ಮಲೆನಾಡೆಂದರೆ ಹಳ್ಳ, ಕೊಳ್ಳ, ತಗ್ಗು, ದಿಣ್ಣೆ, ಗುಡ್ಡ, ಬೆಟ್ಟ, ಅಡವಿ; ಅದರೊಳಗೆ ಅವಿತುಕೊಂಡಿರುವ ಮನೆ ತೋಟಗಳು, ಪುಟ್ಟ ಹೊಂಡ, ಪುಟ್ಟಪುಟ್ಟ ಹಳ್ಳ, ಕಾಲುವೆ, ಕಾದಿಗೆ, ಹೆಗ್ಗಾದಿಗೆಗಳು. ಅವಿತುಕೊಂಡ ಮನೆಗಳನ್ನೇ ಸೇರಿಸಿ ಒಂದು ಗ್ರಾಮವನ್ನಾಗಿಸಿ ಅಲ್ಲಿ ಒಂದು ದೇವಸ್ಥಾನ, ಶಾಲೆ; ಸಂಜೆಯಾದರೆ ಅವುಗಳ ಮುಂದಿರುವ ಅರಳಿಕಟ್ಟೆ ಮೇಲೆ ಎಲ್ಲರ ಹರಟೆ ಪಟ್ಟಾಂಗ.
ಶಿರಸಿಯ ಶಂಕರಹೊಂಡದಲ್ಲಿ ಹುಟ್ಟಿ, ಹೊಳೆಯಾಗಿ, ನದಿಯಾಗಿ ಸಮುದ್ರ ಸೇರುವ ಅಘನಾಶಿನಿ ನಮ್ಮೂರಿನಿಂದಲೂ ಹಾದುಹೋಗುವ, ಬದುಕನ್ನು ಸೇರಿಸುವ ಹೊಳೆ. ಅದರ ಒಂದು ಭಾಗಕ್ಕೆ
ನಮ್ಮ ಮನೆ ತೋಟ ಗದ್ದೆ ಇದ್ದರೆ ಹೊಳೆಯ ಆಚೆಯಲ್ಲಿ ಮನೆ ಕಟ್ಟಿಕೊಂಡವರೂ, ಹೊಲ-ಗದ್ದೆ ಮಾಡಿಕೊಂಡವರೂ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಿಕೊಂಡಿರುತ್ತಾರೆ.
ಸಂಕ ನಿರ್ಮಾಣ
ಆ ಹೊಳೆಗೆ ಮಳೆಗಾಲಕ್ಕೆ ಸಂಕಹಾಕುವ ಕಾರ್ಯ ಊರವರಿಗೊಂದು ಸವಾಲು. ಅದಕ್ಕಾಗಿಯೇ ಎಲ್ಲರೂ ಸೇರಿ ಹೊಳೆಗೆ ಸಂಕಹಾಕುವ ದಿನವನ್ನು ಗೊತ್ತುಮಾಡಿಕೊಳ್ಳುತ್ತಾರೆ; ಆನಂತರ ಯಾರ ತೋಟದಲ್ಲಿ ಅಗಲವಾದ ಅಡಿಕೆದಬ್ಬೆ ಇದೆಯೋ ಅಲ್ಲಿಂದ ಅವುಗಳನ್ನು ಸಂಗ್ರಹಿಸುವ ಕಾರ್ಯ. ಹಿಂದಿನ ವರ್ಷ ಹಾಕಿದ ಸಂಕ ಮೇಲ್ನೋಟಕ್ಕೆ ಗಟ್ಟುಮುಟ್ಟಾಗಿ ಕಾಣಿಸಿದರೂ ಅದನ್ನು ಬಿಚ್ಚಿ ಹೊಸದಾಗಿ ಕಟ್ಟಿ ಸಂಕ ಹಾಕುವರೇ ಹೊರತು ಹಳೆಯದು ಸವಕಲಾಗಿದ್ದರೆ ಅಪಾಯ ಎನ್ನುವ ಎಚ್ಚರಿಕೆ. ಗಟ್ಟುಮುಟ್ಟಾದ ಬಳ್ಳಿಗಳನ್ನು ಸಂಗ್ರಹಿಸಿ ಎಲ್ಲ ದಬ್ಬೆಗಳನ್ನೂ ಸೇರಿಸಿ ಉದ್ದನಾದ ಸಂಕ ತಯಾರಿಸಿ ಅದನ್ನು ನದಿಯ ಮಧ್ಯೆ ಸೇತುವೆಯ ತರಹ ಹಾಕುವುದು ನಿಜಕ್ಕೂ ಸಾಹಸವೇ ಸೈ.
ನಾವೆಲ್ಲ ಮಕ್ಕಳು ಈ ಸಾಹಸಕಾರ್ಯವನ್ನು ನೋಡಲಿಕ್ಕೆಂದೇ ನಮ್ಮ ಗದ್ದೆಯಲ್ಲಿ ಸೇರುತ್ತಿದ್ದೆವು. ಆಗ ಮಜ್ಜಿಗೆ ಪಾನಕ ತಂದುಕೊಡುವುದು, ಊಟಕ್ಕೆ ತಡವಾದರೆ ಮನೆಯಿಂದ ಊಟ ತಂದುಕೊಡುವುದು, ಮಧ್ಯೆ ಮಳೆ ಬಿದ್ದರೆ ಕಂಬಳಿಕೊಪ್ಪೆ ಕೊಡುವುದು ಮುಂತಾದ ಪಡಿಚಾಕರಿ ನಮ್ಮ ಪಾಲಿಗೆ. ನಾವೇನೂ ಬೇಸರಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಸಂಕ ಹಾಕಿದ ಬಳಿಕ ಮೊದಲ ಬಾರಿ ಓಡಾಡಿ ಸಂಕೋದ್ಘಾಟನೆಯ ಘಳಿಗೆಗೆ ನಾವೂ ನಮ್ಮ ಜೊತೆಗೆ ನಮ್ಮ ಮನೆಯ ನಾಯಿಗಳಾದ ಟೀಪೂ, ಬೆಳ್ಳಿ, ಕರಿಯ ಇವರೆಲ್ಲ ಕಾಯುತ್ತಿದ್ದೆವು. ಸಂಕ ಹಾಕುವ ಕಾರ್ಯ ಪೂರ್ಣವಾದರೆ ದೊಡ್ಡವರಿಗೆ ತಾವೇನೋ ಸಾಧಿಸಿದ, ಮಳೆಗಾಲಕ್ಕೆ ತುಂಬಿ ಉಕ್ಕುವ ಹೊಳೆ ದಾಟುವುದಕ್ಕೆ ವ್ಯವಸ್ಥೆ ಮಾಡಿದ ತೃಪ್ತಿ. ಸಂಕದ ನೆಪದಿಂದ ಊರಿನವರೆಲ್ಲ ಸೇರಿ ಒಂದು ಸಾಹಸಕಾರ್ಯ ಮಾಡಿ ಊರಿನ ಸಂಬಂಧ ಇನ್ನಷ್ಟು ಗಟ್ಟಿಯಾದ ಅನುಭವ ನಮಗೆಲ್ಲರಿಗೂ. ನಮ್ಮ ಅಜ್ಜಿ ಅಮ್ಮ ಅಂತೂ ಹತ್ತು ಜನರಿಗೆ ಊಟ ಮಾಡಿಹಾಕುವುದಿಲ್ಲವೆಂದು ಯಾವತ್ತೂ ಹೇಳದ ಅನ್ನಪೂರ್ಣೆಯರು.
ಬೆಸೆದ ಸಂಬಂಧ
ನಮ್ಮೂರಿನಲ್ಲಿ ತೋಟದಲ್ಲಿ ಹೆಜ್ಜೆಹೆಜ್ಜೆಗೂ ಸಂಕದ ಹಾವಳಿ. ಒಂದು ಕಾದಿಗೆಯಿಂದ ಇನ್ನೊಂದು ಕಾದಿಗೆಗೆ ಹೋಗಲಿಕ್ಕೂ ಪುಟ್ಟಪುಟ್ಟ ಸಂಕ ದಾಟಬೇಕು. ಕಾದಿಗೆಯಲ್ಲಿ ಮಳೆಗಾಲದಲ್ಲಷ್ಟೇ ನೀರು ಹರಿಯುತ್ತದೆ; ಅದೇನೂ ಕಷ್ಟವಲ್ಲ; ಆದರೆ ಮಧ್ಯೆ ಮಧ್ಯೆ ಸಿಗುವ ನಿರಂತರವಾಗಿ ನೀರು ಹರಿಯುತ್ತಲೇ ಇರುವ ತುಸು ದೊಡ್ಡದಾಗಿಯೇ ಇರುವ ಹೆಗ್ಗಾದಿಗೆಯನ್ನು ದಾಟಲು ಫಜೀತಿಯಾಗಿಬಿಡುತ್ತದೆ. ಅದಕ್ಕೆ ದಪ್ಪದಪ್ಪ ಸಂಕವಿದ್ದರೂ ಮಳೆಗಾಲದ ನಿರಂತರ ಮಳೆಗೆ ಜಾರುತ್ತಿರುವ, ಸವಕಲಾದ ಸಂಕವಿದ್ದರೆ ದಾಟಲಿಕ್ಕೂ ಕಷ್ಟ. ದೊಡ್ಡವರು “ಏ ಕೂಸೆ, ಬ್ಯಾಡಾ, ಅದು ಜಾರೋದು. ಆ ಕಾದಿಗೆ ದಾಟಬೇಡ್ವೇ’ ಎನ್ನುತ್ತ ಎಚ್ಚರಿಸುತ್ತಿದ್ದರೂ ನಮ್ಮ ಪಾಲಿಗೆ ಅದೆಲ್ಲ ಕಷ್ಟವೇ ಅಲ್ಲ.
ನಮ್ಮೂರಿನಲ್ಲಿ ಇರುವುದೇ ಎರಡು ಮನೆ. ನಮ್ಮ ಮನೆಯ ಪಕ್ಕದ್ದು ದಾಯಾದಿ ಅಜ್ಜನದು. ಯಾವುದೋ ಕಾಲದ ವೈಮನಸ್ಯದ ಕಾರಣಕ್ಕೆ ಅವರಿಗೆ ನಮಗೆ ಅಷ್ಟಕ್ಕಷ್ಟೆ. ಮಕ್ಕಳಾದ ನಮಗೇನೂ ಕಟ್ಟುಪಾಡಿರಲಿಲ್ಲ; ಓಡಾಡಿ ಆಡಿಕೊಂಡು ಹಾಯಾಗಿದ್ದೆವು; ಮುಂದೆ ಅದೇ ಎರಡೂ ಮನೆಯ ಸಂಬಂಧವನ್ನು ಬೆಸೆಯಿತೆನ್ನಿ.
ತೋಟದಲ್ಲಿ ನಮ್ಮ ಮನೆಯ ಕಾದಿಗೆ ಹೆಗ್ಗಾದಿಗೆಗೆ ಚಿಕ್ಕ ದೊಡ್ಡ ಸಂಕ ಎರಡೂ ಕಡೆಯನ್ನೂ ಬೆಸೆದರೂ ಆ ಮನೆಯ ಕಾದಿಗೆಗೆ ಮಾತ್ರ ಸಂಕವಿರುತ್ತಿರಲಿಲ್ಲ. ನಮ್ಮ ಅವರ ತೋಟದ ಗಡಿಗುರುತು ಅದು. ಸಂಕ ಇರುವಲ್ಲಿಯವರೆಗೆ ನಮ್ಮ ಮನೆಯ ತೋಟ;
ಇಲ್ಲದ ಕಡೆಯಿಂದ ಅವರ ಮನೆಯ ತೋಟ. ‘ಸಂಕವೊಂದಿದ್ದಿದ್ದರೆ? ಎರಡೂ ಮನೆಯ ಸಂಬಂಧ ಬೆಸೆದು ಸರಾಗವಾಗಿ ಓಡಾಡಿಕೊಂಡು ಆ ಮನೆಯ ತೋಟದಲ್ಲಿರುವ ಪನ್ನೇರಳೆ ಹಣ್ಣನ್ನೂ ತಿನ್ನಬಹುದಿತ್ತಲ್ಲ’ – ಎಂದು ಅಮ್ಮನ ಬಳಿ ನಾನು ಗೊಣಗಾಡಿಕೊಳ್ಳುತ್ತಿದ್ದೆ.
ದಿನಕಳೆದಂತೆ ನಮ್ಮಿಬ್ಬರ ಕುಟುಂಬದ ನಡುವಿನ ವೈಮನಸ್ಯದ ಕಾರ್ಮೋಡ ಕರಗಿ ಓಡಾಟ ಶುರುವಾಯ್ತು. ತೋಟದ ಹೆಗ್ಗಾದಿಗೆಗೆ ಆ ಮನೆಯ ಅಣ್ಣ ಒಂದು ದಪ್ಪ ಅಡಿಕೆಮರದ ಸಂಕ ಹಾಕಿದ. ನಮ್ಮಿಬ್ಬರ ತೋಟದ ನಡುವೆಯೂ ಓಡಾಟ ಶುರುವಾಯ್ತು. ಅಂದಿನಿಂದ ನಾವು ನಮ್ಮ ಮನೆಯ ಪನ್ನೇರಳೆಯ ಜೊತೆಗೆ ಅವರ ಮನೆಯ ಪನ್ನೇರಳೆ ಹಣ್ಣನ್ನೂ ತಿಂದು ತೇಗಿದೆವು. ಸಂಕ ನಮ್ಮೆರಡು ಮನೆಯ ಸಂಬಂಧವನ್ನು ಪುನಃ ಬೆಸೆದಿತ್ತು.
