ಹತ್ತನೆಯ ಶತಮಾನದ ವೇಳೆಗೆ ಅದ್ವೈತಪಂಥದ ವಿಕೃತಾಭಾಸಗಳೂ ಭಕ್ತಿಮಾರ್ಗದ ಬಗೆಗೆ ತಿರಸ್ಕಾರಗಳೂ ಹುಟ್ಟಿಕೊಂಡಿದ್ದ ಪರಿಸರದಲ್ಲಿ ಅದ್ವೈತದರ್ಶನಕ್ಕೂ ಭಕ್ತಿಸಾಧನೆಗೂ ವಿರೋಧವಿಲ್ಲವೆಂದು ಸಾರಿದ ಅವತಾರಪುರುಷರು, ಶ್ರೀರಾಮಾನುಜರು. ವಿಶಿಷ್ಟಾದ್ವೈತವೆಂಬ ಸಮನ್ವಯಮಾರ್ಗದಲ್ಲಿ ಆಚಾರ್ಯರು ವೇದೋಪನಿಷತ್ಸಾಹಿತ್ಯವನ್ನು ಮಾತ್ರವಲ್ಲದೆ ದ್ರಾವಿಡ ಅನುಭಾವಿಗಳ ಪ್ರಬಂಧವಾಙ್ಮಯವನ್ನೂ ವ್ಯಾಪಕವಾಗಿ ಬಳಸಿಕೊಂಡು ಪ್ರಸಿದ್ಧರಾದರು.
ಭಕ್ತರ ಹೃದಯವೇ ದೇವರ ದಿವಾನಖಾನೆ ಎಂದು ಶ್ರೀರಾಮಕೃ?ರು ಒಮ್ಮೆ ವರ್ಣಿಸಿದ್ದರು. ನಾನು ಪತಿತ, ಅನುಕಂಪಾರ್ಹ – ಎಂಬ ನಮ್ರತೆ ಸಾಧನೆಯ ಆರಂಭದಶೆಯಲ್ಲಿ ಉಪಯುಕ್ತವೆನಿಸಿದರೂ, ಪರಿಪಕ್ವದಶೆಯ ಭಕ್ತಿ ಎಷ್ಟು ಜ್ವಲಂತವೂ ಗಾಢವೂ ಆಗಿರುತ್ತದೆಂದರೆ, “ಹರಿಯ ಹೆಸರನ್ನು ಉಚ್ಚರಿಸಿರುವ ನಾನು ಪಾಪಿ ಹೇಗಾದೇನು?” – ಎಂಬ ಸ್ವಾತ್ಮವಿಶ್ವಾಸ ಹೊಮ್ಮುತ್ತದಂತೆ. ಅನನ್ಯಭಕ್ತಿ, ಅಹಂಕಾರವಿಲಯನ, ಶರಣಾಗತಿ ಮೊದಲಾದವು ಒಂದೇ ಆಶಯದ ವಿವಿಧ ಶಬ್ದಗಳು. ಪಾರಿಭಾಷಿಕವಾಗಿ ’ಪ್ರಪತ್ತಿ’ ಎಂದು ವಿಶೇಷಿಸಿರುವ ಈ ಭಕ್ತಿಮಾರ್ಗವನ್ನು ತಮ್ಮ ದರ್ಶನದಲ್ಲಿಯೂ ಜೀವಿತದಲ್ಲಿಯೂ ಪ್ರವರ್ತನೆಮಾಡಿದ ಮಹನೀಯರು, ಭಗವದ್ರಾಮಾನುಜರು (ಕ್ರಿ.ಶ. ೧೦೧೭- ೧೧೩೭). ಪರಮಾತ್ಮಪ್ರಾಪಕವಾದ ಈ ಭಕ್ತಿಯು ಭಾವಾವೇಶವುಳ್ಳದ್ದಾದರೂ ವಿಚಾರಶೂನ್ಯವಾದದ್ದಲ್ಲವೆಂಬುದು ಆಚಾರ್ಯರ “ಸ್ನೇಹಪೂರ್ವಕ ಅನುಧ್ಯಾನ” ಮುಂತಾದ ಲಕ್ಷಣನಿರ್ದೇಶದಿಂದ ಸ್ಪಷ್ಟವಿದೆ. ಶುದ್ಧಾದ್ವೈತ ಪ್ರವರ್ತಕರಾದ ವಲ್ಲಭಾಚಾರ್ಯರು ಇದನ್ನೇ ’ಮಹತ್ತ್ವಜ್ಞಾನಪೂರ್ವಕ ಪರಾನುರಕ್ತಿ” ಎಂದು ಪರಿಸ್ಫುಟಗೊಳಿಸಿದ್ದಾರೆ.
