ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2021 > “ಸಮಾಜ-ಆಡಳಿತಗಳ ನಡುವೆ ಸುಸಂಘಟನೆ ಏರ್ಪಟ್ಟರೆ ಮಾತ್ರ ರಾಷ್ಟ್ರವಿಕಾಸ ಸಾಧ್ಯ”: ಧರ್ಮಪಾಲ್

“ಸಮಾಜ-ಆಡಳಿತಗಳ ನಡುವೆ ಸುಸಂಘಟನೆ ಏರ್ಪಟ್ಟರೆ ಮಾತ್ರ ರಾಷ್ಟ್ರವಿಕಾಸ ಸಾಧ್ಯ”: ಧರ್ಮಪಾಲ್

ಖ್ಯಾತ ಗಾಂಧಿವಾದಿ ಇತಿಹಾಸಸಂಶೋಧಕ ಧರ್ಮಪಾಲ್ರೊಡನೆಉತ್ಥಾನಕ್ಕಾಗಿ ಎಸ್.ಆರ್. ರಾಮಸ್ವಾಮಿಯವರು 1989 ಕೊನೆಯಲ್ಲಿ ನಡೆಸಿದ ವಿಶೇಷ ಸಂದರ್ಶನ. ಇದುಉತ್ಥಾನ 1990 ಜನವರಿ ವಿಶೇಷಾಂಕದಲ್ಲಿ ಪ್ರಕಟವಾಯಿತು.

ಪ್ರಶ್ನೆ: ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಜನರಲ್ಲಿ ಹರಡಿದ್ದ ಧ್ಯೇಯವಾದ, ರಾಷ್ಟ್ರಕ ಭಾವನೆಗಳು ಆಮೇಲೆ ಮುಂದುವರಿಯಲಿಲ್ಲವೇಕೆ?

ಉತ್ತರ: ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಅದೊಂದು ಬಗೆಯ ಅಲೌಕಿಕ ಉತ್ಸಾಹ ಹರಡಿತ್ತೆಂಬುದು ನಿಜ. ಆದರೆ ಅದರ ಮೂಲವು ಭಾವನಾಸ್ತರದಲ್ಲಿ ಇದ್ದಿತೇ ಹೊರತು ಅದಕ್ಕೆ ವಾಸ್ತವವಾಗಿ ಗಟ್ಟಿ ನೆಲಗಟ್ಟು ಇರಲಿಲ್ಲ. ಗಟ್ಟಿಯಾದದ್ದೇನನ್ನೂ ಸಾಧಿಸುವುದು ಆಗ ಶಕ್ಯವೂ ಇರಲಿಲ್ಲ. ಗಾಂಧಿಯವರು ಒಂದು ಪವಾಡವನ್ನೆಸಗಿದರು; ಆದರೆ ಅದು ತಾತ್ಕಾಲಿಕವಾಯಿತು. ಇದನ್ನೂ ಗಾಂಧಿ ಅರಿಯದವರಲ್ಲ. ರಾಷ್ಟ್ರಪುನರ್ನಿರ್ಮಾಣಕ್ಕೆ ತಳಹದಿಯನ್ನೇನೊ ಅವರು ನಿರ್ಮಿಸಿದರು. ಅದರ ಆಧಾರದ ಮೇಲೆ ಸುಭದ್ರ ಸಮೃದ್ಧ ರಾಷ್ಟ್ರವೊಂದನ್ನು ಕಟ್ಟುವ ಕೆಲಸ ಆರಂಭವಾಗಬಹುದಿತ್ತು. ಇದು ಹಾಗಾಗಲಿಲ್ಲ ಎಂಬುದೇ ದುರಂತ.

1922ರಿಂದ 1947ರ ವರೆಗಿನದು ಒಂದು ಪವಾಡಯುಗವೆನ್ನಬಹುದು. ಅದನ್ನು ಒಂದು ಬಿರುಗಾಳಿಗೆ ಹೋಲಿಸಬಹುದು. ವೈಯಕ್ತಿಕ ಉನ್ಮೇಷಕ್ಕೆ ಸಾಮೂಹಿಕ ಸಾಂಸ್ಥಿಕ ಸ್ವರೂಪವಿತ್ತವರು ಗಾಂಧಿ. ಆದರೆ ಅದು ತಾತ್ಕಾಲಿಕ ಎಂಬುದನ್ನು ಗಾಂಧಿ ಅರಿತೇ ಇದ್ದರು. ಗಾಂಧಿಯವರ ದೃಷ್ಟಿ ಏನಿತ್ತೆಂಬುದನ್ನು ಅವರ ಹಲವಾರು ನಿರ್ಧಾರಗಳಿಂದ ಊಹಿಸಬಹುದು. ಉದಾಹರಣೆಗೆ ಖಾದಿಯು ಭಾರತದ ಬಟ್ಟೆ ಆವಶ್ಯಕತೆಯನ್ನು ಪೂರೈಸಬೇಕೆಂಬ ಉದ್ದೇಶದಿಂದಲ್ಲ ಅವರು ಖಾದಿ ಉದ್ಯಮವನ್ನು ಪ್ರತಿಪಾದಿಸಿದ್ದು! ವಾಸ್ತವವಾಗಿ ‘ನಾವು ಖಾದಿಯನ್ನು ಆರಿಸಿಕೊಂಡದ್ದು ಒಂದು ಆಕಸ್ಮಿಕವೇ’ ಎಂದು 1945ರ ಸುಮಾರಿನಲ್ಲಿ ಗಾಂಧಿ ಹೇಳಿದ್ದುಂಟು. ಗಾಂಧಿಯವರು ಅರಸುತ್ತಿದ್ದುದು ಸರ್ಕಾರದ ಮಧ್ಯಪ್ರವೇಶ ಸಾಧ್ಯವಾಗದ ಒಂದು ಜೀವನಕ್ಷೇತ್ರವನ್ನು. ಖಾದಿ ಅಂಥ ಒಂದು ಕ್ಷೇತ್ರವಾಗಿತ್ತು. ಕೃಷಿ ಮೊದಲಾದ ಕ್ಷೇತ್ರಗಳು ಮುಖ್ಯವಾದರೂ ಅವುಗಳಲ್ಲಿ ಸರ್ಕಾರದ ನಿಯಂತ್ರಣ ಬಂದೇ ಬರುತ್ತದೆ.

ಗಾಂಧಿಯವರ ಸಾಧನೆಯೆಂದರೆ ಬ್ರಿಟನ್ನಿನ ಬಗೆಗೆ ಭಾರತೀಯರಲ್ಲಿದ್ದ ನಿಷ್ಠೆಯನ್ನು ಕ್ರಮಕ್ರಮೇಣ ಸಡಿಲಗೊಳಿಸಿದ್ದು. ಬ್ರಿಟಿಷರು ಕಾಲ್ತೆಗೆಯಲು ಮುಖ್ಯವಾದ ಒತ್ತಡ ಈ ಸಂಗತಿಯೇ. ನೌಕಾದಂಗೆ ಮುಂತಾದುವೆಲ್ಲ ಆಗಂತುಕವೆನ್ನಬಹುದು.

ಗಾಂಧಿಯವರು ಕಟ್ಟಿ ಎಬ್ಬಿಸಿದ ಭವನ ಕುಸಿದಿದ್ದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ ನವೋದಿತ ರಾಷ್ಟ್ರದ ನೇತೃತ್ವ ವಹಿಸಿಕೊಂಡವರ ಮನೋಧರ್ಮ ಗಾಂಧಿಯವರದಕ್ಕಿಂತ ಪೂರ್ಣ ಬೇರೆಯಾಗಿತ್ತು. ನಾಡಿನ ಬುದ್ಧಿಜೀವಿಗಳೆನಿಸಿಕೊಂಡವರು ನಾಲ್ಕೈದು ತಲೆಮಾರುಗಳಿಂದ ಹೆಚ್ಚುಹೆಚ್ಚು ಪಾಶ್ಚಾತ್ಯಾಭಿಮುಖರಾಗುತ್ತ ಬಂದಿದ್ದರು.