ಪಾಣಿಗ್ರಹಣ
ನಮ್ಮೂರಲ್ಲಿ ಮನೆಯೆಂದರೆ ಗುಡ್ಡದ ನಡುನಡುವೆ ಅವಿತುಕೊಂಡುಬಿಟ್ಟಿರುತ್ತದೆ. ಒಂದು ಸಲ ನಮ್ಮೂರಿನ ಶಾಲೆಗೆ ಹೊಸ ಮಾಸ್ತರರು ಬಂದರು. ಅವರೋ ಬಯಲುಸೀಮೆಯ ಮಂದಿ. ಬಟಾಬಯಲಲ್ಲೇ ಅವರ ಎಲ್ಲ ಕಾರ್ಯ. ಅವರು ಹಾದಿಯಲ್ಲಿ ಬರುತ್ತಿದ್ದಾಗ ನಮ್ಮೂರ ಯಜಮಾನರೊಬ್ಬರು ಸಿಕ್ಕಿದ್ದಾರೆ. ಕುಶಲೋಪರಿ ಕೇಳಿ ಅವರು ಶಾಲೆಗೆ ಬಂದ ಹೊಸ ಮಾಸ್ತರರು ಎಂದು ತಿಳಿದು ‘ಹೋಯ್ ನಮ್ಮ ಮನೆಗೆ ಹೋಪ್ಪ’ ಎಂದು ಆಮಂತ್ರಣವಿತ್ತರು. ಮಾಸ್ತರರು ಅವರ ಜೊತೆಗೆ ಅವರ ಮನೆಗೆ ಹೊರಟರು.
ಮಾಸ್ತರರು ಯಜಮಾನರ ಕತೆ ಕೇಳುತ್ತಾ, ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತ ನಡೆದೇ ನಡೆದರು. ‘ನಿಮ್ಮ ಮನೆ ಎಲ್ಲಿ?’ ಎಂದು ಯಜಮಾನರನ್ನು ಕೇಳಿದಾಗಲೆಲ್ಲ ‘ಇಲ್ಲೆ, ಆ ಗುಡ್ಡದ ಆಚೆ’ ಎಂದು ಯಜಮಾನರು ಹೇಳುತ್ತಬಂದರು. ಆದರೆ ಎಷ್ಟು ನಡೆದರೂ ಅವರ ಮನೆ ಬರುತ್ತಿಲ್ಲ. ಕಾಲುದಾರಿಯಾಯ್ತು, ಹುಲ್ಲಿನಿಂದ ತುಂಬಿಕೊಂಡ ದಾರಿಯನ್ನು ಬದಿಗೆ ಸರಿಸುತ್ತ ಹೋಗಿದ್ದಾಯ್ತು, ನಡುವೆ ಒಂದು ತೋಟ ಬಂತು. ಅದರಲ್ಲಂತೂ ಸಂಕದಿಂದ ಸಂಕಕ್ಕೆ, ಸಂಕದಿಂದ ಸಂಕಕ್ಕೆ, ಕಾದಿಗೆ ದಾಟಿದಾಟಿ ಸುಸ್ತಾದ ಮಾಸ್ತರರು ‘ಯಜಮಾನರೆ, ಇನ್ನೆಷ್ಟು ದೂರ?’ ಎಂದರು. ‘ಏನಿಲ್ಲ, ಇಲ್ಲೆ’ ಎನ್ನುತ್ತ ತಾಂಬೂಲವನ್ನು ಬಾಯಿಯಿಂದ ಪಿಚಕಾರಿಯಂತೆ ಉಗಿಯುತ್ತ ಯಜಮಾನರು ಮಾತನಾಡಿದ್ದೇ ಆಡಿದ್ದು. ಮಾಸ್ತರರು ಹೂಂ ಗುಟ್ಟಿದ್ದೇ ಗುಟ್ಟಿದ್ದು. ರಸ್ತೆ ಬೆಟ್ಟ ಎಲ್ಲ ದಾಟಿ ಇನ್ನೊಂದು ತೋಟ ಬಂತು. ಅಲ್ಲಿ ದೂರದಿಂದಲೇ ಒಂದು ಮನೆ ಕಾಣಿಸುತ್ತಿತ್ತು. ಮಾಸ್ತರರ ಕಣ್ಣಿಗೆ ಅದು ಒಂದು ಬಗೆಯಲ್ಲಿ ಭೂತಬಂಗಲೆಯ ಥರ ಕಂಡಿತ್ತು ಎಂದು ಆ ಬಳಿಕ ಅವರು ಹೇಳಿದ್ದು. ಆದರೆ ಮನೆಗೆ ತಲಪುವ ಮಧ್ಯದಲ್ಲೇ ಒಂದು ದೊಡ್ಡ ಕಾಲುವೆ ಹರಿಯುತ್ತಿದೆ; ಅದಕ್ಕೆ ಒಂದು ಸಂಕ. ಒಂದೆರಡು ಅಡಿಕೆದಬ್ಬೆ ಸೇರಿಸಿ ಮಾಡಿದ, ಕೈಹಿಡಿಯೂ ಇರದ, ಅಲುಗಾಡುತ್ತ ತೂಗುಸೇತುವೆಯ ತರಹ ಇದ್ದ ಸಂಕ ಮಳೆಗಾಲದ ನಂತರ ಬಂದ ಬಿಸಿಲಿಗೆ ಅರ್ಧಂಬರ್ಧ ಒಣಗಿ ತೇವದಿಂದ ಜಾರುತ್ತಿತ್ತು. ಹೊಸಬರಾದ ಮಾಸ್ತರರು ಹೆದರಿ ಅದರ ಮೇಲೆ ಹೆಜ್ಜೆ ಇಡಲೋ ಬೇಡವೋ ಎಂದು ಅನುಮಾನಿಸಹತ್ತಿದರು. ಯಜಮಾನರು ‘ಏನಾಗುವುದಿಲ್ಲ, ಬನ್ನಿ ಬನ್ನಿ’ ಎನ್ನುತ್ತ ಆರಾಮವಾಗಿ ದಾಟಿ ಮುಂದೆ ಸಾಗಿಬಿಟ್ಟರು. ಅವರೋ ‘ಮಾಸ್ತರರು ತಮ್ಮ ಹಿಂದೆಯೇ ಬರುತ್ತಿದ್ದಾರೆ’ ಎಂಬ ನಂಬಿಕೆಯಿಂದ ಇದ್ದರೆ, ಮಾಸ್ತರರು ಇನ್ನೂ ಸಂಕ ದಾಟಿರಲೇ ಇಲ್ಲ. ಸುಮಾರು ಮುಂದೆ ಹೋದ ಯಜಮಾನರು ಹಿಂದೆ ನೋಡುತ್ತಾರೆ, ಮಾಸ್ತರರು ಕಾಣುತ್ತಲೇ ಇಲ್ಲ. ಗಾಬರಿಬಿದ್ದು ಹಿಂದೆ ಬಂದು ನೋಡಿದರೆ ಮಾಸ್ತರರು ಸಂಕವನ್ನು ದಾಟಲಿಕ್ಕೇ ಅನುಮಾನಿಸುತ್ತಿದ್ದಾರೆ.