ದ್ರಾವಿಡ ಅನುಭಾವಿಗಳು
ಏಳು-ಎಂಟನೇ ಶತಾಬ್ದದಷ್ಟು ಹಿಂದೆಯೇ ಶಂಕರಭಗವತ್ಪಾದರು ಆಗ ವಿಜೃಂಭಿಸುತ್ತಿದ್ದ ನಾಸ್ತಿಕ ಮತಗಳನ್ನು ಅಣಗಿಸಿ ವೇದಾಂತದರ್ಶನದ ದುಂದುಭಿಯನ್ನು ಮೊಳಗಿಸಿದ್ದರೂ, ಹತ್ತನೆಯ ಶತಮಾನದ ವೇಳೆಗೆ ಅದ್ವೈತಪಂಥದ ವಿಕೃತಾಭಾಸಗಳೂ ಭಕ್ತಿಮಾರ್ಗದ ಬಗೆಗೆ ತಿರಸ್ಕಾರಗಳೂ ಹುಟ್ಟಿಕೊಂಡಿದ್ದವು. ಆ ಪರಿಸರದಲ್ಲಿ ಅದ್ವೈತದರ್ಶನಕ್ಕೂ ಭಕ್ತಿಸಾಧನೆಗೂ ವಿರೋಧವಿಲ್ಲವೆಂದು ಸಾರಿದ ಅವತಾರ ಪುರುಷರು, ಶ್ರೀರಾಮಾನುಜರು. ವಿಶಿಷ್ಟಾದ್ವೈತವೆಂಬ ಹೆಸರನ್ನು ಪಡೆದ ತಮ್ಮ ಸಮನ್ವಯಮಾರ್ಗದಲ್ಲಿ ಆಚಾರ್ಯರು ವೇದೋಪನಿಷತ್ಸಾಹಿತ್ಯವನ್ನು ಮಾತ್ರವಲ್ಲದೆ ದ್ರಾವಿಡ ಅನುಭಾವಿಗಳ ಪ್ರಬಂಧವಾಙ್ಮಯವನ್ನೂ ವ್ಯಾಪಕವಾಗಿ ಬಳಸಿಕೊಂಡು ’ಉಭಯವೇದಾಂತಪ್ರವರ್ತಕ’ರೆಂದೂ ’ದರ್ಶನಸ್ಥಾಪಕಾಚಾರ್ಯ’ರೆಂದೂ ಪ್ರಸಿದ್ಧರಾದರು.
ಬೌದ್ಧರೂ ಜೈನರೂ ದೇಶಭಾಷೆಗಳನ್ನು ಪ್ರಚಾರಮಾಧ್ಯಮವಾಗಿ ಬಳಸಿಕೊಂಡು ಜನಪ್ರಿಯತೆ ಗಳಿಸಿದರು. ದಕ್ಷಿಣಭಾರತದ ಶೈವಸಂತರು ದ್ರಾವಿಡಭಾಷೆಯ ಮೂಲಕ ಜನತೆಯಲ್ಲಿ ಧಾರ್ಮಿಕ ಉತ್ಸಾಹವನ್ನು ಪ್ರಚೋದಿಸಿದರು. ಆದದ್ದರಿಂದ ಶ್ರೀವೈಷ್ಣವರೂ ತಮ್ಮ ಸಿದ್ಧಾಂತದ ಪೋಷಣೆಗಾಗಿ ಆಳ್ವಾರ್ಸಂತರ ತಮಿಳು ಪ್ರಬಂಧಗಳನ್ನು ಬಳಸಿದ್ದು ಸಹಜ. ಪೊಯ್ಗೈಯಾಳ್ವಾರ್, ಪೇಯಾಳ್ವಾರ್, ನಮ್ಮಾಳ್ವಾರ್ ಕುಲಶೇಖರಾಳ್ವಾರ್, ಪೆರಿಯಾಳ್ವಾರ್, ತಿರುಪ್ಪಾಣಾಳ್ವಾರ್ ಮುಂತಾದ ಆಳ್ವಾರುಗಳು ಶ್ರೀವೈಷ್ಣವಪಂಥದ ಮೂಲಪ್ರವರ್ತಕರೆನ್ನಬಹುದು. ಶ್ರೀರಾಮಾನುಜರ ನೇರ ಗುರುಪರಂಪರೆಯವರಾದ ನಾಥಮುನಿಗಳೂ ಯಾಮುನಾಚಾರ್ಯರೂ ಆಳ್ವಾರುರುಗಳಿಗಿಂತ ಈಚಿನವರು. ವಿದ್ವಾಂಸರೂ, ಶಾಸ್ತ್ರನಿಷ್ಠರೂ ಆದ ಆಚಾರ್ಯರಿಗಿಂತ ಅನುಭಾವಿಗಳಾದ ಆಳ್ವಾರ್ಸಂತರ ಸ್ಥಾನವು ಶ್ರೀವೈಷ್ಣವ ಪ್ರಕ್ರಿಯೆಯಲ್ಲಿ ಹಿರಿಯದೆನ್ನಬಹುದು. ಶಠಕೋಪ, ವಕುಳಾಭರಣ ಮುಂತಾದ ನಾಲ್ಕಾರು ಹೆಸರುಗಳನ್ನು ಪಡೆದವರೂ ವಿಷ್ವಕ್ಸೇನನ ಅವತಾರವೆಂದು ಪರಿಗಣಿತರೂ ತಿರುವಾಯ್ಮೊಳಿ ಮುಂತಾದ ಪ್ರಬಂಧಗಳ ಪ್ರಣೇತರೂ ಆದ ನಮ್ಮಾಳ್ವಾರರು ಹುಟ್ಟಿನಿಂದ ಚತುರ್ಥವರ್ಣದವರೆಂದು ಪ್ರತೀತಿ.
ಜಾತ್ಯತೀತ
ಜ್ಞಾನಿಯನ್ನು ಜಾತಿಭೇದಗಳೂ ಉಚ್ಚನೀಚಾದಿ ಭೇದಗಳೂ ಬಾಧಿಸವೆಂದು ರಾಮಾನುಜರ ನೂರಿಪ್ಪತ್ತು ವರ್ಷಗಳ ಜೀವನದ ನಾಲ್ಕಾರು ಪ್ರಸಂಗಗಳು ನಿದರ್ಶನಪಡಿಸಿವೆ. ಆಚಾರ್ಯ ಕಾಂಚಿಪೂರ್ಣರು ಬ್ರಾಹ್ಮಣರಲ್ಲದಿದ್ದರೂ ಅವರು ಬ್ರಹ್ಮನಿಷ್ಠರಾಗಿದ್ದುದರಿಂದ ಅವರ ಶೇಷ್ಠಪ್ರಸಾದವನ್ನು ಸ್ವೀಕರಿಸಲು ರಾಮಾನುಜರು ಪರಮೋತ್ಸಾಹವುಳ್ಳವರಾಗಿದ್ದರು. ತಮ್ಮ ಹೆಂಡತಿ ರಕ್ಷಕಾಂಬೆ ತಮ್ಮ ಗುರುಗಳಾದ ಮಹಾಪೂರ್ಣರು ಕೀಳುಜಾತಿಯವರೆಂದು ಹಂಗಿಸಿದ್ದನ್ನು ಸಹಿಸಲಾರದೆ ಪತ್ನಿಯನ್ನು ತವರುಮನೆಗೆ ಕಳಿಸಿ ರಾಮಾನುಜರು ಸಂನ್ಯಾಸಾಶ್ರಮ ಸ್ವೀಕರಿಸಿದರೆಂದು ಕಥೆಯುಂಟು. ಲೋಕವನ್ನೆಲ್ಲ ವಾತ್ಸಲ್ಯದಿಂದ ಕಾಣುತ್ತಿದ್ದ ರಾಮಾನುಜರನ್ನು ಮನು?ಸಹಜವಾದ ಸಂಕುಚಿತ ಪ್ರವೃತ್ತಿಗಳು ಬಾಧಿಸಲಿಲ್ಲ.