ಸಮಾಜದ ಈ ದ್ವಿಮುಖತೆಗೆ ನೀರೆರೆದು ಪೋಷಿಸಲು ‘ಭಾರತಕ್ಕೂ ಪಾಶ್ಚಾತ್ಯ ಜಗತ್ತಿಗೂ ಪ್ರಗತಿಯಲ್ಲಿ ಮುನ್ನೂರು ವರ್ಷದ ಅಂತರ ಇದೆ’ ಇತ್ಯಾದಿ ಮಿಥ್ಯೆಗಳನ್ನು ಪ್ರಚಾರ ಮಾಡಲಾಯಿತು.

ಪ್ರಶ್ನೆ: ವಿದೇಶೀ ಪ್ರಭುತ್ವದಡಿಯಲ್ಲಿ ಜನರ ಪರಿಸ್ಥಿತಿ ಏನಾದರಾಗಿರಲಿ; ಸ್ವಾತಂತ್ರ್ಯಾನಂತರ ನಾಯಕರಾದವರು ಜನಸಾಮಾನ್ಯರ ಆಶೋತ್ತರಗಳಿಗೆ ಪ್ರಾಧಾನ್ಯ ಕೊಡದಿರಲು ಕಾರಣಗಳೇನು?

ಉತ್ತರ: ರಾಜಕೀಯ ಸ್ವಾತಂತ್ರ್ಯದೊಡಗೂಡಿ ಸಾಂಸ್ಥಿಕ ಕ್ರಾಂತಿಯಾಗಬೇಕಿತ್ತು; ವಿದೇಶೀ ಪ್ರಭಾವದಿಂದ ಮುಕ್ತವಾಗುವ ದಾರಿಗಳನ್ನು ಅರಸಬೇಕಾಗಿತ್ತು. ಆದರೆ ಈ ಪರಿವರ್ತನೆಯ ದಿಶೆಯಲ್ಲಿ ನಾಯಕರು ಪ್ರವೃತ್ತರಾಗಲಿಲ್ಲ.

ಆಗಿನ ನೇತೃತ್ವ ಎಷ್ಟು ಕಳಾಹೀನವಾಗಿಬಿಟ್ಟಿತ್ತೆನ್ನಲು ಎಷ್ಟು ಬೇಕಾದರೂ ನಿದರ್ಶನಗಳನ್ನು ಕೊಡಬಹುದು. ಗಿರಿಜಾಶಂಕರ ಬಾಜಪೈ ಅವರನ್ನು ವಿದೇಶಾಂಗ ಖಾತೆಯ ಕಾರ್ಯದರ್ಶಿಯಾಗಿ ನೇಮಿಸುವುದರ ಬಗೆಗೆ ವಿವಾದವೆದ್ದಾಗ ‘ನಾವೇನು ಮಾಡೋಣ? ನಮ್ಮಲ್ಲಿ ಸಮರ್ಥ ಜನರೇ ಇಲ್ಲವಲ್ಲ?’ – ಎಂದು ಕಾಂಗ್ರೆಸ್ ಪ್ರಮುಖರು ಮಾತನಾಡಿಕೊಳ್ಳುತ್ತಿದ್ದುದನ್ನು ನಾನು ಕೇಳಿದೆ.

ಭಾರತದ ರಾಷ್ಟ್ರಾಧ್ಯಕ್ಷರು ಯಾರಾಗಬೇಕೆಂಬ ಚರ್ಚೆ ನಡೆದಾಗ ಮೌಲಾನಾ ಆಜಾದ್ ಮೊದಲಾದವರು ರಾಜಾಜಿಯವರು ಅಧ್ಯಕ್ಷರಾಗಬೇಕೆಂದರು; ನೆಹರು ರಾಜೇಂದ್ರಪ್ರಸಾದರ ಪರವಾಗಿದ್ದರು: ಆ ಸಂದರ್ಭದಲ್ಲಿ ನೆಹರು ಹೇಳಿದ ಮಾತುಗಳು: “ರಾಜಾಜಿ ಗವರ್ನರ್‍ಜನರಲ್ ಪದವಿಯಲ್ಲಿದ್ದಾಗ ಹೊರದೇಶಗಳ ಗಣ್ಯರು ಬಂದಾಗ ಹೇಗೆ ನಡೆದುಕೊಳ್ಳಬೇಕೆಂಬ ಬಗೆಗೆ ಅವರಿಗೆ ಆಗಾಗ ಗೊಂದಲವಾಗುತ್ತಿತ್ತು. ಆಮೇಲಾಮೇಲೆ ಅವರು ಶಿಷ್ಟವರ್ತನೆಯನ್ನು ರೂಢಿಸಿಕೊಂಡರು; ಆದ್ದರಿಂದ ಇನ್ನು ಮುಂದೆ ದೊಡ್ಡ ಪದವಿಯನ್ನು ಅವರು ನಿರ್ವಹಿಸಿಯಾರೇನೋ.” ಅರ್ಥಾತ್, ಭಾರತದ ಅಧ್ಯಕ್ಷರಾಗುವವರೂ ಸಹ ವಿದೇಶೀಯರಿಗೆ ಸಮ್ಮತರಾಗಬೇಕು!

ನೆಹರುರವರ ‘ರಾಜಕೀಯಪ್ರಜ್ಞೆ’ ಎಷ್ಟು ಆಳವಾಗಿ ಬೇರೂರಿತ್ತೆಂಬುದನ್ನು ಅನೇಕ ಪ್ರಸಂಗಗಳಿಂದ ಊಹಿಸಬಹುದು. 1944ರ ಸುಮಾರಿನಲ್ಲಿ ನೆಹರು ಅಹಮದ್‍ನಗರದ ಜೈಲಿನಲ್ಲಿ ಇದ್ದಾಗ ಅವರಿಗೆ ಗವರ್ನರ್-ಜನರಲ್ ವೇವೆಲ್‍ನಿಂದ ಒಂದು ಭಾಂಗಿ ಬಂದಿತು. ಅದರಲ್ಲಿ ಮೂರು-ನಾಲ್ಕು ಪುಸ್ತಕಗಳಿದ್ದವು. ವೇವೆಲ್ ಬರೆದಿದ್ದ: ‘ಎಡ್ವರ್ಡ್ ಥಾಮ್ಸನರ ಅಪೇಕ್ಷೆಯಂತೆ ಅವರ ಒಂದೆರಡು ಪುಸ್ತಕಗಳನ್ನು ನಿಮ್ಮ ಅವಲೋಕನಕ್ಕಾಗಿ ಇದರೊಡನೆ ಕಳಿಸಿರುವೆ. ಜೊತೆಗೆ ಕವನಸಂಗ್ರಹವೊಂದನ್ನು ಇರಿಸಿರುವೆ.”

ಈ ಸಣ್ಣ ಘಟನೆಯೂ ಕೂಡ ನೆಹರುರವರ ಮನಸ್ಸನ್ನು ಗೊಂದಲಕ್ಕೆ ಈಡುಮಾಡಿತು. ‘ವೇವೆಲ್ ನನಗೆ ಇದನ್ನು ಕಳಿಸಿರುವ ಸಂಗತಿಯನ್ನು ನಾನು ಉಳಿದವರಿಗೆ ತಿಳಿಸಬೇಕೇ ಬೇಡವೇ? ತಿಳಿದರೆ ಜನ ಅಪಾರ್ಥ ಮಾಡಿಕೊಳ್ಳುತ್ತಾರಲ್ಲ?’

ನೆಹರು ಹೀಗೆ ತಮ್ಮ ದೃಷ್ಟಿಯಲ್ಲಿಯೇ ಪರಕೀಯರಾಗಿಬಿಟ್ಟಿದ್ದರು.

