ್ತು ಸುಲಭಸಾಹಿತ್ಯವು ಕುಮಾರವ್ಯಾಸಯುಗದ ಉತ್ತರಾರ್ಧದಲ್ಲಿ ಕೆಲವು ಕವಿಗಳಿಂದ ವಿಪುಲವಾಗಿ ನಡೆಯಿತು” ಎಂದು ಗುರುತಿಸಿದ್ದಾರೆ. “೧೭ನೇ ಶತಮಾನದವರೆಗೆ ಚಂಪೂವಿನ ಪುನರುಜ್ಜೀವನ ಪ್ರಯತ್ನದಲ್ಲಿ ಅವರು ವೀರಶೈವ ಕವಿಗಳೊಂದಿಗೆ ಸಹಕರಿಸಿದರು. ರಾಮಾನುಜಾಚಾರ್ಯ ಮತದಲ್ಲಿನ ವರ್ಣವ್ಯವಸ್ಥೆಯನ್ನು ಸಮನ್ವಯಗೊಳಿಸಿದ ಸಮಾನಭಾವ ಮತ್ತು ಉಭಯವೇದಾಂತಗಳು ಕನ್ನಡನಾಡಿನಲ್ಲಿ ವೈದಿಕ-ಅವೈದಿಕ ಮತಪಂಥಗಳ ಮಂಥನದಿಂದ ಹೊರಪಟ್ಟ ಸಮನ್ವಯದ ಗುರುತುಗಳು. ಸಮಷ್ಟಿಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯಗಳ ವೈಲಕ್ಷಣ್ಯಗಳನ್ನು ಇವು ಎತ್ತಿ ತೋರಿಸುತ್ತವೆ” ಎಂದವರು ಹೇಳಿದ್ದಾರೆ.
ಸುಮಾರು ಇಪ್ಪತ್ತೆರಡು ವರ್ಷ ಕನ್ನಡದ ನೆಲದಲ್ಲಿದ್ದ ರಾಮಾನುಜಾಚಾರ್ಯರು ಕುಲೋತ್ತುಂಗ ಚೋಳನ ಅವಸಾನದ ಬಳಿಕ ಶ್ರೀರಂಗಂಗೆ ಮರಳಿದರು. ೧೨೦ ವರ್ಷಗಳ ತುಂಬುಜೀವನವನ್ನು ಮುಗಿಸಿ ಅಸ್ತಂಗತರಾದರು. ಇಲ್ಲಿ ಅವರು ಇದ್ದುದು ಕೇವಲ ಎರಡು ದಶಕಗಳಾದರೂ ಬೀರಿದ ಪ್ರಭಾವ ಶತಮಾನಗಳ ಕಾಲ ಮುಂದುವರಿದಂಥದ್ದು. ಈ ನಾಡಿನ ಜನಜೀವನ, ಸಂಸ್ಕೃತಿ, ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ಕೂಡ ನಾವು ಆ ಯತಿರಾಜರಿಗೆ ಕೃತಜ್ಞರಾಗಿರಬೇಕು.