ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಅವಿಭಕ್ತ ಕುಟುಂಬದಿಂದ ಭಾವನೆಗಳು ವಿಶಾಲವಾಗುತ್ತದೆ

ಅವಿಭಕ್ತ ಕುಟುಂಬದಿಂದ ಭಾವನೆಗಳು ವಿಶಾಲವಾಗುತ್ತದೆ

ಅವಿಭಕ್ತ ಕುಟುಂಬದಿಂದ ಸಮಾಜ, ದೇಶದ ಬಗೆಗೆ ನಮ್ಮ ಭಾವನೆ ವಿಶಾಲವಾಗುತ್ತದೆ
ಅವಿಭಕ್ತ ಕುಟುಂಬದಿಂದ ಭಾವನೆಗಳು ರೂಪುಗೊಳ್ಳುತ್ತವೆ. ಮನೆಯಲ್ಲಿ ಪ್ರಾರಂಭವಾದ ಭಾವನಾತ್ಮಕ ಸಂಬಂಧಗಳು ಸುತ್ತಲಿನ ಸಮಾಜದ ಬಗೆಗೆ ಮತ್ತು ದೇಶದ ಬಗೆಗೆ ಅದೇ ಭಾವನೆ ಬರುತ್ತದೆ. ನಮ್ಮ ಭಾವನೆ ವಿಶಾಲವಾಗುತ್ತದೆ. ದೇಶದ ಎಲ್ಲರೂ ನಮ್ಮವರು; ಕಷ್ಟ ಬಂದಾಗ ಅವರಿಗೆ ಸಹಕಾರ ನೀಡಬೇಕೆಂಬ ಭಾವನೆ ಬರುತ್ತದೆ ಎಂದು ಪ್ರಸಿದ್ಧ ಉದ್ಯಮಿ ಮತ್ತು ಅವಿಭಕ್ತ ಕುಟುಂಬವೊಂದರ ಯಜಮಾನರಾದ ಕೆ.ಜಿ. ಸುಬ್ಬರಾಮ ಶೆಟ್ಟಿ ಅವರು ಹೇಳಿದರು.


ಅವರು ರಾಷ್ಟ್ರೋತ್ಥಾನ ಪರಿಷತ್‌ನ ಕೇಶವ ಶಿಲ್ಪ ಸಭಾಂಗಣದಲ್ಲಿ ಜನವರಿ ೧೩ರಂದು ಭಾರತೀಯ ಕುಟುಂಬ ಪದ್ಧತಿಯನ್ನು ಕುರಿತ ’ಉತ್ಥಾನ’ ಮಾಸಪತ್ರಿಕೆಯ ವಿಶೇಷಾಂಕವನ್ನು ಲೋಕಾರ್ಪಣೆಗೊಳಿಸಿ ಭಾಷಣ ಮಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಸುಬ್ಬರಾಮಶೆಟ್ಟಿ ಮತ್ತು ಅವರ ಧರ್ಮಪತ್ನಿ ಚಂದ್ರಮತಿ ದೇವಿ ಅವರನ್ನು ಸನ್ಮಾನಿಸಲಾಯಿತು.