1945ರ ಸುಮಾರಿನಲ್ಲಿ ಕಾಂಗ್ರೆಸ್ ಗಣ್ಯರಲ್ಲಿ ಕೆಲವರು ಹೀಗೆನ್ನುತ್ತಿದ್ದುದನ್ನು ನಾನು ಕೇಳಿದೆ: “ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ನಾವು ಮುಕ್ತವಾಗಿ ಹೇಗೆ ಮಾತನಾಡಲಾಗುತ್ತದೆ?”

ರಾಜಕೀಯ ಬಿಟ್ಟು ಬೇರೇನೂ ವಿಷಯ ಮಾತಿಗೆ ಇರದೆ? ಸಂಗೀತ ಕಲೆ ಸಾಹಿತ್ಯ ಇತ್ಯಾದಿಗಳ ಬಗೆಗೂ ರಾಜಕೀಯಸ್ಥರು ಮಾತನಾಡುವಂತಿಲ್ಲವೆ? ಈ ಪ್ರಾಥಮಿಕ ಸಹಜ ರೂಢಿಗಳಿಂದಲೂ ರಾಜಕೀಯಸ್ಥರು ಹೊರಗುಳಿಯಬೇಕೆ?

ಪ್ರಶ್ನೆ:  ರಾಷ್ಟ್ರನಾಯಕರೂ ಜನರ ಪ್ರತಿನಿಧಿಗಳೇ ತಾನೇ? ಹೀಗಿದ್ದೂ ನವನಿರ್ಮಾಣ ಸಾಧ್ಯವಾಗದಿರಲು ಬೇರೇನಾದರೂ ಕಾರಣಗಳಿದ್ದಾವೆ?

ಉತ್ತರ:   ರಾಜಕೀಯ ಸ್ವಾತಂತ್ರ್ಯ ಬಂದೊಡನೆ ಆಗಿನ ನಾಯಕರು ಜನತೆಗೆ ಹೇಳಿದರು: “ನಿಮ್ಮ ಕೆಲಸ ಮುಗಿದಿದೆ, ಈಗ ನೀವೆಲ್ಲ ನಿಮ್ಮ ಧಂದೆಗಳಿಗೆ ಹಿಂತಿರುಗಿ ಹೋಗಿರಿ. ರಾಷ್ಟ್ರದ ನಿರ್ವಹಣೆಯನ್ನು ನಾವು ನೋಡಿಕೊಳ್ಳುತ್ತೇವೆ.” ನೆಹರುರವರನ್ನೇ ನಾವು ವಿಶೇಷಿಸಬೇಕಾದ ಕಾರಣವೇನಿಲ್ಲ; ಲಜಪತ್‍ರಾಯ್ ಮೊದಲಾದ ಯಾರೇ ನಾಯಕರೂ ಆ ಸಂದರ್ಭದಲ್ಲಿ ಬಹುಶಃ ಹೀಗೆಯೇ ವರ್ತಿಸುತ್ತಿದ್ದರೇನೊ.

ಜವಾಹರಲಾಲ್ ನೆಹರುರವರಂತೆ ಯೋಚಿಸುವವರು  –  ಎಂದರೆ ಪಾಶ್ಚಾತ್ಯೀಕೃತರಾಗಿದ್ದವರು – ದೇಶದಲ್ಲಿ ಹತ್ತಾರು ಸಾವಿರ ಜನ ಇದ್ದರು. ನೆಹರು ಆ ವರ್ಗದ ಮುಖವಾಣಿಯಾದರಷ್ಟೆ.

ಜನಸಾಮಾನ್ಯರು ನೆಹರುರವರನ್ನು ನೋಡಿ ಚಪ್ಪಾಳೆ ತಟ್ಟಲಿಲ್ಲವೆ? – ಎನ್ನಬಹುದು. ಜನ ಚಪ್ಪಾಳೆ ತಟ್ಟಿದರು, ದಿಟ. ಆದರೆ ಜನ ಮೆಚ್ಚಿಕೊಂಡದ್ದು ನೆಹರುರವರ ನಿಃಸ್ವಾರ್ಥ-ತ್ಯಾಗಗಳನ್ನು; ಅವರು ಗಾಂಧಿಯವರ ಅನುಯಾಯಿಯಾಗಿ ನಿಂತಿದ್ದನ್ನು. ನೆಹರುರವರ ವ್ಯಕ್ತಿತ್ವದ ಇತರ ಮುಖಗಳನ್ನಾಗಲಿ ಅವರು ಮೈಗೂಡಿಸಿಕೊಂಡಿದ್ದ ಜೀವನದೃಷ್ಟಿಯನ್ನಾಗಲಿ ಕುರಿತು ಯೋಚಿಸುವ ಗೋಜಿಗೆ ಆಗ ಜನ ಹೋಗಲಿಲ್ಲ. ಜನ ಚಪ್ಪಾಳೆತಟ್ಟಿದ ಮಾತ್ರಕ್ಕೆ ಅವರು ನೆಹರುರವರ ಚಿಂತನೆಯಷ್ಟನ್ನೂ ಒಪ್ಪಿದರೆಂದು ಅರ್ಥವಾಗುವುದಿಲ್ಲ.

ಜನರನ್ನು ‘ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ನೀವೂ ನಮ್ಮೊಡನೆ ಕೈಜೋಡಿಸಿ’ – ಎಂದು ನಾಯಕವರ್ಗ ಆಹ್ವಾನಿಸಲಿಲ್ಲ. ಹೀಗೆ ಜನ ದೂರವೇ ಉಳಿದರು. ಈಗಲೂ ದೂರವೇ ಉಳಿದಿದ್ದಾರೆ. ಹಾಗೆ ನೋಡಿದರೆ ಉತ್ತರಭಾರತದ ಶಿಕ್ಷಿತ ವರ್ಗವೆಲ್ಲ ಬ್ರಿಟಿಷರ ಆಗಮನಕ್ಕೆ ಮೊದಲೇ ತಮ್ಮ ಮೂಲ ಮಾನಸಿಕ ಸ್ವರೂಪವನ್ನು ಕಳೆದುಕೊಂಡಿದ್ದರೆನ್ನಬಹುದು. ದಕ್ಷಿಣಭಾರತದಲ್ಲಿ ಇಂಥ ಪರಕೀಯಪ್ರಜ್ಞೆ ಅಷ್ಟೊಂದು ಬೇರೂರಿರಲಿಲ್ಲ ಎನ್ನಬಹುದು.

ಜಯಪ್ರಕಾಶ್ ನಾರಾಯಣರಂಥವರೂ ಗ್ರಾಮಮೂಲದವರಾದರೂ ಮಾನಸಿಕವಾಗಿ ನಗರೀಕರಣದ ಪ್ರಭಾವಕ್ಕೆ ಸಿಲುಕಿದ್ದವರೇ.

ಬ್ರಿಟಿಷರಿಗೆ ದಿನಗಳೆದಂತೆ ಹೆಚ್ಚುಹೆಚ್ಚು ಇರುಸುಮುರುಸಾಗಲೂ ಕಾರಣವಾದದ್ದು ಇದೇ ಸಂಗತಿ: ಭಾರತೀಯರು ಬ್ರಿಟಿಷರ ಪರಿಭಾಷೆಯನ್ನು ಅಳವಡಿಸಿಕೊಳ್ಳುತ್ತ ಬಂದಿದ್ದುದು!

ಮೊರಾರ್ಜಿ ದೇಸಾಯಿ ಅವರು ಅಧಿಕಾರಕ್ಕೆ ಬಂದಾಗ ಹೀಗೆಂದಿದ್ದರು: “ನಮ್ಮ ವ್ಯವಸ್ಥೆಯಲ್ಲೇನೂ ದೋಷವಿಲ್ಲ, ಆಡಳಿತ ನಡೆಸುವವರು ಸರಿಯಾಗಿರಬೇಕು, ಅಷ್ಟೆ.” ಆದರೆ 1950ರಿಂದ ಈ ‘ಪ್ರಾಮಾಣಿಕ’ ಪಡೆಯ ಕೈಗೆ ಸೂತ್ರಗಳನ್ನು ಕೊಟ್ಟು ನೋಡಿದ್ದೇವಲ್ಲವೆ! ಆ ಪಡೆಯೇ ಈಗಿನ ಎಷ್ಟೋ ಸಮಸ್ಯೆಗಳಿಗೆ ಕಾರಣವಾಗಿರುವುದು.

