ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರಸರ್ಕಾರ ಅಭಿವೃದ್ಧಿಗೆಂದು ಸಾಲುಸಾಲಾಗಿ ಘೋಷಿಸುತ್ತಿರುವ
ಅನೇಕ ಯೋಜನೆಗಳು ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲೇಬೇಕಾದ ಮತ್ತು ಹೊಸಹೊಸ ರಸ್ತೆಗಳನ್ನು ನಿರ್ಮಿಸಲೇಬೇಕಾದ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿವೆ.
ಯೂರೋಪಿನ ಅನೇಕ ದೇಶಗಳು ಅತ್ಯುತ್ತಮ ರಸ್ತೆಗಳನ್ನು ಹೊಂದಿವೆ, ಏಕೆಂದರೆ ಆ ದೇಶಗಳು ಮುಂದುವರಿದಿವೆ ಎಂಬುದು ಸಾಮಾನ್ಯರ ಅನಿಸಿಕೆ. ಆದರೆ ಭಾರತ ದರ್ಶನ ಖ್ಯಾತಿಯ ವಿದ್ಯಾನಂದ ಶೆಣೈಯವರು ಇದನ್ನು ಬೇರೆ ರೀತಿಯೇ ಹೇಳುತ್ತಿದ್ದರು. ಯೂರೋಪಿನ ಅನೇಕ ದೇಶಗಳು ರಸ್ತೆಗಳನ್ನು ಚೆನ್ನಾಗಿ ನಿರ್ಮಿಸಿಕೊಂಡವು; ಹೀಗಾಗಿ ಅವು ಅಭಿವೃದ್ಧಿಗೊಂಡಿವೆ. ಇದು ನಿಜವಾದ ಮಾತೇ ಆಗಿದೆ. ದೇಶದ ಅಭಿವೃದ್ಧಿಗೆ ಸಾರಿಗೆ ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾಗಿರಬೇಕಾದದ್ದು ಮೊದಲನೇ ಅಂಶವಾಗಿದೆ. ದೇಶದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪಯಣಿಸುವುದೊಂದು ಕಡೆಯಾದರೆ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಕಚ್ಚಾವಸ್ತು ಮತ್ತು ಸಿದ್ಧವಸ್ತುಗಳ ಸಾಗಾಣಿಕೆಗೂ ಉತ್ತಮ ಸಂಪರ್ಕವ್ಯವಸ್ಥೆ ಅಗತ್ಯ. ಸಿದ್ಧವಸ್ತುಗಳ ತಯಾರಿಕಾ ವೆಚ್ಚ ವಿಪರೀತವಾಗದಂತೆ ಇದು ತಡೆಯುತ್ತದೆ. ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕ, ಪೋಷಕಾಂಶಗಳನ್ನು ಪೂರೈಸುವ ರಕ್ತಚಲನೆಗೆ ನರಮಂಡಲ ವ್ಯವಸ್ಥೆ ಅವಶ್ಯವಿರುವಂತೆ ಸಾರಿಗೆವ್ಯವಸ್ಥೆಯು ದೇಶಕ್ಕೆ ಅತ್ಯಗತ್ಯ.
ಉದಾರೀಕರಣದ ಜಗತ್ತಿಗೆ ಭಾರತ ತನ್ನನ್ನು ತಾನು ತೆರೆದುಕೊಳ್ಳಲಾರಂಭಿಸಿದಂತೆ ಮೂಲಭೂತ
ಸೌಕರ್ಯಗಳ ವೃದ್ಧಿಯೆಡೆಗೆ ಗಮನ ಹೆಚ್ಚಾಗತೊಡಗಿತು. ಈ ಹಂತದಲ್ಲಿ ವಿದೇಶೀ ಬಂಡವಾಳ ಹೂಡಿಕೆಯಿಂದ ಹಿಡಿದು ಸ್ವದೇಶೀ ಉದ್ಯಮಗಳ ಅಭಿವೃದ್ಧಿಯವರೆಗೆ ಎಲ್ಲದಕ್ಕೂ ಸರಕುಗಳ ಸಾಗಾಣಿಕೆಯ ವೇಗವನ್ನು ಹೆಚ್ಚಿಸುವ ಮತ್ತು ಪ್ರಯಾಣದ ವೇಳೆಯನ್ನು ತಗ್ಗಿಸುವ ಪ್ರಕ್ರಮಗಳೆಡೆಗೆ ಚಿಂತನೆ ಆರಂಭಗೊಂಡಿತು. ದೆಹಲಿ, ಮುಂಬಯಿ, ಚೆನ್ನೈ ಮತ್ತು ಕೊಲ್ಕತಾ ಹೀಗೆ ದೇಶದ ಉದ್ದಗಲಗಳನ್ನು ಸಂಪರ್ಕಿಸುವ ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಕೂಸಾದ ಸುವರ್ಣ ಚತುಷ್ಪಥ ರಸ್ತೆ ಸ್ವಾತಂತ್ರ್ಯಾನಂತರ ಭಾರತ ಕಂಡ ಮಹಾನ್ ರಸ್ತೆನಿರ್ಮಾಣ ಯೋಜನೆಯಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರಸರ್ಕಾರ ಅಭಿವೃದ್ಧಿಗೆಂದು ಸಾಲುಸಾಲಾಗಿ ಘೋಷಿಸುತ್ತಿರುವ ಅನೇಕ ಯೋಜನೆಗಳು ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲೇಬೇಕಾದ ಮತ್ತು ಹೊಸಹೊಸ ರಸ್ತೆಗಳನ್ನು ನಿರ್ಮಿಸಲೇಬೇಕಾದ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿವೆ.
ಈ ಸವಾಲನ್ನು ನಿಭಾಯಿಸಲು ಸಾಧ್ಯವಾಗುವಂತೆ ನೆಲ, ಜಲ ಮತ್ತು ವಿಮಾನಯಾನ ಸಾರಿಗೆಗಳ ಬಗ್ಗೆ
ನಿಗಾವಹಿಸುವ, ನಿಯಂತ್ರಿಸುವ ಇಲಾಖೆಗಳೂ ಸಹ ಸಮರೋಪಾದಿಯಲ್ಲಿ ಕಾರ್ಯರಂಗಕ್ಕಿಳಿದಿವೆ. ಅನೇಕ ಹೊಸಹೊಸ ಯೋಜನೆಗಳು ರೂಪುಗೊಳ್ಳುತ್ತಿವೆ. ಇವು ಯೋಜನೆಯ ಹಂತದಲ್ಲಿ ಮಾತ್ರ ನಿಲ್ಲದೆ
ಸಮರ್ಪಕವಾಗಿ ಅನು?ನಗೊಳ್ಳುವುದಕ್ಕೂ ಪ್ರಾಮುಖ್ಯ ನೀಡಲಾಗಿದೆ. ೨೦೧೪ರಿಂದ ೨೦೧೮ರವರೆಗೆ
೧,೨೦,೨೩೩ ಕಿ.ಮೀ.ಗಳ? ಗ್ರಾಮೀಣ ರಸ್ತೆ ನಿರ್ಮಾಣವಾಗಿರುವುದು ಇದಕ್ಕೊಂದು ಪುರಾವೆ. ಹಿಂದಿನ ವರ್ಷಗಳಲ್ಲಿ ಅಂದರೆ ೨೦೧೧ರಿಂದ ೨೦೧೪ರವರೆಗೆ ನಿರ್ಮಾಣಗೊಂಡಿದ್ದದ್ದು ೮೧,೦೯೫ ಕಿ.ಮೀ. ಗಳು ಮಾತ್ರ. ಇದು ಬದಲಾದ ಇಚ್ಛಾಶಕ್ತಿಯ ಸೂಚನೆ. ದೇಶದ ಜಿಡಿಪಿಯಲ್ಲಿ ಬಹುದೊಡ್ಡ ಕೊಡುಗೆ ಸಾರಿಗೆ ಮತ್ತು ಸರಕುಸಾಗಾಣಿಕೆ ಉದ್ಯಮದ್ದೂ ಆಗಿದೆ. ಉದ್ಯೋಗಸೃಷ್ಟಿಯಲ್ಲೂ ಈ ವಲಯ ಅಪರಿಮಿತ ಅವಕಾಶಗಳನ್ನು ಹೊಂದಿರುವಂತಹುದು.
ಭಾರತ ಪ್ರಪಂಚದಲ್ಲಿಯೇ ರಸ್ತೆಸಂಪರ್ಕ ಜಾಲದಲ್ಲಿ ಎರಡನೇ ಸ್ಥಾನದಲ್ಲಿರುವ ದೇಶವಾಗಿದೆ, ರೈಲು ಜಾಲದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಪ್ರಯಾಣಿಕರ ವಿಮಾನಯಾನದಲ್ಲಿ ೯ನೇ ಸ್ಥಾನದಲ್ಲಿದೆ. ೧೩ ದೊಡ್ಡ ಮತ್ತು ೧೮೭ ಚಿಕ್ಕ ಬಂದರುಗಳಿವೆ. ಸರಕುಸಾಗಣೆಯು ಭಾರತದ ಅತಿ ದೊಡ್ಡ ಉದ್ಯಮಗಳಲ್ಲೊಂದು. ಸದ್ಯಃ ೬೫% ಸರಕುಸಾಗಣೆಯು ರಸ್ತೆಗಳನ್ನು ಅವಲಂಬಿಸಿದೆ.
ಬದಲಾವಣೆಯ ಹಾದಿಯಲ್ಲಿ ರಸ್ತೆಗಳು
ಭಾರತ ಒಂದು ಬೃಹತ್ ದೇಶ. ಇಲ್ಲಿನ ವಿಸ್ತೀರ್ಣದಷ್ಟು ಮಹತ್ತ್ವವನ್ನು ಬೆಳೆಯುತ್ತಿರುವ ಜನಸಂಖ್ಯೆಗೂ ಕೊಡಬೇಕಿದೆ. ಹಾಗಾಗಿಯೇ ಇಲ್ಲಿ ಕೈಗೊಳ್ಳಬೇಕಾದ ಯಾವುದೇ ಅಭಿವೃದ್ಧಿಯೋಜನೆಗಳಿಗೆ ಬಹಳ ಲೆಕ್ಕಾಚಾರಗಳಿರಬೇಕಾಗುತ್ತದೆ. ಬಹುಕಾಲದ ಜಡ್ಡುಗಟ್ಟಿದ ಪರಿಸ್ಥಿತಿಯಾದ ಭ್ರಷ್ಟಾಚಾರ, ರೆಡ್ಟೇಪ್ ವಿಧಾನಗಳು, ಪಕ್ಷಪಾತದ ಟೆಂಡರ್ ಪ್ರಕ್ರಿಯೆ, ಅನಗತ್ಯ ರಾಜಕಾರಣ ಇವುಗಳು ಯೋಜನೆಗಳ ಅನುಷ್ಠಾನವನ್ನೇ ವಿಳಂಬಗೊಳಿಸುತ್ತಿದ್ದವು ಮತ್ತು ಪೂರ್ಣಗೊಂಡ ಯೋಜನೆಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತಿದ್ದವು. ಅನೇಕ ಬೃಹತ್ ನಗರಗಳಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಕೈಗೊಂಡ ಹೊಸ ಮಾರ್ಗಗಳು ನಿರ್ಮಾಣಗೊಂಡು ಉಪಯೋಗಕ್ಕೆ ಸಿದ್ಧಗೊಳ್ಳುವಷ್ಟರಲ್ಲಿ ಅವುಗಳ ಕೂಡ ಸಾಕಾದಷ್ಟು ಸಂಖ್ಯೆಯಲ್ಲಿ ಹೊಸ ವಾಹನಗಳು ರಸ್ತೆಗಿಳಿದಿರುವ ಸಂದರ್ಭಗಳಿವೆ. ದೇಶದ ಬಹುಪಾಲು ಭಾಗಗಳಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಿಸಬಹುದಾದ
ವಾತಾವರಣವಿದೆ. ತೀರಾ ಮಂಜು ಬೀಳುವ ಕಾಶ್ಮೀರ, ಉತ್ತರಾಖಂಡ ಇತ್ಯಾದಿ ಹಿಮಪರ್ವತ ತಪ್ಪಲಿನ
ಪ್ರದೇಶಗಳು, ಮಣ್ಣು ಕುಸಿಯುವ ಘಟ್ಟ ಮತ್ತು ಪರ್ವತ ಪ್ರದೇಶಗಳನ್ನು ಹೊರತುಪಡಿಸಿದರೆ ದೇಶದ ಮಿಕ್ಕೆಲ್ಲ ಭಾಗಗಳಲ್ಲಿ ರಸ್ತೆಯ ನಿರ್ಮಾಣ ಮತ್ತು ಉತ್ತಮ ನಿರ್ವಹಣೆ ಸಾಧ್ಯವಿದೆ. ಇದನ್ನೂ ಮೀರಿ ಮಳೆಗಾಲದಲ್ಲಿ ಅಥವಾ ಇನ್ನಿತರ ಕಾರಣಗಳಿಂದ ರಸ್ತೆಗಳು ಶೀಘ್ರ ಹಾಳಾಗುವಂತಿದ್ದರೆ ಅದಕ್ಕೆ ಕಳಪೆ ಕಾಮಗಾರಿ ಮತ್ತು ವಿದ್ಯುತ್, ದೂರಸಂಪರ್ಕ, ಜಲಸಂಪರ್ಕ ಇತ್ಯಾದಿ ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೇ ಕಾರಣ. ಅಧ್ಯಯನ ಕೊರತೆಯಿಂದಾದ ಅವೈಜ್ಞಾನಿಕ ಯೋಜನೆಗಳೂ ತಮ್ಮ ಪಾಲನ್ನು ರಸ್ತೆಯ ಹೊಂಡಕ್ಕೆ ಚೆಲ್ಲಿವೆ.