“ಅಯ್ಯೋ, ಸಂಕ ದಾಟಿ ಮಾರಾಯ್ರೆ” ಎಂದರು ಯಜಮಾನರು. ಮಾಸ್ತರರು ಹಿಂದೆ ಮುಂದೆ ನೋಡುತ್ತ ಆಗಲ್ಲವೆಂದು ನಿಂತೇಬಿಟ್ಟರು. ಈ ತರಹದ ಬದುಕನ್ನು ಅವರು ಕಂಡದ್ದೇ ಮೊದಲು. ಕೊನೆಗೂ ಯಜಮಾನರು ಕೈಹಿಡಿದು ಸಂಕ ದಾಟಿಸಿದರು.
ಮುಂದೆ ಆ ಮನೆಗೆ ಮಾಸ್ತರರು ಪದೇಪದೇ ಹೋಗತೊಡಗಿದಂತೆ ಸಂಬಂಧ ಗಟ್ಟಿಯಾಗುತ್ತ ಬಂದಿತು. ಸಂಕ ದಾಟಲು ಯಜಮಾನರ ಕೈಹಿಡಿದ ಮಾಸ್ತರರು ಮುಂದೆ ಬದುಕಿನ ಕಾಲುವೆ ದಾಟಲು ಯಜಮಾನರ ಮಗಳ ಕೈಹಿಡಿಯುವ ಮೂಲಕ ಮಲೆನಾಡಿಗೂ ಬಯಲುಸೀಮೆಗೂ ಸಂಬಂಧ ಬೆಸೆಯಿತೆನ್ನಿ.
ಅಪ್ಪನ ಹೆಗಲ ಸುಖ
ನಮ್ಮಜ್ಜಿ ಮನೆಗೆ ಹೋಗಲಿಕ್ಕೆ ಹೊಳೆ ದಾಟಿಯೇ ಹೋಗಬೇಕು ನಾವು. ಹೊಳೆಗೆ ಚಿಕ್ಕ ಸಂಕ ಸದಾ ಇರುತ್ತಿತ್ತು. ಒಂದು ಅಡಕೆದಬ್ಬೆ ಸಂಕ ಅದು. ನಮಗೆಲ್ಲ ಅದು ಆರಾಮವಾಗಿ ದಾಟಿಬಿಡುವ ಸಂಕ. ಅದರ ಮೇಲೆ ಕೂತು ಹೊಳೆ ಹರಿಯುವ ಚಂದವನ್ನು ನೋಡುವುದೇ ಒಂದು ಅನುಭೂತಿ. ಆದರೆ ಚಿಕ್ಕವರಿದ್ದಾಗ ಆ ಸಂಕ ನಮಗೆ ಸುಲಭದ ತುತ್ತಾಗಿರಲಿಲ್ಲ. ಅಪ್ಪನ ಕೈ ಹೆಗಲು ಇದ್ದರೆ ಬಾಲ್ಯ ಎಂದೆಂದಿಗೂ ಸುಲಭವೇ. ಇಲ್ಲೂ ಆ ತತ್ತ್ವವೇ ಹೊಂದುತ್ತಿತ್ತು. ಅಜ್ಜಿ ಮನೆಯಿಂದ ಬರುವಾಗ ನಡೆದೂ ನಡೆದೂ ಸುಸ್ತಾದ ನನಗೆ ಸಂಕ ಕಂಡ ತಕ್ಷಣ ಆಯಾಸದ ಸೂಚ್ಯಾಂಕದಲ್ಲಿ ಇನ್ನಷ್ಟು ಏರಿಕೆಯಾಗಿಬಿಡುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅಪ್ಪ ತನ್ನ ಹೆಗಲಮೇಲೆ ಎತ್ತಿಕೊಂಡು ಸಂಕದವರೆಗೆ ತಂದುಬಿಟ್ಟರೆ ನಾನಂತೂ ಸಂಕದ ಬುಡಕ್ಕೇ ನಿಂತುಬಿಡುತ್ತಿದ್ದೆ. ಅಕ್ಕ ಅಣ್ಣ ನನ್ನನ್ನು ‘ಹೆದರುಪುಕ್ಕ’ ಎಂದು ಹಂಗಿಸುತ್ತ ಆರಾಮವಾಗಿ ದಾಟಿ ಆಕಡೆ ಹೋಗಿ ಅಣಕಿಸುತ್ತಿದ್ದರೆ ನನ್ನಲ್ಲಿ ಕಣ್ಣೀರಧಾರೆ ಶುರುವಾಗುತ್ತಿತ್ತು. ಆ ಘಳಿಗೆಗೆ ಅಪ್ಪ ಬಂದು ತಮ್ಮ ಹೆಗಲಮೇಲೆ ಕೂರಿಸಿಕೊಂಡು ಸಂಕ ದಾಟಿಸುತ್ತಿದ್ದರು. ತುಸು ದೊಡ್ಡವಳಾದ ಬಳಿಕವೂ ನನ್ನ ಸಂಕ ದಾಟುವ ಪರದಾಟ ಮುಗಿಯಲೇ ಇಲ್ಲ. ಆದರೆ ಅಪ್ಪ ಕೈಹಿಡಿದು ಸಂಕ ದಾಟಿಸಿ ನನ್ನ ಸಂಕಟಕ್ಕೆ ಮುಕ್ತಿ ನೀಡುತ್ತಿದ್ದರು. ಸಂಕದಿಂದ ನನಗೆ ತಂದೆಯ ಹೆಗಲಸವಿ ತಿಳಿಯಿತೆನ್ನಿ. ಸಂಕ ದಾಟಿದರೂ ಅಪ್ಪನ ಹೆಗಲೇರಿ ಕುಳಿತವಳು ಇಳಿಯುತ್ತಿರಲೇ ಇಲ್ಲ.