ಇದರ ತಾತ್ಪರ್ಯ – ವಿಕೃತಿಯ ಮೂಲವನ್ನು ನಾವು ಸರಿಯಾಗಿ ಅರಿತುಕೊಂಡಿಲ್ಲವೆಂಬುದು. ಇದರ ಬಗೆಗೆ ಸಮಗ್ರ ವಿಶ್ಲೇಷಣೆ ಈವರೆಗೆ ನಡೆದಂತಿಲ್ಲ. ಇಂದಿನ ಪ್ರಚಲಿತ ಧೋರಣೆಗಳನ್ನು ಪೂರ್ತಿ ಹೊರಕ್ಕೆ ಎಸೆಯುವುದೇ ಮೇಲೆನಿಸುತ್ತದೆ. ಆಮೇಲೆ ಉಳಿದ ಘಟಕಗಳಲ್ಲಿ ಭಾರತದ ಪರಂಪರೆಗೆ ಹೊಂದುವಂಥವನ್ನು ಆರಿಸಿಕೊಂಡು ಅವುಗಳ ಆಧಾರದ ಮೇಲೆ ಪುನರ್ನಿರ್ಮಾಣ ಪ್ರಯತ್ನ ಮಾಡಿದಲ್ಲಿ ಸಫಲತೆಯ ಸಂಭವವಿದ್ದೀತು.

ಪ್ರಶ್ನೆ: ಭಾರತದ ಸಾಮಾಜಿಕ ರಚನೆಯೇ ‘ಪ್ರಗತಿ’ವಿರೋಧಿ – ಎಂಬ ವಾದದ ಬಗೆಗೆ ನಿಮ್ಮ ಅನಿಸಿಕೆ ಏನು?

ಉತ್ತರ: ಕಳೆದ ಇನ್ನೂರು ವರ್ಷಗಳಲ್ಲಿ ಭಾರತೀಯರು ಗ್ರಹಿಸಲಾಗದ ಮುಖ್ಯ ಸಂಗತಿ – ವಿದೇಶೀ ಪ್ರಾಬಲ್ಯ ಸ್ಥಳೀಯರ ಮಾನಸಿಕ ಸ್ಥಿತಿಯ ಮೇಲೆ ಏನು ಪರಿಣಾಮ ಬೀರುತ್ತದೆಂಬುದು. ಮನುಷ್ಯನ ವ್ಯಕ್ತಿತ್ವದ ಸ್ವರೂಪವೇ ಪರಕೀಯ ಪ್ರಭಾವದಿಂದ ನುಗ್ಗಾಗುತ್ತದೆ.

ಆರ್ಥಿಕ-ಸಾಮಾಜಿಕ ಕ್ಷೇತ್ರಗಳಲ್ಲಿ ಸ್ಥಗಿತತೆಯುಂಟಾಗಬೇಕೆಂಬುದೂ ಸಾಮ್ರಾಜ್ಯಶಾಹಿಯ ಒಂದು ನಿರ್ದೇಶನವೇ. (1945ರಲ್ಲಿ ಜರ್ಮನಿಯು ಯುದ್ಧದಲ್ಲಿ ಸೋತಮೇಲೆ ಅದನ್ನು ಕೃಷಿಪ್ರಧಾನ ದೇಶವನ್ನಾಗಿಸಬೇಕು – ಎಂದು ವಿನ್‍ಸ್ಟನ್ ಚರ್ಚಿಲ್ ಬಯಸಿದ್ದ.)

ಉತ್ತರಪ್ರದೇಶದ ಮುಜಫರ್‍ಪುರ ಜಿಲ್ಲೆಯಲ್ಲಿ ನನಗೆ 93 ವರ್ಷ ವಯಸ್ಸಿನ ಕಬೂಲ್‍ಸಿಂಗ್ ಎಂಬಾತನ ಭೇಟಿಯಾಯಿತು. ಆತನ ‘ವಜೀರ’ 3000 ‘ಖಾಪು’ಗಳ ಒಡೆಯ. ಆತ ನೀಡಿದ ವಿಶ್ಲೇಷಣೆ ಹೀಗಿದೆ: “ನಮ್ಮ ದೇಶದಲ್ಲಿ ಗುಪ್ತರ ಆಳ್ವಿಕೆಯನಂತರ ಏನೋ ಒಂದು ವಿಪ್ಲವ ನಡೆಯಿತು. ಆಗಿನಿಂದ ಜನರ ಮಾನಸಿಕ ದಾಢ್ರ್ಯ ಕುಸಿಯತೊಡಗಿತು. ಪರಿಸ್ಥಿತಿಯಲ್ಲಿ ಒಂದಷ್ಟು ಸುಧಾರಣೆ ತರಲು ಹರ್ಷವರ್ಧನ ಪ್ರಯತ್ನಿಸಿದ. ಆದರೂ ಕ್ರಮೇಣ ಅಭದ್ರತೆ ಹೆಚ್ಚಿತು.

“ಆಗಿಂದಾಗ ಮೂಲಚೇತನ ಮೈಕೊಡವಿ ತಲೆಯೆತ್ತುತ್ತಿದ್ದುದುಂಟು. 1857ರ ಸ್ವಾತಂತ್ರ್ಯಸಮರ ಅಂಥ ಒಂದು ಘಟ್ಟ. ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯ ಹೋರಾಟಕ್ಕಿಂತ 1857ರದು ಹೆಚ್ಚು ಮಹತ್ತ್ವದ್ದಿತ್ತು; ಅದರ ಆಧಾರಸ್ಫೂರ್ತಿ ಹೆಚ್ಚು ಸಹಜವಿತ್ತು. ಆದರೆ 1857ರನಂತರ ಸಮಾಜದ ಮಾನಸಿಕ ಸ್ಥಿತಿ ಶಿಥಿಲಗೊಳ್ಳುತ್ತ ಹೋಯಿತು. 1947ರ ತರುವಾಯ ರಾಷ್ಟ್ರ ಪುನರ್ನಿರ್ಮಾಣಕ್ಕೆ ಉಪಕ್ರಮವಾಗಬಹುದಿತ್ತು. ಆದರೆ ಹಾಗಾಗಲಿಲ್ಲ.”

ಸ್ವಾತಂತ್ರ್ಯಪೂರ್ವದಲ್ಲಿ ಅಲ್ಲಲ್ಲಿ ಬಲಿಷ್ಠರ ‘ಯಜಮಾನಿಕೆ’ ಇದ್ದದ್ದು ಹೌದು. ಆದರೆ ಅದರ ನಿಜಸ್ವರೂಪವನ್ನು ನಾವು ಅರಿತುಕೊಳ್ಳಬೇಕು. ಧನಿಗಳು ಉಳಿದವರಿಗೆ ‘ನಾನು ಹೇಳಿದಂತೆ ಕೇಳಿ’ ಎಂದೇನೋ ಹೇಳುತ್ತಿದ್ದರು; ಆದರೆ ‘ನನಗಿಂತ ನೀವು ಕಡಮೆ ಊಟ ಮಾಡಿರಿ’ ಎಂದು ಯಾರೂ ಹೇಳುತ್ತಿರಲಿಲ್ಲ. ‘ನಮ್ಮಲ್ಲಿ ವರ್ಗಸಂಘರ್ಷವಿತ್ತು’ ಇತ್ಯಾದಿ ವಾದಗಳಿಗೆ ಯಾವ ಆಧಾರವೂ ದಾಖಲೆಗಳಲ್ಲಿ ಕಾಣದು.