ಈಗ ಸಮಾಜದಲ್ಲಿ ಬಹಳಷ್ಟು ಕುಟುಂಬಗಳಲ್ಲಿ ಒಬ್ಬನೇ ಮಗ ಇರುತ್ತಾನೆ. ಮದುವೆಯಾದೊಡನೆ ಆತ ತಂದೆತಾಯಿಯನ್ನು ಬಿಟ್ಟು ಬೇರೆ ಹೋಗುತ್ತಾನೆ. ವಯಸ್ಸಾದ ಹೆತ್ತವರು ಪ್ರತ್ಯೇಕವಾಗಿ ವಾಸಿಸಬೇಕಾಗುತ್ತದೆ. ಕೆಲವು ಕಡೆ ತಂದೆತಾಯಿ ಮನೆಯಿಂದ ಹೊರಗೇ ಬರುವುದಿಲ್ಲ. ಏಕೆಂದರೆ ಅವರು ಮನೆಯಿಂದ ಹೊರಹೋದರೆ ಏನಾದರೂ ಹೇಳಬಹುದೆಂದು ಮಕ್ಕಳು ಅವರನ್ನು ಹೊರಗೆ ಬಿಡುವುದಿಲ್ಲ. ಮೂರು ಮಕ್ಕಳಿರುವಲ್ಲಿಯೂ ಇಬ್ಬರು ಗಂಡುಮಕ್ಕಳು ಅಮೆರಿಕದಲ್ಲಿದ್ದರೆ ಇನ್ನೊಬ್ಬರು ಮುಂಬಯಿಯಲ್ಲಿದ್ದಾರೆ. ಮತ್ತು ತಂದೆತಾಯಿ ವೃದ್ಧಾಶ್ರಮದಲ್ಲಿದ್ದಾರೆ. ಇದು ಸರಿಯಲ್ಲ; ಒಟ್ಟಿಗೇ ಇರಬೇಕು. ತಂದೆತಾಯಿ ಹಾಗೂ ನಮ್ಮನ್ನು ನಂಬಿಕೊಂಡು ಇರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು; ಅವರೊಂದಿಗೆ ಸಹಕರಿಸಬೇಕು. ಒಟ್ಟಾಗಿದ್ದಾಗ ಕುಟುಂಬದ ಎಲ್ಲರಿಗೂ ಶಕ್ತಿ ಬರುತ್ತದೆ ಎಂದರು.
ನಾವು ನಮ್ಮ ಮನೆಯಲ್ಲಿ ನಾಲ್ಕು ತಲೆಮಾರಿನವರು ಜೊತೆಯಾಗಿದ್ದೇವೆ. ನಮ್ಮ ಕುಟುಂಬ ಚಿಂತಾಮಣಿಯಿಂದ ಬಂದಿದ್ದು. ತಂದೆ, ತಾತ ಎಲ್ಲರೂ ಅವಿಭಕ್ತ ಕುಟುಂಬದಲ್ಲಿದ್ದವರು. ಎಲ್.ಎಸ್. (ಎಂಟನೇ ತರಗತಿ) ಓದುತ್ತಿದ್ದ ನಮ್ಮ ತಂದೆ ಪರೀಕ್ಷೆ ಕಟ್ಟಬೇಕಿದ್ದರೆ ಐದು ರೂ. ಕಟ್ಟಬೇಕಿತ್ತು. ತಾತನಲ್ಲಿ ಆ ಬಗ್ಗೆ ಕೇಳಿದಾಗ, ’ನೀನು ಐದು ರೂ. ಕಟ್ಟಿ ಪರೀಕ್ಷೆಗೆ ಕುಳಿತುಕೊಳ್ಳಬೇಕಾಗಿಲ್ಲ. ಅಂಗಡಿ ಬಂದು ಕುಳಿತುಕೋ’ ಎಂದರಂತೆ. ತಂದೆಯ ತಂದೆ, ದೊಡ್ಡಪ್ಪ ಎಲ್ಲರೂ ಒಂದೇ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ಆ ತಲೆಮಾರಿನ ಹಿರಿಯವರಾದ ತಂದೆ ಕೆಲವು ವರ್ಷ ಚಿಂತಾಮಣಿಯಲ್ಲಿದ್ದು ವ್ಯಾಪಾರ ಎಲ್ಲ ಕಲಿತುಕೊಂಡು, ಮನೆಗೆ ಬೇಕಾದ ಸೌಕರ್ಯಗಳನ್ನು ಒದಗಿಸುತ್ತ ಎಲ್ಲರಿಗೂ ಸಹಕಾರ ನೀಡುತ್ತಿದ್ದರು. ಆನಂತರ ಬೆಂಗಳೂರಿಗೆ ಬಂದು, ಇಲ್ಲಿ ಅನೇಕ ಅಂಗಡಿಗಳಲ್ಲಿ ಕೆಲಸ ಮಾಡಿ, ಕೆಲಸ ಕಲಿತುಕೊಂಡು ಊರೂರಿಗೆ ಹೋಗಿ ಬೆಳ್ಳಿ ಸಾಮಾನುಗಳನ್ನು ಮಾರುತ್ತಿದ್ದರು. ಬಸ್‌ಚಾರ್ಜ್ ಕೊಡುವುದಕ್ಕೂ ಕಷ್ಟ. ಆದರೂ ಮನಸ್ಸಿನಲ್ಲಿ ದೊಡ್ಡಪ್ಪನಿಗೆ, ಅವರ ಮಕ್ಕಳಿಗೆ (ಸೋದರ ಸಂಬಂಧಿಗಳಿಗೆ) ಯಾವ ರೀತಿ ಸಹಕಾರ ಕೊಡಬಹುದೆಂಬ ಯೋಚನೆ.