ಸವಾಲಿನ ಹೊಸ ಯೋಜನೆಗಳು
ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತಾ ಅನೇಕ ಹೊಸಹೊಸ ಯೋಜನೆ, ಯೋಚನೆ,
ಚಿಂತನೆಗಳು ದೇಶದ ಸಾರಿಗೆ ಕ್ಷೇತ್ರದಲ್ಲಿ ಆಗಿವೆ. ರೈಲ್ವೆ, ಜಲ ಮತ್ತು ವೈಮಾನಿಕ ಕ್ಷೇತ್ರಗಳಲ್ಲಿಯೂ ಬಹುದೊಡ್ಡ ಪರಿಣಾಮಗಳನ್ನು ಇಂದು ಕಾಣಬಹುದಾಗಿದೆ.
ಒಟ್ಟು ೧೨,೯೦೩ ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ೫೯೯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಈ ಯೋಜನೆಗಳ ಒಟ್ಟು ಮೊತ್ತ ೧,೦೮,೦೦೦ ಕೋಟಿ ರೂ.ಗಳಷ್ಟು ಬೃಹತ್ತಾಗಿದೆ. ಇದಕ್ಕೆ ಹೊರತಾಗಿ ಕೇಂದ್ರಸರ್ಕಾರ ಘೋಷಿಸಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೂ ಆಯ್ಕೆಗೊಂಡ ೧೦೦ ನಗರಗಳಲ್ಲಿ ಸಾರಿಗೆ ಸಂಪರ್ಕ ಮತ್ತು ಸರಕು ಸಾಗಣೆ ವ್ಯವಸ್ಥೆ ಕಲ್ಪಿಸುವುದಕ್ಕೆ ಮಹತ್ತ್ವ ನೀಡಲಾಗಿದೆ. ಈ ಯೋಜನೆಗಳಲ್ಲಿ ಹಲವು ರೀತಿಯ ರಸ್ತೆಗಳನ್ನು ನಿರ್ಮಿಸುವ ಪ್ರಸ್ತಾವಗಳಿವೆ. ಅವುಗಳಲ್ಲಿ ಬಹಳಷ್ಟು ಈಗಾಗಲೇ ಕಾರ್ಯಾರಂಭ ಮಾಡಿವೆ. ರಾಷ್ಟ್ರೀಯ ಹೆದ್ದಾರಿಗಳ ಜೊತೆಗೆ ಎಕ್ಸಪ್ರೆಸ್-ವೇ, ಮಾಸ್ ರ್ಯಾಪಿಡ್ ಟ್ರಾನ್ಸ್ಪೋರ್ಟ್, ಬಸ್ ರ್ಯಾಪಿಡ್ ಟ್ರಾನ್ಸ್ಪೋರ್ಟ್, ಪಾದಚಾರಿಗಳಿಗಾಗಿ ಸ್ಕೈವಾಕ್, ನಗರಗಳಲ್ಲಿ ಸೈಕಲ್ ಮಾರ್ಗಗಳು ಇತ್ಯಾದಿಗಳ ನಿರ್ಮಾಣವೂ ಇದರಲ್ಲಿ ಸೇರಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್ಡಿಎ ಸರ್ಕಾರ ಪ್ರತಿ ದಿನ ೩೦ ಕಿ.ಮೀ.ಗಳಷ್ಟು ರಸ್ತೆ ನಿರ್ಮಿಸುವ
ಘೋಷ ಮಾಡಿ ಕಾರ್ಯನಿರ್ವಹಿಸುತ್ತಿದೆ. ಹಿಂದೆ ಈ ಪ್ರಮಾಣ ಕೇವಲ ೧೨ ಕಿ.ಮೀ.ಗಳಷ್ಟಿತ್ತು. ಜೊತೆಗೆ
೯೬,೦೦೦ ಕಿ.ಮೀ. ಉದ್ದ ಇರುವ ರಾಷ್ಟ್ರೀಯ ಹೆದ್ದಾರಿಗಳನ್ನು ೧,೫೦,೦೦೦ ಕಿ.ಮೀ.ಗಳಷ್ಟು ಹೆಚ್ಚಿಸುವ ಕಾರ್ಯಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ೨೮,೦೦೦ ಕಿ.ಮೀ. ರಸ್ತೆ ನಿರ್ಮಾಣಕ್ಕೆಂದು ೩ ಲಕ್ಷಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
೨೦೧೫ರಲ್ಲಿ ನರೇಂದ್ರ ಮೋದಿಯವರು ಘೋಷಿಸಿದ ಅಮೃತ್ – Atal Mission for Rejuvenation and Urban Transformation – (AMRUT) ಯೋಜನೆಯ ತೀವ್ರಗತಿಯ ಅನುಷ್ಠಾನ ಜಾರಿಯಲ್ಲಿದ್ದು, ಅನೇಕ ನಗರಗಳ ರಸ್ತೆ, ಮೂಲಭೂತ ಸೌಕರ್ಯ ವ್ಯವಸ್ಥೆಗಳು ಸುಧಾರಣೆಯ ಗತಿಯಲ್ಲಿ ವೇಗವಾಗಿ ಸಾಗಿವೆ.
‘ಭಾರತ್ಮಾಲಾ’
ಈ ದೇಶದ ಸಂಪರ್ಕವ್ಯವಸ್ಥೆಯ ಸುಧಾರಣೆಗೆ ಕೈಗೊಂಡಿರುವ ಅತ್ಯಂತ ಮಹತ್ತ್ವಾಕಾಂಕ್ಷಿ ಯೋಜನೆ
ಭಾರತ್ಮಾಲಾ. ದೇಶಾದ್ಯಂತ ಹೆದ್ದಾರಿ ಸಂಪರ್ಕವೃದ್ಧಿ ಉದ್ದೇಶದ ಭಾರತ್ಮಾಲಾ ಯೋಜನೆಗಾಗಿ ೫ ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಿರುವುದಾಗಿ ಮೋದಿಯವರು ಕಳೆದವರ್ಷ ಘೋಷಿಸಿದ್ದರು. ಅತ್ಯಂತ ವೇಗದ, ಸುರಕ್ಷಿತ ಹೆದ್ದಾರಿಗಳ ನಿರ್ಮಾಣದ ಜೊತೆಗೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯ ಸಾಧ್ಯತೆಯನ್ನೂ ಯೋಜನೆ ಒಳಗೊಂಡಿದೆ. ೩೪,೮೦೦ ಕಿ.ಮೀ.ಗಳಷ್ಟು ಉದ್ದದ ರಸ್ತೆ ನಿರ್ಮಾಣ ಮುಂದಿನ ಐದುವ?ಗಳಲ್ಲಿ ಆಗಲಿದೆ. ವಿವಿಧ ರೀತಿಯ ರಸ್ತೆಗಳ ನಿರ್ಮಾಣ ಮತ್ತು ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು ಇದರಲ್ಲಿದೆ.
ಆರ್ಥಿಕ ಹೆದ್ದಾರಿಗಳು (೯೦೦೦ ಕಿ.ಮೀ.), ಹೆದ್ದಾರಿಗಳ ಒಳಸಂಪರ್ಕ ಮತ್ತು ಹೆದ್ದಾರಿ ಜೋಡಣೆ ರಸ್ತೆಗಳು (೬,೦೦೦ ಕಿ.ಮೀ.), ರಾಷ್ಟ್ರೀಯ ಕಾರಿಡಾರುಗಳ ಸಾಮರ್ಥ್ಯವೃದ್ಧಿ (೫,೦೦೦ ಕಿ.ಮೀ.), ಅಂತಾರಾಷ್ಟ್ರೀಯ ಸಂಪರ್ಕ ಹೊಂದಿರುವ ಗಡಿರಸ್ತೆಗಳು (೨೦೦೦ ಕಿ.ಮೀ.), ಬಂದರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಕರಾವಳಿಯ ರಸ್ತೆಗಳು (೨,೦೦೦ ಕಿ.ಮೀ.), ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ ರಸ್ತೆಗಳು (೮೦೦ ಕಿ.ಮೀ.) ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ (೧೦,೦೦೦ ಕಿ.ಮೀ.) – ಹೀಗೆ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಂಡು ಶರವೇಗದಲ್ಲಿ ಇವುಗಳನ್ನು ಪೂರ್ಣಗೊಳಿಸಲು ರಸ್ತೆ ಮತ್ತು ಸಾರಿಗೆ ಸಚಿವಾಲಯ ನಿತಿನ್ ಗಡ್ಕರಿಯವರ ನೇತೃತ್ವದಲ್ಲಿ ಸಂಪೂರ್ಣ ಸಿದ್ಧಗೊಂಡಿದೆ.
ಈ ಮಹತ್ತ್ವಾಕಾಂಕ್ಷೆಯ ಯೋಜನೆಯ ಮೊದಲ ಹಂತಕ್ಕೆ ೨೪,೮೦೦ ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಗುರಿಯೊಂದಿಗೆ ೨೦೧೭ರ ಅಕ್ಟೋಬರ್ನಲ್ಲಿ ಮಂಜೂರಾತಿಯನ್ನೂ ನೀಡಲಾಗಿದೆ. ಭಾರತದೇಶದ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಇದೊಂದು ಮಹಾನ್ ಹೆಜ್ಜೆಯೇ ಆಗಿದೆ.
ಕರ್ನಾಟಕಕ್ಕೆ ಭಾರತ್ಮಾಲಾ
ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಈ ಭಾರತ್ಮಾಲಾ ಯೋಜನೆಯ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಆರಂಭಿಸಲಾಗಿದೆ. ಕೆಲವೊಂದು ಅಭಿವೃದ್ಧಿಕಾರ್ಯಗಳು ಸಾಗರಮಾಲಾ ಯೋಜನೆಯೊಂದಿಗೂ ತಳಕುಹಾಕಿಕೊಂಡಿವೆ. ಮೈಸೂರು-ಬೆಂಗಳೂರು ಹೆದ್ದಾರಿಯ ಆರು-ಪಥ ವಿಸ್ತರಣೆ, ಮೈಸೂರು- ಬೆಂಗಳೂರು ರೈಲ್ವೇ ಲೈನಿನ ವಿದ್ಯುದೀಕರಣ, ೧೬೦ ಕಿ.ಮೀ. ಉದ್ದದ ಬೆಳಗಾವಿ-ಕಾಗವಾಡ ಹೆದ್ದಾರಿ ನಿರ್ಮಾಣ, ರಾಷ್ಟೀಯ ಹೆದ್ದಾರಿ ೪ಂರ ಬೆಳಗಾವಿ-ಖಾನಾಪುರ ವಿಭಾಗದ ನಾಲ್ಕು-ಪಥ ವಿಸ್ತರಣೆ, ಇವುಗಳು ಪ್ರಮುಖವಾದವು.