ನಮ್ಮ ಸಮಾಜ ಹಿಂದೆ ಹೇಗೆ ರಚಿತವಾಗಿತ್ತೆಂದು ಅರಿತುಕೊಳ್ಳಲು ಮನಸ್ಸಿನ ನಮ್ರತೆ ಬೇಕು. ನಾವು ನಿಜವಾಗಿ ಕಲಿತುಕೊಳ್ಳುವ ದೃಷ್ಟಿಯಿಂದ ಹೋದರೆ ಜನ ತಿಳಿವಳಿಕೆ ನೀಡಿಯಾರು. ಆದರೆ ನಾವು ‘ನಮಗೆ ಎಲ್ಲ ತಿಳಿದಿದೆ’ಎಂಬ ಹಮ್ಮಿನಿಂದ ಹೋದರೆ ಜನ ತಮಗೆ ತಿಳಿದುದನ್ನು ಮುಕ್ತವಾಗಿ ಹೇಳದಿರುವುದು ಸಹಜ.

ಭಾರತದ ಶಿಕ್ಷಿತ ಮೇಲ್ವರ್ಗಕ್ಕೂ ಪಾಶ್ಚಾತ್ಯ ದೇಶಗಳ ಶಿಕ್ಷಿತವರ್ಗಕ್ಕೂ ಅಂತರ ಇದೆ. ಭಾರತದ ಶಿಕ್ಷಿತವರ್ಗ ಬಲಯುತವಾದದ್ದಲ್ಲ; ಅದು ಉಳಿದವರ ಮೇಲೆ ನಡೆಸುವ ದಬ್ಬಾಳಿಕೆ ಕೂಡ ಮೃದುಸ್ವರೂಪದ್ದೇ. ಆದರೆ ಪಾಶ್ಚಾತ್ಯರು ಹಿಂಸೆಯೆಂದರೆ ಹಿಂತೆಗೆಯುವವರಲ್ಲ. ಸ್ಟಾಲಿನ್ ಕೋಟ್ಯಂತರ ಜನರನ್ನು ಕೊಂದೂ ಸ್ಥಿತಪ್ರಜ್ಞನಾಗಿಯೇ ಇದ್ದ. ಸ್ಟಾಲಿನ್ ಮಾಡಿದಂಥ ಮಾರಣಕ್ರಿಯೆ ಯೂರೋಪಿನಲ್ಲಿ ಎಲ್ಲಿ ಬೇಕಾದರೂ ಆಗಬಹುದಿತ್ತು. (ಕ್ರಿ.ಶ. 10ನೇ ಶತಮಾನದ ನಂತರ)

ಪ್ರಶ್ನೆ:  ಆಂಗ್ಲರು ಭಾರತವನ್ನು ಶೋಷಿಸಲು ಬಂದವರು. ಹೀಗಿರುವಾಗ ಭಾರತದ ಸಂಪನ್ನತೆ ಅವರ ಉದ್ದೇಶಕ್ಕೆ ಪೋಷಕವೇ ಆಗುತ್ತಿತ್ತು, ಅಲ್ಲವೇ?

ಉತ್ತರ:  ಬ್ರಿಟಿಷರಿಗೂ ನಮಗೂ ಇನ್ನೊಂದು ಪ್ರಮುಖ ವ್ಯತ್ಯಾಸವೂ ಇತ್ತು. ಲೌಕಿಕ ವ್ಯವಹಾರದ ಕಪಟ ಕೃತ್ರಿಮಗಳನ್ನು ಬ್ರಿಟಿಷರು ಕುಶಲಕಲೆಯಾಗಿ ರೂಢಿಸಿಕೊಂಡಿದ್ದರು. ನಾವು ಅಮಾಯಕರಾಗಿಯೇ ಉಳಿದಿದ್ದೆವು.

ಇಂದು ನಾವು ತೆಗಳುವ ಲಂಚ ಇಂಗ್ಲೆಂಡಿನಲ್ಲಿ ಹಿಂದೆ ಅಂಗೀಕೃತ ಸಾಮಾಜಿಕ ವ್ಯವಸ್ಥೆಯೇ ಆಗಿತ್ತು. ಅದಕ್ಕೆ ಒಂದು ಆಧಾರಸಿದ್ಧಾಂತವನ್ನೇ ತಯಾರಿಸಿದ್ದರು, ಅವರು. ಹದಿನೆಂಟನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಸೇನೆಯ ಅಥವಾ ಬೇರಾವುದೋ ಉದ್ಯೋಗ ಪಡೆಯಲು ಅಭ್ಯರ್ಥಿಗಳು ನೂರಾರು ಪೌಂಡುಗಳ ‘ಶುಲ್ಕ’ ತೆರಬೇಕಾಗುತ್ತಿತ್ತು. ಈ ವ್ಯವಸ್ಥೆಗೆ ಬ್ರಿಟಿಷರು “ತಾವು ಸ್ವಂತ ಹಣ ತೆತ್ತಿದ್ದಲ್ಲಿ ಜನ ‘ಈ ಉದ್ಯಮ ನಷ್ಟಕ್ಕೊಳಗಾದರೆ ನಮ್ಮ ಸ್ವಂತ ಹಣವೂ ಹೋಗುತ್ತದೆ’ ಎಂದು ಹೊಣೆಗಾರಿಕೆಯ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ’’ ಎಂಬ ‘ತಾರ್ಕಿಕ’ ಆಧಾರವನ್ನು ನೀಡಲಾಗುತ್ತಿತ್ತು! ಈ ‘ಸುವ್ಯವಸ್ಥೆ’ ಸುಮಾರು 1860ರ ವರೆಗೆ ಮುಂದುವರಿಯಿತು.

ಬ್ರಿಟಿಷರು ಸ್ವಭಾವತಃ ಯಾರನ್ನೂ ನಂಬುವವರಲ್ಲ.

1780ರ ನಂತರ ಸೈನಿಕಾದಿ ಆಡಳಿತಗಳಲ್ಲಿ ಪ್ರತಿ ನಾಲ್ವರು ಭಾರತೀಯರಿಗೆ ಒಬ್ಬ ಆಂಗ್ಲ ಇರಬೇಕೆಂದು ನಿರ್ಧರಿಸಲಾಗಿತ್ತು. 1857ರ ವೇಳೆಗೆ ಈ ಪ್ರಮಾಣ 6:1 ಆಗಿತ್ತು. ಈ ಬೆಳವಣಿಗೆ ಬ್ರಿಟಿಷರಿಗೆ ಹಿತಕರವಿರಲಿಲ್ಲ. “ಭಾರತದ ಜನ ಸಾಮಾನ್ಯವಾಗಿ ‘ವಿಹಿತ’ವಾಗಿಯೇ ಇರುತ್ತಾರೆ; ಆದರೆ ಗಾಳಿಯ ದಿಕ್ಕು ಬದಲಾದಾಗ ಜನರು ಹೊಸದಿಕ್ಕಿಗೆ ತಿರುಗಿಬಿಡುತ್ತಾರೆ” ಎಂದು ಅವರ ಅನುಭವವಿತ್ತು. ಈ ಪರಿಸ್ಥಿತಿಯನ್ನೆದುರಿಸುವುದಕ್ಕಾಗಿಯೇ ಭಾರತದ ಕೆಲ ಭಾಗಗಳನ್ನು ತಮ್ಮ ಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳತೊಡಗಿದುದು – ಹಿಲ್ ಸ್ಟೇಷನುಗಳು, ವಗೈರೆ.