ಬೆಂಗಳೂರಿನಲ್ಲಿ ವ್ಯವಹಾರ ಸ್ವಲ್ಪ ಚೆನ್ನಾಗಿ ಆಯಿತು. ಮೊದಲಿಗೆ ಬೇರೆಯವರನ್ನು ಪಾಲುದಾರರಾಗಿ ಸೇರಿಸಿಕೊಂಡು ವ್ಯವಹಾರ ನಡೆಸಿದರು. ಆಮೇಲೆ ಸ್ವಂತ ಮಾಡಿದರು. ಬೆಂಗಳೂರಿನಲ್ಲಿ ತಾನು ಗಟ್ಟಿಯಾಗಿ ನಿಲ್ಲಬಹುದು ಎನ್ನಿಸಿದ ಮೇಲೆ ಊರಿನಿಂದ ಒಬ್ಬೊಬ್ಬರನ್ನೇ ಕರೆಯಿಸಿಕೊಂಡು, ಅಂಗಡಿ ಮಾಡಿ ದೊಡ್ಡಪ್ಪ, ಚಿಕ್ಕಪ್ಪನ ಕಡೆಯವರು, ಸೋದರ ಸಂಬಂಧಿಗಳಿಗೆ ನೀಡಿದರು. ಈ ರೀತಿ ತಂದೆಯ ಮನಸ್ಸಿನಲ್ಲಿ ಅವಿಭಕ್ತ ಕುಟುಂಬಕ್ಕೆ ತಾವು ಯಾವ ರೀತಿಯಲ್ಲಿ ತ್ಯಾಗ ಮಾಡಬೇಕು ಎಂಬುದಿತ್ತು. ತಂದೆಗೆ ಒಬ್ಬಾಕೆ ತಂಗಿಯಿದ್ದು, ಅವರ ಕುಟುಂಬಕ್ಕೂ ಸಹಕಾರ ನೀಡಿದರು. ಯಾರಿಗೂ ತೊಂದರೆ ಆಗಬಾರದು; ನಮ್ಮಿಂದಾದ ಸಹಕಾರ ನೀಡಬೇಕು ಎಂಬುದು ಅವರ ಮನೋಭಾವ. ಅಂತಹ ಕುಟುಂಬದಿಂದ ಬಂದ ನಾವು ಕೂಡ ಅವಿಭಕ್ತ ಕುಟುಂಬದಲ್ಲೇ ಇದ್ದೇವೆ. ತಂದೆಯ ಕಾಲದಲ್ಲಿ ಇದ್ದಂತೆಯೇ ನಾಲ್ಕು ತಲೆಮಾರು ಒಟ್ಟಿಗೇ ಇದ್ದೇವೆ. ಮನೆಯಲ್ಲಿ ಇಂತಹ ಭಾವನೆ ಪ್ರಾರಂಭವಾದರೆ ಸುತ್ತಲಿನ ಸಮಾಜದ ಬಗೆಗೆ ಮತ್ತು ದೇಶದ ಬಗೆಗೆ ಅದೇ ಭಾವನೆ ಬರುತ್ತದೆ; ನಮ್ಮ ಭಾವನೆ ವಿಶಾಲವಾಗುತ್ತದೆ. ದೇಶದ ಎಲ್ಲರೂ ನಮ್ಮವರು; ಕಷ್ಟ ಬಂದಾಗ ಅವರಿಗೆ ಸಹಕಾರ ನೀಡಬೇಕೆಂಬ ಭಾವನೆ ಬರುತ್ತದೆ ಎಂದರು.