ಅದೇ ಅಘನಾಶಿನಿ ನಮ್ಮ ಅಜ್ಜಿಯ ಮನೆಯಿಂದಲೂ ಹಾದು ಹರಿಯುತ್ತದೆ. ಅಜ್ಜಿ ಮನೆಯವರು ಹೊಳೆಗೆ ಸಂಕ ಹಾಕುತ್ತಿರಲಿಲ್ಲ. ನಮ್ಮ ಅಜ್ಜಿ ಮನೆಗೆ ಸುತ್ತಲೂ ಹೊಳೆ ಹರಿಯುತ್ತದೆ. ಮಳೆಗಾಲ ಬಂತೆಂದರೆ ಅಜ್ಜಿಮನೆ ಸಂಪೂರ್ಣ ದ್ವೀಪವಾಗಿಬಿಡುತ್ತಿತ್ತು. ಅಜ್ಜಿ ಮನೆಗೆ ಹೋಗಬೇಕೆಂದರೆ ಚಳಿಗಾಲ, ಬೇಸಗೆಕಾಲವನ್ನೇ ನೆಚ್ಚಬೇಕಿತ್ತು. ನಾವಂತೂ ಮಳೆಗಾಲ ಮುಗಿಯುವುದನ್ನೇ ಕಾಯುತ್ತಿದ್ದೆವು. ‘ಸಂಕವಿದ್ದರೆ ಎಷ್ಟು ಆರಾಮವಾಗಿ ಮಳೆಗಾಲದ ರಜೆಯಲ್ಲೂ ಅಜ್ಜಿಮನೆಗೆ ಬರಬಹುದಿತ್ತು’ ಎಂದು ನಾವೆಲ್ಲ ಅಲವತ್ತುಕೊಳ್ಳುತ್ತಿದ್ದೆವು. ‘ಸಂಕ ಹಾಕಿ’ ಎಂದು ಎಷ್ಟೋ ಬಾರಿ ಅವರಿಗೆ ಒತ್ತಾಯಿಸುತ್ತಿದ್ದೆ. ಆದರೆ ಅಜ್ಜಿ ಮನೆಯವರಿಗೆ ಸಂಕದ ಅಗತ್ಯವೇ ಕಾಣಿಸುತ್ತಿರಲಿಲ್ಲ. ಅವರದು ಸಂಕರಹಿತ ಬದುಕು. ಅದೂ ಅಲ್ಲದೆ ಸಂಕ ಹಾಕುವ ಸಾಹಸಿ ಶಂಕ್ರಣ್ಣ ಅಲ್ಲಿರಲಿಲ್ಲ. ಇವೆಲ್ಲ ಕಾರಣದಿಂದ ನಮ್ಮ ಮಳೆಗಾಲದ ಅಜ್ಜಿಮನೆಯ ಕನಸು ಹಾಗೇ ಉಳಿದುಕೊಂಡಿರುತ್ತಿತ್ತು. ನಮ್ಮಮ್ಮನಿಗೂ ಮಳೆಗಾಲದ ನಾಲ್ಕೈದು ತಿಂಗಳು ತವರಿನ ಸಂಪರ್ಕವೇ ಇಲ್ಲದಂತಾಗುತ್ತಿತ್ತು. ‘ಸಂಕವೊಂದಿದ್ದರೆ ಹೀಗೆಲ್ಲ ಆಗುವುದಿಲ್ಲ, ನಾವು ಮಳೆಗಾಲಕ್ಕೂ ನಿಮ್ಮ ಮನೆಗೆ ಬರುತ್ತೇವೆ’ ಎಂದು ನಾನು ಅಜ್ಜಿಗೆ ಹೇಳುತ್ತಿದ್ದೆ. ಮಳೆಗಾಲದಲ್ಲಿ ಅಜ್ಜಿಮನೆಗೆ ಹೋಗಬೇಕಾದರೆ ಅಲ್ಲಲ್ಲಿ ಸಿಗುವ ಕಾಲುವೆ, ಹೊಳೆನೀರಿನಲ್ಲಿ ನಡೆಯುವುದನ್ನು ನೆನಪಿಸಿಕೊಂಡರೂ ನನಗೆ ಭಯವಾಗುತ್ತಿತ್ತು. ಹಾಗಾಗಿ ಯಾರು ಕೇಳಿದರೂ ‘ಅಜ್ಜಿಮನೆಗೆ ಮಳೆಗಾಲ ಮುಗಿದ ನಂತರ ಹೋಗುವೆ’ ಎನ್ನುತ್ತಿದ್ದೆ. ಸಂಕವಿಲ್ಲದೆ ಅಜ್ಜಿಮನೆಯ ಸಂಬಂಧ ಸಂಪಕರ್Àವೇ ಕಡಿದುಹೋದ ಅನುಭವ ನಮಗೆ. ಮಳೆಗಾಲ ಮುಗಿದ ತಕ್ಷಣ ಒಂದು ಬಗೆಯ ಏಕಾದಶಿ ಮುಗಿದ ಹಾಗೇ ಮೊದಲು ಅಜ್ಜಿಮನೆಗೆ ಹೋಗಿ ಕೆಂಪುಕೆಂಪು ಬೆಣ್ಣೆಹಣ್ಣನ್ನು ತಿಂದು ನಾಲ್ಕುತಿಂಗಳ ಉಪವಾಸವನ್ನೆಲ್ಲ ತೀರಿಸಿಕೊಂಡೇ ಬರುತ್ತಿದ್ದೆ.
ಇಹ–ಪರದ ನಡುವೆ!