1946ರ ಕ್ಯಾಬಿನೆಟ್ ಆಯೋಗದ ಮಾತುಕತೆ ಮುರಿದುಬಿದ್ದ ಮೇಲೆ ಇಂಗ್ಲೆಂಡಿನ ರಕ್ಷಣಾಖಾತೆಯ  ವರಿಷ್ಠ ಸಮಿತಿ ಇನ್ನು ಮೇಲೆ ಭಾರತವನ್ನು ಹತೋಟಿಯಲ್ಲಿಡುವುದು ಬಲಪ್ರಯೋಗವಿಲ್ಲದೆ ಸಾಧ್ಯವಿಲ್ಲ – ಎಂದು ಅಭಿಪ್ರಾಯ ನೀಡಿತು; ಇಂಗ್ಲೆಂಡಿನ ಸೈನ್ಯದ ಸಂಖ್ಯಾಬಲ ಭಾರತದಂಥ ದೊಡ್ಡ ದೇಶವನ್ನು ದಮನರೀತಿಯಿಂದ ಆಳಲು ಎಷ್ಟು ಮಾತ್ರವೂ ಸಾಲದಾಗಿತ್ತು. ಆದ್ದರಿಂದ ‘ಪೆನಿನ್‍ಸುಲಾರ್’ ಭಾರತದಿಂದ ಪೂರ್ಣ ನಿರ್ಗಮಿಸಿ ಪೂರ್ವಾಂಚಲ ಮುಂತಾದೆಡೆ ತಮ್ಮ ಬಲವನ್ನೆಲ್ಲ ಕೇಂದ್ರೀಕರಿಸಬೇಕು – ಎಂಬ ಯೋಜನೆಯೂ ಹೊಳೆದಿತ್ತು.

ಭಾರತದ ನಾಗರಿಕತೆಯನ್ನು ಅಳೆಯುವುದಕ್ಕೆ ಆಂಗ್ಲ ಆಕ್ರಮಕರು ವಿಧಿಸಿಕೊಂಡಿದ್ದ ಮಾನದಂಡವೇ ಭೌತವಾದ ಎನ್ನಬಹುದು. ಉದಾಹರಣೆಗೆ ಜೇಮ್ಸ್ ಮಿಲ್‍ನ ದೃಷ್ಟಿಯಲ್ಲಿ ಸೈನಿಕ ಸಾಮಥ್ರ್ಯ ಹೆಚ್ಚಿದಷ್ಟೂ ನಾಗರಿಕತೆ ಹೆಚ್ಚು ಹೆಚ್ಚು ‘ಉನ್ನತ’ ಮಟ್ಟದ್ದು.

ಇದರಿಂದಾಗಿ ಅವನ ದೃಷ್ಟಿಯಲ್ಲಿ ಭಾರತದ ನಾಗರಿಕತೆ ತೀರಾ ಕೆಳಮಟ್ಟದ್ದೆನಿಸಿತು. ಜೇಮ್ಸ್ ಮಿಲ್ ಬರೆದ ಸುದೀರ್ಘ ‘ಬ್ರಿಟಿಷ್ ಇಂಡಿಯಾದ ಚರಿತ್ರೆ’ ಗ್ರಂಥ 1820ರಿಂದ ಆಚೆಗೆ ಭಾರತಕ್ಕೆ ಬಂದ ಪ್ರತಿಯೊಬ್ಬ ಆಂಗ್ಲ ಅಧಿಕಾರಿಗೂ ಕಡ್ಡಾಯ ಅಧ್ಯಯನಗ್ರಂಥವಾಯಿತು. ಹೀಗೆ ಭಾರತಕ್ಕೆ ಬಂದ ಆಂಗ್ಲ ಅಧಿಕಾರಿಗಳ ಮನಸ್ಸನ್ನು ರೂಢಿಸುವುದರಲ್ಲಿ ಜೇಮ್ಸ್ ಮಿಲ್‍ನ ಪ್ರಭಾವ ದಟ್ಟವಾಗಿತ್ತು. ಮಿಲ್‍ನಿಂದ ಕೆಲವು ದಶಕಗಳೀಚೆ ಬಂದ ಕಾರ್ಲ್‍ಮಾಕ್ರ್ಸ್‍ನ ದೃಷ್ಟಿಯೂ ಭಿನ್ನವೇನೂ ಆಗಿರಲಿಲ್ಲ. ಮಾಕ್ರ್ಸ್ ಆಂಗ್ಲ ಸಾಮ್ರಾಜ್ಯಶಾಹಿಯನ್ನೇನೋ ವಿರೋಧಿಸಿದ; ಆದರೆ ಭಾರತೀಯ ನಾಗರಿಕತೆಯ ಬಗೆಗೆ ಆತನಿಗೆ ವಿಶೇಷ ತಿಳಿವಳಿಕೆಯಾಗಲಿ ಮೆಚ್ಚಿಕೆಯಾಗಲಿ ಇರಲಿಲ್ಲ.

ಆಂಗ್ಲ ಪ್ರಾಬಲ್ಯದ ಎರಡು ಪರಿಣಾಮಗಳೆಂದರೆ – (1) ಭಾರತದ ಸಾಂಪ್ರದಾಯಿಕ ಬುದ್ಧಿಜೀವಿವರ್ಗ ಸಾಮಾಜಿಕ ಕ್ಷೇತ್ರದಿಂದ ವಿಮುಖವಾದದ್ದು; (2) ದೇಶದಲ್ಲಿ ಹೊಸದೊಂದು ‘ಎಲೀಟ್’ ವರ್ಗ ನಿರ್ಮಾಣವಾಗತೊಡಗಿದ್ದು. ಈ ಎರಡನೆಯ ವರ್ಗ ನಾಲ್ಕೈದು ತಲೆಮಾರುಗಳುದ್ದಕ್ಕೂ ಹೆಚ್ಚುಹೆಚ್ಚು ವ್ಯಾಪಕಗೊಂಡು ಇಂದು ಘನಿಷ್ಠ ಸ್ಥಿತಿ ತಲಪಿದೆ. ಆದರೆ ಭಾರತದ ಬಹುಸಂಖ್ಯಾತ ಸಮಾಜ ಈ ವರ್ಗದ ಪ್ರಭಾವಕಕ್ಷೆಯಿಂದ ಹೊರಗೇ ಉಳಿದಿತ್ತು; ಅವರು ಮುಖ್ಯವೆಂದು ಭಾವಿಸಿದ್ದ ಸಂಗತಿಗಳೇ ಬೇರೆ – ಸಾಮರಸ್ಯ, ಸತ್ತ್ವವಂತಿಕೆ, ಇತ್ಯಾದಿ. ಇದರಿಂದಾಗಿ ಕ್ರಮೇಣ ಎರಡು ಪೂರ್ತಿ ವಿಭಿನ್ನ ಸಮಾಜಗಳು ರೂಪತಳೆದವು. ಎರಡರ ನಡುವೆ ಸಹಸ್ಪಂದನವಿರಲಿಲ್ಲ. ಕೊಂಚಮಟ್ಟಿಗೆ ಈ ವಿಭಿನ್ನ ಸಮಾಜವರ್ಗಗಳೆರಡರ ಜೊತೆಗೂ ಸಂಪರ್ಕ ಸಾಧಿಸಿದ್ದವರು ಭಾರತೀಯ ಸಾಧು-ಸಂತರು. ಗಾಂಧಿಯವರು ಇಂಥ ಸಂಪರ್ಕ ಸಾಧಿಸುವುದರಲ್ಲಿ ಸಫಲರಾದುದೇ ಅವರ ಪ್ರಯತ್ನದ ಯಶಸ್ಸಿನ ರಹಸ್ಯ.