ಇವಲ್ಲದೆ, ಬೇಲೆಕೇರಿಯಲ್ಲಿ ಹೊಸ ಬಂದರು ನಿರ್ಮಾಣವನ್ನು, ಹಾಸನ-ಬೆಂಗಳೂರನ್ನು ಮಂಗಳೂರಿಗೆ ಜೋಡಿಸುವ ರೂ. ೧೦,೦೦೦ ಕೋಟಿ ವೆಚ್ಚದ ಶಿರಾಡಿ ಘಟ್ಟದ ೨೩.೬ ಕಿ.ಮೀ. ಸುರಂಗಮಾರ್ಗದ ನಿರ್ಮಾಣವನ್ನು ಕೇಂದ್ರಸರ್ಕಾರವು ಅನುಮೋದಿಸಿದೆ. ಭಾರತ್ಮಾಲಾ ಯೋಜನೆಯ ಅಡಿಯಲ್ಲಿ ಕೇಂದ್ರವು ರೂ. ೮೫,೦೦೦ ಕೋಟಿ ರೂ. ವೆಚ್ಚದ ೩೭೨೬ ಕಿ.ಮೀ. ಉದ್ದದ ೪೧ ಕಾರ್ಯಗಳನ್ನು ಎತ್ತಿಕೊಳ್ಳಲಿದೆ. ಇವೆಲ್ಲದಕ್ಕೂ ಹೆಚ್ಚಾಗಿ ಕೇಂದ್ರಸರ್ಕಾರ ೧.೪೫ ಲಕ್ಷ ಕೋಟಿ ರೂ.ನಷ್ಟ ಹಣವನ್ನು ಕರ್ನಾಟಕದ ರಾಷ್ಟೀಯ ಹೆದ್ದಾರಿಗಳ ನಿರ್ಮಾಣಕ್ಕೆ ತೊಡಗಿಸಿದ್ದು, ಮೈಸೂರು-ಉದಯಪುರ ಹಮ್ಸಫರ್ ಎಕ್ಸ್ಪ್ರೆಸ್ ಟ್ರೈನ್ ಪ್ರಾರಂಭ, ಇವೆಲ್ಲವೂ ಸಮಗ್ರ ವಿಕಾಸದೆಡೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.
ದೆಹಲಿ-ಮೀರತ್ ಎಕ್ಸ್ಪ್ರೆಸ್-ವೇ
ಇದೇ ವರ್ಷದ ಮೇ ೨೭ನೇ ತಾರೀಖಿನಂದು ಲೋಕಾರ್ಪಣೆಗೊಂಡ ದೆಹಲಿ-ಮೀರತ್ ಎಕ್ಸಪ್ರೆಸ್
ಹೆದ್ದಾರಿಯು ಭಾರತದ ಭವಿಷ್ಯದ ರಸ್ತೆಗಳ ಒಂದು ಸಣ್ಣ ಝಲಕ್ ಅನ್ನು ಜನತೆಯ ಮುಂದಿಟ್ಟಿದೆ. ದೆಹಲಿ-ಮೀರತ್ ಎಕ್ಸ್ಪ್ರೆಸ್-ವೇ ಯೋಜನೆಯನ್ನು ೭,೫೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೆದ್ದಾರಿಯ ಎರಡೂ ಕಡೆ ೨.೫ ಮೀಟರ್ ಸೈಕಲ್ ಟ್ರ್ಯಾಕ್ ಮತ್ತು ೧.೫ ಮೀಟರ್ ಫುಟ್ಪಾತ್ ನಿರ್ಮಿಸಲಾಗಿದೆ. ಇದು ಭಾರತದ ಮೊದಲನೇ ೧೪ ಲೇನ್ ಹೆದ್ದಾರಿ. ದೆಹಲಿ-ಮೀರತ್ ರಸ್ತೆಯಲ್ಲಿ ಬರುವ ೩೧ ಟ್ರಾಫಿಕ್ ಸಿಗ್ನಲ್ಗಳನ್ನು ಈ ಹೆದ್ದಾರಿ ತಪ್ಪಿಸಲಿದ್ದು, ಸಿಗ್ನಲ್- ಫ್ರೀ ಮಾಡಲಿದೆ. ಇದು ಮಾಲಿನ್ಯ ನಿಯಂತ್ರಣಕ್ಕೊಂದು ಬಹು ದೊಡ್ಡ ಕೊಡುಗೆ ಎಂದು ಮೋದಿಯವರು ಹೇಳಿದ್ದು ಗಮನಿಸಬೇಕಾದ ಸಂಗತಿ. ಒಟ್ಟು ೮೨ ಕಿ.ಮೀ. ಉದ್ದದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ೨೮ ಕಿ.ಮೀ. ರಸ್ತೆ ಪೂರ್ಣಗೊಳಿಸಲಾಗಿದೆ. ೨೦೧೯ರ ಮಾರ್ಚ್ ವೇಳೆಗೆ ಯೋಜನೆ ಸಂಪೂರ್ಣವಾಗಲಿದೆ. ನೋಯ್ಡಾ ಹಾಗೂ ಘಜಿಯಾಬಾದ್ಗೆ ಹೋಗುವ ಮಾರ್ಗಗಳಲ್ಲಿ ಟ್ರಾಫಿಕ್ ಕಡಮೆಯಾಗಿಸಲು ಈ ರಸ್ತೆ ಸಹಾಯಕವಾಗಲಿದೆ. ಹೆದ್ದಾರಿ ನಿರ್ಮಾಣದಿಂದಾಗಿ ದೆಹಲಿ-ಮೀರತ್ ನಡುವೆ ಈವರೆಗೆ ಇದ್ದ ಎರಡೂವರೆ ಗಂಟೆ ಪ್ರಯಾಣಸಮಯ ೪೦ ನಿಮಿಷ ಇಳಿಯಲಿದೆ.
ಈ ಮಾರ್ಗಕ್ಕೆಂದೇ ಯಮುನಾನದಿಯ ಮೇಲೆ ಎರಡು ಅತಿ ಉದ್ದದ ಸೇತುವೆಗಳನ್ನು ನಿರ್ಮಿಸಿದ್ದು,
ಒಟ್ಟಾರೆ ೫ ದೊಡ್ಡ ಸೇತುವೆಗಳನ್ನು ಮತ್ತು ೨೪ ಸಣ್ಣಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ. ೩ ದೆಹಲಿ-ಮೀರತ್ ಎಕ್ಸ್ಪ್ರೆಸ್-ಹೈವೇಯ ಸುಂದರ ನೋಟ ರೈಲ್ವೇ ಬ್ರಿಡ್ಜ್ಗಳನ್ನು ಈ ಎಕ್ಸ್ಪ್ರೆಸ್ ವೇನಲ್ಲಿ ನಿರ್ಮಿಸಲಾಗುತ್ತಿದೆ. ೨೨೧ ಅಂಡರ್ಪಾಸ್ಗಳು, ೨೮ ಕಿ.ಮೀ. ಸೈಕಲ್ಟ್ರ್ಯಾಕ್ಗಳನ್ನು ನಿರ್ಮಿಸಲಾಗುತ್ತಿದೆ. ಬಹುತೇಕ ಮುಂದಿನ ವರ್ಷ (೨೦೧೯) ಮಾರ್ಚ್ ವೇಳೆಗೆ ಈ ಹೆದ್ದಾರಿ ನಿರ್ಮಾಣಕಾರ್ಯ ಸಂಪೂರ್ಣ ಮುಗಿಯಲಿದ್ದು, ದೇಶಕ್ಕೆ ಮೋದಿ ಸರ್ಕಾರದ ಪ್ರಮುಖ
ಕೊಡುಗೆ ಎನಿಸಲಿದೆ.
ಇನ್ನೂ ಹಲವಾರು ವಿಶೇಷತೆಗಳನ್ನು ಈ ಎಕ್ಸ್ಪ್ರೆಸ್ ಹೈವೇ ಹೊಂದಿದೆ. ರಸ್ತೆಯ ಇಕ್ಕೆಲಗಳಲ್ಲಿ ಎರಡೂವರೆ ಲಕ್ಷ ಗಿಡಗಳನ್ನು ನೆಡಲಾಗಿದೆ. ರಸ್ತೆಯ ಎರಡೂ ಬದಿ ಸೋಲಾರ್ ದೀಪಗಳು, ಸಿಸಿ ಟಿವಿಗಳು, ೪೦ ಕಾರಂಜಿ ಮತ್ತು ೩೬ ರಾಷ್ಟ್ರೀಯ ಸ್ಮಾರಕಗಳ ಪ್ರತಿಕೃತಿ ಇತ್ಯಾದಿಗಳನ್ನು ಅಳವಡಿಸಲಾಗಿದೆ. ಕ್ರಮಿಸಿದ ದೂರಕ್ಕಷ್ಟೆ ಟೋಲ್ ಪಾವತಿ ಇದರ ವಿಶೇಷತೆ. ೪೦೦೦ ಕಿಲೋವ್ಯಾಟ್ ಸಾಮರ್ಥ್ಯದ ೮ ಸೋಲಾರ್ ವಿದ್ಯುತ್ ಘಟಕಗಳು ಈ ರಸ್ತೆಯ ಭಾಗವಾಗಿವೆ. ಹೀಗೆ ಹತ್ತುಹಲವು ಹೊಸತುಗಳನ್ನು ಒಳಗೊಂಡಿರುವ ಹೆದ್ದಾರಿ ವಿಶ್ವದ ಗಮನ ಸೆಳೆಯುತ್ತಿದೆ.
ನಗರಕ್ಕೆ ವರದಾನ ಮೆಟ್ರೋ ಸಾರಿಗೆ
ಭಾರತ ಈಗ ಹಿಂದೆಂದಿಗಿಂತಲೂ ವೇಗವಾಗಿ ನಗರೀಕರಣದತ್ತ ಸಾಗುತ್ತಿದೆ. ೧೯೯೨ರಲ್ಲಿ ೨೨ ಕೋಟಿಯ ಆಸುಪಾಸು ಇದ್ದ ನಗರವಾಸಿಗಳ ಸಂಖ್ಯೆ ೨೦೧೪ರ ಹೊತ್ತಿಗೆ ೪೧ ಕೋಟಿ ಮೀರಿತ್ತು. ಒಂದು ಅಂದಾಜಿನಂತೆ ೨೦೫೦ರ ಹೊತ್ತಿಗೆ ಭಾರತದಲ್ಲಿ ೮೧ ಕೋಟಿ ಜನ ನಗರಗಳಲ್ಲಿ ವಾಸಿಸುತ್ತಾರೆ. ಇದಕ್ಕೆ ಸರಿಸಮನಾಗಿ ನಗರಗಳ ಸಾರಿಗೆ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಆಗಲೇಬೇಕು. ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಇಕ್ಕಟ್ಟಾದ ರಸ್ತೆಗಳಿಂದ ದೇಶದ ಕೆಲವು ನಗರಗಳಲ್ಲಿ ವಾಹನ ಚಲಾವಣೆಯ ವೇಗ ಗಂಟೆಗೆ ೫ರಿಂದ ೧೦ ಕಿ.ಮೀ.ನಷ್ಟು ಮಂದಗತಿಯನ್ನು ಹೊಂದಿದೆ. ಪ್ರತಿ ಮಹಾನಗರದಲ್ಲೂ ಪ್ರತಿನಿತ್ಯವೆಂಬಂತೆ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಹೆಚ್ಚು ಸುರಕ್ಷಿತವಾಗಿರುವ ಸಾರ್ವಜನಿಕ ಸಾರಿಗೆ ವಾಹನವನ್ನು ಹೆಚ್ಚು ಅವಲಂಬಿಸುವುದರತ್ತ ಜನರ ಗಮನವನ್ನು ಸೆಳೆಯುತ್ತಿದೆ.