ತಿರುಕ್ಕೋಟ್ಟಿಯೂರಿನಲ್ಲಿದ್ದ ಗೋಷ್ಠಿಪೂರ್ಣರಲ್ಲಿಗೆ ರಹಸ್ಯಮಂತ್ರೋಪದೇಶಕ್ಕಾಗಿ ರಾಮಾನುಜರು ಹೋದರು. ಉಪದೇಶಮಾಡಲು ಗೋಷ್ಠಿಪೂರ್ಣರು ಮೊದಮೊದಲು ಒಪ್ಪಲಿಲ್ಲ. ಆದರೆ ರಾಮಾನುಜರು ಉಪದೇಶಾರ್ಹರೆಂದು ಶ್ರೀರಂಗನಾಥಸ್ವಾಮಿಯು ಆದೇಶವಿತ್ತಮೇಲೆ ಗೋಷ್ಠಿಪೂರ್ಣರು ಒಪ್ಪಿ, ರಾಮಾನುಜರನ್ನು ಬರಮಾಡಿಕೊಂಡರು. “ಈ ದಿವ್ಯ ಮಂತ್ರದ ಮಹಿಮೆಯು ಭಗವಂತನ ಅನುಗ್ರಹವಿಲ್ಲದೆ ಗೋಚರವಾಗದು. ನಿನಗೆ ಯೋಗ್ಯತೆ ಇರುವುದರಿಂದ ಉಪದೇಶಿಸುತ್ತಿದ್ದೇನೆ. ನೀನು ಈ ರಹಸ್ಯಮಂತ್ರವನ್ನು ಬೇರೆ ಯಾರಿಗೂ ಹೇಳಕೂಡದು; ಹೇಳಿದ್ದೇ ಆದರೆ ನಿನಗೆ ನರಕವಾಸ ದೊರೆಯುತ್ತದೆ” ಎಂದು ಎಚ್ಚರಿಸಿ, ರಾಮಾನುಜರಿಂದ ಪ್ರತಿಜ್ಞಾವಚನ ತೆಗೆದುಕೊಂಡು ಅವರಿಗೆ ಅಷ್ಟಾಕ್ಷರಿ ಮಂತ್ರೋಪದೇಶ ಮಾಡಿದರು. ರಾಮಾನುಜರು ಆನಂದಪಟ್ಟು ವಂದನೆ ಸಲ್ಲಿಸಿ ಶ್ರೀರಂಗಕ್ಕೆ ಹೊರಟರು. ಆಗವರು ಮಾಡಿದ್ದೇನು?
ಲೋಕಕಾರುಣ್ಯ
ದಾರಿಯಲ್ಲಿ ತಮಗೆ ಕಣ್ಣಿಗೆ ಬಿದ್ದವರನ್ನೆಲ್ಲ ನಿಲ್ಲಿಸಿ, “ನಾನು ನಿಮಗೆಲ್ಲ ತುಂಬ ಅಮೂಲ್ಯ ವಸ್ತುವೊಂದನ್ನು ಕೊಡಬೇಕೆಂದಿದ್ದೇನೆ. ದೇವಸ್ಥಾನದ ಬಳಿಗೆ ಬನ್ನಿ” ಎಂದರು. ದೇವಸನ್ನಿಧಿಯಲ್ಲಿ ದಟ್ಟಣಿಸಿದ ಜನಸ್ತೋಮವನ್ನು ಕುರಿತು “ಪ್ರಪಂಚದ ಎಲ್ಲ ಜಂಜಡಗಳಿಂದ ಬಿಡುಗಡೆ ಹೊಂದಲು ನೀವೆಲ್ಲ ನಾನು ಹೇಳಿಕೊಡುವ ಮಂತ್ರವನ್ನು ಪುನರುಚ್ಚಾರ ಮಾಡಿರಿ. ನಿಮಗೆ ಮೋಕ್ಷ ದೊರಕಿಸಬಲ್ಲದ್ದು ಈ ದಿವ್ಯಮಂತ್ರ” ಎಂದು ಹೇಳಿ, ’ರಹಸ್ಯ’ವೆಂದು ತಮಗೆ ಉಪದಿಷ್ಟವಾಗಿದ್ದ ’ಓಂ ನಮೋ ನಾರಾಯಣಾಯ’ ಮಹಾಮಂತ್ರವನ್ನು ದಿಕ್ಕುದಿಕ್ಕಿಗೂ ಕೇಳಿಸುವಂತೆ ಕೂಗಿ ಹೇಳಿದರು!