ಇಂದು ಆ ಸಂಪರ್ಕ ಉಳಿದಿಲ್ಲ. ಇದೀಗ ನಿರ್ಣಾಯಕ ಸ್ಥಾನಗಳಲ್ಲಿರುವವರು ಎಪ್ಪತ್ತು ಸಾವಿರ ಮಂದಿ ಇದ್ದಾರು. ವ್ಯವಸ್ಥಿತ ಉದ್ಯಮವಲಯದಲ್ಲಿ ಕೆಲಸಮಾಡುತ್ತಿರುವವರ ಸಂಖ್ಯೆ ಮೂರು ಕೋಟಿಯಷ್ಟಿದ್ದೀತು. ಈ ವರ್ಗಗಳ ಕುಟುಂಬಗಳನ್ನೂ ಸೇರಿಸಿ ಲೆಕ್ಕ ಮಾಡಿದರೆ ಒಟ್ಟು ಜನಸಂಖ್ಯೆಯ ಶೇಕಡಾ ಹತ್ತರಷ್ಟು ಆದೀತು. ಈ ವರ್ಗಕ್ಕೂ ಉಳಿದ ಸಮಾಜಕ್ಕೂ ನಡುವೆ ದೊಡ್ಡ ಕಂದರ ಏರ್ಪಟ್ಟಿದೆ. ಈ ಉದ್ಯಮನಿರತರೂ ಸಂತೋಷದಿಂದಿರುವರೆನ್ನಲು ಆಗದು; ಅವರು ಉಳಿದವರಿಗಿಂತ ಹೆಚ್ಚು ಭದ್ರವಾಗಿದ್ದಾರೆ, ಅಷ್ಟೆ. ಇವರ ಗಳಿಕೆಗೆ ಹೋಲಿಸಿದರೆ ಉಳಿದವರದು ಸರಾಸರಿ ಮೂರರಲ್ಲೊಂದರಷ್ಟಾದೀತು. ಈ ಪ್ರಭಾವಿವರ್ಗ ಇಂದು ಉಳಿದೆಲ್ಲ ಸಮಾಜಕ್ಕೆ ಜೀವನಶೈಲಿಯನ್ನು ವಿಧಿಸುತ್ತಿದೆ. ಈ ಕಂದರದ ಗಾತ್ರವನ್ನು ಕಡಮೆಮಾಡಲು ಸ್ವಾತಂತ್ರ್ಯೋತ್ತರ ಭಾರತ ಶಕ್ತವಾಗಿಲ್ಲ.

ಪ್ರಶ್ನೆ:  ಐರೋಪ್ಯರು ವಸಾಹತೀಕರಿಸಿದುದು ಭಾರತವನ್ನು ಮಾತ್ರವಲ್ಲ. ಹೊಸದಾಗಿ ಸ್ವಾತಂತ್ರ್ಯ ಪಡೆದ ಬೇರೆ ಕೆಲವು ರಾಷ್ಟ್ರಗಳು ಭಾರತಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿವೆಯಲ್ಲ? ಇದು ಹೇಗೆ?

ಉತ್ತರ: ವಸಾಹತೀಕರಿಸಿದ ಪ್ರದೇಶದ ಸ್ಥಳೀಯರ ಅಸ್ಮಿತೆಯನ್ನು ನಾಮಾವಶೇಷಗೊಳಿಸುವುದು ಯೂರೋಪಿನ ಪರಂಪರೆಯೇ ಆಗಿದೆ. 16-18ನೇ ಶತಮಾನಗಳಲ್ಲಿ ಪಶ್ಚಿಮ ಹಾಗೂ ಮಧ್ಯ ಆಫ್ರಿಕದಲ್ಲಿಯೂ, ಅಮೆರಿಕದಲ್ಲಿಯೂ ಕೋಟ್ಯಂತರ ಜನರ ಮಾರಣಹೋಮವೇ ನಡೆಯಿತು. 19ನೇ ಶತಮಾನದ ಆರಂಭದ ವೇಳೆಗೆ ಬ್ರಿಟಿಷರು ಸ್ವಲ್ಪ ‘ಸುಧಾರಿಸಿ’ದ್ದರು. ಬಲಾತ್ಕಾರದಿಂದ ಶ್ರಮಿಕ ಸೇವೆ, ಸ್ಥಳೀಯ ಸರಂಜಾಮು ಒದಗಣೆ ಮೊದಲಾದವಕ್ಕೆಲ್ಲ ಸಾಂಸ್ಥಿಕ ವ್ಯವಸ್ಥೆಯ ರೂಪವನ್ನು ಕೊಟ್ಟಿದ್ದರು. ಈ ಎಲ್ಲ ಕ್ರಮಗಳ ಉದ್ದೇಶ ಸಾಮ್ರಾಜ್ಯಶಾಹಿಯ ಪೋಷಣೆಯ ಜೊತೆಗೆ ಸ್ಥಳೀಯ ಜನಸಮುದಾಯಗಳ  ಘನತೆ-ಆತ್ಮಗೌರವಗಳನ್ನು ಕುಂಠಿತಗೊಳಿಸಬೇಕೆಂಬುದು.

ಹಿಂದಿಗೂ ಇಂದಿಗೂ ಒಂದು ವ್ಯತ್ಯಾಸವಿದೆ. ಈಗ್ಗೆ 150-200 ವರ್ಷ ಹಿಂದೆ ಭಾರತೀಯರು ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಇರುತ್ತಿದ್ದರು; ಬೇರೆ ಯಾವ ದೇಶದ ಜನ ಹೇಗೆ ಇದ್ದಾರೆಂಬ ಬಗೆಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದು ನಾವು ಅಮೆರಿಕದತ್ತ ಕಣ್ಣುಹಾಯಿಸಿ ‘ನಾವು ಅವರಂತೆ ಇಲ್ಲವಲ್ಲ!’ ಎಂದು ಸಂಕಟಪಡುತ್ತೇವೆ. ಈ ಪರಿವರ್ತಿತ ಮನೋಧರ್ಮವೇ ಅನೇಕ ಸಮಸ್ಯೆಗಳ ಮೂಲ.

ಗಾಂಧಿಯವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನಿಸಿದಾಗ ಅವರು ಒಡನೆಯೇ ಹೇಳಿದರು: “ನಾನು ಅಮೆರಿಕಕ್ಕೆ ಹೋಗಿ ಏನು ಮಾಡಬೇಕು? ಭಾರತದಲ್ಲಾದರೋ ನನಗೆ ಮಾಡಲು ಕೆಲಸವಿದೆ. ನಾನು ಇಲ್ಲಿ ಏನಾದರೂ ಕೆಲಸಮಾಡಿದರೆ ಅದು ಅಮೆರಿಕದಲ್ಲೂ ಪ್ರಚಾರ ಪಡೆದೀತು.” ಪಾಶ್ಚಾತ್ಯ ದೇಶಗಳ ಸರಿಯಾದ ಅನುಕರಣೆಯೇ ನಮ್ಮ ಗುರಿಯಾಯಿತು (ನಮ್ಮ ಪಾಲಿಗೆ ಪಾಶ್ಚಾತ್ಯ ಜಗತ್ತೆಂದರೆ ಇಂಗ್ಲೆಂಡ್, ಅಮೆರಿಕ ಮಾತ್ರ!) ಆದರೆ ಎಷ್ಟೋ ವಿಷಯಗಳಲ್ಲಿ ನಮ್ಮಿಂದ ಅನುಕರಣೆಯೂ ಸಾಧ್ಯವಾಗಲಿಲ್ಲವೆಂಬುದು ಎದ್ದುಕಾಣುತ್ತದೆ. ಗಂಭೀರ ರಾಜಕೀಯ ರಹಸ್ಯಗಳನ್ನು ಗೋಪ್ಯವಾಗಿ ಉಳಿಸುವಷ್ಟೂ ನಮ್ರ ದಕ್ಷತೆ ಇಲ್ಲ!

ಇಂದು ಜನಪರವೆನಿಸಿಕೊಳ್ಳುವ, ಪರಿಸರಸ್ವಾಸ್ಥ್ಯದ ಪರವೆನಿಸಿಕೊಳ್ಳುವ ಕಲ್ಪನೆಗಳು ಕೂಡ ಬಹುಮಟ್ಟಿಗೆ ಪಾಶ್ಚಾತ್ಯಮೂಲಗಳಿಂದ ಬಂದವಾಗಿವೆ.