ಸಾಂಪ್ರದಾಯಿಕ ರೈಲ್ವೇ ಪ್ರಯಾಣ ನಗರದೊಳಗಿನ ಪ್ರಯಾಣಗಳಿಗೆ ಅನುಕೂಲಕರವಾಗಿಲ್ಲದಿರುವುದು
ಮೇಲ್ನೋಟಕ್ಕೇ ಕಾಣುತ್ತದೆ. ಈ ನಿಟ್ಟಿನಲ್ಲಿ ಮೆಟ್ರೋರೈಲುಗಳು ರಸ್ತೆಗಳ ಮೇಲಿನ ಹೊರೆ ತಗ್ಗಿಸಲು ಪರ್ಯಾಯವೆನಿಸಿವೆ. ಈಗಾಗಲೇ ದೆಹಲಿ, ಬೆಂಗಳೂರು, ಮುಂಬಯಿ, ಚೆನ್ನೈ, ಜೈಪುರಗಳಲ್ಲಿ ಯಶಸ್ಸುಗೊಂಡಿರುವ ಮೆಟ್ರೋ ವ್ಯವಸ್ಥೆ ದೇಶದ ಒಟ್ಟು ೧೦ ನಗರಗಳಲ್ಲಿ ಸದ್ಯಃ ಕಾರ್ಯ ನಿರ್ವಹಿಸುತ್ತಿದೆ. ಇನ್ನಷ್ಟು ನಗರಗಳಿಗೆ ಇದನ್ನು ವಿಸ್ತರಿಸುವ ಇಂಗಿತವನ್ನು ಕೇಂದ್ರಸರ್ಕಾರ ವ್ಯಕ್ತಪಡಿಸಿದೆ.
೧೯೮೪ರಲ್ಲಿ ಕೊಲ್ಕತಾದಲ್ಲಿ ಆರಂಭಗೊಂಡದ್ದು ದೇಶದ ಮೊದಲ ಮೆಟ್ರೋ ವ್ಯವಸ್ಥೆ; ಪ್ರಸ್ತುತ ಇದು
೨೭ ಕಿ.ಮೀ.ಗಳಷ್ಟು ಹಳಿಗಳನ್ನು ಹೊಂದಿದ್ದು, ೨೪ ನಿಲ್ದಾಣಗಳಿವೆ. ಅತಿ ಹೆಚ್ಚು ಸುದ್ದಿ ಮಾಡಿದ ದೆಹಲಿಯ ಮೆಟ್ರೋ ಹಳಿಯು ೨೩೧ ಕಿ.ಮೀ.ಗಳಷ್ಟು ದೂರ ವ್ಯಾಪ್ತಿಯನ್ನು ಹೊಂದಿದೆ. ಇದು ಆರಂಭಗೊಂಡಿದ್ದು ೨೦೦೨ರಲ್ಲಿ. ೧೬೦ಕ್ಕೂ ಹೆಚ್ಚು ನಿಲ್ದಾಣಗಳು ಈ ಜಾಲದಲ್ಲಿ ಬರುತ್ತವೆ.
ದೇಶದ ಅನೇಕ ಮೆಟ್ರೋ ರೈಲುಮಾರ್ಗಗಳು ಈಗಾಗಲೇ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು
ಕರೆದೊಯ್ಯಬೇಕಾದ ಸ್ಥಿತಿಯಲ್ಲಿವೆ. ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಇತ್ಯಾದಿ ಸಮಸ್ಯೆಗಳ ನಡುವೆಯೂ ನಗರವಾಸಿ ನಿತ್ಯಪ್ರಯಾಣಿಕರನ್ನು ಈ ರೈಲುಸೇವೆ ಸೆಳೆಯುತ್ತಿದೆ. ಟಿಕೆಟ್ ನೀಡಿಕೆಯಿಂದ ಹಿಡಿದು, ಸೂಚನೆಗಳನ್ನು ನೀಡುವವರೆಗೆ ಅತಿ ಹೆಚ್ಚಿನ ಸೇವೆಗಳನ್ನು ಯಾಂತ್ರೀಕೃತಗೊಳಿಸುತ್ತಿರುವುದು ಸಿಬ್ಬಂದಿಗಳ ಮೇಲಿನ ಹೊರೆಯನ್ನು ತಗ್ಗಿಸಿದೆ. ದೇಶದ ಪ್ರಮುಖ ನಗರಗಳಲ್ಲಿ ರೈಲ್ವೇ, ಬಸ್ ಮತ್ತು ವಿಮಾನ ನಿಲ್ದಾಣಗಳಿಗೆ ಸಂಪರ್ಕವನ್ನು ಮೆಟ್ರೋ ರೈಲುಗಳು ಕಲ್ಪಿಸುವಂತಾದರೆ ಇನ್ನಷ್ಟು ಪರಿಣಾಮಕಾರಿ ಎನಿಸಬಹುದಾಗಿದೆ.
ನಿರ್ಲಕ್ಷಿತ ಜಲಸಾರಿಗೆ ಕ್ಷೇತ್ರ
ಮೂರುಕಡೆ ಸಮುದ್ರ ಮತ್ತು ಒಳನಾಡಿನಲ್ಲಿ ಹರಿಯುವ ಗಣನೀಯ ಸಂಖ್ಯೆಯಲ್ಲಿರುವ ಸಣ್ಣ-ದೊಡ್ಡ
ನದಿಗಳಿಂದಾಗಿ ಜಲಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅತಿ ಹೆಚ್ಚಿನ ಅವಕಾಶಗಳು ಭಾರತದಲ್ಲಿವೆ. ಆದರೆ ಇಲ್ಲಿಯವರೆಗೂ ಇದನ್ನು ನಿರ್ಲಕ್ಷಿಸುತ್ತಲೇ ಬರಲಾಗಿದೆ. ನದಿಗಳಿಗೆ ಸೇತುವೆಗಳನ್ನು ಕಟ್ಟಲು ಕೊಟ್ಟಷ್ಟೇ ಗಮನ ಜಲಸಾರಿಗೆಯನ್ನು ಅಭಿವೃದ್ಧಿಪಡಿಸುವಲ್ಲಿ ನೀಡಲಿಲ್ಲ ಎನ್ನುವುದು ವಿಪರ್ಯಾಸ. ಸದಾ ನೀರಿನಿಂದಾವೃತ ಕೇರಳದ ಹಿನ್ನೀರಿನ ಪ್ರದೇಶಗಳಲ್ಲಿ ದೋಣಿ ಸಂಚಾರ ಅತ್ಯಂತ ಅನುಕೂಲಕರವಾಗಿರುವುದನ್ನು ಗಮನಿಸಬಹುದು. ನಗರಪ್ರದೇಶಗಳಲ್ಲಿ ಬಸ್ ವ್ಯವಸ್ಥೆಯಿದ್ದಂತೆ, ಇಲ್ಲಿ ದೋಣಿಯ ಮಾರ್ಗಗಳು ನಿಶ್ಚಿತವಿದೆ. ದೋಣಿ ನಿಲ್ದಾಣಗಳಿವೆ ಮತ್ತು ದೋಣಿಗಳ ಮಾರ್ಗ ಸಂಖ್ಯೆಯನ್ನೂ ನೀಡಲಾಗಿದೆ. ಇದು ಜಲಸಾರಿಗೆಯ ಸಾಧ್ಯತೆಯ ಒಂದು ಮುಖವಷ್ಟೆ. ವಿಶೇಷವಾಗಿ ಸರಕು ಸಾಗಣೆಯ ವೆಚ್ಚ ಗಣನೀಯವಾಗಿ ಕಡಮೆಯಾಗಲು ಹೆಚ್ಚು ದೂರದ ಜಲಮಾರ್ಗದ ಅವಲಂಬನೆ ಪೂರಕ. ಇಂಧನ ಉಳಿತಾಯಕ್ಕೆ, ಶಬ್ದಮಾಲಿನ್ಯದ ಸಮಸ್ಯೆಗೂ ಇದು ಪರಿಹಾರ.
ಜಲಸಾರಿಗೆಯಲ್ಲಿ ಹೊಸ ಹುಟ್ಟು
ಸದ್ಯಃ ೧೧೧ ಜಲಮಾರ್ಗಗಳನ್ನು ಅಭಿವೃದ್ಧಿಗೊಳಿಸಿ ಕರಾವಳಿಯ ಪ್ರದೇಶದಲ್ಲಿ ಸರಕು ಸಾಗಾಣಿಕೆ ವೆಚ್ಚವನ್ನು ಇಳಿಸುವ ಮತ್ತು ರಸ್ತೆಯ ವಾಹನದಟ್ಟಣೆಯನ್ನು ಕಡಮೆಗೊಳಿಸುವ ಯೋಜನೆಯನ್ನು ಕೇಂದ್ರಸರ್ಕಾರ ಕೈಗೆತ್ತಿಕೊಂಡಿದೆ. ರಸ್ತೆಮಾರ್ಗದ ಮೂಲಕ ಹೆಚ್ಚುತ್ತಿರುವ ಪ್ರಯಾಣ ಮತ್ತು ಸರಕು ಸಾಗಾಣಿಕೆ ವೆಚ್ಚವನ್ನು ಕಡಿತಗೊಳಿಸಲು ಇರುವ ಅತಿ ಸುಲಭದ ಮಾರ್ಗ ನದಿ ಹಾಗೂ ಸಮುದ್ರದ ಮೂಲಕ ಪಯಣವಾಗಿದ್ದರೂ, ಇದರ ಅನುಷ್ಠಾನ ಕಠಿಣ. ಇವುಗಳು ಅತ್ಯಂತ ಸಮನ್ವಯ ಬಯಸುಸುವ ಯೋಜನೆಗಳಾಗಿದ್ದು ಶಿಪ್ಪಿಂಗ್ ಇಲಾಖೆ, ರಸ್ತೆ ಸಾಗಣೆ, ಹೆದ್ದಾರಿ ನಿರ್ವಹಣೆ ಇಲಾಖೆಗಳು, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನನಇಲಾಳತಹ ಗಂಗಾ ಪುನರುತ್ಥಾನ ಇಲಾಖೆಗಳಂತಹ ಅನೇಕ ಇಲಾಖೆಗಳು ಇದಕ್ಕೆ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿವೆ. ೧೨ ದೊಡ್ಡ ಮತ್ತು ೩ ಸಣ್ಣ ಬಂದರುಗಳನ್ನು ನಿರ್ಮಿಸಲಾಗುತ್ತಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಈಗಾಗಲೇ ಈ ಬಂದರುಗಳು ತಲೆಯೆತ್ತಿ ಕಾರ್ಯಾಚರಣೆಗೆ ಸಿದ್ಧವಾಗಿವೆ. ೨೦೧೬ ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಕರಾವಳಿ ಹಡಗು ಸಾಗಾಣಿಕೆ ಮೂಲಕ ಚೆನ್ನೈನಿಂದ ಗುಜರಾತ್ನ ಪಿಪಾವ್ ಬಂದರಿಗೆ ೮೦೦ ಹೊಸ ಕಾರುಗಳನ್ನು ರವಾನಿಸಲಾಯಿತು.
ಪ್ರಮುಖ ಜಲಮಾರ್ಗಗಳು
ಯೂರೋಪಿನ ಅನೇಕ ದೇಶಗಳಲ್ಲಿ ನಗರದಟ್ಟಣೆಯ ನಡುವೆಯೇ ಜಲಕಾಲುವೆಗಳನ್ನು ನಿರ್ಮಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ಭಾರತದಲ್ಲಿ ಈ ಸಾಧ್ಯತೆಗಳೆಡೆಗೆ ಗಮನ ಹರಿಸಿದ್ದು ಕಡಮೆ. ಆದರೂ ಅನೇಕ ಸಾಂಪ್ರದಾಯಿಕ ಜಲಮಾರ್ಗಗಳು ಕೇರಳದ ಹಿನ್ನೀರು, ಗುಜರಾತಿನ ಕೆಲವು ಕಾಲುವೆಗಳು, ಗೋವಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಅಸ್ತಿತ್ವದಲ್ಲಿವೆ. ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ ಈಗ ಅನುಷ್ಠಾನಗೊಳಿಸುತ್ತಿರುವ ಯೋಜನೆಯಿಂದಾಗಿ ಇನ್ನು
ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಿರುವಂತೆ ರಾಷ್ಟ್ರೀಯ ಜಲಮಾರ್ಗಗಳನ್ನೂ ನಿರ್ಮಿಸಲಾಗುತ್ತದೆ.
ರಾಷ್ಟ್ರೀಯ ಜಲಮಾರ್ಗ 1 : ಉತ್ತರಪ್ರದೇಶದ ಪ್ರಯಾಗದಿಂದ ಪಶ್ಚಿಮಬಂಗಾಳದ ಹಲ್ದಿಯಾವರೆಗೆ
೧೬೨೦ ಕಿ.ಮೀ.ಗಳಷ್ಟು ಉದ್ದದ ಅತಿದೊಡ್ಡ ಜಲಮಾರ್ಗ. ಗಂಗಾ, ಭಾಗೀರಥಿ ಮತ್ತು ಹೂಗ್ಲಿ ನದಿಗಳಲ್ಲಿ ಇದು ಹಾದುಹೋಗುತ್ತದೆ.
ರಾಷ್ಟ್ರೀಯ ಜಲಮಾರ್ಗ 2 : ಅಸ್ಸಾಂ ರಾಜ್ಯಕ್ಕೆ, ವಿಶೇ?ವಾಗಿ ಈಶಾನ್ಯ ರಾಜ್ಯಗಳಿಗೆ ಸರಕು ಸಾಗಾಣಿಕೆ ಬಹುದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗುವಂತೆ ಬ್ರಹ್ಮಪುತ್ರಾ ನದಿಯಲ್ಲಿ ಸಾದಿಯಾದಿಂದ ಧುಭ್ರಿವರೆಗೆ ಈ ಜಲಮಾರ್ಗವನ್ನು ಬಳಕೆಗೆ ಗುರುತಿಸಲಾಗಿದೆ.
ರಾಷ್ಟ್ರೀಯ ಜಲಮಾರ್ಗ 3 : ಇದು ಕೇರಳ ರಾಜ್ಯಕ್ಕೆ ಸೀಮಿತವಾಗಿದೆ. ಕೊಲ್ಲಂನಿಂದ ಕೊಟ್ಟಾಪುರಂ ವರೆಗೆ ೨೦೫ ಕಿ.ಮೀ.ಗಳ ಮಾರ್ಗ. ವಿಶೇಷವಾಗಿ ವರ್ಷದ ಎಲ್ಲ ಕಾಲಗಳಲ್ಲೂ ಬಳಕೆಗೆ ಸಾಧ್ಯವಿದೆ.
ರಾಷ್ಟ್ರೀಯ ಜಲಮಾರ್ಗ 4: ಇದು ಬಕ್ಕಿಂಗ್ಹ್ಯಾಮ್ ಕಾಲುವೆಯ ಜೀರ್ಣೋದ್ಧಾರದ ಯೋಜನೆ. ಎರಡನೇ ಅತಿದೊಡ್ಡ ಜಲಮಾರ್ಗ. ಆಂಧ್ರದ ಕಾಕಿನಾಡಾದಿಂದ ಪಾಂಡಿಚೆರಿವರೆಗೆ ೧೦೯೫ ಕಿ.ಮೀ. ಉದ್ದದ ಜಲಮಾರ್ಗ.
ರಾಷ್ಟ್ರೀಯ ಜಲಮಾರ್ಗ 5 : ಇದು ಒರಿಸ್ಸಾದಿಂದ ಪಶ್ಚಿಮಬಂಗಾಳದವರೆಗೆ ಬ್ರಾಹ್ಮಣಿ ನದಿಯ ಜಲಮಾರ್ಗ. ಸುಮಾರು ೬೨೩ ಕಿ.ಮೀ. ಉದ್ದದ ಮಾರ್ಗ ವಿಶೇಷವಾಗಿ ಕಲ್ಲಿದ್ದಲು, ಗೊಬ್ಬರ,
ಸಿಮೆಂಟ್ ಮತ್ತು ಕಬ್ಬಿಣ ಸಾಗಾಣಿಕೆಯಲ್ಲಿ ಭಾರೀ ವೆಚ್ಚವನ್ನು ಕಡಿತಗೊಳಿಸಬಹುದು.
ರಾಷ್ಟ್ರೀಯ ಜಲಮಾರ್ಗ 6 : ಇದು ಸಹ ಪ್ರಾಕೃತಿಕ ಕಾರಣಗಳಿಂದ ರಸ್ತೆಗಳ ನಿರ್ಮಾಣ ಕಷ್ಟಸಾಧ್ಯವಾದ ಅಸ್ಸಾಂ ರಾಜ್ಯದ್ದೇ ಮತ್ತೊಂದು ಮಾರ್ಗ. ಬರಾಕ್ ನದಿಯಲ್ಲಿ ಲಖಿಪುರದಿಂದ ಭಾಂಗದವರೆಗೆ ೧೨೧ ಕಿ.ಮೀ. ಉದ್ದದ ಮಾರ್ಗ. ಮಿಜೋರಾಂ ರಾಜ್ಯದ ವಾಣಿಜ್ಯ ಚಟುವಟಿಕೆಗಳಿಗೂ ಇದು ಉಪಯುಕ್ತವೆನಿಸಲಿದೆ.
ಈಗಾಗಲೇ ಮೊದಲ ಮೂರು ಜಲಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ. ಮಿಕ್ಕವು ನಿರ್ಮಾಣ ಮತ್ತು
ಬಳಕೆಯ ವಿವಿಧ ಹಂತಗಳಲ್ಲಿವೆ.
ಕರ್ನಾಟಕದಲ್ಲಿ ರಾಷ್ಟ್ರೀಯ ಜಲಸಾರಿಗೆ ಮಾರ್ಗಗಳು
ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ರಾ.ಜ. (ರಾಷ್ಟ್ರೀಯ ಜಲಮಾರ್ಗ)
ಕರ್ನಾಟಕದಲ್ಲಿ ಕಾಣಬರದಿದ್ದರೂ, ಯೋಜನೆಯ ಹಂತದಲ್ಲಿ ಹಲವಾರು ಮಾರ್ಗಗಳನ್ನು ಗುರುತಿಸಲಾಗಿದೆ. ವಿಸ್ತೃತ ಯೋಜನಾ ವರದಿಯೂ ಬಹುಪಾಲು ಮಾರ್ಗಗಳದ್ದು ಸಿದ್ಧವಿದೆ.
ಕರ್ನಾಟಕಕ್ಕೆ ಸಂಬಂಧಿಸಿದಂತೆ ಭೀಮಾ ನದಿ (ರಾ.ಜ. ೨೧), ಘಟಪ್ರಭಾ ನದಿ (ರಾ.ಜ. ೪೧), ಗುರುಪುರ ನದಿ (ರಾ.ಜ. ೪೩), ಕಬಿನಿ (ರಾ.ಜ. ೫೧), ಕಾಳಿ ನದಿ (ರಾ.ಜ. ೫೨), ಮಲಪ್ರಭಾ ನದಿ (ರಾ.ಜ. ೬೭), ನೇತ್ರಾವತಿ (ರಾ.ಜ. ೭೪), ಪಂಚಗಂಗವಳ್ಳಿ (ರಾ.ಜ. ೭೬), ಶರಾವತಿ ನದಿ (ರಾ.ಜ. ೯೦), ತುಂಗಭದ್ರಾ ನದಿ (ರಾ.ಜ. ೧೦೪) ಮತ್ತು ಉದ್ಯಾವರ ನದಿ (ರಾ.ಜ. ೧೦೫) ಜಲಮಾರ್ಗಗಳು ಪ್ರಮುಖವಾದವುಗಳು.ಇವುಗಳಲ್ಲಿ ತುಂಗಭದ್ರಾ ನದೀಮಾರ್ಗ ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಾಗಗಳಿಗೆ ಮತ್ತು ಭೀಮಾ ನದೀಮಾರ್ಗವು ತೆಲಂಗಾಣದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಬಕ್ಕಿಂಗ್ಹ್ಯಾಮ್ ಕಾಲುವೆಯ ಪುನರುಜ್ಜೀವನ
ಒಂದು ಕಾಲದಲ್ಲಿ ಆಂಧ್ರ, ತಮಿಳುನಾಡುಗಳ ಕರಾವಳಿ ಭಾಗಗಳ ಸರಕುಸಾಗಣೆಗೆ ವರದಾನದಂತಿದ್ದ ಬ್ರಿಟಿಷ್ ಕಾಲದ ಬಕ್ಕಿಂಗ್ಹ್ಯಾಂ ಕಾಲುವೆ ವಿಪರೀತ ನಗರೀಕರಣ ಮತ್ತು ಹೂಳುತುಂಬುವಿಕೆ, ಜಲಮಾರ್ಗದ ಮುಚ್ಚುವಿಕೆ, ನಿಂತುಹೋದ ನೀರಿನ ಹರಿವು ಇತ್ಯಾದಿಗಳಿಂದಾಗಿ ೬೦೦ ಕಿ.ಮೀ. ಉದ್ದವಿದ್ದ ಈ ಜಲಮಾರ್ಗಗಳು ಮುಚ್ಚಿಯೇ ಹೋದದ್ದು ದುರಂತ. ಇದು ಇತ್ತೀಚಿನ ಮೂರ್ನಾಲ್ಕು ದಶಕಗಳ ಬೆಳವಣಿಗೆ. ಆದರೆ ಈಗ ಒಳನಾಡು ಜಲಸಾರಿಗೆ ಪ್ರಾಧಿಕಾರವು [Inland Waterways Authority of India – IWAI] ಈ ಮಾರ್ಗವನ್ನು ಮತ್ತೆ ಚಾಲ್ತಿಗೊಳಿಸುವ ಮಹತ್ತ್ವಪೂರ್ಣ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಸರಕು ಮತ್ತು ಜನರ ಪ್ರಯಾಣ, ಕೃಷಿ ಹಾಗೂ ಮೀನುಗಾರಿಕೆಗೂ
ಅನುಕೂಲವಾಗುವಂತೆ ಕಾಲುವೆಗಳು ಅಲ್ಲಲ್ಲಿ ಪರಸ್ಪರ ಹಾಸುಹೊಕ್ಕಾಗಿ ಹೋಗುವಂತೆ ಜಲಮಾರ್ಗಗಳ ನವೀಕರಣದ ಬೃಹತ್ಕಾರ್ಯ ಕೈಗೆತ್ತಿಗೊಳ್ಳಲಾಗಿದೆ. ಕೇಂದ್ರಸರ್ಕಾರ ೨,೦೦೦ ಕೋಟಿ ರೂ.ಗಳನ್ನು ಇದಕ್ಕೆಂದು ಘೋಷಿಸಿದೆ. ಒಟ್ಟು ೧,೦೯೫ ಕಿ.ಮೀ. ಗಳ? ಉದ್ದದ ಜಲಮಾರ್ಗದ ನಿರ್ಮಾಣ ಯೋಜನೆ ಪೂರ್ಣಗುರಿ.