ನಾನು ಕಾಲೇಜು ವಿದ್ಯಾರ್ಥಿ ಆಗಿದ್ದಾಗಲೇ ಸ್ವಯಂಸೇವಕನಾಗಿದ್ದು, ಅಂದಿನಿಂದ ಇಂದಿನ ತನಕ ನೀಡಲಾದ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದೇನೆ. ಇಂದು ೮೯ ವರ್ಷವಾಗಿದ್ದು ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದೇನೆ. ಎಲ್ಲರೂ ಈ ಕಾರ್ಯದಲ್ಲಿ ಇದರಲ್ಲಿ ನಿರತರಾಗಬೇಕು. ಉತ್ಥಾನವು ಈ ವಿಷಯವಾಗಿ ವಿಶೇಷ ಸಂಚಿಕೆಯನ್ನು ಪ್ರಕಟಿಸುತ್ತಿರುವುದು ಸಂತೋಷದ ಸಂಗತಿ. ಇಲ್ಲಿನ ಎಲ್ಲ ಲೇಖನಗಳು ಕುತೂಹಲಕರವಾಗಿವೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ’ಕುಟುಂಬ ಪ್ರಬೋಧನಂ’ ವಿಭಾಗದ ಪ್ರಚಾರಕರಾದ ಸು. ರಾಮಣ್ಣ ಅವರು ಮಾತನಾಡಿ, ಭಾರತದಲ್ಲಿ ಕುಟುಂಬವ್ಯವಸ್ಥೆಯು ಆಧುನಿಕತೆಯ ಸವಾಲನ್ನು ದಿಟ್ಟವಾಗಿ ಎದುರಿಸಿ ನಿಂತಿದೆ. ನಾವು ಹೇಗೆ ಬದುಕಬೇಕು, ನಮ್ಮ ಕುಟುಂಬಗಳನ್ನು ಹೇಗೆ ಇಟ್ಟುಕೊಳ್ಳಬೇಕೆಂದನ್ನು ನಮ್ಮ ಪೂರ್ವಜರು ಬದುಕಿ ತೋರಿಸಿದರು. ಅದನ್ನು ನಮಗೆ ವಾರಸಿಕೆಯಾಗಿ ಬಿಟ್ಟುಹೋಗಿದ್ದಾರೆ. ಮುಂದಿನ ಪೀಳಿಗೆಗೆ ನಾವದನ್ನು ವರ್ಗಾಯಿಸಬೇಕು ಎಂದರು.
ಕುಟುಂಬ ಎನ್ನುವ ಸಂಸ್ಥೆಯಲ್ಲಿ ಶ್ರದ್ಧೆ, ನಂಬಿಕೆಗಳನ್ನು ಇಟ್ಟುಕೊಂಡು ಇರುವವರು ಭಾರತೀಯ ಕುಟುಂಬದ ಅಮರತ್ವವನ್ನು ಎತ್ತಿ ಹಿಡಿಯುತ್ತಿದ್ದಾರೆ. ನಮ್ಮ ಕುಟುಂಬದ ಹಿರಿಮೆ ಇರುವುದೇ ಕರ್ತವ್ಯ ಪ್ರಧಾನ ಆಗಿರುವುದರಲ್ಲಿ. ಇಲ್ಲಿ ಹಕ್ಕುಗಳಿಗೆ ಸ್ಥಳವಿಲ್ಲ. ಹಕ್ಕುಗಳ ಪ್ರತಿಪಾದನೆಗೆ ಹೊರಟಾಗ ಜಗಳ, ಅಸಹನೆ, ದ್ವೇಷ ಉಂಟಾಗುತ್ತದೆ. ಕುಟುಂಬದ ಎಲ್ಲರೂ ತಮ್ಮ ಕರ್ತವ್ಯದ ಬಗ್ಗೆ ಯೋಚಿಸುತ್ತಾರೆ. ಅದೇ ಪಿತೃಧರ್ಮ, ಮಾತೃಧರ್ಮ ಇತ್ಯಾದಿ. ನಮ್ಮ ಮಗಳು ಸೊಸೆಯಾಗಿ ಹೋದ ಮನೆಯಲ್ಲಿ ನಮ್ಮ ಕುಟುಂಬದ ಸಾಂಸ್ಕೃತಿಕ ರಾಯಭಾರಿ ಆಗಬೇಕು. ಎಲ್ಲರ ಮನಗೆದ್ದು ಗಂಗೆಯಲ್ಲಿ ಯಮುನಾ ಸೇರಿದಂತೆ ಹೇಗೆ ಸೇರಿಕೊಳ್ಳಬೇಕೆಂದು ತಾಯಿ ಮಗಳಿಗೆ ಹೇಳಿಕೊಡುತ್ತಾಳೆ ಎಂದು ರಾಮಣ್ಣ ವಿವರಿಸಿದರು.