ಇನ್ನೊಂದು ಗತಾನುಗತಿಕ ವಾದವೂ ಇದೆ: “ನಾನು ಹೇಳುತ್ತಿರುವುದು ನಿಮಗೆ (ಎಂದರೆ ಭಾರತೀಯರಿಗೆ) ಅರ್ಥವಾಗುವುದಿಲ್ಲ. ನಮ್ಮ ಅಭಿಪ್ರಾಯಕ್ಕೆ ಪಾಶ್ಚಾತ್ಯ ದೇಶಗಳಲ್ಲಿ ಮಾನ್ಯತೆ ಇದೆ.”

ಮತ್ತೆ ಕೆಲವರು ಹೀಗೂ ಅಂದಾರು: “ನಾವು ವಿಶ್ವಬ್ಯಾಂಕಿನವರಿಗೆ ನಮ್ಮ ಸಂದೇಶ ಮುಟ್ಟಿಸುವುದೇ ಹೆಚ್ಚು ಪ್ರಯೋಜನಕರವಾಗುತ್ತದೆ. ಏಕೆಂದರೆ, ವಿಶ್ವಬ್ಯಾಂಕಿನವರು ಹೇಳಿದ ಮಾತನ್ನು ಭಾರತ ಸರ್ಕಾರ ಕೇಳುತ್ತದೆ.”

ಈ ದಾರಿಗಳೆಲ್ಲ ಸೂಕ್ತವೂ ಅಲ್ಲ, ಅವು ಗುರಿ ಮುಟ್ಟುವುದೂ ಇಲ್ಲ. ಒಂದಷ್ಟು ಜನಕ್ಕೆ ಬಿಡುವು ಕೊಡದೆ ಅವರ ಸಮಯವನ್ನೂ ಶಕ್ತಿಯನ್ನೂ ಯಾವಯಾವದೋ ಅನುಪಯುಕ್ತ ದಿಕ್ಕುಗಳಿಗೆ ತಿರುಗಿಸುವುದಷ್ಟೆ ಮೇಲಣ ಮಾರ್ಗಗಳಿಂದ ಆಗುವ ಕೆಲಸ.

ಇಪ್ಪತ್ತೊಂದನೇ ಶತಮಾನವನ್ನು ತಲಪುವ ಬಗೆಗೆ ಈಗ ಮಾತು ಕೇಳಿಬರುತ್ತಿದೆ. ಇದು ಎಷ್ಟು ಜನಕ್ಕೆ ಬೇಕಾಗಿದೆ? ಹೆಚ್ಚು ಮಂದಿಯ ಪಾಲಿಗೆ ಇಂಥ ಪ್ರಸಕ್ತಿಗಳೆಲ್ಲ ಅರ್ಥಶೂನ್ಯ.

ಪ್ರಶ್ನೆ: ಕಳೆದ ಇನ್ನೂರು ವರ್ಷಗಳಲ್ಲಿ ಏನಾದರೂ ನಡೆದಿರಲಿ. ಇದೀಗ ಅಮಲಿನಲ್ಲಿರುವ ವ್ಯವಸ್ಥೆಗಳನ್ನೆಲ್ಲ ಕೈಬಿಟ್ಟಲ್ಲಿ ನೈಜಪ್ರಗತಿ ಶಕ್ಯವೆ? ಇನ್ನಷ್ಟು ಗೊಂದಲವೇ ಉಂಟಾಗದೆ?

ಉತ್ತರ: ಜನರನ್ನು ಅವರ ಪಾಡಿಗೇ ಬಿಟ್ಟರೆ ಸಹಜ ರೀತಿಯ ವಿಕಾಸವಾದೀತು. ಅದು ಸರ್ವೋತ್ಕøಷ್ಟವಾಗಿರುತ್ತದೆಂದು ಇದರ ಅರ್ಥವಲ್ಲ. ಹಾಗೆ ನೋಡಿದರೆ ಜಗತ್ತಿನ ಯಾವ ಸಮಾಜ ತಾನೆ ಆದರ್ಶಪ್ರಾಯವಾಗಿದೆ? ದೋಷಗಳು ಎಲ್ಲಿಯೂ ಇದ್ದೇ ಇರುತ್ತವೆ.

ಆಗ ನಾಡಿನಾದ್ಯಂತ ಪ್ರತ್ಯೇಕ-ಪ್ರಾಂತ-ವಿಶಿಷ್ಟವಾದ ಸಾವಿರಾರು ಬಗೆಯ ಸಂರಚನೆಗಳು ರೂಪತಳೆದಾವು. ಆದರೆ ಅವೆಲ್ಲ ರಾಷ್ಟ್ರಮಟ್ಟದಲ್ಲಿ ಏಕೀಭವಿಸಿಯಾವೆಂದು ನಿರೀಕ್ಷಿಸಲಾಗದು. ಈಗಿರುವ ವ್ಯವಸ್ಥೆಯ ಗುಣಾಂಶ ಎಂದರೆ ಅದು ದೇಶವನ್ನೆಲ್ಲ ಒಂದಾಗಿಸಿದೆ. ಇದು ಯಾವುದೇ ಕಾರಣದಿಂದ ಒಡೆದಲ್ಲಿ ಮತ್ತೆ ಒಗ್ಗೂಡಿಸುವ ಕೆಲಸ ಸುಲಭವಲ್ಲ.

ಇಂದು ಈ ನೈರಾಶ್ಯದಿಂದ ಹೇಗಾದರೂ ಹೊರಗೆ ಬರಬೇಕಾಗಿದೆ. ಈ ನಿಜವಾದ ವಿಮೋಚನೆಗೆ ಗಾಂಧಿ ತಳಹದಿಯನ್ನು ನಿರ್ಮಿಸಿಕೊಟ್ಟರು; ಅದು ಉಳಿಯಲಿಲ್ಲವೆಂಬುದು ದಿಟ, ಸಹಜವೂ ಹೌದು. ಗಾಂಧಿ ನಿಜವಾದ ಅರ್ಥದಲ್ಲಿ ನೇತಾರರಾಗಿದ್ದ ಅವಧಿ 25 ವರ್ಷ ಕಾಲ. ಅಷ್ಟು ಅಲ್ಪ ಅವಧಿಯಲ್ಲಿ ಅತಿ ಹೆಚ್ಚಿನ ಸಾಧನೆಯನ್ನು ಅಪೇಕ್ಷಿಸುವುದು ಅವಾಸ್ತವಿಕ. ಆದರೆ ಸಮಾಜ – ಆಡಳಿತಗಳ ನಡುವೆ ಸುಸಂಘಟನೆಯನ್ನು ತರುವುದರ ಮೂಲಕ ರಾಷ್ಟ್ರದ ಸಹಜ ವಿಕಾಸಕ್ಕೆ ದಾರಿ ಮಾಡಬೇಕು – ಎಂಬ ಗಾಂಧಿಯವರ ದೃಷ್ಟಿ ಇಂದಿಗೂ ಸಂಗತ. ರಾಷ್ಟ್ರದ ಸ್ವಾಸ್ಥ್ಯ ಸಾಧನೆಗೆ ಅನುವಾಗಬಲ್ಲದ್ದು ಆ ದಿಕ್ಕಿನ ದೃಢಪ್ರಯತ್ನ ಮಾತ್ರ.

ಈ ಉದ್ಯಮಕ್ಕೆ ಗಟ್ಟಿ ಆಧಾರವನ್ನೊದಗಿಸಬಲ್ಲದ್ದು ಶತಮಾನಗಳುದ್ದಕ್ಕೂ ಭಾರತ ಸವಾಲುಗಳನ್ನು ಹೇಗೆ ಎದುರಿಸುತ್ತ ಬಂದಿದೆಯೆಂಬುದರ ಪರಿಷ್ಕೃತ ಜ್ಞಾನ. ಈ ಸಾಮಾಜಿಕ ದೃಷ್ಟಿಯಿಂದ ಇತಿಹಾಸ ಸಾಹಿತ್ಯ ದರ್ಶನ ಶಾಸ್ತ್ರಾದಿಗಳ ಅಧ್ಯಯನ ನಡೆಯಬೇಕಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