ನಮ್ಮೂರಲ್ಲಿ ಕೆಲವು ಮನೆಗಳಿಗೆ ಸಂಕವನ್ನು ದಾಟದೇ ಹೋಗಲು ಸಾಧ್ಯವೇ ಇಲ್ಲ. ಅದೂ ಅಲ್ಲದೆ ನಮ್ಮೂರಿನ ಜನ ರಸ್ತೆಯ ಸುತ್ತುಬಳಸು ದಾರಿಗಿಂತ ಒಳದಾರಿಯಲ್ಲಿ ಅವರ ಜೀವನಾಡಿಯಾದ ಸಂಕವನ್ನು ದಾಟಿಯೇ ಹೋಗಲಿಕ್ಕೆ ಇಷ್ಟ ಪಡುತ್ತಾರೆ. ಭಾರ ಹೊತ್ತು, ಹುಲ್ಲಿನ ಹೊರೆ ಹೊತ್ತು, ಆಕಳನ್ನು ದಾಟಿಸಲಿಕ್ಕೂ ಸಂಕವನ್ನೇ ಬಳಸುವ ರೂಢಿ. ಅಂತಹ ನಮ್ಮೂರಿನಲ್ಲಿ ಸರಸಮ್ಮ ಎನ್ನುವ ಕಷ್ಟಜೀವಿಯಿದ್ದರು. ಅವರ ಮನೆಗೆ ಹೋಗಬೇಕಾದರೆ ಒಂದು ಕಾಲುವೆ ದಾಟಬೇಕು. ಅದಕ್ಕೊಂದು ದಪ್ಪ ಮರದ ಸಂಕವಿತ್ತು. ಮೂರೂ ಕಾಲಕ್ಕೂ ಅನುಕೂಲವಾಗಿ ನಡೆಯಬಹುದಾಗಿದ್ದ ಸಂಕವದು. ನಾವಂತೂ ಅವರ ಮನೆಗೆ ಹೋದಾಗಲೆಲ್ಲ ಆ ಸಂಕವನ್ನು ಅತ್ತಿಂದಿತ್ತ ಹತ್ತೆಂಟುಬಾರಿ ನಡೆದಾಡಿ ಆಟದ ಮಜಾ ತೆಗೆದುಕೊಳ್ಳುತ್ತಿದ್ದೆವು. ಕೆಲವೊಮ್ಮೆಯಂತೂ ಅಮ್ಮ ಅವರ ಮನೆಗೆ ಹೋಗಿ ಚಹಾ ಸ್ವೀಕರಿಸಿ ಬರುವವರೆಗೂ ನಾವು ಆ ಸಂಕದ ಮೇಲೆ ಓಡುವ ನಡೆದಾಡುವ ಆಟ ಆಡಿಕೊಂಡಿರುತ್ತಿದ್ದುದೂ ಉಂಟು. ಊರಿನ ದೇವಸ್ಥಾನದ ಸಮೀಪವೇ ಇದ್ದ ಅವರ ಮನೆಗೆ ದೇವಸ್ಥಾನದ ಕಾರ್ತಿಕ ದೀಪಾರಾಧನೆ, ಊರೊಟ್ಟಿನ ಸಮಾರಾಧನೆ ಇವೇ ಮುಂತಾದ ಕಾರ್ಯಕ್ರಮಗಳಿಗೆ ಒಟ್ಟು ಸೇರಿದಾಗ ನಮ್ಮ ಮಕ್ಕಳತಂಡ ಸಂಕದ ಬಳಿಯಲ್ಲಿ ಸೇರುತ್ತಿತ್ತು. ಅಲ್ಲಿಂದ ನಮ್ಮ ಎಲ್ಲ ಆಟಗಳೂ ಶುರುವಾಗುತ್ತಿತ್ತು. ದೊಡ್ಡವರ ಕೂಗಿಗೆ ಯಾವ ಬೆಲೆಯೂ ಆ ಘಳಿಗೆಗೆ ಇರುತ್ತಿರಲಿಲ್ಲ. ಅಲ್ಲಿದ್ದ ಎಲ್ಲ ಸಂಕವನ್ನೂ ದಾಟಿ ಕಾಲುವೆ ನೀರಲ್ಲಿ ಆಡಿ ಅಲ್ಲಿದ್ದ ಪನ್ನೇರಳೆಮರದ ಹಣ್ಣುಗಳನ್ನೆಲ್ಲ ಕಿತ್ತು ಹೊಟ್ಟೆ ತುಂಬಿಕೊಂಡು ಸಮಾರಾಧನೆ ಊಟ ಮಾಡುವ ಮಕ್ಕಳು ನಾವು. ಸಂಕದಿಂದ ನಮ್ಮ ಆಟದ ಮಜಾ ಹೆಚ್ಚುತ್ತಿತ್ತು.
ಸರಸಮ್ಮ ಆ ಮನೆಗೆ ಅಂತಹ ಸಂಕ ದಾಟಿ ಬಂದು ಆರುಮಕ್ಕಳ ತಾಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ಎಂಬತ್ತು ವರುಷವಾದರೂ ಹುಲ್ಲಿನ ಹೊರೆ ಹೊತ್ತು ಸಂಕ ದಾಟುತ್ತಿದ್ದ ಕಷ್ಟಜೀವಿ. ಅದೊಂದು ದಿನ ಊರಿನ ಸಮಾಚಾರ ಮಾತಾಡುವಾಗ ಅಮ್ಮ ಸರಸಮ್ಮ ಮರಣಿಸಿದ ಸುದ್ದಿ ಹೇಳುತ್ತ ‘ಸರಸಮ್ಮ ಹುಲ್ಲಿನ ಹೊರೆ ಹೊತ್ತು ಸಂಕ ದಾಟುವಾಗ ಜಾರಿಬಿದ್ದು ಸತ್ತುಹೋದಳಂತೆ’ ಎಂದಾಗ ‘ಸಂಕದಿಂದ ಬದುಕು ಆರಂಭವಾಗಿ ಅದೇ ಸಂಕವೇ ಅವರನ್ನು ಪರಲೋಕಕ್ಕೆ ಸಂಬಂಧ ಕಲ್ಪಿಸಿಬಿಟ್ಟಿತಲ್ಲ’ ಎಂದು ಸಂಕಟಪಟ್ಟೆ. ಮದುವೆಗೂ ಮಸಣಕೂ ಸಂಕವೊಂದು ಕಾರಣವಾಗುತ್ತದೆ ನಮ್ಮೂರಿನಲ್ಲಿ.
ಶಂಕ್ರಣ್ಣನ ಸಾಹಸ
ಎರಡು ಬದಿಯ ಬದುಕನ್ನು ಜೋಡಿಸುವ ಸಾಧನವಾದ ಸಂಕವೊಂದಿಲ್ಲದಿದ್ದರೆ ಹೊಳೆಯಾಚೀಚೆ ಇರುವ ಕುಟುಂಬಗಳ ಜೀವನನಿರ್ವಹಣೆಯೇ ಕಷ್ಟವಾಗುತ್ತಿತ್ತು. ಹೊಳೆಯಾಚೆ ನಮ್ಮೂರ ಎಷ್ಟೋ ಜನ ತಮ್ಮ ಹೊಲಗದ್ದೆ ಮಾಡಿಕೊಂಡಿದ್ದು, ಹೊಳೆ ತುಂಬಿ ಹರಿಯುತ್ತಿದ್ದರೂ ಸಂಕದ ಮೂಲಕ ತಮ್ಮ ಹೊಲಕ್ಕೆ ಹೋಗಿ ಗದ್ದೆನಾಟಿ ಮುಂತಾಗಿ ಕೆಲಸಕಾರ್ಯ ಮಾಡುವ ಅವರಿಗೆ ಸಂಕ ಜೀವನಾಡಿಯೇ ಆಗಿರುತ್ತಿತ್ತು.