ಅನೇಕ ಬಗೆಯ ಆಕ್ರಮಣ, ಆಘಾತಗಳು ನಡೆದರೂ ಭಾರತ ಭಾರತವಾಗಿಯೇ ಉಳಿದಿದೆ. ಅದಕ್ಕೆ ಕಾರಣ ನಮ್ಮ ಕುಟುಂಬ. ಇದು ರಾಷ್ಟ್ರದ ಮೂಲಘಟಕ. ನಮ್ಮ ಮನೆ ವಸ್ತುಗಳನ್ನು ದಾಸ್ತಾನು ಮಾಡುವ ಗೋದಾಮು, ಬೋರ್ಡಿಂಗ್ ಲಾಡ್ಜಿಂಗ್ ಆಗಬಾರದು. ಭಾರತೀಯ ಮೌಲ್ಯಗಳ ಸಂರಕ್ಷಣೆ ಮಾಡುವ ಶಕ್ತಿಕೇಂದ್ರ ಆಗಬೇಕು. ಮನೆಯಲ್ಲಿ ಮಕ್ಕಳಿಗೆ ಅಪ್ಪ-ಅಮ್ಮ ದೇವರು. ಅಪ್ಪ-ಅಮ್ಮನಿಗೆ ಮಕ್ಕಳು ದೇವರು. ಇಬ್ಬರಿಗೂ ಅತಿಥಿ ದೇವರು. ಮನೆಯೇ ದೇವಾಲಯ. ಮೌಲ್ಯಗಳನ್ನು ಸಹಜವಾಗಿ ಕಲಿಸುವ ಸ್ಥಳ. ಸುಮಾರು ೩೫ ವರ್ಷ ವಯಸ್ಸಿನ ಓರ್ವ ಯುವಕ ಮದುವೆ ಆಗಿಲ್ಲ. ಎಕೆಂದರೆ ಇಬ್ಬರು ತಂಗಿಯರಿಗೆ ಮದುವೆ ಆಗದೆ ನಾನು ಆಗಲಾರೆ ಎಂದ. ಇದು ಭಾರತೀಯ ಕುಟುಂಬದ ಹೂರಣವಾದ ಕರ್ತವ್ಯಪ್ರಜ್ಞೆ. ತಂಗಿಯರಿಗಾಗಿ ತನ್ನ ಸುಖವನ್ನು ತ್ಯಾಗ ಮಾಡಿದ. ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಕರ್ತವ್ಯವಿದೆ.