ಸಂಗತಿ ತಿಳಿದಾಗ ಗೋಷ್ಠಿಪೂರ್ಣರು ಕೆಂಡವಾದರು. ರಾಮಾನುಜರು ಹೇಳಿದರು: “ಗುರುಗಳೆ, ಈ ಮಂತ್ರಪಠನದಿಂದ ಮೋಕ್ಷಲಾಭವಾಗುತ್ತದೆಂದು ತಾವೇ ಅಪ್ಪಣೆ ಕೊಡಿಸಿದಿರಿ. ಈ ಜನಕೋಟಿಯೆಲ್ಲಕ್ಕೂ ಮೋಕ್ಷ ದೊರೆಯಬೇಕೆಂಬ ಉತ್ಕಟೇಚ್ಛೆಯಿಂದ ನಾನು ತಮ್ಮ ವಿಧಿಯನ್ನು ಉಲ್ಲಂಘಿಸಿದೆ. ನಾನು ನರಕಕ್ಕೆ ಹೋಗುವುದರಿಂದ ಇಷ್ಟೋಂದು ಜನಕ್ಕೆ ಮುಕ್ತಿ ದೊರೆಯುವುದಾದರೆ ನಾನು ಸಂತೋ?ದಿಂದ ನರಕವಾಸವನ್ನು ಅನುಭವಿಸುತ್ತೇನೆ.”
ಕಲಿಕಲುಷಕೃತಾನಿ ಯಾನಿ ಲೋಕೇ
ಮಯಿ ನಿಪತನ್ತು ವಿಮುಚ್ಯತಾಂ ಹಿ ಲೋಕಃ||
“ಕಲಿಯ ಪಾಪಗಳಷ್ಟನ್ನೂ ನಾನು ಹೊತ್ತುಕೊಂಡರೂ ಪರವಾಗಿಲ್ಲ; ಆದರೆ ಲೋಕವು ಮುಕ್ತಿ ಪಡೆಯಲಿ!” ಎಂಬ ಬುದ್ಧನ ಮಾತನ್ನು ನೆನಪಿಗೆ ತರುವುದು ರಾಮಾನುಜರ ಲೋಕಕಾರುಣ್ಯ.
ರಾಮಾನುಜರ ಅವತಾರಕ್ಕೆ ಪ್ರಾರ್ಥನೆ
ಧರೆಗಿಳಿದು ಬಾರಯ್ಯ ನೀ ಆದಿಶೇಷ
ಭುವಿಯೊಳಗೆ ಮತ್ತೆ ಕೇಳಲಿ ವೇದಘೋಷ||
ದಾರಿ ಕಾಣದಾಗಿದೆ ಜೀವಕೋಟಿಗಿಂದು
ಚೇತನರನುದ್ಧರಿಸು ಫಣಿಪತಿಯೆ ಬಂದು
ಪದುಮನಾಭನ ಪರಮಭಕ್ತ ನಿತ್ಯಸೂರಿ
ಜ್ಞಾನದೀವಿಗೆಯ ಬೆಳಗಿ ತೋರು ದಾರಿ
ಸತ್ಯಯುಗದೊಳು ಭೂಮಿಯನೆತ್ತಿದ ಅನಂತನಾದೆ
ರಾಮಾವತಾರದೊಳು ಅನುಜ ಲಕ್ಷ್ಮಣನಾದೆ
ಕೃಷ್ಣಾವತಾರದೊಳು ಅಗ್ರಜ ಬಲರಾಮನಾದೆ
ಕಲಿಯುಗದ ಕಲ್ಮಶವ ತೊಳೆವ ಕಲಿ ನೀನಾಗು
ಹರಿಚರಣವೆಮಗೆ ತೋರುವ ಆಚಾರ್ಯನಾಗು
ರಾಮಾನುಜನೆ ನೀ ಅವತರಿಸಿ ನಮ್ಮೆಲ್ಲರನುದ್ಧರಿಸು