ನಿರಂತರ ಬೀಳುವ ನಮ್ಮೂರ ಮಳೆಯಲ್ಲಿ ನೆನೆದು ನಲಿದಾಡಿದ ನಮಗೆಲ್ಲ ಆಗೊಮ್ಮೆ ಈಗೊಮ್ಮೆ ಬರುವ ಮಳೆ ಯಾವ ಲೆಕ್ಕಕ್ಕೂ ಇಲ್ಲ. ಅಂತಹದೇ ಒಂದು ಮಳೆಗಾಲ. ಇನ್ನೂ ಜೂನ್ ತಿಂಗಳ ಆರಂಭ. ಊರು ಮಳೆಗಾಲಕ್ಕೆ ಇನ್ನೂ ಸಿದ್ಧವಾಗಿರಲಿಲ್ಲ; ಅದರಲ್ಲೂ ದೊಡ್ಡ ಹೊಳೆಯಾದ ಅಘನಾಶಿನಿಗೆ ಸಂಕದ ಯೋಚನೆಯನ್ನೂ ಮಾಡಿರಲಿಲ್ಲ. ಒಂದು ದಿನ; ನಮ್ಮ ಊಹೆಗೂ ಮೀರಿ ಅಘನಾಶಿನಿ ಉಕ್ಕಿ ಹರಿಯುವಷ್ಟು ಮಳೆ ಸುರಿಯತೊಡಗಿತು. ಸಂಜೆಯಾದಂತೆ ಅಘನಾಶಿನಿ ನಮ್ಮೆಲ್ಲರ ಪಾಪವನ್ನೇ ತೊಳೆಯುವಂತೆ ಉಕ್ಕಿ ಉಕ್ಕಿ ಹರಿಯುತ್ತ ನಮ್ಮ ಗದ್ದೆ ತೋಟವನ್ನೆಲ್ಲ ಆಕ್ರಮಿಸಿಕೊಂಡುಬಿಟ್ಟಿತು.
ನಮ್ಮೂರ ಶಂಕ್ರಣ್ಣ ನಮ್ಮ ಮನೆಯ ಮಗನಂತೆ. ಆತನ ಹೊಲ ಹೊಳೆಯಾಚೆ ಇತ್ತು. ಕಷ್ಟಜೀವಿಯಾದ ಆತ ಸಾಹಸಿಯೂ ಹೌದು. ಶಂಕ್ರಣ್ಣನ ಸಾಹಸದ ಬಗ್ಗೆ ಸದಾ ಆತಂಕ ನಮ್ಮ ಮನೆಮಂದಿಗೆ. ಸಂಕ ಹಾಕುವ ದಿನ ಮಾತ್ರ ಸಾಹಸಿ ಶಂಕ್ರಣ್ಣನೇ ಬೇಕು. ಇಂತಹ ಶಂಕ್ರಣ್ಣ ಆ ದಿನ ಹೊಳೆ ಆಚೆಗೆ ಸಿಕ್ಕಿಕೊಂಡಿದ್ದಾನೆ; ನಮ್ಮಜ್ಜಿ ಆತಂಕದಿಂದ ಮನೆತುಂಬಾ ಓಡಾಡಿದರೂ ಸಮಾಧಾನವಾಗದೆ ಆರ್ಭಟಿಸುವ ಮಳೆಯಲ್ಲೇ ಕೊಡೆ ಹಿಡಿದೇಬಿಟ್ಟಳು. ನಾನು ಮತ್ತು ನಮ್ಮ ಮನೆಯ ನಾಯಿ ಬೆಳ್ಳಿ ಅಜ್ಜಿಯ ಬಾಲದಂತೆ ಆಕೆ ಹೋದಲ್ಲೆಲ್ಲ ಸುತ್ತುವ ಚಾಳಿ ಇದ್ದವರು. ತೋಟದಂಚಿಗೆ ನಿಂತು ಶಂಕ್ರಣ್ಣನಿಗೆ ಕಾದದ್ದೇ ಕಾದದ್ದು. ಅಜ್ಜಿಯ ಚಡಪಡಿಕೆಗೆ ಬೆಳ್ಳಿ ತನ್ನ ದನಿಯನ್ನೂ ಆಗಾಗ ಸೇರಿಸುತ್ತಿತ್ತು.
ಸಂಜೆಗತ್ತಲು ನಿಧಾನವಾಗಿ ಸರಿದು ರಾತ್ರಿ ಕಾಲಿಡುತ್ತಿತ್ತು. ಅಜ್ಜಿ ಆಗಾಗ ನನ್ನ ಬಳಿ “ಏನೇ ಕೂಸೆ, ಶಂಕ್ರಣ್ಣ ಹೇಗೆ ಬರುತ್ತಾನೋ! ಸಂಕ ಬೇರೆ ಹಾಕಿಲ್ಲ. ಆ ಹಳೆ ಸಂಕ ಬೇರೆ ಸರಿ ಇಲ್ಲ” ಎನ್ನುತ್ತ ತಮ್ಮ ಚಡಪಡಿಕೆಯನ್ನು ಹೇಳಿಕೊಂಡು ಮತ್ತೆಮತ್ತೆ ಕೊಡೆ ಸರಿಸಿ ಹೊಳೆ ಕಡೆ ನೋಡುತ್ತ ಅತ್ತಿಂದಿತ್ತ ಓಡಾಡಹತ್ತಿದರು. ಅವರಿಗೆ ಶಂಕ್ರಣ್ಣನ ಸಾಹಸಿಪ್ರವೃತ್ತಿಯ ಬಗ್ಗೆಯೇ ಸಂಶಯ. ತುಂಬಿದ ಹೊಳೆಯನ್ನು ದಾಟದೆ ಬಿಡಲಾರ; ಏನಾದರೂ ಅಪಾಯವಾದರೆ ಎನ್ನುವ ಭಯ.
ಕೊನೆಗೂ ಅಜ್ಜಿಯ ಭಯ ನಿಜವೇ ಆಗೋಯ್ತು. ಶಂಕ್ರಣ್ಣ ನಿಧಾನವಾಗಿ ಆ ಕತ್ತಲಿನಲ್ಲಿ ಕಾಣಿಸಿಕೊಂಡ. ಒದ್ದೆಮುದ್ದೆಯಾದ ಆತ ಆ ಸವಕಲಾದ ಹಳೆಸಂಕವನ್ನೇ ದಾಟಿ ನಮ್ಮ ಬಳಿಗೆ ತಲಪಿದ್ದ. ಶಂಕ್ರಣ್ಣನನ್ನು ಕಂಡ ಅಜ್ಜಿ ಆತಂಕನಿವಾರಣೆಯ ಉಸಿರನ್ನು ಹೊರದಬ್ಬಿದರು. ಶಂಕ್ರಣ್ಣನನ್ನು ಮನೆಗೆ ಕರೆದುಕೊಂಡು ಬಂದು ಆ ರಾತ್ರಿ ಆತ ನಮ್ಮಲ್ಲೇ ಉಳಿದ. ಅಂದು ನಾವೆಲ್ಲ ತೋರಿದ ಅಕ್ಕರಾಸ್ತೆಯಿಂದ ನಮ್ಮಿಬ್ಬರ ಮನೆಯ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತು. ಹೊಸ ಸಂಕಕ್ಕೆ ಆ ದಿನವೇ ಮುಹೂರ್ತ ನಿಗದಿಯಾಗಿತ್ತು.