ಕುಟುಂಬದಲ್ಲಿ ಮಾನ್ಯತೆ (ಮನ್ನಣೆ)ಯ ಆಸೆಯಿಲ್ಲ; ಧನ್ಯತೆಯ ಭಾವವಿದೆ. ಧನ್ಯೋ ಗೃಹಸ್ಥಾಶ್ರಮಃ; ಧನ್ಯತಾಭಾವದ ಆಶೆಯೇ ಯಶಸ್ವೀ ಕುಟುಂಬದ ಮೂಲ. ನಮ್ಮ ಕುಟುಂಬದ ಸುಖದ ಕಲ್ಪನೆಯೇ ವಿಭಿನ್ನ. ನಮ್ಮಲ್ಲಿ ಹ್ಯಾಪಿನೆಸ್(ಸಂತೋಷ) ಶ್ರೇಷ್ಠವಾದ ಮೌಲ್ಯವಲ್ಲ; ಸಾರ್ಥಕತೆಯೇ ನಮ್ಮ ಶ್ರೇಷ್ಠ ಮೌಲ್ಯ. ಅಪ್ಪನಾಗಿ, ಅಮ್ಮನಾಗಿ, ಮಗನಾಗಿ, ಮಗಳಾಗಿ ಜೀವನವು ಸಾರ್ಥಕ ಅನ್ನಿಸಬೇಕು. ಅದಕ್ಕಾಗಿ ಮನೆ ಸಮಾಜಮುಖಿಯಾಗಬೇಕು. ಸಮುದಾಯ ಮತ್ತು ಊರಿಗಾಗಿ ಏನಾದರೂ ಮಾಡಬೇಕು. ಊರು, ದೇಶ, ವಿಶ್ವ, ಅನಂತರ ಸೃಷ್ಟಿ. ನಮಗೆ ಚಂದ್ರ ಚಂದಮಾಮ, ಸೂರ್ಯನೇ ಮಿತ್ರ. ಗೂಬೆ ಕಾಗೆಗಳಿಗೂ ಉತ್ತಮರ ವಾಹನವಾಗಿ ಗೌರವವಿದೆ. ಎಲ್ಲದರ ನಡುವೆ ಪರಸ್ಪರ ಸಂಬಂಧ ಸಾಮರಸ್ಯಗಳಿವೆ.
ಮನೆ ರಾಷ್ಟ್ರೋನ್ಮುಖವಾಗಬೇಕು; ಭಾರತಮುಖವಾಗಬೇಕು. ಒಬ್ಬರ ಮನೆಯ ಗೋಡೆಯಲ್ಲಿ ಅಂಬೇಡ್ಕರ್ ಚಿತ್ರವೂ ಇತ್ತು. ಆ ಕುರಿತು ಕೇಳಿದಾಗ, ಅಂಬೇಡ್ಕರ್ ಬೌದ್ಧರಾಗುವ ಬದಲು ಮುಸ್ಲಿಂ ಅಥವಾ ಕ್ರೈಸ್ತರಾಗಿದ್ದರೆ ದೇಶ ಭಾರತವಾಗಿ ಉಳಿಯುತ್ತಿರಲಿಲ್ಲವೆಂದರು. ಮನೆಯಲ್ಲಿ ಇಂತಹ ಚಿಂತನೆ ಬೇಕು. ಸಂಬಂಧಸೂಚಕ ಪದಗಳನ್ನು ಬಳಸಿ ಮನೆಯಲ್ಲಿ ವ್ಯವಹರಿಸಬೇಕು. ನಮ್ಮದಾದ ಉಡುಪು; ನಮ್ಮ ದಿನಚರಿಯಲ್ಲಿ ಭಾರತೀಯತೆಯ ದರ್ಶನವಾಗಬೇಕು; ಹಬ್ಬಗಳ ಆಚರಣೆಯಲ್ಲಿ ಅದು ಕಾಣಬೇಕು. ಅದಕ್ಕಾಗಿ ಸಂಘವು ಕುಟುಂಬ ಪ್ರಬೋಧನ ಚಟುವಟಿಕೆಗಳನ್ನು ನಡೆಸುತ್ತಿದೆ. ಕುಟುಂಬಗಳಿಗೆ ಸಂಬಂಧಿಸಿ ಋಣಾತ್ಮಕ ಯೋಚನೆ ಬೇಕಿಲ್ಲ. ಕುಟುಂಬಗಳು ವಿಸ್ತಾರ ಆಗುತ್ತಿವೆ; ವಿಭಜನೆ ಅಲ್ಲ. ಕುಟುಂಬ ರಕ್ಷತಿ ರಕ್ಷಿತಃ ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗಡೆಯವರು ಸ್ವಾಗತಿಸಿ ಪ್ರಸ್ತಾವನೆಗೈದರು. ’ಉತ್ಥಾನ’ದ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