೧೮೦೬ರಲ್ಲಿ ಈ ಕಾಲುವೆಯನ್ನು ಆರಂಭಿಸಿದಾಗ ಚೆನ್ನೈನಿಂದ ಎನ್ನೂರಿನವರೆಗೆ ಕೇವಲ ೧೭ ಕಿ.ಮೀ. ಉದ್ದವಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ. ಇದೀಗ ಆಂಧ್ರದ ಕಾಕಿನಾಡಾ ಕಾಲುವೆ, ಎಲೂರು
ಕಾಲುವೆ, ಕೊಮ್ಮಮ್ಮೂರು ಕಾಲುವೆಗಳನ್ನು ಹಳೆಯ ಉತ್ತರ ಬಕ್ಕಿಂಗ್ಹ್ಯಾಮ್ ಕಾಲುವೆಯೊಟ್ಟಿಗೆ ಜೋಡಿಸಲಾಗುತ್ತದೆ. ಇದರ ವಿಸ್ತರಣೆಯಾದ ತಮಿಳುನಾಡಿನ ದಕ್ಷಿಣ ಬಕ್ಕಿಂಗ್ಹ್ಯಾಮ್ ಕಾಲುವೆಯನ್ನು ಚೆನ್ನೈ-ಮರಕ್ಕನಂ ಮಾರ್ಗವಾಗಿ ಪುದುಚೇರಿಯ ಕಲಾಪೇಟ್ಟಯ್ವರೆಗೆ ಈ ಜಲಮಾರ್ಗದ ಸಂಚಾರ ಸಾಗಲಿದೆ. ಅನೇಕ ಕಡೆಗಳಲ್ಲಿ ವಿಶೇಷವಾಗಿ ನಗರಪ್ರದೇಶಗಳಲ್ಲಿ ಈ ಕಾಲುವೆಗಳಲ್ಲಿ ದೀರ್ಘಕಾಲದಿಂದ ನೀರಿನ ಹರಿವು ಇಲ್ಲದ್ದರಿಂದ ರಸ್ತೆಗಳನ್ನೇ ಇವುಗಳಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.ಇದೂ ಸಹ ಬಹಳಷ್ಟು ತೊಡಕಾಗಿ ಪರಿಣಮಿಸಿದೆ.
ಸದ್ಯದ ಯೋಜನೆಯಂತೆ ಸಾವಿರ ಟನ್ ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಹಡಗುಗಳನ್ನು ಈ
ಮಾರ್ಗದಲ್ಲಿ ಸಂಚರಿಸುವಂತೆ ಆಳ, ಅಗಲಗಳನ್ನು ನಿರ್ಧರಿಸಲಾಗಿದೆ. IWAI ಯೋಜನೆಯು ತೆಲಂಗಾಣದ ಭದ್ರಾಚಲಂನಿಂದ ರಾಜಮುಂಡ್ರಿಯವರೆಗೆ ಗೋದಾವರಿ ನದಿಯ ಮೂಲಕ ಮತ್ತು ವಜೀರಾಬಾದಿನಿಂದ ವಿಜಯವಾಡ ಸಮೀಪದ ಪುಲಿಚಿಂತಲವರೆಗೆ ಕೃಷ್ಣಾನದಿಯ ಮೂಲಕ ಜಲಮಾರ್ಗ ಸಂಪರ್ಕವ್ಯವಸ್ಥೆ ರೂಪಿಸಲಾಗುತ್ತದೆ. ಈ ಜಲಮಾರ್ಗಗಳ ಇಕ್ಕೆಲಗಳ ನಿಸರ್ಗವು ರಮಣೀಯ ಅನುಭವವನ್ನು ನೀಡುತ್ತದೆ. ಆಂಧ್ರದ ನಂದಮೂರಿನಲ್ಲಿ ಅನತಿ ದೂರ ರಾಷ್ಟ್ರೀಯ ಹೆದ್ದಾರಿ, ಜಲಕಾಲುವೆ ಮತ್ತು ರೈಲ್ವೇ ಮಾರ್ಗಗಳು ಸಮಾನಾಂತರವಾಗಿ ಸಾಗಿ ಅಪೂರ್ವ ದೃಶ್ಯವನ್ನು ನಿರ್ಮಿಸಿವೆ.
ತಾಂತ್ರಿಕತೆಯ ಅಳವಡಿಕೆ
ಡಿಜಿಟಲೀಕರಣ ಸೇರಿದಂತೆ ಸಾಧ್ಯವಿರುವೆಡೆಗಳಲ್ಲೆಲ್ಲ ರೈಲ್ವೇ ಇಲಾಖೆಯು ತಾಂತ್ರಿಕತೆಯ ಅಳವಡಿಕೆಯನ್ನು ಮಾಡುತ್ತಿದೆ. ಕಾಗದರಹಿತ ಟಿಕೆಟ್ ಹಂಚಿಕೆಯಿಂದ ಹಿಡಿದು ಕಾಗದರಹಿತ ಫ್ಲಾಟ್ಫಾರಂಗಳವರೆಗೆ ಪರಿಸರಪೂರಕ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಟಿಕೆಟ್ ಬುಕಿಂಗ್ ಅನ್ನು ಸುವ್ಯವಸ್ಥಿತಗೊಳಿಸಲಾಗಿದೆ. ಅಗತ್ಯವಿರುವವರು ನಿಲ್ದಾಣದೊಳಗಿನ ಸಂಚಾರಕ್ಕೆ ವೀಲ್ಚೇರ್ ಅನ್ನು ಸಹ ಮುಂಗಡ ಕಾಯ್ದಿರಿಸಬಹುದು. ಟಿಕೆಟ್ ಅನ್ನು ನಾಣ್ಯಹಾಕಿ ಪಡೆಯುವ ವೆಂಡಿಂಗ್ ಮೆಷಿನ್ಗಳು, ಶುದ್ಧೀಕರಿಸಿದ ನೀರಿಗಾಗಿ ವೆಂಡಿಂಗ್ ಮೆಷಿನ್ಗಳು, ರೈಲುಗಳ ಆಗಮನ, ನಿರ್ಗಮನ, ಕಾಯ್ದಿರಿಸುವಿಕೆ ಕುರಿತ ಮಾಹಿತಿ ನೀಡುವ ಕಂಪ್ಯೂಟರ್ ಪ್ಯಾನಲ್ಗಳು, ರೈಲ್ವೇ ನಿಲ್ದಾಣಗಳಲ್ಲಿ ಹತ್ತಿಳಿಯಲು ಲಿಫ್ಟ್ಗಳು, ಎಸ್ಕಲೇಟರ್ಗಳು, ೪೦೦ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ
ಉಚಿತ ವೈಫೈ ಸಂಪರ್ಕ ನೀಡಲಾಗಿದೆ. ೨೪ ಗಂಟೆಗಳ ಕಾಲವೂ ಜನಸ್ಪಂದನಕ್ಕೆ ಅನುಕೂಲವಾಗುವಂತೆ ಫೇಸ್ಬುಕ್, ಟ್ವಿಟರ್ ಖಾತೆಗಳನ್ನು ನಿರ್ವಹಿಸಲಾಗುತ್ತಿದೆ. ರೈಲ್ವೇ ಟ್ವಿಟರ್ ಖಾತೆಗೆ ದೂರು ಸಲ್ಲಿಸಿದ ಕೆಲ ಕ್ಷಣಗಳಲ್ಲೇ ಬೋಗಿಗೆ ಪೊಲೀಸರು ಆಗಮಿಸಿದ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಿದ ಅನೇಕ ಸಂದರ್ಭಗಳು ಪ್ರಯಾಣಿಕರಿಂದ ಪ್ರಶಂಸೆಗೊಳಗಾಗಿವೆ. ಸಾವಿರಕ್ಕೂ ಹೆಚ್ಚು ಸ್ಟೇಷನ್ಗಳನ್ನು ಆದರ್ಶ ರೈಲ್ವೇನಿಲ್ದಾಣಗಳನ್ನಾಗಿಸುವತ್ತ ಗುರಿ ಹೊಂದಲಾಗಿದೆ.
ಮೊದಲಿದ್ದ ವ್ಯವಸ್ಥೆಯಲ್ಲಿ ದೇಶದಾದ್ಯಂತ ಏಕಕಾಲಕ್ಕೆ ೨೦೦೦ ಟಿಕೆಟ್ಗಳನ್ನು ಮಾತ್ರ ಆನ್ಲೈನ್
ಮೂಲಕ ಬುಕ್ ಮಾಡಲು ಅವಕಾಶವಿತ್ತು. ಈಗ ೭೨೦೦ ಟಿಕೆಟ್ಗಳವರೆಗೆ ಬುಕ್ ಮಾಡುವಂತೆ
ಸುಧಾರಿಸಲಾಗಿದೆ. ವಿಕಲ್ಪ ಯೋಜನೆಯಂತೆ ಯಾವುದೇ ಶ್ರೇಣಿಯಲ್ಲಿಯೂ ಸೀಟುಗಳು ಖಾಲಿ
ಇರದಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ವೇಟಿಂಗ್ ಲಿಸ್ಟ್ನಲ್ಲಿರುವ ಪ್ರಯಾಣಿಕರಿಗೆ ಸೀಟು
ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತಿದೆ.
ಸರಕು ರವಾನೆಗೆ ಆದ್ಯತೆ
ಸುಮಾರು ೩೫%ಕ್ಕೂ ಹೆಚ್ಚು ರೈಲುಗಳು ಸರಕು ಸಾಗಣೆಗೆ ಬಳಕೆಯಾಗುವುದರಿಂದ ೨೦೧೪ರಿಂದೀಚೆಗೆ ಅನೇಕ ಸುಧಾರಣೆಗಳನ್ನು ಮಾಡುವುದರ ಮೂಲಕ ಸಮಯ, ಸಾಗಾಣಿಕೆ ವೆಚ್ಚದ ಉಳಿತಾಯದೆಡೆಗೆ ಗಮನ ಹರಿಸಲಾಗುತ್ತಿದೆ. ಆಟೋಮೊಬೈಲ್ ಉತ್ಪನ್ನಗಳ ಸಾಗಾಣಿಕೆಗೆಂದೇ ಚೆನ್ನೈನಲ್ಲಿ ಆಟೋ ಹಬ್ ನಿರ್ಮಿಸಲಾಗಿದೆ. ಉಕ್ಕು, ಸಿಮೆಂಟ್ ಇತ್ಯಾದಿ ಸೇರಿದಂತೆ ಭಾರಿ ಪ್ರಮಾಣದಲ್ಲಿರುವ ವಸ್ತುಗಳ ಸಾಗಾಣಿಕೆಗೆ ಅನುಕೂಲವಾಗುವಂತೆ ಖಾಸಗಿಯವರಿಗೂ ವಿಶೇಷ ನಿಲ್ದಾಣಗಳ ಜೊತೆಗೆ Wagon Leasing Scheme ಕಂಪ್ಯೂಟರೀಕೃತವಾಗಿ ಅವಶ್ಯ ಸಂಖ್ಯೆಯ
ವ್ಯಾಗನ್ಗಳನ್ನು ಕಾಯ್ದಿರಿಸುವ ವ್ಯವಸ್ಥೆ, ಮೆರ್ರಿ ಗೋ ರೌಂಡ್ ಹೆಸರಿನಲ್ಲಿ ಕಡಮೆ ದೂರದ ಪ್ರಯಾಣ
ವ್ಯವಸ್ಥೆಗಳನ್ನು ಪರಿಚಯಿಸಲಾಗಿದೆ.
ವಿಶೇಷವಾಗಿ ಪಾಟ್ನಾದ ದಿಘಾ ಬಳಿ ಗಂಗಾನದಿಗೆ ಸೇತುವೆಯೊಂದನ್ನು ನಿರ್ಮಿಸಿ ಸರಕು ತುಂಬಿಸಿದ
ಬೃಹತ್ ವಾಹನಗಳನ್ನು ತೆರೆದ ವ್ಯಾಗನ್(ಬೋಗಿ ಇಲ್ಲದ ಬರೀ ಅಡಿಫಲಕ ಮಾತ್ರ ಇರುವುದು)
ಗಳಲ್ಲಿ ಒಂದು ತೀರದಿಂದ ಮತ್ತೊಂದು ತೀರಕ್ಕೆ ಸಾಗಿಸಲಾಗುತ್ತಿದೆ. ಇದು ರೋಲ್ ಆನ್ ರೋಲ್
ಆಫ್ ಮಾದರಿಯಲ್ಲಿರುವ ವ್ಯವಸ್ಥೆ. ಇದರಿಂದ ಅಲ್ಲಿನ ರಸ್ತೆಗಳ ಮೇಲೆ ಉಂಟಾಗುತ್ತಿದ್ದ ಅಪಾರ ದಟ್ಟಣೆ
ಕಡಮೆಯಾಗಿದೆ.