ಯತಿರಾಜ ಸಾರ್ವಭೌಮನಾಗಿ ಉದ್ಧರಿಸು
ಕರುಣಾಳು ಮುನ್ನಡೆಸು ಮೋಕ್ಷವನು ತೋರು.– ಪದ್ಮಿನಿ ಬಾಲು
ದಂತಕಥೆಗಳು
ಎಲ್ಲ ಇತರ ಆಚಾರ್ಯರ ವಿ?ಯದಲ್ಲಿರುವಂತೆ ರಾಮಾನುಜಾಚಾರ್ಯರ ವಿಷಯದಲ್ಲಿಯೂ ದಂತಕಥೆಗಳಿಗೆ ಕೊರತೆಯಿಲ್ಲ. ಗುರುಗಳಾಗಿದ್ದ ಯಾದವಪ್ರಕಾಶರು ಉತ್ತರೋತ್ತರ ರಾಮಾನುಜರ ಉತ್ತಮಿಕೆಯನ್ನು ಮನಗಂಡು ಅವರ ಶಿಷ್ಯರಾದದ್ದು, ರಾಮಾನುಜರು ಪ್ರಾಣಾಪಾಯಗಳಿಂದ ಪಾರಾದದ್ದು, ರಾಜಕುಮಾರಿಯನ್ನು ಬ್ರಹ್ಮರಾಕ್ಷಸನ ಹಿಡಿತದಿಂದ ಬಿಡಿಸಿದ್ದು, ಶ್ರೀರಂಗನಾಥ ದೇವಾಲಯದ ಅರ್ಚಕರಿತ್ತ ವಿಷಮಿಶ್ರವಾದ ತೀರ್ಥವನ್ನು ಸೇವಿಸಿಯೂ ಬದುಕುಳಿದದ್ದು, ಯಜ್ಞಮೂರ್ತಿ ಎಂಬ ಪ್ರತಿಕಕ್ಷಿಯು ವಾದದಲ್ಲಿ ಸೋತು ಶಿ?ನಾಗಿ ಮೊರೆಹೊಕ್ಕದ್ದು, ಜೈನಾದಿ ಧರ್ಮಾವಲಂಬಿಗಳಾಗಿದ್ದ ವಿವಿಧ ರಾಜರನ್ನು ಶ್ರೀವೈಷ್ಣವಮತಕ್ಕೆ ಪರಿವರ್ತಿಸಿದ್ದು, ಮುಂತಾದ ಅಸಂಖ್ಯ ಕಥೆಗಳೂ ಈ ಒಂದೊಂದು ಕಥೆಯ ಹಲವಾರು ಪ್ರಕಾರಾಂತರಗಳೂ ಪ್ರಚಲಿತವಾಗಿವೆ. ಅವುಗಳ ತಥ್ಯಾಂಶವನ್ನು ಪರೀಕ್ಷಿಸದೆ ಯಥೋಕ್ತವಾಗಿ ಅಂಗೀಕರಿಸುವುದರಿಂದ ಒಂದು ಬುದ್ಧಿಸ್ತರದವರ ಶ್ರದ್ಧೆಯು ಬಲಪಟ್ಟೀತೆಂಬುದು ಸಂಭಾವ್ಯ. ಇಂಥ ಸದುದ್ದೇಶದ ಶ್ರದ್ಧಾಳುಗಳ ಪ್ರಚಾರಕ ಕಥೆಗಳಿಂದ ವಿಮುಕ್ತರಾದ ಆಚಾರ್ಯರು ವಿರಳ. ಈ ಜಾಡಿನ ಅನೇಕ ಕಲ್ಪಿತ ಕಥೆಗಳೂ, ಯಾವುದೊ ಸಣ್ಣ ಪ್ರಸಂಗಗಳ ಉತ್ಪ್ರೇಕ್ಷಿತ ರೂಪಗಳೂ ಪ್ರತಿಯೊಬ್ಬ ಆಚಾರ್ಯರ ವಿ?ಯದಲ್ಲಿಯೂ ಹತ್ತಾರಿರುತ್ತವೆ.