ಚಿರಂಜೀವಿ
ಒಮ್ಮೆ ನಮ್ಮ ಮನೆಯ ಹತ್ತಿರದ ಯಾರದೋ ಮನೆಯಲ್ಲಿ ವಿವಾಹ ಕಾರ್ಯಕ್ರಮ. ಸರಳ ವಿವಾಹಕ್ಕೆ ಸಾಕ್ಷಿ ಬೇಕೆಂದರೆ ನಮ್ಮೂರ ಕಡೆಯ ವಿವಾಹ ನೋಡಬೇಕು. ಸುತ್ತಮುತ್ತ ಇರುವುದನ್ನೇ ಬಳಸಿಕೊಂಡು ವಿವಾಹ ಮುಗಿಸುತ್ತಾರೆ. ಇಂದಿನ ದಿನಗಳಲ್ಲಿ ತುಸು ವೆಚ್ಚ ಮಾಡುವ ಮನಃಸ್ಥಿತಿ ಬೆಳೆದಿದೆಯೆನ್ನಿ.
ಅಂತಹ ಒಂದು ವಿವಾಹ ಸಮಾರಂಭಕ್ಕೆ ಕಂಬಕ್ಕಾಗಿ ಅಡಿಕೆದಬ್ಬೆಗಳನ್ನು ಹೆಗಲ ಮೇಲೆ ಹೊತ್ತು ಬರುತ್ತಿದ್ದರು ಯಜಮಾನರೊಬ್ಬರು. ನಾವಾಗ ಶಾಲೆಗೆ ಹೋಗುತ್ತಿದ್ದೆವು. ಯಜಮಾನರು ಹೊರೆಯ ಒಂದು ಕಡೆ ಹೊತ್ತಿದ್ದರೆ ಇನ್ನೊಬ್ಬರು ಮತ್ತೊಂದು ಕಡೆ ಹೊತ್ತಿದ್ದರು. ಸಂಕದ ಮೇಲೆ ಇಬ್ಬರೂ ಬರುತ್ತಿದ್ದಾರೆ;
ಸಂಕ ಮುರಿದುಬೀಳಬೇಕೆ! ನಾವೆಲ್ಲ ಬಾಯಿಬಿಟ್ಟು ನೋಡುತ್ತಲೇ ಇದ್ದೆವು, ಅವರಿಬ್ಬರೂ ಕಾಲುವೆಗೆ ಬಿದ್ದುಬಿಟ್ಟರು. ನಮಗೆಲ್ಲ ಗಾಬರಿ. ಆದರೆ ಏನೂ
ತೊಂದರೆ ಆಗದೆ ಇವರಿಬ್ಬರೂ ಮೇಲಕ್ಕೆ ಬಂದು ತಾವು ಹೊತ್ತು ತಂದ ಅಡಿಕೆದಬ್ಬೆಯನ್ನೇ ಹೊಸ ಸಂಕವನ್ನಾಗಿ ಮಾಡಿದರು!
ಕರಾವಳಿ ಹಾಗೂ ಮಲೆನಾಡಿನ ಜೀವನಾಡಿಯಾದ ಸಂಕದ ಬಗ್ಗೆ ಎಷ್ಟು ಬರೆದರೂ ತೀರದು. ಇಂದು ನಮ್ಮೂರ ಅಘನಾಶಿನಿ ಹೊಳೆಗೆ ಶಾಸಕರ ಕೃಪೆಯಿಂದ ಸಿಮೆಂಟಿನ ಸೇತುವೆಯಾಗಿದೆ. ಜನ ಸಂಕದ ಗೊಡವೆ ಬಿಟ್ಟಿದ್ದಾರೆ. ಸಂಕ ಹಾಕುವ ಸಾಹಸಿ ಶಂಕ್ರಣ್ಣನಿಗೆ ಆ ಹಿಂದಿನ ಕಸು ಉಳಿದಿಲ್ಲ. ಜನ ಸೇತುವೆ ತಲಪಲು ಇನ್ನಷ್ಟು ದೂರ ನಡೆಯುತ್ತಾರೆ; ಸೇತುವೆಯ ಮೇಲೆ ಬೈಕ್ ಕಾರು ಓಡಿಸುತ್ತಾರೆ; ಸೇತುವೆ ಎರಡು ಬದಿಯನ್ನು ಸೇರಿಸಿದೆ. ಆದರೆ ಸೇತುಬಂಧ ಸಂಕಬಂಧದಂತಲ್ಲ; ಸಂಕ ಕಟ್ಟುವುದಕ್ಕಾಗಿ ಊರ ಜನ ಒಂದಾಗುತ್ತಿದ್ದರು, ಸಂಕ ದಾಟಲಾಗದಿದ್ದರೆ ಕೈಹಿಡಿದು ದಾಟಿಸುತ್ತಿದ್ದರು; ಪರಸ್ಪರ ಒಂದಾಗಲೇಬೇಕಾದ ಅಗತ್ಯ ಸಂಕದಲ್ಲಿತ್ತು; ಸೇತುವೆಯಲ್ಲಿ ಆ ಅಗತ್ಯ ಇಲ್ಲ. ಅಘನಾಶಿನಿ ಯಾವಾಗ ಉಕ್ಕುಕ್ಕಿ ಮೇಲೆ ಬರುತ್ತದೋ, ಸೇತುವೆಯನ್ನು ಕೊಚ್ಚಿ ಸೆಳೆದೊಯ್ಯುತ್ತದೆಯೋ ಆಗ ಜನ ಒಟ್ಟಾಗಿ ಸೇರಿ ತಾವೇ ಸಂಕ ಹಾಕುವುದಿಲ್ಲ; ಸೇತುವೆಗಾಗಿ ಸರ್ಕಾರದ ನೆರವನ್ನೇ ಕಾಯುತ್ತಾರೆ; ಅದೇ ಜನರೇ ಕಟ್ಟಬಹುದಾದ ಸಂಕ ಸ್ವಾವಲಂಬಿತನದ ದ್ಯೋತಕ!
ಊರಿನಿಂದ ಅಪ್ಪ ಬಂದಾಗಲೆಲ್ಲ ನಾನು ‘ಈ ವರುಷ ಅಘನಾಶಿನಿಗೆ ಸಂಕ ಆಯಿತಾ?’ ಎಂದು ಕೇಳಿದರೆ, ‘ಈಗ ಸಂಕ ಯಾತಕ್ಕಮ್ಮಾ?’ ಎಂದು ಕೇಳುತ್ತಾರೆ. ಆದರೆ ಸಂಕ ಸಂಕವೆ! ಬಂಧವನ್ನು ಗಟ್ಟಿಗೊಳಿಸುವ ಸಂಕದೊಂದಿಗಿನ ಸಂಬಂಧವನ್ನು ಮರೆಯಲಾದೀತೆ.