ಮತ್ತೊಂದು ಮಹತ್ತ್ವದ ಸಂಗತಿಯೆಂದರೆ ಬರೀ ೨೦೧೫-೧೬ ಸಾಲಿನಲ್ಲಿಯೇ ಸಾರ್ವಜನಿಕರು
ಮತ್ತು ಖಾಸಗಿಯವರ ಪಾಲ್ಗೊಳ್ಳುವಿಕೆಯ ಪಿಪಿಪಿ ಯೋಜನೆಯ ಮೂಲಕ ೧೫,೦೦೦ ಕೋಟಿ ರೂ.
ಗಳನ್ನು ವಿವಿಧ ಯೋಜನೆಗಳಿಗೆಂದು ಸಂಗ್ರಹಿಸಲಾಗಿದೆ. ವಿಶೇಷವಾಗಿ ಕಲ್ಲಿದ್ದಲು ಉದ್ಯಮ ಮತ್ತು ಗಣಿ
ಪ್ರದೇಶಗಳ ನಡುವಿನ ಸಂಪರ್ಕ ರೈಲುಗಳ ಸಂಖ್ಯೆ ಮತ್ತು ಮಾರ್ಗಗಳನ್ನು ಹೆಚ್ಚಿಸುವಲ್ಲಿ ಈ ಮೊತ್ತವನ್ನು
ಹೂಡಿಕೆ ಮಾಡಲಾಗುತ್ತಿದೆ. ಗುಜರಾತಿನ ತುನಾ ಬಂದರಿಗೆ ೨೦೧೫ರಲ್ಲಿ ಪಿಪಿಪಿ ಮೂಲಕ ಈಗಾಗಲೇ
ರೈಲ್ವೇ ಸಂಪರ್ಕ ಕಲ್ಪಿಸಲಾಗಿದೆ. ಮಹಾರಾಷ್ಟ್ರದ ಜೈಗಢ, ದಿಗಿ ಮತ್ತು ರೇವಾಸ್ ಬಂದರುಗಳಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಯೋಜನೆ ಮಂಜೂರಾಗಿದೆ.
ಈಶಾನ್ಯ, ಜಮ್ಮು-ಕಾಶ್ಮೀರಕ್ಕೆ ಸಂಪರ್ಕ
ದೇಶದ ಬಹುಭಾಗದ ಜನತೆಯು ಅತ್ಯಂತ ಪ್ರಮುಖ ಯಾತ್ರಾ ಸ್ಥಳಗಳಲ್ಲೊಂದಾದ ವೈಷ್ಣೋದೇವಿಗೆ
ತಲಪಲು ಸಾಧ್ಯವಾಗುವಂತೆ ಕಟ್ರಾದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಿರುವುದು ಮಹತ್ತ್ವದ ಸಾಧನೆ.
ಗುವಾಹಟಿಯಿಂದ ಮೇದಿಪತಾರ್ಗೆ ರೈಲ್ವೇ ಹಳಿಯೊಂದನ್ನು ಜೋಡಿಸುವುದರ ಮೂಲಕ ಮೇಘಾಲಯ ರಾಜ್ಯವು ಮೊದಲ ಬಾರಿಗೆ ರೈಲ್ವೆಯ ಭೂಪಟಕ್ಕೆ ಸೇರಿಕೊಂಡಂತಾಗಿದೆ. ಸವಾಲಿನ ಕೆಲಸವೆನಿಸಿದ್ದ ಅಸ್ಸಾಂನ ಬರಾಕ್ ಕಣಿವೆಗೆ ಬ್ರಾಡ್ಗೇಜ್ ಹಳಿ ಹಾಕಿ ರೈಲ್ವೇ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿಯವರೆಗೂ ತ್ರಿಪುರಾ ರಾಜ್ಯದ ರಾಜಧಾನಿ ಅಗರ್ತಲಾಗೆ ಬ್ರಾಡ್ಗೇಜ್ ಹಳಿಯ ಸಂಪರ್ಕವೇ ಇರಲಿಲ್ಲ ಎಂದರೆ ಅಚ್ಚರಿಯಾದೀತೇನೋ. ಆದರೆ ಕಳೆದೆರಡು ವ?ಗಳಲ್ಲಿ ಇದು ನನಸಾಗಿದೆ. ಇನ್ನು ಕೆಲವೇ ವ?ಗಳಲ್ಲಿ ಮೀಟರ್ಗೇಜ್ ಸಂಪೂರ್ಣವಾಗಿ ಈಶಾನ್ಯ ರಾಜ್ಯಗಳಿಂದ ಮಾಯವಾಗಿ ದೇಶದ ಮಿಕ್ಕೆಲ್ಲ ಭಾಗಗಳಿಗೆ ಸಂಪರ್ಕ ಹೊಂದುವಂತೆ ಬ್ರಾಡ್ಗೇಜ್ ಹಳಿಗಳಾಗಿ ಪರಿವರ್ತನೆಯಾಗುತ್ತದೆ. ೨೦೧೫-೧೬ ವರ್ಷವೊಂದರಲ್ಲೇ ೫೪೫ ಕಿ.ಮೀ.ಗಳಷ್ಟು ಬ್ರಾಡ್ಗೇಜ್ ಪರಿವರ್ತನೆಯ ಕಾರ್ಯ ಆರಂಭಗೊಂಡಿದೆ.
ಸ್ವಚ್ಛಗೊಳ್ಳುತ್ತಿದೆ ರೈಲುನಿಲ್ದಾಣ
ನರೇಂದ್ರ ಮೋದಿಯವರ ಮಹತ್ತ್ವದ ಪ್ರಯತ್ನವಾದ ಸ್ವಚ್ಛಭಾರತ ಅಭಿಯಾನಕ್ಕೆ ಬೃಹತ್ಪ್ರಮಾಣದಲ್ಲಿ ಸ್ಪಂದಿಸಿದ್ದು ರೈಲ್ವೇ ಇಲಾಖೆ. ಇಲ್ಲಿಯವರೆಗೂ ಇಷ್ಟೊಂದು ಕಾಳಜಿಯನ್ನು ಸ್ವಚ್ಛತೆಯೆಡೆಗೆ ವಹಿಸಿರಲಿಲ್ಲ ಎನ್ನುವುದು ಮೇಲ್ನೋಟಕ್ಕೇ ಗೋಚರವಾಗುತ್ತಿದೆ.
೨೫೦ಕ್ಕೂ ಹೆಚ್ಚು ರೈಲುಮಾರ್ಗಗಳಲ್ಲಿ ರೈಲ್ವೇ ಪ್ರಯಾಣದ ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವಂತೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಸಂಖ್ಯೆಯನ್ನು ನಿತ್ಯವೂ ಹೆಚ್ಚಿಸಲಾಗುತ್ತಿದೆ. ಅನೇಕ ರೈಲ್ವೇ ನಿಲ್ದಾಣಗಳನ್ನು ಸ್ವಚ್ಚ ನಿಲ್ದಾಣಗಳೆಂದು ಗುರುತಿಸಿ ಘೋಷಿಸಲಾಗಿದೆ. ಒಂದು ವೇಳೆ ಪ್ರಯಾಣಿಕನೊಬ್ಬನಿಗೆ ತಾನು ಪಯಣಿಸುತ್ತಿರುವ ಕೋಚ್ ಸ್ವಚ್ಛವಾಗಿಲ್ಲ ಎಂದು ಎನಿಸಿದರೆ ೫೮೮೮೮ಕ್ಕೆ ಪೋನ್ ಮಾಡಿದರೆ ಆಯಿತು. ಅದಕ್ಕೆಂದೇ ‘Clean My Coach’ ಎಂಬ ಆಪ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಕೋಚ್ಗಳ ಬಟ್ಟೆ, ಪರದೆಗಳ ಸ್ವಚ್ಛತೆಗಾಗಿ ಯಾಂತ್ರೀಕೃತ ಲಾಂಡ್ರಿಗಳನ್ನು ನಿರ್ಮಿಸಲಾಗಿದೆ. ಕೋಚ್ಗಳನ್ನು ನಿಲ್ದಾಣದಲ್ಲಿ ಸ್ವಚ್ಛಗೊಳಿಸಲು ಹೆಚ್ಚುಹೆಚ್ಚು ಯಾಂತ್ರೀಕೃತ ಉಪಕರಣಗಳನ್ನು ಬಳಸಲಾಗುತ್ತಿದೆ. ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡಿ ಮಾನದಂಡಗಳನ್ನು ನಿಗದಿಗೊಳಿಸಲಾಗುತ್ತಿದೆ. ಸ್ವಚ್ಛತೆಯ ಆಡಿಟ್ ಅನ್ನು ಕಾಲಕಾಲಕ್ಕೆ ಹೊರಗಿನ ಪರಿಣತರಿಂದ ಮಾಡಿಸಲಾಗುತ್ತಿದೆ. ರ್ಯಾಂಕಿಂಗ್ ನೀಡಲಾಗುತ್ತದೆ. ಎಲ್ಲ ರೈಲ್ವೇ ನಿಲ್ದಾಣಗಳಲ್ಲಿ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅನೇಕ ಸ್ವಯಂಸೇವಾ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಸಾರ್ವಜನಿಕರ ಶ್ರಮದಾನಗಳ ಮೂಲಕ ಈ ಕಾರ್ಯಗಳು ಸಾಧ್ಯವೆನಿಸಿದೆ.
ಹೊಸ ಅನುಷ್ಠಾನಗಳು
ಎರಡು ಪ್ರತ್ಯೇಕ ದ್ವೀಪಗಳಂತಿದ್ದ ಉತ್ತರ ಮತ್ತು ದಕ್ಷಿಣ ಬಿಹಾರದ ರೈಲ್ವೇ ವಲಯಗಳಿಗೆ ಇದೀಗ
ಸಂಪರ್ಕ ಸಾಧ್ಯವಾಗಿದೆ. ಗಂಗಾನದಿಗೆ ಅಡ್ಡಲಾಗಿ ಎರಡು ವಿಶೇಷ ಸೇತುವೆಗಳನ್ನು ಇದಕ್ಕೆಂದೇ
ನಿರ್ಮಿಸಲಾಗಿದೆ. ಅತ್ಯಂತ ದಟ್ಟಣೆಯ ಮುಂಬಯಿ ಡಿವಿಜನ್ನಿನ ರೈಲ್ವೇ ನಿರ್ವಹಣೆಗೆಂದು ವಿದ್ಯುತ್
ಪೂರೈಕೆಯ ವ್ಯವಸ್ಥೆಯನ್ನು ೧೫೦೦ V-DC ಇಂದ ೨೫೦೦೦ ಗಿ-ಂಅಗೆ ಅತ್ಯಂತ ಯಶಸ್ವಿಯಾಗಿ
ಬದಲಿಸಲಾಗಿದೆ. ರೈಲ್ವೇ ಹಳಿಯ ಇಕ್ಕೆಲಗಳಲ್ಲಿ ಹಸಿರು ತುಂಬಿಸಲು ಮರಗಳನ್ನು ಬೆಳೆಸುವ ಕಾರ್ಯವನ್ನು ಆಯಾ ರಾಜ್ಯಸರ್ಕಾರಗಳ ಸಹಕಾರದೊಂದಿಗೆ ತೀವ್ರ ವೇಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹರ್ಯಾಣಾ ಮತ್ತು ಪಂಜಾಬ್ ರಾಜ್ಯಗಳು ಇದರಲ್ಲಿ ಮುಂಚೂಣಿಯಲ್ಲಿವೆ.