ಇಂಥ ಕ್ಷುದ್ರ ಪ್ರಕರಣಗಳಿಂದ ದರ್ಶನಕಾರರ ಯೋಗ್ಯತೆಯನ್ನಳೆಯಬಾರದು. ಭಗವದ್ರಾಮಾನುಜರ ಬ್ರಹ್ಮಸೂತ್ರದ ಮೇಲಣ ವ್ಯಾಖ್ಯಾನ ’ಶ್ರೀಭಾಷೆ’, ಅದೇ ವಾಖ್ಯಾನದ ಸಂಗ್ರಹರೂಪಗಳಾದ ’ವೇದಾಂತಸಾರ’ ಮತ್ತು ’ವೇದಾಂತದೀಪ’, ಭಕ್ತಿಪಾರಮ್ಯಸಾಧಕವಾದ ’ಗದ್ಯತ್ರಯ’, ಶ್ರುತ್ಯರ್ಥನಿರ್ಣಯಕ್ಕೆ ನೆರವಾಗುವ ’ವೇದಾರ್ಥಸಂಗ್ರಹ’ – ಈ ವಿಪುಲ ವಾಙ್ಮಯದಲ್ಲಿ ರಾಮಾನುಜರದು ರಾಜಮಾರ್ಗವೆಂಬ ಸಂಗತಿಯು ಸ್ಫುಟವಾಗಿ ಹೊಮ್ಮಿದೆ. ಅರ್ಥಗಾಂಭೀರ್ಯ ಹಾಗೂ ಶೈಲಿಯ ಸೌಂದರ್ಯಗಳಿಂದ ಈ ಗ್ರಂಥಗಳು ಭಾರತೀಯ ದಾರ್ಶನಿಕ ಸಾಹಿತ್ಯದಲ್ಲಿ ವಿಶಿ?ಸ್ಥಾನ ಗಳಿಸಿಕೊಂಡಿವೆ. ಭಕ್ತಿಯೂ ಜ್ಞಾನವಿಶೇಷ?ವೇ ಎಂಬ ಸಿದ್ಧಾಂತವನ್ನು ವಾದ-ಅನುಭವ-ಅನುಭಾವದ ಭೂಮಿಕೆಯ ಮೇಲೆ ನೆಲೆಗೊಳಿಸಿದ ಮಹತ್ಸಾಧನೆ ರಾಮಾನುಜರದು.
ಭವತು ಮಮ ಪರಸ್ಮಿನ್
ಶೇಮುಷೀ ಭಕ್ತಿರೂಪಾ
ಎಂಬ ಆಚಾರ್ಯರ ಮಾತುಗಳು ಅವರ ಜೀವಿತವನ್ನೂ ಸಾಧನೆಯನ್ನೂ ಸೂತ್ರರೂಪದಲ್ಲಿ ಸೂಚಿಸಿವೆಯೆನ್ನಬಹುದು.
ಸಾಧನಮಾರ್ಗ
’ಯತ್ ಸ್ವಾಧ್ಯಾಯಮಧೀಯೀತ, ಏಕಾಮಪಿ ಋಚಂ … ತದ್ ಬ್ರಹ್ಮಯಜ್ಞಸ್ಸಂತಿ?ತೇ’ (ಒಂದೇ ಒಂದು ಮಂತ್ರವನ್ನು ಅಧ್ಯಯನ ಮಾಡಿದರೂ ಅದೇ ಬ್ರಹ್ಮಯಜ್ಞ) – ಎಂಬ ತೈತ್ತಿರೀಯ ಶ್ರುತಿಯಲ್ಲಿ ಅಧ್ಯಯನ-ಅಧ್ಯಾಪನಗಳ ಮಹಿಮೆ ಉಕ್ತವಾಗಿದೆ. ಅದೇ ಸಂಪ್ರದಾಯವನ್ನು ಎತ್ತಿಹಿಡಿದವರು, ಭಗವದ್ರಾಮಾನುಜರು. ಅವರ ಅವಸಾನದ ದಿವಸಗಳಲ್ಲಿ ಅವರು ಮಾಡಿದ ಒಂದು ಉಪದೇಶ ಇದು: ಶ್ರೀಭಾಷೆವನ್ನು ನೀವು ಅಧ್ಯಯನಮಾಡಿ ಇತರರಿಗೂ ಪ್ರವಚನ ಮಾಡಿ, ಅದು ಸಾಧ್ಯವಿಲ್ಲದೆಹೋದರೆ ನಮ್ಮಾಳ್ವಾರರ ಸೂಕ್ತಿಗಳನ್ನು ಅಭ್ಯಾಸಮಾಡಿ ಶಿಷ್ಯರಿಗೆ ಬೋಧಿಸಿ. ಈ ಬೌದ್ಧಿಕ ಕಾರ್ಯಗಳು ಶಕ್ಯವಿಲ್ಲದೆ ಹೋದರೆ ಯಾದವಾದ್ರಿಗೆ ಹೋಗಿ ಒಂದು ಕುಟೀರ ಕಟ್ಟಿಕೊಂಡು ಸಾಧ್ಯವಾದಷ್ಟು ಸತ್ಸಂಗ ಕಥಾಕಾಲಕ್ಷೇಪ ನಡೆಸಿ. ಅದೂ ನಿಮಗೆ ಕ?ವೆನಿಸಿದಲ್ಲಿ ನೀವು ಇರುವೆಡೆಯೇ ಭಗವಂತನಲ್ಲಿ ಪ್ರಪತ್ತಿಭಾವ ತಳೆಯಿರಿ. ಇದಕ್ಕೂ ಅವಧಾನವಿಲ್ಲದೆಹೋದರೆ ಒಬ್ಬ ಶ್ರೀವೈಷ್ಣವನ ಸಂಗದಲ್ಲಿದ್ದು ಶುಶ್ರೂಷೆ ಮಾಡಿದರೆ ನಿಮಗೆ ಶ್ರೇಯಸ್ಸುಂಟಾಗಿ ಉತ್ತರೋತ್ತರ ಮೋಕ್ಷ ದೊರೆಯುವುದು.
ವಾತ್ಸಲ್ಯ
ರಾಮಾನುಜರ ಲೋಕಪ್ರೇಮ, ಶಿಷ್ಯಾವಾತ್ಸಲ್ಯಾದಿಗುಣಗಳು ಪ್ರಸಿದ್ಧವಾದವು. ಮಂತ್ರೋಪದೇಶಕ್ಕಾಗಿ ದಂಡಕಮಂಡಲುಗಳೊಡನೆ ಬರುವಂತೆ ಗುರುಗಳು ಆಜ್ಞಾಪಿಸಿದಾಗ ರಾಮಾನುಜರು ಇಬ್ಬರು ಶಿಷ್ಯಪ್ರಮುಖರನ್ನು ಜೊತೆಗೆ ಕರೆದೊಯ್ದು “ಇವರೇ ನನ್ನ ದಂಡಕಮಂಡಲುಗಳು” ಎಂದರಂತೆ.
ತೃಣೀಕೃತವಿರಿಂಚಾದಿನಿರಂಕುಶವಿಭೂತಯಃ|
ರಾಮಾನುಜಪದಾಂಭೋಜಸಮಾಶ್ರಯಣಶಾಲಿನಃ||
ಸರ್ವದೇಶದಶಾಕಾಲೇಷ್ವವ್ಯಾಹತಪರಾಕ್ರಮಾ|
ರಾಮಾನುಜಾರ್ಯದಿವ್ಯಾಜ್ಞಾ
ವರ್ಧತಾಮಭಿವರ್ಧತಾಮ್||
“ಯಾರು ಶ್ರೀರಾಮಾನುಜರ ಪಾದಕಮಲಗಳನ್ನು ಆಶ್ರಯಿಸುತ್ತಾರೋ ಅವರು ಬ್ರಹ್ಮನೇ ಮೊದಲಾದ ದೇವತೆಗಳನ್ನೂ ಹುಲ್ಲಿಗಿಂತ ಕಡೆಯಾಗೆಣಿಸಿ ತಿರಸ್ಕರಿಸಿದ ಮಹದೈಶ್ವರ್ಯ ಪಡೆದವರು. ಎಲ್ಲ ಜನರಿಗೂ ಎಲ್ಲ ಕಾಲಗಳಲ್ಲಿಯೂ ಅನುಸಂಧಾನ ಮಾಡಲು ಸುಲಭವಾಗಲೆಂದು ರಾಮಾನುಜರು ಪ್ರವರ್ತನೆ ಮಾಡಿದ ಭಕ್ತಿಮಾರ್ಗವು ನೂರುಕಾಲಕ್ಕೂ ವರ್ಧಿಸುತ್ತಿರಲಿ.”
ರಾಮಾನುಜೋ ವಿಜಯತೇ ಯತಿರಾಜರಾಜಃ||
ಸಹಸ್ರಾಬ್ದ ಲೇಖನ : 2