ಅತಿವೇಗದ ರೈಲು (ಬುಲೆಟ್ ಟ್ರೈನ್)
ಅತಿವೇಗದ ರೈಲ್ವೇ ವ್ಯವಸ್ಥೆ ಜಪಾನ್, ಚೀನಾ ಇತ್ಯಾದಿ ದೇಶಗಳಲ್ಲಿ ಯಶಸ್ವಿಯಾಗಿದೆ. ಇದೇ ರೀತಿ
ಭಾರತದಲ್ಲಿಯೂ ಬುಲೆಟ್ ಟ್ರೈನ್ ಮಾರ್ಗಗಳನ್ನು ನಿರ್ಮಿಸುವ ಮಹತ್ತ್ವಾಕಾಂಕ್ಷೆಯಿಂದ ಪ್ರತ್ಯೇಕ High Speed Rail Corporation (HSRC) ಅನ್ನು ರಚಿಸಲಾಗಿದೆ. ಮೊದಲ ಹಂತದಲ್ಲಿ ಅಹಮದಾಬಾದ್ ಮತ್ತು ಮುಂಬಯಿ ನಡುವಿನ ಮಾರ್ಗವನ್ನು ಇದಕ್ಕೆ ಹೊಂದಿಸಲು ಅಧ್ಯಯನ, ಪ್ರಯೋಗಗಳು ಸಾಗಿವೆ. ಇದು ಕೇವಲ ವೇಗದ ಪ್ರಯಾಣಕ್ಕೆ ಮಾತ್ರವಲ್ಲ ಪರಿಸರಕ್ಕೂ ಪೂರಕವಾಗಿದೆ. ವಾಹನಗಳ ಓಡಾಟದಿಂದ ಗುತ್ತಿರುವ ಇಂಗಾಲಾಮ್ಲದ ಹೊರಸೂಸುವಿಕೆ ಗಣನೀಯ ಪ್ರಮಾಣದಲ್ಲಿ ಕಡಮೆಯಾಗಲಿದೆ. ಆದರೆ ಭಾರತದಲ್ಲಿ ಇನ್ನೂ ಈ ರೀತಿಯ ರೈಲುಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಗೊಂಡಿಲ್ಲದ ಕಾರಣ ತಂತ್ರಜ್ಞಾನವನ್ನು ಹೊರದೇಶಗಳಿಂದ ಪಡೆಯಬೇಕಾಗಿದೆ.
ಭಾರತದಲ್ಲಿ ಯಾವುದೇ ಅತಿವೇಗದ ರೈಲುಮಾರ್ಗಗಳಿಲ್ಲ. ಇಲ್ಲಿಯವರೆಗೂ ಇದ್ದ ಅತಿ ವೇಗದ ರೈಲುಗಳೆಂದರೆ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ಪ್ರೆಸ್ಗಳಾಗಿವೆ. ಹೊಸದಿಲ್ಲಿಯಿಂದ ಭೋಪಾಲ್ವರೆಗೆ ಪಯಣಿಸುವ ಸರಾಸರಿ ೧೦೦ ಕಿ.ಮೀ.ಗಳ? ವೇಗವನ್ನು ಹೊಂದಿರುವ ಶತಾಬ್ದಿ ರೈಲು ಮೊದಲ ಸ್ಥಾನದಲ್ಲಿತ್ತು. ರಾಜಧಾನಿ ರೈಲಿನ ಸರಾಸರಿ ವೇಗವೂ ಗಂಟೆಗೆ ೯೦ ಕಿ.ಮೀ.ಗಳಷ್ಟಿದೆ. ೨೦೧೬ರಲ್ಲಿ ಲೋಕಾರ್ಪಣೆಗೊಂಡ ದೆಹಲಿ ಆಗ್ರಾ ನಡುವೆ ಸಂಚರಿಸುವ ಗತಿಮಾನ್ ಎಕ್ಸ್ಪ್ರೆಸ್ ರೈಲು ಸದ್ಯದ ಅತಿ ವೇಗದ ರೈಲು ಎನಿಸಿದೆ. ಇದು ಗಂಟೆಗೆ ೧೬೦ ಕಿ.ಮೀ.ಗಳ? ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಸದ್ಯಕ್ಕೆ ೧೧೩ ಕಿ.ಮೀ. ಗಳ ವೇಗದಲ್ಲಿ ಚಲಿಸುತ್ತಿದೆ. ೧೦೦ ನಿಮಿ?ಗಳಲ್ಲಿ ದೆಹಲಿಯ ನಿಜಾಮುದ್ದೀನ್ ನಿಲ್ದಾಣದಿಂದ ಆಗ್ರಾವನ್ನು ತಲಪುತ್ತಿದೆ.
ಮುಂಬಯಿ ಹೈದರಾಬಾದ್ ನಡುವೆ ೫೦೮ ಕಿ.ಮೀ.ಗಳ ದೂರದ ಅತಿವೇಗದ ರೈಲು ಸೇವೆಯನ್ನು ಅಳವಡಿಸಲು ಜಪಾನಿನ ತಂತ್ರಜ್ಞಾನದ ಸಹಯೋಗವನ್ನು ಪಡೆದುಕೊಳ್ಳಲಾಗುತ್ತಿದೆ. ಸುವರ್ಣ
ಚತುಷ್ಪಥ ರಸ್ತೆಯಂತೆಯೇ ಕೋಲ್ಕತಾ, ದೆಹಲಿ, ಮುಂಬಯಿ, ಚೆನ್ನೈಗಳ ನಡುವೆ ಅತಿವೇಗದ ರೈಲ್ವೇ
ಸಂಪರ್ಕ ಸಾಧಿಸಲು ವಿಶೇ?ಗಮನ ನೀಡಲಾಗಿದೆ.
ವೈಮಾನಿಕ ಕ್ಷೇತ್ರ
ಕಳೆದ ವರ್ಷ ೧೦ ಕೋಟಿ ಜನರು ವಿಮಾನಯಾನ ಕೈಗೊಂಡಿದ್ದಾರೆ ಎಂಬ ಅಂಕಿ-ಸಂಖ್ಯೆಗಳು ವಿಮಾನ ಸಾರಿಗೆ ಕ್ಷೇತ್ರದಲ್ಲಿ ಭಾರತದ ಬೃಹತ್ ನಿರ್ವಹಣೆಯನ್ನು ಸೂಚಿಸುತ್ತದೆ. ಈ ಕ್ಷೇತ್ರದಲ್ಲೂ ಭಾರತದಲ್ಲಿ ಆಗಿರುವ ಬೆಳವಣಿಗೆ ಕಳೆದ ಐದು ವ?ಗಳಲ್ಲಿ ಎದ್ದುತೋರುತ್ತಿದೆ. ಪ್ರಧಾನಮಂತ್ರಿಗಳು ಹೇಳಿದಂತೆ ಹವಾಯಿ ಚಪ್ಪಲಿ ಧರಿಸುವ ವ್ಯಕ್ತಿಯೂ ಹವಾಯಿ ಜಹಾಜಿ(ವಿಮಾನ)ನಲ್ಲಿ ಓಡಾಡುವಂತಾಗಬೇಕು ಎನ್ನುವ ದಿನಗಳು ಶೀಘ್ರದಲ್ಲೇ ಬರುವಂತಹ ಮುನ್ಸೂಚನೆಗಳು ಕಾಣುತ್ತಿವೆ. ಸರಕು ಸಾಗಣೆಗೂ ಹೆಚ್ಚು ಆದ್ಯತೆಯನ್ನು ನೀಡಿ ವಿಮಾನಯಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಬರುತ್ತಿವೆ. ರಾಜ್ಯದ ರಾಜಧಾನಿಗಳ ಹೊರತಾಗಿ ದೇಶದ ಬಹುಪಾಲು ಪ್ರಮುಖ ಪಟ್ಟಣಗಳಿಗೆ ಸುಲಭದರದ ವಿಮಾನಯಾನ ಸೌಲಭ್ಯ ಕಲ್ಪಿಸುವ ಮಹತ್ತ್ವಾಕಾಂಕ್ಷೆಯ ಉಡಾನ್ ಯೋಜನೆಯೂ ಅವುಗಳಲ್ಲೊಂದು.
ಪರಿವರ್ತನೆ ಅನಿವಾರ್ಯ
ಭಾರತದ ಆರ್ಥಿಕತೆ ಅತ್ಯಂತ ಆಶಾದಾಯಕ ವೇಗದಲ್ಲಿ ಬೆಳೆಯುತ್ತಿದೆ. ಅನೇಕ ಪಾಶ್ಚಿಮಾತ್ಯ ದೇಶಗಳ ಆರ್ಥಿಕತೆಯು ಕುಸಿಯುತ್ತಿದ್ದರೆ, ಭಾರತದ ಆರ್ಥಿಕತೆ ೭.೪% ವೇಗದಲ್ಲಿ ಬೆಳೆಯುತ್ತಿದೆ. ಪ್ರಪಂಚದ
ಇನ್ನಿತರ ದೇಶಗಳಿಗಿಂತ ಬಂಡವಾಳ ಹೂಡಿಕೆಗೆ ಭಾರತವೇ ಆದ್ಯತೆಯ ಸ್ಥಾನ ಗಳಿಸುತ್ತಿದೆ. ಇದೀಗ ಭಾರತದಲ್ಲಿ ಕಂಡುಬಂದಿರುವ ಸಮರ್ಥ ನೇತೃತ್ವ, ಭ್ರಷ್ಟತೆಯನ್ನು ನಿರ್ಮೂಲಮಾಡುವ ಪ್ರಯತ್ನಗಳು,
ಸ್ವಚ್ಛ ಪಾರದರ್ಶಕ ಉದ್ಯಮಸ್ನೇಹಿ ನೀತಿಗಳು ಮತ್ತು ಜನಸಂಖ್ಯಾ ಸಂರಚನೆಯ ಭಾಗವಾಗಿ (Demographic Dividend) ಮುಂದಿನ ದಿನಗಳಲ್ಲಿ ಇಲ್ಲಿ ಲಭ್ಯವಿರುವ ೫೫ ಕೋಟಿಯಷ್ಟು ಬೃಹತ್ಸಂಖ್ಯೆಯ ಯುವಜನತೆಯೂ ಜಗತ್ತಿನ ಕಣ್ಣಮುಂದಿರುವುದು ಇದಕ್ಕೆ ಕಾರಣ. ಉದ್ಯಮವಲಯದಲ್ಲಿ ಸಂಚಲನ ಮೂಡಿಸುತ್ತಿರುವ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಅಮೃತ್ ಸಿಟಿ, ಸ್ಮಾರ್ಟ್ ಸಿಟಿ, ಹೆಚ್ಚುತ್ತಿರುವ ನಗರೀಕರಣ ಇವೆಲ್ಲವೂ ಭಾರತದ ಪ್ರಸ್ತುತ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ, ಸುವ್ಯವಸ್ಥಿತಗೊಳಿಸುವ ಜೊತೆಗೆ ಮಿತವ್ಯಯಕಾರಿಯಾಗಿರುವಂತೆ ಮಾಡಲೇಬೇಕಾದ ಅನಿವಾರ್ಯತೆಯೆಡೆಗೆ ತಂದು ನಿಲ್ಲಿಸಿವೆ. ವಾಹನ ತಯಾರಿಕೆ, ಮೂಲಭೂತಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸರಕು ಸಾಗಣೆಯ ಉದ್ಯಮಗಳು ಬೃಹತ್ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯತ್ತ ದಾಪುಗಾಲು ಹಾಕುತ್ತಿವೆ. ಇವನ್ನು ಗುರುತಿಸಿ ಸಾರಿಗೆ ವ್ಯವಸ್ಥೆಯ ಸುಧಾರಣೆಯತ್ತ ಕೇಂದ್ರಸರ್ಕಾರ ಈಗಾಗಲೇ ಹೆಜ್ಜೆ ಇಟ್ಟಿರುವುದು
ಸ್ವಾಗತಾರ್ಹ.